Saturday, January 2, 2016

34 ವರ್ಷಗಳ ಹಿಂದಿನ ಒಂದು ಬರಹ

ಪ್ರಿಯ ಬೊಳುವಾರ್,
ಹೊಸ ವರ್ಷ ಚಂದದ ಹೊಸ ಮನಸ್ಸುಗಳನ್ನು ತರಲಿ ಎಂದು ಹಾರೈಸಿದಕ್ಕೆ ಥ್ಯಾಂಕ್ಸ್. ಆದರೆ ಇಂತಹ ಒಳ್ಳೆಯ ಮನಸ್ಸು-ಬುದ್ದಿ ಮೂರು ದಶಕಗಳ ಹಿಂದೆ ನಿಮ್ಮಿಂದಲೇ ನನಗೆ ಪ್ರಾಪ್ತಿಯಾಗಿದ್ದು ಎನ್ನುವುದು ನಿಮಗೂ ತಿಳಿದಿಲ್ಲ. 1981ರ ಆಗಸ್ಟ್ 23ರ ಸುಧಾ ವಾರಪತ್ರಿಕೆಯಲ್ಲಿ ‘ಮಹಮದ’ ಎಂಬ ಹೆಸರಲ್ಲಿ ‘ಮುಸ್ಲಿಮನಾಗಿರುವುದೆಂದರೆ...’ ಎಂಬ ಲೇಖನ ಪ್ರಕಟವಾಗಿತ್ತು. (ಅದು ಪ್ರಕಟವಾಗಿದ್ದು ನೀವು ಅಂದುಕೊಂಡಂತೆ 42 ವರ್ಷಗಳ ಹಿಂದೆ ಅಲ್ಲ 34 ವರ್ಷಗಳ ಹಿಂದೆ)



