ನ್ಯಾಯಾಂಗದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಕಲ್ಲೆಸೆಯಲು ಹೊರಟವರು ಮೊದಲು ಗಾಜಿನ ಮನೆಯಲ್ಲಿ ಕೂತಿರುವ ನ್ಯಾಯಾಂಗದ ಕಡೆ ಕಣ್ಣುಹಾಯಿಸಬೇಕು. ಮಮತಾ ಬ್ಯಾನರ್ಜಿ ಅವರಿಗೆ ಈ ರೀತಿಯ ಆರೋಪ ಹೊರಿಸುವುದಕ್ಕೆ ವೈಯಕ್ತಿಕವಾದ ಕಾರಣಗಳು ಇದ್ದಿರಬಹುದು.
ಆದರೆ ಅವರು ಹೇಳಿರುವುದು ಸಂಪೂರ್ಣ ಸುಳ್ಳು ಎಂದು ಎದೆಮುಟ್ಟಿ ಹೇಳುವ ಧೈರ್ಯ ವಕೀಲರು, ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನೊಳಗೊಂಡ ನ್ಯಾಯಾಂಗ ವ್ಯವಸ್ಥೆಗೆ ಇದೆಯೇ?
2007ರಲ್ಲಿ `ಟ್ರಾನ್ಸಪರೆನ್ಸಿ ಇಂಟರ್‌ನ್ಯಾಷನಲ್` ಮತ್ತು ದೆಹಲಿ ಮೂಲದ ಸಂಶೋಧನಾ ಸಂಸ್ಥೆ `ಮಾಧ್ಯಮ ಅಧ್ಯಯನ ಕೇಂದ್ರ` ಭಾರತದಲ್ಲಿನ ಭ್ರಷ್ಟಾಚಾರದ ಬಗ್ಗೆ ಅಧ್ಯಯನ ನಡೆಸಿತ್ತು. ಸಾರ್ವಜನಿಕ ಸೇವೆ ನೀಡುವ ಮತ್ತು ಪಡೆಯುವ ವ್ಯಕ್ತಿಗಳ ಜತೆಗಿನ ಸಂದರ್ಶನವೂ ಸೇರಿದಂತೆ ಇಪ್ಪತ್ತು ರಾಜ್ಯಗಳ 14,405 ವ್ಯಕ್ತಿಗಳ ಪ್ರತಿಕ್ರಿಯೆ ಪಡೆದು ಈ ಎರಡು ಸಂಸ್ಥೆಗಳು ಸಮೀಕ್ಷಾ ವರದಿಯೊಂದನ್ನು ನೀಡಿದ್ದವು.
`ಹನ್ನೊಂದು ಬಗೆಯ ಸಾರ್ವಜನಿಕ ಸೇವೆಗಳನ್ನು ಪಡೆಯಲು ಭಾರತೀಯರು ವರ್ಷಕ್ಕೆ 21,068 ಕೋಟಿ ರೂಪಾಯಿಗಳನ್ನು ಲಂಚದ ರೂಪದಲ್ಲಿ ನೀಡುತ್ತಿದ್ದಾರೆ. ಇದರಲ್ಲಿ ನ್ಯಾಯಾಂಗದ ಪಾಲು 2,630 ಕೋಟಿ ರೂಪಾಯಿ.
