ಮುನೀರ್,ಸತ್ಯಾ,ಅದ್ದೆ,ಸೂಡಾ,ಮಂಜು, ಇಮಾಮ್...ನಿಮ್ಮ ಕಳಕಳಿ ನನಗೆ ಅರ್ಥವಾಗುತ್ತಿದೆ, ಆದರೆ ನೀವು ಆತಂಕಪಡಬೇಕಾಗಿಲ್ಲ.. ನಮ್ಮೆಲ್ಲರದ್ದು ಸಮಾನ ಮನಸ್ಕರ ಸ್ನೇಹ. ನಾವೆಲ್ಲ ‘ರಾಮರಾಜ್ಯ’ದ ಸುಖವನ್ನು ಹಂಚಿಕೊಂಡು ಸಂಭ್ರಮಪಡಲು ಸ್ನೇಹಿತರಾದವರಲ್ಲ, ನಮ್ಮ ಸಂಕಟ,ತಳಮಳ, ಕಳಕಳಿಗಳನ್ನು ಹಂಚಿಕೊಳ್ಳಲು ಒಟ್ಟಾದವರು. ಇಂತಹ ಸ್ನೇಹದಲ್ಲಿ ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಯಾಕೆಂದರೆ ಭಿನ್ನಾಭಿಪ್ರಾಯವಿಲ್ಲದ ಸ್ನೇಹ ಉಸಿರುಕಟ್ಟಿ ಸಾಯುತ್ತದೆ. ಭಿನ್ನಾಭಿಪ್ರಾಯ ಇಲ್ಲದೆ ಇದ್ದಲ್ಲಿ ಸ್ನೇಹ ಇರುವುದಿಲ್ಲ, ಗುಲಾಮಗಿರಿ ಇರುತ್ತದೆ. ಗೆಳೆತನದಲ್ಲಿ ಕೂಡಾ ಆಂತರಿಕವಾದ ಪ್ರಜಾಪ್ರಭುತ್ವ ಇರಬೇಕು ಎಂಬುದು ನನ್ನ ಆಶಯ.
ನಾನು ಇಷ್ಟಪಡುವ ನನಗಿಂತ ಕಿರಿಯರ ಕಿವಿ ಹಿಂಡುವ ಅಧಿಕಾರ ನನಗಿದೆ ಎಂದು ತಿಳಿದುಕೊಂಡಿದ್ದೇನೆ. ಯಾಕೆಂದರೆ ನಾನು ನನ್ನ ಹಿರಿಯರಿಂದ ಕಿವಿ ಹಿಂಡಿಸಿಕೊಂಡೇ ಬೆಳೆದವನು. ಆ ಕ್ಷಣದಲ್ಲಿ ಕಿವಿ ನೋವಾದರೂ ಅದು ನಂತರದ ದಿನಗಳಲ್ಲಿ ನಾನು ದಾರಿ ತಪ್ಪುವುದನ್ನು, ತಪ್ಪು ಮಾಡಿ ನೋವು ತಿನ್ನುವುದನ್ನು ತಪ್ಪಿಸಿದೆ.
