Monday, January 25, 2016

ನಿಮ್ಮ ಉತ್ತರದ ನಿರೀಕ್ಷೆಯಲ್ಲಿ..

ಪ್ರೀತಿಯ ಗೆಳೆಯರಾದ ಸುರೇಶ್ ಕುಮಾರ್, 
‘ಸೆಕ್ಯುಲರ್ ವಾದ’ದ ಕುರಿತು ಕಳೆದ ಶನಿವಾರ ನಾನು ಮಾಡಿದ ಭಾಷಣದ ವರದಿ ಬಗ್ಗೆ ನಿಮ್ಮ ಅವಸರದ ಪ್ರತಿಕ್ರಿಯೆನ್ನು ಗಮನಿಸಿದೆ. ಅದರ ಬಗ್ಗೆ ನನ್ನ ಸ್ಪಷ್ಟೀಕರಣವನ್ನು ವರದಿಮಾಡಿದ ಪತ್ರಿಕೆಗೆ ಪ್ರತ್ಯೇಕವಾಗಿ ಕಳುಹಿಸುತ್ತೇನೆ, ಅದನ್ನು ನೀವು ಓದಿಕೊಳ್ಳಬಹುದು. ನಿಮ್ಮ ಪ್ರತಿಕ್ರಿಯೆಯಲ್ಲಿ ನಾನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದೀರಿ. ಅದಕ್ಕಷ್ಟೇ ಈ ಪ್ರತಿಕ್ರಿಯೆ. ರಾಜೀನಾಮೆಯ ಸವಾಲನ್ನು ಸ್ವೀಕರಿಸಲು ನಾನು ರೆಡಿ ಇದ್ದೇನೆ. ಅದಕ್ಕಿಂತ ಮೊದಲು ನನ್ನ ಮನದ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. 

