Monday, April 8, 2013

ರಾಹುಲ್ ಗಾಂಧಿ ಕಳೆದುಕೊಳ್ಳುತ್ತಿರುವ ಅವಕಾಶ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗದೆ ಏದುಸಿರು ಬಿಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಅನುಭವ ಹೊಸದೇನಲ್ಲ. ವಿವಾದವೇ ಇಲ್ಲದೆ  ಚುನಾವಣಾ ಅಭ್ಯರ್ಥಿಗಳ ಆಯ್ಕೆ ಸುಸೂತ್ರವಾಗಿ ನಡೆದ ಉದಾಹರಣೆ ಕಾಂಗ್ರೆಸ್ ಪಕ್ಷದಲ್ಲಿ  ಇಲ್ಲ. ಟಿಕೆಟ್‌ಗಾಗಿ ಬಹಿರಂಗವಾಗಿ ನಡೆಯುತ್ತಿರುವ ಕಾದಾಟ, ಗುಟ್ಟಾಗಿ ನಡೆಯುವ ಮಸಲತ್ತು, ಪ್ರತಿಭಟನೆ, ಬಂಡಾಯ, ವಶೀಲಿ, ಆಮಿಷ, ಪ್ರಭಾವ, ಕಣ್ಣೀರು, ಜೈಕಾರ, ಧಿಕ್ಕಾರ ...ಇವೆಲ್ಲವೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯ ಭಾಗವೇ ಆಗಿಬಿಟ್ಟಿದೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಕಾಲದಲ್ಲಿ ದೆಹಲಿಯ ಸರ್ಕಾರಿ ಭವನಗಳು, ಹೊಟೇಲ್‌ಗಳು ತುಂಬಿ ತುಳುಕಾಡುವುದು, ಸೋನಿಯಾಗಾಂಧಿ ಮನೆ ಮತ್ತು ಎಐಸಿಸಿ ಕಚೇರಿಗಳಿರುವ ಜನಪಥ ಮತ್ತು ಅಕ್ಬರ್ ರಸ್ತೆ ತುಂಬಾ ಜನಜಂಗುಳಿ ಎಲ್ಲವೂ ಸಾಮಾನ್ಯ ದೃಶ್ಯ. ಆದರೆ ಈ ಬಾರಿ ಹೀಗಾಗಲಿಕ್ಕಿಲ್ಲ ಎಂದು ತಿಳಿದುಕೊಂಡಿದ್ದ ಒಂದಷ್ಟು ಕಡು ಆಶಾವಾದಿಗಳಿದ್ದರು.
ಇತ್ತೀಚೆಗೆ ಹಲವಾರು ವೇದಿಕೆಗಳಲ್ಲಿ ಕಾಂಗ್ರೆಸ್ ಪಕ್ಷದ ನೂತನ ಉಪಾಧ್ಯಕ್ಷ ರಾಹುಲ್‌ಗಾಂಧಿಯವರು ಮಾತನಾಡಿದ ಆದರ್ಶ ರಾಜಕಾರಣದ ಮಾತುಗಳು ಈ ಆಶಾವಾದಕ್ಕೆ ಕಾರಣ. `ರಾಜಕೀಯ ಅಧಿಕಾರದ ಹಿಂದೆ ಓಡಬೇಡಿ, ಅದು ಪಾಷಾಣ' ಎಂದು ರಾಹುಲ್ ಜೈಪುರ ಚಿಂತನಾ ಶಿಬಿರದಲ್ಲಿ ಎಚ್ಚರಿಸಿದ್ದರು. ಅಲ್ಲಿ ಅವರು ಆಡಿದ ಮಾತುಗಳು ದೇಶದ ಅಮಾಯಕ ಜನರನ್ನು ರೋಮಾಂಚನಗೊಳಿಸಿದ್ದು ಮಾತ್ರವಲ್ಲ ಕಡು ನಿರಾಶವಾದಿಗಳಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಹಿಂದಿನ ಮಾತುಗಳ ಮುಂದುವರಿಕೆಯಂತೆ ನಂತರದ ದಿನಗಳಲ್ಲಿ ಮಾತನಾಡಿದ ರಾಹುಲ್ `ಹೈಕಮಾಂಡ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕು' ಎಂದಿದ್ದರು. ಕೊನೆಯದಾಗಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಾರಂಭವಾಗುವಾಗ  `ಅಭ್ಯರ್ಥಿಗಳ ಆಯ್ಕೆ ಸ್ಥಳೀಯ ಮಟ್ಟದಲ್ಲಿಯೇ ನಡೆಯುತ್ತದೆ, ಯಾರೂ ದೆಹಲಿಗೆ ಬರುವ ಅಗತ್ಯ ಇಲ್ಲ' ಎಂದಿದ್ದರು. ಇವೆಲ್ಲವನ್ನು ಹೇಳಿದ ರಾಹುಲ್‌ಗಾಂಧಿಯ ನಾಲಗೆಯ ಪಸೆ ಆರುವುದರೊಳಗಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಅಸಹ್ಯ ಪ್ರದರ್ಶನ ಯಥಾ ಪ್ರಕಾರ ಪ್ರಾರಂಭವಾಗಿತ್ತು.
