Wednesday, September 14, 2016

ಸಾಮಾಜಿಕ ಸುಧಾರಣೆಯ ಹರಿಕಾರ ನಾರಾಯಣ ಗುರು

ಪ್ರಸಕ್ತ ವರ್ಷದಿಂದ ನಾರಾಯಣ ಗುರು ಜಯಂತಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಅಚರಿಸಲು ನಿರ್ಧರಿಸಿದೆ. ಈ ಕಾರಣದಿಂದಾಗಿ ರಾಜ್ಯದ ಹಲವು ಭಾಗಗಳಿಂದ ಸ್ನೇಹಿತರು ನಾರಾಯಣ ಗುರುಗಳ ಬಗ್ಗೆ ನನ್ನಿಂದ ಮಾಹಿತಿ ಕೇಳುತ್ತಿದ್ದಾರೆ. ನಿಜವಾದ ನಾರಾಯಣ ಗುರುಗಳನ್ನು ಪರಿಚಯಿಸುವ ಪುಸ್ತಕಗಳು ಮಲೆಯಾಳಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಬಂದಿವೆ. ಆದರೆ ಕನ್ನಡದಲ್ಲಿ ಅಂತಹ ಪುಸ್ತಕಗಳಿಲ್ಲ. ಅಂತಹದ್ದೊಂದು ಪುಸ್ತಕ ಬರೆಯಬೇಕೆಂಬ ನನ್ನ ಬಹುದಿನಗಳ ಕನಸು ನನಸಾಗಿಲ್ಲ. ಈ ಹಿನ್ನೆಲೆಯಲ್ಲಿ 2000ನೇ ವರ್ಷದಲ್ಲಿ ಮುಂಬೈನ ವಿಚಾರಸಂಕಿರಣದಲ್ಲಿ ಮಾಡಿದ ಭಾಷಣವನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಇದು ನಾರಾಯಣ ಗುರುಗಳನ್ನು ವೈಭವಿಕರಿಸದೆ ಅವರು ನಡೆಸಿದ್ದ ಧಾರ್ಮಿಕ,ಸಾಮಾಜಿಕ ಮತ್ತು ಶೈಕ್ಷಣಿಕ ಚಳುವಳಿಯ ಸ್ಥೂಲಚಿತ್ರವನ್ನು ನೀಡಿದೆ ಎಂದು ನಾನು ನಂಬಿದ್ದೇನೆ. ದಯವಿಟ್ಟು ಇದನ್ನು ಓದಿ ಮತ್ತೆ ಶೇರ್ ಮಾಡಿ.
--------------------------------------------------------------------------------------------------------------
19ನೇ ಶತಮಾನದುದ್ದಕ್ಕೂ, ದೇಶದ ವಿವಿಧೆಡೆಗಳಲ್ಲಿ ಎರಡು ಪ್ರತ್ಯೇಕ ವಿಚಾರಧಾರೆಗಳ ಸುಧಾರಣಾವಾಧಿ ಚಳವಳಿಗಳು ನಡೆದವು. ಮೊದಲನೆಯದ್ದು ರಾಜಾರಾಮ್ ಮೋಹನ್ ರಾಯ್, ದಯಾನಂದ ಸರಸ್ವತಿ, ಕೇಶವ ಸೇನ್, ರಾನಡೆ, ದೇವಿಂದ್ರನಾಥ ಠಾಕೂರ್, ಅನಿಬೆಸೆಂಟ್ ಮೊದಲಾದ ಇಂಗ್ಲೀಷ್ ಕಲಿತ ಮೇಲ್ಜಾತಿಯಿಂದಲೇ ಬಂದವರ ನೇತೃತ್ವದ ಚಳವಳಿಗಳು. ಇವು ಮಹಿಳೆಯರು ಮತ್ತು ಶೋಷಿತರಿಗಾಗುತ್ತಿರುವ ಅನ್ಯಾಯದ ವಿರುದ್ದ ದನಿ ಎತ್ತಿದವು.ಸತಿಪದ್ದತಿ, ವಿಧವಾ ವಿವಾಹ, ವರದಕ್ಷಿಣಿ, ಮೊದಲಾದ ಬಹುಮಟ್ಟಿಗೆ ಮೇಲ್ಜಾತಿ ಸಮಾಜದಲ್ಲಿನ ಅದರಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ಸಾಮಾಜಿಕ ಅನಿಷ್ಟಗಳ ನಿವಾರಣೆ, ಈ ಚಳವಳಿಗಳ ಮುಖ್ಯ ಉದ್ದೇಶವಾಗಿತ್ತು. ಆರ್ಯ ಸಮಾಜ ಪ್ರಾರಂಭಿಸಿದ್ದ 'ಶುದ್ಧಿ ಚಳವಳಿ' ಯನ್ನು ಗಮಿಸಿದರೆ, ಕೆಳವರ್ಗದ ಜನ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವದನ್ನು ತಪ್ಪಿಸುವುದು ಕೂಡ ಈ ಚಳವಳಿಗಳ ಮುಖ್ಯ ಉದ್ದೇಶವಾಗಿತ್ತೋ ಏನೋ ಎಂಬ ಅನುಮಾನ ಕೂಡಾ ಮೂಡುತ್ತದೆ. ಈ ಚಳವಳಿಗಳು ಕೈಗೆತ್ತಿಕೊಂಡ ಬಹಳಷ್ಟು ಸಮಸ್ಯೆಗಳು ತಳಸಮುದಾಯದ ಜ್ವಲಂತ ಸಮಸ್ಯೆಯಾಗಿರಲಿಲ್ಲ.
ಅದೇ ಕಾಲಕ್ಕೆ ಕೆಳವರ್ಗದಿಂದಲೇ ಮೂಡಿ ಬಂದ ನಾಯಕರು, ವರ್ಣಾಶ್ರಮ ವ್ಯವಸ್ಥೆಯನ್ನು ಪ್ರಶ್ನಿಸುವ ಚಳವಳಿಗಳ ನೇತೃತ್ವ ವಹಿಸಿದ್ದರು. ಒರಿಸ್ಸಾದಲ್ಲಿ ಮಹಿಮಾ ಸ್ವಾಮಿ ಎಂಬುವವರ ನೇತೃತ್ವದಲ್ಲಿ ಆದಿವಾಸಿಗಳು ತಮಗೆ ಪ್ರವೇಶವಿಲ್ಲವೆಂಬ ಕಾರಣಕ್ಕೆ ಪುರಿಯ ಜಗನ್ನಾಥ ದೇವಾಲಯವನ್ನು ಸುಡಲು ಪ್ರಯತ್ನಿಸಿದ್ದರು.
ಕೊನೆಗೆ ಮಹಿಮಾ ಸ್ವಾಮಿ 1850ರಲ್ಲಿ ಮಹಿಮಾ ಧರ್ಮ ಎಂಬ ಹೊಸಧರ್ಮವನ್ನೇ ಬೋಧಿಸಿದ. ಅದೇ ಕಾಲಕ್ಕೆ ಮಧ್ಯಪ್ರದೇಶದ ಛತ್ತೀಸಘಡದ ಅಸ್ಪೃಶ್ಯರ ಒಂದು ಪಂಗಡವಾಗಿದ್ದ ಚಮ್ಮಾರರಲ್ಲಿ ಸತ್ನಮ್ ಪಂಥ ಹುಟ್ಟಿಕೊಂಡಿತ್ತು. ಅವರು ಪ್ರತಿಭಟನೆಯ ಅಂಗವಾಗಿ ತಾವೇ ಜನಿವಾರ ಹಾಕಿಕೊಳ್ಳತೊಡಗಿದ್ದರು.
1873ರಲ್ಲಿ ಪುಲೆ, ಸತ್ಯಶೋಧಕ ಸಮಾಜದ ಮೂಲಕ ಜಾತಿನಾಶ, ಮಹಿಳಾ ವಿಮೋಚನೆಯ ಕಾರ್ಯ ಪ್ರಾರಂಭಿಸಿದ್ದರು. ಕೋಲ್ಲಾಪುರದ ಸಾಹು ಮಹಾರಾಜರು, ನ್ಯಾಯಾಲಯಗಳಲ್ಲಿನ ಹುದ್ದೆಗಳಲ್ಲಿ ಶೇ.50ರಷ್ಟನ್ನು ಬ್ರಾಹ್ಮಣೇತರರಿಗೆ ಮೀಸಲಿಟ್ಟಿದ್ದರು. ತಮಿಳು ನಾಡಿನಲ್ಲಿ ಪೆರಿಯಾರ್ ಅವರ ಸ್ವಾಭಿಮಾನ ಚಳವಳಿಗೆ ರಂಗ ಸಜ್ಜಾಗತೊಡಗಿತ್ತು. ಸತ್ಯಶೋಧಕ ಸಮಾಜ, ಮಹಿಮಾ ಧರ್ಮ, ಸತ್ನಾಂ ಪಂಥ, ಪೆರಿಯಾರ್ ಅವರ ಸ್ವಾಭಿಮಾನ ಚಳವಳಿ ಅಲ್ಲಿನ ಸಮಾಜಗಳಲ್ಲಿ ಯಾವ ರೀತಿಯ ಕಂಪನಗಳನ್ನು ಉಂಟು ಮಾಡಿತ್ತೋ, ಅಂತಹದ್ದೇ ಒಂದು ಸ್ಪೋಟಕ ಸ್ಥಿತಿ 1888ರಲ್ಲಿ ನಾರಾಯಣ ಗುರುಗಳು ಅರವಿಪುರಂ ನಲ್ಲಿ ಶಿವದೇವಾಲಯ ಸ್ಥಾಪಿಸಿದಾಗ, ಕೇರಳದ ಹಿಂದೂ ಸಮಾಜದಲ್ಲಿ ನಿರ್ಮಾಣವಾಗಿತ್ತು.
ಅದೂ ಶಂಕರಚಾರ್ಯರು ಹುಟ್ಟಿದ ನಾಡಿನಲ್ಲಿ ಅಸ್ಪೃಶ್ಯನೊಬ್ಬ, ಅಸ್ಪೃಶ್ಯರಿಗಾಗಿ ನಿರ್ಮಿಸಿದ್ದ ‘ ಸ್ಪೃಶ್ಯ’ ದೇವರ ದೇವಾಲಯ.
ಮೊದಲ ದೇವಾಲಯ ಸ್ಥಾಪನೆಯ ನಂತರದ 48ವರ್ಷಗಳ ಕಾಲ ಅಲ್ಲಿನ ಶೋಷಿತರ ಕೊರಳ ದನಿಯಾಗಿ ಮೂಡಿ ಬಂದ ಸುಧಾರಣಾ ಚಳವಳಿ ಕೇರಳದ , ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳ ಚಿತ್ರವನ್ನೇ ಬದಲಾಯಿಸಿಬಿಟ್ಟಿತು.
ಈ ಚಳವಳಿಯ ಮೊದಲ 40ವರ್ಷಗಳಲ್ಲಿ ನಾರಾಯಣ ಗುರುಗಳು ಜೊತೆಯಲ್ಲಿದ್ದುಕೊಂಡೇ ಮಾರ್ಗದರ್ಶನ ನೀಡಿದರೆ, ಅವರ ಸಾವಿನ ನಂತರ ಸುಮಾರು ಎಂಟು ವರ್ಷಗಳ ಹೋರಾಟಕ್ಕೆ ಅವರ ತತ್ವಗಳೇ ಚಳವಳಿಯ ದಾರಿಗೆ ಬೆಳಕಾಗಿತ್ತು. ಅಸ್ಪೃಶ್ಯರಿಗೂ ದೇವಸ್ಥಾನ ಪ್ರವೇಶ ಅವಕಾಶ ನಡುವ 'ದೇವಾಲಯ ಪ್ರವೇಶ' ಘೋಷಣೆ ಹೊರಬಿದ್ದಾಗ ಅದನ್ನು ನೋಡಲು ನಾರಾಯಣ ಗುರುಗಳು ಜೀವಂತವಿರಲಿಲ್ಲ.
ಒಂದು ಚಳವಳಿಯ ಸೋಲು-ಗೆಲುವು, ಅದರ ಸಿದ್ದಾಂತ, ಸಂಘಟನೆ ಮತ್ತು ಹೋರಾಟದ ನೆಲೆಗಳನ್ನು ಅವಲಂಭಿಸಿರುತ್ತದೆ. ನಾರಾಯಣ ಗುರು ಚಳವಳಿಯ ಎಲ್ಲಾ ಮಗ್ಗುಲುಗಳನ್ನು ಈ ರೀತಿಯ ಸಮಾಜ ವಿಜ್ಞಾನದ ಹಿನ್ನೆಲೆಯಲ್ಲಿ ಅಧ್ಯಯನ ನಡೆಸುವ ಪ್ರಯತ್ನ ನಡೆದದ್ದು ಕಡಿಮೆ. ಈ ರೀತಿಯ ಅಧ್ಯಯನದ ಕೊರತೆಯಿಂದಾಗಿಯೇ ನಾರಾಯಣ ಗುರು ಅವರನ್ನು ವೈಯಕ್ತಿಕವಾಗಿ ವೈಭವೀಕರಿಸಿ ಅವರನ್ನು ದೇವರು ಮಾಡಿ ಊರೆಲ್ಲ ಗುಡಿಗಳನ್ನು ಕಟ್ಟಲಾಗಿದೆ. ಗುರುಗಳನ್ನು ದೇವರು ಮಾಡುವ ಭರದಲ್ಲಿ ಅವರ ನೇತೃತ್ವದ ಸುಧಾರಣಾವಾದಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರ, ಅನೇಕ ಅನುಯಾಯಿಗಳ ಪರಿಚಯ ಹೊರಜಗತ್ತಿಗೆ ಆಗಿಲ್ಲ.
ನಾರಾಯಣ ಗುರು ಚಳವಳಿ, ಪ್ರಮುಖವಾಗಿ ಐದು ಹಂತಗಳಲ್ಲಿ ನಡೆಯಿತು.
ಮೊದಲನೆಯದು ಡಾ.ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ, ಎರಡನೇಯದು, ನಾರಾಯಣ ಗುರು ನೇತೃತ್ವದ ಸಾಮಾಜಿಕ ಸುಧಾರಣೆ, ಮೂರನೆಯದು ಕುಮಾರನ್ ಆಶಾನ್ ನೇತೃತ್ವದ ಶಾಲೆಗಳಲ್ಲಿ ಪ್ರವೇಶಕ್ಕಾಗಿ ನಡೆದ ಚಳವಳಿ, ನಾಲ್ಕನೆಯದು ಟಿ.ಕೆ ಮಾಧವನ್ ನೇತೃತ್ವದಲ್ಲಿ ದೇವಾಲಯಗಳ ಪ್ರವೇಶ ಮತ್ತು ಅಸ್ಪೃಶ್ಯತೆಯ ವಿರುದ್ಧ ನಡೆದ ಚಳವಳಿ ಹಾಗೂ ಕೊನೆಯದಾಗಿ, ಸಿ.ಕೇಶವನ್ ನೇತೃತ್ವದಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆದ ಹೋರಾಟ. ಈ ಎಲ್ಲಾ ಹೋರಾಟಗಳು ನಾರಾಯಣ ಗುರುಗಳ ಸಿದ್ಧಾಂತ ನೆಲೆಗಟ್ಟಿನ ಮೇಲೆಯೇ ನಡೆದಿವೆ.
ಧಾರ್ಮಿಕ ಸುಧಾರಣೆಯ ಮೂಲಕ ಪ್ರಾರಂಭಗೊಂಡ ನಾರಾಯಣ ಗುರು ಚಳವಳಿ ಕಾಲ ಸರಿದಂತೆ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಆಯಾಮಗಳನ್ನು ಪಡೆದುಕೊಂಡು ಬೆಳೆಯುತ್ತಾ ಹೋಗಿದ್ದು ಕೇವಲ ಆಕಸ್ಮಿಕವಿರಲಾರದು. ಅದು ನಾರಾಯಣ ಗುರುಗಳೇ ರೂಪಿಸಿದ ಕಾರ್ಯ ತಂತ್ರವಾಗಿರಬಹುದು ಎಂದು ನಂಬಲಿಕ್ಕೆ ಹಲವು ಕಾರಣಗಳು ಅವರ ಚಿಂತನೆಗಳಲ್ಲಿಯೇ ಸಿಗುತ್ತವೆ.
ಸಮಾಜದ ಅಮೂಲಾಗ್ರ ಬದಲಾವಣೆ ಎಂದರೆ, ಪ್ರಮುಖವಾಗಿ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಎಂಬುದನ್ನು ನಾರಾಯಣ ಗುರು ಅರಿತಿದ್ದರು. ಇಂತಹ ಬದಲಾವಣೆಗೆ ಸಮುದಾಯದ ಮನಸ್ಸನ್ನು ಸಿದ್ದಗೊಳಿಸುವ ಪ್ರಾಥಮಿಕ ಕಾರ್ಯವನ್ನು ಅವರು ದೇವಾಲಯಗಳ ಸ್ಥಾಪನೆ ಮೂಲಕ ಪ್ರಾರಂಭಿಸಿದ್ದರು.
ನಾರಾಯಣ ಗುರುಗಳ ಮಹತ್ವ ಅರಿಯಬೇಕಾದರೆ, ಅವರಿಗಿಂತ ಹಿಂದಿನ ಕೇರಳದ ಸಾಮಾಜಿಕ ಸ್ಥಿತಿಯ ಸ್ಥೂಲ ಚಿತ್ರಣ ತಿಳಿದುಕೊಳ್ಳುವುದು ಅನಿವಾರ್ಯ. ದರಿದ್ರರಲ್ಲಿ, ರೋಗಿಗಳಲ್ಲಿ ದೇವರನ್ನು ಕಾಣಬೇಕೆಂದು ಹೇಳಿದ ವಿವೇಕಾನಂದರು ‘ಕೇರಳ ಮನೋರೋಗಿಗಳ ಆಸ್ಪತ್ರೆ’ ಎಂದು ಹೇಳಿ ಕೈಚೆಲ್ಲಿ ಹೋಗಿದ್ದರು.
ಜಾತಿ ವ್ಯವಸ್ಥೆ ಆ ರೀತಿಯ ಭೀಕರ ಮನೋರೋಗಿಗಳನ್ನು ಅಲ್ಲಿ ಸೃಷ್ಟಿಸಿತ್ತು. ದೇವಸ್ಥಾನ ಪ್ರವೇಶ ದೂರವೇ ಉಳಿಯಿತು. ಅದರ ಎದುರಿನ ರಸ್ತೆಯಲ್ಲಿಯೂ ಅಸ್ಪೃಶ್ಯರು ನಡೆದುಕೊಂಡು ಹೋಗುವಂತಿರಲಿಲ್ಲ. ಗಾಂಧೀಜಿ ಮತ್ತು ನಾರಾಯಣ ಗುರು ಮಾರ್ಗದರ್ಶನದಲ್ಲಿಯೇ ನಡೆದ ಐತಿಹಾಸಿಕ ವೈಕಂ ಸತ್ಯಾಗ್ರಹ ನಡೆದದ್ದು ದೇವಸ್ಥಾನ ಪ್ರವೇಶಕ್ಕಾಗಿ ಅಲ್ಲ, ಅದರ ಮುಂಭಾಗದ ರಸ್ತೆಯಲ್ಲಿ ನಡೆದಾಡುವ ಸ್ವಾತಂತ್ರ್ಯಕ್ಕಾಗಿ ಎಂಬುದು ಗಮನಾರ್ಹ.
ಕೆಳಜಾತಿ ಜನರು ಮಧ್ಯಾಹ್ನದ ಬಿಸಿಲಿನಲ್ಲಿ ಮಾತ್ರ ಹೊರಗಡೆ ಬರಬೇಕಿತ್ತು. ಯಾಕೆಂದರೆ, ಉಳಿದ ಸಮಯಗಳಲ್ಲಿ ಉದ್ದಕ್ಕೆ ಚಾಚಿಕೊಳ್ಳುವ ನೆರಳು ಎದುರಿಗೆ ಬರುವ ಸವರ್ಣೀಯರ ಮೇಲೆ ಬಿದ್ದು ಅವರ ಮಡಿ ಕೆಡಬಹುದೆಂಬ ಭಯ. ತಳಸಮುದಾಯದ ಜನ ಕಾಲಿಗೆ ಚಪ್ಪಲಿ, ತಲೆಗೆ ವಸ್ತ್ರ ಹಾಕುವಂತಿರಲಿಲ್ಲ. ಸರ್ಕಾರವೇ ನಡೆಸುವ ಶಾಲೆಗಳಿಗೆ ಈಳವರಿಗೆ ಪ್ರವೇಶ ಇರಲಿಲ್ಲ, ಸರ್ಕಾರಿ ಉದ್ಯೋಗ ಸೇರಲು ಅವರಿಗೆ ಅವಕಾಶ ಇರಲಿಲ್ಲ. ಸಾರ್ವಜನಿಕ ಕೆರೆ-ಬಾವಿಗಳ ನೀರನ್ನು ಅವರು ಬಳಸಲಿಕ್ಕೆ ಅವಕಾಶ ನಿರಾಕರಿಸಲಾಗಿತ್ತು.
ಬ್ಯಾಂಕ್ ಅಂಚೆ ಕಛೇರಿಗಳ ಒಳಗೆ ಸವರ್ಣಿಯರಿದ್ದರೆ, ಒಳ ಪ್ರವೇಶಿಸುವಂತಿರಲಿಲ್ಲ. ಕಥಕ್ಕಳಿಯಂತಹ ನೃತ್ಯದಲ್ಲಿ ಅವರು ದೇವರುಗಳ ಪಾತ್ರ ಮಾಡುವಂತಿರಲಿಲ್ಲ. ಅವರು ಮಹಡಿ ಮನೆಯಲ್ಲಿ ವಾಸಿಸುವಂತಿರಲಿಲ್ಲ. ಈಳವರು ತಮ್ಮ ಮನೆಗಳನ್ನು ‘ಕುಡಿ’ಗಳೆಂದು ಕರೆಯಬೇಕಿತ್ತು. ನಾಯರ್ ಗಳು ತಮ್ಮ ಮನೆಗಳನ್ನು ವೀಡು ಎನ್ನುತ್ತಿದ್ದರೆ ನಂಬೂದಿರಿಗಳು ಇಲ್ಲಂ ಎನ್ನುತ್ತಿದ್ದರು.
ಕೆಳ ವರ್ಗದ ಮಹಿಳೆಯರ ಸ್ಥಿತಿ ಇನ್ನೂ ನರಕ ಸದೃಶ್ಯ. ಅವರು ಎದೆಯ ಮೇಲೆ ಬಟ್ಟೆ ಧರಿಸುವಂತಿರಲಿಲ್ಲ. ಇದನ್ನು ಪ್ರತಿಭಟಿಸಿದ ಕೆಳಜಾತಿಯ ಸ್ವಾಭಿಮಾನಿ ಮಹಿಳೆಯೊಬ್ಬರು, ತನ್ನ ಸ್ತನಗಳನ್ನೇ ಕುಯ್ದು ಅರ್ಪಿಸಿ, ಪ್ರಾಣಾರ್ಪಣೆ ಮಾಡಿದ ಹೃದಯವಿಧ್ರಾವಕ ಘಟನೆ ಅಲ್ಲಿ ನಡೆದಿತ್ತು. 1814 ರಲ್ಲಿ ರಾಜ್ಯ ಸರ್ಕಾರ ಈಳವ ಮಹಿಳೆಯರಿಗೆ ರವಿಕೆ ಬಳಸಲು ಈಳವ ಮಹಿಳೆಯರಿಗೆ ಅವಕಾಶ ನೀಡಿತ್ತು. ಆದರೆ ಅವರು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವಂತಿರಲಿಲ್ಲ. ಇದರಿಂದ ಪ್ರೇರಿತರಾಗಿ ಈಳವ ಮಹಿಳೆಯರು ಎದೆ ತುಂಬಾ ಬಟ್ಟೆ ಹಾಕುತ್ತಿರುವುದು ನಾಯರ್ ಮತ್ತು ಇತರ ಜಾತಿಗಳಲ್ಲಿ ಒಂದು ಬಗೆಯ ಅಸಹನೆಗೆ ಕಾರಣವಾಗಿತ್ತು.


