Sunday, September 14, 2014

ಫೇಸ್ ಬುಕ್ ಬಳಸುವವರಿಗಾಗಿ..

ಪ್ರೀತಿಯ ಗೆಳೆಯರೇ,
ಫೇಸ್ ಬುಕ್ ನಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹಸಿ-ಬಿಸಿ ಚರ್ಚೆಗಳಿಂದ ನಾನು ಕಲಿತಿರುವ ಕೆಲವು ಪಾಠಗಳು ಇಲ್ಲಿವೆ. ಇದರಿಂದ ನನಗಿಂತ ಹಿರಿಯರಲ್ಲದೆ ಇದ್ದರೂ ಕಿರಿಯರಾದರೂ ಒಂದಿಷ್ಟು ಕಲಿಯಬಹುದೆಂಬ ನಿರೀಕ್ಷೆಯಲ್ಲಿ ದಾಖಲಿಸುತ್ತಿದ್ದೇನೆ.
1. ಫೇಸ್ ಬುಕ್ ಎಂದರೆ ಗೋಡೆ ಬರಹ ಇದ್ದ ಹಾಗೆ . ಜವಾಬ್ದಾರಿ ವಹಿಸಿಕೊಳ್ಳುವವರು ಯಾರೂ ಇಲ್ಲ. ಯಾರೂ ಎಲ್ಲಿಯಾದರೂ ಕದ್ದುಮುಚ್ಚಿ ಬರೆದುಬಿಡಬಹುದು. ತನ್ನ ಹೆಸರು ಬರೆಯದೆ ಇಲ್ಲವೆ ದುರ್ಬುದ್ದಿಯವರಾಗಿದ್ದರೆ ಬೇರೆಯವರ ಮೇಲೆ ಅನುಮಾನ ಮೂಡಿಸುವ ರೀತಿಯ ಸುಳ್ಳು ಹೆಸರನ್ನು ದಾಖಲಿಸಿ ಇಂತಹ ಬರಹಗಳನ್ನು ಬರೆಯಬಹುದು. ಆದ್ದರಿಂದ ಬರೆದವರ ಖಾತೆಯ ಮೂಲಕ್ಕೆ ಹೋಗಿ ಆತನ ಹಿಂದಿನ ಚಟುವಟಿಕೆಗಳನ್ನು ಪರಿಶೀಲಿಸಿ ಅದರ ನಂತರ ಆ ಬರಹದ ಬಗ್ಗೆ ಪ್ರತಿಕ್ರಿಯಿಸುವ ತೀರ್ಮಾನ ಕೈಗೊಳ್ಳುವುದು ಸೂಕ್ತ.

2.ಅವಸರದ ಪ್ರತಿಕ್ರಿಯೆ ಯಾವಾಗಲೂ ಅವಸರದ ವಾಹನಚಾಲನೆಯಂತೆ ಅಪಾಯಕಾರಿ, ಅಪಘಾತವಾಗುವ ಸಾಧ್ಯತೆಗಳೇ ಹೆಚ್ಚು. ನಂತರ ನೊಂದುಕೊಳ್ಳುವುದಕ್ಕಿಂತ ತನ್ನ ಬರಹ ಯಾರನ್ನು ಗುರಿಯಾಗಿಟ್ಟುಕೊಂಡಿದೆಯೋ ಅವರ ಸ್ಥಾನದಲ್ಲಿ ನಿಂತು ಯೋಚಿಸಿ ಬರೆಯುವುದು ಒಳಿತು. ಶತ್ರುಗಳು ಇರುವುದೇ ನಮ್ಮಿಂದ ನೋವು ತಿನ್ನುವುದಕ್ಕೆ, ಅವರನ್ನು ಬಿಟ್ಟಾಕಿ. ಆದರೆ ಮಿತ್ರರ ಮನಸ್ಸಿಗೆ ನೋವುಂಟು ಮಾಡಬಾರದು. ಸ್ನೇಹ ಅಮೂಲ್ಯವಾದುದು, ದಿನದಿಂದ ದಿನಕ್ಕೆ ನಿಜವಾದ ಸ್ನೇಹಿತರು ದುಬಾರಿಯಾಗುತ್ತಿದ್ದಾರೆ ಗೊತ್ತಿರಲಿ.