ರಾಹುಲ್‌ಗಾಂಧಿಯವರಂತೆ, ಅವರ ಅಮ್ಮನೂ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡ ಪ್ರಾರಂಭದ ದಿನಗಳಲ್ಲಿ ಇಂತಹದ್ದೇ ಆದರ್ಶ ರಾಜಕಾರಣದ ಮಾತುಗಳನ್ನಾಡಿದ್ದು ಮಾತ್ರವಲ್ಲ ಬದಲಾವಣೆಯ ಪ್ರಯತ್ನಕ್ಕೂ ಕೈಹಾಕಿದ್ದರು. ಅಟಲಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ 1999ರಲ್ಲಿ ಎರಡನೇ ಬಾರಿ ಲೋಕಸಭಾ ಚುನಾವಣೆ ಗೆದ್ದಾಗ ಸೋನಿಯಾಗಾಂಧಿ ಕಂಗಾಲಾಗಿದ್ದರು. ಸೀತಾರಾಂ ಕೇಸರಿಯವರನ್ನು ಕೆಳಗಿಳಿಸಿ ಪಕ್ಷದ ಅಧ್ಯಕ್ಷರಾದ ಸೋನಿಯಾ ನಾಯಕತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 119 ಸ್ಥಾನಗಳನ್ನು ಗಳಿಸಿದ್ದ ಕಾಲ ಅದು. ಸೋಲಿಗೆ ಕಾರಣಗಳನ್ನು ಹುಡುಕಿ ಗೆಲುವಿಗೆ ದಾರಿ ತೋರಿಸಲು ಎ.ಕೆ.ಆಂಟನಿ ನೇತೃತ್ವದ 19 ಸದಸ್ಯರ ಸಮಿತಿಯೊಂದನ್ನು ಸೋನಿಯಾಗಾಂಧಿ ರಚಿಸಿದ್ದರು. ಸಮಿತಿ ಸದಸ್ಯರು ಒಂಬತ್ತು ರಾಜ್ಯಗಳಲ್ಲಿ  ಕಾಲ ಓಡಾಡಿ ಅಭಿಪ್ರಾಯ ಸಂಗ್ರಹಿಸಿದ್ದರು. 40 ದಿನಗಳ ಅಧ್ಯಯನದ ನಂತರ ಆಂಟನಿ ಸಮಿತಿ 200 ಪುಟಗಳ ವರದಿಯನ್ನು ಪಕ್ಷದ ಅಧ್ಯಕ್ಷರಿಗೆ ಸಲ್ಲಿಸಿದ್ದರು. ಈ ವರದಿಯನ್ನು ಗೌಪ್ಯವಾಗಿಡುವ ಉದ್ದೇಶದಿಂದ ಅದರ ಒಂದು ಪ್ರತಿಯನ್ನು ಮಾತ್ರ ಮಾಡಲಾಗಿತ್ತಂತೆ. (ಯಾಕೆ ಈ ರಹಸ್ಯವೊ ಗೊತ್ತಿಲ್ಲ) ಸೋನಿಯಾಗಾಂಧಿ ಮತ್ತು ಕೆಲವು ಆಪ್ತರನ್ನು ಹೊರತುಪಡಿಸಿದರೆ ಅದನ್ನು ನೋಡಿದವರೂ ಇಲ್ಲ. ದೆಹಲಿಯಲ್ಲಿರುವಾಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರ ಕೈಯಲ್ಲಿದ್ದ ವರದಿ ಮೇಲೆ ಕಣ್ಣಾಡಿಸಿದ್ದ ನನ್ನ ನೆನಪಿನ ಪ್ರಕಾರ ಅದರ ಕೆಲವು ಮುಖ್ಯಾಂಶಗಳು ಹೀಗಿವೆ:
-ಚುನಾವಣೆಗೆ ಅಭ್ಯರ್ಥಿಗಳನ್ನು ಮೂರು ತಿಂಗಳ ಮೊದಲೇ ಆಯ್ಕೆ ಮಾಡಿ ಪ್ರಚಾರಕ್ಕೆ ಅನುಕೂಲ ಮಾಡಿಕೊಡಬೇಕು.
