ಕಾವೇರಿ ಐತೀರ್ಪಿನ ಅಧಿಸೂಚನೆಯ ಪ್ರಕಟಣೆ ಎಂದರೆ `ಶವದ ಪೆಟ್ಟಿಗೆಗೆ ಕೊನೆಯ ಮೊಳೆ'ಯೇನಲ್ಲ, ಅದರಾಚೆಗೂ ಬದುಕಿದೆ. ಆ ಬದುಕಿನಲ್ಲಿ ಮಳೆ-ಬೆಳೆ, ರಾಜ್ಯ-ರಾಜ್ಯಗಳ ನಡುವೆ ನೀರಿನ ಜಗಳ, ನ್ಯಾಯಾಲಯ - ನ್ಯಾಯಮಂಡಳಿಗಳಲ್ಲಿ ವ್ಯಾಜ್ಯ, ರೈತರ ಪ್ರತಿಭಟನೆ, ರಾಜಕಾರಣಿಗಳ ಆತ್ಮವಂಚನೆ ಎಲ್ಲವೂ ಇರುತ್ತವೆ.
`ಎಲ್ಲವೂ ಮುಗಿದು ಹೋಗುತ್ತದೆ' ಎಂದು ಹುಯಿಲೆಬ್ಬಿಸುತ್ತಿರುವ ನಮ್ಮ ರಾಜಕಾರಣಿಗಳಲ್ಲಿ ಕೆಲವರು ಎಲ್ಲವೂ ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ, ಉಳಿದವರು ಏನೂ ಗೊತ್ತಿಲ್ಲದೆ ತಮ್ಮ ಅಜ್ಞಾನದ ಪ್ರದರ್ಶನ ಮಾಡುತ್ತಿದ್ದಾರೆ. ಐತೀರ್ಪಿನ ಅಧಿಸೂಚನೆಯ ಪ್ರಕಟಣೆಗೆ ಅಭ್ಯಂತರ ಇಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ತಲೆಬಾಗಿದೆ. ಅದರಂತೆ ಕೊನೆಯ ದಿನಾಂಕವನ್ನೂ ಸುಪ್ರೀಂಕೋರ್ಟ್ ನಿಗದಿಪಡಿಸಿದೆ. ಇನ್ನೂ ಅದನ್ನು ತಡೆಯುವುದು ಸಾಧ್ಯ ಇಲ್ಲ. ನೀರಲ್ಲಿ ಗುದ್ದಾಡುವ ಈ ವ್ಯರ್ಥಪ್ರಯತ್ನವನ್ನು ಕೈಬಿಟ್ಟು ಅಧಿಸೂಚನೆಯ ಪ್ರಕಟಣೆಯನ್ನು ನಮ್ಮ ಅನುಕೂಲತೆಗೆ ಬಳಸಿಕೊಳ್ಳುವುದು ಹೇಗೆ ಎಂಬ ಯೋಚನೆ ಮಾಡುವುದು ಜಾಣತನ. ತಮಿಳುನಾಡಿನ ರಾಜಕಾರಣಿಗಳು ನಮ್ಮವರಿಗಿಂತ ಜಾಣರು, ಬಹುಶಃ ಅವರು ಈಗಾಗಲೇ ಈ ಪ್ರಯತ್ನದಲ್ಲಿದ್ದಾರೆ.
`ಅಧಿಸೂಚನೆ ಹೊರಡಿಸಿದರೂ ಅದು ಐತೀರ್ಪನ್ನು ಪ್ರಶ್ನಿಸುವ ಸಂಬಂಧಿತ ರಾಜ್ಯಗಳ ಹಕ್ಕು ಮತ್ತು ಈಗ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಅಡ್ಡಿಯಾಗುವುದಿಲ್ಲ' ಎಂದು ಸಾಕ್ಷಾತ್ ಸುಪ್ರೀಂಕೋರ್ಟ್ ಹೇಳಿದ ನಂತರ `ಶವದ ಪೆಟ್ಟಿಗೆಗೆ ಕೊನೆಯ ಮೊಳೆ' ಆಗುವುದಾದರೂ ಹೇಗೆ? ಇಂತಹ ಅಪಾಯ ಇರುವುದೇ ನಿಜವಾಗಿದ್ದರೆ, 2007ರಲ್ಲಿ ಅಂತಿಮ ಐತೀರ್ಪಿನ ಕೆಲವು ಅಂಶಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದಾಗ ಐತೀರ್ಪಿನ ಅಧಿಸೂಚನೆ ಪ್ರಕಟಣೆಯನ್ನು ರಾಜ್ಯ ಸರ್ಕಾರ ಯಾಕೆ ವಿರೋಧಿಸಿರಲಿಲ್ಲ?
ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಣದಿದ್ದ ಅಪಾಯ ಈಗ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಾದಿಯಾಗಿ ಎಲ್ಲರಿಗೂ ಯಾಕೆ ಕಾಣತೊಡಗಿದೆ? ಅಧಿಸೂಚನೆ ಹೊರಡಿಸುವುದರಿಂದ ಕರ್ನಾಟಕಕ್ಕೆ ಆಗಲಿರುವ ಬಹುದೊಡ್ಡ ಲಾಭ ಎಂದರೆ ಕಳೆದ 23 ವರ್ಷಗಳಿಂದ ನಮ್ಮ ಕೊರಳಿಗೆ ನೇಣಿನಂತೆ ಸುತ್ತಿಕೊಂಡಿರುವ ಕಾವೇರಿ ನ್ಯಾಯಮಂಡಳಿಯ ಮಧ್ಯಂತರ ಐತೀರ್ಪಿನಿಂದ ಮುಕ್ತಿ. ಯಾವ ಕೋನದಿಂದ ಅಧ್ಯಯನ ನಡೆಸಿದರೂ ಮಧ್ಯಂತರ ಐತೀರ್ಪಿಗಿಂತ ಅಂತಿಮ ತೀರ್ಪು ಕರ್ನಾಟಕದ ರೈತರಿಗೆ ಹೆಚ್ಚು ಲಾಭವನ್ನುಂಟು ಮಾಡಲಿದೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳದೆ ಇರಲಾಗದು. ಹೀಗಿದ್ದರೂ ಕಳೆದ ಐದು ವರ್ಷಗಳಿಂದ ಮಧ್ಯಂತರ ಐತೀರ್ಪನ್ನು ಕೊರಳಿಗೆ ಕಟ್ಟಿಕೊಂಡು ಕರ್ನಾಟಕ ಯಾಕೆ ಸಂಕಟಪಡುತ್ತಿದೆಯೋ ಗೊತ್ತಿಲ್ಲ.
ಹೌದು, ಅಂತಿಮ ಐತೀರ್ಪಿನಲ್ಲಿ ಎಲ್ಲವೂ ನಮ್ಮ ಪರವಾಗಿ ಇಲ್ಲ, ಸಾಕಷ್ಟು ಅನ್ಯಾಯವಾಗಿದೆ. ಸಂಕಷ್ಟದ ಕಾಲವಾದ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣ ತಗ್ಗಿಲ್ಲ, ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಜನತೆಗೆ ಅವಶ್ಯ ಇರುವಷ್ಟು ಪ್ರಮಾಣದಲ್ಲಿ ಕುಡಿಯುವ ನೀರಿನ ಪಾಲು ಒದಗಿಸಿಲ್ಲ, ಅಂತರ್ಜಲದ ನೆಪದಲ್ಲಿ ಕರ್ನಾಟಕದ ಚರಂಡಿ ನೀರನ್ನೂ ಲೆಕ್ಕ ಹಾಕಿರುವ ನ್ಯಾಯಮಂಡಳಿ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶದಲ್ಲಿನ ಅಂತರ್ಜಲದ ಬಗ್ಗೆ ಚಕಾರ ಎತ್ತಿಲ್ಲ.
