Thursday, May 9, 2013

ಬಿಜೆಪಿಗೆ ಮುಖಭಂಗ... ಜೆಡಿಎಸ್‌ಗೆ ಆಶಾಭಂಗ... ಕೆಜೆಪಿಗೆ ಗರ್ವಭಂಗ...

ಬದಲಾವಣೆಗಿದು ಜನಾದೇಶ

ಬೆಂಗಳೂರು: ದುರಾಡಳಿತದ ವಿರುದ್ಧದ ಆಕ್ರೋಶ, `ಆಪರೇಷನ್ ಕಮಲ'ವನ್ನೊಳಗೊಂಡ ಅನೈತಿಕ ರಾಜಕಾರಣಕ್ಕೆ ಪ್ರತಿರೋಧ, ದಕ್ಷ ಆಡಳಿತದ ಆಶಯ ಮತ್ತು ಬದಲಾವಣೆಯ ನಿರೀಕ್ಷೆಯನ್ನೊಳಗೊಂಡ ರಾಜ್ಯದ ಜನಾದೇಶ ಬಿಜೆಪಿ ಹಾಗೂ ಕೆಜೆಪಿಗಳೆರಡನ್ನೂ ಸ್ಪಷ್ಟವಾಗಿ ತಿರಸ್ಕರಿಸಿ ಒಂಬತ್ತು ವರ್ಷಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ನೀಡಿದೆ.
ಬಿಜೆಪಿಯನ್ನು ಧ್ವಂಸ ಮಾಡುವ ಉದ್ದೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಫಲರಾದರೂ ತಾವು ಕಟ್ಟಿದ ಕೆಜೆಪಿಯನ್ನು ಪ್ರಾದೇಶಿಕ ಪಕ್ಷದ ರೂಪದಲ್ಲಿ ನೆಲೆಗೊಳಿಸಲು ಅವರು ವಿಫಲರಾಗಿದ್ದಾರೆ. ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿ ಮತ್ತು ಕೆಜೆಪಿಯನ್ನು ಪ್ರತ್ಯೇಕವಾಗಿ ನೋಡಲು ಹೋಗದೆ ಒಂದೇ ನಾಣ್ಯದ ಎರಡು ಮುಖಗಳೆಂದೇ ಪರಿಗಣಿಸಿ ತಿರಸ್ಕರಿಸಿದ್ದಾರೆ. ಈ ಮೂಲಕ ಯಡಿಯೂರಪ್ಪನವರ ನಿರ್ಗಮನದಿಂದ ತಮ್ಮ ಪಕ್ಷ ಕಳಂಕಮುಕ್ತವಾಗಿ ಸ್ವಚ್ಛವಾಗಿದೆ ಎಂಬ ಬಿಜೆಪಿಯ ವಾದ ಮತ್ತು ಬಿಜೆಪಿಯಿಂದ ಅನ್ಯಾಯವಾಗಿದೆ ಎಂಬ ಯಡಿಯೂರಪ್ಪನವರ ಅಳಲುಗಳೆರಡನ್ನೂ ತಳ್ಳಿಹಾಕಿದ್ದಾರೆ.
