Monday, April 29, 2013

ಹೈದರಾಬಾದ್ ಕರ್ನಾಟಕದ ಬಾಗಿಲು ಬಡಿಯುತ್ತಿರುವ ಕೆಜೆಪಿ

ಗುಲ್ಬರ್ಗ:   ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಲಿಂಗಾಯತರು ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಮೂಲಕ ರಾಜಕೀಯ ನೆಲೆಯನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆಯೇ? ರಾಜಕೀಯವಾಗಿ ಅವಕಾಶ ವಂಚಿತರಾಗುತ್ತಿದ್ದೇವೆ ಎಂಬ ಈ ಭಾಗದ ಲಿಂಗಾಯತ ಸಮುದಾಯದಲ್ಲಿರುವ ಅತೃಪ್ತಿಯನ್ನು ಬಳಸಿಕೊಂಡು ಕೆಜೆಪಿ ಇಲ್ಲಿ ಕಾಲೂರುವ ಸನ್ನಾಹದಲ್ಲಿ ತೊಡಗಿದೆಯೇ? ಇಲ್ಲಿನ ಚುನಾವಣಾ ರಾಜಕೀಯದ ವಿದ್ಯಮಾನಗಳ ಒಳಗೊಂದು ನೋಟ ಹರಿಸಿದರೆ ಇಂತಹ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
ಈ ಭಾಗದ ಹಿರಿಯ ರಾಜಕಾರಣಿಯಾಗಿದ್ದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ನಂತರ ತಮ್ಮನ್ನು ಪ್ರತಿನಿಧಿಸಬಲ್ಲ ಸಮರ್ಥ ನಾಯಕರು ಹುಟ್ಟಿಬರಲಿಲ್ಲ ಎಂಬ ಕೊರಗು ಇಲ್ಲಿನ ಲಿಂಗಾಯತ ಸಮುದಾಯದಲ್ಲಿ ಬಹಳ ಕಾಲದಿಂದಲೂ ಇದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಎಂಬ ಅವಳಿ ನಾಯಕರು ಈ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಲಿಂಗಾಯತೇತರ ಸಮುದಾಯದ ಬೆಂಬಲದೊಂದಿಗೆ ಪ್ರಭಾವಶಾಲಿ ಕಾಂಗ್ರೆಸ್ ನಾಯಕರಾಗಿ ಬೆಳೆಯುತ್ತಾ ಹೋದಂತೆ ಲಿಂಗಾಯತರು ಸಹಜವಾಗಿಯೇ ಪಕ್ಕಕ್ಕೆ ಸರಿದು ನಿಲ್ಲಬೇಕಾಯಿತು.
ನಾಯಕತ್ವದ ಈ ನಿರ್ವಾತವನ್ನು ಬಳಸಿಕೊಳ್ಳಲು ರಾಮಕೃಷ್ಣ ಹೆಗಡೆಯವರು ಹೊರಟಾಗ ಲಿಂಗಾಯತರು ಹೆಚ್ಚುಕಡಿಮೆ ಅವರ ನಾಯಕತ್ವವನ್ನು ಒಪ್ಪಿಕೊಂಡೇ ಬಿಟ್ಟಿದ್ದರು. ಅದರ ನಂತರ ಕಾಣಿಸಿಕೊಂಡವರು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ. ಇವರನ್ನು ಈ ಭಾಗದ ಲಿಂಗಾಯತರು ಬೆಂಬಲಿಸಿರುವುದಕ್ಕೆ 2008ರ ವಿಧಾನಸಭಾ ಚುನಾವಣಾ ಫಲಿತಾಂಶ ಸಾಕ್ಷಿ. ಆಶ್ಚರ್ಯದ ಸಂಗತಿಯೆಂದರೆ ಆ ಚುನಾವಣೆಯಲ್ಲಿ ಲಿಂಗಾಯತ ಮತದಾರರು ಅಭ್ಯರ್ಥಿಗಳ ಜಾತಿಯನ್ನು ನೋಡದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಏಕೈಕ ಗುರಿಯಿಂದ ಲಿಂಗಾಯತೇತರ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿರುವುದು ಫಲಿತಾಂಶದ ವಿಶ್ಲೇಷಣೆಯಿಂದ ಕಂಡುಬರುತ್ತದೆ.
