Tuesday, December 27, 2011

ರಾಜಕೀಯ ಸಂಘರ್ಷಗಳಲ್ಲೇ ಕಳೆದು ಹೋದ ಬಂಗಾರಪ್ಪ

 
ಎಸ್.ಬಂಗಾರಪ್ಪನವರು ಇಷ್ಟೊಂದು ಸಿಟ್ಟು ಮಾಡಿಕೊಳ್ಳದೆ ಇರುತ್ತಿದ್ದರೆ, ಅವಕಾಶಕ್ಕಾಗಿ ಕಾಯುವಷ್ಟು ತಾಳ್ಮೆಯನ್ನು ಹೊಂದಿದ್ದರೆ, ಅನ್ಯಾಯವನ್ನು ಸಹಿಸಿಕೊಳ್ಳುವಷ್ಟು ಸಂಯಮವನ್ನು ಪಡೆದಿದ್ದರೆ, ಬಂಡುಕೋರತನವನ್ನು ನಿಯಂತ್ರಿಸಿಕೊಳ್ಳುವಷ್ಟು ಹೊಂದಾಣಿಕೆ ಕಲಿತಿದ್ದರೆ, ಜೈಕಾರ ಹಾಕಿದವರನ್ನೆಲ್ಲ ನಂಬುವಷ್ಟು ಒಳ್ಳೆಯವನಾಗದೆ ಇರುತ್ತಿದ್ದರೆ, ಸಾರ್ವಜನಿಕ ಹಣದ ಬಗ್ಗೆ ಸ್ವಲ್ಪ ಸೂಕ್ಷ್ಮಮತಿಯಾಗಿದ್ದರೆ, ಬಡವರ ಬಗೆಗಿನ ಕಾಳಜಿಯ ಜತೆಯಲ್ಲಿ ಅಭಿವೃದ್ಧಿಯ ಮುನ್ನೋಟವನ್ನೂ ಹೊಂದಿದ್ದರೆ... ರಾಜಕೀಯವಾಗಿ ಅವರು ಇನ್ನಷ್ಟು ಮೇಲಕ್ಕೇರುತ್ತಿದ್ದರು, ಅವರಿಂದ ರಾಜ್ಯಕ್ಕೆ ಇನ್ನಷ್ಟು ಒಳ್ಳೆಯದಾಗುತ್ತಿತ್ತೋ ಏನೋ? ಆದರೆ ಸಿಟ್ಟು, ಅವಸರ, ಅಸಹನೆ, ಬಂಡಾಯ, ಹುಂಬತನಗಳೆಲ್ಲವೂ ಅವರ ಹುಟ್ಟುಗುಣಗಳು, ಅವುಗಳು ಇಲ್ಲದೆ ಇದ್ದಿದ್ದರೆ ಅವರು ಬಂಗಾರಪ್ಪ ಹೇಗಾಗುತ್ತಿದ್ದರು? ಈ ಗುಣಗಳಿಗಾಗಿಯೇ ಅವರನ್ನು ದ್ವೇಷಿಸುವವರು ಇದ್ದರು, ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೀತಿಸುವವರೂ ಇದ್ದರು.
