Thursday, October 18, 2012

ಬೇಕಾಗಿರುವುದು ಸುಡುವ ಬೆಂಕಿ ಅಲ್ಲ; ಅರಿವಿನ ಬೆಳಕು - ದಿನೇಶ್ ಅಮೀನ್ ಮಟ್ಟು October 08, 2012


ಗೋಡೆಯವರೆಗೆ ತಳ್ಳಿಸಿಕೊಂಡ ಮನುಷ್ಯನಿಗೆ ತಿರುಗಿ ಬೀಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿರುವುದಿಲ್ಲ. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ರೈತರದ್ದು ಈಗ ಇದೇ ಸ್ಥಿತಿ. ಅಸಹಾಯಕತೆಯಿಂದಾಗಿ ಹತಾಶರಾಗಿರುವ ಅವರು ಎಲ್ಲರ ಮೇಲೆ ಎರಗಿ ಬೀಳುತ್ತಿದ್ದಾರೆ.
ಅನ್ಯಾಯದ ಪರಂಪರೆಗೆ ಸಿಕ್ಕಿ ಸೋತುಹೋದವರಿಗೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು, ಅಲ್ಲಿ ವಾದ ಮಂಡಿಸುವ ನಮ್ಮ ವಕೀಲರು, ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಿಗಳು, ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಕೊನೆಗೆ ಬೀದಿಯಲ್ಲಿ ತಮ್ಮ ಪಾಡಿಗೆ ಹೋಗುತ್ತಿರುವ ಅಮಾಯಕ ಜನ.. ಎಲ್ಲರೂ ತಮ್ಮ ಶತ್ರುಗಳಂತೆಯೇ ಕಾಣಿಸುವುದು ಸಹಜ.
(ಇವರಲ್ಲಿ ಕೆಲವರು ಶತ್ರುಗಳೆನ್ನುವುದೂ ನಿಜ). ಈ ರೀತಿಯ ಭಾವಾವೇಶದ ಉಗ್ರ ಅಭಿವ್ಯಕ್ತಿ ವೈಯಕ್ತಿಕವಾದ ಹತಾಶೆಯನ್ನು ಕಡಿಮೆ ಮಾಡಿ  ಒಂದಷ್ಟು ಸಮಾಧಾನವನ್ನು ತಂದುಕೊಡಬಹುದು, ಆದರೆ ನ್ಯಾಯವನ್ನು ಪಡೆಯಲು ಸಾಧ್ಯವಾಗಬಹುದೇ?
ಈ ರೋಷ-ದ್ವೇಷಗಳ  ಪ್ರದರ್ಶನ ಹೆಚ್ಚೆಂದರೆ ಈ ತಿಂಗಳ ಅಂತ್ಯದವರೆಗೆ ಇರಬಹುದು.
ತಮಿಳುನಾಡಿನಲ್ಲಿ ಈಶಾನ್ಯ ಮಾರುತ ಸುರಿಯಲಾರಂಭಿಸುತ್ತಿದ್ದಂತೆ ಆ ಕಡೆಯ ಒತ್ತಡ ಕಡಿಮೆಯಾಗುತ್ತದೆ. ಅಷ್ಟರಲ್ಲಿ ದೇವೇಗೌಡರ ಕಣ್ಣೀರು ಆರಿಹೋಗುತ್ತದೆ, ನಟ ಅಂಬರೀಷ್ ಅವರ ಅಭಿನಯವೂ ಮುಗಿದಿರುತ್ತದೆ, ಮಾದೇಗೌಡರ ಸಿಟ್ಟು ತಣ್ಣಗಾಗುತ್ತದೆ, ಕನ್ನಡ ಹೋರಾಟಗಾರರು ಹಳೆಯ ಭಿತ್ತಿಪತ್ರಗಳನ್ನು ಕಿತ್ತುಹಾಕಿ ಹೊಸ ಹೋರಾಟದ ಭಿತ್ತಿಪತ್ರಗಳನ್ನು ಅಂಟಿಸಲು ಗೋಡೆಗಳನ್ನು ಹುಡುಕುತ್ತಿರುತ್ತಾರೆ.