ಹಿಂದೆ ಪತ್ರಕರ್ತನಾಗಿ ಈಗ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಿಂದೂ ಮತ್ತು ಮುಸ್ಲಿಮ್ ಕೋಮುವಾದಗಳೆರಡನ್ನೂ ನಾನು ವಿರೋಧಿಸುತ್ತಾ ಬಂದವನು. ಆರ್ ಎಸ್ ಎಸ್,ವಿಶ್ವಹಿಂದು ಪರಿಷತ್, ಬಜರಂಗದಳ, ಹಿಂದೂ ಜಾಗರಣವೇದಿಕೆ ಮೊದಲಾದ ಸಂಘಟನೆಗಳ ಕೋಮುವಾದವನ್ನು ಮಾತ್ರವಲ್ಲ ಮುಸ್ಲಿಮ್ ಲೀಗ್, ಎಸ್ ಡಿಪಿ ಐ,ಪಾಪ್ಯುಲರ್ ಫ್ರಂಟ್ ಮೊದಲಾದ ಸಂಘಟನೆಗಳ ಕೋಮುವಾದವನ್ನು ಕೂಡಾ ನಾನು ವಿರೋಧಿಸುತ್ತಾ ಬಂದವನು. ಬುರ್ಕಾ ಧಾರಣೆಯನ್ನು ಪ್ರಶ್ನಿಸಿ ನಿಂದನೆಗೆ ಒಳಗಾದವನು. ಪತ್ರಿಕೆಗಳ ನಿಷ್ಠಾವಂತ ಓದುಗನಾಗಿ ನೀವು ಇದನ್ನು ಗಮನಿಸಿದ್ದೀರಿ ಎಂದು
ನಂಬಿದ್ದೇನೆ. 
ಹಿಂದುತ್ವದ ಪ್ರಯೋಗಶಾಲೆಯೆಂಬ ಕುಖ್ಯಾತಿಗೊಳಗಾದ ಊರಿನ ಮೂಲನಿವಾಸಿ ನಾನು. ನನ್ನ ಕಣ್ಣೆದುರೇ ಎರಡೂ ಕೋಮುಗಳ ಹುಡುಗರು ಕೋಮುವಾದದ ಬೆಂಕಿಗೆ ಹಾರಿ ಬದುಕನ್ನು ಸುಟ್ಟುಕೊಳ್ಳುತ್ತಿರುವುದನ್ನು ಕಂಡಾಗ ವೇದನೆಯಾಗುತ್ತದೆ, ಸೂಕ್ಷ್ಮ ಮನಸ್ಸಿನ ನಿಮಗೂ ನೋವಾಗಿರಬಹುದೆಂದು ತಿಳಿದುಕೊಂಡಿದ್ದೇನೆ. ಇದು ನನ್ನಲ್ಲಿ ಆಗಾಗ ಆಕ್ರೋಶವನ್ನು ಹೊರಡಿಸುತ್ತದೆ.
ನಮ್ಮೆಲ್ಲರ ಪಾಲಿಗೆ ಸುಡುವ ಬೆಂಕಿಯಾಗಿ ಕಾಡುತ್ತಿರುವ ಕೋಮುವಾದವನ್ನು ಎದುರಿಸಲು ಭಾಷಣ-ಬರವಣಿಗೆಯ ಜತೆಗೆ ರಚನಾತ್ಮಕವಾಗಿ ಇನ್ನು ಏನನ್ನಾದರೂ ಮಾಡಬೇಕೆಂದು ನನಗನಿಸುತ್ತಿದೆ. 
ಕೋಮುವಾದದ ಬಗ್ಗೆ ನೀವು ವ್ಯಕ್ತಪಡಿಸಿರುವ ಕಳಕಳಿ-ಕಳವಳ ಪ್ರಾಮಾಣಿಕವಾದುದೆಂದು ನಾನು ನಂಬಿರುವುದರಿಂದ ನನ್ನೊಳಗೊಂದು ಆಸೆ ಹುಟ್ಟಿಕೊಂಡಿದೆ. ಆದರೆ ನಾವು ಹೇಳಿರುವುದನ್ನು ನಾವು ಮಾತ್ರ ನಂಬಿದರೆ ಸಾಲದು ಇತರರೂ ನಂಬಬೇಕಾಗುತ್ತದೆ. ನಿಮ್ಮ ಮೇಲೆ ಆ ನಂಬಿಕೆ ಬರಬೇಕಾದರೆ ಎರಡೂ ಧರ್ಮಗಳ ಕೋಮುವಾದವನ್ನು ನೀವು ವಿರೋಧಿಸಬೇಕಾಗುತ್ತದೆ. ರಾಜಕೀಯ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಿಮಗೆ ಇದು ಸಾಧ್ಯವೆಂದು ನನಗನಿಸುವುದಿಲ್ಲ.ಯಾಕೆಂದರೆ ನೀವೆಂದೂ ಹಿಂದೂ ಕೋಮುವಾದವನ್ನು ಬಹಿರಂಗವಾಗಿ ವಿರೋಧಿಸಿಲ್ಲ. ಆದ್ದರಿಂದ ಎಲ್ಲ ಧರ್ಮಗಳ ಕೋಮುವಾದವನ್ನು ನೀವು ಪ್ರಾಮಾಣಿಕವಾಗಿ ವಿರೋಧಿಸುವುದಾದರೆ ನಿಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ, ಪರಿವಾರದಿಂದ ಕಳಚಿಕೊಂಡು ಹೊರಬರಬೇಕಾಗುತ್ತದೆ. ದಯವಿಟ್ಟು ಆ ಕೆಲಸವನ್ನು ಮಾಡಿ ಪಕ್ಷದ ಬಂಧನದಿಂದ ಹೊರಬನ್ನಿ.
