Monday, July 16, 2012

ಇದು ಬಿಜೆಪಿ ಬಿಕ್ಕಟ್ಟಿನ ಅಂತ್ಯ ಅಲ್ಲ, ಆರಂಭ July 09, 2012


ದಿನಾಂಕ: ಜೂನ್ 2, 2008, ಸ್ಥಳ: ದೆಹಲಿಯ  `26, ತುಘಲಕ್ ಕ್ರೆಸೆಂಟ್`ನಲ್ಲಿರುವ ಲೋಕಸಭಾ ಸದಸ್ಯ ಅನಂತಕುಮಾರ್ ಮನೆ. ಕರ್ನಾಟಕದಲ್ಲಿ ಬಿಜೆಪಿಯ ವಿಜಯೋತ್ಸವದ ಕಾವು ಇನ್ನೂ ಆರಿರಲಿಲ್ಲ, ಆಗಲೇ ಭಿನ್ನಮತದ ಕಿಡಿ ಹಾರಿತ್ತು.

`ಜಗದೀಶ್ ಶೆಟ್ಟರ್ ಅವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳುವುದಿಲ್ಲ` ಎಂದು ಬಿ.ಎಸ್.ಯಡಿಯೂರಪ್ಪ ಪಟ್ಟು ಹಿಡಿದಿದ್ದರು,  `ಸಚಿವನನ್ನಾಗಿ ಮಾಡಿದರೆ ಸರಿ, ವಿಧಾನಸಭಾ ಅಧ್ಯಕ್ಷ ಖಂಡಿತ ಆಗಲಾರೆ` ಎಂದು ಶೆಟ್ಟರ್ ಹಟ ಹಿಡಿದು ಕೂತಿದ್ದರು.

ಅನಂತ ಕುಮಾರ್‌ಮನೆಯಲ್ಲಿ  ಆ ದಿನ ಸಂಜೆ ಶೆಟ್ಟರ್ ಹೆಚ್ಚುಕಡಿಮೆ `ಗೃಹಬಂಧನ`ದಲ್ಲಿದ್ದರು. ಅಲ್ಲಿದ್ದ ಇತರರೆಂದರೆ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ, ಥಿಂಕ್‌ಟ್ಯಾಂಕ್ ಸದಸ್ಯ ವಾಮನಾಚಾರ್ ಮತ್ತು ಸಂಸದ ಪ್ರಹ್ಲಾದ ಜೋಷಿ. ಮಧ್ಯಾಹ್ನವೇ ಎಲ್.ಕೆ.ಅಡ್ವಾಣಿ ಮನೆಯಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿತ್ತು.

ಸಂಜೆಯ ಮಾತುಕತೆಯ ಫಲಿತಾಂಶ ತಿಳಿಯಲು ಗೇಟ್ ಬಳಿ ಕಾಯುತ್ತಿದ್ದ ಪತ್ರಕರ್ತರ ಒತ್ತಾಯಕ್ಕೆ ಮಣಿದು ಹೊರ ಬಂದ ಶೆಟ್ಟರ್ ಅವರ ಕಳಾಹೀನ ಮುಖವೇ ಒಳಗೆ ನಡೆಯುತ್ತಿದ್ದುದನ್ನು ಹೇಳಿತ್ತು. `ಎಲ್ಲವೂ ಪಕ್ಷದ ಹಿರಿಯ ನಾಯಕರ ಕೈಯಲ್ಲಿದೆ, ನನ್ನ ತೀರ್ಮಾನದಲ್ಲಿ ಬದಲಾವಣೆ ಇಲ್ಲ` ಎಂದು ಚುಟುಕಾಗಿ ಪ್ರತಿಕ್ರಿಯಿಸಿ  ಮರುಪ್ರಶ್ನೆಗೂ ಕಿವಿಗೊಡದೆ ಅವರು ಮನೆಯೊಳಗೆ ಹೋಗಿ ಸೇರಿಕೊಂಡಿದ್ದರು.

