ಕುವೆಂಪು ವಿಶ್ವವಿದ್ಯಾಲಯದಲ್ಲಿದ್ದ ಪ್ರೊ. ಬಾಲಗಂಗಾಧರ್ ಕೃಪಾಪೋಷಿತ ಸಿಎಸ್ಎಲ್ ಸಿ ಮುಚ್ಚಲಾಯಿತು, ಕಾಮಿ ಸ್ವಾಮಿಯೊಬ್ಬನಿಂದ ಪೀಡಿತರಾದ ಹೆಣ್ಣುಮಕ್ಕಳು ಪೊಲೀಸರಿಗೆ ದೂರು ಕೊಟ್ಟರು, ಮೂಢನಂಬಿಕೆ ನಿಷೇಧ ಕಾಯಿದೆಗೆ ಒತ್ತಾಯಿಸಿ ಜಾಥಾ ನಡೆಯಿತು, ಡಾ.ಕಲಬುರ್ಗಿ ಹತ್ಯೆಯನ್ನು ಖಂಡಿಸಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಯಿತು, ಅಸಹಿಷ್ಣುತೆಯನ್ನು ವಿರೋಧಿಸಿ ಸಾಹಿತಿಗಳು ಪ್ರಶಸ್ತಿ ವಾಪಾಸು ಮಾಡಿದರು ಮತ್ತು ಸಹಮನಸ್ಕರು ಅವರನ್ನು ಬೆಂಬಲಿಸಿ ಸಭೆ ನಡೆಸಿದರು, ಟೌನ್ ಹಾಲ್ ಮುಂದೆ ಯಾರೋ ಬೀಫ್ ತಿಂದರು, ಮುಖ್ಯಮಂತ್ರಿಗಳು ‘ನಾನು ಬೀಪ್ ತಿಂದರೆ ಕೇಳಲು ನೀವು ಯಾರು’ ಎಂದು ಪ್ರಶ್ನಿಸಿದರು, ಮಂಗಳೂರಿನಲ್ಲಿ ಸಮಾನಮನಸ್ಕ ಯುವಕ-ಯುವತಿಯರು ಕೂಡಿ ಜನನುಡಿ ನಡೆಸಿದರು. ಮಂಗಳೂರಿನ ಹೋರಾಟಗಾರ್ತಿ ವಿದ್ಯಾ ದಿನಕರ್ ‘ದಿಲ್ ವಾಲೆ’ ಚಿತ್ರಪ್ರದರ್ಶನವನ್ನು
ಬಲತ್ಕಾರವಾಗಿ ತಡೆಹಿಡಿದಿದ್ದನ್ನು ವಿರೋಧಿಸಿ ಪೊಲೀಸರಿಗೆ ದೂರು ಕೊಟ್ಟರು, ಇದೇಕಾರಣಕ್ಕೆ ಅವರ ಮೇಲೆ ಫೇಸ್ ಬುಕ್ ನಲ್ಲಿ ಅಶ್ಲೀಲ ಮಾತುಗಳ ಮೂಲಕ ವಾಗ್ದಾಳಿ ನಡೆದಾಗ ವಿದ್ಯಾ ಇನ್ನೊಂದು ದೂರು ಕೊಟ್ಟರು, ಅವರನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ನಿರಂತರ ಪ್ರಚಾರ ನಡೆಯಿತು. ಇವೆಲ್ಲದರ ಹಿಂದೆ ಇರುವ ವ್ಯಕ್ತಿ ಯಾರು ಗೊತ್ತೇ? ಅದೇ ಕಾಣೆ ಮೀನು ತಿನ್ನುವ ನಾನು. ಸಾಕ್ಷಿ ಬೇಕಿದ್ದರೆ ಫೇಸ್ ಬುಕ್ ನಲ್ಲಿ ಈ ‘ಭಕ್ತ’ ರ ಸ್ಟೇಟಸ್ ಮತ್ತು ಅದಕ್ಕೆ ಪ್ರತಿಕ್ರಿಯಿಸುತ್ತಿರುವ ‘ಹುಚ್ಚ ವೆಂಕಟ್’ ಗಳ ಪ್ರತಿಕ್ರಿಯೆ ನೋಡಿ.
ಮೇಲೆ ಉಲ್ಲೇಖಿಸಿರುವ ಎಲ್ಲ ಘಟನೆಗಳನ್ನು ಹೃತ್ಪೂರ್ವಕವಾಗಿ ನಾನು ಬೆಂಬಲಿಸುತ್ತೇನೆ, ಇವುಗಳ ಸೂತ್ರಧಾರ ನಾನೇ ಆಗಿದ್ದರೆ ನನ್ನ ಜನ್ಮ ಪಾವನವಾಗುತ್ತಿತ್ತು. ಸುಮ್ಮನೆ ಬಾಯಿಮುಚ್ಚಿಕೊಂಡು ಈ ಎಲ್ಲ ಸಾಧನೆಗಳ ಗರಿಯನ್ನು ನಾನೇ ಯಾಕೆ ಮುಡಿದುಕೊಳ್ಳಬಾರದು ಎಂದು ಕೂಡಾ ಒಮ್ಮೊಮ್ಮೆ ಅನಿಸುತ್ತದೆ. ಆದರೆ ಒಳಗಿಂದ ಪ್ರಶ್ನಿಸುತ್ತಿರುವ ಆತ್ಮಸಾಕ್ಷಿಗೆ ಸತ್ಯ ಹೇಳಬೇಕಲ್ಲಾ?
