ಕಿರಿಯ ಪತ್ರಕರ್ತರ ಬಳಿ ಮಾಧ್ಯಮ ಕ್ಷೇತ್ರದ ಭವಿಷ್ಯದ ಬಗ್ಗೆ ಭರವಸೆಯ ಮಾತುಗಳನ್ನು ನಾನು ಆಡಿದಾಗಲೆಲ್ಲ “ ಇದು ಕಂಡವರ ಮಕ್ಕಳನ್ನು ಬಾವಿಗೆ ದೂಡುವ ಸಂಚು” ಎಂದು ಕೆಲವರು ಕೊಂಕುನುಡಿದದ್ದುಂಟು. ಮಾಧ್ಯಮ ಕ್ಷೇತ್ರವನ್ನು ನಾನು ಹಾಳುಬಾವಿ ಎಂದು ಎಂದೂ ತಿಳಿದಿಲ್ಲ. ಆದರೆ ಈ ಕೊಂಕುಮಾತನ್ನು ಅಪ್ರಮಾಣಿಕತೆಗೆ ರೂಪಕವಾಗಿ ಬಳಸುವವರಿಗೆ ಒಂದು ಸಣ್ಣ ವಿವರಣೆಯನ್ನು ನೀಡಬಯಸುತ್ತೇನೆ. ನನ್ನ ಮಗಳೇ ಈ ಬಾವಿಗೆ ಹಾರಲು ರೆಡಿಯಾಗುತ್ತಿದ್ದಾಳೆ.
ಬೆಂಗಳೂರಿನಲ್ಲಿ ಪತ್ರಿಕೋದ್ಯಮದ ಪದವಿ ಮುಗಿಸಿರುವ ಮಗಳು ಸ್ನಾತಕೋತ್ತರ ಪದವಿಗಾಗಿ ಈ ತಿಂಗಳ 16ರಂದು ಲಂಡನ್ ನ ಕಾರ್ಡಿಫ್ ವಿಶ್ವವಿದ್ಯಾಲಯ ಸೇರಿದ್ದಾಳೆ. (ಚಿತ್ರದಲ್ಲಿ ಕೆಂಪು ಜಾಕೆಟ್ ಹಾಕಿಕೊಂಡವಳು ನನ್ನ ಮಗಳು. ಕೆಂಪು ಅವಳ ಇಷ್ಟದ ಬಣ್ಣವೆಂದು ಹೇಳಿದರೆ ವಿಪರೀತಾರ್ಥ ಕಲ್ಪಿಸಬೇಡಿ ) ಶಿಕ್ಷಣ ಸ್ವಲ್ಪ ದುಬಾರಿ. ಆದರೆ ಬೋದನಾ ಶುಲ್ಕದ ಅರ್ಧದಷ್ಟನ್ನು ವಿಶ್ವವಿದ್ಯಾಲಯವೇ ವಿದ್ಯಾರ್ಥಿವೇತನವಾಗಿ ನೀಡಿದೆ. ಉಳಿದರ್ಧ ನಾನು ಸಾಲ ಮಾಡಿದ್ದು ಅದನ್ನು ತಾನೇ ತೀರಿಸುತ್ತೇನೆ ಎಂದು ಹೇಳಿದ್ದಾಳೆ. ದುಡ್ಡು ಇದ್ದಿದ್ದರೆ ಅವಳನ್ನು ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸೇರಿಸುವ ಮನಸ್ಸಿತ್ತು. ಅಲ್ಲಿ ಅವಳಿಗೆ ಸೀಟೂ ಸಿಕ್ಕಿತ್ತು. ಆದರೆ ಅಷ್ಟೊಂದು ಖರ್ಚು (ಸುಮಾರು 50 ಲಕ್ಷ ರೂಪಾಯಿ) ಮಾಡಲು ಮಗಳು ಒಪ್ಪಲಿಲ್ಲ.ಬಾಬಾಸಾಹೇಬ್ ಅಂಬೇಡ್ಕರ್ ವ್ಯಾಸಂಗ ಮಾಡಿರುವ ಆ ವಿಶ್ವವಿದ್ಯಾಲಯದಲ್ಲಿ ಮಗಳನ್ನು ಓದಿಸಬೇಕೆಂಬ ಆಸೆ ನನಗಿರುವುದು ಅವಳಿಗೆ ಗೊತ್ತು. ಅವಳಲ್ಲಿರುವ ಆತ್ಮವಿಶ್ವಾಸದಲ್ಲಿ ನನಗೆ ನಂಬಿಕೆ ಇದೆ.
