Saturday, September 26, 2015

ಮಾಧ್ಯಮ ಕ್ಷೇತ್ರದ ಭವಿಷ್ಯದ ಬಗ್ಗೆ ಭರವಸೆ

ಕಿರಿಯ ಪತ್ರಕರ್ತರ ಬಳಿ ಮಾಧ್ಯಮ ಕ್ಷೇತ್ರದ ಭವಿಷ್ಯದ ಬಗ್ಗೆ ಭರವಸೆಯ ಮಾತುಗಳನ್ನು ನಾನು ಆಡಿದಾಗಲೆಲ್ಲ “ ಇದು ಕಂಡವರ ಮಕ್ಕಳನ್ನು ಬಾವಿಗೆ ದೂಡುವ ಸಂಚು” ಎಂದು ಕೆಲವರು ಕೊಂಕುನುಡಿದದ್ದುಂಟು. ಮಾಧ್ಯಮ ಕ್ಷೇತ್ರವನ್ನು ನಾನು ಹಾಳುಬಾವಿ ಎಂದು ಎಂದೂ ತಿಳಿದಿಲ್ಲ. ಆದರೆ ಈ ಕೊಂಕುಮಾತನ್ನು ಅಪ್ರಮಾಣಿಕತೆಗೆ ರೂಪಕವಾಗಿ ಬಳಸುವವರಿಗೆ ಒಂದು ಸಣ್ಣ ವಿವರಣೆಯನ್ನು ನೀಡಬಯಸುತ್ತೇನೆ. ನನ್ನ ಮಗಳೇ ಈ ಬಾವಿಗೆ ಹಾರಲು ರೆಡಿಯಾಗುತ್ತಿದ್ದಾಳೆ.
ಬೆಂಗಳೂರಿನಲ್ಲಿ ಪತ್ರಿಕೋದ್ಯಮದ ಪದವಿ ಮುಗಿಸಿರುವ ಮಗಳು ಸ್ನಾತಕೋತ್ತರ ಪದವಿಗಾಗಿ ಈ ತಿಂಗಳ 16ರಂದು ಲಂಡನ್ ನ ಕಾರ್ಡಿಫ್ ವಿಶ್ವವಿದ್ಯಾಲಯ ಸೇರಿದ್ದಾಳೆ. (ಚಿತ್ರದಲ್ಲಿ ಕೆಂಪು ಜಾಕೆಟ್ ಹಾಕಿಕೊಂಡವಳು ನನ್ನ ಮಗಳು. ಕೆಂಪು ಅವಳ ಇಷ್ಟದ ಬಣ್ಣವೆಂದು ಹೇಳಿದರೆ ವಿಪರೀತಾರ್ಥ ಕಲ್ಪಿಸಬೇಡಿ ) ಶಿಕ್ಷಣ ಸ್ವಲ್ಪ ದುಬಾರಿ. ಆದರೆ ಬೋದನಾ ಶುಲ್ಕದ ಅರ್ಧದಷ್ಟನ್ನು ವಿಶ್ವವಿದ್ಯಾಲಯವೇ ವಿದ್ಯಾರ್ಥಿವೇತನವಾಗಿ ನೀಡಿದೆ. ಉಳಿದರ್ಧ ನಾನು ಸಾಲ ಮಾಡಿದ್ದು ಅದನ್ನು ತಾನೇ ತೀರಿಸುತ್ತೇನೆ ಎಂದು ಹೇಳಿದ್ದಾಳೆ. ದುಡ್ಡು ಇದ್ದಿದ್ದರೆ ಅವಳನ್ನು ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಕ್ಕೆ ಸೇರಿಸುವ ಮನಸ್ಸಿತ್ತು. ಅಲ್ಲಿ ಅವಳಿಗೆ ಸೀಟೂ ಸಿಕ್ಕಿತ್ತು. ಆದರೆ ಅಷ್ಟೊಂದು ಖರ್ಚು (ಸುಮಾರು 50 ಲಕ್ಷ ರೂಪಾಯಿ) ಮಾಡಲು ಮಗಳು ಒಪ್ಪಲಿಲ್ಲ.ಬಾಬಾಸಾಹೇಬ್ ಅಂಬೇಡ್ಕರ್ ವ್ಯಾಸಂಗ ಮಾಡಿರುವ ಆ ವಿಶ್ವವಿದ್ಯಾಲಯದಲ್ಲಿ ಮಗಳನ್ನು ಓದಿಸಬೇಕೆಂಬ ಆಸೆ ನನಗಿರುವುದು ಅವಳಿಗೆ ಗೊತ್ತು. ಅವಳಲ್ಲಿರುವ ಆತ್ಮವಿಶ್ವಾಸದಲ್ಲಿ ನನಗೆ ನಂಬಿಕೆ ಇದೆ.

ಪತ್ರಕರ್ತರ ಮಕ್ಕಳು ಯಾಕೆ ಪತ್ರಕರ್ತರಾಗುವುದಿಲ್ಲ ಎಂದು ಅನೇಕ ಮಂದಿ ನನ್ನನ್ನು ಕೇಳುತ್ತಿರುತ್ತಾರೆ. ಇದು ನಿಜ ಕೂಡಾ. ಕಾರಣ ಅನುಭವಿಸಿದವರಿಗೆ ಗೊತ್ತು. ನನ್ನ ವೃತ್ತಿಜೀವನವನ್ನು ಬದುಕಿನ ಭಾಗವಾಗಿಯೇ ನೋಡಿದ ನನ್ನ ಒಬ್ಬಳೇ ಮಗಳು ಖಂಡಿತ ಈ ವೃತ್ತಿಯನ್ನು ಆಯ್ದುಕೊಳ್ಳಲಾರಳು ಎಂದು ನಾನು ತಿಳಿದುಕೊಂಡಿದ್ದೆ. ಪಿಯುಸಿಯಲ್ಲಿ ವಿಜ್ಞಾನ ಓದಿದ್ದ ಅವಳು ಒಂದು ದಿನ ನನ್ನ ಬಳಿ ಬಂದು ನಾನು ಸಿಇಟಿ ಪರೀಕ್ಷೆ ಕೂರುವುದಿಲ್ಲ ಎಂದಳು. ಮತ್ತೇನು ಮಾಡುತ್ತಿ ಎಂದು ಕೇಳಿದರೆ ಪತ್ರಿಕೋದ್ಯಮ ಎಂದು ಹೇಳಿ ನನ್ನನ್ನು ಮೂರ್ಚೆ ಹೋಗುವಂತೆ ಮಾಡಿದಳು. ಆದರೆ ಆ ಕ್ಷಣದಲ್ಲಿ ನನಗಾದ ಸಂತೋಷವನ್ನು ನಾನು ವಿವರಿಸಲಾರೆ. 
ಆದರೆ ಅವಳು ಪತ್ರಕರ್ತೆಯಾಗಬಹುದೆಂಬ ಭರವಸೆಯನ್ನು ನನ್ನಲ್ಲಿ ಮತ್ತು ವಿಶ್ವಾಸವನ್ನು ಅವಳಲ್ಲಿ ಹುಟ್ಟಿಸಿದ್ದು ‘ದಿ ಹಿಂದೂ ‘ ಪತ್ರಿಕೆ. ಎರಡನೇ ವರ್ಷದ ಪದವಿಯಲ್ಲಿರುವಾಗ ಅವಳು ಹಿಂದೂ ಪತ್ರಿಕೆಯಲ್ಲಿ ಇಂಟರ್ನಿಯಾಗಿ ಕೆಲಸ ಮಾಡಿದಳು. ಅಲ್ಲಿದ್ದ 28 ದಿನಗಳಲ್ಲಿ ಅವಳ 16 ಬೈಲೈನ್ ಗಳು ಪ್ರಕಟವಾಗಿತ್ತು. ( ನಿನ್ನನ್ನು ಹಾಳುಮಾಡಿದ್ದೇ ಹಿಂದೂ ಪತ್ರಿಕೆ ಎಂದು ನಾನು ಅವಳನ್ನು ಛೇಡಿಸುವುದುಂಟು) ಅಲ್ಲಿರುವ ಯಾವ ಸ್ನೇಹಿತರಿಗೂ ಹೇಳಬಾರದೆಂದು ನನ್ನಿಂದ ಪ್ರಮಾಣ ಮಾಡಿಸಿ ಅವಳು ಅಲ್ಲಿ ಸೇರಿಕೊಂಡಿದ್ದಳು. ನನ್ನ ಮಗಳೆಂದು ಗೊತ್ತಾಗಬಾರದೆಂದು ಹೆಸರಲ್ಲಿದ್ದ ‘ಮಟ್ಟು’ ವನ್ನು ಕಿತ್ತುಹಾಕಿದ್ದಳು. ಆದರೆ ಅಲ್ಲಿದ್ದವರೆಲ್ಲ ಅವರ ಸ್ವಂತ ಮಗಳ ರೀತಿಯಲ್ಲಿ ನೋಡಿಕೊಂಡಿದ್ದರು.(ನನ್ನ ಕಿಲಾಡಿ ಮಿತ್ರ ಸುದಿಪ್ತೋ ಮಾತ್ರ ಬಹಳ ಕಾಡಿಸಿದ್ದನಂತೆ).
ನನ್ನ ವಯಸ್ಸಿನ ಮತ್ತು ನನಗಿಂತ ಹಿರಿಯರಾಗಿರುವ ಅನೇಕ ಪತ್ರಕರ್ತರ ಮಕ್ಕಳು ಆಗಲೇ ಐಟಿ ಕಂಪೆನಿಗಳಲ್ಲಿ ಕೆಲಸಕ್ಕೆ ಸೇರಿ ಸೆಟ್ಲ್ ಆಗಿಬಿಟ್ಟಿದ್ದನ್ನು ನೋಡಿದಾಗ ನನ್ನ ಮಗಳೂ ಹೀಗೆ ಸುಖವಾಗಿ ಇರಬಹುದಿತ್ತಲ್ಲಾ ಎಂದು ಒಂದು ಕ್ಷಣ ನನ್ನೊಳಗಿರುವ ಅಪ್ಪನಿಗೆ ಅನಿಸುವುದುಂಟು. ಲಂಡನ್ ಗೆ ಹೊರಟು ನಿಂತ ನನ್ನ ಮಗಳನ್ನು ಬೀಳ್ಕೊಡುತ್ತಾ ಇದೇ ಮಾತನ್ನು ತಮಾಷೆಯಾಗಿ ಹೇಳಿದೆ. “ನಾನು ಎಲ್ಲರಂತಾಗಿದ್ದರೆ ನಿನ್ನ ಮಗಳು ಹೇಗೆ ಆಗುತ್ತಿದ್ದೆ” ಎಂದು ಕೇಳಿದಳು. ಅಪ್ಪಿ ಮುದ್ದಾಡಬೇಕೆನಿಸಿತು. 
ವೈಯಕ್ತಿಕವಾದ ಪ್ರವರಗಳನ್ನು ಬರೆಯುವುದು ನನಗಿಷ್ಟವಿಲ್ಲದ ಕೆಲಸ. ಇದಕ್ಕಾಗಿ ಇಲ್ಲಿಯವರೆಗೆ ಸುಮ್ಮನಿದ್ದೆ. ಆದರೆ ಇಂದು ಬೆಳಿಗ್ಗೆ ದೆಹಲಿಯಲ್ಲಿರುವ ನನ್ನ ಪತ್ರಕರ್ತ ಮಿತ್ರನೊಬ್ಬ ನನಗೆ ಪೋನ್ ಮಾಡಿ ‘ ಕಂಗ್ರಾಜ್ಯುಲೇಷನ್ ಯಾರ್. ಹಿಟ್ ಲಿಸ್ಟ್ ಮೇ ಆಫ್ ಕಾ ನಾಮ್ ಪಡ್ ಕೆ ಖುಷ್ ಹುವಾ’ ಎಂದು ತಮಾಷೆ ಮಾಡಿದ. ಇಂದಿನ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯಲ್ಲಿ ನನ್ನ ಕಿಲಾಡಿ ಮಿತ್ರ ಸುದೀಪ್ತೋ ಮೊಂಡಲ್ ಮಾಡಿರುವ ವರದಿಯನ್ನು ಓದಿ ಆತ ಪೋನ್ ಮಾಡಿದ್ದ. ಅದನ್ನು ಓದಿದ ನಂತರ ನನ್ನ ಮಗಳ ಬಗ್ಗೆ ಬರೆಯಬೇಕೆನಿಸಿತು. ಹಿರಿಯರ ಆಶೀರ್ವಾದ ಅವಳ ಮೇಲೆ ಖಂಡಿತ ಇರುತ್ತದೆ ಎಂದು ನನಗೆ ಗೊತ್ತು. ಅದಕ್ಕಿಂತಲೂ ಮುಖ್ಯವಾಗಿ ಕಿರಿಯರ ಶುಭಹಾರೈಕೆ ಇರಲಿ, ಅವಳು ಭವಿಷ್ಯದಲ್ಲಿ ನಿಮ್ಮ ಜತೆ ಇರುವವಳಲ್ಲವೇ?

