ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮತ್ತೊಂದು ಬಾರಿ ಜೀವದಾನ ಪಡೆದಿದ್ದಾರೆ. ರಾಜ್ಯದ ವಿಧಾನಸಭೆಯನ್ನು ಅಮಾನತ್‌ನಲ್ಲಿರಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ರಾಜ್ಯಪಾಲ ಹಂಸರಾಜ ಭಾರದ್ವಾಜ ಅವರ ಶಿಫಾರಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. `ರಾಷ್ಟ್ರಪತಿ ಆಳ್ವಿಕೆ ಎನ್ನುವುದು ಸಂವಿಧಾನದತ್ತ ಅಧಿಕಾರ ಹೊಂದಿರುವ ವ್ಯಕ್ತಿಗಳು ಮಾತ್ರ ತೀರ್ಮಾನಿಸಬೇಕಾದ ವಿಚಾರ, ಹಾದಿಬೀದಿಯಲ್ಲಿ ಬಗೆಹರಿಸುವಂತಹದ್ದಲ್ಲ~ ಎಂದು ರಾಜ್ಯಪಾಲ ಎಚ್.ಆರ.ಭಾರದ್ವಾಜ ಅವರು ಕಳೆದ ವಾರ ಹಠಾತ್ ಜ್ಞಾನೋದಯವಾದವರಂತೆ ಹೇಳಿದ್ದರು. ಈ ಸಾಮಾನ್ಯ ಜ್ಞಾನದಂತೆ ಅವರು ನಡೆದುಕೊಂಡಿದ್ದರೆ ಮುಜುಗರಪಟ್ಟುಕೊಳ್ಳಬೇಕಾದ ಇಂದಿನ ಪರಿಸ್ಥಿತಿಯನ್ನು ಅವರು ಎದುರಿಸುತ್ತಿರಲಿಲ್ಲವೇನೋ? ಆದರೆ ಭಾರದ್ವಾಜರ ಕತೆ ` ತೋಳ ಬಂತು ತೋಳ~ ಎಂದು ಸುಳ್ಳುಸುಳ್ಳೇ ಕೂಗುತ್ತಾ ಊರಜನರನ್ನು ಮೋಸಮಾಡುತ್ತಿದ್ದ ಹೊಲಕಾಯುವ ಹುಡುಗನಂತಾಗಿದೆ. ನಿಜವಾಗಿ ತೋಳ ಬಂದಾಗ ಆ ಹುಡುಗನ ಕೂಗಿಗೆ ಯಾರೂ ಓಗೊಡಲೇ ಇಲ್ಲವಂತೆ. ಭಾರದ್ವಾಜರದ್ದೂ ಅದೇ ಸ್ಥಿತಿ.
`ಮುಖ್ಯಮಂತ್ರಿ ಬಗ್ಗೆ ಅವಿಶ್ವಾಸ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಪತ್ರ ನೀಡಿದ್ದ ಹದಿನಾರು ಭಿನ್ನಮತೀಯ ಶಾಸಕರು ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿದ್ದರೆ ಸರ್ಕಾರ ಪತನಗೊಳ್ಳುತ್ತಿತ್ತು. ಅವರನ್ನು ಕಲಾಪದಲ್ಲಿ ಭಾಗವಹಿಸದಂತೆ ಮಾಡಿರುವುದು ಅವರನ್ನು ಅನರ್ಹತೆಗೊಳಿಸಿದ್ದ ಸ್ಪೀಕರ್ ಆದೇಶ. ಈ ಆದೇಶ ಅಕ್ರಮ ಎಂದು ಸಾರಿ ಸುಪ್ರೀಂಕೋರ್ಟ್ ರದ್ದುಮಾಡಿದೆ. ಈ ಹಿನ್ನೆಲೆಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಸಾಬೀತುಪಡಿಸಿದ್ದ ಬಹುಮತ ಕೂಡಾ ಅಕ್ರಮ~ ಎನ್ನುವುದು ರಾಜ್ಯಪಾಲರ ಸರಳವಾದ ವಾದ. ಸುಪ್ರೀಂಕೋರ್ಟ್ ತೀರ್ಪನ್ನೇ ಆಧಾರವಾಗಿಟ್ಟುಕೊಂಡು ರಾಜ್ಯಪಾಲರು ದಾಳ ಉರುಳಿಸಿದ್ದರು. ಅನಿವಾರ‌್ಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಕೂಡಾ ತಮ್ಮ ನಿರ್ಧಾರವನ್ನು ಸಮರ್ಥಿಸಬಹುದು ಎನ್ನುವ ನಿರೀಕ್ಷೆ ಭಾರದ್ವಾಜರಲ್ಲಿ ಇತ್ತೋ ಏನೋ? ಕೇಂದ್ರ ಸರ್ಕಾರ ಅವರ ಶಿಫಾರಸನ್ನು ಒಪ್ಪಿಕೊಂಡಿದ್ದರೆ ಪ್ರಕರಣ ಖಂಡಿತ ನ್ಯಾಯಾಲಯದ ಮೆಟ್ಟಿಲೇರುತ್ತಿತ್ತು. ಆದರೆ ಕೇಂದ್ರ ಸರ್ಕಾರ ಅದಕ್ಕೆ ಅವಕಾಶವನ್ನೇ ನೀಡಿಲ್ಲ. ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರದ ಹಿನ್ನೆಲೆಯಲ್ಲಿಯೂ ಕಾನೂನಿನ ಆಧಾರದಲ್ಲಿ ಮಾಡಿರುವ ವಿಮರ್ಶೆಗಿಂತ ರಾಜಕೀಯ ಕೋನದಿಂದ ಮಾಡಿದ ಲೆಕ್ಕಾಚಾರವೇ ಮುಖ್ಯಪಾತ್ರ ವಹಿಸಿದಂತೆ ತೋರುತ್ತಿದೆ. ವಿವಾದಾತ್ಮಕವಾದ ಸಂವಿಧಾನದ 356ನೇ ಪರಿಚ್ಚೇದದ ಬಳಕೆಗೆ ಸಾರ್ವತ್ರಿಕವಾದ ಜನವಿರೋಧ ಮತ್ತು ಈ ವಿಷಯದಲ್ಲಿ ಬಹುಸೂಕ್ಷ್ಮವಾಗಿರುವ ಸುಪ್ರೀಂಕೋರ್ಟ್ ನಿಲುವಿಗೆ ಕೇಂದ್ರ ಸರ್ಕಾರ ಹೆದರಿದಂತೆ ಕಾಣುತ್ತಿದೆ.
ರಾಜ್ಯಪಾಲ ಎಚ್.ಆರ್.ಭಾರದ್ವಾಜ ಅವರಿಗೆ ಇದು ಎರಡನೇ ಮುಖಭಂಗ. ಇದಕ್ಕೆ ಬಹುಮಟ್ಟಿಗೆ ಅವರೂ ಜವಾಬ್ದಾರಿ. ಕರ್ನಾಟಕದ ರಾಜಭವನ ಪ್ರವೇಶ ಮಾಡಿದ ದಿನದಿಂದ ಇಲ್ಲಿಯ ವರೆಗೆ ರಾಜ್ಯಪಾಲರು ನೂರಾರು ಸಭೆ-ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲೆಲ್ಲಾ ಅವರು ಸಂದರ್ಭದ ಔಚಿತ್ಯವನ್ನು ಮರೆತು ರಾಜಕೀಯ ಮಾತನಾಡಿದ್ದೇ ಹೆಚ್ಚು. ಅವರನ್ನು ಕೆಣಕಲೆಂದೇ ಪತ್ರಕರ್ತರು ರಾಜ್ಯಸರ್ಕಾರದ ಬಗ್ಗೆ ಪ್ರಶ್ನಿಸುತ್ತಾರೆ. ತಕ್ಷಣ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ದ ಸಿಡಿಯುತ್ತಾ ಬೋನಿಗೆ ಬೀಳುತ್ತಾರೆ. ಇಷ್ಟೇ ಅಲ್ಲ, ಕಾಂಗ್ರೆಸ್-ಜೆಡಿ (ಎಸ್) ನಾಯಕರು ಭೇಟಿಯಾಗಲು ಬಂದರೆ ಕೈಹಿಡಿದು ರಾಜಭವನದೊಳಗೆ ಕರೆದೊಯ್ಯುವ ಭಾರದ್ವಾಜರು, ಬಿಜೆಪಿ ನಾಯಕರು ಹೊರಗಿನ ಬಾಗಿಲು ಕಾಯುವಂತೆ ಮಾಡುತ್ತಾರೆ, ಇಲ್ಲವೇ ಭೇಟಿಗೆ ಅನುಮತಿ ನಿರಾಕರಿಸುತ್ತಾರೆ. ಶಿಷ್ಟಾಚಾರವನ್ನು ಉಲ್ಲಂಘಿಸಿದ ಈ ನಡವಳಿಕೆಯಿಂದಾಗಿಯೇ ಸಂವಿಧಾನಬದ್ದವೆಂದು ಸಮರ್ಥಿಸಿಕೊಳ್ಳುತ್ತಿದ್ದ ಅವರ ಕೈಗೊಂಡ ಕ್ರಮವನ್ನು ಜನತೆ ಸಂಶಯದಿಂದ ನೋಡುವಂತಾಗಿದ್ದು. ಈ ಜನಾಪ್ರಾಯವೇ ಕೇಂದ್ರ ಸರ್ಕಾರದ ಕೈಗಳನ್ನೂ ಕಟ್ಟಿಹಾಕಿರುವುದು.
ಜನತೆಯಲ್ಲಿನ ಇಂತಹ ಸಂಶಯಕ್ಕೆ ಎಚ್.ಆರ್.ಭಾರದ್ವಾಜರ ನಡೆ-ನುಡಿಯೊಂದೇ ಕಾರಣ ಅಲ್ಲ, ಬೇರೆ ಐತಿಹಾಸಿಕವಾದ ಕಾರಣಗಳೂ ಇವೆ. ರಾಜ್ಯಪಾಲ ಎಂದಾಕ್ಷಣ ಜನರ ಕಣ್ಣಮುಂದೆ 1952ರಲ್ಲಿ ಕೇರಳ ವಿಧಾನಸಭೆಯಲ್ಲಿ ಅಲ್ಪಬಹುಮತಹೊಂದಿದ್ದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದ ಗದ್ದುಗೆಯಲ್ಲಿ ಕೂರಿಸಿದ್ದ ರಾಜ್ಯಪಾಲ ಶ್ರೀ ಪ್ರಕಾಶಂ ಅವರಿಂದ ಹಿಡಿದು ವೆಂಕಟಸುಬ್ಬಯ್ಯ, ನಾಂದೇಡ್ಲ ಭಾಸ್ಕರರಾವ್,ಜಗಮೋಹನ್ ಬೂಟಾಸಿಂಗ್, ಸೈಯ್ಯದ್ ರಜ್ವಿ ವರೆಗೆ ಹಲವು ರಾಜ್ಯಪಾಲರು ಹಾದುಹೋಗುತ್ತಾರೆ.ಬಹುಮತ ಹೊಂದಿದ್ದ ಸರ್ಕಾರಗಳನ್ನು ಉರುಳಿಸಲು ಕೇಂದ್ರ ಸರ್ಕಾರ ರಾಜಭವನವನ್ನು ದುರುಪಯೋಗ ಮಾಡಿಕೊಂಡ ಹಲವಾರು ಪ್ರಕರಣಗಳು ನೆನೆಪಾಗುತ್ತವೆ. ಇದನ್ನು ಪ್ರಾರಂಭಿಸಿದ್ದು ಕಾಂಗ್ರೆಸ್ ಪಕ್ಷವಾದರೂ ಅವಕಾಶ ಸಿಕ್ಕಿದಾಗ ಅದನ್ನು ಮುಂದುವರಿಸಿಕೊಂಡು ಹೋಗಲು ಉಳಿದ ಪಕ್ಷಗಳು ಕೂಡಾ ಹಿಂಜರಿಯಲಿಲ್ಲ. ಮೊದಲ ಬಾರಿಗೆ 1977ರಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಆಡಳಿತದ ಒಂಬತ್ತು ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿ ಆಳ್ವಿಕೆ ಹೇರಿತ್ತು. ಎನ್‌ಡಿಎ ಕಾಲದಲ್ಲಿ ಚುನಾವಣೆ ಮೂಲಕ ಬಿಹಾರದಲ್ಲಿ ಅಧಿಕಾರಕ್ಕೆ ಬರುವುದು ಸಾಧ್ಯವಾಗದೆ ಇದ್ದಾಗ ಸಮತಾ ಪಕ್ಷದ ನಾಯಕ ಜಾರ್ಜ್ ಫರ್ನಾಂಡಿಸ್ ಎರಡು ಬಾರಿ ಬಿಹಾರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಪ್ರಯತ್ನಿಸಿದ್ದರು. ಅದರ ನಂತರ ಮಮತಾ ಬ್ಯಾನರ್ಜಿ ಒತ್ತಡಕ್ಕೆ ಸಿಕ್ಕಿ ಪಶ್ಚಿಮಬಂಗಾಳದಲ್ಲಿಯೂ ಅವರು ಈ ಪ್ರಯತ್ನ ನಡೆಸಿದ್ದರು.