ಅಂತಹದ್ದೊಂದು ನಿರ್ಧಾರವನ್ನು ನೀವು ಕೈಗೊಳ್ಳುವುದಾದರೆ ನಾನು ಕೂಡಾ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನ ಹುದ್ದೆಗೆ ಈ ಕ್ಷಣದಲ್ಲಿಯೇ ರಾಜೀನಾಮೆ ನೀಡುತ್ತೇನೆ. ನನಗೆ ನಿಮ್ಮ ರೀತಿಯ ಯಾವುದೇ ಪಕ್ಷ-ಪರಿವಾರದ ಬಂಧನ ಇಲ್ಲ. ನಾನು ಈಗಿನ ಹುದ್ದೆಗೆ ರಾಜೀನಾಮೆ ನೀಡುವುದು ಮಾತ್ರವಲ್ಲ ಮುಂದೆಂದೂ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ನೀವು ನಂಬುವ ದೇವರಲ್ಲಿಗೆ ಬಂದು ಪ್ರಮಾಣ ಮಾಡುತ್ತೇನೆ. (ನನ್ನ ನಂಬಿಕೆಗಿಂತ ನಿಮ್ಮ ನಂಬಿಕೆ ಮುಖ್ಯ)
ಇಬ್ಬರೂ ಕೂಡಿ ಕೋಮುವಾದದ ವಿರುದ್ಧ ಕನಿಷ್ಠ ರಾಜ್ಯದಲ್ಲಿಯಾದರೂ ಆಂದೋಲನವನ್ನು ಕಟ್ಟೋಣ. ಅಜರ್ ಮಸೂದ್ ನಿಂದ ಹಿಡಿದು ನಜ್ಮಲ್, ಸೈಯ್ಯದ್, ಅಸೀಪ್, ಸುಹೇಲ್ ಮಾತ್ರವಲ್ಲ, ಸ್ವಾಧ್ವಿ ಪ್ರಜ್ಞಾ, ಅಸೀಮಾನಂದ, ಕರ್ನಲ್ ಪುರೋಹಿತ್, ಭುವಿತ್ ಶೆಟ್ಟಿ ವರೆಗೆ ಕೋಮುವಾದದಲ್ಲಿ ತೊಡಗಿಡಸಿಕೊಂಡಿರುವ ಎಲ್ಲರನ್ನೂ ವಿರೋಧಿಸೋಣ. ಕೋಮುವಾದಕ್ಕೆ ಚಿತಾವಣೆ ನೀಡುತ್ತಿರುವ ಆರ್ ಎಸ್ ಎಸ್, ವಿಶ್ವಹಿಂದು ಪರಿಷತ್, ಬಜರಂಗದಳ, ಮುಸ್ಲಿಮ್ ಲೀಗ್, ಎಸ್ ಡಿಪಿ ಐ, ಪಾಪ್ಯುಲರ್ ಫ್ರಂಟ್ ಮೊದಲಾದ ಎಲ್ಲ ಸಂಘಟನೆಗಳನ್ನೂ ವಿರೋಧಿಸೋಣ. ಜತೆಗೆ ಜಾತೀಯತೆ ಬಗ್ಗೆ ಹಿಂದುತ್ವವಾದಿಗಳ ಆತ್ಮವಂಚಕ ನಡವಳಿಕೆಯನ್ನೂ ಬಯಲಿಗೆಳೆಯೋಣ. ಈ ಮೂಲಕ ಇದೇ ಜಾತೀಯತೆಯಿಂದ ನರಳಿ ಪ್ರಾಣಾರ್ಪಣೆ ಮಾಡಿದ ಸೋದರ ರೋಹಿತ ವೇಮುಲನ ತ್ಯಾಗವನ್ನೂ ಗೌರವಿಸಿದಂತಾಗುತ್ತದೆ.
ದಯವಿಟ್ಟು ಇದನ್ನು ಸವಾಲೆಂದು ತಿಳಿದುಕೊಳ್ಳಬೇಡಿ, ಸಲಹೆ ಎಂದು ಸ್ವೀಕರಿಸಿ. ನನ್ನ ರಾಜೀನಾಮೆಗೆ ಒತ್ತಾಯಿಸಿ ನೀವು ಇಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದೀರಿ ಎಂದು ನಿಮ್ಮ ಮಾಧ್ಯಮ ಕಚೇರಿಯ ಆಹ್ಹಾನದ ಮೂಲಕ ತಿಳಿದುಬಂತು. ನನ್ನ ಸಲಹೆಯನ್ನು ನೀವು ಒಪ್ಪುವುದಾದರೆ ನಾನೇ ಅಲ್ಲಿಗೆ ಬರುತ್ತೇನೆ. ಇಬ್ಬರೂ ಒಟ್ಟಿಗೆ ನಮ್ಮ ನಿರ್ಧಾರಗಳನ್ನು ಮಾಧ್ಯಮದ ಮುಂದೆ ಘೋಷಿಸಿಬಿಡುವ.
ನಿಮ್ಮ ಉತ್ತರದ ನಿರೀಕ್ಷೆಯಲ್ಲಿ
ದಿನೇಶ್ ಅಮಿನ್ ಮಟ್ಟು.

No comments:

Post a Comment