Sunday, April 28, 2013

`ವಿಕಾಸ ಪುರುಷ'ನ ಹೊಸ ಪಾತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಚಾರ

ಗುಲ್ಬರ್ಗ:  `ನಮ್ಮ ಸಾಧನೆಯನ್ನು ಅರ್ಧ ಆಕಾಶದಲ್ಲಿ, ಇನ್ನರ್ಧ ಭೂಮಿಯಲ್ಲಿ ತೋರಿಸುತ್ತೇನೆ' ಎಂದಿದ್ದರು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗದಲ್ಲಿ ಹೆಲಿಕಾಪ್ಟರ್ ಹತ್ತುವಾಗ. ಬೀದರ್ ಲೋಕಸಭಾ ಸದಸ್ಯ ಎನ್.ಧರ್ಮಸಿಂಗ್ ಅವರೂ ಜತೆಯಲ್ಲಿದ್ದರು.
ಬೆಳಿಗ್ಗೆ ಹತ್ತರಿಂದ ರಾತ್ರಿ ಹತ್ತರ ವರೆಗೆ ಎಡೆಬಿಡದೆ ಐದು ಸ್ಥಳಗಳಲ್ಲಿ ಪ್ರಚಾರ ಭಾಷಣ ಮಾಡಿದ ಇಬ್ಬರೂ ನಾಯಕರು ದಣಿವಿಲ್ಲದಂತೆ ಮಾತನಾಡಿದ್ದು ಹೈದರಾಬಾದ್ ಕರ್ನಾಟಕದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತ್ರ. ಸಭೆ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಬಂದು ಕೂತಾಗಲೂ ಅದೇ ಚರ್ಚೆ ಮುಂದುವರಿಯುತ್ತಿತ್ತು. `ಐದು ವರ್ಷಗಳಲ್ಲಿ ಖರ್ಗೆ ಮತ್ತು ಧರ್ಮಸಿಂಗ್ ಈ ಪ್ರದೇಶಕ್ಕೆ ಏನು ಮಾಡಿದ್ದಾರೆ?' ಎಂಬ ವಿರೋಧಪಕ್ಷಗಳ ಚುಚ್ಚು ಪ್ರಶ್ನೆ ಇಬ್ಬರನ್ನೂ ಘಾಸಿಗೊಳಿಸಿದಂತಿತ್ತು.
ಆಡಳಿತಾರೂಢ ಪಕ್ಷದ ದುರಾಡಳಿತವನ್ನೇ ಚುನಾವಣಾ ಕಾಲದಲ್ಲಿ ವಿರೋಧ ಪಕ್ಷಗಳ ನಾಯಕರು ಪ್ರಚಾರದ ಪ್ರಮುಖ ವಿಷಯವನ್ನಾಗಿ ಮಾಡಿಕೊಳ್ಳುವುದು ಸಹಜ. ಹೈದರಾಬಾದ್ ಕರ್ನಾಟಕದಲ್ಲಿ ಚುನಾವಣಾ ಆಟದ ಈ ನಿಯಮ ಬದಲಾಗಿದೆ.
ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ  ಕಾಂಗ್ರೆಸ್‌ನ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಾಧನೆಗಳನ್ನು ಮುಂದಿಟ್ಟು ಮತಕೇಳುತ್ತಿದ್ದಾರೆ.`ದಲಿತ ನಾಯಕ', `ಉತ್ತರ ಕರ್ನಾಟಕದ ನಾಯಕ' ಎಂಬೀತ್ಯಾದಿ ವಿಶೇಷಣಗಳಿಂದ ಕಳಚಿಕೊಂಡು `ವಿಕಾಸ ಪುರುಷ'ನಾಗಿ ತಮ್ಮನ್ನು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿ ಖರ್ಗೆ ತೊಡಗಿದ್ದಾರೆ.