ಮಾಧ್ಯಮಗಳು ಮತ್ತೊಂದು ರೋಚಕ ಸುದ್ದಿಯ ಬೆನ್ನು ಹತ್ತಿರುತ್ತವೆ. ಕಾವೇರಿ ಕಣಿವೆಯ ರೈತರು ರಾಗಿಮುದ್ದೆ ತಿಂದು ಕಂಬಳಿ ಹೊದ್ದುಕೊಂಡು ಮಲಗಿಬಿಡುತ್ತಾರೆ.
ಮುಂದಿನವರ್ಷದ ಜುಲೈ ತಿಂಗಳ ಹೊತ್ತಿಗೆ ಜಯಲಲಿತಾ ಇಲ್ಲವೇ ಕರುಣಾನಿಧಿ  `ಕರ್ನಾಟಕ ನೀರು ಬಿಡುತ್ತಿಲ್ಲ` ಎಂದು ಪ್ರಧಾನಮಂತ್ರಿಗೆ ಪತ್ರ ಬರೆದಾಗ  ನಿದ್ದೆ ಹೋದ ರೈತರಾದಿಯಾಗಿ ವಿರಮಿಸುತ್ತಿದ್ದ ಪ್ರತಿಭಟನೆಯ ಹಳೆಯ ಪಾತ್ರಧಾರಿಗಳೆಲ್ಲ  ಮೈಮುರಿದು ಕೊಡವಿಕೊಂಡು ಎದ್ದು ನಿಲ್ಲುತ್ತಾರೆ.
ನೆಲ-ಜಲದ ಪ್ರೇಮ ಭೋರ್ಗರೆದು ಹರಿಯುತ್ತದೆ. ಮತ್ತೆ ಪ್ರತಿಭಟನೆ, ಬಂದ್, ಒಂದಷ್ಟು ಆರೋಪ ನಂತರ ಎಲ್ಲವೂ ಯಥಾಸ್ಥಿತಿ. ಇಪ್ಪತ್ತೊಂದು ವರ್ಷಗಳ ಹಿಂದೆ ಕಾವೇರಿ ನ್ಯಾಯಮಂಡಳಿ ಮಧ್ಯಂತರ ಐತೀರ್ಪು ನೀಡಿದ ದಿನದಿಂದ ಇಲ್ಲಿಯ ವರೆಗೆ ನಡೆಯುತ್ತಾ ಬಂದದ್ದು ಇದೇ  ನಾಟಕ.
(ಪುರಾವೆಗಳು ಬೇಕು ಎನ್ನುವವರು ಈ 21 ವರ್ಷಗಳ ಪತ್ರಿಕೆಗಳನ್ನು ಹುಡುಕಿ ಜುಲೈ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಪ್ರಕಟವಾದ ಸುದ್ದಿಗಳ ಮೇಲೆ ಕಣ್ಣುಹಾಯಿಸಬಹುದು.)