ಅವರು ಹೂ ಮುಡಿಯುವಂತಿರಲಿಲ್ಲ. ಎಷ್ಟೋ ಕಡೆಗಳಲ್ಲಿ ಮದುವೆಯ ಮೊದಲು ರಾತ್ರಿಗಳನ್ನು ಊರಿನ ನಂಬೂದಿರಿ ನಾಯಕರ ಜೊತೆಯಲ್ಲಿ ಕಳೆಯಬೇಕಿತ್ತು.
ಇವೆಲ್ಲದರ ಜೊತೆಗೆ ನೂರೆಂಟು ಮೂಡನಂಬಿಕೆಗಳು ಮತ್ತು ದುಂದುವೆಚ್ಚದ ಸಂಪ್ರದಾಯಗಳನ್ನು ಅವರು ಕುತ್ತಿಗೆಗೆ ಗಂಟು ಹಾಕಲಾಗಿತ್ತು. ಮೈ ನೆರೆಯುವ ಮೊದಲೇ, ಯಾವುದಾದರೂ ಒಬ್ಬ ವ್ಯಕ್ತಿಯಿಂದ ತಾಳಿ ಕಟ್ಟಿಸುವ, "ತಾಳಿಕೆಟ್ಟು ಕಲ್ಯಾಣಂ" ಎಂಬ ಬಾಲ್ಯ ವಿವಾಹಗಿಂತಲೂ ಅಮಾನವನೀಯವಾದ ಸಂಪ್ರದಾಯವೊಂದು ಕೇರಳದಲ್ಲಿತ್ತು. ಬಾಲ್ಯ ವಿವಾಹದಲ್ಲಿ ಕನಿಷ್ಟ ಮದುವೆಯ ಒಪ್ಪಂದವಿತ್ತು. ಇಲ್ಲಿ ಅದೊಂದು ಅಣಕು ಮದುವೆ. ಮೈ ನೆರೆದಿದ್ದನ್ನು ಊರಿಗೆಲ್ಲ ಘೋಷಿಸುವ "ತಿರುಂಡಕಲಿ" ಗರ್ಭಿಣಿಯಾದ ಕೂಡಲೇ "ಪುಲೂಕೂಡಿ" ಎಂಬ ಸೀಮಂತ ನಡೆಸುವ ಸಂಪ್ರದಾಯ ಆಡಂಭರದ ಮದುವೆ ಈ ಸಂಪ್ರದಾಯಗಳ ಕಾರಣದಿಂದಾಗಿಯೇ ಈಳವ ಕುಟುಂಬಗಳು ವಂಶ ಪಾರಂಪರ್ಯವಾಗಿ ನಂಬೂದಿರಿ ನಾಯರ್ಗಳ ಸಾಲಗಾರರಾಗಿ ಜೀತದ ಜೀವನ ಸಾಗಿಸಬೇಕಾಗಿತ್ತು.
ಆದರೆ, ಇದೇ ಕೇರಳ ಹಿಂದೂ ದೇಶದಲ್ಲಿಯೇ ಅತ್ಯಂತ ಹೆಚ್ಚು ಸಾಕ್ಷರತೆ ಇರುವ ಮತ್ತು ಪ್ರಗತಿಪರ ಚಿಂತಕರಿರುವ ರಾಜ್ಯ. ಪ್ರಜಾಸತಾತ್ಮಕವಾಗಿ ಆಯ್ಕೆಯಾದ ದೇಶದ ಮೊದಲ ಹಾಗೂ ಜಗತ್ತಿನ ಎರಡನೇ ಕಮ್ಯನಿಸ್ಟ್ ಸರ್ಕಾರ ಅಸ್ತಿತ್ವಕ್ಕೆ ಬಂದದ್ದು ಕೇರಳದಲ್ಲಿ. ದೇಶ ವಿಭಜನೆ ಕಾಲದಲ್ಲಿ ಉತ್ತರ ಭಾರತ ಕೋಮುದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿದ್ದಾಗ ಶೇ.18ಕ್ಕೂ ಹೆಚ್ಚು ಮುಸ್ಲಿಂ ಜನಸಂಖ್ಯೆಯೇ ಇರುವ ಕೇರಳ ಶಾಂತವಾಗಿತ್ತು.
ಅಡ್ವಾನಿಯವರ ರಥಯಾತ್ರೆಯ ನಂತರ ದೇಶಾದ್ಯಂತ ಕೋಮುವಾದಿ ಚಟುವಟಿಕೆಗಳ ಭುಗಿಲೆದ್ದಾಗಲೂ ಇಲ್ಲಿ, ಯಾವ ಗಲಭೆಗಳು ನಡೆಯಲಿಲ್ಲ.
ದಕ್ಷಿಣದ ರಾಜ್ಯಗಳಲ್ಲಿ ಪ್ರಯಾಸಪಟ್ಟು, ಪ್ರವೇಶ ಪಡೆದ ಬಿಜೆಪಿಯನ್ನು ಈಗಲೂ ಹೊಸಲಿನಾಚೆ ನಿಲ್ಲಿಸಿರುವ ರಾಜ್ಯ ಕೇರಳ. ಇದು ಕೇವಲ ನಾರಾಯಣ ಗುರುಗಳು ಹುಟ್ಟಿ ಸರಿಯಾಗಿ ನೂರು ವರ್ಷಗಳ ಅವಧಿಯಲ್ಲಿ ನಡೆದ ಬದಲಾವಣೆ. ಅದೇ ನೂರು ವರ್ಷಗಳ ನಂತರ ಕೇರಳದಲ್ಲಿ ಮೊದಲ ಬಾರಿಗೆ ಕಮ್ಯೂನಷ್ಟ ಸರ್ಕಾರ ಅಸ್ತಿತ್ವಕ್ಕೆ ಬಂತೆಂಬುದು ಉಲ್ಲೇಖನಿಯ.
ನಾರಾಯಣ ಗುರುಗಳು ಪ್ರಾರಂಭಿಸಿದ ಧಾರ್ಮಿಕ ಸುಧಾರಣಾ ಚಳವಳಿಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಆಗ ಅವರ ಕಾರ್ಯತಂತ್ರ ಉಳಿದ ಸಮಾಜ ಸುಧಾರಕರಿಗಿಂತ ಹೇಗೆ ಭಿನ್ನವಾಗಿತ್ತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಅಸ್ಪೃಶ್ಯತೆಯ ವಿರುದ್ಧದ ಹೋರಾಟಗಳಲ್ಲಿ ದೇವಸ್ಥಾನ ಪ್ರವೇಶ ಚಳವಳಿಯದ್ದು ಪ್ರಮುಖ ಪಾತ್ರವಾದರೆ, ನಾರಾಯಣ ಗುರುಗಳು ಅದನ್ನೇ ಕೈಬಿಟ್ಟಿದ್ದರು. ಅವರು ಸವರ್ಣಿಯರ ಒಡೆತನದ ದೇವಾಲಯ ಪ್ರವೇಶಿಸಲಿಲ್ಲ. ಅದನ್ನು ಬಹಿಷ್ಕರಿಸಿದರು. ಮತ್ತು ಅವರ್ಣೀಯರರ ದೇವಾಲಯಗಳನ್ನು ಸ್ಥಾಪಿಸಿದರು. ಆದರೆ, ಅವರು ಮತ್ತೊಂದು ಧರ್ಮವನ್ನು ಕೂಡ ಸ್ಥಾಪಿಸಲು ಹೋಗಲಿಲ್ಲ.
ಮೊದಲು ದೇವಸ್ಥಾನ ಪ್ರವೇಶ ಚಳವಳಿ ನಡೆಸದೆ, ದೇವಸ್ಥಾನ ನಿರ್ಮಿಸುವ ಅವರ ಕಾರ್ಯತಂತ್ರ ಎರಡು ರೀತಿಯಲ್ಲಿ ಅವರಿಗೆ ನೆರವಾಯಿತು. ದೇವಸ್ಥಾನ ಪ್ರವೇಶ ಹೋರಾಟಕ್ಕೆ ಎದುರಾಗುವ ಪ್ರತಿಭಟನೆಯನ್ನು ಎದುರಿಸುವ ಸಂಘಟನಾ ಶಕ್ತಿ ಆಗಿನ್ನೂ ಕೇರಳದ ತಳಸಮುದಾಯಕ್ಕೆ ಇರಲಿಲ್ಲ ಎಂದು ನಾರಾಯಣ ಗುರುಗಳಿಗೆ ತಿಳಿದಿತ್ತು. ಮುಂದೆ ಮೂವತ್ತಾರು ವರ್ಷಗಳ ನಂತರ ದೇವಾಲಯಗಳ ಮುಂಭಾಗದ ರಸ್ತೆಗಳಲ್ಲಿ ನಡೆಯುವ ಹಕ್ಕಿಗಾಗಿ ನಡೆದ ವೈಕಂ ಸತ್ಯಾಗ್ರಹಕ್ಕೆ ಎದುರಾದ ಪ್ರತಿಭಟನೆಯನ್ನು ನೋಡಿದರೆ, ಇದು ಸ್ಪಷ್ಟವಾಗುತ್ತದೆ.
ದೇವಸ್ಥಾನದ ಸ್ಥಾಪನೆಯನ್ನು ಪ್ರಶ್ನಿಸಿದ ಪುರೋಹಿತರಿಗೆ ನಾನು ಸ್ಥಾಪಿಸಿದ್ದು ಈಳವರ ಶಿವ ಎಂಬ ಮಾರ್ಮಿಕ ಉತ್ತರ ಕೊಟ್ಟು ಗುರುಗಳು ಯುದ್ದಕ್ಕೆ ಬಂದ ವರನ್ನು ಶಸ್ತ್ರಪ್ರಯೊಗವಿಲ್ಲದೆಯೇ ನಿಶಸ್ತ್ರಗೊಳಿಸಿದರು. ಅದೇ ರೀತಿ, ಸಹಸ್ರಮಾನಗಳಿಂದ ತಮ್ಮಿಂದ ದೂರವೇ ಉಳಿದಿದ್ದ ದೇವಸ್ಥಾನಗಳಿಗೆ ಪ್ರವೇಶಿಸಲು ಅಡ್ಡಿಯಾಗುವ ಸಾಂಪ್ರದಾಯಿಕ ಮನಸ್ಸಿನ ಹಿಂಜರಿಕೆ ಹಾಗೂ ಭೀತಿಯಿಂದಲೂ ಕೆಳವರ್ಗದ ಜನರನ್ನು ಅವರು ಮುಕ್ತಗೊಳಿಸಿದರು. ದೇವಾಲಯಕ್ಕೆ ಹೋಗುವ ಹಕ್ಕು ನಿಮಗಿಲ್ಲವಾದರೆ, ದೇವಾಲಯವನ್ನೇ ನಿಮ್ಮಲ್ಲಿಗೆ ತರುತ್ತೇನೆ ಎಂದು ಅಸ್ಪೃಶ್ಯರಿಗೆ ಪೂಜೆಯ ಹಕ್ಕನ್ನು ನೀಡುವ ಮೂಲಕ ಅವರಲ್ಲಿ ಸ್ವಾಭಿಮಾನ ಜಾಗೃತಿಗೆ ಕಾರಣರಾದರು.
ದೇವಸ್ಥಾನಗಳ ಸ್ಥಾಪನೆ ಅಂದಿನ ಪುರೋಹಿತಶಾಹಿಗೆ ಅಘಾತಕಾರಿಯಾದ ಹೊಡೆತ, ದೈಹಿಕವಾಗಿ ದೂರವೇ ಉಳಿದಿದ್ದ ಮೂರನೇ ಎರಡರಷ್ಟಿದ್ದ ಕೆಳವರ್ಗದ ಜನರು ಮಾನಸಿಕವಾಗಿ ಕೂಡ ದೂರವೇ ಉಳಿದರೆ, ಹುಂಡಿ ತುಂಬುವುದು ಹೇಗೆ? ಅದರ ಮೂಲಕ ಉದರ ತುಂಬುವುದು ಹೇಗೆ ? ಎಂಬ ಭೀತಿ ಅವರನ್ನಾವರಿಸಿತ್ತು. ನಾರಾಯಣ ಗುರುಗಳ ನಂತರ ಕೇರಳದಲ್ಲಿ ಸವರ್ಣೀಯರ ದೇವಾಲಯಗಳ ಆದಾಯದಲ್ಲಿ ಗಣನಯ ಕುಸಿತ ಕಂಡುಬಂದಿರುವುದು ದಾಖಲೆಯಲ್ಲಿದೆ.
ನಾರಾಯಣ ಗುರುಗಳು ಎಂದೂ ಹಿಂದೂ ಧರ್ಮವನ್ನು ಪುಲೆ, ಪೆರಿಯಾರ್, ಅಂಬೇಡ್ಕರ್ ಅವರಂತೆ ಸಾರಾಸಗಟಾಗಿ ತಿರಸ್ಕರಿಸಲಿಲ್ಲ. ಆ ವಿಚಾರದಲ್ಲಿ ಅವರು ಬಸವಣ್ಣನ ತತ್ವಗಳಿಗೆ ಹತ್ತಿರವಾಗಿದ್ದರು. ಅವರು ತಮ್ಮ ಜೀವನದುದ್ದಕ್ಕೂ ಧಾರ್ಮಿಕ ಪುನರುತ್ಥಾನದ ಬಗ್ಗೆ ಮಾತನಾಡುತ್ತಿದ್ದರು. ಇಲ್ಲಿ ದೇವನೂರು ಮಹಾದೇವ ಅವರ ಮಾತೊಂದು ನೆನಪಿಗೆ ಬರುತ್ತದೆ.
ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನವಾದ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೆ ಕುಯ್ಯುವಂತೆ ಗಾಂಧೀಜಿ ಕಾಣಿಸಿದರೆ, ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವಂತೆ ಕಾಣುತ್ತಾರೆ ಎಂದು ಗಾಂಧೀ ಮತ್ತು ಅಂಬೇಡ್ಕರ್ ಅವರ ಸೈದ್ಧಾಂತಿಕ ಸಂಘರ್ಷವನ್ನು ಪ್ರಸ್ತಾಪಿಸುತ್ತಾ ದೇವನೂರು ಹೇಳುತ್ತಾರೆ.
ಗಾಂಧೀ ಆ ಕೆಲಸ ಮಾಡಿರುವ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ನಾರಾಯಣ ಗುರುಗಳ ಧಾರ್ಮಿಕ ಸುಧಾರಣಾವಾದಿ ಚಳವಳಿ ಮಾತ್ರ ಈ ಕಂಬ ಕುಯ್ಯುವ ಕೆಲಸವನ್ನು ಮಾಡಿದೆ. ಅವರದ್ದು ಸಂಘರ್ಷದ ಹಾದಿಯಾಗಿರಲಿಲ್ಲ. ಅವರ ಹೋರಾಟದ ಎಲ್ಲಾ ಕಾರ್ಯತಂತ್ರಗಳನ್ನು ಅವಲೋಕಿಸುತ್ತಾ ಬಂದರೆ, ಅವರಲ್ಲೊಬ್ಬ ಚತುರ ರಾಜಕಾರಣಿ ಇದ್ದನೆಂಬುದು ಸ್ಪಷ್ಟವಾಗುತ್ತದೆ. ಅವರು ಸಮಾಜ ಸುಧಾರಕನ ಕೆಲಸ ಮಾಡಲಿಕ್ಕೆಂದೇ ಸನ್ಯಾಸಿಯ ಪಾತ್ರವನ್ನು ಧರಿಸಿದರೇನೋ ಎಂಬ ಅನುಮಾನ ಬರುತ್ತದೆ.
ಅವರು ದೇವಸ್ಥಾನ ಪ್ರವೇಶಾವಕಾಶದ ಬಗ್ಗೆ ಎಂದೂ ಗಂಭೀರವಾಗಿ ಪ್ರಯತ್ನ ನಡೆಸಲಿಲ್ಲ. ಅವರು ಸಾವಿನ ಎಂಟು ವರ್ಷಗಳ ನಂತರ ಕೇರಳ ಸರಕಾರ ದೇವಾಲಯ ಪ್ರವೇಶ ಘೋಷಣೆಯನ್ನು ಹೊರಡಿಸಿತ್ತು. ಆಗಲೇ ನಾರಾಯಣ ಗುರುಗಳು ಕೇರಳ, ಮದ್ರಾಸ್ ಮತ್ತು ಮಂಗಳೂರಿನಲ್ಲಿಯೂ ದೇವಸ್ಥಾನಗಳನ್ನು ಸ್ಥಾಪಿಸಿದ್ದರು. ನೂರಾರು ಗುರುಮಂದಿರ ಹಾಗೂ ಆಶ್ರಮಗಳು ಪ್ರಾರಂಭವಾಗಿದ್ದವು.
ದೇವಸ್ಥಾನಗಳ ಬಗೆಗಿನ ಅವರ ಪರಿಕಲ್ಪನೆಯೇ ಕ್ರಾಂತಿಕಾರಿಯಾದುದು. ಅರವಿಪುರಂನಲ್ಲಿ ಲಿಂಗಸ್ಥಾಪನೆ ಮಾಡಿದ ಗುರುಗಳು ತಮ್ಮ ಕೊನೆಯ ಪ್ರತಿಷ್ಠಾಪನೆಯನ್ನು ಕಳವಂ ಕೋಡಂ ನಲ್ಲಿ ಕನ್ನಡಿಯೊಂದನ್ನು ಸ್ಥಾಪಿಸುವ ಮೂಲಕ ನಡೆಸಿದರು. ಅದರ ನಡುವೆ ಒಂದೆಡೆ ‘ಸತ್ಯ, ಧರ್ಮ, ಶಾಂತಿ, ದಯೆ’ ಎಂಬ ಸಂದೇಶವನ್ನು ಸಾರುವ ಫಲಕವನ್ನಷ್ಟೇ ಸ್ಥಾಪಿಸಿದರೆ, ಕರಮಕ್ಕು ಎಂಬಲ್ಲಿ ನಂದಾ ದೀಪವನ್ನಷ್ಟೇ ಹಚ್ಚಿದರು. ಕೊನೆಗಾಲದಲ್ಲಿ ಶಿವಗಿರಿಯಲ್ಲಿ ಅವರು ‘ಅರಿವು’ ಎನ್ನುವ ಅವರ ಚಿಂತನೆಯ ಮೂಲಧಾತುವಿನ ಸಂಕೇತವಾಗಿ ಸರಸ್ವತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ, ಶಂಕರಾಚಾರ್ಯರ ಹುಟ್ಟೂರಿಗೆ ಸಮೀಪದ ಅಲ್ವಾಯಿನ ಅದ್ವೆತಾಶ್ರಮದಲ್ಲಿ ಮೂರ್ತಿಯನ್ನೇ ಸ್ಥಾಪಿಸಲಿಲ್ಲ. ಕೊನೆಗಾಲದಲ್ಲಿ ದೇವಸ್ಥಾನಗಳ ಸ್ಥಾಪನೆ ನಿಲ್ಲಿಸಿ ಎಂದು ಅನುಯಾಯಿಗಳಿಗೆ ಕರೆ ನಡಿದರು. ನಾರಾಯಣ ಗುರುಗಳು ತಮ್ಮ ಚಳವಳಿ ಉದ್ದಕ್ಕೂ ದೇವಾಲಯಗಳನ್ನು ಸಾಮಾಜಿಕ ಪರಿವರ್ತನೆಯ ಸಾಧನವಾಗಿ ಬಳಸುತ್ತಾ ಬಂದುದ್ದನ್ನು ಕಾಣಬಹುದು. ಅದು ಸನಾತನ ಧರ್ಮಾವಲಂಭಿಗಳ ಆಶಯಕ್ಕೆ ತದ್ವಿರುದ್ದವಾದದು. ದೇವಾಲಯಗಳ ಪೂಜೆ-ಹವನ-ಹೋಮಗಳಲ್ಲಿ ಮುಳುಗಿ ವ್ಯಾಪಾರಿ ಕೇಂದ್ರಗಳಾಗುವ ಬದಲಿಗೆ ಅವುಗಳನ್ನು ಸಾಮೂಹಿಕ ಪ್ರಾರ್ಥನಾ ಮಂದಿರವಾಗಿ ಉಳಿಸಬೇಕೆಂದು ಅವರು ಬಯಸಿದ್ದರು. ಈ ದೃಷ್ಟಿಯಿಂದ ಅವರ ದೇವಾಲಯದ ಪರಿಕಲ್ಪನೆ ಮಸೀದಿ, ಚರ್ಚ್ ಗಳಿಗೆ ಹೆಚ್ಚು ಹತ್ತಿರವಾಗಿತ್ತು. ದೇವಸ್ಥಾನಗಳ ಭಕ್ತಿ ಪೀಠವಾಗುವದರ ಜೊತೆಯಲ್ಲಿ ಅಧ್ಯಯನ ಕೇಂದ್ರವಾಗಬೇಕು. ಉದ್ಯಾನ, ವಾಚನಾಲಯಗಳನ್ನೊಳಗೊಂಡು ಅವು ಸ್ವಚ್ಛ ಪರಿಸರದಲ್ಲಿ ನಿರ್ಮಾಣಗೊಳ್ಳಬೇಕು ಎಂದು ಅವರು ಹೇಳುತ್ತಿದ್ದರು. ಅವರು ಸ್ಥಾಪಿಸಿದ ಎಲ್ಲಾ ದೇವಾಲಯಗಳು ಈ ಆಶಯವನ್ನೇ ಬಿಂಬಿಸುತ್ತದೆ.
ನಾರಾಯಣ ಗುರುಗಳದ್ದು ಮುಖಾಮುಖಿ ಹೋರಾಟವಲ್ಲ. ಅವರು ವೈದಿಕ ಶಾಹಿ ಏಕಸ್ವಾಮ್ಯಕ್ಕೆ ನೇರ ಸವಾಲು ಹಾಕಲಿಲ್ಲ. ಅದರ ಬದಲಿಗೆ ವೈದಿಕ ಅಧಿಪತ್ಯದ ಬೇರುಗಳನ್ನೇ ಅಲ್ಲಾಡಿಸಿದರು. ಸಂಸ್ಕೃತವನ್ನು ಸಂಪೂರ್ಣವಾಗಿ ತಿರಸ್ಕರಿಸದೇ ಅದನ್ನು ಅಧ್ಯಯನ ಮಾಡಿ ಶೂದ್ರರೂ ಅದನ್ನು ಕಲಿತು ಅರಗಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟರು. ವೇದಾಧ್ಯಯನಕ್ಕೆ ಜಾತಿ ಅಸ್ಪೃಶ್ಯವಲ್ಲ ಎಂದು ಸಾರಿದ ಗುರುಗಳು ಶಂಕರಾಚಾರ್ಯರ ಅದ್ವೈತ ವೇದಾಂತವನ್ನು ಕಲಿತರು. ಆತ್ಮೋಪದೇಶ ಶತಕಂ ಸೇರಿದಂತೆ ಹಲವಾರು ಸಂಸ್ಕೃತ ಗ್ರಂಥಗಳನ್ನು ಬರೆದರು. ಬ್ರಹ್ಮಸೂತ್ರದ ವಿಶ್ಲೇಷಣೆ ಮಾಡಿದ ಮೊದಲ ಅಸ್ಪೃಶ್ಯ ಅವರು.
ದೇವಸ್ಥಾನಗಳಷ್ಟೇ ಸ್ಥಾಪಿಸದೆ ಅಲ್ಲಿ ಅರ್ಚಕರಾಗಿ ಕೆಳವರ್ಗದ ಜಾತಿ ಜನರನ್ನೇ ನೇಮಿಸಿದರು. ಅವರ ತರಬೇತಿಗಾಗಿ ಶಿವಗಿರಿಯಲ್ಲಿ ಬ್ರಹ್ಮ ಮೀಮಾಂಸ ಶಾಲೆಗಳನ್ನು ತೆರೆದು ಬ್ರಹ್ಮ ವಿದ್ಯೆ ಕಲಿಸಿದರು. ಅವರಿಂದ ಸ್ಥಾಪನೆಗೊಂಡ ಬ್ರಹ್ಮ ವಿದ್ಯಾ ಕೇಂದ್ರದಲ್ಲಿ ಈಳವರಲ್ಲದೆ, ಪುಲಯ, ಪರಯ ಮೊದಲಾದ ಇನ್ನತರ ಕೆಳಜಾತಿಯ ಜನರಲ್ಲದೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರೂ ಆಗಮಶಾಸವನ್ನೊಳಗೊಂಡಂತೆ ವೇದಾಧ್ಯಯನ ಮಾಡಲು ಅವಕಾಶ ಕಲ್ಪಿಸಿದ್ದರು. ದಕ್ಷಿಣ ಕನ್ನಡದಲ್ಲಿ ಈಗಲೂ ಬಿಲ್ಲವರ ಜಾತಿಯ ಮದುವೆಯನ್ನು ಬಿಲ್ಲವ ಅರ್ಚಕರೇ ಮಾಡುತ್ತಿದ್ದಾರೆ. ಅವರೆಲ್ಲರೂ ಮೂಲತಃ ಶಿವಗಿರಿಯಲ್ಲಿ ತರಬೇತಿ ಪಡೆದವರು. ಆದರೆ, ಈಗ ಅವರಲ್ಲಿಯೂ ಬೆಳೆಯುತ್ತಿರುವ ನವಬ್ರಾಹ್ಮಣರಿಗೆ ಬಿಲ್ಲವ ಅರ್ಚಕರು ಪಥ್ಯವಾಗುವುದಿಲ್ಲ ಎಂಬುದು ಬೇರೆ ಮಾತು.
ಅರವೀಪುರಂನಲ್ಲಿ ದೇವಾಲಯ ಸ್ಥಾಪನೆ ನಂತರ 1961 ರಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗ ಸ್ಥಾಪನೆಯಾಗುವ ವರೆಗೆ ಕೇರಳ ರಾಜ್ಯ ಮಾತ್ರವಲ್ಲ ತಮಿಳುನಾಡು ಮತ್ತು ಮಂಗಳೂರಿಗೂ ಭೇಟಿ ನೀಡಿ ದೇವಾಲಯಗಳನ್ನು ಸ್ಥಾಪಿಸಿದರು. ಕೆಳವರ್ಗದ ಜನರಲ್ಲಿದ್ದ ಮೂಡನಂಬಿಕೆ ಮತ್ತು ದುಂದುವೆಚ್ಚದ ಅಂಧ ಸಂಪ್ರದಾಯಗಳನ್ನು ಕಿತ್ತೊಗೆಯಲು ಹೋರಾಟ ನಡೆಸಿದರು. ವಿವಾಹಗಳನ್ನು ಸರಳಗೊಳಿಸಿದರು. ವಿವಾಹಕ್ಕೆ ಮಾಡುವ ದುಂದು ವೆಚ್ಚಗಳನ್ನು ವೃದ್ಧಾಪ್ಯದ ದಿನಗಳಿಗಾಗಿ ಉಳಿತಾಯ ಮಾಡುವಂತೆ ಸಲಹೆ ನಡಿದರು. ಸಹಭೋಜನಕ್ಕೆ ಪ್ರೋತ್ಸಾಹ ನೀಡಿದರು. ಮದ್ಯವನ್ನು ಮಾಡಬೇಡಿ, ಮಾರಬೇಡಿ ಮತ್ತು ಕುಡಿಯಬೇಡಿ ಎಂದು ಹೇಳುವ ಮೂಲಕ ಮದ್ಯಪಾನದ ವಿರುದ್ಧ ವ್ಯಾಪಕ ಚಳವಳಿಯನ್ನೇ ನಡೆಸಿದರು. ಇದರಿಂದ ಸಾಂಪ್ರದಾಯಿಕವಾಗಿ ಸೇಂದಿ ತೆಗೆಯುವ ವೃತ್ತಿಯನ್ನು ಮಾಡುತ್ತಿದ್ದ ಈಳವರು ಆ ವೃತ್ತಿಯನ್ನು ತ್ಯಜಿಸಿ, ಬೇರೆ ವೃತ್ತಿ ಕೈಗೆತ್ತಿಕೊಳ್ಳುವಂತಾಯಿತು.
ಈ ಎಲ್ಲಾ ಸುಧಾರಣೆಗಳನ್ನು ಅವರು ಮೊದಲು ತಮ್ಮ ಶ್ರೀಮಂತ ಅನುಯಾಯಿಗಳ ಮನೆಯಲ್ಲಿಯೇ ಮಾಡಿದರು. ತಾಳಿಕೆಟ್ಟು, ತಿರುಂಡಕಳಿ ಮೊದಲಾದ ಸಂಪ್ರದಾಯಗಳನ್ನು ಆಚರಿಸುವ ಆಡಂಬರದ ಮದುವೆಗಳನ್ನು ಮಾಡುವ ಶ್ರೀಮಂತ ಅನುಯಾಯಿಗಳ ಮನೆಗಳನ್ನೇ ಬಹಿಷ್ಕರಿಸಿದರು.
1916ರಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗ ಸ್ಥಾಪನೆಯ ಮೂಲಕ ನಾರಾಯಣ ಗುರು ಚಳವಳಿ ಸಂಘರ್ಷದ ಹಾದಿಗೆ ಇಳಿಯಿತು. ಆಗ ಅವರಿಗೆ ಜೊತೆಯಾದವರು ಡಾ.ಪಲ್ಪು, ಪಲ್ಪು ಮತ್ತು ಅವರಣ್ಣ ವೇಲು ಇಬ್ಬರೂ ಕೇರಳದ ಜಾತಿ ವ್ಯವಸ್ಥೆಗೆ ಬಲಿಯಾಗಿ ಹುಟ್ಟೂರಿನಲ್ಲಿ ಶಿಕ್ಷಣ ಮತ್ತು ಉದ್ಯೋಗ ಎರಡೂ ಸಿಗದೆ, ಊರು ಬಿಟ್ಟು ಹೋದವರು.
ವೇಲು ಈಳವ ಜನಾಂಗದ ಮೊದಲ ಪದವೀ ಧರ. ಆತ ಮದ್ರಾಸ್ ನಲ್ಲಿಯೇ ಕಲಿತು, ಅಲ್ಲಿಯೇ ಸರ್ಕಾರಿ ನೌಕರಿ ಸೇರಿದರೆ, ಪಲ್ಪು ಮದ್ರಾಸ್ ನಲ್ಲಿ ಓದಿ ಮೈಸೂರಿನಲ್ಲಿ ಸರ್ಕಾರಿ ವೈದ್ಯರಾಗುತ್ತಾರೆ. ಈಳವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ಕೋರುವ ಮೊದಲ ಮನವಿಯನ್ನು ತಿರುವಾಂಕೂರಿನ ದಿವಾನರಿಗೆ ಅರ್ಪಿಸು ಮೂಲಕ ಡಾ.ಪಲ್ಪು ತನ್ನ ಹೋರಾಟ ಆರಂಭಿಸುತ್ತಾರೆ. ತಿರುವಾಂಕೂರಿನ ದಿವಾನರು, ಭಾರತದ ಆಗಿನ ವೈಸ್ ರಾಯ್, ಬ್ರಿಟಿಷ್ ಪಾರ್ಲಿಮೆಂಟ್, ಕಾಂಗ್ರೆಸ್ ಪಕ್ಷ ಹಾಗೂ ಇಂಗ್ಲೀಷ್ ದಿನಪತ್ರಿಕೆಗಳಿಗೆ ಈಳವರ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಅವರು ಸತತ ಪ್ರಯತ್ನ ನಡೆಸುತ್ತಾರೆ.
ಅದಕ್ಕೆ ನಿರೀಕ್ಷಿತ ಫಲ ಸಿಗದಾಗ, ಬೆಂಗಳೂರಿನಲ್ಲಿ ಡಾ.ಪಲ್ಪು ಸ್ವಾಮಿ ವಿವೇಕಾನಂದರನ್ನು ಭೇಟಿಯಾಗುತ್ತಾರೆ. ಕೇರಳದ ಪರಿಸ್ಥಿತಿಯ ಸಂಪೂರ್ಣ ಅರಿವಿದ್ದ ವಿವೇಕಾನಂದರು "ಆಧ್ಯಾತ್ಮಿಕ ನಾಯಕರೊಬ್ಬರ ನೇತೃತ್ವದಲ್ಲಿ ಸಾಮಾಜಿಕ ಚಳವಳಿಯನ್ನು ಹುಟ್ಟುಹಾಕಿದರೆ, ಮಾತ್ರ ಕೇರಳದಲ್ಲಿ ಪರಿವರ್ತನೆ ಸಾಧ್ಯ" ಎನ್ನುತ್ತಾರೆ. ಅಲ್ಲಿಂದ ಕೇರಳಕ್ಕೆ ಹಿಂದಿರುಗಿದ ಡಾ.ಪಲ್ಪು ನಾರಾಯಣ ಗುರುಗಳನ್ನು ಭೇಟಿ ಮಾಡುತ್ತಾರೆ. ಈ ಭೇಟಿಗೆ ಐತಿಹಾಸಿಕ ಮಹತ್ವವಿದೆ.
ಇಬ್ಬರ ಮಿಲನದಿಂದಲೇ ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಯೋಗಂ ಸ್ಥಾಪನೆಯಾಗುತ್ತದೆ. ಈಳವರಲ್ಲಿ ಧಾರ್ಮಿಕ ಮತ್ತು ಜಾತ್ಯತೀತ ಶಿಕ್ಷಣ ಹಾಗೂ ಉದ್ಯಮಶೀಲ ಮನೋಭಾವನೆಯನ್ನು ಬೆಳೆಸುವುದು ಇದರ ಉದ್ದೇಶವಾಗಿತ್ತು.
ಈ ಹಂತದಲ್ಲಿ ಕುಮಾರ ಆಶಾನ್ ಇವರಿಬ್ಬರ ಜೊತೆಯಾಗುತ್ತಾರೆ. ಮೂಲತಃ ಕವಿ ಮತ್ತು ಲೇಖಕನಾದ ಆಶಾನ್ ತನ್ನ ಕಾವ್ಯ, ಬರಹ, ಭಾಷಣಗಳ ಮೂಲಕ ಚಳವಳಿಗೆ ಜೀವ ತುಂಬಿದವರು. ಅವರ ಸಂಪಾದಕತ್ವದ ವಿವೇಕೋದಯಂ ಪತ್ರಿಕೆ ಚಳವಳಿಯ ಮುಖವಾಣಿಯಾಗಿತ್ತು.
ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿನ ಅನ್ಯಾಯದ ವಿರುದ್ಧದ ಹೋರಾಟದ ಕಣಕ್ಕಿಳಿದ ಈಳವರು, ಆಗಲೇ ಸಾಕಷ್ಟು ಜಾಗೃತರಾಗಿದ್ದರು. ತಮ್ಮದೇ ದೇವಾಲಯಗಳು ಅವರ ಸಂಘಟನೆಗೆ ಶಕ್ತಿ ತುಂಬಿದ್ದವು. ಎಸ್ಎನ್ ಡಿಪಿ ಕೈಗಾರಿಕಾ ಸಮ್ಮೇಳನ ಮತ್ತು ಮಹಿಳಾ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿತ್ತು. ಹಲವಾರು ಯುವಕರು ಮದ್ರಾಸ್ ಬೆಂಗಳೂರಿಗೆ ಹೋಗಿ ಇಂಗ್ಲೀಷ್ ಮತ್ತು ಆಯುರ್ವೇದ ವ್ಯಾಸಂಗ ಮಾಡಿ ಬಂದಿದ್ದರು.
ನಾರಾಯಣ ಗುರುಗಳ ದೂರದರ್ಶಿತ್ವ ಮತ್ತು ಕಾರ್ಯತಂತ್ರ ಅರಿವಾಗುವುದು ಇಲ್ಲಿ. ದೇವಸ್ಥಾನ ಪ್ರವೇಶಕ್ಕೆ ಅವರು ಹೋರಾಟ ನಡೆಸಲಿಲ್ಲ. ಬದಲಿಗೆ ಅವರೇ ದೇವಸ್ಥಾನಗಳನ್ನು ಸ್ಥಾಪಿಸಿದರು. ಆದರೆ ಅದೇ ರೀತಿ ಅವರು ಸ್ವತಂತ್ರವಾಗಿ ಶಾಲೆಗಳನ್ನು ಸ್ಥಾಪಿಸಲು ಸಾಧ್ಯ ಇರಲಿಲ್ಲ, ಶಾಲೆಗಳ ಸ್ಥಾಪನೆಗೆ ಸರ್ಕಾರದ ಅನುಮತಿ ಬೇಕಿತ್ತು. ಅದಕ್ಕಾಗಿ ಸರ್ಕಾರಿ ಶಾಲೆಗಳ ಪ್ರವೇಶದ ಹಕ್ಕಿನ ಹೋರಾಟಕ್ಕೆ ಅವರು ಚಾಲನೆ ನೀಡಿದರು.
ಶಾಲೆಗಳ ಪ್ರವೇಶಕ್ಕಾಗಿ ಎಸ್ಎನ್ ಡಿಪಿ ಹೋರಾಟ ಪ್ರಾರಂಭಿಸಿದರೂ ಅದು ಅಷ್ಟೊಂದು ಸರಳವಾಗಿರಲಿಲ್ಲ. ಈಳವರಲ್ಲಿ ಬೆಳೆಯುತ್ತಿರುವ ಜಾಗೃತಿ ನಂಬೂದಿರಿ ಮತ್ತು ನಾಯಕ್ ಜನಾಂಗದಲ್ಲಿ ದ್ವೇಷದ ಕಿಚ್ಚು ಹತ್ತಿಸಿತ್ತು. ದೇವಸ್ಥಾನ ಸ್ಥಾಪನೆಯ ಕಾಲದಲ್ಲಿ ಎದುರಾಗದ ವಿರೋಧ ಶಾಲೆಗಳ ಪ್ರವೇಶದ ಹಕ್ಕಿನ ಚಳುವಳಿಗೆ ಎದುರಾಗಿತ್ತು. ಎಸ್ಎನ್ ಡಿಪಿ ಚಳವಳಿಯಲ್ಲಿ ಈ ಕಾಲ ನಿರ್ಣಾಯಕವಾದದ್ದು. ಆಗ ಎಲ್ಲೆಡೆ ನಾಯರ್-ಈಳವರ ಸಂಘರ್ಷ ನಡೆಯುತ್ತದೆ. ಈಳವ ಮಹಿಳೆಯರ ಮೇಲೆ ಬಹಿರಂಗವಾಗಿ ದೌರ್ಜನ್ಯವೆಸಗಲಾಗುತ್ತದೆ. ಎಸ್ಎನ್ ಡಿಪಿಯನ್ನು ಬೆಂಬಲಿಸುವ ಪತ್ರಿಕೆಗಳ ಕಚೇರಿಯನ್ನು ಸುಟ್ಟು ಹಾಕಲಾಗುತ್ತದೆ.
ಚಳವಳಿಯ ಒತ್ತಡಕ್ಕೆ ಮಣಿದ ತಿರುವಾಂಕೂರು ದಿವಾನರು ಈಳವರಿಗೆ ಅವರದ್ಧೆ ಶಾಲೆಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತಾರೆ. ಸರಕಾರಿ ಶಾಲೆಗಳಲ್ಲಿ ಎಲ್ಲಾ ಜಾತಿ ಜನರಿಗೆ ಮುಕ್ತ ಪ್ರವೇಶ ನೀಡುವ ಮಸೂದೆ ಜಾರಿಗೆ ಬರುತ್ತದೆ. ನಾರಾಯಣ ಗುರು ಚಳವಳಿಯಲ್ಲಿ ದೇವಸ್ಥಾನ ಸ್ಥಾಪನೆಗಿಂತಲೂ ಮುಖ್ಯವಾದ ಘಟನೆ ಇದು. ಇದು ಮುಖ್ಯವಾಗಿ ಕುಮಾರನ್ ಆಶಾನ್ ಮತ್ತು ಡಾ.ಪಲ್ಪು ಅವರ ನಾಯಕತ್ವದ ಜಯ. ಆದರೆ, ಶೂದ್ರರು ಸರ್ಕಾರಿ ಸೇವೆಗೆ ಸೇರುವ ಅವಕಾಶವನ್ನು ಕೊನೆಗೂ ತಮ್ಮ ಜೀವಮಾನದಲ್ಲಿ ನಾರಾಯಣ ಗುರುಗಳಿಗೆ ಕಾಣಲಾಗುವುದಿಲ್ಲ. 1936ರಲ್ಲಿ ಸರ್ಕಾರ ಲೋಕಸೇವಾ ಆಯೋಗವನ್ನು ಸ್ಥಾಪಿಸಿ, ಉನ್ನತ ಹುದ್ದೆಗಳನ್ನು ಹೊರತುಪಡಿಸಿ, ಹಿಂದುಳಿದವರಿಗೆ ಶೇ.40ರಷ್ಟು ಮೀಸಲಾತಿಯನ್ನು ನೀಡುತ್ತದೆ. ಅಷ್ಟರಲ್ಲಿ ಗುರುಗಳು ಇಹಲೋಕವನ್ನು ತ್ಯಜಿಸಿದ್ದರು.
ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರದಲ್ಲಿನ ಮೀಸಲಾತಿ ಈಳವ ಜನಾಂಗದಲ್ಲಿ ಎರಡೂ ವರ್ಗಗಳ ಬುದ್ಧಿಜೀವಿಗಳ ಸೃಷ್ಟಿಗೆ ಕಾರಣವಾಯಿತು. ಸಾಹಿತಿಗಳು, ಪತ್ರಕರ್ತರು, ಶಿಕ್ಷಕರು ಮತ್ತು ಧಾರ್ಮಿಕ ನಾಯಕರದ್ದು ಒಂದು ಗುಂಪಾದರೆ, ವೈದ್ಯರು, ವಕೀಲರು, ಉದ್ಯಮಿಗಳು, ಆಡಳಿತಾಧಿಕಾರಿಗಳು ಮತ್ತು ರಾಜಕಾರಣಿಗಳು ಇನ್ನೊಂದು ಗುಂಪಿನಲ್ಲಿದ್ದರು. ಕೇರಳದಲ್ಲಿ ಶಿಕ್ಷಣದ ಪ್ರಸಾರದಲ್ಲಿ ಆರ್.ಶಂಕರ್ ಅವರದ್ದು ನಿರ್ಣಾಯಕ ಪಾತ್ರ. ಇವರು ಸ್ಥಾಪಿಸಿದ್ದ "ಶ್ರೀ ನಾರಾಯಣ ಟ್ರಸ್ಟ್" 1952ರಲ್ಲಿಯೇ ನೂರಾರು ಶಾಲೆ, ಪಾಲಿಟೆಕ್ನಿಕ್, ಶಿಕ್ಷಕ ತರಬೇತಿ ಸಂಸ್ಥೆ ಮತ್ತು ಆಸ್ಪತ್ರೆಗಳನ್ನು ಹೊಂದಿದ್ದವು.
ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದಲ್ಲಿ ಈಳವರು ಅಭಿವೃದ್ಧಿ ಹೊಂದಿದ್ದರು. ಎಸ್ಎನ್ ಡಿಪಿಯ ಮೊದಲ ಅಧಿವೇಶನದ ಕಾಲದಲ್ಲಿಯೇ ನಾರಾಯಣ ಗುರುಗಳು ಕೈಗಾರಿಕಾ ಸಮ್ಮೇಳನವನ್ನು ನಡೆಸಿದ್ದರು. ಆನಂತರ ಅದು ವಾರ್ಷಿಕ ಕಾರ್ಯಕ್ರಮವಾಯಿತು. ತೆಂಗಿನನಾರು ಉದ್ದಿಮೆ ಜನಪ್ರಿಯವಾಗತೊಡಗಿದ್ದು ಅದೇ ಕಾಲದಲ್ಲಿ. ಪ್ರತಿ ದೇವಾಲಯ, ಆಶ್ರಮ ಮತ್ತು ಮಂದಿರಗಳಲ್ಲಿ ತೆಂಗು ನಾರಿನ ಉದ್ದಿಮೆಯ ಘಟಕಗಳನ್ನು ಸ್ಥಾಪಿಸುವಂತೆ ಅವರು ಪ್ರೇರೆಪಿಸಿದ್ದರು. ಈಗ ತೆಂಗುನಾರಿನ ಉದ್ದಿಮೆಯಲ್ಲಿ ಕೇರಳ ದೇಶದಲ್ಲಿಯೇ ಏಕಸ್ವಾಮ್ಯವನ್ನು ಪಡೆದಿದೆ.
ಈ ಹಂತದಲ್ಲಿ ಎಸ್ಎನ್ ಡಿಪಿ ಮುಂದಿನ ಹೋರಾಟವನ್ನು ರಾಜಕೀಯ ಪ್ರಾತಿನಿದ್ಯಕ್ಕಾಗಿ ಕೇಂದ್ರಿಕರಿಸುತ್ತದೆ. ಈ ಹೋರಾಟದಲ್ಲಿ ಅವರಿಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಾಂಗಗಳು ಜೊತೆಯಾಗುತ್ತವೆ. ಈ ಮೂರು ಜನಾಂಗಗಳ ಒಟ್ಟು ಜನಸಂಖ್ಯೆ ತಿರುವಾಂಕೂರು ಸಂಸ್ಥಾನದ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟಿತ್ತು. ತಿರುವಾಂಕೂರು ಸಂಸ್ಥಾನದಲ್ಲಿ 1888ರಲ್ಲಿಯೇ ವಿಧಾನಸಭೆ ರಚನೆಯಾಗಿ ಚುನಾವಣೆಗಳು ನಡೆಯುತ್ತಾ ಬಂದಿದ್ದರೂ, 1935ರವರೆಗೆ ನಡೆದ 15 ಚುನಾವಣೆಗಳಲ್ಲಿ ಶೇ.26ರಷ್ಟಿದ್ದ ಈಳವರಲ್ಲಿ ಒಬ್ಬರೂ ಕೂಡ ಆಯ್ಕೆಯಾಗಿರಲಿಲ್ಲ. ಶೇ.22ರಷ್ಟಿದ್ದ ಕ್ರಿಶ್ಚಿಯನ್ ಮತ್ತು ಶೇ.18ರಷ್ಟಿದ್ದ ಮುಸ್ಲಿಮರ ಪ್ರಾತಿನಿಧ್ಯ ಮೂರು-ನಾಲ್ಕರ ಗಡಿ ದಾಟಿರಲಿಲ್ಲ.
ಐದು ರೂಪಾಯಿ ತೆರಿಗೆ ನೀಡುವವರು ಮಾತ್ರ ಮತದಾನದ ಹಕ್ಕು ಪಡೆದಿರುವುದು ಈ ಅನ್ಯಾಯಕ್ಕೆ ಕಾರಣವಾಗಿತ್ತು. ಆ ಕಾಲದ ಭೂಒಡೆತನ ಬಹುಪಾಲು ನಾಯರ್ ಮತ್ತು ನಂಬೂದಿರಿಗಳ ಕೈಯಲ್ಲಿದ್ದ ಕಾರಣ ಉಳಿದ ಜನಾಂಗ ಮತದಾನದ ಹಕ್ಕನ್ನು ಪಡೆಯುವುದು ಅಸಾಧ್ಯವಾಗಿತ್ತು. ಇದನ್ನು ಪ್ರತಿಭಟಿಸಲೆಂದೇ ಮೂರು ಜನಾಂಗಗಳು ಕೂಡಿ "ಸಂಯುಕ್ತ ರಾಜಕೀಯ ಸಂಘಟನೆ"ಯನ್ನು ರಚಿಸಿಕೊಂಡು 1935ರ ಚುನಾವಣೆಯನ್ನು ಬಹಿಷ್ಕರಿಸಿದವು. ಈ ಹೋರಾಟದ ಕಾವಿಗೆ ಮಣಿದ ತಿರುವಾಂಕೂರು ಸಂಸ್ಥಾನ ಜಾತಿ ಪ್ರಮಾಣಕ್ಕೆ ಅನುಗುಣವಾಗಿ ರಾಜಕೀಯ ಮೀಸಲಾತಿ ಘೋಷಿಸಿತು. ಆದರೆ, ಈ ರಾಜಕೀಯ ಚಳವಳಿ ಮುಂದಿನ ದಿನಗಳಲ್ಲಿ ಕೇರಳದ ರಾಜಕೀಯ ಸ್ಥಿತ್ಯಂತರಗಳಿಗೆ ಕಾರಣವಾದಂತೆಯೇ ಎಸ್ಎನ್ ಡಿಪಿ ಸಂಘಟನೆಯಲ್ಲಿ ಬಿರುಕು ಮೂಡಲು ಕೂಡ ಕಾರಣವಾಗಿದ್ದು ಮಾತ್ರ ದುರಂತ.
1936ರಲ್ಲಿ ಎಸ್ಎನ್ಡಿಪಿ ಸಂಘಟನಾ ಜಾಲ ವ್ಯಾಪಕವಾಗಿ ಹರಡಿತ್ತು. ಅದರ ಹತ್ತು ಯೂನಿ ಯನ್ ಗಳು, 245 ಶಾಖೆಗಳು ಸ್ಥಾಪನೆಯಾಗಿದ್ದವು. 50,000ಕ್ಕೂ ಹೆಚ್ಚಿನವರು ಅದರ ಸಕ್ರಿಯ ಸದಸ್ಯರಾಗಿದ್ದರು. ಎಸ್ಎನ್ ಡಿಪಿಯ ಮುಖ್ಯ ಉದ್ದೇಶ ಗಳು ಈಡೇರಿದ್ದವು. ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿಯೊಂದರ ಸಂಘಟನೆಯ ಮೇಲೆ ರಾಜಕೀಯ ನಾಯಕರ ಕಣ್ಣು ಬಿದ್ದಿತ್ತು. ಸಂಘಟನೆಯಲ್ಲಿದ್ದ ಅನೇಕರಲ್ಲಿ ರಾಜಕೀಯ ಆಕಾಂಕ್ಷೆಗಳು ಹುಟ್ಟಿಕೊಂಡಿದ್ದವು.
ನಾರಾಯಣ ಗುರುಗಳ ಸಾವಿನ ನಂತರ ಪರಸ್ಪರ ಭಿನ್ನ ವಿಚಾರಧಾರೆಯನ್ನು ಹೊಂದಿದ್ದ ನಾಯಕರು ಎಸ್ಎನ್ ಡಿಪಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನ ಪಟ್ಟರು. ಮೊದಲನೆಯದಾಗಿ ಮೇಲ್ಜಾತಿ ಜನರ ವೈರಿ ಎಂದು ಬಗೆಯಲಾದ ಬ್ರಿಟಿಷರನ್ನು ಸ್ನೇಹಿತರೆಂದು ತಿಳಿದುಕೊಂಡಿದ್ದ ಮಿತವಾದಿ ಕೃಷ್ಣನ್, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕವೇ ಈಳವರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕೆಂದು ಹೇಳುತ್ತಿದ್ದ ಕಾಂಗ್ರೆಸ್ ಒಲವಿನ ಟಿ.ಕೆ ಮಾಧವನ್ ಮತ್ತು ಸಿ.ಕೇಶವನ್, ಸಮಾಜವಾದಿ ಮತ್ತು ಪುರೋಗಾಮಿ ವಿಚಾರಧಾರೆಯ ಸಹೋದರ ಅಯ್ಯಪ್ಪನ್ ಅವರ ಸಮಾಜವಾದಿ-ಪುರೋಗಾಮಿ ವಿಚಾರಧಾರೆಗಳನ್ನು ಮೇಳೈಸಲು ಯತ್ನಿಸುತ್ತಿದ್ದ ಇನ್ನೊಂದು ಗುಂಪು ಇದರಲ್ಲಿ ಪ್ರಮುಖವಾದವುಗಳು. ಈ ಕೊನೆಯ ಗುಂಪನ್ನೇ ಕಮ್ಯೂನಿಸ್ಟ್ ರೆಂದು ಕರೆಯಲಾಗುತ್ತಿತ್ತು.
ಕೇರಳದ ಕಮ್ಯೂನಿಸ್ಟ್ ಪಕ್ಷವನ್ನು ನಾರಾಯಣ ಗುರು ಚಳವಳಿಯ ಮುಂದುವರೆದ ಭಾಗವೆಂದು ಹೇಳಲು ಇತಿಹಾಸವೇ ಪುರಾವೆ. ಅಧಿಕೃತವಾಗಿ ನಾರಾಯಣ ಗುರು ಚಳವಳಿಗೆ ಎಸ್ಎನ್ ಡಿಪಿಯೇ ಉತ್ತರಾಧಿಕಾರವನ್ನು ಪಡೆದಿದ್ದರೂ ಅದು ಕಮ್ಯೂನಿಸ್ಟ್ ಚಳವಳಿಗೆ ನಾಂದಿಯಾಗಿದ್ದನ್ನು ಇತಿಹಾಸ ಹೇಳುತ್ತದೆ. ಈ ಬೆಳವಣಿಗೆಗೆ ಮುಖ್ಯವಾಗಿ ಕಾರಣಕರ್ತರಾದವರು ಸಹೋದರ ಅಯ್ಯಪ್ಪನ್.
ಪ್ರಗತಿಪರ ಚಿಂತನೆಯ, ನೇರನಡೆನುಡಿಯ ಅಯ್ಯಪ್ಪನ್ ಹುಟ್ಟಿನಿಂದಲೇ ಹೋರಾಟಗಾರ ಮತ್ತು ಅಪ್ರತಿಮ ಧೈರ್ಯಶಾಲಿ. ಜಾತಿ ಶ್ರೇಣಿಯಲ್ಲಿ ಈಳವರಿಗಿಂತ ಕೆಳಗಿದ್ದ ಪುಲಯರ ಜೊತೆ ತಮ್ಮೂರಿನಲ್ಲಿ ಸಹಭೋಜನ ಮಾಡಿಸಿ ಜಾತಿಯಿಂದ ಬಹಿಷ್ಕೃತನಾದ ಅಯ್ಯಪ್ಪನ್ ಜಾತಿ ನಿರ್ಮೂಲನೆಯ ಪ್ರಬಲ ಪ್ರತಿಪಾದಕ. ಅಯ್ಯಪ್ಪನ್ ಅವರನ್ನು ಗುರುತಿಸಿದ ಗುರುಗಳು ಅವರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡುವ ಉದ್ಧೇಶ ಹೊಂದಿದ್ದರಂತೆ. ಮೂಲತಃ ನಾಸ್ತಿಕನಾದ ಅಯ್ಯಪ್ಪನ್ "ಸ್ವತಂತ್ರ ಸಮುದಾಯ ಪ್ರತಿಷ್ಠಾನ"ವನ್ನು ಸ್ಥಾಪಿಸಿ ಸಹೋದರ ಎನ್ನುವ ಪತ್ರಿಕೆ ಪ್ರಾರಂಭಿಸಿ ಜಾತಿ ವಿನಾಶ ಚಳವಳಿಯನ್ನು ನಡೆಸುತ್ತಿದ್ದರು. ಅವರನ್ನು ‘ಪುಲಯರ ಅಯ್ಯಪ್ಪನ್’ ಎಂದು ಜನ ಗೇಲಿ ಮಾಡುತ್ತಿದ್ದರಂತೆ.
1937ರಲ್ಲಿ ಕೇರಳದಲ್ಲಿ ಕಮ್ಯೂನಿಸ್ಟ್ ಪಕ್ಷ ಪಿ.ಕೃಷ್ಣಪಿಳ್ಳೆ ಮತ್ತು ಇ.ಎಂ.ಎಸ್ ನಂಬೂದಿರಿ ಪಾಡ್ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಅಯ್ಯಪ್ಪನ್, ದಾಮೋದರನ್, ಸುಕುಮಾರನ್ ಮೊದಲಾದ ನಾರಾಯಣ ಗುರು ಅನುಯಾಯಿಗಳು ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸುತ್ತಿದ್ದರೆ ಆ ಕಾಲದ, ಎಸ್.ಎನ್.ಡಿ.ಪಿ ಯ ನಾಯಕರಾದ ಸಿ.ಕೇಶವನ್, ಟಿ.ಕೆ ಮಾಧವನ್ ಮತ್ತು ಆರ್.ಶಂಕರ್ ಕಾಂಗ್ರೆಸ್ ಒಲವುಳ್ಳವರಾಗಿದ್ದರು. ವಿಪರ್ಯಾಸವೆಂದರೆ ಎಸ್.ಎನ್.ಡಿ.ಪಿ ಚಳವಳಿಯಿಂದ ಜಾಗೃತರಾದ ಕೆಳವರ್ಗದ ಜನಸಮೂಹ ಎಡಪಕ್ಷಗಳ ಕಡೆ ಆಕರ್ಷಿತರಾಗಿದ್ದರು. ಅವರಲ್ಲಿ ಭೂ ಹೀನ ಕಾರ್ಮಿಕರು ಗೇಣಿದಾರರು ಸೇಂದಿ ತೆಗೆಯುವವರು, ಪ್ಲಾಂಟೇಷನ್ ಕಾರ್ಮಿಕರು, ಗೇರುಬೀಜ ಕಾರ್ಖಾನೆಯ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆ ವರ್ಗಗಳಲ್ಲಿ ಸಕ್ರಿಯವಾಗಿದ್ದ ಕಾರ್ಮಿಕರ ಸಂಘಟನೆಗಳು ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸಿದವು.
ಆದರೆ, ಕಮ್ಯೂನಿಸ್ಟ್ ಪಕ್ಷದಲ್ಲಿ ನಾಯಕತ್ವ ಮಾತ್ರ ಈಳವ, ಪುಲಯ, ಪರವರ ಕೈಗೆ ಬರಲಿಲ್ಲ. ಅದು ನಂಬೂದಿರಿ ನಾಯರ್ ಕೈಯಲ್ಲಿ ಭದ್ರವಾಗಿಯೇ ಉಳಿದುಬಿಟ್ಟಿತ್ತು. ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಪಡೆದಿದ್ದ ಹಿರಿಯ ನಾಯಕಿ ಕೆ.ಆರ್ ಗೌರಿಯವರನ್ನು ವ್ಯವಸ್ಥಿತ ಸಂಚಿನಿಂದ ಪಕ್ಷದಿಂದ ಹೊರಹಾಕಲಾಯಿತು.
ಕಾಂಗ್ರೆಸ್ ಪಕ್ಷವು ಈಳವರಿಗೆ ರಾಜಕೀಯ ಅಧಿಕಾರವನ್ನು ನೀಡಿತು. 1951ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗ ಈಳವರ ನಾಯಕ ಸಿ.ಕೇಶವನ್ ಮುಖ್ಯಮಂತ್ರಿಯಾದರು. 1962ರಲ್ಲಿ ಮತ್ತೊಬ್ಬ ಈಳವ ಆರ್. ಶಂಕರ್ ಮುಖ್ಯಮಂತ್ರಿಯಾದರು. 1971ರಲ್ಲಿ ಅಲ್ಲಿನ ವಿಧಾನಸಭೆಯಲ್ಲಿ 28 ಈಳವ ಶಾಸಕರಿದ್ದರು. ಇಂದು ಕೂಡಾ ಕೇರಳದಲ್ಲಿ ಎಸ್.ಎನ್.ಡಿ.ಪಿ ಮತ್ತು ನಾರಾಯಣ ಗುರುಗಳು ಸ್ಥಾಪಿಸಿದ್ದ ದೇವಾಲಯಗಳು ಹಾಗೂ ಸನ್ಯಾಸಿ ಸಂಘದ ಮೇಲೆ ನಿಯಂತ್ರಣ ಸ್ಥಾಪಿಸಲು ಕಾಂಗ್ರೆಸ್ ಮತ್ತು ಎಡಪಕ್ಷಗಳ ನಡುವೆ ಸಂಘರ್ಷ ನಡೆಯುತ್ತಿದೆ. ಎಸ್.ಎನ್.ಡಿ.ಪಿ, ಶ್ರೀ ನಾರಾಯಣ ಟ್ರಸ್ಟ್ ಮತ್ತು ಸನ್ಯಾಸಿ ಸಂಘ ಇಂದು ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದೆ.
ಕೆಲವು ವರ್ಷಗಳ ಹಿಂದೆ ಸನ್ಯಾಸಿ ಸಂಘದ ಮುಖ್ಯಸ್ಥರಾದ ಸ್ವಾಮಿಗಳು ಅಧಿಕಾರ ಬಿಟ್ಟುಕೊಡದಾಗ ಎ.ಕೆ ಆ್ಯಂಟನಿ ಸರ್ಕಾರ ಅಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಿತು. ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿದ ಸ್ವಾಮಿಗಳು ಮುಸ್ಲಿಂ ಉಗ್ರಗಾಮಿಗಳ ನೆರವು ಪಡೆದು ಮಠದೊಳಗೆ ಬಂದೂಕು-ಬಾಂಬುಗಳನ್ನು ಶೇಖರಿಸಿಟ್ಟು ಪ್ರತಿರೋಧ ವ್ಯಕ್ತಪಡಿಸಿದರು. ನಾರಾಯಣ ಗುರು ಚಳವಳಿ ಅವರ ಮರಣಾ ನಂತರದ 60 ವರ್ಷಗಳಲ್ಲಿ ತಲುಪಿರುವ ದುರಂತ ಸ್ಥಿತಿ ಇದು.
ಮೇಲ್ಜಾತಿ ಜನರೂ ಸೇರಿದಂತೆ, ಎಲ್ಲ ವರ್ಗಗಳೊಳಗಿನಿಂದಲೂ ಸುಧಾರಣೆಯ ಧ್ವನಿ ಏಳುವಂತೆ ಮಾಡಿದ್ದು ನಾರಾಯಣಗುರು ಚಳವಳಿಯ ಇನ್ನೊಂದು ಸಾಧನೆ. ನಾಯರ್ ಸೇವಾ ಸಂಘ, ಪುಲಯ ಮಹಾಜನ ಸಭಾ ಮತ್ತು ನಂಬೂದಿರಿಗಳ ಯೋಗಕ್ಷೇಮ ಸಭಾಗಳು ಎಸ್.ಎನ್.ಡಿ.ಪಿ ಮಾದರಿಯಲ್ಲಿಯೇ ತಮ್ಮ ಜನಾಂಗಗಳ ಸುಧಾರಣೆಗೆ ಪ್ರಯತ್ನ ನಡೆಸಿದವು. ಸುಧಾರಣಾ ಚಳವಳಿಯಲ್ಲಿ ಭಾಗವಹಿಸಿದ್ದ ನಂಬೂದಿರಿ ಯುವಕರು ಬಹುಬೇಗನೆ ಕಮ್ಯೂನಿಸ್ಟ್ ಪಕ್ಷದ ಕಡೆ ಆಕರ್ಷಿತರಾದರು. ಮುಂದೆ ಕಮ್ಯೂನಿಸ್ಟ್ ಪಕ್ಷದ ನಾಯಕತ್ವ ನಂಬೂದಿರಿ, ನಾಯರ್ ಗಳ ಪಾಲಾಗಿ ಇತಿಹಾಸ ಮರುಕಳಿಸಿದ್ದನ್ನು ಕಾಣಬಹುದು.
ನಾರಾಯಣ ಗುರು ಚಳವಳಿ ಕೇರಳದಲ್ಲಿ ನಡೆಯದೇ ಹೋಗಿದ್ದರೆ, ಏನಾಗುತ್ತಿತ್ತು ಎಂಬ ಪ್ರಶ್ನೆಗೆ ರಾಜಗೋಪಾಲಚಾರಿ ಅವರು ಆ ಚಳವಳಿ ನಡೆಯುತ್ತಿದ್ದ ಕಾಲದಲ್ಲಿಯೇ ಉತ್ತರ ನೀಡಿದ್ದರು. ತಿರುವಾಂಕೂರು ಸಂಸ್ಥಾನದ ದಿವಾನರು ದೇವಸ್ಥಾನ ಪ್ರವೇಶ ಘೋಷಣೆ ಹೊರಡಿಸಲು ವಿಳಂಬ ಮಾಡುತ್ತಿದ್ದನ್ನು ಕಂಡ ರಾಜಗೋಪಾಲಾಚಾರಿಯವರು ದಿವಾನರಿಗೆ ಪತ್ರ ಬರೆದು "ನಾರಾಯಣ ಗುರುಗಳ ಸುಧಾರಣಾ ಚಳವಳಿ ನಡೆಯದೆ ಹೋಗಿದ್ದರೆ, ಕೇರಳದಲ್ಲಿನ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಹೋಗುತ್ತಿದ್ದರು" ಎಂದು ಎಚ್ಚರಿಸಿದ್ದರು. ಕೇರಳದ ಆಗಿನ ಸ್ಥಿತಿಯಲ್ಲಿ ಈ ಎಚ್ಚರಿಕೆ ಉತ್ಪ್ರೇಕ್ಷೆ ಆಗಿರಲಿಲ್ಲ.
ವಾಸ್ಕೋಡಗಾಮ ಮೊದಲು ಬಂದಿಳಿದ ಕೇರಳದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಉಳಿದೆಲ್ಲಾ ಕಡೆಗಳಿಗಿಂತ ಹೆಚ್ಚು ಕ್ರೀಯಾಶೀಲವಾಗಿದ್ದವು. ನಾರಾಯಣಗುರುಗಳ ಪ್ರವೇಶವಾಗುವ ಮೊದಲು ಅಲ್ಲಿ ಜಾತಿ ಆಧಾರಿತ ದೌರ್ಜನ್ಯದಿಂದ ಬೇಸತ್ತ ಕೆಳವರ್ಗದ ಜನ ಸಾಮೂಹಿಕವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ, ದೇಶದಲ್ಲಿ ಅತಿಹೆಚ್ಚು ಕ್ರಿಶ್ಚಿಯನ್ ಜನಸಂಖ್ಯೆ ಇರುವ ರಾಜ್ಯ ಕೇರಳ. ಅಲ್ಲಿ ಶೇ.24ರಷ್ಟು ಕ್ರಿಶ್ಚಿಯನರು ಇರುವುದು ಈ ಮತಾಂತರಕ್ಕೆ ಸಾಕ್ಷಿ.
ನಾರಾಯಣ ಗುರುಗಳ ಚಳವಳಿಯುದ್ದಕ್ಕೂ ಹಲವಾರು ಬಾರಿ ತಮ್ಮ ಅನುಯಾಯಿಗಳಿಂದಲೇ ಮತಾಂತರದ ಬೆದರಿಕೆಯನ್ನು ಎದುರಿಸಿದ್ದರು. ವೈಕಂ ಸತ್ಯಾಗ್ರಹದ ಕಾಲದಲ್ಲಿ ಮತ್ತು ಅದಕ್ಕಿಂತ ಮೊದಲು ಮತಾಂತರದ ವಿಚಾರ ಎಸ್.ಎನ್.ಡಿ.ಪಿಯಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಗುರುಗಳ ಪ್ರಮುಖ ಶಿಷ್ಯರಲ್ಲಿ ಸಿ.ವಿ ಕುಂಜುರಾಮನ್ ಕ್ರಿಶ್ಚಿಯನ್ ಮತಾಂತರವನ್ನು ಪ್ರತಿಪಾದಿಸುತ್ತಿದ್ದರೆ, ಸಹೋದರ ಅಯ್ಯಪ್ಪನ್ ಮತ್ತು ಸಿ.ಕೃಷ್ಣನ್ ಬೌದ್ಧ ಧರ್ಮದ ಪರ ಒಲವು ತೋರಿಸಿದ್ದರು. ಕುಮಾರ್ ಆಶಾನ್ ಕೂಡ ಬೌದ್ಧ ಧರ್ಮದ ಕಡೆ ಆಕರ್ಷಿತರಾಗಿದ್ದರೂ ಬಹಿರಂಗವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಟಿ.ಕೆ ಮಾಧವನ್ ಮತಾಂತರವನ್ನೇ ವಿರೋಧಿಸುತ್ತಿದ್ದರು.
ಎಸ್.ಎನ್.ಡಿ.ಪಿ ಅಸ್ತಿತ್ವವನ್ನೇ ಅಲುಗಾಡಿಸಿದ ಈ ವಿವಾದ ನಾರಾಯಣ ಗುರುಗಳಿಗೆ ಒಂದು ಸವಾಲಾಗಿತ್ತು. ತಕ್ಷಣ ಸ್ವಾಮಿಗಳು ಅಲ್ವಾಯಿಯಲ್ಲಿ 1924 ಫೆಬ್ರವರಿಯಲ್ಲಿ ಎರಡು ದಿನಗಳ ಸರ್ವಧರ್ಮ ಸಮ್ಮೇಳನ ನಡೆಸಿದರು. ಈ ಸಮ್ಮೇಳನ ನಡೆಯುತ್ತಿರುವುದು "ತರ್ಕ ನಡೆಸುವದಕ್ಕಾಗಲಿ, ಗೆಲ್ಲುವುದಕ್ಕಾಗಲಿ ಅಲ್ಲ. ಪರಸ್ಪರ ತಿಳಿದುಕೊಳ್ಳುವುದು ಮತ್ತು ತಿಳಿಸಿಕೊಡುವುದು ಇದರ ಉದ್ದೇಶ" ಎಂದು ನಾರಾಯಣ ಗುರುಗಳು ಘೋಷಿಸಿದ್ದರು. ಸ್ವಾಮಿಗಳು "ಒಂದು ಜಾತಿ, ಒಂದು ಮತ, ಒಂದೇ ದೇವರು" ಎಂಬ ಸಂದೇಶ ಸಾರಿದರು. ಮನುಷ್ಯ ಬದಲಾದರೆ, ಜಾತಿ ಬದಲಾಯಿಸಬೇಕಾದ ಅಗತ್ಯ ಇಲ್ಲವೆಂದು ಅವರು ಹಿಂದೂ ಧರ್ಮದ ನಾಯಕರನ್ನು ಉದ್ದೇಶಿಸಿ ಹೇಳಿದರು. ಮತಾಂತರದ ವಿವಾದ ಅಲ್ಲಿಗೆ ತಣ್ಣಗಾಯಿತು.
ಚಳವಳಿಯುದ್ದಕ್ಕೂ ನಾರಾಯಣ ಗುರುಗಳಲ್ಲಿ ಯಾವುದೇ ರೀತಿಯ ಗೊಂದಲ, ಹತಾಶೆ, ನಿರಾಶೆ ಮೂಡಿದ್ದು ಕಾಣುವುದಿಲ್ಲ. ಆದರೆ, ಜೀವನದ ಕೊನೆಯ ಎರಡು ವರ್ಷಗಳಲ್ಲಿ ನಾರಾಯಣ ಗುರುಗಳು ಖಿನ್ನರಾಗಿದ್ದರು. ತಮ್ಮ ಅನುಯಾಯಿಗಳಲ್ಲಿ ಹುಟ್ಟಿಕೊಂಡ ರಾಜಕೀಯ ಆಕಾಂಕ್ಷೆ ಮತ್ತು ಆಸ್ತಿ ಮೇಲೆ ನಿಯಂತ್ರಣಕ್ಕೆ ಅವರು ನಡೆಸುತ್ತಿದ್ದ ಶೀತಲ ಸಮರ ಅವರ ಗಮನಕ್ಕೆ ಬಂದಿತ್ತು. ಇದೇ ಬೇಸರದಿಂದ ಅವರು ಶ್ರೀಲಂಕಾಕ್ಕೆ ಹೋಗಿ ಅಲ್ಲಿಯೇ ಶಾಶ್ವತವಾಗಿ ನೆಲೆಸಲು ಬಯಸಿದ್ದರು. ಆದರೆ, ಅನುಯಾಯಿಗಳ ಒತ್ತಡಕ್ಕೆ ಮಣಿದು ಹಿಂದಿರುಗಿದರೂ ಅವರು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬದುಕಲಿಲ್ಲ.
ನಾರಾಯಣ ಗುರುಗಳು ಚಳವಳಿಗೂ ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ನಡೆದ ಬಸವ ಚಳವಳಿಗೂ ಸಿದ್ಧಾಂತ ಮತ್ತು ಕಾರ್ಯತಂತ್ರಗಳಲ್ಲಿ ಕಂಡುಬರುವ ಹಲವಾರು ಸಾಮ್ಯಗಳು ಇನ್ನೊಂದು ಪ್ರತ್ಯೇಕ ಅಧ್ಯಯನಕ್ಕೆ ವಸ್ತುವಾಗಬಹುದು. ಇಬ್ಬರೂ ವರ್ಣಾಶ್ರಮ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಧರ್ಮವನ್ನು ಜನಪರಗೊಳಿಸಿ, ಪೂಜಾವಿಧಾನವನ್ನು ಸರಳಗೊಳಿಸುವ ಪ್ರಯತ್ನ ಮಾಡಿದವರು. ಎರಡೂ ಚಳವಳಿಯಲ್ಲಿ ಕಾಣುವ ಪ್ರಜಾಸತಾತ್ಮಕ ಮೌಲ್ಯಗಳು ಅನನ್ಯವಾದುದು. ಮೂಲತಃ ನಾರಾಯಣ ಗುರುಗಳು ಸತ್ಯಾಗ್ರಹದ ಬಗ್ಗೆ ವಿರೋಧ ಹೊಂದಿದ್ದರು. ಅದೊಂದು ಭಾವನಾತ್ಮಕ ಶೋಷಣೆಯೆಂದು ಹೇಳುತ್ತಿದ್ದರು. ಆದರೆ, ತಮ್ಮ ಶಿಷ್ಯ ಟಿ.ಕೆ ಮಾಧವನ್ ವೈಕಂ ಸತ್ಯಾಗ್ರಹ ಪ್ರಾರಂಭಿಸಿದಾಗ ದೇವಸ್ಥಾನ ಪ್ರವೇಶ ಚಳವಳಿ ಮತ್ತು ಸತ್ಯಾಗ್ರಹ ಎರಡರ ಬಗ್ಗೆ ವಿರೋಧವಿದ್ದರೂ ಅದನ್ನು ಬೆಂಬಲಿಸಿದರು.
ನಾರಾಯಣ ಗುರುಗಳ ಪ್ರೀತಿಯ ಅನುಯಾಯಿಯಾದ ಸಹೋದರ ಅಯ್ಯಪ್ಪನ್ ಪುಲಯರೊಂದಿಗೆ ಸಹಭೋಜನ ಮಾಡಿ ಜಾತಿಯಿಂದ ತಿರಸ್ಕೃತರಾದಾಗ ಅವರು ಅಯ್ಯಪ್ಪನನ್ನು ಬೆಂಬಲಿಸುತ್ತಾರೆ. ದೇವಾಲಯಗಳ ಸ್ಥಾಪನೆಯನ್ನು ವಿರೋಧಿಸುತ್ತಲೇ ಬಂದ ಅಯ್ಯಪ್ಪನ್ ಕರಮಕೊಂಡಂನಲ್ಲಿ ದೇವಾಲಯ ಸ್ಥಾಪನೆ ಮಾಡಲು ಬಂದ ಗುರುಗಳ ವಿರುದ್ಧವೇ ಪ್ರತಿಭಟನೆ ಮಾಡುತ್ತಾರೆ. ಅದಕ್ಕೆ ಮಣಿದ ಗುರುಗಳು ಮುಂದೆ ದೇವಾಲಯಗಳ ಸ್ಥಾಪನೆಯನ್ನೇ ನಿಲ್ಲಿಸುತ್ತಾರೆ.
ಮತಾಂತರ ವಿಷಯದಲ್ಲಿ ಗುರು ಮತ್ತು ಅನುಯಾಯಿಗಳ ನಡುವೆ ಭಿನ್ನಾಭಿಪ್ರಾಯವಿದ್ದರೂ ಕೊನೆಗೆ ಎಲ್ಲರೂ ಗುರುಗಳ ಅಭಿಪ್ರಾಯಕ್ಕೆ ಬದ್ಧರಾಗುತ್ತಾರೆ. ಇಂತಹದ್ದೇ ಬೆಳವಣಿಗೆಗೆಳನ್ನು ಬಸವ ಚಳವಳಿಯೊಳಗೂ ಕಾಣಬಹುದು. ಎರಡೂ ಚಳವಳಿಗಳ ಅನುಯಾಯಿಗಳಲ್ಲಿಯೂ ಸಾಕಷ್ಟು ಹೋಲಿಕೆ ಇದೆ. ಬಸವಣ್ಣನ ಅನುಯಾಯಿಗಳಾದ ಅಲ್ಲಮ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಸಿದ್ಧರಾಮೇಶ್ವರ ಹಾಗೂ ನಾರಾಯಣ ಗುರು ಅನುಯಾಯಿಗಳಾದ ಪಲ್ಪು, ಆಶಾನ್, ಅಯ್ಯಪ್ಪನ್ ಮೊದಲಾದವರಲ್ಲಿ ಸಾಮ್ಯಗಳಿವೆ. ಎರಡು ಚಳವಳಿಯ ನಾಯಕರ ಅಂತ್ಯಕ್ಕೂ ಅಷ್ಟೇ ಹೋಲಿಕೆಗಳಿವೆ. ಇಬ್ಬರೂ ಕೊನೆಗಾದಲ್ಲಿ ಅನುಯಾಯಿಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಲಾಗದೆ ಸಂಕಟ ಅನುಭವಿಸುತ್ತಾರೆ. ಸಾವಿನ ನಂತರ ಇಬ್ಬರೂ ಭಕ್ತರ ಕೈಯಲ್ಲಿ ಬಂಧಿಯಾಗಿ ಕಲ್ಲಿನಮೂರ್ತಿಗಳಾಗುತ್ತಾರೆ.
ಕೇರಳದಿಂದಾಚೆಗೆ ತಮಿಳುನಾಡು ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತು ಪಡಿಸಿದರೆ, ಬೇರೆಡೆ ನಾರಾಯಣ ಗುರು ಚಳವಳಿ ಹೆಚ್ಚು ಪರಿಚಿತವಲ್ಲ. ನಾರಾಯಣ ಗುರುಗಳ ಶಿಷ್ಯರೇ ಆದ ಡಾ.ಪಲ್ಪು ಅವರ ಮಗ ನಟರಾಜ ಗುರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುಗಳ ಚಿಂತನೆಯ ಪ್ರಸಾರ ಮಾಡಿದರು. ಅವರು ಶಿವಗಿರಿಯ ಸಮೀಪ ಸ್ಥಾಪಿಸಿರುವ ಈಸ್ಟ್ ವೆಸ್ಟ್ ವಿಶ್ವವಿದ್ಯಾಲಯವಿದೆ. ಆದರೆ, ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನೂರಾರು ಗುರುಮಂದಿರಗಳಲ್ಲಿ ಅವರಿಗಾಗಿಯೇ ಕಟ್ಟಿದ ದೇವಾಲಯಗಳಲ್ಲಿ ನಾರಾಯಣ ಗುರುಗಳ ಆರಾಧನೆ-ಭಜನೆಗಳು ಕೂಡ ನಾರಾಯಣನೆಂಬ ಈ "ನರ"ನ ಸಾಧನೆಯ ಬಗ್ಗೆ ತಪ್ಪು ಕಲ್ಪನೆಗಳನ್ನೇ ಬಿತ್ತುತ್ತಿವೆ.
ಸಾವಿರಾರು ವರ್ಷಗಳಿಂದ ಬೇರುಬಿಟ್ಟ ವೈದಿಕ ಶಾಹಿ, ಫ್ಯಾಸಿಸ್ಟ್ ಶಕ್ತಿ ತನ್ನನ್ನು ಪ್ರಶ್ನಿಸಿದವರನ್ನು ಮೊದಲು ನಾಶ ಮಾಡಲು ಪ್ರಯತ್ನಿಸುತ್ತದೆ. ಸಾಧ್ಯವಾಗದಿದ್ದರೆ, ತನ್ನೊಳಗೆ ಜೀರ್ಣಿಸಿಕೊಂಡು ಬಿಡುತ್ತದೆ. ಬುದ್ಧ ವಿಷ್ಣುವಿನ ಅವತಾರವಾದ ಬಸವಣ್ಣ ನಂದಿಯ ಅವತಾರವಾದ ದುರಂತವೇ ನಾರಾಯಣ ಗುರುಗಳಿಗಾಗಿದೆ. ಸನ್ಯಾಸಿಯಾದ ದಿನದಿಂದ ಸಾವಿನವರೆಗೂ ಕೇರಳದ ಅತ್ಯಂತ ಕೀಳು ಜಾತಿಯವರೆನಿಸಿದ ಪುಲಯ ಜನಾಂಗದ ಅಡಿಗೆಯವನಿಂದಲೆ ಕೈತುತ್ತು ತಿಂದು ಬದುಕಿದ ಈ ಅಪ್ರತಿಮ ಮಾನವತಾವಾದಿ ಇಂದು ಈಳವ - ಬಿಲ್ಲವ ಜಾತಿ ಜನರ ನಾಯಕನಾಗಿಬಿಟ್ಟಿದ್ದಾರೆ.
ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದ ಗುರುಗಳ ಚಿಂತನೆಯನ್ನು ವಿದ್ಯೆ ಎಂದರೆ, ಅಕಾಡೆಮಿಕ್ ಶಿಕ್ಷಣ ಎಂದು ತಿಳಿದಷ್ಟೇ ಕಾರಣ. ಅವರ ಅನುಯಾಯಿಗಳೆನಿಸಿಕೊಂಡವರು ಇಂದಿಗೂ ಬೌದ್ಧಿಕ ದಾಸ್ಯದಿಂದ ಮುಕ್ತವಾಗಿಲ್ಲ. ಹಾಗಿಲ್ಲದಿದ್ದರೆ, ವರ್ಣಾಶ್ರಮ ವ್ಯವಸ್ಥೆಗೆ ಸವಾಲಾಗಿ ನಾರಾಯಣ ಗುರುಗಳು ಮಂಗಳೂರಿನಲ್ಲಿ ಸ್ಥಾಪಿಸಿದ ದೇವಾಲಯವನ್ನು ಜೀರ್ಣೋದಯ ಮಾಡಿದ ಅವರ ಅನುಯಾಯಿಗಳು, ಅದನ್ನು ವರ್ಣಾಶ್ರಮ ವ್ಯವಸ್ಥೆಯನ್ನು ಇಂದಿಗೂ ಪ್ರತಿಪಾದಿಸುವ ಶೃಂಗೇರಿ ಮಠದ ಸ್ವಾಮಿಗಳಿಂದ ಉದ್ಘಾಟನೆ ಮಾಡಿಸುತ್ತಿರಲಿಲ್ಲ.
ಒಂದು ಜಾತಿ, ಒಂದು ಮತ, ಒಂದೇ ದೇವರು ಎಂದು ಸಾರಿದ ನಾರಾಯಣ ಗುರುಗಳು ಇಲ್ಲಿ ಒಂದು ಜಾತಿಯ ಮಂದಿರಗಳಲ್ಲಿ ಬಂಧಿಯಾಗಿದ್ದಾರೆ. ಆ ಜಾತಿ ಜನರಾದವರೂ ಗುರುಗಳ ತತ್ವವನ್ನು ಪಾಲಿಸುತ್ತಿದ್ದಾರೆಯೇ? ನಾರಾಯಣ ಗುರುಗಳನ್ನು ಇಂದಿನ ಬಂಧನದಿಂದ ಬಿಡಿಸುವವರ್ಯಾರು?
ಭಕ್ತಸಮೂಹ, ಭಜನಾ ಮಂಡಳಿಗಳಾಚೆ ನಡೆಯುವ ಈ ರೀತಿಯ ವೈಚಾರಿಕ ಚರ್ಚೆ ಸಂವಾದಗಳು ಮಾತ್ರ ನಾರಾಯಣ ಗುರುಗಳನ್ನು ಈಗಿನ ಬಂಧನದಿಂದ ಬಿಡುಗಡೆಗೊಳಿಸಬಹುದೆಂದು ನಾನು ನಂಬಿದ್ದೇನೆ.