1972ರಲ್ಲಿ ಮೊದಲ ಬಾರಿ ಸಿಟ್ಟಾದಾಗ ಅವರಿಗೆ 40ರ ಹರಯ. ಸಂಯುಕ್ತ ಸಮಾಜವಾದಿ ಪಕ್ಷದಲ್ಲಿ ತಮಗಿಂತ ಕಿರಿಯರಾದ ಕಾಗೋಡು ತಿಮ್ಮಪ್ಪನವರಿಗೆ ಉನ್ನತ ಸ್ಥಾನ ನೀಡಿದಾಗ ಸಿಟ್ಟಾದ ಬಂಗಾರಪ್ಪ ಸಿಡಿದು ಪಕ್ಷ ತ್ಯಜಿಸಿ ಕಾಂಗ್ರೆಸ್ ಸೇರಿಕೊಂಡರು. ಎರಡನೆ ಬಾರಿ ಅವರು ಸಿಟ್ಟಾಗಿದ್ದು 1980ರಲ್ಲಿ, ದೇವರಾಜ ಅರಸು ವಿರುದ್ಧದ ಸಮರಕ್ಕೆ ಬಂಗಾರಪ್ಪನವರನ್ನು ಬಳಸಿಕೊಂಡ ಇಂದಿರಾ ಗಾಂಧಿ ಉದ್ದೇಶ ಸಾಧಿಸಿದ ನಂತರ ಅವರನ್ನು ಕೈಬಿಟ್ಟು ಆರ್. ಗುಂಡೂರಾವ್ ಅವರನ್ನು ಮುಖ್ಯಮಂತ್ರಿ ಮಾಡಿದಾಗ. 1983ರಲ್ಲಿ ಕ್ರಾಂತಿರಂಗದ ನಾಯಕರಾಗಿ ರಾಜ್ಯದ ತುಂಬಾ ಚುನಾವಣಾ ಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿ ಬೆಂಗಳೂರಿಗೆ ಹಿಂದಿರುಗಿದಾಗ ಮುಖ್ಯಮಂತ್ರಿ ಕುರ್ಚಿಯಲ್ಲಿ ರಾಮಕೃಷ್ಣ ಹೆಗಡೆ ಕುಳಿತಿದ್ದನ್ನು ಕಂಡು ಅವರು ಮೂರನೆ ಬಾರಿ ಸಿಟ್ಟಾಗಿದ್ದರು.
1989ರಲ್ಲಿ ನಾಲ್ಕನೆ ಬಾರಿ ಬಂಗಾರಪ್ಪನವರಿಗೆ ಸಿಟ್ಟು ಬಂದಿತ್ತು. ವೀರೇಂದ್ರ ಪಾಟೀಲ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು, ಕನಿಷ್ಠ ಸಚಿವ ಸಂಪುಟದ ಪಟ್ಟಿಯಲ್ಲಿಯೂ ಅವರ ಹೆಸರಿರಲಿಲ್ಲ. 1993ರಲ್ಲಿ ಐದನೆ ಬಾರಿ ಸಿಟ್ಟಾಗಿದ್ದಾಗ ಅವರು ಮುಖ್ಯಮಂತ್ರಿಯಾಗಿದ್ದರು. ಭಿನ್ನಮತೀಯರ ದೂರಿನ ವಿಚಾರಣೆಗಾಗಿ ಹೈಕಮಾಂಡ್ ಪ್ರತಿನಿಧಿಯಾಗಿ ಆಗಮಿಸಿದ್ದ ಎಸ್. ಬಿ.ಚವಾಣ್ ದನಿ ಎತ್ತಿ ಪ್ರಶ್ನಿಸತೊಡಗಿದಾಗ ಸಿಟ್ಟಾದ ಬಂಗಾರಪ್ಪ `ಶಾಲಾಬಾಲಕನನ್ನು ಪ್ರಶ್ನಿಸುವಂತೆ ನನ್ನನ್ನು ಪ್ರಶ್ನಿಸಬೇಡಿ~ ಎಂದು ತಿರುಗಿಬಿದ್ದಿದ್ದರು.
ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಹತಾಶರಾಗಿಬಿಟ್ಟ ಬಂಗಾರಪ್ಪ ಸಿಟ್ಟಾಗುತ್ತಲೇ ಹೋದರು. ಎರಡು ಬಾರಿ ಸ್ವತಂತ್ರವಾಗಿ ಪಕ್ಷ ಕಟ್ಟಿದರು, ಬಿಜೆಪಿ, ಸಮಾಜವಾದಿ ಪಕ್ಷ, ಜಾತ್ಯತೀತ ಜನತಾದಳ ಸೇರಿದರು. ಮರಳಿ ಕಾಂಗ್ರೆಸ್‌ಗೆ ಹಿಂದಿರುಗಿ ವಾಪಸು ಬಂದರು. ಆದರೆ ಅವರು ಬಯಸಿದ ರಾಜಕೀಯ ಅಧಿಕಾರ ಮರಳಿ ಅವರ ಕೈಗೆ ಬರಲೇ ಇಲ್ಲ. ಅವರು ಬೆಳೆಸಿದ ಹುಡುಗರೆಲ್ಲ ಶಾಸಕರಾಗಿ, ಸಚಿವರಾಗಿ ಕಣ್ಣೆದುರು ಮೆರೆಯುತ್ತಿದ್ದಾಗ ಚುನಾವಣೆಯಲ್ಲಿಯೂ ಸೋತುಹೋಗಿ, `ಸೋಲಿಲ್ಲದ ಸರದಾರ~ನೆಂಬ ಖ್ಯಾತಿಯನ್ನೂ ಕಳೆದುಕೊಂಡು ರಾಜಕೀಯವಾಗಿ ಅವರು ಒಂಟಿಯಾಗಬೇಕಾಯಿತು. ಇದಕ್ಕೆಲ್ಲ ಒಂದು ಕಾರಣ ಅವರ ಸಿಟ್ಟು ಎನ್ನುವವರಿದ್ದಾರೆ.
ಬಂಗಾರಪ್ಪನವರು ಯಾಕೆ ಸಿಟ್ಟಾಗುತ್ತಿದ್ದರು? ತನಗೆ ಅನ್ಯಾಯವಾದಾಗಲೆಲ್ಲ ಅವರು ಸಿಟ್ಟಾಗುತ್ತಿದ್ದರು ಎನ್ನುತ್ತಾರೆ ಅವರ ಅಭಿಮಾನಿಗಳು. ಮಹತ್ವಾಕಾಂಕ್ಷಿಯಾಗಿದ್ದ ಬಂಗಾರಪ್ಪ ಬಯಸಿದ್ದು ಸಿಗದೆ ಇದ್ದಾಗೆಲ್ಲ ಸಿಟ್ಟಾಗುತ್ತಿದ್ದರು ಎನ್ನುತ್ತಾರೆ ಅವರ ವಿರೋಧಿಗಳು. ಈ ಎರಡು ಅಭಿಪ್ರಾಯಗಳ ನಡುವೆ ಎಲ್ಲೋ ಒಂದು ಕಡೆ ಅವರ ಸಿಟ್ಟಿನ ಕಾರಣ ಇದೆ. ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನು ಬಂಗಾರಪ್ಪನವರೂ ಮಾಡಲಿಲ್ಲ.
ಬಂಗಾರಪ್ಪನವರು ತನ್ನ ರಾಜಕೀಯ ಜೀವನ ಪ್ರಾರಂಭಿಸಿದ್ದು ಪ್ರಜಾಸೋಷಲಿಸ್ಟ್ ಪಕ್ಷದ ಮೂಲಕ; ಕೊನೆಗೊಳಿಸಿದ್ದು ಜಾತ್ಯತೀತ ಜನತಾದಳದ ಮೂಲಕ. ಬಹುಕಾಲ ರಾಜಕೀಯ ಮಾಡಿದ್ದು ಕಾಂಗ್ರೆಸ್ ಪಕ್ಷದಲ್ಲಿ. ಆ ಪಕ್ಷದಲ್ಲಿ ಒಂದಷ್ಟು ದಿನ ಅಧಿಕಾರ ಅನುಭವಿಸಿದರೂ ಹೈಕಮಾಂಡ್ ಸಂಸ್ಕೃತಿಯ ಪಕ್ಷಕ್ಕೆ ಹೊಂದಿಕೊಳ್ಳಲು ಅತ್ಯುಗ್ರ ಸ್ವಾಭಿಮಾನಿಯಾಗಿದ್ದ ಬಂಗಾರಪ್ಪನವರಿಗೆ ಸಾಧ್ಯವಾಗಲೇ ಇಲ್ಲ. ಬಂಗಾರಪ್ಪನವರ ಗುಣ-ಸ್ವಭಾವ ಒಬ್ಬ ಪ್ರಾದೇಶಿಕ ಪಕ್ಷದ ನಾಯಕನಾಗಲು ಹೊಂದಿಕೆಯಾಗುವಂತಿತ್ತೇ ಹೊರತು ರಾಷ್ಟ್ರೀಯ ಪಕ್ಷ ಬಯಸುವ ಶಿಸ್ತಿನ ಸಿಪಾಯಿಯಾಗಲು ಹೊಂದಿಕೆಯಾಗುವಂತಿರಲಿಲ್ಲ. ಕಾಂಗ್ರೆಸ್ ಸಂಸ್ಕೃತಿ ಮತ್ತು ತನ್ನ ಸ್ವಭಾವವನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದರೆ ಅವರು ಆ ಪಕ್ಷದ ಸಹವಾಸಕ್ಕೆ ಹೋಗುತ್ತಿರಲಿಲ್ಲವೇನೋ? ಅದು ಅರಿವಾಗುವ ಹೊತ್ತಿಗೆ ಕಾಲ ಮೀರಿ ಹೋಗಿತ್ತು. ಈ ಗೊಂದಲದಲ್ಲಿಯೇ ನಾಲ್ಕು ದಶಕಗಳ ತನ್ನ ರಾಜಕೀಯ ಜೀವನದಲ್ಲಿ ಅವರು ಐದು ಬಾರಿ ಕಾಂಗ್ರೆಸ್ ಬಿಟ್ಟು ಹೋಗಿದ್ದರು, ಐದು ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬಂದಿದ್ದರು.
ಬಂಗಾರಪ್ಪನವರ ರಾಜಕೀಯ ಜೀವನದ ಮೊದಲ ಪ್ರಮಾದ ತನ್ನನ್ನು ಕರೆದುಕೊಂಡು ಬಂದು ಬೆಳೆಸಿದ್ದ ದೇವರಾಜ ಅರಸು ಅವರನ್ನು ತೊರೆದು ತನ್ನ ಸ್ವಭಾವಕ್ಕೆ ಒಪ್ಪದ ಕಾಂಗ್ರೆಸ್ ಜತೆ ಹೋಗಿದ್ದು. ಅರಸು ಜತೆಯಲ್ಲಿಯೇ ಉಳಿದುಕೊಂಡಿದ್ದರೆ ನಿಜವಾದ ಅರ್ಥದಲ್ಲಿ ಅವರ ರಾಜಕೀಯ ಉತ್ತರಾಧಿಕಾರಿಯಾಗುತ್ತಿದ್ದರು. ಅದರಿಂದ ನೆರೆರಾಜ್ಯಗಳಂತೆ ಕರ್ನಾಟಕಕ್ಕೂ ಒಂದು ಪ್ರಬಲ ಪ್ರಾದೇಶಿಕ ಪಕ್ಷವೂ ಸಿಕ್ಕಿಬಿಡುತ್ತಿತ್ತೋ ಏನೋ? ಅಂತಹ ಸಂದರ್ಭದಲ್ಲಿ ಕರ್ನಾಟಕದ ಇಂದಿನ ರಾಜಕೀಯ ಚಿತ್ರವೇ ಬೇರೆಯಾಗಿರುತ್ತಿತ್ತು. ರಾಜಕೀಯ ಅಧಿಕಾರ ಪಡೆಯುವ ಉದ್ದೇಶದಿಂದ ಅರಸು ಅವರನ್ನು ಕೈಬಿಟ್ಟರೂ ಕೊನೆಗೂ ಆ ಅಧಿಕಾರ ಪೂರ್ಣಪ್ರಮಾಣದಲ್ಲಿ ಅವರ ಕೈಗೆ ಬರಲೇ ಇಲ್ಲ. ಸುಮಾರು ನಲ್ವತ್ತು ವರ್ಷ ರಾಜಕೀಯದಲ್ಲಿದ್ದು `ಅಧಿಕಾರದಾಹಿ~, `ಪಕ್ಷಾಂತರಿ~ ಎಂಬ ಹೀಯಾಳಿಕೆಗೆ ತುತ್ತಾದರೂ ಅವರು ಅಧಿಕಾರ ಅನುಭವಿಸಿದ್ದು ಕೇವಲ ನಾಲ್ಕುವರೆ ವರ್ಷ.
