Friday, December 25, 2015

ವಿದ್ಯಾ ದಿನಕರ್ ಮತ್ತು ಒಂದಷ್ಟು ಧರ್ಮಾಂಧ ಯುವಕರು

ವಿದ್ಯಾ ದಿನಕರ್ ಅವರನ್ನು ಒಂದಷ್ಟು ಧರ್ಮಾಂಧ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ಕಂಡಾಗ ತಪ್ಪು ನಮ್ಮದ್ದಲ್ಲದಿದ್ದರೂ ಗಂಡೆಂದು ಹೇಳಿಕೊಳ್ಳಲು, ಪರಿಚಯವಿರುವ ಹೆಣ್ಣು ಮಕ್ಕಳ ಎದುರು ಕೂಡಾ ತಲೆಎತ್ತಲು ನಮಗೆ ಮುಜುಗರವಾಗುತ್ತಿರುವುದು ನಿಜ. ಆದರೆ ಇಂದು ಮಂಗಳೂರಿನಲ್ಲಿ ವಿದ್ಯಾ ದಿನಕರ್ ಅವರ ಮನೆಯಲ್ಲಿ ಇಬ್ಬರು ಗಂಡಸರನ್ನು ಭೇಟಿಯಾದ ನಂತರ ಗಂಡಾಗಿ ಹುಟ್ಟಿರುವ ಬಗ್ಗೆ ಹೆಮ್ಮೆ ಅನಿಸಿತು. ನಿಜಹೇಳಬೇಕೆಂದರೆ ವಿದ್ಯಾ ಅವರ ನಿಜವಾದ ಶಕ್ತಿಯೇ ಈ ಇಬ್ಬರು ಗಂಡಸರು. ಈ ಇಬ್ಬರಲ್ಲಿ ಒಬ್ಬರು ೮೪ ವರ್ಷದ ತಂದೆ,ಇನ್ನೊಬ್ಬರು ಹೆಂಡತಿಯನ್ನು ಮಗುವಿನಂತೆ ನೋಡಿಕೊಳ್ಳುತ್ತಿರುವ ಗಂಡ ನಟೇಶ್. ಮಗಳು ರೈಲಿನಲ್ಲಿ ಬಂದಿಳಿದಾಗ ಈ ಇಳಿವಯಸ್ಸಿನಲ್ಲಿಯೂ ತಾನೇ ಡ್ರೈವ್ ಮಾಡಿಕೊಂಡು ಬಂದು ಮನೆಗೆ ಕರೆದೊಯ್ಯುತ್ತಾರೆ ಈ ತಂದೆ.
ಅಷ್ಟೊಂದು ಪ್ರೀತಿ ವಿದ್ಯಾಳ ಮೇಲೆ.ಈ ತಂದೆಗೆ ಇನ್ನೂ ಮಗಳ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅವಹೇಳನಕಾರಿಯಾದ ದಾಳಿ ಬಗ್ಗೆ ತಿಳಿದಿಲ್ಲ. ತಿಳಿದಿದ್ದರೆ ಆ ವಯಸ್ಸಾದ ತಂದೆತಾಯಿ ಎಷ್ಟು ನೊಂದುಕೊಳ್ಳುತ್ತಿದ್ದರೇನೋ? ನಟೇಶ್ ಗೆ ಎಲ್ಲವೂ ಗೊತ್ತು. ವಿದ್ಯಾರಿಗೆ ಪ್ರಾಣ ಬೆದರಿಕೆ ಇದೇ ಮೊದಲ ಸಲವೇನಲ್ಲ.ಸಾಮಾನ್ಯ ಗಂಡಾಗಿದ್ದರೆ ಊರಿನ ಉಸಾಬರಿ ಯಾಕೆ ಎಂದು ಹೆಂಡತಿಗೆ ಗದರಿಸುತ್ತಿದ್ದರೇನೋ. ಆದರೆ ನಟೇಶ್ ವಿದ್ಯಾ ಅವರ ಹೆಜ್ಜೆ ಜತೆ ಹೆಜ್ಜೆ ಹಾಕಿ ಜತೆಯಲ್ಲಿ ನಿಂತಿದ್ದಾರೆ. ಈ ಕುಟುಂಬವನ್ನು ನೋಡಿದಾಗ ಎಲ್ಲ ಹೆಣ್ಣುಮಕ್ಕಳಿಗೆ ಇಂತಹ ತಂದೆ ಮತ್ತು ಗಂಡ ಸಿಕ್ಕಿಬಿಟ್ಟರೆ ನಮ್ಮಲ್ಲಿ ಎಷ್ಟು ಮಂದಿ ವಿದ್ಯಾ ದಿನಕರ್ ಗಳು ಹುಟ್ಟಿಕೊಳ್ಳುತ್ತಿದ್ದರೇನೋ ಎಂದು ಅನಿಸಿದ್ದು ನಿಜ. ಕೆಟ್ಟ ಗಂಡಸರಿಗೆ ಶಾಪಹಾಕುವ ಜತೆಯಲ್ಲಿ ಗಂಡುಜಾತಿ ಹೆಮ್ಮೆ ಪಡುವ ಈ ಇಬ್ಬರು ಗಂಡಸರಿಗೆ ನಿಮ್ಮದೊಂದು ಶುಭಹಾರೈಕೆ ಇರಲಿ.

Tuesday, December 22, 2015

ಜನನುಡಿಯ ಜಡಿಮಳೆ

ನನ್ನ ಮಗಳು ಸುಮಾರು ಮೂರು ವರ್ಷದವಳಾಗಿದ್ದಾಗ ಒಮ್ಮೆ ತುಂಟಾಟಕ್ಕಾಗಿ ಗದರಿದ್ದೆ. ತಕ್ಷಣ ಅವಳು ‘ಎಲ್ಲರೂ ಮನೆಗೆ ಬಂದು ನಿನ್ನನ್ನು ಸಾರ್, ಸಾರ್ ಎಂದು ಹೇಳುತ್ತಿದ್ದಾರಲ್ಲಾ ಅದಕ್ಕೆ ನಿನಗೆ ಸೊಕ್ಕು’ ಎಂದು ತಿರುಗಿ ನನಗೆ ಗದರಿದ್ದಳು. ಒಂದು ಕ್ಷಣ ಅವಕ್ಕಾಗಿದ್ದೆ. ಈಗಲೂ ಅವಳೇ ನನ್ನ ಗುರು. ನಾನು ಕೊಬ್ಬಿಹೋಗಿದ್ದೇನೆ ಎಂದು ಅನಿಸಿದಾಗಲೆಲ್ಲ ಮಗಳ ಗದರಿಕೆಯನ್ನು ನೆನಪುಮಾಡಿಕೊಂಡು ಇನ್ನಷ್ಟು ವಿನೀತನಾಗಲು ಪ್ರಯತ್ನಿಸುತ್ತೇನೆ.

ಇದನ್ನು ನೆನಪುಮಾಡಿಕೊಳ್ಳಲು ಕಾರಣ ಇದೆ. ಜನನುಡಿಯ ಜಡಿಮಳೆ ಸುರಿದ ನಂತರ ಮರದ ಮೇಲಿಂದ ಸಣ್ಣಗೆ ಮಳೆ ಹನಿಯಲಾರಂಭಿಸಿದೆ. ‘ಏನ್ಸಾರ್ ಅಷ್ಟೊಂದು ಬಿಝಿಯಾಗಿಬಿಟ್ಟಿರಿ? ಎದುರಿಗೆ ಸಿಕ್ಕರೂ ಮಾತನಾಡಿಸಲಿಲ್ಲ? ನಿಮ್ಮ ಜತೆ ಜಗಳ ಮಾಡುವುದಿತ್ತು ಸಾರ್, ಮಾತಿಗೆ ಸಿಗಲಿಲ್ಲ’ ಎಂಬೀತ್ಯಾದಿ ಸಣ್ಣ ದನಿಯ ಆಕ್ಷೇಪಗಳ ಜತೆಯಲ್ಲಿ ‘ ಹಿಂದೆ ಚೆನ್ನಾಗಿದ್ದೀರಿ ಸಾರ್, ವಿಧಾನಸೌಧಕ್ಕೆ ಹೋದ ನಂತರ ನೀವು ಬದಲಾಗಿಬಿಟ್ಟಿದ್ದೀರಿ, ಸ್ವಲ್ಪ ಕೊಬ್ಬು ಬಂದಿದೆ’ ಎಂದು ಕೆಲವರು ಮೆಸೆಜ್ ಬಾಕ್ಸ್ ನಲ್ಲಿ ಚುಚ್ಚಿದ್ದಾರೆ. (ಇದರಲ್ಲಿರುವ ಪ್ರೀತಿಯನ್ನು ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ದತೆ ನನಗಿದೆ) ಸಮಾನಮನಸ್ಕರಾದ ನಮ್ಮ ಜತೆಯಲ್ಲಿಯೇ ಕಳೆದ ಕೆಲವು ವರ್ಷಗಳಿಂದ ಇರುವ,ನಮ್ಮೆಲ್ಲ ಚಟುವಟಿಕೆಗಳ ಭಾಗವಾಗಿಯೇ ಇರುವ ಮತ್ತು ನಾವೆಲ್ಲರೂ ಪ್ರೀತಿಯಿಂದ ‘ಹೈಕಮಾಂಡ್’ ಎಂದು ಕರೆಯುವ ಕಿರಿಯ ಗೆಳತಿಯೊಬ್ಬರು ನಾನು ಷೇರ್ ಮಾಡಿದ ಗ್ರೂಪ್ ಪೋಟೊದಲ್ಲಿ ತಾನು ಇಲ್ಲದಿರುವುದನ್ನು ಕಂಡು ನೊಂದು ಮೆಸೆಜ್ ಹಾಕಿದ್ದಾರೆ. ( ಮೆಸೆಜ್ ವಿವರ ತುಸು ಕಟುವಾಗಿರುವ ಕಾರಣ ಅದನ್ನು ಇಲ್ಲಿ ಬರೆಯುತ್ತಿಲ್ಲ). ಅವರ ಮಾತಿನಲ್ಲಿ ಸ್ನೇಹಿತರೆಲ್ಲ ಅವರನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಆಕ್ಷೇಪ ಇದೆ.
ಈ ವರ್ಷದ ಜನನುಡಿಯಲ್ಲಿ ಭಾಗವಹಿಸಿದ್ದವರಲ್ಲಿ ಯುವಕ-ಯುವತಿಯರ ಸಂಖ್ಯೆಯೇ ದೊಡ್ಡದು. ಅವರೆಲ್ಲರ ಮುಖಪರಿಚಯ ನನಗಿಲ್ಲ, ಕೆಲವರು ಫೇಸ್ ಬುಕ್ ನಲ್ಲಿ ಹೆಸರಿನ ಮೂಲಕ ಪರಿಚಿತರು. ಇದರಿಂದಾಗಿ ಎದುರಿಗೆ ಸಿಕ್ಕಾಗಲು ಗುರುತಿಸಲಾಗದೆ ಮಾತನಾಡಿಸದೆ ಇದ್ದಿರಬಹುದು. ಎಲ್ಲರನ್ನು ಮಾತನಾಡಿಸಿ ಪರಿಚಯಿಸಿಕೊಳ್ಳಬೇಕೆಂಬ ಆಸೆ ನನಗಿತ್ತು, ನನ್ನಂತೆ ಉಳಿದವರಲ್ಲಿಯೂ ಇದ್ದಿರಬಹುದು. ಆದರೆ ಮುನೀರ್,ನವೀನ್, ಅನಂತನಾಯ್ಕ್ ಮೊದಲಾದ ಕಿರಿಯ ಗೆಳೆಯರ ಹೆಗಲಮೇಲಿನ ಭಾರ ಹಂಚಿಕೊಳ್ಳುವ ಉದ್ದೇಶದಿಂದ ಈ ಬಾರಿ ಸಭಾಂಗಣದ ಮುಂಭಾಗದಲ್ಲಿಯೇ ಹೆಚ್ಚು ಕಾಲ ಇದ್ದೆ.
ಊಟದ ಬಿಡುವಿನ ಸಮಯದಲ್ಲಿ ಯಾರೋನಾಲ್ಕೈದು ಗೆಳೆಯರು ಹಿಡಿದು ನಿಲ್ಲಿಸಿ ಪ್ರಶ್ನೆಗಳ ಸುರಿಮಳೆ ಸುರಿಸಿ ಹಿಂಡಿಹಿಪ್ಪೆ ಮಾಡಿಬಿಡುತ್ತಿದ್ದರು. ಆದ್ದರಿಂದ ಪರಿಚಯಿಸಿಕೊಳ್ಳಬೇಕಾದವರನ್ನು ಪರಿಚಯಿಸಿಕೊಳ್ಳಲಾಗಲಿಲ್ಲ ಎಂಬ ನೋವು ನನಗೂ ಇದೆ. ಅದು ಉಳಿದವರಲ್ಲಿಯೂ ಇರಬಹುದು. ಆದರೆ ಇದ್ಯಾವುದೂ ಉದ್ದೇಶಪೂರ್ವಕವಾದುದು ಅಲ್ಲ. ರಾತ್ರಿ ದೇವನೂರ ಜತೆ ಪೋಟೊ ತೆಗೆಸುವಾಗಲೂ ಅಲ್ಲಿದ್ದವರಷ್ಟೇ ಸೇರಿದ್ದರು. ಪೋಟೊದಲ್ಲಿ ಇಲ್ಲದವರು ನಮ್ಮವರಲ್ಲ ಎಂದು ಹೇಳಿ ನಾನು ಯಾವ ನರಕಕ್ಕೆ ಹೋಗಲಿ?
ನನ್ನ ಪ್ರೀತಿಗೆ, ಸ್ನೇಹಕ್ಕೆ ಅರ್ಹರೆನಿಸಿಕೊಂಡವರು ನನ್ನನ್ನು ನಿರ್ಲಕ್ಷಿಸುತ್ತಿದ್ದಾರೆಂದು ನನಗನಿಸಿದರೆ ಅವರ ಕತ್ತುಪಟ್ಟಿಹಿಡಿದು ಯಾಕೋ ಮಾತನಾಡುತ್ತಿಲ್ಲ ಎಂದು ಕೇಳುವ ಸ್ವಭಾವ ನನ್ನದು. ನನ್ನ ಕಿರಿಯ ಗೆಳೆಯ-ಗೆಳತಿಯರು ನನಗೆ ಹಾಗೆಯೇ ಮಾಡಬೇಕೆಂದು ನಾನು ಬಯಸುತ್ತೇನೆ.
ಏನೇ ಇರಲಿ, ಮತ್ತೊಮ್ಮೆ ನನ್ನ ಮಗಳ ಗದರಿಕೆಯನ್ನು ನೆನಪುಮಾಡಿಕೊಳ್ಳುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್.

