Showing posts with label ಗೌರಿ ಲಂಕೇಶ್‍. Show all posts
Showing posts with label ಗೌರಿ ಲಂಕೇಶ್‍. Show all posts

Sunday, September 24, 2017

ಮಂಗಳೂರು: ಗೌರಿ ಲಂಕೇಶ್‍ಗೆ ಬಿದ್ದ ಗುಂಡು ನನಗೂ ಬೀಳಬಹುದು: ಅಮೀನ್ ಮಟ್ಟು



ಮಂಗಳೂರಿನಲ್ಲಿ ನಾನು ಇಂದು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಬಗೆಬಗೆಯ ವ್ಯಾಖ್ಯಾನಗಳು ಮಾಧ್ಯಮಗಳಲ್ಲಿ ಪ್ರಕಟ/ಪ್ರಸಾರವಾಗುತ್ತಿವೆ.
ಆ ಭಾಷಣದ ಬಹುಚರ್ಚಿತ ಭಾಗದ ವಿಡಿಯೋ ಅಪ್ಲೋಡ್ ಮಾಡಿದ್ದೇನೆ, ಕೇಳಿ. 'ಮಟ್ಟುವನ್ನು ಮಟ್ಟ ಹಾಕಿ' ಎನ್ನುವ ಕೂಗು ಕೇಳಿಬಂದದ್ದು ಇದೇ ಮೊದಲೇನಲ್ಲ. ಸಂಸದ ಪ್ರಹ್ಲಾದ ಜೋಷಿ ಸೇರಿದಂತೆ ಸಂಘ ಪರಿವಾರದ ಹಲವಾರು ನಾಯಕರು ನೀಡಿದ್ದ ಇಂತಹ ಹೇಳಿಕೆ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. (ಗೂಗ್ಲ್ ಸರ್ಚ್ ಮಾಡಿದರೆ ಸಿಗುತ್ತೆ)
'ಗುಂಡು ನನಗೂ ಬೀಳಬಹುದು' ಎಂಬ ಹೇಳಿಕೆ ಈಗಿನ ಕೆಟ್ಟ ಕಾಲವನ್ನು ವಿವರಿಸುತ್ತಾ ಹೇಳಿದ್ದು. ನಾನು ಸಭೆಯಲ್ಲಿದ್ದವರನ್ನು ಉದ್ದೇಶಿಸಿ ಹೇಳಿದ್ದು 'ಗುಂಡು ನನಗೂ ಬೀಳಬಹುದು ನಿಮಗೂ ಬೀಳಬಹುದು' ಎಂದು. (ವಿಡಿಯೋ ನೋಡಿ)
ಇನ್ನು ಇಂಟಲಿಜೆನ್ಸ್ ವಿಚಾರ. ನಾನೆಲ್ಲಿಯೂ ರಾಜ್ಯ ಸರ್ಕಾರದ ಇಂಟಲಿಜೆನ್ಸ್ ಎಂದು ಹೇಳಿಲ್ಲ. ಸಂಘ ಪರಿವಾರದೊಳಗೆ ನನ್ನಂತಹವರಿಗೆ ಹಿತೈಷಿಗಳು ಇದ್ದೇ ಇರುತ್ತಾರೆ.
ಅಂತಹವರು ಇಂತಹ ಬಹಳಷ್ಟು ಸಂಗತಿಗಳನ್ನು ಆಗಾಗ ನನ್ನ ಗಮನಕ್ಕೆ ತರುತ್ತಿರುತ್ತಾರೆ. ಇದು ನನ್ನಂತಹವರು ಇಟ್ಟುಕೊಂಡಿರುವ ಇಂಟಲಿಜೆನ್ಸ್. ಕಾರ್ಕಳದ ಆರ್ ಎಸ್ ಎಸ್ ಸಭೆಯ ಬಗ್ಗೆ ಹೇಳಿದ್ದು ಕೂಡಾ ಇದೇ ಇಂಟಲಿಜೆನ್ಸ್. ( ಇದೇ ರೀತಿ ನಮ್ಮ ನಡುವೆ ನಡೆಯುತ್ತಿರುವುದನ್ನು ಅಲ್ಲಿ ಹೋಗಿ ಹೇಳುವವರೂ ಇದ್ದಾರೆ)
ಮಟ್ಟಹಾಕುವುದೆಂದರೆ ಗುಂಡು ಹಾರಿಸುವುದೆಂದಲ್ಲ, ಸುಳ್ಳು ಸುದ್ದಿಗಳನ್ನು ಬಿತ್ತಿ ಚಾರಿತ್ರ್ಯಹನನ, ಮಾನಸಿಕ ಕಿರುಕುಳ, ಅಪಪ್ರಚಾರ ಮೊದಲಾದವುಗಳ ಮೂಲಕ ನೈತಿಕಸ್ತೈರ್ಯ ಕುಸಿಯುವಂತೆ ಮಾಡುವುದು ಕೂಡಾ ಅವರ ಪ್ರಕಾರ ಮಟ್ಟ ಹಾಕುವ ಕ್ರಮ. ಇದನ್ನು ಕೂಡಾ ನನ್ನ ಹಿತೈಷಿಗಳಾದ ಆರ್ ಎಸ್ ಎಸ್ ಗೆಳೆಯರೊಬ್ಬರು ಹೇಳಿದ್ದು.
ಪ್ರಾಣ ಬೆದರಿಕೆಗಳೇನು ಹೊಸತೇನಲ್ಲ. ಫೇಸ್ ಬುಕ್ ನ ನನ್ನ ಪೋಸ್ಟ್ ಗಳಿಗೆ ಬರುವ ಪ್ರತಿಕ್ರಿಯೆಗಳನ್ನು ನೋಡಿದರೆ ಸಾಕು. ಸ್ವಾಮಿ ವಿವೇಕಾನಂದರ ಬಗ್ಗೆ ಹಿಂದೆ ನನ್ನ ಅಂಕಣದಲ್ಲಿ ಬರೆದಿದ್ದಾಗ ಅದನ್ನು ಅನಗತ್ಯವಾಗಿ ವಿವಾದವನ್ನಾಗಿಸಿದ 'ಸುಳ್ಳು ಬೆಲೆ' ಯೊಬ್ಬ ತನ್ನ ಕಿಡಿಗೇಡಿ ಗೆಳೆಯರ ಜತೆ ಕಳುಹಿಸಿದ್ದ 'count your days' ಸಂದೇಶಗಳ ದಾಖಲೆ ಈಗಲೂ ನನ್ನಲ್ಲಿವೆ.