ಶೇಕಡಾ 59ರಷ್ಟು ವಕೀಲರು, ಶೇಕಡಾ 30ರಷ್ಟು ನ್ಯಾಯಾಲಯದ ಅಧಿಕಾರಿಗಳು ಮತ್ತು ಶೇಕಡಾ ಐದರಷ್ಟು ನ್ಯಾಯಮೂರ್ತಿಗಳು ಲಂಚಪಡೆಯುತ್ತಿದ್ದಾರೆ` ಎಂದು ಆ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಸ್.ಪಿ.ಭರೂಚಾ ಅವರು ಹತ್ತುವರ್ಷಗಳ ಹಿಂದೆಯೇ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. `
ಶೇಕಡಾ 20ರಷ್ಟು ನ್ಯಾಯಮೂರ್ತಿಗಳು ಭ್ರಷ್ಟರು` ಎಂಬ ಅವರ ಆರೋಪ ಸಾರ್ವಜನಿಕವಾಗಿ ಸಂಚಲನವನ್ನುಂಟುಮಾಡಿತ್ತು. ಈ ಹತ್ತು ವರ್ಷಗಳ ಅವಧಿಯಲ್ಲಿ ನ್ಯಾಯಾಂಗದ ಭ್ರಷ್ಟಾಚಾರದ ಮಟ್ಟ ಕಡಿಮೆಯಾಗಿದೆ ಎಂದು ಹೇಳಲು ಆಧಾರಗಳು ಸಿಗುತ್ತಿಲ್ಲ, ಹೆಚ್ಚಾಗಿದೆ ಎಂದು ಅನುಮಾನ ಪಡಲು ಕಾರಣಗಳಿವೆ.
ನ್ಯಾ.ಭರೂಚಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ ಆರುತಿಂಗಳ ನಂತರ ಪಂಜಾಬ್ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಶಾಮೀಲಾಗಿದ್ದ ಕೋಟ್ಯಂತರ ರೂಪಾಯಿ ಲಂಚದ ಆರೋಪದ ಲೋಕಸೇವಾ ಹಗರಣ ಬಯಲಾಯಿತು. ಪ್ರಶ್ನೆಪತ್ರಿಕೆಯ ಸೋರಿಕೆಗೆ ಅವಕಾಶ ನೀಡಿರುವುದು ಮಾತ್ರವಲ್ಲ ಉತ್ತರಪತ್ರಿಕೆಗಳನ್ನು ತಿದ್ದಲು ನ್ಯಾಯಮೂರ್ತಿಗಳು ಅವಕಾಶ ನೀಡಿದ್ದರೆಂದು ರಾಜ್ಯ ಜಾಗೃತದಳ ಆರೋಪ ಮಾಡಿತ್ತು.
ಭೂ ಮಾಫಿಯಾಗಳಿಂದ ಹಣ-ಹೆಂಡ-ಹೆಣ್ಣುಗಳನ್ನು ಪಡೆದು ತೀರ್ಪು ನೀಡಿದ್ದಾರೆಂಬ ಆರೋಪದ ಮೇಲೆ ಸಿಬಿಐ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಶಮಿತ್ ಮುಖರ್ಜಿ ಅವರನ್ನು ಬಂಧಿಸಿತ್ತು. ನ್ಯಾಯಾಲಯದ ಸಿಬ್ಬಂದಿಯ ಭವಿಷ್ಯನಿಧಿ ಹಣವನ್ನು ದುರ್ಬಳಕೆ ಮಾಡಿದ್ದಾರೆಂದು ಸುಪ್ರೀಂಕೋರ್ಟ್‌ನಿಂದ ಹಿಡಿದು ಕೆಳ ನ್ಯಾಯಾಲಯದವರೆಗಿನ 34 ನ್ಯಾಯಮೂರ್ತಿಗಳ ವಿರುದ್ಧ ಆರೋಪ ಕೇಳಿಬಂದಿತ್ತು.
ಅಹ್ಮದಾಬಾದ್‌ನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ 40,000 ರೂಪಾಯಿ ಹಣ ಪಡೆದು ರಾಷ್ಟ್ರಪತಿಗಳ ವಿರುದ್ಧವೇ ಬಂಧನದ ವಾರೆಂಟ್ ಹೊರಡಿಸಿರುವುದನ್ನು ಒಂದು ಟಿವಿಚಾನೆಲ್ ಕುಟುಕುಕಾರ್ಯಾಚರಣೆ ಮೂಲಕ ಬಯಲಿಗೆಳೆದಿತ್ತು. ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರಿಗೆ ಸಂಬಂಧಿಸಿದ ಜಾಮೀನು ನೀಡಿಕೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಆಂಧ್ರಪ್ರದೇಶದ ನಾಲ್ವರು ನ್ಯಾಯಾಧೀಶರು ಕಂಬಿ ಎಣಿಸುತ್ತಿರುವುದು ಇತ್ತೀಚಿನ ಉದಾಹರಣೆ.