Monday, September 12, 2016

Janasri News | Kaveri Daari - Panel discussion on Kaveri issue - part 6

Janasri News | Kaveri Daari - Panel discussion on Kaveri issue - part 5

Janasri News | Kaveri Daari - Panel discussion on Kaveri issue - part 4

Janasri News | Kaveri Daari - Panel discussion on Kaveri issue - part 3

Janasri News | Kaveri Daari - Panel discussion on Kaveri issue - part 2

Janasri News | Kaveri Daari - Panel discussion on Kaveri issue - part 1

ಕಾವೇರಿ ವಿವಾದ: ಜಲತಜ್ಞರು, ಕಾನೂನು ತಜ್ಞರು & ಹೋರಾಟಗಾರರು

ರಾಜ್ಯದ ಜಲವಿವಾದಗಳಿಗೆ ಸಂಬಂಧಿಸಿದಂತೆ ನಮ್ಮ ವಕೀಲರು ಸಮರ್ಥವಾಗಿ ವಾದಿಸಿಲ್ಲ, ಅವಶ್ಯಕ ದಾಖಲೆಗಳನ್ನು ನ್ಯಾಯಮಂಡಳಿ, ನ್ಯಾಯಾಲಯದ ಮುಂದಿಡದೆ ವಿಫಲರಾದರು.. ಇತ್ಯಾದಿ ಆರೋಪಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿವೆ. ಪತ್ರಕರ್ತನಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಯಾವುದಾದರೂ ಒಂದು ವಿಷಯದ ಬಗ್ಗೆ ನಾನು ಅತೀ ಹೆಚ್ಚು ಬರೆದಿದ್ದರೆ ಅದು ಕಾವೇರಿ ಜಲವಿವಾದದ ಬಗ್ಗೆ. ನಾನು ಬರೆದಿರುವುದು ಕಾಡಿಗೆ ಹೋಗಿ ತಪಸ್ಸುಮಾಡಿ ಗಳಿಸಿದ ಜ್ಞಾನದಿಂದಲ್ಲ. ಇವೆಲ್ಲವೂ ರಾಜ್ಯದ ವಕೀಲರ ಮತ್ತು ನೀರಾವರಿ ತಜ್ಞರ ಜತೆಗಿನ ಮಾತುಕತೆ, ಕಾವೇರಿ ನ್ಯಾಯಮಂಡಳಿ ಕಲಾಪದ ವರದಿ ಮತ್ತು ಸರ್ಕಾರಿ ಇಲಾಖೆಗಳಿಂದ ಪಡೆದ ದಾಖಲೆಗಳ ಮೂಲಕ ನಾನು ತಿಳಿದುಕೊಂಡದ್ದು. ಈ ಎಲ್ಲ ವಿಷಯಗಳನ್ನು ರಾಜ್ಯ ಸರ್ಕಾರದ ಪರವಾಗಿ ನಮ್ಮ ವಕೀಲರು ನ್ಯಾಯಾಲಯ ಮತ್ತು ನ್ಯಾಯಮಂಡಳಿಯ ಮುಂದೆ ಮಾಡಿರುವ ವಾದಗಳಲ್ಲಿಯೂ ನಾನು ಕಿವಿಯಾರೆ ಕೇಳಿದ್ದೇನೆ. ನನಗೆ ತಿಳಿದಂತೆ ಈಗ ವರ್ತಮಾನದ ಸ್ಥಿತಿಯ ಕಡೆ ನ್ಯಾಯಾಲಯದ ಗಮನಸೆಳೆಯುವುದು ಬಿಟ್ಟರೆ ಹೊಸದಾಗಿ ಹೇಳುವುದೇನೂ ಉಳಿದಿಲ್ಲ.
ಉದಾಹರಣೆಗೆ ಕಾವೇರಿ ನ್ಯಾಯಮಂಡಳಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಯೋಜನೆಗಳಿಗಾಗಿ ನಿಗದಿಪಡಿಸಿರುವ ಅತ್ಯಂತ ಕಡಿಮೆ ಪ್ರಮಾಣವಾಗಿರುವ 1.75 ಟಿಎಂಸಿ ನೀರು, ತಮಿಳುನಾಡಿಗೆ ಡಿಸೆಂಬರ್ ವರೆಗೂ ಲಭ್ಯ ಇರುವ ಈಶಾನ್ಯಮಾರುತದ ಮಳೆಯ ಪ್ರಸ್ತಾವ, ತಮಿಳುನಾಡಿನಲ್ಲಿ ಲಭ್ಯ ಇರುವ ಅಂತರ್ಜಲವನ್ನು ನ್ಯಾಯಮಂಡಳಿ ಪರಿಗಣಿಸದೆ ಇರುವುದು, ನಾವು ಬೆಳೆಯುವ ಒಂದು ಬೆಳೆ, ಅವರು ಬೆಳೆಯುವ ಮೂರು ಬೆಳೆ, ಪರಿಸರ ರಕ್ಷಣೆಗಾಗಿ ತಮಿಳುನಾಡಿಗೆ ನ್ಯಾಯಮಂಡಳಿ ನೀಡಿರುವ 10 ಟಿಎಂಸಿ ವಿಶೇಷ ಕೊಡುಗೆ ಇತ್ಯಾದಿ ಅಂಶಗಳೆಲ್ಲವನ್ನು ಅಂತಿಮ ಐತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ Special leave petition ನಲ್ಲಿ ರಾಜ್ಯದ ವಕೀಲರು ಹೇಳಿದ್ದಾರೆ.
ಹೀಗಿದ್ದರೂ ಈ ರೀತಿಯ ಅಪಪ್ರಚಾರ ಯಾಕೆ ಆಗುತ್ತಿದೆಯೆಂದರೆ ಜಲವಿವಾದ ಪ್ರಾರಂಭವಾದ ಕೂಡಲೇ ಬೀದಿಗಿಳಿದವರೆಲ್ಲರೂ ದಿಢೀರ್ ‘ನೀರಾವರಿ ತಜ್ಞರು’ ಮತ್ತು ‘ಕಾನೂನು ತಜ್ಞರು’ ಆಗಿಬಿಡುತ್ತಾರೆ. ನಮ್ಮ ರೈತರ ಬಗ್ಗೆ, ನೆಲ-ಜಲದ ಬಗ್ಗೆ ನಮ್ಮ ನಟ-ನಟಿಯರ,ಕನ್ನಡ ಚಳುವಳಿಗಾರರ ಪ್ರೀತಿ,ಅಭಿಮಾನ, ಕಳಕಳಿ, ಕಾಳಜಿ ಎಲ್ಲವೂ ಅಭಿನಂದಾರ್ಹ. ಆದರೆ ಅವರಲ್ಲಿ ಹೆಚ್ಚಿನ ಮಂದಿ ಭಾಷಣಶೂರರಾಗಲು ಹೋಗಿ ಬಹಿರಂಗವಾಗಿ ತಮ್ಮ ಅಜ್ಞಾನ ಪ್ರದರ್ಶಿಸುತ್ತಾರೆ. ಕೊನೆಗೆ ಹೇಳಲು ಏನೂ ವಿಷಯ ಇಲ್ಲದೆ ಇದ್ದಾಗ ಮಾತು ವೈಯಕ್ತಿಕ ಮಟ್ಟಕ್ಕೆ ಇಳಿದು ‘ಗಂಡಸ್ತನ’ ‘ಸೀರೆ-ಬಳೆ’ ಕಡೆ ಹೊರಳುತ್ತವೆ. ಇವರಲ್ಲಿಯೇ ಕೆಲವರು ಟಿವಿಚಾನೆಲ್ ಗಳಲ್ಲಿ ಹೋಗಿ ಕೂತು ಚರ್ಚೆ ನಡೆಸುತ್ತಾರೆ.
ಇತ್ತೀಚೆಗೆ ನಾನು ಅಪರೂಪಕ್ಕೆ ಒಂದು ಟಿವಿಚಾನೆಲ್ ನಲ್ಲಿ ಕಾವೇರಿ ವಿಷಯದ ಚರ್ಚೆಗೆ ಹೋಗಿದ್ದೆ. ಅಲ್ಲಿ ಕನ್ನಡದ
ಯುವನಿರ್ದೇಶಕರೊಬ್ಬರಿದ್ದರು. ‘ಚರ್ಚೆಯುದ್ದಕ್ಕೂ ಅವರು ‘ಕಾವೇರಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಏನಾಗುತ್ತದೆ ಎಂದು ಗೊತ್ತಿಲ್ಲ...’ ಇತ್ಯಾದಿ ಆರೋಪಮಾಡುತ್ತಿದ್ದರು. ಮೊದಲನೆಯದಾಗಿ ಏನೂ ಗೊತ್ತಿಲ್ಲದೆ ಇದ್ದರೆ ಇಂತಹ ಚರ್ಚೆಯಲ್ಲಿ ಪಾಲ್ಗೊಳ್ಳಬಾರದು. ಎರಡನೆಯದಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವುದೇ ಆಗಿದ್ದರೆ ವಿಷಯ ಸಂಗ್ರಹ ಮಾಡಿಕೊಂಡು ಬರಬೇಕು. ಇಂದು ಬಹಳಷ್ಟು ಮಾಹಿತಿ ಇಂಟರ್ ನೆಟ್ ಮೂಲಕ ನಮ್ಮ ಬೆರಳತುದಿಗಳಲ್ಲಿವೆ. ಒಬ್ಬ ಸಾಮಾನ್ಯ ರೈತರಿಗೆ ನಾವು ಇದನ್ನು ಹೇಳಲಾಗದು, ಆದರೆ ಚಳುವಳಿಯ ನಾಯಕರು, ಚರ್ಚೆಯಲ್ಲಿ ಬಂದು ಪಾಲ್ಗೊಳ್ಳುವ ಮತ್ತು ಬೀದಿಭಾಷಣ ಮಾಡುವ ನಟ-ನಟಿಯರಾದರೂ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕಲ್ಲವೇ? ಅಂದಹಾಗೆ ಈ ಯುವನಿರ್ದೇಶಕರ ಎರಡು ಚಿತ್ರಗಳನ್ನು ನೋಡಿದ್ದೆ. ಅದು ನಾಯಕ-ನಾಯಕಿ ಮರಸುತ್ತುವ, ಲಾಂಗ್-ಮಚ್ಚುಗಳ ಕತೆಯಲ್ಲ. ನೈಜ ಘಟನೆಗಳ ಬಗ್ಗೆ ಶ್ರಮವಹಿಸಿ ಸಂಶೋಧನೆ ಮಾಡಿ ವಿಷಯ ಸಂಗ್ರಹಿಸಿ ಮಾಡಿರುವ ಚಲನಚಿತ್ರಗಳು. ಇಂತಹವರೂ ಕಾವೇರಿ ಬಗ್ಗೆ ನಮಗೇನೂ ಗೊತ್ತಿಲ್ಲ, ಎಲ್ಲಿದೆ ಮಾಹಿತಿ ಎಂದು ಗೋಳಾಡಿದರೆ?











Thursday, September 8, 2016

ಕಾವೇರಿ: ರಾಜ್ಯಕ್ಕೆ ಲಾಭ-ನಷ್ಟ ಎಷ್ಟು? (ಫೆಬ್ರುವರಿ 2007)

ಕಾವೇರಿ ನದಿನೀರು ವಿವಾದ ಭುಗಿಲೆದ್ದಿರುವ ಈ ಸಂದರ್ಭದಲ್ಲಿ ಬರೆಯಬೇಕೆಂದು ನನ್ನ ಕೈ ತುರಿಸುತ್ತಿರುವುದು ನಿಜ, ವೃತ್ತಿಯನ್ನು ಮತ್ತು ದೆಹಲಿಯನ್ನು ಮಿಸ್ ಮಾಡುತ್ತಿರುವುದು ಕೂಡಾ ನಿಜ. ನಾನು 2000ನೇ ವರ್ಷದಲ್ಲಿ ದೆಹಲಿಗೆ ಹೋದವನು, ಅದಕ್ಕಿಂತ ಮೊದಲೇ ಅಲ್ಲಿ ಕನ್ನಡಪ್ರಭದ ವರದಿಗಾರರಾದ ಡಿ.ಉಮಾಪತಿ ಮತ್ತು ಡೆಕ್ಕನ್ ಹೆರಾಲ್ಡ್ ವರದಿಗಾರರಾದ ಬಿ.ಎಸ್. ಅರುಣ್ ಇದ್ದರು, ನಂತರ ವಿಜಯಕರ್ನಾಟಕದ ವರದಿಗಾರರಾಗಿ ಅಶೋಕ್ ರಾಮ್ ನಮ್ಮನ್ನು ಸೇರಿಕೊಂಡರು. ಕಾವೇರಿ ಮತ್ತು ಕೃಷ್ಣಾ ನ್ಯಾಯಮಂಡಳಿಯ ಬೈಠಕ್ ಗಳನ್ನು ನಮ್ಮ ವಕೀಲರೂ ತಪ್ಪಿಸಿಕೊಂಡರೂ ನಾವು ಮಾತ್ರ ತಪ್ಪದೇ ನಿಯಮಿತವಾಗಿ ಹಾಜರಾಗಿ ವಿದ್ಯಾರ್ಥಿಗಳಂತೆ ನೋಟ್ಸ್ ಮಾಡಿಕೊಳ್ಳುತ್ತಿದ್ದೆವು. 

ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಅಲ್ಲಿನ ಅಕ್ರಿಡಿಷನ್ ಇಲ್ಲದ ನಾವು ಸಂದರ್ಶಕರ ಪಾಸ್ ನಲ್ಲಿ ಒಳಗೆ ಹೋಗಿ ಗಂಟೆಗಟ್ಟಲೆ ನಿಂತುಕೊಂಡೇ ನ್ಯಾಯಮೂರ್ತಿಗಳ ಕಣ್ಣಿಗೆ ಬೀಳದಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆವು. ಗೊಂದಲ ಮೂಡಿದರೆ ಅದನ್ನು ಬಗೆಹರಿಸಲು ನೀರಾವರಿ ವಿವಾದದ ವಿಷಯದಲ್ಲಿ ‘ಸರ್ವಜ್ಞ’ ರೆನಿಸಿರುವ ನಮ್ಮೆಲ್ಲರ ಗೆಳೆಯರಾಗಿರುವ ಮೋಹನ್ ಕಾತರಕಿ ಇದ್ದರು. ನಮ್ಮ ನಡುವೆ ಯಾರೂ ಬಹಿರಂಗವಾಗಿ ಒಪ್ಪಿಕೊಳ್ಳದ ಸಣ್ಣ ವೃತ್ತಿಸಂಬಂಧಿ ಪೈಪೋಟಿ ಕೂಡಾ ಇತ್ತು, ಅದನ್ನು ಮೀರಿದ ಸ್ನೇಹವೂ ಇತ್ತು. ಈಗಲೂ ದೆಹಲಿಯಲ್ಲಿರುವ ಕನ್ನಡದ ಪತ್ರಕರ್ತರು ಸೆನ್ಸಿಬಲ್ ಆಗಿ ವರದಿ ಮಾಡುತ್ತಿರುವುದನ್ನು ಕೂಡಾ ಗಮನಿಸಬಹುದು.
ನೆಲ,ಜಲ,ಭಾಷೆಗೆ ಸಂಬಂಧಿಸಿದ ವಿವಾದ ಎದ್ದಾಗೆಲ್ಲ ನಮ್ಮದು ಒಂದೇ ಪಕ್ಷ, ಅದು ಕರ್ನಾಟಕ ಪಕ್ಷ ಎಂದು ನಾವು ತಮಾಷೆಮಾಡಿಕೊಳ್ಳುತ್ತಿದ್ದೆವು. ಅಂದಮಾತ್ರಕ್ಕೆ ಕಹಿಸತ್ಯವನ್ನು ಹೇಳಲು ನಾವು ಹಿಂಜರಿಯುತ್ತಿರಲಿಲ್ಲ. ಬಹಳಷ್ಟು ಸಲ ಅದು ಸರ್ಕಾರಕ್ಕೆ, ಸಚಿವರುಗಳಿಗೆ ಇಷ್ಟವಾಗುತ್ತಿರಲಿಲ್ಲ. ಆದರೆ ನಾವು ಹುಸಿ ರಾಜ್ಯಪ್ರೇಮದಲ್ಲಿ ತೇಲಿಹೋಗಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಎಂದೂ ಮಾಡಿರಲಿಲ್ಲ. ಆದರೆ ರಾಜ್ಯದ ಹಿತಾಸಕ್ತಿಯ ವಿರುದ್ಧ ನಾವಿಲ್ಲ ಎನ್ನುವುದನ್ನು ನಮ್ಮ ಬರವಣಿಗೆಯ ಮೂಲಕ ಆಗಲೇ ಸಾಬೀತುಪಡಿಸಿದ್ದ ಕಾರಣದಿಂದಾಗಿ ಕಹಿಸತ್ಯ ಬರೆದಾಗಲೂ ಜನ ಅರ್ಥಮಾಡಿಕೊಳ್ಳುತ್ತಿದ್ದರು ಮತ್ತು ಪ್ರೀತಿಯಿಂದ ಒಪ್ಪಿಕೊಳ್ಳುತ್ತಿದ್ದರು.
2007ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ಅಂತಿಮ ಐತೀರ್ಪು ನೀಡಿದಾಗಲೂ ರಾಜ್ಯದಲ್ಲಿ ಬಂದ್ ಗೆ ಕರೆನೀಡಲಾಗಿತ್ತು. ನನಗೆ ಸರಿಯಾಗಿ ನೆನಪಿದೆ, ಅದು ಫೆಬ್ರವರಿ 12, 2007. ಅದೇ ದಿನಕ್ಕೆಂದು ನಾನು ವಿಶೇಷ ವರದಿ ತಯಾರಿಸಿದ್ದೆ. ‘ಕಾವೇರಿ: ರಾಜ್ಯಕ್ಕೆ ಲಾಭ, ನಷ್ಟ ಎಷ್ಟು?’ ಎನ್ನುವುದು ಅದರ ತಲೆಬರಹವಾಗಿತ್ತು. ಐತೀರ್ಪಿನಿಂದಾಗಿ ರಾಜ್ಯಕ್ಕೆ ಘನಘೋರ ಅನ್ಯಾಯವಾಗಿದೆ ಎಂಬ ಪ್ರಚಾರ ನಡೆಯುತ್ತಿದ್ದ ಕಾಲ ಅದು. ಅದರಿಂದ ಕರ್ನಾಟಕಕ್ಕೆ ಲಾಭವೂ ಇದೆ ಎನ್ನುವುದನ್ನು ನಾನುಬರೆದಿದ್ದೆ. ಸ್ವಲ್ಪ ರಿಸ್ಕಿ ವರದಿ ಅದು. ಮೊದಲಪುಟದಲ್ಲಿ ಪ್ರಕಟವಾಗಬೇಕಾಗಿದ್ದ ಆ ವರದಿಯನ್ನು ಸುದ್ದಿಸಂಪಾದಕರು ಸ್ವಲ್ಪ ಅಂಜಿಕೆಯಿಂದ ಒಳಪುಟದಲ್ಲಿ ಪ್ರಕಟಿಸಿದರು. ಆದರೆ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ನಾನು ಮರೆಯಲಾರದಂತಹದ್ದು. ಒಬ್ಬ ಓದುಗ ಕೂಡಾ ಬರೆದುದು ತಪ್ಪು, ಬರೆಯಬಾರದಿತ್ತು ಎಂದುನನಗೆ ಹೇಳಲಿಲ್ಲ.
ಅದರ ನಂತರ 2007ರಲ್ಲಿಯೇ ಆಗ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಸ್.ಜಿ.ಸಿದ್ದರಾಮಯ್ಯ ಮತ್ತಿತರರು ಕರ್ನಾಟಕದ ಎಲ್ಲ ಅಕಾಡೆಮಿಗಳನ್ನು ಒಗ್ಗೂಡಿಸಿ ರಿ ಕಾವೇರಿ ವಿವಾದ ಬಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಅದರಲ್ಲಿ ವಿಷಯ ಮಂಡನೆಗೆ ಕಿರಿಯನಾದ ನನ್ನನ್ನು ಆಹ್ಹಾನಿಸಿದ್ದರು. ಪ್ರತಿಕ್ರಿಯಿಸಲು ಹಿರಿಯರಾದ ನೀರಾವರಿ ತಜ್ಞ ಧುರೀಣ ನಂಜೇಗೌಡರು, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್, ಶಾಸಕ ಎಸ್. ಸುರೇಶ್ ಕುಮಾರ್ ಮೊದಲಾದವರು ವೇದಿಕೆಯಲ್ಲಿದ್ದರು. ಸಭಾಂಗಣ ಹಸಿರುಶಾಲುಗಳಿಂದ ತುಂಬಿತ್ತು. ನಾನು ಎಂದಿನ ನೇರಾನೇರ ಶೈಲಿಯಲ್ಲಿ ಮಾತನಾಡಿ ತಪ್ಪು-ಒಪ್ಪುಗಳನ್ನು ಮುಂದಿಟ್ಟೆ. ಯಾರೂ ಕಲ್ಲು ಒಗೆಯಲಿಲ್ಲ, ಕೆಳಗಿಳಿಯುತ್ತಿದ್ದಂತೆ ಕೈಕುಲುಕಿದರು, ಅಪ್ಪಿಕೊಂಡರು. ( ನನ್ನ ಮಾತುಗಳು ಮುಗಿಯುತ್ತಿದ್ದಂತೆಯೇ ನನ್ನ ಮೊಬೈಲ್ ಗೆ ‘Well done” ಎನ್ನುವ ಮೆಸೆಜ್ ಬಂದಿತ್ತು. ಯಾರೆಂದುನೋಡಿದರೆ ನಮ್ಮ ಸಂಪಾದಕರಾದ ಕೆ.ಎನ್.ಶಾಂತಕುಮಾರ್. ಅವರ ಹಿಂದಿನ ಸಾಲಲ್ಲಿ ಪ್ರೇಕ್ಷಕರಾಗಿ ಬಂದು ನಮ್ಮೆಲ್ಲರ ಮಾತುಗಳನ್ನು ಕೇಳಿದ್ದರು)
ಬೆಂಗಳೂರಿಗೆ ಹಿಂದಿರುಗಿದ ನಂತರ ಮಂಡ್ಯದ ಎಚ್.ಕೆ.ಎಲ್ .ಕೇಶವಮೂರ್ತಿ ಮತ್ತು ಗೆಳೆಯರು ಕಾವೇರಿ ವಿವಾದದ ಬಗ್ಗೆಯೇ ಮಾತನಾಡಲು ಮಂಡ್ಯಕ್ಕೆ ಆಹ್ಹಾನಿಸಿದರು. ಅದು ಕಾವೇರಿ ಐತೀರ್ಪಿನ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದ ಕಾಲ. ನಾನು ಅಲ್ಲಿಯೂ ಹೆಚ್ಚು ಜನಪ್ರಿಯವಲ್ಲದ ಸತ್ಯದ ಮಾತುಗಳನ್ನಾಡಿದೆ. ಹಿರಿಯರಾದ ಜಿ.ಮಾದೇಗೌಡರು ವಾದಕ್ಕೆ ನಿಂತರು. ಅವರ ಹಿರಿತನಕ್ಕೆ ಗೌರವಕೊಡುತ್ತಲೇ ನನ್ನ ಮಾತುಗಳನ್ನು ಸಮರ್ಥಿಸಿಕೊಂಡೆ. ಸಭಾಂಗಣದಲ್ಲಿದ್ದವರ್ಯಾರು ನನ್ನಮೇಲೇರಿ ಬರಲಿಲ್ಲ.
ಇಂತಹ ಪ್ರಸಂಗಗಳನ್ನು ಉಲ್ಲೇಖಿಸುತ್ತಲೇ ಹೋಗಬಹುದು. ಹೇಳಲು ಕಾರಣ ಇಷ್ಟೆ: ಕರ್ನಾಟಕದ ಜನ ಬುದ್ದಿವಂತರು. ಭಾವುಕರಾದರೂ ಪ್ರಜ್ಞಾವಂತರು. ಹೇಳಬೇಕಾದುದನ್ನು ಹೇಳಬೇಕಾದವರು, ಹೇಳಬೇಕಾದ ರೀತಿಯಲ್ಲಿ ಹೇಳಿದರೆ ಖಂಡಿತ ಕೇಳುತ್ತಾರೆ. ಈ ಗುಣವಿಶೇಷದಿಂದಾಗಿಯೇ ನನ್ನಂತಹ ಸಾಮಾನ್ಯ ವರದಿಗಾರನೊಬ್ಬನ ಮಾತನ್ನು ಕೂಡಾ ಕೇಳಿದ್ದರು. 
ಕಳೆದ ಕೆಲವು ದಿನಗಳಿಂದ ಮತ್ತೆ ಎದ್ದಿರುವ ಕಾವೇರಿ ವಿವಾದದ ಬಗ್ಗೆ ಪತ್ರಿಕೆ ಮತ್ತು ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ವರದಿ, ಚರ್ಚೆ, ವಿಶ್ಲೇಷಣೆಗಳನ್ನು ಓದಿದಾಗ, ನೋಡಿದಾಗ ಇದನ್ನೆಲ್ಲ ಬರೆಯಬೇಕೆನಿಸಿತು. ಈಗಲೂ ಎಲ್ಲ ಮಾಧ್ಯಮಗಳು, ಎಲ್ಲ ಪತ್ರಕರ್ತರೂ ರೋಚಕತೆಗೆ ಮಾರುಹೋಗಿದ್ದಾರೆ ಎಂದು ನನಗನಿಸುವುದಿಲ್ಲ. ಆದರೆ ಮಂತ್ರಕ್ಕಿಂತ ಉಗುಳು ಹೆಚ್ಚಾಗಿದೆ.

Monday, September 5, 2016

ನನ್ನ ಪ್ರೇಮ ಟೀಚರ್ ಬಗ್ಗೆ...

ಶಿಕ್ಷಕರ ದಿನಾಚರಣೆಯ ದಿನ ಗೆಳೆಯರೆಲ್ಲರೂ ಸಾಲುಗಟ್ಟಿ ತಮ್ಮ ಗುರುಗಳನ್ನು ನೆನಪುಮಾಡಿಕೊಳ್ಳುತ್ತಿರುವಾಗ ನನ್ನದೂ ಒಂದು ಇರ್ಲಿ ಅಂತ...ನನ್ನ ಪ್ರೇಮ ಟೀಚರ್ ಬಗ್ಗೆ....
ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿ ವರೆಗೆ ಓದಿದ್ದು ಮುಂಬೈನ ಮುನ್ಸಿಪಾಲಿಟಿ ಕನ್ನಡ ಮಾಧ್ಯಮ ಶಾಲೆಯಲ್ಲಿ. ಅಲ್ಲಿನ ಕೋಟೆ ಪ್ರದೇಶದ ಬಜಾರ್ ಸ್ಟ್ರೀಟ್ ನಲ್ಲಿ ನಾನು ಮೂರನೆ ತರಗತಿ ಓದುತ್ತಿದ್ದಾಗ ನಮಗೊಬ್ಬರು ಕ್ಲಾಸ್ ಟೀಚರ್ ಇದ್ದರು. ಅವರ ಹೆಸರು ಪ್ರೇಮ. ಅವರ ಪ್ರೇಮಮಯಿ ವ್ಯಕ್ತಿತ್ವಕ್ಕೆ ಹೆಸರು ಅನ್ವರ್ಥದಂತಿತ್ತು. ಅವರು ಒಂದು ದಿನ ಕರೆದು ಅಂತರ್ ಶಾಲೆ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಆಜ್ಞಾಪಿಸಿದರು. ಕ್ಲಾಸಿನಲ್ಲಿ ಅತ್ಯಂತ ಪೋಕರಿ ಹುಡುಗನಾಗಿದ್ದ ನನ್ನ ಬಗ್ಗೆ ಆಗಲೇ ಹಲವಾರು ಬಾರಿ ತಂದೆಗೆ ದೂರು ನೀಡಿದ್ದ ಟೀಚರ್ ಈ ಸ್ಪರ್ಧೆಗೆ ನನ್ನನ್ನೇ ಯಾಕೆ ಆಯ್ಕೆ ಮಾಡಿದರೆಂದು ಆಗಿನ ನನ್ನ ಬಾಲಮನಸ್ಸಿಗೆ ಅರ್ಥವಾಗಿರಲಿಲ್ಲ. ತುಂಟ ಹುಡುಗರ ಬಗ್ಗೆ ಗುರುಗಳಿಗೇಕೆ ಇಷ್ಟೊಂದು ಪ್ರೀತಿ ಎನ್ನುವುದು ಹತ್ತನೆ ತರಗತಿ ವರೆಗೂ ನನಗೆ ಗೊತ್ತಿರಲಿಲ್ಲ.

ಟೀಚರ್ ಹೇಳಿದಾಗ ನಾನು ಒಪ್ಪಿಕೊಂಡರೂ ದಿನದ ಕ್ಲಾಸ್ ಮುಗಿದ ನಂತರ ಪ್ರಾಕ್ಟೀಸ್ ಗಾಗಿ ಒಂದು ಗಂಟೆ ನಿಲ್ಲಬೇಕಾಗುತ್ತದೆ ಎಂದಾಗ ಕೂಡಲೇ ನಾನು ಒಲ್ಲೆ ಎಂದೆ. ಯಾಕೆ? ಎಂದು ಕೇಳಿದರು. “ಶಾಲೆ ಬಿಡುವಾಗ ಹಸಿವಾಗುತ್ತದೆ, ಮನೆಗೆ ಹೋಗಿ ಊಟ ಮಾಡಬೇಕು” ಎಂದೆ.. ನಮ್ಮ ತರಗತಿ ಬೆಳಿಗ್ಗೆ ಏಳರಿಂದ ಮಧ್ಯಾಹ್ನ ಒಂದುಗಂಟೆ ವರೆಗೆ ನಡೆಯುತ್ತಿತ್ತು. ಅದಕ್ಕೆ ಪರಿಹಾರವನ್ನು ಅವರು ಕೈಯಲ್ಲಿ ಹಿಡಿದುಕೊಂಡೇ ಬಂದಿದ್ದರು.
ಸರಿಯಾಗಿ ಕೇಳಿಸಿಕೊಳ್ಳಿ, ಸುಮಾರು 50 ವರ್ಷಗಳ ಹಿಂದೆ ಮುಂಬೈನಲ್ಲಿ ಸರ್ಕಾರದ ‘ಕ್ಷೀರಭಾಗ್ಯ’ ಯೋಜನೆ ಇತ್ತು. ಪ್ರತಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಬೆಳಿಗ್ಗೆ ಒಂದು ಬಾಟಲಿ ಹಾಲು ಮತ್ತು ನೆಲಗಡಲೆ ಬೀಜದ ಒಂದು ಪೊಟ್ಟಣ ಕೊಡುತ್ತಿದ್ದರು. ಆ ಹಾಲಿನ ಕೆನೆ ಎಷ್ಟೊಂದು ದಪ್ಪ ಇರುತ್ತಿತ್ತೆಂದರೆ ಮೇಲಿನ ಮುಚ್ಚಳ ತೆಗೆದು ಬಾಟಲಿ ತಲೆಕೆಳಗೆ ಮಾಡಿದರೂ ಹಾಲು ಕೆಳಗೆ ಬೀಳುತ್ತಿರಲಿಲ್ಲ. ಎಲ್ಲ ಮಕ್ಕಳಂತೆ ಹಾಲು ನನಗೆ ಇಷ್ಟ ಇಲ್ಲದಿದ್ದರೂ ನೆಲಗಡಲೆ ಪೊಟ್ಟಣಕ್ಕಾಗಿ ನಿತ್ಯನಾನು ಜಗಳವಾಡುತ್ತಿದ್ದೆ. ಮುಂಬೈನ ಕೆಂಪು ಸಿಪ್ಪೆಯ ವಸಾಯ್ ಬಾಳೆ ಹಣ್ಣು ಬಗ್ಗೆ ಕೂಡಾ ನನಗೆ ಅಷ್ಟೇ ಪ್ರೀತಿ. ಈ ಆಸೆಯಿಂದಾಗಿ ಪ್ರೇಮ ಟೀಚರ್ ತನ್ನ ಚಪಾತಿ ಜತೆ ತರುತ್ತಿದ್ದ ಬಾಳೆಹಣ್ಣನ್ನು ಆಗಾಗ ನಾನು ಕದಿಯುತ್ತಿದ್ದೆ. ಅದನ್ನು ಗಮನಿಸದಂತೆ ಇದ್ದ ಪ್ರೇಮ ಟೀಚರ್ ಒಂದರ ಬದಲಿಗೆ ಎರಡು ಬಾಳೆ ಹಣ್ಣು ತರಲು ಶುರುಮಾಡಿದ್ದರು. ಅದರಲ್ಲಿ ನಾನು ಒಂದು ಕದಿಯುತ್ತಿದ್ದೆ. ಅವರು ಗೊತ್ತಿಲ್ಲದಂತೆ ಇರುತ್ತಿದ್ದರು.
ಭಾಷಣ ಸ್ಪರ್ಧೆಗೆ ಒಲ್ಲೆ ಎಂದಾಗ ತಕ್ಷಣ ಪ್ರೇಮ ಟೀಚರ್ ಡಬ್ಬಲ್ ಆಮಿಷ ಒಡ್ಡಿದರು. ‘ನಿನಗೆ ಒಂದು ನೆಲಗಡಲೆ ಬೀಜದ ಪೊಟ್ಟಣ ಮತ್ತು ವಸಾಯಿ ಬಾಳೆ ಹಣ್ಣು ಕೊಡ್ತೇನೆ, ಬರ್ತಿಯಾ? ಎಂದು ಕೇಳಿದರು. ನಾನು ಒಪ್ಪಿಕೊಂಡೆ. ಅವರೇ ಭಾಷಣ ಬರೆದು ಕೊಟ್ಟರು. ಅದು ‘ನಾನು ನೋಡಿದ ಜಾದುಗಾರನ ಆಟ’ ಎಂಬ ವಿಷಯ. ಆ ಕಾಲದಲ್ಲಿ ಮುಂಬೈನ ಬೀದಿಬೀದಿಗಳಲ್ಲಿ ಇದು ನಡೆಯುತ್ತಿತ್ತು. ಎರಡು ಗಳಗಳ ನಡುವಿನ ಹಗ್ಗದಲ್ಲಿ ಸಣ್ಣಹುಡುಗಿನಡೆದಾಡಿಕೊಂಡು ಹೋಗುವುದು, ಬುಟ್ಟಿಯೊಳಗಿನ ಹಾವು ಮಾಯ ಮಾಡುವುದು..ಇತ್ಯಾದಿ. ಇದನ್ನೆಲ್ಲ ಸೇರಿಸಿ ಭಾಷಣ ಬರೆದುಕೊಟ್ಟರು.
ಮೊದಲು ಭಾಷಣವನ್ನು ಬಾಯಿಪಾಠ ಮಾಡಿಸಿ, ನಂತರ ಸ್ಟಾಪ್ ರೂಮಿನ ಆಳೆತ್ತರದ ಕನ್ನಡಿ ಮುಂದೆ ನಿಲ್ಲಿಸಿ ಭಾಷಣ ಮಾಡುವಂತೆ ಹೇಳುತ್ತಿದ್ದರು. ಕನ್ನಡಿ ಎದುರು ಭಾಷಣಮಾಡಿದರೆ ಸಭಾ ಕಂಪನ ಓಡಿಹೋಗುತ್ತದೆ ಎಂದು ನನಗೆ ಆಗಲೇ ಗೊತ್ತಾಗಿದ್ದು. ಕೆಲವು ದಿನಗಳ ಪ್ರಾಕ್ಟೀಸ್ ನಂತರ ಭಾಷಣ ಸ್ಪರ್ಧೆ ನಡೆಯಲಿರುವ ವಡಾಲದಲ್ಲಿನ ಶಾಲೆಗೆ ಪ್ರೇಮ ಟೀಚರ್ ಅವರೇ ಮನೆಬಳಿ ಬಂದು ಕರೆದುಕೊಂಡು ಹೋದರು. ರೈಲಿನಲ್ಲಿ ಪ್ರಯಾಣಿಸುವಾಗಲೂ ಅವರು ನನ್ನನ್ನು ಭಾಷಣ ಉರುಹೊಡೆಸುತ್ತಿದ್ದರು. 
ಆ ಸ್ಪರ್ಧೆಯಲ್ಲಿ ನನಗೆ ಮೊದಲ ಬಹುಮಾನ ಬಂತು. ಅದು ಹತ್ತುರೂಪಾಯಿಗಳ ನಗದು. ಆ ಲಕೋಟೆಯನ್ನು ಕಿಸೆಗೆ ಹಾಕಿ ಮತ್ತೆ ನನ್ನನ್ನು ಮನೆಬಳಿಬಿಟ್ಟುಹೋದರು. ಹೋಗುವಾಗ ಹತ್ತಿರ ಕರೆದು ಬರಸೆಳೆದು ಅಪ್ಪಿ ಹಣೆಗೆ ಮುತ್ತಿಟ್ಟರು. ಕೆಲವು ದಿನಗಳ ಹಿಂದೆ ನನ್ನ ತುಂಟಾಟಕ್ಕಾಗಿ ಮನೆಗೆ ದೂರು ನೀಡಿದ್ದ ಈ ಟೀಚರ್ ಯಾಕೆ ಇಷ್ಟು ಪ್ರೀತಿ ತೋರಿಸುತ್ತಿದ್ದಾರೆ ಎಂದು ತಿಳಿಯದೆ ನಾನು ಗಲಿಬಿಲಿಗೊಂಡಿದ್ದೆ.
ಮುಂಬೈ ತೊರೆದುಬಂದ 25 ವರ್ಷಗಳ ನಂತರ ಮುಂಗಾರು ಪತ್ರಿಕೆಯ ವರದಿಗಾಗಿ ಮತ್ತೆ ಅಲ್ಲಿಗೆ ಹೋಗಿದ್ದಾಗ ಆ ಟೀಚರ್ ಗಾಗಿ ಹುಡುಕಾಡಿ ಬಹಳ ಅಲೆದಾಡಿದ್ದೆ. ಮುನ್ಸಿಪಾಲಿಟಿ ಶಾಲೆ ಮುಚ್ಚಿತ್ತು. ಅವರ ಬಗ್ಗೆ ತಿಳಿಸುವವರು ಯಾರೂ ಇರಲಿಲ್ಲ. ನನಗೆ ಟೀಚರ್ ಆಗಿದ್ದಾಗಲೇ ಐವತ್ತರ ಆಜುಬಾಜಿನಲ್ಲಿದ್ದ ಅವರು ಜೀವಂತವಾಗಿರುವ ಸಾಧ್ಯತೆಯೇ ಇಲ್ಲವಾದರೂ ಈಗಲೂ ಮುಂಬೈನ ಬಜಾರ್ ಸ್ಟ್ರೀಟ್ ನಲ್ಲಿ ಓಡಾಡುವಾಗ ನನ್ನಕಣ್ಣುಗಳು ಪ್ರೇಮ ಟೀಚರ್ ಅವರನ್ನು ಅರಸುತ್ತಿರುತ್ತವೆ. ಯಾರಾದರೂ ಈಗಲೂ ‘ದೇವತೆ’ ಅಂದಾಕ್ಷಣ ಚಿನ್ನದ ಬಾರ್ಡರ್ ನ ಬಿಳಿ ಸೀರೆ ಉಟ್ಟ, ಕನ್ನಡಕ ಹಾಕಿಕೊಂಡ ಕುಳ್ಳಗಿನ ನನ್ನ ಪ್ರೇಮ ಟೀಚರ್ ನೆನಪಾಗಿ ನನಗರಿವಿಲ್ಲದಂತೆ ತಲೆ ಬಾಗುತ್ತದೆ. ಕಣ್ಣು ತೇವವಾಗುತ್ತದೆ.