Dinesh Amin Mattu: Jananudi 2015 @ Mangalore

Wednesday, December 16, 2015

ಗೌರವಿಸುವ ಹಕ್ಕು ಎಲ್ಲರಿಗೂ ಇದೆ, ಅವಮಾನಿಸುವ ಹಕ್ಕು ಯಾರಿಗೂ ಇರುವುದಿಲ್ಲ.

ನಾರಾಯಣ ಗುರುಗಳು ಜೀವಂತವಾಗಿದ್ದಿದ್ದರೆ ‘ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಟ್ರಸ್ಟ್ (ಎಸ್ ಎನ್ ಡಿಪಿ) ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಖಂಡಿತ ಕರೆಯುತ್ತಿರಲಿಲ್ಲ. ಮೋದಿಯವರ ಪರಿವಾರ ಪ್ರತಿನಿಧಿಸುವ ಸಿದ್ಧಾಂತದ ವಿರುದ್ಧವೇ ನಾರಾಯಣ ಗುರುಗಳು ಕೇರಳದಲ್ಲಿ ಚಳುವಳಿಯನ್ನು ಕಟ್ಟಿದವರು. 
‘ನಿಮ್ಮ ದೇವಸ್ಥಾನದೊಳಗೆ ನಮ್ಮನ್ನು ಪ್ರವೇಶಿಸಲು ಬಿಡದಿದ್ದರೆ ನಮ್ಮದೇ ದೇವಸ್ಥಾನ ಕಟ್ಟಿಕೊಳ್ಳುತ್ತೇವೆ, ನಮಗೆ ಪೂಜೆಯ ಹಕ್ಕು ಕೊಡದಿದ್ದರೆ ನಮ್ಮವರನ್ನೇ ಅರ್ಚಕರಾಗಿ ತಯಾರು ಮಾಡುತ್ತೇವೆ’ ಎಂದು ನಾರಾಯಣ ಗುರುಗಳು ಆ ಕಾಲದ ಪುರೋಹಿತಷಾಹಿಗೆ ಸವಾಲು ಹಾಕಿದ್ದರು. ಹೇಳಿದ್ದನ್ನು ಮಾಡಿಯೂತೋರಿಸಿದ್ದರು. 


ನಾರಾಯಣ ಗುರುಗಳ ಈ ಸಿದ್ಧಾಂತವನ್ನು ಮೋದಿ ಪರಿವಾರ ಅಂದು ಕೂಡಾ ಒಪ್ಪಿರಲಿಲ್ಲ, ಇಂದು ಕೂಡಾ ಒಪ್ಪುವುದಿಲ್ಲ. ಹೀಗಿದ್ದಾಗ ಎಸ್ ಎನ್ ಡಿಪಿ ಸಮಾರಂಭದಲ್ಲಿ ಭಾಗವಹಿಸುವ ನೈತಿಕ ಹಕ್ಕು ಮೋದಿಯವರಿಗೆಲ್ಲಿದೆ? ಅವರನ್ನು ಆಹ್ಹಾನಿಸಿ ನಾರಾಯಣ ಗುರುಗಳ ಚಿಂತನೆಗೆ ಅಪಚಾರವೆಸಗುವ ಅಧಿಕಾರ ಈಗಿನ ಎಸ್ ಎನ್ ಡಿಪಿ ನಾಯಕರಿಗೆಲ್ಲಿದೆ?
ನರೇಂದ್ರ ಮೋದಿಯವರು ಭಾರತದ ಚುನಾಯಿತ ಪ್ರಧಾನಿ, ದೇಶದ ಸರ್ವಶಕ್ತ ನಾಯಕ. ಹಿಂದೂಗಳ ಹೃದಯ ಸಾಮ್ರಾಟ, ಅವರ ಭಕ್ತರ ಪಾಲಿಗೆ ಡೆಮಿಗಾಡ್. ಅವರಿಗೆ ಅಸಾಧ್ಯವಾದುದು ಏನೂ ಇಲ್ಲ. ಹೀಗಿದ್ದಾಗ ದೇಶದ ಎಂಡೊಮೆಂಟ್ ದೇವಸ್ಥಾನಗಳಲ್ಲಿಯಾದರೂ ಅರ್ಚಕರನ್ನು ಜಾತಿ ಆಧಾರದಲ್ಲಿ ನೇಮಕ ಮಾಡದೆ ನಾರಾಯಣ ಗುರುಗಳು ಬಯಸಿದಂತೆ ಅರ್ಹತೆ ಆಧಾರದಲ್ಲಿ (ಆಗಮಶಾಸ್ತ್ರ ಪರಿಣತರು) ನೇಮಿಸುವ ಸಣ್ಣ ಕೆಲಸವನ್ನು ಅವರು ಯಾಕೆ ಮಾಡಬಾರದು?
ಅಂತಹದ್ದೊಂದು ಸಣ್ಣ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿ ತೋರಿಸಿದರೆ ಕೇರಳದ ಮೊದಲ ಈಳವ ಮುಖ್ಯಮಂತ್ರಿ ಆರ್.ಶಂಕರ್ ಅವರ ಜತೆಯಲ್ಲಿ ಮೋದಿಯವರ ಪ್ರತಿಮೆಯನ್ನೂ ಸ್ಥಾಪಿಸಬಹುದು. ಭಕ್ತರಾದರೂ ತಮ್ಮ ದೇವರಿಗೆ ಬುದ್ದಿ ಹೇಳಿ, ಇಲ್ಲದಿದ್ದರೆ ನಾರಾಯಣ ಗುರುಗಳನ್ನು ಅವರ ಪಾಡಿಗೆ ಬಿಟ್ಟು ಬಿಡಿ. ಗೌರವಿಸುವ ಹಕ್ಕು ಎಲ್ಲರಿಗೂ ಇದೆ, ಅವಮಾನಿಸುವ ಹಕ್ಕು ಯಾರಿಗೂ ಇರುವುದಿಲ್ಲ.

Friday, November 20, 2015

ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಸುಧಾರಣಾ ಕಾಯಿದೆಯಿಂದಾಗಿ ಭೂಮಿ ಪಡೆದುಕೊಂಡವರು, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಮೀಸಲಾತಿಯ ಫಲ ಉಂಡವರು ಮತ್ತು ಸಂತ ನಾರಾಯಣ ಗುರುಗಳ ಸಂದೇಶ ತೋರಿದ ಸುಧಾರಣೆಯ ಹಾದಿಯನ್ನು ಬಹಳ ಬೇಗ ತಿಳಿದುಕೊಂಡವರು ಬಿಲ್ಲವರು. ಈ ಎಲ್ಲ ಬೆಳವಣಿಗಳ ಫಲಾನುಭವಿ ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?
ಕೇರಳದಲ್ಲಿ ನಾರಾಯಣ ಗುರು ಚಳುವಳಿ ನಡೆದ 50 ವರ್ಷಗಳ ನಂತರ ಅಲ್ಲಿನ ಈಳವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ನಾರಾಯಣ ಗುರು ಚಳುವಳಿಯ ಯಶಸ್ಸಿನ ಬಿಂಬವನ್ನು ಆ ಸಮೀಕ್ಷೆಯ ವರದಿಯಲ್ಲಿ ಕಾಣಬಹುದು. ವಕೀಲರು, ವೈದ್ಯರು, ಪತ್ರಕರ್ತರು, ರಾಜಕಾರಣಿಗಳು,ಸರ್ಕಾರಿ ಅಧಿಕಾರಿಗಳು ಶಿಕ್ಷಕರು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್ ಗಳು, ಕಲಾವಿದರು ಸೇರಿದಂತೆ ಹತ್ತು ವೃತ್ತಿಗಳಲ್ಲಿರುವ ಈಳವರನ್ನು ಗುರುತಿಸುವ ಕೆಲಸಅಲ್ಲಿ ನಡೆಯಿತು. ಅಷ್ಟೊತ್ತಿಗೆ ಈ ಎಲ್ಲ ವೃತ್ತಿಗಳಲ್ಲಿ ಈಳವರು ತಮ್ಮ ಆಧಿಪತ್ಯ ಸ್ಥಾಪಿಸಿದ್ದರು.

ಕೇರಳದ ಈಳವರಂತೆಯೇ ನಾರಾಯಣ ಗುರುಗಳ ಮಾರ್ಗದರ್ಶನ ಪಡೆದ, ಅಲ್ಲಿಯಂತೆಯೇ ಭೂ ಸುಧಾರಣೆ ಮತ್ತು ಮೀಸಲಾತಿಯ ಫಲಾನುಭವಿಗಳಾದ ಬಿಲ್ಲವರು ಈಗ ಎಲ್ಲಿದ್ದಾರೆ? ಬಿಲ್ಲವರಲ್ಲಿ ಎಷ್ಟುಮಂದಿ ವಕೀಲರು, ವೈದ್ಯರು, ಎಂಜನಿಯರ್ ಗಳು, ಉದ್ಯಮಿಗಳು, ಪತ್ರಕರ್ತರು, ಸರ್ಕಾರಿ ನೌಕರರು, ಪ್ರಾಧ್ಯಾಪಕರು ಇದ್ದಾರೆ?
ಬಿಲ್ಲವ ಯುವಕರು ಎಲ್ಲಿದ್ದಾರೆಂದು ಹುಡುಕಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಗಳ ದಾಖಲೆಗಳನ್ನು ನೋಡಬೇಕು. ಸೂತ್ರಧಾರಿಗಳು ತಲೆಗೆ ತುಂಬಿದ ಧರ್ಮದ ನಶೆಯೇರಿಸಿಕೊಂಡ ಪಾತ್ರಧಾರಿ ಬಿಲ್ಲವ ಯುವಕರು ಧರ್ಮದ ಹೆಸರಲ್ಲಿ ಒಂದಷ್ಟು ಮಂದಿಯ ಪ್ರಾಣ ತೆಗೆದಿದ್ದಾರೆ, ತಾವೂ ಅದೇ ದ್ವೇಷಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹಾದಿ ತಪ್ಪಿದ ಈ ಅಮಾಯಕ ಯುವಕರ ಬಡ ತಂದೆತಾಯಿಗಳು ಬದುಕಿಯೂ ಸತ್ತಂತಿದ್ದಾರೆ.
ಈ ಪಾತ್ರಧಾರಿಗಳನ್ನು ಪೋಷಿಸಿಕೊಂಡು ಬಂದ ಸೂತ್ರಧಾರಿಗಳು ತಮ್ಮ ಮಕ್ಕಳನ್ನು ಡಾಕ್ಟರ್, ಎಂಜನಿಯರ್, ಅಡ್ವೋಕೇಟ್, ಉದ್ಯಮಿಗಳನ್ನಾಗಿ ಮಾಡಿ ಆಗಾಗ ಹಿಂದೂ ಧರ್ಮಕ್ಕೆ ಒದಗಿ ಬಂದ ಆಪತ್ತಿನ ಬಗ್ಗೆ ಅಂಗರಕ್ಷಕರನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ಭಾಷಣ ಮಾಡುತ್ತಾ ಹೊಸ ಬಲಿಪಶುಗಳನ್ನು ತಯಾರುಮಾಡುತ್ತಿದ್ದಾರೆ.
ಈ ಅಮಾಯಕ ಯುವಕರಿಗೆ ಸರಿತಪ್ಪು ತಿಳಿಸಿ ಅವರನ್ನು ಹಾದಿ ತಪ್ಪದಂತೆ ನೋಡಿಕೊಳ್ಳಬೇಕಾದ ಬಿಲ್ಲವ ಸಮುದಾಯದ ನಾಯಕರು ಧರ್ಮಸ್ಥಳ, ಕೊಲ್ಲೂರಿಗೆ ಪೈಪೋಟಿ ನೀಡುತ್ತಿದ್ದೇವೆ ಎಂದು ಎದೆತಟ್ಟಿಕೊಂಡು ದೇವಸ್ಥಾನದ ಜೀರ್ಣೋದ್ದಾರಕ್ಕೆ ತಮ್ಮನ್ನು ಅರ್ಪಿಸಿಕೊಂಡು ತಾವೇ ನಿಜವಾದ ಹಿಂದೂಗಳೆಂದು ಸಾಬೀತುಮಾಡಲು ಹೊರಟಿದ್ದಾರೆ. ನಾರಾಯಣ ಗುರು ಸ್ಥಾಪಿಸಿದ್ದ ದೇವಸ್ಥಾನದಲ್ಲಿ ಅವರ ಸಂದೇಶದ ಗೋರಿ ಕಾಣಿಸುತ್ತಿದೆ. ನಾರಾಯಣ ಗುರು ಸಂದೇಶದಿಂದ ಬೆಳಗಬೇಕಾದ ಬಿಲ್ಲವರ ಮನೆಗಳಲ್ಲಿ ಕತ್ತಲು ತುಂಬಿದೆ.
---------------------------------------------------------------------------------------------------------------------------------

