ಈ ಫೇಸ್ ಬುಕ್, ವಾಟ್ಸಪ್, ಭಾಷಣ, ಬರಹ, ಕೋಪ-ತಾಪ, ಜಗಳ...ಇವೆಲ್ಲ ಯಾಕೆ ಬೇಕು? ಸುಮ್ಮನೆ ನಮ್ಮ ಪಾಡಿಗೆ ನಾವು ಓದ್ಕೊಂಡು,ಬರ್ಕೊಂಡ್, ಪುಸ್ತಕ ಮಾರ್ಕೊಂಡು ಬೊಳುವಾರು ಅವರಂತೆ ಸುಖವಾಗಿ ಇರಬಾರದೇಕೆ ಎಂದು ನನಗೂ ಒಮ್ಮೊಮ್ಮೆ ಅನಿಸುವುದುಂಟು. ಆ ರೀತಿ ಯೋಚನೆ ಬಂದಾಗೆಲ್ಲ ನನ್ನ ಕಣ್ಣಮುಂದೆ ಮಂಗಳೂರಿನ ಇಬ್ಬರು ವ್ಯಕ್ತಿಗಳು ಕಾಣಿಸಿಕೊಳ್ಳುತ್ತಾರೆ. ಒಬ್ಬರು ಶ್ರೀನಿವಾಸ ಕಾರ್ಕಳ, ಇನ್ನೊಬ್ಬರು ಸುರೇಶ್ ಭಟ್ ಬಾಕ್ರಬೈಲು.
‘’ಮುಂಗಾರು’’ ದಿನಗಳಿಂದಲೂ ಪರಿಚಯದ ಶ್ರೀನಿವಾಸ್ ಆಗಿನ್ನೂ ಪಾದರಸದಂತೆ ಚುರುಕಾಗಿದ್ದ ಮತ್ತು ಸಿನೆಮಾ ನಟನಂತೆ ಸುಂದರವಾಗಿದ್ದ ಯುವಕ.(ಚಿತ್ರ ನೋಡಿ: ಈಗಲೂ ಅಷ್ಟೇ ಚಂದ ಇದ್ದಾರೆ) ಸಾಹಿತ್ಯ,ನಾಟಕ,ಪ್ರತಿಭಟನೆಗಳಲ್ಲಿ ತೊಡಗಿಸಿಕೊಂಡಿದ್ದ ಶ್ರೀನಿವಾಸ್, ಸಣ್ಣ ಅಪಘಾತಕ್ಕೆ ಸಿಕ್ಕಿ ಕಳೆದ 18 ವರ್ಷಗಳಿಂದ ವೀಲ್ ಚೇರ್ ನಲ್ಲಿದ್ದಾರೆ. ಉದ್ಯೋಗವನ್ನೂ ಕಳೆದುಕೊಂಡು ಹೆತ್ತತಾಯಿಯಂತಹ ಹೆಂಡತಿಯ ಪಾಲನೆಯಲ್ಲಿ ಕಡು ಕಷ್ಟದಲ್ಲಿ ಬದುಕಿದ ಅವರನ್ನು ಅವರ ಕಷ್ಟಗಳ ಬಗ್ಗೆ ಕೇಳಲು ಕೂಡಾ ಮುಜುಗುರವಾಗುತ್ತದೆ.
ದೇಹ ವೀಲ್ ಚೇರ್ ಗೆ ಸೀಮಿತವಾಗಿದ್ದರೂ, ಪಡಬಾರದ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರೂ ಅವರ ಜೀವನಾಸಕ್ತಿ, ಸೈದ್ಧಾಂತಿಕ ಬದ್ದತೆ, ಸಾಮಾಜಿಕ ಕಳಕಳಿ ಮತ್ತು ಪ್ರತಿಭಟನೆಯ ಕೆಚ್ಚು ಒಂದಿನಿತೂ ಕುಂದಿಲ್ಲ. ಕೋಮುವಾದಿಗಳ ವಿರುದ್ಧದ ಅವರ ಹೋರಾಟ ನಿರಂತರ. "ಒಮ್ಮೆ ಇವರು ವೀಲ್ ಚೇರ್ ನಿಂದ ದಿಗ್ಗನೆ ಎದ್ದು ಯಕ್ಷಗಾನದ ಒಂದು ಧಿಗಣ ಹಾಕಬಾರದೇಕೆ?’ ಎಂದು ಎಷ್ಟೋ ಸಂದರ್ಭಗಳಲ್ಲಿ ಅವರೆದುರು ಕೂತಿದ್ದಾಗ ನನ್ನ ಒಳಮನಸ್ಸು ಚೀರಿದ್ದುಂಟು. ಆದರೆ ಶ್ರೀನಿವಾಸ ಕಾರ್ಕಳ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ಅವರ ಮಾತುಗಳಲ್ಲಿ ಹತಾಶೆ,ನಿರಾಶೆ,ವೈರಾಗ್ಯ ಎಂದೂ ಇಣುಕಿಲ್ಲ. ಅವರ ದೇಹ ಗಾಲಿಕುರ್ಚಿಯ್ಲಲಿದ್ದರೂ ರೆಕ್ಕೆ ಕಟ್ಟಿಕೊಂಡ ಮನಸ್ಸು ಜಗತ್ತೆಲ್ಲ ವಿಹರಿಸುತ್ತಾ ಇರುತ್ತದೆ.