ಕಳೆದ ಚುನಾವಣೆಯಲ್ಲಿ ಗುಲ್ಬರ್ಗ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಹೈದರಾಬಾದ್ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ನಲ್ವತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಹತ್ತೊಂಬತ್ತನ್ನು ಗೆದ್ದಿದ್ದರೂ, ಇವರಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು ಐದು ಶಾಸಕರು ಮಾತ್ರ. ಉಳಿದವರೆಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗೆ ಸೇರಿದವರು. ಕಾಂಗ್ರೆಸ್ ಪಕ್ಷ ಈ ಭಾಗದ 15 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದರೂ ಅವರಲ್ಲಿನ ಲಿಂಗಾಯತ ಶಾಸಕರ ಸಂಖ್ಯೆ ಬಿಜೆಪಿಗಿಂತ ಎರಡು ಹೆಚ್ಚು. ಲಿಂಗಾಯತೇತರ ಅಭ್ಯರ್ಥಿಗಳಿದ್ದ ಕ್ಷೇತ್ರಗಳಲ್ಲಿಯೂ ಲಿಂಗಾಯತರು ಬಿಜೆಪಿಗೆ ಮತದಾನ ಮಾಡಿರುವುದು ಇದರಿಂದ ಸ್ಪಷ್ಟ.
ಜನಪ್ರಿಯ ಜಾತಿ ನಾಯಕರಲ್ಲಿ ಕಾಣಬಹುದಾದ (ಉದಾಹರಣೆಗೆ ಮಾಯಾವತಿ) ಮತವರ್ಗಾವಣೆಯ ಸಾಮರ್ಥ್ಯವನ್ನು ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಪ್ರದರ್ಶಿಸಿದ್ದಾರೆ. ಆದರೆ ಕೇವಲ ಈ ಶಕ್ತಿಯ ಬಲದಿಂದ ಕೆಜೆಪಿ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವೇ ಎನ್ನುವುದು ಪ್ರಶ್ನೆ. ಯಡಿಯೂರಪ್ಪ ಬಿಜೆಪಿಯಲ್ಲಿದ್ದಾಗ ಅವರ ವೈಯಕ್ತಿಕ ಜನಪ್ರಿಯತೆ (ಮುಖ್ಯವಾಗಿ ಜಾತಿ) ಮತ್ತು ಪಕ್ಷದ ಮೂಲಕ ಹರಿದು ಬಂದ ಬೆಂಬಲ ಒಟ್ಟಾಗಿ ಅಭ್ಯರ್ಥಿಗಳನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿತ್ತು. ಆದರೆ ಈ ಬಾರಿ ಕೇವಲ ತನ್ನ ಜನಪ್ರಿಯತೆಯ ಬಲದಿಂದಲೇ ಪಕ್ಷದ ಅಭ್ಯರ್ಥಿಗಳನ್ನು ಆರಿಸಿ ತರಬೇಕಾಗಿದೆ. ಹಿಂದಿನ ಚುನಾವಣೆಯ ಕಾಲದಲ್ಲಿದ್ದ ಮತವರ್ಗಾವಣೆಯ ಸಾಮರ್ಥ್ಯ ಈಗಲೂ ಯಡಿಯೂರಪ್ಪನವರಲ್ಲಿ ಉಳಿದಿದೆಯೇ?
ಆರೋಪಗಳ ಕಳಂಕದ ಹೊರತಾಗಿಯೂ ಹೈದರಾಬಾದ್ ಕರ್ನಾಟಕದ ಬಹುಸಂಖ್ಯಾತ ಲಿಂಗಾಯತರಲ್ಲಿ ಯಡಿಯೂರಪ್ಪನವರ ಬಗ್ಗೆ ಪ್ರೀತಿಯೋ, ಅನುಕಂಪವೋ ಇರುವುದು ಸ್ಪಷ್ಟ. ಆದರೆ ಈ ಮೃದು ಭಾವನೆ ಅವರ ಮತಾಧಿಕಾರವನ್ನು ನಿರ್ದೇಶಿಸುವಷ್ಟು ಪ್ರಭಾವಶಾಲಿಯಾಗಿದೆಯೇ ಎಂಬುದನ್ನು ಕಾದು ನೋಡಬೇಕು. ಈ ಭಾಗದಲ್ಲಿ ಸಮಗ್ರ ಲಿಂಗಾಯತ ಜಾತಿಯನ್ನು ಪ್ರತಿನಿಧಿಸಬಲ್ಲ ಸಾಮರ್ಥ್ಯದ ನಾಯಕರು ಇಲ್ಲದಿರುವುದು ಕೂಡಾ ಯಡಿಯೂರಪ್ಪನವರ ಬಗೆಗಿನ ಅಭಿಮಾನಕ್ಕೆ ಕಾರಣ ಇರಬಹುದು.