---------------------------------------------------------------------------------------------------------------------------------
September 27
ನನ್ನ ಮಗಳ ಹೆಸರು ಯಾಕೆ ಬರೆಯಲಿಲ್ಲ ಎಂದು ಹಿರಿಯ ಸ್ನೇಹಿತರಾದ ಬೊಳುವಾರ್ ಮಹಮ್ಮದ್ ಕುಂಙ್ಹ ಅವರು ಆಕ್ಷೇಪ ಎತ್ತಿದ್ದಾರೆ. ನಿಜ ಹೇಳಬೇಕೆಂದರೆ ಉದ್ದೇಶಪೂರ್ವಕವಾಗಿ ನಾನು ಹೆಸರು ಬರೆದಿರಲಿಲ್ಲ. ಇದಕ್ಕೆ ಎರಡು ಕಾರಣಗಳು. ಮೊದಲನೆಯದಾಗಿ ‘ನನ್ನನ್ನು ನಿಮ್ಮ ಸ್ನೇಹಿತರಿಗೆ ಪರಿಚಯಿಸಬಾರದು’ ಎಂದು ನನ್ನ ಮಗಳೇ ನನಗೆ ತಾಕೀತು ಮಾಡಿದ್ದಳು.. ಅದಕ್ಕೆ ಕಾರಣವನ್ನೂ ಅವಳು ತಿಳಿಸಿದ್ದಳು. ಪರಿಚಯ ಮಾಡಿದ ಕೂಡಲೇ ‘ಎಲ್ಲರೂ ಅಪ್ಪನಂತಾಗು, ಅಪ್ಪನನ್ನು ಮೀರಿಸು ಎಂದೆಲ್ಲಾ ಹೇಳುತ್ತಾರೆ. ಇದರಿಂದ ನನ್ನ ಮೇಲಿನ ಒತ್ತಡ ಹೆಚ್ಚಾಗುತ್ತದೆ. ನಿನ್ನ ಹೆಸರೇ ನನಗೆ ಭಾರ. ಆದ್ದರಿಂದ ಸದ್ಯಕ್ಕೆ ಯಾರಿಗೂ ಪರಿಚಯಿಸಬೇಡ’ ಎಂದು ಆಕೆ ಹೇಳಿದ್ದಳು. ( ಈ ಮಾತನ್ನು ಮಗಳು ಹೇಳಿದಾಗ ನನಗೆ ಥಟ್ಟನೆ ನೆನೆಪಾಗಿದ್ದು ಗೌರಿಯವರದ್ದು. ಎಲ್ಲರೂ ದೈತ್ಯ ಲಂಕೇಶ್ ಅವರ ಜತೆ ಹೋಲಿಸಿ ಹೋಲಿಸಿ ಅವರನ್ನು ಎಷ್ಟೊಂದು ಸಣ್ಣದು (ದೈಹಿಕವಾಗಿ) ಮಾಡಿಬಿಟ್ಟಿದ್ದಾರೆ ಅಲ್ಲವೇ?) ಈ ಕಾರಣದಿಂದಾಗಿ ನನ್ನ ಕೆಲವೇ ಕೆಲವು ಸ್ನೇಹಿತರ ಹೊರತಾಗಿ ಯಾರಿಗೂ ಅವಳ ಪರಿಚಯ ಇಲ್ಲ. ಆದರೆ ಅವಳು ಅತ್ಯಂತ ಸ್ನೇಹಜೀವಿ. ಆಕೆಯ ಕೋಣೆಯಲ್ಲಿ ಇರುವ ಪೋಟೋಗಳೆಲ್ಲ ಸ್ನೇಹಿತರದ್ದು. ತಂದೆತಾಯಿಗಳಾದ ನಮ್ಮದ್ದು ಇಲ್ಲವೇ ಇಲ್ಲ.
ಎರಡನೆ ಕಾರಣ ಸ್ವಲ್ಪ ಸೂಕ್ಷ್ಮವಾದುದು ಮತ್ತು ಬೇಸರದ್ದು. ಒಂದು ಕಾಲದಲ್ಲಿ ಭೂಗತ ಲೋಕವನ್ನು ನಾನು ಬಹಳ ಆಸಕ್ತಿಯಿಂದ ಗಮನಿಸುತ್ತಿದ್ದೆ. ನನ್ನೂರಿನ ಕೆಲವು ಬಾಲ್ಯ ಸ್ನೇಹಿತರು ಅದರಲ್ಲಿದ್ದದ್ದೂ ಕೂಡಾ ಇದಕ್ಕೆ ಕಾರಣ. ಅಂತಹ ಪಾತಕ ಲೋಕದಲ್ಲಿ ಕೂಡಾ ಪರಸ್ಪರ ದ್ವೇಷ ಎಷ್ಟೇ ಇದ್ದರೂ ವೈರಿಗಳ ಕುಟುಂಬದ ಸದಸ್ಯರ ಗೋಜಿಗೆ ಅವರು ಹೋಗುತ್ತಿರಲಿಲ್ಲ. ಆದರೆ ಇತ್ತೀಚಿನ ನಮ್ಮ ತಥಾಕಥಿತ ‘ನಾಗರಿಕ’ ‘ಸುಸಂಸ್ಕೃತ’ ಸಮಾಜದಲ್ಲಿ ಇಂತಹದ್ದೊಂದು ನೀತಿ ಸಂಹಿತೆ ಕೂಡಾ ಕಾಣುತ್ತಿಲ್ಲ. ಭಿನ್ನಾಭಿಪ್ರಾಯ ಹೊಂದಿದ್ದಾರೆ ಎನ್ನುವ ಕಾರಣಕ್ಕೆ, ಅಮ್ಮ, ಅಕ್ಕ, ಹೆಂಡತಿ, ಮಗಳು ಎಂದೆಲ್ಲಾ ಹೆಸರೆತ್ತಿ, ಅಶ್ಲೀಲವಾಗಿ ನಿಂದಿಸುವುದಕ್ಕೆ ನಾವೆಲ್ಲ ನಿತ್ಯ ಸಾಕ್ಷಿಗಳಾಗುತ್ತಿದ್ದೇವೆ. ನಾನೂ ಇಂತಹ ನಿಂದನೆಗಳಿಗೆ ಗುರಿಯಾಗಿದ್ದೇನೆ. ತಮ್ಮ ಪಾತ್ರ ಇಲ್ಲದೆ ಇದ್ದರೂ ನನ್ನ ಕಾರಣಕ್ಕೆ ನನ್ನ ಮನೆಯ ಸದಸ್ಯರು ಇಂತಹ ನಿಂದೆಗಳನ್ನು ಎದುರಿಸಬೇಕಾಗಿ ಬಂದಾಗ ಮನಸ್ಸಿಗೆ ನೋವಾಗುತ್ತದೆ. ನನ್ನ ಮಗಳನ್ನು ನನ್ನ ಸುತ್ತಲಿನ ಜಗತ್ತಿಗೆ ಪರಿಚಯಿಸದಿರಲು ಇದೂ ಕೂಡಾ ಕಾರಣ.
ಆದರೆ ಎಷ್ಟು ದಿನ ಆಕೆಯನ್ನು ಬಚ್ಚಿಡಲಿ? ಅದೂ ಮುಂದೊಂದು ದಿನ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡಲಿರುವ ಆಕೆ ತೆರೆಯ ಮರೆಯಲ್ಲಿ ಎಷ್ಟುದಿನ ಇರಲು ಸಾಧ್ಯ ಎಂದೆಲ್ಲ ಯೋಚಿಸಿ ಅವಳ ಬಗ್ಗೆ ಬರೆದೆ. ಐಸಿರಿ ಎನ್ನುವ ಹೆಸರನ್ನು ಆಕೆ ಹುಟ್ಟುವ ಮೊದಲೇ ಆಯ್ಕೆ ಮಾಡಿದ್ದೆ. ತುಳುನಾಡಿನ ಸ್ವಾಭಿಮಾನಿ ಹೆಣ್ಣು ಸಿರಿ ಬಗ್ಗೆ ನನಗೆ ವಿಶೇಷ ಅಭಿಮಾನ. ಅದಕ್ಕೆಂದು ಮಗಳಿಗೆ ‘ಸಿರಿ’ ಎಂದು ಹೆಸರಿಡಬೇಕೆಂದಿದ್ದೆ. ಕೊನೆಗೆ ಹೆಸರಿಗೆ ಕನ್ನಡದ ಟಚ್ ಇರಲಿ ಎಂದು ಐಸಿರಿ ಎಂದು ಬದಲಾಯಿಸಿದೆ.
ನನ್ನ ಮಗಳಿಗೆ ಶುಭ ಹಾರೈಸಿದವರಿಗೆ ಕೃತಜ್ಞತೆ ಸಲ್ಲಿಸಲು ನನ್ನಲ್ಲಿ ಶಬ್ದಗಳಿಲ್ಲ. ಸಮಾಜದಲ್ಲಿ ಒಳ್ಳೆಯವರ ಸಂಖ್ಯೆ ಮತ್ತು ಒಳ್ಳೆಯತನದ ಪ್ರಮಾಣ ದೊಡ್ಡದು ಎನ್ನುವ ಗಟ್ಟಿ ನಂಬಿಕೆ ನನ್ನದು. ಸಮಾಜವನ್ನು ನೀನು ಪ್ರೀತಿಸಿದರೆ ಸಮಾಜ ನಿನ್ನನ್ನು ಪ್ರೀತಿಸುತ್ತದೆ ಎಂದು ನನ್ನ ಮಗಳಿಗೆ ಹೇಳುತ್ತಿದ್ದೆ. ಇದು ನನ್ನ ಅನಕ್ಷರಸ್ತೆ ಅಮ್ಮ ನನಗೆ ಹೇಳಿದ ಪಾಠ. 'ನೀನು ಒಳ್ಳೆಯವನಾದರೆ ನಿನಗೆ ಊರು ಒಳ್ಳೆಯದಾಗಿ ಕಾಣುತ್ತದೆ' ಎಂದು ಅಮ್ಮ ಹೇಳುತ್ತಿದ್ದಳು. ಹರಿದುಬಂದ ಶುಭಹಾರೈಕೆಯ ಮಹಾಪೂರ ನನ್ನ ನಂಬಿಕೆಗೆ ಸಾಕ್ಷಿ ಒದಗಿಸಿದೆ. ಇದರಿಂದ ನನ್ನ ಮಗಳು ಸುತ್ತಲಿನ ಸಮಾಜವನ್ನು ಇನ್ನಷ್ಟು ಪ್ರೀತಿಸುವಂತಾಗಲಿ ಎಂದಷ್ಟೇ ನನ್ನ ಹಾರೈಕೆ. ಮತ್ತೊಮ್ಮೆ ಎಲ್ಲರಿಗೂ ಥ್ಯಾಂಕ್ಸ್.
ಬೊಳುವಾರು ಸಾಹೆಬ್ರೆ, ಈಗಲಾದರೂ ಐಸಿರಿಗೆ ಒಂದು ಆಲ್ ದಿ ಬೆಸ್ಟ್ ಹೇಳಿ.

Tuesday, September 22, 2015

ಕರ್ನಾಟಕ ಜಾನಪದ ಅಕಾಡೆಮಿ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಗಾರ

ಕರ್ನಾಟಕ ಜಾನಪದ ಅಕಾಡೆಮಿ ಆಯೋಜಿಸಿದ್ದ ರಾಜ್ಯಮಟ್ಟದ ಕಾರ್ಯಗಾರ

Friday, September 4, 2015

ನಾವು ಭಗವಾನ್ ಜತೆಗಿರೋಣ.

ಚಿಂತಕ ಕೆ.ಎಸ್.ಭಗವಾನ್ ಅವರ ಜತೆ ನನಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಅದು ಗುರಿ-ದಾರಿಗೆ ಸಂಬಂಧಿಸಿದ ಹಳೆಯ ಡಿಬೇಟ್.
ಅದರ ಚರ್ಚೆಗೆ ಈಗ ಕಾಲ ಅಲ್ಲ, ಈಗ ನಾವೆಲ್ಲ ಅವರ ಜತೆಗಿರಬೇಕಾದ ಕಾಲ.

ನಾನೇ ಹೋಗಿ ಭೇಟಿಮಾಡಬೇಕೆಂದಿದ್ದೆ, ಇಂದು ಸಂಜೆ ನಂದಕುಮಾರ್ ಮತ್ತು ಗೆಳೆಯರ ಜತೆ ಅವರೇ ಬಂದು ಬಿಟ್ಟರು.
ಏನೇ ಬರಲಿ, ನಾವು ಭಗವಾನ್ ಜತೆಗಿರೋಣ.

Monday, August 31, 2015

ಕಲ್ಬುರ್ಗಿ ಆಯ್ತು, ಮುಂದಿನ ಗುಂಡು ಯಾರ ತಲೆಗೆ ..