(ನನಗೆ ವೈಯಕ್ತಿಕವಾಗಿ ಪರಿಚಿತರಲ್ಲದ ವಿಶು ಶೆಟ್ಟಿ ಮತ್ತು ಪರಿಚಿತರಾದ ಹರಿಶ್ಚಂದ್ರ ಭಟ್ ಸೇರಿದಂತೆ ಕೆಲವರು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನನ್ನದೂ ಒಂದಷ್ಟು ಪ್ರಶ್ನೆಗಳಿವೆ. ಅವುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ.)
ನಾನು ಮೊಗವೀರ,ಬ್ಯಾರಿ,ಬಂಟರ ಜತೆಯಲ್ಲಿ ವಿದ್ಯಾರ್ಥಿ ಜೀವನ ಮತ್ತು ವೃತ್ತಿ ಬದುಕಿನ ಸುಮಾರು 20 ವರ್ಷಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದವನು. ಈ ಎಲ್ಲ ಸಮುದಾಯಗಳ ನಡುವೆ ಆಗಲೂ ಸ್ನೇಹ, ಪ್ರೀತಿ,ವಿಶ್ವಾಸದ ಜತೆಯಲ್ಲಿ ಸಿಟ್ಟು, ಜಗಳ, ಅಸೂಯೆ, ದ್ವೇಷ ಕೂಡಾ ಇತ್ತು.
ಹಿಂದೂ ಹುಡುಗರು, ಮುಸ್ಲಿಮ್ ಹುಡುಗಿಯರನ್ನು ಛೇಡಿಸುವುದು, ಮುಸ್ಲಿಮ್ ಹುಡುಗರು ಹಿಂದೂ ಹುಡುಗಿಯರ ಜತೆ ಐಸ್ ಕ್ರೀಮ್ ಪಾರ್ಲರ್ ಗಳಿಗೆ ಹೋಗುವುದು ಕೂಡಾ ನಡೆದಿತ್ತು. ಎರಡೂ ಧರ್ಮಗಳ ಗಂಡು-ಹೆಣ್ಣಿನ ನಡುವಿನ ಅಕ್ರಮ ಸಂಬಂಧಗಳ ಬಗ್ಗೆ ಆಗಲೂ ಗಾಳಿಸುದ್ದಿಗಳು ಹಾರಾಡುತ್ತಿತ್ತು. ಈ ಕಾರಣಗಳಿಗಾಗಿ ನಮ್ಮ ನಡುವೆ ಜಗಳ-ಹೊಡೆದಾಟಗಳೂ ನಡೆಯುತ್ತಿದ್ದುದೂ ಉಂಟು.
ಆದರೆ ನಾವೆಂದೂ ಧರ್ಮದ ಕನ್ನಡಕ ಹಾಕಿಕೊಂಡು ಪ್ರೀತಿ-ಜಗಳ ಮಾಡುತ್ತಿರಲಿಲ್ಲ. ಆ ಕಾಲದಲ್ಲಿ ನನ್ನೂರಿನ ಹುಡುಗಿಯೊಬ್ಬಳನ್ನು ನನ್ನ ಮುಸ್ಲಿಮ್ ಸ್ನೇಹಿತ ಪ್ರೀತಿಸಿ ಮದುವೆಯಾದಾಗ ನಮ್ಮೂರು ಹೊತ್ತಿ ಉರಿದಿರಲಿಲ್ಲ. ಅದು ಎರಡು ಕುಟುಂಬಗಳಿಗೆ ಸಂಬಂಧಿಸಿದ ವಿಷಯವೆಂದು ಉಳಿದವರು ಅದನ್ನು ಸಹಜವಾಗಿ ಸ್ವೀಕರಿಸಿದ್ದರು.
ಆಗ ನಮ್ಮ ನಡುವೆ ಇಲ್ಲದ ಧರ್ಮ ಕೇಂದ್ರಿತ ಸಿಟ್ಟು, ಜಗಳ, ದ್ವೇಷ ಈಗ ಯಾಕೆ ಹುಟ್ಟಿಕೊಂಡಿದೆ ಎನ್ನುವುದು ಪ್ರಶ್ನೆ. ಪರಸ್ಪರ ಪ್ರಾಣ ತೆಗೆಯಲು ಕಾದಾಡುವಂತಹ ಮಟ್ಟಕ್ಕೆ ಹಿಂದೂ-ಮುಸ್ಲಿಮರು ಇಳಿಯುವಷ್ಟು ದ್ವೇಷ ಹುಟ್ಟಿಸುವ ಯಾವ ಘಟನೆ-ಬೆಳವಣಿಗೆ ಕಳೆದ ಮೂವತ್ತು ವರ್ಷಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಎನ್ನುವುದನ್ನು ಯಾರಾದರೂ ಹೇಳಬಲ್ಲಿರಾ?
ಹಿಂದೂಗಳು, ಮುಸ್ಲಿಮರ ಇಲ್ಲವೆ ಮುಸ್ಲಿಮರು ಹಿಂದೂಗಳ ಆಸ್ತಿ-ಭೂಮಿ ಕಿತ್ತುಕೊಂಡರೇ? ಸಾವಿರಾರು ಸಂಖ್ಯೆಯಲ್ಲಿ ಮತಾಂತರ ನಡೆಯಿತೇ? ಯಾವುದಾದರೂ ದೇವಸ್ಥಾನ, ಮಸೀದಿಗಳ ಧ್ವಂಸ ನಡೆಯಿತೇ? ಏನಾಯಿತು ಹೇಳಿ?


ಧರ್ಮದ ಕನ್ನಡಕ ಕೆಳಗಿಟ್ಟು ಸುತ್ತಲಿನ ಸಮಾಜ ನೋಡಿದರೆ ಬಂಟ,ಬ್ಯಾರಿ,ಬಿಲ್ಲವ,ಮೊಗವೀರ, ಕ್ರಿಶ್ಚಿಯನರು ಕೂಡಿ ಸ್ವಾಭಿಮಾನದಿಂದ ಕಟ್ಟಿದ ಸ್ವಾವಲಂಬಿ ಜಿಲ್ಲೆಯನ್ನು ಕಾಣಬಹುದು. ಅದು ಪರಸ್ಪರ ಕಾದಾಡಿ, ರಕ್ತಹರಿಸಿ ಕಟ್ಟಿದ್ದಲ್ಲ, ಶ್ರಮಪಟ್ಟು, ಊರೂರು ಅಲೆದು ಬೆವರು ಸುರಿಸಿ ಕಟ್ಟಿದ ಜಿಲ್ಲೆ. (ನನ್ನ ಅಪ್ಪ ಇದ್ದ ತುಂಡುಭೂಮಿಯನ್ನು ಉಳಿಸಲು ಮುಂಬೈಗೆ ಓಡಿ ಹೋಗಿ ಬೆವರು-ರಕ್ತ ಸುರಿಸಿ ದುಡಿಯದೆ ಇದ್ದಿದ್ದರೆ ನಾನು ಮಟ್ಟುವಿನಲ್ಲಿ ದೋಣಿ ಓಡಿಸುತ್ತಾ ಇರುತ್ತಿದ್ದೆನೋ ಏನೋ?)
ಈ ಜಿಲ್ಲೆಯ ಈಗಿನ ಸ್ಥಿತಿ ಏನಾಗಿದೆ ನೋಡಿ. ಬೀದಿಯಲ್ಲಿ ರಕ್ತ ಹರಿಯುತ್ತಿದೆ. ಪಾಸ್ ಪೋರ್ಟ್ ಕಚೇರಿ ಮುಂದೆ ಕ್ಯೂ ನಿಲ್ಲುತ್ತಿದ್ದ ಹಿಂದೂ-ಮುಸ್ಲಿಮ್ ಯುವಕರು ಪೊಲೀಸ್ ಠಾಣೆಯ ಮುಂದೆ ನಿಂತಿದ್ದಾರೆ. ಪೊಲೀಸ್ ಕೇಸ್ ಗಳಿಂದಾಗಿ ಬೇರೆ ದೇಶಗಳಿಗೆ ಹೋಗಿ ದುಡಿಯವ ಅವಕಾಶದ ಬಾಗಿಲು ಮುಚ್ಚಿದೆ. ಒಮ್ಮೆ ಕ್ರಿಮಿನಲ್ ಎಂಬ ಕಳಂಕ ಹತ್ತಿದರೆ ಅದನ್ನು ಕಿತ್ತುಹಾಕುವುದು ಕಷ್ಟ. ಈ ಚಕ್ರವ್ಯೂಹದೊಳಗೆ ಸಿಕ್ಕಿಹಾಕಿಕೊಂಡ ನಮ್ಮ ಯುವಕರು ಹೊರಬರಲಾಗದೆ ಇನ್ನಷ್ಟು ವ್ಯಗ್ರರಾಗಿ,ಕ್ರೂರಿಗಳಾಗಿ, ಕೊಲೆಗಡುಕರಾಗಿ ಬದಲಾಗುತ್ತಿದ್ದಾರೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾಗಿ ನಡೆಯಬೇಕಾದ ಹೋರಾಟದ ಬಗ್ಗೆ ಯಾರೂ ತಲೆ ಕೆಡಿಸುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬದಲಾಗುತ್ತಿದೆ. ನೆಲ-ಜಲ-ಜೀವದ ಧಾರಣಾ ಸಾಮರ್ಥ್ಯವನ್ನು ಮೀರಿ ಕೈಗಾರಿಕಿಕರಣ ನಡೆಯುತ್ತಿದೆ. ಕಳೆದ 30 ವರ್ಷಗಳಲ್ಲಿ ಸಾವಿರಾರು ಕುಟುಂಬಗಳು ಭೂಮಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಗಾಳಿಯಲ್ಲಿ ವಿಷ ತುಂಬಿದೆ. ಈ ಬಗ್ಗೆ ಸೊಲ್ಲೆತ್ತುವವರೇ ಇಲ್ಲ. ಶತ್ರುಗಳು ಮರೆಯಲ್ಲಿ ನಿಂತು ಮುಸಿಮುಸಿ ನಗುತ್ತಿದ್ದಾರೆ, ಮಿತ್ರರಂತೆ ಇರಬೇಕಾದವರು ಬೀದಿಯಲ್ಲಿ ಕಾದಾಡುತ್ತಿದ್ದಾರೆ.
ಹೀಗೆ ಯಾಕಾಯಿತು ಎಂದು ನಾನು ಬಿಡಿಸಿ ಹೇಳುವುದಿಲ್ಲ. ಅದು ಮತ್ತೆ ಬಿಜೆಪಿ-ಕಾಂಗ್ರೆಸ್ ನಡುವಿನ ಥೂಥೂ- ಮೈಮೈ ಜಗಳವಾಗುತ್ತದೆ. ಈ ಗಂಡಾಂತಕಾರಿ ಬೆಳವಣಿಗೆಯ ನಿಜವಾದ ಫಲಾನುಭವಿಗಳು ಯಾರು?ಬಲಿಪಶುಗಳು ಯಾರು ಎನ್ನುವುದನ್ನು ನೀವೇ ಯೋಚಿಸಿ ತೀರ್ಮಾನಕ್ಕೆ ಬನ್ನಿ.