ಮಧ್ಯರಾತ್ರಿ ಹೊತ್ತಿಗೆ ನನಗೆ ಪೋನ್‌ಗೆ ಸಿಕ್ಕ ಶೆಟ್ಟರ್ `ಪಕ್ಷದ ವರಿಷ್ಠರ ಆದೇಶಕ್ಕೆ ತಲೆಬಾಗಿದ್ದೇನೆ` ಎಂದಷ್ಟೇ ಹೇಳಿ ಮಾತು ಮುಗಿಸಲು ಪ್ರಯತ್ನಿಸಿದ್ದರು. ಇನ್ನಷ್ಟು ಕಾಡಿದಾಗ ಕಳೆದೆರಡು ವರ್ಷಗಳಲ್ಲಿ ತಮಗೆ ಆಗಿರುವ ಅನ್ಯಾಯ-ಅವಮಾನಗಳ ವಿವರಗಳನ್ನೆಲ್ಲ ಬಿಚ್ಚಿಟ್ಟಿದ್ದರು. ಯಡಿಯೂರಪ್ಪನವರು ವಿಶೇಷ ಆಸಕ್ತಿ ವಹಿಸಿ ಜೆಡಿ (ಯು)ನಲ್ಲಿದ್ದ ಬಸವರಾಜ ಬೊಮ್ಮಾಯಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡದ್ದು ಮಾತ್ರವಲ್ಲ ಮೊದಲ ಕಂತಿನಲ್ಲಿಯೇ ಅವರನ್ನು ಸಚಿವರನ್ನಾಗಿ ಮಾಡಿದ್ದು ಶೆಟ್ಟರ್ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿತ್ತು. ಹುಬ್ಬಳ್ಳಿ-ಧಾರವಾಡದ ಭಾಗದಲ್ಲಿ  ಪ್ರತಿಸ್ಪರ್ಧಿಯೊಬ್ಬನನ್ನು ಹುಟ್ಟುಹಾಕಿ ತಮ್ಮ ವರ್ಚಸ್ಸನ್ನು ಕುಂದಿಸುವ ದುರುದ್ದೇಶದಿಂದಲೇ ಹೀಗೆ  ಮಾಡಲಾಗಿದೆ ಎಂದು ಅವರು ತಿಳಿದುಕೊಂಡಿದ್ದರು. `ಅವರೇ (ಯಡಿಯೂರಪ್ಪ) ಲೀಡರ್, ನಾನಲ್ಲ.

ಅದನ್ನು ನಾನು ಮಾತ್ರವಲ್ಲ ರಾಜ್ಯದ ಮತದಾರರು ಒಪ್ಪಿಕೊಂಡಿದ್ದಾರೆ.  ಹೀಗಿದ್ದರೂ ನನ್ನ ಮೇಲೆ ಯಾಕೆ ದ್ವೇಷ ಸಾಧಿಸುತ್ತಾರೋ? ಅವರಿಗೆ ಯಾಕೆ ಇಷ್ಟೊಂದು `ಇನ್‌ಸೆಕ್ಯುರಿಟಿ`ಯೋ ಗೊತ್ತಿಲ್ಲ` ಎಂದು ಅವರು ನೋವಿನಿಂದ ಹೇಳಿದ್ದರು. ಅದರ ನಂತರ ನಡೆದುದೆಲ್ಲವೂ ಈಗ ಇತಿಹಾಸ.

ಆ ನಾಟಕೀಯ ವಿದ್ಯಮಾನ ನಡೆದು ಸರಿಯಾಗಿ ನಾಲ್ಕುವರ್ಷಗಳು ಕಳೆದಿವೆ. ಇತಿಹಾಸದ ಚಕ್ರ ಈಗ  ಸುತ್ತು ಪೂರ್ಣಗೊಳಿಸಿದೆ. ಅದೇ ಅನಂತಕುಮಾರ್ ಮನೆಯ `ರಂಗಸ್ಥಳ` ಮತ್ತು ಹೆಚ್ಚುಕಡಿಮೆ ಅದೇ ಪಾತ್ರಧಾರಿಗಳು. ಆದರೆ ನಾಟಕದ ಕತೆ ಮಾತ್ರ ಸಂಪೂರ್ಣ ತದ್ವಿರುದ್ಧ. ಶೆಟ್ಟರ್ ಅವರನ್ನು ಸಂಪುಟಕ್ಕೂ ಸೇರಿಸಬಾರದೆಂದು ರಚ್ಚೆಹಿಡಿದು ಕೂತಿದ್ದ ಯಡಿಯೂರಪ್ಪನವರು  ಅವರನ್ನು ಮುಖ್ಯಮಂತ್ರಿ ಮಾಡಲೇ ಬೇಕೆಂಬ  ಜಿದ್ದಾಜಿದ್ದಿ ನಡೆಸಿ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ತನ್ನ `ದೇವಪಿತ` (ಗಾಡ್‌ಫಾದರ್)ನಂತೆ ಅವತರಿಸಿರುವ ಯಡಿಯೂರಪ್ಪನವರ ಬಗ್ಗೆ ಶೆಟ್ಟರ್ ಮನಸ್ಸಲ್ಲಿ ಈಗ ಏನಿದೆ ಎನ್ನುವುದು ಗೊತ್ತಿಲ್ಲ. ಈ ಇತಿಹಾಸದ ಬೆಳಕಿನಿಂದ ವರ್ತಮಾನದ ವಿದ್ಯಮಾನಗಳನ್ನು ನೋಡಿದರೆ ರಾಜ್ಯದ ಬಿಜೆಪಿ ಸರ್ಕಾರದ ಭವಿಷ್ಯ ನುಡಿಯುವುದು ಬಹಳ ಕಷ್ಟದ ಕೆಲಸ ಅಲ್ಲ.

ವರ್ತಮಾನಕ್ಕೆ ಬರೋಣ. ಡಿ.ವಿ.ಸದಾನಂದ ಗೌಡರನ್ನು ಬದಲಾಯಿಸಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡುವುದರಿಂದ  ಬಿಜೆಪಿಯೊಳಗಿನ ಬಿಕ್ಕಟ್ಟು ಶಾಶ್ವತ ಪರಿಹಾರ ಕಾಣಲಿದೆ ಎಂದು ಯಾರಾದರೂ ಹೇಳಿದರೆ ಅವರನ್ನು ಸುಳ್ಳುಗಾರರೆಂದೂ,  ಈ ಹೇಳಿಕೆಯನ್ನು ಯಾರಾದರೂ ನಂಬುತ್ತೇನೆ ಎಂದು ಹೇಳಿದರೆ ಅವರನ್ನು ಮೂರ್ಖರೆಂದೂ ಕರೆಯಬೇಕಾಗುತ್ತದೆ. ಸಮಸ್ಯೆಯನ್ನು ಬಗೆಹರಿಸಲು ಹೊರಡುವವರು ಮೊದಲು ಅದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಡಯಾಗ್ನಿಸಿಸ್ ತಪ್ಪು ಆಗಿಬಿಟ್ಟರೆ ಚಿಕಿತ್ಸೆಯೂ ತಪ್ಪಾಗಿ ರೋಗ ಉಲ್ಬಣಗೊಳ್ಳುತ್ತದೆಯೇ ಹೊರತು ಗುಣವಾಗುವುದಿಲ್ಲ. ಬಿಜೆಪಿಯಲ್ಲಿ ನಡೆಯುತ್ತಿರುವುದು ಈ `ರಾಂಗ್ ಡಯಾಗ್ನಿಸಿಸ್`. ಆ ಪಕ್ಷದ ಸಮಸ್ಯೆ ಸದಾನಂದ ಗೌಡ, ಈಶ್ವರಪ್ಪ, ಶೆಟ್ಟರ್..ಇವರ‌್ಯಾರೂ ಅಲ್ಲ. ಅದರ ಹೆಸರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಗಾಯಕ್ಕೆ ಔಷಧ ಹಚ್ಚದೆ ನೋವುನಿವಾರಕ ಗುಳಿಗೆ ನೀಡಿ ಮಲಗಿಸಿದ ಹಾಗೆ ಆಗುತ್ತದೆ, ಗಾಯ ಉಲ್ಬಣಗೊಳ್ಳುತ್ತಾ ಹೋಗುತ್ತದೆ. ಗೌಡರ ಪದಚ್ಯುತಿ, ಶೆಟ್ಟರ್ ನೇಮಕ, ಜತೆಗೊಬ್ಬ ಉಪಮುಖ್ಯಮಂತ್ರಿ, ಸಂಪುಟ ಪುನರ‌್ರಚನೆ ಮೊದಲಾದ ಯಾವುದೇ ಔಷಧಿಯಿಂದ ಬಿಜೆಪಿಯನ್ನು ಕಾಡುತ್ತಿರುವ ಭಿನ್ನಮತದ ರೋಗವನ್ನು ಕನಿಷ್ಠ ಮುಂದಿನ ಚುನಾವಣೆವರೆಗೂ ಗುಣಪಡಿಸಲು ಸಾಧ್ಯವಾಗಲಾರದು. ಇವೆಲ್ಲ ತೇಪೆ ಹಚ್ಚುವ ಕೆಲಸ ಅಷ್ಟೆ.