3. ಬಳಸುವ ಭಾಷೆಯ ಬಗ್ಗೆ ಎರಡು ಬಾರಿ ಯೋಚನೆ ಮಾಡಬೇಕು. ಜಾತಿ-ಧರ್ಮ, ಹೆಣ್ಣು-ಗಂಡು ಮೊದಲಾದ ಭಾವುಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವಾಗ ಇನ್ನಷ್ಟು ಎಚ್ಚರ ವಹಿಸಬೇಕು. ತಕ್ಷಣದ ಸಿಟ್ಟಿನ ಕೈಗೆ ಬುದ್ದಿ ಕೊಡಬೇಡಿ. ಬಾಣ ಕೈಯಿಂದ ಜಾರಿಹೋದ ನಂತರ ಅದು ನೇರವಾಗಿ ಗುರಿಯಿಟ್ಟವರ ಎದೆಯಲ್ಲಿ ನೆಟ್ಟುಬಿಡುತ್ತದೆ. ಎಲ್ಲರೂ ಅದನ್ನು ಕ್ಷಮಿಸುವಷ್ಟು ಉದಾರಿಯಾಗಿರುವುದಿಲ್ಲ.
4. ಟ್ಯಾಗ್ ಮಾಡಿದ ಬರಹಕ್ಕೆ ಇಲ್ಲವೇ ಯಾರದೋ ಪ್ರತಿಕ್ರಿಯೆ ರೂಪದ ಸ್ಟೇಟಸ್ ಬಗ್ಗೆ ಪ್ರತಿಕ್ರಿಯಿಸುವಾಗ ಎಚ್ಚರವಹಿಸುವುದು ಒಳ್ಳೆಯದು. ಮೂಲಬರಹವನ್ನು ಹುಡುಕಿ ಓದಿತಿಳಿದುಕೊಂಡು ಪ್ರತಿಕ್ರಿಯಿಸುವುದು ಜಾಣತನ. ಇಲ್ಲದೆ ಹೋದರೆ ಯಾರಿಗೋ ಬಿಡಬೇಕಾದ ಬಾಣ ಅನ್ಯಾಯವಾಗಿ ಇನ್ಯಾರಿಗೋ ತಗಲಿ ಘಾಸಿಯಾಗುವ ಸಂಭವ ಹೆಚ್ಚು.
5. ಇದೇ ರೀತಿ ಪ್ರತಿಕ್ರಿಯೆಗಳಿಗೆ ಪ್ರತಿಕ್ರಿಯೆ ಕೊಡುವಾಗ ಜಾಗರೂಕರಾಗಿಬೇಕು. ಒಮ್ಮೊಮ್ಮೆ ಪ್ರತಿಕ್ರಿಯಿಸುವವರು ಪೂರ್ವಗ್ರಹ ಪೀಡಿತರಾಗಿ ಮೂಲಬರಹದಲ್ಲಿನ ವಿಚಾರಗಳನ್ನು ನಿರ್ಲಕ್ಷಿಸಿ ತಮ್ಮ ಅಭಿಪ್ರಾಯಗಳನ್ನು ಮೂಲ ಬರಹಗಾರರ ಮೇಲೆ ಆರೋಪಿಸಿ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಇದರಿಂದಾಗಿ ಮೂಲಬರಹಗಾರ ಪ್ರತಿಕ್ರಿಯಿಸಿದ ತನ್ನ ಗೆಳೆಯರನ್ನೇ ತಪ್ಪಾಗಿ ತಿಳಿದುಕೊಳ್ಳುವ ಅಪಾಯ ಇದೆ.
6.ದಯವಿಟ್ಟು ಫೇಸ್ ಬುಕ್ ನಲ್ಲಿ ಸಕ್ರಿಯವಾಗಿರುವವರು ಮಾತ್ರ ವಿವಾದಗಳಿಗೆ ಪ್ರತಿಕ್ರಿಯಿಸಿ. ಅಪರೂಪಕ್ಕೊಮ್ಮೆ ಫೇಸ್ ಬುಕ್ ತೆರೆಯುವವರು ಅಲ್ಲಿರುವ ಯಾವುದೇ ಸ್ಟೇಟಸ್ ಗೆ ಪ್ರತಿಕ್ರಿಯಿಸಿದರೆ ಅನಾಹುತ ಖಂಡಿತ. ಅದರಿಂದ ದೂರ ಇರಿ. ಸಾಧ್ಯವಾದರೆ ಅವರಿಗೆ ನೇರವಾಗಿ ಮೇಲ್ ಮಾಡಿ ಬಿಡಿ ಇಲ್ಲವೆ ಮಾತನಾಡಿ .