1924ರ ಒಪ್ಪಂದದಿಂದ ಕರ್ನಾಟಕವನ್ನು ಮುಕ್ತಗೊಳಿಸಿದರೂ ಅದೇ ಒಪ್ಪಂದದ ಬಲದಿಂದ ತಮಿಳುನಾಡು ಯದ್ವಾತದ್ವಾ ಹೆಚ್ಚು ಮಾಡಿಕೊಂಡಿರುವ 24.71 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶದ ರಕ್ಷಣೆಗೆ 419 ಟಿಎಂಸಿ ನೀರು ಒದಗಿಸಿರುವ ನ್ಯಾಯಮಂಡಳಿ, ಕರ್ನಾಟಕ ಕೇಳಿಕೊಂಡಿರುವ 25.27 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಒಪ್ಪಿಕೊಂಡಿಲ್ಲ, 381 ಟಿಎಂಸಿ ನೀರಿನ ಪಾಲನ್ನೂ ನೀಡಿಲ್ಲ. ಕೇರಳ ರಾಜ್ಯಕ್ಕೆ ಈಗ ಕೇವಲ 9 ಟಿಎಂಸಿಯಷ್ಟೇ ಬಳಸಲು ಸಾಧ್ಯ ಇದ್ದರೂ ಅಲ್ಲಿಗೆ 21 ಟಿಎಂಸಿ ನೀರು ಹರಿಸಲು ಕರ್ನಾಟಕಕ್ಕೆ ಹೇಳಿ ಆ ನೀರನ್ನು ಬಳಸಲು ತಮಿಳುನಾಡಿಗೆ ಅವಕಾಶ ಮಾಡಿಕೊಟ್ಟಿರುವ ನ್ಯಾಯಮಂಡಳಿ ಅಂತಹ ಔದಾರ್ಯವನ್ನು ಕರ್ನಾಟಕಕ್ಕೆ ತೋರಿಸಿಲ್ಲ....ಹೀಗೆ ಆಗಿರುವ ಅನ್ಯಾಯದ ಪಟ್ಟಿಯನ್ನು ಬೆಳೆಸುತ್ತಾ ಹೋಗಬಹುದು.
ಅಂತಿಮ ಐತೀರ್ಪಿನಿಂದ ಕರ್ನಾಟಕಕ್ಕೆ ಒಂದಷ್ಟು ಅನುಕೂಲಗಳೂ ಆಗಿವೆ. ಮುಖ್ಯವಾಗಿ ಕಳೆದ ಕೆಲವು ದಶಕಗಳಿಂದ ತಲೆ ಮೇಲೆ ಇದ್ದ 1924ರ ಒಪ್ಪಂದದ ತೂಗುಕತ್ತಿಯಿಂದ ಶಾಶ್ವತ ಮುಕ್ತಿ ಸಿಕ್ಕಿದೆ. ಮಧ್ಯಂತರ ಐತೀರ್ಪಿನಲ್ಲಿದ್ದ 11.24 ಲಕ್ಷ ಎಕರೆ ಮೇಲಿನ ನಿರ್ಬಂಧ ರದ್ದಾಗಿದೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ನಿಗದಿಪಡಿಸಿರುವ ನೀರಿನ ಪಾಲನ್ನು ನೀಡಿದ ನಂತರ ಉಳಿಯುವ ಹೆಚ್ಚುವರಿ ನೀರಿನ ಬಳಕೆಯ ಹಕ್ಕನ್ನು ಸಂಪೂರ್ಣವಾಗಿ ಕರ್ನಾಟಕಕ್ಕೆ ನೀಡಲಾಗಿದೆ. ಕೇಂದ್ರ ಜಲ ಆಯೋಗದ ನಿಯಂತ್ರಣದಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರದ ನೀರಿನ ಲೆಕ್ಕವೇ ಅಧಿಕೃತ ಎಂದು ಹೇಳುವ ಮೂಲಕ ತಮಿಳುನಾಡಿನ ಮೋಸದ ಲೆಕ್ಕಕ್ಕೆ ಕಡಿವಾಣ ಹಾಕಿದೆ.
