ಚಿಂತಕ ಭಗವಾನ್ ಅವರು ರಾಮನ ಬಗ್ಗೆ ಆಡಿದ ಮಾತಿನಲ್ಲಿಯಾಗಲಿ, ‘ಭಗವಾನ್ ಅವರೊಬ್ಬ ಕೆಟ್ಟ ಬರಹಗಾರ’ ಎಂದು ಕವಿ ಅಬ್ದುಲ್ ರಷೀದ್ ಅವರು ವಿಚಾರಣೆ ನಡೆಸದೆ ನೀಡಿರುವ ಏಕಮುಖ ತೀರ್ಪಿನಲ್ಲಾಗಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಭಗವಾನ್ ಹೇಳಿರುವುದು ತಪ್ಪೆಂದು ಹೇಳುವುದಾದರೆ ರಷೀದ್ ಹೇಳಿದ್ದು ಸರಿ ಎಂದು ಹೇಗೆ ಹೇಳಲು ಸಾಧ್ಯ? ಎರಡೂ ವಿವಾದ ಹುಟ್ಟಿಸುವ ಉದ್ದೇಶದ ಬೀಸು ಹೇಳಿಕೆಗಳು.
ಭಗವಾನ್ ಅವರ ಬಗ್ಗೆ ನನ್ನಂತಹವರಿಗೂ ಇರುವ ಆಕ್ಷೇಪ ಅವರ ಮಾತುಗಳ ಬಗ್ಗೆಯೇ ಹೊರತು ಅವರ ಬರವಣಿಗೆಗಳ ಬಗ್ಗೆ ಅಲ್ಲ. ಸದ್ಯ ವಿವಾದಕ್ಕೀಡಾಗಿರುವುದು ಕೂಡಾ ಅವರ ಮಾತುಗಳೇ ಹೊರತು ಬರವಣಿಗೆಯಲ್ಲ. ಯಾಕೆಂದರೆ ಬರವಣಿಗೆ ಅದರಷ್ಟಕ್ಕೆ ಒಂದು ದಾಖಲೆ, ಅದನ್ನು ಮತ್ತೊಬ್ಬರು ತಿರುಚಲು ತಿದ್ದಲು ಆಗುವುದಿಲ್ಲ. ಆದರೆ ಮಾತುಗಳು ಹಾಗಲ್ಲ. ಮಾತಿನಲ್ಲಿ ಮೌನಕ್ಕೂ ಅರ್ಥವಿರುತ್ತದೆ. ಅದನ್ನು ಸಮಯ-ಸಂದರ್ಭ, ಧ್ವನಿಯ ಏರಿಳಿತಗಳನ್ನು ಮರೆತು ಬರೆದಾಗ ಆಭಾಸವಾಗುತ್ತದೆ. ಆದಿ-ಅಂತ್ಯಗಳನ್ನು ಕತ್ತರಿಸಿದರೆ ಅಪಾರ್ಥವಾಗುತ್ತದೆ. ಮಂಡಿಸುವ ಅಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳುವ ಸಮಯವಾಕಾಶ ಮಾತಿನಲ್ಲಿ ಇರುವುದಿಲ್ಲ. ಆಕಾಶವಾಣಿಯಲ್ಲಿ ಕೆಲಸಮಾಡುತ್ತಿರುವ ರಷೀದ್ ಅವರಿಗೆ ಇದು ನನಗಿಂತಲೂ ಚೆನ್ನಾಗಿ ಗೊತ್ತಿದೆ. ಅವರ ಯಾವ ಮಾತುಗಳು ಮಾಧ್ಯಮಗಳಲ್ಲಿ ಯಾಕೆ ಹೈಲೈಟ್ ಆಗುತ್ತಿವೆ ಎಂದು ತಮ್ಮ ಅಂಕಣವನ್ನು ಪತ್ರಿಕೆಯೊಂದು ತಿರಸ್ಕರಿಸಿದ ಬಗ್ಗೆ ನೋವುಂಡ ರಷೀದ್ ಅವರಿಗೆ ವಿವರಿಸಿ ಹೇಳುವ ಅಗತ್ಯವಿದೆಯೇ?
