Monday, January 26, 2015

ಹಿಂದೆ ಬರೆದಿದ್ದ ಸ್ವಾಮಿ ವಿವೇಕಾನಂದರ ಅಂಕಣ ಕುರಿತು..

‘ The Monk as Man- The
unknown life of Swami Vivekananda’
ಎರಡು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಸ್ವಾಮಿ ವಿವೇಕಾನಂದರ ಮನುಷ್ಯ ಮುಖದ ಬಗ್ಗೆ ಬರೆದ ಅಂಕಣದ ಸತ್ಯಾಸತ್ಯತೆಯನ್ನು ಕೆಲವರು ಪ್ರಶ್ನಿಸುತ್ತಾ ಬಂದಿದ್ದಾರೆ. ನನ್ನ ಅಂಕಣದಲ್ಲಿಯೇ ಅವರ ಪ್ರಶ್ನೆಗೆ ಉತ್ತರ ಇದೆ. ಆದರೆ ಈ ರೀತಿ ಪ್ರಶ್ನಿಸುವವರಲ್ಲಿ ಬಹಳಷ್ಟು ಮಂದಿ ಆ ಅಂಕಣವನ್ನು ಓದಿಲ್ಲ. ಓದಿಯೂ ವಿರೋಧಿಸಿದವರಿಗೆ ಇದ್ದ ದುರುದ್ದೇಶ ಸ್ಪಷ್ಟವಾಗಿತ್ತು. ಎಷ್ಟೋ ಅಮಾಯಕ ಯುವಕರಿಗೆ ಕೆಲವು ಕಿಡಿಗೇಡಿಗಳು ಅಂಕಣದ ಆಯ್ದಭಾಗಗಳನ್ನಷ್ಟೇ ಕಳುಹಿಸಿ ಪ್ರಚೋದಿಸಿದ್ದಾರೆ. ನನ್ನ ಅಂಕಣವನ್ನು ಅರ್ಥಮಾಡಿಕೊಳ್ಳಲಾಗದ ಮೂಢಮತಿಗಳಿಗೆ ಇನ್ನಷ್ಟು ವಿವರಣೆಯ ಅಗತ್ಯ ಇರಬಹುದೆಂದು ಇನ್ನೊಂದು ಲೇಖನ ಪ್ರಜಾವಾಣಿಯಲ್ಲಿಯೇ ಬರೆದಿದ್ದೆ. (ಇದನ್ನೇ ಸೂಲಿಬೆಲೆಯಂತಹ ಪ್ರಚೋದನಕಾರಿಗಳು ಕ್ಷಮೆಯಾಚನೆ ಎಂದು ಸುಳ್ಳು ಬೊಗಳುತ್ತಿದ್ದಾರೆ) ಅದರ ನಂತರ ವಿರೋಧಿಸುವವರ ಬತ್ತಳಿಕೆ ಖಾಲಿಯಾಗಿ ಮೌನವಾಗಿದ್ದರು. ಈಗ ಮತ್ತೆ ಅಂಕಣ ಚರ್ಚೆಗೀಡಾಗಿದೆ. ಈ ಹಿನ್ನೆಲೆಯಲ್ಲಿ ಅಂಕಣಕ್ಕೆ ಆಧಾರವಾಗಿದ್ದ ಪುಸ್ತಕ ಮತ್ತು ಲೇಖಕನ ಬಗ್ಗೆ ಎಲ್ಲರೂ ಇನ್ನಷ್ಟು ತಿಳಿದುಕೊಳ್ಳುವ ಅಗತ್ಯ ಇದೆ ಎಂದು ನನಗನಿಸಿ ಒಂದಿಷ್ಟು ಮಾಹಿತಿಯನ್ನು ಕೊಡುತ್ತಿದ್ದೇನೆ.
ಖ್ಯಾತ ಬಂಗಾಳಿ ಲೇಖಕ ಮಣಿ ಸಂಕರ್ ಮುಖರ್ಜಿ ಅವರು 2003ರಲ್ಲಿ ‘ಅಚೆನಾ ಅಜೆನಾ ವಿವೇಕಾನಂದ’ (ಅಪರಿಚಿತ, ಅಪ್ರಕಟಿತ ವಿವೇಕಾನಂದ) ಎಂಬ ಪುಸ್ತಕವನ್ನು ಬಂಗಾಳಿಯಲ್ಲಿ ಬರೆದಿದ್ದರು. ಇದರ ಲಕ್ಷಾಂತರ ಪ್ರತಿಗಳು ಮಾರಾಟವಾಗಿದ್ದವು. ಮಣಿಸಂಕರ್ ಮುಖರ್ಜಿ ಬಂಗಾಳಿಯ ಖ್ಯಾತ ಕಾದಂಬರಿಕಾರ. ಅವರ ಎರಡು ಕಾದಂಬರಿಗಳಾದ ‘ಸೀಮಾಬದ್ಧ’ ಮತ್ತು ‘ಜನ ಅರಣ್ಯ’ ಎಂಬ ಎರಡು ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು. ತನ್ನ ಹನ್ನೊಂದನೆ ವಯಸ್ಸಿನಲ್ಲಿಯೇ ವಿವೇಕಾನಂದರ ಪ್ರಭಾವಕ್ಕೊಳಗಾಗಿದ್ದೆ ಎಂದು ಹೇಳಿಕೊಂಡಿರುವ ಮುಖರ್ಜಿ ವರ್ಷಗಳ ಕಾಲ ಕಷ್ಟಪಟ್ಟು ನಡೆಸಿದ ಸಂಶೋಧನೆಯ ಫಲ ಈ ಪುಸ್ತಕ.
ಇದು ಮುಖ್ಯವಾಗಿ ವಿವೇಕಾನಂದರ ಖಾಸಗಿ ಬದುಕಿಗೆ ಸಂಬಂಧಿಸಿದ್ದು. ಒಬ್ಬ ಮನುಷ್ಯನಾಗಿ ವಿವೇಕಾನಂದರು ಹೇಗಿದ್ದರು? ಸನ್ಯಾಸಿಯಾಗುವ ಮೊದಲು ಮತ್ತು ನಂತರ ಅವರ ಜೀವನದಲ್ಲಿ ತಾಯಿಯ ಪಾತ್ರ ಏನಿತ್ತು? ಕುಟುಂಬದ ಹಿರಿಯ ಮಗನ ಜವಾಬ್ದಾರಿ ಮತ್ತು ಸನ್ಯಾಸಿಯ ಕರ್ತವ್ಯಗಳ ನಡುವಿನ ಅವರ ತಾಕಲಾಟಗಳೇನಿತ್ತು? ಪಶ್ಚಿಮದ ರಾಷ್ಟ್ರಗಳಿಗೆ ಹೋಗಿ ವೇದಾಂತ ಮತ್ತು ಬಿರಿಯಾನಿಯನ್ನು ಪ್ರಚಾರ ಮಾಡಲು ಅವರಿಗೆ ಪ್ರೇರಣೆ ಏನಿತ್ತು? ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ ದೀರ್ಘಕಾಲ ನಡೆದ ಕಾನೂನಿನ ಸಮರ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿ ಅಕಾಲ ಸಾವಿಗೆ ಕಾರಣವಾಯಿತೇ? ಅವರಿಗೆ ಯಾವುದೆಲ್ಲ ಕಾಯಿಲೆಗಳಿದ್ದವು? ಅದಕ್ಕೆ ಅವರು ಯಾವ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು? ಅವರು ಪದವಿ ಶಿಕ್ಷಣದಲ್ಲಿ ಬೇರೆಬೇರೆ ವಿಷಯಗಳಿಗೆ ಪಡೆದ ಅಂಕಗಳೆಷ್ಟು? ಅವರ ಸೋದರರ ಜತೆಗಿನ ಸಂಬಂಧ ಹೇಗಿತ್ತು? ಅವರ ಇಷ್ಟದ ಪಲ್ಯ, ಹಣ್ಣು ಯಾವುದಾಗಿತ್ತು? ಅವರ ಎಷ್ಟು ಎತ್ತರ ಇದ್ದರು? ಅವರಿಗೆ ಎರಡನೆ ಹೃದಯಾಘಾತ ಎಲ್ಲಿ ಆಗಿತ್ತು?- ಮುಖ್ಯವಾಗಿ ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಣಿಸಂಕರ್ ಮುಖರ್ಜಿ ಈ ಪುಸ್ತಕ ಬರೆದಿದ್ದರು,
ತನ್ನ ಬರವಣಿಗೆಗಾಗಿ ಓದಿದ ಪುಸ್ತಕಗಳು ಮತ್ತು ಸಂದರ್ಶಿಸಿದ ವ್ಯಕ್ತಿಗಳ ಪಟ್ಟಿಯನ್ನೂ ಅವರು ನೀಡಿದ್ದಾರೆ.
1. ಬಂಗಾಳಿ ಮತ್ತು ಇಂಗ್ಲೀಷ್ ನಲ್ಲಿರುವ ವಿವೇಕಾನಂದರ ಸಂಪೂರ್ಣ ಕೃತಿ ಸಂಪುಟ, (ಡಾ.ಬೇನಿ ಶಂಕರ್ ಶರ್ಮಾ ಮತ್ತು ಮೇರಿ ಲೂಯಿಸ್ ಬರ್ಕ್ ಅವರ ಸಂಶೋಧನೆಯ ಫಲವಾಗಿ ಬಂಗಾಳಿಗಿಂತಲೂ ಇಂಗ್ಲಿಷ್ ನಲ್ಲಿ ಹೆಚ್ಚು ವಿಸ್ತೃತವಾದ ಮಾಹಿತಿ ಇದೆ. ಮೇರಿ ಬರ್ಕ್ ಅವರು ‘ವಿವೇಕಾನಂದ ಇನ್ ದಿವೆಸ್ಟ್: ನ್ಯೂ ಡಿಸ್ಕವರೀಸ್ ಎನ್ನುವ ಆರು ಸಂಪುಟಗಳ ಪುಸ್ತಕ ಮಾಹಿತಿಗಳ ಗಣಿ ಎಂದು ಮುಖರ್ಜಿ ಹೇಳಿದ್ದಾರೆ).
2. ಸ್ವಾಮಿ ವಿವೇಕಾನಂದರ ಸೋದರ ಮಹೇಂದ್ರನಾಥ್ ದತ್ತಾ ಬರೆದಿರುವ ಸುಮಾರು 90 ಪುಸ್ತಕಗಳು ಮತ್ತು ಇನ್ನೊಬ್ಬ ಸೋದರ ಡಾ.ಭೂಪೇಂದ್ರನಾಥ ದತ್ತಾ ಬರೆದ ಪುಸ್ತಕಗಳು.
3. ಸ್ವಾಮಿ ಶಾರದಾನಂದ ಬರೆದ ಶ್ರೀ ರಾಮಕೃಷ್ಣ ಲೀಲಾಪ್ರಸಂಗ
4. ಸೋದರಿ ನಿವೇದಿತಾ ಬರೆದ ಲೇಖನಗಳು
5. ಸ್ವಾಮಿ ಗಂಭೀರಾನಂದ ಬರೆದಿರುವ ಯುಗನಾಯಕ ವಿವೇಕಾನಂದ ಪುಸ್ತಕ
6. ಪ್ರಮಥನಾಥ ಬಸು ಬರೆದಿರುವ ದಿ ಲೈಫ್ ಆಫ್ ಸ್ವಾಮಿ ವಿವೇಕಾನಂದ ಪುಸ್ತಕ
7. ಬ್ರಹ್ಮಚಾರಿ ಅಕ್ಷಯ ಚೈತನ್ಯ ಬರೆದಿರುವ ಲೇಖನಗಳು
8. ಶೈಲೇಂದ್ರನಾಥ್ ಧರ್ ಬರೆದಿರುವ ‘ಎ ಕಾಂಪ್ರೆನ್ಸಿವ್ ಬಯಾಗ್ರಫಿ ಆಫ್ ವಿವೇಕಾನಂದ’
9. ಚಿತ್ರಗುಪ್ತ ಬರೆದಿರುವ ಕಾನೂನಿಗೆ ಸಂಬಂಧಿಸಿದ ಲೇಖನಗಳು
10. ಬ್ರಹ್ಮಬೋದಿನಿ ಮತ್ತು ಪ್ರಬುದ್ಧ ಭಾರತದ ಹಳೆಯ ಸಂಚಿಕೆಗಳು
11. ಉದ್ಭದನ್ ಮತ್ತು ಶ್ರೀ ಶಾರದಾ ಮಠ ಪ್ರಕಟಿಸುತ್ತಿರುವ ನಿಬೋದಾತ ಪತ್ರಿಕೆ
-ಈ ಪುಸ್ತಕಗಳನ್ನಲ್ಲದೆ ವಿವೇಕಾನಂದರ ಬಗ್ಗೆ ಪ್ರಕಟವಾಗಿರುವ 200 ಪುಸ್ತಕಗಳನ್ನು ತಾನು ಓದಿದ್ದೇನೆ. ಇದರ ಜತೆಗೆ ರಾಮಕೃಷ್ಣ ಮಿಷನ್ ನ ಸ್ವಾಮಿ ರಮಾನಂದ, ವಿಶಾಖಾನಂದ ಮತ್ತು ಶರ್ಬಾಗಾನಂದ, ರಾಮಕೃಷ್ಣ ಸಾಂಸ್ಕೃತಿಕ ಕೇಂದ್ರದ ಗೋಪ ಬಸು ಹೀಗೆ ವಿವೇಕಾನಂದರ ಬಗ್ಗೆ ತಿಳಿದಿರುವ, ಸಂಶೋಧನೆ ಮಾಡಿರುವ ನೂರಾರು ವ್ಯಕ್ತಿಗಳ ಜತೆ ಚರ್ಚಿಸಿದ್ದೇನೆ. ವಿವೇಕಾನಂದರ ಕಲಿತಿರುವ ಶಾಲೆಗಳ ದಾಖಲೆಗಳನ್ನು ಪರಿಶೀಲಿಸಿದ್ದೇನೆ, ಅವರಿಗೆ ಚಿಕಿತ್ಸೆ ನೀಡಿರುವ ಆಸ್ಪತ್ರೆಗಳಿಗೆ ಹೋಗಿ ಮಾಹಿತಿ ಪಡೆದಿದ್ದೇನೆ ಎಂದು ಮಣಿಸಂಕರ್ ಮುಖರ್ಜಿ ತಿಳಿಸಿದ್ದಾರೆ.
ಒಬ್ಬ ಲೇಖಕ ಸುಮಾರು 250 ಪುಟಗಳ ಪುಸ್ತಕ ಬರೆಯಲು ಇಷ್ಟೊಂದು ತಯಾರಿ ನಡೆಸಿರುವ ಪ್ರಸಂಗಗಳು ಇರಬಹುದಾದರೂ ಅದು ಅಪರೂಪ. 2003ರಲ್ಲಿ ಪ್ರಕಟವಾಗಿದ್ದ ಈ ಬಂಗಾಳಿ ಪುಸ್ತಕದ ಜನಪ್ರಿಯತೆಯನ್ನು ಗಮನಿಸಿದ ಪೆಂಗ್ವಿನ್ ಪ್ರಕಾಶನದವರು ಇದರ ಇಂಗ್ಲಿಷ್ ಅನುವಾದವನ್ನು 2011ರಲ್ಲಿ ಪ್ರಕಟಿಸಿದರು. ಅದರ ಹೆಸರು ‘ The Monk as Man- The unknown life of Swami Vivekananda’
ಮಣಿಸಂಕರ್ ಮುಖರ್ಜಿ ಅವರ ಬಂಗಾಳಿ ಪುಸ್ತಕ ಪಶ್ಚಿಮ ಬಂಗಾಳದಲ್ಲಿ ವಿವಾದವನ್ನೇನಾದರೂ ಹುಟ್ಟು ಹಾಕಿತ್ತೇ ಎಂದು ಅಂಕಣವನ್ನು ಬರೆಯುವ ಮುನ್ನ ದೆಹಲಿಯಲ್ಲಿದ್ದಾಗ ನನಗೆ ಪರಿಚಿತರಾಗಿದ್ದ ಕೆಲವು ಬಂಗಾಳಿ ಪತ್ರಕರ್ತರನ್ನು ಕೇಳಿದ್ದೆ. ಅಂತಹದ್ದೇನೂ ನಡೆದಿಲ್ಲ ಎಂದು ಅವರು ತಿಳಿಸಿದ್ದರು. ನನ್ನ ಅಂಕಣ ವಿವಾದ ಸೃಷ್ಟಿಸಿದಾಗ ಮತ್ತೆ ದೆಹಲಿಯಲ್ಲಿ ನನಗೆ ಸಹದ್ಯೋಗಿಯಾಗಿದ್ದ ಪತ್ರಕರ್ತೆಯೊಬ್ಬರನ್ನು ಕೇಳಿದ್ದೆ. ಆಕೆ ಹೇಳಿದ್ದ ಒಂದು ಪ್ರಸಂಗ ಸ್ವಾರಸ್ಯಕರವಾಗಿದೆ. ವಿವೇಕಾನಂದರು ತನ್ನ ಕೊನೆಯ ದಿನಗಳಲ್ಲಿ ಸಹಚರರನ್ನು ಕರೆದು ‘ನಾನು ಸತ್ತ ನಂತರ ನೀವು ನನ್ನ ಪೋಟೊ ಇಟ್ಟು ಊದುಕಡ್ಡಿ ಹಚ್ಚಿ ದೇವರುಮಾಡುತ್ತಿರೆಂದು ನನಗೆ ಗೊತ್ತು. ಅಂಹತದ್ದೇನಾದರೂ ಮಾಡಿದರೆ ದೆವ್ವವಾಗಿ ಬಂದು ನಿಮ್ಮ ತಲೆ ಒಡೆದುಹಾಕುತ್ತೇನೆ’’ ಎಂದಿದ್ದರಂತೆ.
ದೆವ್ವಗಳಿರುವುದೇ ನಿಜವಾಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಲ್ವೇ?

