Monday, May 16, 2011

ದಿನೇಶ್ ಅಮೀನ್ ಮಟ್ಟು: ಕನ್ನಡ ಸಂವೇದನೆಯನ್ನು ಸೂಕ್ಷ್ಮಗೊಳಿಸುವ ಅಪೂರ್ವ ಪತ್ರಕರ್ತ


ದಿನೇಶ್ ಅಮೀನ್ ಮಟ್ಟು
ಪ್ರಜಾವಾಣಿಯ ಸಹಾಯಕ ಸಂಪಾದಕ ದಿನೇಶ್ ಅಮಿನ್‌ಮಟ್ಟು ಅವರು ೨೦೧೧ನೇ ಸಾಲಿನ ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಡಾ.ಪುರುಷೋತ್ತಮ ಬಿಳಿಮಲೆ ಬರೆದಿರುವ ಲೇಖನ ಇಲ್ಲಿದೆ. ಪಿ.ಲಂಕೇಶರ ನಂತರ ಸಮಕಾಲೀನ ಜಗತ್ತನ್ನು ದಿನೇಶ್ ಅಮೀನ್ ಮಟ್ಟು ಅವರಷ್ಟು ಸೂಕ್ಷ್ಮಜ್ಞತೆಯಿಂದ ದಾಖಲಿಸಿದವರು ವಿರಳ. ಹೊಸ ತಲೆಮಾರಿನ ಪತ್ರಕರ್ತರಿಗೆ ದಿನೇಶ್ ಅವರ ಬರೆಹಗಳು ಪ್ರೇರಣೆಯನ್ನು ನೀಡಬಲ್ಲವು. ಆತ್ಮರತಿಯ, ಸ್ಟಾರ್‌ಗಿರಿಯ ಹಂಗಿಲ್ಲದಂತೆ ದೇಶದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ವಿದ್ಯಮಾನಗಳನ್ನು ಕಟ್ಟಿಕೊಡಬಲ್ಲ, ಆ ಮೂಲಕವೇ ಜನಪರವಾದ ಸಂವೇದನೆಗಳನ್ನು ಓದುಗರಲ್ಲಿ ಉದ್ದೀಪಸಬಲ್ಲ ದಿನೇಶ್ ಕನ್ನಡ ಪತ್ರಿಕಾರಂಗದ ಆಸ್ತಿ. ಬಿಳಿಮಲೆಯವರು ಬರೆದಿರುವ ಈ ಲೇಖನ ಖಾದ್ರಿ ಶಾಮಣ್ಣ ಪ್ರಶಸ್ತಿಗೆ ಆಯ್ಕೆಯಾಗಿರುವ ದಿನೇಶ್ ಅವರು ಅದಕ್ಕೆ ಎಷ್ಟು ಅರ್ಹರು ಎಂಬುದನ್ನು ಸಾಬೀತುಪಡಿಸುತ್ತದೆ. ಸಂಪಾದಕೀಯ ಬಳಗದ ಪರವಾಗಿ ದಿನೇಶ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಈ ಲೇಖನವನ್ನು ಒದಗಿಸಿದಕ್ಕಾಗಿ ಬಿಳಿಮಲೆ ಅವರಿಗೆ ಥ್ಯಾಂಕ್ಸ್.