`ಲೋಕಸಭೆಗೆ ನನ್ನನ್ನು ಆರಿಸಿ ಕಳುಹಿಸಿದರೆ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷಸ್ಥಾನಮಾನ ನೀಡಲು ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ಮಾಡುವುದಾಗಿ ರಾಹುಲ್‌ಗಾಂಧಿ ಭರವಸೆ ನೀಡಿದ್ದರು. ನಾವು ನುಡಿದಂತೆ ನಡೆದಿದ್ದೇವೆ. ಮಾಡಿರುವ ಕೆಲಸಕ್ಕಾಗಿ ಕೂಲಿ ಕೊಡಿ' ಎಂದು ಖರ್ಗೆ ಅವರು ಮತಯಾಚಿಸುತ್ತಿದ್ದಾರೆ. ಅಲ್ಲಿಗೆ ನಿಲ್ಲಿಸದೆ, ನಾಲ್ಕು ವರ್ಷಗಳ ಅವಧಿಯಲ್ಲಿ  ಗುಲ್ಬರ್ಗ  ಜಿಲ್ಲೆಯಲ್ಲಿ ತಾವು ಮಾಡಿದ ಸಾಧನೆಗಳನ್ನು ಪಟ್ಟಿಮಾಡಿ ಹೇಳುತ್ತಿದ್ದರು.
`ಏನು ಮಾಡಿದ್ದಾರೆ ಎಂದು ಕೇಳುವವರು ಇಲ್ಲಿ ಬಂದು ಕಣ್ಣುಬಿಟ್ಟುನೋಡಲಿ, ಅಂದಾಜು ರೂ.1,500 ಕೋಟಿ  ವೆಚ್ಚದಲ್ಲಿ ಇಎಸ್‌ಐ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ವೈದ್ಯಕೀಯ, ಡೆಂಟಲ್,ನರ್ಸಿಂಗ್ ಕಾಲೇಜುಗಳು, ಕೇಂದ್ರೀಯ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಗುಲ್ಬರ್ಗಗಳಲ್ಲಿ ಕೌಶಲ ಸುಧಾರಣಾ ಕೇಂದ್ರ, ಟೆಕ್ಸ್‌ಟೈಲ್ ಪಾರ್ಕ್, ಕೃಷಿ ಸಂಶೋಧನಾ ಕೇಂದ್ರ, ನವೋದಯ ಶಾಲೆ...ಇನ್ನೇನಾಗಬೇಕು? ಗುಲ್ಬರ್ಗ, ರಾಯಚೂರು,ಯಾದಗಿರಿ,ಬಳ್ಳಾರಿ ಮತ್ತು ಅನಂತಪುರ ಮೂಲಕ ಬೆಂಗಳೂರಿಗೆ ಹೋಗುವ ಸುಮಾರು 300 ಕಿ.ಮೀ.ಉದ್ದದ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಇತ್ತೀಚೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಇವೆಲ್ಲವೂ ನಾಲ್ಕು ವರ್ಷಗಳಲ್ಲಿ ಆಗಿರುವಂತಹ ಕೆಲಸಗಳು, ಹಿಂದಿನದ್ದೆಲ್ಲವನ್ನು ಇದರಲ್ಲಿ ಸೇರಿಸಿಲ್ಲ. ನನ್ನನ್ನು ಸತತವಾಗಿ ಏಳು ಬಾರಿ ಆಯ್ಕೆಮಾಡಿದ ಗುರುಮಿಠ್ಕಲ್ ಕ್ಷೇತ್ರಕ್ಕೆ ಹೋಗಿ ನೋಡಿದರೆ ಅಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೇನೆಂದು ಗೊತ್ತಾಗುತ್ತದೆ.  ಕಾಮಾಲೆ ಕಣ್ಣಿಗೆ ಇದೆಲ್ಲ ಕಾಣಿಸುವುದಿಲ್ಲ' ಎಂದ ಖರ್ಗೆಯವರಿಗೆ ಭಾಷಣ ಮುಗಿಸಿದ ಮೇಲೆಯೂ ವಿರೋಧಪಕ್ಷಗಳ ನಾಯಕರ ಪ್ರಶ್ನೆಗಳಿಂದ ಹುಟ್ಟಿಕೊಂಡಿರುವ ಸಿಟ್ಟು ಇಳಿದಿರಲಿಲ್ಲ.
