Friday, November 20, 2015

ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂ ಸುಧಾರಣಾ ಕಾಯಿದೆಯಿಂದಾಗಿ ಭೂಮಿ ಪಡೆದುಕೊಂಡವರು, ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಮೀಸಲಾತಿಯ ಫಲ ಉಂಡವರು ಮತ್ತು ಸಂತ ನಾರಾಯಣ ಗುರುಗಳ ಸಂದೇಶ ತೋರಿದ ಸುಧಾರಣೆಯ ಹಾದಿಯನ್ನು ಬಹಳ ಬೇಗ ತಿಳಿದುಕೊಂಡವರು ಬಿಲ್ಲವರು. ಈ ಎಲ್ಲ ಬೆಳವಣಿಗಳ ಫಲಾನುಭವಿ ಬಿಲ್ಲವರು ಎಲ್ಲಿರಬೇಕಿತ್ತು? ಎಲ್ಲಿದ್ದಾರೆ?
ಕೇರಳದಲ್ಲಿ ನಾರಾಯಣ ಗುರು ಚಳುವಳಿ ನಡೆದ 50 ವರ್ಷಗಳ ನಂತರ ಅಲ್ಲಿನ ಈಳವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿತ್ತು. ನಾರಾಯಣ ಗುರು ಚಳುವಳಿಯ ಯಶಸ್ಸಿನ ಬಿಂಬವನ್ನು ಆ ಸಮೀಕ್ಷೆಯ ವರದಿಯಲ್ಲಿ ಕಾಣಬಹುದು. ವಕೀಲರು, ವೈದ್ಯರು, ಪತ್ರಕರ್ತರು, ರಾಜಕಾರಣಿಗಳು,ಸರ್ಕಾರಿ ಅಧಿಕಾರಿಗಳು ಶಿಕ್ಷಕರು, ಉದ್ಯಮಿಗಳು, ವ್ಯಾಪಾರಿಗಳು, ಬ್ಯಾಂಕರ್ ಗಳು, ಕಲಾವಿದರು ಸೇರಿದಂತೆ ಹತ್ತು ವೃತ್ತಿಗಳಲ್ಲಿರುವ ಈಳವರನ್ನು ಗುರುತಿಸುವ ಕೆಲಸಅಲ್ಲಿ ನಡೆಯಿತು. ಅಷ್ಟೊತ್ತಿಗೆ ಈ ಎಲ್ಲ ವೃತ್ತಿಗಳಲ್ಲಿ ಈಳವರು ತಮ್ಮ ಆಧಿಪತ್ಯ ಸ್ಥಾಪಿಸಿದ್ದರು.

ಕೇರಳದ ಈಳವರಂತೆಯೇ ನಾರಾಯಣ ಗುರುಗಳ ಮಾರ್ಗದರ್ಶನ ಪಡೆದ, ಅಲ್ಲಿಯಂತೆಯೇ ಭೂ ಸುಧಾರಣೆ ಮತ್ತು ಮೀಸಲಾತಿಯ ಫಲಾನುಭವಿಗಳಾದ ಬಿಲ್ಲವರು ಈಗ ಎಲ್ಲಿದ್ದಾರೆ? ಬಿಲ್ಲವರಲ್ಲಿ ಎಷ್ಟುಮಂದಿ ವಕೀಲರು, ವೈದ್ಯರು, ಎಂಜನಿಯರ್ ಗಳು, ಉದ್ಯಮಿಗಳು, ಪತ್ರಕರ್ತರು, ಸರ್ಕಾರಿ ನೌಕರರು, ಪ್ರಾಧ್ಯಾಪಕರು ಇದ್ದಾರೆ?
ಬಿಲ್ಲವ ಯುವಕರು ಎಲ್ಲಿದ್ದಾರೆಂದು ಹುಡುಕಬೇಕಾದರೆ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ಠಾಣೆಗಳ ದಾಖಲೆಗಳನ್ನು ನೋಡಬೇಕು. ಸೂತ್ರಧಾರಿಗಳು ತಲೆಗೆ ತುಂಬಿದ ಧರ್ಮದ ನಶೆಯೇರಿಸಿಕೊಂಡ ಪಾತ್ರಧಾರಿ ಬಿಲ್ಲವ ಯುವಕರು ಧರ್ಮದ ಹೆಸರಲ್ಲಿ ಒಂದಷ್ಟು ಮಂದಿಯ ಪ್ರಾಣ ತೆಗೆದಿದ್ದಾರೆ, ತಾವೂ ಅದೇ ದ್ವೇಷಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹಾದಿ ತಪ್ಪಿದ ಈ ಅಮಾಯಕ ಯುವಕರ ಬಡ ತಂದೆತಾಯಿಗಳು ಬದುಕಿಯೂ ಸತ್ತಂತಿದ್ದಾರೆ.
ಈ ಪಾತ್ರಧಾರಿಗಳನ್ನು ಪೋಷಿಸಿಕೊಂಡು ಬಂದ ಸೂತ್ರಧಾರಿಗಳು ತಮ್ಮ ಮಕ್ಕಳನ್ನು ಡಾಕ್ಟರ್, ಎಂಜನಿಯರ್, ಅಡ್ವೋಕೇಟ್, ಉದ್ಯಮಿಗಳನ್ನಾಗಿ ಮಾಡಿ ಆಗಾಗ ಹಿಂದೂ ಧರ್ಮಕ್ಕೆ ಒದಗಿ ಬಂದ ಆಪತ್ತಿನ ಬಗ್ಗೆ ಅಂಗರಕ್ಷಕರನ್ನು ಅಕ್ಕಪಕ್ಕದಲ್ಲಿಟ್ಟುಕೊಂಡು ಭಾಷಣ ಮಾಡುತ್ತಾ ಹೊಸ ಬಲಿಪಶುಗಳನ್ನು ತಯಾರುಮಾಡುತ್ತಿದ್ದಾರೆ.
ಈ ಅಮಾಯಕ ಯುವಕರಿಗೆ ಸರಿತಪ್ಪು ತಿಳಿಸಿ ಅವರನ್ನು ಹಾದಿ ತಪ್ಪದಂತೆ ನೋಡಿಕೊಳ್ಳಬೇಕಾದ ಬಿಲ್ಲವ ಸಮುದಾಯದ ನಾಯಕರು ಧರ್ಮಸ್ಥಳ, ಕೊಲ್ಲೂರಿಗೆ ಪೈಪೋಟಿ ನೀಡುತ್ತಿದ್ದೇವೆ ಎಂದು ಎದೆತಟ್ಟಿಕೊಂಡು ದೇವಸ್ಥಾನದ ಜೀರ್ಣೋದ್ದಾರಕ್ಕೆ ತಮ್ಮನ್ನು ಅರ್ಪಿಸಿಕೊಂಡು ತಾವೇ ನಿಜವಾದ ಹಿಂದೂಗಳೆಂದು ಸಾಬೀತುಮಾಡಲು ಹೊರಟಿದ್ದಾರೆ. ನಾರಾಯಣ ಗುರು ಸ್ಥಾಪಿಸಿದ್ದ ದೇವಸ್ಥಾನದಲ್ಲಿ ಅವರ ಸಂದೇಶದ ಗೋರಿ ಕಾಣಿಸುತ್ತಿದೆ. ನಾರಾಯಣ ಗುರು ಸಂದೇಶದಿಂದ ಬೆಳಗಬೇಕಾದ ಬಿಲ್ಲವರ ಮನೆಗಳಲ್ಲಿ ಕತ್ತಲು ತುಂಬಿದೆ.
---------------------------------------------------------------------------------------------------------------------------------

(ನನಗೆ ವೈಯಕ್ತಿಕವಾಗಿ ಪರಿಚಿತರಲ್ಲದ ವಿಶು ಶೆಟ್ಟಿ ಮತ್ತು ಪರಿಚಿತರಾದ ಹರಿಶ್ಚಂದ್ರ ಭಟ್ ಸೇರಿದಂತೆ ಕೆಲವರು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನನ್ನದೂ ಒಂದಷ್ಟು ಪ್ರಶ್ನೆಗಳಿವೆ. ಅವುಗಳನ್ನು ನಿಮ್ಮ ಮುಂದಿಟ್ಟಿದ್ದೇನೆ.)
ನಾನು ಮೊಗವೀರ,ಬ್ಯಾರಿ,ಬಂಟರ ಜತೆಯಲ್ಲಿ ವಿದ್ಯಾರ್ಥಿ ಜೀವನ ಮತ್ತು ವೃತ್ತಿ ಬದುಕಿನ ಸುಮಾರು 20 ವರ್ಷಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದವನು. ಈ ಎಲ್ಲ ಸಮುದಾಯಗಳ ನಡುವೆ ಆಗಲೂ ಸ್ನೇಹ, ಪ್ರೀತಿ,ವಿಶ್ವಾಸದ ಜತೆಯಲ್ಲಿ ಸಿಟ್ಟು, ಜಗಳ, ಅಸೂಯೆ, ದ್ವೇಷ ಕೂಡಾ ಇತ್ತು.
ಹಿಂದೂ ಹುಡುಗರು, ಮುಸ್ಲಿಮ್ ಹುಡುಗಿಯರನ್ನು ಛೇಡಿಸುವುದು, ಮುಸ್ಲಿಮ್ ಹುಡುಗರು ಹಿಂದೂ ಹುಡುಗಿಯರ ಜತೆ ಐಸ್ ಕ್ರೀಮ್ ಪಾರ್ಲರ್ ಗಳಿಗೆ ಹೋಗುವುದು ಕೂಡಾ ನಡೆದಿತ್ತು. ಎರಡೂ ಧರ್ಮಗಳ ಗಂಡು-ಹೆಣ್ಣಿನ ನಡುವಿನ ಅಕ್ರಮ ಸಂಬಂಧಗಳ ಬಗ್ಗೆ ಆಗಲೂ ಗಾಳಿಸುದ್ದಿಗಳು ಹಾರಾಡುತ್ತಿತ್ತು. ಈ ಕಾರಣಗಳಿಗಾಗಿ ನಮ್ಮ ನಡುವೆ ಜಗಳ-ಹೊಡೆದಾಟಗಳೂ ನಡೆಯುತ್ತಿದ್ದುದೂ ಉಂಟು.
ಆದರೆ ನಾವೆಂದೂ ಧರ್ಮದ ಕನ್ನಡಕ ಹಾಕಿಕೊಂಡು ಪ್ರೀತಿ-ಜಗಳ ಮಾಡುತ್ತಿರಲಿಲ್ಲ. ಆ ಕಾಲದಲ್ಲಿ ನನ್ನೂರಿನ ಹುಡುಗಿಯೊಬ್ಬಳನ್ನು ನನ್ನ ಮುಸ್ಲಿಮ್ ಸ್ನೇಹಿತ ಪ್ರೀತಿಸಿ ಮದುವೆಯಾದಾಗ ನಮ್ಮೂರು ಹೊತ್ತಿ ಉರಿದಿರಲಿಲ್ಲ. ಅದು ಎರಡು ಕುಟುಂಬಗಳಿಗೆ ಸಂಬಂಧಿಸಿದ ವಿಷಯವೆಂದು ಉಳಿದವರು ಅದನ್ನು ಸಹಜವಾಗಿ ಸ್ವೀಕರಿಸಿದ್ದರು.
ಆಗ ನಮ್ಮ ನಡುವೆ ಇಲ್ಲದ ಧರ್ಮ ಕೇಂದ್ರಿತ ಸಿಟ್ಟು, ಜಗಳ, ದ್ವೇಷ ಈಗ ಯಾಕೆ ಹುಟ್ಟಿಕೊಂಡಿದೆ ಎನ್ನುವುದು ಪ್ರಶ್ನೆ. ಪರಸ್ಪರ ಪ್ರಾಣ ತೆಗೆಯಲು ಕಾದಾಡುವಂತಹ ಮಟ್ಟಕ್ಕೆ ಹಿಂದೂ-ಮುಸ್ಲಿಮರು ಇಳಿಯುವಷ್ಟು ದ್ವೇಷ ಹುಟ್ಟಿಸುವ ಯಾವ ಘಟನೆ-ಬೆಳವಣಿಗೆ ಕಳೆದ ಮೂವತ್ತು ವರ್ಷಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ ಎನ್ನುವುದನ್ನು ಯಾರಾದರೂ ಹೇಳಬಲ್ಲಿರಾ?
ಹಿಂದೂಗಳು, ಮುಸ್ಲಿಮರ ಇಲ್ಲವೆ ಮುಸ್ಲಿಮರು ಹಿಂದೂಗಳ ಆಸ್ತಿ-ಭೂಮಿ ಕಿತ್ತುಕೊಂಡರೇ? ಸಾವಿರಾರು ಸಂಖ್ಯೆಯಲ್ಲಿ ಮತಾಂತರ ನಡೆಯಿತೇ? ಯಾವುದಾದರೂ ದೇವಸ್ಥಾನ, ಮಸೀದಿಗಳ ಧ್ವಂಸ ನಡೆಯಿತೇ? ಏನಾಯಿತು ಹೇಳಿ?


ಧರ್ಮದ ಕನ್ನಡಕ ಕೆಳಗಿಟ್ಟು ಸುತ್ತಲಿನ ಸಮಾಜ ನೋಡಿದರೆ ಬಂಟ,ಬ್ಯಾರಿ,ಬಿಲ್ಲವ,ಮೊಗವೀರ, ಕ್ರಿಶ್ಚಿಯನರು ಕೂಡಿ ಸ್ವಾಭಿಮಾನದಿಂದ ಕಟ್ಟಿದ ಸ್ವಾವಲಂಬಿ ಜಿಲ್ಲೆಯನ್ನು ಕಾಣಬಹುದು. ಅದು ಪರಸ್ಪರ ಕಾದಾಡಿ, ರಕ್ತಹರಿಸಿ ಕಟ್ಟಿದ್ದಲ್ಲ, ಶ್ರಮಪಟ್ಟು, ಊರೂರು ಅಲೆದು ಬೆವರು ಸುರಿಸಿ ಕಟ್ಟಿದ ಜಿಲ್ಲೆ. (ನನ್ನ ಅಪ್ಪ ಇದ್ದ ತುಂಡುಭೂಮಿಯನ್ನು ಉಳಿಸಲು ಮುಂಬೈಗೆ ಓಡಿ ಹೋಗಿ ಬೆವರು-ರಕ್ತ ಸುರಿಸಿ ದುಡಿಯದೆ ಇದ್ದಿದ್ದರೆ ನಾನು ಮಟ್ಟುವಿನಲ್ಲಿ ದೋಣಿ ಓಡಿಸುತ್ತಾ ಇರುತ್ತಿದ್ದೆನೋ ಏನೋ?)
ಈ ಜಿಲ್ಲೆಯ ಈಗಿನ ಸ್ಥಿತಿ ಏನಾಗಿದೆ ನೋಡಿ. ಬೀದಿಯಲ್ಲಿ ರಕ್ತ ಹರಿಯುತ್ತಿದೆ. ಪಾಸ್ ಪೋರ್ಟ್ ಕಚೇರಿ ಮುಂದೆ ಕ್ಯೂ ನಿಲ್ಲುತ್ತಿದ್ದ ಹಿಂದೂ-ಮುಸ್ಲಿಮ್ ಯುವಕರು ಪೊಲೀಸ್ ಠಾಣೆಯ ಮುಂದೆ ನಿಂತಿದ್ದಾರೆ. ಪೊಲೀಸ್ ಕೇಸ್ ಗಳಿಂದಾಗಿ ಬೇರೆ ದೇಶಗಳಿಗೆ ಹೋಗಿ ದುಡಿಯವ ಅವಕಾಶದ ಬಾಗಿಲು ಮುಚ್ಚಿದೆ. ಒಮ್ಮೆ ಕ್ರಿಮಿನಲ್ ಎಂಬ ಕಳಂಕ ಹತ್ತಿದರೆ ಅದನ್ನು ಕಿತ್ತುಹಾಕುವುದು ಕಷ್ಟ. ಈ ಚಕ್ರವ್ಯೂಹದೊಳಗೆ ಸಿಕ್ಕಿಹಾಕಿಕೊಂಡ ನಮ್ಮ ಯುವಕರು ಹೊರಬರಲಾಗದೆ ಇನ್ನಷ್ಟು ವ್ಯಗ್ರರಾಗಿ,ಕ್ರೂರಿಗಳಾಗಿ, ಕೊಲೆಗಡುಕರಾಗಿ ಬದಲಾಗುತ್ತಿದ್ದಾರೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಜವಾಗಿ ನಡೆಯಬೇಕಾದ ಹೋರಾಟದ ಬಗ್ಗೆ ಯಾರೂ ತಲೆ ಕೆಡಿಸುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬದಲಾಗುತ್ತಿದೆ. ನೆಲ-ಜಲ-ಜೀವದ ಧಾರಣಾ ಸಾಮರ್ಥ್ಯವನ್ನು ಮೀರಿ ಕೈಗಾರಿಕಿಕರಣ ನಡೆಯುತ್ತಿದೆ. ಕಳೆದ 30 ವರ್ಷಗಳಲ್ಲಿ ಸಾವಿರಾರು ಕುಟುಂಬಗಳು ಭೂಮಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಗಾಳಿಯಲ್ಲಿ ವಿಷ ತುಂಬಿದೆ. ಈ ಬಗ್ಗೆ ಸೊಲ್ಲೆತ್ತುವವರೇ ಇಲ್ಲ. ಶತ್ರುಗಳು ಮರೆಯಲ್ಲಿ ನಿಂತು ಮುಸಿಮುಸಿ ನಗುತ್ತಿದ್ದಾರೆ, ಮಿತ್ರರಂತೆ ಇರಬೇಕಾದವರು ಬೀದಿಯಲ್ಲಿ ಕಾದಾಡುತ್ತಿದ್ದಾರೆ.
ಹೀಗೆ ಯಾಕಾಯಿತು ಎಂದು ನಾನು ಬಿಡಿಸಿ ಹೇಳುವುದಿಲ್ಲ. ಅದು ಮತ್ತೆ ಬಿಜೆಪಿ-ಕಾಂಗ್ರೆಸ್ ನಡುವಿನ ಥೂಥೂ- ಮೈಮೈ ಜಗಳವಾಗುತ್ತದೆ. ಈ ಗಂಡಾಂತಕಾರಿ ಬೆಳವಣಿಗೆಯ ನಿಜವಾದ ಫಲಾನುಭವಿಗಳು ಯಾರು?ಬಲಿಪಶುಗಳು ಯಾರು ಎನ್ನುವುದನ್ನು ನೀವೇ ಯೋಚಿಸಿ ತೀರ್ಮಾನಕ್ಕೆ ಬನ್ನಿ.

Wednesday, November 18, 2015

‘ರಾಜೀವ್ ಗಾಂಧಿ, ನರಸಿಂಹ ರಾವ್ ಮಾಡಿದ್ದನ್ನು ವಾಜಪೇಯಿ ಮಾಡಲಿ’

ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಲ್ ಅವರ ನಿಧನಕ್ಕೆ ಕಂಬನಿಗರೆಯುತ್ತಿರುವವರನ್ನು ಕಂಡಾಗ 2002ರಲ್ಲಿ ಅಯೋಧ್ಯೆಯ ಕರಸೇವಕ ಪುರದಲ್ಲಿ ಅವರೊಡನೆ ನಾನು ನಡೆಸಿದ್ದ ಮಾತುಕತೆ ನೆನಪಾಯಿತು. (ಆಫ್ ದಿ ರೆಕಾರ್ಡ್ ಎಂದು ಹೇಳಿ ಸಿಂಘಲ್ ಅವರು ಬಿಜೆಪಿ ಮತ್ತು ಅಟಲ ಬಿಹಾರಿ ವಾಜಪೇಯಿ ಅವರ ಬಗ್ಗೆ ಹೇಳಿರುವುದನ್ನು ನಾನು ಬರೆದಿರಲಿಲ್ಲ)
‘ರಾಜೀವ್ ಗಾಂಧಿ, ನರಸಿಂಹ ರಾವ್ ಮಾಡಿದ್ದನ್ನು ವಾಜಪೇಯಿ ಮಾಡಲಿ’
ಅಯೋಧ್ಯೆ: ಫೆ.21 - ಮಾರ್ಚ್ 15ಕ್ಕೆ ಅಯೋಧ್ಯೆಯಲ್ಲಿ ಏನಾಗಬಹುದು? ವಾಜಪೇಯಿ ಕರೆಗೆ ಓಗೊಟ್ಟು ವಿಎಚ್ಪಿ ಮಂದಿರ ನಿರ್ಮಾಣವನ್ನು ಇನ್ನೆರಡು ವರ್ಷಗಳಿಗೆ ಮಂದೂಡಬಹುದೇ?.ಇಲ್ಲವೇ 1992ರ ಡಿಸೆಂಬರ್ ಆರು ಪುನರಾವರ್ತನೆಯಾಗಬಹುದೇ?. ಉತ್ತರ ಗೊತ್ತಿರುವ ವ್ಯಕ್ತಿ ಸುಲಭದಲ್ಲಿ ಬಾಯಿ ಬಿಡುತ್ತಿಲ್ಲ.‘ ಏನೂ ಆಗದಿದ್ದರೆ ಸತ್ಯಾಗ್ರಹವಂತೂ ಆಗಿಯೇ ಆಗುತ್ತದೆ. ಅದರ ಪರಿಣಾಮ ಏನೆಂಬುದನ್ನು ಈಗ ಹೇಳಲು ಸಾಧ್ಯ?’ ಎಂದು ಕೇಳುತ್ತಾರೆ ಮಂದಿರ ನಿರ್ಮಾಣದ ಸೂತ್ರಧಾರ ಅಶೋಕ್ ಸಿಂಘಲ್. ಮಂದಿರ ನಿರ್ಮಾಣ ಯೋಜನೆಯ ಕಂಟ್ರೋಲ್ ರೂಮ್ ಇರುವ ಕರಸೇವಕ ಪುರದಲ್ಲಿ ‘ಸತ್ಯಾಗ್ರಹ’ದ ತಯಾರಿ ನಡೆಯುತ್ತಿದೆ. ಹುಲ್ಲಿನ ಹೊದಿಕೆಯ ಬೃಹತ್ ಕುಟೀರದಲ್ಲಿ ಪೂರ್ಣಾಹುತಿ ಯಜ್ಞ ಪ್ರಾರಂಭವಾಗಿದೆ. ದೇಶದ ವಿವಿಧೆಡೆಗಳಿಂದ ರಾಮಸೇವಕರ ದಂಡು ಒರತೊಡಗಿದೆ. ಅವರ ಊಟ-ವಸತಿ-ಚಿಕಿತ್ಸೆಗೆ ಸಿದ್ಧತೆ ನಡೆಯುತ್ತಿದೆ. ಭೋಜನ ಶಾಲೆ, ಚಿಕಿತ್ಸಾಲಯ ಗೋಶಾಲೆ ಇಲ್ಲಿ ಎಲ್ಲವೂ ಇದೆ.
ಇದರ ಉಸ್ತುವಾರಿ ನೋಡುತ್ತಿರುವ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಲ್ ತನ್ನ ಕಛೇರಿಯಲ್ಲಿ ನಿರಾಳವಾಗಿ ಕೂತ್ತಿದ್ದಾರೆ. ಅಸ್ವಸ್ಥನಾಗಿದ್ದೇನೆ ಎಂದು ಮೊದಲು ಭೇಟಿ ನಿರಾಕರಿಸಿದ ಅಶೋಕ್ ಸಿಂಘಲ್ ಆನಂತರ ‘ಪ್ರಜಾವಾಣಿ’ ಜತೆ ಮಾತನಾಡಿದರು. ಮಾತನಾಡಿದರು ಅನ್ನುವುದಕ್ಕಿಂತ ಬಿಜೆಪಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಆದೇಶ ನೀಡುತ್ತಾ ಹೋದರು. ತಮ್ಮ ನಿಲುವನ್ನು ಸಮರ್ಥಿಸುತ್ತಾ ಹೋದರು ಎನ್ನುವುದೇ ಸರಿ.
‘’ಇಷ್ಟೆಲಾ ತಯಾರಿ ನಡೆಯುತ್ತಿರುವುದು. ಹನ್ನೆರಡು ಲಕ್ಷ ರಾಮಸೇವಕರನ್ನು ಮಾರ್ಚ್ 15ರ ಹೊತ್ತಿಗೆ ಅಯೋಧ್ಯೆಯಲ್ಲಿ ಸೇರಿಸುತ್ತಿರುವುದು ಕೇವಲ ಸತ್ಯಾಗ್ರಹಕ್ಕಾಗಿಯೇ? ಅಂದಾಜು ನಾಲ್ಕೈದು ಸಾವಿರ ಜನ ಸೇರಲು ಸಾಧ್ಯವಿರುವ ಕಾರಸೇವಕಪುರದಲ್ಲಿ ಅಷ್ಟೊಂದು ಸಂಖ್ಯೆಯ ರಾಮಸೇವಕರು ಹೇಗೆ ಉಳಿದುಕೊಳ್ಳಲು ಸಾಧ್ಯ?. ಅವರನ್ನೆಲ್ಲಾ ನಿಯಂತ್ರಿಸಲು ಸಾಧ್ಯವಾಗಬಹುದೇ?’’ ಈ ಪ್ರಶ್ನೆಗಳನ್ನು ಅವರು ನಿರೀಕ್ಷಿಸಿದ್ದರು.
‘’ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಮಂದಿರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಲು ಬರುವ ರಾಮಸೇವಕರನ್ನು ನಾವು ಹೇಗೆ ತಡೆಯಲು ಸಾಧ್ಯ?. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ವಶಕ್ಕೆ ತೆಗೆದುಕೊಂಡಿರುವ ನಿವೇಶವನ್ನು ಕೊಡಲಿ; ಎಲ್ಲವೂ ಶಾಂತಿಯುತವಾಗಿ ಪರಿಹಾರವಾಗುತ್ತದೆ’- ಇದು ಅಶೋಕ್ ಸಿಂಘಲ್ ಪರಿಹಾರ ಸೂತ್ರ.
ಅವರ ಪ್ರಕಾರ ಈ ಬಾರಿಯ ನಾಲ್ಕು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಕಂಡರೆ ಅದಕ್ಕೆ ಈ ಪಕ್ಷ ರಾಮಜನ್ಮಭೂಮಿ ಚಳವಳಿಯನ್ನು ನಿರ್ಲಕ್ಷಿಸಿದ್ದೇ ಕಾರಣವಂತೆ. ‘’ಪಕ್ಷದಲ್ಲಿರುವ ಬಹುತೇಕ ನಾಯಕರು ಚಳವಳಿಯನ್ನು ಬೆಂಬಲಿಸುತ್ತಾರೆ. ಆದರೆ ನಿರ್ಣಾಯಕ ಸ್ಥಾನದಲ್ಲಿರುವ ಒಬ್ಬಿಬ್ಬರು ನಾಯಕರು ಸಹಕಾರ ನೀಡುತ್ತಿಲ್ಲ’’ ಎನ್ನುವ ಸಿಂಘಲ್ ಆ ಒಬ್ಬಿಬ್ಬರು ವ್ಯಕ್ತಿಗಳ ಹೆಸರು ಹೇಳುವುದಿಲ್ಲ ಅವರಲ್ಲೊಬ್ಬರು ವಾಜಪೇಯಿಯವರಿರಬಹುದೇ?. ಹಾಗೆ ಕೇಳಿದರೆ, ‘’ ವಾಜಪೇಯಿಯವರು ಮಂದಿರ ನಿರ್ಮಾಣವನ್ನು ಯಾವಾಗ ವಿರೋಧಿಸಿದ್ದಾರೆ?. ಎಂದು ಥಟ್ಟನೇ ಪ್ರಶ್ನಿಸುತ್ತಾರೆ.


