Sunday, March 10, 2013

ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿ ಕಾಣದ ಕೈಗಳ ಕಾಟ

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರು ಬಂದು ಇಲ್ಲಿನ ಪಂಚತಾರಾ ಹೊಟೇಲಲ್ಲಿ ಸಭೆ ನಡೆಸಿ ಏನೆಲ್ಲ ಕಸರತ್ತು ನಡೆಸಿದರೂ ಪಕ್ಷದ ನೂತನ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಲು ಸಾಧ್ಯವಾಗದೆ ಹೋದುದರಲ್ಲಿ ಆಶ್ಚರ್ಯವೇನಿಲ್ಲ.
ಸಮಸ್ಯೆಯ ಮೂಲ ಆ ಸಭೆಯಲ್ಲಿದ್ದ ನಾಯಕರಲ್ಲ, ಅಲ್ಲಿ ಇಲ್ಲದೆ ಇದ್ದ ನಾಯಕರು. ಮೊದಲನೆಯದಾಗಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ಎರಡನೆಯದಾಗಿ ಸಂಘ ಪರಿವಾರದ ನಾಯಕರು, ಮೂರನೆಯದಾಗಿ ಅಲ್ಲಿ ಇದ್ದೂ ಇಲ್ಲದಂತಿದ್ದು ತನ್ನದೇ ಲೆಕ್ಕಾಚಾರದಲ್ಲಿ ಮುಳುಗಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್.
ನಾಯಕನ ಆಯ್ಕೆಯಲ್ಲಿ ಬಿಜೆಪಿ ಎದುರಿಸುತ್ತಿರುವ ಕಷ್ಟಗಳನ್ನು ಅರ್ಥಮಾಡಿಕೊಳ್ಳಬಹುದು. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ತಾನೇ ಬೆಳೆಸಿದ ನಾಯಕ ಹಠಾತ್ತನೆ ಪಕ್ಷ ಬಿಟ್ಟು ಹೋದಾಗ ನಿರ್ಮಾಣವಾಗಿರುವ ನಿರ್ವಾತವನ್ನು ತುಂಬುವುದು ಸುಲಭದ ಕೆಲಸ ಅಲ್ಲ.
ಬಿ.ಎಸ್.ಯಡಿಯೂರಪ್ಪ ಎಂಬ ನಾಯಕನ ವ್ಯಕ್ತಿತ್ವವೇ ಅಂತಹದ್ದು. ಪಕ್ಷ ತನ್ನ ನಿಯಂತ್ರಣಕ್ಕೆ ಬಂದ ನಂತರ ಎರಡನೆ ಸಾಲಿನ ಯಾವ ನಾಯಕರನ್ನೂ ಅವರು ಬೆಳೆಯಲು ಬಿಡಲಿಲ್ಲ. ಮುಂದೊಂದು ದಿನ ತನ್ನ ಹಾದಿಗೆ ಮುಳ್ಳಾಗಬಹುದೆಂಬ ದೂರಾಲೋಚನೆಯಿಂದ 2008ರ ಚುನಾವಣೆಯ ಗೆಲುವಿನ ನಂತರ ಜಗದೀಶ್ ಶೆಟ್ಟರ್ ಅವರನ್ನೇ ಸಂಪುಟ ಸೇರದಂತೆ ತಡೆದವರು ಬಿಎಸ್‌ವೈ.
ಪಕ್ಷದೊಳಗೆ ಇನ್ನೊಬ್ಬ ಲಿಂಗಾಯತ ನಾಯಕ ತನಗೆ ಸವಾಲಾಗಬಾರದು, ತಾನೇ ಜಾತಿಯ ಪ್ರಶ್ನಾತೀತ ನಾಯಕನಾಗಬೇಕೆಂಬ ಉದ್ದೇಶದಿಂದ ಲಿಂಗಾಯತ ಮಠಗಳಿಗೆ ತೆರಿಗೆಹಣವನ್ನು ಸುರಿದದ್ದು ಕೂಡಾ ಇದೇ ಕಾರಣಕ್ಕೆ. ಇದರಿಂದಾಗಿ ಬಿಜೆಪಿ ದಿಕ್ಕೆಟ್ಟ ಸ್ಥಿತಿಯಲ್ಲಿದೆ. ಬಿಎಸ್‌ವೈ ಪಕ್ಷದ ನಾಯಕರಾಗಿ ಉಳಿಯಲಿಲ್ಲ, ಅವರ ಗೈರುಹಾಜರಿಯಲ್ಲಿ ಅವರಿಗೆ ಸರಿಸಾಟಿಯಾಗಬಲ್ಲ ಬೇರೆ ನಾಯಕರೂ ಇಲ್ಲ.