-ಗೆಲುವಿನ ಅವಕಾಶದ ಖಾತರಿ ಇಲ್ಲದೆ ನಾಯಕರ ಪತ್ನಿ ಇಲ್ಲವೆ ಮಕ್ಕಳಿಗೆ ಟಿಕೆಟ್ ನೀಡಬಾರದು.
-ಪಕ್ಷದ ಜಿಲ್ಲಾಸಮಿತಿಗಳು ಶೇಕಡಾ 75ರಷ್ಟು, ಪ್ರದೇಶ ಕಾಂಗ್ರೆಸ್ ಸಮಿತಿ ಶೇಕಡಾ 20ರಷ್ಟು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಶೇಕಡಾ ಐದರಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.
-ಚುನಾವಣೆಯ ಪೂರ್ವದಲ್ಲಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬಾರದು.
-ಪ್ರಚಾರದಲ್ಲಿ ಅಭಿವೃದ್ಧಿಯ ಚರ್ಚೆಗೆ ಮಹತ್ವ ನೀಡಬೇಕು, ಇದಕ್ಕೆ ಅನುಗುಣವಾಗಿ ಚುನಾವಣಾ ತಂತ್ರವನ್ನು ರೂಪಿಸಬೇಕು
-ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯವನ್ನು ಸಂಗ್ರಹಿಸಬೇಕು.
ಇಂತಹ ಮಾನದಂಡಗಳನ್ನು ಶಿಫಾರಸು ಮಾಡಿದ್ದು ಆಂಟನಿ ಸಮಿತಿಯೊಂದೇ ಅಲ್ಲ, 1998ರಲ್ಲಿ ಪಿ.ಎ.ಸಂಗ್ಮಾ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. 2003ರಲ್ಲಿ ರಾಜಸ್ತಾನ, ಮಧ್ಯಪ್ರದೇಶ ಮತ್ತು ಚತ್ತೀಸ್‌ಗಡ ವಿಧಾನಸಭಾ ಚುನಾವಣೆ ಸೋತಾಗ ಪ್ರಣಬ್ ಮುಖರ್ಜಿ ಅಧ್ಯಕ್ಷತೆಯ ಸಮಿತಿ ವರದಿಯನ್ನು ನೀಡಿತ್ತು. ಮನಮೋಹನ್‌ಸಿಂಗ್, ಕರುಣಾಕರನ್ ಹೀಗೆ ಪಕ್ಷದ ಹಿರಿಯ ನಾಯಕರೆಲ್ಲ ತಲೆಗೊಂದರಂತೆ ಚುನಾವಣಾ ಸೋಲಿನ ಆತ್ಮಾವಲೋಕನ ಮತ್ತು ಮಾನದಂಡಗಳ ಪಾಲನೆ ಬಗ್ಗೆ ವರದಿಗಳನ್ನು ನೀಡಿದ್ದರು. 2012ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಚತ್ತೀಸ್‌ಗಡಗಳಲ್ಲಿ ಪಕ್ಷ ಪರಾಭವಗೊಂಡ ನಂತರ ಆಂಟನಿ ನೇತೃತ್ವದ ಸಮಿತಿ ವರದಿಯನ್ನು ನೀಡಿತ್ತು. ಇವೆಲ್ಲವೂ 1999ರ ಆಂಟನಿ ವರದಿಯ ಮಾದರಿಯಲ್ಲಿಯೇ ಇವೆ. ಗೆಲುವಿನ ಕಾರ್ಯತಂತ್ರ, ಸೋಲಿನ ಆತ್ಮಾವಲೋಕನ, ಮಾನದಂಡ-ನೀತಿ ಸಂಹಿತೆಗಳ ವರದಿಗಳಿಗೇನು ಕಾಂಗ್ರೆಸ್ ಪಕ್ಷದಲ್ಲಿ ಬರ ಇಲ್ಲ.
`ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಗಳೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು, ದೆಹಲಿಗೆ ಬರಬಾರದು ...ಇತ್ಯಾದಿ ಬುದ್ದಿಮಾತುಗಳನ್ನು ಆಂಟನಿ ವರದಿಯ ದೂಳು ಕೊಡವಿದ ನಂತರವೇ ರಾಹುಲ್‌ಗಾಂಧಿ ಹೇಳಿರುವುದು. ಇದನ್ನು ಪಾಲಿಸುವವರು ಯಾರು? ಪಾಲಿಸುವಂತೆ ಮಾಡುವವರು ಯಾರು?
ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಾರಿ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಚುನಾವಣಾ ಸಮಿತಿಗಳಲ್ಲದೆ ಹಿರಿಯ ನಾಯಕರ ನೇತೃತ್ವದಲ್ಲಿ ಪ್ರಾಂತೀಯ ಸಮಿತಿಗಳನ್ನು ಕೂಡಾ ರಚಿಸಿತ್ತು. ಜಿಲ್ಲಾ ಸಮಿತಿ ಅಧ್ಯಕ್ಷರು ಒಂದು ಇಲ್ಲವೆ ಎರಡು ಹೆಸರುಗಳನ್ನು ಮಾತ್ರ ಶಿಫಾರಸು ಮಾಡಬೇಕೆಂದು ತಿಳಿಸಲಾಗಿತ್ತು. ಇಷ್ಟೆಲ್ಲ ಕಸರತ್ತಿನ ನಂತರ ನಡೆದದ್ದು ಮಾತ್ರ ಹಳೆಯ ಪ್ರಹಸನದ ಮರುಪ್ರದರ್ಶನ. ಯಥಾಪ್ರಕಾರ ಬೆಂಬಲಿಗರೊಂದಿಗೆ ನಾಯಕರ ದಂಡು ದೆಹಲಿಗೆ ದಾಳಿ ಹಾರಿತು. ಹೋದವರೆಲ್ಲರೂ ತಮ್ಮ ಸಾಮರ್ಥ್ಯಕ್ಕೆ ಎಟುಕಬಲ್ಲ  ನಾಯಕರನ್ನು ಭೇಟಿ ಮಾಡಿದರು. ಒಂದಷ್ಟು ಮಹಿಳಾ ಆಕಾಂಕ್ಷಿಗಳು ಸೋನಿಯಾ ಮನೆ ಮುಂದೆ ಧರಣಿಯನ್ನೂ ಮಾಡಿದರು. ಇಷ್ಟೆಲ್ಲಾ ನಡೆಯುವಾಗ `ದೆಹಲಿಗೆ ಬರಬೇಡಿ' ಎಂಬ ಆದೇಶ ನೀಡಿದ್ದ ರಾಹುಲ್‌ಗಾಂಧಿ ಎಲ್ಲಿದ್ದರು? ತಮ್ಮ ಆದೇಶ ಉಲ್ಲಂಘಿಸಿದ್ದ ನಾಲ್ಕು ನಾಯಕರಿಗೆ ಟಿಕೆಟ್ ನಿರಾಕರಿಸುವ ಶಿಸ್ತುಕ್ರಮಕೈಗೊಂಡಿದ್ದರೆ ಉಳಿದವರು ಕರ್ನಾಟಕಕ್ಕೆ ಓಡಿಬರುತ್ತಿದ್ದರು. ಇದನ್ನೆಲ್ಲ ನೋಡಿದ ಟಿಕೆಟ್ ವಂಚಿತ ಯುವ ಅಭ್ಯರ್ಥಿಯೊಬ್ಬ `ನಮ್ಮ ನಾಯಕರ ಮಾತು ಕೇಳಿ ದೆಹಲಿಗೆ ಹೋಗದೆ ಇಲ್ಲಿಯೇ ಇದ್ದು ತಪ್ಪು ಮಾಡಿದೆ. ನನ್ನನ್ನು ವಿರೋಧಿಸಿ ಅಲ್ಲಿಗೆ ಹೋದವರೆಲ್ಲರೂ ಸಂಚು ಮಾಡಿ ಟಿಕೆಟ್ ತಪ್ಪಿಸಿದರು' ಎಂದು ಗೋಳಾಡುತ್ತಿದ್ದ.