ಪಕ್ಷದ ಶಿಸ್ತಿನ ಶಿಪಾಯಿ: ಅವರ ಮಾತುಗಳನ್ನು ಅರ್ಧಕ್ಕೆ ತಡೆದು `ವಿರೋಧಪಕ್ಷಗಳನ್ನು ಯಾಕೆ ದೂರುತ್ತೀರಿ, ಬೆಂಗಳೂರಿನಲ್ಲಿರುವ ನಿಮ್ಮ ಪಕ್ಷದ ನಾಯಕರಲ್ಲಿ ಎಷ್ಟು ಮಂದಿ ಈ ಬಗ್ಗೆ ಮಾತನಾಡಿದ್ದಾರೆ?' ಎಂದು ಪ್ರಶ್ನಿಸಿದೆ. ಅಲ್ಲಿಯವರೆಗೆ ಆಕ್ರಮಣಕಾರಿ ರಾಜಕೀಯ ನಾಯಕರಂತೆ ಮಾತನಾಡುತ್ತಿದ್ದ ಖರ್ಗೆಯವರು ತಕ್ಷಣ `ಪಕ್ಷದ ಶಿಸ್ತಿನ ಸಿಪಾಯಿ'ಯಾಗಿ ಮೌನವಾಗಿಬಿಟ್ಟರು.
ಆಡಳಿತ ಮತ್ತು ವಿರೋಧಪಕ್ಷದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದ ಅನುಭವವನ್ನು ಗಣನೆಗೆ ತೆಗೆದುಕೊಂಡರೆ ಪಕ್ಷಾತೀತವಾಗಿ ರಾಜ್ಯದ ಅತ್ಯಂತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ. ಆದರೆ ಅದನ್ನು ಅವರು ಹೇಳಿಕೊಂಡದ್ದು ಕಡಿಮೆ.
`ಸಾಮಾನ್ಯವಾಗಿ ರಾಜಕಾರಣಿಗಳಲ್ಲಿ ಕಂಡುಬರುವ ಮಹತ್ವಾಕಾಂಕ್ಷೆ ಇಲ್ಲದಿರುವುದು ಮತ್ತು ಪಕ್ಷದ ಮೇಲಿನ ಅತಿನಿಷ್ಠೆ ಖರ್ಗೆ ಅವರ ದೌರ್ಬಲ್ಯಗಳು' ಎನ್ನುತ್ತಾರೆ ಅವರ ಬೆಂಬಲಿಗರು. ಇತ್ತೀಚೆಗೆ ಖರ್ಗೆ ಅವರನ್ನು ರಾಜಕೀಯ ಮಹತ್ವಾಕಾಂಕ್ಷೆಗಿಂತಲೂ ಹೆಚ್ಚಾಗಿ ಅಭಿವೃದ್ಧಿ ಕೆಲಸಗಳ ಹುಚ್ಚು ಆವರಿಸಿಕೊಂಡಂತಿದೆ.
ತಮ್ಮ ನಲ್ವತ್ತು ವರ್ಷಗಳ ರಾಜಕೀಯದಲ್ಲಿ ಮಾಡಲು ಸಾಧ್ಯವಾಗದೆ ಇರುವುದನ್ನೆಲ್ಲ ಆದಷ್ಟು ಬೇಗ ಮಾಡಿ ಮುಗಿಸುವ ಅವಸರದಲ್ಲಿದ್ದ ಹಾಗೆ ಕಾಣುತ್ತಿದ್ದಾರೆ. ರಾಜಕೀಯ ವಿಷಯದ ಮೂಲಕ ಅವರೊಡನೆ ಮಾತು ಪ್ರಾರಂಭಿಸಿದರೂ ಅದು ಬಹಳ ಬೇಗ ಅಭಿವೃದ್ಧಿ ಕಾರ್ಯಕ್ರಮಗಳ ಚರ್ಚೆಯ ತಿರುವು ಪಡೆಯುತ್ತಿತ್ತು.