ಭ್ರಷ್ಟಾಚಾರದ ವಿಷಯದಲ್ಲಿ ಈಗಲೂ ನ್ಯಾಯಾಂಗವನ್ನು ಕಾರ್ಯಾಂಗ ಮತ್ತು ಶಾಸಕಾಂಗಗಳ ಸಮಕ್ಕೆ ಹೋಲಿಸಲಾಗದು. ನಮ್ಮ ಬಹುಸಂಖ್ಯಾತ ನ್ಯಾಯಮೂರ್ತಿಗಳು ವೃತ್ತಿನಿಷ್ಠೆಯಿಂದ ಕಾರ್ಯನಿರ್ವಹಿಸುವ ಪ್ರಾಮಾಣಿಕರೆನ್ನುವುದು ನಿಜ. ಆದರೆ ಕೆಳನ್ಯಾಯಾಲಯಗಳಿಗೆ ಸೀಮಿತವಾಗಿದ್ದ ಭ್ರಷ್ಟಾಚಾರದ ವೈರಸ್ ನಿಧಾನವಾಗಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಿಗೂ ಪ್ರವೇಶಿಸಿದೆ.
ಸಂವಿಧಾನದ ಉಳಿದೆರಡು ಅಂಗಗಳ ರೀತಿಯಲ್ಲಿ ನ್ಯಾಯಾಂಗಕ್ಕೆ ತಗಲಿರುವ ರೋಗವನ್ನು ಸುಲಭದಲ್ಲಿ ನಿಯಂತ್ರಿಸುವುದು ಕಷ್ಟ. ಇದಕ್ಕೆ ಮೊದಲನೆಯ ಕಾರಣ- ನ್ಯಾಯಾಂಗದ ಭ್ರಷ್ಟತೆಯ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಾರ್ಯಾಂಗ ಮತ್ತು ಶಾಸಕಾಂಗ ಮಾತ್ರವಲ್ಲ ಮಾಧ್ಯಮರಂಗವೂ ಉಳಿಸಿಕೊಳ್ಳದೆ ಇರುವುದು. ಎರಡನೆಯ ಕಾರಣ-ಉಳಿದ ಮೂರು ಅಂಗಗಳನ್ನೂ ಮೀರಿದ ವಿಶೇಷ ರಕ್ಷಣೆ (ಇಮ್ಯುನಿಟಿ)ಯನ್ನು ನ್ಯಾಯಾಂಗ ಪಡೆದಿರುವುದು.
ಭಾರತದಲ್ಲಿ ಈಗಲೂ ನ್ಯಾಯಾಂಗ ಎನ್ನುವುದು ಒಂದು `ಪವಿತ್ರಗೋವು`. ಬೀದಿಯಲ್ಲಿ ನಿಂತು ಅಧಿಕಾರಿಗಳು ಮತ್ತು ರಾಜಕಾರಣಿಗಳ ಬಗ್ಗೆ ಆಡುವ ಮಾತುಗಳನ್ನು ನ್ಯಾಯಮೂರ್ತಿಗಳ ಬಗ್ಗೆ ಮಾತನಾಡಲಾಗದು. ನ್ಯಾಯಾಂಗ ನಿಂದನೆಯ ಕತ್ತಿ ತಲೆ ಮೇಲೆ ಸದಾ ತೂಗುತ್ತಿರುತ್ತದೆ.
ಬಹುಪದರಗಳ ಈ `ಆತ್ಮರಕ್ಷಣೆ`ಯ ವ್ಯವಸ್ಥೆಯೇ ನ್ಯಾಯಾಂಗದ ಆರೋಗ್ಯವನ್ನು ಒಳಗಿಂದೊಳಗೆ ಕೆಡಿಸುತ್ತಿದೆಯೇ?ಈಗಿನ ಕಾನೂನಿನ ಪ್ರಕಾರ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳ ಪೂರ್ವಾನುಮತಿ ಇಲ್ಲದೆ ನ್ಯಾಯಮೂರ್ತಿಗಳ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸುವಂತಿಲ್ಲ.
ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದೂ ಸಾಧ್ಯ ಇಲ್ಲ. ಹೈಕೋರ್ಟ್ ಇಲ್ಲವೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳನ್ನು ಸಂಸತ್‌ನ ಎರಡೂ ಸದನಗಳ ಸದಸ್ಯರು ಬಹುಮತದ `ವಾಗ್ದಂಡನೆ` ಮೂಲಕವಷ್ಟೇ ಕಿತ್ತುಹಾಕಬಹುದು. ಆದರೆ ಇಲ್ಲಿಯವರೆಗೆ ಯಾವ ನ್ಯಾಯಮೂರ್ತಿಯವರನ್ನೂ `ವಾಗ್ದಂಡನೆ`ಯ ಮೂಲಕ ಕಿತ್ತುಹಾಕಲು ಸಂಸತ್‌ಗೆ ಸಾಧ್ಯವಾಗಿಲ್ಲ. ನ್ಯಾಯಮೂರ್ತಿ ವಿ.ರಾಮಸ್ವಾಮಿ ಅವರಿಗೆ ವಾಗ್ದಂಡನೆ ವಿಧಿಸಬೇಕೆಂಬ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರವೇ ಸಿಗದೆ ಬಿದ್ದುಹೋಗಿತ್ತು. ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲಿಯೂ ಕಾಂಗ್ರೆಸ್ ಸದಸ್ಯರು ಗೈರುಹಾಜರಾಗಿದ್ದರು.
ನ್ಯಾಯಾಲಯದ ರಿಸೀವರ್ ಆಗಿ ಸ್ವೀಕರಿಸಿದ್ದ 24 ಲಕ್ಷ ರೂಪಾಯಿಯನ್ನು ದುರುಪಯೋಗ ಮಾಡಿಕೊಂಡಿದ್ದ ಕೊಲ್ಕೊತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರಸೇನ್ ವಿರುದ್ಧದ ವಾಗ್ದಂಡನೆಗೆ ಲೋಕಸಭೆ ಅಂಗೀಕಾರ ನೀಡಿದರೂ, ಅದು ರಾಜ್ಯಸಭೆಗೆ ಹೋಗುವ ಮೊದಲೇ ಅವರು ರಾಜೀನಾಮೆ ನೀಡಿದ್ದರು. ತನಿಖೆ ನಡೆಯುತ್ತಿರುವಾಗಲೇ ನ್ಯಾಯಮೂರ್ತಿ ಪಿ.ಡಿ.ದಿನಕರನ್ ರಾಜೀನಾಮೆ ನೀಡಿದ ಕಾರಣ ಅವರಿಗೂ ವಾಗ್ದಂಡನೆ ನೀಡಲು ಸಾಧ್ಯವಾಗಲಿಲ್ಲ.
ಆರೋಪ ಹೊತ್ತ ನ್ಯಾಯಮೂರ್ತಿಗಳ ವಿಚಾರಣೆ ನಡೆಸುವ ಈಗಿನ ವ್ಯವಸ್ಥೆ ತೀರಾ ದುರ್ಬಲವಾಗಿದೆ. ಇದೊಂದು `ಗೃಹಸಮಿತಿ`. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯ ನ್ಯಾಯಾಂಗ ಆಯೋಗದಲ್ಲಿ ಹೈಕೋರ್ಟ್‌ನ ತಲಾ ಇಬ್ಬರು ನ್ಯಾಯಮೂರ್ತಿಗಳು ಸದಸ್ಯರು.
