Thursday, March 2, 2017

ಉತ್ತರ ಪ್ರದೇಶ ಚುನಾವಣೆ 2017

ಉತ್ತರಪ್ರದೇಶದ ಚುನಾವಣೆ ಕೊನೆಯ ಚರಣದಲ್ಲಿದೆ. 2002ರಿಂದ 2012ರ ವರೆಗೆ (2002,2007 ಮತ್ತು 2012ರ ವಿಧಾನಸಭಾ ಚುನಾವಣೆ, 2004 ಮತ್ತು 2009ರ ಲೋಕಸಭಾ ಚುನಾವಣೆ) ಉತ್ತರಪ್ರದೇಶದಲ್ಲಿ ನಡೆದಿರುವ ಎಲ್ಲ ಚುನಾವಣೆಗಳ ಪ್ರತ್ಯಕ್ಷದರ್ಶಿ ವರದಿಯನ್ನು ನಾನು ‘ಪ್ರಜಾವಾಣಿ’ಗಾಗಿ ಮಾಡಿದ್ದೆ. 
ಕಳೆದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ನಾನು 25 ದಿನ ಒಂದು ದಿನವೂ ತಪ್ಪಿಸಿಕೊಳ್ಳದೆ ಸಮೀಕ್ಷಾ ವರದಿ ಮಾಡಿದ್ದೆ. ಹದಿನಾಲ್ಕು ವರ್ಷಗಳ ಕಾಲ ನಾನು ಬರೆದ ಅಂಕಣಗಳಲ್ಲಿ ಯಾವುದಾದರೂ ಒಂದು ರಾಜ್ಯದ ಬಗ್ಗೆ ಅತೀಹೆಚ್ಚು ಬರೆದಿದ್ದರೆ ಆ ರಾಜ್ಯ ಉತ್ತರಪ್ರದೇಶ. ಅಂಕಣಗಳು ಮತ್ತು ಸಮೀಕ್ಷಾ ವರದಿಗಳ ಲೆಕ್ಕ ಹಾಕಿದರೆ ಡಬ್ಬಲ್ ಸೆಂಚುರಿಗೆ ಹತ್ತಿರ ಹೋಗಬಹುದು.
ಕಾನ್ಪುರದ ಬೀಗ... ಆಗ್ರಾದ ತಾಜಮಹಲ್... ಮೊರದಾಬಾದ್ ನ 'ಪೀತಲ್ ನಗರಿ'... ಮೇರಠ್ ನ ಕಬ್ಬು-ಬೆಲ್ಲ... ಅಯೋಧ್ಯೆಯ ಡೇರೆಯಲ್ಲಿ ಕೂತಿದ್ದ ರಾಮ... ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ರಾಮಮಂದಿರದ ಇಟ್ಟಿಗೆಗಳ ರಾಶಿ... ಗಾಜಿಪುರದ ಬಾಹುಬಲಿಗಳು...ಪಿಲಿಬಿಟ್ ನಲ್ಲಿ ಹರಿಪ್ರಸಾದ್ ಚೌರಾಸಿಯಾ ಊದುವ ಕೊಳಲು ತಯಾರಿಸುತ್ತಿರುವ ಬಡ ಮುಸ್ಲಿಮ್ ಕುಶಲಕರ್ಮಿಗಳು....ಈಟಾವಾದ ಅಂತರರಾಷ್ಟ್ರೀಯ ಮಟ್ಟದ ಹಾಕಿ ಮೈದಾನ... ಗೋರಖ್ ಪುರದ ಸೊಳ್ಳೆಗಳು, ಮಿರ್ಜಾಪುರವನ್ನು ಕಾಡುತ್ತಿರುವ ಪೂಲನ್ ದೇವಿ “ಭೂತ”.. ಕಾಶಿಯ ಮೂಕ ವಿಶ್ವನಾಥ... ನಾರುತ್ತಿರುವ ಗಂಗೆಯಲ್ಲಿ ದೋಣಿ ಓಡಿಸುತ್ತಿದ್ದ ಪಪ್ಪು ಬೋಟ್ ಮೆನ್... ರಾಹುಲ್ ಸಾಂಕೃತಾಯನ ಹುಟ್ಟಿದ ಅಜಮ್ ಘಡ್ ನಲ್ಲಿ ಅಬುಸಲೇಂ ಕಟೌಟ್, ಲಖನೌದಲ್ಲಿ ಸುತ್ತುತ್ತಿದ್ದ ಮುಸ್ಲಿಮರ ‘ಅಟಲ್ ರಥ’
ಸುತ್ತಾಡಿದ ಊರು, ಮಾತನಾಡಿಸಿದ ಜನ, ಊಟ-ತಿಂಡಿ,ಬಸ್, ಕಾರು, ರೈಲು, ಚಾಲಕರು, ರೂಮ್ ಬಾಯ್ ಗಳು, ಅನುಭವಿಸಿದ ಖುಷಿ, ಭಯ, ಒತ್ತಡ ಎಲ್ಲವನ್ನೂ ಇಂದು ಕೂತು ನೆನಪುಮಾಡಿಕೊಂಡಾಗ ಸಾರ್ಥಕತೆಯ ಭಾವ ಮೂಡುತ್ತದೆ.
ದೇಶದ ರಾಜಕಾರಣ ಎತ್ತುವ ಮುಖ್ಯ ಪ್ರಶ್ನೆಗಳಿಗೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಉತ್ತರ ಇದೆ ಎಂದು ನಾನು ನಂಬಿದವನು. ಈ ಹಿನ್ನೆಲೆಯಲ್ಲಿ ಕನ್ನಡದ ಪತ್ರಿಕೆಗಳು ಮತ್ತು ಚಾನೆಲ್ ಗಳಲ್ಲಿ ಕಳೆದ ಕೆಲವು ದಿನಗಳಿಂದ ನಾನು ಹುಡುಕುತ್ತಿದ್ದ ಉತ್ತರಪ್ರದೇಶ ಕಾಣದೆ ಇದ್ದಾಗ ಹಳೆಯ ರಿಪೋರ್ಟಿಂಗ್ ಡೈರಿ ತೆರೆದು ಪುಟ ತಿರುಗಿಸಿದೆ. ನೆನಪುಗಳು ನುಗ್ಗಿಬಂತು.

No comments:

Post a Comment