“ಆಟಲ್ ಬಿಹಾರಿ ವಾಜಪೇಯಿಯವರು ಈಗ ಕುಳಿತಿರುವ ಸ್ಥಾನ ರಾಮಮಂದಿರ ಚಳವಳಿಯ ಕೊಡುಗೆ. ಆ ಋಣ ತೀರಿಸುವ ಜವಾಬ್ದಾರಿ ಅವರ ಮೇಲಿದೆ. ರಾಜೀವ್ಗಾಂಧಿ ಕಾಲದಲ್ಲಿ ಶಿಲಾನ್ಯಾಸ ನಡೆಯಿತು; ನರಸಿಂಹ ರಾವ್ ಕಾಲದಲ್ಲಿ ವಿವಾದಾತ್ಮಕ ಕಟ್ಟಡ (ಬಾಬ್ರಿಮಸೀದಿ) ಧ್ವಂಸ ಮಾಡಲಾಯಿತು. ಈಗ ವಾಜಪೇಯಿಯವರ ಸರದಿ. ಅವರ ಕಾಲದಲ್ಲಿ ಮಂದಿರ ನಿರ್ಮಾಣವಾಗಬೇಕು. ಇದು ಸಮಸ್ತ ಹಿಂದೂಗಳ ಅಭಿಲಾಷೆ’’ – ಈ ಮಾತುಗಳನ್ನು ಹೇಳುವಾಗ ವಾಜಪೇಯಿಯವರ ಬಗ್ಗೆ ಇರುವ ಅಸಮಾಧಾನವನ್ನು ಅವರ ಮುಖದಲ್ಲಿ ಕಾಣುವುಕ್ಕೆ ಕಷ್ಟವಾಗಲಿಲ್ಲ.ಈ ವಿವಾದಕ್ಕೆ ಅಂತಿಮ ಪರಿಹಾರ ಏನು?. ‘’ಮುಸ್ಲಿಮರು ರಾಮಜನ್ಮಭೂಮಿ ಮೇಲೆ ಅನವಶ್ಯಕವಾಗಿ ತಮ್ಮ ಹಕ್ಕು ಚಲಾಯಿಸಲು ಹೋಗದೆ ಅದನ್ನು ಬಿಟ್ಟುಬಿಡುವುದೇ ಅಂತಿಮ ಪರಿಹಾರ. ಅವರು ಆ ನಿವೇಶನ ನೀಡಿದರೆ ನಾವು ಅವರಿಗೆ ಪ್ರೀತಿ-ವಿಶ್ವಾಸ-ರಕ್ಷಣೆ ನೀಡುತ್ತೇವೆ. ಮುಸ್ಲಿಮ್ ದೊರೆಗಳು 30 ಸಾವಿರ ದೇವಸ್ಥಾನಗಳನ್ನು ನಾಶ ಮಾಡಿದ್ದಾರೆ; ಅದರ ಬದಲಿಗೆ ನಾವು ಲಕ್ಷಾಂತರ ದೇವಸ್ಥಾನಗಳನ್ನು ಕಟ್ಟಿದ್ದೇವೆ. ಆದರೆ ರಾಮ ಹುಟ್ಟಿದ ಸ್ಥಳವನ್ನು ಹೇಗೆ ಬಿಡಲು ಸಾಧ್ಯ?’’ ಎನ್ನುವುದು ಅವರ ಪ್ರಶ್ನೆ.ಆ ನಂತರ ಕಾಶಿ. ಮಥುರಾದ ವಿವಾದವನ್ನು ಎತ್ತುವುದಿಲ್ಲವೆ?.
‘’ಅದನ್ನು ಹೇಗೆ ಬಿಟ್ಟುಬಿಡಲು ಸಾಧ್ಯ?. ಅಯೋಧ್ಯೆ. ಕಾಶಿ ಮಥುರಾ ಮೂರು ಕಡೆಗಳಿಂದಲೂ ಅವರು ಹೊರಹೋಗಬೇಕು. ಆಗ ಮಾತ್ರ ಎರಡು ಜನಾಂಗದ ನಡುವೆ ಸೌಹಾರ್ದಯುತ ಸಂಬಂಧ ಸಾಧ್ಯ. ನಾಸ್ತಿಕರನ್ನು (ಅಂದರೆ ಕಮ್ಯುನಿಸ್ಟರು ಮತ್ತು ಸೋಷಲಿಷ್ಟರಂತೆ) ನಂಬಿ ಅವರು ಎಷ್ಟು ದಿನ ಹಾರಾಡಲು ಸಾಧ್ಯ” ಎಂದು ಸಿಂಘಲ್ ಸಿಡಿಯುತ್ತಾರೆ.
ಕರಸೇವಕಪುರದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ ಮಾರ್ಚ್ 15ರಂದು ಮತ್ತೊಮ್ಮೆ ಅಯೋಧ್ಯೆ ದೇಶದ ಗಮನಸೆಳೆಯುವ ಸಾಧ್ಯತೆ ಸ್ಪಷ್ಟವಾಗಿ ಕಾಣುತ್ತದೆ. ಮಾರ್ಚ್ 15ರ ಹೊತ್ತಿಗೆ 12 ಲಕ್ಷ ರಾಮಸೇವಕರು ಇಲ್ಲಿ ಬರಲಿದ್ದಾರೆ ಎಂದು ವಿಎಚ್ಪಿ ನಾಯಕರು ಹೇಳುತ್ತಿದ್ದಾರೆ. ಅವರು ಅರ್ಧದಲ್ಲಿ ನಿಂತಿರುವ ಕಾರ್ಯ ಪೂರ್ಣಗೊಳಿಸಲು ಹೊರಡಬಹುದೇ?. ವಿಎಚ್ಪಿ ಉದ್ದೇಶ ಅದೇ ಇರಬಹುದೆಂದು ತೋರುತ್ತದೆ.


Monday, November 16, 2015

ಜನನುಡಿ-2015

ನಮ್ಮೆಲ್ಲರ ಪ್ರೀತಿಯ ದೇವನೂರು ಮಹದೇವ ಅವರು ಡಿಸೆಂಬರ್ 19-20ರಂದು ಮಂಗಳೂರಿನಲ್ಲಿ ನಡೆಯಲಿರುವ ಜನನುಡಿಯನ್ನು ಉದ್ಘಾಟಿಸಲು ಕೊನೆಗೂ ಒಪ್ಪಿಕೊಂಡಿದ್ದಾರೆ. 
ನಿನ್ನೆ ಮತ್ತೆ ಮಾತನಾಡುತ್ತಾ 'ಮಾನವೀಯ ನೆಲೆಯಲ್ಲಿ ನನ್ನ ಕೈಬಿಡಿ' ಎಂದು ಕೇಳಿಕೊಂಡರು. 'ಮಾನವೀಯ ನೆಲೆಯಲ್ಲಿಯೇ ನಮ್ಮ ಕೈ ಹಿಡಿಯಿರಿ ' ಎಂದು ಬೇಡಿಕೊಂಡೆ, ಒಪ್ಪಿಕೊಂಡರು.
ಮಹಾಮುಜುಗರದ ಈ ',ಮನುಷ್ಯ' ಇನ್ನು ನಮ್ಮ ಕೈಬಿಡಬಾರದೆಂದು ಈ ಸುದ್ದಿ ಯನ್ನು ಜಗಜ್ಜಾಹೀರುಗೊಳಿಸುತ್ತಿದ್ದೇನೆ.
ಅವರನ್ನು ಇನ್ನೊಂದು ಬಗೆಯ ಮುಜುಗರಕ್ಕೆ ಈಡುಮಾಡಬಾರದೆಂದು ಈ ಬಾರಿ ಖಂಡಿತ ಅವರಿಗೆ ಕಾಣೆಮೀನು ತಿನ್ನಿಸುವುದಿಲ್ಲ ಎಂದು ಆಣೆಮಾಡಿದ್ದೇನೆ. ನನ್ನ ಇಷ್ಟದ, ನಮ್ಮಂತಹವರ ಮೈಬಣ್ಣದ ಮತ್ತು ನಮ್ಮಂತಹವರಿಗೆ ಇಷ್ಟವಾಗುವ ಸುವಾಸನೆ ಬೀರುವ ಬೂತಾಯಿ ತಿನ್ನಿಸಬೇಕೆಂದಿದ್ದೇನೆ.

Tuesday, November 10, 2015

ಮಡಿಕೇರಿ ಗಲಭೆ

ಒಮ್ಮೊಮ್ಮೆ ಸುರಂಗದ ಕೊನೆಯಲ್ಲಿ ಬೆಳಕು ಕಾಣಿಸುತ್ತದೆ. ಮಡಿಕೇರಿ ಗಲಭೆ ಬಗ್ಗೆ ಟಿವಿ9 ಮತ್ತು ಸುವರ್ಣ ಟಿವಿ ಚಾನೆಲ್ ಗಳು
ವರದಿಯಲ್ಲಿ ತೋರಿದ ಸಂಯಮ ಮತ್ತು ಜನಪದ ಕಾಳಜಿಯಿಂದ ಮಾಡಿದ ಮನವಿ ಅಭಿನಂದನೆಗೆ ಮತ್ತು ಅನುಕರಣೆಗೆ ಅರ್ಹವಾದುದು.

Monday, November 9, 2015

ನಾವೂ ಖುಷಿಯಾಗಿರೋಣ

ನನಗೆ ಬಹಳ ಖುಷಿಯಾದಾಗ ಸಿಹಿ ತಿನ್ನುವುದಿಲ್ಲ, ಹೊಟ್ಟೆ ತುಂಬಿ ತೇಗು ಬರುವಷ್ಟು ಮೀನು ತಿನ್ನುತ್ತೇನೆ. ಈಗಷ್ಟೇ ಒಂದು ಕಿಲೋ ಕಾಣೆ ಮೀನು ತೆಗೆದುಕೊಂಡು ಬಂದೆ. ಬಾಯಲ್ಲಿ ನೀರು. ಇತ್ತೀಚೆಗೆ ಇಷ್ಟೊಂದು ಖುಷಿ ಎಂದೂ ಆಗಿರಲಿಲ್ಲ. ಈ ಖುಷಿ ಎಲ್ಲರದ್ದಾಗಲಿ. ಬಿಹಾರದ ಜನರಷ್ಟೇ ಯಾಕೆ ಖುಷಿಪಡಬೇಕು, ನಾವೂ ಖುಷಿಯಾಗಿರೋಣ.