ಎರಡನೆಯದಾಗಿ ಸಂಘ ಪರಿವಾರದ ನಾಯಕರು. ಬಿಜೆಪಿಗೆ ಉಳಿದ ರಾಜಕೀಯ ಪಕ್ಷಗಳಂತೆ ಇರುವುದು ಒಂದು ಹೈಕಮಾಂಡ್ ಅಲ್ಲ, ಇನ್ನೊಂದೂ ಇದೆ. ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಬಿಜೆಪಿಯ ನಾಯಕನ ಆಯ್ಕೆಗೂ ತಮಗೂ ಸಂಬಂಧ ಇಲ್ಲ ಎಂದು ಸಂಘದ ನಾಯಕರು ಎಷ್ಟೇ ಕೂಗಿಹೇಳಿದರೂ ನಂಬುವವರು ಯಾರು?
ಸಂಬಂಧ ಇಲ್ಲದೆ ಇದ್ದರೆ ಸಂಘದ ಪ್ರತಿನಿಧಿಯನ್ನು ಬಿಜೆಪಿಯ ಸಂಘಟನೆಯ ಕೆಲಸಕ್ಕೆ ಮಾತ್ರ ಎರವಲು ಸೇವೆ ರೂಪದಲ್ಲಿ ಯಾಕೆ ಕಳುಹಿಸಿಕೊಡಲಾಗುತ್ತಿದೆ? ಈ ಸಂಬಂಧದ ಸತ್ಯ ಇನ್ನಷ್ಟು ತಿಳಿದುಕೊಳ್ಳಬೇಕಾದರೆ ಯಡಿಯೂರಪ್ಪ ಮತ್ತು ಅವರ ಪಕ್ಷದ ವಕ್ತಾರ ವಿ.ಧನಂಜಯ ಕುಮಾರ್ ಕಳೆದೆರಡು ತಿಂಗಳುಗಳಿಂದ ನೀಡುತ್ತಿರುವ ಹೇಳಿಕೆಗಳಲ್ಲಿ ಯಾರ ಹೆಸರುಗಳು ಪ್ರಸ್ತಾಪವಾಗುತ್ತಿದೆ ಎಂಬುದನ್ನು ನೋಡಬಹುದು.
ಪಕ್ಷದ ಅಧ್ಯಕ್ಷಸ್ಥಾನದ ಆಯ್ಕೆ ಕಸರತ್ತು ಇಷ್ಟೊಂದು ಜಟಿಲಗೊಳ್ಳಲು ಸಂಘ ಪರಿವಾರ ಎಂಬ ಅಗೋಚರ ಶಕ್ತಿ ಕಾರಣ ಎನ್ನುವುದು ನಿರ್ವಿವಾದ. ಬಿಜೆಪಿ ಅಧಿಕಾರ ಗಳಿಸದೆ ವಿರೋಧಪಕ್ಷದಲ್ಲಿ ಕೂತರೂ ಸರಿ, ಯಾವುದೇ ಕಾರಣಕ್ಕೂ ಪಕ್ಷ ತನ್ನ ನಿಯಂತ್ರಣ ಮೀರಿ ಹೋಗಬಾರದೆನ್ನುವುದು ಸಂಘದ ನಾಯಕರ ಲೆಕ್ಕಾಚಾರ.