ನ್ಯಾಯಮೂರ್ತಿಗಳ ಮೇಲಿನ ಆರೋಪ ಸಾಬೀತಾದಾರೂ ಆಯೋಗ ಹೆಚ್ಚೆಂದರೆ ಆರೋಪಿ ನ್ಯಾಯಮೂರ್ತಿಗಳನ್ನು ಅಮಾನತ್‌ನಲ್ಲಿಡಬಹುದು ಇಲ್ಲವೆ ವರ್ಗಾವಣೆ ಮಾಡಬಹುದು. ಆಯೋಗಕ್ಕೆ ಕಾನೂನುಬದ್ಧ ಅಧಿಕಾರ ಇಲ್ಲ. ಆರೋಪಿ ಸ್ಥಾನದಲ್ಲಿರುವವರು ಆಯೋಗದ ನಿರ್ಧಾರವನ್ನು ಪ್ರಶ್ನಿಸಬಹುದು.
ನ್ಯಾಯಾಂಗ ಎದುರಿಸುತ್ತಿರುವ ಈಗಿನ ಆರೋಪಗಳಿಗೆ ನ್ಯಾಯಮೂರ್ತಿಗಳ ನೇಮಕದಲ್ಲಿರುವ ದೋಷವೂ ಕಾರಣ. 1950ರಿಂದ 1993ರ ವರೆಗೆ ನ್ಯಾಯಮೂರ್ತಿಗಳ ನೇಮಕದ ಅಧಿಕಾರ ಶಾಸಕಾಂಗದ ಕೈಯಲ್ಲಿಯೇ ಇತ್ತು. `ಸೆಕೆಂಡ್ ಜಡ್ಜಸ್` ಎಂದೇ ಜನಪ್ರಿಯವಾಗಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಒಂಬತ್ತು ಸದಸ್ಯರ ಪೀಠ ಸಂವಿಧಾನದ 124ನೇ ಕಲಂ ಅನ್ನು ಪುನರ್‌ವ್ಯಾಖ್ಯಾನಿಸಿ ನ್ಯಾಯಮೂರ್ತಿಗಳ ನೇಮಕದಲ್ಲಿ ನ್ಯಾಯಾಂಗಕ್ಕೆ ಪರಮಾಧಿಕಾರವನ್ನು ನೀಡಿತ್ತು.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳದ್ದೇ ಅಂತಿಮ ನಿರ್ಧಾರ. ಈ ಬಗ್ಗೆ ಕೇಂದ್ರ ಸರ್ಕಾರದ `ಸಲಹೆ`ಪಡೆದರಷ್ಟೇ ಸಾಕು, `ಅನುಮತಿ` ಬೇಕಾಗಿಲ್ಲ. ಮುಖ್ಯನ್ಯಾಯಮೂರ್ತಿಗಳು ಇಬ್ಬರು ಹಿರಿಯಸಹೋದ್ಯೋಗಿಗಳ ಜತೆ ಸಮಾಲೋಚನೆ ನಡೆಸಿ ಕೈಗೊಳ್ಳುವ ನಿರ್ಧಾರವನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲೇಬೇಕು. ಕೆಲವು ವಿವಾದಾತ್ಮಕ ನ್ಯಾಯಮೂರ್ತಿಗಳ ಪ್ರಕರಣವನ್ನು ಪರಿಶೀಲಿಸಿದರೆ ನೇಮಕಾತಿಯ ಈ ವ್ಯವಸ್ಥೆಯಲ್ಲಿನ ದೋಷ ಸ್ಪಷ್ಟವಾಗುತ್ತದೆ.
ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ಸೌಮಿತ್ರಸೇನ್ ಹಣ ದುರುಪಯೋಗ ಮಾಡಿಕೊಂಡದ್ದು 1993ರಲ್ಲಿ. ಆದರೆ ಅದು ಬೆಳಕಿಗೆ ಬಂದದ್ದು 2009ರಲ್ಲಿ. ನ್ಯಾಯಮೂರ್ತಿ ಸೇನ್ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಮೊದಲು ಹಳೆಯ ಆರೋಪಗಳನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಯಾಕೆ ಪರಿಶೀಲಿಸಿರಲಿಲ್ಲ? ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾಗ ಪಿ.ಡಿ.ದಿನಕರನ್ ಅವರು ಅಕ್ರಮವಾಗಿ ನೂರಾರು ಎಕರೆ ಜಮೀನು ಕಬಳಿಸಿದ್ದಾರೆ ಎನ್ನುವುದು ಆರೋಪ.