ರಷೀದ್ ಅವರು ಭಗವಾನ್ ಅವರನ್ನು ಕೆಟ್ಟಬರಹಗಾರರೆಂದು ತೀರ್ಮಾನಿಸಲು ಆಯ್ಕೆಮಾಡಿಕೊಂಡ ಸಮಯ-ಸಂದರ್ಭ ನನ್ನಲ್ಲಿ ಅಚ್ಚರಿಮೂಡಿಸಿದೆ. ಭಗವಾನ್ ರಷೀದ್ ಅವರಿಗೆ ಕೆಟ್ಟ ಬರಹಗಾರರಾಗಿ ಕಾಣಿಸಿಕೊಂಡದ್ದು ಯಾವ ದಿನದಿಂದ? ರಷೀದ್ ಅವರೇ ಹೇಳಿಕೊಂಡಂತೆ ಅವರು ಭಗವಾನ್ ಬರೆದುದನ್ನು ಸಾಕಷ್ಟು ಓದಿಕೊಂಡಿದ್ದಾರೆ. ಮೈಸೂರಿನಲ್ಲಿಯೇ ಇರುವ ರಷೀದ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಅವರ ಹೇಳಿಕೆಗಳನ್ನು ಕೂಡಾ ಓದಿರಬಹುದು. ಆಗೆಲ್ಲ ಮೌನವಾಗಿದ್ದ ರಷೀದ್ ಇದ್ದಕ್ಕಿದ್ದ ಹಾಗೆ ಭಗವಾನ್ ಅವರಿಗೆ ಜೀವಮಾನದ ಸಾಧನೆಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದಾಗ, ಅದೂ ಒಂದಷ್ಟು ಕೂಗುಮಾರಿಗಳು ಅದರ ವಿರುದ್ದ ಬೊಬ್ಬಿಡುತ್ತಿದ್ದಾಗ ಮತ್ತು ಕೆಲವು ದುರುಳರು ಅವರಿಗೆ ಪ್ರಾಣಬೆದರಿಕೆ ಒಡ್ಡುತ್ತಿರುವಾಗ ಥಟ್ಟನೆ ಪ್ರತಿಕ್ರಿಯಿಸಿ ಭಗವಾನ್ ಒಬ್ಬ ಕೆಟ್ಟ ಬರಹಗಾರನೆಂದು ತೀರ್ಪು ನೀಡಿರುವ ಉದ್ದೇಶ ಕೇವಲ ಅವರ ಬರವಣಿಗೆಯ ವಿಮರ್ಶೆ ಮಾತ್ರವೇ? ಇದರಿಂದ ಯಾರ ದನಿಯನ್ನು ಬಲಪಡಿಸಬಹುದು, ಯಾರಿಗೆ ಖುಷಿಯಾಗಬಹುದು ಎಂದು ರಷೀದ್ ಅವರಂತಹ ಸೂಕ್ಷ್ಮ ಮನಸ್ಸಿನ ಕವಿಗೆ ಗೊತ್ತಾಗಲಿಲ್ಲವೇ? ಇಲ್ಲ ನಮ್ಮ ಕೆಲವು ಸ್ನೇಹಿತರು ಗುಟ್ಟಾಗಿ ಗೊಣಗಾಡುತ್ತಿರುವಂತೆ ಯಾರನ್ನೋ ಖುಷಿಪಡಿಸುವ ಉದ್ದೇಶ ರಷೀದ್ ಅವರಿಗಿತ್ತೇ? ರಷೀದ್ ಅವರನ್ನು ಬಲ್ಲ ನಾನು ಈ ಸ್ನೇಹಿತರ ಮಾತನ್ನು ಒಪ್ಪುವುದಿಲ್ಲವಾದರೂ ಅಂತಹದ್ದೊಂದು ಅನುಮಾನ ಮೂಡುವುದು ಸಹಜವಲ್ಲವೇ?