Saturday, September 16, 2017

ಪತ್ರಕರ್ತ ನಟೇಶ್ ಬಾಬು ಗೌರಿ ನಿಂದಕರನ್ನು ಉದ್ದೇಶಿಸಿ ಬರೆದದ್ದು

ಮನಸ್ಸು ಮಾಡಿದ್ದರೆ ಸಾಮಾನ್ಯ ಗೃಹಿಣಿಯಂತೆ ಮನೆಯ ನಾಲ್ಕುಗೋಡೆಗಳ ನಡುವೆ ಉಳಿದುಬಿಡಬಹುದಿತ್ತು. ಟಿ.ವಿ ಸೀರಿಯಲ್ ನಾಳೆ ಏನಾಗುತ್ತೋ ಎಂದು ಚರ್ಚಿಸುತ್ತಾ, ಬೆಳಗಿನ ತಿಂಡಿಗೆ ಪದಾರ್ಥಗಳನ್ನು ಹೊಂದಿಸುತ್ತಾ ಕಳೆದು ಹೋಗಬಹುದಿತ್ತು. ಇಲ್ಲವೇ, ಯಾವುದೋ ಪತ್ರಿಕೆ ಅಥವಾ ಟಿ.ವಿ ಚಾನೆಲ್ ನಲ್ಲಿ ಲಕ್ಷಗಟ್ಟಲೇ ಸಂಬಳ, ಹೆಸರು ಗಳಿಸುತ್ತಾ, ತಮಗೆ ಆಗದವರನ್ನು ದೂಷಿಸುತ್ತಾ ಜೀವನ ಕಳೆಯಬಹುದಿತ್ತು. ಹೀಗೆ ಬದುಕಿದ್ದ ಪಕ್ಷದಲ್ಲಿ ಆಕೆಗೆ ಅಕಾಲಿಕ ಸಾವು ತಪ್ಪುತ್ತಿತ್ತು. ಆದರೆ, ಇಂಥ ಬದುಕನ್ನು ಗೌರಿಯಂಥ ದಿಟ್ಟೆ ಹೇಗೆ ಒಪ್ಪುತ್ತಾಳೆ? ಗೌರಿ ಆಯ್ಕೆ ಮಾಡಿಕೊಂಡದ್ದು ಮುಳ್ಳಿನ ಹಾದಿ. ತನ್ನ ಅಪ್ಪ ನಂಬಿದ್ದ ವಿಚಾರ, ಹೋರಾಟಗಳನ್ನು ಮುಂದುವರಿಸಲು ಬದುಕನ್ನು ಮೀಸಲಿಟ್ಟಳು. ಪತ್ರಿಕೆಯನ್ನು ಕೋಮುವಿರೋಧಿಗಳು, ಜಾತಿವಾದಿಗಳು, ದುಷ್ಟರನ್ನು ಹಣಿಯಲು ಅಸ್ತ್ರ ಮಾಡಿಕೊಂಡರು. ಯಾರೋ ಒಬ್ಬ ದಲಿತ, ಅಲ್ಪಸಂಖ್ಯಾತ, ದುರ್ಬಲನ ನೋವುಗಳಿಗೆ ದನಿಯಾದರು. ಶೋಷಿತರಿಗೆ ಶಕ್ತಿ ತುಂಬಿದಳು. ಸುತ್ತಾಟಗಳಿಗಂತೂ ಕೊನೆಯೇ ಇಲ್ಲ. ಅಲ್ಲೊಂದು ಪ್ರತಿಭಟನೆ, ಇಲ್ಲೊಂದು ಶಾಂತಿ ಸಭೆ, ಮತ್ತೆಲ್ಲೊ ಜಾಗೃತಿ ಜಾಥಾ ಹೀಗೆ ನೂರೊಂದು ಕೆಲಸಗಳು. ಕೋಮುವಾದ ಮತ್ತು ಮೌಢ್ಯದ ವಿರುದ್ಧ ಸಿಡಿದೆದ್ದಾಗ ಸಾವಿರಾರು ಶತ್ರುಗಳು ಎದ್ದು ನಿಂತರು. 