ಸಂವಿಧಾನ ರಚನಾ ಸಭೆಯಲ್ಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು `ಅತ್ಯಂತ ಅನಿವಾರ‌್ಯ ಸಂದರ್ಭದಲ್ಲಿ, ಕಟ್ಟಕಡೆಯ ಪರಿಹಾರವಾಗಿ ಮಾತ್ರ ಸಂವಿಧಾನದ 356ನೇ ಪರಿಚ್ಚೇದವನ್ನು ಕೇಂದ್ರ ಸರ್ಕಾರ ಬಳಸಿಕೊಳ್ಳಬಹುದು. ಆದರೆ ಭಾರತದ ಪ್ರಜಾಪ್ರಭುತ್ವ ಪ್ರಬುದ್ಧಗೊಂಡು ಬೆಳೆಯುತ್ತಾ ಹೋದಂತೆ ಇದನ್ನು ಬಳಸಬೇಕಾದ ಅವಕಾಶಗಳೂ ಕಡಿಮೆಯಾಗುತ್ತಾ ಹೋಗಿ ಮುಂದೊಂದು ದಿನ ಈ ಪರಿಚ್ಚೇದ `ಸತ್ತುಹೋಗಿರುವ ಅಕ್ಷರ~ಗಳಾಗಬಹುದು~ ಎಂದು ಆಶಿಸಿದ್ದರು. ಅಂಬೇಡ್ಕರ್ ಅವರ ಉಳಿದ ಹಲವಾರು ಆಶಯಗಳಂತೆ ಇದು ಕೂಡಾ ಈಡೇರಲೇ ಇಲ್ಲ.
ಎಸ್.ಆರ್.ಬೊಮ್ಮಾಯಿ ಮತ್ತು ಭಾರತ ಸರ್ಕಾರದ ನಡುವಿನ ವ್ಯಾಜ್ಯದಲ್ಲಿ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಪಿ.ಜೀವನರೆಡ್ಡಿ ಅವರು ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸುತ್ತಾ ` ಸಂವಿಧಾನ ಜಾರಿಯಾದ ದಿನದಿಂದ ಈ ವರೆಗೆ (ಮಾರ್ಚ್ 11,1994) ತೊಂಬತ್ತಕ್ಕೂ ಹೆಚ್ಚು ಬಾರಿ 356ನೇ ಪರಿಚ್ಚೇದದಡಿ ರಾಷ್ಟ್ರಪತಿಗಳು ಕ್ರಮಕೈಗೊಂಡಿದ್ದಾರೆ. `ಸತ್ತುಹೋಗಿರುವ ಅಕ್ಷರ~ಗಳಾಗಬಹುದೆಂದು ಅಂಬೇಡ್ಕರ್ ನಿರೀಕ್ಷಿಸಿದ್ದ ಈ ಪರಿಚ್ಚೇದ ಈಗ ಹಲವಾರು ರಾಜ್ಯಸರ್ಕಾರ ಮತ್ತು ವಿಧಾನಸಭೆಗಳ ಪಾಲಿಗೆ `ಸಾವಿನ ಅಕ್ಷರ~ಗಳಾಗಿವೆ~ ಎಂದು ಹೇಳಿದ್ದರು. ಇತಿಹಾಸವನ್ನು ಮುಂದಿಟ್ಟುಕೊಂಡೇ ಜನ ವರ್ತಮಾನವನ್ನು ನೋಡುವುದರಿಂದಾಗಿ ಬಹುಸಂಖ್ಯೆಯಲ್ಲಿ ಜನ `ರಾಜ್ಯಪಾಲರೆಂದರೆ ರಾಜ್ಯದ ವಿರೋಧಿಗಳು~ ಎಂದು ತೀರ್ಮಾನಿಸಿ ಬಿಟ್ಟಿದ್ದಾರೆ. ಇದರಿಂದಾಗಿ `ಅಭದ್ರಸ್ಥಿತಿಯಲ್ಲಿದ್ದ ಸರ್ಕಾರವನ್ನು ಭದ್ರಗೊಳಿಸಲು ರಾಜ್ಯಪಾಲರನ್ನು ಎದುರುಹಾಕಿಕೊಂಡು ಕೂಗಿಕೊಂಡರೆ ಸಾಕು, ಜನ ನೆರವಿಗೆ ಬರುತ್ತಾರೆ~ ಎನ್ನುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರದ್ವಾಜರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗಿತ್ತು. ಅವರು ಹಾದಿ ಕಂಡಲ್ಲೆಲ್ಲಾ ನುಗ್ಗಿಬಿಟ್ಟು ಎಡವಿಬಿದ್ದಿದ್ದಾರೆ.