ಪತ್ರಕರ್ತರ ಮಕ್ಕಳು ಯಾಕೆ ಪತ್ರಕರ್ತರಾಗುವುದಿಲ್ಲ ಎಂದು ಅನೇಕ ಮಂದಿ ನನ್ನನ್ನು ಕೇಳುತ್ತಿರುತ್ತಾರೆ. ಇದು ನಿಜ ಕೂಡಾ. ಕಾರಣ ಅನುಭವಿಸಿದವರಿಗೆ ಗೊತ್ತು. ನನ್ನ ವೃತ್ತಿಜೀವನವನ್ನು ಬದುಕಿನ ಭಾಗವಾಗಿಯೇ ನೋಡಿದ ನನ್ನ ಒಬ್ಬಳೇ ಮಗಳು ಖಂಡಿತ ಈ ವೃತ್ತಿಯನ್ನು ಆಯ್ದುಕೊಳ್ಳಲಾರಳು ಎಂದು ನಾನು ತಿಳಿದುಕೊಂಡಿದ್ದೆ. ಪಿಯುಸಿಯಲ್ಲಿ ವಿಜ್ಞಾನ ಓದಿದ್ದ ಅವಳು ಒಂದು ದಿನ ನನ್ನ ಬಳಿ ಬಂದು ನಾನು ಸಿಇಟಿ ಪರೀಕ್ಷೆ ಕೂರುವುದಿಲ್ಲ ಎಂದಳು. ಮತ್ತೇನು ಮಾಡುತ್ತಿ ಎಂದು ಕೇಳಿದರೆ ಪತ್ರಿಕೋದ್ಯಮ ಎಂದು ಹೇಳಿ ನನ್ನನ್ನು ಮೂರ್ಚೆ ಹೋಗುವಂತೆ ಮಾಡಿದಳು. ಆದರೆ ಆ ಕ್ಷಣದಲ್ಲಿ ನನಗಾದ ಸಂತೋಷವನ್ನು ನಾನು ವಿವರಿಸಲಾರೆ.
ಆದರೆ ಅವಳು ಪತ್ರಕರ್ತೆಯಾಗಬಹುದೆಂಬ ಭರವಸೆಯನ್ನು ನನ್ನಲ್ಲಿ ಮತ್ತು ವಿಶ್ವಾಸವನ್ನು ಅವಳಲ್ಲಿ ಹುಟ್ಟಿಸಿದ್ದು ‘ದಿ ಹಿಂದೂ ‘ ಪತ್ರಿಕೆ. ಎರಡನೇ ವರ್ಷದ ಪದವಿಯಲ್ಲಿರುವಾಗ ಅವಳು ಹಿಂದೂ ಪತ್ರಿಕೆಯಲ್ಲಿ ಇಂಟರ್ನಿಯಾಗಿ ಕೆಲಸ ಮಾಡಿದಳು. ಅಲ್ಲಿದ್ದ 28 ದಿನಗಳಲ್ಲಿ ಅವಳ 16 ಬೈಲೈನ್ ಗಳು ಪ್ರಕಟವಾಗಿತ್ತು. ( ನಿನ್ನನ್ನು ಹಾಳುಮಾಡಿದ್ದೇ ಹಿಂದೂ ಪತ್ರಿಕೆ ಎಂದು ನಾನು ಅವಳನ್ನು ಛೇಡಿಸುವುದುಂಟು) ಅಲ್ಲಿರುವ ಯಾವ ಸ್ನೇಹಿತರಿಗೂ ಹೇಳಬಾರದೆಂದು ನನ್ನಿಂದ ಪ್ರಮಾಣ ಮಾಡಿಸಿ ಅವಳು ಅಲ್ಲಿ ಸೇರಿಕೊಂಡಿದ್ದಳು. ನನ್ನ ಮಗಳೆಂದು ಗೊತ್ತಾಗಬಾರದೆಂದು ಹೆಸರಲ್ಲಿದ್ದ ‘ಮಟ್ಟು’ ವನ್ನು ಕಿತ್ತುಹಾಕಿದ್ದಳು. ಆದರೆ ಅಲ್ಲಿದ್ದವರೆಲ್ಲ ಅವರ ಸ್ವಂತ ಮಗಳ ರೀತಿಯಲ್ಲಿ ನೋಡಿಕೊಂಡಿದ್ದರು.(ನನ್ನ ಕಿಲಾಡಿ ಮಿತ್ರ ಸುದಿಪ್ತೋ ಮಾತ್ರ ಬಹಳ ಕಾಡಿಸಿದ್ದನಂತೆ).
ನನ್ನ ವಯಸ್ಸಿನ ಮತ್ತು ನನಗಿಂತ ಹಿರಿಯರಾಗಿರುವ ಅನೇಕ ಪತ್ರಕರ್ತರ ಮಕ್ಕಳು ಆಗಲೇ ಐಟಿ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿ ಸೆಟ್ಲ್ ಆಗಿಬಿಟ್ಟಿದ್ದನ್ನು ನೋಡಿದಾಗ ನನ್ನ ಮಗಳೂ ಹೀಗೆ ಸುಖವಾಗಿ ಇರಬಹುದಿತ್ತಲ್ಲಾ ಎಂದು ಒಂದು ಕ್ಷಣ ನನ್ನೊಳಗಿರುವ ಅಪ್ಪನಿಗೆ ಅನಿಸುವುದುಂಟು. ಲಂಡನ್ ಗೆ ಹೊರಟು ನಿಂತ ನನ್ನ ಮಗಳನ್ನು ಬೀಳ್ಕೊಡುತ್ತಾ ಇದೇ ಮಾತನ್ನು ತಮಾಷೆಯಾಗಿ ಹೇಳಿದೆ. “ನಾನು ಎಲ್ಲರಂತಾಗಿದ್ದರೆ ನಿನ್ನ ಮಗಳು ಹೇಗೆ ಆಗುತ್ತಿದ್ದೆ” ಎಂದು ಕೇಳಿದಳು. ಅಪ್ಪಿ ಮುದ್ದಾಡಬೇಕೆನಿಸಿತು.
ವೈಯಕ್ತಿಕವಾದ ಪ್ರವರಗಳನ್ನು ಬರೆಯುವುದು ನನಗಿಷ್ಟವಿಲ್ಲದ ಕೆಲಸ. ಇದಕ್ಕಾಗಿ ಇಲ್ಲಿಯವರೆಗೆ ಸುಮ್ಮನಿದ್ದೆ. ಆದರೆ ಇಂದು ಬೆಳಿಗ್ಗೆ ದೆಹಲಿಯಲ್ಲಿರುವ ನನ್ನ ಪತ್ರಕರ್ತ ಮಿತ್ರನೊಬ್ಬ ನನಗೆ ಪೋನ್ ಮಾಡಿ ‘ ಕಂಗ್ರಾಜ್ಯುಲೇಷನ್ ಯಾರ್. ಹಿಟ್ ಲಿಸ್ಟ್ ಮೇ ಆಫ್ ಕಾ ನಾಮ್ ಪಡ್ ಕೆ ಖುಷ್ ಹುವಾ’ ಎಂದು ತಮಾಷೆ ಮಾಡಿದ. ಇಂದಿನ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ನನ್ನ ಕಿಲಾಡಿ ಮಿತ್ರ ಸುದೀಪ್ತೋ ಮೊಂಡಲ್ ಮಾಡಿರುವ ವರದಿಯನ್ನು ಓದಿ ಆತ ಪೋನ್ ಮಾಡಿದ್ದ. ಅದನ್ನು ಓದಿದ ನಂತರ ನನ್ನ ಮಗಳ ಬಗ್ಗೆ ಬರೆಯಬೇಕೆನಿಸಿತು. ಹಿರಿಯರ ಆಶೀರ್ವಾದ ಅವಳ ಮೇಲೆ ಖಂಡಿತ ಇರುತ್ತದೆ ಎಂದು ನನಗೆ ಗೊತ್ತು. ಅದಕ್ಕಿಂತಲೂ ಮುಖ್ಯವಾಗಿ ಕಿರಿಯರ ಶುಭಹಾರೈಕೆ ಇರಲಿ, ಅವಳು ಭವಿಷ್ಯದಲ್ಲಿ ನಿಮ್ಮ ಜತೆ ಇರುವವಳಲ್ಲವೇ?