ಎನ್‌ಡಿಎ ಅಧಿಕಾರದಲ್ಲಿದ್ದಾಗ ಅಟಲಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಟ ಅಡ್ವಾಣಿಯವರನ್ನು ಯಾವ ರೀತಿ ಆರ್‌ಎಸ್‌ಎಸ್ ಕಾಡಿತ್ತು, ಈಗಿನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ಏನೆಲ್ಲ ಕಸರತ್ತು ನಡೆಸಿತ್ತು ಎನ್ನುವುದು ಜನರ ಕಣ್ಣಮುಂದಿದೆ. ರಾಷ್ಟ್ರಮಟ್ಟದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ  ನಿದ್ದೆಗೆಡಿಸುತ್ತಿರುವ ಈ ಸಂದರ್ಭದಲ್ಲಿ ಸಂಘ ಪರಿವಾರ ಯಾವ ರಾಜ್ಯದಲ್ಲಿಯೂ ಇನ್ನೊಬ್ಬ ಮೋದಿಯೋ, ಯಡಿಯೂರಪ್ಪನೋ ಬೆಳೆಯುವುದನ್ನು ಖಂಡಿತ ಇಷ್ಟಪಡಲಾರದು. ಯಡಿಯೂರಪ್ಪನವರಿಗೆ ಸಮನಾದ ಇನ್ನೊಬ್ಬ ನಾಯಕ ಪಕ್ಷದಲ್ಲಿ ಇಲ್ಲ ಎನ್ನುವುದು ಎಷ್ಟು ನಿಜವೋ, ಅಂತಹ ನಾಯಕ ಸಂಘ ಪರಿವಾರಕ್ಕೆ ಬೇಕಿಲ್ಲ ಎನ್ನುವುದೂ ಅಷ್ಟೇ ನಿಜ.
ಸಂಘ ಪರಿವಾರದ ಮನಸ್ಥಿತಿಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳಬೇಕಾದರೆ ಸ್ಪರ್ಧೆಯಲ್ಲಿರುವ ಇಬ್ಬರು ನಾಯಕರನ್ನು ಗಮನಿಸಬಹುದು. ಡಿ.ವಿ.ಸದಾನಂದ ಗೌಡರು ಕಳೆದ ಚುನಾವಣೆಯಲ್ಲಿ ಪಕ್ಷ ಗೆದ್ದಾಗ ಅಧ್ಯಕ್ಷರಾಗಿದ್ದವರು, ಅದರ ನಂತರ ಮುಖ್ಯಮಂತ್ರಿಯೂ ಆಗಿಬಿಟ್ಟರು. ಅಧಿಕಾರದಲ್ಲಿದ್ದದ್ದು ಅಲ್ಪಕಾಲವಾದರೂ ಹೆಸರು ಕೆಡಿಸಿಕೊಳ್ಳಲಿಲ್ಲ, ಬಗೆಬಗೆಯ ಒತ್ತಡಗಳ ನಡುವೆಯೂ ತೃಪ್ತಿಕರವಾದ ಆಡಳಿತ ಕೊಟ್ಟವರು.
ರಾಜಕೀಯ ಕಾರಣಗಳಿಗಾಗಿ ಇತ್ತೀಚೆಗೆ ಒಕ್ಕಲಿಗ ಜಾತಿ ಜತೆ ಗುರುತಿಸಿಕೊಂಡರೂ ಜಾತಿವಾದಿ ಎಂಬ ಹಣೆಪಟ್ಟಿ ಬೀಳದಂತೆ ಎಚ್ಚರಿಕೆ ವಹಿಸಿದವರು. ಪಕ್ಷದಲ್ಲಿರುವ ಒಕ್ಕಲಿಗರು ಕೂಡಾ ಗೌಡರನ್ನು ತಮ್ಮ ನಾಯಕನೆಂದು ಹೃತ್ಪೂರ್ವಕವಾಗಿ ಒಪ್ಪಿಕೊಳ್ಳದೆ ಇರುವುದರಿಂದ ಬೇರೆ ಜಾತಿ ನಾಯಕರಲ್ಲಿಯೂ ಅವರ ಬಗ್ಗೆ ಹೆಚ್ಚಿನ ವಿರೋಧ ಇಲ್ಲ. ಇಷ್ಟೆಲ್ಲ ಅನುಕೂಲಕರ ಅಂಶಗಳಿರುವುದೇ ಸದಾನಂದ ಗೌಡರಿಗೆ ಮುಳುವಾಗಿದೆ. ಅಧ್ಯಕ್ಷರಾಗಿಬಿಟ್ಟರೆ ಗೌಡರು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿ ಇರಲಾರರು ಎಂಬ ಅಸುರಕ್ಷತೆ ಸಂಘದ ನಾಯಕರಲ್ಲಿದ್ದ ಹಾಗಿದೆ.