ಕರ್ನಾಟಕಕ್ಕೆ ಆಗಿರುವ `ಅನ್ಯಾಯ'ದ ವಿರುದ್ಧ ಹೋರಾಟ ನಡೆಯಲೇಬೇಕು. ನ್ಯಾಯಾಲಯದಲ್ಲಿ ಕಾನೂನಿನ ಹೋರಾಟ, ಕೇಂದ್ರ ಸರ್ಕಾರದ ಜತೆ ರಾಜಕೀಯ ಹೋರಾಟ, ಸರ್ವಪಕ್ಷಗಳ ನಿಯೋಗ, ತಜ್ಞರ ಜತೆ ಸಮಾಲೋಚನೆ, ಪ್ರತಿಭಟನೆ, ಪಾದಯಾತ್ರೆ...ಎಲ್ಲವೂ ನಡೆಯಬೇಕು. ಇದರ ಜತೆಯಲ್ಲಿ ಐತೀರ್ಪಿನಲ್ಲಿ ನಮಗೆ ಸಿಕ್ಕಿರುವ `ನ್ಯಾಯ'ದ ಅನುಕೂಲಗಳನ್ನು ಬಳಸಿಕೊಳ್ಳಲು ಪ್ರಯತ್ನ ನಡೆಸುವುದು ಬೇಡವೇ? ಇದಕ್ಕಾಗಿ ರಾಜ್ಯ ಸರ್ಕಾರ ಏನು ಮಾಡಿದೆ? ಇಂತಹ ಬಿಕ್ಕಟ್ಟು ಎದುರಾದಾಗೆಲ್ಲ ನಮ್ಮ ಈವರೆಗಿನ ಎಲ್ಲ ಸರ್ಕಾರಗಳು ತಮಿಳುನಾಡು ಎಂಬ `ಭೂತ'ವನ್ನು ಪ್ರತಿಭಟನಕಾರರ ಮುಂದೆ ತಂದು ನಿಲ್ಲಿಸುತ್ತಾ ಬಂದಿವೆ.
ರೋಷತಪ್ತ ಜನ ಕೂಡಿ ಆ `ಭೂತ'ಕ್ಕೆ ಚಪ್ಪಲಿಯಿಂದ ಹೊಡೆದು ಸುಟ್ಟುಹಾಕಿ ಕೋಪ ಶಮನಮಾಡಿಕೊಳ್ಳುತ್ತಾರೆ. ಆದರೆ ಪಕ್ಕದಲ್ಲಿಯೇ ಇರುವ ಹಿತಶತ್ರುವಿನ ಕಡೆ ಯಾರ ಗಮನವೂ ಹೋಗುವುದಿಲ್ಲ. ಯಾರೂ ಅದೇ ಗಟ್ಟಿ ದನಿಯಲ್ಲಿ ಜನಪ್ರತಿನಿಧಿಗಳ ಕರ್ತವ್ಯಲೋಪವನ್ನು ಪ್ರಶ್ನಿಸಲು ಹೋಗುವುದಿಲ್ಲ. ನೆಲ-ಜಲ-ಭಾಷೆಯಂತಹ ಭಾವನಾತ್ಮಕ ವಿಷಯಗಳಿಗೆ ಸಂಬಂಧಿಸಿದ ವಿವಾದದ ಸಮಯದಲ್ಲಿ ಸಿಡಿದೇಳುವ ಭಾವುಕ ಜನರನ್ನು ಹೇಗೆ ಪಳಗಿಸಬೇಕೆಂಬುದು ನಮ್ಮ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿರುವುದರಿಂದ ಇವೆಲ್ಲವೂ ನಡೆಯುತ್ತಾ ಬಂದಿದೆ.
1924ರ ಒಪ್ಪಂದದ ಪ್ರಕಾರ ಕರ್ನಾಟಕದ ಅಚ್ಚುಕಟ್ಟು ಪ್ರದೇಶ 2,35,000 ಎಕರೆ, ಬಳಸಬಹುದಾದ ನೀರಿನ ಪಾಲು ಕೇವಲ 89.82 ಟಿಎಂಸಿ ಆಗಿತ್ತು. ಮಧ್ಯಂತರ ಐತೀರ್ಪಿನಲ್ಲಿ ಈ ಅಚ್ಚುಕಟ್ಟು ಪ್ರದೇಶವನ್ನು 11.24 ಲಕ್ಷ ಎಕರೆವರೆಗೆ ವಿಸ್ತರಿಸಲಾಯಿತು. ಕಾವೇರಿ ನ್ಯಾಯಮಂಡಳಿಯ ಮುಂದೆ ರಾಜ್ಯ ಸರ್ಕಾರ ಆ ಕಾಲದಲ್ಲಿ ಹೇಳಿಕೊಂಡಿರುವ ಪ್ರಕಾರ ನಮ್ಮ ಅಚ್ಚುಕಟ್ಟು ಅಭಿವೃದ್ಧಿಯ ಗುರಿ 27 ಲಕ್ಷ ಎಕರೆ. ಇದರಲ್ಲಿ 24 ಲಕ್ಷ ಎಕರೆ ಅಚ್ಚುಕಟ್ಟು ಅಭಿವೃದ್ಧಿಗೆ ಯೋಜನೆ ಸಿದ್ದ ಇದೆ ಎಂದು ಸರ್ಕಾರ ತಿಳಿಸಿತ್ತು.