2008ರಲ್ಲಿ ಸತತ ಎರಡನೆ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತಾಗ ಪಕ್ಷದ ಹೈಕಮಾಂಡ್ ಚಿಂತಾಕ್ರಾಂತವಾಗಿತ್ತು. ಆಗಲೂ ಸೋಲಿನ ಕಾರಣಗಳನ್ನು ಹುಡುಕಲು ಎ.ಕೆ.ಆಂಟನಿ ನೇತೃತ್ವದಲ್ಲಿಯೇ ಸಮಿತಿ ರಚಿಸಲಾಗಿತ್ತು. ಬೆಳಕಿಗೆ ಬಾರದ ಈ ವರದಿಯಲ್ಲಿಯೂ `ಕಾಂಗ್ರೆಸ್ ಸೋಲಿಗೆ ಆಂತರಿಕ ಕಚ್ಚಾಟ ಮತ್ತು ಹಿರಿಯ ನಾಯಕರು ಸ್ವಂತ ಕ್ಷೇತ್ರಗಳಲ್ಲಿ ಗೆಲ್ಲಲು ವಿಫಲವಾಗಿದ್ದು ಕಾರಣ' ಎಂಬ ಅಂಶ ಪ್ರಮುಖವಾಗಿ ಉಲ್ಲೇಖವಾಗಿತ್ತಂತೆ. `ಕಾಂಗ್ರೆಸ್ ಸೋಲಿಗೆ ಕಾಂಗ್ರೆಸಿನವರೇ ಸಾಕು, ವಿರೋಧಪಕ್ಷಗಳು ಬೇಕಿಲ್ಲ' ಎನ್ನುವ ವ್ಯಂಗ್ಯೋಕ್ತಿ ರಾಜ್ಯದ ರಾಜಕಾರಣದಲ್ಲಿ ಪ್ರಚಾರದಲ್ಲಿದೆ. ಇದನ್ನು ಸುಳ್ಳೆಂದು ಕಾಂಗ್ರೆಸಿನವರೇ ಹೇಳುವುದಿಲ್ಲ. ಕಳೆದ ವರ್ಷ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ಮಾತನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. 2008ರ ಚುನಾವಣಾ ಕಾಲದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಖರ್ಗೆ ಅವರು ಬಹಿರಂಗವಾಗಿ ಹೇಳಲಾಗದ ಇನ್ನಷ್ಟು ಸತ್ಯಗಳನ್ನು ಬಚ್ಚಿಟ್ಟುಕೊಂಡಿರಬಹುದು.