ವೈಯಕ್ತಿಕ ಇಮೇಜ್ ಬಗ್ಗೆ ಸೂಕ್ಷ್ಮಮತಿಯಾಗಿರುವ ಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಂಘ ಪರಿವಾರ ಮುಖ್ಯವಾಗಿ ಕರಾವಳಿಯ `ಪ್ರಭಾವಳಿ' ನಾಯಕರು ಸಲ್ಲಿಸಿದ ಬೇಡಿಕೆಗಳ ಪಟ್ಟಿಯನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳದೆ ಇರುವುದೂ ಅವರಿಗೆ ವಿರುದ್ಧವಾಗಿದೆಯಂತೆ. ಹೀಗಲ್ಲದಿದ್ದರೆ ತಾನೇ ಬೆಳೆಸಿದ ನಾಯಕನ ತಲೆಮೇಲಿದ್ದ ಅಭಯಹಸ್ತವನ್ನು ಸಂಘಪರಿವಾರ ಇದ್ದಕ್ಕಿದ್ದಂತೆ ಹಿಂದಕ್ಕೆ ಪಡೆಯಲು ಬೇರೆ ಕಾರಣಗಳ್ಯಾವುದೂ ಕಾಣುತ್ತಿಲ್ಲ.
ಸಂಘ ಪರಿವಾರದ ಒಳಮನಸ್ಸನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದರೆ ತನ್ನ ಅಭ್ಯರ್ಥಿಯಾಗಿ ಅದು ಬಿಂಬಿಸುತ್ತಿರುವ ನಾಯಕನನ್ನು ನೋಡಬಹುದು. ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯವರನ್ನು ಸೋಲಿಸುವ ವರೆಗೆ ನಳಿನಿಕುಮಾರ್ ಕಟೀಲ್ ಮಂಗಳೂರು ಮಹಾನಗರಪಾಲಿಕೆಯಿಂದ ಆಚೆಗೆ ಯಾರಿಗಾದರೂ ಗೊತ್ತಿತ್ತು ಎಂದು ಅನಿಸುವುದಿಲ್ಲ. ಸಾಮಾನ್ಯವಾಗಿ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರಲ್ಲಿ ಇರುವ ವಾಕ್ಪಟುತ್ವ ಮತ್ತು ಸಂಘಟನಾ ಚಾತುರ್ಯ ತನ್ನಲ್ಲಿದೆ ಎಂದು ಅವರು ಈ ವರೆಗೆ ಸಾಬೀತುಪಡಿಸಿಲ್ಲ. ತುಳು-ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಅವರು ಮಾತನಾಡಿದ್ದನ್ನು ಯಾರೂ ಕೇಳಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿಯ ಕೋಟೆ ಎಂದು ಹೇಳಲಾಗುತ್ತಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದದ್ದು ಎಂಟರಲ್ಲಿ ನಾಲ್ಕು ಸ್ಥಾನಗಳನ್ನು ಮಾತ್ರ. ನಳಿನ್‌ಕುಮಾರ್ ಅವರಿಗೆ ಲೋಕಸಭಾ ಟಿಕೆಟ್ ನೀಡಲು ಅವರದ್ದೇ ಜಾತಿಯಾದ ಬಂಟರ ಮತಗಳನ್ನು ಸೆಳೆಯುವ ಒಳ ಉದ್ದೇಶವೂ ಇತ್ತು.ಆದರೆ ಹಾಲಾಡಿ ಶ್ರಿನಿವಾಸ ಶೆಟ್ಟಿಯವರಿಗೆ ಸಚಿವ ಪದವಿ ನಿರಾಕರಣೆ ಜಿಲ್ಲೆಯ ಬಂಟರು ಬಿಜೆಪಿ ವಿರುದ್ಧ ಬಂಡೇಳುವಂತೆ ಮಾಡಿದೆ.