-ಸಂಪಾದಕೀಯ

ಪತ್ರಕರ್ತರ ನಡವಳಿಕೆಗಳು ಸಂಶಯಾಸ್ಪದವಾಗುತ್ತಿರುವ ಈ ಕಾಲದಲ್ಲಿ ಆ ವೃತ್ತಿಯ ಘನತೆ ಗೌರವಗಳನ್ನು ಕಾಪಾಡಿಕೊಂಡು ಹೋಗುತ್ತಿರುವ ಬೆರಳೆಣಿಕೆಯ ಕೆಲವೇ ಕೆಲವು ಪತ್ರಕರ್ತರಲ್ಲಿ ಶ್ರೀ ದಿನೇಶ್ ಅಮೀನ್ ಮಟ್ಟು ಅವರು ಒಬ್ಬರು. ತಮ್ಮ ಬರೆಹಗಳ ಮೊದಲ ಹಂತದಲ್ಲಿ ಜನರ ಸಂವೇದನೆಗಳಿಗೆ ಸೂಕ್ಷ್ಮವಾಗಿ ಧ್ವನಿಯಾಗುವ ಅವರು, ಎರಡನೇ ಹಂತದಲ್ಲಿ ನಿಧಾನವಾಗಿ  ಸಾರ್ವಜನಿಕರ ಅಭಿಪ್ರಾಯಗಳನ್ನು ರೂಪಿಸುವ ಶಕ್ತಿಯಾಗಿ ಉದೀಯಮಾನರಾಗುತ್ತಾರೆ. ವಿಸ್ತಾರವಾದ ಓದು, ಜನಗಳ ನಡುವಣ ನಿರಂತರ ಒಡನಾಟ, ಕನ್ನಡ ಭಾಷೆಯ ಮೇಲಿನ ಅಪೂರ್ವ ಹಿಡಿತಗಳ ಜೊತೆಗೆ ಅತ್ಯಂತ ಜನಪರವಾದ ಚಿಂತನಾಕ್ರಮಗಳ ಮೂಲಕ ದಿನೇಶ್ ಅವರು ಕರ್ನಾಟಕದ ಜನರ ಸಂವೇದನೆಗಳನ್ನು ಮತ್ತೆ ಮತ್ತೆ ಸೂಕ್ಷ್ಮಗೊಳಿಸುತ್ತಾ ಬಂದಿದ್ದಾರೆ. ಸಹೃದಯ ಸಾಮಾನ್ಯ ಜನತೆಯ ಕಣ್ಣುಗಳ ಮೂಲಕ ಅವರು ನಾಡನ್ನು ನೋಡುವ ಮತ್ತು ವಿವರಿಸುವ ರೀತಿ ಅಸಾಮಾನ್ಯವಾದುದು.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟು ಎಂಬ ಪುಟ್ಟ ಊರಿನಿಂದ ಹೊಟ್ಟೆಪಾಡಿಗಾಗಿ, ಮುಂಬೈಗೆ ವಲಸೆ ಹೋದ ತುಳು ಮಾತಾಡುವ ಕುಟುಂಬವೊಂದರಲ್ಲಿ ಮುಂಬೈಯಲ್ಲಿ ಜನಿಸಿದ ದಿನೇಶ್ (ಜನನ: ೧೯೫೯ )  ಅವರು ಮುಂಬೈಯ ಸರಕಾರಿ ಶಾಲೆಯೊಂದರಲ್ಲಿ ನಾಲ್ಕನೇ ತರಗತಿವರೆಗೆ ಓದಿ ಆನಂತರದ ವಿದ್ಯಾಭ್ಯಾಸವನ್ನು ಕರಾವಳಿಯ ಕಿನ್ನಿಗೋಳಿ, ಹೆಜಮಾಡಿ ಮತ್ತು ಸುರತ್ಕಲ್ ಗಳಲ್ಲಿ ಮುಗಿಸಿದರು. ಇಲ್ಲಿ ಓದಿದ ವಿದ್ಯೆಗೂ ದಿನೇಶ್ ಮುಂದೆ ಹಿಡಿದ ಹಾದಿಗೂ ಅಂತಹ ಸಂಬಂಧ ಏನೂ ಇಲ್ಲ. ಆದರೆ, ಹಸಿರುಡುಗೆ ಹೊದ್ದ ಕರಾವಳಿಯ ತುಳು ಮಣ್ಣಿನ ಗುಣಗಳಾದ, ಸರಳ, ನೇರ, ಮತ್ತು ಸ್ಪಷ್ಟತೆಗಳು ದಿನೇಶ್ ಅವರ ದೊಡ್ಡ ಶಕ್ತಿಗಳಾಗಿ ಭವಿಷ್ಯದಲ್ಲಿ ನಿರಂತರವಾಗಿ ಅವರ ಬೆಂಬಲಕ್ಕೆ ನಿಂತವು.