ನ್ಯಾಯಮಂಡಳಿ ಕೇವಲ 18.85 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿಪಡಿಸಬೇಕೆಂದು ಆದೇಶಿಸಿ ಅದಕ್ಕೆ 250 ಟಿಎಂಸಿ ನೀರಿನ ಪಾಲನ್ನಷ್ಟೆ ನೀಡಿ ಅನ್ಯಾಯ ಮಾಡಿರುವುದು ನಿಜ. ಆದರೆ ಹೆಚ್ಚುವರಿ ಅಚ್ಚುಕಟ್ಟು ಪ್ರದೇಶದ ಅಭಿವೃದ್ಧಿಗೆ ಸಿಕ್ಕಿರುವ ಅವಕಾಶವನ್ನಾದರೂ ಬಳಸಿಕೊಳ್ಳುವುದು ಬೇಡವೇ? 18.85 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶವನ್ನು ಅಭಿವೃದ್ಧಿ ಪಡಿಸಿದ್ದಾಗಿ 2010ರಲ್ಲಿಯೇ ರಾಜ್ಯಸರ್ಕಾರ ಸುಪ್ರೀಂಕೋರ್ಟ್ ಮತ್ತು ತಮಿಳುನಾಡು ಸರ್ಕಾರಕ್ಕೆ ತಿಳಿಸಿತ್ತು. ಈ 18.85 ಲಕ್ಷ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ಮಾನ್ಯತೆ ಪಡೆಯಲಿಕ್ಕಾದರೂ ಅಂತಿಮ ಐತೀರ್ಪು ಅಧಿಸೂಚನೆ ಪ್ರಕಟವಾಗಬೇಕಲ್ಲವೇ?
ಅಂತಿಮ ಐತೀರ್ಪಿನಿಂದ ನಮ್ಮ ಅಚ್ಚುಕಟ್ಟು ಪ್ರದೇಶ ವಿಸ್ತರಣೆಗೆ ಮಾತ್ರ ಅಲ್ಲ, ಹೆಚ್ಚುವರಿ ನೀರಿನ ಬಳಕೆಗೂ ಅವಕಾಶ ಸಿಗಲಿದೆ. ನ್ಯಾಯಮಂಡಳಿ ರಾಜ್ಯಕ್ಕೆ ಅಧಿಕೃತವಾಗಿ ನೀಡಿರುವ ಪಾಲು 270 ಟಿಎಂಸಿಯಾದರೂ ರಾಜ್ಯ ಬಳಸಲು ಅವಕಾಶ ನೀಡಿರುವ ಹೆಚ್ಚುವರಿ ನೀರಿನ ಪಾಲನ್ನು ಸೇರಿಸಿದರೆ ಇದು ಸುಮಾರು 310 ಟಿಎಂಸಿ ಆಗಲಿದೆ ಎಂದು ಹೇಳುತ್ತಿದೆ ಒಳಲೆಕ್ಕ.