ಪ್ರತಿಬಾರಿ ತಮಿಳುನಾಡು ಕರ್ನಾಟಕವನ್ನು ಈ ರೀತಿಯ `ಖೆಡ್ಡಾ`ಕ್ಕೆ ಬೀಳಿಸಿ ಚಂದ ನೋಡುತ್ತಾ ತಣ್ಣಗೆ ಕೂತಿರುತ್ತದೆ. ಗುಂಡಿಗೆ ಬಿದ್ದವರು ಸಹಜವಾಗಿಯೇ ಲಬೋಲಬೋ ಎಂದು ಎದೆಬಡಿದುಕೊಳ್ಳುತ್ತಾರೆ.
ತಮಿಳುನಾಡಿನ ರಾಜಕಾರಣಿಗಳು ಈ ರೀತಿ ಕೂಗಾಡುತ್ತಿರುವ ಕನ್ನಡಿಗರನ್ನು ತೋರಿಸಿ `ಕನ್ನಡಿಗರಿಗೆ ನ್ಯಾಯಾಲಯ, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಹೀಗೆ ಯಾವುದರ ಮೇಲೆಯೂ ನಂಬಿಕೆ ಇಲ್ಲ. ಇವರು ಜಗಳಗಂಟರು, ಭಾಷಾಂಧರು....` ಎಂಬ ಆರೋಪಗಳನ್ನು ಮಾಡುತ್ತಾರೆ.
ಈ ಆರೋಪವನ್ನು ಸಾಬೀತುಪಡಿಸುವಂತೆ ಕನ್ನಡಿಗರು ಇನ್ನಷ್ಟು ಉಗ್ರರೀತಿಯಲ್ಲಿ ಭಾಷಣ ಮಾಡುತ್ತಾರೆ, ಘೋಷಣೆ ಕೂಗುತ್ತಾರೆ. ರಕ್ತ ಹರಿಸುವ, ನೀರಿಗೆ ಧುಮುಕುವ ವೀರಾವೇಶದ ಮಾತುಗಳನ್ನಾಡುತ್ತಾರೆ. ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ತಿಳಿದುಕೊಳ್ಳಲು ತನಿಖಾ ಸಮಿತಿ ನೇಮಿಸಬೇಕಾಗಿಲ್ಲ.
ಕಾವೇರಿ ನದಿಯ ಇತಿಹಾಸವನ್ನು ತೆಗೆದುನೋಡಿದರೆ ಸಾಕು, ಆಗಿರುವ ಅನ್ಯಾಯಕ್ಕೆ ಪುಟಪುಟಗಳಲ್ಲಿ ಸಾಕ್ಷಿ ಸಿಗುತ್ತದೆ. ಆದರೆ ಕರ್ನಾಟಕದಿಂದ ಹೊರಗೆ ಮುಖ್ಯವಾಗಿ ರಾಜಧಾನಿ ದೆಹಲಿಯಲ್ಲಿ ಜನಾಭಿಪ್ರಾಯ ಅನ್ಯಾಯಕ್ಕೊಳಗಾದ ಕರ್ನಾಟಕದ ಪರವಾಗಿ ಇಲ್ಲ, ಕರ್ನಾಟಕದ ಪ್ರಾಂತೀಯ ಧೋರಣೆಗೆ ಬಲಿಯಾಗುತ್ತಿದ್ದೇವೆ ಎಂದು ಸುಳ್ಳುಸುಳ್ಳೇ ರೋದಿಸುತ್ತಿರುವ ತಮಿಳುನಾಡು ಪರವಾಗಿ ಇದೆ.
ಹೀಗೆಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. (ದೆಹಲಿಯಲ್ಲಿದ್ದಷ್ಟು ಕಾಲ ಅಲ್ಲಿನ ಪತ್ರಕರ್ತರು, ಅಧಿಕಾರಿಗಳು ಮತ್ತು ರಾಜಕಾರಣಿಗಳ ಜತೆಗಿನ ಒಡನಾಟದ ಆಧಾರದಲ್ಲಿ, ಜವಾಬ್ದಾರಿಯಿಂದಲೇ ಇದನ್ನು ಹೇಳುತ್ತಿದ್ದೇನೆ.)

ಯಾಕೆ ಹೀಗಾಗುತ್ತಿದೆ ?ಕಾವೇರಿ ನ್ಯಾಯಮಂಡಳಿ ಸ್ಥಾಪನೆಯ ಹಿಂದಿನ ಇತಿಹಾಸವನ್ನು ಕೆದಕುವುದು ಬೇಡ, ಅದರ ನಂತರದ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದರೂ ಕರ್ನಾಟಕ ಮತ್ತೆಮತ್ತೆ ಎಡವಿ ಬಿದ್ದ ಹೆಗ್ಗುರುತುಗಳು ಕಾಣಸಿಗುತ್ತವೆ.
ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಯಾವಾಗಲೂ ನಮಗೆ ಅನ್ಯಾಯವಾಗಿದೆ ಎಂಬ ಭಾವನೆಯನ್ನು ಹುಟ್ಟಿಸುವಂತಹ ತೀರ್ಪುಗಳನ್ನೇ ಯಾಕೆ ನೀಡುತ್ತಿದೆ ಎಂಬ ಪ್ರಶ್ನೆಗೂ ಹೆಜ್ಜೆ ತಪ್ಪಿದ ಕರ್ನಾಟಕದ ನಡವಳಿಕೆಯಲ್ಲಿ ಉತ್ತರ ಇದೆ. 

