ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದಾಗ ಅಲ್ಲಿನ ಅಕ್ರಿಡಿಷನ್ ಇಲ್ಲದ ನಾವು ಸಂದರ್ಶಕರ ಪಾಸ್ ನಲ್ಲಿ ಒಳಗೆ ಹೋಗಿ ಗಂಟೆಗಟ್ಟಲೆ ನಿಂತುಕೊಂಡೇ ನ್ಯಾಯಮೂರ್ತಿಗಳ ಕಣ್ಣಿಗೆ ಬೀಳದಂತೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆವು. ಗೊಂದಲ ಮೂಡಿದರೆ ಅದನ್ನು ಬಗೆಹರಿಸಲು ನೀರಾವರಿ ವಿವಾದದ ವಿಷಯದಲ್ಲಿ ‘ಸರ್ವಜ್ಞ’ ರೆನಿಸಿರುವ ನಮ್ಮೆಲ್ಲರ ಗೆಳೆಯರಾಗಿರುವ ಮೋಹನ್ ಕಾತರಕಿ ಇದ್ದರು. ನಮ್ಮ ನಡುವೆ ಯಾರೂ ಬಹಿರಂಗವಾಗಿ ಒಪ್ಪಿಕೊಳ್ಳದ ಸಣ್ಣ ವೃತ್ತಿಸಂಬಂಧಿ ಪೈಪೋಟಿ ಕೂಡಾ ಇತ್ತು, ಅದನ್ನು ಮೀರಿದ ಸ್ನೇಹವೂ ಇತ್ತು. ಈಗಲೂ ದೆಹಲಿಯಲ್ಲಿರುವ ಕನ್ನಡದ ಪತ್ರಕರ್ತರು ಸೆನ್ಸಿಬಲ್ ಆಗಿ ವರದಿ ಮಾಡುತ್ತಿರುವುದನ್ನು ಕೂಡಾ ಗಮನಿಸಬಹುದು.
ನೆಲ,ಜಲ,ಭಾಷೆಗೆ ಸಂಬಂಧಿಸಿದ ವಿವಾದ ಎದ್ದಾಗೆಲ್ಲ ನಮ್ಮದು ಒಂದೇ ಪಕ್ಷ, ಅದು ಕರ್ನಾಟಕ ಪಕ್ಷ ಎಂದು ನಾವು ತಮಾಷೆಮಾಡಿಕೊಳ್ಳುತ್ತಿದ್ದೆವು. ಅಂದಮಾತ್ರಕ್ಕೆ ಕಹಿಸತ್ಯವನ್ನು ಹೇಳಲು ನಾವು ಹಿಂಜರಿಯುತ್ತಿರಲಿಲ್ಲ. ಬಹಳಷ್ಟು ಸಲ ಅದು ಸರ್ಕಾರಕ್ಕೆ, ಸಚಿವರುಗಳಿಗೆ ಇಷ್ಟವಾಗುತ್ತಿರಲಿಲ್ಲ. ಆದರೆ ನಾವು ಹುಸಿ ರಾಜ್ಯಪ್ರೇಮದಲ್ಲಿ ತೇಲಿಹೋಗಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಎಂದೂ ಮಾಡಿರಲಿಲ್ಲ. ಆದರೆ ರಾಜ್ಯದ ಹಿತಾಸಕ್ತಿಯ ವಿರುದ್ಧ ನಾವಿಲ್ಲ ಎನ್ನುವುದನ್ನು ನಮ್ಮ ಬರವಣಿಗೆಯ ಮೂಲಕ ಆಗಲೇ ಸಾಬೀತುಪಡಿಸಿದ್ದ ಕಾರಣದಿಂದಾಗಿ ಕಹಿಸತ್ಯ ಬರೆದಾಗಲೂ ಜನ ಅರ್ಥಮಾಡಿಕೊಳ್ಳುತ್ತಿದ್ದರು ಮತ್ತು ಪ್ರೀತಿಯಿಂದ ಒಪ್ಪಿಕೊಳ್ಳುತ್ತಿದ್ದರು.