---------------------------------------------------------------------------------------------------------------------------------
September 27
ನನ್ನ ಮಗಳ ಹೆಸರು ಯಾಕೆ ಬರೆಯಲಿಲ್ಲ ಎಂದು ಹಿರಿಯ ಸ್ನೇಹಿತರಾದ ಬೊಳುವಾರ್ ಮಹಮ್ಮದ್ ಕುಂಙ್ಹ ಅವರು ಆಕ್ಷೇಪ ಎತ್ತಿದ್ದಾರೆ. ನಿಜ ಹೇಳಬೇಕೆಂದರೆ ಉದ್ದೇಶಪೂರ್ವಕವಾಗಿ ನಾನು ಹೆಸರು ಬರೆದಿರಲಿಲ್ಲ. ಇದಕ್ಕೆ ಎರಡು ಕಾರಣಗಳು. ಮೊದಲನೆಯದಾಗಿ ‘ನನ್ನನ್ನು ನಿಮ್ಮ ಸ್ನೇಹಿತರಿಗೆ ಪರಿಚಯಿಸಬಾರದು’ ಎಂದು ನನ್ನ ಮಗಳೇ ನನಗೆ ತಾಕೀತು ಮಾಡಿದ್ದಳು.. ಅದಕ್ಕೆ ಕಾರಣವನ್ನೂ ಅವಳು ತಿಳಿಸಿದ್ದಳು. ಪರಿಚಯ ಮಾಡಿದ ಕೂಡಲೇ ‘ಎಲ್ಲರೂ ಅಪ್ಪನಂತಾಗು, ಅಪ್ಪನನ್ನು ಮೀರಿಸು ಎಂದೆಲ್ಲಾ ಹೇಳುತ್ತಾರೆ. ಇದರಿಂದ ನನ್ನ ಮೇಲಿನ ಒತ್ತಡ ಹೆಚ್ಚಾಗುತ್ತದೆ. ನಿನ್ನ ಹೆಸರೇ ನನಗೆ ಭಾರ. ಆದ್ದರಿಂದ ಸದ್ಯಕ್ಕೆ ಯಾರಿಗೂ ಪರಿಚಯಿಸಬೇಡ’ ಎಂದು ಆಕೆ ಹೇಳಿದ್ದಳು. ( ಈ ಮಾತನ್ನು ಮಗಳು ಹೇಳಿದಾಗ ನನಗೆ ಥಟ್ಟನೆ ನೆನೆಪಾಗಿದ್ದು ಗೌರಿಯವರದ್ದು. ಎಲ್ಲರೂ ದೈತ್ಯ ಲಂಕೇಶ್ ಅವರ ಜತೆ ಹೋಲಿಸಿ ಹೋಲಿಸಿ ಅವರನ್ನು ಎಷ್ಟೊಂದು ಸಣ್ಣದು (ದೈಹಿಕವಾಗಿ) ಮಾಡಿಬಿಟ್ಟಿದ್ದಾರೆ ಅಲ್ಲವೇ?) ಈ ಕಾರಣದಿಂದಾಗಿ ನನ್ನ ಕೆಲವೇ ಕೆಲವು ಸ್ನೇಹಿತರ ಹೊರತಾಗಿ ಯಾರಿಗೂ ಅವಳ ಪರಿಚಯ ಇಲ್ಲ. ಆದರೆ ಅವಳು ಅತ್ಯಂತ ಸ್ನೇಹಜೀವಿ. ಆಕೆಯ ಕೋಣೆಯಲ್ಲಿ ಇರುವ ಪೋಟೋಗಳೆಲ್ಲ ಸ್ನೇಹಿತರದ್ದು. ತಂದೆತಾಯಿಗಳಾದ ನಮ್ಮದ್ದು ಇಲ್ಲವೇ ಇಲ್ಲ.