Friday, September 2, 2016

ಭಾಗ್ವತ್ ಅವರಿಗೆ ಅಭಿನಂದನೆಗಳು, ಜತೆಗೊಂದಿಷ್ಟು ಪ್ರಶ್ನೆಗಳು

ಇದು ನಾನು ಪ್ರಜಾವಾಣಿಯ ‘ದೆಹಲಿನೋಟ’ ಅಂಕಣದಲ್ಲಿ 23, ಮಾರ್ಚ್ 2009 ರಲ್ಲಿ ಬರೆದುದು. (ಮೋಹನ್ ಭಾಗವತ್ ಅವರು ಆರ್ ಎಸ್ ಎಸ್ ನ ನೂತನ ಸರಸಂಘಚಾಲಕರಾಗಿ ನೇಮಕಗೊಂಡ ಸಂದರ್ಭದಲ್ಲಿ) ಆರ್ ಎಸ್ ಎಸ್ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಇದರ ಓದು ಪ್ರಸ್ತುತ ಅನಿಸಿತು.
(ಭಕ್ತರು ಯಾಕೆ ನನ್ನನ್ನು ದ್ವೇಷಿಸುತ್ತಿದ್ದಾರೆ ಎನ್ನುವುದು ಗೊತ್ತಾಗಲಿ ಎನ್ನುವ ಒಳಉದ್ದೇಶವೂ ಹಳೆಯ ಅಂಕಣವನ್ನು ಹಂಚಿಕೊಳ್ಳುವುದರ ಹಿಂದೆ ಇದೆ ಎನ್ನುವುದನ್ನು ಒಪ್ಪಿಕೊಳ್ಳದಿದ್ದರೆ ಆತ್ಮವಂಚಕನಾಗುತ್ತೇನೆ)
ಭಾಗ್ವತ್ ಅವರಿಗೆ ಅಭಿನಂದನೆಗಳು, ಜತೆಗೊಂದಿಷ್ಟು ಪ್ರಶ್ನೆಗಳು
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂತನ ಸರಸಂಘಸಂಚಾಲಕರಾಗಿ ನೇಮಕಗೊಂಡ ಮೋಹನ್ ಮಧುಕರ್ ರಾವ್ ಭಾಗ್ವತ್ ಅವರಿಗೆ ಅಭಿನಂದನೆಗಳು.
ಹಿಂದೂಗಳೆಲ್ಲಾ ಒಂದೇ ಎನ್ನುವ ನಿಮ್ಮ ನಿಲುವು ಪ್ರಾಮಾಣಿಕವಾದುದೆಂದು ನಂಬಿರುವವರು ನಾವು. ಇದರಿಂದಾಗಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಕುಪ್ಪಹಳ್ಳಿಯರಾದ ಕೆ.ಎಸ್. ಸುದರ್ಶನ್ ಅವರನ್ನು ಪದಚ್ಯುತಿಗೊಳಿಸಿ ನೀವು ಆ ಸ್ಥಾನಕ್ಕೆ ಬಂದಿದ್ದೀರಿ ಎನ್ನುವ ಕಾರಣಕ್ಕೆ ನಿಮ್ಮ ಬಗ್ಗೆ ಕನ್ನಡಿಗರು ಆಗಿರುವ ನಮಗೇನೂ ದ್ವೇಷ ಇಲ್ಲ.
ಪೊದೆಮೀಸೆಯಿಂದ ಮಾತ್ರವಲ್ಲ ರೂಪದಲ್ಲಿ ಕೂಡ ಹೋಲಿಕೆ ಇರುವುದರಿಂದ ಸಂಘದ ಸ್ಥಾಪಕ ಕೇಶವರಾವ್ ಬಲಿರಾಮ್ ಹೆಡ್ಗೆವಾರ್ ಅವರಿಗೆ ನಿಮ್ಮನ್ನು ಹೋಲಿಸಲಾಗುತ್ತಿದೆ. ಸೈದ್ದಾಂತಿಕವಾಗಿಯೂ ನೀವು ಹೆಡ್ಗೆವಾರ್ ಅವರಿಗೆ ಸಮೀಪದವರೆಂಬ ಅಭಿಪ್ರಾಯ ಸಂಘದೊಳಗೆ ಇದೆ. ನಿಮ್ಮ ಪೂರ್ವಾಧಿಕಾರಿಗಳಾದ ಕೆ.ಎಸ್. ಸುದರ್ಶನ್, ಬಾಳಾಸಾಬ ದೇವರಸ್ ಮತ್ತು ರಜ್ಜು ಭಯ್ಯಾ ಸಂಘಕ್ಕೆ ಹೆಚ್ಚಿನ ‘ರಾಜಕೀಯ ಪಾತ್ರ’ ಬೇಕೆಂದು ಕೇಳುತ್ತಿದ್ದರಂತೆ. ಆದರೆ, ನೀವು ಮಾತ್ರ ಹೆಡ್ಗೆವಾರ್ ಅವರಂತೆ ರಾಜಕೀಯ ಜಂಜಾಟದಲ್ಲಿ ಸಂಘ ಸಿಗದೆ, ‘ಚಾರಿತ್ರ್ಯ ನಿರ್ಮಾಣ’ದ ಚಟವಟಿಕೆಗಳಲ್ಲಿ ತೊಡಗಬೇಕೆಂದು ಪ್ರತಿಪಾದಿಸುತ್ತಾ ಬಂದಿದ್ದೀರಿ. ಹೀಗಾಗಿಯೇ ನಿಮ್ಮ ಬಗ್ಗೆ ನಮಗೆ ವಿಶೇಷ ಗೌರವ. ಜೊತೆಯಲ್ಲಿ ಕೆಲವು ಪ್ರಶ್ನೆಗಳು.
೧. ಮೂಲಭೂತವಾಗಿ ಆರ್.ಎಸ್.ಎಸ್. ಎನ್ನುವುದು ಏನು? ಅದೊಂದು ಸಾಂಸ್ಕೃತಿಕ ಸಂಘಟನೆಯೇ? ಸಾಮಾಜಿಕ ಸೇವಾ ಸಂಸ್ಥೆಯೇ? ಸಾರ್ವಜನಿಕ ದತ್ತಿಯೇ? ಗುಪ್ತ ರಾಜಕೀಯ ಉದ್ದೇಶ ಹೊಂದಿರುವ ಕಾರ್ಯಕರ್ತರ ಕೂಟವೇ? ಇಲ್ಲವೇ, ಕೇವಲ ಹಿಂದೂ ಸಂಘಟನೆಯೇ. ೬೦ ವರ್ಷಗಳ ಹಿಂದೆ ಈ ಗೊಂದಲ ಮೂಡಿದ್ದರೆ ಅದು ಸಹಜ ಎನ್ನಬಹುದಿತ್ತು. ಆಗಿನ್ನೂ ನಿಮಗೊಂದು ಲಿಖಿತ ಸಂವಿಧಾನವೇ ಇರಲಿಲ್ಲ. ಆದರೆ, ಸಂಘಕ್ಕೊಂದು ಲಿಖಿತ ಸಂವಿಧಾನ ಸಿಕ್ಕ ನಂತರವೂ ಈ ಗೊಂದಲ ಬಗೆಹರಿದಿಲ್ಲ. ಸಂವಿಧಾನ ಮತ್ತು ನಿಮ್ಮ ಕಾರ್ಯಕರ್ತರ ಬಹಿರಂಗ ಹೇಳಿಕೆ-ನಡವಳಿಕೆಗಳಲ್ಲಿನ ವಿರೋಧಾಭಾಸಗಳೇ ಇದಕ್ಕೆ ಕಾರಣ. ಸಂಘಕ್ಕೆ ರಾಜಕೀಯ ಉದ್ದೇಶವಿಲ್ಲ. ಇದು ಶುದ್ಧವಾಗಿ ಸಾಂಸ್ಕೃತಿಕ ಚಟವಟಿಕೆಗಳಿಗೆ ಬದ್ಧವಾದ ಸಂಸ್ಥೆ ಎಂದು ಹೇಳುವ ನಿಮ್ಮ ಸಂವಿಧಾನ (ಪರಿಚ್ಛೇದ ೪) ಮುಂದುವರೆಯುತ್ತಾ, ...‘ಸದಸ್ಯರು ರಾಜಕೀಯ ಪಕ್ಷ ಸೇರಲು ಅಭ್ಯಂತರ ಇಲ್ಲ... ಮುಂದೊಂದು ದಿನ ರಾಜಕೀಯ ಪಕ್ಷವಾಗಿ ಪರಿವರ್ತನೆಗೊಳ್ಳಲು ಆರ್.ಎಸ್.ಎಸ್. ಸ್ವತಂತ್ರವಾಗಿದೆ (ಪ್ಯಾರಾ ೧೦ ಮತ್ತು ೧೬) ಎಂಬ ಅಂಶವೂ ಇದರಲ್ಲಿದೆ. ಯಾವುದು ನಿಜ?
೨. ಸಾಂಸ್ಕೃತಿಕ ಸಂಘಟನೆಯಾಗಿದ್ದರೂ, ರಾಜಕೀಯ ಉದ್ದೇಶವನ್ನು ಪರೋಕ್ಷವಾಗಿ ವ್ಯಕ್ತಪಡಿಸಿರುವ ಸಂಘ ಇನ್ನೊಂದೆಡೆ ‘ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಬದ್ಧತೆಯನ್ನು ಸಾರುತ್ತದೆ’. ಆರ್.ಎಸ್.ಎಸ್. ಎನ್ನುವುದು ಸಾರ್ವಜನಿಕ ದತ್ತಿಯಾಗಿರುವುದರಿಂದ ಇದನ್ನು ಬಾಂಬೆ ದತ್ತಿ ಕಾಯ್ದೆಯಡಿ ನೊಂದಣೆ ಮಾಡಬೇಕೆಂದು ಜಂಟಿ ದತ್ತಿ ಆಯುಕ್ತರು ಹಿಂದೊಮ್ಮೆ ಸಂಘಕ್ಕೆ ನೋಟಿಸ್ ನೀಡಿದ್ದು ನಿಮಗೆ ನೆನಪಿರಬಹುದು. ಅದಕ್ಕೆ ಸಂಘದ ಆಗಿನ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಮತ್ತು ದೇವರಸ್ ಅವರ ಕಿರಿಯ ತಮ್ಮ ಭಾವುರಾವ್, ನಾಗ್ಪುರ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ’ನಮ್ಮದು ಧಾರ್ಮಿಕ ಇಲ್ಲವೇ, ಸಾರ್ವಜನಿಕ ದತ್ತಿ ಸಂಸ್ಥೆಯಲ್ಲ’. ಭರತವರ್ಷದಲ್ಲಿರುವವರೆಲ್ಲರನ್ನೂ ಸಾಂಸ್ಕೃತಿಕವಾಗಿ ಸಂಘಟಿಸುವ ಮೂಲಕ ಹಿಂದೂ ರಾಷ್ಟ್ರ ನಿರ್ಮಿಸುವುದು ನಮ್ಮ ಉದ್ದೇಶ ಎಂದು ಆ ಅರ್ಜಿಯಲ್ಲಿ ಹೇಳಲಾಗಿದೆ.
ಈ ಹಿಂದೂ ರಾಷ್ಟ್ರ ಎಂದರೆ ಏನು? ಈ ಪ್ರಶ್ನೆಗೆ ಸಂಘದ ಎರಡನೇ ಸರಸಂಘಸಂಚಾಲಕರಾಗಿದ್ದ ‘ಗುರೂಜಿ’ ಎಂದೇ ಪ್ರಸಿದ್ಧರಾಗಿರುವ ಮಾದವ ಸದಾಶಿವ ಗೋಲ್ವಾಲ್ವಕರ್ ಬರೆದಿರುವ we or Our Nationhood defined ಎಂಬ ವಿವಾದಾತ್ಮಕ ಪುಸ್ತಕದಲ್ಲಿ ಉತ್ತರ ನೀಡಿದ್ದರು. ‘ಭೂಗೋಳ, ಜನಾಂಗ, ಧರ್ಮ, ಸಂಸ್ಕೃತಿ ಮತ್ತು ಭಾಷೆಯ ಮೂಲಕ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ, ಆ ಪುಸ್ತಕದ ಜೊತೆ ತಮಗೆ ಸಂಬಂಧವೇ ಇಲ್ಲವೆಂದು ಆರ್.ಎಸ್.ಎಸ್. ಬಹಿರಂಗವಾಗಿ ಹೇಳಿಕೆ ನೀಡಿತ್ತು. ಮೂರುವರ್ಷಗಳ ಹಿಂದೆ ಪ್ರಕಟವಾದ ಗುರೂಜಿ ಬರಹಗಳ ಹನ್ನೆರಡು ಸಂಪುಟಗಳಲ್ಲಿಯೂ ಈ ಪುಸ್ತಕ ಸೇರಿರಲಿಲ್ಲ. ಆದ್ದರಿಂದ ಹಿಂದೂ ರಾಷ್ಟ್ರ ಕುರಿತ ಗುರೂಜಿ ಅಭಿಪ್ರಾಯ ನಿಮ್ಮದೆಂದು ಹೇಗೆ ಒಪ್ಪಿಕೊಳ್ಳುವುದು? ಹಾಗಿದ್ದರೆ, ನಿಮ್ಮ ಕಲ್ಪನೆಯ ಹಿಂದೂ ರಾಷ್ಟ್ರ ಯಾವುದು?
ಭರತವರ್ಷದಲ್ಲಿರುವವರೆಲ್ಲರೂ ಹಿಂದೂಗಳೆನ್ನುವುದು ನಿಮ್ಮ ಅಭಿಪ್ರಾಯವಾಗಿದ್ದರೆ, ಇಲ್ಲಿರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಪಾರ್ಸಿಗಳೆಲ್ಲರೂ ಆ ವರ್ಗದಲ್ಲಿ ಸೇರಿದ್ದಾರೆಯೇ? ಅವರೆಲ್ಲರೂ ಸೇರಿದ್ದಾರೆ ಎನ್ನುವುದಾಗಿದ್ದರೆ, ಸದಸ್ಯತ್ವನ್ನು ಕೇವಲ ಹಿಂದೂ ಪುರುಷರಿಗಷ್ಟೇ ಸೀಮಿತಗೊಳಿಸಿರುವ ನಿಮ್ಮ ಸಂಘದ ಸಂವಿಧಾನ ಇದಕ್ಕೆ ಅಡ್ಡಿಯಾಗುವುದಿಲ್ಲವೇ?
೩. ಇಂತಹ ಸಂಕೀರ್ಣ ಪ್ರಶ್ನೆಗಳನ್ನು ಸಧ್ಯಕ್ಕೆ ಪಕ್ಕಕ್ಕಿಟ್ಟು, ಕೆಲವು ಸರಳ ಪ್ರಶ್ನೆಗಳತ್ತ ಗಮನಹರಿಸುವ. ಅಲ್ಪಸಂಖ್ಯಾತ ಕೋಮಿನ ಜನರನ್ನು ಒತ್ತಟ್ಟಿಗಿಟ್ಟಾದರೂ ನಿಮ್ಮ ಕಲ್ಪನೆಯಲ್ಲಿರುವ ‘ಹಿಂದೂ’ಗಳು ಯಾರೆಂದು ಸ್ಪಷ್ಟಪಡಿಸಲು ಸಾಧ್ಯವೇ? ಹಿಂದೂಗಳಲ್ಲಿಯೂ ಥರಾವರಿ ಜನರಿದ್ದಾರೆ. ಸಸ್ಯಹಾರಿಗಳಿದ್ದಾರೆ. ಮಾಂಸಹಾರಿಗಳಿದ್ದಾರೆ. ಮಾಂಸಹಾರಿಗಳಲ್ಲಿ ಕುರಿ-ಕೋಳಿ-ಮೀನು ಮಾತ್ರವಲ್ಲ, ಹಾವು-ಹಲ್ಲಿಗಳನ್ನು ತಿನ್ನುವವರೂ ಇದ್ದಾರೆ. ಅವರ ಆಹಾರ ಪದ್ದತಿಯ ಜತೆಯಲ್ಲಿಯೇ ಅವರನ್ನು ಒಪ್ಪಿಕೊಳ್ಳಲು ಸಾಧ್ಯವೇ? ನಿಮ್ಮ ರಾಷ್ಟ್ರೀಯ ಪದಾಧಿಕಾರಿಗಳಲ್ಲಿಯಾದರೂ ಯಾರಾದರೂ ಮಾಂಸಹಾರಿಗಳು, ಮಾರಮ್ಮ-ಕಾಳಮ್ಮ, ಜುಮಾದಿ, ಪಂಜುರ್ಲಿ ಭಕ್ತರು ಇದ್ದಾರೆಯೇ?
೪. ನಿಮ್ಮ ಕಲ್ಪನೆಯ ಹಿಂದೂ ದೇವರು ಯಾರು? ನಮ್ಮಲ್ಲಿರುವ ಬಹುಸಂಖ್ಯಾತ ದೇವರು ಮಾಂಸಹಾರಿಗಳು. ’ಹಿಂದುತ್ವದ ಪ್ರಯೋಗ ಶಾಲೆ’ ಎಂದೇ ನೀವು ಹೆಮ್ಮೆಯಿಂದ ಹೇಳಿಕೊಳ್ಳುವ ದಕ್ಷಿಣ ಕನ್ನಡದಲ್ಲಿ ರಾಮ, ಕೃಷ್ಣರ ದೇವಸ್ಥಾನಗಳಿಗಿಂತ ಹೆಚ್ಚಾಗಿ ಸಾನ-ಗರಡಿಗಳಿವೆ. ಅಲ್ಲಿರುವ ದೈವಗಳೆಲ್ಲವೂ ಮಾಂಸಹಾರಿಗಳು. ಅವುಗಳಲ್ಲಿ ಕೆಲವು ಮಧ್ಯಪಾನ ಪ್ರಿಯರು ಕೂಡ. ಅವುಗಳನ್ನು ನಿಮ್ಮ ಕಲ್ಪನೆಯ ಹಿಂದುತ್ವ ಒಪ್ಪಿಕೊಳ್ಳುತ್ತದೆಯೇ?
೫. ನಿಮ್ಮದು ಸಾಂಸ್ಕೃತಿಕ ಸಂಘಟನೆಯೆಂದು ಒಪ್ಪಿಕೊಳ್ಳುತ್ತಿದ್ದೀರಿ. ನಿಮ್ಮ ದೃಷ್ಟಿಯ ಸಂಸ್ಕೃತಿ ಯಾವುದು? ಹೆಣ್ಣುಮಕ್ಕಳು ಪಬ್ ಗಳಲ್ಲಿ ಹೋಗಿ ಕುಡಿಯುವುದು, ಉಣ್ಣುವುದು ನಿಮ್ಮ ಸಂಸ್ಕೃತಿ ಅಲ್ಲವೆಂದಾದರೆ, ಅವರ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವ ಮೂಲಕ ಶಿಕ್ಷಿಸಹೊರಡುವುದು ಯಾವ ಸಂಸ್ಕೃತಿ? ಇಂತಹ ‘ಗೂಂಡಾಗಿರಿ ಸಂಸ್ಕೃತಿ’ಗೆ ನಿಮ್ಮ ಬೆಂಬಲ ಇಲ್ಲವೆಂದಾದರೆ, ನಿಮ್ಮ ನಾಯಕರಿಂದ ಅಧಿಕೃತ ಹೇಳಿಕೆಗಳು ಯಾಕೆ ಬರಲಿಲ್ಲ?. ಇಂತಹ ಅಸಭ್ಯ ಸಂಸ್ಕೃತಿಗೆ ಕಾರಣವಾದ ಮದ್ಯಮಾರಾಟವನ್ನೇ ನಿಷೇಧಿಸಲು ನಿಮ್ಮ ನಿಯಂತ್ರಣ ಇರುವ ಸರ್ಕಾರದ ಮೇಲೆ ಯಾಕೆ ಒತ್ತಡ ತರುತ್ತಿಲ್ಲ?. ಹಿಂದೂ ಧರ್ಮದ ಅನಿಷ್ಟ ಪದ್ದತಿಗಳಾದ ಸತಿಪದ್ದತಿ, ಬಾಲ್ಯವಿವಾಹ, ದೇವದಾಸಿ ಪದ್ದತಿ ವಿರುದ್ಧ ನಿಮ್ಮ ಸಂಘಟನೆ ಯಾಕೆ ದನಿ ಎತ್ತುತ್ತಿಲ್ಲ?.
೬. ನಿಮಗೆ ತಿಳಿದಿರುವಂತೆ ಹಿಂದೂ ಧರ್ಮವನ್ನು ಕಾಡುತ್ತಿರುವ ಮಹಾಪಿಡುಗು ಜಾತಿವ್ಯವಸ್ಥೆ. ಇದರ ನಾಶಕ್ಕಾಗಿ ನೀವು ಹಮ್ಮಿಕೊಂಡಿರುವ ಕಾರ್ಯಕ್ರಮಗಳೇನು? ಪ್ರತಿನಿತ್ಯ ದಲಿತರು ಮತ್ತು ಹಿಂದುಳಿದ ಜಾತಿಗಳ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಅವೆಲ್ಲವೂ ಹಿಂದೂಗಳಿಂದಲೇ ನಡೆಯುತ್ತಿವೆ. ಎಂದಾದರೂ ನಿಮ್ಮ ಸಂಘಟನೆಗಳ ಇದರ ವಿರುದ್ಧ ಬೀದಿಗೆ ಇಳಿದು ಕನಿಷ್ಠ ಪ್ರತಿಭಟನೆಯನ್ನಾದರೂ ಮಾಡಿದೆಯೇ? ಮೀಸಲಾತಿ, ಭೂಸುಧಾರಣೆ ಮೊದಲಾದ ಸಾಮಾಜಿಕ ನ್ಯಾಯದ ಪ್ರಶ್ನೆಗಳು ಎದುರಾದಾಗ ಮೌನದ ಚಿಪ್ಪು ಸೇರುತ್ತಿರುವುದು ಯಾಕೆ?.
೭. ಹಿಂದೂಗಳೆಲ್ಲರೂ ಒಂದು ಎನ್ನುತ್ತೀರಿ. ಆದರೆ, ಈಗಲೂ ದೇಶದ ನೂರಾರು ದೇವಸ್ಥಾನಗಳಲ್ಲಿ ಎಲ್ಲಾ ‘ಹಿಂದೂ’ಗಳಿಗೆ ಪ್ರವೇಶವಿಲ್ಲ. ದೇವರು ಮತ್ತು ಭಕ್ತರ ನಡುವೆ ಪೂಜಾರಿಗಳೇಕೆ? ಪೂಜಾರಿಗಳು ಇರುವುದೇ ಆಗಿದ್ದರೆ, ಕೇವಲ ಒಂದು ಜಾತಿಗೆ ಯಾಕೆ ಸೀಮಿತವಾಗಬೇಕು? ದೇವಸ್ಥಾನದಲ್ಲಿ ಪೂಜೆಗೆ, ಆಗಮಶಾಸ್ತ್ರದಲ್ಲಿ ಪರಿಣಿತಿ ಇದ್ದರೆ ಸಾಕು. ಆ ಬಗ್ಗೆ ತರಬೇತಿ ನೀಡುವ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲಾ ಜಾತಿಯವರಿಗೂ ಅಧಿಕಾರ ಯಾಕೆ ನೀಡಬಾರದು?. ನೂರು ವರ್ಷಗಳ ಹಿಂದೆಯೇ ಕೇರಳದಲ್ಲಿ ನಾರಾಯಣ ಗುರುಗಳು ಇದೇ ಉದ್ದೇಶಕ್ಕಾಗಿ ಸ್ಥಾಪಿಸಿದ ‘ಬ್ರಹ್ಮ ಸಂಘ’, ಈ ಕೆಲಸ ಮಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬೇಕಿಲ್ಲವೇ?
೮. ನಿಮ್ಮದು ರಾಜಕೀಯೇತರ ಸಂಸ್ಥೆ ಎಂದು ಹೇಳಿಕೊಳ್ಳುವ ನೀವು ಬಿಜೆಪಿಯ ಆಂತರಿಕ ವ್ಯವಹಾರದಲ್ಲಿ ಇಷ್ಟೊಂದು ಆಸಕ್ತಿ ವಹಿಸುತ್ತಿರುವುದು ಯಾಕೆ? ಬಿಜೆಪಿ ಪದಾಧಿಕಾರಿಗಳಲ್ಲಿ ನಿಮ್ಮದೇ ೨೦೦ ಪೂರ್ಣಾವಧಿ ಕಾರ್ಯಕರ್ತರಾಗಿದ್ದಾರೆ. ಅವರನ್ನು ಎರವಲು ಸೇವೆಯ ಮೂಲಕ ಕಳುಹಿಸಿರುವುದು ಯಾವ ಉದ್ದೇಶದಿಂದ?. ಲಾಲ್ಕೃಷ್ಣ ಅಡ್ವಾಣಿಯವರು ಜಿನ್ನಾ ವಿವಾದದ ಸುಳಿಯಲ್ಲಿ ಸಿಕ್ಕಾಗ ಅವರ ಮನೆಗೆ ತೆರಳಿ ಅವರು ರಾಜೀನಾಮೆ ನೀಡುವಂತೆ ಮಾಡಿ ವಿವಾದಕೆಕ ಮಂಗಳ ಹಾಡಿದವರು ನೀವೇ ಅಲ್ಲವೇ?. ನಂಬಿಕೆಯಲ್ಲಿ ಲಾಲ್ ಕೃಷ್ಣ ಅಡ್ವಾಣಿಯವರಿಗಿಂತಲೂ ಹೆಚ್ಚು ಧರ್ಮಭೀರು ಆಗಿರುವ ಪ್ರಣಬ್ ಮುಖರ್ಜಿ, ಜ್ಯೋತಿಷ್ಯ ಶಾಸ್ತ್ರದ ಮೇಲಿನ ವಿಶ್ವಾಸದಲ್ಲಿ ಮುರುಳಿಮನೋಹರ್ ಜೋಷಿ ಅವರನ್ನೂ ಮೀರಿಸುವ ಎಚ್.ಡಿ. ದೇವೇಗೌಡರು ಹಿಂದೂಗಳಲ್ಲವೇ? ಕೇವಲ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ?
ರಾಮಮಂದಿರ ನಿರ್ಮಾಣ, ಸಂವಿಧಾನದ ೩೭೦ನೇ ಪರಿಚ್ಛೇದದ ರದ್ದತಿ ಮತ್ತು ಸಮಾನ ನಾಗರೀಕ ಸಂಹಿತೆ ಎಂಬ ನಿಮ್ಮದೇ ಕಾರ್ಯಸೂಚಿಯನ್ನು ಅಧಿಕಾರಗಳಿಕೆಗಾಗಿ ಶ್ಯೆತ್ಯಾಗಾರಕ್ಕೆ ಸೇರಿಸಿದ ಬಿಜೆಪಿ, ಅದನ್ನು ಒಪ್ಪದ ಕಾಂಗ್ರೆಸ್, ಕಮ್ಯೂನಿಷ್ಟ್, ಜೆ.ಡಿ.ಎಸ್. ಗಿಂತ ಹೇಗೆ ಭಿನ್ನ?.
೯. ಚಾರಿತ್ರ್ಯ ನಿರ್ಮಾಣದ ನಿಮ್ಮ ಗುರಿ ಸ್ವಾಗತಾರ್ಹ. ಆದರೆ, ರಾಜಕೀಯದಲ್ಲಿನ ಪಕ್ಷಾಂತರದ ಪಿಡುಗು, ಭ್ರಷ್ಟಾಚಾರ, ಅಪರಾಧಿಕರಣದ ಬಗ್ಗೆ ಯಾಕೆ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಲು ನಿಮಗೆ ಸಾಧ್ಯವಾಗುತ್ತಿಲ್ಲ? ನಿಮ್ಮದೇ ಗರಡಿಯಲ್ಲಿ ಬೆಳೆದ ಅರುಣ ಜೇಟ್ಲಿ ಮತ್ತು ಯಾವುದೋ ಟೆಂಟ್ ವಾಲಾ ನಡುವಿನ ಜಗಳದಲ್ಲಿ ಯಾರ ಜೊತೆ ನಿಲ್ಲಬೇಕೆನ್ನುವುದರ ಬಗ್ಗೆ ಕೂಡ ಇನ್ನೊಂದು ಯೋಚನೆ ಮಾಡಬೇಕೆ?
೧೦. ನಿಮ್ಮ ವೈಯಕ್ತಿಕ ಅರ್ಹತೆಗಳ ಬಗ್ಗೆ ನಮಗೆ ಕಿಂಚಿತ್ತೂ ಅನುಮಾನಗಳಿಲ್ಲ. ಆದರೆ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು ನಾವು. ನಾವು ನಂಬಬಯಸುವ ಎಲ್ಲಾ ವ್ಯಕ್ತಿ-ಸಂಸ್ಥೆಗಳು ಆ ನಂಬಿಕೆಗೆ ಬದ್ಧವಾಗಿರಬೇಕೆಂಬ ಬಯಕೆ ನಮ್ಮದು. ಆರ್.ಎಸ್.ಎಸ್. ಹುಟ್ಟಿದಾಗಿನಿಂದ ಈವರೆಗೆ ಚುನಾವಣೆ ನಡೆದೇ ಇಲ್ಲ ಯಾಕೆ?.
ಇತೀ
ಹಿಂದೂಗಳು.

Monday, August 29, 2016

ಕೆಲವರು ನನ್ನನ್ನು ನೋಡುವ ದೃಷ್ಟಿ ಬದಲಾಗಿದೆ. ಅದಕ್ಕೆ ನಾನು ಹೊಣೆಯಲ್ಲ.