ನನ್ನಲ್ಲೊಂದು ಕೊರಗು ಇದೆ. ವೃತ್ತಿಬದುಕಿನಲ್ಲಿ ನನಗೆ ಒಳ್ಳೆಯ ಸಂಪಾದಕರು ಸಿಕ್ಕಿದ್ದಾರೆ. ವಡ್ಡರ್ಸೆಯವರಿಂದ ವೃತ್ತಿಯ ಮೊದಲ ಪಾಠ ಕಲಿತವನು. ಕೆ.ಎನ್. ಹರಿಕುಮಾರ್ ಕಷ್ಟಕಾಲದಲ್ಲಿ ನನಗೆ ನೆರವಾದವರು. ಕೆ.ಎನ್.ಶಾಂತಕುಮಾರ್ ಬೆನ್ನಿಗೆ ನಿಂತು ನನ್ನನ್ನು ಪತ್ರಕರ್ತನಾಗಿ ಬೆಳೆಸಿದವರು. ಈ ಋಣದ ಭಾರ ನನ್ನ ಮೇಲಿದೆ. ಕನ್ನಡದಲ್ಲಿ ವೃತ್ತಿಪರವಾದ ಉತ್ಸಾಹಿ ಯುವಪತ್ರಕರ್ತರ ತಂಡವೊಂದನ್ನು ಕಟ್ಟಲು ನೆರವಾಗುವ ಮೂಲಕ ನನ್ನ ತಲೆಮೇಲಿರುವ ಋಣಭಾರವನ್ನು ಇಳಿಸಬೇಕೆಂಬ ಯೋಚನೆಯೊಂದು ದೆಹಲಿ ಬಿಟ್ಟು ಬಂದಾಗ ನನ್ನ ತಲೆಯಲ್ಲಿತ್ತು. ವಡ್ಡರ್ಸೆಯವರಂತೆ ನಾನು ಕೂಡಾ ಸ್ವಲ್ಪ ಹುಂಬ,ವ್ಯವಹಾರಿಕವಾಗಿ ಜಾಣನಲ್ಲ. ಆದ್ದರಿಂದ ಬಯಸಿದಂತೆ ನಡೆಯಲಿಲ್ಲ.
ನಮ್ಮಲ್ಲೊಂದು ಯಶಸ್ಸಿನ ಸೂತ್ರ ಇದೆ. ಅದು ನಿನಗಿಂತ ಹಿರಿಯ ಸ್ಥಾನದಲ್ಲಿರುವವರ ಭಟ್ಟಂಗಿತನ ಮಾಡು, ಕಿರಿಯರನ್ನು ತುಳಿದುಹಾಕು ಎಂದು ಹೇಳುತ್ತದೆ. ಯಾಕೆಂದರೆ ಹಿರಿಯರ ಭಟ್ಟಂಗಿತನಮಾಡಿದರೆ ಅವರು ಬಿಟ್ಟುಕೊಡುವ ಸ್ಥಾನ ನಿಮಗೆ ಸಿಗುತ್ತದೆ, ಕಿರಿಯರನ್ನು ತುಳಿದುಹಾಕುವುದರಿಂದ ಅವರು ನಿಮ್ಮನ್ನು ಮೀರಿ ಬೆಳೆದುಬಿಡುವ ಸಾಧ್ಯತೆಯನ್ನು ಹೊಸಕಿಹಾಕಿದಂತಾಗುತ್ತದೆ. ಇದನ್ನು ನಾನು ತಮಾಷೆಯಾಗಿ ‘ಪೊಲೀಸ್ ಫಾರ್ಮುಲಾ’ ಎನ್ನುತ್ತೇನೆ (ಇದೇನೆಂದು ಮುಂದೊಂದು ದಿನ ವಿವರಿಸುತ್ತೇನೆ). ನಾನು ಸದಾ ಇದಕ್ಕೆ ವಿರುದ್ಧವಾಗಿ ವರ್ತಿಸುತ್ತಾ ಬಂದವನು.
ನನಗಿಂತ ಹಿರಿಯರನ್ನು ಎದುರುಹಾಕಿಕೊಂಡು ಕಾದಾಡಿದ್ದೇನೆ, ಅದರಿಂದ ಕಷ್ಟ-ನಷ್ಟ ಅನುಭವಿಸಿದ್ದೇನೆ. ನನಗಿಂತ ಕಿರಿಯರು ತಪ್ಪಿದಾಗ ಸಣ್ಣಪುಟ್ಟ ಜಗಳಮಾಡಿಕೊಂಡು ತಪ್ಪಿದಾಗ ತಿದ್ದುವ ಮೂಲಕ ಅವರನ್ನು ಬೆಳೆಸಬೇಕೆಂದು ಪ್ರಾಮಾಣಿಕವಾಗಿ ಆಶಿಸಿದ್ದೇನೆ. ಇದರಿಂದಾಗಿಯೇ ನನಗಿಂತ ಕಿರಿಯರು ಅಪಾರ್ಥ ಮಾಡಿಕೊಂಡರೆ ನನಗೆ ನೋವಾಗುತ್ತದೆ.
No comments:
Post a Comment