ಗುಲ್ಬರ್ಗದಲ್ಲಿ ಹೆಲಿಕಾಪ್ಟರ್ ಆಕಾಶಕ್ಕೇರಿದ ಸ್ವಲ್ಪ ಹೊತ್ತಿನಲ್ಲಿಯೇ `ಇಲ್ಲಿ ಕೆಳಗೆ ನೋಡಿ' ಎಂದರು ಇಬ್ಬರೂ ನಾಯಕರು ಏಕಕಾಲಕ್ಕೆ. ಅಲ್ಲಲ್ಲಿ ನಿರ್ಮಾಣಗೊಂಡಿರುವ ಬ್ಯಾರೇಜ್‌ಗಳಿಂದಾಗಿ ಭೀಮಾ ನದಿಯಲ್ಲಿ ನೀರು ನಿಂತಿರುವುದು ಮತ್ತು ನದಿದಂಡೆಯಲ್ಲಿ ಹಸಿರು ನಳನಳಿಸುತ್ತಿರುವುದು ಎತ್ತರದಿಂದಲೂ ಸ್ಪಷ್ಟವಾಗಿ ಕಾಣುತ್ತಿತ್ತು.
ಭೀಮಾ, ಕಾಗಿನಾ, ಅಮರ್ಜಾ ನದಿದಂಡೆಗಳ ಮೇಲಿನ ಅಫ್ಜಲ್‌ಪುರ, ಜೇವರ್ಗಿ, ಶಹಬಾದ್, ಚಿಂಚೋಳಿ, ಮಾಗಾಂವ್‌ಗಳಲ್ಲಿಯೇ ಚುನಾವಣಾ ಪ್ರಚಾರದ ಸಭೆಗಳಿದ್ದ ಕಾರಣ ಹೆಲಿಕಾಪ್ಟರ್ ಈ ನದಿದಂಡೆಗಳ ಮೇಲಿನಿಂದಲೇ ಹಾರುತ್ತಿತ್ತು. ನದಿಗಳಲ್ಲಿ ನೀರು ಮತ್ತು ಹಸಿರು ನೋಡಿದಾಕ್ಷಣ ಇಬ್ಬರೂ ನಾಯಕರು `ಕೆಳಗೆ ನೋಡಿ' ಎಂದು ಹೇಳುತ್ತಲೇ ಇದ್ದರು.
`ಏನು ಮಾಡಿದ್ದಾರೆ ಎಂದು ಕೇಳುವವರಿಗೆ ಇದು ಯಾವುದು ಕಾಣುತ್ತಿಲ್ಲವೇ? ಈ ನದಿಗಳಿಗೆ ಸುಮಾರು 20-25 ಬ್ಯಾರೇಜ್ ನಿರ್ಮಿಸಲಾಗಿದೆ. ಇವುಗಳಿಗೆ ಕೇಂದ್ರ ಸರ್ಕಾರದ `ತ್ವರಿತ ನೀರಾವರಿ ಯೋಜನೆ'ಯಿಂದಲೇ ಹೆಚ್ಚಿನ ದುಡ್ಡು ಬಂದಿರುವುದು, ರಾಜ್ಯ ಸರ್ಕಾರ ಎಷ್ಟು ಕೊಟ್ಟಿದೆಯಂತೆ? ಪ್ರಶ್ನಿಸಿದರು ಧರ್ಮಸಿಂಗ್. `ನಮ್ಮ ಸಾಧನೆಯನ್ನು ಆಕಾಶದಲ್ಲಿ ತೋರಿಸುತ್ತೇನೆ' ಎಂದು ಹೇಳಿದ್ದೇ ಇದಕ್ಕಾಗಿ ಎಂದು ದನಿಗೂಡಿಸಿದರು ಖರ್ಗೆ.