Thursday, January 15, 2015

ವಿದ್ಯಾರ್ಥಿಗಳನ್ನು ಶಿಕ್ಷಿಸ ಹೊರಟ ಶಿಕ್ಷಕನ ಸಂಕಟ ನನ್ನದು...

ಸ್ವಾಮಿ ವಿವೇಕಾನಂದರ ಬಗ್ಗೆ ನಾನು ಬರೆದಿದ್ದ ಹಳೆಯ ಅಂಕಣವನ್ನು ಸ್ನೇಹಿತರೊಬ್ಬರು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಲವು ವಿಕೃತ ಮನಸ್ಸಿನವರು ಕೆಟ್ಟ ಭಾಷೆಯಲ್ಲಿ ನನ್ನನ್ನು ನಿಂದಿಸಿದ್ದಾರೆ. ನನ್ನ ಅನೇಕ ಸ್ನೇಹಿತರು ಅವರ ಬಗ್ಗೆ ಸೈಬರ್ ಪೊಲೀಸರಿಗೆ ದೂರು ಕೊಡಬೇಕೆಂದು ಸೂಚಿಸಿದ್ದಾರೆ. ಪ್ರತಿಕ್ರಿಯಿಸಿದ ಇಬ್ಬರಿಗೆ ಎಚ್ಚರಿಕೆ ಕೊಟ್ಟು ಮೆಸೆಜ್ ಹಾಕಿದ್ದೆ. ಮಲ್ಲು ಬಿರಾದಾರ್ ಮತ್ತು ಆಂಜನೇಯ ರೆಡ್ಡಿ ಇಬ್ಬರೂ ತಮ್ಮ ಪೋಸ್ಟ್ ಗಳನ್ನು ಡಿಲೀಟ್ ಮಾಡಿ ವೈಯಕ್ತಿಕವಾಗಿ ಕ್ಷಮೆ ಕೇಳಿದ್ದಾರೆ. ಅವರು ಎಲ್ಲಿ ಬರೆದಿದ್ದಾರೋ ಅಲ್ಲಿಯೇ ಕ್ಷಮೆ ಕೇಳಬೇಕೆಂದು ಹೇಳಿದ್ದಕ್ಕೆ ಒಪ್ಪಿಕೊಂಡಿದ್ದಾರೆ. ಅವರಿಬ್ಬರ ಪ್ರತಿಕ್ರಿಯೆಗಳ ಸ್ಕ್ರೀನ್ ಶಾಟ್ ಗಳು ನನ್ನ ಬಳಿ ಇವೆ. ಸೈಬರ್ ಪೊಲೀಸರಿಗೆ ದೂರು ಕೊಡುವ ಬಗ್ಗೆ ನಾಳೆ ನಿರ್ಧರಿಸುತ್ತೇನೆ. ಇಂತಹ ಕೀಟಳೆಗಳೆಲ್ಲ ನಿಲುಮೆ ಎಂಬ ಗ್ರೂಪ್ ನಲ್ಲಿ ನಡೆಯುತ್ತಿದೆ. ಈ ಬಗ್ಗೆ ಅನೇಕರು ದೂರಿದ್ದಾರೆ. ಅದರ ವಿರುದ್ಧವೂ ದೂರು ನೀಡಬೇಕೆಂದಿದ್ದೇನೆ. ಸ್ನೇಹಿತರ ಜತೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇನೆ. ನಿಲುಮೆ ಗ್ರೂಪ್ ನಲ್ಲಿ ಯಾರ ಬಗ್ಗೆಯಾದರೂ ಈ ರೀತಿಯ ನಿಂದೆ, ಅವಹೇಳನ, ಚಾರಿತ್ರ್ಯ ಹನನ ನಡೆದಿದ್ದರೆ ಅದನ್ನು ದಯವಿಟ್ಟು ನನ್ನ ಗಮನಕ್ಕೆ ತನ್ನಿ.
-----------------------------------------------------------------------------------------------------------------------------