ನಾಲ್ಕು ವರ್ಷಗಳ ಹಿಂದೆ ಯಡಿಯೂರಪ್ಪನವರು ಒಂದು ರಾಜ್ಯ ಗೆದ್ದುಕೊಂಡು ಬಂದ ವೀರನಾಯಕನಾಗಿದ್ದರು. ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸುವ ಅವಕಾಶವನ್ನು ತಂದುಕೊಟ್ಟ ಅವರು ಪಕ್ಷದ ಪಾಲಿನ ಭಾಗ್ಯವಿಧಾತರಾಗಿದ್ದರು. ರಾಜಕೀಯ ಯಶಸ್ಸಿನ ಅಲೆಯ ಮೇಲೆ ತೇಲುತ್ತಿದ್ದ ಆ ದಿನಗಳಲ್ಲಿ `ನೂರು ಶೆಟ್ಟರ್, ಸಾವಿರ ಈಶ್ವರಪ್ಪ, ಲಕ್ಷ ಅನಂತಕುಮಾರ್‌ನಂತಹವರು ಎದುರುನಿಂತರೂ ನಿಭಾಯಿಸಿಕೊಂಡುಹೋಗಬಲ್ಲೆ` ಎಂಬ ಆತ್ಮವಿಶ್ವಾಸವನ್ನು ಅವರು ಪ್ರದರ್ಶಿಸಬೇಕಾಗಿತ್ತು. ಆದರೆ ಯಡಿಯೂರಪ್ಪ ಅವರಿಗೆ ಶೆಟ್ಟರ್ ಅವರಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಕಂಟಕವಾಗಬಲ್ಲ ಶತ್ರು ಕಾಣತೊಡಗಿದ್ದ. ವಿರೋಧ ಪಕ್ಷದ ನಾಯಕರಾಗಿ ಆತ್ಮವಿಶ್ವಾಸದಿಂದ ರಾಜಕೀಯ ಮಾಡುತ್ತಾ ಬಂದಿದ್ದ ಯಡಿಯೂರಪ್ಪನವರು ರಾಜ್ಯದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಹೊತ್ತಿಗೆ ಅಸುರಕ್ಷತೆಯ ಭಾವನೆಯಿಂದ ನರಳತೊಡಗಿದ್ದೇ ಅವರ, ಪಕ್ಷದ ಮತ್ತು ರಾಜ್ಯದ ಜನತೆಯ ಪಾಲಿನ ದುರಂತ.