ಹೆಲಿಕಾಪ್ಟರ್‌ನ ಮೊದಲ ನಿಲುಗಡೆಯಾಗಿ ಅಫ್ಜಲ್‌ಪುರದಲ್ಲಿ ಇಳಿದಾಗ ಎದುರಾದ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಭೀಮಾ ನದಿ ದಂಡೆಯ ಬ್ಯಾರೇಜ್‌ಗಳ ವಿಷಯ ಬಿಟ್ಟು ಬೇರೇನೂ ಮಾತನಾಡಲಿಲ್ಲ.  `ಸೊನ್ನ, ಗಾಣಗಾಪುರ, ಗತ್ತರಗಿಗಳಲ್ಲಿ ನಿರ್ಮಾಣಗೊಂಡ ಬ್ಯಾರೇಜ್‌ಗಳಿಂದಾಗಿ ಸುಮಾರು 90ಗ್ರಾಮಗಳ ಜಮೀನಿಗೆ ನೀರು ಬಂದಿದೆ' ಎಂದು ಅವರು ಖರ್ಗೆ ಮತ್ತು ಧರ್ಮಸಿಂಗ್ ಅವರ ಮಾತುಗಳನ್ನು ದೃಡೀಕರಿಸಿದರು.
ಪ್ರಚಾರ ಸಭೆಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಲು ಪ್ರಾರಂಭಿಸುತ್ತಿದ್ದಂತೆಯೇ ಜನ ಜೈಕಾರ ಹಾಕತೊಡಗಿದ್ದರು. ಅವರು ಪ್ರತಿಬಾರಿ ಮುನ್ನೂರ ಎಪ್ಪತ್ತೊಂದು' ಹೇಳಿದಾಗಲೂ ಜನ ಹರ್ಷೋದ್ಗಾರ ಮಾಡುತ್ತಿದ್ದರು. ಸಭೆಯಲ್ಲಿ ಮಾತನಾಡುತ್ತಿದ್ದ ಇತರರು ಖರ್ಗೆ ಹೆಸರು ಹೇಳುತ್ತಿದ್ದಾಗಲೂ ಜನ ಜೈಕಾರ ಹಾಕುತ್ತಿದ್ದರು. ಇದರಿಂದ ಸ್ಪೂರ್ತಿ ಪಡೆದಂತೆ ಖರ್ಗೆ ಎಲ್ಲ ಕಡೆಗಳಲ್ಲಿ ಸಂವಿಧಾನದ 371ನೆ ಕಲಮಿಗೆ ಮಾಡಿದ ತಿದ್ದುಪಡಿಯ ವಿಷಯವನ್ನೇ ಪ್ರಚಾರದ ಪ್ರಮುಖ ವಿಷಯವನ್ನಾಗಿ ಮಾಡಿಕೊಂಡು ಮಾತನಾಡಿದರು.
`ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ಮಾಡುವುದನ್ನು ವಿರೋಧಿಸಿದವರು ಬಿಜೆಪಿ ನಾಯಕರು. ಇದನ್ನು ಮಾಡಿದರೆ ದೇಶ `ತುಕುಡಿ ತುಕುಡಿ' ಆಗುತ್ತದೆ ಎಂದು ಆಗಿನ ಕೇಂದ್ರ ಗೃಹಸಚಿವ ಎಲ್.ಕೆ.ಅಡ್ವಾಣಿ ಹೇಳಿದ್ದರು. ವಿಶೇಷ ಸ್ಥಾನಮಾನ ಪಡೆದ ತೆಲಂಗಾಣ, ವಿದರ್ಭ, ಸೌರಾಷ್ಟ್ರ, ನಾಗಲ್ಯಾಂಡ್‌ಗಳು `ತುಕುಡಿ' ಆಗಿದೆಯೇ? ಎಂದು ಅವರು ಜನರನ್ನು ಪ್ರಶ್ನಿಸುತ್ತಿದ್ದರು.
`ಬಹಳ ಶ್ರಮಪಟ್ಟು ಎಲ್ಲರನ್ನು ಒಪ್ಪಿಸಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ತಿದ್ದುಪಡಿ ಮಾಡಿದ್ದೇವೆ. ಇದು ಸರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ರಾಜ್ಯ ಸರ್ಕಾರದ ಸಹಕಾರ ಅಗತ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಇದು ಸಾಧ್ಯ. ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಓಟು ಹಾಕಿ' ಎಂದು ಜನತೆಯ ಭಾವನೆಗಳನ್ನು ಮೀಟುವ ಕೆಲಸವನ್ನೂ ಅವರು ಮಾಡುತ್ತಿದ್ದರು.