ಕಲ್ಬುರ್ಗಿ ಆಯ್ತು, ಮುಂದಿನ ಗುಂಡು ಯಾರ ತಲೆಗೆ ಎನ್ನುವ ಬಗ್ಗೆ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಪ್ರಾರಂಭವಾಗಿದೆ. ನಮ್ಮ ಸ್ನೇಹಿತರೇ ಮಾಡಿರುವ ಪಟ್ಟಿಯಲ್ಲಿ ನನ್ನ ಹೆಸರೂ ಇದೆ.ಬಲಿಪಶುಗಳ ಸಾಲಿನಲ್ಲಿ ನಾನು ಹಿಂದೆ ಇದ್ದೇನೆ ನನಗಿಂತ ಮುಂದೆ ಹಲವರಿದ್ದಾರೆ, ನನ್ನ ನಂಬರ್ ಶೀಘ್ರದಲ್ಲಿ ಬರಲಾರದೆಂದು ಇಲ್ಲಿಯ ವರೆಗೆ ನಿಶ್ಚಿಂತೆಯಾಗಿದ್ದೆ.

ಯಾಕೆಂದರೆ ಇತ್ತೀಚಿನ ಸಂಘಿಗಳ ಜತೆಗಿನ ವಾದ-ವಿವಾದ, ಹಲ್ಲೆ ಪ್ರಯತ್ನ, ಬೆದರಿಕೆ, ಸೋಷಿಯಲ್ ಮೀಡಿಯಾದಲ್ಲಿನ ಹೇಟ್ ಕ್ಯಾಂಪೇನ್ ಇವುಗಳೆಲ್ಲದರ ಆಧಾರದಲ್ಲಿ ಸಂಭವನೀಯ ಬಲಿಪಶುಗಳ ಪಟ್ಟಿ ಮಾಡುವುದಾದರೆ ಕ್ರಮವಾಗಿ ಭಗವಾನ್, ಬಂಜಗೆರೆ, ಯೋಗೇಶ್ ಮಾಸ್ತರ್, ಗೌರಿ ಲಂಕೇಶ್, ವಿಮಲಾ, ಮುನೀರ್ ಮೊದಲಾದವರಿದ್ದಾರೆ. ನನ್ನದ್ದೇನಿದ್ದರೂ ನಂತರದ ಸ್ಥಾನ ಎಂದು ನಾನು ನಂಬಿದ್ದೆ. ಇತ್ತೀಚೆಗೆ ಕಲ್ಬುರ್ಗಿಯವರೂ ಕೋಮುವಾದಿಗಳನ್ನು ಕೆರಳಿಸುವಂತಹದ್ದೇನನ್ನೂ ಮಾಡದೆ ಇರುವುದರಿಂದ ಅವರು ಬಲಿಪಶುಗಳ ಸಾಲಿನಲ್ಲಿ ಇನ್ನೂ ಹಿಂದೆ ಇದ್ದಾರೆ ಎಂದು ತಿಳಿದುಕೊಂಡಿದ್ದೆ.
ಆದರೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿರುವ ಅಭಿಪ್ರಾಯದಂತೆ ಕಲ್ಬುರ್ಗಿಯವರನ್ನು ಕೋಮುವಾದಿ ಹಂತಕರೇ ಹತ್ಯೆ ಮಾಡಿದ್ದರೆ ಅವರು ಸರತಿಯ ಸಾಲನ್ನು ಮುರಿದು ಮಾಡಿದ್ದಾರೆ ಎಂದಾಗುತ್ತದೆ. ಆದ್ದರಿಂದ ಗುಂಡು ಯಾರ ತಲೆಗೂ ಬೀಳಬಹುದು. ನನ್ನ ತಲೆಗೆ ಗುಂಡು ಬಿದ್ದರೆ ರಕ್ಷಣೆಗೆ ಕೂದಲೂ ಇಲ್ಲದಿರುವುದು ನನ್ನನ್ನು ಇನ್ನೂ Vulnerable ಮಾಡಿದೆ. ಭಯದಿಂದ ಗಡಗಡಗಡ ನಡುಗುತ್ತಿದ್ದೇನೆ

Saturday, August 29, 2015

ಇದು ಮೀಸಲಾತಿ ವಿರೋಧಿ ಚಳವಳಿ - ಅಂತರಂಗದ ವಿರೋಧ ಬೇರೆ ಬೇರೆ ಬಗೆಯ ಸಂಚಿನ ರೂಪಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ

ಬಹಿರಂಗವಾಗಿ ವಿರೋಧಿಸಲಾಗದ್ದನ್ನು ಅಂತರಂಗದ ಹುನ್ನಾರದ ಮೂಲಕ ನಾಶಪಡಿಸಲೆತ್ನಿಸುವುದು ಎಲ್ಲ ಕಾಲ-ದೇಶಗಳ ಸಂಚುಕೋರರ ಮೊಡಸ್ ಅಪರೆಂಡಿ. ಸಾಮಾಜಿಕ ನ್ಯಾಯದ ಪ್ರಮುಖ ಅಸ್ತ್ರವಾದ ಮೀಸಲಾತಿ ವಿರುದ್ಧ ಇಂತಹದ್ದೊಂದು ಸಂಚು ಗುಜರಾತ್ ರಾಜ್ಯದ ಪಟೇಲರ ಚಳವಳಿಯಲ್ಲಿ ಕಾಣಬಹುದು. ಮೀಸಲಾತಿ ನೀತಿಯನ್ನು ದೇಶದ ಯಾವ ರಾಜಕೀಯ ಪಕ್ಷ ಕೂಡಾ ಇಂದು ಬಹಿರಂಗವಾಗಿ ವಿರೋಧಿಸುವ ಸ್ಥಿತಿಯಲ್ಲಿಲ್ಲ.