ವಿದ್ಯಾರ್ಥಿಗಳನ್ನು ಶಿಕ್ಷಿಸ ಹೊರಟ ಶಿಕ್ಷಕನ ಸಂಕಟ ನನ್ನದು...
ಫೇಸ್ ಬುಕ್ ನಲ್ಲಿ ನನ್ನ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ, ಅವಹೇಳನ ಮಾಡಿದವರ ವಿರುದ್ಧ ಕೊನೆಗೂ ಪೊಲೀಸರಿಗೆ ದೂರು ನೀಡಿದ್ದೇನೆ. ವಿವೇಕಾನಂದರ ಬಗ್ಗೆ ನಾನು ಬರೆದ ಅಂಕಣದ ದಿನದಿಂದ ಕೆಲವು ಕಿಡಿಗೇಡಿಗಳು ಈ ರೀತಿಯ ನಿಂದನೆಯ ಮೂಲಕ ಮಾನಸಿಕವಾಗಿ ನನ್ನನ್ನು ಹಿಂಸಿಸುವ ಪ್ರಯತ್ನ ಮಾಡುತ್ತಾ ಬಂದಿರುವುದನ್ನು ಸೊಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುವವರೆಲ್ಲರೂ ಗಮನಿಸಿರಬಹುದು.
ವಿವೇಕಾನಂದ ಅಂಕಣದ ವಿವಾದದ ಸಮಯದಲ್ಲಿ ನನಗೆ ಪ್ರಾಣ ಬೆದರಿಕೆಯೊಡ್ಡುವ, ನಿಂದಿಸುವ ನೂರಾರು ಕರೆಗಳು, ಮೆಸೆಜ್ ಗಳು ಬಂದಿದ್ದರೂ ನಾನು ಪೊಲೀಸರಿಗೆ ದೂರು ನೀಡಿರಲಿಲ್ಲ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಂದಷ್ಟು ನಂಬರ್ ಗಳನ್ನು ನೀಡಿ ಅವರಿಗೆ ಬುದ್ದಿ ಹೇಳಿ ಎಂದಷ್ಟೇ ತಿಳಿಸಿದ್ದೆ. ಆಗ ನಾನು ಕೆಲಸ ಮಾಡುತ್ತಿದ್ದ ಪ್ರಜಾವಾಣಿಯ ಸಂಪಾದಕರು ಮತ್ತು ಗೆಳೆಯರು ಪೊಲೀಸರಿಗೆ ದೂರು ಕೊಡಿ ಎಂದು ಹೇಳಿದರೂ ನಾನು ಸುಮ್ಮನಿದ್ದೆ.
ಆದರೆ ದಿನದಿಂದ ದಿನಕ್ಕೆ ಇದು ಯಾಕೋ ಅತಿರೇಕಕ್ಕೆ ಹೋಗುತ್ತಿದೆಯೇನೋ ಎಂದು ನನಗನಿಸತೊಡಗಿದೆ. ನಿಲುಮೆ ಗುಂಪಿನ ರಾಕೇಶ್ ಶೆಟ್ಟಿ ಜತೆ ಎಷ್ಟೋ ಬಾರಿ ನಾನು ಚರ್ಚೆ ನಡೆಸಿದ್ದಿದೆ. ಅವರೆಂದೂ ವೈಯಕ್ತಿಕವಾಗಿ ನನ್ನನ್ನು ನಿಂದಿಸುವ ಕೆಲಸ ಮಾಡಿಲ್ಲ. ಆದರೆ ಉಳಿದೆಲ್ಲ ನಿಂದಕರಿಗೆ ಗುಂಪಿನ ಬಾಗಿಲು ತೆರೆದಿಟ್ಟು ಬಿಟ್ಟಿದ್ದರು. ಇದನ್ನು ನಾನು ಹೇಗೆ ಅರ್ಥಮಾಡಿಕೊಳ್ಳಲಿ? ಎಡ್ಮಿನ್ ಆಗಿರುವವರು ಇದನ್ನು ನಿಯಂತ್ರಿಸಬೇಕಿತ್ತಲ್ಲವೇ? ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅವಹೇಳನ ಮಾಡುವ (ಪೋಟೊಗಳ ಮಾರ್ಪಿಂಗ್ ಮಾಡಿ), ಬಿಜೆಪಿ-ಸಂಘ ಪರಿವಾರದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವ ನನ್ನಂತಹವರನ್ನು ನಿಂದಿಸುವ, ಮಹಿಳೆಯರು, ಹಿರಿಯರು ಎಂಬ ಭೇದ ಇಲ್ಲದೆ ತಮಗಾಗದ ಸಾಹಿತಿಗಳು, ಚಿಂತಕರನ್ನು ಅವಹೇಳನ ಮಾಡುವ ಕೆಲಸವನ್ನು ಈ ಗುಂಪಿನ ಗೆಳೆಯರು ಧಾರಾಳವಾಗಿ ನಡೆಸಿಕೊಂಡು ಬಂದಿದ್ದಾರೆ.
ನಮ್ಮ ಉಳಿದೆಲ್ಲ ಮಾಧ್ಯಮಗಳು (ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ) ತಾವು ಹೂಡಿರುವ ದೊಡ್ಡ ಬಂಡವಾಳದ ಕಾರಣದಿಂದಾಗಿ ಅನಿವಾರ್ಯವಾಗಿ ವ್ಯಾಪಾರಿ ಸಂಸ್ಥೆಗಳಾಗುತ್ತಿರುವ ಇಂದಿನ ದಿನಮಾನದಲ್ಲಿ ಓದುಗನೇ ಪತ್ರಕರ್ತನಾಗಲು ಅವಕಾಶ ಇರುವ ಸೊಷಿಯಲ್ ಮೀಡಿಯಾದ ಬಗ್ಗೆ ನನಗೆ ಅಪಾರವಾದ ನಿರೀಕ್ಷೆ ಮತ್ತು ಭರವಸೆ ಇದೆ. ಆದರೆ ಕೆಲವೇ ಕಿಡಿಗೇಡಿಗಳ ಹಾವಳಿಯಿಂದಾಗಿ ಸೊಷಿಯಲ್ ಮೀಡಿಯಾ ಕೂಡಾ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆಯೇನೋ ಎಂಬ ಆತಂಕ ನನ್ನನ್ನು ಮಾತ್ರವಲ್ಲ ನನ್ನ ಅನೇಕ ಸ್ನೇಹಿತರನ್ನು ಇತ್ತೀಚೆಗೆ ಕಾಡುತ್ತಿರುವುದು ನಿಜ. ಇದನ್ನು ಹೀಗೆ ಬೆಳೆಯಲು ಬಿಟ್ಟರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಇನ್ನೊಂದು ಮಾಧ್ಯಮವನ್ನೂ ಕಳೆದುಕೊಳ್ಳಲಿರುವ ಮುಂದಿನ ಜನಾಂಗ ನಮ್ಮನ್ನು ಖಂಡಿತ ಕ್ಷಮಿಸುವುದಿಲ್ಲ. 
ನಾನು ತಪ್ಪಿಸಿಕೊಂಡು ಬೇರೆ ಯಾರಿಂದಲೋ ಪೊಲೀಸರಿಗೆ ದೂರು ನೀಡುವ ಕೆಲಸ ಮಾಡಿಸಬಹುದಿತ್ತು. ಅಧಿಕಾರಕ್ಕೆ ಸಮೀಪ ಇರುವುದನ್ನು ಬಳಸಿಕೊಂಡು ಪೊಲೀಸರ ಮೇಲೆ ಒತ್ತಡ ಹೇರಿ ನನ್ನ ಹೆಸರು ಬರದಂತೆ ನೋಡಿಕೊಂಡು ಕೆಲಸ ಮಾಡಿಸಿಕೊಳ್ಳಬಹುದಿತ್ತು. ನನಗೆ ಬುದ್ದಿ ತಿಳಿದಂದಿನಿಂದ ಇಂತಹ ಅಡ್ಡ ಕಸುಬಿ ಕೆಲಸವನ್ನು ನಾನು ಮಾಡಿಲ್ಲ. ಯಾರೋ ಅಮಾಯಕರನ್ನು ಛೂ ಬಿಟ್ಟು ಮರೆಯಲ್ಲಿ ನಿಂತು ಚಂದ ನೋಡುವ ಹೇಡಿ ಕೆಲಸವನ್ನು ನಾನೆಂದೂ ಮಾಡಿಲ್ಲ. ಸಾಧ್ಯವಾದಷ್ಟು ನೇರವಾಗಿ,ನಿಷ್ಠುರವಾಗಿ ನಡೆದುಕೊಳ್ಳುತ್ತಾ ಬಂದಿದ್ದೇನೆ. ಆದ್ದರಿಂದ ಸರಿ-ತಪ್ಪುಗಳಿಗೆ ನಾನೇ ತಲೆ ಕೊಡಲು ನಿರ್ಧರಿಸಿ ದೂರು ಕೊಟ್ಟೆ. ಇದು ನನ್ನ ಜೀವನದ ಮೊದಲ ಪೊಲೀಸ್ ದೂರು.
ಇದರಿಂದ ಏನನ್ನೋ ಸಾಧಿಸಿದೆನೆಂಬ ಹೆಮ್ಮೆಯಾಗಲಿ, ಸರಿಯಾಗಿ ಪಾಠ ಕಲಿಸಿದೆ ಎಂಬ ವಿಕೃತ ಸಂತೋಷವಾಗಲಿ ನನಗಾಗಿಲ್ಲ. ನಿಜಕ್ಕೂ ನನಗೆ ಸಂಕಟವಾಗುತ್ತಿದೆ. ನಾನು ಹೆಚ್ಚುಕಡಿಮೆ 30 ವರ್ಷ ಸಕ್ರಿಯ ಪತ್ರಕರ್ತನಾಗಿದ್ದೆ. ಮುಖ್ಯವಾಗಿ ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಜಾವಾಣಿ ವರದಿಗಾರನಾಗಿ ಕೆಲಸ ಮಾಡಿದ್ದೆ. ಆಗಲೂ ನಾನು ಸಂಘ ಪರಿವಾರದ ಸಿದ್ಧಾಂತಗಳನ್ನು ಒಪ್ಪುತ್ತಿರಲಿಲ್ಲ. ಧಾರವಾಡದ ನನ್ನ ಮನೆಯಲ್ಲಿ ಎಬಿವಿಪಿ ಹುಡುಗರ ಜತೆ ಸುದೀರ್ಘ ಚರ್ಚಾಕೂಟಗಳೇ ನಡೆಯುತ್ತಿದ್ದವು. ಆ ಗೌರವವನ್ನು ನಾನು ಮಾತ್ರವಲ್ಲ ಆ ಹುಡುಗರೂ ಈಗಲೂ ಉಳಿಸಿಕೊಂಡಿದ್ದಾರೆ. ನಾನೆಂದು ನನ್ನ ವರದಿಗಳಲ್ಲಿ ಅವರ ಬಗ್ಗೆ ಪೂರ್ವಗ್ರಹದಿಂದ ವರ್ತಿಸಿರಲಿಲ್ಲ. ನನ್ನ ವರದಿಗಳಲ್ಲಿ ಪೂರ್ವಗ್ರಹಪೀಡಿತ ನಾಗಿದ್ದೆ ಎಂದು ಆ ಎರಡು ಜಿಲ್ಲೆಗಳ ಸಂಘ ಪರಿವಾರದ ನಾಯಕರು ಈಗಲೂ ದೂರಲಾರರು ಎಂಬ ನಂಬಿಕೆ ನನಗಿದೆ.
ಆರ್ ಎಸ್ ಎಸ್ ಸಿದ್ಧಾಂತವನ್ನು ನಾನು ಒಪ್ಪಿಕೊಳ್ಳದಿದ್ದರೂ ಆ ಸಂಘಟನೆಯ ಹಿರಿಯ ನಾಯಕರ ಬಗ್ಗೆ ನನಗೆ ಗೌರವ ಇದೆ. ಆದರೆ ಇತ್ತೀಚೆಗೆ ಆರ್ ಎಸ್ ಎಸ್ ಎಂದುಹೇಳಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಕರ ನಡವಳಿಕೆ ಕಂಡಾಗ ಭವಿಷ್ಯದ ಬಗ್ಗೆ ಭಯವಾಗುತ್ತದೆ. ಇಂತಹ ನಡವಳಿಕೆಯಿಂದಾಗಿ ವಸ್ತುನಿಷ್ಠವಾದ ಮುಕ್ತ ಮನಸ್ಸಿನ ಚರ್ಚೆಗಿದ್ದ ಅವಕಾಶವನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ. ಸೈದ್ಧಾಂತಿಕವಾದ ಭಿನ್ನಾಭಿಪ್ರಾಯಗಳಿದ್ದಾಗ ಅದೇ ಮಟ್ಟದಲ್ಲಿ ಜಗಳವಾಡುವ ಪ್ರಯತ್ನ ಮಾಡಬೇಕಲ್ಲವೇ, ಕನಿಷ್ಠ ಭಾಷೆಯ ಬಳಕೆ ಬಗ್ಗೆ ಎಚ್ಚರ ಇರಬೇಕಲ್ಲವೇ? ‘ತಲೆ ಹಿಡುಕ’, ‘ಮುಠ್ಠಾಳ’, ‘ಚಪ್ಪಲಿ ಸವೆದುಹೋಗುವಷ್ಟು ಹೊಡೆಯಬೇಕು’, ‘ಮುಖಕ್ಕೆ ಉಗಿಯಿರಿ’ ‘ಆ್ಯಸಿಡ್ ಹಾಕಿ’ ...ಇವೆಲ್ಲ ಏನು ಭಾಷೆ ಸ್ವಾಮಿ? ಇವೆಲ್ಲ ಆಗೊಮ್ಮೆ ಈಗೊಮ್ಮೆ ಮಿಂಚಿ ಮರೆಯಾಗುವ ಪ್ರತಿಕ್ರಿಯೆಗಳಲ್ಲ. ನಿಲುಮೆ ಗುಂಪಿನ ಗೆಳೆಯರು ಇತ್ತೀಚೆಗೆ ನಿರಂತರವಾಗಿ ಇಂತಹ ಭಾಷೆ ಬಳಕೆ ಮಾಡಿ ತಮಗಾಗದವರ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಸಾಧ್ಯ ಇದ್ದ ರಾಕೇಶ್ ಶೆಟ್ಟಿ, ಸಾತ್ವಿಕ್ ಅಂತಹವರು ಇದನ್ನು ಗಮನಿಸಿಯೂ ಸುಮ್ಮನಿದ್ದದ್ದು ಇನ್ನೂ ದೊಡ್ಡ ಅಪರಾಧ. ಅವರ ಜಾಣ ಮೌನದಿಂದ ಪ್ರೇರಣೆ ಪಡೆದು, ಅರೆಬರೆ ಓದಿದ ಬಿಸಿ ರಕ್ತದ ಹುಡುಗರು ಇನ್ನಷ್ಟು ಉತ್ಸಾಹದಿಂದ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಇದನ್ನು ಕೆಲವರಿಗೆ ನೇರವಾಗಿ ಮೆಸೆಜ್ ಹಾಕಿ ನಿಲ್ಲಿಸಿ ಎಂದು ಹೇಳಿದ್ದೆ. ಕೆಲವರು ನಿಲ್ಲಿಸಿದ್ದಾರೆ, ಇನ್ನು ಹಲವಾರು ಮತ್ತೆ ಪ್ರಾರಂಭಿಸಿದ್ದಾರೆ. ಇದರ ಜತೆ ಹೊಸಬರ ಪ್ರವೇಶ ಧಾರಾಳವಾಗಿ ಆಗುತ್ತಿದೆ. ಇಂತಹದ್ದೊಂದು ಅನಾರೋಗ್ಯಕರವಾದ ಬೆಳವಣಿಗೆಯನ್ನು ತಡೆಯಲು ಕಾನೂನಿನ ಮೊರೆ ಹೋಗುವುದು ಬಿಟ್ಟು ಬೇರೆ ದಾರಿಗಳು ನನ್ನ ಮುಂದಿರಲಿಲ್ಲ. ಯಾರ ಬಗ್ಗೆ ದೂರು ಕೊಟ್ಟಿದ್ದೆನೋ ಅವರ ಬಗ್ಗೆ ನನಗೆ ಖಂಡಿತ ದ್ವೇಷ ಇಲ್ಲ, ಪ್ರೀತಿ ಅಲ್ಲದೆ ಇದ್ದರೂ ಅನುಕಂಪ ಇದೆ. ವಿದ್ಯಾರ್ಥಿಗಳನ್ನು ಶಿಕ್ಷಿಸ ಹೊರಟ ಶಿಕ್ಷಕನ ಸಂಕಟ ನನ್ನದು. ಕಾನೂನಿನ ಕ್ರಮಗಳನ್ನು ಎದುರಿಸಲು ಅವರಿಗೆ ನೆರವು ಬೇಕಿದ್ದರೆ ಅದನ್ನು ಒದಗಿಸಲು ನನ್ನ ಮಿತಿಯೊಳಗೆ ನಾನು ಸಿದ್ದನಿದ್ದೇನೆ.