2007ರಲ್ಲಿ ಕಾವೇರಿ ನ್ಯಾಯಮಂಡಳಿ ತನ್ನ ಅಂತಿಮ ಐತೀರ್ಪು ನೀಡಿದಾಗಲೂ ರಾಜ್ಯದಲ್ಲಿ ಬಂದ್ ಗೆ ಕರೆನೀಡಲಾಗಿತ್ತು. ನನಗೆ ಸರಿಯಾಗಿ ನೆನಪಿದೆ, ಅದು ಫೆಬ್ರವರಿ 12, 2007. ಅದೇ ದಿನಕ್ಕೆಂದು ನಾನು ವಿಶೇಷ ವರದಿ ತಯಾರಿಸಿದ್ದೆ. ‘ಕಾವೇರಿ: ರಾಜ್ಯಕ್ಕೆ ಲಾಭ, ನಷ್ಟ ಎಷ್ಟು?’ ಎನ್ನುವುದು ಅದರ ತಲೆಬರಹವಾಗಿತ್ತು. ಐತೀರ್ಪಿನಿಂದಾಗಿ ರಾಜ್ಯಕ್ಕೆ ಘನಘೋರ ಅನ್ಯಾಯವಾಗಿದೆ ಎಂಬ ಪ್ರಚಾರ ನಡೆಯುತ್ತಿದ್ದ ಕಾಲ ಅದು. ಅದರಿಂದ ಕರ್ನಾಟಕಕ್ಕೆ ಲಾಭವೂ ಇದೆ ಎನ್ನುವುದನ್ನು ನಾನುಬರೆದಿದ್ದೆ. ಸ್ವಲ್ಪ ರಿಸ್ಕಿ ವರದಿ ಅದು. ಮೊದಲಪುಟದಲ್ಲಿ ಪ್ರಕಟವಾಗಬೇಕಾಗಿದ್ದ ಆ ವರದಿಯನ್ನು ಸುದ್ದಿಸಂಪಾದಕರು ಸ್ವಲ್ಪ ಅಂಜಿಕೆಯಿಂದ ಒಳಪುಟದಲ್ಲಿ ಪ್ರಕಟಿಸಿದರು. ಆದರೆ ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ನಾನು ಮರೆಯಲಾರದಂತಹದ್ದು. ಒಬ್ಬ ಓದುಗ ಕೂಡಾ ಬರೆದುದು ತಪ್ಪು, ಬರೆಯಬಾರದಿತ್ತು ಎಂದುನನಗೆ ಹೇಳಲಿಲ್ಲ.
ಅದರ ನಂತರ 2007ರಲ್ಲಿಯೇ ಆಗ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಎಸ್.ಜಿ.ಸಿದ್ದರಾಮಯ್ಯ ಮತ್ತಿತರರು ಕರ್ನಾಟಕದ ಎಲ್ಲ ಅಕಾಡೆಮಿಗಳನ್ನು ಒಗ್ಗೂಡಿಸಿ ರಿ ಕಾವೇರಿ ವಿವಾದ ಬಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಅದರಲ್ಲಿ ವಿಷಯ ಮಂಡನೆಗೆ ಕಿರಿಯನಾದ ನನ್ನನ್ನು ಆಹ್ಹಾನಿಸಿದ್ದರು. ಪ್ರತಿಕ್ರಿಯಿಸಲು ಹಿರಿಯರಾದ ನೀರಾವರಿ ತಜ್ಞ ಧುರೀಣ ನಂಜೇಗೌಡರು, ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್, ಶಾಸಕ ಎಸ್. ಸುರೇಶ್ ಕುಮಾರ್ ಮೊದಲಾದವರು ವೇದಿಕೆಯಲ್ಲಿದ್ದರು. ಸಭಾಂಗಣ ಹಸಿರುಶಾಲುಗಳಿಂದ ತುಂಬಿತ್ತು. ನಾನು ಎಂದಿನ ನೇರಾನೇರ ಶೈಲಿಯಲ್ಲಿ ಮಾತನಾಡಿ ತಪ್ಪು-ಒಪ್ಪುಗಳನ್ನು ಮುಂದಿಟ್ಟೆ. ಯಾರೂ ಕಲ್ಲು ಒಗೆಯಲಿಲ್ಲ, ಕೆಳಗಿಳಿಯುತ್ತಿದ್ದಂತೆ ಕೈಕುಲುಕಿದರು, ಅಪ್ಪಿಕೊಂಡರು. ( ನನ್ನ ಮಾತುಗಳು ಮುಗಿಯುತ್ತಿದ್ದಂತೆಯೇ ನನ್ನ ಮೊಬೈಲ್ ಗೆ ‘Well done” ಎನ್ನುವ ಮೆಸೆಜ್ ಬಂದಿತ್ತು. ಯಾರೆಂದುನೋಡಿದರೆ ನಮ್ಮ ಸಂಪಾದಕರಾದ ಕೆ.