Sunday, November 8, 2015

ನಿತೀಶ್‌ಕುಮಾರ್ ಸೋತರೆ ಬಿಹಾರ ಸೋತಂತೆ

(ಇದು 2010ರ ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ (ನವಂಬರ್ 8, 2010) 'ಅನಾವರಣ' ಅಂಕಣ ಬರಹ. ಬಹುಷ: ಈ ಚುನಾವಣೆಯ ಪೂರ್ವದಲ್ಲಿ ಇದನ್ನು ಬರೆದಿದ್ದರೆ ನಿತೀಶ್ ಸೋತರೆ ಭಾರತ ಸೋತಂತೆ ಎಂದು ಬರೆಯುತ್ತಿದ್ದೆನೋ ಏನೋ)
ನಿತೀಶ್‌ಕುಮಾರ್ ಸೋತರೆ ಬಿಹಾರ ಸೋತಂತೆ
‘ಬಿಹಾರಕ್ಕೆ ಪ್ರಕೃತಿ ಎಲ್ಲವನ್ನೂ ಕೊಟ್ಟಿದೆ, ಫಲವತ್ತಾದ ಭೂಮಿ, ಹಿಮಾಲಯದಲ್ಲಿ ಹುಟ್ಟುವ ಎಲ್ಲ ನದಿಗಳ ನೀರು, ಸಮೃದ್ಧ ಖನಿಜ ಸಂಪತ್ತು ಮತ್ತು ಶ್ರಮಜೀವಿಗಳಾದ ಜನ. ಜತೆಗೆ ಬುದ್ಧ, ಮಹಾವೀರ, ಅಶೋಕ, ಚಂದ್ರಗುಪ್ತ ಮೌರ್ಯ, ಚಾಣಕ್ಯ, ಆರ್ಯಭಟ್ಟ, ಗುರುಗೋವಿಂದ ಸಿಂಗ್, ಶೇರ್ ಷಹಾ ಮೊದಲಾದ ಮಣ್ಣಿನ ಮಕ್ಕಳನ್ನೂ ಕೊಟ್ಟಿದೆ.
ಇವುಗಳೆಲ್ಲದರ ಜತೆಗೆ ಒಬ್ಬ ದೇವರಾಜ ಅರಸು ಅವರಂತಹ ನಾಯಕನನ್ನೂ ಕೊಟ್ಟಿದ್ದರೆ ಬಿಹಾರ ಖಂಡಿತ ಈಗಿನಂತೆ ಇರುತ್ತಿರಲಿಲ್ಲವೇನೋ...’ ಎಂದು ಆರು ವರ್ಷಗಳ ಹಿಂದೆ ಲೋಕಸಭಾ ಚುನಾವಣಾ ಸಮೀಕ್ಷೆಗಾಗಿ ಬಿಹಾರಕ್ಕೆ ಹೋಗಿ ಬಂದ ನಂತರ ಬರೆದಿದ್ದೆ. ಅದರ ನಂತರ ಎರಡು ಬಾರಿ ಲಾಲು ಪ್ರಸಾದ್ ಅವರ ಬಿಹಾರಕ್ಕೆ ಸುತ್ತುಹೊಡೆದಾಗಲೂ ಇದೇ ಅಭಿಪ್ರಾಯದ ನಿಟ್ಟುಸಿರು ನನ್ನಿಂದ ಹೊರಬಿದ್ದಿತ್ತು. ನಿತೀಶ್‌ಕುಮಾರ್ ಕಾಲದ ಈಗಿನ ಬಿಹಾರ ನಾನು ನೋಡಿಲ್ಲ, ಅಲ್ಲಿ ಇಲ್ಲಿ ಕೇಳಿದ್ದೇನೆ, ಒಂದಷ್ಟು ಓದಿದ್ದೇನೆ. ಬಿಹಾರಕ್ಕೆ ಕೊನೆಗೂ ಒಬ್ಬ ದೇವರಾಜ ಅರಸು ಸಿಕ್ಕಿದ್ದಾರೆ ಎಂದು ಹೇಳಲು ಆ ರಾಜ್ಯದ ಬಗ್ಗೆ ಕೇಳಿದ್ದು ಓದಿದ್ದು ಸಾಕೇನೋ? ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ಸೋತರೆ ಖಂಡಿತ ಬೇಸರವಾಗುತ್ತದೆ.
ಲಾಲು ಪ್ರಸಾದ್ ಗೆದ್ದುಬಿಟ್ಟರಲ್ಲಾ ಎಂಬುದಕ್ಕಲ್ಲ, ಶಾಪಗ್ರಸ್ತ ಬಿಹಾರಕ್ಕೆ ವಿಮೋಚನೆಯೇ ಇಲ್ಲದಂತಾಗುತ್ತದ್ದಲ್ಲ ಎಂಬುದಕ್ಕಾಗಿ. ಆದ್ದರಿಂದ ಬಿಹಾರದ ಜನತೆ ನಿತೀಶ್‌ಕುಮಾರ್ ಅವರನ್ನು ಸೋಲಲು ಬಿಡಬಾರದು. ಅವರು ಸೋತರೆ ಬಿಹಾರ ಸೋತಂತೆ.
ದೇವರಾಜ ಅರಸು ಅವರನ್ನು ನೆನಪು ಮಾಡಿಕೊಳ್ಳಲು ಕಾರಣ ಇದೆ. ಗಂಗಾನದಿಯ ಎರಡು ದಂಡೆಗಳಲ್ಲಿ ಹರಡಿಕೊಂಡಿರುವ ಬಿಹಾರದ ಮಣ್ಣು ಪಂಜಾಬ್, ಹರಿಯಾಣಗಳಿಗಿಂತಲೂ ಫಲವತ್ತಾದುದು. ಎರಡು ಅವಧಿಗಳಲ್ಲಿ ಬರುವ ಮಳೆ ವರ್ಷಕ್ಕೆ ಎರಡು ಬೆಳೆಗಳಿಗೆ ನೀರುಣಿಸುತ್ತದೆ. ದೇಶದ ಕೃಷಿಯೋಗ್ಯ ಭೂಮಿಯ ಪ್ರಮಾಣ ಶೇ 47, ಆದರೆ ಬಿಹಾರದಲ್ಲಿ ಇದು ಶೇ 61.
ಅತಿವೃಷ್ಟಿ ಮತ್ತು ಅನಾವೃಷ್ಟಿಯ ಹೊರತಾಗಿಯೂ ಅಲ್ಲಿನ ಭೂಮಿ ಕೈಕೊಟ್ಟಿದ್ದು ಕಡಿಮೆ. ಗಯಾ, ಜೆಹನಾಬಾದ್, ಬೆಟಿಯಾ, ದರ್ಬಾಂಗ...ಬಿಹಾರದ ಯಾವ ಮೂಲೆಗೂ ಹೋಗಿ, ತಟ್ಟನೆ ನಮ್ಮ ಗಮನ ಸೆಳೆಯುವುದು- ಕಣ್ಣು ಹಾಯಿಸಿದಷ್ಟು ದೂರ ಹಚ್ಚಹಸಿರಿನ ಚಾದರ ಹೊದ್ದುಕೊಂಡಂತಹ ಗದ್ದೆಗಳು. ಈ ವಿಸ್ಮಯದ ಜತೆಯಲ್ಲಿಯೇ ‘ಹೀಗಿದ್ದರೂ ಬಿಹಾರದಲ್ಲಿ ಇಷ್ಟೊಂದು ದಾರಿದ್ರ್ಯ ಯಾಕಿದೆ?’ ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಇದಕ್ಕೂ ಉತ್ತರ ಇದೆ.
ಆ ರಾಜ್ಯದ ಶೇಕಡಾ 77ರಷ್ಟು ಕುಟುಂಬಗಳ ಸರಾಸರಿ ಭೂ ಹಿಡುವಳಿ ಒಂದು ಹೆಕ್ಟೇರ್ ಮಾತ್ರ. ಶೇಕಡಾ 19ರಷ್ಟು ಕುಟುಂಬಗಳು 1.4 ಹೆಕ್ಟೇರ್‌ನಷ್ಟು ಭೂ ಹಿಡುವಳಿ ಹೊಂದಿವೆ. ಶೇಕಡಾ ಒಂದರಷ್ಟು ಕುಟುಂಬಗಳು ನಾಲ್ಕು ಹೆಕ್ಟೇರ್‌ನಿಂದ ಸಾವಿರಾರು ಹೆಕ್ಟೇರ್‌ಗಳಷ್ಟು ಭೂಮಿ ಹೊಂದಿವೆ. ಎಷ್ಟೋ ಜಮೀನ್ದಾರರು ಮನುಷ್ಯರ ಹೆಸರಲ್ಲಿ ಮಾತ್ರ ಅಲ್ಲ, ಮನೆಯಲ್ಲಿರುವ ದನ, ಆಡು, ನಾಯಿಗಳ ಹೆಸರಲ್ಲಿ ಭೂಮಿ ಕೈಯಲ್ಲಿ ಇಟ್ಟುಕೊಂಡಿರುವ ದಾಖಲೆಗಳನ್ನು ಚಂಪಾರಣ್‌ದಲ್ಲಿ ಭೇಟಿಯಾಗಿದ್ದ ಸಿಪಿಐ (ಎಂಎಲ್) ಕಾರ್ಯಕರ್ತನೊಬ್ಬ ನನಗೆ ನೀಡಿದ್ದ. ಲಾಲುಪ್ರಸಾದ್ ಮುಖ್ಯಮಂತ್ರಿಯಾಗಿ ವಿಧಾನಸಭೆಯಲ್ಲಿ ಮಾಡಿದ ಮೊದಲ ಭಾಷಣದಲ್ಲಿ ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಸಾವಿರಾರು ಎಕರೆ ಭೂಮಿಯನ್ನು ವಶದಲ್ಲಿಟ್ಟುಕೊಂಡಿರುವ 377 ಭೂಮಾಲೀಕರ ಹೆಸರನ್ನು ಓದಿ ಹೇಳಿದ್ದರಂತೆ. ಪಶ್ಚಿಮಬಂಗಾಳದ ಮಾದರಿಯಲ್ಲಿ ‘ಬರ್ಗಾ ಕಾರ್ಯಾಚರಣೆ’ ಜಾರಿಗೆ ತಂದು ಅವರೆಲ್ಲರ ಹುಟ್ಟಡಗಿಸಿಬಿಡುತ್ತೇನೆ ಎಂದು ಅಬ್ಬರಿಸಿದ್ದರಂತೆ. ಅವರ ಎಲ್ಲ ಭರವಸೆಗಳಂತೆ ಅದು ಕೂಡಾ ಗಂಗಾ ನದಿಯಲ್ಲಿ ಕೊಚ್ಚಿಹೋಗಿತ್ತು.
ಬಿಹಾರದ ಇನ್ನೊಂದು ಕಟುವಾಸ್ತವವನ್ನು ನನ್ನೆದುರು ಅನಾವರಣಗೊಳಿಸಿದ್ದು ಮಹಾಬೀರ್ ರಾಯ್ ಎಂಬ ರಾಘೋಪುರದ ಒಬ್ಬ ಬಡರೈತ. ‘ಕಾಯ್ ಕಾ ವಿಕಾಸ್, ಸಮ್ಮಾನ್ ಕೇ ಬಿನಾ?’ (ಗೌರವ ಇಲ್ಲದ ಅಭಿವೃದ್ಧಿ ಯಾಕೆ?) ಎಂದು ಹೇಳಿ ನನ್ನನ್ನು ಕೆಕ್ಕರಿಸಿ ನೋಡಿದ್ದ ಸುಮಾರು 70 ವರ್ಷದ ಮಹಾಬೀರ್ ರಾಯ್‌ನ ಚಿತ್ರ ಇನ್ನೂ ನನ್ನ ಕಣ್ಣಮುಂದಿದೆ. ಬಿಜೆಪಿ ಮೊದಲ ಬಾರಿ ‘ಹಿಂದುತ್ವ’ ಅಜೆಂಡಾ ಮುಚ್ಚಿಟ್ಟು ಅಭಿವೃದ್ಧಿಯ ಮಂತ್ರ ಪಠಿಸುತ್ತಿದ್ದ ಕಾಲ ಅದು. ಇಡೀ ದೇಶ ಎನ್‌ಡಿಎ ನಡೆಸುತ್ತಿದ್ದ ‘ಇಂಡಿಯಾ ಶೈನಿಂಗ್’ (ಭಾರತ ಪ್ರಕಾಶಿಸುತ್ತಿದೆ!) ಪ್ರಚಾರದಲ್ಲಿ ಮುಳುಗಿಹೋಗಿತ್ತು. ಆಗಿನ ಮುಖ್ಯಮಂತ್ರಿ ರಾಬ್ಡಿದೇವಿ ಅವರ ವಿಧಾನಸಭಾ ಕ್ಷೇತ್ರವಾದ ರಾಘೋಪುರ್‌ನಲ್ಲಿ ಸಿಕ್ಕಿದ್ದ ಮಹಾಬೀರ್ ರಾಯ್‌ಗೆ ಇದನ್ನೆಲ್ಲ ವಿವರಿಸಿ ಬಿಹಾರದಲ್ಲಿ ಯಾರೂ ಅಭಿವೃದ್ಧಿಯ ಬಗ್ಗೆ ಮಾತನಾಡುವುದೇ ಇಲ್ಲವಲ್ಲಾ ಎಂದು ಹೇಳಿದಾಗ ಆತ ಸಿಟ್ಟುಮಾಡಿಕೊಂಡಿದ್ದ.
ಆತನ ಸಿಟ್ಟಿನ ಪ್ರತಿಕ್ರಿಯೆಯಲ್ಲಿಯೇ ಲಾಲು ಪ್ರಸಾದ್ ರಾಜಕೀಯ ಯಶಸ್ಸಿನ ಗುಟ್ಟು ಇತ್ತು. ಲಾಲು ಪ್ರಸಾದ್ ಅಧಿಕಾರಕ್ಕೆ ಬಂದದ್ದೇ ‘ವಿಕಾಸ್ ನಹೀಂ, ಪಹಲೇ ಸಮ್ಮಾನ್’ (ಮೊದಲು ಗೌರವ, ನಂತರ ಅಭಿವೃದ್ಧಿ) ಎನ್ನುವ ವಿಲಕ್ಷಣ ಘೋಷಣೆಯ ಮೂಲಕ.
ಬಿಹಾರದ ರಾಜಕೀಯ ಸಂತೆಯಲ್ಲಿ ಮಾತ್ರ ಮಾರಾಟ ಮಾಡಲು ಸಾಧ್ಯ ಇರುವ ಈ ಘೋಷಣೆಯ ಪರಿಣಾಮವನ್ನು ತಿಳಿದುಕೊಳ್ಳಬೇಕಾದರೆ ಬಿಹಾರದ ಹಳ್ಳಿಗಳಲ್ಲಿ ಸುತ್ತಾಡಬೇಕು. ಅಲ್ಲಿನ ಸಮಾಜವನ್ನು ಅಡ್ಡ-ಉದ್ದ ಸೀಳಿ ಹಾಕಿರುವ ಜಾತಿಗಳ ನಗ್ನನರ್ತನದ ಘೋರವೈಭವವನ್ನು ಕಿವಿಯಾರೆ ಕೇಳಬೇಕು. ಭೂಮಾಲೀಕರ ಮುಂದೆ ತಗ್ಗಿಸದ ತಲೆ ಮರುಕ್ಷಣದಲ್ಲಿ ಭುಜದ ಮೇಲೆ ಇರುತ್ತಿರಲಿಲ್ಲವಂತೆ. ಇದನ್ನು ಅಲ್ಲಿನ ಹಳ್ಳಿಗಳ ಜನ ‘ಚಾವು ಇಂಚ್ ಛೋಟಾ ಹೋಗಯಾ’ ಎನ್ನುತ್ತಿದ್ದರಂತೆ ನಿರ್ವಿಕಾರವಾಗಿ. ರಾಜ್ಯದ ಜನಸಂಖ್ಯೆಯಲ್ಲಿ ಮುಕ್ಕಾಲು ಪಾಲು ಜನ ತಲೆ ಉಳಿಸಿಕೊಳ್ಳಬೇಕಾದರೆ ತಲೆತಗ್ಗಿಸಿಯೇ ನಡೆಯಬೇಕಾದ ಸ್ಥಿತಿ ಇತ್ತು. ಲಾಲುಪ್ರಸಾದ್ ಪ್ರವೇಶವಾಗಿದ್ದೇ ಈ ಪರಿಸ್ಥಿತಿಯಲ್ಲಿ. ಆದರೆ ಅವರು ಜಾತಿ ತಾರತಮ್ಯ ನಿವಾರಣೆಗೆ ರಚನಾತ್ಮಕವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಿಲ್ಲ, ತನ್ನ ರಾಜಕೀಯ ಉಳಿವಿಗಾಗಿ ಜಾತಿಕಲಹವನ್ನು ಬಳಸಿಕೊಂಡರು.
ಕೆಟ್ಟು ನಾರುತ್ತಿದ್ದ ವ್ಯವಸ್ಥೆಗೆ ಲಾಲುಪ್ರಸಾದ್ ‘ಪ್ರತಿಕ್ರಿಯೆ’ ರೂಪದಲ್ಲಿ ಪ್ರವೇಶ ಮಾಡಿದರೇ ಹೊರತು ‘ಪರಿಹಾರ’ ಆಗಲಿಲ್ಲ. ಮಂತ್ರದಂಡ ಎನ್ನುವುದು ಅಧಿಕಾರ ಕೈಯಲ್ಲಿ ಹಿಡಿದುಕೊಂಡ ಲಾಲು ಕೈಯಲ್ಲಿ ಇರಲಿಲ್ಲ, ನಾಲಿಗೆಯಲ್ಲಿ ಇತ್ತು. ಹುಂಬ ಜನ ತಲೆತೂಗುವಂತೆ ಮಾಡಬಲ್ಲ ವಿಚಿತ್ರ ಹಾವ ಭಾವಗಳಿಂದ ಕೂಡಿದ ಭಾಷಣದ ಮೂಲಕವೇ ಬಿಹಾರದ ಜನತೆಯನ್ನು ಲಾಲು ಬೆಳಿಗ್ಗೆ ಎಬ್ಬಿಸಿ, ಮಧ್ಯಾಹ್ನ ಊಟ ಮಾಡಿಸಿ ರಾತ್ರಿ ಮಲಗಿಸಿಬಿಡುತ್ತಿದ್ದರು. ಆದ್ದರಿಂದ ಒಂದು ದಿನ ಜನ ನಿದ್ದೆಯಿಂದ ಎದ್ದು ‘ಗೌರವ ಸಿಕ್ಕಿತು ನಿಜ, ಮುಂದೇನು?’ ಎಂದು ಪ್ರಶ್ನಿಸಿದಾಗ ಲಾಲು ಬಳಿ ಉತ್ತರ ಇರಲಿಲ್ಲ. ಇದು ಲಾಲು ದುರಂತ, ಬಿಹಾರದ್ದು ಕೂಡಾ.
ನಿರ್ದಯ ಊಳಿಗಮಾನ್ಯ ವ್ಯವಸ್ಥೆಗೆ ಕಾರಣವಾದ ಅಸಮಾನ ಭೂ ಹಿಡುವಳಿ ಮತ್ತು ನಿಶ್ಚಲವಾದ ಜಾತಿ ವ್ಯವಸ್ಥೆ ಹುಟ್ಟುಹಾಕಿರುವ ಅಸಮಾನತೆಯೇ ಬಿಹಾರಕ್ಕೆ ತಗಲಿರುವ ರೋಗಗಳು (ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಕಣ್ಣಿಗೆ ಕರ್ನಾಟಕದಲ್ಲಿ ಕಂಡದ್ದು ಕೂಡಾ ಇದೇ ರೋಗಗಳಿರಬೇಕಲ್ಲವೇ?). ಎಂಜಿನಿಯರಿಂಗ್ ಶಿಕ್ಷಣ ಪಡೆದಿರುವ ನಿತೀಶ್‌ಕುಮಾರ್ ವೈದ್ಯರ ಮಗ. ಬಿಹಾರಕ್ಕೆ ಅಗತ್ಯವಾಗಿದ್ದ ವೈದ್ಯನ ಚಿಕಿತ್ಸಕ ಗುಣ ಮತ್ತು ಎಂಜಿನಿಯರ್ ನಿರ್ಮಾಣ ಕೌಶಲದೊಡನೆ ಆಡಳಿತ ಸೂತ್ರ ಹಿಡಿದ ಅವರು ಇನ್ನೂ ಯಶಸ್ಸಿನ ಗುರಿ ಮುಟ್ಟದೆ ಇರಬಹುದು, ಆದರೆ ಅವರು ನಡೆಯುತ್ತಿರುವ ದಾರಿ ಸರಿಯಾಗಿದೆ.
ಅಧಿಕಾರಕ್ಕೆ ಬಂದ ಮೂರೇ ವರ್ಷಗಳಲ್ಲಿ ಭೂಮಿಯ ಸಮಾನ ಹಂಚಿಕೆಗಾಗಿ ‘ಭೂ ಸುಧಾರಣಾ ಆಯೋಗ’ ರಚಿಸಿರುವುದು ಅವರ ದಿಟ್ಟ ನಿರ್ಧಾರಗಳಲ್ಲೊಂದು. ‘ಬರ್ಗಾ ಕಾರ್ಯಾಚರಣೆ’ ಮಾದರಿಯಲ್ಲಿ ಭೂ ಸುಧಾರಣೆ ಜಾರಿಗೊಳಿಸುವುದು ಅವರ ಉದ್ದೇಶ. ಆದರೆ ಅವರ ನಿರೀಕ್ಷೆಯ ಗತಿಯಲ್ಲಿ ಈ ಕೆಲಸ ನಡೆಯುತ್ತಿಲ್ಲ ಎನ್ನುವುದು ನಿಜ. ಇದಕ್ಕೆ ಮುಖ್ಯ ಕಾರಣ ಉಳಿದೆಲ್ಲ ರಾಜ್ಯಗಳಿಗಿಂತಲೂ ಹೆಚ್ಚು ಸಂಘರ್ಷಮಯವಾದ ಜಾತಿ ರಾಜಕೀಯದ ಸುಳಿಯಲ್ಲಿ ಸಿಕ್ಕಿ ನರಳಾಡುತ್ತಿರುವ ಬಿಹಾರದಲ್ಲಿ ನಿತೀಶ್‌ಗೆ ಮತಹಾಕಿದವರಲ್ಲಿ ಹೆಚ್ಚಿನವರು ‘ಭೂಮಿ ನುಂಗಣ್ಣ’ರೇ ಆಗಿರುವುದು. ಆ ರಾಜ್ಯದಿಂದ ಹೊರಬೀಳುತ್ತಿರುವ ಸುದ್ದಿಗಳ ಪ್ರಕಾರ ಈ ‘ಭೂಮಿ ನುಂಗಣ್ಣ’ರು ಈ ಬಾರಿ ಕಾಂಗ್ರೆಸ್ ಪರ ವಾಲುತ್ತಿದ್ದಾರಂತೆ. ಆಶ್ಚರ್ಯ ಏನಿಲ್ಲ, ಸುಮಾರು 32 ವರ್ಷಗಳ ಕಾಲ ಆ ರಾಜ್ಯವನ್ನು ಆಳಿದ ಕಾಂಗ್ರೆಸ್ ಪಕ್ಷಕ್ಕೆ ಈ ಜಮೀನ್ದಾರ ವರ್ಗ ದೊಡ್ಡ ಮತಬ್ಯಾಂಕ್ ಆಗಿತ್ತು. ಇದರಿಂದಾಗಿಯೇ ನಿತೀಶ್‌ಕುಮಾರ್ ಅವರಿಗೆ ಮತ್ತು ಬಿಹಾರಕ್ಕೆ ಈ ಚುನಾವಣೆ ನಿರ್ಣಾಯಕ.
ಬಿಹಾರದ ಜಾತಿ ರಾಜಕಾರಣವನ್ನು ಲಾಲುಪ್ರಸಾದ್ ಅವರಷ್ಟೇ ಚೆನ್ನಾಗಿ ಬಲ್ಲವರು ನಿತೀಶ್‌ಕುಮಾರ್. ಒಂದು ಕಾಲದಲ್ಲಿ ಹಿಂದುಳಿದ ಜಾತಿಗಳಲ್ಲಿ ಬಲಾಢ್ಯವಾಗಿರುವ ಯಾದವ್-ಕುರ್ಮಿ-ಕೊಯಿರಿಗಳ ತ್ರಿವೇಣಿ ಸಂಘ ಕಟ್ಟಿಕೊಂಡೇ ಇಬ್ಬರೂ ಹಿಂದುಳಿದ ಜಾತಿಗಳ ಚಳವಳಿ ಪ್ರಾರಂಭಿಸಿದವರು. ಆದರೆ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 13ರಷ್ಟಿರುವ ಯಾದವರು ಲಾಲುಪ್ರಸಾದ್ ಅವರಲ್ಲಿ ನಾಯಕನನ್ನು ಕಂಡುಕೊಳ್ಳಲು ಪ್ರಾರಂಭಿಸಿದ ನಂತರ ನಿತೀಶ್ ಹಿಂದೆ ಬಿದ್ದರು. ಅಡ್ವಾಣಿ ರಥಯಾತ್ರೆಯನ್ನು ತಡೆಯುವ ಮೂಲಕ ರಾಜ್ಯದಲ್ಲಿ ಶೇಕಡಾ 15ರಷ್ಟಿರುವ ಮುಸ್ಲಿಮರೂ ಲಾಲು ನಾಯಕತ್ವವನ್ನು ಒಪ್ಪಿಕೊಂಡರು. ಈ ಎಂ-ವೈ ಕೂಟದ ಬೆಂಬಲವೇ ಅವರ ಪಕ್ಷ ಹದಿನೈದು ವರ್ಷಗಳ ಕಾಲ ಬಿಹಾರದ ಮೇಲೆ ಅಧಿಕಾರ ಚಲಾಯಿಸುವಂತೆ ಮಾಡಿದ್ದು. ಈ ಹಿನ್ನಡೆಯಿಂದ ಸುಧಾರಿಸಿಕೊಳ್ಳಲು ನಿತೀಶ್‌ಕುಮಾರ್ ಅವರಿಗೆ ಸುಮಾರು 20 ವರ್ಷಗಳು ಬೇಕಾಯಿತು. ಕಳೆದ ಚುನಾವಣೆಯಲ್ಲಿ ಅವರ ಪ್ರಯತ್ನಕ್ಕೆ ಸ್ವಲ್ಪ ಯಶಸ್ಸು ಸಿಕ್ಕಿತ್ತು.
ಬಿಹಾರದಲ್ಲಿ ತಲಾ ಶೇಕಡಾ ಒಂದಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿರುವ ತೇಲಿ, ಮಲ್ಲಾ, ಕಾನು, ಧನುಕ್, ಭೀಂಡ್ ಮೊದಲಾದ ನೂರಾರು ಅತಿ ಹಿಂದುಳಿದ ಜಾತಿಗಳಿವೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಈ ಅತಿ ಹಿಂದುಳಿದ ಜಾತಿಗಳ ಪ್ರಮಾಣ ಸುಮಾರು ಶೇಕಡಾ 32. ಶಿಕ್ಷಣ, ಉದ್ಯೋಗ, ರಾಜಕೀಯ ಸೇರಿದಂತೆ ಯಾವ ಕ್ಷೇತ್ರದಲ್ಲಿಯೂ ಈ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಇಲ್ಲ. ಲಾಲು ಆಳ್ವಿಕೆಯಲ್ಲಿ ಪ್ರಬಲರಾದ ಯಾದವರ ಎದುರಲ್ಲಿ ಅಸುರಕ್ಷಿತ ಭಾವನೆಯಿಂದ ನರಳುತ್ತಿದ್ದ ಈ ಜಾತಿ ಜನ ಈಗ ನಿತೀಶ್‌ಕುಮಾರ್ ಅವರಲ್ಲಿ ಹೊಸ ನಾಯಕನನ್ನು ಕಾಣತೊಡಗಿದ್ದಾರೆ.
ಇದನ್ನೇ ಬಳಸಿಕೊಂಡು ನಿತೀಶ್‌ಕುಮಾರ್ ಅತಿಹಿಂದುಳಿದ ಜಾತಿಗಳಿಗೆ ವಿದ್ಯೆ ಮತ್ತು ಉದ್ಯೋಗದ ಕ್ಷೇತ್ರಗಳಲ್ಲಿ ಶೇಕಡಾ 20ರ ಮೀಸಲಾತಿ ಕಲ್ಪಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಈ ಜಾತಿಗಳಿಗೆ ಪ್ರತ್ಯೇಕ ರಾಜಕೀಯ ಮೀಸಲಾತಿ ಒದಗಿಸಿದ್ದಾರೆ. ಸಮಗ್ರ ರೂಪದ ಸಾಮಾಜಿಕ ಸುಧಾರಣೆಗೆ ಈ ಕ್ರಮ ಅಗತ್ಯ ಆಗಿತ್ತು.
ಭೂಮಿ ಮತ್ತು ಜಾತಿ ಮೂಲದ ರೋಗಗಳಿಗೆ ಔಷಧಿ ನೀಡುವುದರ ಜತೆಗೆ ನಿತೀಶ್‌ಕುಮಾರ್ ಬಿಹಾರದ ಜನತೆಗೆ ಅಭಿವೃದ್ಧಿಯ ನೋಟವೊಂದನ್ನೂ ನೀಡಿದ್ದಾರೆ. ರಾಜಧಾನಿ ಪಟ್ನಾದಲ್ಲಿ ಮಾತ್ರವಲ್ಲ, ಬೇರೆ ಪಟ್ಟಣಗಳಲ್ಲಿಯೂ ರಾತ್ರಿ ಹೊತ್ತು ಅಂಗಡಿ-ಹೋಟೆಲ್‌ಗಳು ತೆರೆದಿರುತ್ತವೆಯಂತೆ, ಅಪಹರಣ-ಕೊಲೆ-ದರೋಡೆಯ ಸುದ್ದಿಗಳು ಮೊದಲಿನಂತೆ ಪ್ರತಿನಿತ್ಯ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟವಾಗುತ್ತಿಲ್ಲವಂತೆ. ಹೇಮಮಾಲಿನಿಯ ಕೆನ್ನೆಯಷ್ಟು ನುಣುಪಾದ ರಸ್ತೆಗಳು ಇಲ್ಲದಿದ್ದರೂ ಕನಿಷ್ಠ ಓಂಪುರಿಯ ಕೆನ್ನೆಯಂತಹ ರಸ್ತೆಗಳಾದರೂ ಇದೆಯಂತೆ.
ಶಾಲೆಗಳಲ್ಲಿ ಶಿಕ್ಷಕರು ಇರುವುದರಿಂದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರಂತೆ. ಭ್ರಷ್ಟ ನೌಕರಷಾಹಿಗೆ ಲಗಾಮು ಬಿದ್ದಿದೆಯಂತೆ. ಬಿಹಾರದ ಹೆಸರೆತ್ತಿದರೆ ಬೆಚ್ಚಿಬೀಳುತ್ತಿದ್ದ ಬಂಡವಾಳ ಹೂಡಿಕೆದಾರರು ಹಣ ತಂದು ಸುರಿಯುತ್ತಿದ್ದಾರಂತೆ..... ನಿತೀಶ್‌ಕುಮಾರ್ ಅವರ ಬಿಹಾರವನ್ನು ನೋಡಬೇಕೆಂದು ಅನಿಸುತ್ತಿದೆ.
ಐ ಮಿಸ್ ಬಿಹಾರ್.

Monday, October 26, 2015

ದಿನೇಶ್ ಅಮಿನ್ ಮಟ್ಟು ಸರ್ ಹೇಳಿದ್ದನ್ನು ಗ್ರಹಿಸುತ್ತಾ.....

ಹೊನ್ನಾವರ: ಆರ್‌‌‌ಎಸ್ಎಸ್‌, ನಾರಾಯಣ ಗುರು ಹಾಗೂ ವಿವೇಕಾನಂದರು ಹೇಳಿದ ಧರ್ಮ ಅನುಸರಿಸಿದರೆ ತಾವು ಆರ್‌‌ಎಸ್ಎಸ್ ಸೇರಲು ಸಿದ್ಧ. ಒಂದು ವೇಳೆ ನನ್ನ ಷರತ್ತನ್ನು ಕಲ್ಲಡ್ಕ ಪ್ರಭಾಕರ್ ಭಟ್‌ ಒಪ್ಪಿದರೆ, ಪೇಜಾವರ ಮಠಕ್ಕೆ ನನ್ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌‌‌ಮಟ್ಟು ಹೇಳಿದರು.

ನಗರದಲ್ಲಿ ಮಂಥನ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ 'ಕಲಬುರ್ಗಿ ವಿಚಾರ ಮಾರ್ಗ ಮುಂದೇನು' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಮಕೃಷ್ಣರನ್ನು ಟೀಕಿಸುವ ಬದಲು, ರಾಮಮನೋಹರ ಲೋಹಿಯಾ, ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ ವಿಚಾರ ಹರಡುವ ಮೂಲಕ ವಿಚಾರವಾದ ಬೆಳೆಸಬೇಕಿದೆ. ಕುವೆಂಪು, ಕನಕದಾಸರ, ಬಸವಣ್ಣರನ್ನು ಓದಿಕೊಂಡವರು ಕೋಮುವಾದಿಯಾಗಲು ಸಾಧ್ಯವಿಲ್ಲ. ಹಾಗಾಗಿ ಈ ಐಕಾನ್‌‌‌ಗಳನ್ನು ಮುಂದಿಟ್ಟುಕೊಂಡು ಕೋಮುವಾದ ಎದುರಿಸಬೇಕು ಎಂದರು.
1991ರಲ್ಲಿ ಹೊಸ ಆರ್ಥಿಕ ನೀತಿ ಮತ್ತು ಬಾಬರಿ ಮಸೀದಿ ಬೀಳಿಸುವ ಮೂಲಕ ಕೋಮುವಾದವು ದೇಶವನ್ನು ಪ್ರವೇಶಿಸಿದವು. ಈ ಎರಡರ ಅಪಾಯವನ್ನು ಈಗ ಎದುರಿಸಬೇಕಿದೆ. ಅಚ್ಚೇ ದಿನದ ಪರಿಣಾಮ ವಿಚಾರವಾದಿಗಳ ಕೊಲೆಗಳು ಪತ್ರಿಕೆಗಳ ಮುಖಪುಟ ಆವರಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
***
* ಒಂದು ಅಡಿ ಟಿಪ್ಪಣಿ:
ಬಹಳಷ್ಟು ಗೆಳೆಯರು ಅಮ್ಮೀನ್ ಮಟ್ಟು ಸರ್ ಏನು ಹೇಳಿದ್ರು ಅಂತ ಓದಿದಂತಿಲ್ಲ. ಅವರ ಮಾತಿನ ವ್ಯಂಗ್ಯಾರ್ಥವನ್ನು ಗ್ರಹಿಸಿಲ್ಲ. ಻ಅವರ ಮಾತಿನ ಹಿಂದೆ ಇರುವ ಕೋಪವನ್ನು ಸಹ ಅರ್ಥಮಾಡಿಕೊಂಡಂತಿಲ್ಲ. ಪೆರಿಯಾರ, ಬಸವಣ್ಣ, ನಾರಾಯಣ ಗುರು ಅವರು ಹೇಳಿದ್ದನ್ನು ಆರ್.ಎಸ್.ಎಸ್. ಒಪ್ಪಿ ಅನುಸರಿಸಿದರೆ....ಆರ್.ಎಸ್.ಎಸ್. ಸೇರಬಹುದು. ಪೇಜಾವರ ಮಠಕ್ಕೆ ಉತ್ತರಾಧಿಕಾರಿ ಆಗುವುದು ಎಂದರೆ ಸನ್ಯಾಸಿಯಾಗಿ ಪೇಜಾವರರ ಈಗಿನ ತಾರತಮ್ಯ ನೀತಿ ಅನುಸರಿಸುವುದಲ್ಲ. ಸಮಾನತೆ ಮತ್ತು ಮನುಷ್ಯ ಪ್ರೀತಿಯನ್ನು ಅವರು ಒಪ್ಪಿ ಅನುಸರಿಸಿದರೆ ಎಂಬ ಶರತ್ತನ್ನು ಬಲಪಂಥೀಯರು ಹೆಚ್ಚು ಒತ್ತು ಕೊಟ್ಟು ಒಧಿ ಕೊಂಡಿಲ್ಲ. ಅಷ್ಟೆ. ``ಅದಕ್ಕೇ ಬರೀ ಓದು ಸಾಲದು. ವಿವೇಕ ಮುಖ್ಯ ಅಂಥ ''
ಮಾತಿನ ಒಳ ಅರ್ಥ , ಧ್ವನಿ ಗ್ರಹಿಕೆ ಸರಿಯಿದ್ದರೆ ಡಾ.ಕಲಬುರ್ಗಿ ಅವರ ಹತ್ಯೆ ನಡೆಯುತ್ತಿರಲಿಲ್ಲ. ಮಟ್ಟು ಸರ್ ಮಾತಿನ ಅರ್ಥ ...`` ಬಲಪಂಥೀಯರು ಬಡತನ, ಜಾತಿ ವ್ಯವಸ್ಥೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಕುರಿತು ಮಾತನಾಡುತ್ತಿಲ್ಲ''.`` ಧರ್ಮ ರಕ್ಷಣೆಯ ಭ್ರಮೆ ಮತ್ತು ಮುಖವಾಡದಲ್ಲಿ ಬದುಕುತ್ತಿದ್ದಾರೆ'' ಎಂದು. ಅಮ್ಮೀನ್ ಮಟ್ಟು ಸರ್ ಹೇಳಿದಂತೆ ಅವರ ಹೇಳಿಕೆಗೆ ಈಗಾಗಲೇ ಬಲಪಂಥೀಯರು ಫೇಸ್ ಬುಕ್ ನಲ್ಲಿ ವ್ಯಂಗ್ಯ ಆರಂಭಿಸಿದ್ದಾರೆ. ಅವರನ್ನು , ಅವರ ಹೇಳಿಕೆಗಳನ್ನು ಎಫ್ ಬಿ ಮೂಲಕ ಹಿಂಬಾಲಿಸುತ್ತಿದ್ದಾರೆ ಎಂಬುದು ನಿಜವಾಗಿದೆ. ಅವರು ನಿನ್ನೆ ಹೊನ್ನಾರವರದಲ್ಲಿ ಮಾತನಾಡಿದ ಮಾತುಗಳು ಅಪಾರ್ಥೀಕರಣ ಬಲಪಂಥೀಯರಿಂದ ಜೋರಾಗಿ ನಡೆದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಅದನ್ನು ವಿರೂಪಗೊಳಿಸುವ ಕಾರ್ಯ ಜೋರಾಗಿ ಸಾಗಿದೆ...
- ನಾಗರಾಜ ಹರಪನಹಳ್ಳಿ

Wednesday, October 21, 2015

ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಅತಿಹೆಚ್ಚು ಅತ್ಯಾಚಾರ

ರಾಷ್ಟ್ರೀಯ ಟಿವಿ ಚಾನೆಲ್ ಗಳನ್ನು ನೋಡುತ್ತಿರುವವರು ಕರ್ನಾಟಕದಲ್ಲಿಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಾಚಾರ ನಡೆಯುತ್ತಿವೆ ಎಂಬ ಅಭಿಪ್ರಾಯ ಹೊಂದಿದ್ದರೆ ಅದು ಅವರ ತಪ್ಪು ಖಂಡಿತ ಅಲ್ಲ. ಅರ್ನಾಬ್ ಗೋಸ್ವಾಮಿ ಮಧ್ಯಪ್ರದೇಶ ಇಲ್ಲವೆ ರಾಜಸ್ತಾನದಲ್ಲಿ ನಡೆಯುತ್ತಿರುವ ಅತ್ಯಾಚಾರಗಳ ಬಗ್ಗೆ ಶೋ ನಡೆಸಿದ್ದನ್ನು ಯಾರಾದಾರೂ ನೋಡಿದ್ದರೆ ದಯವಿಟ್ಟು ತಿಳಿಸಿ. ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿರುವ ಅಪರಾಧ ವರದಿ ಪ್ರಕಾರ ಕಳೆದ ವರ್ಷ ಅತ್ಯಂತ ಹೆಚ್ಚು ಅತ್ಯಾಚಾರಗಳು ನಡೆದಿರುವ ರಾಜ್ಯಗಳ ಪಟ್ಟಿಯ ಮೊದಲೆರಡು ಸ್ಥಾನಗಳಲ್ಲಿರುವುದು ಮಧ್ಯಪ್ರದೇಶ ಮತ್ತು ರಾಜಸ್ತಾನ.