ರಷೀದ್ ಅವರು ಪ್ರತಿಕ್ರಿಯಿಸುತ್ತಾ ಭಗವಾನ್ ಅವರ ಬರಹಗಳು ನನಗೆ ಅರ್ಥವಾಗಿಲ್ಲ ಎಂದು ಒಂದೆಡೆ ಹೇಳಿದ್ದಾರೆ. ನಮಗೆ ಅರ್ಥವಾಗದಿರುವುದನ್ನೆಲ್ಲ ಗುಡಿಸಿ ಕಸದ ಬುಟ್ಟಿಗೆ ಹಾಕಬಹುದೇ? ಸಾಹಿತ್ಯವನ್ನು ರಷೀದ್ ಅವರಷ್ಟು ಓದಿಕೊಳ್ಳದ ನನಗೆ ಅವರು ಬರೆದ ಕವನಗಳು ಅರ್ಥವಾಗುವುದಿಲ್ಲ. ನಾನೇನು ಮಾಡಲಿ? ನನಗಂತೂ ಭಗವಾನ್ ಅವರು ಬರೆದುದು ಅರ್ಥವಾಗಿದೆ. ನನ್ನ ಅರಿವಿನ ಪರಿಧಿಯನ್ನು ವಿಸ್ತರಿಸಿದ ಚಿಂತಕರಲ್ಲಿ ಭಗವಾನ್ ಕೂಡಾ ಒಬ್ಬರು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಲು ನನಗೆ ಹಿಂಜರಿಕೆ ಇಲ್ಲ.
ನಮ್ಮ ಸಾಹಿತಿಗಳ ಬಗ್ಗೆ ಇರುವ ಸಾಮಾನ್ಯ ಆರೋಪ ಅವರ ಆತ್ಮವಂಚಕ ನಡವಳಿಕೆ. ಬಹಿರಂಗವಾಗಿ ‘ಚಡ್ಡಿಗಳು’ ಎಂದು ಹೀಯಾಳಿಸುತ್ತಾ ಅಂತರಂಗದಲ್ಲಿ ಅಂತಹ ‘ಚಡ್ಡಿ’ಗಳ ಒಡನಾಟದಲ್ಲಿರುವ ಸಾಹಿತಿಗಳನ್ನು ನಾನು ಕಂಡಿದ್ದೇನೆ. ಇದನ್ನೆಲ್ಲ ನೋಡುವಾಗ ನಮಗೆ ಗೊತ್ತಿರುವ ಶತ್ರುಗಳಾದ ಚಡ್ಡಿಗಳೇ ವಾಸಿ ಎಂದು ನನಗೂ ಒಮ್ಮೊಮ್ಮೆ ಅನಿಸಿದೆ. ಧೀರೋದ್ದಾತ ಹೇಳಿಕೆ ನೀಡಿ ಅಪಾಯ ಎದುರಾದಾಗ ಜಾರಿಕೊಳ್ಳುವ ಸಾಹಿತಿಗಳು, ಹೋರಾಟಗಾರರನ್ನೂ ನಾವು ನೋಡಿದ್ದೇವೆ. ಭಗವಾನ್ ಕನಿಷ್ಠ ಇಂತಹ ಆತ್ಮವಂಚಕ ಮತ್ತು ಪುಕ್ಕಲು ಬರಹಗಾರರ ಗುಂಪಿಗೆ ಸೇರಿದವರಲ್ಲ ಎನ್ನುವ ಕಾರಣಕ್ಕಾಗಿಯಾದರೂ ಅವರನ್ನು ಗೌರವಿಸಬೇಕಲ್ಲವೇ?
‘ಭಗವಾನ್ ಅವರು ಸಾಯ್ಲಿ ಬಿಡಿ’ ಎಂದು ನಾವೆಲ್ಲ ಅಂದುಕೊಳ್ಳುವಷ್ಟು ಮಹಾ ಅಪರಾಧವನ್ನು ಅವರು ಮಾಡಿದ್ದಾರೆಯೇ ಎನ್ನುವುದಷ್ಟೇ ಈಗ ನಾವೆಲ್ಲ ನಮ್ಮ ಅಂತರಾತ್ಮವನ್ನು ಕೇಳಿಕೊಳ್ಳಬೇಕಾದ ಪ್ರಶ್ನೆ. ಅವರ ಜತೆಗಿನ ಭಿನ್ನಾಭಿಪ್ರಾಯಗಳನ್ನೆಲ್ಲ ಪಕ್ಕಕ್ಕಿಟ್ಟು ಸದ್ಯಕ್ಕೆ ಪ್ರಾಣ ಭಯದಲ್ಲಿರುವ ಅವರ ಪಕ್ಕದಲ್ಲಿ ನಿಂತು ನೈತಿಕವಾಗಿ ಬೆಂಬಲಿಸುವುದು ನಮ್ಮ ಕರ್ತವ್ಯ ಎಂದು ನಮಗನಿಸದಿದ್ದರೆ ನಮ್ಮನ್ನು ನಾವು ಕ್ಷಮಿಸುವುದು ಹೇಗೆ ಹೇಳಿ ರಷೀದ್? ಮನುಷ್ಯನನ್ನು ಮಾನವೀಯಗೊಳಿಸುತ್ತದೆ ಎನ್ನುವ ಕಾರಣಕ್ಕಾಗಿಯೇ ನಾನು ಸಾಹಿತ್ಯವನ್ನು ಓದುತ್ತೇನೆ. ಓದುಗನಾಗಿ ನಾನು ಅಂದುಕೊಂಡಿರುವುದು ಸುಳ್ಳೆಂದು ಈಗಲೂ ನನಗನಿಸುವುದಿಲ್ಲ. ಆದರೆ ಸಾಹಿತಿಯಾಗಿ ಸುತ್ತಲಿನ ಜಗತ್ತನ್ನು ಇನ್ನಷ್ಟು ಸೂಕ್ಷ್ಮವಾಗಿ ನೋಡುವ ನೀವು ಹೇಗೆ ಈ ರೀತಿ ಅಮಾನವೀಯವಾಗಲು ಸಾಧ್ಯ ರಷೀದ್?