1972-73ರಿಂದ 2004-05ರಿಂದ ಇಲ್ಲಿಯವರೆಗೆ ಬಿಳಿಗುಂಡ್ಲು ಜಲಮಾಪನದವರೆಗಿನ ನೀರಿನ ಸರಾಸರಿ ಉತ್ಪನ್ನ 538 ಟಿಎಂಸಿ. ಅಂತಿಮ ಐತೀರ್ಪಿನ ಪ್ರಕಾರ ತಮಿಳುನಾಡಿಗೆ 192 ಟಿಎಂಸಿ ಮತ್ತು ಕೇರಳಕ್ಕೆ 21 ಟಿಎಂಸಿ ನೀರು ಹರಿಸಿದರೆ ನಮಗೆ ಉಳಿಯುವ ನೀರಿನ ಪ್ರಮಾಣ ಸುಮಾರು 325 ಟಿಎಂಸಿ. ಅಂತಿಮ ಐತೀರ್ಪಿನಲ್ಲಿ ನಮಗೆ ಅಧಿಕೃತವಾಗಿ 270 ಟಿಎಂಸಿ ನೀರನ್ನಷ್ಟೇ ನಿಗದಿಪಡಿಸಲಾಗಿದ್ದರೂ ಸಾಮಾನ್ಯ ಮಳೆಗಾಲದಲ್ಲಿ ನಮಗೆ ಹೆಚ್ಚುವರಿಯಾಗಿ ಸುಮಾರು 55 ಟಿಎಂಸಿ ನೀರು ಸಿಗಲಿದೆ. ಈ ನೀರಿನ ಬಳಕೆಗೆ ಸಂಬಂಧಿಸಿದಂತೆ ಅಂತಿಮ ಐತೀರ್ಪಿನಲ್ಲಿ ಯಾವ ನಿರ್ಬಂಧವನ್ನು ಹೇರಲಾಗಿಲ್ಲ. ಆದರೆ ಈ ನೀರು ಬಳಸಿಕೊಳ್ಳುವ ಎಷ್ಟು ನೀರಾವರಿ ಯೋಜನೆಗಳ ನೀಲಿನಕ್ಷೆಗಳನ್ನು ನಮ್ಮ ಸರ್ಕಾರ ಸಿದ್ದ ಮಾಡಿಟ್ಟುಕೊಂಡಿದೆ?
ಕೊನೆಯದಾಗಿ ಅಂತಿಮ ಐತೀರ್ಪಿನ ಅಧಿಸೂಚನೆ ಹೊರಡಿಸಿದ ಕೂಡಲೇ `ಕಾವೇರಿ ನಿರ್ವಹಣಾ ಮಂಡಳಿ' ಅಸ್ತಿತ್ವಕ್ಕೆ ಬಂದು ನಮ್ಮ ಜಲಾಶಯಗಳ ಮೇಲಿನ ಅಧಿಕಾರವನ್ನು ರಾಜ್ಯ ಕಳೆದುಕೊಳ್ಳಲಿದೆ ಎಂಬ ಆತಂಕದಲ್ಲಿ ಏನಾದರೂ ಹುರುಳಿದೆಯೇ? ವಾಸ್ತವ ಸಂಗತಿ ಏನೆಂದರೆ ಅಧಿಸೂಚನೆ ಹೊರಡಿಸಲಿಕ್ಕಷ್ಟೇ ಸುಪ್ರೀಂಕೋರ್ಟ್ ಹೇಳಿದೆ, `ಮಂಡಳಿ' ರಚನೆಯಾಗಬೇಕಾದರೆ ಕೇಂದ್ರ ಸರ್ಕಾರ ಅಂತರರಾಜ್ಯ ಜಲ ವಿವಾದ ಕಾಯಿದೆಯ 6 (ಎ) ಪ್ರಕಾರ ಇನ್ನೊಂದು ಅಧಿಸೂಚನೆ ಹೊರಡಿಸಬೇಕಾಗುತ್ತದೆ.
ಅದಕ್ಕೆ ಸಂಸತ್ ಅಂಗೀಕಾರ ನೀಡಬೇಕಾಗಿರುವುದರಿಂದ ಅದೊಂದು ಪ್ರತ್ಯೇಕ ಕಸರತ್ತು. ಮಂಡಳಿ ಸ್ಥಾಪನೆಯಾದರೂ ಅದೇನು ಪ್ರಧಾನಿ ಅಧ್ಯಕ್ಷರಾಗಿರುವ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಸದಸ್ಯರಾಗಿರುವ ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ಇಲ್ಲವೆ ಕೇಂದ್ರ ಜಲಸಂಪನ್ಮೂಲ ಖಾತೆಯ ಕಾರ್ಯದರ್ಶಿ ಅಧ್ಯಕ್ಷರಾಗಿರುವ ಮತ್ತು ರಾಜ್ಯದ ಮುಖ್ಯಕಾರ್ಯದರ್ಶಿಗಳು ಸದಸ್ಯರಾಗಿರುವ ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ)ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿ ಇರಲಾರದು.