ಗುಲ್ಬರ್ಗ ಜಿಲ್ಲೆಯಲ್ಲಿ ವೀರೇಂದ್ರ ಪಾಟೀಲರ ನಂತರ ಕಾಣಿಸಿಕೊಂಡವರು ಜನತಾ ಪರಿವಾರಕ್ಕೆ ಸೇರಿರುವ ವೈಜನಾಥ ಪಾಟೀಲ, ಎಸ್.ಕೆ.ಕಾಂತಾ, ಬಿ.ಆರ್.ಪಾಟೀಲ ಮೊದಲಾದ ನಾಯಕರು. ಇವರಲ್ಲಿ ಯಾರೂ ಲಿಂಗಾಯತ ನಾಯಕರಾಗಿ ತಮ್ಮನ್ನು ಬಿಂಬಿಸಿಕೊಂಡವರಲ್ಲ. ಗುಲ್ಬರ್ಗ ಜಿಲ್ಲೆಯ ಸೇಡಂ ಶಾಸಕ ಡಾ.ಶರಣಪ್ರಕಾಶ ಪಾಟೀಲ ಇಲ್ಲವೆ ಯಾದಗಿರಿ ಶಾಸಕ ಡಾ.ಮಾಲಕರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷ ತಮ್ಮಲ್ಲಿರುವ ಲಿಂಗಾಯತ ನಾಯಕರೆಂದು ಬಿಂಬಿಸುತ್ತಿದ್ದರೂ ಅವರ ಪ್ರಭಾವಲಯ ಸೀಮಿತವಾದುದು.
ಇದೇ ರೀತಿ ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಭೀಮಣ್ಣ ಖಂಡ್ರೆ ವೀರಶೈವ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೂ ಸಮುದಾಯದ ಮೇಲೆ ನಿಯಂತ್ರಣ ಹೊಂದಿದವರಲ್ಲ, ಅವರ ಶ್ರಮವೆಲ್ಲ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಗ ಈಶ್ವರ ಖಂಡ್ರೆಯವರನ್ನು ಗೆಲ್ಲಿಸುವುದಕ್ಕಷ್ಟೇ ವ್ಯಯವಾಗುತ್ತಿದೆ. ಅದೇ ಜಿಲ್ಲೆಯ ಗುರುಪಾದಪ್ಪ ನಾಗಮಾರಪಳ್ಳಿ ಹಲವು ಪಕ್ಷಗಳನ್ನು ಸುತ್ತಿ ಈಗ ಕೆಜೆಪಿ ಸೇರಿದ್ದಾರೆ.
ಕೊಪ್ಪಳ ಜಿಲ್ಲೆಯ ಬಸವರಾಜ ಪಾಟೀಲ ಅನ್ವರಿ ಈಗ ಹಿಂದಿನ ಜನಪ್ರಿಯತೆಯನ್ನು ಉಳಿಸಿಕೊಂಡಿಲ್ಲ. ಆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಬಸವರಾಜ ರಾಯರೆಡ್ಡಿ ಮತ್ತು ಅಮರೇಗೌಡ ಬಯ್ಯಾಪುರ ಹಾಗೂ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ತಮ್ಮ ಕ್ಷೇತ್ರಗಳ ವ್ಯಾಪ್ತಿಯನ್ನು ಮೀರಿ ಲಿಂಗಾಯತ ಮತದಾರರ ಮೇಲೆ ಹಿಡಿತ ಹೊಂದಿದವರಲ್ಲ.
