Friday, May 3, 2013

ಜಾತ್ಯತೀತ ಜನತಾದಳ ಕೈಗೆ ಎಟುಕದಿರುವ `ಉತ್ತರ'

ತುಮಕೂರು: ತಮ್ಮದು ರಾಷ್ಟ್ರೀಯ ಪಕ್ಷ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಷ್ಟೇ ಹೇಳಿಕೊಂಡರೂ ಮೂಲತಃ ಜಾತ್ಯತೀತ ಜನತಾದಳ ಹಳೆ ಮೈಸೂರು ಭಾಗಕ್ಕೆ ಸೇರಿರುವ ಒಂದು ಪ್ರಾದೇಶಿಕ ಪಕ್ಷ. ಈ ಇಮೇಜನ್ನು ತೊಡೆದುಹಾಕಿ ಕನಿಷ್ಠ ರಾಜ್ಯಮಟ್ಟದ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಜೆಡಿ (ಎಸ್) ಅನ್ನು ಬೆಳೆಸಬೇಕೆಂಬ ಪ್ರಯತ್ನ ನಿರಂತರವಾಗಿ ನಡೆದಿದೆ. ಕಳೆದೆರಡು ಚುನಾವಣೆಗಳಲ್ಲಿ ಈ ಪ್ರಯತ್ನದಲ್ಲಿ ವಿಫಲವಾಗಿರುವ ಪಕ್ಷದ ನಾಯಕತ್ವ ವಹಿಸಿರುವ ದೇವೇಗೌಡರು ಮತ್ತು ಮಗ ಎಚ್.ಡಿ.ಕುಮಾರಸ್ವಾಮಿ ಈ ಬಾರಿ ಮತ್ತೆ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.
ಉತ್ತರ ಕರ್ನಾಟಕದ ಮತದಾರರು ಕೈಹಿಡಿದರೆ ಮಾತ್ರ ಈ ಕನಸು ನನಸಾಗಲು ಸಾಧ್ಯ ಎಂಬ ಸತ್ಯವನ್ನು ಚೆನ್ನಾಗಿಯೇ ಬಲ್ಲ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಡೆಬಿಡದೆ ಆ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ವಚನಭಂಗದಿಂದಾಗಿ ಹಿಡಿದ ಗ್ರಹಣದಿಂದ ಜೆಡಿ (ಎಸ್) ಇನ್ನೂ ಸಂಪೂರ್ಣವಾಗಿ ಬಿಡುಗಡೆ ಪಡೆದ ಹಾಗಿಲ್ಲ.
ಕೇವಲ 28 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾದ 2008ರ ವಿಧಾನಸಭಾ ಚುನಾವಣೆಯನ್ನು ಒಂದು ದುಃಸ್ವಪ್ನದಂತೆ ಮರೆತುಬಿಟ್ಟು 58 ಸ್ಥಾನಗಳ ಗೆಲುವಿಗೆ ಕಾರಣವಾದ 2004ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಬಹುದೆಂಬ ಕನಸನ್ನು ಜೆಡಿ (ಎಸ್) ಕಾಣುತ್ತಿದೆ.  2004ರ ಚುನಾವಣೆಯಲ್ಲಿ ರಾಜ್ಯಮಟ್ಟದ ಪ್ರಾದೇಶಿಕ ಪಕ್ಷವಾಗಿ ಬೆಳೆಯುವ ಸೂಚನೆಯನ್ನು ಜೆಡಿ(ಎಸ್) ನೀಡಿದ್ದು ನಿಜ. ಆ ಚುನಾವಣೆಯಲ್ಲಿ ಜೆಡಿ(ಎಸ್) ಪಕ್ಷದಿಂದ ಆರಿಸಿ ಬಂದಿರುವ 58 ಶಾಸಕರಲ್ಲಿ 20ಕ್ಕೂ ಹೆಚ್ಚು ಶಾಸಕರು ಉತ್ತರ ಕರ್ನಾಟಕಕ್ಕೆ ಸೇರಿರುವ  ಬೀದರ್, ಗುಲ್ಬರ್ಗ,ರಾಯಚೂರು,ಕೊಪ್ಪಳ,ಬಳ್ಳಾರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಸೇರಿದವರು.