ಮಂಡಲ್ ವರದಿಯ ಅನುಷ್ಠಾನವನ್ನು ವಿರೋಧಿಸಿ ಮೈಗೆ ಬೆಂಕಿ ಹಚ್ಚಿಕೊಂಡವರು ಮತ್ತು ಅವರನ್ನು ಬೆಂಬಲಿಸಿದ್ದ ಪಕ್ಷ-ಪರಿವಾರಗಳ ಅಂತರಂಗದ ಚಡಪಡಿಕೆ ಏನೇ ಇರಲಿ ಅವುಗಳು ಬಹಿರಂಗವಾಗಿ ಮೀಸಲಾತಿಯನ್ನು ಸಮರ್ಥಿಸಲೇಬೇಕಾದ ಸ್ಥಿತಿಯಲ್ಲಿವೆ. ಸಂಸತ್‌ನಲ್ಲಿಯೂ ಯಾವ ಜನಪ್ರತಿನಿಧಿಯೂ ಮೀಸಲಾತಿ ವಿರುದ್ಧ ಸೊಲ್ಲೆತ್ತುವ ಸ್ಥಿತಿಯಲ್ಲಿಲ್ಲ. ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಆತ್ಮ ತಣ್ಣಗಿರಲಿ. ತಕ್ಷಣದ ರಾಜಕೀಯ ಉದ್ದೇಶ ಏನೇ ಇದ್ದರೂ ವಿ.ಪಿ.ಸಿಂಗ್, ಮಂಡಲ್ ವರದಿ ಆಧಾರದಲ್ಲಿ ಹಿಂದುಳಿದ ಜಾತಿಗಳಿಗೆ ಶಿಕ್ಷಣ- ಉದ್ಯೋಗದಲ್ಲಿ ಮೀಸಲಾತಿಯನ್ನು ಘೋಷಿಸಿದ ನಂತರ ಈ ವರ್ಗದಲ್ಲಿ ಮೂಡಿದ ಜಾಗೃತಿ ಮತ್ತು ಗಳಿಸಿಕೊಂಡ ಶಕ್ತಿ ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಚಿತ್ರವನ್ನೇ ಬದಲಾಯಿಸಿರುವುದು ನಿಜ.
ಆದರೆ ಬಹಿರಂಗವಾಗಿ ಮೀಸಲಾತಿಯನ್ನು ಸಮರ್ಥಿಸುವವರೆಲ್ಲರೂ ಅಂತರಂಗದಲ್ಲಿ ಮೀಸಲಾತಿಯನ್ನು ಒಪ್ಪಿಕೊಂಡಿದ್ದಾರೆಂದು ಹೇಳುವ ಹಾಗಿಲ್ಲ. ಇಂತಹ ಅಂತರಂಗದ ವಿರೋಧ  ಬೇರೆ ಬೇರೆ ಬಗೆಯ ಸಂಚಿನ ರೂಪಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತದೆ. ಮೀಸಲಾತಿಯನ್ನು ಗೇಲಿ, ಅಪಹಾಸ್ಯ ಮಾಡಿ ಅದರ ಫಲಾನುಭವಿಗಳೇ ಕೀಳರಿಮೆಯಿಂದ ಬಳಲುವಂತೆ ಮಾಡಿ ಅವರೇ ಮೀಸಲಾತಿ ವಿರೋಧಿಸುವಂತೆ ಮಾಡುವುದು ಸಂಚಿನ ಒಂದು ಭಾಗವಾದರೆ, ಮೀಸಲಾತಿ ನೀತಿಯ ಸುತ್ತ ವಿವಾದದ ದೂಳೆಬ್ಬಿಸಿ ನೋಡುವವರ ಕಣ್ಣು ಕುರುಡುಗೊಳಿಸಿ, ಅದರ ವಿರುದ್ಧ ಜನರನ್ನು ಎತ್ತಿಕಟ್ಟುವುದು ಸಂಚಿನ ಇನ್ನೊಂದು ಭಾಗ. ಗುಜರಾತಿನಲ್ಲಿ ಪಟೇಲರು ಮೀಸಲಾತಿಗಾಗಿ ನಡೆಸುತ್ತಿರುವ ಚಳವಳಿಯಲ್ಲಿಯೂ ಎರಡನೇ ಬಗೆಯ ಸಂಚಿನ ನೆರಳಿದೆ.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಹೀಗೆ ಯಾವ ಕೋನದಲ್ಲಿಟ್ಟು ನೋಡಿದರೂ ಗುಜರಾತಿನ ಪಟೇಲ್ ಸಮುದಾಯ ಹಿಂದುಳಿದ ವರ್ಗದ ಸಮೀಪ ಸುಳಿಯಲಾರದು. ಆ ರಾಜ್ಯದ ಜನಸಂಖ್ಯೆಯ ಶೇ ೧೫ರಷ್ಟಿರುವ ಪಟೇಲರು ಸಾಮಾಜಿಕ, ಆರ್ಥಿಕ, ರಾಜಕೀಯ ಕ್ಷೇತ್ರಗಳಲ್ಲಿ ಬಲಾಢ್ಯರು. ಆ ರಾಜ್ಯದ ಎಣ್ಣೆ ಗಿರಣಿಗಳು, ಉದ್ಯಮಗಳು, ಸೂರತ್‌ನ ವಜ್ರ ವ್ಯಾಪಾರ- ಎಲ್ಲೆಡೆ ಪಟೇಲರದ್ದೇ ಕಾರುಬಾರು. ಅಮೆರಿಕ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಸೇರಿದಂತೆ ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರಲ್ಲಿಯೂ ಇವ ರದ್ದೇ ಬಹುಸಂಖ್ಯೆ. ಮೂಲತಃ ಇವರು ಭೂಮಾಲಕರು.
ಮಾಧವ ಸಿನ್ಹಾ ಸೋಲಂಕಿ ನೇತೃತ್ವದ ಸರ್ಕಾರದ ಅವಧಿಯನ್ನು ಹೊರತುಪಡಿಸಿದರೆ ರಾಜಕೀಯದಲ್ಲಿಯೂ ಇವರದ್ದೇ ಪಾರಮ್ಯ. ಈಗಿನ ವಿಧಾನಸಭೆಯಲ್ಲಿನ ೧೮೨ ಶಾಸಕರಲ್ಲಿ ೪೪ ಮಂದಿ ಪಟೇಲರು, ೨೬ ಲೋಕಸಭಾ ಸದ ಸ್ಯರಲ್ಲಿ ಐವರು  ಪಟೇಲರು, ಮೂವರು ಸಂಪುಟ ಸಚಿವರು, ನಾಲ್ವರು ರಾಜ್ಯ ಸಚಿವರು ಜತೆಗೆ ಮುಖ್ಯಮಂತ್ರಿ ಸ್ಥಾನ. ಉದ್ಯಮ, ಕೃಷಿ, ರಾಜಕೀಯ ಕ್ಷೇತ್ರಗಳಲ್ಲಿ ಈ ಮಟ್ಟದ ಆಧಿಪತ್ಯ ಹೊಂದಿರುವ ಮತ್ತೊಂದು ಜಾತಿಯನ್ನು ದೇಶದಲ್ಲೆಲ್ಲೂ ಕಾಣಲು ಸಾಧ್ಯವಿಲ್ಲ. ಈಗ ಇವರಿಗೆ ಮೀಸಲಾತಿ ಬೇಕಂತೆ.
ಒಂದು ಕಾಲದಲ್ಲಿ ಗುಜರಾತ್ ರಾಜಕೀಯ, ಪಟೇಲರ ಆಡುಂಬೊಲವಾಗಿತ್ತು. ಅದನ್ನು ಮುರಿದವರು ಗುಜರಾತ್ ರಾಜ್ಯದ ‘ದೇವರಾಜ ಅರಸು’ ಎಂದು ಕರೆಸಿಕೊಳ್ಳುವ ಮಾಧವ ಸೋಲಂಕಿ. ಅವರು ಆ ರಾಜ್ಯದ ಹಿಂದುಳಿದವರನ್ನೆಲ್ಲ ಒಗ್ಗೂಡಿಸಿ ‘ಖಾಮ್ (ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಮ್) ಎಂಬ ಹೊಸ ಗುಂಪನ್ನು ಸೃಷ್ಟಿಸಿದರು. ೧೯೭೫ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ದೂಳಿಪಟವಾದ ನಂತರ ಸೋಲಂಕಿ ಅವರು ಪ್ರಾರಂಭಿಸಿದ ಸೋಷಿಯಲ್ ಎಂಜಿನಿಯರಿಂಗ್ ಫಲವೇ ‘ಖಾಮ್’. ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ ೮೦ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಲ್ಲಿಯವರೆಗೆ ಈ ಗುಂಪಿಗೆ ನ್ಯಾಯಬದ್ಧ ರಾಜಕೀಯ ಪ್ರಾತಿನಿಧ್ಯ ಇರಲಿಲ್ಲ. ಆದರೆ ಖಾಮ್ ಪ್ರಭಾವದಿಂದಾಗಿ ೧೯೮೦ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್  ೧೮೨ ಸ್ಥಾನಗಳಲ್ಲಿ ೧೪೨ ಸ್ಥಾನಗಳನ್ನು ಗಳಿಸಿತ್ತು.  ಸೋಲಂಕಿ ಮುಖ್ಯಮಂತ್ರಿಯಾದರು. ಈ ಚೈತ್ರಯಾತ್ರೆ ೧೯೮೫ರಲ್ಲಿಯೂ ಮುಂದುವರಿದು ಕಾಂಗ್ರೆಸ್ ೧೪೯ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಲೋಕಸಭಾ ಚುನಾವಣೆಯಲ್ಲಿ ೨೬ರಲ್ಲಿ ೨೫ ಸ್ಥಾನಗಳು ಕಾಂಗ್ರೆಸ್ ಪಾಲಾಗಿತ್ತು. ಗುಜರಾತ್ ರಾಜಕೀಯ ಇತಿಹಾಸದಲ್ಲಿಯೇ ಮೊದಲ ಬಾರಿ ೧೯೮೦ ಮತ್ತು ೧೯೮೫ರ ರಾಜ್ಯ ಸಚಿವ ಸಂಪುಟದಲ್ಲಿ ಪಟೇಲ್ ಜಾತಿಗೆ ಸೇರಿದ ಒಬ್ಬರೇ ಒಬ್ಬ ಸಚಿವರಿರಲಿಲ್ಲ.
ಅಲ್ಲಿಂದ ಮತ್ತೊಂದು ಬಗೆಯ ರಾಜಕೀಯ ಮತ್ತು ಜಾತಿ ಧ್ರುವೀಕರಣ ಪ್ರಾರಂಭವಾಯಿತು. ಅಲ್ಲಿಯವರೆಗೆ ಕಾಂಗ್ರೆಸ್ ಬೆಂಬಲಿಸುತ್ತಿದ್ದ ಪಟೇಲರು ಬಿಜೆಪಿ ಮತ್ತು ಚಿಮನ್ ಭಾಯ್ ಪಟೇಲ್ ನೇತೃತ್ವದ ಜನತಾ ಪಕ್ಷದತ್ತ ವಲಸೆ ಹೋಗಲಾರಂಭಿಸಿದರು. ೧೯೯೦ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ೩೩ ಸ್ಥಾನಗಳನ್ನಷ್ಟೇ ಗೆದ್ದು ಹೀನಾಯ ಸೋಲು ಅನುಭವಿಸಿತು. ಬಿಜೆಪಿ ಮತ್ತು ಜನತಾದಳದ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಚಿಮನ್ ಭಾಯ್ ಪಟೇಲ್ ಮುಖ್ಯಮಂತ್ರಿ, ಕೇಶುಭಾಯ್ ಪಟೇಲ್ ಉಪಮುಖ್ಯಮಂತ್ರಿ. ಅಲ್ಲಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷಕ್ಕೆ ಆ ರಾಜ್ಯದಲ್ಲಿ ಮರಳಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ.
ಅಯೋಧ್ಯೆ ಯಾತ್ರೆ ಹೊರಟಿದ್ದ ಎಲ್.ಕೆ. ಅಡ್ವಾಣಿ ಅವರನ್ನು ಬಿಹಾರದಲ್ಲಿ ಬಂಧಿಸಿದ್ದನ್ನು ಪ್ರತಿಭಟಿಸಿ ಬಿಜೆಪಿ ಬೆಂಬಲ ವಾಪಸು ಪಡೆದ ಕಾರಣದಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು. ನಂತರ ಚಿಮನ್ ಭಾಯ್ ಪಟೇಲ್ ತಮ್ಮ ಪಕ್ಷವನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಿದರೂ ಪಟೇಲರು ಮಾತ್ರ ಕಾಂಗ್ರೆಸ್ ಪಕ್ಷಕ್ಕೆ ಮರಳಿ ಬರಲಿಲ್ಲ. ೧೯೯೫ರ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದು ಕೇಶುಭಾಯ್ ಪಟೇಲ್ ಮುಖ್ಯಮಂತ್ರಿಯಾದರು.
ಆದರೆ ಕ್ಷತ್ರಿಯ ಜಾತಿಗೆ ಸೇರಿದ ಶಂಕರಸಿಂಗ್ ವಘೇಲಾ, ಸರ್ಕಾರದೊಳಗಿನ ‘ಪಟೇಲಗಿರಿ’ ವಿರುದ್ಧ ಬಂಡೆದ್ದ ಪರಿಣಾಮ ಬಿಜೆಪಿ ಸರ್ಕಾರ ಪತನವಾಯಿತು. ವಘೇಲಾ ಪ್ರತ್ಯೇಕ ಪಕ್ಷ ಕಟ್ಟಿ ಕಾಂಗ್ರೆಸ್ ಬೆಂಬಲದ ಜತೆಗೆ ಸರ್ಕಾರ ರಚಿಸಿದರು. ೧೯೯೮ರ ವಿಧಾನಸಭಾ ಚುನಾವಣೆ ಯಲ್ಲಿ ಮತ್ತೆ ಕೇಶುಭಾಯ್ ನೇತೃತ್ವದ ಬಿಜೆಪಿ ಬಹುಮತ ದೊಂದಿಗೆ ಅಧಿಕಾರಕ್ಕೇರಿತು. ಆಗ ಬಿಜೆಪಿಯಲ್ಲಿದ್ದ ೧೧೭ ಶಾಸಕರಲ್ಲಿ ೪೨ ಮಂದಿ ಪಟೇಲ್ ಜಾತಿಗೆ ಸೇರಿದವರಾಗಿದ್ದರು.
೨೦೦೧ರಲ್ಲಿ ಕೇಶುಭಾಯ್ ಅವರನ್ನು ಪದಚ್ಯುತಗೊಳಿಸಿ ನರೇಂದ್ರ ಮೋದಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಯಿತು. ಅಲ್ಲಿಯವರೆಗೆ ಗುಜರಾತ್ ರಾಜಕಾರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದ ‘ಜಾತಿ’ ಪಕ್ಕಕ್ಕೆ ಸರಿದು ಆ ಸ್ಥಾನವನ್ನು ‘ಧರ್ಮ’ ಆಕ್ರಮಿಸಿಕೊಂಡಿತು. ೨೦೦೨ರ ಗುಜರಾತ್ ಕೋಮು ದಂಗೆಯಿಂದ ಪ್ರಾರಂಭವಾದ ಈ ‘ಧರ್ಮ ರಾಜಕಾರಣ’ ಮೋದಿಯವರನ್ನು ಪ್ರಧಾನಿ ಪಟ್ಟದವರೆಗೆ ಕೊಂಡೊಯ್ದಿದೆ. ‘ಹಿಂದೂ ಹೃದಯ ಸಾಮ್ರಾಟ’ನಾಗಿ ತಮ್ಮನ್ನು ಬಿಂಬಿಸಿಕೊಂಡ ಮೋದಿ ಅವರು ನಾಜೂಕಾಗಿ ಕೇಶುಭಾಯ್ ಪಟೇಲ್ ಅವರನ್ನು ರಾಜಕೀಯವಾಗಿ ಮುಗಿಸಿಬಿಟ್ಟರು. ೨೦೦೭ ಮತ್ತು ೨೦೧೨ರ ವಿಧಾನಸಭಾ ಚುನಾವಣೆಗಳಲ್ಲಿ ಅತೃಪ್ತ ಕೇಶುಭಾಯ್ ಪಟೇಲ್ ಎಷ್ಟೇ ಗುಡುಗಾಡಿದರೂ ಹಿಂದುತ್ವದ ಪ್ರವಾಹದಲ್ಲಿ ತೇಲಿಹೋಗಿದ್ದವರನ್ನು ಮೋದಿ ಪ್ರಭಾವದಿಂದ ಬಿಡಿಸಿ ತಮ್ಮೆಡೆ ಸೆಳೆಯಲು ಸಾಧ್ಯವಾಗಲಿಲ್ಲ.
ಹಿಂದುಳಿದ ಗಾಂಚಿ (ಗಾಣಿಗ) ಜಾತಿಗೆ ಸೇರಿರುವ ಮೋದಿ ಅವರು ಸೋಲಂಕಿ ಅವರ ‘ಖಾಮ್’ ಸೂತ್ರದಲ್ಲಿದ್ದ ಮುಸ್ಲಿಮರನ್ನು ಹೊರಗಿಟ್ಟು ಹಿಂದುತ್ವದ ಹೊಸ ಸೂತ್ರವನ್ನು ಹೆಣೆದು ಆ ರಾಜ್ಯವನ್ನು ಹನ್ನೆರಡು ವರ್ಷ ಆಳಿದರು. ಅದೇ ಚಿಮ್ಮುಹಲಗೆಯನ್ನು ಬಳಸಿ ದೆಹಲಿಗೆ ಜಿಗಿದಿದ್ದಾರೆ. ಈಗ ಪಟೇಲ್ ಸಮುದಾಯಕ್ಕೆ ಸೇರಿದ ಆನಂದಿ ಬೆನ್ ಪಟೇಲ್ ಮುಖ್ಯಮಂತ್ರಿಯಾದರೂ ಪಟೇಲ್ ಸಮುದಾಯಕ್ಕೆ ರಾಜಕೀಯದ ಗತವೈಭವಕ್ಕೆ ಮರಳಲು ಸಾಧ್ಯವಾಗಿಲ್ಲ. ಇವೆಲ್ಲವನ್ನೂ ಅಸಹಾಯಕರಂತೆ ನೋಡುತ್ತಾ ನರಳಾಡುತ್ತಿದ್ದ ಪಟೇಲ್ ಸಮುದಾಯಕ್ಕೆ ಹಾರ್ದಿಕ್ ಪಟೇಲ್ ಎನ್ನುವ ಪಡ್ಡೆ ಹುಡುಗನಲ್ಲಿ ರಾಜಕೀಯವಾಗಿ ತಮ್ಮನ್ನು ಪ್ರಸ್ತುತಗೊಳಿಸಬಲ್ಲ ನಾಯಕ ಕಂಡಿರಬಹುದು.
ವಿಚಿತ್ರವೆಂದರೆ ೧೯೮೫ರಲ್ಲಿ ಗುಜರಾತ್‌ನಲ್ಲಿ ಮೀಸಲಾತಿ ವಿರೋಧಿ ಚಳವಳಿಯ ಮುಂಚೂಣಿಯಲ್ಲಿದ್ದದ್ದು ಇದೇ ಪಟೇಲ್ ಸಮುದಾಯ. ಇತಿಹಾಸದ ಚಕ್ರ ಸಂಪೂರ್ಣವಾಗಿ ಒಂದು ಸುತ್ತು ತಿರುಗಿದೆ. ಇದು ಕೇವಲ ಪಟೇಲ್ ಸಮುದಾಯದ ಎಡಬಿಡಂಗಿತನವಲ್ಲ. ಮೀಸಲಾತಿಯ ವಿರೋಧಿಗಳಲ್ಲಿ ಬಹಳಷ್ಟು ಮಂದಿ ಸೈದ್ಧಾಂತಿಕವಾಗಿ ಅದನ್ನು ವಿರೋಧಿಸುವವರಲ್ಲ. ಅವರ ವಿರೋಧದಲ್ಲಿರುವುದು ‘ಮೀಸಲಾತಿಯ ಭಾಗ್ಯ ನಮಗಿಲ್ಲವಲ್ಲಾ’ ಎನ್ನುವ ಅಸೂಯೆ ಅಷ್ಟೇ. ಖೊಟ್ಟಿ ಜಾತಿ ಸರ್ಟಿಫಿಕೇಟ್ ಮಾಡಿಕೊಂಡು ಹಿಂದುಳಿದ ಜಾತಿ, ಪರಿಶಿಷ್ಟ ಜಾತಿ? ಪಂಗಡಗಳ ಒಳಗೆ ಅಕ್ರಮವಾಗಿ ನುಸುಳುವವರು ಇದೇ ಗುಂಪಿಗೆ ಸೇರಿದವರು.
ಗುಜರಾತ್‌ನಲ್ಲಿ ಮೀಸಲಾತಿಗಾಗಿ ಪಟೇಲರು ನಡೆಸುತ್ತಿರುವ ಚಳವಳಿಗೆ ಮೇಲ್ನೋಟಕ್ಕೆ ಎರಡು ಮುಖಗಳಿರುವಂತೆ ಕಾಣಿಸುತ್ತಿದೆ. ಮೊದಲನೆಯದು ಈಗಾಗಲೇ ಚರ್ಚಿಸಿರುವ ರಾಜಕೀಯವಾದ ಮುಖ. ಈ ಚಳವಳಿಯ ಇನ್ನೊಂದು ಮುಖದ ವಿನ್ಯಾಸ ವಿಸ್ತಾರವಾದುದು. ಅದರ ಸಣ್ಣ ಸುಳಿವನ್ನು ವಿಶ್ವಹಿಂದೂ ಪರಿಷತ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ನೀಡಿದ್ದಾರೆ.
‘ಜಾತಿ ಆಧರಿತ ಮೀಸಲಾತಿ ರದ್ದಾಗುವಂತಹ ಪರಿಸ್ಥಿತಿ ನಿರ್ಮಾಣವಾಗಬೇಕೆಂಬುದು ವಿಎಚ್‌ಪಿ ಬಯಕೆ. ಇದಕ್ಕಾಗಿ ಮೀಸಲಾತಿಯ ಅವಶ್ಯಕತೆಯನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ಉಸ್ತುವಾರಿಯಲ್ಲಿ ಆಯೋಗವನ್ನು ರಚಿಸಬೇಕು. ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ಸೌಲಭ್ಯ ಇರಬೇಕು...’ ಎಂದೆಲ್ಲಾ ಜೈನ್ ಹೇಳಿದ್ದಾರೆ. ಬೆಕ್ಕು ಚೀಲದಿಂದ ಹೊರಗೆ ಬಂದಿದೆ.
ಮೀಸಲಾತಿಯನ್ನು ಶೇ ೫೦ಕ್ಕೆ ಸೀಮಿತಗೊಳಿಸಿ ಸುಪ್ರೀಂಕೋರ್ಟ್ ಈಗಾಗಲೇ ತೀರ್ಪು ನೀಡಿರುವುದರಿಂದ ಮತ್ತು ರಾಜಸ್ತಾನದಲ್ಲಿ ಪಟೇಲ್ ಜಾತಿಗೆ ಸಮೀಪ ಇರುವ ಜಾಟರಿಗೆ ನೀಡಿರುವ ಮೀಸಲಾತಿಯನ್ನು ಸುಪ್ರೀಂಕೋರ್ಟ್  ರದ್ದುಗೊಳಿಸಿರುವುದರಿಂದ ತಾವು ಮೀಸಲಾತಿಯನ್ನು ಪಡೆದುಕೊಳ್ಳುವುದು ಅಸಾಧ್ಯ ಎಂದು ತಿಳಿದುಕೊಳ್ಳದಷ್ಟು ಪಟೇಲರು ದಡ್ಡರಲ್ಲ. ಪಟೇಲರ ಈಗಿನ ಚಳವಳಿಗೆ ತಮಗೆ ಮೀಸಲಾತಿಯನ್ನು ಪಡೆದುಕೊಳ್ಳುವ ಉದ್ದೇಶಕ್ಕಿಂತಲೂ ಮುಖ್ಯವಾಗಿ ಇತರ ಜಾತಿಗಳಿಗೆ ಇರುವ ಮೀಸಲಾತಿಯನ್ನು ಕಿತ್ತುಕೊಳ್ಳಬೇಕೆಂಬ ದುರುದ್ದೇಶ ಇರುವುದು ಸ್ಪಷ್ಟ.
ವಿಎಚ್‌ಪಿ ಪರೋಕ್ಷವಾಗಿ ಬೆಂಬಲಿಸುತ್ತಿರುವುದನ್ನು ನೋಡಿದರೆ ಗುಜರಾತ್‌ನಲ್ಲಿ ಮೀಸಲಾತಿಗಾಗಿ ನಡೆಯುತ್ತಿರುವ ಚಳವಳಿಯನ್ನು ನಿಧಾನವಾಗಿ ಬೇರೆ ರಾಜ್ಯಗಳಿಗೂ ಪಸರಿಸಿ ಅಂತಿಮವಾಗಿ ಅದನ್ನು ಮೀಸಲಾತಿ ವಿರೋಧಿ ಚಳವಳಿಯಾಗಿ ಪರಿವರ್ತನೆಗೊಳಿಸುವ ಹುನ್ನಾರ ಇದ್ದ ಹಾಗೆ ಕಾಣುತ್ತಿದೆ. ತಕ್ಷಣದಲ್ಲಿ ಕೇಂದ್ರ ಸರ್ಕಾರ ಮೀಸಲಾತಿಯನ್ನು ಪರಿಷ್ಕರಿಸುವಂತಹ ದುಸ್ಸಾಹಸಕ್ಕೆ ಇಳಿಯದಿದ್ದರೂ, ಇಂತಹ ಚಳವಳಿಯನ್ನೇ ನೆಪವಾಗಿಟ್ಟುಕೊಂಡು ಮೀಸಲಾತಿಯ ಅಧ್ಯಯನಕ್ಕಾಗಿ ಆಯೋಗವನ್ನು ನೇಮಿಸುವ ಮೂಲಕ ಸಾರ್ವಜನಿಕ ಪ್ರತಿಕ್ರಿಯೆಯನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬಹುದು.
ದಿಢೀರನೆ ಮೀಸಲಾತಿ ಬಗ್ಗೆ ಈ ರೀತಿಯ ವಿವಾದ ಹುಟ್ಟಿಕೊಳ್ಳಲು ಇನ್ನೂ ಒಂದು ಕಾರಣ ಇದೆ. ಭರದಿಂದ ನಡೆಯುತ್ತಿರುವ ಸರ್ಕಾರಿ ಸೇವೆಗಳ ಖಾಸಗೀಕರಣದಿಂದಾಗಿ ಸರ್ಕಾರಿ ಉದ್ಯೋಗಗಳ ಸಂಖ್ಯೆ ಪಾತಾಳಕ್ಕೆ ಇಳಿದಿದೆ. ಅದೇ ರೀತಿ ಶಿಕ್ಷಣದ ಖಾಸಗೀಕರಣದಿಂದಾಗಿ ಅಲ್ಲಿಯೂ ಮೀಸಲಾತಿ ಅಪ್ರಸ್ತುತವಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ರಂಗದಲ್ಲಿಯೂ ಮೀಸಲಾತಿ ನೀಡಬೇಕೆಂಬ ಬೇಡಿಕೆ ಹೆಚ್ಚು ಬಲವಾಗಿ ಕೇಳಿಬರುತ್ತಿದೆ. ಕಾಂಗ್ರೆಸ್ ಪಕ್ಷ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಬಗ್ಗೆ ತನ್ನ ಬದ್ಧತೆಯನ್ನು ಸಾರಿದೆ. ಈ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ  ಕಸುವು ಪಡೆಯುತ್ತಿರುವ ಖಾಸಗಿ ರಂಗದ ಉದ್ಯಮಗಳ ನಾಯಕರು ತಮ್ಮ ಮನೆಬಾಗಿಲು ತಟ್ಟಲಿರುವ ಮೀಸಲಾತಿ ಆಕಾಂಕ್ಷಿಗಳನ್ನು ದೂರ ಅಟ್ಟಲು  ಮೀಸಲಾತಿ ವಿರೋಧಿಗಳ ಜತೆ ಷಾಮೀಲಾಗಿರುವ ಸಾಧ್ಯತೆ ಕೂಡಾ ಇದೆ. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಜಾತಿ ಆಧರಿತ ಮೀಸಲಾತಿಯನ್ನು ಬದಲಾಯಿಸುವ ಒಲವು ಉಳ್ಳವರೇ ಆಗಿರುವುದರಿಂದ ಮೀಸಲಾತಿ ಪರವಾಗಿರುವವರ ಮನಸ್ಸಲ್ಲಿ ಮೂಡಿರುವ ಸಂಶಯಗಳು ನಿರಾಧಾರ ಎಂದು ಹೇಳಲಾಗದು.
ಲೇಖಕ ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ
ಕೃಪೆ: ಪ್ರಜಾವಾಣಿ ೨೯-೦೮-೨೦೧೫