ಎರಡನೆ ಕಾರಣ ಸ್ವಲ್ಪ ಸೂಕ್ಷ್ಮವಾದುದು ಮತ್ತು ಬೇಸರದ್ದು. ಒಂದು ಕಾಲದಲ್ಲಿ ಭೂಗತ ಲೋಕವನ್ನು ನಾನು ಬಹಳ ಆಸಕ್ತಿಯಿಂದ ಗಮನಿಸುತ್ತಿದ್ದೆ. ನನ್ನೂರಿನ ಕೆಲವು ಬಾಲ್ಯ ಸ್ನೇಹಿತರು ಅದರಲ್ಲಿದ್ದದ್ದೂ ಕೂಡಾ ಇದಕ್ಕೆ ಕಾರಣ. ಅಂತಹ ಪಾತಕ ಲೋಕದಲ್ಲಿ ಕೂಡಾ ಪರಸ್ಪರ ದ್ವೇಷ ಎಷ್ಟೇ ಇದ್ದರೂ ವೈರಿಗಳ ಕುಟುಂಬದ ಸದಸ್ಯರ ಗೋಜಿಗೆ ಅವರು ಹೋಗುತ್ತಿರಲಿಲ್ಲ. ಆದರೆ ಇತ್ತೀಚಿನ ನಮ್ಮ ತಥಾಕಥಿತ ‘ನಾಗರಿಕ’ ‘ಸುಸಂಸ್ಕೃತ’ ಸಮಾಜದಲ್ಲಿ ಇಂತಹದ್ದೊಂದು ನೀತಿ ಸಂಹಿತೆ ಕೂಡಾ ಕಾಣುತ್ತಿಲ್ಲ. ಭಿನ್ನಾಭಿಪ್ರಾಯ ಹೊಂದಿದ್ದಾರೆ ಎನ್ನುವ ಕಾರಣಕ್ಕೆ, ಅಮ್ಮ, ಅಕ್ಕ, ಹೆಂಡತಿ, ಮಗಳು ಎಂದೆಲ್ಲಾ ಹೆಸರೆತ್ತಿ, ಅಶ್ಲೀಲವಾಗಿ ನಿಂದಿಸುವುದಕ್ಕೆ ನಾವೆಲ್ಲ ನಿತ್ಯ ಸಾಕ್ಷಿಗಳಾಗುತ್ತಿದ್ದೇವೆ. ನಾನೂ ಇಂತಹ ನಿಂದನೆಗಳಿಗೆ ಗುರಿಯಾಗಿದ್ದೇನೆ. ತಮ್ಮ ಪಾತ್ರ ಇಲ್ಲದೆ ಇದ್ದರೂ ನನ್ನ ಕಾರಣಕ್ಕೆ ನನ್ನ ಮನೆಯ ಸದಸ್ಯರು ಇಂತಹ ನಿಂದೆಗಳನ್ನು ಎದುರಿಸಬೇಕಾಗಿ ಬಂದಾಗ ಮನಸ್ಸಿಗೆ ನೋವಾಗುತ್ತದೆ. ನನ್ನ ಮಗಳನ್ನು ನನ್ನ ಸುತ್ತಲಿನ ಜಗತ್ತಿಗೆ ಪರಿಚಯಿಸದಿರಲು ಇದೂ ಕೂಡಾ ಕಾರಣ.