ಗೆಲುವಿನ ಚೈತ್ರಯಾತ್ರೆ ಮುಂದುವರಿಯುವ ಎಲ್ಲ ಸಾಧ್ಯತೆಗಳಿದ್ದವು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳ ಅವಧಿ ರಾಜ್ಯದಲ್ಲಿ ಅವರ ಪರವಾದ ಸದ್ಭಾವನೆಯ ಅಲೆಯನ್ನು ಎಬ್ಬಿಸಿತ್ತು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎಚ್.ಡಿ.ದೇವೇಗೌಡರು ಗಳಿಸಲಾಗದ ಜನಪ್ರಿಯತೆಯನ್ನು ಕುಮಾರಸ್ವಾಮಿ ಅವರು  ಅಧಿಕಾರದ ಕಿರು ಅವಧಿಯಲ್ಲಿ ಉತ್ತರ ಕರ್ನಾಟಕದಲ್ಲಿ ಪಡೆದುಕೊಂಡಿದ್ದರು. ಆದರೆ, ವಚನಭಂಗದ ಬಿರುಗಾಳಿ ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು. ಜನಪ್ರಿಯತೆಯ ಜತೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದ ಸ್ಥಾನಗಳಲ್ಲಿ 30 ಸ್ಥಾನಗಳನ್ನು ಕೂಡಾ ಜೆಡಿ (ಎಸ್) ಕಳೆದುಕೊಳ್ಳಬೇಕಾಯಿತು.
2008ರ ಚುನಾವಣೆಯಲ್ಲಿ ಆಯ್ಕೆಯಾದ 28 ಶಾಸಕರಲ್ಲಿ 18 ಶಾಸಕರು ಹಳೆಮೈಸೂರು ಭಾಗಕ್ಕೆ ಸೇರಿರುವ ಹಾಸನ, ಮಂಡ್ಯ,ತುಮಕೂರು, ರಾಮನಗರ,ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸೇರಿದವರೆಂಬುದು ಗಮನಾರ್ಹ. ಈಗ ಮತ್ತೆ ಜೆಡಿ (ಎಸ್)ಗೆ ರಾಜ್ಯಮಟ್ಟದ ಪ್ರಾದೇಶಿಕ ಪಕ್ಷ ವರ್ಚಸ್ಸು ತಂದುಕೊಡುವ ಪ್ರಯತ್ನ ನಡೆದಿದೆಯಾದರೂ ಅವಕಾಶಗಳು ಕ್ಷೆಣವಾಗಿವೆ.
ಉತ್ತರ ಕರ್ನಾಟಕದ ಒಂದಷ್ಟು ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಪಕ್ಷದಲ್ಲಿಯೇ ಉಳಿದುಕೊಂಡವರು ವೈಯಕ್ತಿಕವಾದ ಆಡಳಿತವಿರೋಧಿ ಅಲೆ ಎದುರಿಸುತ್ತಿದ್ದಾರೆ. ಜೆಡಿ(ಎಸ್) ಶಾಸಕರಾಗಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಅರಬಾವಿ ಕ್ಷೇತ್ರಗಳ ಉಮೇಶ್ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ, ಕೊಪ್ಪಳ ಕ್ಷೇತ್ರದ ಕರಡಿ ಸಂಗಣ್ಣ, ದೇವದುರ್ಗ ಕ್ಷೇತ್ರದ ಶಿವನಗೌಡ ನಾಯಕ ಮೊದಲಾದವರು ಈಗ ಬಿಜೆಪಿ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿ (ಎಸ್) ಹಿನ್ನಡೆಗೆ ಇನ್ನೊಂದು ಪ್ರಮುಖ ಕಾರಣ, ಕರ್ನಾಟಕ ಜನತಾ ಪಕ್ಷ (ಕೆಜೆಪಿ). ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ವಿರೋಧಿಸುವವರು ಇಲ್ಲವೆ ಆ ಪಕ್ಷಗಳಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗದೆ ಇರುವವರಿಗೆ ಹಿಂದಿನ ಚುನಾವಣೆಗಳಲ್ಲಿ ಇದ್ದ ಆಯ್ಕೆ ಜೆಡಿ (ಎಸ್) ಮಾತ್ರ. ಈ ಬಾರಿ ಆ ಸ್ಥಾನವನ್ನು ಕೆಜೆಪಿ ಆಕ್ರಮಿಸಿಕೊಂಡಿದೆ.