Tuesday, July 28, 2015

‘ಕಲಾಮ್ ಕ್ಷಿಪಣಿ’ ಹೊರಟಿದ್ದು ವಾಜಪೇಯಿ ಬತ್ತಳಿಕೆಯಿಂದ..


ಎ.ಪಿ.ಜೆ. ಅಬ್ದುಲ್ ಕಲಾಮ್ ಅವರು ದೇಶದ 11ನೇ ರಾಷ್ಟ್ರಪತಿಯಾಗಲು ಪ್ರಮುಖ ಕಾರಣಕರ್ತರಾದ ನಾಯಕನೊಬ್ಬನನ್ನು ಸಾವಿನ ಸೂತಕದ ಸಮಯದಲ್ಲಿ ಹೆಚ್ಚಿನವರು ಮರೆತಿದ್ದಾರೆ. ಆ ನಾಯಕನ ಹೆಸರು ಅಟಲ ಬಿಹಾರಿ ವಾಜಪೇಯಿ. ಕೆ.ಆರ್.ನಾರಾಯಣನ್ ಅವರ ಉತ್ತರಾಧಿಕಾರಿ ಯಾರೆಂಬ ಚರ್ಚೆ ಪ್ರಾರಂಭವಾದಾಗ ಅಬ್ದುಲ್ ಕಲಾಮ್ ಅವರ ಹೆಸರನ್ನು ಮೊದಲು ಸೂಚಿಸಿದ್ದವರು ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್. ಆದರೆ ಆಗಲೇ ಬಿಜೆಪಿಯೊಳಗಡೆ ಕೃಷ್ಣಕಾಂತ್ ಹೆಸರು ಚರ್ಚೆಯಲ್ಲಿತ್ತು. ಅವರ ಹೆಸರು ಬಿದ್ದುಹೋದಾಗ ಕೇಳಿಬಂದಿದ್ದ ಹೆಸರು ಪಿ.ಸಿ.ಅಲೆಗ್ಸಾಂಡರ್ ಅವರದ್ದು. ಅಲೆಗ್ಸಾಂಡರ್ ಹೆಸರನ್ನು ಸೂಚಿಸಿದ್ದವರು ಆಗಿನ ಪ್ರಧಾನಿಯ ‘ನೀಲಿಕಣ್ಣಿನ ಹುಡುಗ’ ಪ್ರಮೋದ್ ಮಹಾಜನ್. ಅವರು ಆಗಲೇ ಅಲೆಗ್ಸಾಂಡರ್ ಹೆಸರಿನ ಬಗ್ಗೆ ಶಿವಸೇನಾ ನಾಯಕ ಬಾಳ್ ಠಾಕ್ರೆ ಒಪ್ಪಿಗೆ ಪಡೆದೇ ಬಿಟ್ಟಿದ್ದರು. ರಾಷ್ಟ್ರಪತಿ ಸ್ಥಾನದಲ್ಲಿ ಒಬ್ಬ ಕ್ರಿಶ್ಚಿಯನ್ ನನ್ನು ಕೂರಿಸಿಬಿಟ್ಟರೆ ಮುಂದೊಂದು ದಿನ ಸೋನಿಯಾಗಾಂಧಿ ಪ್ರಧಾನಿಯಾಗುವುದನ್ನು ತಪ್ಪಿಸಬಹುದು ಎನ್ನುವ ಲೆಕ್ಕಾಚಾರ ಮಹಾಜನ್ ಮತ್ತು ಠಾಕ್ರೆ ಅವರಲ್ಲಿತ್ತು. ಆದರೆ ವಾಜಪೇಯಿ ತಲೆಯಲ್ಲಿದ್ದದ್ದು ಬೇರೆಯೇ ಲೆಕ್ಕಾಚಾರ. ಆ ಕಾಲದಲ್ಲಿ ಎನ್ ಡಿ ಎ ಮೇಲೆ ಬಿಗಿ ಹಿಡಿತ ಹೊಂದಿದ್ದ ಚಂದ್ರಬಾಬು ನಾಯ್ಡು ಅವರನ್ನು ಕರೆಸಿದ್ದ ವಾಜಪೇಯಿ ಅಬ್ದುಲ್ ಕಲಾಮ್ ಹೆಸರನ್ನು ಸೂಚಿಸಿ ಒಪ್ಪಿಗೆಯನ್ನೂ ಪಡೆದುಬಿಟ್ಟರು.