ದಿನೇಶ್ ಅವರ ಚಿಂತನಾ ಕ್ರಮ ಮತ್ತು ಬರೆಹಗಳಿಗೆ ಉತ್ತಮ ಆರಂಭ ಸಿಕ್ಕಿದ್ದು ಮಂಗಳೂರಿನಲ್ಲಿ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟರು ಆರಂಭಿಸಿದ್ದ ಮುಂಗಾರು ಪತ್ರಿಕೆಯಲ್ಲಿ. ಜನ ಶಕ್ತಿ ಬೆಳೆತೆಗೆವ ಕನಸಿನೊಂದಿಗೆ ಆರಂಭವಾದ ಆ ಪತ್ರಿಕೆಯಲ್ಲಿ ಪಳಗಿದ ಅವರು ೧೯೮೯ ರಲ್ಲಿ ಪ್ರಜಾವಾಣಿ ಪತ್ರಿಕೆ ಸೇರಿದರು. ಮುಂದೆ ಆ ಪತ್ರಿಕೆಯ ಪ್ರಮುಖ ವರದಿಗಾರರಾಗಿ ಬೆಂಗಳೂರು, ಧಾರವಾಡ, ತುಮಕೂರು, ದೆಹಲಿಗಳಲ್ಲಿ ಕೆಲಸ ಮಾಡಿ, ಪ್ರಸ್ತುತ ಪ್ರಜಾವಾಣಿಯ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡ, ಹುಬ್ಬಳ್ಳಿ ಮತ್ತು ತುಮಕೂರುಗಳಲ್ಲಿ ಅವರು ಅಲ್ಲಿನ ಸ್ಥಳೀಯ ಸಮಸ್ಯೆ , ಜಿಲ್ಲಾ ಪಂಚಾಯತ್ ಆಡಳಿತ ಮತ್ತು ಸಾಹಿತ್ಯ ಕಾರ್ಯಕ್ರಮಗಳ ಸವಿವರ ವರದಿ ಮಾಡಿದರೆ, ದೆಹಲಿಯಿಂದ ಲೋಕಸಭೆ, ರಾಜ್ಯಸಭೆಗಳ ಕಲಾಪ ವರದಿ, ಕಾವೇರಿ-ಕೃಷ್ಣಾ ಜಲಮಂಡಳಿ ಸಭೆಗಳ ವರದಿ, ಸುಪ್ರಿಂ ಕೋರ್ಟಿನಲ್ಲಿ ಕರ್ನಾಟಕದ ಕುರಿತಾದ ಚರ್ಚೆಗಳ ವಿಸ್ತೃತ ವರದಿ ಮಾಡಿದರು. ಚುನಾವಣೆಗಳು ನಡೆದಾಗ, ಜನರ ಬಳಿಗೆ ತೆರಳಿ ನೇರ ವರದಿ ಮಾಡಿದರು. ಉತ್ತರ ಭಾರತಾದ್ಯಂತ ಅವರು ಪ್ರವಾಸ ಮಾಡಿದ್ದಾರೆ. ೨೦೦೨ ರಲ್ಲಿ ನಡೆದ ಗುಜರಾತ್ ಕೋಮುಗಲಭೆಯ ಪ್ರತ್ಯಕ್ಷ ವರದಿ ಮಾಡಿದಾಗ ಕನ್ನಡದ ಓದುಗರು ಬೆಚ್ಚಿ ಬಿದ್ದರು. ಅಧಿಕಾರ ಹಿಡಿದವರ ಅಪಕ್ವ ಗ್ರಹಿಕೆಗಳು, ಆತುರದ ತೀರ್ಮಾನಗಳು, ಹಾಗೂ ಮುನ್ನೋಟವಿಲ್ಲದ ತೀರ್ಮಾನಗಳಿಂದಾಗಿ ದೇಶದಲ್ಲಾಗುವ ಅನಾಹುತಗಳನ್ನು ದಿನೇಶ್ ಅವರು ಪಕ್ಷಾತೀತವಾಗಿ, ಪೂರ್ವಾಗ್ರಹವಿಲ್ಲದೆ ಮಂಡಿಸುತ್ತಾರೆ. ಅವರು ಭಾಷಾಂಧರೂ ಅಲ್ಲ, ದೇಶಾಂಧರೂ ಅಲ್ಲ, ಬದಲು ಭಾರತದ ಒಕ್ಕೂಟ ವ್ಯವಸ್ಥೆಯ ಆಂತರಿಕ ತರ್ಕ ಮತ್ತು ಸಂಬಂಧಗಳನ್ನು ಪತ್ರಕರ್ತನೊಬ್ಬನ ದಿಟ್ಟತನದಲ್ಲಿ ಗ್ರಹಿಸಿ, ವಿಶ್ಲೇಶಿಸಿ ಮಂಡಿಸುವ ಅಸಾಧಾರಣ ಚೈತನ್ಯದ ಲೇಖಕ. ಕನ್ನಡ ಭಾಷೆ ದಿನೇಶ್ ಅವರಲ್ಲಿ ಹೊಸ ಕಸುವು ಕಂಡುಕೊಂಡಿತು. ಇದು ಸರಿಯಾಗಿ ಅರ್ಥವಾಗಲು ನಾವು  ದಿನೇಶ್ ಬರೆದ ಕಣ್ಣೆದುರಿನ ತಳಮಳ (೧೯೯೯), ದೆಹಲಿ ನೋ೧ ( ೨೦೦೮) ಮತ್ತು ನಾರಾಯಣ ಗುರು ( ೨೦೦೯)  ಕೃತಿಗಳನ್ನು ಓದಬೇಕು.