ಉದಾಹರಣೆಗೆ 2004ರ ಚುನಾವಣೆಯಲ್ಲಿ ಗುಲ್ಬರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ವೈಜನಾಥ ಪಾಟೀಲ್, ಬಿ.ಆರ್.ಪಾಟೀಲ್ ಮತ್ತು ಎಂ.ವೈ.ಪಾಟೀಲ್ ಈ ಬಾರಿ ಕೆಜೆಪಿ ಅಭ್ಯರ್ಥಿಗಳು. ರಾಯಚೂರು ಜಿಲ್ಲೆಯ ಲಿಂಗಸಗೂರು, ರಾಯಚೂರು, ಸಿಂಧನೂರು ಮತ್ತು ಮಾನ್ವಿ, ಬೀದರ್‌ನ ಬಸವಕಲ್ಯಾಣ, ಗುಲ್ಬರ್ಗ ಜಿಲ್ಲೆಯ ಅಫ್ಜಲ್‌ಪುರ ಮತ್ತು ಅಳಂದ, ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರಗಳನ್ನು ಹೊರತುಪಡಿಸಿ ಹೈದರಾಬಾದ್ ಕರ್ನಾಟಕದ ಬೇರೆ ಕ್ಷೇತ್ರಗಳಲ್ಲಿ ಜೆಡಿ (ಎಸ್) ವಿರೋಧಿ ಅಭ್ಯರ್ಥಿಗಳಿಗೆ ಪೈಪೋಟಿ ಕೊಡುವ ಸ್ಥಿತಿಯಲ್ಲಿ ಇಲ್ಲ.
ಇದರಿಂದಾಗಿ ಜೆಡಿ (ಎಸ್) ತನ್ನ ಸಂಖ್ಯಾವೃದ್ಧಿಗಾಗಿ ಹಳೆಮೈಸೂರು ಭಾಗವನ್ನೇ ನೆಚ್ಚಿಕೊಳ್ಳಬೇಕಾಗಿ ಬಂದಿದೆ. ಈ ಭಾಗದಲ್ಲಿ ಜೆಡಿ (ಎಸ್)ನ ಸಾಂಪ್ರದಾಯಿಕ ನೆಲೆಗಳಿರುವ ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿಯೇ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹಾಸನದ ಮೂವರು ನಿಷ್ಠಾವಂತರಾದ ಸಿ.ಎಸ್.ಪುಟ್ಟೇಗೌಡ, ಎಚ್.ಎಂ.ವಿಶ್ವನಾಥ ಮತ್ತು ಜವರೇಗೌಡ ಪಕ್ಷ ತ್ಯಜಿಸಿದ್ದಾರೆ.
ಅವರಲ್ಲೊಬ್ಬರನ್ನು ಬಿಟ್ಟು ಉಳಿದಿಬ್ಬರು ಕ್ರಮವಾಗಿ ಕಾಂಗ್ರೆಸ್ ಮತ್ತು ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅವರು ಪಕ್ಷದ ವಿರುದ್ಧ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ನೆಲೆ ಪಡೆದುಕೊಳ್ಳುತ್ತಿರುವ ಕೆಜೆಪಿ,  ಕಾಂಗ್ರೆಸ್ ವಿರೋಧಿ ಮತಬುಟ್ಟಿಗೆ  ಕೈಹಾಕಲಿದೆ. ಇದರಿಂದಾಗಿ ತುರುವೆಕೆರೆ ಮತ್ತು ಗುಬ್ಬಿಯ ಹಾಲಿ ಶಾಸಕರು ಕೆಜೆಪಿಯಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ. ಮಧುಗಿರಿ ಕ್ಷೇತ್ರದ ಶಾಸಕಿಯಾಗಿದ್ದ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಪಲಾಯನ ಮಾಡಿರುವುದರಿಂದ ಆ ಕ್ಷೇತ್ರಕ್ಕೆ ಸ್ವಯಂನಿವೃತ್ತಿ ಪಡೆದಿರುವ ಅಧಿಕಾರಿ ವಿ.ವೀರಭದ್ರಯ್ಯ ಅವರನ್ನು ತರಾತುರಿಯಲ್ಲಿ ಕರೆತಂದು ಜೆಡಿ (ಎಸ್) ಕಣಕ್ಕಿಳಿಸಿದೆ.