ಈ ಮೂಲಕ ಒಂದು ಕಲ್ಲಿನಲ್ಲಿ ಹಲವು ಹಕ್ಕಿಗಳನ್ನು ಹೊಡೆಯುವ ಉದ್ದೇಶ ವಾಜಪೇಯಿ ಅವರಿಗಿತ್ತು. ಮೊದಲನೆಯದಾಗಿ ಗುಜರಾತ್ ಕೋಮುಗಲಭೆಯಿಂದಾಗಿ ಎನ್ ಡಿಎಗೆ ಗಟ್ಟಿಯಾಗಿ ಅಂಟಿಕೊಂಡಿದ್ದ ಕೋಮುವಾದಿ ಸರ್ಕಾರ ಎನ್ನುವ ಕಳಂಕವನ್ನು ತೊಡೆದುಹಾಕುವ ಉದ್ದೇಶ ವಾಜಪೇಯಿ ಅವರಿಗಿತ್ತು. ಎರಡನೆಯದಾಗಿ ನರೇಂದ್ರ ಮೋದಿ ಅವರ ರಾಜೀನಾಮೆ ಪಡೆಯಲು ಹೊರಟಿದ್ದವರಿಗೆ ತಮ್ಮ ಸಹದ್ಯೋಗಿಗಳ ವಿರೋಧದಿಂದಾಗಿ ಸಾಧ್ಯವಾಗದೆ ಅವಮಾನವಾಗಿತ್ತು. ರಾಷ್ಟ್ರಪತಿ ಸ್ಥಾನಕ್ಕೆ ತನ್ನದೇ ಅಭ್ಯರ್ಥಿಯನ್ನು ಸೂಚಿಸುವ ಮೂಲಕ ತನ್ನ ಸ್ಥಾನದ ಬಲವನ್ನು ತೋರಿಸುವ ಉದ್ದೇಶವೂ ಅವರಿಗಿತ್ತು. ಮೂರನೆಯದಾಗಿ ಬಿಜೆಪಿ ಮುಸ್ಲಿಮ್ ವಿರೋಧಿ ಪಕ್ಷ ಎಂದು ಆರೋಪಿಸುವವರಿಗೆ ಉತ್ತರವನ್ನೂ ನೀಡುವ ಉದ್ದೇಶವೂ ವಾಜಪೇಯಿ ಅವರಿಗಿತ್ತು. (ಇದೇ ರೀತಿ ವಾಜಪೇಯಿ ಅವರು ಬಂಗಾರು ಲಕ್ಷ್ಮಣ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಬಿಜೆಪಿ ಬ್ರಾಹ್ಮಣ-ಬನಿಯಾ ಪಕ್ಷವೆಂಬ ಕಳಂಕವನ್ನು ತೊಡೆದುಹಾಕುವ ಪ್ರಯತ್ನವನ್ನೂ ಮಾಡಿದ್ದರು. ಮುಂದೇನಾಯಿತು ಎನ್ನುವುದು ಇತಿಹಾಸ).
ನಾಲ್ಕನೆಯದಾಗಿ ಮುಸ್ಲಿಮ್ ಅಭ್ಯರ್ಥಿಯನ್ನು ಸೂಚಿಸುವ ಮೂಲಕ ಕಾಂಗ್ರೆಸ್ ಪಕ್ಷ ಕೂಡಾ ಅವರನ್ನು ವಿರೋಧಿಸಲಾಗದೆ ಬೆಂಬಲಿಸಲೇಬೇಕಾದ ರಾಜಕೀಯ ಅನಿವಾರ್ಯತೆಯನ್ನು ಸೃಷ್ಟಿಸುವ ರಾಜಕೀಯ ಲೆಕ್ಕಚಾರವೂ ಚತುರ ರಾಜಕಾರಣಿ ವಾಜಪೇಯಿ ಅವರಿಗಿತ್ತು.
ಈ ಎಲ್ಲ ಕಾರಣಗಳಿಂದಾಗಿ ವಾಜಪೇಯಿ ಅವರು ಅಬ್ದುಲ್ ಕಲಾಮ್ ಹೆಸರನ್ನು ಸೂಚಿಸಿದಾಗ ಸಹದ್ಯೋಗಿಗಳ ಬಾಯಿ ಬಂದಾಗಿತ್ತು. ಸಹಮತ ಮೂಡಿಸಲು ವಾಜಪೇಯಿ ಅವರು ಮೊದಲು ಪ್ರಮೋದ್ ಮಹಾಜನ್ ಅವರನ್ನು ಬಾಳ್ ಠಾಕ್ರೆ ಅವರಲ್ಲಿಗೆ ಕಳುಹಿಸಿಕೊಟ್ಟರು. ನಂತರ ಮಹಾಜನ್ ಅವರನ್ನೇ ಕಲಾಮ್ ಅವರ ಚುನಾವಣಾ ಏಜಂಟ್ ಮಾಡಿದರು. ಅಬ್ದುಲ್ ಕಲಾಮ್ ಅವರನ್ನು ಒಪ್ಪಿಸುವ ಜವಾಬ್ದಾರಿಯನ್ನು ವಾಜಪೇಯಿ ಅವರು ಚಂದ್ರಬಾಬು ಅವರಿಗೆ ನೀಡಿದ್ದರು. ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಕೂಡಾ ಬೆಂಬಲ ವ್ಯಕ್ತಪಡಿಸಿತ್ತು. (ಅಲೆಗ್ಸಾಂಡರ್ ಹೆಸರು ತಪ್ಪಿಹೋಗಿ ಸೋನಿಯಾಗಾಂಧಿ ಪ್ರಧಾನಿಯಾಗುವ ಅವಕಾಶ ಜೀವಂತವಾಗಿ ಉಳಿಯಿತಲ್ಲ ಎನ್ನುವ ಸಮಾಧಾನ ಕಾಂಗ್ರೆಸ್ ನಾಯಕರದ್ದು). ಆದರೆ ಎಡಪಕ್ಷಗಳು ಮಾತ್ರ ಬೆಂಬಲ ನೀಡಲಿಲ್ಲ. ಕೊನೆಗೆ ವಾಜಪೇಯಿ ಅವರ ಬತ್ತಳಿಕೆಯಿಂದ ಹೊರಟ ‘ಕಲಾಮ್ ಕ್ಷಿಪಣಿ’ ಗುರಿ ತಲುಪಿತ್ತು.

Sunday, July 26, 2015

ಹರೇಕಳ ಹಾಜಬ್ಬ

ಗಳಿಕೆಯ ಎಷ್ಟು ಪಾಲನ್ನು ದಾನ ನೀಡುತ್ತೀರಿ ಎನ್ನುವುದರ ಮೇಲೆ ತ್ಯಾಗದ ಪ್ರಮಾಣ ನಿರ್ಧಾರವಾಗುತ್ತದೆ. ಮುಖೇಶ್ ಅಂಬಾನಿಯಂತೆ ದಿನಕ್ಕೆ ೧೧,೦೦೦ ಕೋಟಿ ರೂಪಾಯಿ ಗಳಿಸಿ ಹತ್ತಾರು ಕೋಟಿ ದಾನಮಾಡಿದರೇನು ಬಂತು, ನಿಜವಾದ ದಾನದ ಧರ್ಮ ಹರೇಕಳ ಹಾಜಬ್ಬ ಅವರದ್ದು. ಹಣ್ಣು ಮಾರುತ್ತಿರುವ ಅವರ ದಿನದ ಆಧಾಯ ೧೦೦ರಿಂದ ೧೨೦ ರೂಪಾಯಿ. ಅದರಲ್ಲಯೇ ಒಂದಷ್ಟು ದುಡ್ಡನ್ನೂ ಉಳಿಸಿ ಹಾಜಬ್ಬ ತನ್ನೂರಿನಲ್ಲಿ ಶಾಲೆ ತೆರೆದಿದ್ದಾರೆ. ಹಾಜಪ್ಪ ಅವರಿಗೆ ಸಮನಾದ ದಾನಿ ಎಂದು ಮುಖೇಶ್ ಅಂಬಾನಿ ಅನಿಸಿಕೊಳ್ಳಬೇಕಾದರೆ ಅವರು ಪ್ರತಿದಿನ ಹೆಚ್ಚುಕಡಿಮೆ ೧೧೦೦೦ ಕೋಟಿ ರೂಪಾಯಿ ದಾನ ನೀಡಬೇಕಾಗುತ್ತದೆ.
ಇಂತಹ ಹಾಜಪ್ಪ ಅವರ ಸಾಧನೆಯ ಗಾಥೆಯನ್ನೊಳಗೊಂಡ ಪುಸ್ತಕವನ್ನು ಇಸ್ಮತ್ ಪಜೀರ್ ಬರೆದಿದ್ದಾರೆ. ಇದರ ಇಂಗ್ಲೀಷ್ ಅನುವಾದವನ್ನು ನಿನ್ನೆ ಮಂಗಳೂರಿನಲ್ಲಿ ನಾನು ಬಿಡುಗಡೆ ಮಾಡಿದೆ. ಹಾಜಪ್ಪ ಅವರನ್ನು ಕಂಡು ಧನ್ಯನಾದೆ.

Thursday, July 16, 2015

ಅಭಿವೃದ್ದಿಯಲ್ಲಿನ ತಾರತಮ್ಯಕ್ಕೆ ಸಂಬಂಧಿಸಿದ ಕೆಲವು ಮುಖ್ಯ ವಿಷಯಗಳು

ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಬುಧವಾರ ಉತ್ತರಿಸಿದ ಮುಖ್ಯಮಂತ್ರಿಗಳು ಅಭಿವೃದ್ದಿಯಲ್ಲಿನ ತಾರತಮ್ಯಕ್ಕೆ ಸಂಬಂಧಿಸಿದ ಕೆಲವು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದ್ದರು. ನಾನು ಓದಿದಂತೆ ಇದು ಇಂದಿನ ಯಾವ ಪತ್ರಿಕೆಗಳಲ್ಲಿಯೂ ಪ್ರಕಟವಾಗಿಲ್ಲ. (ಸುದ್ದಿ ಪ್ರಕಟಣೆ-ಪ್ರಸಾರದಲ್ಲಿ ಮಾಧ್ಯಮಗಳಿಗಿರುವ ಇತಿಮಿತಿಗಳ ಅರಿವು ನನಗಿರುವುದರಿಂದ ಇದು ಉದ್ದೇಶಪೂರ್ವಕ ಎಂದು ನಾನು ಹೇಳಲಾರೆ.) ಮುಖ್ಯಮಂತ್ರಿಗಳ ಮಾತಿನ ಕೆಲವು ತುಣುಕುಗಳು ಇಲ್ಲಿದೆ:
“.. ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಲ್ಲದ ಮನಸ್ಸಿನಿಂದ ಅದನ್ನು ಒಪ್ಪಿಕೊಂಡಿದ್ದರು. ಸ್ವಾತಂತ್ರ್ಯಕ್ಕಿಂತಲೂ ಸಮಾನತೆ ಮುಖ್ಯ ಎನ್ನುವುದು ಅವರು ಖಚಿತ ನಿಲುವಾಗಿತ್ತು. ಅಸಮಾನತೆಯಿಂದ ಕೂಡಿದ ಸಮಾಜದಲ್ಲಿ ಸ್ವಾತಂತ್ರ್ಯ ಎನ್ನುವುದು ಶೋಷಕರ ಕೈಯಲ್ಲಿನ ಅಸ್ತ್ರವಾಗಬಹುದು ಎನ್ನುವ ಭೀತಿಯನ್ನು ಅವರು ವ್ಯಕ್ತಪಡಿಸಿದ್ದರು. ಅಂಬೇಡ್ಕರ್ ಅಭಿಪ್ರಾಯದ ಹಿನ್ನೆಲೆಯಲ್ಲಿಯೇ ನಾವು ಅಭಿವೃದ್ಧಿಯ ಪರಿಕಲ್ಪನೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಸಮಾನತೆ ಇಲ್ಲದ ಸಮಾಜದಲ್ಲಿ ಅಭಿವೃದ್ಧಿ ಎನ್ನುವುದು ಕೆಲವರ ಅಭಿವೃದ್ಧಿಯಾಗುವುದೇ ಹೊರತು ಎಲ್ಲರ ಅಭಿವೃದ್ದಿಯಾಗುವುದಿಲ್ಲ. ಈ ಕಾರಣಕ್ಕಾಗಿಯೇ ಸಮಾನತೆ ಮತ್ತು ಅಭಿವೃದ್ಧಿ ಜತೆಜತೆಯಲ್ಲಿಯೇ ನಡೆಯಬೇಕಾಗುತ್ತದೆ...”“....ಉತ್ತರ ಕರ್ನಾಟಕ ಮತ್ತು ಬೆಂಗಳೂರು ಜಿಲ್ಲೆಯನ್ನು ಹೊರತುಪಡಿಸಿದ ದಕ್ಷಿಣ ಕರ್ನಾಟಕಕ್ಕೆ ಸರ್ಕಾರ ನೀಡಿರುವ ಅನುದಾನದಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಆದರೆಸರ್ಕಾರ ನೀಡಿರುವ ಅನುದಾನಕ್ಕೆ ಅನುಗುಣವಾದ ಅಭಿವೃದ್ಧಿಯ ಪರಿಶೀಲನೆ ಮಾಡಿದರೆ ದಕ್ಷಿಣದಲ್ಲಿ ಹೆಚ್ಚು ಅಭಿವೃದ್ದಿಯಾಗಿದೆ, ಉತ್ತರಕರ್ನಾಟಕದಲ್ಲಿ ಅನುದಾನದ ಪ್ರಮಾಣಕ್ಕನುಗುಣವಾಗಿ ಅಭಿವೃದ್ಧಿಯಾಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದಕ್ಕೇನು ಕಾರಣ ಎಂಬುದನ್ನು ನಾವೆಲ್ಲರೂ ಪಕ್ಷಭೇದ ಮರೆತು ಕೂಡಿ ಚರ್ಚಿಸಿ ತಿಳಿದುಕೊಳ್ಳಬೇಕು. ಈ ಲೋಪವನ್ನು ಸರಿಪಡಿಸಿಕೊಳ್ಳದಿದ್ದರೆ ಹಿಂದುಳಿಯುವಿಕೆಯ ವಿರುದ್ಧದ ನಮ್ಮ ಹೋರಾಟ ಯಶಸ್ಸು ಕಾಣಲು ಸಾಧ್ಯವಿಲ್ಲ....”
“...ಇತಿಹಾಸವನ್ನು ಅವಲೋಕಿಸಿದರೆ ಸಮಾನತೆಯ ಬುನಾದಿಯಲ್ಲಿ ಸಮಾಜವನ್ನು ಕಟ್ಟುವ ಪ್ರಯತ್ನಕ್ಕೆ ಉತ್ತರ ಕರ್ನಾಟಕದಲ್ಲಿನ ಊಳಿಗಮಾನ್ಯ ವ್ಯವಸ್ಥೆ ತಡೆಯೊಡ್ಡುತ್ತಾ ಬಂದುದನ್ನು ಕಾಣಬಹುದು. ರಾಜ್ಯದ ದಕ್ಷಿಣದ ಭಾಗಗಳಂತೆ ಉತ್ತರ ಕರ್ನಾಟಕದಲ್ಲಿ ಭೂ ಸುಧಾರಣೆ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಎನ್ನುವುದು ಕೂಡಾ ವಾಸ್ತವ. ಈ ಕಾರಣದಿಂದಾಗಿಯೇ ಇಲ್ಲಿ ವರ್ಗಗಳ ನಡುವಿನ ಬಿರುಕು ಹೆಚ್ಚಿದೆ. ಈ ಅಂತರವನ್ನು ಅಳಿಸಿಹಾಕಬೇಕಾದರೆ ನಮ್ಮ ಅಭಿವೃದ್ಧಿಯ ಕಣ್ಣುಗಳಿಗೆ ಸಮಾನತೆಯ ದೃಷ್ಟಿ ಇರಬೇಕಾಗುತ್ತದೆ...”

