Wednesday, March 2, 2016

ಅಪಪ್ರಚಾರಕ್ಕೆ ನನ್ನ ಮೌನ ಕಾರಣವಾಗಬಾರದೆಂದು..

ಕಳೆದ ಶನಿವಾರ ಉಡುಪಿಯಲ್ಲಿ ಕೆಮ್ಮಲಜೆ ಜಾನಪದ ಪ್ರಕಾಶನ ಏರ್ಪಡಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಡಿದ ನನ್ನ ಮಾತುಗಳ ಆಯ್ದ ಭಾಗಗಳ ಪ್ರಕಟಿತ ವರದಿಯನ್ನು ಆಧರಿಸಿ ತಥಾಕಥಿತ ‘ದೇಶಪ್ರೇಮಿ’ಗಳು ನನ್ನನ್ನು ದೇಶದ್ರೋಹದ ಆರೋಪದಲ್ಲಿ ಗಲ್ಲಿಗೇರಿಸಲು ಹೊರಟಿದ್ದಾರೆ. ಇತ್ತೀಚೆಗೆ ಇಂತಹ ಕೀಟಳೆಗಳು ಸಾಮಾನ್ಯವಾಗತೊಡಗಿರುವ ಕಾರಣ ಪ್ರತಿಕ್ರಿಯಿಸಬಾರದೆಂದು ಸುಮ್ಮನಿದ್ದೆ. ಆದರೆ ಅಪಪ್ರಚಾರಕ್ಕೆ ನನ್ನ ಮೌನ ಕಾರಣವಾಗಬಾರದೆಂದು ಅಲ್ಲಿ ಮಾತನಾಡಿದ್ದನ್ನು ಸಂಕ್ಷಿಪ್ತವಾಗಿ ಇಲ್ಲಿ ಹೇಳಿದ್ದೇನೆ:
1. “ ...ನಾವೆಲ್ಲ ಜಾನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಹೇಳುತ್ತೇವೆ. ಆದರೆ ಅದನ್ನು ಉಳಿಸುವವರು ಯಾರು? ಜಾನಪದ ಸಂಸ್ಕೃತಿಯ ಸಂಶೋಧಕರೇ? ಇಲ್ಲವೆ ಜಾನಪದ ಸಂಸ್ಕೃತಿಯನ್ನು ಜೀವಂತವಾಗಿಟ್ಟಿರುವ ಕಲಾವಿದರೇ? ಜಾನಪದ ಸಂಶೋಧಕರಿಗೆ ಸರ್ಕಾರವೇ ಸುಭದ್ರವಾದ ಉದ್ಯೋಗ ನೀಡಿ ಸಂಶೋದನೆಗೆ ಅನುವು ಮಾಡಿಕೊಡುತ್ತದೆ. ಆದರೆ ಜಾನಪದ ಕಲಾವಿದರ ಸ್ಥಿತಿ ಏನು? ಭೂತಾರಾಧನೆಯೂ ಜಾನಪದ ಸಂಸ್ಕೃತಿಯ ಭಾಗ. ಈ ಭೂತ ಕಟ್ಟುವವರು ದಲಿತ ಸಮುದಾಯಕ್ಕೆ ಸೇರಿದವರು. ಭೂತಾರಾಧನೆಯ ಸಂಸ್ಕೃತಿಯನ್ನು ಉಳಿಸಬೇಕೆಂದು ಈ ದಲಿತ ಕಲಾವಿದರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೆ, ಉದ್ಯೋಗಕ್ಕೆ ಸೇರಿಸದೆ ಭೂತ ಕಟ್ಟುವ ಕಲಾವಿದರನ್ನಾಗಿಯೇ ಉಳಿಸಬೇಕೆಂಬುದು ತೀರಾ ಅಮಾನವೀಯವಾದುದು. ದಲಿತ ತಂದೆ-ತಾಯಿ ಕೂಡಾ ತಮ್ಮ ಮಕ್ಕಳು ಡಾಕ್ಟರ್,ಎಂಜನಿಯರ್ ಆಗಬೇಕೆಂದು ಬಯಸಿದರೆ ತಪ್ಪೇ?