ಅರಸು ಅವರನ್ನು ಬಿಟ್ಟು ಬಂದ ಒಂದು ಘಟನೆಯನ್ನು ಹೊರತುಪಡಿಸಿದರೆ ನಂತರದ ಅವರ ಯಾವ ಪಕ್ಷಾಂತರವೂ ರಾಜಕೀಯ ಲೆಕ್ಕಾಚಾರದಿಂದ ಮಾಡಿದ್ದಲ್ಲ. ಅವುಗಳೆಲ್ಲವೂ ಅನ್ಯಾಯದ ವಿರುದ್ಧ ಪ್ರತಿಭಟನೆಯ ಇಲ್ಲವೇ ಸೇಡು ತೀರಿಸಿಕೊಳ್ಳುವ ಹುಂಬತನದ ನಿರ್ಧಾರಗಳು. ಆದ್ದರಿಂದ ಆ ಪಕ್ಷಾಂತರಗಳು ಅವರಿಗೆ `ಅಧಿಕಾರದಾಹಿ~ ಎಂಬ ಹಣೆಪಟ್ಟಿಯನ್ನು ತಂದುಕೊಟ್ಟಿತೇ ವಿನಾ ಅಧಿಕಾರವನ್ನು ತಂದುಕೊಡಲಿಲ್ಲ. ತನ್ನನ್ನು ಬಳಸಿಕೊಂಡು ಕೈಬಿಟ್ಟ ಕಾಂಗ್ರೆಸ್ ವಿರುದ್ಧ ಸೇಡು ತೀರಿಸಲೆಂದೇ ಅವರು ಆ ಪಕ್ಷ ತೊರೆದು ಕ್ರಾಂತಿರಂಗ ಸೇರಿದರು, ಈ ಪಕ್ಷಾಂತರ ಕಾಂಗ್ರೆಸ್ ಸೋತು ಜನತಾರಂಗ ಅಧಿಕಾರಕ್ಕೆ ಬರಲು ಕಾರಣವಾಯಿತು, ಆದರೆ ಅವರು ಮುಖ್ಯಮಂತ್ರಿಯಾಗಲಿಲ್ಲ. 1985ರಲ್ಲಿ ಜನತಾರಂಗದ ಅನ್ಯಾಯ ಪ್ರತಿಭಟಿಸಿ ಕಾಂಗ್ರೆಸ್ ಸೇರಿ ಆ ಪಕ್ಷಕ್ಕೆ ತನ್ನ ಪಾಲಿನ ಬಲ ತುಂಬಿದರು, 1989ರಲ್ಲಿ ಆ ಪಕ್ಷವೇನೋ ಅಧಿಕಾರಕ್ಕೆ ಬಂತು ಆದರೆ ಆಗಲೂ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಕೂಡಿ ಬರಲಿಲ್ಲ.