Sunday, July 12, 2015

ಶಾಹು ಮಹಾರಾಜನ ಸನ್ನಿಧಿಯಲ್ಲಿ....

ಬುದ್ಧನ ನಂತರ, ಸಾರ್ವಜನಿಕ ಸ್ಥಳದಲ್ಲಿ ಕೂತು ಅಸ್ಪೃಶ್ಯರ ಕೈತುತ್ತು ಉಂಡ ಭಾರತದ ಏಕೈಕ ಹಿಂದೂ ರಾಜ ಶಾಹು ಛತ್ರಪತಿ ಮಹಾರಾಜ. ಬಾಬಾಸಾಹೇಬ್ ಅಂಬೇಡ್ಕರ್ ಪ್ರಾರಂಭಿಸಿದ ಮೊದಲ ಪತ್ರಿಕೆ ‘ಮೂಕನಾಯಕ’ ಪ್ರಕಟಣೆಗೆ ಮತ್ತು ಅವರು ಹಣದ ಕೊರತೆಯಿಂದಾಗಿ ಇಂಗ್ಲಂಡ್ ನಲ್ಲಿ ಅರ್ಧಕ್ಕೆ ನಿಲ್ಲಿಸಿದ ಶಿಕ್ಷಣವನ್ನು ಪೂರ್ಣಗೊಳಿಸಲು ಆರ್ಥಿಕ ನೆರವು ನೀಡಿದವರು ಶಾಹು ಮಹಾರಾಜ. ಜ್ಯೋತಿಬಾ ಪುಲೆ ಅವರ ಸತ್ಯಶೋಧಕ ಮಂಡಳಿಯ ಚಳುವಳಿಯನ್ನು ಬೆಂಬಲಿಸಿದ ಮತ್ತು ‘ಕೇಸರಿ’ ಬಾಲಗಂಗಾಧರ ತಿಲಕರನ್ನೂ ಸೇರಿಸಿಕೊಂಡು ಪುರೋಹಿತಷಾಹಿ ವಿರುದ್ಧ ಸಮರವನ್ನೇ ಸಾರಿದವರು ಈ ಶಾಹು ಮಹಾರಾಜ. ಛತ್ರಪತಿ ಶಿವಾಜಿಯ ಸಂತತಿಗೆ ಸೇರಿದ ಇವರು ರಾಜ್ಯಭಾರ ಮಾಡಿದ ಕೊಲ್ಹಾಪುರದ ಅರಮನೆಗೆ ಇತ್ತೀಚೆಗೆ ಗೆಳೆಯರ ಜತೆ ಭೇಟಿ ನೀಡಿದಾಗ ಇತಿಹಾಸದ ಪುಟಗಳೆಲ್ಲ ಕಣ್ಣೆದುರು ಪಟಪಟನೆ ಹಾದುಹೋಯಿತು.

. “ ಅಂಬೇಡ್ಕರ್ ರೂಪದಲ್ಲಿ ವಿಮೋಚನಕಾರ ನಿಮ್ಮ ಮುಂದೆ ಬಂದಿದ್ದಾನೆ. ನಿಮ್ಮ ಬಂಧನದ ಸರಪಳಿಗಳನ್ನು ಈತ ಕಿತ್ತುಹಾಕಲಿದ್ದಾನೆ. ಇಷ್ಟು ಮಾತ್ರವಲ್ಲ ಈತ ಮುಂದೊಂದು ದಿನ ಅಖಿಲ ಭಾರತ ಮಟ್ಟದ ಖ್ಯಾತಿ ಮತ್ತು ಪ್ರಭಾವವನ್ನು ಗಳಿಸಲಿರುವ ನಾಯಕನಾಗಲಿದ್ದಾನೆ ಎಂದು ನನ್ನ ಅಂತರಾತ್ಮ ಪಿಸುಗುಟ್ಟುತ್ತಿದೆ..’ಎಂದು 1920ರಲ್ಲಿ ಮಾಗಾಂವ್ ನಲ್ಲಿ ನಡೆದ ಅಸ್ಪೃಶ್ಯರ ಸಮಾವೇಶದಲ್ಲಿ ಶಾಹುಮಹಾರಾಜರು ಭವಿಷ್ಯ ನುಡಿದಿದ್ದರು. ವಿಷಾದದ ಸಂಗತಿಯೆಂದರೆ ಅತ್ಯಂತ ಕೆಟ್ಟನಿರ್ವಹಣೆಗೆ ಒಳಪಟ್ಟು ಪಾಳುಬಿದ್ದಂತಿರುವ ಅರಮನೆಯೊಳಗಿನ ವಸ್ತುಸಂಗ್ರಹಾಲಯದಲ್ಲಿ ಶಾಹು ಮಹಾರಾಜ ಮತ್ತು ಅಂಬೇಡ್ಕರ್ ನಡುವಿನ ಬಾಂಧವ್ಯವನ್ನು ನೆನಪು ಮಾಡಿಕೊಡುವ ಯಾವ ಕುರುಹುಗಳೂ ಕಣ್ಣಿಗೆ ಬೀಳಲಿಲ್ಲ

Friday, July 3, 2015

ಭಸ್ಮಾಸುರರನ್ನು ಸೃಷ್ಟಿಸುವುದು ಸುಲಭ ನಿಯಂತ್ರಿಸುವುದು ಕಷ್ಟ

ಘಟನೆ-1
ನಾನಿನ್ನೂ ಆರನೇ ತರಗತಿ ವಿದ್ಯಾರ್ಥಿ, ಉಡುಪಿ ತಾಲ್ಲೂಕಿನ ಹೆಜಮಾಡಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ.ಮುಂಬೈ ನೆಲದಿಂದ ನನ್ನನ್ನು ಕಿತ್ತು ತಂದು ಅಲ್ಲಿ ನೆಟ್ಟಿದ್ದರು. ಇನ್ನೂ ಬೇರು ಬಿಟ್ಟಿರಲಿಲ್ಲ, ಹೊಂದಿಕೊಳ್ಳಲು ಹೆಣಗಾಡುತ್ತಿದ್ದ ಕಾಲ.ಮುಂಬೈನಿಂದ ಬಂದವ ಎನ್ನುವ ಕಾರಣಕ್ಕೆ ನನ್ನ ಸಹಪಾಠಿಗಳ ಒಂದು ಗುಂಪು ನನ್ನನ್ನು ಗೋಳಾಡಿಸುತ್ತಿತ್ತು. ಅವರ ಪ್ರಮುಖ ಅಸ್ತ್ರವೆಂದರೆ ಅಶ್ಲೀಲ ಬೈಗುಳು. ಕುಂಡದ ಹೂವಿನಂತೆ ಬೆಳೆದಿದ್ದ ನಾನು ಅಲ್ಲಿಯವರೆಗೆ ಅಂತಹ ಬೈಗುಳಗಳನ್ನೇ ಕೇಳಿರಲಿಲ್ಲ. ಯಾರಿಗೂ ಹೇಳಿಕೊಳ್ಳಲಾಗದೆ ಖಿನ್ನತೆಗೊಳಗಾಗಿದ್ದ ನಾನು ಬಿಡುಗಡೆಯ ದಾರಿ ಎಂಬಂತೆ ವಾಪಸು ಕೊಡಲು ನಿರ್ಧರಿಸಿದೆ. ಅವರು ಹೇಳುತ್ತಿರುವ ಬೈಗುಳಗಳನ್ನೆಲ್ಲ ನೋಟ್ ಬುಕ್ ನಲ್ಲಿ ಬರೆದುಕೊಳ್ಳತೊಡಗಿದೆ. (ಹಳ್ಳಿ ಹುಡುಗರ ಬೈಗುಳು ಬಹಳ ಕ್ರಿಯೇಟಿವ್ ಆಗಿರುತ್ತೆ. ಅವುಗಳನ್ನೆಲ್ಲ ಇಲ್ಲಿ ಬರೆಯಲಾರೆ). ನೋಟ್ಸ್ ಇಟ್ಟುಕೊಂಡು ಹೊಸ ಬೈಗುಳಗಳನ್ನು ನಾನೇ ಸೃಷ್ಟಿ ಮಾಡತೊಡಗಿದೆ. (ಬಹುಷ: ನನ್ನ ಬರವಣಿಗೆಯ ಹವ್ಯಾಸ ಅಲ್ಲಿಂದಲೇ ಪ್ರಾರಂಭವಾಗಿರಬಹುದೇನೋ). ಸಂಪೂರ್ಣ ಸನ್ನದ್ಧನಾದ ನಂತರ ಧೈರ್ಯ ತಂದುಕೊಂಡು ನನಗೆ ಬೈದವರನ್ನು ಕೆಣಕಿ ಕೆಣಕಿ ನಾನೇ ಬೈಯ್ಯತೊಡಗಿದೆ. ಬೈಯ್ಯುತಾ ಹೋದಂತೆ ನನ್ನ ಬೈಗುಳ ಶಬ್ದಕೋಶ ಯಾವ ಪರಿಯಲ್ಲಿ ಬೆಳೆಯಿತೆಂದರೆ ಶಾಲೆಯಲ್ಲಿ ಅತ್ಯಂತ ಕೆಟ್ಟದಾಗಿ ಬೈಯ್ಯುವವರು ಯಾರೆಂದರೆ ಎಲ್ಲರೂ ನನ್ನ ಕಡೆ ತೋರಿಸುತ್ತಿದ್ದರು. ಪ್ರೈಮರಿ ಶಾಲೆ ಬಿಡುವ ಹೊತ್ತಿಗೆ ಹವ್ಯಾಸವನ್ನು ಬಿಟ್ಟುಬಿಟ್ಟೆ. ಅಷ್ಟರಲ್ಲಿ ನನಗೆ ಬೈಯ್ಯುತ್ತಿದ್ದವರೆಲ್ಲ ನನ್ನ ಗೆಳೆಯರಾಗಿಬಿಟ್ಟಿದ್ದರು.