ಅಂದು ಅವರನ್ನು ಕಾಡಿದ ಅಸುರಕ್ಷತೆಯ ಹಳವಂಡ ಮುಂದುವರಿಯುತ್ತಲೇ ಬಂದು ಈಗ ಸದಾನಂದ ಗೌಡರ ತಲೆದಂಡ ಕೇಳುತ್ತಿದೆ. ತಲೆಗೆ ಹತ್ತಿರುವ ಅದರ ಸವಾರಿ ಇಲ್ಲಿಗೆ ನಿಂತುಬಿಡುತ್ತದೆ ಎಂದು ಹೇಳುವ ಹಾಗಿಲ್ಲ. ಸದಾನಂದ ಗೌಡರು ರಹಸ್ಯ ಮತದಾನದ ಮೂಲಕ ಶಾಸಕಾಂಗ ಪಕ್ಷದ ನಾಯಕರಾದವರು, ಆ ದೃಷ್ಟಿಯಿಂದ ನೋಡಿದರೆ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಯಡಿಯೂರಪ್ಪನವರಲ್ಲ. ಆದರೆ ಅವರ ಬೆಂಬಲ ಇಲ್ಲದೆ ಇದ್ದರೆ ಗೌಡರು ಮುಖ್ಯಮಂತ್ರಿಯಾಗಲು ಸಾಧ್ಯವಾಗುತ್ತಿರಲಿಲ್ಲ ಎನ್ನುವುದೂ ನಿಜ.

ಯಡಿಯೂರಪ್ಪನವರಿಗೆ ಇಂತಹದ್ದೊಂದು ನಂಬಿಕೆ ಗೌಡರ ಮೇಲೆ ಹುಟ್ಟಲು ಕಾರಣ ಇಬ್ಬರ ನಡುವಿನ ದೀರ್ಘಕಾಲದ ಒಡನಾಟ. ಈ ರೀತಿ ತಮಗೆ ವಿಧೇಯರಾಗಿದ್ದ, ಒಕ್ಕಲಿಗರೆಂದು ಕರೆಸಿಕೊಂಡರೂ ಪೂರ್ಣರೂಪದ ಒಕ್ಕಲಿಗರಲ್ಲದ, ಸೌಮ್ಯ ಸ್ವಭಾವದ ಸದಾನಂದ ಗೌಡರನ್ನೇ ಯಡಿಯೂರಪ್ಪನವರು ನಂಬಲಿಲ್ಲ ಎಂದ ಮೇಲೆ, ತಮ್ಮಂತೆಯೇ ಜಾತಿ ಬಲ ಹೊಂದಿರುವ, ಯಾರಿಗೂ ಪೂರ್ಣವಾಗಿ ವಿಧೇಯರಾಗಿ ಉಳಿಯದೆ ಇರುವ,  ಹಳೆಯ ದ್ವೇಷದ ಸೇಡು ತೀರಿಸಿಕೊಳ್ಳಲು ಅವಕಾಶ ಇರುವಂತಹ ಜಗದೀಶ್ ಶೆಟ್ಟರ್ ಅವರನ್ನು ಸಹಿಸಿಕೊಳ್ಳಬಹುದೇ?  ಇದು ಬಿಜೆಪಿಯ ಭವಿಷ್ಯವನ್ನು ನಿರ್ಧರಿಸುವಂತಹ ಪ್ರಶ್ನೆ.
ಅಧಿಕಾರದ ಕುರ್ಚಿಯ ಮಹತ್ವವೇ ಅಂತಹದ್ದು. ಅದರ ಮೇಲೇರಿ ಕೂತವನ ತಲೆಯಲ್ಲಿ ಅಲ್ಲಿಯ ವರೆಗೆ ಇಲ್ಲದ ಆಸೆ-ಆಕಾಂಕ್ಷೆಗಳು ಹುಟ್ಟಿಕೊಳ್ಳುತ್ತವೆ, ಎಂತಹ ಪುಕ್ಕಲು
ಸ್ವಭಾವದವರ ಎದೆಯಲ್ಲಿಯೂ ಸ್ಥಾನದ ಬಲ ಒಂದಷ್ಟು ಧೈರ್ಯವನ್ನು ತುಂಬುತ್ತದೆ. ಇಂದಿರಾಗಾಂಧಿ ಹೇಳಿದರೆ ಪೊರಕೆ ಎತ್ತಿಕೊಂಡು ಗುಡಿಸಬಲ್ಲೆ ಎಂದು ಹೇಳಿದ್ದ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ಅವರೇ ರಾಜೀವ್‌ಗಾಂಧಿಯವರನ್ನು ಪದಚ್ಯುತಿಗೊಳಿಸಲು ಹೊರಟಿಲ್ಲವೇ ಹಾಗೆ. ಜಗದೀಶ್ ಶೆಟ್ಟರ್ ಅವರಿಗೆ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಸೇಡು ತೀರಿಸಿಕೊಂಡರೂ  ಸಮರ್ಥಿಸಿಕೊಳ್ಳಲು ಕಾರಣಗಳಿವೆ, ಅಂತಹ ಅವಕಾಶವೂ ಒದಗಿ ಬಂದಿದೆ. ಸಚಿವನಾಗುವ ಸಾಧ್ಯತೆ ಇದ್ದಾಗಲೂ ಯಡಿಯೂರಪ್ಪ ಬಿಡಲಿಲ್ಲ, ಮುಖ್ಯಮಂತ್ರಿಯಾಗುವ ಅವಕಾಶ ಬಂದಾಗಲೂ ತಪ್ಪಿಸಿದ್ದರು. ರಾಜಕೀಯವಾಗಿ ಮುಗಿಸಿಬಿಡಬೇಕೆಂದು ಸ್ಥಳೀಯವಾಗಿ ಪ್ರತಿಸ್ಪರ್ಧಿಗಳನ್ನು ಸೃಷ್ಟಿಸಿ ಬೆಳೆಸಿದರು.