ಇದರ ಜತೆಗೆ ಇನ್ನೊಬ್ಬ ಬಿಜೆಪಿ ನಾಯಕ ನಾಗರಾಜ ಶೆಟ್ಟಿ ಮತ್ತು ಹೊಟೇಲ್‌ಉದ್ಯಮಿ ಸದಾನಂದ ಶೆಟ್ಟಿಯವರು ಜೆಡಿ (ಎಸ್) ಸೇರಿದ್ದಾರೆ. ರಾಜ್ಯದ ಉಳಿದೆಡೆಗಳಲ್ಲಿ ಬಿಡಿ, ತವರು ಜಿಲ್ಲೆಯ ತನ್ನ ಜಾತಿಯ ಮತಗಳನ್ನೇ ಬಿಜೆಪಿಗೆ ತಂದುಕೊಡುವ ಸಾಮರ್ಥ್ಯ ನಳಿನ್‌ಕುಮಾರ್ ಕಟೀಲ್‌ಗೆ ಈಗ ಇದ್ದ ಹಾಗೆ ಇಲ್ಲ. ಹೀಗಿದ್ದರೂ ಸಂಘ ಪರಿವಾರ ನಳಿನ್‌ಕುಮಾರ್ ಬೆಂಬಲಕ್ಕೆ ನಿಲ್ಲಲು ಇರುವ ಏಕೈಕ ಕಾರಣ-'ಹೇಳಿದಂತೆ ಕೇಳಿಕೊಂಡು ಇರಬಲ್ಲ ನಮ್ಮ ಹುಡುಗ' ಎನ್ನುವುದಲ್ಲದೆ ಬೇರೇನಿದೆ?
ಬಿಜೆಪಿಯ ಮೂರನೆಯ ಸಮಸ್ಯೆಯ ಹೆಸರು ಅನಂತಕುಮಾರ್. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯೊಳಗೆ ನಡೆದ ತುಮುಲಗಳಲ್ಲೆಲ್ಲ ಅನಂತಕುಮಾರ್ ಕೈವಾಡದ ಆರೋಪಗಳು ಕೇಳಿಬಂದರೂ ಅದು ಬಹಿರಂಗವಾಗಿ ಚರ್ಚೆಯಾಗಿದ್ದು ಕಡಿಮೆ. ಯಡಿಯೂರಪ್ಪನವರು ಪಕ್ಷತ್ಯಜಿಸಿದ ನಂತರವಷ್ಟೇ ಅದು ಅಲ್ಲಲ್ಲಿ ಸ್ಪೋಟಗೊಂಡಿರುವುದು. ಇಂತಹ ಅನಂತಕುಮಾರ್ ತಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದು ಸ್ಪರ್ಧೆಯಲ್ಲಿರುವ ಐವರಲ್ಲಿ ಮೂವರಾದ ಪ್ರಹ್ಲಾದ ಜೋಷಿ, ಆರ್.ಅಶೋಕ್ ಮತ್ತು ಗೋವಿಂದ ಕಾರಜೋಳ ತಿಳಿದುಕೊಂಡಿದ್ದಾರೆ. ಈ ರೀತಿ ಬೆಂಬಲದ ಭರವಸೆ ನೀಡಲು ಅನಂತಕುಮಾರ್ ತಲೆಯಲ್ಲಿರುವ ಬೇರೆ ಲೆಕ್ಕಾಚಾರ ಕಾರಣ ಎಂದು ಹೇಳುವವರೂ ಇದ್ದಾರೆ.