ಈ ಬೆಳವಣಿಗೆಗಳಿಂದಾಗಿ ರಾಜ್ಯಪಾಲರ ಹುದ್ದೆಯ ಚಾರಿತ್ರ್ಯಹನನವಾಗುತ್ತಿರುವುದು ಮಾತ್ರವಲ್ಲ, ಪ್ರಜಾಪ್ರಭುತ್ವದ ರಕ್ಷಣೆಗಾಗಿಯೇ ರೂಪಿಸಲಾಗಿರುವ ಸಂವಿಧಾನದ 356ನೇ ಪರಿಚ್ಚೇದದ ವಿರುದ್ದವೇ ಜನ ತಿರುಗಿಬೀಳುವಂತಾಗಿದೆ. ಇದು ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ. ಕರ್ನಾಟಕದ ಉದಾಹರಣೆಯನ್ನೇ ನೋಡುವ. ಇತ್ತೀಚಿನ ಎಲ್ಲ ರಾಜಕೀಯ ಬಿಕ್ಕಟ್ಟುಗಳಿಗೆ ಮೂಲ ಕಾರಣ -ಬಿಜೆಪಿ ಪ್ರಾರಂಭಿಸಿದ್ದ ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣ. ಪಕ್ಷಾಂತರ ನಿಷೇಧ ಕಾಯಿದೆಯನ್ನು ದುಡ್ಡಿನ ಬಲದಿಂದ ನಿಷ್ಕ್ರೀಯಗೊಳಿಸಿದ ಪಾಪಕಾರ್ಯ ಅದು. ಅದಕ್ಕಾಗಿ ಬಳಕೆಯಾದ ದುಡ್ಡಿನ ಮೂಲ ರಾಜ್ಯದಲ್ಲಿ ಅನಿಯಂತ್ರಿತವಾಗಿ ನಡೆದ ಅಕ್ರಮಗಣಿಗಾರಿಕೆಯಲ್ಲಿದೆ. ಇವೆಲ್ಲವೂ ಒಂದು ವಿಷವರ್ತುಲ. ದುಡ್ಡಿನಿಂದ ಸಾಧ್ಯ ಇಲ್ಲ ಎಂದು ಅನಿಸಿದಾಗ ಸರ್ಕಾರ ಸಾಂವಿಧಾನಿಕ ಹುದ್ದೆಯಾದ ಸ್ಪೀಕರ್ ಸ್ಥಾನವನ್ನು ಕೈಗೊಂಬೆಯನ್ನಾಗಿ ಮಾಡಿ ಅವರಿಂದ ಮಾಡಬಾರದ ಕೆಲಸವನ್ನೆಲ್ಲ ಮಾಡಿಸಿತು. ಇದೇ ವೇಳೆ ಸರ್ಕಾರದ ಅಕ್ರಮಗಳ ವಿರುದ್ಧ ದನಿ ಎತ್ತಿದವರನ್ನು ಜಾತಿಯ ಭೂತ ತೋರಿಸಿ ಹೆದರಿಸಲಾಗುತ್ತಿದೆ. ಈ ಎಲ್ಲ ನಡವಳಿಕೆಗಳು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿರುವುದೇ ಆಗಿದೆ. ಮತದಾರರೇ ಭ್ರಷ್ಟರಾಗಿ ಕಣ್ಣುಕುರುಡು ಮಾಡಿಕೊಂಡಿರುವ ಸ್ಥಿತಿಯಲ್ಲಿ ಚುನಾವಣೆ ಕೂಡಾ ಪರಿಹಾರ ಅಲ್ಲ ಎನ್ನುವಂತಾಗಿದೆ. ಹಾಗಿದ್ದರೆ ಏನು ಪರಿಹಾರ?