Friday, October 9, 2015

ಪ್ರತಿಕ್ರಿಯೆ

ಸನ್ಮಾನ್ಯ ಶಾಸಕರಾದ ಸಿ.ಟಿ.ರವಿಯವರು ನನ್ನನ್ನು ಗೋಭಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಲು ಹೊರಟಿರುವದು ಕೇಳಿ ಸಂತೋಷವಾಯಿತು. ಅವರು ತಮ್ಮ ಪರಿವಾರವನ್ನು ಬಳಸಿಕೊಂಡು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಪ್ರಭಾವ ಬೀರಿ ರಾಷ್ಟ್ರಮಟ್ಟದಲ್ಲಿ ಗೋಭಕ್ಷಣಾ ಆಯೋಗ ರಚಿಸಿ ಅದಕ್ಕೆ ನನ್ನನ್ನು ಅಧ್ಯಕ್ಷರನ್ನಾಗಿ ನೇಮಕಮಾಡಬೇಕೆಂದು ವಿನಯಪೂರ್ವಕವಾಗಿ ಕೋರುತ್ತೇನೆ. ಇದೇ ವೇಳೆ ರಾಷ್ಟ್ರಮಟ್ಟದಲ್ಕಿ 'ನರಭಕ್ಷಣಾ ಬೆಂಬಲಿಗರ ಆಯೋಗ ' ರಚಿಸಿ ಅದಕ್ಕೆ ಸದ್ಯ ನಿರುದ್ಯೋಗಿಯಾಗಿರುವ ಸಿ.ಟಿ.ರವಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಒತ್ತಾಯಿಸುತ್ತೇನೆ.

Thursday, October 8, 2015

ಸಮಾಜ ಸುಧಾರಕರು ನಮಗೆ ಆದರ್ಶವಾಗಲಿ

ಚೇತನಾ ತೀರ್ಥಹಳ್ಳಿ ಅವರ ಪೂರ್ವಾಶ್ರಮಕ್ಕೆ ಸಂಬಂಧಿಸಿದಂತೆ ನನಗೆ ಕೆಲವು ಭಿನ್ನಾಭಿಪ್ರಾಯಗಳಿವೆ. ಅವರು ಅಲ್ಲಲ್ಲಿ ಮತ್ತೆ ಮತ್ತೆ ನನ್ನನ್ನು ಕುಟುಕಿದ್ದಾಗ ನಾನು ಖಾರವಾಗಿ ಪ್ರತಿಕ್ರಿಯಿಸಿದ್ದೆ ಕೂಡಾ. ಇತ್ತೀಚೆಗೆ ನಮ್ಮವರು ನಡೆಸಿದ ಪ್ರತಿಭಟನೆಯಲ್ಲಿ ಅವರ ಮುಖ ಕಾಣಿಸಿಕೊಂಡಾಗ ಅದನ್ನು ಪ್ರಶ್ನಿಸಿದ್ದು ಕೂಡಾ ಹೌದು. ಅದಕ್ಕೆ ಅವರು ದೀರ್ಘವಾದ ಪತ್ರ ಬರೆದು ಸ್ಪಷ್ಟೀಕರಣ ನೀಡಿದ್ದಾರೆ. ಇಷ್ಟು ಮಾತ್ರಕ್ಕೆ ಅವರ ಜತೆಗಿನ ಭಿನ್ನಾಭಿಪ್ರಾಯಗಳೆಲ್ಲವೂ ಕೊನೆಗೊಂಡಿದೆ ಎಂದು ಹೇಳಲಾರೆ.ಆದರೆ ಈ ಹೆಣ್ಣಿನ ಮೇಲೆ ಕೆಲವು ಹುಚ್ಚುನಾಯಿಗಳ ಬುದ್ದಿಯವರು ಅಶ್ಲೀಲ,ಅವಾಚ್ಯ ಶಬ್ದಗಳಿಂದ ನಡೆಸುತ್ತಿರುವ ದಾಳಿಯನ್ನು ನೋಡಿದಾಗ ಎಲ್ಲ ಬಗೆಯ ಭಿನ್ನಾಭಿಪ್ರಾಯಗಳನ್ನು ಮೀರಿ ನನ್ನ ಮನಸ್ಸು ಸಿಟ್ಟಾಗುತ್ತಿದೆ, ಮರುಗುತ್ತಿದೆ. ಇಂತಹದ್ದೊಂದು ಸ್ಪಂದನ ನಮ್ಮಲ್ಲಿ ಹುಟ್ಟಿಕೊಳ್ಳದಿದ್ದರೆ ನಾವು ಮನುಷ್ಯರಾಗುವುದಿಲ್ಲ, ಅವರಂತೆ ಅಮಾನುಷರಾಗುತ್ತೇವೆ.
ತಮ್ಮ ಮಾನ, ಘನತೆ, ಗೌರವಗಳನ್ನು ಕಾಪಾಡಿಕೊಳ್ಳಲು ಚೇತನಾ ತೀರ್ಥಹಳ್ಳಿಯವರು ನಡೆಸುವ ಹೋರಾಟವನ್ನು ನಾವೆಲ್ಲರೂ ಬೆಂಬಲಿಸುವ, ನಾನೂ ಬೆಂಬಲಿಸುತ್ತೇನೆ.
ಇದೇ ವೇಳೆ ನನ್ನ ಸ್ನೇಹಿತರಲ್ಲಿ ಸವಿನಯ ವಿನಂತಿ. ನಾವು ಅವರಾಗುವುದು ಬೇಡ. ಎಲ್ಲವನ್ನು ಪ್ರೇಮಪೂರ್ಣ ಜ್ಞಾನದ ಮೂಲಕವೇ ಗೆದ್ದ ಬುದ್ದ, ವಿರೋಧಿಗಳನ್ನು ತರ್ಕಬದ್ಧ ಪಾಂಡಿತ್ಯದಿಂದ ಗೆದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇದೇ ದಾರಿಯಲ್ಲಿ ನಡೆದು ನಮ್ಮ ಮುನ್ನಡೆಗೆ ದಾರಿ ತೋರಿದ ಸಮಾಜ ಸುಧಾರಕರು ನಮಗೆ ಆದರ್ಶವಾಗಲಿ. ನಮ್ಮ ಸಿಟ್ಟನ್ನು ಹೊರಗೆ ಕಾರಿ ಬೆಂಕಿ ಮಾಡುವುದು ಬೇಡ. ಅದನ್ನು ನಮ್ಮೊಳಗೆ ಮಾಗಲು ಬಿಟ್ಟು ನಮ್ಮ ಶಕ್ತಿಯನ್ನಾಗಿ ಮಾಡಿಕೊಳ್ಳುವ, ಬೆಳಕನ್ನಾಗಿ ಮಾಡುವ.

ನಂಬಿ, ಇತಿಹಾಸ ಕೂಡಾ ನಮ್ಮದೇ ಭವಿಷ್ಯ ಕೂಡಾ ನಮ್ಮದೇ. ಈ ವಕ್ರಬುದ್ದಿಗೇಡಿಗಳು, ಸುಳ್ಳುಬೆಲೆಗೇಡಿಗಳೆಲ್ಲ ಇತಿಹಾಸದ ಚಾಪೆಯಡಿ ಸಿಕ್ಕಿ ನಾಶವಾಗುವ ಹುಳುಗಳು ಅಷ್ಟೇ.

Wednesday, October 7, 2015

ರಾಜಕಾರಣಿಗಳ ಪಾಲಿನ ‘ಕಾಮಧೇನು’-ಗೋವು

ಗೋವು ರಾಜಕೀಯದ ಹಳೆಯ ‘ಕಾಮಧೇನು’. ಲಾಲ್‌ಕೃಷ್ಣ ಅಡ್ವಾಣಿ¬ಯ¬ವರಿಂದ ಹಿಡಿದು ನರೇಂದ್ರ ಮೋದಿವರೆಗೆ, ಇಂದಿರಾ ಗಾಂಧಿಯವರಿಂದ ಹಿಡಿದು ದಿಗ್ವಿಜಯ್ ಸಿಂಗ್‌ವರೆಗೆ ಎಲ್ಲರೂ ರಾಜಕೀಯ ಲಾಭದ ಹಾಲು ಕರೆಯಲು ಬಡಹಸುವಿನ ಕೆಚ್ಚಲಿಗೆ ಕೈ ಹಾಕಿದವರೇ ಆಗಿದ್ದಾರೆ. ಈ ಪಟ್ಟಿಯಲ್ಲಿ ಈಗ ಮುಖ್ಯಮಂತ್ರಿ ಬಿ.ಎಸ್.¬ಯಡಿ¬ಯೂರಪ್ಪ¬ನವರೂ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
‘ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ರಕ್ಷಣೆ ಕಾಯಿದೆ 1964’ಕ್ಕೆ ತಿದ್ದುಪಡಿ ಮಾಡುವ ಮಸೂದೆಯೊಂದನ್ನು ರಾಜ್ಯ ಸರ್ಕಾರ ತಯಾರಿಸಿದೆ. ಇದಕ್ಕೆ ಗೋವಿನ ಬಗೆಗಿನ ಭಕ್ತಿ ಮತ್ತು ಕಾಳಜಿಯಷ್ಟೇ ಕಾರಣ ಎಂದು ಸರ್ಕಾರದಲ್ಲಿರುವ ನಿಜವಾದ ಗೋಭಕ್ತರ್ಯಾರೂ ಗೋವಿನ ಮೇಲೆ ಆಣೆ ಮಾಡಿ ಹೇಳಲಾರರು.
ಹಸುಗಳ ಬಗ್ಗೆ ಈ ಜಗತ್ತಿನಲ್ಲಿ ಯಾರಿ¬ಗಾದರೂ ಮಾತನಾಡುವ ಹಕ್ಕಿದ್ದರೆ ಅದು ರೈತರಿಗೆ ಮಾತ್ರ. ಆ ಪ್ರಾಣಿಯನ್ನು ಕುಟುಂಬದ ಸದಸ್ಯರಂತೆ ಸಾಕಿ ಸಲಹುತ್ತಿರುವರು, (ಎಷ್ಟೋ ರೈತರ ಮನೆಯೊಳಗೆ ದನದ ಕೊಟ್ಟಿಗೆ ಇದೆ) ಮತ್ತು ಆ ಮೂಕ ಪ್ರಾಣಿಯೊಡನೆ ನಿತ್ಯ ‘ಮಾತನಾಡುತ್ತಾ’ ಅದರ ಕಷ್ಟ-ಸುಖ ವಿಚಾರಿ¬ಸು¬ತ್ತಿರುವವರು ಕೇವಲ ರೈತರು. ವಿಚಿತ್ರವೆಂದರೆ ರೈತರನ್ನು ಹೊರತುಪಡಿಸಿ ಉಳಿದವರೆಲ್ಲರೂ ಹಸುಗಳ ಪ್ರಾಣ ಉಳಿಸುವ ಬಗ್ಗೆ ಮಾತನಾಡು¬ತ್ತಿದ್ದಾರೆ. ಈ ಕೆಲಸಕ್ಕೆ ಹೊರಟಿರುವ ರಾಜ¬ಕಾರಣಿಗಳು, ಸ್ವಾಮೀಜಿಗಳು, ಹಿಂದೂ ಧರ್ಮದ ಉದ್ಧಾರದ ಗುತ್ತಿಗೆ ಪಡೆದು¬ಕೊಂಡಿರುವ ಸಮಾಜ ಸುಧಾರಕರಲ್ಲಿ ಯಾರೂ ಹಸು ಸಾಕಿದವರಲ್ಲ, ಅದರ ಸೆಗಣಿ ಎತ್ತಿದ¬ವರಲ್ಲ, ಗಂಜಳ ಬಾಚಿದವರಲ್ಲ, ಹುಲ್ಲು ಹಾಕಿದ¬ವರಲ್ಲ. ಇವರಲ್ಲಿ ಹೆಚ್ಚಿನವರು ಪ್ಯಾಕೆಟ್ ಹಾಲು ಕುಡಿದು ಗೋವಿನ ಚಿತ್ರಕ್ಕೆ ಪೂಜೆ ಮಾಡುವ¬ವರು. ವೈಯಕ್ತಿಕ ಲಾಭ-ನಷ್ಟದ ಲೆಕ್ಕಾಚಾರಕ್ಕೆ ತೊಡಗಿದಾಗೆಲ್ಲ ಇವರಿಗೆ ಗೋವಿನ ಬಗ್ಗೆ ಭಕ್ತಿ ಕೆರಳುತ್ತದೆ, ಕಾಳಜಿ ಉಕ್ಕಿ ಹರಿಯುತ್ತದೆ.
ಗೋಹತ್ಯೆ ನಿಷೇಧದ ಪರವಾಗಿ ವಕಾಲತ್ತು ವಹಿಸುತ್ತಿರುವವರೆಲ್ಲರೂ ಕೊಡುತ್ತಿರುವ ಕಾರಣ ಅದರ ಬಗ್ಗೆ ಹಿಂದೂಗಳಲ್ಲಿರುವ ಪೂಜ್ಯ¬ಭಾವನೆ. ಗೋವು ನಿಜಕ್ಕೂ ಹಿಂದೂಗಳ ಪಾಲಿಗೆ ಪೂಜನೀಯವೇ? ಹೌದು ಎಂದಾದರೆ ಅದು ಎಂದಿನಿಂದ ಹುಟ್ಟಿಕೊಂಡದ್ದು? ಹಿಂದೂ ಧರ್ಮ ಹುಟ್ಟಿಕೊಂಡ ದಿನದಿಂದಲೇ ಗೋವು ಪೂಜನೀಯ¬ವಾಗಿತ್ತೇ ಇಲ್ಲವೇ, ಯಾವುದೋ ಕಾಲ¬ಘಟ್ಟದಲ್ಲಿ ದಿಢೀರನೇ ಗೋವು ಪಾವಿತ್ರ್ಯದ ಪಟ್ಟ ಏರಿತೇ? ಈ ಪ್ರಶ್ನೆಗಳಿಗೆ ವೇದಗಳಲ್ಲಿಯೇ ಸ್ಪಷ್ಟವಾದ ಮತ್ತು ಯಾರೂ ನಿರಾಕರಿಸಲಾಗದಂತಹ ಉತ್ತರಗಳಿವೆ. ಆದರೆ ಹಿಂದೂ ಧರ್ಮದ ಆಚಾರ-ವಿಚಾರಗಳ ಬಗ್ಗೆ ಮಾತನಾಡುವಾಗೆಲ್ಲ ವೇದ-ಉಪನಿಷತ್‌ಗಳನ್ನು ಉಲ್ಲೇಖಿಸುವ ಪಂಡಿತರು ಗೋವಿನ ಪಾವಿತ್ರ್ಯದ ಬಗೆಗಿನ ಚರ್ಚೆ ಎದುರಾದಾಗ ಮಾತ್ರ ಧರ್ಮ¬ಶಾಸ್ತ್ರಗಳನ್ನು ತಪ್ಪಿಯೂ ಪ್ರಸ್ತಾಪಿಸುವುದಿಲ್ಲ.
ಹಿಂದೂ ಧರ್ಮದ ‘ಸಂವಿಧಾನ’ ಎಂದೇ ಹೇಳಲಾಗುತ್ತಿರುವ ನಾಲ್ಕು ವೇದಗಳು ಆ ಕಾಲದ ಆಚಾರ, ವಿಚಾರ, ನಂಬಿಕೆ, ಜೀವನ¬ಕ್ರಮ, ಆಹಾರ ಪದ್ಧತಿಗಳ ವಿವರಗಳ¬ನ್ನೊಳ¬ಗೊಂಡ ಸಮಗ್ರರೂಪದ ದಾಖಲೆ. ಅವುಗಳ ಪ್ರಕಾರ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರರು ಸೇರಿದಂತೆ ಆ ಕಾಲದ ಹಿಂದೂಗಳೆಲ್ಲರೂ ಮಾಂಸಾಹಾರಿ¬ಗಳಾಗಿದ್ದರು. ಹಸು ಮತ್ತು ಕುದುರೆ ಅವರ ಮೆಚ್ಚಿನ ಆಹಾರವಾಗಿತ್ತು. ಅಶ್ವಮೇಧ, ರಾಜಸೂಯ, ವಾಜಪೇಯ ಮೊದಲಾದ ಯಾಗಗಳಲ್ಲಿ ದನ, ಎತ್ತು, ಗೂಳಿ¬ಗಳನ್ನು ಬಲಿ¬ಕೊಡುವುದು ಮತ್ತು ಅದರ ನಂತರ ಅವುಗಳ ಮಾಂಸ ತಿನ್ನುವುದು ಸಾಮಾನ್ಯ¬ವಾಗಿತ್ತು. ಮದುವೆಯಿಂದ ಶ್ರಾದ್ಧದವರೆಗೆ ವಿಶೇಷ ಸಂದರ್ಭಗಳಲ್ಲಿ ‘ದನ ಕಡಿಯುವ’ ಪದ್ಧತಿ ಇತ್ತು. ಮನೆಗೆ ಬರುವ ಅತಿಥಿಗಳಿಗೆ ನೀಡುವ ಗೋಮಾಂಸದಿಂದ ಕೂಡಿದ ‘ಮಧುಪರ್ಕ’ (ಸೂಪ್?) ಎಂಬ ಪಾನೀಯ ನೀಡಲಾಗುತ್ತಿತ್ತು. ಇದರಿಂದಾಗಿಯೇ ಅತಿಥಿಗಳನ್ನು ‘ಗೋಘ್ನ’ (ಗೋವಿನ ಹತ್ಯೆಗೆ ಕಾರಣಕರ್ತರು) ಎಂದು ಕರೆಯುತ್ತಿದ್ದರಂತೆ.
ಈ ಬಗ್ಗೆ ಬರೆದು ಮುಗಿಯದಷ್ಟು ಉಲ್ಲೇಖಗಳು ವೇದಗಳು, ತೈತ್ತರೀಯ ಉಪನಿಷತ್, ಮನುಸ್ಮೃತಿ ಮಹಾಭಾರತ, ರಾಮಾಯಣಗಳಲ್ಲಿವೆ. ಸಂವಿಧಾನ ರಚಿಸಿದ ಡಾ.ಬಿ.ಆರ್.ಅಂಬೇಡ್ಕರ್ (‘ಹಿಂದೂಸ್ ಏಟ್ ಬೀಫ್’ ಕೃತಿ) ಅವರಿಂದ ಹಿಡಿದು ಅನೇಕ ಇತಿಹಾಸಕಾರರು, ವಿದ್ವಾಂಸರು ವೇದಗಳ¬ಕಾಲದಲ್ಲಿನ ಗೋಮಾಂಸ ಭಕ್ಷಣೆ ಬಗ್ಗೆ ವಿವರವಾಗಿ ಬರೆದಿದ್ದಾರೆ.
ಭಾರತರತ್ನ ಪ್ರಶಸ್ತಿ ಪಡೆದಿದ್ದ ಪುರಾತತ್ವ ಶಾಸ್ತ್ರಜ್ಞ ಪಿ.ವಿ.ಕಾಣೆ ತಾವು ಸಂಪಾದಿಸಿರುವ ‘ಹಿಸ್ಟರಿ ಆಫ್ ಧರ್ಮ¬ಶಾಸ್ತ್ರ’ದಲ್ಲಿ, ಇತಿಹಾಸಕಾರ ಪ್ರೊ.ದ್ವಿಜೇಂದ್ರ¬ನಾಥ್ ಝಾ ಅವರ ‘ದಿ ಮಿತ್ ಆಫ್ ಹೋಲಿ ಕೌ’ ಎಂಬ ಪುಸ್ತಕದಲ್ಲಿ ವೇದ ಮತ್ತು ವೇದ ಪೂರ್ವ ಕಾಲದಲ್ಲಿ ಗೋಮಾಂಸ ಭಕ್ಷಣೆ ಹೇಗೆ ಸಾಮಾನ್ಯ ಆಹಾರ ಪದ್ಧತಿಯಾಗಿತ್ತು ಎಂಬು¬ದನ್ನು ಆಧಾರಸಹಿತ ಬರೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಘ ಪರಿವಾರಕ್ಕೆ ಹೆಚ್ಚು ಪ್ರಿಯರಾಗಿರುವ ಸಾಹಿತಿ ಎಸ್.ಎಲ್.¬ಭೈರಪ್ಪನವರು ‘ಪರ್ವ’ ಕಾದಂಬರಿಯಲ್ಲಿ ಇದನ್ನೇ ಬರೆದುದಕ್ಕೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. (ಧುರ್ಯೋ¬ಧನನು ರಾಯಭಾರಕ್ಕೆ ಕಳುಹಿಸುವ ಸೋಮದತ್ತನೆಂಬ ಪುರೋಹಿತರು ಮಧ್ಯಾಹ್ನದ ಭೋಜನಕ್ಕೆ ಕೋಣನ ಮಾಂಸ ತಿನ್ನುವ ಚಿತ್ರ ‘ಪರ್ವ’ದಲ್ಲಿದೆ).
ವೇದಕಾಲದಲ್ಲಿ ಮಾಂಸಾಹಾರಿಗಳಾಗಿದ್ದ ಹಿಂದೂಗಳು ಸಸ್ಯಾಹಾರಿಗಳಾಗಿದ್ದು ಮತ್ತು ಇದ್ದಕ್ಕಿದ್ದಂತೆಯೇ ಗೋವುಗಳು ಪವಿತ್ರಸ್ಥಾನ ಪಡೆದು ಪೂಜನೀಯವಾಗಿದ್ದು ಬೌದ್ಧ ಧರ್ಮದ ಸ್ಥಾಪನೆಯ ನಂತರ ಎನ್ನುವುದು ಚಾರಿತ್ರಿಕವಾದ ಸತ್ಯ. ಆದರೆ ಬಹಳ ಮಂದಿ ತಿಳಿದುಕೊಂಡಂತೆ ಬುದ್ಧ ಶಾಕಾಹಾರಿಯಾಗಿರಲಿಲ್ಲ, ಆತ ಮತ್ತು ಆತನ ಅನುಯಾಯಿಗಳು ಮಾಂಸ (ಅದೂ ಹಂದಿ) ತಿನ್ನುತ್ತಿದ್ದರು. ಅಹಿಂಸಾವಾದಿಯಾಗಿದ್ದ ಬುದ್ಧ ರೈತನ ಸಂಗಾತಿಯಾದ ಗೋವುಗಳ ಹತ್ಯೆಯನ್ನು ವಿರೋಧಿಸಿದ್ದ. ಬೌದ್ಧ ಧರ್ಮದ ಉದಯದಿಂದ ಭೀತಿಗೊಳಗಾದ ಹಿಂದೂ¬ಧರ್ಮ ಅದನ್ನು ಎದುರಿಸಲೆಂದೇ ಶಾಕಾಹಾರಿ¬ಯಾಗಿದ್ದು ಮತ್ತು ಗೋವನ್ನು ಪೂಜನೀಯವಾಗಿ ಮಾಡಿದ್ದು.
ಇಂತಹ ಗೋವು ಮುಂದಿನ ದಿನಗಳಲ್ಲಿ ರಾಜಕೀಯ ಕ್ಷೇತ್ರದ ‘ಕಾಮಧೇನು’ವಾಯಿತು. ಆಶ್ಚರ್ಯಕರ ಸಂಗತಿ ಎಂದರೆ ಈ ರಾಜಕೀಯ ಪ್ರಾರಂಭಿಸಿದ್ದೇ ಮೊಘಲ್ ದೊರೆಗಳು. ಬಾಬರ್, ಅಕ್ಬರ್, ಹುಮಾಯೂನ್ ಮೊದಲಾ¬ದವರೆಲ್ಲರೂ ಹಿಂದೂಗಳನ್ನು ಒಲಿಸಿಕೊಳ್ಳಲು ನಿಯಂತ್ರಿತ ಗೋಹತ್ಯೆ ನಿಷೇಧ ಹೇರಿದ್ದರು.
ಗೋಹತ್ಯೆ ನಿಷೇಧವನ್ನು ಮೂಲಭೂತ ಹಕ್ಕಾಗಿ ಸೇರಿಸಬೇಕೆಂದು ಸಂವಿಧಾನ ರಚನಾ ಸಭೆಯಲ್ಲಿ ಕೆಲವು ಹಿಂದೂ ನಾಯಕರು ಒತ್ತಡ ಹೇರಿದ್ದರು. ಆದರೆ ಅಂಬೇಡ್ಕರ್ ಮಾತ್ರವಲ್ಲ ಆಗಿನ ಪ್ರಧಾನಿ ಜವಾಹರಲಾಲ ನೆಹರೂ ಅವರೂ ಇದಕ್ಕೆ ವಿರುದ್ಧವಾಗಿದ್ದರು. ಈ ಕಾರಣದಿಂದಾಗಿಯೇ ಬಹಳ ಎಚ್ಚರಿಕೆಯಿಂದ 48ನೇ ಪರಿಚ್ಛೇದವನ್ನು ರಾಜ್ಯಗಳಿಗೆ ಸಂಬಂಧಿಸಿದ ಸಂವಿಧಾನದ ನಿರ್ದೇ¬ಶನ ತತ್ವದಲ್ಲಿ ಸೇರಿಸಲಾಯಿತು. ‘ಕೃಷಿಕ್ಷೇತ್ರ ಮತ್ತು ಪಶುಸಂಗೋಪನೆಯನ್ನು ಆಧುನಿಕ ಮತ್ತು ವೈಜ್ಞಾನಿಕ ನೆಲೆಯಲ್ಲಿ ಅಭಿವೃದ್ಧಿ-ಪಡಿಸಬೇಕು. ಜಾನುವಾರಗಳ ತಳಿ ಸುಧಾರಣೆಗೆ ಕ್ರಮಕೈಗೊಳ್ಳುವುದರ ಜತೆಗೆ ಪ್ರಯೋಜನಕಾರಿ ಜಾನುವಾರುಗಳು ಮುಖ್ಯವಾಗಿ ಹಾಲು ನೀಡು¬ವಂತಹ ಹಸು-ಎಮ್ಮೆಗಳ ಹತ್ಯೆಗೆ ನಿಷೇಧ ಹೇರಬಹುದು’ ಎಂದು 48ನೇ ಪರಿಚ್ಛೇದ ಹೇಳಿದೆ. ಇದರಂತೆ ಪಶ್ಚಿಮ ಬಂಗಾಳ, ಕೇರಳ ಮತ್ತು ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ನಿಯಂತ್ರಿತ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ.
ಕರ್ನಾಟಕದಲ್ಲಿ 1964ರಿಂದಲೂ ಗೋ¬ರಕ್ಷಣಾ ಕಾಯಿದೆ ಜಾರಿಯಲ್ಲಿದೆ. ಇದರ ಪ್ರಕಾರ ಸಂಬಂಧಿತ ಅಧಿಕಾರಿಗಳಿಂದ ಲಿಖಿತ ದೃಢೀಕರಣ¬ಪತ್ರ ಪಡೆದ ನಂತರವಷ್ಟೇ ಗೋವುಗಳ ಹತ್ಯೆ¬ಮಾಡಬಹುದಾಗಿದೆ. ಈ ರೀತಿ ಹತ್ಯೆ ಮಾಡ¬ಬಹುದಾದ ಗೋವುಗಳಿಗೆ ಕನಿಷ್ಠ ಹನ್ನೆರಡು ವರ್ಷ ವಯಸ್ಸಾಗಿರಬೇಕು, ಅವುಗಳು ಹಾಲು ನೀಡುವ ಇಲ್ಲವೇ ಕರು ಹಾಕುವ ಸಾಮರ್ಥ್ಯ¬ವನ್ನು ಕಳೆದುಕೊಂಡಿರಬೇಕು ಹಾಗೂ ಗಾಯ¬ಗೊಂಡು ನಿರುಪಯುಕ್ತವಾಗಿರಬೇಕು. ಉಳಿದೆಲ್ಲ ಕಾಯಿದೆಗಳಂತೆ ಇದರ ಉಲ್ಲಂಘನೆ ಕೂಡಾ ನಡೆಯುತ್ತಿರುವುದು ನಿಜ. ಮಾಂಸಕ್ಕಾಗಿ ಹಸುಗಳನ್ನು ಕಸಾಯಿಖಾನೆಗಳಿಗಿಂತ ಹೆಚ್ಚಾಗಿ ಖಾಸಗಿಯಾಗಿಯೇ ಕೊಲ್ಲುವುದರಿಂದ ಕಾಯಿದೆಯ ಪಾಲನೆ ಕಡಿಮೆ.
ಸಂಪೂರ್ಣವಾಗಿ ಗೋಹತ್ಯೆ ನಿಷೇಧಿಸುವ ಕಾನೂನು ರಚನೆ ಒತ್ತಾಯ ಸ್ವತಂತ್ರ ಭಾರತ¬ದಲ್ಲಿ ಜೋರಾಗಿ ಕೇಳಿಬಂದದ್ದು 1979ರಲ್ಲಿ ವಿನೋಬಾ ಭಾವೆ ಆಮರಣ ಉಪವಾಸ ಪ್ರಾರಂಭಿಸಿದಾಗ. ಇದಕ್ಕೆ ಮಣಿದ ಜನತಾ ಸರ್ಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು. 1982ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರೇ ರಾಜ್ಯ¬ಸರ್ಕಾರ¬ಳಿಗೆ ಪತ್ರ ಬರೆದು ಗೋಹತ್ಯೆ ನಿಷೇಧಿಸುವಂತೆ ತಿಳಿಸಿದ್ದರು. ಅಲ್ಲಿಂದೀಚೆಗೆ ಗೋಹತ್ಯೆ ನಿಷೇಧದ ಕನಿಷ್ಠ ಹನ್ನೆರಡು ಖಾಸಗಿ ಸದಸ್ಯರ ಗೊತ್ತುವಳಿಗಳು ಲೋಕಸಭೆಯಲ್ಲಿ ಮಂಡನೆಯಾಗಿವೆ. 1990ರಲ್ಲಿ ಬಿಜೆಪಿ ಸದಸ್ಯ ಜಿ.ಎಂ.ಲೋಧಾ ಮಂಡಿಸಿದ ಗೊತ್ತುವಳಿಗೆ ಕಾಂಗ್ರೆಸ್ ನಾಯಕ ವಸಂತ ಸಾಠೆ ಅವರೇ ಬೆಂಬಲಿಸಿ ಅಚ್ಚರಿಸಿ ಹುಟ್ಟಿಸಿದ್ದರು.
ಬೂದಿ ಮುಚ್ಚಿದ ಕೆಂಡದಂತಿದ್ದ ಈ ವಿವಾದ¬ವನ್ನು ಇತ್ತೀಚೆಗೆ ಕೆದಕಿದ್ದು ಎಐಸಿಸಿಯ ಈಗಿನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ಸಿಂಗ್ ಮಧ್ಯ¬ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಗೋಹತ್ಯೆ ನಿಷೇಧಿಸಿ ಕಾನೂನು ರೂಪಿಸುವಂತೆ ‘ದಿಗ್ಗಿರಾಜಾ’ ಪ್ರಧಾನಿ ವಾಜಪೇಯಿ ಅವರಿಗೆ ಪತ್ರ ಬರೆದಿದ್ದರು. ಇದನ್ನೇ ಬಳಸಿಕೊಂಡ ಎನ್‌ಡಿಎ ಸರ್ಕಾರ 2003ರಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಮುಂದಾಯಿತು. ಆದರೆ ಮಿತ್ರ¬ಪಕ್ಷ¬ಗಳಾದ ತೆಲುಗುದೇಶಂ ಮತ್ತು ಡಿಎಂಕೆ ವಿರೋಧದ ಕಾರಣದಿಂದಾಗಿ ಆ ಪ್ರಯತ್ನ ಸಫಲವಾಗಲಿಲ್ಲ.
ಗೋಹತ್ಯೆ ನಿಷೇಧವನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನರಷ್ಟೇ ವಿರೋಧಿಸುತ್ತಾರೆಂಬ ತಪ್ಪು ಕಲ್ಪನೆಯೊಂದಿದೆ. ದನದ ಮಾಂಸವನ್ನು ನಿತ್ಯದ ಆಹಾರವಾಗಿ ಬಳಸುತ್ತಿರುವವರಲ್ಲಿ ಶೂದ್ರ ಮತ್ತು ದಲಿತರ ಸಂಖ್ಯೆ ಕೂಡಾ ಗಣನೀಯವಾಗಿದೆ. ಹೀಗಿದ್ದರೂ ಗೋಹತ್ಯೆಯ ನಿಷೇಧವನ್ನು ಕೇವಲ ಆಹಾರದ ದೃಷ್ಟಿ¬ಯಿಂದಷ್ಟೇ ವಿರೋಧಿಸಬೇಕಾಗಿಲ್ಲ. ಸಂಖ್ಯೆಯ ದೃಷ್ಟಿಯಿಂದ ವಿಶ್ವದಲ್ಲಿಯೇ ಅತಿಹೆಚ್ಚಿನ ಜಾನುವಾರು ಸಂಪತ್ತು ಹೊಂದಿರುವ ದೇಶ ಭಾರತ. ವಿಶ್ವದ ಒಟ್ಟು ಹಸುಗಳಲ್ಲಿ ನಾಲ್ಕನೆ ಒಂದರಷ್ಟು ನಮ್ಮ ದೇಶದಲ್ಲೇ ಇವೆ. ಇಲ್ಲಿರುವ ಸುಮಾರು 20 ಕೋಟಿ ಜಾನುವಾರುಗಳಲ್ಲಿ ಹಸುಗಳು ಆರು ಕೋಟಿ, ಎಮ್ಮೆಗಳು ಎಂಟು ಕೋಟಿ ಎಂದು ಅಂದಾಜು ಮಾಡಲಾಗಿದೆ. ಆದರೆ ಶೇಕಡಾ 60ರಷ್ಟು ಜಾನುವಾರುಗಳಿಗೆ ಬೇಕಾದಷ್ಟು ಮಾತ್ರ ಆಹಾರ ಲಭ್ಯ ಇದೆ. ಗೋಮಾಳಗಳೆಲ್ಲ ಒತ್ತುವರಿಗೊಳಗಾಗಿ ಕಣ್ಮರೆಯಾಗುತ್ತಿರುವುದರಿಂದ ಈ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಇದೆ. ಈವರೆಗಿನ ಎಲ್ಲ ಪಂಚವಾರ್ಷಿಕ ಯೋಜನೆಗಳ ವರದಿಗಳು ಈ ಬಗ್ಗೆ ಕಳವಳ ವ್ಯಕ್ತಪಡಿಸಿವೆ.
ಕೃಷಿಕ್ಷೇತ್ರದಲ್ಲಿನ ಕಷ್ಟ-ನಷ್ಟ ತಾಳಲಾರದೆ ರೈತರು ಈಗಲೇ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇಂತಹವರ ಕುತ್ತಿಗೆಗೆ ಹಾಲು ಬತ್ತಿದ, ಕರು ಹಾಕದ, ರೋಗಿಷ್ಠ ಬಡಕಲು ಹಸುಗಳನ್ನು ಕಟ್ಟಿಹಾಕಿದರೆ ರೈತರ ಆತ್ಮಹತ್ಯೆಯ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಅಷ್ಟೇ.
ಗೋಹತ್ಯೆ ನಿಷೇಧಕ್ಕೆ ಕಾನೂನು ರಚಿಸಲು ಹೊರಟಿರುವ ಸರ್ಕಾರಕ್ಕೆ ಇವೆಲ್ಲ ಗೊತ್ತಿಲ್ಲ ಎಂದೇನಿಲ್ಲ. ಗೊತ್ತಿದ್ದೂ ಇಂತಹ ‘ತಪ್ಪು’ ಮಾಡುತ್ತಿರುವುದಕ್ಕೆ ಕಾರಣ ಆಡಳಿತಪಕ್ಷ¬ದೊಳಗಿನ ಗುಪ್ತ ಅಜೆಂಡಾ. ಈಗಿರುವ ಕಾಯಿದೆಗೆ ಸೂಚಿಸಲಾಗಿರುವ ತಿದ್ದುಪಡಿಗಳಲ್ಲಿ ಗೋಹತ್ಯೆಯ ಪತ್ತೆಗಾಗಿ ಕಲ್ಪಿಸಿರುವ ಅವಕಾಶ ಹಾಗೂ ಅಪರಾಧಕ್ಕಾಗಿ ವಿಧಿಸಲಾಗುವ ಶಿಕ್ಷೆಯ ಪ್ರಮಾಣವೇ ಸರ್ಕಾರದ ದುರುದ್ದೇಶಕ್ಕೆ ಸಾಕ್ಷಿ.
ಈ ತಿದ್ದುಪಡಿ ಜಾರಿಗೆ ಬಂದರೆ ಮುಸ್ಲಿಮರನ್ನು ಒಳಗೊಂಡಂತೆ ರಾಜಕೀಯ ವಿರೋಧಿಗಳನ್ನು ಕಾನೂನಿನ ಕುಣಿಕೆಯಲ್ಲಿ ಸಿಕ್ಕಿಸುವುದು ಇನ್ನೂ ಸುಲಭದ ಕೆಲಸ. ಅವರ ಮನೆಮುಂದೆ ಸತ್ತದನದ ತಲೆ ಎಸೆದರಾಯಿತು. ಒಂದು ವರ್ಷದ ಜೈಲು ಇಲ್ಲವೇ 50,000 ರೂಪಾಯಿ ದಂಡ. ಮುಖ್ಯಮಂತ್ರಿ ಯಡಿಯೂರಪ್ಪನವರು ಎಷ್ಟು ಮಂದಿಯ ಕೈ ಕಡಿಯಲು ಸಾಧ್ಯ?
(2010 ಫೆಬ್ರವರಿ 15ರಂದು ಪ್ರಜಾವಾಣಿಯಲ್ಲಿ ಪ್ರಕಟವಾಗಿದ್ದ ನನ್ನ ಅಂಕಣ)