ಕಳೆದ ಚುನಾವಣೆಯ ಕಾಲದಲ್ಲಿ ಎದುರಾದ ವಚನಭ್ರಷ್ಟತೆಯ ಆರೋಪದಿಂದಾಗಿ ಕುಸಿದುಹೋಗಿದ್ದ ಜಾತ್ಯತೀತ ಜನತಾದಳದ ಸಾಧನೆ ನಿರೀಕ್ಷೆಯನ್ನು ಮೀರಿದ್ದು. ಆದರೆ ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ ಜೆ.ಡಿ (ಎಸ್) ಗಳಿಸಿದ ಬಹುಪಾಲು ಸ್ಥಾನಗಳು ಹಳೆಮೈಸೂರು ಭಾಗಕ್ಕೆ ಸೇರಿವೆ  (40ರಲ್ಲಿ 27) ಎಂಬುದು ಗಮನಾರ್ಹ. ಇದರಿಂದಾಗಿ ಉತ್ತರಕರ್ನಾಟಕಕ್ಕೆ ದಾಳಿ ಮಾಡಿ `ಗಡಿ ವಿಸ್ತರಣೆ' ಮಾಡುವ ಅದರ ಪ್ರಯತ್ನ ಮತ್ತೊಮ್ಮೆ ವಿಫಲಗೊಂಡಿದೆ. ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ಜೆ.ಡಿ (ಎಸ್)ಗಳಿಸಿದ ಸ್ಥಾನಗಳು (5) ಪಕ್ಷದ ನೆಲೆಯನ್ನು ವಿಸ್ತರಿಸುವ ಸಾಧ್ಯತೆಯನ್ನು ತೋರಿಸಿದೆ. ಕಾಂಗ್ರೆಸ್ ಪಕ್ಷ ತನ್ನ ಬಲವರ್ಧನೆ ಮಾಡಿಕೊಂಡರೂ ಹಳೆಮೈಸೂರು ಭಾಗದ ತನ್ನ ಸಾಮ್ರಾಜ್ಯವನ್ನು ಜೆಡಿ (ಎಸ್) ಬಿಟ್ಟುಕೊಟ್ಟಿಲ್ಲ.

ಸರ್ಕಾರ ರಚನೆಗೆ ಬೇಕಾದ ಬಹುಮತವನ್ನಷ್ಟೇ ಪಡೆದಿರುವ ಕಾಂಗ್ರೆಸ್ ಪಕ್ಷ ಗೆಲುವಿನಿಂದ ಬೀಗುವ ಸ್ಥಿತಿಯಲ್ಲಿ ಇಲ್ಲ. ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಆಡಳಿತ ವೈಫಲ್ಯದಿಂದಾಗಿ ನಾಗರಿಕರಲ್ಲಿ ಹುಟ್ಟಿಕೊಂಡಿರುವ ಅಸಮಾಧಾನವನ್ನು ಬಳಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ. ಇದರ ಜತೆಗೆ ಟಿಕೆಟ್ ಹಂಚಿಕೆಯಿಂದಾಗಿ ಉದ್ಭವವಾಗಿರುವ ಭಿನ್ನಮದಿಂದಾಗಿ ಸುಲಭದಲ್ಲಿ ಗೆಲ್ಲಬಹುದಾದ ಕೆಲವು ಸ್ಥಾನಗಳನ್ನು ಕಳೆದುಕೊಂಡಿದೆ. ಈ ಪಕ್ಷದ ರಾಜ್ಯ ಅಧ್ಯಕ್ಷರೇ ಮರು ಆಯ್ಕೆಯಾಗಲು ವಿಫಲಗೊಂಡಿರುವುದು ಗೆಲುವಿನ ಸಂಭ್ರಮವನ್ನು ತುಸು ಮಂಕುಗೊಳಿಸಿದೆ. ಇದರಿಂದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಉದ್ದನೆಯ ಪಟ್ಟಿಯಲ್ಲಿದ್ದ ಒಂದು ಹೆಸರು ಕಡಿಮೆಯಾಗಿದೆ ಅಷ್ಟೆ.
ಚುನಾವಣಾಪೂರ್ವ ಸಮೀಕ್ಷೆಯಲ್ಲಿ `ಪ್ರಜಾವಾಣಿ' ನಿರೀಕ್ಷಿಸಿದಂತೆಯೇ ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದ ಮತದಾರರು ಜನಾದೇಶದ `ಆಟ ಬದಲಿಸಿದ್ದಾರೆ'. ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ವಿಜಾಪುರ ಮತ್ತು ಧಾರವಾಡ ಜಿಲ್ಲೆಗಳನ್ನೊಳಗೊಂಡ ಮುಂಬೈ ಕರ್ನಾಟಕದಲ್ಲಿರುವ ಒಟ್ಟು 50 ಸ್ಥಾನಗಳಲ್ಲಿ ಕಳೆದ ಬಾರಿ ಬಿಜೆಪಿ 36 ಸ್ಥಾನಗಳನ್ನು ಗಳಿಸಿದ್ದರೆ ಈ ಬಾರಿ ಅದಕ್ಕೆ ಉಳಿಸಲು ಸಾಧ್ಯವಾಗಿದ್ದು ಹನ್ನೆರಡು ಮಾತ್ರ. ಇದೇ ವೇಳೆ ಕಳೆದ ಚುನಾವಣೆಯಲ್ಲಿ ಕೇವಲ 12 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಈ ಬಾರಿ ತನ್ನ ಬಲವನ್ನು 31ಕ್ಕೆ ಹೆಚ್ಚಿಸಿಕೊಂಡಿದೆ.