ಕರ್ನಾಟಕದ ಆಯ್ಕೆ ನ್ಯಾಯಮಂಡಳಿ ಖಂಡಿತ ಆಗಿರಲಿಲ್ಲ, ಮಾತುಕತೆಯ ಮೂಲಕವೇ ವಿವಾದವನ್ನು ಬಗೆಹರಿಸಿಕೊಳ್ಳಬೇಕೆಂಬುದು ರಾಜ್ಯದ ಬಯಕೆಯಾಗಿತ್ತು. ಇದರ ಹೊರತಾಗಿಯೂ ಸುಪ್ರೀಂಕೋರ್ಟ್ 1990ರಲ್ಲಿ ಕಾವೇರಿ ನ್ಯಾಯಮಂಡಳಿ ಸ್ಥಾಪನೆಗೆ ಆದೇಶ ನೀಡಿದ್ದರಿಂದ ಸಹಜವಾಗಿಯೇ ಕರ್ನಾಟಕಕ್ಕೆ ಅಸಮಾಧಾನವಾಗಿತ್ತು.
ಮರುವರ್ಷವೇ ನ್ಯಾಯಮಂಡಳಿ ನೀಡಿದ ಮಧ್ಯಂತರ ಐತೀರ್ಪು ಈ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿತ್ತು.  ಸರ್ಕಾರ ಬದಲಾದರೂ, ಆಡಳಿತ ಪಕ್ಷಗಳು ಬದಲಾದರೂ ನ್ಯಾಯಮಂಡಳಿಯ ಬಗೆಗಿನ ಕರ್ನಾಟಕದ ಅಸಹನೆ ಕಡಿಮೆಯಾಗಲೇ ಇಲ್ಲ.
1991ರಲ್ಲಿ ಕಾವೇರಿ ಕಣಿವೆಗೆ ಭೇಟಿ ನೀಡಿದ್ದ ನ್ಯಾಯಮಂಡಳಿಯ ನ್ಯಾಯಮೂರ್ತಿಗಳನ್ನು ರಾಜ್ಯದ ಜನತೆ ಸ್ವಾಗತಿಸಿದ್ದು ಕಪ್ಪುಬಾವುಟ ಮತ್ತು `ಗೊ ಬ್ಯಾಕ್` ಎಂಬ ಘೋಷಣೆಗಳ ಮೂಲಕ. ಇಷ್ಟು ಮಾತ್ರವಲ್ಲ, ನ್ಯಾಯಮಂಡಳಿ ಕಾವೇರಿ ಕಣಿವೆಯ ರಾಜ್ಯಗಳಿಗೆ ಭೇಟಿ ನೀಡಿದಾಗ ತಮಿಳುನಾಡಿನಲ್ಲಿ ನ್ಯಾಯಮೂರ್ತಿಗಳ ಪತ್ನಿಯರಿಗೆ ಸೀರೆ-ಬಳೆ ಕೊಟ್ಟರು ಎಂದು ಗುಲ್ಲೆಬ್ಬಿಸಿ ಕೊನೆಗೆ ಸುಪ್ರೀಂಕೋರ್ಟ್‌ವರೆಗೆ ದೂರು ಕೊಂಡೊಯ್ದದದ್ದು ಕೂಡಾ ಕರ್ನಾಟಕ.
ರಾಜ್ಯಕ್ಕೆ ನ್ಯಾಯಮಂಡಳಿ ಭೇಟಿ ನೀಡಿದ್ದಾಗ ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಔತಣಕೂಟಕ್ಕೆ  ನ್ಯಾಯಮೂರ್ತಿಗಳೊಬ್ಬರು ನಗರದಲ್ಲಿರುವ ತಮ್ಮ ಸಂಬಂಧಿಕರನ್ನು ಆಹ್ಹಾನಿಸಲು ಬಯಸಿದಾಗ ಕೆಲವು ಅಧಿಕಾರಿಗಳು ನಿರಾಕರಿಸಿ ಮುಜುಗರಕ್ಕೆ ಈಡು ಮಾಡಿದ್ದರು.
ಆಗ ಇದ್ದ ಮೂವರು ನ್ಯಾಯಮೂರ್ತಿಗಳಲ್ಲಿ ಒಬ್ಬರು ಅಂತಿಮ ಐತೀರ್ಪು ನೀಡಿದ ನ್ಯಾಯಮಂಡಳಿಯಲ್ಲಿಯೂ ಇದ್ದರು. ಈ ರೀತಿ ನ್ಯಾಯಮೂರ್ತಿಗಳನ್ನು ಕೆಣಕಿದ ಹಲವಾರು ಉದಾಹರಣೆಗಳಿವೆ. ತಮಿಳುನಾಡಿನ ನಡವಳಿಕೆ ಇದಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು.
ನ್ಯಾಯಮಂಡಳಿಯ ಸದಸ್ಯರು ಸಾಗುವ ಹಾದಿಯಲ್ಲೆಲ್ಲ ಅವರನ್ನು ಸ್ವಾಗತಿಸುವ ಬ್ಯಾನರ್‌ಗಳು, ಕಮಾನುಗಳನ್ನು ಹಾಕಲಾಗಿತ್ತು. ತಂಜಾವೂರಿನ ಜಿಲ್ಲಾಧಿಕಾರಿಗಳು ನ್ಯಾಯಮೂರ್ತಿಗಳ ಕಾಲಿಗೆ ಬಿದ್ದುಬಿಟ್ಟಿದ್ದರು. ಜಯಲಲಿತಾ ಆಗ ಅಧಿಕಾರದಲ್ಲಿ ಇಲ್ಲದೆ ಇದ್ದರೂ ಬಂದು ನ್ಯಾಯಮೂರ್ತಿಗಳನ್ನು ಎದುರುಗೊಂಡಿದ್ದರು. ಇದು ತಮಿಳುನಾಡು ಶೈಲಿ.ಅದೆಂದೂ ನ್ಯಾಯಮಂಡಳಿಯನ್ನು ಕೆಣಕಲು ಹೋಗಿಲ್ಲ.