Saturday, October 3, 2015

ಮಾಧ್ಯಮದಲ್ಲೂ ‘ಅಹಿಂದ’ ಇರಬೇಕು – ದಿನೇಶ್ ಅಮೀನ್ ಮಟ್ಟು

ಇದು ಪ್ರತಿ ಪತ್ರಕರ್ತ ಕೇಳಲೇಬೇಕಾದ ಭಾಷಣ
ಭಾಷಣ: ದಿನೇಶ್ ಅಮೀನ್ ಮಟ್ಟು,                                                      ನಿರೂಪಣೆ: ಎನ್.ರವಿಕುಮಾರ್ ಶಿವಮೊಗ್ಗ
(ಕರ್ನಾಟಕ ಮಾಧ್ಯಮ ಅಕಾಡೆಮಿ ಅಕ್ಟೋಬರ್ 3 ರಂದು ಕರ್ನಾಟಕ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ ಹಾಗೂ ಉರ್ದು ರಿಪೋಟರ್ಸ್ ಫೋರಂನ ಸಹಯೋಗದಲ್ಲಿ ರಾಯಚೂರಿನಲ್ಲಿ ‘ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ಮಾಧ್ಯಮ ಕಾರ್ಯಾಗಾರ’ ವನ್ನು ಹಮ್ಮಿಕೊಂಡಿತ್ತು. ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ನಾಡಿನ ಹಿರಿಯ ಪತ್ರಕರ್ತರು, ಚಿಂತಕರಾದ ಶ್ರೀಯುತ ದಿನೇಶ್ಅಮೀನ್ ಮಟ್ಟು ಅವರು ಆಶಯ ಮಾತುಗಳನ್ನಾಡಿದ್ದರು. ಅವರ ಈ ಅರ್ಥಪೂರ್ಣ ಮಾತುಗಳನ್ನು ಇಲ್ಲಿ ದಾಖಲಿಸಲಾಗಿದೆ.)
ಕರ್ನಾಟಕ ಮಾಧ್ಯಮ ಅಕಾಡೆಮಿಗೆ ನಮ್ಮ ಪೊನ್ನಪ್ಪ ಅವರು ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಅಕಾಡೆಮಿಯ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿದ್ದೇನೆ. ಒಂದು ರೀತಿಯಲ್ಲಿ ಅಕಾಡೆಮಿ ಪಾಲಿಗೆ ನಾನೂ ಕೂಡಾ ಅಸ್ಪೃಶ್ಯನಾಗಿದ್ದೆ. ಈ ಕಾರ್ಯಾಗಾರದ ವಿಷಯ ಕೂಡಾ ಅದೇ ಆಗಿದೆ. ಅದೇನೇ ಇರಲಿ ಇಂತಹದ್ದೊಂದು ಕಾರ್ಯಕ್ರಮ ಆಯೋಜಿಸಿದ್ದಕ್ಕಾಗಿ ಪೊನ್ನಪ್ಪ ಅವರನ್ನು ನಾನು ಅಭಿನಂದಿಸುತ್ತೇನೆ.
ಕೆಲವುವರ್ಷಗಳ ಹಿಂದೆ ದೆಹಲಿಯಲ್ಲಿದ್ದಾಗ ಕರ್ನಾಟಕದ ಪರಿಚಿತ ಬುದ್ದಿಜೀವಿರಾಜಕಾರಣಿಯೊಬ್ಬರು ಭೇಟಿಯಾಗಿದ್ದರು. ಇತ್ತೀಚೆಗೆ ಮಾಧ್ಯಮದಲ್ಲಿ ಜಾತೀಯತೆ ಜಾಸ್ತಿಯಾಗಿದೆ ಎಂದು ಅವರು ಬಹಳ ವಿಷಾದದಿಂದ ಹೇಳುತ್ತಿದ್ದರು. “ನನಗೆ ಅರ್ಥ ಆಗಲಿಲ್ಲ” ಎಂದೆ. ಅವರು “ಇಲ್ಲ ಈಗೆಲ್ಲಾ ಮಾಧ್ಯಮಗಳಲ್ಲಿ ಜಾತಿಗೊಂದು ಗುಂಪು ಹುಟ್ಟಿಕೊಂಡಿದೆ” ಅಂದರು. ನಾನು ಅವರ ಮುಖವನ್ನು ನೋಡುತ್ತಿದ್ದೆ, ಅವರು ಯಾವುದೋ ದುರುದ್ದೇಶದಿಂದ ಹೇಳುತ್ತಿದ್ದಾರೆಂದು ನನಗನಿಸಲಿಲ್ಲ. ಅವರು ಬಹಳ ಸಹಜವಾಗಿ ಹೇಳಿದ್ದರು. “ಹಿಂದೆ ಮಾಧ್ಯಮದಲ್ಲಿ ಜಾತಿ ಇರಲಿಲ್ಲವಾ?” ಎಂದು ನಾನು ಅವರನ್ನು ಕೇಳಿದೆ.
ಬಹಳಷ್ಟುಮಂದಿಗೆ ಇತ್ತೀಚೆಗೆ ಹೀಗೆ ಅನಿಸಲಿಕ್ಕತ್ತಿದೆ. ಎಲ್ಲದರಲ್ಲಿಯೂ ಜಾತಿ ಬಂದಿದೆ, ಮಾಧ್ಯಮದಲ್ಲಿ ಜಾತಿ ಬಂದಿದೆ. ರಾಜಕೀಯದಲ್ಲಿ ಜಾತಿಬಂದಿದೆ. ಎಲ್ಲಾ ಕಡೆ ಜಾತಿ ಬಂದಿದೆ ಎಂದು ಹೇಳುತ್ತಿರುತ್ತಾರೆ. ಹಾಗಾದರೆ ಜಾತಿ ಇರಲಿಲ್ಲವೇ? ಅದು ಬಹಳ ಮುಖ್ಯವಾದ ಪ್ರಶ್ನೆ. ನಾನು ಆ ರಾಜಕಾರಣಿಯನ್ನು ಮತ್ತೆ ಕೇಳಿದೆ, “ಸುಮ್ಮನೆ ಕಣ್ಮುಚ್ಚಿಕೊಂಡು ನಿಮಗೆ ಪರಿಚಯವಿರುವ ಎಲ್ಲಾ ಪತ್ರಕರ್ತರನ್ನು ನೆನೆಪಿಸಿಕೊಳ್ಳಿ. ಅದರಲ್ಲಿ ಯಾವ ಯಾವ ಜಾತಿಯವರಿದ್ದಾರೆ ಎಂಬುದು ಗೊತ್ತಾಗುತ್ತದೆ” ಅಂದೆ. ಆಗ ಅವರಿಗೆ ನಿಧಾನವಾಗಿ ಅರ್ಥವಾಗುತ್ತಾ ಹೋಯಿತು.
ಈ ದೇಶದ ಪತ್ರಿಕೆಗಳ ಸಂಪಾದಕರ ಜಾತಿಯಾವುದೆಂದು ಲೆಕ್ಕಹಾಕಿ, ಈ ಪತ್ರಿಕೆಗಳಲ್ಲಿ ಅತ್ಯಂತ ಉನ್ನತ ಸ್ಥಾನದಲ್ಲಿರುವ ಪತ್ರಕರ್ತರು ಯಾರು? ಅವರು ಯಾವ ಯಾವ ಜಾತಿಯವರು ಎಂದು ನೋಡುತ್ತಾ ಹೋದರೆ ಈ ದೇಶದ ಮಾಧ್ಯಮದಲ್ಲಿಯೂ ಎಷ್ಟೋ ವರ್ಷಗಳಿಂದ ಜಾತಿಯತೆ ಇತ್ತು ಎಂಬ ವಾಸ್ತವ ಅರ್ಥವಾಗುತ್ತದೆ. ಬಹಳಷ್ಟು ಮಂದಿ ತೀರಾ ಸಹಜವಾಗಿ ಈ ರಾಜ್ಯದಲ್ಲಿ ದೇವರಾಜಅರಸು ಅವರಿಂದ ಜಾತೀಯತೆ ಬಂತು ಎಂದು ಹೇಳ್ತಾರೆ. ಆದರೆ ವಾಸ್ತವ ಸಂಗತಿ ಬೇರೆ ಇದೆ. ಯಾವಾಗ ಹಾವನೂರು ಆಯೋಗದ ವರದಿ ಅನುಷ್ಠಾನಕ್ಕೆ ಬಂತೋ, ಯಾವಾಗ ಅವಕಾಶ ವಂಚಿತರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಅವಕಾಶ ಸಿಕ್ಕಿತೊ, ರಾಷ್ಟ್ರ ಮಟ್ಟದಲ್ಲಿ ಮಂಡಲ್ ಆಯೋಗದ ವರದಿ ಯಾವಾಗ ಜಾರಿಗೆ ಬಂತೋ, ಆಗ ಅವಕಾಶ ವಂಚಿತರಿಗೂ ಅವಕಾಶಗಳು ಕೆಲವು ಕ್ಷೇತ್ರಗಳಲ್ಲಿ ಸಿಗುವಂತಾಯಿತು. ಅದರ ನಂತರ ರಾಜಕೀಯವಾಗಿ ಕೂಡಾ ಈ ಅವಕಾಶ ವಂಚಿತರು ಪ್ರಾತಿನಿಧ್ಯ ಪಡೆಯುವಂತಾಯಿತು. ಆಗ ಇದ್ದಕ್ಕಿಂತ ಹಾಗೆ ರಾಜಕೀಯದಲ್ಲಿ, ಮಾಧ್ಯಮದಲ್ಲಿ ಎಲ್ಲಾ ಕಡೆ ಜಾತಿ ಬಂದಿದೆ ಎಂಬ ಅಭಿಪ್ರಾಯ ತೇಲಿಬರಲಾರಂಭಿಸಿತು.
1996ರಲ್ಲಿ ದೆಹಲಿಯಲ್ಲಿ ವಾಷಿಂಗ್ಟನ್ ಪೋಷ್ಟ್ ನ ಬ್ಯೂರೋ ಚೀಫ್ ಆಗಿದ್ದ ಆಫ್ರಿಕನ್ ಮೂಲಕ ಅಮೆರಿಕನ್ ಕೆನ್ನತ್ ಕೂಪರ್ ಅವರು ಮೊದಲ ಬಾರಿಗೆ ಭಾರತದ ಮಾಧ್ಯಮ ಲೋಕದಲ್ಲಿರುವ ಜಾತಿಯತೆ ಬಗ್ಗೆ ಜಗತ್ತಿನ ಗಮನ ಸೆಳೆದಿದ್ದರು. ಭಾರತದ ಮಾಧ್ಯಮ ಕ್ಷೇತ್ರದಲ್ಲಿ ದಲಿತರು, ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂದು ಅವರು ಹುಡುಕುತ್ತಾ ಹೋಗುತ್ತಾರೆ. ಕಣ್ಣಿಗೆ ಬಹಳ ಮಂದಿ ಕಾಣೋದೆ ಇಲ್ಲ! ಉನ್ನತ ಹುದ್ದೆಗಳಲ್ಲಿ ಅವರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಯಾಕೆ ಹೀಗೆ ಎಂದು ಅವರು ಲೇಖನ ಬರೆಯುತ್ತಾರೆ. ‘ ಭಾರತದ ಮಾಧ್ಯಮಗಳಲ್ಲಿ ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಕೆಳಜಾತಿಗಳ ಪ್ರಾತಿನಿಧ್ಯವೇ ಇಲ್ಲ’ ಎಂದು ಅವರು ಬರೆದಿದ್ದರು.
ಅದರ ನಂತರ ಬಿ.ಎನ್ ಉನಿಯಾಲ್ ಎಂಬ ಪಯೋನಿಯರ್ ಪತ್ರಿಕೆಯ ಹಿರಿಯ ಪತ್ರಕರ್ತರೊಬ್ಬರು ಈ ಬಗ್ಗೆ ಲೇಖನದ ಮೂಲಕ ಗಮನಸೆಳೆಯುತ್ತಾರೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ಅಧಿಕಾರಕ್ಕೆ ಬಂದ ಮೇಲೆ ಬಿಎಸ್ಪಿ ಮತ್ತು ಪತ್ರಕರ್ತರ ನಡುವೆ ಯಾಕೆ ಸಂಘರ್ಷ ನಡೆಯುತ್ತಿದೆ ಎನ್ನುವುದನ್ನು ವರದಿ ಮಾಡಲು ಮಾಹಿತಿ ಸಂಗ್ರಹಕ್ಕಾಗಿ ದಲಿತ ಪತ್ರಕರ್ತರನ್ನು ಹುಡುಕಲು ಹೊರಡುತ್ತಾರೆ. ಅವರಿಗೆ ಯಾವ ದಲಿತ ಪತ್ರಕರ್ತರು ಸಿಗುವುದಿಲ್ಲ. ಇದರಿಂದ ಕಳವಳಗೊಂಡು 30 ವರ್ಷಗಳನ್ನು ಪತ್ರಿಕಾ ವೃತ್ತಿಯಲ್ಲಿ ಕಳೆದಿದ್ದ ಅವರು ಈ ಅವಧಿಯಲ್ಲಿ ತಾನು ಭೇಟಿ ಮಾಡಿದ ದಲಿತ ಪತ್ರಕರ್ತರು ಯಾರಿದ್ದಾರೆ ಎಂದು ನೆನಪುಮಾಡಿಕೊಳ್ಳಲು ಪ್ರಯತ್ತಿಸುತ್ತಾರೆ. ಅವರಿಗೆ ಒಂದೇ ಒಂದು ಹೆಸರು ನೆನಪಿಗೆ ಬರುವುದಿಲ್ಲ. ಇದನ್ನು ಅವರು ಮೊದಲ ಬಾರಿಗೆ ಪಯೋನಿಯರ್ ಪತ್ರಿಕೆಯಲ್ಲಿ ದಾಖಲಿಸುತ್ತಾರೆ.
ಇದರ ನಂತರ ರಾಬಿನ್ ಜೆಫ್ರಿಎಂಬ ಇನ್ನೊಬ್ಬ ಅಂತರರಾಷ್ಟ್ರೀಯ ಖ್ಯಾತಿಯ ಸಂಶೋಧಕ ಪ್ರಾಧ್ಯಾಪಕ ಇದರ ಬಗ್ಗೆ ಅಧ್ಯಯನ ಮಾಡಿ ಲೇಖನ ಬರೆದಿದ್ದಾರೆ. ‘ಹೆಚ್ಚು ಕಡಿಮೆ ಭಾರತದ ಮಾಧ್ಯಮದಲ್ಲಿ ದಲಿತ ವರದಿಗಾರರು ಮತ್ತು ಉಪ ಸಂಪಾಕದರು ಇಲ್ಲವೇ ಇಲ್ಲ. ದಲಿತರ ಮಾಲಿಕತ್ವದ ಪತ್ರಿಕೆಯಾಗಲಿ, ದಲಿತ ಸಂಪಾದಕರಾಗಲಿ ಇಲ್ಲವೇ ಇಲ್ಲ’ ಎಂದು ರಾಬಿನ್ ಜೆಫ್ರಿ ಬರೆದಿದ್ದರು. ‘ಮೀಸಲಾತಿ ವಿರೋಧಿ ಚಳುವಳಿಯಲ್ಲಿ ಮುಖ್ಯವಾಗಿ ಟಿವಿ ಚಾನೆಲ್ ಗಳು ಏಕಪಕ್ಷೀಯವಾಗಿ ವರದಿ ಮಾಡಲು ಪತ್ರಿಕಾ ಕಚೇರಿಯಲ್ಲಿರುವ ಜಾತೀಯತೆ ಕಾರಣ’ ಎಂದು ಸಿದ್ದಾರ್ಥ ವರದರಾಜನ್ ‘ದಿ ಹಿಂದೂ’ ವಿನಲ್ಲಿ ಬರೆದಿದ್ದರು. ಇದರ ನಂತರ 2006ರಲ್ಲಿ ಸಿಎಸ್ ಡಿಎಸ್ ದೆಹಲಿಯಲ್ಲಿ ಮಾಡಿದ ಸಮೀಕ್ಷೆ ಇನ್ನಷ್ಟು ಕಳವಳಕಾರಿ ಅಂಶಗಳನ್ನು ಬಯಲು ಮಾಡಿತ್ತು. ಸಂಸ್ಥೆ ಸಮೀಕ್ಷೆ ನಡೆಸಿದ ದೆಹಲಿಯ 32 ಹಿಂದಿ ಮತ್ತು ಇಂಗ್ಲೀಷ್ ಪತ್ರಿಕೆಗಳ 315 ನೀತಿ ನಿರ್ಧಾರಕ ಹುದ್ದೆಗಳಲ್ಲಿ, ಹೆಚ್ಚುಕಡಿಮೆ ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಶೇಕಡಾ 90 ಮತ್ತು ಟಿವಿ ಚಾನೆಲ್ ಗಳಲ್ಲಿ ಶೇಕಡಾ 79ರಷ್ಟು ಮೇಲ್ಜಾತಿ ಪತ್ರಕರ್ತರೇ ತುಂಬಿದ್ದರು’ ಎಂದು ಆ ಸಮೀಕ್ಷೆ ತಿಳಿಸಿತ್ತು. ಇದು ಇಂದಿನ ಭಾರತದ ಮಾಧ್ಯಮದ ಸ್ಥಿತಿ.
ಮಾಧ್ಯಮಗಳು ಹೀಗೆ ಯಾಕೆ ವರ್ತಿಸುತ್ತಿವೆ ಎಂಬ ಬಗ್ಗೆ ಮಾತನಾಡುವ ಮೊದಲು ದಿನಪತ್ರಿಕಗೆಳ, ಟಿ.ವಿ ಚಾನಲ್ ಗಳ ಮಾಲೀಕರು, ಮುಖ್ಯಸ್ಥರು ಯಾರು, ಅಲ್ಲಿನ ಟಾಪ್ 10 ಹುದ್ದೆಗಳಲ್ಲಿ ಯಾರಿದ್ದಾರೆ ಎಂದು ತಿಳಿದು ಕೊಂಡರೆ ಸಾಕು. ಆಗ ಯಾವ ಸರ್ಕಾರದ ಬಗ್ಗೆ, ಯಾವ ರಾಜಕಾರಣಿ ಬಗ್ಗೆ, ಯಾವ ಅಧಿಕಾರಿ ಬಗ್ಗೆ ಮಾಧ್ಯಮಗಳು ಯಾಕೆ ಹೀಗೆ ವರ್ತಿಸುತ್ತಿವೆ ಎನ್ನುವುದು ಗೊತ್ತಾಗಬಹುದು. ಇದು ಅಪ್ರಿಯವಾದ ಸತ್ಯ.
ಇದಕ್ಕೆಬಹಳಷ್ಟುಕಾರಣಗಳಿವೆ, ಅಧ್ಯಯನಗಳು ಕೂಡಾ ನಡೆದಿವೆ. ಇಂತಹ ಅಧ್ಯಯನ ಕನ್ನಡ ಮಾಧ್ಯಮ ರಂಗದ ಬಗ್ಗೆಯೂ ನಡೆಯಬೇಕಾಗಿದೆ. ದೆಹಲಿಯ ಏಜಾಜ್ ಆಶ್ರಫ್ ಎಂಬ ಪತ್ರಕರ್ತರೊಬ್ಬರು ಇತ್ತೀಚೆಗೆ ಈ ಬಗ್ಗೆ ಅಧ್ಯಯನ ನಡೆಸಿದ್ದರು. ದೆಹಲಿಯಲ್ಲಿ 1965ರಲ್ಲಿಯೇ ಸ್ಥಾಪನೆಗೊಂಡ ಸರ್ಕಾರಿ ಸ್ವಾಮ್ಯದ ಐಐಎಂಸಿ ಎಂಬ ಪತ್ರಿಕೋದ್ಯಮ ಪಾಠ ಮಾಡುವ ಸಂಸ್ಥೆ ಇದೆ. ಅಲ್ಲಿ ಮೀಸಲಾತಿಯೂ ಇರುವುದರಿಂದ ಒಂದಷ್ಟು ದಲಿತರು ಖಂಡಿತ ಅಲ್ಲಿ ಶಿಕ್ಷಣ ಪಡೆದಿರುತ್ತಾರೆ. ಹೀಗಿದ್ದರೂ ಅವರ್ಯಾರೂ ಪತ್ರಿಕಾ ಕಚೇರಿಗಳಲ್ಲಿ ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ ಏಜಾಜ್ ಆಶ್ರಫ್ ಅವರನ್ನು ಕಾಡುತ್ತದೆ. ಸರ್ಕಾರಿ ಕಾಲೇಜುಗಳು ಮತ್ತು ಯೂನಿರ್ವಸಿಟಿಗಳಲ್ಲಿ ಮೀಸಲಾತಿ ಸೌಲಭ್ಯದ ಮೂಲಕ ದಲಿತರು, ಹಿಂದುಳಿದವರ್ಗಗಳು ಮತ್ತು ಅಲ್ಪಸಂಖ್ಯಾತರು ಅಡ್ಮೀಷನ್ ಪಡೆಯುತ್ತಾರೆ. ಆ ನಂತರ ಅವರಲ್ಲಿ ಎಷ್ಟು ಮಂದಿ ಈ ಮಾಧ್ಯಮ ಸಂಸ್ಥೆಗಳನ್ನು ಸೇರಿಕೊಳ್ಳುತ್ತಾರೆ? ಅವರಲ್ಲಿ ಎಷ್ಟು ಮಂದಿ ಉಳಿದುಕೊಳ್ಳುತ್ತಾರೆ ಎಂಬ ಬಗ್ಗೆ ಅಧ್ಯಯನ ನಡೆಸಿ ಏಜಾಜ್ ಆಶ್ರಫ್ ದಿ.ಹೂಟ್ (thehoot.org) ಎಂಬ ವೆಬ್ ಸೈಟ್ ನಲ್ಲಿ ಬಹಳ ದೀರ್ಘವಾದ ಲೇಖನ ಬರೆದಿದ್ದಾರೆ.
ಅದರಲ್ಲಿ ಸಂತೋಷ್ ವಾಲ್ಮೀಕಿ ಎಂಬ ದಲಿತ ಪತ್ರಕರ್ತನ ವ್ಯಥೆಯ ಕತೆ ಇದೆ. ಇವರು ಹಿಂದೂಸ್ಥಾನ ಟೈಮ್ಸ್ ನ ಲಕ್ನೋ ಬ್ಯೂರೋ ಚೀಫ್ ಆಗಿದ್ದಾರೆ. ಅವರೊಬ್ಬ ಕುಡುಕ ಚಾಲಕನ ಮಗ, ದೆಹಲಿಯ ಬೀದಿಗಳಲ್ಲಿ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದರು . ಬಹಳ ಕಷ್ಟ ಪಟ್ಟು ಡಿಗ್ರಿ ಮುಗಿಸುತ್ತಾರೆ. ಆಮೇಲೆ ಸ್ನಾತಕೋತ್ತರ ಪದವಿಗಾಗಿ ಅರ್ಜಿ ಹಾಕಿದಾಗ ಇಂಟರ್ ವ್ಯೂನಲ್ಲಿ . ‘ನೀನು ಪ್ರತಿದಿನ ಎಷ್ಟು ಪೇಪರ್ ಗಳನ್ನು ಓದುತ್ತಿ?’ ಎಂದು ಕೇಳಿದ್ದರಂತೆ. ‘ನಾನು ಪ್ರತಿದಿನ ಒಂಭತ್ತು ಪೇಪರ್ ಓದುತ್ತೇನೆ’ ಎಂದು ಅವರು ಉತ್ತರಿಸಿದ್ದರಂತೆ. ಸಂದರ್ಶಕರಿಗೆ ಆಶ್ಚರ್ಯ ಆಗುತ್ತದೆ. ಪತ್ರಿಕೆ ಮಾರುತ್ತಿದ್ದ ನಾನು ಆಸಕ್ತಿಯಿಂದ ಓದುವ ಹವ್ಯಾಸ ಬೆಳೆಸಿಕೊಂಡ ಕಾರಣದಿಂದಾಗಿ ಪತ್ರಕರ್ತನಾಗಲು ಸಾಧ್ಯವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.. ಅದರ ನಂತರ ತಾನು ಹೇಗೆ ತಾನು ಪತ್ರಕರ್ತ ಆದೆ ಎಂದು ಅವರು ಹೇಳುತ್ತಾ ಹೋಗುತ್ತಾರೆ. ಇವತ್ತು ಇಲ್ಲಿ ಸೇರಿರುವ ನೀವು ಇದನ್ನು ತಿಳಿದುಕೊಳ್ಳಬೇಕು.
ದೆಹಲಿಯ ಇಂಗ್ಲೀಷ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಇನ್ನೊಬ್ಬ ದಲಿತ ಪತ್ರಕರ್ತನನ್ನು ಏಜಾಜ್ ಆಶ್ರಫ್ ಭೇಟಿ ಮಾಡುತ್ತಾರೆ. ಜಾತಿಯಲ್ಲಿ ಕುರುಬನಾಗಿರುವ ಈ ಪತ್ರಕರ್ತ ತಾನು ಹೇಗೆ ಇಂಗ್ಲೀಷ್ ಕಲಿತೆ ಎನ್ನುವುದನ್ನು ಹೇಳುತ್ತಾನೆ. ಈತ ಇಂಗ್ಲೀಷ್ ಪತ್ರಿಕೆಗಳನ್ನು ಓದಿ ಅದರಲ್ಲಿ ತನಗೆ ಅರ್ಥವಾಗದ ಪದಗಳನ್ನು ನೋಟ್ ಮಾಡಿಕೊಂಡು ಅವಗಳಿಗೆ ಶಬ್ದಕೋಶ ನೋಡಿ ಅರ್ಥ ಬರೆದುಕೊಳ್ಳುತ್ತಿದ್ದನಂತೆ. ಇಂಗ್ಲೀಷ್ ವಾಕ್ಯಗಳನ್ನು ಏಕಾಂತದಲ್ಲಿ ಕೂತು ಜೋರಾಗಿ ಉಚ್ಚರಿಸಿ ಓದುತ್ತಿದ್ದನಂತೆ.ಕೊನೆಗೆ ಬಿಪಿಓ ಸೇರಿಕೊಂಡು ಅಲ್ಲಿ ವಾಯ್ಸ್ ಟ್ರೇನಿಂಗ್ ಪ್ರೋಗ್ರಾಮ್ ಮೂಲಕ ಇಂಗ್ಲೀಷ್ ಉಚ್ಚಾರ ಕಲಿತಿದ್ದನಂತೆ.
ಅಂದರೆ ಈ ಭಾರತದ ವ್ಯವಸ್ಥೆ ಹೇಗಿದೆಯೆಂದರೆ ಕೆಲವರು ಲಿಫ್ಟ್ನಲ್ಲಿ ಸರ್ರನೆ ಮೇಲೇರಿ ಹೋಗಿಬಿಡುತ್ತಾರೆ. ಇನ್ನು ಕೆಲವರು ಕಷ್ಟಪಟ್ಟು ಮೆಟ್ಟಿಲು ಹತ್ತಿಕೊಂಡು ಹೋಗಬೇಕಾಗುತ್ತದೆ. ನೀವೆಲ್ಲಾ ಏನಿಲ್ಲಿ ಸೇರಿದ್ದೀರಿ, ನೀವು ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಾಗುತ್ತದೆ. ನಿಮಗೆ ಲಿಫ್ಟ್ ಸಿಗೋದಿಲ್ಲ. ಇದು ಭಾರತದ ಇವತ್ತಿನ ಮಾಧ್ಯಮದ ಪರಿಸ್ಥಿತಿ.
ಮಾಧ್ಯಮದಲ್ಲಿಯಾಕೆ ಎಲ್ಲ ಜಾತಿ-ಧರ್ಮಗಳಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ಯಾರಾದರೂ ಕೇಳಬಹುದು. ನೋಡಿ, ಇತ್ತೀಚೆಗೆ ಮೀಸಲಾತಿಯಾಕೆ ಬೇಕು ಎಂಬ ಬಗ್ಗೆ ದೊಡ್ಡದಾಗಿ ಡಿಬೇಟ್ ನಡೆಯುತ್ತಿದೆ. ಈ ಪ್ರಶ್ನೆಗೆ ಮಾಧ್ಯಮ ರಂಗದಲ್ಲಿ ಉತ್ತರ ಇದೆ. ಎಲ್ಲಿ ಮೀಸಲಾತಿ ಇದೆಯೋ ಅಲ್ಲಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಪ್ರಾತಿನಿಧ್ಯ ಇದೆ. ರಾಜಕೀಯದಲ್ಲಿ ದಲಿತರ ಪ್ರಾತಿನಿಧ್ಯ ಇರುವುದಕ್ಕೆ ಮೀಸಲಾತಿ ಕಾರಣ. ಆದರೆ ಮೀಸಲಾತಿ ಇಲ್ಲದ ಮಾಧ್ಯಮದಲ್ಲಿ, ನ್ಯಾಯಾಂಗದಲ್ಲಿ ದಲಿತರ ಪ್ರಾತಿನಿಧ್ಯ ಇಲ್ಲ. ಅಂದರೆ ಮೀಸಲಾತಿ ಕಾನೂನಿನ ಕಾರಣಕ್ಕಾಗಿ ಅವರಿಗೆ ಪ್ರಾತಿನಿಧ್ಯ ಸಿಕ್ಕಿದೆ ವಿನಃ ಅದು ಅವರ ಅರ್ಹತೆಯನ್ನು ಗುರುತಿಸಿ ಕೊಟ್ಟದ್ದಲ್ಲ.