ಹೈದರಾಬಾದ್ ಕರ್ನಾಟಕದಲ್ಲಿಯೂ ಸ್ಥಾನಪಲ್ಲಟ ಸ್ಪಷ್ಟವಾಗಿದೆ. ಗುಲ್ಬರ್ಗ, ಬೀದರ್, ರಾಯಚೂರು ,ಕೊಪ್ಪಳ ಮತ್ತು ಬಳ್ಳಾರಿಗಳನ್ನೊಳಗೊಂಡ ಹೈದರಾಬಾದ್ ಕರ್ನಾಟಕದಲ್ಲಿರುವ ಒಟ್ಟು 39 ಸ್ಥಾನಗಳಲ್ಲಿ ಕಳೆದ ಬಾರಿ 19ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಐದು ಮಾತ್ರ. ಇದಕ್ಕೆ ವಿರುದ್ಧವಾಗಿ 15 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ 21ಕ್ಕೆ ತನ್ನ ಬಲ ವೃದ್ಧಿಸಿಕೊಂಡಿದೆ. ಈ `ಎರಡು ಕರ್ನಾಟಕ'ಗಳ ಒಟ್ಟು 89 ಸ್ಥಾನಗಳ ಪೈಕಿ ಬಿಜೆಪಿ ಬಲ 55ರಿಂದ 17ಕ್ಕೆ ಇಳಿದಿರುವುದು ಮತ್ತು ಕಾಂಗ್ರೆಸ್ ಬಲ 22ರಿಂದ 55ಕ್ಕೆ ಹೆಚ್ಚಿರುವುದು ಈ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿರುವ ಮುಖ್ಯ ಬೆಳವಣಿಗೆ. ಕುಸಿದುಹೋಗಿರುವ ಜನಪ್ರಿಯತೆಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮೋಡಿ ಎತ್ತಿಹಿಡಿಯುತ್ತದೆ ಎಂದು ನಿರೀಕ್ಷಿಸಿದ್ದ ಬಿಜೆಪಿಯ ನಿರೀಕ್ಷೆ ಹುಸಿಯಾಗಿರುವುದಕ್ಕೆ ರಾಜ್ಯದ ಕರಾವಳಿ ಭಾಗದ ಫಲಿತಾಂಶವೇ ಸಾಕ್ಷಿ.
`ಹಿಂದುತ್ವದ ಪ್ರಯೋಗಶಾಲೆ' ಎಂದೇ ಬಣ್ಣಿಸಲಾಗುತ್ತಿದ್ದ ರಾಜ್ಯದ ಕರಾವಳಿ ಭಾಗದಲ್ಲಿಯೂ ಮೋದಿ ಪ್ರಚಾರವು ಬಿಜೆಪಿ ದೂಳಿಪಟವಾಗುವುದನ್ನು ತಪ್ಪಿಸಲಾಗಿಲ್ಲ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಹದಿಮೂರು ಕ್ಷೇತ್ರಗಳಲ್ಲಿ ಹತ್ತರಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಬಿಜೆಪಿಗೆ ಉಳಿಸಿಕೊಂಡಿರುವುದು ಎರಡನ್ನು ಮಾತ್ರ. ನೈತಿಕ ಪೊಲೀಸ್‌ಗಿರಿ ಮತ್ತು ಕೋಮುದ್ವೇಷಕ್ಕೆ ಪ್ರಚೋದನೆ ನೀಡುವ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ದದ ಸ್ಪಷ್ಟವಾದ ತೀರ್ಪನ್ನು ಕರಾವಳಿಯ ಮತದಾರರು ನೀಡಿದ್ದಾರೆ.