2008ರ ಕಾಂಗ್ರೆಸ್ ಪಕ್ಷದ ಸೋಲಿಗೆ ದಲಿತ ನಾಯಕನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪರೋಕ್ಷವಾಗಿ ಬಿಂಬಿಸಿದ್ದೂ ಕಾರಣ ಎಂದು ಇಂದಿಗೂ ಹೇಳುವವರಿದ್ದಾರೆ. ಆದರೆ ಆಂಟನಿ ಸಮಿತಿ ಎತ್ತಿರುವ ಪ್ರಶ್ನೆಗಳಿಗೆ ಯಾರೂ ಉತ್ತರ ನೀಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿದ್ದ 34 ಮಾಜಿ ಸಚಿವರು ಸೋಲು ಅನುಭವಿಸಿದ್ದರು ಎನ್ನುವುದನ್ನು ಬಹಳ ಮಂದಿ ಮರೆತೇ ಬಿಟ್ಟಿದ್ದಾರೆ. ಸೋಲಿನ ಸರದಾರರ ಪಟ್ಟಿಯಲ್ಲಿ ಎನ್.ಧರ್ಮಸಿಂಗ್, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ಎಚ್.ವಿಶ್ವನಾಥ್, ಅಂಬರೀಷ್, ಎಚ್.ಸಿ.ಶ್ರಿಕಂಠಯ್ಯ, ಡಿ.ಬಿ.ಚಂದ್ರೇಗೌಡ, ಎಂ.ಪಿ.ಪ್ರಕಾಶ್, ಕಾಗೋಡು ತಿಮ್ಮಪ್ಪ, ವಸಂತ್ ವಿ.ಸಾಲ್ಯಾನ್,ಎಂ.ವೈ ಮೇಟಿ, ಕೆ.ಬಿ.ಕೋಳಿವಾಡ್, ಶ್ರಿನಿವಾಸಗೌಡ ಮೊದಲಾದವರ ಹೆಸರುಗಳಿವೆ. ಇವರಲ್ಲಿ ಒಂದಷ್ಟು ಮಂದಿ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಗಳೂ ಆಗಿದ್ದರು. ಇವರಲ್ಲಿ ಹತ್ತು ನಾಯಕರು ಗೆದ್ದುಬಿಟ್ಟಿದ್ದರೂ ರಾಜ್ಯದ ರಾಜಕೀಯ ಚಿತ್ರವೇ ಬದಲಾಗಿರುತ್ತಿತ್ತು. ಬೇರೆ ಕ್ಷೇತ್ರಗಳಿಗೆ ಹೋಗಿ ಪ್ರಚಾರಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದ್ದ ಈ ನಾಯಕರನ್ನು ಅವರ ಕ್ಷೇತ್ರಗಳಲ್ಲಿ ಗೆಲ್ಲಿಸಲು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಪ್ರಚಾರಕ್ಕೆ ಹೋಗಬೇಕಿತ್ತೇ? ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ `ಕಾಲೆಳೆಯುವ ರಾಜಕಾರಣ' ಕೂಡಾ ಕಾರಣ ಎನ್ನುವುದನ್ನು ಆಂಟನಿ ಗುರುತಿಸಿದ್ದಾರೆ. ಹಲವಾರು ನಾಯಕರು ಪಕ್ಷದಲ್ಲಿರುವ ತಮ್ಮ ವಿರೋಧಿಗಳನ್ನು ಸೋಲಿಸಲು ವಿರೋಧಪಕ್ಷಗಳ ಅಭ್ಯರ್ಥಿಗೆ ಹಣಕಾಸು ನೆರವು ನೀಡಿದ್ದ ಪ್ರಕರಣಗಳನ್ನು ಕೂಡಾ ಪಕ್ಷದ ಹಿರಿಯ ನಾಯಕರು ಆಂಟನಿ ಅವರ ಗಮನಕ್ಕೆ ತಂದಿದ್ದರು. ಆದರೆ ಯಾರ ತಲೆಯೂ ಉರುಳಲಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಹಾಕಿದ ಆರೋಪ ಹೊತ್ತವರಿಗೆ ಟಿಕೆಟ್ ನೀಡಿದ ನಂತರ ಯಾವ ತಲೆ ಉರುಳಲು ಸಾಧ್ಯ?