ಎನ್.ಶಾಂತಕುಮಾರ್. ಅವರ ಹಿಂದಿನ ಸಾಲಲ್ಲಿ ಪ್ರೇಕ್ಷಕರಾಗಿ ಬಂದು ನಮ್ಮೆಲ್ಲರ ಮಾತುಗಳನ್ನು ಕೇಳಿದ್ದರು)
ಬೆಂಗಳೂರಿಗೆ ಹಿಂದಿರುಗಿದ ನಂತರ ಮಂಡ್ಯದ ಎಚ್.ಕೆ.ಎಲ್ .ಕೇಶವಮೂರ್ತಿ ಮತ್ತು ಗೆಳೆಯರು ಕಾವೇರಿ ವಿವಾದದ ಬಗ್ಗೆಯೇ ಮಾತನಾಡಲು ಮಂಡ್ಯಕ್ಕೆ ಆಹ್ಹಾನಿಸಿದರು. ಅದು ಕಾವೇರಿ ಐತೀರ್ಪಿನ ಬಗ್ಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದ ಕಾಲ. ನಾನು ಅಲ್ಲಿಯೂ ಹೆಚ್ಚು ಜನಪ್ರಿಯವಲ್ಲದ ಸತ್ಯದ ಮಾತುಗಳನ್ನಾಡಿದೆ. ಹಿರಿಯರಾದ ಜಿ.ಮಾದೇಗೌಡರು ವಾದಕ್ಕೆ ನಿಂತರು. ಅವರ ಹಿರಿತನಕ್ಕೆ ಗೌರವಕೊಡುತ್ತಲೇ ನನ್ನ ಮಾತುಗಳನ್ನು ಸಮರ್ಥಿಸಿಕೊಂಡೆ. ಸಭಾಂಗಣದಲ್ಲಿದ್ದವರ್ಯಾರು ನನ್ನಮೇಲೇರಿ ಬರಲಿಲ್ಲ.
ಇಂತಹ ಪ್ರಸಂಗಗಳನ್ನು ಉಲ್ಲೇಖಿಸುತ್ತಲೇ ಹೋಗಬಹುದು. ಹೇಳಲು ಕಾರಣ ಇಷ್ಟೆ: ಕರ್ನಾಟಕದ ಜನ ಬುದ್ದಿವಂತರು. ಭಾವುಕರಾದರೂ ಪ್ರಜ್ಞಾವಂತರು. ಹೇಳಬೇಕಾದುದನ್ನು ಹೇಳಬೇಕಾದವರು, ಹೇಳಬೇಕಾದ ರೀತಿಯಲ್ಲಿ ಹೇಳಿದರೆ ಖಂಡಿತ ಕೇಳುತ್ತಾರೆ. ಈ ಗುಣವಿಶೇಷದಿಂದಾಗಿಯೇ ನನ್ನಂತಹ ಸಾಮಾನ್ಯ ವರದಿಗಾರನೊಬ್ಬನ ಮಾತನ್ನು ಕೂಡಾ ಕೇಳಿದ್ದರು.
ಕಳೆದ ಕೆಲವು ದಿನಗಳಿಂದ ಮತ್ತೆ ಎದ್ದಿರುವ ಕಾವೇರಿ ವಿವಾದದ ಬಗ್ಗೆ ಪತ್ರಿಕೆ ಮತ್ತು ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ವರದಿ, ಚರ್ಚೆ, ವಿಶ್ಲೇಷಣೆಗಳನ್ನು ಓದಿದಾಗ, ನೋಡಿದಾಗ ಇದನ್ನೆಲ್ಲ ಬರೆಯಬೇಕೆನಿಸಿತು. ಈಗಲೂ ಎಲ್ಲ ಮಾಧ್ಯಮಗಳು, ಎಲ್ಲ ಪತ್ರಕರ್ತರೂ ರೋಚಕತೆಗೆ ಮಾರುಹೋಗಿದ್ದಾರೆ ಎಂದು ನನಗನಿಸುವುದಿಲ್ಲ. ಆದರೆ ಮಂತ್ರಕ್ಕಿಂತ ಉಗುಳು ಹೆಚ್ಚಾಗಿದೆ.
No comments:
Post a Comment