ಘಟನೆ-2
ವಿವೇಕಾನಂದರ ಕುರಿತ ನನ್ನ ವಿವಾದಾತ್ಮಕ ಅಂಕಣ ಪ್ರಕಟವಾಗಿದ್ದ ಕಾಲ. ಅದು ಪ್ರಕಟವಾದ ದಿನದ ಬೆಳಿಗ್ಗೆ ಎಂಟರಿಂದ ಹೆಚ್ಚು ಕಡಿಮೆ ಮೂರು ದಿನಗಳ ಕಾಲ ನನ್ನ ಮೊಬೈಲ್ ರಿಂಗ್ ಆಗುವುದು ನಿಂತಿರಲಿಲ್ಲ. ಆಫ್ ಮಾಡಿಟ್ಟ ಮೊಬೈಲ್ ಅನ್ನು ರಾತ್ರಿ ಹನ್ನೆರಡು ಗಂಟೆಗೆ ಆನ್ ಮಾಡಿದರೂ ಯಾರಾದರೊಬ್ಬ ಕಾಲ್ ಮಾಡಿ ಬೈಯ್ಯುವವ. ಅಕ್ಕ, ಅಣ್ಣ, ಅಪ್ಪ, ಅಮ್ಮ, ಹೆಂಡತಿ,ಮಗಳು ಎಲ್ಲರನ್ನೂ ಸೇರಿಸಿ ಅಶ್ಲೀಲವಾಗಿ ಬೈಯ್ಯುತ್ತಿದ್ದರು. ಸಹಿಸಿಕೊಳ್ಳಲಿಕ್ಕಾಗದಂತಹ ಬೈಗುಳು. ಬೈಯ್ಯುತ್ತಿದ್ದವರೆಲ್ಲರೂ ಸಂಸ್ಕೃತಿ ಪ್ರಚಾರಕರು. ರೆಗ್ಯುಲರ್ ಆಗಿ ರೀತಿ ಕಾಲ್ ಮಾಡುತ್ತಿದ್ದ ಕೆಲವರ ನಂಬರ್ ಗಳನ್ನುಲೋಪರ್-1, -2 ಎಂದೆಲ್ಲ ಸೇವ್ ಮಾಡಿಟ್ಟುಕೊಂಡಿದ್ದೆ. ಅವರಲ್ಲಿ ಒಬ್ಬ ಹುಬ್ಬಳ್ಳಿಯ ಹುಡುಗ. ಬಾಲ್ಯದ ನನ್ನ ಗೆಳೆಯರ ನೆನೆಪಾಗುವ ರೀತಿಯಲ್ಲಿ ಬೈಯ್ಯುತ್ತಿದ್ದ. 
ನಾನು ಅಸಹಾಯಕ. ತಿರುಗಿ ಬೈಯ್ಯಬೇಕೆಂದರೂ ಎಲ್ಲಿ ಕೂತು ಬೈಯ್ಯಲಿ? ಮನೆಯಲ್ಲಿ ರೀತಿ ಬೈಯ್ಯುತ್ತಾ ಕೂತರೆ ನನ್ನ ಹೆಂಡತಿ ಮತ್ತು ಮಗಳುಇವರೂ ಹೀಗೇನಾ? ಎಂದು ನನ್ನನ್ನೇ ಸಂಶಯಿಸುತ್ತಿದ್ದರೋ ಏನೋ? ಆಫೀಸಿಗೆ ಹೋಗುವಾಗ ಬಸ್ ನಲ್ಲಿ ಬೈದರೆ ಸಹಪ್ರಯಾಣಿಕರೆಲ್ಲ ಹುಚ್ಚರೆಂದು ಅಂದುಕೊಳ್ಳುತ್ತಿದ್ದರೇನೋ? ಆಫೀಸಿನಲ್ಲಿಯೂ ಇಂತಹ ಕೆಲಸ ಮಾಡುವಂತಿರಲಿಲ್ಲ. ಬೈಯ್ಯುವುದನ್ನು ಏರು ದನಿಯಲ್ಲಿಯೇ ಮಾಡಬೇಕೇ ಹೊರತು ಪಿಸುಗುಟ್ಟುವಂತಿಲ್ಲ. ಬೈಯ್ಯುವುದು ಕೂಡಾ ನಮ್ಮಂತಹವರಿಗೆ ಕಷ್ಟ ಎನ್ನುವುದು ನನಗೆ ಆಗಲೇ ಗೊತ್ತಾಗಿದ್ದು.
ಕೊನೆಗೂ ಹುಡುಗನ ಕಾಟ ತಾಳಲಾರದೆ ಬೆಳಿಗ್ಗೆ ಆರು ಗಂಟೆಗೆ ವಾಕಿಂಗ್ ಹೊರಡುವವ ನಾಲ್ಕು ಗಂಟೆಗೆ ಹೊರಟೆ. ಅದಕ್ಕಿಂತ ಮೊದಲು ತುಳು,ಕನ್ನಡ,ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಏನೆಲ್ಲಾ ಬೈಯ್ಯಬಹುದು ಮತ್ತು ಹೇಗೆಲ್ಲಾ ಬೈಯ್ಯಬಹುದೆಂದು ನಾನು ಮನನ ಮಾಡಿಕೊಂಡು ತಯರಾಗಿದ್ದೆ. ದಿನ ನಾನು ವಾಕ್ ಮಾಡುವ ಮೈದಾನದಲ್ಲಿ ಯಾರಿನ್ನೂ ಬಂದಿರಲಿಲ್ಲ. ಮೈದಾನದ ಮಧ್ಯೆನಿಂತು ಹುಬ್ಬಳ್ಳಿಯಲೋಫರ್ -1’ಗೆ ಪೋನ್ ಮಾಡಿದೆ. ಆತ ಪೋನ್ ಎತ್ತಿಕೊಂಡ ಕೂಡಲೇ ಆತನಿಗೆ ಮಾತನಾಡಲಿಕ್ಕೆ ಅವಕಾಶವೂ ಕೊಡದ ಹಾಗೆ ಎಲ್ಲ ಕೆಟ್ಟ,ಅಶ್ಲೀಲ ಪದಗಳನ್ನು ಉಗಿದುಬಿಟ್ಟೆ. ಅವನು ಸ್ವಲ್ಪ ಹೊತ್ತು ಪೋನ್ ಕಟ್ ಮಾಡಿ ಆನ್ ಮಾಡುವುದು ಮತ್ತೆ ನಾನು ಪೋನ್ ಮಾಡುವುದು ಸುಮಾರು ಒಂದು ಗಂಟೆ ಕಾಲ ನಡೆಯಿತು. ಅವನು ಹೆದರಿ ಮನೆಯಿಂದ ಹೊರಗೆ ಬಂದು ಬೈಕ್ ಸ್ಟಾರ್ಟ್ ಮಾಡಿ ಹೊರಟ.( ಶಬ್ದ ನನಗೆ ಕೇಳಿಸುತ್ತಿತ್ತು) ಯಾರದೋ ಮನೆಮುಂದೆ ಬೈಕ್ ನಿಲ್ಲಿಸಿ ಅವರೊಡನೆ ಮಾತನಾಡಿ ಪೋನ್ ಆಫ್ ಮಾಡಿದ. ಅದರ ನಂತರ ಆತ ನನಗೆ ಬೈದು ಪೋನ್ ಮಾಡಿಲ್ಲ. ಅಷ್ಟೊಂದು ಬೈದ ನಂತರ ನಾನೂ ನಿರಾಳವಾಗಿ ಬಿಟ್ಟೆ. ಆದರೆ ಯಾವುದಕ್ಕೋ ಕಲ್ಲೆಸೆಯಬಾರದು ಅಂತಾರಲ್ಲ, ಅಂತಹದ್ದನ್ನು ನಾನು ಯಾಕೆ ಮಾಡಿದೆ ಎಂದು ನನ್ನ ಬಗ್ಗೆಯೇ ಅಸಹ್ಯವೆನಿಸಿತು.

ನರೇಂದ್ರ ಮೋದಿಯವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಒಂದಕ್ಷರ ಯಾರೇ ಬರೆದರೂ ಹೆಣ್ಣು-ಗಂಡು, ಹಿರಿಯರು-ಕಿರಿಯರು ಯಾವುದನ್ನೂ ಲೆಕ್ಕಿಸದೆ ಅವರ ಭಕ್ತರ ಗುಂಪು ಅಶ್ಲೀಲವಾಗಿ ಬೈಯ್ಯುವುದು, ನಿಂದಿಸುವುದು, ಚಾರಿತ್ರ್ಯಹರಣ ಮಾಡುತ್ತಿರುವುದನ್ನು ನೋಡಿದಾಗ ಎರಡು ಘಟನೆಗಳು ನೆನಪಾಯಿತು. ಬೈಗುಳ ವೀರರೆಲ್ಲರೂ ವಿದ್ಯಾವಂತರು. ಇವರು ಭಿನ್ನಾಭಿಪ್ರಾಯಗಳನ್ನು ಸೈದ್ಧಾಂತಿಕವಾಗಿ ಚರ್ಚಿಸಲು ಬರುವುದಿಲ್ಲ. ಬರೀ ಬೈಗುಳು. ತಮಗೊಲ್ಲದವರನ್ನು ಚುಚ್ಚಿ ಸಂತೋಷ ಪಡುವ ವಿಕೃತಾನಂದರು. ಇತ್ತೀಚೆಗೆ ಯಾರಾದರೂ ಬೈದರೆ ಈತ ಮೋದಿ ಅಭಿಮಾನಿ ಇರಬಹುದೇನೋ ಎಂದು ಸಂಶಯ ಪಡುವಷ್ಟು ಮೋದಿ ಭಕ್ತರ ಹಾವಳಿ ಆವರಿಸಿಕೊಂಡುಬಿಟ್ಟಿದೆ. ಇಂತಹವರನ್ನು ಕಾನೂನಿನ ಮೂಲಕವೇ ಸರಿಪಡಿಸಬಹುದೇನೋ ಎಂಬ ಸಣ್ಣ ಆಸೆಯಿಂದ ನಾನು ಪೊಲೀಸರಿಗೆ ದೂರು ನೀಡಿದರೆಅಭಿವ್ಯಕ್ತಿ ಸ್ವಾತಂತ್ರ್ಯ ಹರಣಎಂದು ಗುಲ್ಲೆಬ್ಬಿಸಲಾಯಿತು. ಸ್ವತ: ನರೇಂದ್ರ ಮೋದಿಯವರು ಮಾತ್ರವಲ್ಲ, ಸಂಸದ ಪ್ರತಾಪ ಸಿಂಹ ಕೂಡಾ ತಮ್ಮ ವಿರುದ್ದ ಬರೆದವರ ವಿರುದ್ಧ ಸೆಕ್ಷನ್ 66 ಬಳಸಿಕೊಂಡು ದೂರು ನೀಡಿದ್ದನ್ನು ಅವರು ಮರೆತೇ ಬಿಟ್ಟಿದ್ದರು.
ಆದರೆ ರೀತಿ ಬರೆಯುವ ಮೂಲಕ ಜಗತ್ತಿನ ಮುಂದೆ ತಾವು ಬೆತ್ತಲಾಗುತ್ತಿದ್ದೇವೆ ಎನ್ನುವ ಅರಿವು ಮೋದಿ ಭಕ್ತರಿಗಿಲ್ಲ. ಇತ್ತೀಚೆಗೆ ಇವರಲ್ಲಿ ಕೆಲವರನ್ನು ನಾನು ಬ್ಲಾಕ್ ಮಾಡಿದ್ದೇನೆ. ಇನ್ನು ಕೆಲವರನ್ನು ಉಳಿಸಿಕೊಂಡಿದ್ದೇನೆ. ಮೋದಿಯವರಿಗೆ ಎಂತೆಂತಹ ಅಭಿಮಾನಿಗಳಿದ್ದಾರೆನ್ನುವುದು ಜಗತ್ತಿಗೆ ಗೊತ್ತಾಗಲಿ. ಇವರನ್ನೆಲ್ಲ ಬಳಸಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರಮೋದಿಯವರು ಈಗ ಸೋಷಿಯಲ್ ಮೀಡಿಯಾದಲ್ಲಿರುವ ತನ್ನ ಅಭಿಮಾನಿಗಳಿಗೆ ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದನ್ನು ಓದಿ ಇದನ್ನು ಬರೆಯಬೇಕೆನಿಸಿತು. ತಮ್ಮ ಆರಾಧ್ಯ ದೈವದ ಮಾತಿಗೆ ಭಕ್ತರು ಹೇಗೆ ಪ್ರತಿಕ್ರಿಯಿಸುತ್ತಾರೆನ್ನುವುದನ್ನು ಕಾದು ನೋಡಬೇಕು. ಭಸ್ಮಾಸುರರನ್ನು ಸೃಷ್ಟಿಸುವುದು ಸುಲಭ ನಿಯಂತ್ರಿಸುವುದು ಕಷ್ಟ.