ಇವೆಲ್ಲವನ್ನೂ ಶೆಟ್ಟರ್ ಹೊಟ್ಟೆಯಲ್ಲಿ ಹಾಕಿಕೊಂಡು ಯಡಿಯೂರಪ್ಪನವರ ಆಜ್ಞಾನುವರ್ತಿಯಾಗಿ ಸರ್ಕಾರವನ್ನು ನಡೆಸಿಕೊಂಡು ಹೋದರೆ ಪಕ್ಷಕ್ಕೆ ನೆಮ್ಮದಿ, ಅನಿಶ್ಚಿತ ರಾಜಕಾರಣದಿಂದ ಬೇಸತ್ತುಹೋದ ರಾಜ್ಯದ ಜನತೆಗೂ ಶಾಂತಿ. ಶೆಟ್ಟರ್ ಅಷ್ಟೊಂದು ವಿಶಾಲ ಹೃದಯಿಗಳಾಗದೆ ಮುಯ್ಯಿ ತೀರಿಸಿಕೊಳ್ಳಲು ಹೊರಟರೆ ಅದಕ್ಕೂ ಅವಕಾಶ ಇದೆ.
ಭ್ರಷ್ಟಾಚಾರದ ಆರೋಪಗಳಿಂದಾಗಿ ಜರ್ಝರಿತರಾಗಿರುವ ಈಗಿನ ಯಡಿಯೂರಪ್ಪ, ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿಯೇ ಕೂತು ದೆಹಲಿಯಲ್ಲಿದ್ದ ಶೆಟ್ಟರ್ ಅವರನ್ನು ಮಣಿಸಿದ ಯಡಿಯೂರಪ್ಪ ಅಲ್ಲ. ಕೈ ತಪ್ಪಿಹೋಗಿರುವ ಅಧಿಕಾರ, ಮೈ ತುಂಬಾ ಹರಡಿಕೊಂಡಿರುವ ಭ್ರಷ್ಟಾಚಾರದ ಆರೋಪಗಳು ಮತ್ತು ಹೆಚ್ಚುತ್ತಿರುವ ರಾಜಕೀಯ ಶತ್ರುಗಳಿಂದಾಗಿ ಅವರೊಬ್ಬ ದುರ್ಬಲ ನಾಯಕ. ಶತ್ರು ದುರ್ಬಲನಾಗಿದ್ದಾಗ ಕ್ಷಮಿಸುವವರು ಕಡಿಮೆ.