Monday, December 29, 2014

ಕಾಣೆ ಮೀನಿನ ಕತೆ

ಈ ನಗುಸ್ಪೋಟಕ್ಕೆ ಕಾರಣವಾದ ಕಾಣೆ ಮೀನಿನ ಕತೆ ಹೀಗಿದೆ:
ಅಂಬೇಡ್ಕರ್ ಹುಟ್ಟುಹಬ್ಬದಂದು ದಿನದ ಪತ್ರಿಕೆಯನ್ನು ದಲಿತ ಸಂಚಿಕೆಯನ್ನಾಗಿ ಮಾಡಬೇಕೆಂದು ಪ್ರಜಾವಾಣಿಯ ಸಂಪಾದಕರಾದ ಶಾಂತಕುಮಾರ್ ನಿರ್ಧರಿಸಿದಾಗ ದಿನದ ಸಂಪಾದಕ ಸ್ಥಾನಕ್ಕೆ ಹೊಳೆದ ಮೊದಲ ಹೆಸರು ಸಾಹಿತಿ ದೇವನೂರು ಮಹಾದೇವ ಅವರದ್ದು. ಅವರನ್ನು ಕೊನೆಗೂ ಒತ್ತಾಯದಿಂದ ಒಪ್ಪಿಸಿ ಬೆಂಗಳೂರಿಗೆ ಕರೆದುತರಲಾಯಿತು. ಕಾಡಿಬೇಡಿ ಒಪ್ಪಿಸಲಿಕ್ಕಾಗಿ ನೀಡಿದ್ದ ಕಷ್ಟದಿಂದ ನೊಂದಿರಬಹುದಾದ ಅವರನ್ನು ಖುಷಿಪಡಿಸಲು ಎಂ.ಜಿ.ರಸ್ತೆಯಲ್ಲಿರುವ ‘’ಕೋಸ್ಟ್ ಟು ಕೋಸ್ಟ್’’ ಹೊಟೇಲ್ ಗೆ ಊಟಕ್ಕೆ ಕರೆದುಕೊಂಡು ಹೋಗಿದ್ದೆ.ಅವರು ಇಷ್ಟಪಟ್ಟು ಕಾಣೆ ಮೀನು ಮಸಾಲ ತರಿಸಿಕೊಂಡಿದ್ದರು.
ಊಟ ಮುಗಿದ ಮೇಲೆ ಅವರಿಗೆ ನನಗೆ ಗೊತ್ತಿರುವ ಕಾಣೆ ಮೀನಿನ ಕತೆ ಹೇಳಿದೆ. ನನ್ನೂರು ಮಟ್ಟು, ನದಿ ದಂಡೆಯಲ್ಲಿರುವ ಸಣ್ಣ ಹಳ್ಳಿ. ಮಳೆಗಾಲದಲ್ಲಿ ನೆರೆಬಂದಾಗ ನದಿ ಉಕ್ಕಿ ನಮ್ಮ ತೋಟವನ್ನು ದಾಟಿ ಮನೆ ಅಂಗಳಕ್ಕೆ ದಾಳಿ ನೀಡುವುದುಂಟು. ನೆರೆಬಂದಾಗ ಅದರ ಜತೆ ಉಳಿದೆಲ್ಲವುಗಳ ಜತೆ ಸತ್ತ ಪ್ರಾಣಿಗಳ ಕಳೇಬರಗಳೂ ತೇಲಿ ಬರುತ್ತವೆ. ನೆರೆ ಇಳಿದಾಗ ಅದು ಹೊತ್ತು ತಂದುದೆಲ್ಲವೂ ನೀರಿನ ಜತೆ ಇಳಿದುಹೋಗದೆ ತೋಟದ ಬೇಲಿಯಲ್ಲಿ ಸಿಕ್ಕಿಹಾಕಿಕೊಂಡು ಉಳಿದು ಬಿಡುತ್ತವೆ. ಈ ರೀತಿ ಉಳಿದುಕೊಂಡ ದನ, ನಾಯಿಗಳ ಕಳೇಬರಗಳನ್ನು ನಾವು ಹೂಳಬೇಕಾಗುತ್ತಿತ್ತು.
ಈ ಹೂಳುವ ಕೆಲಸವನ್ನು ಹಿರಿಯರು ಹುಡುಗರಾದ ನಮಗೆ ಒಪ್ಪಿಸುತ್ತಿದ್ದರು. ನಾನೊಮ್ಮೆ ಒಂದು ನಾಯಿಯ ಕಳೇಬರವನ್ನು ಗುಂಡಿಗೆ ಹಾಕಲು ಎಳೆದು ತರುತ್ತಿದ್ದಾಗ ಅದರೊಳಗಿಂದ ಒಂದಷ್ಟು ಮೀನುಗಳು ಹೊರಗೆ ಜಿಗಿಯಲು ಪ್ರಾರಂಭಿಸಿತು. ಸಮೀಪ ಹೋಗಿ ನೋಡಿದರೆ ಎಲ್ಲ ಕಾಣೆ ಮೀನುಗಳು. ನೆರೆನೀರಿನಲ್ಲಿ ತೇಲುತ್ತಿದ್ದ ಕಳೆಬರವನ್ನು ತಿನ್ನಲು ತೂತು ಕೊರೆಯುತ್ತಾ ಒಳಹೋಗುವ ಮೀನುಗಳು ಒಮ್ಮೊಮ್ಮೆ ನೆರೆ ಇಳಿದ ಮೇಲೂ ಮೈಮರೆತು ಕಳೇಬರದೊಳಗೆ ಉಳಿದು ಬಿಡುತ್ತವೆ. ಈ ರೀತಿ ಸತ್ತಪ್ರಾಣಿಗಳನ್ನು ಎಲ್ಲ ಮೀನುಗಳು ತಿನ್ನುವುದಿದ್ದರೂ ಕಾಣೆ ಮೀನಿಗೆ ಬೇರೆ ಯಾವುದು ಸಾಟಿಯಲ್ಲ ಎಂದು ನಮ್ಮ ಊರಿನ ಹಿರಿಯರು ಹೇಳುತ್ತಿದ್ದರು. ಈ ಕಾರಣಕ್ಕಾಗಿ ನದಿ ದಂಡೆಯಲ್ಲಿ ವಾಸವಾಗಿರುವವರು ಸಾಮಾನ್ಯವಾಗಿ ನದಿಮೀನುಗಳನ್ನು ತಿನ್ನುವುದಿಲ್ಲ.
ಈ ಕತೆಯನ್ನು ಆಸಕ್ತಿಯಿಂದ ಕೇಳಿದ ದೇವನೂರು ಅವರ ಮುಖದಲ್ಲಿ ಕಾಣೆಮೀನು ತಿಂದ ಖುಷಿ ಮಾಯವಾಗಿತ್ತು. ಅದರ ನಂತರ ಅವರು ಕಾಣೆ ಮೀನನ್ನು ಜೀವಮಾನದಲ್ಲಿ ಎಂದೆಂದೂ ತಿನ್ನುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರಂತೆ. ನಾನೀಗ ಕಾಣೆ ಮೀನು ತಿನ್ನುವಾಗಲೆಲ್ಲ ದೇವನೂರು ಅವರ ಪ್ರತಿಜ್ಞೆ ನೆನಪಾಗಿ ಅಪರಾಧಿ ಪ್ರಜ್ಞೆಯಿಂದ ನರಳುತ್ತಾ, ಅವರ ಪಾಲಿನದ್ದೂ ನಾನೇ ತಿಂದು ನನ್ನನ್ನು ಸಮಾಧಾನ ಮಾಡಿಕೊಳ್ಳುತ್ತೇನೆ.
ಕೊನೆ ತುಂಡು: ಕಾಣೆ ಮೀನು ಸಪೂರ ದೇಹದ, ಬಿಳಿ ಮೈಬಣ್ಣದ ಸುಂದರ ಮೀನು. ಅದರ ಹೊರ ಪಕ್ಕೆಗಳಲ್ಲಿರುವ ಬೆಳ್ಳಿರೇಖೆಗಳು ಅದರ ಮೆರಗನ್ನು ಇನ್ನಷ್ಟು ಹೆಚ್ಚಿಸಿದೆ. ಇದಕ್ಕಾಗಿ ನಮ್ಮ ಹುಡುಗರು ಇದು ‘’ಬ್ರಾಹ್ಮಣಮೀನು’’ ಅನ್ನುತ್ತಿದ್ದರು. ಈ ‘’ಸೌಂದರ್ಯ’’ದ ಕಾರಣಕ್ಕಾಗಿಯೇ ಮಾರ್ಕೆಟ್ ನಲ್ಲಿ ಇದಕ್ಕೆ ಸಿಕ್ಕಾಪಟ್ಟೆ ರೇಟು.
ನನ್ನ ಇಷ್ಟದ ಮೀನು ಕಾಣೆ ಮೀನಲ್ಲ, ಬೂತಾಯಿ. ಆರೋಗ್ಯದೃಷ್ಟಿಯಿಂದಲೂ ಉಳಿದೆಲ್ಲ ಮೀನುಗಳಿಗಿಂತ ಇದೇ ಉತ್ತಮ. ಆದರೆ ವಿಪರೀತ ವಾಸನೆಯ ಕಪ್ಪು ಮೈಬಣ್ಣದ ಬೂತಾಯಿ ಮೀನುಗಳಲ್ಲಿಯೇ ಅತೀ ಅಗ್ಗದ ಮೀನು. ಇದನ್ನು ನಮ್ಮ ಹುಡುಗರು ‘’ಶೂದ್ರ ಮೀನು’’ ಎನ್ನುತ್ತಿದ್ದರು. ಇದನ್ನೆಲ್ಲ ಗಮನಿಸಿದಾಗ ಮೀನುಗಳಲ್ಲಿಯೂ ವರ್ಣಾಶ್ರಮ ವ್ಯವಸ್ಥೆ ಇದೆಯೇನೋ ಎಂಬ ಅನುಮಾನ ನನ್ನನ್ನು ಕಾಡುತ್ತದೆ.