ಮೋದಿ ಭಾಷಣಕ್ಕೆ ಹೇಗೆ ಜನ ಮರುಳಾಗಿಲ್ಲವೋ ಹಾಗೆಯೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆಯೂ ರಾಜ್ಯದ ಮತದಾರರು ತಲೆ ಕೆಡಿಸಿಕೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯನಿರ್ವಹಣೆಯನ್ನು ಪ್ರತ್ಯೇಕವಾಗಿ ಗಮನಿಸುವ ಪ್ರಬುದ್ಧತೆ ಇದಕ್ಕೆ ಕಾರಣ ಇರಬಹುದು. `ಆಪರೇಷನ್ ಕಮಲ'ದ ದೌರ್ಬಲ್ಯಕ್ಕೆ ಬಲಿಯಾಗಿದ್ದ ಪ್ರಮುಖರನ್ನು ಸೋಲಿಸುವ ಮೂಲಕ ದುಡ್ಡಿನ ಬಲದಿಂದ ಜನಾಭಿಪ್ರಾಯವನ್ನೂ ಖರೀದಿಸಲು ಸಾಧ್ಯ ಎಂಬ ಅಭಿಪ್ರಾಯವನ್ನು ಕೂಡಾ ಮತದಾರರು ಹುಸಿಗೊಳಿಸಿದ್ದಾರೆ. ಹಣದ ಹೊಳೆ ಹರಿಸಿದ ಅನೇಕ ಸಿರಿವಂತ ಅಭ್ಯರ್ಥಿಗಳು ಸೋಲಿನ ಶಿಕ್ಷೆಗೆ ಈಡಾಗಿದ್ದಾರೆ.
ಈ ಚುನಾವಣೆಯಲ್ಲಿ ಜಾತಿ ವಹಿಸಿರುವ ಪಾತ್ರವನ್ನು ನಿರಾಕರಿಸಲಾಗದಿದ್ದರೂ ನಿರ್ದಿಷ್ಟ ಜಾತಿಯ ಜನರು ಯಾವುದಾದರೂ ಒಂದು ಪಕ್ಷ ಇಲ್ಲವೇ ಒಬ್ಬ ನಾಯಕನನ್ನು ಬೆಂಬಲಿಸುತ್ತಾರೆಂಬ ಜನಪ್ರಿಯ ಅಭಿಪ್ರಾಯವನ್ನು ಮತದಾರರು ಹುಸಿಗೊಳಿಸಿದ್ದಾರೆ. ವೀರಶೈವ ಮಠಗಳಿಗೆ ಉದಾರವಾಗಿ ಬಜೆಟ್‌ನಲ್ಲಿ ಹಣ ನೀಡಿದ ಯಡಿಯೂರಪ್ಪನವರನ್ನು ಲಿಂಗಾಯತರ ಪ್ರಶ್ನಾತೀತ ನಾಯಕರೆಂದೇ ಬಿಂಬಿಸಲಾಗಿದ್ದರೂ ಕೆಜೆಪಿಗೆ ಆ ಜಾತಿಯ ಮತದಾರರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ ಎನ್ನುವುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ. ಇದೇ ವೇಳೆ ಅನೇಕ ಕ್ಷೇತ್ರಗಳಲ್ಲಿ ಜಾತಿ ಬಲ ಇಲ್ಲದ ವೈ.ಎಸ್.ವಿ.ದತ್ತ, ರಮೇಶ್‌ಕುಮಾರ್, ಅಭಯಚಂದ್ರ ಜೈನ್, ಡಿ.ಸುಧಾಕರ್, ಅಜಯಸಿಂಗ್ ಮೊದಲಾದ ನಾಯಕರನ್ನು ಮತದಾರರು ತಮ್ಮ  ಪ್ರತಿನಿಧಿಗಳಾಗಿ ಆಯ್ಕೆ ಮಾಡಿದ್ದಾರೆ. ಮಂಡ್ಯದ ಮೇಲುಕೋಟೆ ಕ್ಷೇತ್ರದಿಂದ ರೈತಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಆಯ್ಕೆಯಾಗಿರುವುದು ಕೂಡಾ ಚುನಾವಣಾ ಫಲಿತಾಂಶದ ಅಚ್ಚರಿಗಳಲ್ಲೊಂದು.