Wednesday, November 18, 2015

‘ರಾಜೀವ್ ಗಾಂಧಿ, ನರಸಿಂಹ ರಾವ್ ಮಾಡಿದ್ದನ್ನು ವಾಜಪೇಯಿ ಮಾಡಲಿ’

ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಲ್ ಅವರ ನಿಧನಕ್ಕೆ ಕಂಬನಿಗರೆಯುತ್ತಿರುವವರನ್ನು ಕಂಡಾಗ 2002ರಲ್ಲಿ ಅಯೋಧ್ಯೆಯ ಕರಸೇವಕ ಪುರದಲ್ಲಿ ಅವರೊಡನೆ ನಾನು ನಡೆಸಿದ್ದ ಮಾತುಕತೆ ನೆನಪಾಯಿತು. (ಆಫ್ ದಿ ರೆಕಾರ್ಡ್ ಎಂದು ಹೇಳಿ ಸಿಂಘಲ್ ಅವರು ಬಿಜೆಪಿ ಮತ್ತು ಅಟಲ ಬಿಹಾರಿ ವಾಜಪೇಯಿ ಅವರ ಬಗ್ಗೆ ಹೇಳಿರುವುದನ್ನು ನಾನು ಬರೆದಿರಲಿಲ್ಲ)
‘ರಾಜೀವ್ ಗಾಂಧಿ, ನರಸಿಂಹ ರಾವ್ ಮಾಡಿದ್ದನ್ನು ವಾಜಪೇಯಿ ಮಾಡಲಿ’
ಅಯೋಧ್ಯೆ: ಫೆ.21 - ಮಾರ್ಚ್ 15ಕ್ಕೆ ಅಯೋಧ್ಯೆಯಲ್ಲಿ ಏನಾಗಬಹುದು? ವಾಜಪೇಯಿ ಕರೆಗೆ ಓಗೊಟ್ಟು ವಿಎಚ್ಪಿ ಮಂದಿರ ನಿರ್ಮಾಣವನ್ನು ಇನ್ನೆರಡು ವರ್ಷಗಳಿಗೆ ಮಂದೂಡಬಹುದೇ?.ಇಲ್ಲವೇ 1992ರ ಡಿಸೆಂಬರ್ ಆರು ಪುನರಾವರ್ತನೆಯಾಗಬಹುದೇ?. ಉತ್ತರ ಗೊತ್ತಿರುವ ವ್ಯಕ್ತಿ ಸುಲಭದಲ್ಲಿ ಬಾಯಿ ಬಿಡುತ್ತಿಲ್ಲ.‘ ಏನೂ ಆಗದಿದ್ದರೆ ಸತ್ಯಾಗ್ರಹವಂತೂ ಆಗಿಯೇ ಆಗುತ್ತದೆ. ಅದರ ಪರಿಣಾಮ ಏನೆಂಬುದನ್ನು ಈಗ ಹೇಳಲು ಸಾಧ್ಯ?’ ಎಂದು ಕೇಳುತ್ತಾರೆ ಮಂದಿರ ನಿರ್ಮಾಣದ ಸೂತ್ರಧಾರ ಅಶೋಕ್ ಸಿಂಘಲ್. ಮಂದಿರ ನಿರ್ಮಾಣ ಯೋಜನೆಯ ಕಂಟ್ರೋಲ್ ರೂಮ್ ಇರುವ ಕರಸೇವಕ ಪುರದಲ್ಲಿ ‘ಸತ್ಯಾಗ್ರಹ’ದ ತಯಾರಿ ನಡೆಯುತ್ತಿದೆ. ಹುಲ್ಲಿನ ಹೊದಿಕೆಯ ಬೃಹತ್ ಕುಟೀರದಲ್ಲಿ ಪೂರ್ಣಾಹುತಿ ಯಜ್ಞ ಪ್ರಾರಂಭವಾಗಿದೆ. ದೇಶದ ವಿವಿಧೆಡೆಗಳಿಂದ ರಾಮಸೇವಕರ ದಂಡು ಒರತೊಡಗಿದೆ. ಅವರ ಊಟ-ವಸತಿ-ಚಿಕಿತ್ಸೆಗೆ ಸಿದ್ಧತೆ ನಡೆಯುತ್ತಿದೆ. ಭೋಜನ ಶಾಲೆ, ಚಿಕಿತ್ಸಾಲಯ ಗೋಶಾಲೆ ಇಲ್ಲಿ ಎಲ್ಲವೂ ಇದೆ.
ಇದರ ಉಸ್ತುವಾರಿ ನೋಡುತ್ತಿರುವ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಲ್ ತನ್ನ ಕಛೇರಿಯಲ್ಲಿ ನಿರಾಳವಾಗಿ ಕೂತ್ತಿದ್ದಾರೆ. ಅಸ್ವಸ್ಥನಾಗಿದ್ದೇನೆ ಎಂದು ಮೊದಲು ಭೇಟಿ ನಿರಾಕರಿಸಿದ ಅಶೋಕ್ ಸಿಂಘಲ್ ಆನಂತರ ‘ಪ್ರಜಾವಾಣಿ’ ಜತೆ ಮಾತನಾಡಿದರು. ಮಾತನಾಡಿದರು ಅನ್ನುವುದಕ್ಕಿಂತ ಬಿಜೆಪಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಆದೇಶ ನೀಡುತ್ತಾ ಹೋದರು. ತಮ್ಮ ನಿಲುವನ್ನು ಸಮರ್ಥಿಸುತ್ತಾ ಹೋದರು ಎನ್ನುವುದೇ ಸರಿ.
‘’ಇಷ್ಟೆಲಾ ತಯಾರಿ ನಡೆಯುತ್ತಿರುವುದು. ಹನ್ನೆರಡು ಲಕ್ಷ ರಾಮಸೇವಕರನ್ನು ಮಾರ್ಚ್ 15ರ ಹೊತ್ತಿಗೆ ಅಯೋಧ್ಯೆಯಲ್ಲಿ ಸೇರಿಸುತ್ತಿರುವುದು ಕೇವಲ ಸತ್ಯಾಗ್ರಹಕ್ಕಾಗಿಯೇ? ಅಂದಾಜು ನಾಲ್ಕೈದು ಸಾವಿರ ಜನ ಸೇರಲು ಸಾಧ್ಯವಿರುವ ಕಾರಸೇವಕಪುರದಲ್ಲಿ ಅಷ್ಟೊಂದು ಸಂಖ್ಯೆಯ ರಾಮಸೇವಕರು ಹೇಗೆ ಉಳಿದುಕೊಳ್ಳಲು ಸಾಧ್ಯ?. ಅವರನ್ನೆಲ್ಲಾ ನಿಯಂತ್ರಿಸಲು ಸಾಧ್ಯವಾಗಬಹುದೇ?’’ ಈ ಪ್ರಶ್ನೆಗಳನ್ನು ಅವರು ನಿರೀಕ್ಷಿಸಿದ್ದರು.
‘’ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಮಂದಿರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಲು ಬರುವ ರಾಮಸೇವಕರನ್ನು ನಾವು ಹೇಗೆ ತಡೆಯಲು ಸಾಧ್ಯ?. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ವಶಕ್ಕೆ ತೆಗೆದುಕೊಂಡಿರುವ ನಿವೇಶವನ್ನು ಕೊಡಲಿ; ಎಲ್ಲವೂ ಶಾಂತಿಯುತವಾಗಿ ಪರಿಹಾರವಾಗುತ್ತದೆ’- ಇದು ಅಶೋಕ್ ಸಿಂಘಲ್ ಪರಿಹಾರ ಸೂತ್ರ.
ಅವರ ಪ್ರಕಾರ ಈ ಬಾರಿಯ ನಾಲ್ಕು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಕಂಡರೆ ಅದಕ್ಕೆ ಈ ಪಕ್ಷ ರಾಮಜನ್ಮಭೂಮಿ ಚಳವಳಿಯನ್ನು ನಿರ್ಲಕ್ಷಿಸಿದ್ದೇ ಕಾರಣವಂತೆ. ‘’ಪಕ್ಷದಲ್ಲಿರುವ ಬಹುತೇಕ ನಾಯಕರು ಚಳವಳಿಯನ್ನು ಬೆಂಬಲಿಸುತ್ತಾರೆ. ಆದರೆ ನಿರ್ಣಾಯಕ ಸ್ಥಾನದಲ್ಲಿರುವ ಒಬ್ಬಿಬ್ಬರು ನಾಯಕರು ಸಹಕಾರ ನೀಡುತ್ತಿಲ್ಲ’’ ಎನ್ನುವ ಸಿಂಘಲ್ ಆ ಒಬ್ಬಿಬ್ಬರು ವ್ಯಕ್ತಿಗಳ ಹೆಸರು ಹೇಳುವುದಿಲ್ಲ ಅವರಲ್ಲೊಬ್ಬರು ವಾಜಪೇಯಿಯವರಿರಬಹುದೇ?. ಹಾಗೆ ಕೇಳಿದರೆ, ‘’ ವಾಜಪೇಯಿಯವರು ಮಂದಿರ ನಿರ್ಮಾಣವನ್ನು ಯಾವಾಗ ವಿರೋಧಿಸಿದ್ದಾರೆ?. ಎಂದು ಥಟ್ಟನೇ ಪ್ರಶ್ನಿಸುತ್ತಾರೆ.