Sunday, December 21, 2014

ಉತ್ತರ ಕನ್ನಡ ಜಿಲ್ಲೆಯ 19ನೇ ಕ.ಸಾ.ಪ. ಜಿಲ್ಲಾ ಸಮ್ಮೇಳನ

ಉತ್ತರ ಕನ್ನಡ ಜಿಲ್ಲೆಯ ಕ.ಸಾ.ಪ ಜಿಲ್ಲಾ ಸಮ್ಮೇಳನದಲ್ಲಿ ಮುಖ್ಯಅತಿಥಿಯಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಮಾತನಾಡುತ್ತಿರುವುದು.

Tuesday, December 16, 2014

ಮರೆತು ಹೋದದ್ದು....

ಮರೆತು ಹೋದದ್ದು....
‘ ನಿಮ್ಮ ಭಾಷಣದ 50 ನಿಮಿಷದ ರೆಕಾರ್ಡಿಂಗ್ ನನ್ನಲ್ಲಿದೆ’ ಎಂದು ಸ್ನೇಹಿತರಾದ ಐವನ್ ಡಿಸಿಲ್ವ ಅವರು ಹೇಳಿದಾಗಲೇ ಮಂಗಳೂರಿನಲ್ಲಿ ನಡೆದ ಜನನುಡಿಯ ಗೋಷ್ಠಿಯಲ್ಲಿ ನಾನು ಜಾಸ್ತಿ ಮಾತನಾಡಿದ್ದೇನೆ ಎಂದು ಗೊತ್ತಾಗಿದ್ದು. ನೀಲಾ ಅವರ ಪ್ರಾಸ್ತವಿಕ ಭಾಷಣ ಮತ್ತು ಕವಿಗೋಷ್ಠಿಯೊಂದನ್ನು ಹೊರತುಪಡಿ ಎರಡು ದಿನಗಳಲ್ಲಿ ಬಹುತೇಕ ಎಲ್ಲರ ಭಾಷಣಗಳನ್ನು ಕೇಳಿದ್ದ ನಾನು, ಸೇಡು ತೀರಿಸಿಕೊಳ್ಳಲು ನನಗರಿವಿಲ್ಲದಂತೆ ಇಷ್ಟೊಂದು ದೀರ್ಘವಾಗಿ ಮಾತನಾಡಿರಬಹುದು. ಕ್ಷಮೆ ಇರಲಿ.
ಇಷ್ಟುದ್ದ ಮಾತನಾಡಿದರೂ ಹೇಳಬೇಕಾದ ಕೆಲವು ಮುಖ್ಯ ವಿಚಾರಗಳನ್ನು ಹೇಳಿಲ್ಲ ಮತ್ತು ಹೇಳಿದ ವಿಚಾರಗಳನ್ನು ಕೂಡಾ ಸ್ಪಷ್ಟಪಡಿಸಿಲ್ಲ ಎಂದು ನನಗನಿಸಿದೆ. ಆ ಬಗ್ಗೆ ಮುಂದೆ ಚರ್ಚಿಸುವ. ಆದರೆ ಮುಖ್ಯವಾಗಿ ಜನನುಡಿಯನ್ನು ಯಶಸ್ವಿಗೊಳಿಸಲು ಹಗಲು ರಾತ್ರಿ ಶ್ರಮಿಸಿದ್ದ ಮುನೀರ್ ಮತ್ತು ಅವರ ಸಂಗಾತಿಗಳನ್ನು ನಾನು ನೆನೆಸಿಕೊಳ್ಳಬೇಕಿತ್ತು. ಆ ಲೋಪ ನನ್ನಿಂದಾಗಿದೆ. ಕೊರತೆಗಳ ಪಟ್ಟಿಯನ್ನು ಸಲೀಸಾಗಿ ಮಾಡಿಬಿಡಬಹುದು, ಸಂಘಟನೆಯ ಕಷ್ಟವನ್ನು ಅನುಭವಿಸಿದವರೇ ಬಲ್ಲರು. ಅದೂ ಮಂಗಳೂರಿನಲ್ಲಿ ಇಂತಹದ್ದೊಂದು ಕಾರ್ಯಕ್ರಮವೊಂದನ್ನು ಆಯೋಜಿಸುವುದೆಂದರೆ ಅಪ್ಪಳಿಸಿ ಬರುವ ಕಡಲಿನ ತೆರೆಗಳ ಎದುರು ಈಜುವುದೆಂದೇ ಅರ್ಥ.
ಇಷ್ಟೊಂದು ದಿನಗಳ ದಣಿವರಿಯದ ಕೆಲಸದ ನಂತರವೂ ಮುನೀರ್ ಮತ್ತು ಗೆಳೆಯರ ಮುಖಗಳಲ್ಲಿ ನನಗೆ ಸುಸ್ತು ಕಾಣಿಸಲಿಲ್ಲ. ಭಾನುವಾರ ರಾತ್ರಿ ಎಲ್ಲ ಮುಗಿದು ಊಟಕ್ಕೆ ಹೊರಟಾಗಲೂ ಕಿರಿಯರಾದ ಜೀವನ್ ಕುಮಾರ್ ಕುತ್ಯಾಡಿ ಮತ್ತು ಈರ್ಷಾದ್ ನಾನು ಆಡಿದ ಮಾತುಗಳ ಬಗ್ಗೆ ಸ್ಪಷ್ಟೀಕರಣ ಕೇಳಿ ನನ್ನನ್ನು ಹಿಡಿದು ನಿಲ್ಲಿಸಿದ್ದರು. ನಗು, ತಮಾಷೆ, ತುಂಟಾಟ ಎಲ್ಲವೂ ಮುಂದುವರಿದಿತ್ತು. ಮುನೀರ್ ಸೇರಿದಂತೆ ಎಲ್ಲರೂ ಕನಿಷ್ಠ 3-4 ಕಿಲೋ ತೂಕ ಕಳೆದುಕೊಂಡಿರಬೇಕು. ಆದರೆ ಅವರ ಉತ್ಸಾಹ ಕುಂದಿರಲಿಲ್ಲ. ನಾನಂತೂ ಇವರೆಲ್ಲರ ಜತೆ ಸೇರಿ ಹತ್ತು ವರ್ಷ ಕಿರಿಯವನಾಗಿಬಿಟ್ಟೆ, ಬದುಕಿನ ದಾರಿಯಲ್ಲಿ ಭರವಸೆಯ ಬೆಳಕನ್ನು ಕಂಡೆ. ವೃತ್ತಿ, ವೈಯಕ್ತಿಕ ಬದುಕು ಮತ್ತು ಆರೋಗ್ಯದ ಬಗ್ಗೆ ಕಾಳಜಿ ಇರಲಿ ಎಂದಷ್ಟೇ ಈ ಕಿರಿಯ ಗೆಳೆಯರಿಗೆ ಹೇಳಬಲ್ಲೆ. ಕಷ್ಟವನ್ನು ಹಂಚಿಕೊಳ್ಳಲು ನಿಮ್ಮ ಜತೆಯಲ್ಲಿ ಇರುತ್ತೇನೆ.

ಈ ಗೆಳೆಯನದ್ದು ಖಂಡಿತ ಸಾಯುವ ವಯಸ್ಸಲ್ಲ...