ಚುನಾವಣಾ ಪ್ರಚಾರ ಸಭೆಗಳಲ್ಲಿ ಸಾಮಾನ್ಯವಾಗಿ ಒಂದು ಪಕ್ಷಕ್ಕೆ ಸೇರಿದ್ದ ಕಾರ್ಯಕರ್ತರು ಮತ್ತು ಬೆಂಬಲಿಗರೇ ಸೇರುವುದರಿಂದ ಪ್ರತಿಕ್ರಿಯೆ ನಿರೀಕ್ಷಿತ ಎಂದಿಟ್ಟುಕೊಂಡರೂ `ಅಭಿವೃದ್ಧಿಯ ಮಂತ್ರ'ಕ್ಕೆ ಜನ ತಲೆದೂಗುತ್ತಿರುವುದು ಹೊಸ ಬೆಳವಣಿಗೆ. ವೈಯಕ್ತಿಕ ಆರೋಪ-ಪ್ರತ್ಯಾರೋಪಗಳನ್ನು ಮೀರಿದ ಈ ರೀತಿಯ ಅಭಿವೃದ್ಧಿ ಕೇಂದ್ರಿತ ಚುನಾವಣಾ ಪ್ರಚಾರ ಈ ಕಾಲದ ಅಗತ್ಯ ಕೂಡಾ ಹೌದು.
ಮಾಗಾಂವ್‌ನಲ್ಲಿ ರಾತ್ರಿ ಹತ್ತುಗಂಟೆಗೆ ಪ್ರಚಾರ ಮುಗಿಸಿ ಗುಲ್ಬರ್ಗಕ್ಕೆ ಹಿಂದಿರುಗುತ್ತಿದ್ದಾಗ ಖರ್ಗೆ ಅವರು `ನಾವೇನು ಮಾಡಿದ್ದೇವೆ ಎನ್ನುವುದನ್ನು ಭೂಮಿಯ ಮೇಲೆಯೂ ನೋಡಿದರಲ್ಲಾ?' ಎಂದು ಕೇಳಿದರು. ಚಿಂಚೋಳಿ ಮೀಸಲು ಕ್ಷೇತ್ರದ ಕಾಳಗಿಗೆ ಹೋದ ನಂತರ ಹೆಲಿಕಾಪ್ಟರ್ ವಾಪಸು ಕಳಿಸಿದ್ದ ಕಾರಣ ರಸ್ತೆಯಿಂದಲೇ ಮಾಗಾಂವ್‌ಗೆ ಬಂದ ಖರ್ಗೆ ದಿನದ ಕೊನೆಯ ಪ್ರಚಾರ ಭಾಷಣ ಮುಗಿಸಿದ್ದರು.
`ಈ ವಯಸ್ಸಿನಲ್ಲಿ ಸತತ ಹನ್ನೆರಡು ಗಂಟೆ ಸುತ್ತಾಟ, ಪ್ರಚಾರ ಎಲ್ಲ ಸುಸ್ತು ಅನಿಸುವುದಿಲ್ಲವೇ? ಎಂದು ಖರ್ಗೆಯವರನ್ನು ಸುಮ್ಮನೆ ಕೆಣಕಿದೆ. `ನನಗೆ ವಯಸ್ಸಾಗಿದೆ ಎಂದು ನಿಮಗೆ ಅನಿಸುತ್ತಾ? ಎಂದು ಅವರು ಮರುಪ್ರಶ್ನಿಸಿದರು. `ಈ ಪ್ರಶ್ನೆಯನ್ನು ನೀವು ಕೇಳಬೇಕಾಗಿರುವುದು ನಿಮ್ಮ ಪಕ್ಷದ ಉಪಾಧ್ಯಕ್ಷರಾದ ರಾಹುಲ್‌ಗಾಂಧಿ ಅವರನ್ನು' ಎಂದೆ ತಮಾಷೆಯಾಗಿ.

No comments:

Post a Comment