ನ್ಯಾಯಮಂಡಳಿಯ ಶಿಫಾರಸಿನ ಪ್ರಕಾರ ಅಸ್ತಿತ್ವಕ್ಕೆ ಬರಲಿರುವ `ಕಾವೇರಿ ನಿರ್ವಹಣಾ ಮಂಡಳಿ' ಮತ್ತು `ಕಾವೇರಿ ನದಿ ನಿಯಂತ್ರಣಾ ಸಮಿತಿ'ಯಲ್ಲಿ ಯಾವ ಜನಪ್ರತಿನಿಧಿಗೂ ಪ್ರಾತಿನಿಧ್ಯ ಇಲ್ಲ. ನೀರಾವರಿ,ಕೃಷಿ, ಹವಾಮಾನ ತಜ್ಞರು ಮತ್ತು ಕೆಲವು ಅಧಿಕಾರಿಗಳನ್ನೊಳಗೊಂಡ ಈ `ಬಿಳಿ ಆನೆ'ಯ ರಚನೆಗೆ ಸಂಸತ್ ಅಂಗೀಕಾರ ನೀಡಬೇಕು. ತಮಗೆ ಪ್ರಾತಿನಿಧ್ಯ ಇಲ್ಲದ ಈ `ಮಂಡಳಿ', `ಸಮಿತಿ'ಗಳ ರಚನೆಗೆ ಕಾವೇರಿ ನದಿ ಕಣಿವೆಯ ರಾಜ್ಯಗಳ ಜನಪ್ರತಿನಿಧಿಗಳು ಅಷ್ಟೊಂದು ಸುಲಭದಲ್ಲಿ ಅವಕಾಶ ಮಾಡಿಕೊಡಲಿದ್ದಾರೆ ಎಂದು ಹೇಳುವ ಹಾಗಿಲ್ಲ.
ಆದುದರಿಂದ `ಇಂದು ಅಧಿಸೂಚನೆ ಜಾರಿಯಾಗಿ, ನಾಳೆಯೇ ಮಂಡಳಿ ರಚನೆಯಾಗಿ, ನಾಡಿದ್ದು ಜಲಾಶಯಗಳ ಮೇಲಿನ ಅಧಿಕಾರವನ್ನು ರಾಜ್ಯ ಕಳೆದುಕೊಳ್ಳಲಿದೆ' ಎಂಬ ಆತಂಕಕ್ಕೆ ಯಾವ ಆಧಾರಗಳೂ ಇಲ್ಲ. ಒಂದೊಮ್ಮೆ ಕಾವೇರಿ ನದಿನೀರು ನಿರ್ವಹಣೆಗೆ ಅಂತಹದ್ದೊಂದು ಸ್ವತಂತ್ರ ವ್ಯವಸ್ಥೆ ಅಸ್ತಿತ್ವಕ್ಕೆ ಬಂದರೂ ಹೆದರಬೇಕಾಗಿರುವುದು ಕಾವೇರಿ ನದಿ ನೀರು ಹಂಚಿಕೆಯ ವಿಷಯದಲ್ಲಿ ಬಹುಪಾಲು ಸತ್ಯವನ್ನೇ ಹೇಳುತ್ತಾ ಬಂದಿರುವ ಕರ್ನಾಟಕ ಅಲ್ಲ, ಬಹುಪಾಲು ಸುಳ್ಳುಗಳನ್ನೇ ಹೇಳುತ್ತಾ ಬಂದಿರುವ ತಮಿಳುನಾಡು. ಇತ್ತೀಚೆಗೆ ಸುಪ್ರೀಂಕೋರ್ಟಿನಲ್ಲಿಯೇ ತಮಿಳುನಾಡಿನ ಸುಳ್ಳು ಬಯಲಾಗಿದೆ. ಆದುದರಿಂದ ಅಧಿಸೂಚನೆಯ ಪ್ರಕಟಣೆ ಎಂದಾಕ್ಷಣ ಅದು ಬದುಕಿನ ಕೊನೆ ಎಂದು ಭೀತಿಪಡಬೇಕಾಗಿಲ್ಲ, ಅದರಾಚೆಗೂ ಬದುಕಿದೆ.

No comments:
Post a Comment