ಆ ಲೇಖನವನ್ನು ಆ ಕಾಲದಲ್ಲಿ ನಾನು ಓದದೆ ಹೋಗಿದ್ದರೆ ಕರಾವಳಿಯ ಈಗಿನ ವಕ್ರಬುದ್ದಿಯ ಸಂತಾನದ ವಿದ್ಯಾರ್ಥಿಗಳ ಶಾಲೆಯಲ್ಲಿ ನಾನು ಮುಖ್ಯೋಪಾಧ್ಯಾಯನಾಗಿರುತ್ತಿದ್ದೆ. (ಪುಂಡರ ಗುರು ಎನ್ನಿ). ನನಗೆ ಆಗ 22ರ ಹರಯ. ಆಗಲೇ ಹೆಜಮಾಡಿಯ ಭಟ್ರು ಒಬ್ಬರು ಮುಂಜಾನೆಯ ಆರ್ ಎಸ್ ಎಸ್ ಬೈಠಕ್ ಗೆ ಬರಲು ನನ್ನನ್ನು ಒತ್ತಾಯಿಸುತ್ತಿದ್ದರು. ನಾನು ಇನ್ನೂ ಗಾಂಧಿ,ಅಂಬೇಡ್ಕರ್, ಲೋಹಿಯಾ ಅವರನ್ನು ಗಂಭೀರವಾಗಿ ಓದಿರಲಿಲ್ಲ, ದಾರಿ ತಪ್ಪುತ್ತಿದ್ದೆನೋ ಏನೋ? ಅಂತಹ ಸಮಯದಲ್ಲಿ ನನ್ನ ಕಣ್ಣು ತೆರೆಸಿದ ಲೇಖನ ನಿಮ್ಮದು. ಮುಸ್ಲಿಮ್ ಸಮುದಾಯವನ್ನು ಧರ್ಮದ ಪೂರ್ವಗ್ರಹ ಬಿಟ್ಟು ಅರ್ಥಮಾಡಿಕೊಳ್ಳಲು ನೆರವಾದ ಲೇಖನ ಅದು.
ಅದರ ನಂತರದ ನನ್ನ ಬರವಣಿಗೆ-ಭಾಷಣಗಳಲ್ಲಿ ಆ ಲೇಖನದ ಅಂಶಗಳು ಅನೇಕಬಾರಿ ಬಂದುಹೋಗಿವೆ. ಇದರಿಂದಾಗಿಯೇ ನಾನು ಹಿಂದೂ ಮತ್ತು ಮುಸ್ಲಿಮ್ ಕೋಮುವಾದ ಒಂದೆ ಅಲ್ಲ ಎಂದು ಹೇಳಿ ನಿಮ್ಮ ಸ್ನೇಹಿತರಿಂದ ಅಂಡೆಪಿರ್ಕಿ ಎಂದು ಅನಿಸಿಕೊಂಡದ್ದು. ಆ ಲೇಖನ ಅಷ್ಟೊಂದು ನನ್ನನ್ನು ತಟ್ಟದೆ ಹೋಗಿದ್ದರೆ ಇಲ್ಲಿಂದ ದಿಲ್ಲಿ ವರೆಗೆ ಊರೂರು ಸುತ್ತಿದರೂ ಆ ಲೇಖನದ ಮಾಸಿದ ಪ್ರತಿಯನ್ನು 34 ವರ್ಷ ನಾನ್ಯಾಕೆ ಭದ್ರವಾಗಿ ಇಟ್ಟುಕೊಳ್ಳುತ್ತಿದ್ದೆ ಸಾರ್ ?
ಆದರೆ ಆ ಲೇಖನದ ಲೇಖಕ ನೀವಿರಬಹುದೆಂಬ ಅನುಮಾನ ಇದ್ದಿದ್ದರೂ, ಅದು ಖಾತರಿಯಾಗಿದ್ದು ಆ ಮೇಲೆ ಯಾವುದೋ ಒಂದು ದಿನ ನೀವಾಗಿ ತಿಳಿಸಿದಾಗ. ಆ ಲೇಖನ ಬರೆದಿದ್ದ ದಿನಗಳಲ್ಲಿ ನೀವು ಕರಾವಳಿಯ ಬಂಡುಕೋರ ಮುಸ್ಲಿಮ್ ಲೇಖಕ. ಮುಸ್ಲಿಮ್ ಧಾರ್ಮಿಕ ಮೂಲಭೂತವಾದಿಗಳನ್ನು ಎದುರುಹಾಕಿಕೊಂಡ ನೀವು ಕೊನೆಗೆ ಒಂದಷ್ಟು ದಿನ ಜೈಲು ಕೂಡಾ ಸೇರಬೇಕಾಯಿತು. ನಿಮ್ಮ ಕುಟುಂಬದವರು ಎದುರಿಸಿದ ಕಷ್ಟಗಳೂ ನನಗೆ ಗೊತ್ತು. ಅವೆಲ್ಲ ನಡೆದು ಕೆಲವು ವರ್ಷಗಳ ನಂತರ ನೀವು ಇದ್ದಕ್ಕಿದ್ದ ಹಾಗೆ ಸಾರ್ವಜನಿಕ ಬದುಕಿನಿಂದ ಮರೆಯಾಗಿಬಿಟ್ಟಿರಿ.
ಈ ರೀತಿ ತೆರೆಮರೆಗೆ ಸರಿದ ನಿಮ್ಮ ಮತ್ತು ಇತರ ಗೆಳೆಯರ ಬಗ್ಗೆ ಆಗಾಗ ಚರ್ಚೆ-ಸಂವಾದಗಳಲ್ಲಿ ಪ್ರಸ್ತಾಪವಾಗುತ್ತದೆ. ಅಂತಹ ಸಂದರ್ಭದಲ್ಲೆಲ್ಲ ನಾನು ನಿಮ್ಮ ಪರವಾಗಿ ವಕಾಲತು ಮಾಡುತ್ತಾ ಬಂದವನು. “ ಸಮಾಜ ಸುಧಾರಣೆಯ ಕೆಲಸ ರಿಲೇ ಓಟ ಇದ್ದ ಹಾಗೆ. ಬೊಳುವಾರು ಮತ್ತು ಗೆಳೆಯರು ಅವರಿಂದಾದಷ್ಟು ದೂರ ಓಡಿದ್ದಾರೆ. ಈಗ ನಿವೃತ್ತಿಯಾಗಿದ್ದಾರೆ. ರಿಲೇ ಓಟದ ಬೇಟನ್ ಅನ್ನು ಈಗ ಹೊಸತಲೆಮಾರಿನವರು ಕೈಗೆ ತೆಗೆದುಕೊಂಡು ಓಡಬೇಕು” ಎಂದು ನಾನು ಹೇಳುತ್ತಿರುತ್ತೇನೆ. ಮುಸ್ಲಿಮ್ ಧರ್ಮದಲ್ಲಿದ್ದ ಪ್ರಗತಿಪರ ಲೇಖಕ-ಲೇಖಕಿಯರು ಬಾಬರಿ ಮಸೀದಿ ಧ್ವಂಸದ ನಂತರ ಯಾಕೆ ಅನಿವಾರ್ಯವಾಗಿ ಮೌನವಾಗಬೇಕಾಯಿತು ಎನ್ನುವುದನ್ನು ಕೂಡಾ ಮನವರಿಕೆ ಮಾಡಿಕೊಡಲು ಪ್ರಯತ್ನ ಮಾಡುತ್ತಾ ಬಂದಿದ್ದೇನೆ, ಈಗಲೂ ಈ ಅಭಿಪ್ರಾಯಕ್ಕೆ ನಾನು ಬದ್ದ.
ಆದರೆ ಮಾತನಾಡಬೇಕಾಗಿದ್ದ ಕಾಲದಲ್ಲಿ ವಿರಾಗಿಯಂತೆ ಮೌನವಾಗಿದ್ದ ನೀವು ಈಗ ಮನುಷ್ಯ ಕುಲದ ಶತ್ರುಗಳ ಪರವಾಗಿ ಮಾತನಾಡಲು ಹೋರಾಟಗಾರರಂತೆ ತೋಳೇರಿಸುತ್ತಿರುವುದನ್ನು ನೋಡಿ ನನಗೆ ಆಘಾತವಾಗಿದೆ. ನಿಮಗೆ ಯಾರನ್ನಾದರೂ ಸುಧಾರಣೆಮಾಡಬೇಕೆಂಬ ಪ್ರಾಮಾಣಿಕವಾದ ಇಚ್ಚೆ ಇದ್ದರೆ ಸೌಹಾರ್ದ ಬದುಕಿನ ಕನಸು ಕಟ್ಟಿಕೊಂಡ 22ರ ಹರಯದ ರಾಮ-ರಹೀಮರು ನಿಮ್ಮ ಸುತ್ತವೇ ಇದ್ದಾರೆ. ಅವರಿಗೆ ಮಾರ್ಗದರ್ಶನ ನೀಡಿ. ಅವರಿಗೆ 32 ವರ್ಷದ ಹಿಂದಿನ ಬೊಳುವಾರು ಬೇಕಾಗಿದೆ. 