ಮನುಷ್ಯ ಪರಿಸರದ ಕೂಸು. ದಲಿತರು, ಹಿಂದುಳಿದ ಜಾತಿಯವರು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಹಳ್ಳಿಗಾಡಿನಿಂದ, ಬಡಕುಟುಂಬಗಳಿಂದ ಮತ್ತು ರೈತ ಸಮುದಾಯದಿಮದ ಬಂದವರು. ಅವರಿಗೆ ಹೊರಜಗತ್ತಿನ exposure ಬಹಳ ಕಡಿಮೆ. ನನ್ನ ಮಗಳಿಗೆ ಸಿಕ್ಕ exposure ನನಗೆ ಸಿಕ್ಕಿರಲಿಲ್ಲ. ನಾನು ಕುಗ್ರಾಮದಿಂದ ಬಂದವನು. ದೋಣಿಯಲ್ಲಿ ಹೋಗಿ ಕಾಲೇಜು ಶಿಕ್ಷಣ ಮುಗಿಸಿದವನು. ಮುಂಗಾರು ಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದಾಗಲೂ ನಿತ್ಯ ದೋಣಿ ದಾಟಿಕೊಂಡೇ ಮಂಗಳೂರು ಹೋಗುತ್ತಿದ್ದವನು. ನನಗೆ ಲಿಫ್ಟ್ ಸಿಕ್ಕಿರಲಿಲ್ಲ, ಮೆಟ್ಟಿಲು ಹತ್ತಿಕೊಂಡೇ ಬಂದವನು. ನಾನು ಆಗಲೆ ಹೇಳಿದ ಹಾಗೆ ನಾವೆಲ್ಲ ಮೆಟ್ಟಿಲು ಹತ್ತಿಕೊಂಡು ಹೋಗಬೇಕಾಗಿದೆ. ಪ್ರತಿಭೆ ಹುಟ್ಟಿನಿಂದಲೇ ಬರುವುದಿಲ್ಲ, ಅವಕಾಶ ಸಿಕ್ಕಿದಾಗ ಅದು ಅರಳುತ್ತದೆ ಅಷ್ಟೆ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದಲ್ಲಿಯೂ ಬಹಳಷ್ಟು ಪ್ರತಿಭಾವಂತರಿದ್ದಾರೆ. ಅವಕಾಶ ಸಿಗದೆ ಅವರಲ್ಲಿ ಎಷ್ಟೊ ಪ್ರತಿಭೆಗಳು ಮುದುಡಿಹೋಗುತ್ತವೆ. ಮಾಧ್ಯಮ ಕ್ಷೇತ್ರದಲ್ಲಿ ಒಬ್ಬನನ್ನು ಸುಲಭದಲ್ಲಿ ನಾಶಮಾಡಬಹುದು. ಅದು ಬಹಳ ಸುಲಭ, ಏಕೆಂದರೆ ಅವನಿಗೆ ನೀವು ಹೊಡೆಯಬೇಕಾಗಿಲ್ಲ. ಬಡಿಯಬೇಕಾಗಿಲ್ಲ, ದೈಹಿಕವಾಗಿ ಹಲ್ಲೆ ನಡೆಸಬೇಕಾಗಿಲ್ಲ. ಅವನಿಗೆ ಮಾನಸಿಕವಾಗಿ ಕಿರುಕುಳ ಕೊಟ್ಟರೆ ಸಾಕು, ಅವು ಕೆಲಸ ಬಿಟ್ಟು ಓಡಿ ಹೋಗುತ್ತಾನೆ. ದೆಹಲಿಯಲ್ಲಿ ಸರ್ವೆ ನಡೆದಾಗ ಬಹಳಷ್ಟು ಮಂದಿ ಪತ್ರಿಕೋದ್ಯಮದ ವ್ಯಾಸಂಗ ಪಡೆದು ವೃತ್ತಿಗೆ ಯಾಕೆ ಬಂದಿಲ್ಲ ಎಂದು ಕೇಳಿದರೆ ಇದೇ ಉತ್ತರ ಕೊಟ್ಟಿದ್ದಾರೆ.
ತಮಿಳುನಾಡಿನ ಒಂದಷ್ಟು ದಲಿತ ಪತ್ರಕರ್ತರು ಕೂಡಾ ಇಂತಹ ಅನುಭವಗಳನ್ನು ದಾಖಲಿಸಿದ್ದಾರೆ. ಅವನ್ನು ಓದಿದರೆ ನಿಮಗೆ ಅರ್ಥವಾಗುತ್ತದೆ. ಪತ್ರಿಕಾ ಕಚೇರಿಗಳಲ್ಲಿ ಒಬ್ಬ ದಲಿತನನ್ನು, ಹಿಂದುಳಿದ ವರ್ಗದವನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ, ಅದರ ವಿವರಗಳಿಗೆ ಹೋಗುವುದಿಲ್ಲ. ಈಗ ಸ್ವಲ್ಪ ಕಡಿಮೆ ಆಗಿದೆ. ಮಾನಸಿವಾಗಿ ಕಿರುಕುಳ ಕೊಟ್ಟಾಗ ಅವನ ತಲೆ ಓಡುವುದಿಲ್ಲ. ಅವನಿಂದ ತಪ್ಪುಗಳಾಗುತ್ತವೆ. ಹಳ್ಳಿಗಾಡಿನ ಜನ, ದಲಿತರು, ಹಿಂದುಳಿದವರ್ಗಗಳ ಜನ ಮಾತನಾಡುವ ಭಾಷೆ ಒರಟಾಗಿರುತ್ತದೆ. ಇವತ್ತು ಟಿ.ವಿ ಚಾನಲ್ ಗಳಲ್ಲಿ ಗ್ರಾಂಥಿಕವಾದ ಮಂಗಳೂರು ಕನ್ನಡ ಮಾತನಾಡುವವರಿಗೆ ಮಾತ್ರ ಹೆಚ್ಚಿನ ಅವಕಾಶ ಸಿಗುತ್ತಿದೆ. ಈ ಕಾರಣದಿಂದಾಗಿಯೇ  ಹೆಚ್ಚಿನ ಆ್ಯಂಕರ್ ಗಳು ಮಂಗಳೂರಿನಿಂದ ಬಂದವರಾಗಿದ್ದಾರೆ. ರಾಯಚೂರು, ಗುಲ್ಬರ್ಗಾ, ಧಾರವಾಡ ಕಡೆಯ ಭಾಷೆ ಅಲ್ಲಿ ನಡೆಯುವುದಿಲ್ಲ. ಅದೇನಿದ್ದರೂ ಸಿನಿಮಾ, ನಾಟಕಗಳಲ್ಲಿ ಹಾಸ್ಯ ಪಾತ್ರಗಳಿಗೆ ಸೀಮಿತ. ಭಾಷೆಗೂ ಐಡೆಂಟಿಟಿ ಇದೆ ಎನ್ನುವುದನ್ನು ತಿಳಿದುಕೊಂಡು ಅವರ ಅನುಭವಕ್ಕೂ ಒಂದು ಬೆಲೆ ಇದೆ ಎಂದು ಗುರುತಿಸಿ ಅವಕಾಶ ನೀಡುವ ಮಾಧ್ಯಮಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ.
 ನಾನು ಕೆಲಸ ಮಾಡಿದ ಪ್ರHari Kumarಜಾವಾಣಿಯಲ್ಲಿ ನೀವು ಇಲ್ಲಿ ಸೇರಿರುವ ವರ್ಗದಿಂದ ಬಂದವರು ಬೇರೆ ಪತ್ರಿಕೆಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿರುವ ಪೊನ್ನಪ್ಪ, ಬಿ.ಕೆ ರವಿ ಎಲ್ಲ ಪ್ರಜಾವಾಣಿ ಯಿಂದ ಬಂದವರು. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಇದು ಕೂಡಾ ಬಹಳ ಪ್ರಜ್ಞಾ ಪೂರ್ವಕವಾಗಿ ಮಾಡಿದ ಬದಲಾವಣೆ. ಕೆ.ಎನ್.ಹರಿಕುಮಾರ್ ಅವರು ತಮ್ಮ ಅಜ್ಜನಿಂದ ಪತ್ರಿಕೆಯ ಜವಾಬ್ದಾರಿ ತೆಗೆದುಕೊಂಡ ನಂತರ ದಲಿತರನ್ನು, ಹಿಂದುಳಿದವರನ್ನು, ಅಲ್ಪಸಂಖ್ಯಾತರನ್ನು ಸೇರಿಸಿಕೊಳ್ಳಬೇಕು ಎಂದು ಪ್ರಜ್ಞಾಪೂರ್ವಕವಾಗಿ ನಿರ್ಧಾರ ಕೈಗೊಂಡಿದ್ದರಿಂದ ಬಹಳಷ್ಟು ಜನ ಈ ವರ್ಗಕ್ಕೆ ಸೇರಿದವರಿಗೆ ಅವಕಾಶ ಸಿಗುವಂತಾಯಿತು. ಅವರೆಲ್ಲರೂ ಪ್ರತಿಭಾವಂತ ಪತ್ರಕರ್ತರು. ರಂಜಾನ್ ದರ್ಗಾ ರಿಂದ ಹಿಡಿದು ಇಂದೂಧರ್ ಹೊನ್ನಾಪುರ, ಶಿವಾಜಿ ಗಣೇಶನ್, ಡಿ.ವಿ ರಾಜಶೇಖರ್ ಮೊದಲಾದವರು ಪತ್ರಕರ್ತರಾಗಿದ್ದು ಹೀಗೆ. ಒಬ್ಬ ಸಂಪಾದಕ ಪ್ರಜ್ಞಾ ಪೂರ್ವಕವಾಗಿ ಆ ನಿರ್ಧಾರ ಮಾಡಿದ ಕಾರಣಕ್ಕಾಗಿ ಅವರ ಪ್ರತಿಭೆಗೆ ಅವಕಾಶ ಸಿಕ್ಕಿತು. ಅವರು ಬೆಳೆಯಲು ಸಾಧ್ಯವಾಯಿತು.
ಇದು ನಮ್ಮ ಇವತ್ತಿನ ಮಾಧ್ಯಮ ಕ್ಷೇತ್ರದಲ್ಲಿ ಕಾಣುತ್ತಿಲ್ಲ.
ಇದರ ಪರಿಣಾಮ ಬೇರೆ ಬೇರೆ ರೀತಿಯಲ್ಲಿ ಆಗುತ್ತಿದೆ. ಮುಖ್ಯಮಂತ್ರಿಗಳಿಗೆ ಸರಿಯಾದ ಪ್ರಚಾರ ಸಿಗ್ತಾ ಇಲ್ಲ ಎಂದು ಕೆಲವರು ಬಂದು ನನ್ನ ಹತ್ತಿರ ದು:ಖ ತೋಡಿಕೊಳ್ತಾರೆ. ಪ್ರಚಾರ ಅಂದ್ರೆ ಏನು? ಎಂದು ನನಗೂ ಆಶ್ಚರ್ಯವಾಗುತ್ತದೆ. ಇನ್ನು ಕೆಲವರು ನೀವು ಮೀಡಿಯಾವನ್ನು ಮ್ಯಾನೇಜ್ ಮಾಡಬೇಕು ಎಂದು ಸಲಹೆ ಕೊಡುತ್ತಾರೆ. ಇದನ್ನು ನಮ್ಮ ಮುಖ್ಯಮಂತ್ರಿಗಳು ಒಪ್ಪುತ್ತಿಲ್ಲ. ನನಗೂ ಅದರಲ್ಲಿ ನಂಬಿಕೆ ಇಲ್ಲ.
ಮಾಧ್ಯಮಕ್ಕೊಂದು ಧರ್ಮವಿದೆ. ಆ ಪತ್ರಿಕಾ ಧರ್ಮವನ್ನು ಸಂಪಾದಕ, ಪತ್ರಕರ್ತ ಪಾಲಿಸಿದರೆ ಯಾವುದೇ ಮ್ಯಾನೇಜ್ ಮೆಂಟ್ ಬೇಕಿಲ್ಲ. ಯಾವ ಒತ್ತಡವೂ ಬೇಕಿಲ್ಲ. ಯಾವ ಆಮಿಷಗಳು ಬೇಕಿಲ್ಲ. ಪತ್ರಿಕೆಗಳು, ಪತ್ರಕರ್ತರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದರೆ ಸಾಕು. ನಮ್ಮ ಮುಖ್ಯಮಂತ್ರಿಗಳು ಇದನ್ನೆ ಹೇಳಿದ್ದಾರೆ. ಅವರ ವಿರುದ್ದ ಯಾವುದೇ ವರದಿ ಬಂದರೂ ಇಲ್ಲಿಯವರೆಗೂ ಅವರು ಯಾವ ಮಾಧ್ಯಮ ಪ್ರತಿನಿಧಿಗೂ ಪೋನ್ ಮಾಡಿ ಯಾಕೆ ಇದನ್ನು ಬರೆದಿದ್ದೀಯಾ ಅಂತ ಕೇಳಿಲ್ಲ. ನನ್ನ ಹತ್ತಿರವೂ ‘ನೀನು ಇದನ್ನು ಕೇಳಬೇಕು’ ಎಂದು ಹೇಳಿಲ್ಲ.
ಸರ್ಕಾರದ ಪರವಾಗಿ ಇಲ್ಲಿ ಪ್ರಚಾರಕ್ಕೆ ನಾನು ಬಂದಿಲ್ಲ. ಉದಾಹರಣೆಗಾಗಿ ಹೇಳುತ್ತಿದ್ದೇನೆ. ಅನ್ನಭಾಗ್ಯ ಎಂಬ ಯೋಜನೆಯಿಂದ ರಾಜ್ಯದ ಸುಮಾರು 1 ಕೋಟಿ ಕುಟುಂಬಗಳಿಗೆ ಲಾಭವಾಗುತ್ತಿದೆ. ಒಂದು ಕುಟುಂಬದಲ್ಲಿ ನಾಲ್ಕು ಮಂದಿ ಅಂತ ತಿಳಿದುಕೊಂಡರೂ 4 ಕೋಟಿ ಜನರಿಗೆ ಇದರ ಪ್ರಯೋಜನ ತಲುಪುತ್ತಿದೆ. ರಾಜ್ಯದ ಆರೂವರೆ ಕೋಟಿ ಜನಸಂಖ್ಯೆಯಲ್ಲಿ 4 ಕೋಟಿ ಜನ ಇದರ ಫಲಾನುಭವಿಗಳು. ಇದನ್ನು ಈಗ ಎಪಿಎಲ್ ಕುಟುಂಬಗಳಿಗೂ ವಿಸ್ತರಿಸಲಾಗಿದೆ. ಹೀಗಿದ್ದರೂ ಕೂಡ ಮಾಧ್ಯಮ ದಲ್ಲಿ ಅನ್ನ ಭಾಗ್ಯ ದಲ್ಲಿ ಕಲ್ಲು ಹುಡುಕಾಟದ ಪ್ರವೃತ್ತಿ ಇವತ್ತಿಗೂ ನಿಂತಿಲ್ಲ. ಯೋಜನೆಯ ಅನುಷ್ಟಾನದಲ್ಲಿ ಒಂದಷ್ಟು ಲೋಪ-ದೋಷಗಳು ಖಂಡಿತ ಇರಬಹುದು. ಕಳ್ಳ ಸಂತೆ, ದುರುಪಯೋಗ ಇತ್ಯಾದಿ ಆಗುತ್ತಿರಬಹುದು. ಲಾಭದ ಲೆಕ್ಕ ಹಾಕಿದರೆ ದೋಷಗಳು ನಗಣ್ಯವಾದುದು. ಹೀಗಿದ್ದರೂ ಯಾಕೆ ನೆಗೆಟಿವ್ ಪ್ರಚಾರ? ರಾಜ್ಯದ ಜನಸಂಖ್ಯೆಯಲ್ಲಿ ಶೇ. 80 ರಷ್ಟು ಜನ ದಲಿತರು, ಹಿಂದುಳಿದವರ್ಗಕ್ಕೆ ಸೇರಿದವರು ಮತ್ತು ಅಲ್ಪಸಂಖ್ಯಾತರು. ಅವರೆಲ್ಲರೂ ಅನ್ನಭಾಗ್ಯದ ಫಲಾನುಭವಿಗಳು. ಈ ಮಾಧ್ಯಮಗಳು ಅವರ ಅಭಿಪ್ರಾಯಗಳನ್ನು ಭಾವನೆಗಳನ್ನು ರಿಪ್ಲೆಕ್ಟ್ ಮಾಡುತ್ತಿದೆಯೇ?. ಏಕೆಂದರೆ ಈ ಫಲಾನುಭವಿಗಳು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದಿಲ್ಲ. ಅನ್ನ ಭಾಗ್ಯದಿಂದ ನಮಗೆ ಲಾಭವಾಗಿದೆ ಎಂದು ಬೀದಿಗೆ ಬಂದು ಕೂಗಿ ಹೇಳುವುದಿಲ್ಲ. ಟಿ.ವಿ ಚಾನಲ್ ಗಳ ಸ್ಟುಡಿಯೋಗಳಲ್ಲಿ ಬಂದು ಚರ್ಚೆಯಲ್ಲಿ ಕೂರುವುದಿಲ್ಲ. ಅವರಿಗೆ ಧ್ವನಿ ಇಲ್ಲ. ದನಿ ಇಲ್ಲದವರಿಗೆ ಮಾಧ್ಯಮ ದನಿ ಅಗಬೇಕಲ್ಲವೇ?.
ಶಾದಿ ಭಾಗ್ಯಬಗ್ಗೆ ದೊಡ್ಡ ವಿವಾದ ಆಯ್ತು. ಯಾಕೆ ಆಗಬೇಕು? ಯಾರು ಅದರ ಬಗ್ಗೆ ಯೋಚನೆ ಮಾಡುತ್ತಿಲ್ಲ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ಬಜೆಟ್ ನಲ್ಲಿ ಒಂದಿಷ್ಟು ದುಡ್ಡು ಕೊಟ್ಟಿರುತ್ತಾರೆ. ಆ ದುಡ್ಡಿನಿಂದ ಇಲಾಖೆ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಅವರು ಏನಾದ್ರೂ ಮಾಡ್ಲಿ, ಶಾದಿ ಭಾಗ್ಯನಾದ್ರೂ ಮಾಡ್ಲಿ, ಇನ್ನೂಂದು ಮಾಡ್ಲಿ, ಅದು ಅವರ ಬಜೆಟ್. 1000 ಕೋಟಿ ರೂಪಾಯಿ ಏನು ಕೊಟ್ಟಿದೆ ಅದು ಅವರ ದುಡ್ಡು. ಆದರೆ ಬರೀ ಮುಸ್ಲಿಮರಿಗೆ ಯಾಕೆ ಕೊಟ್ಟಿದ್ದೀರಿ? ಉಳಿದವರಿಗೆ ಯಾಕೆ ಕೊಟ್ಟಿಲ್ಲ ಅಂದ್ರೆ, ಉಳಿದವರಿಗೆ ಬೇರೆ ಸೌಲಭ್ಯಗಳಿವೆ ಅದನ್ನು ಅವರು ತಗೋಳ್ತಾರೆ. ಈ ರೀತಿ ಹೇಳುವಂತಹ ಸಮಚಿತ್ತದ ಬರವಣಿಗೆ ನಮಗೆ ಕಾಣುತ್ತಿಲ್ಲ.
ಇನ್ನು ಮೂಢನಂಬಿಕೆ ನಿಷೇಧ ಮಸೂದೆ. ಇಲ್ಲಿ ಸೇರಿರುವ ನಮಗೆಲ್ಲರಿಗೂ ಸಂಭಂಧಿಸಿದ್ದು ಮೂಢ ನಂಬಿಕೆ ನಿಷೇಧ ಕರಡು ಮಸೂದೆ ಬಗ್ಗೆ ಇಷ್ಟೆಲ್ಲಾ ವರದಿಗಳು ಬಂತಲ್ಲಾ, ಆ ರೀತಿ ವರದಿ ಮಾಡಿದವರಲ್ಲಿ ಕೆಲವರನ್ನು ಮಸೂದೆ ಪೂರ್ಣವಾಗಿ ಓದಿದ್ದೀರಾ ಎಂದು ಕೇಳೀದ್ದೇನೆ. ಬಹಳ ಮಂದಿ ಧೈರ್ಯದಿಂದ ಓದಿದ್ದೇನೆ ಎಂದು ಉತ್ತರಿಸಿಲ್ಲ. ಹೆಚ್ಚಿನವರು ಮಸೂದೆಯಲ್ಲಿನ ಪ್ರಿಯಾಂಬಲ್ ಓದಿ ಭಾವುಕರಾಗಿ ಅತಿರೇಕದ ವರದಿಗಳನ್ನು ಮಾಡಿದ್ದರು. ಮೂಲ ಮಸೂದೆಯಲ್ಲಿ ಅಂತಹ ಯಾವುದೇ ವಿಷಯಗಳಿರಲಿಲ್ಲ. ಆದರೆ ಆ ರೀತಿಯ ಪ್ರಚಾರ, ಒತ್ತಡಗಳಿಂದ ಸರ್ಕಾರವೇ ಹಿಂದೆ ಸರಿಯಬೇಕಾಯಿತು. ಇಂದು ಮೂಢನಂಬಿಕೆ ಕಾಯ್ದೆ ಯಾರಿಗೆ ಬೇಕಾಗಿದೆಯೆಂದರೆ ಅಶಿಕ್ಷಿತರಿಗೆ, ಬಡವರಿಗೆ ಬೇಕು. ದಲಿತ, ಹಿಂದುಳಿದವರಿಗೆ , ಅಲ್ಪಸಂಖ್ಯಾತರಿಗೆ ಬೇಕು. ಏಕೆಂದರೆ ಶೋಷಣೆಗೀಡಾಗುತ್ತಿರುವವರು ಇದೇ ಸಮುದಾಯದವರು. ಇದೇ ಸಮುದಾಯದ ದನಿ ಮಾಧ್ಯಮಗಳಲ್ಲಿ ಕೇಳಿಬಂದಿದ್ದರೆ ಇವತ್ತು ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಬರುತ್ತಿತ್ತು. ಬಹುಶಃ ಎಂ.ಎಂ ಕಲಬುರ್ಗಿ ಅವರ ಹತ್ಯೆಯೂ ಆಗುತ್ತಿರಲಿಲ್ಲ.
ನಮ್ಮ ಮಾಧ್ಯಮಗಳು ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಅಭಿವೃದ್ದಿ ಬಗ್ಗೆ ಮಾತನಾಡುವಾಗ ಈ ಮಾಧ್ಯಮಗಳಲ್ಲಿರುವ ತಾರತಮ್ಯ, ಪೂರ್ವಗ್ರಹಗಳನ್ನು ಮರೆತು ಮಾತನಾಡುವಂತಿಲ್ಲ. ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಜಾತೀಯತೆ ಕಡಿಮೆಯಾಗುತ್ತಿದೆ. ಆದರೆ ಭಾಷಾ ಪತ್ರಿಕೋದ್ಯಮದಲ್ಲಿ, ಕನ್ನಡ ,ಹಿಂದಿ ಗುಜರಾತಿ ಮೊದಲಾದ ಭಾಷೆಗಳ ಪತ್ರಿಕೆಗಳಲ್ಲಿ ಇನ್ನೂ ಕಡಿಮೆಯಾಗಿಲ್ಲ. ಅಲ್ಲಿ ಕೆಲಸ ಮಾಡುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೇಳಿದರೆ ತಾವು ಅನುಭವಿಸುತ್ತಿರುವ ಅವಮಾನ, ಕಿರುಕುಳಗಳ ಕತೆ ಹೇಳಬಹುದು. ಪ್ರತಿಭೆ ಒಂದಿದ್ದರೆ ಸಾಲದು, ವೃತ್ತಿಯಲ್ಲಿ ಎದುರಾಗುವ ಅನ್ಯಾಯ, ಅವಮಾನ, ಪ್ರತಿಕೂಲಗಳನ್ನು ಎದುರಿಸಲೂ ಅವನು ರೆಡಿಯಾಗಬೇಕು. ಮತ್ತೆ ಮತ್ತೆ ನಾನು ಹೇಳುತ್ತೇನೆ ಪ್ರಜಾವಾಣಿಯಲ್ಲಿ ನಾನುprajavani ವಿವೇಕಾನಂದ ಅವರ ಬಗ್ಗೆ ಅಂಕಣ ಬರೆದೆ. ನಾನು ಸುಳ್ಳು ಬರೆದಿಲ್ಲ, ಅವರಿಗೆ ಅವಮಾನ ಮಾಡಿಲ್ಲ, ವಿವೇಕಾನಂದರು ಮಾಂಸ ತಿನ್ನುತಿದ್ದರು ಎನ್ನುವುದನ್ನು ನಾನು ಈಗಲೂ ಹೇಳುತ್ತೇನೆ, ಅದನ್ನು ವಿರೋಧಿಸುವವರು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗೆ ಕರೆದರೆ ನಾನು ಸಿದ್ದ. ವಿವೇಕಾನಂದರು ಮಾಂಸಹಾರಿಗಳಲ್ಲ ಎಂದು ಅವರು ಸಾಬೀತು ಮಾಡಿದರೆ ನಾನು ಬರೆಯುವ ಹವ್ಯಾಸದಿಂದಲೇ ನಿವೃತ್ತಿ ಆಗುತ್ತೇನೆ. ಸತ್ಯವನ್ನೇ ಹೇಳಿದ್ದೇನೆ. ಆದರೆ ಅದರ ಬಗ್ಗೆ ಅಪಪ್ರಚಾರ ವ್ಯಾಪಕವಾಗಿ ನಡೆಯಿತು.ನಮ್ಮ ಪತ್ರಿಕೆಗೆ,ನನಗೆ ಬೆದರಿಕೆ ಎದುರಾಯಿತು. ನಾನು ಇದರ ಬಗ್ಗ ಉಲ್ಲೇಖ ಮಾಡಲು ಕಾರಣ ಇದೆ. ಅಂತಹದ್ದೊಂದು ಅಂಕಣ ಬರೆದು ನಾನು ಪಾರಾಗಲೂ ಕಾರಣ ಆಗ ನನ್ನ ಸಂಪಾದಕರಾಗಿದ್ದ ಕೆ.ಎನ್ ಶಾಂತಕುಮಾರ್. ಅವರು ನನ್ನ ಪರವಾಗಿ ಕಲ್ಲು ಬಂಡೆಯಂತೆ ನಿಂತಿದ್ದರು. ಆತ ತಪ್ಪು ಬರೆದಿಲ್ಲ, ಅದಕ್ಕಾಗಿ ಅವನಾಗಲಿ, ನಾನಾಗಲಿ ಕ್ಷಮೆ ಕೇಳೋದಿಲ್ಲ ಎಂದು ಅವರು ಗಟ್ಟಿಯಾಗಿ ನಿಂತುಬಿಟ್ಟರು.ಈ ರೀತಿಯ ಸಂಪಾದಕರಿದ್ದರೆ ಮಾತ್ರ ಸಾಮಾಜಿಕ ಕಳಕಳಿಯ ಪತ್ರಿಕೋದ್ಯಮ ನಡೆಸಿಕೊಂಡು ಹೋಗಲು ಸಾಧ್ಯ.
ಮಾಧ್ಯಮ ರಂಗದಲ್ಲಿರುವ ಪೂರ್ವಗ್ರಹಕ್ಕೆ ಇತ್ತೀಚಿನ ಇಬ್ಬರು ಸ್ವಾಮಿಗಳ ಉದಾಹರಣೆ ಸಾಕು. ರಾಘವೇಶ್ವರ ಸಾಮೀಜಿಯ ಪ್ರಕರಣವನ್ನು ಬಹಳಷ್ಟು ಮಂದಿ ನಿತ್ಯಾನಂದ ಸ್ವಾಮಿ ಪ್ರಕರಣಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ನಿತ್ಯಾನಂದ ಸ್ವಾಮೀಜಿ ಒಬ್ಬ ಹಿಂದುಳಿದ ಜಾತಿಯವ, ರಾಘವೇಶ್ವರ ಸ್ವಾಮೀಜಿ ಬ್ರಾಹ್ಮಣ. ಈ ಹೋಲಿಕೆ ತಪ್ಪು ಅಂತ ನನಗೆ ಅನಿಸುವುದಿಲ್ಲ. ನಿತ್ಯಾನಂದ ಸ್ವಾಮಿಗೆ ಮಾಧ್ಯಮದಲ್ಲಿ ಸಿಕ್ಕ ಟ್ರೀಟ್ ಮೆಂಟ್ ರಾಘವೇಶ್ವರ ಸ್ವಾಮೀಜಿಗೆ ಸಿಗಲಿಲ್ಲ. ನನಗೆ ಒಬ್ಬ ಪತ್ರಕರ್ತ ಹೇಳುತ್ತಿದ್ದ ನಿತ್ಯಾನಂದನ ಆಶ್ರಮದ ಕಾಂಪೌಂಡ್ ಹೊರಗಡೆ ಕಾಂಡೂಮ್ ಗಳನ್ನು ಹಾಕಿ ಅವರೇ ಅದನ್ನು ಶೂಟ್ ಮಾಡಿ ನೋಡಿ ನಿತ್ಯಾನಂದಸ್ವಾಮೀಜಿ ಕಾಂಪೌಂಡ್ ಹೊರಗಡೆ ಕಾಂಡೊಂಮ್ ಸಿಕ್ಕಿದೆ ಅವರು ವ್ಯಭಿಚಾರಿ ಎಂದು ತೋರಿಸಿದ್ದರಂತೆ.