ಕೊನೆಯದಾಗಿ, ರಷೀದ್ ಪೋಸ್ಟ್ ಲೈಕ್ ಮಾಡಿದವರು, ಬೆಂಬಲಿಸಿ ಪ್ರತಿಕ್ರಿಯಿಸಿದವರಲ್ಲಿ ನಾನು ಬಲ್ಲ,ನಾವೆಲ್ಲ ಒಂದೇ ರೀತಿ ಯೋಚನೆ ಮಾಡುವವರು ಎಂದು ತಿಳಿದುಕೊಂಡ ಕೆಲವು ಸ್ನೇಹಿತರ ಹೆಸರು ನೋಡಿ ಆಶ್ಚರ್ಯವಾಯಿತು. ಅವರೂ ಇಂತಹ ಸಂದರ್ಭಗಳಲ್ಲಿ ಲೈಕ್ ಬಟನ್ ಮೇಲೆ ಬೆರಳೊತ್ತುವ ಮೊದಲು ಯೋಚನೆ ಮಾಡಲಿ ಎಂದು ವಿನಂತಿಸುತ್ತೇನೆ. ಅದೇ ರೀತಿ ಪೋಸ್ಟ್ ಗೆ ಲೈಕ್ ಒತ್ತಿದವರು,ಪ್ರತಿಕ್ರಿಯಿಸಿದವರೆಲ್ಲರೂ ತನ್ನ ಅಭಿಪ್ರಾಯದ ಹಿಂದಿನ ಉದ್ದೇಶವನ್ನು ಒಪ್ಪಿಕೊಂಡವರು ಎಂದು ರಷೀದ್ ತಪ್ಪು ತಿಳಿದುಕೊಳ್ಳಬಾರದೆಂದು ಕೋರುತ್ತೇನೆ. ರಷೀದ್ ನಿಮ್ಮ ಬಗ್ಗೆ ಖಂಡಿತ ನನ್ನ ಅಭಿಪ್ರಾಯ ಬದಲಾಗಿಲ್ಲ, ಆದರೆ ಬೇಸರವಾಗಿದೆ.
(ಬಹುಷ: ಈ ಪ್ರತಿಕ್ರಿಯೆಯನ್ನು ನಾನು ಬರೆಯುತ್ತಿರಲಿಲ್ಲ. ಆದರೆ ಎರಡು ದಿನಗಳ ಹಿಂದೆ ರಷೀದ್ ಪೋಸ್ಟ್ ಓದುತ್ತಿದ್ದಾಗ ಅಕಸ್ಮಾತ್ ಕೈಗೆ ತಗಲಿ xn ಎಂಬ ಶಬ್ದ ಅಚ್ಚಾಗಿ ಪ್ರತಿಕ್ರಿಯೆ ರೂಪದಲ್ಲಿ ರವಾನೆಯಾಗಿದ್ದು ನಿನ್ನೆ ಮಧ್ಯರಾತ್ರಿಯಷ್ಟೇ ನನಗೆ ಗೊತ್ತಾಯಿತು. ಅದನ್ನು ಕೆಲವರು excellent ಎಂದು ತಪ್ಪಾಗಿ ಅರ್ಥಮಾಡಿಕೊಂಡಿರುವುದರಿಂದ ಇದನ್ನು ಬರೆಯಬೇಕಾಯಿತು)
No comments:
Post a Comment