“ಆಟಲ್ ಬಿಹಾರಿ ವಾಜಪೇಯಿಯವರು ಈಗ ಕುಳಿತಿರುವ ಸ್ಥಾನ ರಾಮಮಂದಿರ ಚಳವಳಿಯ ಕೊಡುಗೆ. ಆ ಋಣ ತೀರಿಸುವ ಜವಾಬ್ದಾರಿ ಅವರ ಮೇಲಿದೆ. ರಾಜೀವ್ಗಾಂಧಿ ಕಾಲದಲ್ಲಿ ಶಿಲಾನ್ಯಾಸ ನಡೆಯಿತು; ನರಸಿಂಹ ರಾವ್ ಕಾಲದಲ್ಲಿ ವಿವಾದಾತ್ಮಕ ಕಟ್ಟಡ (ಬಾಬ್ರಿಮಸೀದಿ) ಧ್ವಂಸ ಮಾಡಲಾಯಿತು. ಈಗ ವಾಜಪೇಯಿಯವರ ಸರದಿ. ಅವರ ಕಾಲದಲ್ಲಿ ಮಂದಿರ ನಿರ್ಮಾಣವಾಗಬೇಕು. ಇದು ಸಮಸ್ತ ಹಿಂದೂಗಳ ಅಭಿಲಾಷೆ’’ – ಈ ಮಾತುಗಳನ್ನು ಹೇಳುವಾಗ ವಾಜಪೇಯಿಯವರ ಬಗ್ಗೆ ಇರುವ ಅಸಮಾಧಾನವನ್ನು ಅವರ ಮುಖದಲ್ಲಿ ಕಾಣುವುಕ್ಕೆ ಕಷ್ಟವಾಗಲಿಲ್ಲ.ಈ ವಿವಾದಕ್ಕೆ ಅಂತಿಮ ಪರಿಹಾರ ಏನು?. ‘’ಮುಸ್ಲಿಮರು ರಾಮಜನ್ಮಭೂಮಿ ಮೇಲೆ ಅನವಶ್ಯಕವಾಗಿ ತಮ್ಮ ಹಕ್ಕು ಚಲಾಯಿಸಲು ಹೋಗದೆ ಅದನ್ನು ಬಿಟ್ಟುಬಿಡುವುದೇ ಅಂತಿಮ ಪರಿಹಾರ. ಅವರು ಆ ನಿವೇಶನ ನೀಡಿದರೆ ನಾವು ಅವರಿಗೆ ಪ್ರೀತಿ-ವಿಶ್ವಾಸ-ರಕ್ಷಣೆ ನೀಡುತ್ತೇವೆ. ಮುಸ್ಲಿಮ್ ದೊರೆಗಳು 30 ಸಾವಿರ ದೇವಸ್ಥಾನಗಳನ್ನು ನಾಶ ಮಾಡಿದ್ದಾರೆ; ಅದರ ಬದಲಿಗೆ ನಾವು ಲಕ್ಷಾಂತರ ದೇವಸ್ಥಾನಗಳನ್ನು ಕಟ್ಟಿದ್ದೇವೆ. ಆದರೆ ರಾಮ ಹುಟ್ಟಿದ ಸ್ಥಳವನ್ನು ಹೇಗೆ ಬಿಡಲು ಸಾಧ್ಯ?’’ ಎನ್ನುವುದು ಅವರ ಪ್ರಶ್ನೆ.ಆ ನಂತರ ಕಾಶಿ. ಮಥುರಾದ ವಿವಾದವನ್ನು ಎತ್ತುವುದಿಲ್ಲವೆ?.
‘’ಅದನ್ನು ಹೇಗೆ ಬಿಟ್ಟುಬಿಡಲು ಸಾಧ್ಯ?. ಅಯೋಧ್ಯೆ. ಕಾಶಿ ಮಥುರಾ ಮೂರು ಕಡೆಗಳಿಂದಲೂ ಅವರು ಹೊರಹೋಗಬೇಕು. ಆಗ ಮಾತ್ರ ಎರಡು ಜನಾಂಗದ ನಡುವೆ ಸೌಹಾರ್ದಯುತ ಸಂಬಂಧ ಸಾಧ್ಯ. ನಾಸ್ತಿಕರನ್ನು (ಅಂದರೆ ಕಮ್ಯುನಿಸ್ಟರು ಮತ್ತು ಸೋಷಲಿಷ್ಟರಂತೆ) ನಂಬಿ ಅವರು ಎಷ್ಟು ದಿನ ಹಾರಾಡಲು ಸಾಧ್ಯ” ಎಂದು ಸಿಂಘಲ್ ಸಿಡಿಯುತ್ತಾರೆ.
ಕರಸೇವಕಪುರದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ ಮಾರ್ಚ್ 15ರಂದು ಮತ್ತೊಮ್ಮೆ ಅಯೋಧ್ಯೆ ದೇಶದ ಗಮನಸೆಳೆಯುವ ಸಾಧ್ಯತೆ ಸ್ಪಷ್ಟವಾಗಿ ಕಾಣುತ್ತದೆ. ಮಾರ್ಚ್ 15ರ ಹೊತ್ತಿಗೆ 12 ಲಕ್ಷ ರಾಮಸೇವಕರು ಇಲ್ಲಿ ಬರಲಿದ್ದಾರೆ ಎಂದು ವಿಎಚ್ಪಿ ನಾಯಕರು ಹೇಳುತ್ತಿದ್ದಾರೆ. ಅವರು ಅರ್ಧದಲ್ಲಿ ನಿಂತಿರುವ ಕಾರ್ಯ ಪೂರ್ಣಗೊಳಿಸಲು ಹೊರಡಬಹುದೇ?. ವಿಎಚ್ಪಿ ಉದ್ದೇಶ ಅದೇ ಇರಬಹುದೆಂದು ತೋರುತ್ತದೆ.


Monday, November 16, 2015

ಜನನುಡಿ-2015

ನಮ್ಮೆಲ್ಲರ ಪ್ರೀತಿಯ ದೇವನೂರು ಮಹದೇವ ಅವರು ಡಿಸೆಂಬರ್ 19-20ರಂದು ಮಂಗಳೂರಿನಲ್ಲಿ ನಡೆಯಲಿರುವ ಜನನುಡಿಯನ್ನು ಉದ್ಘಾಟಿಸಲು ಕೊನೆಗೂ ಒಪ್ಪಿಕೊಂಡಿದ್ದಾರೆ. 
ನಿನ್ನೆ ಮತ್ತೆ ಮಾತನಾಡುತ್ತಾ 'ಮಾನವೀಯ ನೆಲೆಯಲ್ಲಿ ನನ್ನ ಕೈಬಿಡಿ' ಎಂದು ಕೇಳಿಕೊಂಡರು. 'ಮಾನವೀಯ ನೆಲೆಯಲ್ಲಿಯೇ ನಮ್ಮ ಕೈ ಹಿಡಿಯಿರಿ ' ಎಂದು ಬೇಡಿಕೊಂಡೆ, ಒಪ್ಪಿಕೊಂಡರು.
ಮಹಾಮುಜುಗರದ ಈ ',ಮನುಷ್ಯ' ಇನ್ನು ನಮ್ಮ ಕೈಬಿಡಬಾರದೆಂದು ಈ ಸುದ್ದಿ ಯನ್ನು ಜಗಜ್ಜಾಹೀರುಗೊಳಿಸುತ್ತಿದ್ದೇನೆ.
ಅವರನ್ನು ಇನ್ನೊಂದು ಬಗೆಯ ಮುಜುಗರಕ್ಕೆ ಈಡುಮಾಡಬಾರದೆಂದು ಈ ಬಾರಿ ಖಂಡಿತ ಅವರಿಗೆ ಕಾಣೆಮೀನು ತಿನ್ನಿಸುವುದಿಲ್ಲ ಎಂದು ಆಣೆಮಾಡಿದ್ದೇನೆ. ನನ್ನ ಇಷ್ಟದ, ನಮ್ಮಂತಹವರ ಮೈಬಣ್ಣದ ಮತ್ತು ನಮ್ಮಂತಹವರಿಗೆ ಇಷ್ಟವಾಗುವ ಸುವಾಸನೆ ಬೀರುವ ಬೂತಾಯಿ ತಿನ್ನಿಸಬೇಕೆಂದಿದ್ದೇನೆ.

Tuesday, November 10, 2015

ಮಡಿಕೇರಿ ಗಲಭೆ

ಒಮ್ಮೊಮ್ಮೆ ಸುರಂಗದ ಕೊನೆಯಲ್ಲಿ ಬೆಳಕು ಕಾಣಿಸುತ್ತದೆ. ಮಡಿಕೇರಿ ಗಲಭೆ ಬಗ್ಗೆ ಟಿವಿ9 ಮತ್ತು ಸುವರ್ಣ ಟಿವಿ ಚಾನೆಲ್ ಗಳು
ವರದಿಯಲ್ಲಿ ತೋರಿದ ಸಂಯಮ ಮತ್ತು ಜನಪದ ಕಾಳಜಿಯಿಂದ ಮಾಡಿದ ಮನವಿ ಅಭಿನಂದನೆಗೆ ಮತ್ತು ಅನುಕರಣೆಗೆ ಅರ್ಹವಾದುದು.

Monday, November 9, 2015

ನಾವೂ ಖುಷಿಯಾಗಿರೋಣ

ನನಗೆ ಬಹಳ ಖುಷಿಯಾದಾಗ ಸಿಹಿ ತಿನ್ನುವುದಿಲ್ಲ, ಹೊಟ್ಟೆ ತುಂಬಿ ತೇಗು ಬರುವಷ್ಟು ಮೀನು ತಿನ್ನುತ್ತೇನೆ. ಈಗಷ್ಟೇ ಒಂದು ಕಿಲೋ ಕಾಣೆ ಮೀನು ತೆಗೆದುಕೊಂಡು ಬಂದೆ. ಬಾಯಲ್ಲಿ ನೀರು. ಇತ್ತೀಚೆಗೆ ಇಷ್ಟೊಂದು ಖುಷಿ ಎಂದೂ ಆಗಿರಲಿಲ್ಲ. ಈ ಖುಷಿ ಎಲ್ಲರದ್ದಾಗಲಿ. ಬಿಹಾರದ ಜನರಷ್ಟೇ ಯಾಕೆ ಖುಷಿಪಡಬೇಕು, ನಾವೂ ಖುಷಿಯಾಗಿರೋಣ.