ಜನಸಂಖ್ಯೆಯ ಶೇಕಡಾ ನಾಲ್ಕರಷ್ಟಿರುವ ಬ್ರಾಹ್ಮಣರು ಬಿಜೆಪಿಯ ನಂಬಿಕೆಯ ಮತಬ್ಯಾಂಕ್. ರಾಜ್ಯದಲ್ಲಿರುವ ಹನ್ನೊಂದು ಬ್ರಾಹ್ಮಣ ಶಾಸಕರಲ್ಲಿ ಒಂಬತ್ತು ಮಂದಿ ಇರುವುದು ಬಿಜೆಪಿಯಲ್ಲಿ. ಕನಿಷ್ಠ ಬಿಜೆಪಿಯೊಳಗೆ ಅನಂತಕುಮಾರ್ ಪ್ರಶ್ನಾತೀತವಾಗಿ ಈ ಸಮುದಾಯದ ನಾಯಕ. ಬ್ರಾಹ್ಮಣರಿಗೆ ಅವಕಾಶ ನೀಡಿಲ್ಲ ಎನ್ನುವ ಅಪವಾದ ತನ್ನ ಮೇಲೆ ಬರಬಾರದು ಎಂಬ ಕಾರಣಕ್ಕಾಗಿ ಜೋಷಿ ಅವರ ಹೆಸರನ್ನು ತೇಲಿಬಿಟ್ಟಿದ್ದಾರೆಯೇ ಹೊರತು ಈ ಬಗ್ಗೆ ಅನಂತಕುಮಾರ್ ಗಂಭೀರವಾಗಿಲ್ಲ ಎಂದು ಹೇಳಲಾಗುತ್ತಿದೆ.
ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ  ಎಂದು ಘೋಷಿಸಲಾಗಿರುವ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ ಜೋಷಿ ಒಂದೇ ಊರಿನವರಾಗಿರುವ ಕಾರಣ ಅವರ ನೇಮಕ ಸಾಧ್ಯ ಇಲ್ಲ ಎನ್ನುವುದು ಅನಂತಕುಮಾರ್ ಅವರಿಗೆ ಗೊತ್ತಿಲ್ಲವೇ? ಬ್ರಾಹ್ಮಣ ಸಮುದಾಯಕ್ಕೆ ಅವಕಾಶ ನೀಡಲೇ ಬೇಕಾದರೆ ಬಿಜೆಪಿಯಲ್ಲಿ ಈಗಲೂ ಸಾರ್ವಜನಿಕರ ಗೌರವಕ್ಕೆ ಪಾತ್ರರಾಗಿರುವ ಕೆಲವೇ ನಾಯಕರಲ್ಲಿ ಒಬ್ಬರಾದ ಸಚಿವ ಸುರೇಶ್ ಕುಮಾರ್ ಅವರ ಹೆಸರನ್ನು ಪರಿಗಣಿಸಬಹುದಿತ್ತು. ವಿಚಿತ್ರವೆಂದರೆ ಬೇರೆ ಪಕ್ಷಗಳ ನಾಯಕರು ಮತ್ತು ಮತದಾರರು ಕೂಡಾ ಒಪ್ಪಬಹುದಾದ ಸುರೇಶ್‌ಕುಮಾರ್  ಹೆಸರು ಸ್ಪರ್ಧೆಯಲ್ಲಿಯೇ ಇಲ್ಲ. ಈ ವೈಚಿತ್ರ್ಯದ ಹಿಂದೆ ತನ್ನ ಕೈವಾಡ ಇಲ್ಲ ಎಂದು ಅನಂತಕುಮಾರ್ ಹೇಳಬಹುದು.ಆದರೆ ಇಬ್ಬರ ನಡುವಿನ ಪೈಪೋಟಿಯನ್ನು ಬಲ್ಲ ಯಾರೂ ಈ ಸಮಜಾಯಿಷಿಯನ್ನು ನಂಬಲಾರರು.
ಸಚಿವ ಆರ್.ಅಶೋಕ್ ಅವರಿಗೆ ನೀಡಿರುವ ಬೆಂಬಲದಲ್ಲಿಯೂ ಅನಂತಕುಮಾರ್ ಅವರಿಗೆ ಬೇರೆ ಉದ್ದೇಶ ಇದ್ದಂತಿದೆ. ಯಡಿಯೂರಪ್ಪನವರ ವಿರೋಧದಿಂದಾಗಿ ರಾಜ್ಯದ ಪ್ರಮುಖ ಜಾತಿಯಾದ ಲಿಂಗಾಯತರು ತಮ್ಮ ಪರವಾಗಿಲ್ಲ ಎನ್ನುವುದು ಅನಂತಕುಮಾರ್ ಅವರಿಗೆ ಗೊತ್ತಿದೆ. ಆದುದರಿಂದ ತನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಒಕ್ಕಲಿಗರನ್ನಾದರೂ ಓಲೈಸುವುದು ಅವರಿಗೆ ಅನಿವಾರ್ಯವಾಗಿದೆ.