ಈ ಗೆಳೆಯನದ್ದು ಖಂಡಿತ ಸಾಯುವ ವಯಸ್ಸಲ್ಲ...
ಸಾವಿಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದು ನಿಜವಾದರೂ ಉಜ್ವಲ ಭವಿಷ್ಯದ
ಟೈಮ್ಸ್ ಆಫ್ ಇಂಡಿಯಾಕ್ಕೆ ಸೇರಿದಂದಿನಿಂದ ಶಿವಕುಮಾರ್ ಅವರ ವರದಿಗಳನ್ನು ಗಮನಿಸುತ್ತಿದ್ದೆ. ಕನ್ನಡದ ಸೆನ್ಸಿಬಿಲಿಟಿಯನ್ನಿಟ್ಟುಕೊಂಡು ಬರೆಯಬಲ್ಲ ಕೆಲವೇ ಕೆಲವು ಇಂಗ್ಲೀಷ್ ಪತ್ರಕರ್ತರಲ್ಲಿ ಶಿವಕುಮಾರ್ ಒಬ್ಬರು. ಆಗೊಮ್ಮೆ ಈಗೊಮ್ಮೆ ಈ ಯುವಪತ್ರಕರ್ತನ ಜತೆ ಮಾತನಾಡಿದ್ದರೂ ದೀರ್ಘವಾಗಿ ಮಾತನಾಡಲಿಕ್ಕಾಗಿರಲಿಲ್ಲ. ಶಿವಕುಮಾರ್ ಅವರ ಪ್ರಾಮಾಣಿಕತೆ, ವೃತ್ತಿನಿಷ್ಠೆ ಮತ್ತು ಕನ್ನಡ ಪ್ರೇಮದ ಬಗ್ಗೆ ನನ್ನ ಅನೇಕ ಪತ್ರಕರ್ತ ಮಿತ್ರರ ಬಾಯಿಯಿಂದ ಕೇಳಿದ್ದೆ, ಸೂಕ್ಷ್ಮವಾಗಿ ನಾನೂ ಗಮನಿಸಿದ್ದೆ.
ಶಿವಕುಮಾರ್ ಎಷ್ಟೊಂದು ವೃತ್ತಿನಿಷ್ಠ ಪತ್ರಕರ್ತನೆಂದರೆ ಕಳೆದ ಭಾನುವಾರದ ರಜಾದಿನ ಬಹುಪಾಲು ಪತ್ರಕರ್ತರು ಗೋವಾ ಪ್ರವಾಸಕ್ಕೆ ಹೋಗಿದ್ದಾಗ, ಇವರು ಮಾತ್ರ ಗೆಳೆಯ ನಿರಂಜನ್ ಜತೆ ಕತ್ತಿ ಅವರ ಹತ್ತಿ ಗಿರಣಿ ನೋಡಲು ಹೋಗಿದ್ದರು. ಅಸ್ವಸ್ಥರಾಗಿದ್ದರೂ ಭಾನುವಾರ ರಾತ್ರಿ ಆಸ್ಪತ್ರೆಯಲ್ಲಿ ಉಳಿಯದೆ ಇರಲು ಕೂಡಾ ರಾತ್ರಿ ಏನನ್ನೋ ಬರೆದು ಮುಗಿಸುವ ಉದ್ದೇಶ ಅವರಿಗಿದ್ದಿರಬಹುದು.
ನಿರೀಕ್ಷೆ ಹುಟ್ಟಿಸಿದ್ದ ಎಳೆಯ ಜೀವವೊಂದು ನಡುಹಾದಿಯಲ್ಲಿಯೇ ಪಯಣ ಮುಗಿಸಿದಾಗ ಮನಸ್ಸು ತಳಮಳಕ್ಕೀಡಾಗುತ್ತದೆ. 39ರ ಹರಯದ ಪತ್ರಕರ್ತ ಗೆಳೆಯ ಎನ್.ಡಿ.ಶಿವಕುಮಾರ್ ಅವರದ್ದು ಖಂಡಿತ ಸಾಯುವ ವಯಸ್ಸು ಅಲ್ಲ.
ಬೆಳಗಾವಿ ವಿಧಾನಮಂಡಲದ ಅಧಿವೇಶನಕ್ಕೆಂದು ಬಂದ ಪತ್ರಕರ್ತರಿಗಾಗಿ ಸಚಿವ ಶಿವರಾಜ್ ತಂಗಡಗಿ ಅವರು ಕಳೆದ ಗುರುವಾರ ರಾತ್ರಿ ನೀಡಿದ್ದ ಔತಣಕೂಟದಲ್ಲಿ ಕೊನೆಯ ಬಾರಿ ಶಿವಕುಮಾರ್ ಅವರನ್ನು ಭೇಟಿಯಾಗಿದ್ದೆ. ಎಲ್ಲ ಪತ್ರಕರ್ತರನ್ನು ಭೇಟಿಮಾಡಲೆಂದು ಹೋಗಿದ್ದ ನಾನು ಶಿವಕುಮಾರ್ ಜತೆ ಮಾತನಾಡುತ್ತಾ ಅಲ್ಲಿಯೇ ಸುಮಾರು ಎರಡು ಗಂಟೆ ಕಾಲ ಕೂತು ಬಿಟ್ಟಿದ್ದೆ. ವಿಜಯಕರ್ನಾಟಕ ಪತ್ರಿಕೆಯ ಸುಭಾಷ್ ಹೂಗಾರ್,ಬೆಂಗಳೂರು ಮಿರರ್ ನ ನಿರಂಜನ್ ಮತ್ತಿತರ ಗೆಳೆಯರು ಜತೆಗಿದ್ದರು.
ಇತ್ತೀಚೆಗೆ ಶಿವಕುಮಾರ್ ಆಮ್ ಆದ್ಮಿ ಪಕ್ಷದ ಯೋಗೇಂದ್ರ ಯಾದವ್ ಅವರದ್ದೊಂದು ದೀರ್ಘವಾದ ಸಂದರ್ಶನ ಮಾಡಿದ್ದರು. ನಾನು ಅದರ ಬಗ್ಗೆ ಮೆಚ್ಚುಗೆ ಸೂಚಿಸಿದ ಕೂಡಲೇ ಅವರು ದೆಹಲಿ ವಿಧಾನಸಭಾ ಚುನಾವಣೆಯ ಬಗ್ಗೆ ಚರ್ಚೆಗಿಳಿದರು. ಅಲ್ಲಿಂದ ಅದು ಕಾಂಗ್ರೆಸ್, ಬಿಜೆಪಿ, ಮೋದಿ, ಸಿದ್ದರಾಮಯ್ಯನವರ ಸರ್ಕಾರ, ಆಸ್ಕರ್ ಫರ್ನಾಂಡಿಸ್, ವೀರಪ್ಪ ಮೊಯಿಲಿ... ಹೀಗೆ ಎಲ್ಲೆಲ್ಲೋ ಹರಿದಾಡಿತು. ಅವರಲ್ಲಿ ಕೇಳುವ ಉತ್ಸಾಹ ಕಂಡು ನಾನೇ ಹೆಚ್ಚು ಮಾತನಾಡಿದ್ದೆ. ಈ ವಯಸ್ಸಿನ ಪತ್ರಕರ್ತರು ನನ್ನನ್ನು ಈ ರೀತಿ ಪ್ರೊವೊಕ್ ಮಾಡಿದ್ದು ಇತ್ತೀಚೆಗೆ ಕಡಿಮೆ.
ಅಲ್ಲಿಂದ ಮಾತು ಪತ್ರಕರ್ತರ ಕುಟುಂಬದ ಕಡೆ ತಿರುಗಿತು. ‘ಒಬ್ಬ ನಿಜವಾದ ಕಾರ್ಯನಿರತ ಪತ್ರಕರ್ತ ಮೊದಲು ಕಳೆದುಕೊಳ್ಳುವುದು ಸುಂದರ ಸಂಜೆಗಳನ್ನು. ಇದು ಹೆಚ್ಚು ಅನುಭವಕ್ಕೆ ಬರುವುದು ಮದುವೆಯಾದ ಮೇಲೆ. ಸಾಮಾನ್ಯವಾಗಿ ಹೆಂಡತಿಯರು ಏನನ್ನೂ ಬಯಸದೆ ಇದ್ದರೂ ಆಗಾಗ ಸಂಜೆಹೊತ್ತು ಗಂಡನ ಜತೆ ಹೊರಗೆ ಸುತ್ತಾಡಿ ಕಾಲಕಳೆಯುವ ಸಣ್ಣ ಬಯಕೆಯನ್ನು ಹೊಂದಿರುತ್ತಾರೆ. ಆದರೆ ಒಬ್ಬ ಪತ್ರಕರ್ತನಿಗೆ ಈ ಸಣ್ಣ ಬೇಡಿಕೆಯನ್ನೂ ಈಡೇರಿಸಲಾಗದೆ ಜೀವಮಾನವಿಡೀ ಒದ್ದಾಡುತ್ತಾ ಇರಬೇಕಾಗುತ್ತದೆ. ವಾರದ ರಜೆಯ ದಿನವೂ ಸುಮ್ಮನೆ ಮಲಗಿಕೊಂಡು ಬಿಡುವ ಎಂದಾಗುತ್ತದೆ....’’ ಎಂದೆಲ್ಲ ನನ್ನ ಅನುಭವವನ್ನು ಹೇಳುತ್ತಾ ಹೋದೆ.
ಅದನ್ನು ಕೇಳುತ್ತಿದ್ದ ಶಿವಕುಮಾರ್ ಭಾವುಕರಾಗಿಬಿಟ್ಟಿದ್ದರು. ‘ನನ್ನ ಮನೆಯಲ್ಲಿಯೂ ಇದೇ ದೂರು ಸಾರ್. ಸಂಜೆ ಐದರಿಂದ ಒಂಭತ್ತು ಗಂಟೆ ವರೆಗೆ ನಮಗೆ ಕೆಲಸದ ಒತ್ತಡ ಹೆಚ್ಚು. ಮನೆಗೆ ಹೋಗಲು ಸಾಧ್ಯವೇ ಇಲ್ಲ. ನನ್ನ ಮಗಳಿಗೂ ಟೈಮ್ ಕೊಡಲಿಕ್ಕಾಗುವುದಿಲ್ಲ...’ ಎಂದು ಹೇಳಿ ತಮ್ಮ ಕುಟುಂಬದ ಬಗ್ಗೆ ಮಾತನಾಡತೊಡಗಿದ್ದರು.
ಹೆಂಡತಿ ಮತ್ತು ಮಗಳು ಇಬ್ಬರನ್ನೂ ಮೆಚ್ಚಿಸಲು ಅವರು ಕಂಡುಕೊಂಡ ಉಪಾಯವೊಂದನ್ನು ನಮ್ಮಲ್ಲಿ ಹಂಚಿಕೊಂಡಿದ್ದರು. “ ಅಪರೂಪಕ್ಕೆ ಎಲ್ಲಿಯಾದರೂ ಮಾಲ್ ಗೆ ಹೋದರೆ ಹೆಂಡತಿಯನ್ನು ಖರೀದಿಗೆ ಮುಕ್ತವಾಗಿ ಬಿಟ್ಟುಬಿಟ್ಟು ನಾನು ಹೊರಗೆ ಮಗಳ ಜತೆ ಆಟವಾಡುತ್ತಾ ಇರುತ್ತಿದ್ದೆ. ಹೆಂಗಸರಿಗೆ ಬೇಕಾದುದನ್ನು ಖರೀದಿಸಲು ಬಿಟ್ಟುಬಿಟ್ಟರೆ ಅವರು ಖುಷಿ, ಮಕ್ಕಳಿಗೆ ಆಟವಾಡಲು ಅಪರೂಪವಾಗಿ ಅಪ್ಪ ಸಿಕ್ಕಬಿಟ್ಟರೆ ಅವರೂ ಖುಷಿ. ಇದೊಂದು ಒಳ್ಳೆಯ ಉಪಾಯ ಸಾರ್’’ ಎಂದು ಕೈಯಲ್ಲಿದ್ದ ಬೀರ್ ಗ್ಲಾಸಿನಿಂದ ಒಂದು ಸಿಪ್ ಚಪ್ಪರಿಸಿ ತುಂಟತನದಿಂದ ನಕ್ಕಿದ್ದರು. ಅವರ ಮಾತಿನುದ್ದಕ್ಕೂ ಜಿನುಗುತ್ತಿದ್ದುದು ಹೆಂಡತಿ ಮತ್ತು ಮಗಳ ಮೇಲಿನ ಪ್ರೀತಿ ಮಾತ್ರ.
ಶಿವಕುಮಾರ್ ಸಾವಿನ ಸುದ್ದಿಯನ್ನು ಸಹೋದ್ಯೋಗಿ ಮುರಳೀಧರ್ ಹೇಳಿದಾಗ ನಾನು ಮಂಗಳೂರಿನಿಂದ ಬೆಳಗಾವಿಗೆ ಬರುವ ನಡುಹಾದಿಯಲ್ಲಿದ್ದೆ. ಆಗ ತಕ್ಷಣ ನನಗೆ ನೆನಪಿಗೆ ಬಂದದ್ದು ಮೂರು ದಿನಗಳ ಹಿಂದೆಯಷ್ಟೇ ಶಿವಕುಮಾರ್ ಜತೆ ಕಳೆದ ಕ್ಷಣಗಳು. ಅವರು ಖಾಲಿ ಮಾಡಿದ ಸ್ಥಾನವನ್ನು ಪತ್ರಿಕೋದ್ಯಮದಲ್ಲಿ ಇನ್ನೊಬ್ಬ ಪ್ರತಿಭಾವಂತ ಪತ್ರಕರ್ತ ತುಂಬಲೂ ಬಹುದು. ಆದರೆ ಅವರ ಮಗಳ ಪುಟ್ಟ ಹೃದಯದಲ್ಲಿ ಖಾಲಿಯಾಗಿರುವ ಪಪ್ಪನ ಸ್ಥಾನವನ್ನು ಯಾರಿಂದ ತುಂಬಲು ಸಾಧ್ಯ? ನಾಳೆ ಆ ಪುಟ್ಟ ಮಗು ಪಪ್ಪ ಬೇಕೆಂದಾಗ ಸಂಗಾತಿಯನ್ನು ಕಳೆದುಕೊಂಡ ನೋವನ್ನು ನುಂಗಿಕೊಂಡು ಮಗಳನ್ನು ಸಂತೈಸಬೇಕಾದ ಶಿವಕುಮಾರ್ ಪತ್ನಿಯನ್ನು ನೆನೆದಾಗ ಕರುಳು ಚುರುಕೆನ್ನುತ್ತದೆ. ಸಾವು ಕ್ರೂರ ಎನಿಸುವುದು ಸತ್ತವರಿಗಿಂತಲೂ ಹೆಚ್ಚಾಗಿ ಅವರನ್ನು ನಂಬಿದವರ ಬದುಕಿನ ದು:ಖವನ್ನು ಕಂಡಾಗ.
ಕೊನೆಗೂ ಶಿವಕುಮಾರ್ ಬಗ್ಗೆ ನನ್ನದೊಂದು ಸಣ್ಣ ದೂರಿದೆ. ಅವರ ಸಾವಿನ ನಂತರ ಗೆಳೆಯರಿಂದ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಒಂದಷ್ಟು ವಿವರ ತಿಳಿದುಕೊಂಡೆ. ಇಷ್ಟೆಲ್ಲ ಬುದ್ದಿವಂತರಾದ ಶಿವಕುಮಾರ್ ತನ್ನ ವೃತ್ತಿಯ ಜತೆಯಲ್ಲಿ ಆರೋಗ್ಯದ ಕಡೆಗೂ ಒಂದಿಷ್ಟು ಗಮನಕೊಟ್ಟಿದ್ದರೆ ಅವರ ಜತೆ ಇನ್ನು ಹಲವು ಪಾರ್ಟಿ ಮಾಡಬಹುದಿತ್ತು. ಗುರುವಾರ ರಾತ್ರಿ ಬೆಳಗಾವಿಯ ಸಂಕಮ್ ಹೊಟೇಲ್ ನ ಲಾನ್ ನಲ್ಲಿ ಅವರಿಗೆ ಗುಡ್ ನೈಟ್ ಹೇಳಿ ಹೊರಟಾಗ ‘ಮತ್ತೆ ಸಿಗುವ ಸಾರ್ ‘ ಎಂದಿದ್ದರು. ಈ ಯುವ ಪತ್ರಕರ್ತನ ಜತೆ ಮಾತನಾಡಬೇಕೆಂಬ ಆಸೆಯೂ ನನಗಿತ್ತು.

Monday, December 15, 2014

ಜನನುಡಿ 2014 ಮಂಗಳೂರು








'ಸಮಕಾಲೀನ ಸವಾಲುಗಳು-ಐಕ್ಯತೆಯ ಅಗತ್ಯತೆ' ವಿಷಯ ಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಮಾತನಾಡುತ್ತಿರುವುದು. ವಿಜಯ ಕರ್ನಾಟಕ ಪತ್ರಿಕೆ ಅಂಕಣಕಾರರಾದ ಡಿ.ಉಮಾಪತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎಲ್.ಹನುಮಂತಯ್ಯ ಹಾಗೂ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿರುವುದು.