Sunday, November 8, 2015

ನಿತೀಶ್‌ಕುಮಾರ್ ಸೋತರೆ ಬಿಹಾರ ಸೋತಂತೆ

(ಇದು 2010ರ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ (ನವಂಬರ್ 8, 2010) 'ಅನಾವರಣ' ಅಂಕಣ ಬರಹ. ಬಹುಷ: ಈ ಚುನಾವಣೆಯ ಪೂರ್ವದಲ್ಲಿ ಇದನ್ನು ಬರೆದಿದ್ದರೆ ನಿತೀಶ್ ಸೋತರೆ ಭಾರತ ಸೋತಂತೆ ಎಂದು ಬರೆಯುತ್ತಿದ್ದೆನೋ ಏನೋ)
ನಿತೀಶ್‌ಕುಮಾರ್ ಸೋತರೆ ಬಿಹಾರ ಸೋತಂತೆ
‘ಬಿಹಾರಕ್ಕೆ ಪ್ರಕೃತಿ ಎಲ್ಲವನ್ನೂ ಕೊಟ್ಟಿದೆ, ಫಲವತ್ತಾದ ಭೂಮಿ, ಹಿಮಾಲಯದಲ್ಲಿ ಹುಟ್ಟುವ ಎಲ್ಲ ನದಿಗಳ ನೀರು, ಸಮೃದ್ಧ ಖನಿಜ ಸಂಪತ್ತು ಮತ್ತು ಶ್ರಮಜೀವಿಗಳಾದ ಜನ. ಜತೆಗೆ ಬುದ್ಧ, ಮಹಾವೀರ, ಅಶೋಕ, ಚಂದ್ರಗುಪ್ತ ಮೌರ್ಯ, ಚಾಣಕ್ಯ, ಆರ್ಯಭಟ್ಟ, ಗುರುಗೋವಿಂದ ಸಿಂಗ್, ಶೇರ್ ಷಹಾ ಮೊದಲಾದ ಮಣ್ಣಿನ ಮಕ್ಕಳನ್ನೂ ಕೊಟ್ಟಿದೆ.
ಇವುಗಳೆಲ್ಲದರ ಜತೆಗೆ ಒಬ್ಬ ದೇವರಾಜ ಅರಸು ಅವರಂತಹ ನಾಯಕನನ್ನೂ ಕೊಟ್ಟಿದ್ದರೆ ಬಿಹಾರ ಖಂಡಿತ ಈಗಿನಂತೆ ಇರುತ್ತಿರಲಿಲ್ಲವೇನೋ...’ ಎಂದು ಆರು ವರ್ಷಗಳ ಹಿಂದೆ ಲೋಕಸಭಾ ಚುನಾವಣಾ ಸಮೀಕ್ಷೆಗಾಗಿ ಬಿಹಾರಕ್ಕೆ ಹೋಗಿ ಬಂದ ನಂತರ ಬರೆದಿದ್ದೆ. ಅದರ ನಂತರ ಎರಡು ಬಾರಿ ಲಾಲು ಪ್ರಸಾದ್ ಅವರ ಬಿಹಾರಕ್ಕೆ ಸುತ್ತುಹೊಡೆದಾಗಲೂ ಇದೇ ಅಭಿಪ್ರಾಯದ ನಿಟ್ಟುಸಿರು ನನ್ನಿಂದ ಹೊರಬಿದ್ದಿತ್ತು. ನಿತೀಶ್‌ಕುಮಾರ್ ಕಾಲದ ಈಗಿನ ಬಿಹಾರ ನಾನು ನೋಡಿಲ್ಲ, ಅಲ್ಲಿ ಇಲ್ಲಿ ಕೇಳಿದ್ದೇನೆ, ಒಂದಷ್ಟು ಓದಿದ್ದೇನೆ. ಬಿಹಾರಕ್ಕೆ ಕೊನೆಗೂ ಒಬ್ಬ ದೇವರಾಜ ಅರಸು ಸಿಕ್ಕಿದ್ದಾರೆ ಎಂದು ಹೇಳಲು ಆ ರಾಜ್ಯದ ಬಗ್ಗೆ ಕೇಳಿದ್ದು ಓದಿದ್ದು ಸಾಕೇನೋ? ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ಸೋತರೆ ಖಂಡಿತ ಬೇಸರವಾಗುತ್ತದೆ.
ಲಾಲು ಪ್ರಸಾದ್ ಗೆದ್ದುಬಿಟ್ಟರಲ್ಲಾ ಎಂಬುದಕ್ಕಲ್ಲ, ಶಾಪಗ್ರಸ್ತ ಬಿಹಾರಕ್ಕೆ ವಿಮೋಚನೆಯೇ ಇಲ್ಲದಂತಾಗುತ್ತದ್ದಲ್ಲ ಎಂಬುದಕ್ಕಾಗಿ. ಆದ್ದರಿಂದ ಬಿಹಾರದ ಜನತೆ ನಿತೀಶ್‌ಕುಮಾರ್ ಅವರನ್ನು ಸೋಲಲು ಬಿಡಬಾರದು. ಅವರು ಸೋತರೆ ಬಿಹಾರ ಸೋತಂತೆ.
ದೇವರಾಜ ಅರಸು ಅವರನ್ನು ನೆನಪು ಮಾಡಿಕೊಳ್ಳಲು ಕಾರಣ ಇದೆ. ಗಂಗಾನದಿಯ ಎರಡು ದಂಡೆಗಳಲ್ಲಿ ಹರಡಿಕೊಂಡಿರುವ ಬಿಹಾರದ ಮಣ್ಣು ಪಂಜಾಬ್, ಹರಿಯಾಣಗಳಿಗಿಂತಲೂ ಫಲವತ್ತಾದುದು. ಎರಡು ಅವಧಿಗಳಲ್ಲಿ ಬರುವ ಮಳೆ ವರ್ಷಕ್ಕೆ ಎರಡು ಬೆಳೆಗಳಿಗೆ ನೀರುಣಿಸುತ್ತದೆ. ದೇಶದ ಕೃಷಿಯೋಗ್ಯ ಭೂಮಿಯ ಪ್ರಮಾಣ ಶೇ 47, ಆದರೆ ಬಿಹಾರದಲ್ಲಿ ಇದು ಶೇ 61.
ಅತಿವೃಷ್ಟಿ ಮತ್ತು ಅನಾವೃಷ್ಟಿಯ ಹೊರತಾಗಿಯೂ ಅಲ್ಲಿನ ಭೂಮಿ ಕೈಕೊಟ್ಟಿದ್ದು ಕಡಿಮೆ. ಗಯಾ, ಜೆಹನಾಬಾದ್, ಬೆಟಿಯಾ, ದರ್ಬಾಂಗ...ಬಿಹಾರದ ಯಾವ ಮೂಲೆಗೂ ಹೋಗಿ, ತಟ್ಟನೆ ನಮ್ಮ ಗಮನ ಸೆಳೆಯುವುದು- ಕಣ್ಣು ಹಾಯಿಸಿದಷ್ಟು ದೂರ ಹಚ್ಚಹಸಿರಿನ ಚಾದರ ಹೊದ್ದುಕೊಂಡಂತಹ ಗದ್ದೆಗಳು. ಈ ವಿಸ್ಮಯದ ಜತೆಯಲ್ಲಿಯೇ ‘ಹೀಗಿದ್ದರೂ ಬಿಹಾರದಲ್ಲಿ ಇಷ್ಟೊಂದು ದಾರಿದ್ರ್ಯ ಯಾಕಿದೆ?’ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೂ ಉತ್ತರ ಇದೆ.
ಆ ರಾಜ್ಯದ ಶೇಕಡಾ 77ರಷ್ಟು ಕುಟುಂಬಗಳ ಸರಾಸರಿ ಭೂ ಹಿಡುವಳಿ ಒಂದು ಹೆಕ್ಟೇರ್ ಮಾತ್ರ. ಶೇಕಡಾ 19ರಷ್ಟು ಕುಟುಂಬಗಳು 1.4 ಹೆಕ್ಟೇರ್‌ನಷ್ಟು ಭೂ ಹಿಡುವಳಿ ಹೊಂದಿವೆ. ಶೇಕಡಾ ಒಂದರಷ್ಟು ಕುಟುಂಬಗಳು ನಾಲ್ಕು ಹೆಕ್ಟೇರ್‌ನಿಂದ ಸಾವಿರಾರು ಹೆಕ್ಟೇರ್‌ಗಳಷ್ಟು ಭೂಮಿ ಹೊಂದಿವೆ. ಎಷ್ಟೋ ಜಮೀನ್ದಾರರು ಮನುಷ್ಯರ ಹೆಸರಲ್ಲಿ ಮಾತ್ರ ಅಲ್ಲ, ಮನೆಯಲ್ಲಿರುವ ದನ, ಆಡು, ನಾಯಿಗಳ ಹೆಸರಲ್ಲಿ ಭೂಮಿ ಕೈಯಲ್ಲಿ ಇಟ್ಟುಕೊಂಡಿರುವ ದಾಖಲೆಗಳನ್ನು ಚಂಪಾರಣ್‌ದಲ್ಲಿ ಭೇಟಿಯಾಗಿದ್ದ ಸಿಪಿಐ (ಎಂಎಲ್) ಕಾರ್ಯಕರ್ತನೊಬ್ಬ ನನಗೆ ನೀಡಿದ್ದ. ಲಾಲುಪ್ರಸಾದ್ ಮುಖ್ಯಮಂತ್ರಿಯಾಗಿ ವಿಧಾನಸಭೆಯಲ್ಲಿ ಮಾಡಿದ ಮೊದಲ ಭಾಷಣದಲ್ಲಿ ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಸಾವಿರಾರು ಎಕರೆ ಭೂಮಿಯನ್ನು ವಶದಲ್ಲಿಟ್ಟುಕೊಂಡಿರುವ 377 ಭೂಮಾಲೀಕರ ಹೆಸರನ್ನು ಓದಿ ಹೇಳಿದ್ದರಂತೆ. ಪಶ್ಚಿಮಬಂಗಾಳದ ಮಾದರಿಯಲ್ಲಿ ‘ಬರ್ಗಾ ಕಾರ್ಯಾಚರಣೆ’ ಜಾರಿಗೆ ತಂದು ಅವರೆಲ್ಲರ ಹುಟ್ಟಡಗಿಸಿಬಿಡುತ್ತೇನೆ ಎಂದು ಅಬ್ಬರಿಸಿದ್ದರಂತೆ. ಅವರ ಎಲ್ಲ ಭರವಸೆಗಳಂತೆ ಅದು ಕೂಡಾ ಗಂಗಾ ನದಿಯಲ್ಲಿ ಕೊಚ್ಚಿಹೋಗಿತ್ತು.
ಬಿಹಾರದ ಇನ್ನೊಂದು ಕಟುವಾಸ್ತವವನ್ನು ನನ್ನೆದುರು ಅನಾವರಣಗೊಳಿಸಿದ್ದು ಮಹಾಬೀರ್ ರಾಯ್ ಎಂಬ ರಾಘೋಪುರದ ಒಬ್ಬ ಬಡರೈತ. ‘ಕಾಯ್ ಕಾ ವಿಕಾಸ್, ಸಮ್ಮಾನ್ ಕೇ ಬಿನಾ?’ (ಗೌರವ ಇಲ್ಲದ ಅಭಿವೃದ್ಧಿ ಯಾಕೆ?) ಎಂದು ಹೇಳಿ ನನ್ನನ್ನು ಕೆಕ್ಕರಿಸಿ ನೋಡಿದ್ದ ಸುಮಾರು 70 ವರ್ಷದ ಮಹಾಬೀರ್ ರಾಯ್‌ನ ಚಿತ್ರ ಇನ್ನೂ ನನ್ನ ಕಣ್ಣಮುಂದಿದೆ. ಬಿಜೆಪಿ ಮೊದಲ ಬಾರಿ ‘ಹಿಂದುತ್ವ’ ಅಜೆಂಡಾ ಮುಚ್ಚಿಟ್ಟು ಅಭಿವೃದ್ಧಿಯ ಮಂತ್ರ ಪಠಿಸುತ್ತಿದ್ದ ಕಾಲ ಅದು. ಇಡೀ ದೇಶ ಎನ್‌ಡಿಎ ನಡೆಸುತ್ತಿದ್ದ ‘ಇಂಡಿಯಾ ಶೈನಿಂಗ್’ (ಭಾರತ ಪ್ರಕಾಶಿಸುತ್ತಿದೆ!) ಪ್ರಚಾರದಲ್ಲಿ ಮುಳುಗಿಹೋಗಿತ್ತು. ಆಗಿನ ಮುಖ್ಯಮಂತ್ರಿ ರಾಬ್ಡಿದೇವಿ ಅವರ ವಿಧಾನಸಭಾ ಕ್ಷೇತ್ರವಾದ ರಾಘೋಪುರ್‌ನಲ್ಲಿ ಸಿಕ್ಕಿದ್ದ ಮಹಾಬೀರ್ ರಾಯ್‌ಗೆ ಇದನ್ನೆಲ್ಲ ವಿವರಿಸಿ ಬಿಹಾರದಲ್ಲಿ ಯಾರೂ ಅಭಿವೃದ್ಧಿಯ ಬಗ್ಗೆ ಮಾತನಾಡುವುದೇ ಇಲ್ಲವಲ್ಲಾ ಎಂದು ಹೇಳಿದಾಗ ಆತ ಸಿಟ್ಟುಮಾಡಿಕೊಂಡಿದ್ದ.
ಆತನ ಸಿಟ್ಟಿನ ಪ್ರತಿಕ್ರಿಯೆಯಲ್ಲಿಯೇ ಲಾಲು ಪ್ರಸಾದ್ ರಾಜಕೀಯ ಯಶಸ್ಸಿನ ಗುಟ್ಟು ಇತ್ತು. ಲಾಲು ಪ್ರಸಾದ್ ಅಧಿಕಾರಕ್ಕೆ ಬಂದದ್ದೇ ‘ವಿಕಾಸ್ ನಹೀಂ, ಪಹಲೇ ಸಮ್ಮಾನ್’ (ಮೊದಲು ಗೌರವ, ನಂತರ ಅಭಿವೃದ್ಧಿ) ಎನ್ನುವ ವಿಲಕ್ಷಣ ಘೋಷಣೆಯ ಮೂಲಕ.
ಬಿಹಾರದ ರಾಜಕೀಯ ಸಂತೆಯಲ್ಲಿ ಮಾತ್ರ ಮಾರಾಟ ಮಾಡಲು ಸಾಧ್ಯ ಇರುವ ಈ ಘೋಷಣೆಯ ಪರಿಣಾಮವನ್ನು ತಿಳಿದುಕೊಳ್ಳಬೇಕಾದರೆ ಬಿಹಾರದ ಹಳ್ಳಿಗಳಲ್ಲಿ ಸುತ್ತಾಡಬೇಕು. ಅಲ್ಲಿನ ಸಮಾಜವನ್ನು ಅಡ್ಡ-ಉದ್ದ ಸೀಳಿ ಹಾಕಿರುವ ಜಾತಿಗಳ ನಗ್ನನರ್ತನದ ಘೋರವೈಭವವನ್ನು ಕಿವಿಯಾರೆ ಕೇಳಬೇಕು. ಭೂಮಾಲೀಕರ ಮುಂದೆ ತಗ್ಗಿಸದ ತಲೆ ಮರುಕ್ಷಣದಲ್ಲಿ ಭುಜದ ಮೇಲೆ ಇರುತ್ತಿರಲಿಲ್ಲವಂತೆ. ಇದನ್ನು ಅಲ್ಲಿನ ಹಳ್ಳಿಗಳ ಜನ ‘ಚಾವು ಇಂಚ್ ಛೋಟಾ ಹೋಗಯಾ’ ಎನ್ನುತ್ತಿದ್ದರಂತೆ ನಿರ್ವಿಕಾರವಾಗಿ. ರಾಜ್ಯದ ಜನಸಂಖ್ಯೆಯಲ್ಲಿ ಮುಕ್ಕಾಲು ಪಾಲು ಜನ ತಲೆ ಉಳಿಸಿಕೊಳ್ಳಬೇಕಾದರೆ ತಲೆತಗ್ಗಿಸಿಯೇ ನಡೆಯಬೇಕಾದ ಸ್ಥಿತಿ ಇತ್ತು. ಲಾಲುಪ್ರಸಾದ್ ಪ್ರವೇಶವಾಗಿದ್ದೇ ಈ ಪರಿಸ್ಥಿತಿಯಲ್ಲಿ. ಆದರೆ ಅವರು ಜಾತಿ ತಾರತಮ್ಯ ನಿವಾರಣೆಗೆ ರಚನಾತ್ಮಕವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿಲ್ಲ, ತನ್ನ ರಾಜಕೀಯ ಉಳಿವಿಗಾಗಿ ಜಾತಿಕಲಹವನ್ನು ಬಳಸಿಕೊಂಡರು.