ಇದೇ ವೇಳೆ ತನ್ನ ಗುಂಪಿನಲ್ಲಿ ಇಲ್ಲದ ಸದಾನಂದ ಗೌಡರ ಅವಕಾಶವನ್ನು ಕೂಡಾ ತಪ್ಪಿಸಬೇಕಾಗಿದೆ. ಅಶೋಕ್ ಅವರನ್ನು ಬೆಂಬಲಿಸುವ ಮೂಲಕ ಅನಂತಕುಮಾರ್ ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಅಶೋಕ್ ಅವರು ಒಕ್ಕಲಿಗರ ನಾಯಕರಾಗುವುದು ಕಷ್ಟ. ಈಗಲೂ ದೇವೇಗೌಡರೇ ಒಕ್ಕಲಿಗರ ಪ್ರಶ್ನಾತೀತ ನಾಯಕ, ಎರಡನೇ ಸ್ಥಾನದಲ್ಲಿರುವುದು ಎಚ್.ಡಿ.ಕುಮಾರಸ್ವಾಮಿ.
ಕಳೆದ ಚುನಾವಣೆಯಲ್ಲಿ ಒಕ್ಕಲಿಗರ ಪ್ರಾಬಲ್ಯ ಇರುವ ಮಂಡ್ಯ,ಹಾಸನ,ರಾಮನಗರ ಜಿಲ್ಲೆಗಳಲ್ಲಿ ಬಿಜೆಪಿಯ ಒಬ್ಬ ಶಾಸಕ ಕೂಡಾ ಆರಿಸಿ ಬರಲಿಲ್ಲ ಎನ್ನುವುದು ಗಮನಾರ್ಹ. ಇದರ ಜತೆ ಅಶೋಕ್ ಅವರಿಗೆ ಸಂಘ ಪರಿವಾರದ ಬೆಂಬಲವೂ ಇಲ್ಲ. ಈ ಕಾರಣಗಳಿಂದಾಗಿ ಅಶೋಕ್ ಅವರಿಗೆ ಅವಕಾಶ ಕಡಿಮೆ ಎನ್ನುವುದು ಅನಂತಕುಮಾರ್ ಅವರಿಗೆ ತಿಳಿದಿದೆ. ಬೆಂಬಲಿಸಿದ ಹಾಗೂ ಆಗಬೇಕು, ಅವರು ಅಧ್ಯಕ್ಷರಾಗಲೂ ಬಾರದು ಇದು ಅನಂತಕುಮಾರ್ ಲೆಕ್ಕಾಚಾರ ಇರಬಹುದು.
ಹಾಗಿದ್ದರೆ ಅನಂತಕುಮಾರ್ ಯಾರ ಪರವಾಗಿದ್ದಾರೆ ಎನ್ನುವ ಯಕ್ಷ ಪ್ರಶ್ನೆಗೆ ಸಿಗುವ ಮೊದಲ ಉತ್ತರ ಗೋವಿಂದ ಕಾರಜೋಳ. ರಾಜ್ಯದ 33 ಪರಿಶಿಷ್ಟಜಾತಿಯ ಶಾಸಕರಲ್ಲಿ 22 ಶಾಸಕರು ಇರುವುದು ಬಿಜೆಪಿಯಲ್ಲಿ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಉಳಿದೆಲ್ಲ ಅಂಶಗಳ ಜತೆ ಅದು ನಡೆಸಿದ್ದ ಸೋಷಿಯಲ್ ಎಂಜನಿಯರಿಂಗ್ ಕೂಡಾ ಕಾರಣ. ಕಾಂಗ್ರೆಸ್ ಪಕ್ಷದಲ್ಲಿ ಪರಿಶಿಷ್ಟ ಜಾತಿಯ ನಾಯಕರು ಬಹುಸಂಖ್ಯೆಯಲ್ಲಿದ್ದರೂ ಅವರಲ್ಲಿ ಶೇಕಡಾ 90ರಷ್ಟು ಬಲಗೈ ಗುಂಪಿಗೆ ಸೇರಿದವರು. ಇದನ್ನು ಗಮನಿಸಿದ ಬಿಜೆಪಿ ಹೆಚ್ಚುಕಡಿಮೆ ಬಲಗೈ ಗುಂಪಿಗೆ ಸಮನಾದ ಸಂಖ್ಯೆಯಲ್ಲಿರುವ ಎಡಗೈ ಗುಂಪಿಗೆ ಗಾಳ ಹಾಕಿತು. ಮೊದಲು ರಮೇಶ್ ಜಿಗಜಿಣಗಿ,ನಂತರ ಕೆ.ಬಿ.ಶಾಣಪ್ಪ ಮತ್ತು ಗೋವಿಂದ ಕಾರಜೋಳ ಮೊದಲಾದ ಎಡಗೈ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿತು.