1992ರಲ್ಲಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದು ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿದರು. ಅದು ಕಿತ್ತುಕೊಂಡ ಶೇಕಡಾ ಏಳೂವರೆಯಷ್ಟು ಮತಗಳಿಂದಾಗಿ ಕಾಂಗ್ರೆಸ್ ಸೋತುಹೋಯಿತು, ಆದರೆ ಅಧಿಕಾರಕ್ಕೆ ಬಂದದ್ದು ಜನತಾ ಪಕ್ಷ. 1999ರಲ್ಲಿ ಮತ್ತೆ ಕಾಂಗ್ರೆಸ್ ಸೇರಿದ ನಂತರದ ದಿನಗಳಲ್ಲಿ ಆ ಪಕ್ಷಕ್ಕೆ ಅಧಿಕಾರವೇನೋ ಬಂತು, ಆದರೆ ಬಂಗಾರಪ್ಪನವರು ಮೂಲೆಗುಂಪಾದರು. 2004ರಲ್ಲಿ ತನ್ನೊಳಗೆ ಸೆಳೆದುಕೊಂಡ ಬಿಜೆಪಿ ಅವರ ಬಲವನ್ನು ಬಳಸಿಕೊಂಡು ತನ್ನ ನೆಲೆಯನ್ನು ಇನ್ನಷ್ಟು ವಿಸ್ತರಿಸಿತು, ಬಂಗಾರಪ್ಪನವರಿಗೆ ಏನೂ ಸಿಗಲಿಲ್ಲ. ಒಂದೇ ವರ್ಷದ ಅವಧಿಯೊಳಗೆ ಬಿಜೆಪಿ ವಿರುದ್ಧ ಸಿಡಿದೆದ್ದು ಸಮಾಜವಾದಿ ಪಕ್ಷ ಸೇರಿ ಲೋಕಸಭೆಗೆ ಆಯ್ಕೆಯಾದರು. ಆ ಪಕ್ಷಕ್ಕೆ ಲೋಕಸಭೆಯಲ್ಲಿ ಒಬ್ಬ ಸದಸ್ಯನ ಹೆಚ್ಚುವರಿ ಬಲ ಸಿಕ್ಕಿದ್ದೇ ಲಾಭ. 2009ರಲ್ಲಿ ಕಾಂಗ್ರೆಸ್ ಸೇರಿ ಲೋಕಸಭೆಗೆ ಸ್ಪರ್ಧಿಸಿದರು. ಆಗಲೂ ಅವರಿಗೆ ಸಿಕ್ಕಿದ್ದು ತಮ್ಮ ಚುನಾವಣಾ ರಾಜಕೀಯದ ಮೊದಲ ಸೋಲು ಅಷ್ಟೇ. ಅದರ ನಂತರ ಜಾತ್ಯತೀತ ಜನತಾದಳ ಸೇರಿದರೂ ಅದರಿಂದ ಅವರಿಗೇನೂ ಲಾಭ ಆಗಲಿಲ್ಲ.
ಬಯಸಿದ್ದನೆಲ್ಲ ಮಾಡಿತೋರಿಸುವ ಸಾಮರ್ಥ್ಯವನ್ನು ಪಡೆದುಕೊಂಡು ಒಬ್ಬ ಯಶಸ್ವಿ ರಾಜಕೀಯ ನಾಯಕನಾಗಿ ಬೆಳೆಯುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಬಂಗಾರಪ್ಪನವರು ಪಕ್ಷಗಳ ಜತೆಗಿನ ಗುದ್ದಾಟ-ತಿಕ್ಕಾಟದಲ್ಲಿಯೇ ಕಳೆದುಹೋದರೇನೋ? ಅವರನ್ನು ಹಿಂದುಳಿದ ಜಾತಿಗಳ ನಾಯಕನಾಗಿ ಕೊಂಡಾಡಲಾಗುತ್ತಿದ್ದರೂ ಅವರು ಆಳದಲ್ಲಿ ಎಲ್ಲ ಜನವರ್ಗಗಳ ನಾಯಕನೆಂದೇ ಕರೆಸಿಕೊಳ್ಳಲು ಇಷ್ಟಪಡುತ್ತಿದ್ದರೆನ್ನುವುದು ಅವರ ಮಾತು ಮತ್ತು ಕೃತಿಗಳಿಂದ ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಗ್ರಾಮೀಣ ಕೃಪಾಂಕ ಇರಲಿ, ವಿಶ್ವ, ಆಶ್ರಯ, ಆರಾಧನಾ ಯೋಜನೆಗಳೇ ಇರಲಿ, ಅವುಗಳು ಸಾಮಾಜಿಕ ನ್ಯಾಯದ ಸಾಧನಕ್ಕಿಂತಲೂ ಹೆಚ್ಚಾಗಿ ಎಲ್ಲ ಜಾತಿ-ಜನಾಂಗಗಳ ಕಲ್ಯಾಣವನ್ನು ಗುರಿಯಾಗಿಟ್ಟುಕೊಂಡ ಕಲ್ಯಾಣ ಕಾರ‌್ಯಕ್ರಮಗಳು.