7.ಭಾಷಣಗಳ ಬಗ್ಗೆ ಪ್ರಕಟವಾದ ವರದಿಗಳ ಬಗ್ಗೆ ಪ್ರತಿಕ್ರಿಯಿಸುವಾಗ ಇನ್ನೂ ಹೆಚ್ಚಿನ ಎಚ್ಚರ ವಹಿಸಬೇಕು. ಪತ್ರಕರ್ತರು ಸರ್ವಜ್ಞರಲ್ಲ ಅವರೂ ತಪ್ಪು ಮಾಡುತ್ತಾರೆ. ಕೆಲವು ಕಿಡಿಗೇಡಿಗಳು ದುರುದ್ದೇಶದಿಂದಲೇ ತಪ್ಪು ಮಾಡಿರುತ್ತಾರೆ. ಇಷ್ಟು ಮಾತ್ರ ಅಲ್ಲ, ಭಾಷಣಕಾರನ ಧ್ವನಿಯ ಏರಿಳಿತ, ನೀಡುವ ಒತ್ತು ಎಲ್ಲವನ್ನೂ ಬರಹ ರೂಪದಲ್ಲಿ ವರದಿ ಮಾಡಲಾಗುವುದಿಲ್ಲ. ವರದಿಯಾಗಿರುವ ಒಂದು ವಾಕ್ಯದ ಪೂರ್ವದಲ್ಲಿ ಇಲ್ಲವೆ ಕೊನೆಯಲ್ಲಿ ಇನ್ನೆರಡು ವಾಕ್ಯಗಳು ಇದ್ದಿರಬಹುದು. ಅದನ್ನು ವರದಿಗಾರ ಸದುದ್ದೇಶ ಇಲ್ಲವೆ ದುರುದ್ದೇಶದಿಂದ ಕೈಬಿಟ್ಟಿರಬಹುದು. ಇದರಿಂದ ಭಾಷಣಕಾರನ ಮೂಲ ಆಶಯ ವರದಿಯಲ್ಲಿ ವ್ಯಕ್ತವಾಗದೆ ಹೋಗಬಹುದು.
ಭಾಷಣಗಳಿಗೆ ಪ್ರತಿಕ್ರಿಯಿಸಲೇ ಬೇಕೆಂದಿದ್ದರೆ ಅಡಿಯೋ ಕ್ಲಿಪ್ಪಿಂಗ್ಸ್ ತರಿಸಿಕೊಂಡು ಕೇಳುವುದು ಇಲ್ಲವೆ ಸಭೆಯಲ್ಲಿ ಹಾಜರಿದ್ದ ಗೆಳೆಯರ ಜತೆ ತಿಳಿದುಕೊಳ್ಳುವುದು ಕ್ಷೇಮ.
- ಸದ್ಯಕ್ಕೆ ಕಲಿತದ್ದರಲ್ಲಿ ನೆನಪಿದ್ದ ಪಾಠಗಳಿಷ್ಟು, ಬದುಕು ನಿರಂತರವಾಗಿ ಪಾಠಗಳನ್ನು ಕಲಿಸುತ್ತಲೇ ಇರುತ್ತದೆ. ನಾನು ಕಲಿತಾಗಲೆಲ್ಲ ನಿಮಗೆ ತಿಳಿಸುವ ಪ್ರಯತ್ನ ಮಾಡುತ್ತೇನೆ. ಇವೆಲ್ಲವೂ ನಿಮಗೆ ಗೊತ್ತಿರುವ ಪಾಠಗಳೇ ಆಗಿವೆ. ನೆನೆಪಿಸುವ ಪ್ರಯತ್ನವನ್ನಷ್ಟೇ ಮಾಡಿದ್ದೇನೆ. ನಮಸ್ಕಾರ

Sunday, August 24, 2014

ಅನಂತಮೂರ್ತಿಯವರಿಗೆ ಭಾವಪೂರ್ಣ ಶೃದ್ಧಾಂಜಲಿ

   ಸಮಾಜದಲ್ಲಿ ದುಷ್ಟರಿಗಿಂತ ಸಜ್ಜನರ ಸಂಖ್ಯೆ ಹೆಚ್ಚು ಎನ್ನುವುದಕ್ಕೆ ಯಾವ ಗಣತಿಯನ್ನೂ ನಡೆಸಬೇಕಾಗಿಲ್ಲ. ಹಾಗಿಲ್ಲದೆ ಹೋಗಿದ್ದರೆ ನಮ್ಮ ಸಮಾಜ ನಾವೆಲ್ಲ ಬದುಕುವಷ್ಟು ಸಹನೀಯವಾಗುತ್ತಿರಲಿಲ್ಲ. ಆದರೆ ಬಹುಸಂಖ್ಯೆಯ ಸಜ್ಜನರು ಮೌನಧಾರಿಗಳು, ದುಷ್ಟರು ಮಾತ್ರ ಕೂಗುಮಾರಿಗಳು. ಈ ಕಾರಣದಿಂದಾಗಿಯೇ ಒಂದಷ್ಟು ಜಾಗೃತ ಸಜ್ಜನರಿಗೆ ನಾವು ಒಂಟಿ, ಅಸಹಾಯಕರು ಮತ್ತು ದುರ್ಬಲರು ಎಂದು ಅನಿಸಿಬಿಡುತ್ತದೆ. ಇದು ಹಲವಾರು ಬಾರಿ ಹತಾಶೆ, ಸಿನಿಕತೆ ಮತ್ತು ಅತಿರೇಕದ ನಿಲುವುಗಳಿಗೆ ಪ್ರೇರಣೆಯಾಗುತ್ತಿದೆ.