ಇದರ ಲಾಭವನ್ನೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಡೆದಿದೆ. ಈ ರೀತಿ ಪಕ್ಷಕ್ಕೆ ಬಂದಿರುವ ಎಡಗೈ ಗುಂಪಿನ ದಲಿತ ನಾಯಕರು ಅನಂತಕುಮಾರ್ ಅವರಿಗೆ ನಿಷ್ಠಾವಂತರಾಗಿರುವುದು ನಿಜ. ಈ ಹಿನ್ನೆಲೆಯಲ್ಲಿ ಕಾರಜೋಳ ಅವರು ಅಧ್ಯಕ್ಷರಾಗಿಬಿಟ್ಟರೆ ತಮಗೆ ಅನುಕೂಲ ಎಂದು ಅನಂತಕುಮಾರ್ ಸಹಜವಾಗಿ ತಿಳಿದುಕೊಂಡಿದ್ದಾರೆ. ಆದರೆ ಜನತಾ ಪರಿವಾರದಿಂದ ಬಂದ `ಹೊರಗಿನವರನ್ನು' ಸಂಘ ಪರಿವಾರ ಒಪ್ಪುವುದೇ?
ಅನಂತಕುಮಾರ್ ಅವರ ಈ ಎಲ್ಲ ಲೆಕ್ಕಾಚಾರದೊಳಗೆ ಇನ್ನೊಂದು ಒಳಲೆಕ್ಕ ಇದೆ ಎಂದು ಹೇಳಲಾಗುತ್ತಿದೆ. ಅವರು ಯಾರ ಪರವಾಗಿಯೂ ಇಲ್ಲ ಅಧ್ಯಕ್ಷರಾಗಲು ತಾನೇ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುವವರೂ ಇದ್ದಾರೆ. ಮಹತ್ವಾಕಾಂಕ್ಷಿಯಾದ ಅನಂತಕುಮಾರ್ ಅವರ ಶಕ್ತಿಯ ಮೂಲ ದೆಹಲಿಯಲ್ಲಿರುವ ಎಲ್.ಕೆ.ಅಡ್ವಾಣಿ. ಬಿಜೆಪಿಯ ಬಿಕ್ಕಟ್ಟುಗಳು ಪರಿಹಾರಕ್ಕಾಗಿ ದೆಹಲಿಗೆ ಹೋದಾಗಲೆಲ್ಲ ಆ ಪರಿಹಾರ ತಮ್ಮ ಕಡೆಯಾಗುವಂತೆ ಅನಂತಕುಮಾರ್ ನೋಡಿಕೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯ ಬಿಕ್ಕಟ್ಟು ದೆಹಲಿಗೆ ರವಾನೆಯಾಗಿರುವುದರಿಂದ ಅಲ್ಲಿ ಯಾರ ಕೈವಾಡ ನಡೆಯಬಹುದೆಂಬುದನ್ನು ಊಹಿಸುವುದು ಕಷ್ಟ ಅಲ್ಲ.

No comments:

Post a Comment