Saturday, March 4, 2017

ಭಾರತದಲ್ಲಿ ದೇಶದ್ರೋಹ, ದೇಶಪ್ರೇಮ

ಭಾರತದಲ್ಲಿರಲು ಭಯವಾಗುತ್ತಿದೆ ಎಂದು ನಾನು ಹೇಳಿರುವುದು ನಿಜ. ಇತ್ತೀಚಿನ ದಿನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದೇಶಾದ್ಯಂತ ನಡೆಯುತ್ತಿರುವ ದಾಳಿಯ ಅನುಭವ ವೈಯಕ್ತಿಕವಾಗಿ ನನಗೂ ಆಗುತ್ತಿದೆ. ನಿನ್ನೆ ಅಂಬೇಡ್ಕರ್ ವಾದಿ ಡಾ.ಕೀರ್ವಾಲೆಯವರ ಹತ್ಯೆ ನಡೆದಿದೆ, ಪಿಣರಾಯ್ ತಲೆಕಡಿಯಬೇಕೆಂದು ಇನ್ನೊಬ್ಬ ತಲೆಕೆಟ್ಟವನು ಹೇಳಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರಾಲ್ ಗಳು ಹುಚ್ಚುನಾಯಿಗಳಂತೆ ಅಭಿಪ್ರಾಯ ವಿರೋಧಿಗಳ ಮೇಲೆ ಮುಗಿಬೀಳುತ್ತಿದ್ದಾರೆ.
ಪಿಣಾರಾಯ್ ವಿಜಯನ್ ಭೇಟಿಯ ಪರವಾಗಿ ನಾನು ಸ್ಟೇಟಸ್ ಹಾಕಿದರೆ ನನ್ನನು ಗುಂಡಿಕ್ಕಿ ಸಾಯಿಸಬೇಕು ಎಂದು ಒಬ್ಬ ಬೆದರಿಕೆ ಹಾಕುತ್ತಾನೆ, ಇನ್ನೊಂದು ಸಂದರ್ಭದಲ್ಲಿ ಮತ್ತೊಬ್ಬ ಆ್ಯಸಿಡ್ ಹಾಕಿ ಎಂದು ಹೇಳುತ್ತಾನೆ. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಲು ಹೊರಟರೆ ಅಭಿವ್ಯಕ್ತಿ ಸ್ವಾತಂತ್ರ್ಯದ.ಹರಣ ಮಾಡಲಾಗುತ್ತಿದೆ ಎಂದು ನನ್ನ ವಿರುದ್ದವೇ ಅಪಪ್ರಚಾರ ಮಾಡಲಾಗುತ್ತದೆ, ವಿಧಾನಸೌಧದಲ್ಲಿ ಕೂತು ಅಧಿಕಾರದ ದುರುಪಯೋಗ ಮಾಡುತ್ತಿದ್ದಾನೆ ಎಂದು ಆರೋಪ ಮಾಡುತ್ತಾರೆ. ನನ್ನ ಪ್ರತಿಯೊಂದು ಮಾತನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ನನ್ನ ವಿರುದ್ಧ ನನ್ನವರನ್ನೇ ಎತ್ತಿ ಕಟ್ಟುವ ಷಡ್ಯಂತ್ರ ಹೆಣೆಯಲಾಗುತ್ತಿದೆ.
ಇವೆಲ್ಲ ಒಂದು ರೀತಿಯಲ್ಲಿ ನನ್ನನ್ನು ಅಸಹಾಯಕ ಸ್ಥಿತಿಗೆ ತಳ್ಳಿರುವುದು ನಿಜ. ಈ ಭಯ ವೈಯಕ್ತಿಕ ಸಾವಿನದಲ್ಲ, ಸಾವನ್ನು ಹೊಸ್ತಿಲಲ್ಲಿ ಕೂರಿಸಿ ಬದುಕುತ್ತಿರುವವನು ನಾನು. ಇದು ಭಯಭೀತ ಸಮಾಜವನ್ನು ಕಾಣುತ್ತಿರುವಾಗ ಹುಟ್ಟಿಕೊಂಡ ಭಯ. ದುರ್ಜನರ ಆರ್ಭಟವನ್ನು ಮತ್ತು ಸಜ್ಜನರ ಮೌನವನ್ನು ಕಾಣುತ್ತಿರುವಾಗ ಹುಟ್ಟಿಕೊಂಡ ಭಯ.
ಈ ಹಿನ್ನೆಲೆಯಲ್ಲಿ ನಾನು ಪಾವಗಡದಲ್ಲಿ ಮಾತನಾಡುತ್ತಾ 'ಇಂತಹ ಭಾರತದಲ್ಲಿರಲು ನನಗೆ ಭಯವಾಗುತ್ತಿದೆ' ಎಂದು ಹೇಳಿದ್ದೆ. ಈ ಮಾತನ್ನು ಮೊನ್ನೆ ಮಂಗಳೂರಿನಲ್ಲಿಯೂ ಹೇಳಿದ್ದೇನೆ. ಇದರ ಜತೆ '' ಭಯಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ನಾವು ಮುಂದಾಗಬೇಕು. ಇದು ನಮ್ಮ ದೇಶ, ಇಲ್ಲಿ ಚಾರ್ವಾಕರಿಗೂ ಚಿಂತಕರ ಚಾವಡಿಯಲ್ಲಿ ಜಾಗ ಇತ್ತು, ಅವರ ತಲೆ ಕಡಿಯಬೇಕು ಎಂದು ಯಾರೂ ಹೇಳಿರಲಿಲ್ಲ. ಭಯಮುಕ್ತವಾದ ಮತ್ತು ಅಭಿಪ್ರಾಯಭೇದಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವಾತಾವರಣ ಇರುವ ಭಾರತವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ, ಯಾಕೆಂದರೆ ನಮಗಿರುವುದು ಒಂದೇ ಭಾರತ'' ಎಂದು ನಾನು ಪಾವಗಡವೂ ಸೇರಿದಂತೆ ರಾಜ್ಯದ ಹಲವಾರು ಕಡೆಗಳಲ್ಲಿ ಭಾಷಣ ಮಾಡಿದ್ದೆ.
ಇತ್ತೀಚಿನ.ದಿನಗಳಲ್ಲಿ ನನ್ನ ಭಾಷಣ-ಬರವಣಿಗೆಗಳ ಕೆಲವು ಭಾಗಗಳನ್ನಷ್ಟೇ ಆಯ್ದು ವಿವಾದವನ್ನಾಗಿ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿರುವುದರಿಂದ ಈ ಮಾತುಗಳನ್ನು ಹೇಳಬೇಕಾಯಿತು.
ನನ್ನ ಪ್ರಕಾರ 'ಭ್ರಷ್ಟಾಚಾರ, ಕೋಮುವಾದ ಮತ್ತು ಜಾತಿವಾದ ಎನ್ನುವುದು ದೇಶದ್ರೋಹ. ಪ್ರಾಮಾಣಿಕತೆ, ಜಾತ್ಯತೀತತೆ ಮತ್ತು ಜಾತಿನಾಶ ಎನ್ನುವುದು ದೇಶಪ್ರೇಮ

No comments:

Post a Comment