ಏಳರಲ್ಲಿ ಐದು ಕ್ಷೇತ್ರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿರುವುದರಿಂದ ರಾಯಚೂರು ಜಿಲ್ಲೆಯಲ್ಲಿ ಲಿಂಗಾಯತ ನಾಯಕರು ಬೆಳೆಯಲು ಅವಕಾಶ ಕಡಿಮೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಬೋಸರಾಜು ಮತ್ತು ಹಂಪನಗೌಡ ಬಾದರ್ಲಿ ಅವರೇ ಅಲ್ಲಿನ ನಾಯಕರು. ಬಳ್ಳಾರಿ ಜಿಲ್ಲೆಯಲ್ಲಿದ್ದ ಒಬ್ಬ ಲಿಂಗಾಯತ ನಾಯಕರಾದ ಅಲ್ಲಂ ವೀರಭದ್ರಪ್ಪನವರು ಊರು ಬಿಟ್ಟು ಬೆಂಗಳೂರು ಸೇರಿಬಿಟ್ಟಿದ್ದಾರೆ.
ಹೈದರಾಬಾದ್ ಕರ್ನಾಟಕದ ಲಿಂಗಾಯತರಲ್ಲಿರುವ ನಾಯಕತ್ವದ ಕೊರತೆ ಬಿ.ಎಸ್.ಯಡಿಯೂರಪ್ಪನವರಿಗೆ ಇರುವ ಅನುಕೂಲತೆ. ಇದನ್ನು ಅರ್ಥಮಾಡಿಕೊಂಡಿರುವ ಅವರು ಅಳಿದುಳಿದ ಲಿಂಗಾಯತ ನಾಯಕರನ್ನು  ತಮ್ಮ ಜತೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಪ್ರಾರಂಭದಿಂದಲೇ ಮಾಡುತ್ತಾ ಬಂದಿದ್ದಾರೆ. ಈ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸನ್ನೂ ಕಂಡಿದ್ದಾರೆ. ಇದನ್ನು ಮುಖ್ಯವಾಗಿ ಹೈದರಾಬಾದ್ ಕರ್ನಾಟಕದ ಕೇಂದ್ರ ಸ್ಥಾನವಾದ ಗುಲ್ಬರ್ಗ ಜಿಲ್ಲೆಯಲ್ಲಿ ಕಾಣಬಹುದು. ನಂಜುಂಡಪ್ಪ ವರದಿಯ ಅನುಷ್ಠಾನದಿಂದ ಹಿಡಿದು ಸಂವಿಧಾನದ 371ನೇ ಕಲಂ ತಿದ್ದುಪಡಿಯವರೆಗಿನ ಹೈದರಾಬಾದ್ ಕರ್ನಾಟಕದ ಮುಖ್ಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಾ ಬಂದ ವೈಜನಾಥ ಪಾಟೀಲ, ಕಾರ್ಮಿಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಎಸ್.ಕೆ.ಕಾಂತಾ, ಜನತಾ ಪರಿವಾರದಿಂದ ಬಂದ ಸಮಾಜವಾದಿ ಹಿನ್ನೆಲೆಯ ಬಿ.ಆರ್.ಪಾಟೀಲ ಮತ್ತು ಇನ್ನೊಬ್ಬ ಹಿರಿಯ ನಾಯಕ ಎಂ.