ಸಿಎಸ್ ಎಲ್ ಸಿ ಮುಚ್ಚಲು ದೊಡ್ಡ ಹೋರಾಟವೇ ನಡೆದಿದೆ, ಹಲವಾರು ಹಿರಿಯರು, ಯುವಕರು ಇದಕ್ಕಾಗಿ ಪಡಬಾರದ ಕಷ್ಟ ಪಟ್ಟಿದ್ದಾರೆ, ನಾನಾ ಬಗೆಯ ಕಿರುಕುಳಗಳನ್ನು ಎದುರಿಸಿದ್ದಾರೆ. ಕೊನೆಗೂ ಯಶಸ್ವಿಯಾಗಿದ್ದಾರೆ. ಅದೇ ರೀತಿ ಟೌನ್ ಹಾಲ್ ಮುಂದಿನ ಪ್ರತಿಭಟನೆಗಳಿರಲಿ, ಮಂಗಳೂರಿನಲ್ಲಿ ನಡೆದ ಜನನುಡಿಯಿರಲಿ ಇಲ್ಲವೇ ಇನ್ಯಾವುದೋ ಹೋರಾಟ ಇರಲಿ ಇದರ ಹಿಂದೆ ಕೂಡಾ ಸಮಾಜದಲ್ಲಿ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸಬೇಕೆಂಬ ಬದ್ದತೆಯ ಜತೆಯಲ್ಲಿ ಅನ್ಯಾಯಕ್ಕೊಳಗಾದವರಿಗೆ-ನೆರವಾಗಬೇಕೆಂಬ ಕಾಳಜಿಯ ನೂರಾರು ಯುವಕ-ಯುವತಿಯರ ಶ್ರಮವಿದೆ. ಮುನೀರ್,ಅನಂತನಾಯಕ್, ನವೀನ್, ಭಾಸ್ಕರಪ್ರಸಾದ್, ದಿನೇಶ್ ಕುಮಾರ್, ದಯಾನಂದ್, ಹರ್ಷ, ಶ್ರೀಧರ್ ಪ್ರಭು, ಶ್ರೀನಿವಾಸ್,ಪ್ರಭಾ, ಅಕ್ಷತಾ, ಸುಭಾಷ್, ಕಿರಣ್ , ಚೇತನಾ, ಬಸವರಾಜ್, ಇರ್ಷಾದ್, ಪ್ರಶಾಂತ್, ಲಿಂಗರಾಜು, ಮೊದಲಾದವರು ಬದುಕಿನಲ್ಲಿ ಅನ್ಯಾಯ-ಅಕ್ರಮಗಳ ಬಗ್ಗೆ ರಾಜೀ ಮಾಡಿಕೊಳ್ಳದೆ ಇದೇಕಾರಣಕ್ಕೆ ಸಮಾಜದಲ್ಲಿ ಬಲಾಢ್ಯರೆನಿಸಿಕೊಂಡವರನ್ನು ಎದುರುಹಾಕಿಕೊಂಡವರು. ನವೀನ್ ಹೇಳಿರುವ ಹಾಗೆ ಎಸ್ ಇ ಝಡ್ ಮತ್ತು ರಿಯಲ್ ಎಸ್ಟೇಟ್ ಮಾಫಿಯಾ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ ವಿದ್ಯಾ ದಿನಕರ್ ಇಲ್ಲದೆ ಇದ್ದರೆ ಮಂಗಳೂರು ಭೋಪಾಲ್ ಆಗುತ್ತಿತ್ತು. ಮುನೀರ್ ಗೆ ಇರುವ ಪ್ರಾಣಬೆದರಿಕೆ ಬಗ್ಗೆ ನಮಗೆಲ್ಲರಿಗೂ ಆತಂಕವಿದೆ.
ಈ ಯುವ ಹೋರಾಟಗಾರರ ಮುಂದೆ ನಾನು ಏನೂ ಅಲ್ಲ. ನಾನಿದ್ದರೂ, ಇಲ್ಲದೆ ಇದ್ದಿದ್ದರೂ ಇವರ ಹೋರಾಟ ಈಗಿನಂತೆಯೇ ಮುಂದುವರಿಯುತ್ತಿತ್ತು. ನನ್ನ ಬಲ-ಬೆಂಬಲದ ಅಗತ್ಯ ಇವರಿಗಿಲ್ಲ. ಈ ಯುವಕ-ಯುವತಿಯರು ನಡೆಸುವ ಹಲವಾರು ಸಾಹಸಗಳ ಬಗ್ಗೆ ನನಗೆ ಗೊತ್ತೇ ಇರುವುದಿಲ್ಲ. ಈ ನನ್ನ ಮಾತುಗಳು ಪಲಾಯನವಾದವೆಂದು ತಿಳಿದುಕೊಳ್ಳಬಾರದೆಂಬ ಕಾರಣಕ್ಕಾಗಿ ಮಾತ್ರ ಈ ಕೊನೆ ಮಾತು: ಈ ಯುವ ಹೋರಾಟಗಾರರಿಗೆ ನನ್ನ ಸಂಪೂರ್ಣ ಬೆಂಬಲ ಇದೆ, ಅವರ ಮೇಲೆ ಭರವಸೆಯೂ ಇದೆ. ಕಷ್ಟದ ಸಮಯದಲ್ಲಿ ಇವರ ಹಿಂದೆ ಅಲ್ಲ, ಮುಂದೆ ಇರುತ್ತೇನೆ. ಇದಕ್ಕಾಗಿ ಯಾವ ಬೆಲೆ ತೆರಲೂ ಕೂಡಾ ಸಿದ್ದನಿದ್ದೇನೆ. ಬದುಕಿನಲ್ಲಿ ಕಳೆದುಕೊಳ್ಳಲು ಹೆದರುವಷ್ಟು ಯಾವುದೂ ದೊಡ್ಡದಿರುವುದಿಲ್ಲ.
No comments:
Post a Comment