ಇನ್ನೇನು ನ್ಯಾಯಮಂಡಳಿ ಅಂತಿಮ ಐತೀರ್ಪು ನೀಡುವ ಕೆಲವೇ ತಿಂಗಳುಗಳ ಮೊದಲು ಇಬ್ಬರು ಸದಸ್ಯ ನ್ಯಾಯಮೂರ್ತಿಗಳು ಕಾವೇರಿ ಕಣಿವೆಯಲ್ಲಿ ಪ್ರವಾಸ ಹೋಗಲು ಇಚ್ಚಿಸಿದಾಗಲೂ ವಿರೋಧಿಸಿದ್ದು ಕರ್ನಾಟಕ.
ಈ ಪ್ರವಾಸಕ್ಕೆ ನ್ಯಾಯಮಂಡಳಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಎನ್.ಪಿ.ಸಿಂಗ್ ವ್ಯಕ್ತಪಡಿಸಿದ್ದ ವಿರೋಧವನ್ನೇ ಪ್ರಸ್ತಾಪಿಸಿ `ಅಧ್ಯಕ್ಷರು ಮತ್ತು ಸದಸ್ಯರ ನಡುವಿನ ಜಗಳದಿಂದ ನ್ಯಾಯಮಂಡಳಿ ಮುರಿದುಬಿದ್ದಿದೆ.
ಈ ಪರಿಸ್ಥಿತಿಯಲ್ಲಿ ನ್ಯಾಯಮಂಡಳಿಯನ್ನು ಪುನರ‌್ರಚಿಸಬೇಕು` ಎಂದು ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘ ಸುಪ್ರೀಂಕೋರ್ಟಿಗೆ ಮೊರೆ ಹೋಗಿತ್ತು. ಅದರ ಹಿಂದೆ ರಾಜ್ಯದ ಪ್ರಭಾವಶಾಲಿ ನಾಯಕರೊಬ್ಬರಿದ್ದರು ಎನ್ನುವುದು  ಗುಟ್ಟಿನ ಸಂಗತಿಯಾಗಿರಲಿಲ್ಲ.

ಅಂತಿಮವಾಗಿ ನ್ಯಾಯಮಂಡಳಿಯನ್ನು ಪುನರ‌್ರಚಿಸಬೇಕು ಎಂದು ರಾಜ್ಯ ಸರ್ಕಾರವೇ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು. ಈ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು ಮಾತ್ರವಲ್ಲ ಕರ್ನಾಟಕಕ್ಕೆ ಮಾತಿನ ಚಾಟಿಯಿಂದ ಬಾರಿಸಿತ್ತು.