ಕೆಟ್ಟು ನಾರುತ್ತಿದ್ದ ವ್ಯವಸ್ಥೆಗೆ ಲಾಲುಪ್ರಸಾದ್ ‘ಪ್ರತಿಕ್ರಿಯೆ’ ರೂಪದಲ್ಲಿ ಪ್ರವೇಶ ಮಾಡಿದರೇ ಹೊರತು ‘ಪರಿಹಾರ’ ಆಗಲಿಲ್ಲ. ಮಂತ್ರದಂಡ ಎನ್ನುವುದು ಅಧಿಕಾರ ಕೈಯಲ್ಲಿ ಹಿಡಿದುಕೊಂಡ ಲಾಲು ಕೈಯಲ್ಲಿ ಇರಲಿಲ್ಲ, ನಾಲಿಗೆಯಲ್ಲಿ ಇತ್ತು. ಹುಂಬ ಜನ ತಲೆತೂಗುವಂತೆ ಮಾಡಬಲ್ಲ ವಿಚಿತ್ರ ಹಾವ ಭಾವಗಳಿಂದ ಕೂಡಿದ ಭಾಷಣದ ಮೂಲಕವೇ ಬಿಹಾರದ ಜನತೆಯನ್ನು ಲಾಲು ಬೆಳಿಗ್ಗೆ ಎಬ್ಬಿಸಿ, ಮಧ್ಯಾಹ್ನ ಊಟ ಮಾಡಿಸಿ ರಾತ್ರಿ ಮಲಗಿಸಿಬಿಡುತ್ತಿದ್ದರು. ಆದ್ದರಿಂದ ಒಂದು ದಿನ ಜನ ನಿದ್ದೆಯಿಂದ ಎದ್ದು ‘ಗೌರವ ಸಿಕ್ಕಿತು ನಿಜ, ಮುಂದೇನು?’ ಎಂದು ಪ್ರಶ್ನಿಸಿದಾಗ ಲಾಲು ಬಳಿ ಉತ್ತರ ಇರಲಿಲ್ಲ. ಇದು ಲಾಲು ದುರಂತ, ಬಿಹಾರದ್ದು ಕೂಡಾ.
ನಿರ್ದಯ ಊಳಿಗಮಾನ್ಯ ವ್ಯವಸ್ಥೆಗೆ ಕಾರಣವಾದ ಅಸಮಾನ ಭೂ ಹಿಡುವಳಿ ಮತ್ತು ನಿಶ್ಚಲವಾದ ಜಾತಿ ವ್ಯವಸ್ಥೆ ಹುಟ್ಟುಹಾಕಿರುವ ಅಸಮಾನತೆಯೇ ಬಿಹಾರಕ್ಕೆ ತಗಲಿರುವ ರೋಗಗಳು (ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಕಣ್ಣಿಗೆ ಕರ್ನಾಟಕದಲ್ಲಿ ಕಂಡದ್ದು ಕೂಡಾ ಇದೇ ರೋಗಗಳಿರಬೇಕಲ್ಲವೇ?). ಎಂಜಿನಿಯರಿಂಗ್ ಶಿಕ್ಷಣ ಪಡೆದಿರುವ ನಿತೀಶ್‌ಕುಮಾರ್ ವೈದ್ಯರ ಮಗ. ಬಿಹಾರಕ್ಕೆ ಅಗತ್ಯವಾಗಿದ್ದ ವೈದ್ಯನ ಚಿಕಿತ್ಸಕ ಗುಣ ಮತ್ತು ಎಂಜಿನಿಯರ್ ನಿರ್ಮಾಣ ಕೌಶಲದೊಡನೆ ಆಡಳಿತ ಸೂತ್ರ ಹಿಡಿದ ಅವರು ಇನ್ನೂ ಯಶಸ್ಸಿನ ಗುರಿ ಮುಟ್ಟದೆ ಇರಬಹುದು, ಆದರೆ ಅವರು ನಡೆಯುತ್ತಿರುವ ದಾರಿ ಸರಿಯಾಗಿದೆ.
ಅಧಿಕಾರಕ್ಕೆ ಬಂದ ಮೂರೇ ವರ್ಷಗಳಲ್ಲಿ ಭೂಮಿಯ ಸಮಾನ ಹಂಚಿಕೆಗಾಗಿ ‘ಭೂ ಸುಧಾರಣಾ ಆಯೋಗ’ ರಚಿಸಿರುವುದು ಅವರ ದಿಟ್ಟ ನಿರ್ಧಾರಗಳಲ್ಲೊಂದು. ‘ಬರ್ಗಾ ಕಾರ್ಯಾಚರಣೆ’ ಮಾದರಿಯಲ್ಲಿ ಭೂ ಸುಧಾರಣೆ ಜಾರಿಗೊಳಿಸುವುದು ಅವರ ಉದ್ದೇಶ. ಆದರೆ ಅವರ ನಿರೀಕ್ಷೆಯ ಗತಿಯಲ್ಲಿ ಈ ಕೆಲಸ ನಡೆಯುತ್ತಿಲ್ಲ ಎನ್ನುವುದು ನಿಜ. ಇದಕ್ಕೆ ಮುಖ್ಯ ಕಾರಣ ಉಳಿದೆಲ್ಲ ರಾಜ್ಯಗಳಿಗಿಂತಲೂ ಹೆಚ್ಚು ಸಂಘರ್ಷಮಯವಾದ ಜಾತಿ ರಾಜಕೀಯದ ಸುಳಿಯಲ್ಲಿ ಸಿಕ್ಕಿ ನರಳಾಡುತ್ತಿರುವ ಬಿಹಾರದಲ್ಲಿ ನಿತೀಶ್‌ಗೆ ಮತಹಾಕಿದವರಲ್ಲಿ ಹೆಚ್ಚಿನವರು ‘ಭೂಮಿ ನುಂಗಣ್ಣ’ರೇ ಆಗಿರುವುದು. ಆ ರಾಜ್ಯದಿಂದ ಹೊರಬೀಳುತ್ತಿರುವ ಸುದ್ದಿಗಳ ಪ್ರಕಾರ ಈ ‘ಭೂಮಿ ನುಂಗಣ್ಣ’ರು ಈ ಬಾರಿ ಕಾಂಗ್ರೆಸ್ ಪರ ವಾಲುತ್ತಿದ್ದಾರಂತೆ. ಆಶ್ಚರ್ಯ ಏನಿಲ್ಲ, ಸುಮಾರು 32 ವರ್ಷಗಳ ಕಾಲ ಆ ರಾಜ್ಯವನ್ನು ಆಳಿದ ಕಾಂಗ್ರೆಸ್ ಪಕ್ಷಕ್ಕೆ ಈ ಜಮೀನ್ದಾರ ವರ್ಗ ದೊಡ್ಡ ಮತಬ್ಯಾಂಕ್ ಆಗಿತ್ತು. ಇದರಿಂದಾಗಿಯೇ ನಿತೀಶ್‌ಕುಮಾರ್ ಅವರಿಗೆ ಮತ್ತು ಬಿಹಾರಕ್ಕೆ ಈ ಚುನಾವಣೆ ನಿರ್ಣಾಯಕ.
ಬಿಹಾರದ ಜಾತಿ ರಾಜಕಾರಣವನ್ನು ಲಾಲುಪ್ರಸಾದ್ ಅವರಷ್ಟೇ ಚೆನ್ನಾಗಿ ಬಲ್ಲವರು ನಿತೀಶ್‌ಕುಮಾರ್. ಒಂದು ಕಾಲದಲ್ಲಿ ಹಿಂದುಳಿದ ಜಾತಿಗಳಲ್ಲಿ ಬಲಾಢ್ಯವಾಗಿರುವ ಯಾದವ್-ಕುರ್ಮಿ-ಕೊಯಿರಿಗಳ ತ್ರಿವೇಣಿ ಸಂಘ ಕಟ್ಟಿಕೊಂಡೇ ಇಬ್ಬರೂ ಹಿಂದುಳಿದ ಜಾತಿಗಳ ಚಳವಳಿ ಪ್ರಾರಂಭಿಸಿದವರು. ಆದರೆ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 13ರಷ್ಟಿರುವ ಯಾದವರು ಲಾಲುಪ್ರಸಾದ್ ಅವರಲ್ಲಿ ನಾಯಕನನ್ನು ಕಂಡುಕೊಳ್ಳಲು ಪ್ರಾರಂಭಿಸಿದ ನಂತರ ನಿತೀಶ್ ಹಿಂದೆ ಬಿದ್ದರು. ಅಡ್ವಾಣಿ ರಥಯಾತ್ರೆಯನ್ನು ತಡೆಯುವ ಮೂಲಕ ರಾಜ್ಯದಲ್ಲಿ ಶೇಕಡಾ 15ರಷ್ಟಿರುವ ಮುಸ್ಲಿಮರೂ ಲಾಲು ನಾಯಕತ್ವವನ್ನು ಒಪ್ಪಿಕೊಂಡರು. ಈ ಎಂ-ವೈ ಕೂಟದ ಬೆಂಬಲವೇ ಅವರ ಪಕ್ಷ ಹದಿನೈದು ವರ್ಷಗಳ ಕಾಲ ಬಿಹಾರದ ಮೇಲೆ ಅಧಿಕಾರ ಚಲಾಯಿಸುವಂತೆ ಮಾಡಿದ್ದು. ಈ ಹಿನ್ನಡೆಯಿಂದ ಸುಧಾರಿಸಿಕೊಳ್ಳಲು ನಿತೀಶ್‌ಕುಮಾರ್ ಅವರಿಗೆ ಸುಮಾರು 20 ವರ್ಷಗಳು ಬೇಕಾಯಿತು. ಕಳೆದ ಚುನಾವಣೆಯಲ್ಲಿ ಅವರ ಪ್ರಯತ್ನಕ್ಕೆ ಸ್ವಲ್ಪ ಯಶಸ್ಸು ಸಿಕ್ಕಿತ್ತು.
ಬಿಹಾರದಲ್ಲಿ ತಲಾ ಶೇಕಡಾ ಒಂದಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿರುವ ತೇಲಿ, ಮಲ್ಲಾ, ಕಾನು, ಧನುಕ್, ಭೀಂಡ್ ಮೊದಲಾದ ನೂರಾರು ಅತಿ ಹಿಂದುಳಿದ ಜಾತಿಗಳಿವೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಈ ಅತಿ ಹಿಂದುಳಿದ ಜಾತಿಗಳ ಪ್ರಮಾಣ ಸುಮಾರು ಶೇಕಡಾ 32. ಶಿಕ್ಷಣ, ಉದ್ಯೋಗ, ರಾಜಕೀಯ ಸೇರಿದಂತೆ ಯಾವ ಕ್ಷೇತ್ರದಲ್ಲಿಯೂ ಈ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇಲ್ಲ. ಲಾಲು ಆಳ್ವಿಕೆಯಲ್ಲಿ ಪ್ರಬಲರಾದ ಯಾದವರ ಎದುರಲ್ಲಿ ಅಸುರಕ್ಷಿತ ಭಾವನೆಯಿಂದ ನರಳುತ್ತಿದ್ದ ಈ ಜಾತಿ ಜನ ಈಗ ನಿತೀಶ್‌ಕುಮಾರ್ ಅವರಲ್ಲಿ ಹೊಸ ನಾಯಕನನ್ನು ಕಾಣತೊಡಗಿದ್ದಾರೆ.
ಇದನ್ನೇ ಬಳಸಿಕೊಂಡು ನಿತೀಶ್‌ಕುಮಾರ್ ಅತಿಹಿಂದುಳಿದ ಜಾತಿಗಳಿಗೆ ವಿದ್ಯೆ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಶೇಕಡಾ 20ರ ಮೀಸಲಾತಿ ಕಲ್ಪಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಈ ಜಾತಿಗಳಿಗೆ ಪ್ರತ್ಯೇಕ ರಾಜಕೀಯ ಮೀಸಲಾತಿ ಒದಗಿಸಿದ್ದಾರೆ. ಸಮಗ್ರ ರೂಪದ ಸಾಮಾಜಿಕ ಸುಧಾರಣೆಗೆ ಈ ಕ್ರಮ ಅಗತ್ಯ ಆಗಿತ್ತು.
ಭೂಮಿ ಮತ್ತು ಜಾತಿ ಮೂಲದ ರೋಗಗಳಿಗೆ ಔಷಧಿ ನೀಡುವುದರ ಜತೆಗೆ ನಿತೀಶ್‌ಕುಮಾರ್ ಬಿಹಾರದ ಜನತೆಗೆ ಅಭಿವೃದ್ಧಿಯ ನೋಟವೊಂದನ್ನೂ ನೀಡಿದ್ದಾರೆ. ರಾಜಧಾನಿ ಪಟ್ನಾದಲ್ಲಿ ಮಾತ್ರವಲ್ಲ, ಬೇರೆ ಪಟ್ಟಣಗಳಲ್ಲಿಯೂ ರಾತ್ರಿ ಹೊತ್ತು ಅಂಗಡಿ-ಹೋಟೆಲ್‌ಗಳು ತೆರೆದಿರುತ್ತವೆಯಂತೆ, ಅಪಹರಣ-ಕೊಲೆ-ದರೋಡೆಯ ಸುದ್ದಿಗಳು ಮೊದಲಿನಂತೆ ಪ್ರತಿನಿತ್ಯ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾಗುತ್ತಿಲ್ಲವಂತೆ. ಹೇಮಮಾಲಿನಿಯ ಕೆನ್ನೆಯಷ್ಟು ನುಣುಪಾದ ರಸ್ತೆಗಳು ಇಲ್ಲದಿದ್ದರೂ ಕನಿಷ್ಠ ಓಂಪುರಿಯ ಕೆನ್ನೆಯಂತಹ ರಸ್ತೆಗಳಾದರೂ ಇದೆಯಂತೆ.
ಶಾಲೆಗಳಲ್ಲಿ ಶಿಕ್ಷಕರು ಇರುವುದರಿಂದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರಂತೆ. ಭ್ರಷ್ಟ ನೌಕರಷಾಹಿಗೆ ಲಗಾಮು ಬಿದ್ದಿದೆಯಂತೆ. ಬಿಹಾರದ ಹೆಸರೆತ್ತಿದರೆ ಬೆಚ್ಚಿಬೀಳುತ್ತಿದ್ದ ಬಂಡವಾಳ ಹೂಡಿಕೆದಾರರು ಹಣ ತಂದು ಸುರಿಯುತ್ತಿದ್ದಾರಂತೆ..... ನಿತೀಶ್‌ಕುಮಾರ್ ಅವರ ಬಿಹಾರವನ್ನು ನೋಡಬೇಕೆಂದು ಅನಿಸುತ್ತಿದೆ.
ಐ ಮಿಸ್ ಬಿಹಾರ್.