ನೀವು ಖೈರ್ಲಾಂಜಿ ಬಗ್ಗೆ ಕೇಳಿದ್ದೀರಿ. ದಲಿತರ ಇಡೀ ಕುಟುಂಬವನ್ನೆ ಹತ್ಯೆ ಮಾಡಲಾಯಿತು. ಮೊದಲು ಅಲ್ಲಿಯ ಎಲ್ಲಾ ಪತ್ರಿಕೆಗಳು ಇದೊಂದು ಅನೈತಿಕ ಸಂಬಂಧ ಎನ್ನುವ ರೀತಿ ವರದಿ ಮಾಡಿವೆ. ನಂತರ ಬೇರೆ ಕಡೆಗಳಿಂದ ಹೋದ ಪತ್ರಿಕಾ ವರದಿಗಾರರು, ಕೆಲವು ದಲಿತ್ ಆಕ್ಟಿವಿಟಿಸ್ ಗಳು, ಅದರಲ್ಲೂ ಇಂಗ್ಲೀಷ್ ಪತ್ರಿಕೆಗಳು ಗಮನ ಸೆಳೆದಾಗ ನಿಜಸಂಗತಿ ಬಯಲಿಗೆ ಬಂತು. ನೀವು ಕಂಬಾಲಪಲ್ಲಿ ಸೇರಿದಂತೆ ರಾಜ್ಯದ ಬೇರೆಬೇರೆ ಭಾಗಗಳಲ್ಲಿ ದಲಿತರ ಮೇಲೆ ನಡೆದ ಎಲ್ಲಾ ದೌರ್ಜನ್ಯಗಳನ್ನು ನೋಡಿ, ಕೋಮುಗಲಭೆಗಳನ್ನು ನೋಡಿ ನಮಗೆ ಮಾಧ್ಯಮಗಳಲ್ಲಿರುವ ಜಾತಿ ಪೂರ್ವಗ್ರಹ ಗೊತ್ತಾಗುತ್ತದೆ.
ನನಗೆ ವಿಶ್ವದ ಬಹುದೊಡ್ಡ ಬುದ್ದಿಜೀವಿ ನೋಮ್ ಚಾಮ್ ಸ್ಕಿ ಹೇಳಿರುವ ‘ಸಮ್ಮತಿಯ ಉತ್ಪಾದನೆ’ (Manufacturing conseChomskynt) ನೆನಪಾಗುತ್ತದೆ. ಅಂದರೆ ಅಭಿಪ್ರಾಯಗಳನ್ನು ಉತ್ಪಾದನೆ ಮಾಡೋದು. ಉದಾಹರಣೆಗೆ ದಲಿತರ ಮೇಲೆ ಮೇಲ್ಜಾತಿಯ ಜನ ಹಲ್ಲೆ ನಡೆಸಿದಾಗ ನೀವು ಅದನ್ನು ದಲಿತರ ಮೇಲಿನ ಹಲ್ಲೆ ಅಂತಲೂ ರಿಪೋರ್ಟ್ ಮಾಡಬಹುದು, ಇಲ್ಲವೆ ಎರಡು ಗುಂಪುಗಳ ನಡುವಿನ ಘರ್ಷಣೆ ಅಂತಲೂ ರಿಪೋರ್ಟ್ ಮಾಡಬಹುದು. ಆದರೆ ಬಹಳ ಸಾರಿ ವೈಯುಕ್ತಿಕ ಕಾರಣಕ್ಕಾಗಿ ಹಲ್ಲೆ ಯಾಗಿದೆ, ಅನೈತಿಕ ಸಂಬಂಧದ ಕಾರಣಕ್ಕಾಗಿ ಹೆಣ್ಣುಮಗಳನ್ನು ಸಾಯಿಸಿದ್ದಾರೆ ಎಂದೆಲ್ಲ ವರದಿಯಾಗುತ್ತದೆ. ರೈತರ ಪ್ರತಿಭಟನೆ, ಸತ್ಯಾಗ್ರಹಗಳನ್ನು ದೊಂಬಿ ಎಂದು ಬರೆಯುವುದೂ ಉಂಟು.
 ಕೋಮುಗಲಭೆಗಳ ವರದಿಗಳಲ್ಲಿಯೂ ಇಂತಹ ಲೋಪಗಳನ್ನು ಕಾಣಬಹುದು. ಕೋಮುಗಲಭೆಗಳಲ್ಲಿ ಸಾಮಾನ್ಯವಾಗಿ ಮುಸ್ಲಿಮರನ್ನು ವಿಲನ್ ಗಳನ್ನಾಗಿ ಮಾಡಲಾಗುತ್ತದೆ. ಮುಸ್ಲಿಮರು ಪ್ರಚೋದಿಸಿದರು, ಅದಕ್ಕಾಗಿ ಹಿಂದೂಗಳು ಸೇಡು ತೀರಿಸಿಕೊಂಡರು ಎನ್ನುವ ವರದಿಗಳು ಸಾಮಾನ್ಯ. ದೆಹಲಿಯ ಪಕ್ಕದಲ್ಲಿಯೇ ಇರುವ ಉತ್ತರ ಪ್ರದೇಶದಲ್ಲಿ ಮುಸ್ಲಿಮ್ ವ್ಯಕ್ತಿಯ ಮನೆಯಲ್ಲಿ ಭೀಫ್ ಇದೆ ಎಂಬ ಕಾರಣಕ್ಕಾಗಿ ಬೆಂಕಿ ಹಚ್ಚಿ ಕೊಂದುಬಿಟ್ಟರು. ಅಲ್ಲಿ ಬೀಫ್ ಇರಲಿಲ್ಲ ಎಂದು ತನಿಖೆ ಹೇಳುತ್ತಿದೆ. ಅರ್ನಾಬ್ ಗೋಸ್ವಾಮಿ ಇದರ ಬಗ್ಗೆ ಎಷ್ಟು ಷೋ ಮಾಡಿದರೋ ನನಗೆ ಗೊತ್ತಿಲ್ಲ. ಸಿದ್ದರಾಮಯ್ಯ ಅವರು ಕಂಬಳಿ ತಗೋಂಡ್ರು, ಚಾಪೆ ತಗೋಂಡ್ರು ಅಂತ 1 ಗಂಟೆ ಬೇಕಾದರೆ ಅವರು ಚರ್ಚೆ ಮಾಡ್ತಾರೆ. ಇಂತಹ ಉದಾಹರಣೆಗಳನ್ನು ಬಹಳಷ್ಟು ಕೊಡುತ್ತಾ ಹೋಗಬಹುದು. ಆದರೆ ಇದಕ್ಕೆ ಪರಿಹಾರವೇನು? ಸುಲಭದ ಪರಿಹಾರ ನೀವೆಲ್ಲರೂ ಲಿಫ್ಟ್ ಗಾಗಿ ಕಾಯದೆ ಮೆಟ್ಟಿಲು ಹತ್ತಿಕೊಂಡು ಹೋಗಲಿಕ್ಕೆ ರೆಡಿಯಾಗಬೇಕು.
ನನ್ನ ತಾಯಿ ಅನಕ್ಷರಸ್ಥೆ, ನನ್ನ ತಂದೆ ಬ್ಯಾಂಕ್ ಜವಾನರಾಗಿದ್ದರು. ಬಿ.ಕಾಂ ಓದಿದ್ದೇ ನಾನು ಬ್ಯಾಂಕ್ ಗೆ ಸೇರಲಿಕ್ಕೆ. ಆದರೆ ಬ್ಯಾಂಕ್ ಸೇರಬೇಕೆಂದು ಅನಿಸಲಿಲ್ಲ. ಪತ್ರಿಕೋದ್ಯಮದ ಹಾದಿ ಸುಗಮವಾಗಿ ಇರಲಿಲ್ಲ. ಮುಂಗಾರು ಪತ್ರಿಕೆ ಯಲ್ಲಿ ತಿಂಗಳ ಸಂಬಳವನ್ನು ನಾಲ್ಕು ಕಂತುಗಳಲ್ಲಿ ತೆಗೆದುಕೊಂಡು, ಆರೋಗ್ಯ ಕೆಡಿಸಿಕೊಂಡು ಬಹಳ ಕಷ್ಟ ಪಟ್ಟು ಇಲ್ಲಿಯ ವರೆಗೆ ಬಂದಿದ್ದೇನೆ. ನನಗೆ ಈ ವೃತ್ತಿಯಲ್ಲಿ ಮುಂದುವರೆಯಬೇಕು ಎಂಬ ಛಲ ಇದ್ದ ಕಾರಣಕ್ಕೆ ಇದು ಸಾಧ್ಯವಾಗಿದೆ. ಪತ್ರಕರ್ತರು ಟ್ರಾನ್ಸ್ ಫರ್ ಎಂದರೆ ಕಂಗಾಲಾಗಿ ಬಿಡುತ್ತಾರೆ. ಎಲ್ಲರಿಗೂ ಬೆಂಗಳೂರು ಬೇಕು, ಜಿಲ್ಲೆಗಳಲ್ಲಿ ಕೆಲಸ ಮಾಡುವುದು ಬೇಡ. ಬೆಂಗಳೂರಿನಲ್ಲಿದ್ದ ನನ್ನನ್ನು ಟ್ರಾನ್ಸ್ ಫರ್ ಮಾಡುತ್ತೇನೆ ಎಂದು ಹೇಳಿದಾಗ ‘ಎಲ್ಲಾದ್ರೂ ಮಾಡಿ, ಮರುಭೂಮಿಗಾದ್ರೂ ಮಾಡಿ ಹೋಗ್ತೀನಿ’ ಎಂದು ಹೇಳಿದ್ದೆ. ಮರುಭೂಮಿಯಲ್ಲಿ ಒಳ್ಳೆಯ ವರದಿಗಳನ್ನು ಮಾಡಲು ಅವಕಾಶಗಳಿರುತ್ತವೆ. ಇದರಿಂದಾಗಿಯೇ ನನಗೆ ದೆಹಲಿಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಮಾನಸಿಕವಾಗಿ ಇಂತಹದ್ದೊಂದು ಸಿದ್ಧತೆ ಮಾಡಿಕೊಳ್ಳದಿದ್ದರೆ, ಅಧ್ಯಯನ ಮಾಡದಿದ್ದರೆ, ಸಮಾಜವನ್ನು ಎದುರಿಸುವುದನ್ನು ಕಲಿಯದಿದ್ದರೆ ಪತ್ರಕರ್ತರಾಗಲು ಕಷ್ಟವಾಗಬಹುದು. ನಿಮ್ಮಲ್ಲಿ ಮಹತ್ವಾಕಾಂಕ್ಷೆ ಇರಬೇಕು, ಜತೆಗೆ ಅದನ್ನು ಈಡೇರಿಸಿಕೊಳ್ಳಲು ಪ್ರಯತ್ನವನ್ನೂ ಮಾಡಬೇಕು.
ಈ ನಿಟ್ಟಿನಲ್ಲಿ ಸರ್ಕಾರಮತ್ತುವೃತ್ತಿಸಂಬಂಧಿಸಂಸ್ಥೆಗಳುಕೂಡಾ ಒಂದಿಷ್ಟು ಕೆಲಸ ಮಾಡಬೇಕಾಗುತ್ತದೆ. ನಾನು ಒಂದು ಉದಾಹರಣೆ ಕೊ746px-ChicagoDefender.svgಟ್ಟು ಮಾತು ಮುಗಿಸುತ್ತೇನೆ. 1978 ರಲ್ಲಿ ಅಮೆರಿಕನ್ ಸೊಸೈಟಿ ಆಪ್ ನ್ಯೂಸ್ ಎಡಿಟರ್ಸ್ (ASNE) ಅಲ್ಲಿನ ಮಾಧ್ಯಮಗಳಲ್ಲಿ ಕಪ್ಪು ಜನಾಂಗದವರ ಪ್ರಾತಿನಿಧ್ಯ ಎಷ್ಟಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಿತ್ತು. ಅಲ್ಲಿನ ಜನಸಂಖ್ಯೆಯಲ್ಲಿ ಕರಿಯರು ಶೇ.36 ರಷ್ಟಿದ್ದಾರೆ. ಆದರೆ ಮಾಧ್ಯಮದಲ್ಲಿ ಅವರು ಪ್ರಾತಿನಿಧ್ಯ ಕೇವಲ ಶೇ 4 ರಷ್ಟು ಮಾತ್ರ ಎಂದು ಸಮೀಕ್ಷೆಯಿಂದ ತಿಳಿದುಬಂದಿತ್ತು. 2000 ನೇ ವರ್ಷದಲ್ಲಿ ಅಮೆರಿಕದ ಮಾಧ್ಯಮ ಕ್ಷೇತ್ರದಲ್ಲಿ ಕರಿಯರ ಜನಸಂಖ್ಯೆ ಪ್ರಮಾಣಕ್ಕೆ ಅನುಗುಣವಾಗಿ ಇರುವಂತೆ ಮಾಡಬೇಕೆಂದು ASNE ನಿರ್ಧಾರಕ್ಕೆ ಬರುತ್ತದೆ. ಅಲ್ಲಿರುವ ಒಂದು ಸಾವಿರಕ್ಕೂ ಹೆಚ್ಚಿನ ಸರ್ಕ್ಯೂಲೇಶನ್ ಇರುವ 1446 ಪತ್ರಿಕೆಗಳಲ್ಲಿ 950 ಪತ್ರಿಕೆಗಳು ಅಸೋಸಿಯೇಷನ್ನಿನ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸುತ್ತವೆ. ಅವರೇನೂ ಮೀಸಲಾತಿ ಕೊಡುವುದಿಲ್ಲ. ಅವರಿಗಾಗಿ ಉದ್ಯೋಗ ಮೇಳ ನಡೆಸುತ್ತಾರೆ, ತರಬೇತಿಕೊಡುತ್ತಾರೆ, ವಿದ್ಯಾರ್ಥಿ ವೇತನಗಳನ್ನು ಸ್ಥಾಪಿಸುತ್ತಾರೆ.ಇದನ್ನು ಮಾಡ್ತಾ, ಮಾಡ್ತಾ 2000 ಇಸವಿಗೆ ಅಲ್ಲಿಯ ಕರಿಯರ ಪ್ರಾತಿನಿಧ್ಯ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚದೆ ಇದ್ದರೂ ಅದು ಶೇ.13ಕ್ಕೆ ತಲುಪಿತ್ತು. ಇವತ್ತು ಅಮೇರಿಕಾದಲ್ಲಿ ದಲಿತರದ್ದೇ ಆದ ‘ಎಬೋನಿ’ ‘ಚಿಕಾಗೋ ಡಿಫೆಂಡರ್’ ಮೊದಲಾದ ಪತ್ರಿಕೆಗಳಿವೆ.
ಚೆನ್ನೈ ನಲ್ಲಿರುವ ‘ಏಷ್ಯನ್ಸ್ಕೂಲ್ಆಫ್ಜರ್ನಲಿಸಂ’ ದಲಿತರಿಗೆ ಸ್ಕಾಲರ್ಶಿಪ್ ಕೊಡ್ತಾರೆ. ಅದಕ್ಕೆ ಬೇಕಾದ ಅಭ್ಯರ್ಥಿಗಳೇ ಸಿಕ್ತಾ ಇಲ್ಲವಂತೆ. ನಮ್ಮಲ್ಲೂ ಕೂಡ ಕೊರತೆಗಳಿವೆ. ಆ ಮಟ್ಟದ ಎಂಟ್ರೆನ್ಸ್ ಪರೀಕ್ಷೆ ಎದುರಿಸಲು ಒಂದಿಷ್ಟು ತಯಾರಿಗಳು ಬೇಕಾಗುತ್ತವೆ. ದಲಿತ ಅಭ್ಯರ್ಥಿಗಳು ಸಿಗದೆ ಇದ್ದಾಗ ಆ ಸಂಸ್ಥೆ ದೊಡ್ಡ ಮಟ್ಟದಲ್ಲಿ ಪ್ರಚಾರ ನಡೆಸಿತ್ತು. ಇತ್ತೀಚೆಗೆ ಆ ಸಂಸ್ಥೆಯ ಸ್ಕಾಲರ್ ಶಿಫ್ ಪಡೆದು ಹಲವಾರು ದಲಿತರು ಜರ್ನಲಿಸ್ಟ್ ಗಳಾಗಿದ್ದಾರೆ. ಇಂತಹ ಪ್ರಯತ್ನ ಎಲ್ಲಾ ಕಡೆಗಳಿಂದಲೂ ನಡೆಯಬೇಕು. ಇದಕ್ಕೆ ಅಮೇರಿಕನ್ ಸೊಸೈಟಿ ಆಫ್ ನ್ಯೂಸ್ ಎಡಿಟರ್ಸ್ ಮಾಡಿದ ಕೆಲಸವನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಡಬೇಕು, ಪತ್ರಕರ್ತರ ಸಂಘಗಳು ಮಾಡ ಬೇಕು, ಪತ್ರಿಕೆಗಳೂ ಮಾಡಬೇಕು.
ನಮ್ಮ ಪತ್ರಕರ್ತರ ಸಂಘಟನೆಗಳುಲಕ್ಷಾಂತರ ರೂಪಾಯಿಕಲೆಕ್ಟ್ಮಾಡಿ, ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿ ಒಳ್ಳೆಯ ಊಟ ಹಾಕುವುದರಿಂದ ಒಳ್ಳೆಯ ಪತ್ರಕರ್ತರನ್ನು ರೂಪಿಸಲು ಸಾಧ್ಯವಿಲ್ಲ. ನೀವು ಬಸ್ ಪಾಸ್ ತೆಗೊಳ್ಳಿ, ಸೈಟ್ ತಗೊಳ್ಳಿ, ಪರವಾಗಿಲ್ಲ, ಒಬ್ಬರಿಗೆ ಒಂದು ಸೈಟ್ ಇರಬೇಕು. ನಾನು ಅದರ ಪರವಾಗಿ ಇದೀನಿ, ಆದರೆ ಕಸುಬುಗಾರಿಕೆಯನ್ನು ಪ್ರೋಫೆಷನಲಿಸಂ ಬೆಳೆಸಲು ಏನು ಮಾಡಿದಿರಿ ಎಂಬುದನ್ನು ಸರ್ಕಾರದ ನೆರವಿನಿಂದಲೇ ನಡೆ07-asiancollegeofjournalismಯುತ್ತಿರುವ ಮಾಧ್ಯಮ ಅಕಾಡೆಮಿ ಸೇರಿದಂತೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಅಮೇರಿಕಾದ ಸೊಸೈಟಿ ಆಪ್ ನ್ಯೂಸ್ ಎಡಿಟರ್ಸ್ಡಿ ಮಾಡಿದ ಸಮೀಕ್ಷೆಯನ್ನು ನಾವೇಕೆ ಮಾಡಲಾಗುತ್ತಿಲ್ಲ. ಕನ್ನಡದ ಮಾಧ್ಯಮಗಳಲ್ಲಿ ಅಹಿಂದ ವರ್ಗಕ್ಕೆ ಸೇರಿದವರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬುದನ್ನು ಸರ್ವೇ ಮಾಡಬಹುದು. ವಿರೋಧ ಎದುರಾಗಬಹುದು. ಇದೊಂದು ಅಹಿಂದ ಸರಕಾರ ಅದಕ್ಕೆ ಈ ಸರ್ವೆ ಎಂಬ ಟೀಕೆಗಳು ಬರಬಹುದು. ನಾನು ನನ್ನ ಬ್ರೀಫ್ ಮೀರಿ ಮಾತನಾಡುತ್ತಿದ್ದೇನೆ.. ಎಂದು ನನಗೂ ಅನ್ನಿಸುತ್ತಿದೆ…ನಿಮಗೂ ಅನ್ನಿಸಬಹುದು. ಆದರೆ ನಾನು ಹೃದಯದಿಂದ ಮಾತನಾಡುತ್ತಿದ್ದೇನೆ. ನನ್ನ ಹೃದಯದ ಭಾರ ಇಳಿಸಲಿಕ್ಕೆ ಮಾತನಾಡುತ್ತಿದ್ದೇನೆ.
 ಕೇವಲ ರಾಜಕೀಯದಲ್ಲಿ ಅಹಿಂದ ಬಂದರೆ ಅದು ಯಶಸ್ವಿಯಾಗುವುದಿಲ್ಲ. ಅದು ಮಾಧ್ಯಮ, ಉದ್ಯಮ,ಶಿಕ್ಷಣ, ಸಾಹಿತ್ಯ ಎಲ್ಲ ಕ್ಷೇತ್ರಗಳಲ್ಲಿಯೂ ಬರಬೇಕು. ಸಾಮಾಜಿಕ ನ್ಯಾಯ ಎಂದರೆ ಒಬ್ಬರಿಂದ ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವುದಲ್ಲ. ಎಲ್ಲರಿಗೂ ನ್ಯಾಯವನ್ನು ಕೊಡುವಂತಹುದು. ಜನಸಂಖ್ಯೆಗನುಗುಣವಾದ ಪ್ರಾತಿನಿಧ್ಯ ಎಲ್ಲರಿಗೂ ಸಿಗಬೇಕು. ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯಕ್ಕೆ ಬಹಳ ಧೀರ್ಘವಾದ ಪರಂಪರೆ ಇದೆ. ಸಾಮಾಜಿಕ ನ್ಯಾಯದ ಮೊದಲ ಚಳುವಳಿಕಾರ ಬಸವಣ್ಣ. ಬಸವಣ್ಣನಿಂದ ಪ್ರಾರಂಭವಾದರೂ ಅದರ ನಂತರ ದೇವರಾಜ ಅರಸು, ನಾಲ್ವಡಿ ಕೃಷ್ಣರಾಜ ಒಡೆಯರ್, ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಆದರೆ ಕೇವಲ ರಾಜಕೀಯದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಅಂತ ನೀವು ತೀರ್ಮಾನಿಸಿಬಿಟ್ಟರೆ, ಸಾಮಾಜಿಕ ನ್ಯಾಯವನ್ನು ಅಲ್ಲಿಯೂ ಅನುಷ್ಠಾನಕ್ಕೆ ಬರಲಿಕ್ಕೆ ಈ ವ್ಯವಸ್ಥೆ ಬಿಡುವುದಿಲ್ಲ. ಬಸವಲಿಂಗಪ್ಪ ಅವರು ಕನ್ನಡ ಸಾಹಿತ್ಯವನ್ನು ಬೂಸಾ ಅಂತ ಹೇಳದೆ ಇದ್ದಿದ್ದರೆ ಇವತ್ತು ಕನ್ನಡ ಸಾಹಿತ್ಯ ಈ ಪ್ರಮಾಣದಲ್ಲಿ, ಆಳ-ಅಗಲಕ್ಕೆ ಬೇರು-ಬಿಳಲು ಬಿಟ್ಟು ಬೆಳೆಯುತ್ತಿರಲಿಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ವಾಸ್ತವ. ಅವರು ಆ ರೀತಿ ಹೇಳಿದಾಗ ಇಡೀ ಕನ್ನಡ ಸಾಹಿತ್ಯಲೋಕದ ಬರಹಗಾರರು ಮತ್ತು ಓದುಗರು ಬೆಚ್ಚಿಬಿದ್ದಿದ್ದರು. ಅಂತಹದ್ದೊಂದು ಶಾಕ್ ‍ಟ್ರೀಟ್ ಮೆಂಟ್ ಮಾಧ್ಯಮ ಕ್ಷೇತ್ರಕ್ಕೂ ಅಗತ್ಯ ಇದೆ. ಮಾಧ್ಯಮದಲ್ಲಿ ಸಮಾಜದ ಪ್ರತಿಬಿಂಬ ಕಾಣಬೇಕು. ಅದರಲ್ಲಿ ಒಡಕಲು ಬಿಂಬ ಕಾಣಬಾರದು. ಪರಿಪೂರ್ಣ ಚಿತ್ರ ಕಾಣಬೇಕು. ಅದು ನಮಗೆ ಕಾಣ್ತಾ ಇದೆಯಾ? ಎಂಬುದು ಇವತ್ತಿನ ಪ್ರಶ್ನೆ. ಏಕೆಂದರೆ ಮಾಧ್ಯಮವಾಗಲಿ, ಸಾಹಿತ್ಯವಾಗಲಿ, ರಾಜಕೀಯವಾಗಲಿ ಅಲ್ಲಿ ಎಲ್ಲಾ ವರ್ಗದ, ಎಲ್ಲಾ ಜಾತಿಯ ಜನರು ಭಾಗವಹಿಸದೇ ಇದ್ದರೆ, ಅದರಲ್ಲಿ ಎಲ್ಲಾ ಲೋಕದ ಅನುಭವಗಳು ಅಭಿವ್ಯಕ್ತಿಗೊಳ್ಳದೆ ಇದ್ದರೆ, ಅದು ಅಪೂರ್ಣವಾಗುತ್ತದೆ. ಅದು ಪಾರ್ಶಿಯಲ್ ಆಗಿರುತ್ತದೆ. ಬಯಾಸ್ಡ್ ಅಗಿರುತ್ತದೆ.
 ಎಲ್ಲಾ ಕ್ಷೇತ್ರಗಳಲ್ಲಿ ಎಲ್ಲಜಾತಿಗಳ, ವರ್ಗಗಳ ಪ್ರಾತಿನಿಧ್ಯವಿರಬೇಕು. ಅವರವರ ಜನಸಂಖ್ಯೆಗನುಗುಣವಾಗಿ ಪ್ರಾತಿನಿಧ್ಯವಿರಬೇಕು. ಅದು ಅಸ್ತವ್ಯಸ್ತವಾದರೆ ಎಲ್ಲವೂ ಅಸ್ತವ್ಯಸ್ತವಾಗುತ್ತದೆ, ಮಾಧ್ಯಮ ಕೂಡಾ . ನಮ್ಮ ರಾಜಕೀಯ ಧುರೀಣರು ಪ್ರಜ್ಞಾವಂತರಿದ್ದಾರೆ ಅವರು ಸಾಮಾಜಿಕ ನ್ಯಾಯವನ್ನು ವಿರೋಧಿಸಲಾರರು. ಏಕೆಂದರೆ ಸಾಮಾಜಿಕ ನ್ಯಾಯ ಎಂಬುದು ಸಂವಿಧಾನದ ಆಶಯ. ನೀವು ಆ ನ್ಯಾಯವನ್ನು ಕೊಡದೆ ಇದ್ದರೆ ಸಂವಿಧಾನದ ಆಶಯಕ್ಕೆ ವಿರುದ್ದವಾಗಿ ನಡೆಯುತ್ತಿದ್ದೀರಿ ಎಂದೇ ಅರ್ಥ. ಬಹಳ ಕಷ್ಟ ಇದೆ. ನನ್ನ ಕಿರಿಯ ದಲಿತ ಸ್ನೇಹಿತ ಲಿಂಗರಾಜ್ ಅಂತ ಇಲ್ಲಿದ್ದಾರೆ. ಈತ ಹಟ್ಟಿ ಗೋಲ್ಡ್ ಮೈನ್ ನ ಕಾರ್ಮಿಕರ ಮಗ. ನಾಲ್ಕು ವರ್ಷದ ಹಿಂದೆ ನನ್ನ ಆಫೀಸ್ ಗೆ ಬಂದಿದ್ದ. ಅವನು ಡಿಗ್ರಿ ಮಾಡಿದ್ದ, ಪೋಸ್ಟ್ ಗ್ರಾಜುಯೇಶನ್ ಮುಗಿಸಿದ್ದ. ಅವನು ಪಿ.ಹೆಚ್.ಡಿ ಮಾಡಲಿಕ್ಕೆ ರಿಜಿಸ್ಟರ್ ಮಾಡಿದ್ರೆ ಅವನಿಗೆ ಗೈಡ್ ಮಾಡಲಿಕ್ಕೆ ಯಾರೂ ಒಪ್ತಾ ಇಲ್ಲ. ಇದು ಅವನೊಬ್ಬನ ಕಥೆಯಲ್ಲ. ಈ ಸಮುದಾಯದ ಅನೇಕ ವಿದ್ಯಾರ್ಥಿಗಳು, ಹುಡುಗರು ನನ್ನ ಸಂಪರ್ಕದಲ್ಲಿದ್ದಾರೆ. ಇಂತಹ ಸಂಘಟನೆಗಳ ಬೆಂಬಲ ಅವರಿಗೆ ಬೇಕಾಗಿದೆ.
 ಸರ್ಕಾರವೇ ಮುಂದೆ ನಿಂತು ಎಲ್ಲವನ್ನೂ ಮಾಡಲಾಗುವುದಿಲ್ಲ. ಇಲ್ಲಿರುವ ಹಿರಿಯರು, ಸಮುದಾಯದಲ್ಲಿರುವ ಪ್ರಜ್ಞಾವಂತರು ಎಲ್ಲಾ ಜಾತಿ, ವರ್ಗದ ಜನ ಇಂತಹವರ ಬೆಂಬಲಕ್ಕೆ ನಿಂತು ಬೆಳೆಸಬೇಕಾಗಿದೆ. ಆ ಕೆಲಸವನ್ನು ಮಾಧ್ಯಮ ಅಕಾಡೆಮಿ ಮತ್ತು ಪತ್ರಕರ್ತರ ಸಂಘಟನೆಗಳು ಮಾಡುತ್ತದೆ. ರಾಜಕೀಯ ಧುರೀಣರು ಇದಕ್ಕೆ ಒತ್ತಾಸೆಯಾಗಿ ನಿಲ್ಲುತ್ತಾರೆ ಎಂಬ ಆಶಯದೊಂದಿಗೆ ಮಾತುಗಳನ್ನು ಮುಗಿಸುತ್ತೇನೆ.