ಈ ರೀತಿಯ `ಅಧಿಕ ಪ್ರಸಂಗತನ`ದ ನಡವಳಿಕೆಯನ್ನು ಅತೀ ಎಚ್ಚರಿಕೆಯ ಸ್ವಭಾವದ ಎಸ್.ಎಂ.ಕೃಷ್ಣ ಅಧಿಕಾರದಲ್ಲಿದ್ದಾಗಲೂ ಮುಂದುವರಿಸಿದರು. 1.25 ಟಿಎಂಸಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶ ಮತ್ತು 0.8 ಟಿಎಂಸಿ ನೀರು ಹರಿಸಬೇಕೆಂದು ಕಾವೇರಿ ನದಿಪ್ರಾಧಿಕಾರ ನೀಡಿದ್ದ ಆದೇಶಗಳೆರಡನ್ನೂ ಧಿಕ್ಕರಿಸಿದ್ದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾವೇರಿ ಕಣಿವೆಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಜನಪ್ರಿಯ ರಾಜಕೀಯದ ದೌರ್ಬಲ್ಯಕ್ಕೆ ಬಿದ್ದು ಬಿಟ್ಟರು.
ಇದರಿಂದ ಕೆರಳಿದ ಸುಪ್ರೀಂಕೋರ್ಟ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಮೊಕದ್ದಮೆಯನ್ನೂ ದಾಖಲಿಸಿತ್ತು. ಆ ಕಾಲದಲ್ಲಿ ಸುಪ್ರೀಂಕೋರ್ಟ್‌ನ ಸಂದರ್ಶಕರ ಬಾಕ್ಸ್‌ನಲ್ಲಿ ಖಾದಿ ಬಟ್ಟೆಧರಿಸಿದ್ದ ರಾಜಕಾರಣಿಗಳನ್ನು ನೋಡಿದ ಕೂಡಲೇ ನ್ಯಾಯಮೂರ್ತಿಗಳು ಕೆಂಡಾಮಂಡಲವಾಗುತ್ತಿದ್ದರು.
ಇದರಿಂದ ತಪ್ಪಿಸಿಕೊಳ್ಳಲಿಕ್ಕಾಗಿಯೇ ಆಗಿನ ಆಡಳಿತ ಪಕ್ಷದ ಹಲವು ನಾಯಕರು ಕಪ್ಪುಕೋಟ್ ಧರಿಸಿ ನ್ಯಾಯಾಲಯಕ್ಕೆಬರುತ್ತಿದ್ದರು. ಸುಪ್ರೀಂಕೋರ್ಟ್‌ಗೆ  ಕರ್ನಾಟಕದ ಬಗ್ಗೆ ಅಷ್ಟೊಂದು ಸಿಟ್ಟಿತ್ತು.  ಈ ರೀತಿ ಕಾವೇರಿ ನದಿನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳನ್ನು ಎದುರುಹಾಕಿಕೊಳ್ಳುವ ಯಾವ ಅವಕಾಶವನ್ನು ರಾಜ್ಯದ ರಾಜಕಾರಣಿಗಳು ಬಿಟ್ಟುಕೊಟ್ಟಿಲ್ಲ.
ತಮಿಳುನಾಡು ಎಂದೂ ಈ ರೀತಿ ವರ್ತಿಸದೆ ಉಪಾಯದಿಂದ ಎಲ್ಲರನ್ನೂ ಒಲಿಸಿಕೊಂಡು ಕೆಲಸ ಸಾಧಿಸಿಕೊಳ್ಳುತ್ತಾ ಬಂದಿದೆ. ರಾಜ್ಯವನ್ನು ಆಳಿದ ರಾಜಕೀಯ ಪಕ್ಷಗಳೆಲ್ಲವೂ ಕಾವೇರಿ ವಿವಾದದ ಬಗೆಗಿನ ತೀರ್ಮಾನಗಳನ್ನು ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದ ಆಧಾರದಲ್ಲಿಯೇ ಕೈಗೊಳ್ಳುತ್ತಾ ಬಂದಿವೆಯೇ ಹೊರತು ಕಾನೂನು ಮತ್ತು ನೀರಾವರಿ ತಜ್ಞರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.
ಈಗಿನ ವಿವಾದವನ್ನೇ ನೋಡುವುದಾದರೆ, `ಸದ್ಭಾವನೆಯ ಸಂಕೇತವಾಗಿ ಕಾವೇರಿ ನದಿ ಪ್ರಾಧಿಕಾರದ ಸಭೆ ನಡೆಯುವ ವರೆಗೆ ಹತ್ತುಸಾವಿರ ಕ್ಯೂಸೆಕ್ ನೀರು ಬಿಡಲು ತಯಾರು` ಎಂದು ಹೇಳಿ ತನ್ನ ಕೊರಳನ್ನು ಪ್ರಾಧಿಕಾರಕ್ಕೆ ಒಪ್ಪಿಸಿದ್ದು ಯಾರು? 