ಸಮಾಜವಾದವನ್ನಾಗಲಿ ಇಲ್ಲವೇ ದೇವರಾಜ ಅರಸು ಅವರ ಆಸಕ್ತಿಯ ಸಾಮಾಜಿಕ ನ್ಯಾಯವನ್ನಾಗಲಿ ಅವರು ಯಥಾವತ್ತಾಗಿ ಅನುಕರಿಸಲು ಹೋಗಲೇ ಇಲ್ಲ. ವಿಶಾಲವಾದ ಅರ್ಥದಲ್ಲಿ ಎಲ್ಲ ಜಾತಿಗಳಲ್ಲಿರುವ ಬಡವರ ಉದ್ಧಾರವಾಗಬೇಕೆಂದೇ ಅವರು ಹೇಳುತ್ತಿದ್ದರು. ಈ ಕಾರಣದಿಂದಾಗಿಯೇ ಜಾತಿ-ಧರ್ಮವನ್ನು ಮೀರಿ ಅವರಿಗೆ ಅನುಯಾಯಿಗಳಿದ್ದರು. ಸಮಾಜದ ಅಭಿವೃದ್ದಿಯ ಬಗ್ಗೆ ಅವರಲ್ಲಿದ್ದ ಸೈದ್ಧಾಂತಿಕ ಒತ್ತಾಸೆ ಇಲ್ಲದ ಸಡಿಲವಾದ ಆಲೋಚನೆಗಳ ಪರಿಕಲ್ಪನೆ ಇನ್ನೊಂದು ರೀತಿಯಲ್ಲಿ ಅವರ ಮಿತಿಯೂ ಆಗಿತ್ತು. ಇದರಿಂದಾಗಿ ವೈಯಕ್ತಿಕವಾಗಿ ಉದಾರಿಗಳು, ಬಡವರ ಬಗ್ಗೆ ಕಳಕಳಿಯುಳ್ಳವರು, ವಿಶಾಲ ಹೃದಯಿಗಳೂ ಆಗಿದ್ದ ಬಂಗಾರಪ್ಪನವರಿಗೆ ಸೈದ್ಧಾಂತಿಕ ಸ್ಪಷ್ಟತೆ ಹೊಂದಿದ್ದ ಇನ್ನೊಬ್ಬ ಗೋಪಾಲಗೌಡ ಇಲ್ಲವೇ ದೇವರಾಜ ಅರಸು ಆಗಲು ಸಾಧ್ಯವಾಗಲಿಲ್ಲ. ಬೆಂಬಲಿಗರಿಗೆ ನೆರವಾಗಬೇಕೆಂಬ ಒಂದೇ ಉದ್ದೇಶದಿಂದ ಅಧಿಕಾರ ಕೈಗೆ ಬಂದಾಗ ಅದನ್ನು ಸಡಿಲಬಿಟ್ಟರು. ಈ ಔದಾರ‌್ಯವನ್ನು ದುರುಪಯೋಗಪಡಿಸಿಕೊಂಡವರೇ ಹೆಚ್ಚು. ಭ್ರಷ್ಟಾಚಾರದ ಕಳಂಕ ಅವರಿಗೆ ಹತ್ತಿಕೊಳ್ಳಲು ಇದು ಮುಖ್ಯ ಕಾರಣ.