ಆದರೆ ಅದು ಬಯಲಿಗೆ ಬಂದಿರುವುದು ಅವರನ್ನು ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ ಸಂದರ್ಭದಲ್ಲಿ. ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದರೆ ಸುಪ್ರೀಂಕೋರ್ಟ್ ಸಮಿತಿ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಹೇಗೆ ನೇಮಿಸಿತು?
ಇದು ಆರೋಪಕ್ಕೊಳಗಾಗಿರುವ ಒಬ್ಬಿಬ್ಬರು ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ ಲೋಪಗಳಲ್ಲ. ಕಳೆದ ಐದಾರು ವರ್ಷಗಳ ಅವಧಿಯಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಹಲವಾರು ನ್ಯಾಯಮೂರ್ತಿಗಳ ಹಿನ್ನೆಲೆ ಸಂಶಯಾಸ್ಪದವಾಗಿಯೇ ಇದ್ದರೂ ಅವರೆಲ್ಲ ಸಲೀಸಾಗಿ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದ ಯಾರೂ ಕೂಡಾ ನ್ಯಾಯಾಂಗ ಎನ್ನುವುದು 50ವರ್ಷಗಳ ಹಿಂದಿನಷ್ಟೇ ಆರೋಗ್ಯಕರವಾಗಿದೆ ಎಂದು ಹೇಳಲಾರರು. ಆರೋಗ್ಯ ಹಾಳಾಗಿದ್ದರೆ ಚಿಕಿತ್ಸೆ ಅನಿವಾರ್ಯ. ಆದರೆ ನಮ್ಮ ಸಂವಿಧಾನದಲ್ಲಿ ನ್ಯಾಯಾಂಗದ ಅನಾರೋಗ್ಯಕ್ಕೆ ಔಷಧಿ ಏನೆಂದು ಹೇಳಿಲ್ಲ.
ಭವಿಷ್ಯದಲ್ಲಿ ನ್ಯಾಯಮೂರ್ತಿಗಳ ಪ್ರಾಮಾಣಿಕತೆಯನ್ನೇ ಸಂಶಯಿಸುವಂತಹ ದಿನಗಳು ಬರಬಹುದೆಂದು ಸಂವಿಧಾನ ರಚನೆಯ ಕಾಲದಲ್ಲಿ ಸ್ವತ: ವಕೀಲರಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಯಾರೂ ಊಹಿಸಿರಲಿಲ್ಲವೇನೋ? ನ್ಯಾಯಾಂಗವನ್ನು ಪ್ರಶ್ನಾತೀತವಾಗಿ ಉಳಿಸಿಕೊಳ್ಳಬೇಕೆಂಬ ಅವರ ಸದಾಶಯವೂ ಇದಕ್ಕೆ ಕಾರಣ ಇರಬಹುದು. ಆದರೆ ಈ ಭರವಸೆಯನ್ನು ನ್ಯಾಯಾಂಗ ಉಳಿಸಿಕೊಂಡಿದೆಯೇ?