2. ಇದೇ ರೀತಿ ಇತ್ತೀಚೆಗೆ ಧರ್ಮ ರಕ್ಷಣೆಗಾಗಿ ಹೋರಾಟ ನಡೆಸಬೇಕೆಂದು ಧಾರ್ಮಿಕ ನಾಯಕರು ಕರೆಕೊಡುತ್ತಾ ಇದ್ದಾರೆ. ಆದರೆ ಈ ಧರ್ಮ ರಕ್ಷಣೆಗಾಗಿ ಬೀದಿಗಿಳಿದು ಪೊಲೀಸ್ ಕೇಸ್ ಹಾಕಿಸಿಕೊಂಡು ಜೈಲು ಸೇರುತ್ತಿರುವವರು ಶೂದ್ರರು ಮತ್ತು ಬಡವರು. ಧರ್ಮ ರಕ್ಷಣೆಗಾಗಿ ಕರೆನೀಡುತ್ತಿರುವ ನಾಯಕರ ಮಕ್ಕಳು ಡಾಕ್ಟರ್, ಎಂಜನಿಯರ್ ಗಳಾಗುತ್ತಾ ದೇಶ-ವಿದೇಶದಲ್ಲಿ ಆರಾಮವಾಗಿದ್ದಾರೆ. ಇದು ಯಾವ ಧರ್ಮ ರಕ್ಷಣೆ?
3. ಇತ್ತೀಚಿನ ದಿನಗಳಲ್ಲಿ ದೇಶಪ್ರೇಮ ಕೂಡಾ ಇದ್ದಕ್ಕಿದ್ದ ಹಾಗೆ ಎಲ್ಲರಲ್ಲಿಯೂ ಉಕ್ಕಿ ಹರಿಯತೊಡಗಿದೆ. ವಿಪರ್ಯಾಸದ ಸಂಗತಿಯೆಂದರೆ ಈ ರೀತಿ ದೇಶಪ್ರೇಮದ ಬಗ್ಗೆ ಭಯಂಕರ ಭಾಷಣ ಮಾಡುತ್ತಿರುವವರ ಕುಟುಂಬದಲ್ಲಿ ಯಾರೂ ಸೇನೆ ಸೇರುವುದಿಲ್ಲ, ವೈದ್ಯಕೀಯ, ಎಂಜನಿಯರಿಂಗ್ ಕಾಲೇಜುಗಳನ್ನು ಸೇರುತ್ತಾರೆ. ಕೊನೆಗೂ ಸೇನೆ ಸೇರಿ ಪ್ರಾಣ ಕಳೆದುಕೊಳ್ಳುವವರು ಬಡವರ ಮಕ್ಕಳೇ ಆಗಿದ್ದಾರೆ. ಅವರ ದೇಶಪ್ರೇಮದ ಬಗ್ಗೆ ಗೌರವ ಸೂಚಿಸುತ್ತಲೇ ಒಂದು ಮಾತು ಹೇಳುವುದಾದರೆ ಈ ರೀತಿ ಹುತಾತ್ಮರಾದವರು ಸೇನೆ ಸೇರಲು ಬಡತನವೂ ಕಾರಣ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು.
4. ಜಾನಪದ ಸಂಸ್ಕೃತಿಯನ್ನು ಉಳಿಸಲು, ಧರ್ಮವನ್ನು ರಕ್ಷಿಸಲು ಮತ್ತು ದೇಶವನ್ನು ರಕ್ಷಿಸಲು ಬಡವರೇ ಯಾಕೆ ಬೇಕು?
- ಇದು ನಾನು ಅಲ್ಲಿ ಎತ್ತಿದ ಮುಖ್ಯ ಪ್ರಶ್ನೆ .ಈ ಮಾತನ್ನು ಇದೇ ಮೊದಲ ಬಾರಿ ನಾನು ಹೇಳುತ್ತಿಲ್ಲ. ಕಾರ್ಗಿಲ್ ಯುದ್ದದ ಸಮಯದಲ್ಲಿ ಹುತಾತ್ಮ ಯೋಧರ ಶವದ ಪೆಟ್ಟಿಗೆಗಳು ರಾಜ್ಯದ ಬಡವರ ಮನೆಗೆ ಹೋದಾಗಲೂ ಬರೆದಿದ್ದೆ. ಸಂಸತ್ ಮೇಲೆ ಭಯೋತ್ಪಾದಕರ ದಾಳಿಯನ್ನು ಎದುರಿಸಿ ಹುತಾತ್ಮರಾದ ಭದ್ರತಾ ಪಡೆಗಳ ಕುಟುಂಬ ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾಗಲೂ ಬರೆದಿದ್ದೆ. ಮುಂಬೈನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಪ್ರಾಣಕಳೆದುಕೊಂಡಾಗಲೂ ಬರೆದಿದ್ದೆ. ಇವೆಲ್ಲವೂ ಹುತಾತ್ಮರಾದವರಿಗೆ ನಾನು ಸಲ್ಲಿಸುವ ಗೌರವ ಎಂದೇ ನಾನು ತಿಳಿದುಕೊಂಡಿದ್ದೇನೆ. ಇದನ್ನೇ ದೇಶದ್ರೋಹ ಎನ್ನುವುದಾದರೆ ನಾನು ಗಲ್ಲಿಗೇರಲು ಸಿದ್ದನಿದ್ದೇನೆ.

No comments:

Post a Comment