ಆದರೆ ಎಷ್ಟು ದಿನ ಆಕೆಯನ್ನು ಬಚ್ಚಿಡಲಿ? ಅದೂ ಮುಂದೊಂದು ದಿನ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡಲಿರುವ ಆಕೆ ತೆರೆಯ ಮರೆಯಲ್ಲಿ ಎಷ್ಟುದಿನ ಇರಲು ಸಾಧ್ಯ ಎಂದೆಲ್ಲ ಯೋಚಿಸಿ ಅವಳ ಬಗ್ಗೆ ಬರೆದೆ. ಐಸಿರಿ ಎನ್ನುವ ಹೆಸರನ್ನು ಆಕೆ ಹುಟ್ಟುವ ಮೊದಲೇ ಆಯ್ಕೆ ಮಾಡಿದ್ದೆ. ತುಳುನಾಡಿನ ಸ್ವಾಭಿಮಾನಿ ಹೆಣ್ಣು ಸಿರಿ ಬಗ್ಗೆ ನನಗೆ ವಿಶೇಷ ಅಭಿಮಾನ. ಅದಕ್ಕೆಂದು ಮಗಳಿಗೆ ‘ಸಿರಿ’ ಎಂದು ಹೆಸರಿಡಬೇಕೆಂದಿದ್ದೆ. ಕೊನೆಗೆ ಹೆಸರಿಗೆ ಕನ್ನಡದ ಟಚ್ ಇರಲಿ ಎಂದು ಐಸಿರಿ ಎಂದು ಬದಲಾಯಿಸಿದೆ.
ನನ್ನ ಮಗಳಿಗೆ ಶುಭ ಹಾರೈಸಿದವರಿಗೆ ಕೃತಜ್ಞತೆ ಸಲ್ಲಿಸಲು ನನ್ನಲ್ಲಿ ಶಬ್ದಗಳಿಲ್ಲ. ಸಮಾಜದಲ್ಲಿ ಒಳ್ಳೆಯವರ ಸಂಖ್ಯೆ ಮತ್ತು ಒಳ್ಳೆಯತನದ ಪ್ರಮಾಣ ದೊಡ್ಡದು ಎನ್ನುವ ಗಟ್ಟಿ ನಂಬಿಕೆ ನನ್ನದು. ಸಮಾಜವನ್ನು ನೀನು ಪ್ರೀತಿಸಿದರೆ ಸಮಾಜ ನಿನ್ನನ್ನು ಪ್ರೀತಿಸುತ್ತದೆ ಎಂದು ನನ್ನ ಮಗಳಿಗೆ ಹೇಳುತ್ತಿದ್ದೆ. ಇದು ನನ್ನ ಅನಕ್ಷರಸ್ತೆ ಅಮ್ಮ ನನಗೆ ಹೇಳಿದ ಪಾಠ. 'ನೀನು ಒಳ್ಳೆಯವನಾದರೆ ನಿನಗೆ ಊರು ಒಳ್ಳೆಯದಾಗಿ ಕಾಣುತ್ತದೆ' ಎಂದು ಅಮ್ಮ ಹೇಳುತ್ತಿದ್ದಳು. ಹರಿದುಬಂದ ಶುಭಹಾರೈಕೆಯ ಮಹಾಪೂರ ನನ್ನ ನಂಬಿಕೆಗೆ ಸಾಕ್ಷಿ ಒದಗಿಸಿದೆ. ಇದರಿಂದ ನನ್ನ ಮಗಳು ಸುತ್ತಲಿನ ಸಮಾಜವನ್ನು ಇನ್ನಷ್ಟು ಪ್ರೀತಿಸುವಂತಾಗಲಿ ಎಂದಷ್ಟೇ ನನ್ನ ಹಾರೈಕೆ. ಮತ್ತೊಮ್ಮೆ ಎಲ್ಲರಿಗೂ ಥ್ಯಾಂಕ್ಸ್.
ಬೊಳುವಾರು ಸಾಹೆಬ್ರೆ, ಈಗಲಾದರೂ ಐಸಿರಿಗೆ ಒಂದು ಆಲ್ ದಿ ಬೆಸ್ಟ್ ಹೇಳಿ.

No comments:
Post a Comment