ತಾನು ಕನಸು ಕಾಣುತ್ತಿರುವ ಆದರ್ಶ ರಾಜಕಾರಣವನ್ನು ಕಾರ್ಯರೂಪಕ್ಕೆ ತರಲು ರಾಹುಲ್‌ಗಾಂಧಿ ಈ ಬಾರಿ ಕರ್ನಾಟಕವನ್ನು ಪ್ರಯೋಗಶಾಲೆಯಾಗಿ ಮಾಡಬಹುದಿತ್ತು. ಅಂತಹದ್ದೊಂದು ಅಪೂರ್ವ ಅವಕಾಶ ಕೂಡಿ ಬಂದಿತ್ತು. ಇತ್ತೀಚಿನ ಎಲ್ಲ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ ಬಹುಮತ ಗಳಿಸಬಹುದೆಂಬ ಭವಿಷ್ಯ ನುಡಿಯುತ್ತಿವೆ.  `ರಾಜಕೀಯ ಆತ್ಮಹತ್ಯೆ' ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ರಾಜಕೀಯ ಪಕ್ಷವೊಂದು `ರಿಸ್ಕ್'ತೆಗೆದುಕೊಳ್ಳಲು ಸಾಧ್ಯವಾಗುವುದೇ ಇಂತಹ ಅನುಕೂಲಕರ ಪರಿಸ್ಥಿತಿಯಲ್ಲಿ. ಅಷ್ಟೇನು ಜನಪ್ರಿಯರಲ್ಲದ, ಜಾತಿ ಮತ್ತು ದುಡ್ಡಿನ ಬಲ ಇಲ್ಲದ, ಸಜ್ಜನ, ಪ್ರಾಮಾಣಿಕ, ಕಳಂಕರಹಿತ ಮತ್ತು ಸೇವಾಸಕ್ತ ವ್ಯಕ್ತಿಗಳನ್ನು ಗುರುತಿಸಿ ಟಿಕೆಟ್‌ನೀಡಲು ಇದೊಂದು ಅವಕಾಶ. ಪಕ್ಷದ ಜನಪ್ರಿಯತೆಯ ಅಲೆಯ ಮೇಲೇರಿ ಇಂತಹವರು ಗೆಲುವಿನ ದಡ ಸೇರುವ ಸಾಧ್ಯತೆ ಇರುತ್ತದೆ. ಮುಳುಗುತ್ತಿರುವ ಹಡಗಿನಂತಾಗಿರುವ ಬಿಜೆಪಿ ಇಂತಹ ದಿಟ್ಟತನದ ರಾಜಕೀಯ ನಿರ್ಧಾರವನ್ನು ತೋರಿಸುವ ಸ್ಥಿತಿಯಲ್ಲಿ ಇಲ್ಲ.  ಆದರೆ ಈಗಾಗಲೇ ಬಿಡುಗಡೆಗೊಂಡಿರುವ ಅಭ್ಯರ್ಥಿಗಳ ಪಟ್ಟಿ ಮತ್ತು ಅದರ ಬೆನ್ನಲ್ಲಿಯೇ ಎದ್ದಿರುವ ವಿವಾದಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷ ರಾಹುಲ್‌ಗಾಂಧಿ ತೋರುತ್ತಿರುವ ದಾರಿಯನ್ನು ಬಿಟ್ಟು ಹಳೆಯ ದಾರಿಯಲ್ಲಿಯೇ ಸಾಗುವ ಹಾಗೆ ಕಾಣುತ್ತಿದೆ. ಇಷ್ಟೆಲ್ಲ ಅವಾಂತರಗಳ ನಂತರವೂ ಕಾಂಗ್ರೆಸ್ ಪಕ್ಷವೇ ಚುನಾವಣೆಯಲ್ಲಿ ಬಹುಮತ ಗಳಿಸಬಹುದು, ಆ ಪಕ್ಷವೇ ಸರ್ಕಾರ ರಚಿಸಬಹುದು. ಆದರೆ ಪಕ್ಷ ಗೆದ್ದರೂ ಕೂಡ ಪ್ರಧಾನಮಂತ್ರಿಯಾಗಲು ಹೊರಟ ರಾಹುಲ್‌ಗಾಂಧಿಯ ಆದರ್ಶದ ಸೋಲು ಆಗಲಿದೆ.

No comments:

Post a Comment