ಇದರಿಂದೆಲ್ಲ ಏನು ಉಪಯೋಗ ಎಂದು ಕೇಳುತ್ತೀರಾ? ನನ್ನನ್ನೊಮ್ಮೆ ನೋಡಿ. ನಿಮ್ಮ ಒಂದು ಲೇಖನದಿಂದ ಬದಲಾದವನು ನಾನು. ನಮ್ಮವರೆಂದು ಅನಿಸಿಕೊಳ್ಳಲು ನಿಮ್ಮ ಮನಸ್ಸು ಒಪ್ಪದೆ ಇದ್ದರೆ ನಿಮ್ಮ ಪಾಡಿಗೆ ನೀವು ವಿಶ್ರಾಂತ ಜೀವನ ಕಳೆಯುತ್ತಾ ಆರಾಮವಾಗಿರಿ. ನಮ್ಮ ಮನದೊಳಗಿನ ನಿಮ್ಮ ಹಳೆಯ ಬಿಂಬವಾದರೂ ಸುರಕ್ಷಿತವಾಗಿರುತ್ತದೆ. ಆದರೆ,ದಯವಿಟ್ಟು ನಮ್ಮೆದೆಗೆ ಗುರಿ ಇಟ್ಟಿರುವ ಬೇಟೆಗಾರರ ಬತ್ತಳಿಕೆಯ ಬಾಣವಾಗಬೇಡಿ,
ದ್ವೇಷಿಸಬೇಕಾದುದನ್ನು ದ್ವೇಷಿಸಬೇಕಾದಷ್ಟು ದ್ವೇಷಿಸದೆ ಇದ್ದರೆ, ಪ್ರೀತಿಸಬೇಕಾದುದನ್ನು ಪ್ರೀತಿಸಬೇಕಾದಷ್ಟು ಪ್ರೀತಿಸಲಾಗುವುದಿಲ್ಲ ಎಂದು ತಿಳಿದುಕೊಂಡವನು ನಾನು. ಕೋಮುವಾದಿಗಳನ್ನು ದ್ವೇಷಿಸದೆ ಇದ್ದರೆ ಜಾತ್ಯತೀತರನ್ನು ಪ್ರೀತಿಸುವುದು ಹೇಗೆ ಬೊಳುವಾರ್? ಓದು,ವಯಸ್ಸು,ಅನುಭವ ಎಲ್ಲದರಲ್ಲಿಯೂ ನಿಮ್ಮಿಂದ ಚಿಕ್ಕವನಾದ ನಾನು ತಿಳಿದುಕೊಂಡಿರುವುದು ತಪ್ಪಿರಲೂಬಹುದು. ತಪ್ಪೆನಿಸಿದರೆ ಹೊಟ್ಟೆಗೆ ಹಾಕಿಕೊಳ್ಳಿ, ಸರಿಯೆನಿಸಿದರೆ ತಲೆಗೆ ಹಾಕಿಕೊಳ್ಳಿ,

No comments:

Post a Comment