ಕಳೆದೆರಡು ಚುನಾವಣೆಗಳಲ್ಲಿ ಅಲ್ಪಮತಗಳಿಂದ ಸೋತಿರುವ ಜಿಲ್ಲೆಯ ಜನಪ್ರಿಯ ನಾಯಕ ಕೆ.ಎನ್.ರಾಜಣ್ಣ ಈ ಕ್ಷೇತ್ರದಲ್ಲಿ ಜೆಡಿ (ಎಸ್)ಗೆ ನಿರಾಶೆ ಉಂಟುಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಕೊರಟಗೆರೆಯಲ್ಲಿ ಈಕ್ಷಣದ ವರೆಗೆ ಜೆಡಿ (ಎಸ್) ಅಭ್ಯರ್ಥಿ ಗೆಲ್ಲುವ ಅವಕಾಶ ಹೆಚ್ಚಿದ್ದರೂ ಕೊನೆಕ್ಷಣದ ಬೆಳವಣಿಗೆಗಳು ಫಲಿತಾಂಶವನ್ನು ಬದಲಿಸಿಬಿಡಬಹುದು.
`ಉತ್ತರ'ದ ಕಡೆ ಚಾಚಿರುವ ಕೈಗಳಿಗೆ ಬಯಸಿದ್ದು ಸಿಗದೆ ಹೋಗುವ ಸಾಧ್ಯತೆಗಳಿರುವ ಈಗಿನ ಪರಿಸ್ಥಿತಿಯಲ್ಲಿ ಕೈಯಲ್ಲಿದ್ದುದನ್ನಾದರೂ ಉಳಿಸಿಕೊಳ್ಳುವ ಸವಾಲು ಜೆಡಿ (ಎಸ್) ಮುಂದಿದೆ.
ಇಷ್ಟು ಮಾತ್ರವಲ್ಲ, ವಯಸ್ಸಿನ ಭಾರದಿಂದ ಕುಗ್ಗಿಹೋಗಿರುವ ಎಚ್.ಡಿ.ದೇವೇಗೌಡರು ಮುಂದಿನ ಚುನಾವಣೆಗಳಲ್ಲಿ ಈಗಿನಷ್ಟು ಸಕ್ರಿಯವಾದ ಪಾತ್ರವನ್ನು ವಹಿಸಲು ಸಾಧ್ಯವಾಗದೆ ಹೋಗಬಹುದು. ಅವರ ಅನುಭವ ಮತ್ತು ಜನಪ್ರಿಯತೆಯ ಗರಿಷ್ಠ ಬಳಕೆ ಈ ಚುನಾವಣೆಯಲ್ಲಿ ಮಾತ್ರ ಸಾಧ್ಯ. ರಾಜ್ಯದಲ್ಲಿ ಜೆಡಿ (ಎಸ್) ಪಕ್ಷವನ್ನು ತೃತೀಯರಂಗವಾಗಿ ಕಟ್ಟಿ ಅಧಿಕಾರಕ್ಕೆ ತರಬೇಕೆಂಬ ಕನಸು ಕಂಡ ದೇವೇಗೌಡರು ತಮ್ಮ ಮಕ್ಕಳ ಮೂಲಕವಾದರೂ ಅದು ನನಸಾದೀತೆಂಬ ನಿರೀಕ್ಷೆ ಇಟ್ಟುಕೊಂಡವರು. ಈ ಕಾರಣಗಳಿಂದಾಗಿ ಜೆಡಿ (ಎಸ್) ಪಾಲಿಗೆ ಈಗಿನ ಚುನಾವಣೆ ಅತ್ಯಂತ ನಿರ್ಣಾಯಕ.

No comments:

Post a Comment