ವೈ. ಪಾಟೀಲ ಈಗ ಗುಲ್ಬರ್ಗ ಜಿಲ್ಲೆಯಲ್ಲಿ ಕೆಜೆಪಿ ಅಭ್ಯರ್ಥಿಗಳು. ಅದೇ ರೀತಿ ಕೊಪ್ಪಳ ಜಿಲ್ಲೆಯ ಬಸವರಾಜ ಅನ್ವರಿ, ಬೀದರ್ ಜಿಲ್ಲೆಯ ಗುರುಪಾದಪ್ಪ ನಾಗಮಾರಪಳ್ಳಿ ಕೂಡಾ ಕೆಜೆಪಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ತಮಗೆ ಇರುವ ಪ್ರಭಾವ ಸೀಮಿತವಾಗಿದ್ದರೂ ಇದು ಯಡಿಯೂರಪ್ಪನವರ ಜನಪ್ರಿಯತೆಯ ಜತೆ ಸೇರಿಕೊಂಡಾಗ ಗೆಲುವಿನ ಹಾದಿ ಹತ್ತಿರವಾಗಬಹುದು ಎಂಬ ನಿರೀಕ್ಷೆ ಕೆಜೆಪಿ ಅಭ್ಯರ್ಥಿಗಳಲ್ಲಿದೆ. ಕೆಜೆಪಿಯ ಜನಪ್ರಿಯತೆ ಅದಕ್ಕೆ ಸ್ಥಾನಗಳನ್ನು ಗೆದ್ದುಕೊಡುವಷ್ಟು ಅಗಾಧವಾಗಿದೆಯೇ? ಇಲ್ಲವೆ ಬೇರೆ ಪಕ್ಷಗಳ ಮತಗಳನ್ನು ತಿಂದುಹಾಕುವುದಕ್ಕಷ್ಟೇ ಸೀಮಿತವಾಗಲಿದೆಯೇ ಎನ್ನುವುದು ಚುನಾವಣಾ ಕಣದಲ್ಲಿರುವ ಕುತೂಹಲ. ಕೆಜೆಪಿ ಬರಿ ಬಿಜೆಪಿಗೆ ಮಾತ್ರವಲ್ಲ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಹಾನಿ ಉಂಟು ಮಾಡುವ ಸಾಧ್ಯತೆ ಇದ್ದರೂ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಜೆಪಿಯಿಂದ ನಷ್ಟಕ್ಕಿಂತ ಲಾಭವೇ ಹೆಚ್ಚು. ತಮ್ಮ ಅಭ್ಯರ್ಥಿಗಳು ಗೆಲ್ಲಲಾಗದ ಕಡೆಗಳಲ್ಲಿ ಕೊನೆ ಗಳಿಗೆಯಲ್ಲಿ ಕೆಜೆಪಿ ತನ್ನ ಬೆಂಬಲಿಗರಿಗೆ ಕಾಂಗ್ರೆಸ್ ಪರ ಮತಹಾಕಲು ಸೂಚನೆಯನ್ನು ನೀಡಬಹುದೆಂಬ ನಿರೀಕ್ಷೆಯೂ ಕೆಲವು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿದೆ.
ಬಹಿರಂಗವಾಗಿ ಚರ್ಚೆಯಾಗುತ್ತಿರುವಂತೆ ಬಿಜೆಪಿಯನ್ನು ಸೋಲಿಸುವುದೇ ಕೆಜೆಪಿಯ ಮೊದಲ ಉದ್ದೇಶವಾಗಿದ್ದರೆ ಈ ಪ್ರಯತ್ನದಲ್ಲಿ ಅದು ಈಗಾಗಲೇ ಯಶಸ್ಸು ಕಂಡಿದೆ ಎಂದು ಹೇಳಬಹುದು. ಹೈದರಾಬಾದ್ ಕರ್ನಾಟಕದಲ್ಲಿ ಕಳೆದ ಬಾರಿ ಗೆದ್ದಿರುವ 19 ಸ್ಥಾನ ಉಳಿಸಿಕೊಳ್ಳುವುದು ಬಿಜೆಪಿಗೆ ಖಂಡಿತ ಅಸಾಧ್ಯ. ಈ ಸಂಖ್ಯೆ ಅರ್ಧಕ್ಕಿಂತಲೂ ಕೆಳಗಿಳಿದರೂ ಅಚ್ಚರಿ ಪಡಬೇಕಾಗಿಲ್ಲ. ಕೆಜೆಪಿ, ಹೈದರಾಬಾದ್ ಕರ್ನಾಟಕದ ಮನೆಬಾಗಿಲು ಬಡಿಯುತ್ತಿರುವುದು ನಿಜ, ಆದರೆ ಬಾಗಿಲು ತೆರೆಯುವ ಬಗ್ಗೆ ಮನೆ ಯಜಮಾನನ ನಿರ್ಧಾರ ಏನೆಂದು ತಿಳಿದುಕೊಳ್ಳಲು ಕಾಯಬೇಕು.

No comments:

Post a Comment