Monday, October 26, 2015

ದಿನೇಶ್ ಅಮಿನ್ ಮಟ್ಟು ಸರ್ ಹೇಳಿದ್ದನ್ನು ಗ್ರಹಿಸುತ್ತಾ.....

ಹೊನ್ನಾವರ: ಆರ್‌‌‌ಎಸ್ಎಸ್‌, ನಾರಾಯಣ ಗುರು ಹಾಗೂ ವಿವೇಕಾನಂದರು ಹೇಳಿದ ಧರ್ಮ ಅನುಸರಿಸಿದರೆ ತಾವು ಆರ್‌‌ಎಸ್ಎಸ್ ಸೇರಲು ಸಿದ್ಧ. ಒಂದು ವೇಳೆ ನನ್ನ ಷರತ್ತನ್ನು ಕಲ್ಲಡ್ಕ ಪ್ರಭಾಕರ್ ಭಟ್‌ ಒಪ್ಪಿದರೆ, ಪೇಜಾವರ ಮಠಕ್ಕೆ ನನ್ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌‌‌ಮಟ್ಟು ಹೇಳಿದರು.

ನಗರದಲ್ಲಿ ಮಂಥನ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ 'ಕಲಬುರ್ಗಿ ವಿಚಾರ ಮಾರ್ಗ ಮುಂದೇನು' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಮಕೃಷ್ಣರನ್ನು ಟೀಕಿಸುವ ಬದಲು, ರಾಮಮನೋಹರ ಲೋಹಿಯಾ, ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ ವಿಚಾರ ಹರಡುವ ಮೂಲಕ ವಿಚಾರವಾದ ಬೆಳೆಸಬೇಕಿದೆ. ಕುವೆಂಪು, ಕನಕದಾಸರ, ಬಸವಣ್ಣರನ್ನು ಓದಿಕೊಂಡವರು ಕೋಮುವಾದಿಯಾಗಲು ಸಾಧ್ಯವಿಲ್ಲ. ಹಾಗಾಗಿ ಈ ಐಕಾನ್‌‌‌ಗಳನ್ನು ಮುಂದಿಟ್ಟುಕೊಂಡು ಕೋಮುವಾದ ಎದುರಿಸಬೇಕು ಎಂದರು.
1991ರಲ್ಲಿ ಹೊಸ ಆರ್ಥಿಕ ನೀತಿ ಮತ್ತು ಬಾಬರಿ ಮಸೀದಿ ಬೀಳಿಸುವ ಮೂಲಕ ಕೋಮುವಾದವು ದೇಶವನ್ನು ಪ್ರವೇಶಿಸಿದವು. ಈ ಎರಡರ ಅಪಾಯವನ್ನು ಈಗ ಎದುರಿಸಬೇಕಿದೆ. ಅಚ್ಚೇ ದಿನದ ಪರಿಣಾಮ ವಿಚಾರವಾದಿಗಳ ಕೊಲೆಗಳು ಪತ್ರಿಕೆಗಳ ಮುಖಪುಟ ಆವರಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
***
* ಒಂದು ಅಡಿ ಟಿಪ್ಪಣಿ:
ಬಹಳಷ್ಟು ಗೆಳೆಯರು ಅಮ್ಮೀನ್ ಮಟ್ಟು ಸರ್ ಏನು ಹೇಳಿದ್ರು ಅಂತ ಓದಿದಂತಿಲ್ಲ. ಅವರ ಮಾತಿನ ವ್ಯಂಗ್ಯಾರ್ಥವನ್ನು ಗ್ರಹಿಸಿಲ್ಲ. ಻ಅವರ ಮಾತಿನ ಹಿಂದೆ ಇರುವ ಕೋಪವನ್ನು ಸಹ ಅರ್ಥಮಾಡಿಕೊಂಡಂತಿಲ್ಲ. ಪೆರಿಯಾರ, ಬಸವಣ್ಣ, ನಾರಾಯಣ ಗುರು ಅವರು ಹೇಳಿದ್ದನ್ನು ಆರ್.ಎಸ್.ಎಸ್. ಒಪ್ಪಿ ಅನುಸರಿಸಿದರೆ....ಆರ್.ಎಸ್.ಎಸ್. ಸೇರಬಹುದು. ಪೇಜಾವರ ಮಠಕ್ಕೆ ಉತ್ತರಾಧಿಕಾರಿ ಆಗುವುದು ಎಂದರೆ ಸನ್ಯಾಸಿಯಾಗಿ ಪೇಜಾವರರ ಈಗಿನ ತಾರತಮ್ಯ ನೀತಿ ಅನುಸರಿಸುವುದಲ್ಲ. ಸಮಾನತೆ ಮತ್ತು ಮನುಷ್ಯ ಪ್ರೀತಿಯನ್ನು ಅವರು ಒಪ್ಪಿ ಅನುಸರಿಸಿದರೆ ಎಂಬ ಶರತ್ತನ್ನು ಬಲಪಂಥೀಯರು ಹೆಚ್ಚು ಒತ್ತು ಕೊಟ್ಟು ಒಧಿ ಕೊಂಡಿಲ್ಲ. ಅಷ್ಟೆ. ``ಅದಕ್ಕೇ ಬರೀ ಓದು ಸಾಲದು. ವಿವೇಕ ಮುಖ್ಯ ಅಂಥ ''
ಮಾತಿನ ಒಳ ಅರ್ಥ , ಧ್ವನಿ ಗ್ರಹಿಕೆ ಸರಿಯಿದ್ದರೆ ಡಾ.ಕಲಬುರ್ಗಿ ಅವರ ಹತ್ಯೆ ನಡೆಯುತ್ತಿರಲಿಲ್ಲ. ಮಟ್ಟು ಸರ್ ಮಾತಿನ ಅರ್ಥ ...`` ಬಲಪಂಥೀಯರು ಬಡತನ, ಜಾತಿ ವ್ಯವಸ್ಥೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಕುರಿತು ಮಾತನಾಡುತ್ತಿಲ್ಲ''.`` ಧರ್ಮ ರಕ್ಷಣೆಯ ಭ್ರಮೆ ಮತ್ತು ಮುಖವಾಡದಲ್ಲಿ ಬದುಕುತ್ತಿದ್ದಾರೆ'' ಎಂದು. ಅಮ್ಮೀನ್ ಮಟ್ಟು ಸರ್ ಹೇಳಿದಂತೆ ಅವರ ಹೇಳಿಕೆಗೆ ಈಗಾಗಲೇ ಬಲಪಂಥೀಯರು ಫೇಸ್ ಬುಕ್ ನಲ್ಲಿ ವ್ಯಂಗ್ಯ ಆರಂಭಿಸಿದ್ದಾರೆ. ಅವರನ್ನು , ಅವರ ಹೇಳಿಕೆಗಳನ್ನು ಎಫ್ ಬಿ ಮೂಲಕ ಹಿಂಬಾಲಿಸುತ್ತಿದ್ದಾರೆ ಎಂಬುದು ನಿಜವಾಗಿದೆ. ಅವರು ನಿನ್ನೆ ಹೊನ್ನಾರವರದಲ್ಲಿ ಮಾತನಾಡಿದ ಮಾತುಗಳು ಅಪಾರ್ಥೀಕರಣ ಬಲಪಂಥೀಯರಿಂದ ಜೋರಾಗಿ ನಡೆದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಅದನ್ನು ವಿರೂಪಗೊಳಿಸುವ ಕಾರ್ಯ ಜೋರಾಗಿ ಸಾಗಿದೆ...
- ನಾಗರಾಜ ಹರಪನಹಳ್ಳಿ

Wednesday, October 21, 2015

ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಅತಿಹೆಚ್ಚು ಅತ್ಯಾಚಾರ

ರಾಷ್ಟ್ರೀಯ ಟಿವಿ ಚಾನೆಲ್ ಗಳನ್ನು ನೋಡುತ್ತಿರುವವರು ಕರ್ನಾಟಕದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಾಚಾರ ನಡೆಯುತ್ತಿವೆ ಎಂಬ ಅಭಿಪ್ರಾಯ ಹೊಂದಿದ್ದರೆ ಅದು ಅವರ ತಪ್ಪು ಖಂಡಿತ ಅಲ್ಲ. ಅರ್ನಾಬ್ ಗೋಸ್ವಾಮಿ ಮಧ್ಯಪ್ರದೇಶ ಇಲ್ಲವೆ ರಾಜಸ್ತಾನದಲ್ಲಿ ನಡೆಯುತ್ತಿರುವ ಅತ್ಯಾಚಾರಗಳ ಬಗ್ಗೆ ಶೋ ನಡೆಸಿದ್ದನ್ನು ಯಾರಾದಾರೂ ನೋಡಿದ್ದರೆ ದಯವಿಟ್ಟು ತಿಳಿಸಿ. ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಅಪರಾಧ ವರದಿ ಪ್ರಕಾರ ಕಳೆದ ವರ್ಷ ಅತ್ಯಂತ ಹೆಚ್ಚು ಅತ್ಯಾಚಾರಗಳು ನಡೆದಿರುವ ರಾಜ್ಯಗಳ ಪಟ್ಟಿಯ ಮೊದಲೆರಡು ಸ್ಥಾನಗಳಲ್ಲಿರುವುದು ಮಧ್ಯಪ್ರದೇಶ ಮತ್ತು ರಾಜಸ್ತಾನ.

Friday, October 9, 2015

ಪ್ರತಿಕ್ರಿಯೆ

ಸನ್ಮಾನ್ಯ ಶಾಸಕರಾದ ಸಿ.ಟಿ.ರವಿಯವರು ನನ್ನನ್ನು ಗೋಭಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಲು ಹೊರಟಿರುವದು ಕೇಳಿ ಸಂತೋಷವಾಯಿತು. ಅವರು ತಮ್ಮ ಪರಿವಾರವನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಪ್ರಭಾವ ಬೀರಿ ರಾಷ್ಟ್ರಮಟ್ಟದಲ್ಲಿ ಗೋಭಕ್ಷಣಾ ಆಯೋಗ ರಚಿಸಿ ಅದಕ್ಕೆ ನನ್ನನ್ನು ಅಧ್ಯಕ್ಷರನ್ನಾಗಿ ನೇಮಕಮಾಡಬೇಕೆಂದು ವಿನಯಪೂರ್ವಕವಾಗಿ ಕೋರುತ್ತೇನೆ. ಇದೇ ವೇಳೆ ರಾಷ್ಟ್ರಮಟ್ಟದಲ್ಕಿ 'ನರಭಕ್ಷಣಾ ಬೆಂಬಲಿಗರ ಆಯೋಗ ' ರಚಿಸಿ ಅದಕ್ಕೆ ಸದ್ಯ ನಿರುದ್ಯೋಗಿಯಾಗಿರುವ ಸಿ.ಟಿ.ರವಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಒತ್ತಾಯಿಸುತ್ತೇನೆ.