ಸೈದ್ಧಾಂತಿಕವಾಗಿ ಉತ್ತರ ನೀಡಲಾಗದ ಹೇಡಿಗಳು ಗೌರಿಯ ಸಿಗರೇಟು ಸೇವನೆಯನ್ನು ಗೇಲಿ ಮಾಡಿದರು. ಬದುಕಿರುವ ತನಕ ಕತ್ತಿ ಮಸೆಯುತ್ತಿದ್ದ ಕೋಮುವಾದಿಗಳಿಗೆ ಆಕೆಯ ಸಾವು ಒಳಗೊಳಗೆ ಖುಷಿ ತಂದಿದೆ. ಆದರೆ, ಸಭ್ಯರಂತೆ ಈಗ ನೀತಿ ಪಾಠ ಹೇಳಲು ನಿಂತಿದ್ದಾರೆ. ಸಾವನ್ನು ಯಾರೂ ಸಂಭ್ರಮಿಸಬಾರದು. ಆದರೆ, ಆ ವಿವೇಕ ಹೊಂದಿದವರು ಹೇಗೆ ದಾರಿ ತಪ್ಪುವರು? ಅನಂತಮೂರ್ತಿ ಸತ್ತಾಗ ಸಂಭ್ರಮಿಸಿದ್ದ ಮನಸ್ಸುಗಳೇ ಗೌರಿ ಹತ್ಯೆಯಲ್ಲೂ ಸಂಭ್ರಮಿಸಿವೆ. ಪೊಲೀಸರು ಮತ್ತು ಕಾನೂನಿನ ಭಯದಿಂದ ಕೆಲವರು ತಮ್ಮ ವಾಂತಿಯನ್ನು ಹೊಟ್ಟೆಯೊಳಗೇ ಹಿಡಿದಿಟ್ಟುಕೊಂಡಿದ್ದಾರೆ! ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಗೆ ಸೊಂಟದ ಕೆಳಗಿನ ಭಾಷೆ ಬಳಸುವ "ಸಂಸ್ಕೃತಿ' ರಕ್ಷಕರು, ಅವಕಾಶ ಸಿಕ್ಕಿದರೆ ಯಾವುದೇ ಸಾಹಸಕ್ಕೂ ಸೈ. ಆಕೆ ಇಂದು ನಮ್ಮ ನಡುವೆ ಇಲ್ಲ. ಆದರೆ, ಆಕೆ ಹೊತ್ತಿಸಿದ ದೀಪದ ಬೆಳಕು ಇನ್ನೂ ಇದೆ. ನಾಳೆಯೂ ಇರುತ್ತದೆ. ಗೌರಿ ಎನ್ನುವುದು ಒಬ್ಬ ವ್ಯಕ್ತಿಯಾಗಿ ಅಲ್ಲ, ಒಂದು ರೂಪಕವಾಗಿ ನಮ್ಮೊಂದಿಗೆ ಮುಂದುವರಿಯುತ್ತದೆ. ಮತ್ತು ಮುಂದುವರಿಯಬೇಕು.

ನಾನು ಕಂಡ ಗೌರಿ ಇಲ್ಲಿದ್ದಾಳೆ. ನಿಮಗೆ ಬೇರೆ ರೀತಿ ಕಂಡರೆ ನಾನು ಏನು ಮಾಡಲು ಸಾಧ್ಯ?