ಇತ್ತೀಚಿನ ವರ್ಷಗಳಲ್ಲಿ ಬಯಲಾಗುತ್ತಿರುವ ನ್ಯಾಯಾಂಗದ ಹಗರಣಗಳ ನಂತರ ನ್ಯಾಯಮೂರ್ತಿಗಳನ್ನು ಕೂಡಾ ಸಮಾಜಕ್ಕೆ ಉತ್ತರದಾಯಿಯನ್ನಾಗಿ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಂವಿಧಾನ ಪುನರ್‌ಪರಿಶೀಲನಾ ಆಯೋಗ `ರಾಷ್ಟ್ರೀಯ ನ್ಯಾಯಾಂಗ ಆಯೋಗ` ರಚನೆಗೆ ಶಿಫಾರಸು ಮಾಡಿತ್ತು. ಎನ್‌ಡಿಎ ಸರ್ಕಾರದ ಕಾಲದಲ್ಲಿ ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಯ ಅಧಿಕಾರವನ್ನೂ ಒಳಗೊಂಡ `ರಾಷ್ಟ್ರೀಯ ನ್ಯಾಯಾಂಗ ಆಯೋಗ`ದ ಮಸೂದೆಯನ್ನು ರೂಪಿಸಿತ್ತು.
ಕೇಂದ್ರ ಕಾನೂನು ಸಚಿವರು ಮತ್ತು ಕೇಂದ್ರ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡ ಆಯೋಗದ ಮುಂದೆ ನ್ಯಾಯಮೂರ್ತಿಗಳು ಆಸ್ತಿ ಘೋಷಣೆ ಮಾಡಬೇಕು ಎಂದು ಮಸೂದೆ ಹೇಳಿತ್ತು. ಆಗಲೂ ನ್ಯಾಯಮೂರ್ತಿಗಳು ಆಯೋಗ ರಚನೆಯನ್ನು ವಿರೋಧಿಸಿದ್ದರು.
ವಿಳಂಬವಾಗಿಯಾದರೂ ಈ ವರ್ಷದ ಮೇ ತಿಂಗಳಲ್ಲಿ ಲೋಕಸಭೆ `ನ್ಯಾಯಾಂಗ ಗುಣಮಟ್ಟ ಮತ್ತು ಉತ್ತರದಾಯಿತ್ವ ಮಸೂದೆ 2002`ಕ್ಕೆ ಅನುಮೋದನೆ ನೀಡಿದೆ. 2011ರಲ್ಲಿ ಮಂಡನೆಯಾಗಿದ್ದ ಈ ಮಸೂದೆಯನ್ನು ತಿದ್ದುಪಡಿಯೊಂದಿಗೆ ಮರಳಿ ಮಂಡಿಸಲಾಗಿತ್ತು. ಆದರೆ ಆಗಲೇ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಅವರು ಮಸೂದೆಯ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ನ್ಯಾಯಾಂಗದ ಸುಧಾರಣೆಯ ಪ್ರಯತ್ನ ನಡೆದಾಗಲೆಲ್ಲ, ಅದನ್ನು ನ್ಯಾಯಾಂಗದ ಮೇಲೆ ಶಾಸಕಾಂಗದ ಆಕ್ರಮಣ ಎಂದೇ ಬಿಂಬಿಸುತ್ತಾ ನ್ಯಾಯಮೂರ್ತಿಗಳು ಆತ್ಮರಕ್ಷಣೆಗಿಳಿಯುವುದು ಸಹಜ. ಈಗಿನ ಮುಖ್ಯನ್ಯಾಯಮೂರ್ತಿಗಳು ಅದನ್ನು ಮಾತಿನಲ್ಲಿ ಹೇಳದೆ ಇದ್ದರೂ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಭ್ರಷ್ಟಾಚಾರ ತನ್ನ ಕಬಂಧಬಾಹುಗಳನ್ನು ಎಲ್ಲೆಡೆ ಚಾಚುತ್ತಿರುವ ಸಮಯದಲ್ಲಿ ಎಲ್ಲ ವ್ಯವಸ್ಥೆಗಳೂ ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿ ಆಗಿರಬೇಕು ಎಂದು ಸಾರ್ವಜನಿಕರು ಬಯಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬಹಳ ದಿನಗಳ ಕಾಲ ನ್ಯಾಯಾಂಗ ಮುಸುಕುಹಾಕಿಕೊಂಡು ತನ್ನನ್ನು ರಕ್ಷಿಸಿಕೊಳ್ಳುವುದು ಸಾಧ್ಯವಾಗಲಾರದು.

No comments:
Post a Comment