Monday, November 24, 2014

ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರ ‘’ನೂರಾರು ಕವನಗಳು’’

‘’ ನನಗೆ ಮುತ್ತುಕೊಟ್ಟ ಮೊಟ್ಟ ಮೊದಲ ಹುಡುಗಿಗೆ
ಮತ್ತು
ಮುತ್ತು ಕೊಡುವ ಕಟ್ಟ ಕಡೆಯ ಹುಡುಗಿಗೆ
ಅರ್ಪಣೆ ಈ ಹಾರು ಪದ್ಯಗಳು’’
- ಹೀಗೆಂದು ಹಿರಿಯ ಕವಿ ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ತಮ್ಮ ‘’ನೂರಾರು ಕವನಗಳು’’ ಎಂಬ ಕವನ ಸಂಕಲನವನ್ನು ಅರ್ಪಣೆ ಮಾಡಿ ಬರೆದಿದ್ದರು. ಇಪ್ಪತ್ತೈದು ವರ್ಷಗಳ ಹಿಂದೆ ನಾನು ಧಾರವಾಡದಲ್ಲಿದ್ದಾಗ ಈ ಕವನ ಸಂಕಲನವನ್ನು ನನಗೂ ಕೊಟ್ಟಿದ್ದರು. ಆಗಷ್ಟೇ ಮದುವೆಯಾಗಿದ್ದ ನಾನು ಅರ್ಪಣೆಯ ಸಾಲುಗಳನ್ನು ಓದಿ ‘’’ಇವರು ಮೊದಲ ಮುತ್ತು ಕೊಟ್ಟ ಹುಡುಗಿಯನ್ನು ನೆನೆಸಿಕೊಳ್ಳುವ ಜತೆಯಲ್ಲಿ ಕೊನೆಯಲ್ಲಿ ಮುತ್ತುಕೊಡುವ ಹುಡುಗಿಯನ್ನೂ ಬುಕ್ ಮಾಡಿಕೊಂಡಿದ್ದರಲ್ವಾ? ಮೇಸ್ಟ್ರು ಭಲೇ ರಸಿಕರು’’ ಎಂದು ಮನಸ್ಸಿನಲ್ಲಿಯೇ ಅಂದು ಕೊಂಡು ಸುಮ್ಮಾನಾಗಿದ್ದೆ.ಕೆಲವು ತಿಂಗಳುಗಳ ನಂತರ ಪಟ್ಟಣಶೆಟ್ಟಿ ದಂಪತಿಗಳ ಜತೆ ಗದಗದಲ್ಲಿ ಸಾಹಿತ್ಯ ಕಾರ್ಯಕ್ರಮಕ್ಕೆ ಹೋಗಿದ್ದೆ. ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದವರು ನಾನು ವೈಯಕ್ತಿಕವಾಗಿ ಬಹಳ ಗೌರವಿಸುವ ಗದಗ ಡಂಬಳ ಮಠದ ಸ್ವಾಮೀಜಿಗಳು.
ಅವರು ಆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ‘’ ಪಟ್ಟಣಶೆಟ್ಟಿಯವರ ಕವನಗಳು ಮಾತ್ರವಲ್ಲ, ಅರ್ಪಣೆಯ ಸಾಲುಗಳು ಕೂಡಾ ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ವಾ? ಈ ಮೂಲಕ ಎಷ್ಟು ಚೆನ್ನಾಗಿ ಅವರು ತನ್ನ ಮಗಳು ಮತ್ತು ಮೊಮ್ಮಗಳನ್ನು ನೆನೆಸಿಕೊಂಡಿದ್ದಾರೆ’’ ಎಂದು ಹೇಳಿಬಿಟ್ಟರು. ಸ್ವಾಮೀಜಿ ಮಾತು ಕೇಳಿ ಅಲ್ಲಿಯೇ ಎದುರಿಗೆ ಕೂತಿದ್ದ ನಾನು ದಂಗಾಗಿ ಹೋಗಿದ್ದೆ. ನನ್ನ ದುಷ್ಟ ಆಲೋಚನಾ ಲಹರಿ ಬಗ್ಗೆ ನನಗೆ ಮುಖ ಮುಚ್ಚಿಕೊಳ್ಳಬೇಕೆನಿಸುವಷ್ಟು ನಾಚಿಕೆಯಾಗಿಬಿಟ್ಟಿತ್ತು.
- ‘’ಕಿಸ್ ಆಪ್ ಲವ್’’ ವಿವಾದವನ್ನು ವಿರೋಧಿಸುವವರು ಆ ಕಾರ್ಯಕ್ರಮವನ್ನು ತಮಗೆ ತೋಚಿದಂತೆ ಕಲ್ಪಿಸಿಕೊಂಡು ಪ್ರತಿಕ್ರಿಯಿಸಿ ಸುಖ ಪಡುತ್ತಿರುವುದನ್ನು ಕಂಡಾಗ ಈ ಹಳೆಯ ಘಟನೆ ನೆನಪಾಯಿತು.

Tuesday, November 18, 2014

ಕರ್ನಾಟಕ ಪತ್ರಕರ್ತರ ಅಧ್ಯಯನ ಕೇಂದ್ರ

 ಕರ್ನಾಟಕ ಪತ್ರಕರ್ತರ ಅಧ್ಯಯನ ಕೇಂದ್ರದಿಂದ ಅಭಿವೃದ್ಧಿ, ಸಾಮಾಜಿಕ ಹೊಣೆಗಾರಿಕೆ ಮತ್ತು ಮಾಧ್ಯಮ ಕುರಿತು ಅಧ್ಯಯನ ಶಿಬಿರ.
ಸಾಮಾಜಿಕ ಹೊಣೆಗಾರಿಕೆ ಮತ್ತು ಮಾಧ್ಯಮದ ಕುರಿತು ಮಾತನಾಡುತ್ತಿರುವುದು


ಶಿಬಿರದ ಕೊನೆಯಲ್ಲಿ ಹಾಡು

Saturday, November 15, 2014

ಮೂಡಬಿದಿರೆಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ಕುರಿತು..

ತಿಂಗಳ ಹಿಂದೆ ಮೂಡಬಿದರೆಯಿಂದ ಮೋಹನ್ ಆಳ್ವ ಪೋನ್ ಮಾಡಿ ‘ನುಡಿಸಿರಿ’ಗೆ ಬರಬೇಕೆಂದು ಆಹ್ಹಾನಿಸಿದ್ದರು. ಇದು ಅವರು ನನಗೆ ಸತತವಾಗಿ ಮೂರನೇ ಬಾರಿ ನೀಡುತ್ತಿರುವ ಆಹ್ಹಾನ. ಕಳೆದ ಬಾರಿ ಮಂಗಳೂರಿನಲ್ಲಿ ನಡೆದ ‘ಜನನುಡಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಾನು ಆಳ್ವರ ಬಗ್ಗೆ ಅವರಿಗಿಷ್ಟವಾಗದ ಮಾತುಗಳನ್ನು ಆಡಿದ್ದೆ. ಹೀಗಿದ್ದರೂ ಅವರೇ ಈ ಬಾರಿ ಪೋನ್ ಮಾಡಿ ಆಹ್ಹಾನಿಸಿರುವುದರ ಉದ್ದೇಶ ಅವರ ವಿಶಾಲ ಹೃದಯವನ್ನು ಪರಿಚಯಿಸುವುದೇ? ಸಾಮ-ದಾನ-ಭೇದ-ದಂಡದ ತಂತ್ರವೇ? ಇಲ್ಲವೇ ನಮ್ಮ ಹುಡುಗರು ತಮಾಷೆ ಮಾಡುತ್ತಿರುವಂತೆ ‘ಮೂಡಬಿದರೆ ಜಿಲೇಬಿ’ ಬಗ್ಗೆ ಆಸೆ ಹುಟ್ಟಿಸಿ ನನ್ನ ಸಂಯಮವನ್ನು ಪರೀಕ್ಷಿಸುವುದೇ? ನನಗೆ ಗೊತ್ತಿಲ್ಲ. ಏನಿದ್ದರೂ ಅವರ ಸೌಜನ್ಯದ ನಡವಳಿಕೆಗೆ ಥ್ಯಾಂಕ್ಸ್ ಹೇಳಲೇ ಬೇಕು.
ಹಿರಿಯ ಕವಿ ಸಿದ್ದಲಿಂಗಯ್ಯ, ಸಮಾಜವಾದಿ ಚಿಂತಕ ನಟರಾಜ ಹುಳಿಯಾರ್, ಇಷ್ಟದ ಹಾಡುಗಾರ ಜನ್ನಿ ಮೊದಲಾದ ಸ್ನೇಹಿತರಿಗೆ ನುಡಿಸಿರಿಯಲ್ಲಿ ಭಾಗವಹಿಸುತ್ತಿರುವ ಸುದ್ದಿ ಗೊತ್ತಾಯಿತು. ಆ ರೀತಿ ಭಾಗವಹಿಸುವ ಪೂರ್ಣ ಸ್ವಾತಂತ್ಯ್ರ ಅವರಿಗಿದೆ. ಅದನ್ನು ಪ್ರಶ್ನಿಸಲು ನಾವು ಯಾರು? ಆದರೆ ಕರಾವಳಿಯಲ್ಲಿ ಬೆಳೆಯುತ್ತಿರುವ ಕೋಮುವಾದದ ಬಗ್ಗೆ ಚರ್ಚೆ ನಡೆದಾಗ ಅಲ್ಲಿನ ‘ಒಳಗಿರುವ’ ಜಾತ್ಯತೀತರನ್ನು, ‘ಹೊರಗಿರುವ’ ಜಾತ್ಯತೀತರು ಪ್ರಶ್ನಿಸುವುದು ಮಾತ್ರ ಅಲ್ಲ, ಗೇಲಿಯೂ ಮಾಡುತ್ತಿರುತ್ತಾರೆ. ‘ಏನ್ರಿ ನೀವೆಲ್ಲ ಇದ್ದೂ ದಕ್ಷಿಣ ಕನ್ನಡದಲ್ಲಿ ಈ ರೀತಿಯ ಕೋಮುವಾದಿ ಚಟುವಟಿಕೆ ಬೆಳೆಯುತ್ತಿದೆಯಲ್ಲಾ?’ ಎಂದು ನನ್ನನ್ನೇ ಅನೇಕ ‘ಹೊರಗಿನ’ ಜಾತ್ಯತೀತರು ಮೂದಲಿಸುವ ದನಿಯಲ್ಲಿ ಪ್ರಶ್ನಿಸಿದ್ದುಂಟು.
ಇನ್ನು ಮುಂದೆ ಈ ರೀತಿ ಪ್ರಶ್ನಿಸುವ ಅಧಿಕಾರವನ್ನು ನನ್ನ ಕೆಲವು ಸ್ನೇಹಿತರಾದರೂ ಕಳೆದುಕೊಂಡಿರುವುದರಿಂದ ಈ ಮೂದಲಿಕೆಯ ಹಿಂಸೆಯಾದರೂ ಒಂದಿಷ್ಟು ಕಡಿಮೆಯಾಗಬಹುದೆಂಬ ಸಣ್ಣ ಸಮಾಧಾನ ನನಗೆ. ಇದರ ಜತೆಯಲ್ಲಿಯೇ ಬರಿ ಕಣ್ಣಿಗೆ ಕಾಣುವ ಕೆಲವು ಸತ್ಯಗಳು ಒಳಗಣ್ಣು ಇರುವ ನಮ್ಮ ಸ್ನೇಹಿತರಿಗೆ ಕಾಣುತ್ತಿಲ್ಲವಲ್ಲ ಎಂಬ ಸಣ್ಣ ಬೇಸರವೂ ಇದೆ. ಕೋಮುವಾದದ ದಾಳಿಯಲ್ಲಿ ಸೇನಾಪತಿಗಳು ತೆರೆಯಮರೆಯಲ್ಲಿರುತ್ತಾರೆ, ಅವರು ತೆರೆಯ ಮುಂದೆ ಬರುವಾಗ ಸಮಾಜ ಸುಧಾರಕರು, ಸಾಹಿತ್ಯ ಪ್ರೇಮಿಗಳು, ಆಧ್ಯಾತ್ಮಿಕ ಪುರುಷರು, ನಡೆದಾಡುವ ದೇವರುಗಳು ಆಗಿರುತ್ತಾರೆ.
ಇವರೇ ತೆರೆಯ ಹಿಂದೆ ಹೋಗಿ ನಿಂತು ಅಮಾಯಕ ಬಡ, ಹಿಂದುಳಿದ, ದಲಿತ ಯುವಕರನ್ನು ಕಾಲಾಳುಗಳಾಗಿ ಬಳಸಿ ಯುದ್ಧಕ್ಕೆ ದೂಡುತ್ತಾರೆ. ಸಾವು-ನೋವು ಅವರಿಗೆ, ಯುದ್ದದ ಗೆಲುವಿನ ಲಾಭ ಇವರಿಗೆ. ಕೋಮುವಾದದ ಈ ಜನಪ್ರಿಯ ಮೊಡೆಸ್ ಅಪರೆಂಡಿಯನ್ನು ನಮ್ಮಲ್ಲಿ ಅನೇಕರಿಗೆ ಇನ್ನೂ ಗೊತ್ತಾಗುತ್ತಿಲ್ಲವಲ್ಲಾ? ಇಲ್ಲ ಗೊತ್ತಿದ್ದೂ ಈ ರೀತಿ ಮಾಡುತ್ತಿದ್ದಾರೆಯೇ? ಕೋಮುವಾದದ ಮೂಲೋತ್ಪಾಟನೆಗೆ ಬದ್ಧರೆಂದು ಹೇಳಿಕೊಳ್ಳುವವರೆಲ್ಲರೂ ಮೊದಲು ತೆರೆಯಮರೆಯ ಮುಖಗಳನ್ನು ಅನಾವರಣಗೊಳಿಸಬೇಕೇ ವಿನ? ಬೀದಿಯಲ್ಲಿ ಬಡಿದಾಡುತ್ತಿರುವವರನ್ನು ದೂರುತ್ತಾ ಕೂರುವುದಲ್ಲ.
ಇಷ್ಟೆಲ್ಲ ಯಾಕೆ ಹೇಳಬೇಕಾಯಿತೆಂದರೆ ಮೂಡಬಿದರೆಗೆ ನಾನು ನನ್ನ ಅನೇಕ ಸ್ನೇಹಿತರಂತೆ ‘ಹೊರಗಿನವ’ನಲ್ಲ, ‘ಒಳಗಿನವ’. ನನ್ನೂರು ಮಟ್ಟು, ಮೂಲ್ಕಿ-ಮೂಡಬಿದರೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿರುವ ಒಂದು ಸಣ್ಣ ಕುಗ್ರಾಮ. ಈ ಕಾರಣದಿಂದಾಗಿಯೇ ಮೂಡಬಿದರೆಯ ರಾಜಕೀಯ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳು ಬಹುಷ: ಸಿದ್ದಲಿಂಗಯ್ಯ, ಹುಳಿಯಾರ್, ಜನ್ನಿ ಮೊದಲಾದ ಸ್ನೇಹಿತರಿಗಿಂತ ನನಗೆ ಸ್ವಲ್ಪ ಹೆಚ್ಚು ಗೊತ್ತು. ಇಂತಹ ವಿಷಯಗಳಲ್ಲಿ ಅಜ್ಞಾನಿಯಾಗಿರುವುದೇ ಒಳ್ಳೆಯದು ಎಂದು ಎಷ್ಟೋ ಬಾರಿ ನನಗನಿಸಿದೆ. ಹಾಳು ಜ್ಞಾನ ಎನ್ನುವುದು ಶಾಪ, ನಿದ್ದೆಗೆಡಿಸುತ್ತಾ ಇರುತ್ತದೆ.