ಚುನಾವಣೆಗೆ ಹನ್ನೊಂದು ತಿಂಗಳು ಇರುವಾಗ ಮುಖ್ಯಮಂತ್ರಿಯಾದವರ ಕಣ್ಣು ಸಹಜವಾಗಿ ಚುನಾವಣೆಯ ನಂತರದ ಐದು ವರ್ಷಗಳ ಮೇಲಿರುತ್ತದೆ. ಒದಗಿಬಂದಿರುವ ಅವಕಾಶವನ್ನು ಕಳೆದುಕೊಳ್ಳುವಷ್ಟು ಶೆಟ್ಟರ್ ದಡ್ಡರಿರಲಾರರು. ರಾಜಕೀಯವಾಗಿ ಯಡಿಯೂರಪ್ಪನವರಿಗಿಂತಲೂ ಹೆಚ್ಚಿನ ಅನುಕೂಲತೆಗಳು ಶೆಟ್ಟರ್ ಅವರಿಗಿದೆ. ಅವರು ಬಿಜೆಪಿಯ ಶಕ್ತಿಕೇಂದ್ರವಾದ ಉತ್ತರ ಕರ್ನಾಟಕದಿಂದ ಬಂದವರು, ಲಿಂಗಾಯತರಲ್ಲಿ ಹೆಚ್ಚು ಶ್ರಿಮಂತರಾಗಿರುವ ಬಣಜಿಗ ಪಂಗಡಕ್ಕೆ ಸೇರಿದವರು, ಕಾನೂನು ಕಲಿತು ಒಂದಷ್ಟು ವರ್ಷ ವಕೀಲಿ ವೃತ್ತಿ ಮಾಡಿದವರು, ಯಡಿಯೂರಪ್ಪನವರಿಗೆ ಹೋಲಿಸಿದರೆ ಇನ್ನೂ ಯುವಕರು, ಇಷ್ಟು ಮಾತ್ರವಲ್ಲ ಸಂಘಪರಿವಾರದ ಜತೆ ಪ್ರಾರಂಭದಿಂದಲೂ ಗುರುತಿಸಿಕೊಂಡು ಬಂದ ಕುಟುಂಬದ ಸದಸ್ಯರಾಗಿರುವ ಕಾರಣ ಅವರ ಪಕ್ಷನಿಷ್ಠೆ ಪ್ರಶ್ನಾತೀತವಾದುದು. ಈ ಯಾವ ಅನುಕೂಲತೆಗಳೂ ಯಡಿಯೂರಪ್ಪನವರಿಗೆ ಇರಲಿಲ್ಲ. 