ಸರ್ಕಾರವೊಂದು ಅಧಿಕಾರದಲ್ಲಿ ಮುಂದುವರಿಯಲು ಬಹುಮತವೊಂದೇ ಆಧಾರವೇ? ರಾಷ್ಟ್ರಪತಿ ಆಳ್ವಿಕೆಯ ಪ್ರಶ್ನೆ ಚರ್ಚೆಗೆ ಬಂದಾಗೆಲ್ಲ ಎಲ್ಲರೂ ಎಸ್.ಆರ್.ಬೊಮ್ಮಾಯಿ ಮತ್ತು ಕೇಂದ್ರ ಸರ್ಕಾರದ ನಡುವಿನ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸುತ್ತಾರೆ. ಈ ತೀರ್ಪು ರಾಷ್ಟ್ರಪತಿ ಆಳ್ವಿಕೆಯನ್ನು ಸಾರಸಗಟಾಗಿ ವಿರೋಧಿಸಿದೆ ಎನ್ನುವ ರೀತಿಯಲ್ಲಿ ವ್ಯಾಖ್ಯಾನ ಮಾಡಲಾಗುತ್ತಿದೆ. ಆದರೆ ವಾಸ್ತವ ಸ್ಥಿತಿ ಅದಲ್ಲ. `ಒಂದು ಸರ್ಕಾರ ಹೊಂದಿರುವ ಬಹುಮತ ವಿಧಾನಸಭೆಯಲ್ಲಿ ನಿರ್ಧಾರವಾಗಬೇಕೇ ಹೊರತು ರಾಜಭವನದಲ್ಲಿ ಅಲ್ಲ~ ಎಂದು ಒಂಬತ್ತು ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ಪೀಠ ಹೇಳಿದ್ದು ನಿಜ. ಆದರೆ ಒಂದು ಸರ್ಕಾರ ಅಧಿಕಾರದಲ್ಲಿ ಮುಂದುವರಿಯಲು ಸದನದೊಳಗಿನ ಬಹುಮತವೊಂದೇ ಆಧಾರ ಎಂದು ಅದು ಹೇಳಿಲ್ಲ. ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಕರ್ನಾಟಕವೂ ಸೇರಿದಂತೆ ಆರು ರಾಜ್ಯಗಳಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯ ವಿಚಾರಣೆ ನಡೆಸಿತ್ತೆನ್ನುವುದು ಬಹಳ ಮಂದಿಗೆ ತಿಳಿದಿಲ್ಲ. ಇವುಗಳಲ್ಲಿ ಕರ್ನಾಟಕ, ನಾಗಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ಹೇರಲಾಗಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಮಾತ್ರ ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಅದೇ ನ್ಯಾಯಪೀಠ ಬಾಬರಿ ಮಸೀದಿ ಧ್ವಂಸದ ನಂತರ ಮಧ್ಯಪ್ರದೇಶ, ರಾಜಸ್ತಾನ ಮತ್ತು ಹಿಮಾಚಲಪ್ರದೇಶದ ಸರ್ಕಾರಗಳನ್ನು ವಜಾಮಾಡಿದ್ದ ಕೇಂದ್ರಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿತ್ತು. ಸಂವಿಧಾನದ ಆಶಯವಾದ ಜಾತ್ಯತೀತ ನಿಲುವಿಗೆ ವಿರುದ್ದವಾಗಿ ನಡೆದುಕೊಳ್ಳುವ ಸರ್ಕಾರದ ವಿರುದ್ದ 356ನೇ ಪರಿಚ್ಚೇದದಡಿ ಕ್ರಮಕೈಗೊಳ್ಳಬಹುದೆಂದು ನ್ಯಾಯಪೀಠ ತನ್ನ ತೀರ್ಪನ್ನು ಸಮರ್ಥಿಸಿಕೊಂಡಿತ್ತು. ಭ್ರಷ್ಟಾಚಾರದ ಕಾರಣಕ್ಕಾಗಿಯೇ ತಮಿಳುನಾಡು (1976) ಮತ್ತು ಮಣಿಪುರ (1979) ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ್ದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದ ನಿದರ್ಶನಗಳಿವೆ.