‘ದಿನೇಶ್, ನೀವು ಬದಲಾಗಿಬಿಟ್ಟಿದ್ದೀರಿ, ಪ್ರಜಾವಾಣಿಯಲ್ಲಿದ್ದಾಗ ನಾವು ನಿಮ್ಮ ಅಭಿಮಾನಿಗಳು, ಎಷ್ಟು ಚೆನ್ನಾಗಿ ಬರೆಯುತ್ತಿದ್ದೀರಿ. ಆದರೆ ಇತ್ತೀಚೆಗೆ ಯಾಕೋ ನೀವು ಬರೀ ಬಿಜೆಪಿ, ಆರ್ ಎಸ್ ಎಸ್, ಮೋದಿ ವಿರುದ್ಧವೇ ಮಾತನಾಡುತ್ತಿದ್ದೀರಿ, ಬರೆಯುತ್ತಿದ್ದೀರಿ.. ನೀವು ಕಾಂಗ್ರೆಸ್ ವಕ್ತಾರರಂತೆ ವರ್ತಿಸುತ್ತಿದ್ದೀರಿ. ಇದು ಸರಿ ಅಲ್ಲ ’ ಎಂದು ನನ್ನನ್ನು ಸ್ನೇಹಿತನೆಂದು ಹೇಳಿಕೊಳ್ಳುವವರಲ್ಲಿ ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿರುವುದನ್ನು ಕಳೆದ ಮೂರು ವರ್ಷಗಳಲ್ಲಿ ನಾನು ಕೇಳಿದ್ದೇನೆ. . ಮೂರು ದಶಕಗಳ ಕಾಲ ಪತ್ರಿಕಾವೃತ್ತಿಯಲ್ಲಿದ್ದ ನನಗೆ ಓದುಗರ ಋಣ ಇದೆ. ಆದ್ದರಿಂದ ಸಣ್ಣದೊಂದು ಸ್ಪಷ್ಟೀಕರಣ ನೀಡಬೇಕೆಂದು ಬಹಳ ದಿನಗಳಿಂದ ಅನಿಸುತ್ತಿತ್ತು. ಕೆಲವು ಗೆಳೆಯರು ಮುಖಪುಟದಲ್ಲಿ ನನ್ನ ಹಳೆಯ ಮುಖಗಳ (ಪೋಟೋಗಳ) ಅನಾವರಣ ನಡೆಸುತ್ತಿರುವ ಈ ಸಂದರ್ಭ,ಬದಲಾಗದ ನನ್ನೊಳಗಿನ ಆತ್ಮವನ್ನು ಬಿಚ್ಚಿಡಲು ಸರಿಯಾದ ಕಾಲ ಎಂದು ನನಗನಿಸಿದೆ.ನಾನು 1983ರಿಂದಲೇ ಪತ್ರಿಕಾ ವೃತ್ತಿಯಲ್ಲಿದ್ದರೂ ಅಧಿಕೃತವಾಗಿ ಪತ್ರಕರ್ತನಾಗಿದ್ದು 1984ರ ಸೆಪ್ಟೆಂಬರ್ 9ರಂದು. ಅದೇ ದಿನ ಮುಂಗಾರುಪತ್ರಿಕೆ ಬಿಡುಗಡೆಯಾಗಿದ್ದು. ಪತ್ರಿಕೆ ಸೇರುವಾಗಲೂ ವೈಚಾರಿಕವಾಗಿ ನಾನು ಇಂದಿನ ಹಾಗೆ ಇದ್ದರೂ ನನ್ನ ವಿಚಾರಗಳಿಗೆ ಸ್ಪಷ್ಟತೆಯನ್ನು ತಂದುಕೊಟ್ಟಿದ್ದು ಮುಂಗಾರು ಪತ್ರಿಕೆ. ನಾನು ಬದಲಾಗಿದ್ದೇನೆ ಎಂದು ಹೇಳುವವರು ಒಂದೋ ನನ್ನ ಪತ್ರಿಕಾ ಬರವಣಿಗೆಗಳನ್ನು ಮೊದಲಿನಿಂದಲೂ ಓದಿಲ್ಲ ಇಲ್ಲವೆ ಓದಿದ್ದರೂ ಉದ್ದೇಶಪೂರ್ವಕ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ.
ಬಿಜೆಪಿಯನ್ನೂ ಒಳಗೊಂಡ ಸಂಘಪರಿವಾರವನ್ನು ಸೈದ್ಧಾಂತಿಕವಾಗಿ ವೃತ್ತಿಯ ಮೊದಲ ದಿನದಿಂದಲೇ ನಾನು ವಿರೋಧಿಸುತ್ತಾ ಬಂದವನು. ವಾಜಪೇಯಿಯವರ ಅಸಹಾಯಕತೆ ಮತ್ತು ಅಡ್ವಾಣಿಯವರಿಗೆ ಪಕ್ಷದ ಮಟ್ಟದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಅನುಕಂಪದಿಂದ ಬರೆದಿದ್ದರೂ ಬಿಜೆಪಿ ಎನ್ನುವ ಪಕ್ಷವನ್ನು ಎಂದೂ ಸಮರ್ಥಿಸಿ ಬರೆದಿಲ್ಲ.
ಸನ್ಮಾನ್ಯ ನರೇಂದ್ರ ಮೋದಿಯವರ ಬಗ್ಗೆ 2002ರಿಂದ 2013 ರ ವರೆಗೆ ನಾನು ಬರೆದ ಅಂಕಣಗಳು, ಚುನಾವಣಾ ವರದಿಗಳು, ಪ್ರತ್ಯಕ್ಷದರ್ಶಿ ವರದಿಗಳು ನೂರಕ್ಕೂ ಹೆಚ್ಚು ಇರಬಹುದು. ಯಾವುದರಲ್ಲಿಯೂ ನಾನು ಮೋದಿಯವರನ್ನು ಸಮರ್ಥಿಸಿಲ್ಲ. ಗುಜರಾತ್ ಕೋಮುಗಲಭೆಯ ಪ್ರತ್ಯಕ್ಷದರ್ಶಿ ವರದಿಮಾಡಿದ್ದೆ. ಅವೆಲ್ಲವೂ ಮುಖ್ಯಮಂತ್ರಿಯಾಗಿ ಮೋದಿಯವರ ವೈಫಲ್ಯ ಮತ್ತು ಅವರ ಕೋಮುವಾದಿ ಮನಸ್ಸನ್ನು ಬಯಲುಮಾಡಿರುವಂತಹದ್ದು. ಅಲ್ಲಿನ ಅಭಿವೃದ್ಧಿಮಾದರಿ ಎಷ್ಟೊಂದು ಟೊಳ್ಳು ಎನ್ನುವುದನ್ನೂ ಕೂಡಾ ಬರೆದಿದ್ದೆ.
ಆದರೆ ಪತ್ರಕರ್ತನಾಗಿ ನಾನೆಂದೂ ಆತ್ಮವಂಚನೆ ಮಾಡಿಕೊಂಡು ಸುಳ್ಳು ಹೇಳಿಲ್ಲ, ಓದುಗರನ್ನು ತಪ್ಪುದಾರಿಗೆಳೆದಿಲ್ಲ. ಸುದ್ದಿಯ ವಿಷಯದಲ್ಲಿ ಪಕ್ಷಪಾತ ಮಾಡಿಲ್ಲ. ಇದು ನಾನು ಕೆಲಸಮಾಡಿದ ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿನ ಎಬಿವಿಪಿಯ ಹಳೆಯ ಸದಸ್ಯರನ್ನು ಕೇಳಿ ದೃಡಪಡಿಸಿಕೊಳ್ಳಬಹುದು. ಗುಜರಾತ್ ನ ಎರಡು ವಿಧಾನಸಭಾ ಚುನಾವಣೆಗಳು ಮತ್ತು ಒಂದು ಲೋಕಸಭಾ ಚುನಾವಣೆಯ ಸಮೀಕ್ಷೆ ನಡೆಸಿದ್ದೆ. ಆ ಚುನಾವಣೆಗಳಲ್ಲಿ ಮೋದಿಯವರದ್ದೇ ಮೇಲುಗೈ ಎಂದು ಬರೆದಿದ್ದೇನೆ. (ಆಸಕ್ತಿ ಇದ್ದವರು ಪ್ರಜಾವಾಣಿ ಆರ್ಕೈವ್ಸ್ ಗೆ ಹೋಗಿ ಓದಬಹುದು)
ಅಚ್ಚರಿಯ ಸಂಗತಿಯೆಂದರೆ ನಾನು ಆರ್ ಎಸ್ ಎಸ್, ಬಿಜೆಪಿ ಮತ್ತು ನರೇಂದ್ರಮೋದಿಯವರ ಕಟುಟೀಕಾಕಾರನಾಗಿದ್ದರೂ 2012ರ ಜನವರಿ 19ರ ವರೆಗೆ ಯಾವ ಬಿಜೆಪಿ ನಾಯಕರು,ಕಾರ್ಯಕರ್ತರು, ಬೆಂಬಲಿಗರು ನನ್ನನ್ನು ಬಹಿರಂಗವಾಗಿ ಟೀಕಿಸಿರಲಿಲ್ಲ, ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೆ ಯಾರೂ ಬೆದರಿಸಿ ಇಲ್ಲವೇ ಅವಾಚ್ಯವಾಗಿ ಪತ್ರ ಬರೆಯುವುದು, ಪೋನಿನಲ್ಲಿ ಕೆಟ್ಟದಾಗಿ ಬೈಯ್ಯುವುದು, ಸೋಷಿಯಲ್ ಮೀಡಿಯಾದಲ್ಲಿ ಗುದ್ದಿ ಓಡಿಹೋಗುವುದು-ಯಾವುದನ್ನೂ ಮಾಡಿಲ್ಲ.
ಆದರೆ 2012ರ ಜನವರಿ 19ರಂದು ವಿವೇಕಾನಂದರ ಬಗ್ಗೆ ನಾನು ಬರೆದ ಅಂಕಣದ ನಂತರ ಎಲ್ಲವೂ ಬದಲಾಗಿಹೋಯಿತು. ಇವೆಲ್ಲವನ್ನೂ ಪ್ರಾರಂಭಿಸಿದ್ದು, ಪ್ರಚೋದಿಸಿದ್ದು , ಸಂಚನ್ನು ಹೆಣೆದಿದ್ದು ಈಗ ರೇಪಿಸ್ಟ್ ಸ್ವಾಮಿಗಳು, ಕೊಲೆಗಡುಕರನ್ನು ಹುಡುಕಿಕೊಂಡು ಹೋಗಿ ಬೆಂಬಲಿಸುತ್ತಾ ಸುಳ್ಳು ಬೊಗಳುತ್ತಾ ಅಂಡಲೆಯುತ್ತಿರುವ ವಕ್ರಬುದ್ದಿಯ ಸುಳ್ಳುಕೋರ. ಈತನಬೆಂಬಲಕ್ಕೆ ನಿಂತವನು ಈಗ ಮಂಗಳೂರು ಜೈಲಲ್ಲಿದ್ದಾನೆ. ಈ ಕಿಡಿಗೇಡಿ ಜೋಡಿ ಆಗಲೇ ಮೋದಿಬ್ರಿಗೇಡ್ ಹೆಸರಲ್ಲಿ ಯುವಕ-ಯುವತಿಯರ ತಲೆಕೆಡಿಸಿ ಪುಂಡರ ತಂಡವನ್ನು ಕಟ್ಟಿತ್ತು. ಈ ಬ್ರಿಗೇಡಿಗಳು ಆರ್ ಎಸ್ ಎಸ್ ಶಾಖೆಗಳಲ್ಲಿ ತರಬೇತಿಹೊಂದಿದ ಸ್ವಯಂಸೇವಕರೂ ಅಲ್ಲ. ಅವರ ಜತೆಯಲ್ಲಿಯಾದರೂ ಕನಿಷ್ಠ ಒಂದು ಮಾತುಕತೆ-ಚರ್ಚೆ ಸಾಧ್ಯವಿತ್ತು. ಈ ಬ್ರಿಗೇಡಿಗಳ ತಲೆಯಲ್ಲಿ ಇರುವುದು ಸೆಗಣಿ. ಯಾವ ಧರ್ಮ,ಸಂಸ್ಕೃತಿ, ಇತಿಹಾಸದ ಪರಿಚಯವೂ ಇವರಿಗಿಲ್ಲ. ಅಶ್ಲೀಲವಾಗಿ ಬೈಯ್ಯುವುದಷ್ಟೇ ಬಂಡವಾಳ.
ನನ್ನನ್ನು ವಿರೋಧಿಸುತ್ತಿರುವವರ ಗ್ಯಾಂಗ್ ಗೆ ಒಬ್ಬ ಲೀಡರ್ ಇದ್ದಾನೆ. ಈ ಆತ್ಮವಂಚಕ ತಾನು ಪತ್ರಕರ್ತನಾಗಿದ್ದಾಗ, ಅನಂತಕುಮಾರ್, ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರ ಬಗ್ಗೆ ,ಬಿಜೆಪಿ ಬಗ್ಗೆ, ಪೇಜಾವರ ಮಠದ ಸ್ವಾಮಿಗಳ ಬಗ್ಗೆ ಮನಸಾರೆ ಟೀಕಿಸಿ, ನಿಂದಿಸಿ ಬರೆಯುತ್ತಿದ್ದ. ಪುರಾವೆ ಬೇಕಿದ್ದರೆ ಆತನೇ ಪ್ರಕಟಿಸಿದ ಪುಸ್ತಕಗಳು ಎಲ್ಲಾದರೂರದ್ದಿ ಅಂಗಡಿಯಲ್ಲಿ ಸಿಕ್ಕರೆ ಓದಿಕೊಳ್ಳಿ. ಇಷ್ಟೆಲ್ಲಾ ಆರ್ಭಟಿಸಿದ ಈತ ಕೊನೆಗೆ ಪತ್ರಕರ್ತನಾಗಿ ತಾನು ಟೀಕಿಸಿದ್ದ ನಾಯಕರ ಕಾಲಿಗೆ ಬಿದ್ದು ಸಂಸದನಾದ. ಈಗ ನಿರ್ಲಜ್ಜತೆಯಿಂದ ಅವರನ್ನೇ ಹಾಡಿಹೊಗಳುತ್ತಾ ಉಳಿದವರನ್ನು ಕಾಂಗ್ರೆಸ್ ಏಜಂಟರೆಂದು ಘೀಳಿಡುತ್ತಾ ಅಲೆಯುತ್ತಿದ್ದಾನೆ. ನಾನು ಇಂತಹವನಲ್ಲ.
ಹಾಗಿದ್ದರೆ ನೀವು ಕಾಂಗ್ರೆಸ್ ಪಕ್ಷವನ್ನು ಮೊದಲಿನಂತೆ ಟೀಕಿಸುತ್ತಿಲ್ಲವಲ್ಲಾ ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಬಹುದು. ಇಂತಹ ಪ್ರಶ್ನೆ ಕೇಳಿದವರನ್ನು ನಾನು ಗೌರವಿಸುತ್ತೇನೆ. ವೈಯಕ್ತಿಕವಾಗಿ ನಾನು ಬಿಜೆಪಿ ಮತ್ತುಕಾಂಗ್ರೆಸ್ ನಿಂದ ಹೊರತಾದ ತೃತೀಯ ಶಕ್ತಿಯ ಪರವಾಗಿ ಇರುವವನು. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷ ಸೇರಿದಾಗ ವ್ಯಥೆಪಟ್ಟವನು. (ಇದನ್ನು ಆ ಸಂದರ್ಭದಲ್ಲಿ ಬರೆದಿದ್ದೇನೆ ಕೂಡಾ). ಆದರೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ನಾನು ಕಾಂಗ್ರೆಸ್ ಪರವಾಗಿಯೇ ನಿಂತವನು. ನರೇಂದ್ರಮೋದಿ ಮತ್ತು ಸೋನಿಯಾಗಾಂಧಿ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ಸೋನಿಯಾಗಾಂಧಿ ಪರವಾಗಿ ಈಗಲೂ ನಿಲ್ಲುವವನು. ಸಿದ್ದರಾಮಯ್ಯ ಮತ್ತು ಬಿಜೆಪಿಯ ನಾಯಕರ ನಡುವಿನ ಆಯ್ಕೆ ಎದುರಾದಾಗ ಸಿದ್ದರಾಮಯ್ಯನವರ ಪರವಾಗಿಯೇ ನಿಲ್ಲುವವನು.
ಬಿಜೆಪಿ ಬಗ್ಗೆ ಯಾಕೆ ವಿರೋಧ ಎಂದು ಕೇಳುವವರಿಗೆ ನನ್ನದೊಂದು ಸರಳ ಉತ್ತರ ಇದೆ. ಇದೊಂದು ಸೈದ್ಧಾಂತಿಕ ಸಂಘರ್ಷ. ಆರ್ ಎಸ್ ಎಸ್ ನಿಯಂತ್ರಣದಿಂದ ಮುಕ್ತಗೊಂಡು ಬಿಜೆಪಿ ಒಂದು ಸಂವಿಧಾನಬದ್ಧ ರಾಜಕೀಯ ಪಕ್ಷವಾಗಿಯೇ ಕಾರ್ಯನಿರ್ವಹಿಸಲು ಶುರುಮಾಡಿದರೆ ಅದನ್ನು ಉಳಿದೆಲ್ಲ ರಾಜಕೀಯ ಪಕ್ಷಗಳ ಜತೆ ನಿಲ್ಲಿಸಿ ಒಳಿತು-ಕೆಡುಕುಗಳನ್ನು ಈಗಲೂ ಚರ್ಚಿಸಲು ನಾನು ಮುಕ್ತಮನಸ್ಸು ಹೊಂದಿದ್ದೇನೆ.
ಇದು ನನ್ನ ಹಿಂದಿನ, ಇಂದಿನ ಮತ್ತು ಮುಂದಿನ ನಿಲುವು. ಇದನ್ನು ಒಪ್ಪದವರೂ ಇರಬಹುದು, ಅವರ ಅಭಿಪ್ರಾಯದ ಬಗ್ಗೆ ನನಗೆ ಗೌರವ ಇದೆ. ಆದರೆ ಪತ್ರಕರ್ತನಾಗಿ ಮೊದಲ ಬಾರಿ ಪೆನ್ನು ಕೈಗೆತ್ತಿಕೊಂಡಾಗ ಸೈದ್ಧಾಂತಿಕವಾಗಿ ನಾನು ಹೇಗಿದ್ದೆನೋ ಈಗಲೂ ಹಾಗೆಯೇ ಇದ್ದೇನೆ. ಕೆಲವರು ನನ್ನನ್ನು ನೋಡುವ ದೃಷ್ಟಿ ಬದಲಾಗಿದೆ. ಅದಕ್ಕೆ ನಾನು ಹೊಣೆಯಲ್ಲ.

Saturday, August 20, 2016

'ಜೀವನದಲ್ಲಿ ಏನಾಗಬೇಕೆಂದಿದ್ದಿ?"

ಹತ್ತನೆಯ ತರಗತಿ ಪಾಸಾದ ಮಗಳನ್ನು ಹತ್ತಿರ ಕರೆದು 'ಜೀವನದಲ್ಲಿ ಏನಾಗಬೇಕೆಂದಿದ್ದಿ?" ಎಂದು ಪ್ರೀತಿಯಿಂದ ಕೇಳಿ. ಅವಳೇನಾಗಬಯಸುತ್ತಾಳೋ ಅದು ಸಾಧ್ಯವಾಗುವಂತೆ ನೋಡಿಕೊಳ್ಳಿ. ಬಂಧುಮಿತ್ರರು, ನೆರೆಹೊರೆಯವರು,ಸಮಾಜ ಯಾರ ಮಾತಿಗೂ ಕಿವಿಗೊಡಬೇಡಿ, ನಿಮ್ಮ ಮಗಳ ಎದೆಯ ದನಿಗೆ ಕಿವಿಗೊಡಿ. ಇದನ್ನೇ ಬೆಳ್ಳಿತಾರೆ ಸಿಂಧುವಿನ ತಂದೆತಾಯಿ ಮಾಡಿದ್ದು. ಸಿಂಧುವಿನ ಮೇಲೆ ಅಭಿನಂದನೆಯ ಮಳೆಗರೆಯುತ್ತಿರುವ ತಂದೆತಾಯಿಗಳೆಲ್ಲ ಇಷ್ಟು ಮಾಡಿದರೆ ಸಾವಿರಾರು ಸಿಂಧುಗಳನ್ನು ಭವಿಷ್ಯದಲ್ಲಿ ನಾವು ಕಾಣಬಹುದು. ಜೈ ಸಿಂಧು.

Friday, August 19, 2016

ಪ್ರಿಯ ಜನಾರ್ದನ ಪೂಜಾರಿಯವರೇ,

ಪ್ರಿಯ ಜನಾರ್ದನ ಪೂಜಾರಿಯವರೇ,
ಇಪ್ಪತ್ತೈದು ವರ್ಷಗಳ ಹಿಂದೆ ನಿಮಗೊಂದು ಪತ್ರ ಬರೆದಿರುವುದು ನಿಮಗೆ ನೆನಪಿದೆಯೋ ಗೊತ್ತಿಲ್ಲ. ನೆನಪಿಲ್ಲದಿದ್ದರೆ ಅದರ ಪ್ರತಿಯನ್ನು ಕಳುಹಿಸಿಕೊಡುತ್ತೇನೆ. ಅದು ನಾರಾಯಣ ಗುರುಗಳು ಕುದ್ರೋಳಿಯಲ್ಲಿ ಸ್ಥಾಪಿಸಿದ್ದ ಗೋಕರ್ಣನಾಥೇಶ್ವರ ದೇವಸ್ಥಾನದ ಜೀರ್ಣೋದ್ದಾರದಲ್ಲಿ ನೀವು ತೊಡಗಿಕೊಂಡಿದ್ದ ಕಾಲ. ಜೀರ್ಣೋದ್ದಾರ ಮಾಡಿದ ದೇವಸ್ಥಾನವನ್ನು ಉದ್ಘಾಟಿಸಲು ಶೃಂಗೇರಿ ಮಠದ ಸ್ವಾಮಿಗಳನ್ನು ಆಹ್ಹಾನಿಸಿರುವುದನ್ನು ನಾನು ವಿರೋಧಿಸಿದ್ದೆ. ವರ್ಣಾಶ್ರಮ ವ್ಯವಸ್ಥೆಯನ್ನು ವಿರೋಧಿಸಿ ನಾರಾಯಣ ಗುರುಗಳು ಸ್ಥಾಪಿಸಿದ್ದ ದೇವಸ್ಥಾನವನ್ನು ವರ್ಣಾಶ್ರಮ ವ್ಯವಸ್ಥೆಯನ್ನು ಈಗಲೂ ಪಾಲಿಸುತ್ತಿರುವ ಸ್ವಾಮೀಜಿಗಳಿಂದ ಹೇಗೆ ಉದ್ಘಾಟನೆಮಾಡಿಸುತ್ತೀರಿ ಎನ್ನುವುದು ನನ್ನ ಸರಳ ಪ್ರಶ್ನೆಯಾಗಿತ್ತು.ನನ್ನ ಯೋಚನೆಯೇ ಬೇರೆಯಾಗಿತ್ತು. ಕುದ್ರೋಳಿ ದೇವಸ್ಥಾನವನ್ನು ನಾರಾಯಣಗುರುಗಳು ಯಾವ ಉದ್ದೇಶದಿಂದ ಸ್ಥಾಪಿಸಿದ್ದರೋ ಆ ಉದ್ದೇಶವನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕೆಂಬುದು ನನ್ನ ಕಿರಿತಲೆಯ ಉದ್ದೇಶವಾಗಿತ್ತು.. ಕುದ್ರೋಳಿ ದೇವಸ್ಥಾನವನ್ನು ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ಸಂಘಟನೆಯ ಕೇಂದ್ರವನ್ನಾಗಿ ಬೆಳೆಸಬೇಕೆಂದು ನಾನು ನಿಮಗೆ ಮತ್ತು ನಿಮ್ಮ ಬೆಂಬಲಿಗರಿಗೆ ಹೇಳಿದ್ದೆ. ಯಾಕೆಂದರೆ ಆಗಲೇ ಕರಾವಳಿಯಲ್ಲಿ ಕೋಮುವಾದದ ವಿಷಸರ್ಪ ಹೆಡೆಬಿಚ್ಚತೊಡಗಿತ್ತು. ಮಂದಿರ-ಮಸೀದಿ-ಚರ್ಚುಗಳನ್ನು ಕಟ್ಟುವ ಮೂಲಕ ಇದನ್ನು ಎದುರಿಸಲು ಆಗುವುದಿಲ್ಲ. ಈ ಸಮುದಾಯಗಳು ಧರ್ಮದ ನಶೆಯೇರಿಸಿಕೊಂಡು ದಾರಿ ತಪ್ಪುವ ಮೊದಲೇ ಅವರಲ್ಲಿ ನಾರಾಯಣ ಗುರುಗಳ ಚಿಂತನೆಯ ಮೂಲಕ ಜಾಗೃತಿ ಹುಟ್ಟಿಸಿ ಸಾಮಾಜಿಕವಾಗಿ ಸಂಘಟಿಸಬೇಕೆಂಬುದು ನನ್ನ ಆಶಯವಾಗಿತ್ತು. ಇದು ನಿಮ್ಮ ರಾಜಕೀಯಕ್ಕೂ ಸಹಾಯವಾಗುತ್ತದೆ ಎಂದು ನಾನು ನಿಮಗೆ ಹೇಳಿದ್ದೆ. ಯಥಾಪ್ರಕಾರ ಹಿತ್ತಾಳೆ ಕಿವಿಯವರೆಂಬ ಆರೋಪ ಹೊತ್ತಿರುವ ನೀವು ಇಂತಹ ಒಳ್ಳೆಯ ಸಲಹೆಗಳಿಗೆ ಕಿವಿಕೊಡಲಿಲ್ಲ. ಇದರ ಪರಿಣಾಮ ನಿಮ್ಮ ಕಣ್ಣಮುಂದಿದೆ.
ಕೋಮುವಾದದ ಹೆಸರಲ್ಲಿ ಕರಾವಳಿಯಲ್ಲಿ ನಿತ್ಯ ರಕ್ತದೋಕುಳಿ ನಡೆಯುತ್ತಿದೆ. ಸಾಯುತ್ತಿರುವವರೆಲ್ಲರೂ ನಿಮ್ಮನ್ನೇ ನಾಯಕರೆಂದು ಹೇಳಿಕೊಳ್ಳುತ್ತಿರುವ ಬಡಬಿಲ್ಲವ ತಂದೆ-ತಾಯಿಗಳ ಮಕ್ಕಳು. ನೀವು ಕೇವಲ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರೆ ಈ ಪತ್ರವನ್ನು ಬರೆಯುತ್ತಿರಲಿಲ್ಲ. ನೀವು ಬಿಲ್ಲವ ಸಮಾಜದ ಪ್ರಶ್ನಾತೀತ ನಾಯಕರು ಕೂಡಾ ಹೌದು. (ಪ್ರಶ್ನಾತೀತರು ಯಾಕೆಂದರೆ ವಯಸ್ಸು ಎಂಬತ್ತಾಗುತ್ತಿದ್ದರೂ ಮತ್ತೊಬ್ಬ ನಾಯಕನನ್ನು ಬಿಲ್ಲವ ಸಮುದಾಯದಲ್ಲಿ ಬೆಳೆಯಲು ನೀವು ಬಿಟ್ಟಿಲ್ಲ)
ಯಾವುದೇ ಸಮಾಜದ ನಾಯಕನೆಂದು ಕರೆಸಿಕೊಂಡ ಮೇಲೆ ಆ ಸಮಾಜವನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಕೂಡಾ ಹೊರಬೇಕಾಗುತ್ತದೆ. ಚುನಾವಣೆಯ ಕಾಲದಲ್ಲಿ ಜಾತಿಯ ಹೆಸರು ಹೇಳಿ ಕಣ್ಣೀರುಹಾಕಿ ಓಟು ಕೇಳುವವನಷ್ಟೇ ನಾಯಕನಲ್ಲ. ಜವಾಬ್ದಾರಿಯ ನಿರ್ವಹಣೆಯಲ್ಲಿ ನೀವು ಸಂಪೂರ್ಣವಾಗಿ ಸೋತಿರುವುದು ಮಾತ್ರವಲ್ಲ ನೀವು ದಾರಿತಪ್ಪಿ, ಸಮಾಜವನ್ನೂ ದಾರಿ ತಪ್ಪಿಸುತ್ತಿದ್ದೀರಿ.
ಉಡುಪಿಯ ಕೆಂಜೂರಿನಲ್ಲಿ ನಡೆದ ಪ್ರವೀಣ್ ಪೂಜಾರಿ ಎಂಬ ಅಮಾಯಕ ಯುವಕನೊಬ್ಬನ ಹತ್ಯೆಯ ಹಿನ್ನೆಲೆಯಲ್ಲಿ ಇದನ್ನೆಲ್ಲ ಹೇಳುತ್ತಿದ್ದೇನೆ., ಕೊಲೆ ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ. ಹತ್ಯೆಯಾದವರು ಮತ್ತು ಹತ್ಯೆಮಾಡಿದವರ್ಯಾರೆಂದು ಜಗಜ್ಜಾಹೀರಾಗಿದೆ. ಈಗಾಗಲೇ ಸಂಘ ಪರಿವಾರದ ವಿರುದ್ಧ ರಾಜ್ಯದ ಜನತೆಯ ಆಕ್ರೋಶ ಮುಗಿಲುಮುಟ್ಟಿದೆ. ಹೀಗಿದ್ದರೂ ರಾಜ್ಯಸರ್ಕಾರ ನೀಡುವ ಅಕ್ಕಿಯಲ್ಲಿ ಒಂದು ಕಲ್ಲು ಕಂಡರೂ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರ್ಭಟಿಸುವ ನೀವು ಕೊಲೆ ನಡೆದು 48 ಗಂಟೆಗಳಾದರೂ ಬಾಯಿ ಬಿಡದಿರುವುದು ಅಚ್ಚರಿ ಉಂಟುಮಾಡಿದೆ..
ಪ್ರವೀಣ್ ಪೂಜಾರಿ ಸಾವಿಗೆ ಸಂಘ ಪರಿವಾರದ ದುರುಳರು ಮಾತ್ರವಲ್ಲ ಸಜ್ಜನ, ಪ್ರಾಮಾಣಿಕ ಇತ್ಯಾದಿ ಬಿರುದಾಂಕಿತ, ಬಿಲ್ಲವ ಸಮಾಜದ ಏಕಮೇವಾದ್ವೀತಿಯ ನಾಯಕರಾದ ನೀವೂ ಕಾರಣ ಎಂದು ವಿಷಾದದಿಂದ ಹೇಳಬೇಕಾಗುತ್ತದೆ.
ಇಂದು ಕರಾವಳಿಯ ಎರಡುಜಿಲ್ಲೆಗಳು ಕೋಮುವಾದದ ಪ್ರಯೋಗಶಾಲೆ ಎಂಬ ಕುಖ್ಯಾತಿಗೆ ಒಳಗಾಗಿದ್ದರೆ ಇದಕ್ಕೆ ಸಂಘ ಪರಿವಾರದ ನಾಯಕರುಮಾತ್ರವಲ್ಲ ನೀವೂ ಕಾರಣ.

ಈ ಜಿಲ್ಲೆಗಳಲ್ಲಿ ಕೋಮುವಾದದ ವಿಷಕಾಲ ಪ್ರಾರಂಭವಾಗಿದ್ದು ಎಂಬತ್ತರ ದಶಕದ ಅಂತ್ಯ ಮತ್ತು ತೊಂಬತ್ತರ ದಶಕದ ಪ್ರಾರಂಭದ ದಿನಗಳಲ್ಲಿ. ಆ ದಿನಗಳಿಂದಲೂ ದಕ್ಷಿಣ ಕನ್ನಡದ ಮಟ್ಟಿಗೆ ನೀವೇ ಕಾಂಗ್ರೆಸ್ ಪಕ್ಷ ಮತ್ತು ಬಿಲ್ಲವ ಸಮುದಾಯದ ನಾಯಕರಾಗಿದ್ದವರು. 1977ರಿಂದ 1989ರ ವರೆಗಿನ ನಾಲ್ಕು ಲೋಕಸಭಾ ಚುನಾವಣೆಗಳನ್ನು ಸತತವಾಗಿ ಗೆದ್ದು ಬೀಗುತ್ತಿದ್ದವರು. ಆದರೆ ಬದಲಾಗುತ್ತಿರುವ ರಾಜಕೀಯವನ್ನು ಗ್ರಹಿಸಲು ನಿಮಗೆ ಸಾಧ್ಯವಾಗಲಿಲ್ಲ. ನಾರಾಯಣ ಗುರುಗಳ ಚಿಂತನೆಯನ್ನು ಅರ್ಥಮಾಡಿಕೊಳ್ಳಲು ಕೂಡಾ ನಿಮಗೆ ಸಾಧ್ಯವಾಗಲಿಲ್ಲ.
ಚುನಾವಣಾ ಕಾಲದಲ್ಲಿ ಮಸೀದಿಗೆ ಹೋಗಿ ಕೈಮುಗಿಯುವುದು, ಎಲ್ಲ ಹಿಂದೂ ದೇವತೆಗಳ ಮೂರ್ತಿ ಸ್ಥಾಪಿಸುವುದು, ಸಂಘ ಪರಿವಾರವನ್ನು ಮೀರಿಸಿದಂತೆ ದಸರಾ ಜಾತ್ರೆ ನಡೆಸುವುದು, ಕಲ್ಲಡ್ಕ ಪ್ರಭಾಕರ ಭಟ್ಟರನ್ನು, ವೀರೇಂದ್ರ ಹೆಗಡೆ ಅವರನ್ನು ಕರೆಸಿ ಶಹಬ್ಬಾಸ್ ಗಿರಿ ಪಡೆಯುವುದು ಈ ಮೂಲಕ ಸಂಘ ಪರಿವಾರವನ್ನು ಎದುರಿಸಿ ಚುನಾವಣೆಯನ್ನು ಗೆಲ್ಲಬಹುದು ಎಂಬುದು ನಿಮ್ಮ ಲೆಕ್ಕಾಚಾರವಾಗಿತ್ತು.
ಇಂತಹ ಮೂರ್ಖತನದ ಮೂಲಕ ನೀವು ಬೆಳೆಸಿದ್ದು ಜಾತ್ಯತೀತತೆಯನ್ನಲ್ಲ, ಕೋಮುವಾದವನ್ನು, ನೆರವಾಗಿದ್ದು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ, ಬಿಜೆಪಿಗೆ. ನೆನೆಪಿಡಿ, 1991ರಲ್ಲಿ ಕುದ್ರೋಳಿಯ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸಿ ಶೃಂಗೇರಿ ಮಠದ ಸ್ವಾಮಿಗಳಿಂದ ಉದ್ಘಾಟನೆ ಮಾಡಿದ ದಿನದಿಂದ ಇಲ್ಲಿಯ ವರೆಗೆ ಒಂದೇ ಒಂದು ಚುನಾವಣೆಯನ್ನು ನೀವು ಗೆಲ್ಲಲಿಲ್ಲ, ಐದು ಚುನಾವಣೆಗಳಲ್ಲಿ ಸೋತುಹೋದಿರಿ. (ವರ-ಶಾಪಗಳಲ್ಲಿ ನನಗೆ ನಂಬಿಕೆ ಇಲ್ಲ. ನಂಬುತ್ತಿದ್ದರೆ ನಿಮ್ಮ ರಾಜಕೀಯ ಅವನತಿಗೆ ನಾರಾಯಣ ಗುರುಗಳ ಚಿಂತನೆಗೆ ನೀವು ಮಾಡಿದ ಅಪಚಾರದ ಶಾಪವೂ ಕಾರಣವೆಂದು ಹೇಳುತ್ತಿದ್ದೆ.) .
ಆದರೆ ಯಾಕೆ ಸೋತುಹೋದೆ ಎನ್ನುವುದು ನಿಮಗಿನ್ನೂ ಅರ್ಥವಾಗಿಲ್ಲ. ನೀವು ದೇವಸ್ಥಾನ ಕಟ್ಟಿ, ಅಲ್ಲಿ ಮೂಲೆಮೂಲೆಗೂ ದೇವರ ಪ್ರತಿಮೆಗಳನ್ನು ಸ್ಥಾಪಿಸಿ, ಇಡೀ ಮಂಗಳೂರು ನಡುಗಿಹೋಗುವಂತೆ ದಸರಾ ಜಾತ್ರೆ ನಡೆಸಿ ನಿಮ್ಮದೇ ಸಮುದಾಯದ ಯುವಕರಲ್ಲಿ ಧಾರ್ಮಿಕ ಉನ್ಮಾದವನ್ನು ಸೃಷ್ಟಿಮಾಡಿಬಿಟ್ಟಿರಿ. ಆದರೆ ಆ ಧಾರ್ಮಿಕ ಉನ್ಮಾದದ ಅಭಿವ್ಯಕ್ತಿಗೆ ನೀವು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷದಲ್ಲಿ ಅವಕಾಶ ಇಲ್ಲ. ಅದು ಜಾತ್ಯತೀತತೆಯನ್ನು ಸಾರುವ ಪಕ್ಷ. ಮತ್ತೆ ಅವರೆಲ್ಲಿಗೆ ಹೋಗಬೇಕು? ಎಲ್ಲಿಗೆ ಹೋಗಬೇಕೋ ಅವರಲ್ಲಿಯೇ ಹೋಗಿದ್ದಾರೆ. ಹಣೆಗೆ ಕುಂಕುಮ ಬಳಿದುಕೊಂಡು ಕೇಸರಿ ಪಟ್ಟಿ ಬಿಗಿದುಕೊಂಡು ಬೀದಿಗಳಲ್ಲಿ ಪರಸ್ಪರ ಹೊಡೆದಾಡಿ ಸಾಯುತ್ತಿದ್ದಾರೆ. ಅವರ ಕೈಗೆ ಧರ್ಮದ ಕತ್ತಿ ಕೊಟ್ಟು ಹೊಡೆದಾಡುವಂತೆ ಮಾಡಿದವರು ತಮ್ಮ ಮಕ್ಕಳನ್ನು ಡಾಕ್ಟರ್ ಎಂಜನಿಯರ್ ಮಾಡಿ ರಾಜಕೀಯದ ಅಧಿಕಾರದ ನೆರಳಲ್ಲಿ ತಮ್ಮ ವ್ಯಾಪಾರಿ ಸಾಮ್ರಾಜ್ಯವನ್ನು ಇನ್ನಷ್ಟು ಬೆಳೆಸಿಕೊಂಡು ಆರಾಮವಾಗಿದ್ದಾರೆ.ಅವರಿಗೆ ಬುದ್ದಿ ಹೇಳಬೇಕಾದ ನೀವು ಅಕ್ಕಿಯಲ್ಲಿ ಕಲ್ಲು ಹುಡುಕುತ್ತಾ ಕೂತಿದ್ದೀರಿ.
ಜನಾರ್ಧನ ಪೂಜಾರಿಯವರೇ, ಈಗ ಹೇಳಿ ಮೊನ್ನೆ ಕೆಂಜೂರಿನಲ್ಲಿ ನಡೆದ ಪ್ರವೀಣ ಪೂಜಾರಿಯ ಹತ್ಯೆಗೆ, ಅದಕ್ಕಿಂತ ಮೊದಲು ಮೂಡಬಿದರೆ ಮತ್ತು ಬಂಟ್ವಾಳದಲ್ಲಿ ನಡೆದ ಹತ್ಯೆಗೆ ಯಾರು ಕಾರಣ ? ಹೌದು, ಕೊಲೆಗೈದವರು ಜೈಲಲ್ಲಿದ್ದಾರೆ. ಆದರೆ ಅಂತಹ ಪರಿಸ್ಥಿತಿಗೆ ಅಮಾಯಕ ಯುವಕರು ಬಲಿಯಾಗುವಂತೆ ಮಾಡಿದವರು ಯಾರು? ನಿಮಗೆ ಆತ್ಮಸಾಕ್ಷಿ ಎನ್ನುವುದು ಇದೆ ಎಂದಾದರೆ ಅದು ನಿಮ್ಮನ್ನೇ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಬಹುದು. ಈ ಆರೋಪದಿಂದ ನೀವು ಮುಕ್ತಿ ಬಯಸುವುದೇ ಆಗಿದ್ದರೆ ದಯವಿಟ್ಟು ನಾರಾಯಣ ಗುರುಗಳ ಚಿಂತನೆಯನ್ನು ಓದಿ ಅದನ್ನು ಕಾರ್ಯಗತಗೊಳಿಸಲು ನಿಮ್ಮ ನಿವೃತ್ತ ಜೀವನವನ್ನು ಬಳಸಿಕೊಳ್ಳಿ. ಅದುನಿಮಗೂ ಒಳ್ಳೆಯದು, ಸಮಾಜಕ್ಕೂ ಒಳ್ಳೆಯದು.

Sunday, July 31, 2016

ನನಗೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ರೋಲ್ ಮಾಡೆಲ್ ಅಂತ ಕೇಳಿದರೆ ಅದು ಬಾಬಾಸಾಹೇಬ್ ಅಂಬೇಡ್ಕರ್.