ಇಂದು ದೇಶದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರೆಂಬ ಖ್ಯಾತಿಗೆ ಒಳಪಟ್ಟಿರುವ, ದಿನೇಶ್ ಅಮೀನ್ ಅವರು ತಮ್ಮ ವೃತ್ತಿಯ ಭಾಗವಾಗಿ ದೇಶ ವಿದೇಶಗಳನ್ನು ಸುತ್ತಿದ್ದಾರೆ. ಅದರಲ್ಲಿ ಮುಖ್ಯವಾದುವುಗಳೆಂದರೆ, ೨೦೦೫ ರಲ್ಲಿ ಮಾಡಿದ ಬ್ರೂನೈ ದ್ವೀಪ, ಫಿಲಿಪ್ಪೀನ್ಸ್ ಮತ್ತು ಮಲೇಷಿಯಾಗಳ ಪ್ರವಾಸ,  ೨೦೦೬ ರಲ್ಲಿ ಪ್ರಧಾನಿ ಮನಮೋಹನ ಸಿಂಗ್ ಅವರ ಜೊತೆ ಮಾಡಿದ ಕತಾರ್ ಮತ್ತು ಮಸ್ಕತ್ ದೇಶಗಳ ಪ್ರವಾಸ. ೨೦೦೮ರಲ್ಲಿ ಆಗಿನ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ರಚಿಸಿದ್ದ ಲೋಕಸಭಾ ಮಾಧ್ಯಮ ಸಲಹೆಗಾರ ಸಮಿತಿ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಡಾ.ಪುರುಷೋತ್ತಮ ಬಿಳಿಮಲೆ
ತಾವು ಕೆಲಸ ಮಾಡಿದ ಸ್ಥಳಗಳಲ್ಲಿ ಆಳವಾದ ನೆನಪುಗಳನ್ನು ದಿನೇಶ್ ಬಿಟ್ಟು ಹೋಗಿರುವುದಕ್ಕೆ ಕಾರಣ, ಅವರು ತಾವು ನೆಲೆಊರಿದ ಊರಿನ ಪ್ರಾದೇಶಿಕ ಗುಣಗಳನ್ನು ಮತ್ತು ಜನಗಳನ್ನು ಅರ್ಥಮಾಡಿಕೊಂಡ ಬಗೆ. ವರದಿ ಮಾಡುವುದಷ್ಟೇ ಅವರ ಕೆಲಸವಲ್ಲ, ಬದಲು ತಾವು ಕೆಲಸ ಮಾಡುತ್ತಿರುವ ಊರಿನ ಸಂವೇದನೆಗಳನ್ನು ಮತ್ತು ಅವುಗ ಸ್ವಭಾವಗಳನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ. ಪ್ರಾದೇಶಿಕ ಅನನ್ಯತೆಯನ್ನು ಮರೆಯದೆ ಬರೆಯುತ್ತಾರೆ. ಹೀಗಾಗಿ ಅವರು ಮಂಗಳೂರಿನ  ಬಗ್ಗೆಯೂ, ಹುಬ್ಬಳ್ಳಿಯ ಬಗೆಯೂ ಒಂದೇ ರೀತಿಯಲ್ಲಿ ಬರೆಯುತ್ತಾರೆಂದು ನಮಗೆ ಅನಿಸುವುದಿಲ್ಲ.  