Friday, October 2, 2015

'ನಾವೆಲ್ಲರೂ ವಿಷವನ್ನು ಇಡೀ ದೇಹದಲ್ಲಿ ಪಡೆದಿರುವ ಸರ್ಪಗಳು, ಗೋಡ್ಸೆ ಅದರ ಹಲ್ಲು ಮಾತ್ರ'-
ಹೀಗೆಂದು ಗಾಂಧೀಜಿ ಹತ್ಯೆಯಾದ ದಿನ ದು:ಖಿಸಿದವರು ನಿನ್ನೆಯಷ್ಟೇ 117ನೇ ಜನ್ಮ ದಿನವನ್ನು ನಾವು ಆಚರಿಸಿದ ಸಾಹಿತಿ ವಿ.ಸೀತರಾಮಯ್ಯ.
ಅಂದ ಹಾಗೆ ಈ ಮಾತುಗಳನ್ನು ಯು.ಆರ್.ಅನಂತಮೂರ್ತಿ ಅವರು 'ಹಿಂದುತ್ವ ಅಥವಾ ಹಿಂದ್ ಸ್ವರಾಜ್' ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಇಂದು ಗಾಂಧೀಜಿಗೆ ಸಂಬಂಧಿಸಿದ ಪುಸ್ತಕವೊಂದನ್ನು ಓದಬೇಕೆನ್ನುವವರು ಅನಂತಮೂರ್ತಿಯವರು ಬರೆದಿರುವ ಈ ಕೊನೆಯ ಪುಸ್ತಕ ಓದಬಹುದು. ನಾನು ಮತ್ತೊಮ್ಮೆ ಓದಿದೆ