ಶ್ರೀನಿವಾಸ ಕಾರ್ಕಳ ಅವರ ನೆರೆಯಲ್ಲಿ ವಾಸ ಇರುವ ಸುರೇಶ್ ಭಟ್ ಬಾಕ್ರಬೈಲ್ ಇನ್ನೊಬ್ಬ ಕುತೂಹಲಕಾರಿ ವ್ಯಕ್ತಿ.. ಎಂಜನಿಯರಿಂಗ್ ಓದಿ ನಿವೃತ್ತಿಯಾಗುವ ವರೆಗೆ ದೇಶ-ವಿದೇಶದ ಸಂಸ್ಥೆಗಳಲ್ಲಿ ಕೆಲಸ ಮಾಡಿ, ಜಗತ್ತೆಲ್ಲ ಸುತ್ತಾಡಿದ್ದ ಸುರೇಶ್ ಭಟ್ 2006ರಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ.
ಕೋಮುವಾದದ ವಿರುದ್ಧದ ಅವರ ಹೋರಾಟ ಕೇವಲ ಮಾತಿನದ್ದಲ್ಲ, ಅಂತಹ ಹೋರಾಟದಲ್ಲಿ ತೊಡಗಿರುವವರಿಗೆಲ್ಲರ ಕೈಯ ಅಸ್ತ್ರವಾಗಬಲ್ಲ ಸಾಕ್ಷಿ ಪುರಾವೆಗಳ ಸಂಗ್ರಹ ಅವರಲ್ಲಿದೆ. ಮಂಗಳೂರಿನಲ್ಲಿ ನಡೆಯುತ್ತಿರುವ ಕೋಮುಗಲಭೆ ಮತ್ತು ಅನೈತಿಕ ಪೊಲೀಸ್ ಗಿರಿ, ಪಠ್ಯಪುಸ್ತಕಗಳ ಕೇಸರೀಕರಣ –ಇವುಗಳ ಬಗ್ಗೆ ಅವರಲ್ಲಿ ನಿಖರ ಮಾಹಿತಿಯ ಭಂಡಾರವೇ ಇದೆ. ಪತ್ರಿಕೆಗಳನ್ನು, ಓದುತ್ತಾ, ಬರೆಯುತ್ತಾ, ನ್ಯಾಯಾಲಯದಲ್ಲಿ ಹೋರಾಡುತ್ತಾ ಇರುವ 70 ವರ್ಷದ ಭಟ್ರಿಗೆ ಪ್ರಾಣ ಬೆದರಿಕೆ ಕರೆಗಳು ಸಾಮಾನ್ಯವಾಗಿಬಿಟ್ಟಿವೆ. ಇವರನ್ನು ಹೆದರಿಸಲು ಮಂಗಳೂರಿನ ಬೀದಿಯಲ್ಲಿ ಕೋಮುವಾದಿ ಪುಂಡರು ಮುಖಕ್ಕೆ ಸೆಗಣಿ ಕೂಡಾ ಬಳಿದಿದ್ದರು. ಇದಕ್ಕೆಲ್ಲ ಜಗ್ಗದ, ಕುಗ್ಗದ ಭಟ್ರು ‘ಸಾಯಿಸಲಿ, ಹುತಾತ್ಮನಾಗುತ್ತೇನೆ’ ಎಂದು ನಕ್ಕು ಸುಮ್ಮನಾಗುತ್ತಾರೆ.
ಸಾರ್ವಜನಿಕ ಬದುಕಿನ ಜಂಜಾಟಗಳಿಂದ ರೋಸಿಹೋಗಿ, ಇದರಿಂದೆಲ್ಲ ದೂರ ಸರಿದುಹೋಗಿ ಸುಖವಾಗಿ ಇರುವ’ ಎಂದು ಅನಿಸಿದಾಗೆಲ್ಲ ಈ ಇಬ್ಬರು ಹೋರಾಟಗಾರರು ನನ್ನ ಕಣ್ಣೆದುರು ಪ್ರತ್ಯಕ್ಷವಾಗಿ ನನ್ನ ಹೇಡಿತನವನ್ನು ಅಣಕಿಸಿದಂತಾಗುತ್ತದೆ.
No comments:
Post a Comment