ಮಂಗಳೂರಿನ ಬಗ್ಗೆ ಬರೆಯವಾಗ ದಿನೇಶ್‌ಗೆ ಶಿವರಾಮ ಕಾರಂತರು ಆದರ್ಶವಾದರೆ, ಹುಬ್ಬಳ್ಳಿ ಬಗ್ಗೆ ಬರೆಯುವಾಗ ಬೇಂದ್ರೆ ಆದರ್ಶ. ಇದೇ ಅವರ ಲೇಖನಗಳ ಸೃಜನಶೀಲತೆಯ ಗುಟ್ಟು. ಇದು ಇನ್ನೂ ಖಚಿತವಾಗಬೇಕಾದರೆ ನಾವು ಅವರ ದೆಹಲಿ ನೋಟ( ೨೦೦೮) ಕೃತಿಯನ್ನು ಓದಬೇಕು. ದೆಹಲಿ ರಾಷ್ಟ್ರದ ರಾಜಧಾನಿ, ಅಲ್ಲಿಂದ ಕರ್ನಾಟಕದ ಬಗ್ಗೆ ಬರೆಯುವಾಗ ಆ ಬರೆಹಕ್ಕೆ ರಾಷ್ಟ್ರೀಯ ಚೌಕಟ್ಟು ಇರಲೇಬೇಕು. ದೆಹಲಿ ನೋಟದ ಯಾವ ಲೇಖನವೂ ಈ ಚೌಕಟ್ಟನ್ನು ಮೀರಲೇ ಇಲ್ಲವಾದ್ದರಿಂದ ಅವುಗಳಿಗೆ ವಿಶೇಷವಾದ ಶಕ್ತಿ ಪ್ರಾಪ್ತಿಸಿದೆ. ರಾಜ್ಯದ ಸಮಸ್ಯೆಗಳು ಕೇಂದ್ರದಲ್ಲಿ ಹೇಗೆ ಪ್ರತಿನಿಧೀಕರಿಸಲ್ಪಡುತ್ತವೆ ಎಂದು ಕರ್ನಾಟಕದ ಜನರಿಗೆ ಮೊದಲ ಬಾರಿಗೆ ಸವಿಸ್ತಾರವಾಗಿ ತಿಳಿದದ್ದು ದಿನೇಶ್ ಅಂಕಣಗಳನ್ನು ಓದಲಾರಂಭಿಸಿದ ಮೇಲೆಯೇ. ಕೇಂದ್ರದಲ್ಲಿ ರಾಜ್ಯದ ದುರ್ಬಲ ಪ್ರತಿನಿಧೀಕರಣವನ್ನು ಅವರು ಪ್ರಖರ ಭಾಷೆಯಲ್ಲಿ ಅಷ್ಟೇ ಸೃಜನಶೀಲವಾಗಿ  ಪ್ರತೀತಗೊಳಿಸಿದರು. ಎಷ್ಟೋ ಹೋರಾಟಗಾರರು ಮತ್ತು ಜನಪ್ರತಿನಿಧಿಗಳು ದಿನೇಶ ಲೇಖನದಿಂದ ಪ್ರೇರಣೆ ಪಡೆದು ತಮ್ಮ ಹೋರಾಟದ ಹಾದಿಗಳನ್ನು ಹರಿತಗೊಳಿಸಿಕೊಂಡಿದ್ದಾರೆ. ಅವರ ಈಚಿನ ಅಂಕಣ ಅನಾವರಣ ವು ಪ್ರಜಾಸತ್ತಾತ್ಮಕ ವ್ಯವಸ್ಥೆಯ ದೌರ್ಬಲ್ಯ ಮತ್ತು ತಾಖತ್ತುಗಳನ್ನು ನಿಷ್ಪಕ್ಷಪಾತವಾಗಿ ಜನರ ಮುಂದಿರಿಸುತ್ತಿದೆ.

ದಿಟ್ಟವಾಗಿ ಬರೆಯುವ ದಿನೇಶ್ ಅವರ ಮೇಲೆ ಎಂತಹ ಒತ್ತಡಗಳಿರಬಹುದೆಂದು ನಾನು ಈಗ ಊಹಿಸಬಲ್ಲೆ. ಈ ಒತ್ತಡಗಳಿಗೆ ಬರಹಗಾರನೊಬ್ಬ ಬಲಿಯಾಗುವುದೆಂದರೆ, ಸುಲಭವಾಗಿ ಆರ್ಥಿಕವಾಗಿ ಭ್ರಷ್ಠನಾಗಿಬಿಡುವುದು, ಇಲ್ಲವೇ ನೈತಿಕ ದಿವಾಳಿತನದಿಂದ ಬರೆಹದ ಮೊನಚನ್ನು ಕಳೆದುಕೊಳ್ಳುವುದು. ದಿನೇಶ್ ಇಂಥ ಅಪಾಯಗಳಿಂದ ಪಾರಗಿ, ಸುರಕ್ಷಿತವಾಗಿ ಇದುವರೆಗೆ ಉಳಿದಿದ್ದಾರೆ. ಈ ಕಾಲದಲ್ಲಿ ಇದೊಂದು ಪವಾಡ ಸದೃಶ ಘಟನೆ. ಅದಕ್ಕಾಗಿ ಅವರನ್ನು ಎಲ್ಲ ಕನ್ನಡಿಗರ ಪರವಾಗಿ ಅಭಿನಂದಿಸುತ್ತೇನೆ.

No comments:

Post a Comment