(ಬೆಂಗಳೂರಿನಲ್ಲಿ ಎಸ್‍.ಸಿ.-ಎಸ್.ಟಿ. ಸಂಪಾದಕರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿನ ಭಾಷಣದ ಬರಹ ರೂಪ)
-ಎನ್. ರವಿಕುಮಾರ್. ಶಿವಮೊಗ್ಗ
ನನಗೆ ಮಾಧ್ಯಮ ಕ್ಷೇತ್ರದಲ್ಲಿ ಯಾರು ರೋಲ್ ಮಾಡೆಲ್ ಅಂತ ಕೇಳಿದರೆ ಅದು ಬಾಬಾಸಾಹೇಬ್ ಅಂಬೇಡ್ಕರ್. ಇದನ್ನು ಬಹಳ ಸಂದರ್ಭಗಳಲ್ಲಿ ಹೇಳಿದ್ದೇನೆ ಮತ್ತೇ ಅದನ್ನೆ ಹೇಳುತ್ತೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ, ದಲಿತರ ನಾಯಕ, ಏನೆಲ್ಲಾ ಹೇಳುತ್ತಾರೆ. ಅದರ ಜೊತೆ ಅವರೊಬ್ಬ ಪತ್ರಕರ್ತರೂ ಆಗಿದ್ದರು ಎಂಬುದನ್ನು ನಾವು ಮರೆತಿದ್ದೇವೆ. ೧೯೨೦ ರಲ್ಲಿ ಮೂಕ ನಾಯಕ ಪತ್ರಿಕೆಯನ್ನು ಅವರು ಪ್ರಾರಂಭ ಮಾಡುತ್ತಾರೆ. ಅದರ ಎಡಿಟೋರಿಯಲ್ ಗಳ ಒಂದು ಪುಸ್ತಕ ಬಂದಿದೆ. ಅದನ್ನು ನಾನೇ ಧಾರವಾಡದಲ್ಲಿ ಬಿಡುಗಡೆ ಮಾಡಿದ್ದೆ. ಗಣೇಶ ಕದಂ ಅವರು ಈ ಪುಸ್ತಕವನ್ನು ಇಂಗ್ಲೀಷ್‍ ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಕನಾಯಕ ಪತ್ರಿಕೆಯ ಎಡಿಟೋರಿಯಲ್ ನ ಘೋಷವಾಕ್ಯ ಹೀಗಿದೆ:  “ ಹೀಗೇಕೆ ನಾನು ಸಂಕೋಚ ಪಡಬೇಕು. ಯಾವುದೇ ಹಿಂಜರಿಕೆಯಿಲ್ಲದೆ ನಾನು ಮಾತನಾಡುವೆ. ಮೂಕರ ನೋವುಗಳನ್ನು ಯಾರೂ ಅರಿಯರು, ಮಾತನಾಡಲು ಸಂಕೋಚ ಪಟ್ಟುಕೊಂಡರೆ ಏಳಿಗೆ ಸಾಧ್ಯವಿಲ್ಲ”. ೧೮೭೩ ರಲ್ಲಿ ಜ್ಯೋತಿ ಬಾಪುಲೆ ಅವರು ಸತ್ಯಶೋಧಕ ಸಮಾಜವನ್ನು ಸ್ಥಾಪನೆ ಮಾಡುತ್ತಾರೆ . ಅದರ ನಂತರ ೧೮೭೭ ರಲ್ಲಿ ಅವರು ’ದೀನಬಂಧು’ ಪತ್ರಿಕೆ ಯನ್ನು ಪ್ರಾರಂಭ ಮಾಡುತ್ತಾರೆ. ದಲಿತ ಪತ್ರಿಕೋದ್ಯಮದ ಇತಿಹಾಸ ಅಲ್ಲಿಂದ ಇದು ಪ್ರಾರಂಭವಾಗುತ್ತದೆ ಎಂಬ ಕಾರಣಕ್ಕಾಗಿ ಇದನ್ನು ನೆನೆಪಿಸಿಕೊಳ್ಳುತ್ತೇನೆ. ಅದರ ನಂತರ ಶಿವರಾಂ ಜನಾಬ್ ಕಾಂಬ್ಳೆ ’ಸೋಮವಂಶಕ್ಷತ್ರೀಯ’ ಪತ್ರಿಕೆಯನ್ನು ಪ್ರಾರಂಭ ಮಾಡ್ತಾರೆ.
            ೧೯೧೬ ಕೊಲಂಬಿಯಾ ವಿಶ್ವವಿದ್ಯಾನಿಲಯ, ಲಂಡನ್ ಸ್ಕೂಲ್ ಆಫ್ ಏಕಾನಮಿಕ್ಸ್ನಲ್ಲಿ ವ್ಯಾಸಂಗ ಮುಗಿಸಿ ಅಂಬೇಡ್ಕರ್ ಅವರು ವಾಪಾಸ್ ಬಂದ ಮೇಲೆ ’ಮೂಕನಾಯಕ’ ಪತ್ರಿಕೆ ಪ್ರಾರಂಭ ಮಾಡುತ್ತಾರೆ. ದಲಿತರ ಬೆಳವಣಿಗೆಯ ಪ್ರಕ್ರಿಯೆಗೆ ಅನುಗುಣವಾಗಿ ಅಂಬೇಡ್ಕರ್ ಪ್ರಾರಂಭಿಸಿದ ಪತ್ರಿಕೆಗಳ ಹೆಸರಿವೆ.. ಮೊದಲನೇಯದು ಮೂಕನಾಯಕ, ಎರಡನೇಯದು ಬಹಿಷ್ಕೃತ ಭಾರತ ಮೂರನೇಯದು ಪ್ರಬುಧ್ಧ ಭಾರತ. ಅಂಬೇಡ್ಕರ್ ಅವರು ಒಬ್ಬ ಪತ್ರಕರ್ತರಾಗಿ ಸಾವಿರಾರು ಪುಟಗಳನ್ನು ಬರೆದಿದ್ದಾರೆ. ಬಹುಶಃ ಮಹಾತ್ಮ ಗಾಂಧಿಗೆ ಅವರೊಬ್ಬ ಒಳ್ಳೆಯ ಕಾಂಪಿಟೀಟರ್ . ಮಹಾತ್ಮ ಗಾಂಧೀಜಿ ಕೂಡ ಒಬ್ಬ ಪತ್ರಕರ್ತರಾಗಿದ್ದರು. ಅವರ ಹರಿಜನ ಪತ್ರಿಕೆ , ಯಂಗ್ ಇಂಡಿಯಾ ಪತ್ರಿಕಾಗಳನ್ನು ಸಂಪಾದಿಸುತ್ತಿದ್ದುದು ನಿಮಗೆ ಗೊತ್ತಿದೆ. ಆದರೆ ಹರಿಜನ ಪತ್ರಿಕೆ ಮತ್ತು ಯಂಗ್ ಇಂಡಿಯಾ ಪತ್ರಿಕೆ ಬಗ್ಗೆ  ನಡೆದಷ್ಟು ಚರ್ಚೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರಾರಂಭ ಮಾಡಿದ ಪತ್ರಿಕೆಗಳ ಬಗ್ಗೆ ಆಗುತ್ತಿಲ್ಲ. ನನಗೆ ತಿಳಿದ ಮಟ್ಟಿಗೆ ’ಮೂಕನಾಯಕ’ದ ಬಹಳಷ್ಟು ಎಡಿಟೋರಿಯಲ್ ಗಳು ಸಂಕಲನ ರೂಪದಲ್ಲಿ ಹಿಂದಿ-ಮರಾಠಿ ಭಾಷೆಗಳಲ್ಲಿ ಬಂದಿದೆ. ಆದರೆ ಕನ್ನಡಕ್ಕೆ ಹೆಚ್ಚು ಬಂದಿಲ್ಲ. ಇದೀಗ ಸರ್ಕಾರ ಪ್ರಕಟಿಸಿರುವ ಅಂಬೇಡ್ಕರ್ ಅವರ ೨೫ ಸಂಪುಟಗಳಲ್ಲೂ ಈ ಪತ್ರಿಕೆಗಳ ಉಲ್ಲೇಖ ನನಗೆ  ಕಾಣಲಿಲ್ಲ. ಮೂಕ ನಾಯಕದಲ್ಲಿನ ಸಂಪಾದಕೀಯಗಳನ್ನು ಓದುತ್ತಾ ಹೋದರೆ ಆ ಕಾಲದ ರಾಜಕೀಯ, ಸಾಮಾಜಿಕ ಇತಿಹಾಸದ ದರ್ಶನ ಕೂಡ ನಮಗೆ ಆಗುತ್ತದೆ.
          ೧೯೧೬ ರಲ್ಲಿ ಅವರು ಅಂಬೇಡ್ಕರ್ ಅವರು ಕೊಲಂಬಿಯ ವಿಶ್ವವಿದ್ಯಾನಿಲಯದಿಮದ ವ್ಯಾಸಾಂಗ ಮುಗಿಸಿದಾಗ ಅವರಿಗೆ ಒಂದು ಬೀಳ್ಕೋಡುಗೆ ಸಮಾರಂಭವನ್ನು ಏರ್ಪಡಿಸಿದ್ದರು. ಆಗ ಆ ವಿದ್ಯಾರ್ಥಿಗಳು ಅಂಬೇಡ್ಕರ್ ಅವರಿಗೆ ಹೇಳ್ತಾರೆ. ’ನೀನು ಅಮೆರಿಕಾದ ಕಪ್ಪುಜನರ ಮುಕ್ತಿಗಾಗಿ ಶ್ರಮಿಸಿದ BOOKER t Washington’ ಆಗಬೇಕು ಎಂದು ಆಗ ಸಹಪಾಠಿಗಳು ಹೇಳಿದ್ದರಂತೆ. ಬಹುಶಃ ಅಂಬೇಡ್ಕರ್ ಅವರ ಮನಸ್ಸಿನಲ್ಲಿ ಇದೇ ಇತ್ತೇನೋ.....ಗೊತ್ತಿಲ್ಲ, ಪತ್ರಿಕೆ ಸಾಮಾಜಿಕ ಪರಿವರ್ತನೆಯ ಒಂದು ಸಾಧನ ಎಂಬುದನ್ನು ಅವರು ಅದಾಗಲೆ ತಿಳಿದುಕೊಂಡಿದ್ದರು. ಅದಕ್ಕಾಗಿ ಯೇ ಅವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಷ್ಟೊಂದು ಮಹತ್ವಕೊಟ್ಟರು ಎಂದು ನನಗನಿಸುತ್ತಿದೆ.
ಪ್ರಜಾವಾಣಿ ದಲಿತ ಸಂಚಿಕೆಯೊಂದನ್ನು ತಂದಾಗ ರಾಜ್ಯದಲ್ಲಿಯೇ ಏಕೆ ದೇಶದಲ್ಲಿಯೇ ಸಂಚಲನ ಆಗಿತ್ತು. ಆ ಕೆಲಸದಲ್ಲಿ ಪಾಲ್ಗೊಂಡ ನನಗೆ ಹೆಮ್ಮೆ ಇದೆ. ಆ ಪ್ರಯತ್ನಕ್ಕೆ ಪ್ರೇರಣೆಯಾದ ಕಾರಣ ಕುತೂಹಲಕಾರಿಯಾಗಿದೆ. 2000ನೇ ವರ್ಷದಲ್ಲಿ ರಾಬಿನ್ ಜಾಫ್ರಿ ಎಂಬ ಪತ್ರಕರ್ತ ಭಾರತದ ಮಾಧ್ಯಮ ಕ್ರಾಂತಿ ಎಂಬ ಪುಸ್ತಕ ಬರೆದು ಭಾರತದ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಪ್ರಾತಿನಿಧ್ಯ ನಗಣ್ಯವೆನಿಸುವಷ್ಟು ಕಡಿಮೆ ಎಂದು ಎಚ್ಚರಿಸಿದ್ದರು. ಅದಕ್ಕಿಂತ ಮೊದಲು ಅಂದರೆ 1996ರಲ್ಲಿಯೇ  ವಾಷಿಂಗ್ ಟನ್ ಪೋಸ್ಟ್ ನ ಭಾರತೀಯ ವರದಿಗಾರ ಕೆನ್ನೆತ್ ಜೆ.ಕೂಪರ್ ಭಾರತೀಯ ಮಾಧ್ಯಮದಲ್ಲಿ ದಲಿತರನ್ನು ಹುಡುಕುವ ಪ್ರಯತ್ನ ನಡೆಸಿದ್ದ. ದೆಹಲಿಯಲ್ಲಿ ರಾಬಿನ್ ಜಾಪ್ರಿಯವರ ಭಾಷಣವನ್ನು ಕೇಳಿದ ಪ್ರಜಾವಾಣಿ ಸಂಪಾದಕರು ದಲಿತರೇ ಒಂದು ದಿನದ ಮಟ್ಟಿಗೆ ಸಂಪಾದಕರಾಗಿ ದಲಿತ ಸಂಚಿಕೆಯನ್ನು ರೂಪಿಸುವ ಯೋಜನೆ ಹಾಕಿದ್ದರು.
ರಾಬಿನ್ ಜಾಫ್ರಿ , ಕೆನ್ನೆತ್ ಕೂಪರ ಮೊದಲಾದವರ ಕಾಲದಲ್ಲಿಯೇ ಹಲವಾರು ಸಮೀಕ್ಷೆಗಳನ್ನು ನಡೆಸಲಾಗುತ್ತದೆ. ಭಾರತದ ಪ್ರಮುಖ ಪತ್ರಿಕೆಗಳಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಸಂಪಾದಕರಾಗಲಿ ನೀತಿ-ನಿರ್ಧಾರ ಗಳನ್ನು ಕೈಗೊಳ್ಳುವಂತಹ ಸ್ಥಾನಗಳಲ್ಲಿ ಕೂತವರಲ್ಲಿ ಯಾರೂ ದಲಿತರಿಲ್ಲ ಎನ್ನುವುದು ಈ ಸಮೀಕ್ಷೆಯಲ್ಲಿ ವ್ಯಕ್ತವಾಗುತ್ತದೆ. ಮಾಧ್ಯಮಗಳಲ್ಲಿ ದಲಿತರಿಗೆ ಪ್ರಾತಿನಿಧ್ಯ ಕೊಡಬೇಕು ಎಂದಾಗ “ ಓ... ದಲಿತರಿಗೆ ಪತ್ರಿಕೋದ್ಯಮದಲ್ಲಿ ಕೂಡಾ ಮೀಸಲಾತಿ ಬೇಕಾ ಎಂದು ನನ್ನನ್ನು ಬಹಳ ಮಂದಿ ಕೇಳಿದವರಿದ್ದಾರೆ. ಆದರೆ ಒಂದು ಆತ್ಮಾವಲೋಕನ ನಡೆಯಬೇಕಲ್ಲ. ರಾಬಿನ್ ಜಾಫ್ರಿ, ಕೆನ್ನೆತ್ ಕೂಪರ್ ಮೊದಲಾದ ಪತ್ರಕರ್ತ ಒಂದು ಆತ್ಮಾವಲೋಕನವನ್ನು ನಡೆಸುತ್ತಾರೆ. ಇವತ್ತು ಕರ್ನಾಕಟದಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಬಗ್ಗೆ ಮಾಧ್ಯಮ ಯಾವ ರೀತಿಯಲ್ಲಿ ವರ್ತಿಸುತ್ತಿದೆಯೋ, ಅದೇ ರೀತಿಯ ವರ್ತನೆಗಳನ್ನು ಆ ಕಾಲದಲ್ಲಿ ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಬಗ್ಗೆ ಮಾಧ್ಯಮ ವ್ಯಕ್ತಪಡಿಸುತ್ತಿತ್ತು.
            ಈಗಲೂ ಕನ್ನಡ ಮಾಧ್ಯಮಗಳಲ್ಲಿ ದಲಿತರಿಗೆ ಅಗತ್ಯಪ್ರಮಾಣದಷ್ಟು ಪ್ರಾತಿನಿಧ್ಯ ಇಲ್ಲ. ನಮ್ಮಲ್ಲಿರೋ ಹಿರಿಯ ಪತ್ರಕರ್ತರೆಂದರೆ ಇಬ್ಬರು. ಒಬ್ಬರು ಶಿವಾಜಿಗಣೇಶನ್, ಇನ್ನೊಬ್ಬರು ಡಿ.ಉಮಾಪತಿ. ಶಿವಾಜಿ ಗಣೇಶನ್ ಅವರು ಸಹಾಯಕ ಸಂಪಾದಕರಾಗಿ ನಿವೃತ್ತಿಯಾಗಿದ್ದಾರೆ. ಇನ್ನೂ ಉಪಮಾಪತಿ ಅವರು ಸಂಪಾದಕರಾಗಬೇಕೆಂಬುದು ನಮ್ಮೆಲ್ಲರ ಆಶಯ. ಆಗ್ತಾರೋ ಇಲ್ಲವೆ ಇಲ್ಲವೋ ಗೊತ್ತಿಲ್ಲ. ಯಾಕೆ ಆಗುತ್ತಿಲ್ಲ? ನೀವು ಇವತ್ತಿನ ೧೦೦ ಪ್ರಾಮಿನೆಂಟ್ ಕವಿಗಳ ಪಟ್ಟಿ ಮಾಡಿದರೆ ಅದರಲ್ಲಿ ಮೆಜಾರಿಟಿ ದಲಿತ ಕವಿಗಳಿರುತ್ತಾರೆ. ನೂರು ಕನ್ನಡದ ಪ್ರಮುಖ  ಕವಿಗಳ ಪಟ್ಟಿ ಮಾಡಿದರೆ ಅದರಲ್ಲಿ ಮೆಜಾರಿಟಿ ದಲಿತ ಕವಿಗಳಾಗಿರುತ್ತಾರೆ.ಆದರೆ ನೀವು ನೂರು ಪ್ರಾಮಿನೆಂಟ್ ಪತ್ರಕರ್ತರನ್ನು ಪಟ್ಟಿ ಮಾಡಿದರೆ ಅದರಲ್ಲಿ ಒಂದು ಕೈಯಿಂದ ಎಣಿಸುವಷ್ಟು ಪತ್ರಕರ್ತರು ಇರುವುದಿಲ್ಲ ಏಕೆ? ಪತ್ರಕರ್ತರಿಗೆ ಮುಖ್ಯವಾಗಿ ಬೇಕಾಗಿರುವುದು ಬರವಣಿಗೆಯ ಕಲೆ. ಅದೇನು ರಾಕೆಟ್ ಸೈನ್ಸ್ ಅಲ್ಲ. ಹಾಗಾದರೆ ಯಾಕೆ ದಲಿತರಿಲ್ಲ? ಇವತ್ತು  ದಲಿತ ಪತ್ರಕರ್ತರು ಸಣ್ಣ ಪತ್ರಿಕೆಗಳಲ್ಲಿ ಸೇರಿಕೊಂಡಿದ್ದಾರೆ. ನಮ್ಮ ರವಿಕುಮಾರ್ (ಎನ್. ರವಿಕುಮಾರ್ ಸಂಪಾದಕರು ’ಶಿವಮೊಗ್ಗ ಟೆಲೆಕ್ಸ್’ಕನ್ನಡ ದಿನಪತ್ರಿಕೆ) ಅಂತಹವರು ಯಾವುದೇ ಮುಖ್ಯವಾಹಿನಿಯ ಪತ್ರಿಕೆಯಲ್ಲಿ ಕೆಲಸ ಮಾಡುವ ಅರ್ಹತೆ ಉಳ್ಳವರು. ನನಗೆ ಸ್ನೇಹಿತರು ಅವರು ನನಗೆ ಗೊತ್ತು ಅವರ ಮಾತು, ಬರವಣಿಗೆ ನೋಡಿದ್ದೇನೆ. ಆದರೆ ಮುಖ್ಯವಾಹಿನಿ ಪತ್ರಿಕೆಗೆ ಬರಲು ಅವರಿಗೆ ಆಗುತ್ತಿಲ್ಲ. ನನಗೆ ಇಂತಹ ಐವತ್ತು ಮಂದಿ ದಲಿತ ಪತ್ರಕರ್ತರುಗಳು ಗೊತ್ತಿದ್ದಾರೆ. ಆದರೆ ಅವರು ಮುಖ್ಯವಾಹಿನಿ ಪತ್ರಿಕೆಗಳಿಗೆ ಬರಲು ಆಗುತ್ತಿಲ್ಲ ಯಾಕೇ?
ನೀವು ’ಯಾಕೆ?’ ಅನ್ನೋದನ್ನು ತಿಳಿದುಕೊಳ್ಳಬೇಕಾದರೆ ೧೯೭೦ ರ ದಶಕದಲ್ಲಿ ಅಮೇರಿಕಾದ ಪರಿಸ್ಥಿತಿಯನ್ನು ನೋಡಬೇಕು. ೧೯೭೮ರಲ್ಲಿ  ಅಮೆರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ್ಸ್ ಎಂಬ ಸಂಸ್ಥೆಯೊಂದು ಅಮೆರಿಕಾದಲ್ಲಿ ಮಾಧ್ಯಮದಲ್ಲಿರುವ ಕಪ್ಪು ಜನಾಂಗದ ಪ್ರಾತಿನಿಧ್ಯದ ಬಗ್ಗೆ ಸಮೀಕ್ಷೆ ನಡೆಸಿತ್ತು. ಆ ದೇಶದ ಜನಸಂಖ್ಯೆಯಲ್ಲಿ ಶೇಕಡಾ 36ರಷ್ಟು ಕಪ್ಪು ಜನಾಂಗದವರಿದ್ದರೂ ಮಾಧ್ಯಮ ಕ್ಷೇತ್ರದಲ್ಲಿ ಅವರ ಪ್ರಾತಿನಿಧ್ಯ ಕೇವಲ ಶೇಕಡಾ ನಾಲ್ಕು ಆಗಿತ್ತು. ಯಾಕೆ ಹೀಗಾಗಿದೆ ಎಂದು ಅವಲೋಕನ ಮಾಡಿ ಅವರು ಸುಮ್ಮನೆ ಇರೋದಿಲ್ಲ. ಇದಕ್ಕಾಗಿ ಒಂದು ಯೋಜನೆಯನ್ನು ರೂಪಿಸುತ್ತಾರೆ. 2000ದ ಹೊತ್ತಿಗೆ ಮಾಧ್ಯಮದಲ್ಲಿ ಕಪ್ಪುಜನಾಂಗದ ಪ್ರಾತಿನಿಧ್ಯ ಕನಿಷ್ಟ ಶೇಕಡಾ 20 ಆಗಬೇಕೆಂದು ಅವರು ನಿರ್ಧರಿಸುತ್ತಾರೆ. ಇದಕ್ಕಾಗಿ ಕಪ್ಪುಜನಾಂಗದ ವಿದ್ಯಾರ್ಥಿಗಳಿಗಾಗಿ ಮಾಧ್ಯಮ ಕಚೇರಿಗಳಲ್ಲಿ ತರಬೇತಿ ಶಿಬಿರ, ತಾರತಮ್ಯ ನೀತಿ ನಿವಾರಣೆಗೆ ಕ್ರಮ,ವಿಶೇಷ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತವೆ
೨೦೧೦ಕ್ಕೆ ಮತ್ತೆ ಅವರು ಸರ್ವೆ ಮಾಡುವಾಗ ಕರಿಯರಿಗೆ ಶೇ.೧೪ ಪ್ರಾತಿನಿಧ್ಯ ಇರುತ್ತದೆ. ಈಗ ಅವರು ೨೦೨೦ಕ್ಕೆ ಟಾರ್ಗೇಟ್ ಹಾಕಿಕೊಂಡಿದ್ದಾರೆ. ಇದು ಭಾರತದ ಪತ್ರಿಕೋದ್ಯಮದಲ್ಲಿ ದಲಿತರ ಪಾಲ್ಗೊಳ್ಳುವಿಕೆಗೆನೆರವಾಗುವಂತಹ ಒಳ್ಳೆಯ ಮಾಡೆಲ್ ಎಂದು ಅನಿಸುತ್ತದೆ. ಈ ಉದ್ದೇಶದಿಂದಲೇ ಭಾರತದ ಯಾವ ಯಾವ ಪತ್ರಿಕೆಗಳಲ್ಲಿ ದಲಿತರ ಪ್ರಾತಿನಿಧ್ಯ ಎಷ್ಟೆಷ್ಟು ಪ್ರಮಾಣದಲ್ಲಿದೆ ಎಂದು ಸರ್ವೇ ನಡೆಯಬೇಕಾಗಿದೆ. ಕರ್ನಾಟಕದಲ್ಲೂ ಇಂತಹ ಸರ್ವೇ ನಡೆಯಬೇಕು.  ಮಾಧ್ಯಮಗಳಲ್ಲಿ (ಎಲೆಕ್ಟ್ರಾನಿಕ್, ಮುದ್ರಣ ಮತ್ತು ರೇಡಿಯೋ ಸೇರಿ) ಯಾವ ಸ್ಥಾನಗಳಲ್ಲಿ ದಲಿತರಿದ್ದಾರೆ ಮತ್ತು ಇಲ್ಲದಿದ್ದರೆ ಯಾಕೆ ಇಲ್ಲ.? ಅದಕ್ಕೆ ಪರಿಹಾರವೇನು? ಅನ್ನೋದರ ಬಗ್ಗೆ ಈ ಸಮೀಕ್ಷೆ  ನಡಯಬೇಕು.
          ದಲಿತರಿಗೊಂದು  ಉದ್ಯೋಗ ಕೊಡಬೇಕೆಂದು ಪ್ರಾತಿನಿಧ್ಯ ಕೇಳುತ್ತಿಲ್ಲ. ಇದು ಬಹಳ ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ದಲಿತರಿಗೆ ಪತ್ರಿಕೆಯಲ್ಲಿ ಪ್ರಾತಿನಿಧ್ಯ ಕೊಟ್ಟಕೂಡಲೆ ದಲಿತರಿಗೊಂದಿಷ್ಟು ಉದ್ಯೋಗ ಸಿಗುತ್ತೇ ಅಂತಲ್ಲ. ನನ್ನ ಉದ್ದೇಶ ಅದಲ್ಲ, ಒಂದು ಪತ್ರಿಕೆ ಪರಿಪೂರ್ಣ ಅನಿಸಬೇಕಾದರೆ ಎಲ್ಲಾ ಸಮುದಾಯದ ಅನುಭವ ಲೋಕಗಳು ಅದರಲ್ಲಿ ವ್ಯಕ್ತವಾಗಬೇಕು. ಇಲ್ಲದಿದ್ದರೆ ಅದು ಪರಿಪೂರ್ಣ ಮಾಧ್ಯಮ ವಾಗಲಾರದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ. ಎಲ್ಲಾ ಅನುಭವ ಲೋಕಗಳು ಬರಬೇಕಾದರೆ ಆ ಅನುಭವ ಲೋಕಗಳಿರುವ ವಿಭಿನ್ನ ಸಮುದಾಯದ ಪ್ರಾತಿನಿಧ್ಯ ಮಾಧ್ಯಮ ಲೋಕದಲ್ಲಿರಬೇಕು. ಇಲ್ಲದಿದ್ದರೆ ಅದು ಅರ್ಥವಾಗುವುದಿಲ್ಲ.
ಈ ದೇಶದಲ್ಲಿ ೧೬ ನಿಮಿಷಗಳಿಗೊಮ್ಮೆ ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ ಪ್ರತಿದಿನ ನಾಲ್ವರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತೆ, ಪ್ರತಿವಾರ ೧೬ ದಲಿತರ ಕಗ್ಗೊಲೆ ನಡೆಯುತ್ತಿದೆ. ನ್ಯಾನಷನಲ್ ಕ್ರೈಂ ಬ್ಯೂರೋ ಅಂಕಿಅಂಶಗಳನ್ನು ನೋಡಿದ್ರೆ ಗೊತ್ತಾಗುತ್ತದೆ. ಆದರೆ ನಿರ್ಭಯ ಅತ್ಯಾಚಾರ ದೇಶಾದ್ಯಂತ ಆದಾಗ ಅದೇ ವರ್ಷ ೧೨೭೦ ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆದಿತ್ತು. ಈ ದೇಶದಲ್ಲಿ ಅದು ಸುದ್ದಿಯಾಗಿತ್ತಾ? ನಿರ್ಭಯ ಅತ್ಯಾಚಾರ ನಡೆದ ಒಂದು ವಾರದಲ್ಲೆ ಹರಿಯಾಣದಲ್ಲಿ ಇಬ್ಬರು ದಲಿತ ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಅದು ಎಲ್ಲಿ ವರದಿಯಾಯಿತು? ಇಷ್ಟೊಂದು ಸಂಖ್ಯೆಯಲ್ಲಿ ದೌರ್ಜನ್ಯಗಳು ನಡೆದಾಗ ಅದು ಏಕೆ ವರದಿಯಾಗಲಿಲ್ಲ? ಈ ಕಾರಣಕ್ಕಾಗಿಯೇ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ್ಗದವರು ಮಾಧ್ಯಮ ಕ್ಷೇತ್ರಕ್ಕೆ ಬರಬೇಕು. ಏಕೆಂದರೆ ಅವರಿಗೊಂದು ಅನುಭವ ಲೋಕವಿದೆ. ಉದಾಹರಣೆಗೆ : ಕಂಬಾಲಪಲ್ಲಿ ಯಂತಹ ಘಟನೆ ಒಬ್ಬ ಸಾಮಾನ್ಯ ಪತ್ರಕರ್ತನಿಗೆ ಸುದ್ದಿ ಅಷ್ಟೇ. ಅವನು ಅಲ್ಲಿ ಹೋಗಿ ಘಟನೆಯನ್ನು ವೈಭವೀಕರಿಸುತ್ತಾನೆ. ರಕ್ತದೋಕುಳಿ ಹರಿದಿತ್ತು, ರುಂಡ, ಮುಂಡಗಳು ಉರುಳಾಡಿದ್ದವು, ಕಣ್ಣೀರ ಧಾರೆ ಹರಿದಿತ್ತು ಎಂದೆಲ್ಲ ಅಲ್ಲಿಗೆ ಹೋಗಿ ವರದಿ ಮಾಡಿರುತ್ತಾನೆ.
ಆದರೆ, ಒಬ್ಬ ದಲಿತ ವರದಿ ಮಾಡಲು ಹೋದರೆ ಅಂತಹದ್ದೊಂದು ಘಟನೆಗೆ ಕಾರಣ ಏನು ಎನ್ನುವುದನ್ನು ವಿವರಿಸುತ್ತಾ ಹೋಗುತ್ತಾನೆ. ಕಂಬಾಲಪಲ್ಲಿ ಎಂಬುದು ರಾತ್ರಿ ಹಗಲಾಗುವುದರೊಳಗೆ ನಡೆದ ಘಟನೆಯಲ್ಲ, ಅದಕ್ಕೊಂದು ಇತಿಹಾಸವಿದೆ, ಆ ಇತಿಹಾಸದ ಕಾರಣಕ್ಕಾಗಿಯೇ ಕಂಬಾಲಪಲ್ಲಿ  ನಡೆದಿದೆ.. ಈ ದೇಶದಲ್ಲಿ ಇಂತಹ ದೌರ್ಜನ್ಯಗಳಿಗೆ ಒಂದು ಇತಿಹಾಸವಿದೆ. ಒಂದು ಕೋಮುಗಲಭೆಯನ್ನು ಒಬ್ಬ ಮುಸ್ಲೀಂ ಪತ್ರಕರ್ತ ವರದಿ ಮಾಡುವಾಗಲೂ ಈ ವ್ಯತ್ಯಾಸವನ್ನು ಕಾಣಬಹುದು. ಇಂತಹ ಘಟನೆಗಳನ್ನು ವೈಭವಿಕರೀಸದೆ, ರೋಚಕತೆಯ ನ್ನು ತುಂಬದೆ ತನ್ನ ಅನುಭವದೊಂದಿಗೆ ವರದಿಮಾಡುತ್ತಾನೆ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ’ಮೂಕನಾಯಕ’ ಪತ್ರಿಕೆಯನ್ನು ಯಾಕೆ ಮಾಡಬೇಕಾಯಿತೆಂದರೆ ಆ ಕಾಲದಲ್ಲಿ ಬೇರೆ ಪತ್ರಿಕೆಗಳಲ್ಲಿ ದಲಿತರ ಧ್ವನಿ ಅವರಿಗೆ ಕಾಣಲಿಲ್ಲ. ಎಲ್ಲರೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದಾಗ  ಮೊದಲ ಬಾರಿಗೆ ಅದಕ್ಕೆ ರೆಬೆಲ್ ಆಗಿ ತಮ್ಮ ಅಭಿಪ್ರಾಯವನ್ನು ಮಂಡಿಸಿದವರು ಅಂಬೇಡ್ಕರ್. ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಸ್ವಾತಂತ್ರ್ಯ ಬರಬೇಕು ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದವರು ಅವರು. ಆಗ ನಾವು ಯಾರೂ ಕಿವಿಗೊಡಲಿಲ್ಲ. ಅದರ ಪರಿಣಾಮ ನಾವು ಈಗ ಅನುಭವಿಸುತ್ತಿದ್ದೇವೆ. ರಾಜಕೀಯ ಸ್ವಾತಂತ್ರ್ಯ ಎಂಬುದು ಈಗ Farce (ಪ್ರಹಸನ) ಆಗಿಬಿಟ್ಟಿದೆ. ಇವತ್ತು ಏಕೆಂದರೆ ಆರ್ಥಿಕ ಸ್ವಾತಂತ್ರ್ಯವಿಲ್ಲದೆ, ಸಾಮಾಜಿಕ ಸ್ವಾತಂತ್ರ್ಯವಿಲ್ಲದೆ ರಾಜಕೀಯ ಸ್ವಾತಂತ್ರ್ಯದ ಗತಿ ಏನಾಗಬಹುದು ಎಂಬುದನ್ನು ಆ ಕಾಲದಲ್ಲೆ ಅಂಬೇಡ್ಕರ್ ಅವರು ಒಬ್ಬ ದೊಡ್ಡ ದಾರ್ಶನಿಕನಂತೆ ಹೇಳಿದ್ದರು. ಆ ದನಿ ಆಗ ಯಾರಿಗೂ ಕೇಳಲಿಲ್ಲ. ’ಒಂದು ಮತ ಕ್ಕೆ ಒಂದು ಮೌಲ್ಯ’ ಅಂತ ಹೇಳಿದ್ದು ಆಗ ಯಾರಿಗೂ ಅರ್ಥ ಆಗಲಿಲ್ಲ ಇವತ್ತು ಗೊತ್ತಾಗುತ್ತಿದೆ. ಅದಾನಿ, ಅಂಬಾನಿ ಮತಕ್ಕೂ, ಬಡಬೋರೆಗೌಡನ ಒಂದು ಮತ್ತಕ್ಕೂ ನೀವು ಹೋಲಿಕೆ ಮಾಡಲಿಕ್ಕೆ ಸಾಧ್ಯವಿಲ್ಲ. ಇವತ್ತು ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಕಾರ್ಪೋರೇಟ್ ಪತ್ರಿಕೋದ್ಯಮ ಪ್ರವೇಶವಾಗಿದೆ. ಈ ದೇಶದಲ್ಲಿ ೮೨ ಸಾವಿರ ಪತ್ರಿಕೆಗಳಿವೆ, ಸುಮಾರು ೧೨೦ ಸುದ್ದಿ ಟಿ.ವಿ ಚಾನಲ್‌ಗಳಿವೆ. ೧೨೦೦ ರೇಡಿಯೋಗಳಿವೆ. ಇಷ್ಟು ದೊಡ್ಡ ಮಾಧ್ಯಮ ಸಮೂಹದ ಮಾಲೀಕತ್ವ ಕೇವಲ ನೂರು ಮಂದಿ ಕೈಯಲ್ಲಿದೆ.
          ಇವತ್ತಿನ ಮಾಧ್ಯಮ ಕ್ಷೇತ್ರಕ್ಕೆ , ಪತ್ರಿಕೆಗಳಿಗೆ , ಚಾನಲ್‌ಗಳಿಗೆ ಓದುಗರು ಬೇಕಾಗಿಲ್ಲ. ಅವರಿಗೆ Potential buyers ಗಳು ಬೇಕಾಗಿದ್ದಾರೆ. ಅವರ ಪತ್ರಿಕೆಗಳಲ್ಲಿ, ಚಾನಲ್ ಗಳಲ್ಲಿ ಜಾಹೀರಾತು ಏನು ಬರುತ್ತೇ .ಟಿವಿ, ಫ್ರೀಡ್ಜ್ , ಬಟ್ಟೆ ಮತ್ತೊಂದು... ಅವುಗಳನ್ನು ಕೊಳ್ಳಲಿಕ್ಕೆ ಸಾಮರ್ಥ್ಯವಿರುವ ಓದುಗರು ಬೇಕಾಗಿದ್ದಾರೆ. ಅದರ ಅರ್ಥ ಅವರ Potential buyers ಹುಡುಕಾಟದಲ್ಲಿ ಇದ್ದಾರೆ ವಿನಃ, ಒಬ್ಬ ಸಾಮಾನ್ಯ ಓದುಗನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಏಕೆಂದರೆ ಇವತ್ತು ಜಾಹೀರಾತು ಇಲ್ಲದೆ ಪತ್ರಿಕೆಗಳನ್ನು, ಚಾನಲ್ ಗಳನ್ನು ನಡಸಲಿಕ್ಕೆ ಸಾಧ್ಯವಿಲ್ಲ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದ ಬಹಳ ನೇರ ನುಡಿಯ ಮಾರ್ಕೇಂಡೇಯ ಕಾಟ್ಜು ಅವರು ಒಂದು ಮಾತನ್ನು ಹೇಳಿದ್ದರು. ಐಶ್ವರ್ಯ ರೈಗೆ ಮದುವೆ ಆದರೆ , ಗಂಡನ ಜೊತೆ ಜಗಳ ಆದ್ರೆ, ಅತ್ತೆ ಮನೆಯನ್ನು ಬಿಟ್ಟು ಬಂದ್ರೆ, ಅದು ಮೊದಲ ಪುಟದ ದೊಡ್ಡ ಸುದ್ದಿಯಾಗುತ್ತೆ. ನಿಮ್ಮ ಚಾನಲ್ ಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತೆ. ಆದರೆ ಯಾವುದೋ ತಾಯಿಯ ಬಡ ಮಗು ಅಪೌಷ್ಠಿಕತೆ ಯಿಂದ ಸತ್ತರೆ u will just bury that news inside the page ಯಾಕ ಹೀಗೆ ಅಂತ ಅವರು ಕೇಳಿದ್ರು .
ಏಕೆಂದರೆ ಅವರು ಪತ್ರಕರ್ತರಲ್ಲ, ಜಡ್ಜ್. ಅವರಿಗೆ ತೀರ್ಪು ಕೊಟ್ಟು ಗೊತ್ತಷ್ಟೇ, ಆದರೆ ನಾನೊಬ್ಬ ಪತ್ರಕರ್ತ. ನನಗೆ ಕಾರಣ ಗೊತ್ತಿದೆ. ಐಶ್ವರ್ಯ ರೈ ಅತ್ತದ್ದು, ನಕ್ಕಿದ್ದು,ಜಗಳ ಮಾಡಿದ್ದು ಎಲ್ಲಾ ವರದಿಯಾದರೆ ಐಶ್ವರ್ಯ ರೈ 25-30 ಪ್ರೊಡೆಕ್ಟ್ ಗಳಿಗೆ ಮಾಡೆಲ್ -ಬ್ರಾಂಡ್ ಅಂಬಾಸಿಡರ್. ಅದೇ ರೀತಿ ಸಚಿನ್ ತೆಂಡೋಲ್ಕರ್ , ವಿರಾಟ್ ಕೋಹ್ಲಿ, ಧೋನಿ ಅವರೆಲ್ಲಾ ಮಾಧ್ಯಮಗಳಲ್ಲಿ ಕಾಣಿಸಿಕೊಳ್ತನೇ ಇರಬೇಕು. ಅವರು ಕಾಣಿಸಿಕೊಂಡರೆ ಅವರು ಮಾಡೆಲ್ ಆಗಿರೋ ವಸ್ತುಗಳು ಓದುಗನ ನೆನಪಿಗೆ ಬರುತ್ತವೆ. ಇದು ’ಟ್ರಿಕ್. ಒಂದು ಬಡ ತಾಯಿಯ ಮಗು ಅಪೌಷ್ಠಿಕತೆಯಿಂದ ಸತ್ತದ್ದನ್ನು ಮೊದಲ ಪುಟದಲ್ಲಿ ಪ್ರಕಟಿಸಿದರೆ ಜನ ಏನಂದು ಕೊಳ್ಳುತ್ತಾರೆ, ಬೆಳಗ್ಗೇನೆ ಇದನ್ನು ಓದಬೇಕಾ? ಅಂತ ಕೇಳ್ತಾರೆ. ಅಷ್ಟೊಂದು ನಮ್ಮ ಮನಸ್ಸು ಅಮಾನವೀಯವಾಗಿದೆ. ಇದು ವಾಸ್ತವ. ನಾನು ಸ್ಪಷ್ಟವಾಗಿ ಹೇಳುತ್ತೇನೆ ಪತ್ರಿಕೆಗಳ ಮಾಲೀಕರನ್ನು ದೂರುವುದಿಲ್ಲ. ಪತ್ರಿಕೆಗಳ ಮಾಲೀಕರು ತಮಗೆ ಗೊತ್ತಿಲ್ಲದ ಹಾಗೇಯೇ ಈ ಟ್ರ್ಯಾಪ್ ನಲ್ಲಿ ಬಿದ್ದು ಬಿಟ್ಟಿದ್ದಾರೆ.
          ಇವತ್ತಿನ ಮಾಧ್ಯಮಗಳ ಬಿಜೆನೆಸ್ ಮಾಡೆಲ್‌ನಲ್ಲಿಯೇ ತಪ್ಪಿದೆ. ನೀವು ೧೦೦ ಕೋಟಿ ರೂ ಇನ್‌ವೆಸ್ಟ್ ಮಾಡಿ ಜಾಹೀರಾತು ಇಲ್ಲದೆ ಪತ್ರಿಕೆ-ಚಾನೆಲ್ ಗಳನ್ನು ನಡೆಸಲಿಕ್ಕೆ ಆಗುವುದಿಲ್ಲ. ಈ ರೀತಿ ಜಾಹಿರಾತಿನ ಮೇಲೆ ಅವಲಂಬಿಸುವಂತಹ ಪರಿಸ್ಥಿತಿಯಲ್ಲಿ ನೀವು ಜನಪರವಾಗಿ ಬರೆಯಲು ಹೇಗೆ ಸಾಧ್ಯ? ದಲಿತರ, ಅಲ್ಪಸಂಖ್ಯಾತರ, ಹಿಂದುಳಿದ ವರ ಪರಧ್ವನಿ ಎತ್ತಲಿಕ್ಕೆ ಹೇಗೆ ಸಾಧ್ಯ? ಇದಕ್ಕೆ ಪರಿಹಾರ ಏನಂತ ಗೊತ್ತಿಲ್ಲ,  ರಿಲಯನ್ಸ್ ನ ಅನಿಲ್ ಅಂಬಾನಿ ಗ್ರೂಪ್ ೫ ರಿಂದ ೧೦ ಸಾವಿರ ಕೋಟಿ ಯನ್ನು ಚಾನಲ್ ಗಳಿಗೆ ಪಂಪ್ ಮಾಡಿದೆ. ಇವತ್ತು ಈ ಟಿವಿ, ಸಿಎನ್‌ಎನ್ ಐಬಿಎನ್ ಸೇರಿದಂತೆ 50ಕ್ಕೂ ಮಿಕ್ಕಿ ಚಾನಲ್ಗ ಳು, ಬೇರೆಬೇರೆ ಪಬ್ಲಕೇಷನ್ ಗಳನ್ನುಅವರು ಖರೀದಿಸಿದ್ದಾರೆ., ಬಿರ್ಲಾ ಗ್ರೂಪ್ ಇಡೀ ಇಂಡಿಯಾ ಟುಡೇಯನ್ನು ವಶಕ್ಕೆ ತೆಗೆದುಕೊಂಡಿದೆ. ಎನ್.ಡಿ.ಟಿವಿಯಲ್ಲಿ ಗ್ರೀನ್ ಟೆಕ್ ಎಂಬ ಸಂಸ್ಥೆ ಬಂಡವಾಳ ಹೂಡಿದೆ, ಇವತ್ತು ಮಾಧ್ಯಮಗಳ ಕಂಪೆನಿಯ ಬೋರ್ಡ್ನಲ್ಲಿ  ಕಾಪೋರೇಟ್ ಕುಳಗಳು ಸ್ಥಾನ ಪಡೆದಿದ್ದಾರೆ. ಇವತ್ತು ಎಲ್ಲಾ ದೊಡ್ಡ ಪತ್ರಿಕೆಗಳಲ್ಲೂ ಇದೇ ಆಗಿದೆ. ಇತ್ತೀಚೆಗೆ ಹಿಂದೂ ಪತ್ರಿಕೆಯಲ್ಲೂ ಆಗಿದೆ. ಪ್ರಜಾವಾಣಿ ಬಹಳ ಹಿಂದೆ ಕುಲದೀಪ್ ನಯ್ಯರ್ ಅವರನ್ನು ಬೋರ್ಡ್ ಡೈರಕ್ಟರ್‌ನ್ನಾಗಿ ಮಾಡಿತ್ತು. ಆದರೆ ಇದೆಲ್ಲಾ ಎಷ್ಟು ಬೇಗ ಚೇಂಜ್ ಆಗ್ತಾ ಇದೆ.
ಇವತ್ತು ಯಾವ ಮಟ್ಟಿಗೆ ವಾಣಿಜ್ಯಿಕರಣ ಆಗಿದೆ ಎಂದರೆ ಒಂದು ಪತ್ರಿಕೆ ಜಾಹೀರಾತಿಗೆ ದುಡ್ಡು ಪಡೆಯದೆ ಅದರ ಬದಲಾಗಿ ಆ ಕಂಪನಿಯ ಷೇರು ಪಡೆದು ಅದನ್ನು ಪ್ರಮೋಟ್ ಮಾಡಿ ಅದರ ಬೆಲೆಯನ್ನು ದುಪ್ಪಟ್ಟು ಮಾಡಿ ಲಾಭ ಪಡೆಯುತ್ತಿದೆ. ಈ ಕ್ರಾಸ್ ಓನರ್ ಶಿಫ್ ಬಗ್ಗೆ ಚರ್ಚೆ ನಡೆಯುತ್ತಿದೆ. ಬೇರೆಬೇರೆ ಉದ್ಯಮಗಳ ಮಾಲೀಕರು ಮಾಧ್ಯಮ ಕ್ಷೇತ್ರದಲ್ಲಿರಬಾರದು. ಮಾಧ್ಯಮ ಕ್ಷೇತ್ರದಲ್ಲಿರುವವರಿಗೆ ಬೇರೆ ಉದ್ಯಮಗಳಲ್ಲಿ ತೊಡಗಿರಬಾರದು ಎಂಬಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಟ್ರಾಯ್ ಧೀರ್ಘವಾದ ವರದಿಯನ್ನು ಕೊಟ್ಟಿದೆ. ಅದು ಕೇಂದ್ರ ಸರ್ಕಾರ ಪರಿಶೀಲನೆಯಲ್ಲಿದೆ. ಭಾರತದಂತಹ ಸಮಾಜದಲ್ಲಿ ಬಹತ್ವ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಂಡು ಹೋಗುವ ದೃಷ್ಟಿಯಿಂದ ಪತ್ರಿಕೋದ್ಯಮವನ್ನು ಕೇವಲ ವ್ಯಾಪಾರಿ ದೃಷ್ಟಿಯಿಂದ ನೋಡಬಾರದು. ಹಾಗೆ ನೋಡಿದರೆ ಮಾಧ್ಯಮದ ಮೂಲ ಆಶಯ ಏನಿದೆ ಅದಕ್ಕೆ ಭಂಗ ಉಂಟಾಗುತ್ತದೆ ಎಂದು ಟ್ರಾಯ್ ಹೇಳಿದೆ.
ಆದರೆ, ಇವತ್ತು ಪರಿಸ್ಥಿತಿ ಹಾಗಿಲ್ಲ. ಕಾರ್ಪೋರೇಟ್ ಕಂಪೆನಿಗಳ ಪ್ರವೇಶ ಆಗಿಬಿಟ್ಟಿದೆ. ವೃತ್ತಿ ಉದ್ಯಮವಾಗಿ ಹೋಗಿರುವುದರಿಂದ ಅದರ ಎಲ್ಲಾ ಘೋರ ರೂಪಗಳು ನಮಗೆ ಕಾಣ ಸಿಗುತ್ತಿವೆ. ಮಾಧ್ಯಮದ ಮಾಲೀಕರು ಎಂತಹ ಟ್ರ್ಯಾಪ್‌ನಲ್ಲಿ ಬಿದ್ದಿದ್ದಾರೆ ಎಂದರೆ ಪ್ರಜ್ಞಾ ಪೂರ್ವಕವಾಗಿ ನಾನು ಜನಪರವಾಗಿ ಇರುತ್ತೇನೆ ಎಂದು ನಿರ್ಧಾರ ಮಾಡಿದರೂ ಕೂಡ ಅವರು ಹಾಗೆ ಇರಲು ಆಗುತ್ತಿಲ್ಲ.
ಇವತ್ತು ಒಬ್ಬ ೨೫-೩೦ ಕೋಟಿ ರೂಪಾಯಿ ಬಂಡವಾಳ ಹೂಡಿ ಬಹಳ ಆದರ್ಶ ಇಟ್ಟುಕೊಂಡು ಚಾನಲ್ ಪ್ರಾರಂಭ ಮಾಡುತ್ತಾನೆ. ಆದರೆ ಒಂದೆರಡು ತಿಂಗಳಲ್ಲಿ ಆಗುವ ನಷ್ಟವನ್ನು ತುಂಬಿಸಿಕೊಳ್ಳಲು ಜ್ಯೋತಿಷಿಗಳನ್ನು ತಂದು ಕೂರಿಸುತ್ತಾನೆ. ಇದು ಇವತ್ತಿನ ಪರಿಸ್ಥಿತಿ. ಕಡಿಮೆ ಬಂಡವಾಳದ ಮಾಧ್ಯಮಗಳು ಇದಕ್ಕೆ ಪರಿಹಾರವಾಗಬಲ್ಲದು. ಇವತ್ತು ಬಹಳ ಮಂಡಿ ಲಂಕೇಶರನ್ನು ನೆನಪಿಸಿಕೊಳ್ಳುತ್ತಾರೆ. ಅವರು ಇವತ್ತು ಇದ್ದಿದ್ದರೆ ನನ್ನ ಪ್ರಕಾರ ಅಷ್ಟೊಂದು ಪ್ರಸಾರ ಸಂಖ್ಯೆ ಇರುವ ಪತ್ರಿಕೆಯನ್ನು ನಡೆಸಲಿಕ್ಕೆ ಆಗುತ್ತಿರಲಿಲ್ಲ. ಆಗ ಲಂಕೇಶ್ ಪತ್ರಿಕೆಗೆ ೧ ರೂ. ಇರುವಾಗ ಪ್ರಜಾವಾಣಿಗೆ ೧.೫೦ ರೂ ಇತ್ತು.
ಆದರೆ, ಈಗ ಲಂಕೇಶ್‌ಪತ್ರಿಕೆಗೆ ೧೫ ರೂ.ಗಳಿದ್ದರೆ ಪ್ರಜಾವಾಣಿಗೆ ೪.೫೦ ರೂಪಾಯಿ ಇದೆ. ಗೌರಿ ಲಂಕೇಶ್ ಅವರು ಪತ್ರಿಕೆ ಹೊರತಾಗಿಯೂ ಇತರೆ ಪಬ್ಲಿಕೇಶನ್‌ಗಳಿಂದ ನಷ್ಟವನ್ನು ತೂಗಿಸಿಕೊಳ್ಳುತ್ತಿದ್ದಾರೆ, ಗೌರಿಯವರ ಲಂಕೇಶ್ ಪತ್ರಿಕೆ ಇವತ್ತಿಗೂ ನಷ್ಟದಲ್ಲಿದೆ. ಜಾಹೀರಾತು ಇಲ್ಲದೆ ಪತ್ರಿಕೆ ನಡೆಸುವುದು ಸಾಧ್ಯವೇ ಇಲ್ಲ. ಇದು ಎಲ್ಲಾ ಸಣ್ಣ ಪತ್ರಿಕೆಗಳ ಗೋಳು. ಈ ದೇಶದಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಮಾರಾಟದರ ಇರುವ ವಸ್ತು ಎಂದರೆ ಅದು ’ಪತ್ರಿಕೆ’ ಇದರ ನಷ್ಟವನ್ನು ಜಾಹೀರಾತಿನಿಂದಲೆ ತುಂಬಿಸಿಕೊಳ್ಳಬೇಕಾಗಿದೆ. ಹೀಗಿರುವಾಗ ಜಾಹೀರಾತುದಾರನಿಗೆ ನಿಷ್ಠರಾಗಿರಬೇಕೋ? ದಲಿತರ ಪರ ಇರಬೇಕೋ?
ನಾನು ಇದನ್ನು ಹೇಳಲಿಕ್ಕೆ ಇನ್ನೂ ಹೆಚ್ಚು ಅನುಭವವಿದೆ. ರಘುರಾಂ ಶೆಟ್ಟಿಯವರು ಆ ಕಾಲದಲ್ಲೆ ಇದನ್ನು ಅಲೋಚನೆ ಮಾಡಿ ಇದನ್ನ ಬದಲಾವಣೆ ಮಾಡಬೇಕೆಂದು ’ಮುಂಗಾರು’ ಪತ್ರಿಕೆ ಮಾಡಿದರು. ’ಚಿಂತನೆಯ ಮಳೆ ಹರಿಸಿ ಜನಶಕ್ತಿಯ ಬೆಳೆ ತೆಗಿಯುವ.....’ ಎಂದು ಘೋಷಣೆಯೊಂದಿಗೆ ಬೀದಿಯಲ್ಲಿ ಹೋದೆವು. ಆ ಕಾಲದಲ್ಲಿ ಬಹಳ ಉದಾತ್ತವಾದ ಉದ್ದೇಶದಿಂದ ಪ್ರಾಂಭವಾಯಿತು. ಆಮೇಲೆ ಏನಾಯಿತು.? ಒಂದೆರಡು ತಿಂಗಳಲ್ಲಿ ಸರ್ಕ್ಯೂಲೇಶನ್ ಕೆಳಗಿಳಿಯಿತು. ಅನಾರೋಗ್ಯಕರ ಸ್ಪರ್ಧೆಯನ್ನು ತಡೆಯಲಿಕ್ಕೆ ಆಗಲಿಲ್ಲ. ಅದು ಕನ್ನಡದ ಮೊದಲ ಪಬ್ಲಿಕ್ ಲಿಮಿಟೆಡ್ ಕಂಪನಿ. ಓದುಗರೇ ಷೇರುದಾರರು ಎಂಬ ಕಲ್ಪನೆಯೊಂದಿಗೆ ಪ್ರಾರಂಭವಾದದ್ದು, ಅದು ಯಶಸ್ಸು ಕಂಡಿದ್ದರೆ ಬಹುಶಃ ಇವತ್ತು ದಕ್ಷಿಣ ಕನ್ನಡ ಜಿಲ್ಲೆ ಹಿಂದೂತ್ವದ ಪ್ರಯೋಗ ಶಾಲೆಯಾಗುತ್ತಿರಲಿಲ್ಲ. ಮುಂಗಾರನ್ನು ಉಳಿಸಿಕೊಳ್ಳಲು ಆಗಲಿಲ್ಲ.
          ಇಂತಹ ಒಂದು ಪತ್ರಿಕೆಯನ್ನು ಮಾಡಲು ಸಾಧ್ಯವಿಲ್ಲ ಎಂದೇನಲ್ಲ, ಆದರೆ ಅವತ್ತು ಮುಂಗಾರು ಮಾಡಿದ ಕಾಲ ಇಂದಿಲ್ಲ. ಇವತ್ತು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರಲ್ಲೂ ದುಡ್ಡಿದ್ದವರು ಒಂದಿಷ್ಟು ಜನ ಇದ್ದಾರೆ. ಇವತ್ತು ಸೋಷಿಯಲ್ ಕ್ಯಾಪಿಟಲ್ ಎಂಬುದನ್ನು ಸೋಷಿಯಲಿಜಿಸ್ಟ್ ಗಳು ಮಾತನಾಡುತ್ತಾರೆ. ಇದು ಸಾಧ್ಯವಾಗಬೇಕು. ಕೆ.ಎನ್ ಗುರುಸ್ವಾಮಿ ಅವರು ಅಬಕಾರಿ ಕಂಟ್ರ್ಯಾಕ್ಟರ್. ಅವರ ಅದೇ ಉದ್ಯಮದಲ್ಲಿ ಮುಂದುವರೆದಿದ್ದರೆ ಬಹಳಷ್ಟು ದುಡ್ಡು ಮಾಡುತ್ತಿದ್ದರು. ಆ ಕಾಲದಲ್ಲಿ ಶೂದ್ರರಿಗೆ ಪತ್ರಿಕೆ ಇರಲಿಲ್ಲ. ಆಗ ಒಂದು ಪತ್ರಿಕೆ ಮಾಡಿದರು (ಪ್ರಜಾವಾಣಿ) ೧೦ ವರ್ಷ ಪತ್ರಿಕೆ ನಷ್ಟದಲ್ಲಿ ನಡೆಯಿತು. ಇವತ್ತು ದುಡ್ಡಿದ್ದವರು ಇಲ್ಲವೇನಿಂದಿಲ್ಲ. ೧೦೦ಕೋಟಿ ರೂಗಳಿಂದ ೫೦೦ ಕೋಟಿ ಇರುವವರು, ಒಂದು ಸಾವಿರ ಎಕರೆ ಭೂಮಿ ಇಟ್ಟುಕೊಂಡಿರುವ ಕುಳಗಳು ಅಹಿಂದ ವರ್ಗಗಳಲ್ಲಿಯೇ ಇದ್ದಾರೆ. ಯಾರಾದರೂ ಮಾಧ್ಯಮದಲ್ಲಿ  ಬಂಡವಾಳ ಹೂಡಲು ತಯಾರಿದ್ದಾರಾ? ಅವರೂ ಮಾಡಿದ್ರೂ ಮುಖ್ಯಸ್ಥರಾಗಿ ಅಹಿಂದ ವರ್ಗದವರಲ್ಲದವರನ್ನು ಕೂರಿಸಿ ದೂರ ಇರುತ್ತಾರೆ. ಕೇಳಿದರೆ, ಅವರೆ ಬೇಕಪ್ಪ ನಡೆಸಲಿಕ್ಕೆ ಅಂತಾರೆ.
ಇವತ್ತು ಅನ್ನ ಭಾಗ್ಯ, ಕ್ಷೀರ ಭಾಗ್ಯ ದಂತಹ ಜನಪರ ಕಾರ್ಯಕ್ರಮಗಳಿಗೆ ಇಷ್ಟೊಂದು ವಿರೋಧ ವ್ಯಕ್ತವಾಗುತ್ತಿರುವುದು ಏಕೆ ಅನ್ನೋದನ್ನು ಯೋಚಿಸಬೇಕು. ಯಾರ್ಯಾರು ಈ ವರ್ಗಗಳ ಪರ ಮಾತನಾಡಿದ್ದಾರೋ ಅವರ ಧ್ವನಿ ಅಡಗಿಸುವ ಪ್ರಯತ್ನ ನಡೆದಿದೆ. ಅದು ದೇವರಾಜ ಅರಸು ಅವರ ವಿರುದ್ದವೂ ನಡೆದಿತ್ತು. ವಿ.ಪಿ. ಸಿಂಗ್ ಅವರು ಮಂಡಲ್ ವರದಿ ಜಾರಿಗೆ ತಂದ ತಕ್ಷಣ ಅವರು ಮಾಧ್ಯಮದ ಪಾಲಿಕೆ ಶತ್ರುಗಳಾಗಿಬಿಟ್ಟರು. ವಿ.ಪಿ ಸಿಂಗ್ ಅಹಿಂದ ವರ್ಗದವರಲ್ಲ, ಅವರೊಬ್ಬ ರಾಜ. ಅಹಿಂದ ವರ್ಗದ ಪರ ಮಾತನಾಡಲು ಆ ವರ್ಗದವೇ ಆಗಬೇಕಿಲ್ಲ. ಆ ವರ್ಗದ ಪರ ಮಾತನಾಡಿದರೆ ಸಾಕು, ಅವರ ಧ್ವನಿ ಅಡಗಿಸುವ ಕೆಲಸ ಪ್ರಾರಂಭವಾಗಿಬಿಡುತ್ತದೆ. ಬಾಬು ಜನಗಜೀವನ ರಾಂ ಅವರನ್ನು ನೆನಪಿಸಿಕೊಳ್ಳುವವರಿಲ್ಲ ಇವತ್ತು. ಹಸಿರು ಕ್ರಾಂತಿಯ ಹರಿಕಾರ. ಭಾರತ-ಪಾಕ್ ನ ಮೊದಲ ಯುದ್ಧ ನಡೆದಾಗ ರಕ್ಷಣಾ ಸಚಿವರಾಗಿದ್ದವರು. ಅವರನ್ನು ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕಾಗಿ ದಲಿತರ ಮಾಲೀಕತ್ವದ ಪತ್ರಿಕೆಗಳು ಚಾನಲ್ ಗಳು ಬರಬೇಕು ನಿಜ, ಆದರೆ ಮಾಲೀಕರಾಗಲು ದುಡ್ಡು ಬೇಕು. ಇವತ್ತು ಸಣ್ಣ ಪತ್ರಿಕೆಗಳು, ಮಾಸಿಕಗಳು ಅಲ್ಲಲ್ಲಿ ಇವೆ ದುಡ್ಡಿದ್ದವರು ಬಂದರೆ ಅಂಬೇಡ್ಕರ್ ಅವರ ಆಶಯದಂತೆ ಒಂದು ಮುಖ್ಯವಾಹಿನಿಯ ಪತ್ರಿಕೆ ಬರಬಹುದು.
ಅಮೇರಿಕಾದಲ್ಲಿ ’ಏಬೋನಿ’, ’ಚಿಕಾಗೋ ಡಿಫೆಂಡರ್’ ನಂತಹ ಕರಿಯರೆ ನಡೆಸುವ ಪತ್ರಿಕೆಗಳಿವೆ ಅಲ್ಲಿಯ ಕರಿಯರಿಗೂ ಭಾರತದ ದಲಿತರಿಗೂ ಇರುವ ವ್ಯತ್ಯಾಸವೇನೆಂದರೆ ಅಲ್ಲಿ ಒಳಪಂಗಡಗಳಿಲ್ಲ. ಭಾಷೆ ಒಂದೇ ಆಗಿದೆ. ಆ ದೇಶದಲ್ಲಿದ್ದಂತೆ ಇಲ್ಲಿಯೂ ದಲಿತರು ಅಭಿವೃದ್ಧಿ ಹೊಂದಿದ್ದಾರೆ. ಅವರಿಗೂ ಕೊಳ್ಳುವ ಸಾಮರ್ಥ್ಯ ಬಂದಿದೆ. ಇವತ್ತು ಕನ್ಸ್ಯೂಮರ್ ಗೂಡ್ಸ್‌ಗಳನ್ನು ಪರ್ಚೆಸ್ ಮಾಡುವಂತಹ ಸಾಮರ್ಥ್ಯ ಈ ಸಮುದಾಯದಲ್ಲಿ ಸ್ಪಲ್ಪ ಬಂದಿದೆ. ಟೂಥ್ ಪೇಸ್ಟ್‌ನ್ನು ದಲಿತರೂ ಬಳಸುತ್ತಿದ್ದಾರೆ. ನಾಳೆ ದಲಿತರು ಪತ್ರಿಕೆ ಮಾಡಿದರೆ ಟೂಥ್ ಪೇಸ್ಟ್ ಮಾರುವವರು ಅದಕ್ಕೆ ಜಾಹೀರಾತು ಕೊಡಲೇ ಬೇಕು.