ಆಡಳಿತ ವಿರೋಧಿ ಅಲೆಯಲ್ಲಿ ಸೋಮಣ್ಣ, ಎ.ರಾಮದಾಸ್, ಮುರುಗೇಶ ನಿರಾಣಿ, ಬಚ್ಚೇಗೌಡ, ಸೊಗಡು ಶಿವಣ್ಣ ಸೇರಿದಂತೆ ರಾಜ್ಯದ ಹನ್ನೆರಡು ಸಚಿವರು ಕೊಚ್ಚಿಕೊಂಡು ಹೋಗಿದ್ದಾರೆ. ಕೊನೆ ಗಳಿಗೆಯಲ್ಲಿ ಸರ್ಕಾರದಿಂದ ಹೊರಬಂದರೂ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಸದನದಲ್ಲಿ ಬ್ಲೂಫಿಲಂ ವೀಕ್ಷಣೆಯ ಆರೋಪಕ್ಕೊಳಗಾಗಿರುವ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರು ಸೋಲುಂಡಿದ್ದಾರೆ. ಇದೇ ವೇಳೆ  ಎಚ್.ಕೆ.ಪಾಟೀಲ್, ರಮೇಶಕುಮಾರ್. ಹಾಲಾಡಿ ಶ್ರಿನಿವಾಸ ಶೆಟ್ಟಿ, ಬಿ.ಆರ್.ಪಾಟೀಲ್, ಸುರೇಶ್‌ಕುಮಾರ್ ಡಾ.ಎ.ಬಿ.ಮಾಲಕರೆಡ್ಡಿ. ಕಾಗೋಡು ತಿಮ್ಮಪ್ಪ , ಕಿಮ್ಮನೆ ರತ್ನಾಕರ, ವೈ.ಎಸ್.ವಿ.ದತ್ತ ಮೊದಲಾದ ಒಂದಷ್ಟು ಸಜ್ಜನ ರಾಜಕಾರಣಿಗಳನ್ನು ಪಕ್ಷಾತೀತವಾಗಿ ಜನ ಗೆಲ್ಲಿಸಿದ್ದಾರೆ.
1999ರ ಚುನಾವಣೆಯ ನಂತರ ಬೆಳಗಾವಿ ನಗರದಲ್ಲಿ ಯಾವುದೇ ಸ್ಥಾನವನ್ನು ಗೆಲ್ಲಲಾಗದ ಎಂಇಎಸ್ ತಣ್ಣಗಾಗಿತ್ತು. ಈ ಬಾರಿ ಅದು ನಗರದಲ್ಲಿ ಮತ್ತೆ ಖಾತೆ ತೆರೆದಿದೆ. ಆ ಸಂಘಟನೆಯ ಬೆಂಬಲ ಪಡೆದು ಆಯ್ಕೆಯಾಗಿರುವ ಇಬ್ಬರು (ಖಾನಾಪುರದಲ್ಲಿ ಸ್ಥಾನ ಉಳಿಸಿಕೊಂಡಿದೆ) ಶಾಸಕರು ಮತ್ತೆ ಗಡಿವಿವಾದವನ್ನು ಕೆದಕುವ ದುಸ್ಸಾಹಸ ಮಾಡಬಹುದು. ಇನ್ನೊಂದು ಬೆಳವಣಿಗೆಯಲ್ಲಿ ಚಾಮರಾಜನಗರದ ಕನ್ನಡ ಚಳಚಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಸೋತುಹೋಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸ್ಪರ್ಧಿಸಿದ್ದ ಸಿಪಿಎಂನ ಜಿ.ವಿ. ಶ್ರೀರಾಮ ರೆಡ್ಡಿ ಅವರ ಸೋಲಿನೊಂದಿಗೆ ವಿಧಾನಸಭೆಯಲ್ಲಿ ಮತ್ತೆ ಖಾತೆ ತೆರೆಯುವ ಅವಕಾಶವನ್ನು ಎಡ ಪಕ್ಷ ಕಳೆದುಕೊಂಡಿದೆ.

No comments:

Post a Comment