ಸಿಟ್ಟಾಗಬೇಡ ನಗುನಗುತ್ತಾ ಇರು, ಅನ್ಯಾಯವನ್ನು ಸಹಿಸಿಕೊಳ್ಳು, ಹೊಂದಾಣಿಕೆ ಮಾಡಿಕೋ, ಯಾರನ್ನೂ ನಂಬಬೇಡ, ತಂತ್ರಗಳನ್ನು ಹೆಣೆ, ಕುತಂತ್ರಗಳನ್ನು ಮಾಡು, ಕಾಳಜಿ ಅಂತಃಕರಣದಲ್ಲಿ ಇಲ್ಲದಿದ್ದರೂ ಮಾತಿನಲ್ಲಿ ಇರಲಿ ಎನ್ನುತ್ತಿದೆ ಇಂದಿನ ರಾಜಕೀಯ. ಈ ಹೊಸಬಗೆಯ ರಾಜಕೀಯಕ್ಕೆ ಹೊಂದಿಕೊಳ್ಳಲು ಕೊನೆಗೂ ಬಂಗಾರಪ್ಪನವರಿಗೆ ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ರಾಜಕೀಯ ಅವಕಾಶಗಳನ್ನು ಕಳೆದುಕೊಳ್ಳುತ್ತಾ ಹೋದರು. ನೇರಾನೇರ ಜಗಳಕ್ಕಿಳಿದರು, ಬಂಡೆದ್ದರು, ಹೋರಾಡಿದರು, ಕೆಲವೊಮ್ಮೆ ಎದ್ದರು ಇನ್ನೂ ಕೆಲವೊಮ್ಮೆ ಬಿದ್ದರು. ಅಧಿಕಾರವನ್ನು ಅನುಭವಿಸುವುದಕ್ಕಿಂತ ಹೆಚ್ಚಾಗಿ ಹೋರಾಟದಲ್ಲಿಯೇ ಬದುಕನ್ನು ಕಳೆದರು, ಅದನ್ನೇ ಹೆಚ್ಚು ಪ್ರೀತಿಸುತ್ತಾ ಹೋದರು. ಕೆಲವು ದೌರ್ಬಲ್ಯಗಳ ಹೊರತಾಗಿಯೂ ಅವರೊಳಗೆ ಒಬ್ಬ ಅಪ್ರತಿಮ ಹೋರಾಟಗಾರನಿದ್ದ.
ರಾಜಕೀಯವಾಗಿ ಅಡಿಗಡಿಗೆ ಹಿನ್ನಡೆಯಾದರೂ ಧೃತಿಗೆಟ್ಟು ಮೂಲೆ ಸೇರದೆ ಸೆಟೆದು ನಿಲ್ಲುವ ಚೈತನ್ಯವನ್ನು ಅವರು ಕೊನೆಯವರೆಗೂ ಉಳಿಸಿಕೊಳ್ಳಲು ಅವರೊಳಗಿನ ಈ ದಣಿವರಿಯದ ಹೋರಾಟಗಾರ ಕಾರಣ. ರಾಜಕೀಯದಲ್ಲಿ ಬೆಳೆಯಲು ಒಳದಾರಿ-ಅಡ್ಡದಾರಿಗಳನ್ನೇ ಹುಡುಕಾಡುತ್ತಿರುವ ಇಂದಿನ ರಾಜಕಾರಣದಲ್ಲಿ ಜಾತಿ ಬಲ ಇಲ್ಲದ ಬಡಗೇಣಿದಾರ ಕುಟುಂಬದ ಸಾಮಾನ್ಯ ಯುವಕ ಹೋರಾಟದ ರಾಜಕೀಯದ ಮೂಲಕವೇ ಜನಾನುರಾಗಿ ನಾಯಕನಾಗಿ ಬೆಳೆದದ್ದು ಒಂದು ದಂತಕತೆಯಂತಿದೆ.

No comments:

Post a Comment