ಇಷ್ಟೊಂದು ನೀರು ಬಿಟ್ಟುಬಿಟ್ಟರೆ ಕರ್ನಾಟಕದ ರೈತರಿಗೆ ತೊಂದರೆಯಾಗುತ್ತದೆ ಎಂದು ರಾಜ್ಯದ ಜಲಸಂಪನ್ಮೂಲ ಸಚಿವರಿಗಾಗಲಿ, ಮುಖ್ಯಮಂತ್ರಿಗಳಿಗಾಗಲಿ ಗೊತ್ತಾಗಲಿಲ್ಲವೇ? ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಲೆಂದೇ ಜಲಸಂಪನ್ಮೂಲ ಸಚಿವರು ಹೀಗೆ ಮಾಡಿದರೇ?

ಕರ್ನಾಟಕದಲ್ಲಿ ಈಗಲೂ ಕಾವೇರಿ ವಿವಾದದ ಮಾಹಿತಿಯನ್ನು ಬೆರಳತುದಿಯಲ್ಲಿ ಇಟ್ಟುಕೊಂಡವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಈಗಲೂ ದೆಹಲಿಯಲ್ಲಿ ಅವರ ಮಾತಿಗೆ ತೂಕ ಇದೆ.
ಇಂತಹವರು ಎಲ್ಲ ಮುಗಿದ ಮೇಲೆ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರು ಹಾಕಿ ಮುತ್ಸದ್ಧಿತನ ಮೆರೆಯುವ ಬದಲಿಗೆ ಮೊದಲೇ ಹೋಗಿ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಬಹುದಿತ್ತಲ್ಲವೇ?
ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿದ್ದಾಗ ಅನಂತಕುಮಾರ್ ಅವರನ್ನು ಕಟ್ಟಿಕೊಂಡು ಹೋಗಿ ಆಗಿನ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರಿಗೆ ಮನವೊಲಿಸಲು ಪ್ರಯತ್ನಿಸಿರಲಿಲ್ಲವೇ? ಈ ಬಾರಿ ಯಾಕೆ ಸುಮ್ಮನಿದ್ದರು?  ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಕಾವೇರಿ ಜನ ತಿರುಗಿಬಿದ್ದರೆ ತಮ್ಮ ಪಕ್ಷಕ್ಕೆ ಲಾಭ ಎಂಬ ರಾಜಕೀಯ ಲೆಕ್ಕಚಾರವೇನಾದರೂ ಅವರಲ್ಲಿತ್ತೇ?