ಬಿ.ಎಸ್.ಯಡಿಯೂರಪ್ಪನವರ ದೊಡ್ಡ ರಾಜಕೀಯ ಬಲ-ಜಾತಿ. ಮುಖ್ಯಮಂತ್ರಿಗಳಾದ ನಂತರ ತಮ್ಮ ಸ್ಥಾನಕ್ಕೆ ಅಪಾಯ ಎದುರಾದಾಗೆಲ್ಲ ಅವರು ಲಿಂಗಾಯತ ಮಠಗಳ ಮೂಲಕ ಬಳಸಿಕೊಂಡಿದ್ದು ಜಾತಿಗಳನ್ನು. ಜಾತಿ ಎನ್ನುವುದು ಬೆಂಕಿ ಇದ್ದ ಹಾಗೆ, ಅದರ ಜತೆಗೆ ಆಟವಾಡಲು ಗೊತ್ತಿರಬೇಕು ಇಲ್ಲದೆ ಇದ್ದರೆ ಅದೇ ಬೆಂಕಿ ಸುಟ್ಟು ಹಾಕುತ್ತದೆ. ಬಿಹಾರದಲ್ಲಿ ಲಾಲುಪ್ರಸಾದ್ ಇದೇ ಜಾತಿ ಕಾರ್ಡ್ ಬಳಸಿ ಹದಿನಾರು ವರ್ಷಗಳ ಕಾಲ ಆ ರಾಜ್ಯವನ್ನು ಆಳಿದರು. ನಿತೀಶ್‌ಕುಮಾರ್ ಬಂದು ಅದೇ ಜಾತಿಕಾರ್ಡಿನ ಮಗ್ಗುಲು ಬದಲಿಸಿ ಆಡಿದ ಆಟಕ್ಕೆ ಲಾಲು ಮಣ್ಣುಮುಕ್ಕಿದರು. ಜಗದೀಶ್ ಶೆಟ್ಟರ್ ಅವರ ಮುಂದೆ ಯಡಿಯೂರಪ್ಪನವರು ಆಡುತ್ತಾ ಬಂದ ಜಾತಿಯ ಆಟದ ಮಾದರಿ ಇದೆ. ಅದನ್ನೇ ಇಟ್ಟುಕೊಂಡು ಆಡುವುದು ಅವರಿಗೂ ಕಷ್ಟವೇನಲ್ಲ. ಯಡಿಯೂರಪ್ಪನವರಷ್ಟು ಜಾತಿ-ಮಠಗಳ ಮೋಹಿಯಲ್ಲದೆ ಇದ್ದರೂ ಶೆಟ್ಟರ್ ನಾಳೆಯಿಂದ ರಾಜ್ಯದ ಪ್ರಮುಖ ಮಠಗಳಿಗೆ ಹೋಗಿ ಸ್ವಾಮೀಜಿಗಳ ಕಾಲಿಗೆ ಅಡ್ಡಬಿದ್ದ ಕೂಡಲೇ ಯಡಿಯೂರಪ್ಪನವರ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುವುದು ಖಂಡಿತ. ಕರೆದಾಗಲೆಲ್ಲ ತಮ್ಮ ಮನೆಗೆ ಉಪಾಹಾರ-ಊಟಕ್ಕೆ ಬರದೆ ಹೋದರೆ, ತಮ್ಮ ಬೆಂಬಲಿಗ ಸಚಿವರು-ಶಾಸಕರ ಕಡತಗಳಿಗೆ ಕಣ್ಣುಮುಚ್ಚಿ ಸಹಿಹಾಕದೆ ಇದ್ದರೆ, ಪ್ರತಿಬಾರಿ ನನ್ನ ನಾಯಕ ಯಡಿಯೂರಪ್ಪನವರು ಎಂದು ಹೇಳದೆ ಇದ್ದರೆ, ಅನಂತಕುಮಾರ್ ಮತ್ತು ದೇವೇಗೌಡರ ಜತೆ ಸಂಪರ್ಕದಲ್ಲಿದ್ದಾರೆ ಎಂಬ ಗಾಳಿ ಸುದ್ದಿ ಹರಡಿಬಿಟ್ಟರೆ ಮರುದಿನ ಯಡಿಯೂರಪ್ಪ ಮತ್ತು ಅವರ ಮಕ್ಕಳು ಬೆಂಬಲಿಗ ಶಾಸಕರ ಜತೆ ಸೇರಲು ಬೆಂಗಳೂರು ಸಮೀಪದ ಯಾವುದಾದರೂ ರೆಸಾರ್ಟ್ ಹುಡುಕುವುದು ಖಂಡಿತ. ಈಗಲೂ ನಾಯಕತ್ವ ಬದಲಾವಣೆಯಿಂದ ರಾಜ್ಯ ಬಿಜೆಪಿಯ ಬಿಕ್ಕಟ್ಟು ಶಮನವಾಯಿತೆಂದು ಯಾರಾದರೂ ಹೇಳಲು ಸಾಧ್ಯವೇ? ಇದು ಅಂತ್ಯ ಅಲ್ಲ, ಆರಂಭ. ರಾಜ್ಯದ ಜನತೆಯ ಕರ್ಮ.

No comments:

Post a Comment