ಸಂವಿಧಾನದ ಬಿಕ್ಕಟ್ಟುಗಳು ಒಂದೇ ಮಾದರಿಯದ್ದಾಗಿರುವುದಿಲ್ಲ, ಆದ್ದರಿಂದ ಅದಕ್ಕೆ ಏಕರೂಪದ ಪರಿಹಾರವೂ ಇರುವುದಿಲ್ಲ. ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದ ರಾಜಕೀಯ ಬಿಕ್ಕಟ್ಟು ಕೂಡಾ ಹೊಸಬಗೆಯದು. ಹಿಂದೆಂದೂ ಈ ಬಗೆಯ ಬಿಕ್ಕಟ್ಟು ಬೇರೆ ರಾಜ್ಯಗಳಲ್ಲಿ ಸೃಷ್ಟಿಯಾಗಿರಲಿಲ್ಲ. 2010ರ ಅಕ್ಟೋಬರ್ ಹನ್ನೆರಡರಿಂದ (ವಿಶ್ವಾಸಮತಯಾಚನೆಯ ದಿನ) 2011ರ ಮೇ ಹದಿಮೂರರ (ಸುಪ್ರೀಂಕೋರ್ಟ್ ತೀರ್ಪಿನ ದಿನ) ವರೆಗಿನ ಏಳು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸರ್ಕಾರದ ಸ್ಥಾನಮಾನ ಏನು ಎಂಬುದೇ ಇಲ್ಲಿ ಚರ್ಚೆಗೀಡಾಗಿದ್ದ ಪ್ರಶ್ನೆ. ಒಂದು ರೀತಿಯಲ್ಲಿ ಈ ಬಿಕ್ಕಟ್ಟು ಸೃಷ್ಟಿಗೆ ಸುಪ್ರೀಂಕೋರ್ಟ್ ತೀರ್ಪು ಕೂಡಾ ಕಾರಣವಾಗಿರುವುದರಿಂದ ಇದಕ್ಕೆ ಪರಿಹಾರ ಅಲ್ಲಿಂದಲೇ ಬಂದಿದ್ದರೆ ಭವಿಷ್ಯದಲ್ಲಿ ಕಾಣಿಸಿಕೊಳ್ಳುವ ಇಂತಹ ಬಿಕ್ಕಟ್ಟನ್ನು ಪರಿಹರಿಸಲು ಅದು ಮಾರ್ಗಸೂಚಿಯಾಗುತ್ತಿತ್ತು.ಇಲ್ಲಿಯ ವರೆಗೆ 356ನೇ ಪರಿಚ್ಚೇದದಿಂದ ಉಂಟಾಗಿರುವ ಬಿಕ್ಕಟ್ಟುಗಳಿಗೆ ಸುಪ್ರೀಂಕೋರ್ಟ್ ತೀರ್ಪುಗಳೇ ಅಂತಿಮವಾಗಿ ಪರಿಹಾರ ಸೂಚಿಸಿದ್ದಲ್ಲವೇ? ಆದರೆ ಯುಪಿಎ ಸರ್ಕಾರ ಅದಕ್ಕೂ ಅವಕಾಶ ನೀಡದೆ ಕೈತೊಳೆದುಕೊಂಡು ಬಿಟ್ಟಿದೆ.

No comments:
Post a Comment