ರೆಬೆಲ್‌ಸ್ಟಾರ್ ಖ್ಯಾತಿಯ ಅಂಬರೀಷ್ ಅವರು ಈಗ ಕಾವೇರಿ ಚಳವಳಿಯ ನಾಯಕರು. ಮಂಡ್ಯದ ಮತದಾರರು ಪ್ರೀತಿಯಿಂದ ಅವರನ್ನು ಆರಿಸಿ ಲೋಕಸಭೆಗೆ ಕಳುಹಿಸಿದ್ದರು. ಹತ್ತು ವರ್ಷ ಲೋಕಸಭೆಯಲ್ಲಿದ್ದ ಅವರು ರಾಜ್ಯಕ್ಕೆ ಸಂಬಂಧಿಸಿದ ಉಳಿದ ವಿಷಯ ಬಿಡಿ,ಕನಿಷ್ಠ ಕಾವೇರಿ ಬಗ್ಗೆಯಾದರೂ ಒಂದು ದಿನ ಮಾತನಾಡಿದ್ದರೇ? 
ಯುಪಿಎ ಸರ್ಕಾರ ಅವರನ್ನು ಸಚಿವರನ್ನಾಗಿ ಮಾಡಿದರೆ ಪ್ರಮಾಣವಚನ ಸ್ವೀಕರಿಸಿ ಬೆಂಗಳೂರಿಗೆ ಬಂದವರು ತಿರುಗಿ ಹೋಗಲಿಲ್ಲ.  ಕೇಂದ್ರ ಸಚಿವ ಮಂಡಳಿಯಲ್ಲಿ ರಾಜ್ಯಕ್ಕೆ ಸೇರಿರುವ ನಾಲ್ಕು ಮಂದಿ ಸಚಿವರಿದ್ದಾರೆ.  ಅವರಲ್ಲೊಬ್ಬರು ಮಂಡ್ಯದ ಮಣ್ಣಿನ ಮಗ.
ಉಳಿದವರು ಬಿಡಿ ಕನಿಷ್ಠ ಮಂಡ್ಯದ ಮಣ್ಣಿನ ಮಗನಾಗಿರುವ ಎಸ್.ಎಂ.ಕೃಷ್ಣ ಅವರಿಗೂ ರಾಜ್ಯದ ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕೆಂದು ಅನಿಸಲಿಲ್ಲವೇ? ನಮ್ಮ ರೈತರು ಎಷ್ಟೊಂದು ವಿಶಾಲಹೃದಯಿಗಳೆಂದರೆ ತಮ್ಮ ಕೈಬಿಟ್ಟವರನ್ನೇ ತಲೆಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುತ್ತಾರೆ.
ಇನ್ನೊಂದೆಡೆ ಅನಗತ್ಯವಾಗಿ ನ್ಯಾಯಾಲಯ, ನ್ಯಾಯಮಂಡಳಿ ವಿರುದ್ಧ ಕೂಗಾಡಿ ದ್ವೇಷ ಕಟ್ಟಿಕೊಳ್ಳುತ್ತಾರೆ. ಕನ್ನಡಿಗರ ರೋಷವೇ ಹೀಗೆ, ಅದರಲ್ಲಿ ಎಲ್ಲವನ್ನೂ ಸುಟ್ಟುಹಾಕುವ ಬೆಂಕಿ ಸ್ವಲ್ಪ ಹೆಚ್ಚು, ಕತ್ತಲಲ್ಲಿಯೂ ದಾರಿ ತೋರುವ ಬೆಳಕು ಕಡಿಮೆ.  ಈ ವರ್ಷದ ಸಮಸ್ಯೆಯೇನೋ ಇನ್ನು ಕೆಲವುದಿನಗಳಲ್ಲಿ ಮುಗಿದುಹೋಗುತ್ತದೆ.

ಮುಂದಿನ ದಿನಗಳು ಇನ್ನಷ್ಟು ಗಂಡಾಂತರಕಾರಿಯಾಗಲಿವೆ. ಮುಂದೇನು? ಅರಿವಿನ ಬೆಳಕಲ್ಲಿ ನೋಡಿದರೆ ದಾರಿಗಳು ಹಲವು ಇವೆ. ಇದು ಕೇವಲ ಮೈಸೂರು-ಮಂಡ್ಯದ ರೈತರ ಸಮಸ್ಯೆ ಅಲ್ಲ. ಇದನ್ನು ತಿಳಿದುಕೊಳ್ಳಬೇಕಾದರೆ ಯಾರಾದರೂ ತೆಪ್ಪಗೆ ಕೂತು ಐದು ಸಂಪುಟಗಳಲ್ಲಿರುವ ಕಾವೇರಿ ನ್ಯಾಯಮಂಡಳಿಯ ಐತೀರ್ಪನ್ನು ಓದಬೇಕು. ಆಗಲಾದರೂ ಬುದ್ದಿ ಬರಬಹುದೇನೋ?
ರಾಜ್ಯದ ಪುನರ್‌ಪರಿಶೀಲನಾ ಅರ್ಜಿಯನ್ನೇನಾದರೂ ಸುಪ್ರೀಂಕೋರ್ಟ್ ತಿರಸ್ಕರಿಸಿ ಐತೀರ್ಪನ್ನು ಅಂತಿಮ ಎಂದು ಸಾರಿದರೆ ಮೊದಲು ನೀರಿಲ್ಲದೆ ಸಾಯುವವರು ಬೆಂಗಳೂರು ಜನ. ಈ ಮಹಾನಗರಕ್ಕಾಗಿ ನಾವು ಕೇಳಿರುವುದು 30 ಟಿಎಂಸಿಅಡಿ ಕಾವೇರಿ ನೀರು, ನ್ಯಾಯಮಂಡಳಿ ನಿಗದಿಪಡಿಸಿರುವುದು 1.75 ಟಿಎಂಸಿಅಡಿ.

No comments:

Post a Comment