Monday, October 6, 2014

ಡಿ.ಉಮಾಪತಿ ಅವರ ಕುರಿತು ಒಂದಿಷ್ಟು..

ಅತೀವವಾದ ಸಂಕೋಚ ಮತ್ತು ಹಿಂಜರಿಕೆ, ತನಗಾದ ಅನ್ಯಾಯವನ್ನು ಪ್ರತಿಭಟಿಸಲಾಗದಷ್ಟೂ ಔದಾರ್ಯ, ವಿರೋಧಿಗಳ ಮನಸ್ಸನ್ನು ನೋಯಿಸಲು ಇಷ್ಟಪಡದಷ್ಟು ವಿನಯವಂತಿಕೆ ಮೊದಲಾದ ತಮ್ಮ ಸಹಜ ಸ್ವಭಾವಗಳನ್ನೆಲ್ಲ ಪಕ್ಕಕ್ಕಿಟ್ಟು ಉಮಾಪತಿಯವ
ರು ದಿಟ್ಟತನದಿಂದ ಬರೆಯುತ್ತಿರುವುದನ್ನು ಕಂಡು ಸ್ನೇಹಿತನಾದ ನನಗೆ ಉಕ್ಕಿ ಬರುತ್ತಿರುವ ಸಂತೋಷವನ್ನು ತಡೆದುಕೊಳ್ಳಲಿಕ್ಕಾಗದೆ ಈ ಎರಡು ಸಾಲುಗಳನ್ನು ಬರೆಯುತ್ತಿರುವೆ. ನಾನು ಮತ್ತು ಉಮಾಪತಿ ದೆಹಲಿಯಲ್ಲಿ ಒಂಭತ್ತು ವರ್ಷಗಳ ಕಾಲ ಹೆಚ್ಚು ಕಡಿಮೆ ಜತೆಜತೆಯಲ್ಲಿಯೇ ಕಳೆದವರು. ದೆಹಲಿ ಬದುಕಿನ ಏಕಾಂಗಿತನ, ವೃತ್ತಿ ಬದುಕಿನ ಸಂಕಟಗಳು, ಕೌಟುಂಬಿಕ ಬದುಕಿನ ತಾಪತ್ರಯಗಳನ್ನೆಲ್ಲ ಮುಚ್ಚಿಟ್ಟುಕೊಳ್ಳದೆ ಹಂಚಿಕೊಂಡು ಇದ್ದವರು.
ವೃತ್ತಿ ಬಗೆಗಿನ ಬದ್ದತೆ, ಸಮಾಜದ ಬಗೆಗಿನ ಕಾಳಜಿ, ಸರಳತೆ, ಪ್ರಾಮಾಣಿಕತೆಯಲ್ಲಿ ನಮಗಿಬ್ಬರಿಗೂ ಹೆಚ್ಚಿನ ವ್ಯತ್ಯಾಸವಿಲ್ಲದಿದ್ದರೂ, ಉಮಾಪತಿಯವರ ಕನ್ನಡ ಭಾಷೆಯ ಮೇಲಿನ ಹಿಡಿತ,ಕನ್ನಡ ಸಾಹಿತ್ಯವೂ ಸೇರಿದಂತೆ ಅವರ ಓದಿನ ಹರವು ಮತ್ತು ಗ್ರಹಣ ಶಕ್ತಿಗೆ ನಾನು ಸಾಟಿಯಲ್ಲ. ನ್ಯಾಯಾಲಯಗಳ ಕಲಾಪ ವರದಿಯಲ್ಲಿ ಬಹುಷ: ಕನ್ನಡದ ಮಟ್ಟಿಗೆ ಅವರೇ ನಂಬರ್ ಒನ್,ಟು, ತ್ರಿ ಎಲ್ಲ. ಇದು ಎಷ್ಟೋ ಬಾರಿ ನನ್ನಲ್ಲಿ ಸಣ್ಣ ಅಸೂಯೆಯನ್ನೂ ಹುಟ್ಟಿಸಿದ್ದಿದೆ. ಇದು ನಾನು ಹೆಚ್ಚು ಓದುವಂತೆ ಮತ್ತು ನನ್ನ ಗ್ರಹಣ ಶಕ್ತಿಯನ್ನು ಇನ್ನಷ್ಟು ಹರಿತಗೊಳಿಸಲು ಪ್ರಯತ್ನಿಸುವಂತೆ ಪ್ರೇರೇಪಿಸಿದೆ. ಇದರಿಂದ ವೃತ್ತಿಯಲ್ಲಿ ಮುಖ್ಯವಾಗಿ ದೆಹಲಿಯ ನನ್ನ ವೃತ್ತಿ ಜೀವನದಲ್ಲಿ ನಾನೊಂದಿಷ್ಟು ಸಾಧನೆ ಮಾಡಿದ್ದರೆ ಅದರಲ್ಲಿ ಉಮಾಪತಿಯವರ ಪರೋಕ್ಷ ಪಾಲಿದೆ.
ಆದರೆ ಉಮಾಪತಿಯವರು ವರದಿ ಮಾಡುವುದನ್ನು ಬಿಟ್ಟರೆ ಲೇಖನ-ಅಂಕಣಗಳ ಸ್ವತಂತ್ರ ಬರವಣಿಗೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿಲ್ಲ ಎನ್ನುವುದು ನನಗೆ ಅವರ ಬಗ್ಗೆ ಇದ್ದ ಏಕೈಕ ಅಸಮಾಧಾನವಾಗಿತ್ತು. ಕನ್ನಡ ಪ್ರಭವನ್ನು ತೊರೆದು ವಿಜಯಕರ್ನಾಟಕಕ್ಕೆ ಸೇರಿದ ನಂತರ ಇದ್ದಕ್ಕಿದ್ದ ಹಾಗೆ ಅವರು ಎಲ್ಲ ಕಡಿವಾಣಗಳನ್ನು ಕಿತ್ತೊಗೆದವರಂತೆ, ಮುಕ್ತವಾಗಿ, ದಿಟ್ಟತನದಿಂದ ಬರೆಯುತ್ತಿರುವುದು ಕಂಡು ಅವರ ಬಗೆಗಿನ ಸಣ್ಣ ಅಸಮಾಧಾನವೂ ತೊಲಗಿ ಪ್ರೀತಿ ಇಮ್ಮಡಿಯಾಗಿದೆ.
ಬಹಳ ದಿನಗಳಿಂದ ಇದನ್ನೆಲ್ಲ ಬರೆಯಬೇಕೆಂದುಕೊಂಡವನು ಇಂದು ವಿಜಯ ಕರ್ನಾಟಕದ ಅವರ ಅಂಕಣ ಓದಿದ ನಂತರ ಬರೆಯಲೇ ಬೇಕೆನಿಸಿತು. ನನ್ನ ಯುವ ಪತ್ರಕರ್ತ ಮಿತ್ರರು ಅನೇಕ ಬಾರಿ ‘ನಮಗೆಲ್ಲಿದ್ದಾರೆ ರೋಲ್ ಮಾಡೆಲ್’ಗಳು? ಎಂದು ನನ್ನನ್ನು ಅಣಕಿಸುತ್ತಿರುತ್ತಾರೆ. ಅವರಿಗೆ ನನ್ನ ಪ್ರಾಮಾಣಿಕ ಉತ್ತರ: ಡಿ.ಉಮಾಪತಿ.

Monday, September 22, 2014

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವೆಬ್ ಸೈಟ್, ಫೇಸ್ ಬುಕ್, ಟ್ವೀಟರ್ ಹಾಗೂ ಯೂಟೂಬ್ ಖಾತೆಗೆ ಅಧಿಕೃತ ಚಾಲನೆ

ಅಂತರ್ಜಾಲದ ಬಿಡುಗಡೆ ಉದ್ದೇಶ ಮತ್ತು ಅವುಗಳ ಬಳಕೆಯ ಕುರಿತು ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಹೇಳುತ್ತಿರುವುದು.

ಮುಖ್ಯಮಂತ್ರಿಯವರಿಂದ ಅಧಿಕೃತ  ಚಾಲನೆ. ವಾರ್ತಾ ಸಚಿವ ರೋಷನ್ ಬೇಗ್, ಮುಖ್ಯಮಂತ್ರಿಯವರ ಅಪರ ಮುಖ್ಯಕಾರ್ಯದರ್ಶಿ ನರಸಿಂಹರಾಜು, ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು, ನಾಡಗೌಡ ಮೊದಲಾದವರು ಹಾಜರು.

ಚಾಲನೆ ನೀಡಿದ ಕ್ಷಣ
ಅಂತರ್ಜಾಲದ ಕುರಿತು ವಿವರಣಿ ನೀಡುತ್ತಿರುವ ಸಾಮಾಜಿಕ ಜಾಲತಾಣದ ವಿಶೇಷ ಅಧಿಕಾರಿ ಶಿಶಿರ ರುದ್ರಪ್ಪ