            ಮಾಧ್ಯಮ ಕ್ಷೇತ್ರ ಸಂಪೂರ್ಣವಾಗಿ ಉದ್ಯಮವಾಗದಂತೆ ತಡೆಯಲಿಕ್ಕಾಗಿ ಸರ್ಕಾರ ಮಧ್ಯಪ್ರವೇಶ ಮಾಡಬೇಕು.ಈ ದೇಶದ ಖಾಸಗಿ ಕ್ಷೇತ್ರದಲ್ಲಿ ಉದ್ಯಮಗಳನ್ನು ಬೆಳಸಲಿಕ್ಕೆ ಸರ್ಕಾರಗಳು ಹಲವಾರು ರೀತಿಯ ನೆರವುಗಳನ್ನು ಕೊಡುತ್ತಿದೆ. ನ್ಯಾನೋ ಫ್ಯಾಕ್ಟರಿಗಾಗಿ ಗುಜರಾತ್ ನಲ್ಲಿ ಶೇ.೦.೧ ಬಡ್ಡಿದರದಲ್ಲಿ ಸಾಲ ಕೊಟ್ಟಿದೆ. ಪಂಜಾಬ್‌ನಲ್ಲಿ ಬಿರ್ಲಾ ರಿಫೈನರಿ ಪ್ರಾರಂಭಿಸಲು ಲಕ್ಷ್ಮಿ ಮಿಟ್ಟಲ್ ಗೆ ಅಲ್ಲಿನ ಸರ್ಕಾರ ೧೨೫೦ಕೋಟಿ ರೂಗಳನ್ನು  ಶೇಕಡಾ 0.1 ಬಡ್ಡಿ ದರದಲ್ಲಿ ಸಾಲ ನೀಡಿದೆ. ಇಂತಹ ದೊಡ್ಡ ಪಟ್ಟಿಯೇ ಇದೆ. ಪಿ.ಸಾಯಿನಾಥ್ ಅವರ ನ್ನು ಕೇಳಿದ್ರೆ  ಇನ್ನೂ ದೊಡ್ಡಪಟ್ಟಿಯನ್ನೆ ಕೊಡುತ್ತಾರೆ. ಇಡೀ ರೈತರಿಗೆ ಕೊಡುವ ೨ವರೆ ಲಕ್ಷ ಕೋ.ರೂ ಸಬ್ಸಿಡಿ ಏನಿದೆ ಅದನ್ನೆ ದೊಡ್ಡದು ತಿಳಿದುಕೊಂಡಿದ್ದೇವೆ. ಆದರೆ ಕಾರ್ಪೋರೇಟ್ ಸೆಕ್ಟರ್ ಗೆ ಸರ್ಕಾರ೩೬ಲಕ್ಷ ಕೋಟಿ ರೂಗಳ ತೆರಿಗೆ ವಿನಾಯಿತಿ ನೀಡಿದೆ.ರಿಲಯನ್ಸನ ವಾರ್ಷಿಕ ವರಮಾನ ೨ವರೆ ಲಕ್ಷ ಕೋ.ರೂ. ನಮ್ಮ ಕರ್ನಾಟಕದ ಬಜೆಟ್ ೧ಲಕ್ಷ ೨೦ಸಾವಿರ ಕೊಟಿ ರೂಪಾಯಿ.  ವಿಜಯ ಮಲ್ಯ ಏನು ಮಾಡಿದಾನೆ ಅಂತ ಗೊತ್ತಿದೆ. ಅವನಿಗೆ ಸಾಲ ಕೊಟ್ಟ ಬ್ಯಾಂಕಿನಿಂದ ೫-೧೦ ಸಾವಿರ ರೂ.ಸಾಲ ಮಾಡಿದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಸಾವಿರಾರು ಕೋ.ರೂ ಮುಳುಗಿಸಿದ ಮಲ್ಯ ವಿದೇಶದಲ್ಲಿ ಮಜಾ ಮಾಡುತ್ತಿದ್ದಾನೆ. ಇದು ಇಂಡಿಯಾದ ಪರಿಸ್ಥಿತಿ.
            ಆದ್ದರಿಂದ ಮಾಧ್ಯಮ ಈ ಸಮಾಜಕ್ಕೆ ಬೇಕು ಎನ್ನುವುದಾದರೆ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಜವಾಗಿ ಅರ್ಥದಲ್ಲಿ ಉಳಿಸಿಕೊಳ್ಳಬೇಕಾದರೆ ಮಾರ್ಧಯಮದಲ್ಲಿ ಎಲ್ಲಾ ಸಮುದಾಯಗಳ ಅನುಭವ ಲೋಕಗಳು ಬರಬೇಕಾದರೆ ಈ ಪತ್ರಿಕೋದ್ಯಮ ಮಾಡುವವರಿಗೂ ಕೂಡ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕ್‌ಗಳು ಸಾಲ ಕೊಡಬೇಕು. ಸಬ್ಸಿಡಿ ಯಾಕೆ ಕೊಡಬಾರದು? ಅದನ್ನು ಎಲ್ಲಾ ಉದ್ಯಮಗಳ ಮಟ್ಟಿಗೆ ತಂದು ನಿಲ್ಲಿಸಿದರೆ ಸ್ಪರ್ಧೆ ಮಾಡಲು ಆಗುವುದಿಲ್ಲ. ನ್ಯಾನೋ ಕಾರಿನ ಫ್ಯಾಕ್ಟರಿಗೆ ಶೇ.೦.೧ ರ ಬಡ್ಡಿದರದಲ್ಲಿ ಸಾಲ ಕೊಡುವುದಾದರೆ ಒಂದು ಪತ್ರಿಕೆ ಮಾಡಲು ಯಾಕೆ ಕೊಡಬಾರದು ಎಂಬುದು ನನ್ನ ಪ್ರಶ್ನೆ.
             ಉದ್ಯಮಿಗಳು ನೇರವಾಗಿ ಮಾಧ್ಯಮ ಕ್ಷೇತ್ರಕ್ಕೆ ಬಂದು ತಮ್ಮ ಸ್ವಾಮ್ಯಕ್ಕೆ ತೆಗೆದುಕೊಳ್ಳುವುದು ಪ್ರಜಾಪ್ರಭುತ್ವಕ್ಕೆ ಬಹಳ ಅಪಾಯಕಾರಿ. ನ್ಯೊಮ್ ಚಾಮಸ್ಕೀ ಅವರು ’ಮ್ಯಾನುಫ್ಯಾಕ್ಚರಿಂಗ್ ಕನ್ಸೆಂಟ್’ ಅಂತ ಹೇಳ್ತಾರೆ. ಸಮ್ಮತಿಗಳನ್ನು ಉತ್ಪಾದಿಸುವಂತಹುದು. ಇವತ್ತು ಚಾನಲ್‌ಗಳಲ್ಲಿ ಪತ್ರಿಕೆಗಳಲ್ಲಿ ಶೇ.೯೮ರಷ್ಟು ಜನತೆ  ಸರ್ಕಾರದ ವಿರುದ್ದವಾಗಿವೆ. ಶೇ ೨ ರಷ್ಟು ಪರವಾಗಿದೆ ಎಂದು ಬಿತ್ತರಿಸಲಾಗುತ್ತಿದೆ.. ಇದು ನಿಜನಾ? ಇಂತಹ ’ಸಮ್ಮತಿ ಉತ್ಪಾದನೆ’ಇಂಡಿಯಾದಲ್ಲಿ ಆಗಬಾರದು ಎಂದಾದರೆ ಪತ್ರಿಕೆಗಳನ್ನು ಪ್ರಾರಂಭ ಮಾಡುವವರಿಗೆ ಸರ್ಕಾರ ನೆರವಿಗೆ ಬರಬೇಕು. ದಲಿತ ಉದ್ಯಮಿ ಸಂಘಟನೆಗಳು ಈ ಬಗ್ಗೆ ಯೋಚನೆ ಮಾಡಬೇಕು.ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೨೫ ನೇ ಜನ್ಮ ದಿನಾಚರಣೆಯ ಸಮಯದಲ್ಲಿ ಇಂತಹದ್ದೊಂದು ಚಿಂತನೆ ನಡೆಯಲಿ.. ಸಾಧ್ಯವಾದರೆ ಅಂಬೇಡ್ಕರ್ ಅವರು ಪ್ರಾರಂಭಿಸಿದ್ದ ಎಲ್ಲಾ ಪತ್ರಿಕೆಗಳ ಎಡಿಟೋರಿಯಲ್ ಗಳನ್ನು ಕನ್ನಡಕ್ಕೆ ತರುವ ಕೆಲಸ ಆಗಲಿ. ಸರ್ಕಾರ  ಇದನ್ನು ಮಾಡಿದರೆ ಸಂತೋಷದ ವಿಷಯ.
-ದಿನೇಶ್ ಅಮಿನ್ ಮಟ್ಟು