    ಮೊನ್ನೆ ಸಂಜೆ ಹೆಚ್ಚು ಕಡಿಮೆ ನನ್ನ ಕಣ್ಣೆದುರೇ ಯು.ಆರ್.ಅನಂತಮೂರ್ತಿಯವರು ಸಾವಿನೆಡೆಗೆ ಸರಿದುಹೋದಾಗ ನಮ್ಮ ಆತ್ಮಸಾಕ್ಷಿಯ ಒಂದು ಬಹುದೊಡ್ಡ ಭಾಗ ಕೂಡಾ ಹೊರಟುಹೋಯಿತು ಎಂದು ಅನಿಸಿ ನನ್ನೊಡಲು ವಿಲವಿಲನೆ ಒದ್ದಾಡಿದ್ದು ಈ ಕಾರಣಕ್ಕೆ. ತಾನಾಡಿದ ಮಾತು ತಮ್ಮ ವಿರೋಧಿಗಳನ್ನು ಕೆರಳಿಸುತ್ತದೆ, ಅವರು ತಮ್ಮನ್ನು ಮಾನಸಿಕವಾಗಿ ಕುಗ್ಗಿಸಲು ನಾನಾಬಗೆಯ ಹೀನತಂತ್ರಗಳನ್ನು ನಡೆಸುತ್ತಾರೆ ಎಂದು ಅನಂತಮೂರ್ತಿಯವರಿಗೆ ಗೊತ್ತಿತ್ತು. ಮಾನಸಿಕವಾದ ಹಿಂಸೆ ದೈಹಿಕವಾಗಿಯೂ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ತಿಳಿದಿತ್ತು. ಹಾಗಿದ್ದರೂ ಅವರು ವಿವಾದಗಳನ್ನು ಆಹ್ಹಾನಿಸಿಕೊಂಡೇ ಬದುಕಿದರು.
    ತಮ್ಮ ಹೇಳಿಕೆ ಕುರಿತಂತೆ ಸೃಷ್ಟಿಯಾಗಿರುವ ವಿವಾದದ ಬಗ್ಗೆ ಪತ್ರಕರ್ತರು ಪ್ರತಿಕ್ರಿಯೆ ಬಯಸಿದಾಗ ಅವರು ನನಗೆ ಪೋನ್ ಮಾಡುತ್ತಿದ್ದರು. ಅವರ ಅನಾರೋಗ್ಯದ ಸ್ಥಿತಿಯನ್ನು ನೋಡುತ್ತಾ ಬಂದ ನಾನು ‘
    ನಮ್ಮ ಸಜ್ಜನ ಮೌನಧಾರಿಗಳೇನು ಕೆಟ್ಟವರಲ್ಲ, ಅವರು ಊರ ಉಸಾಬರಿ ನಮಗ್ಯಾಕೆ? ಎನ್ನುವ ಮನೋಭಾವದವರು, ಯಾವುದೇ ವಿಷಯ-ಘಟನೆ-ಬೆಳವಣಿಗಳ ಬಗ್ಗೆ ಅವರಲ್ಲಿ ಸ್ವಂತದ್ದೊಂದು ಅಭಿಪ್ರಾಯ ಇರುವುದಿಲ್ಲ. ಈ ಆರೋಪ ನಮ್ಮ ಬಹಳಷ್ಟು ಸಾಹಿತಿಗಳು ಮುಖ್ಯವಾಗಿ ಇತ್ತೀಚಿನ ತಲೆಮಾರಿನ ಸಾಹಿತಿಗಳ ಬಗ್ಗೆಯೂ ಇದೆ. ಅನಂತಮೂರ್ತಿಯವರ ಸಾವು ‘ತುಂಬಿಕೊಳ್ಳಲಾಗದ ನಷ್ಟ’ ಎಂದು ಅನಿಸುವುದು ಈ ಕಾರಣಕ್ಕೆ.
    ಅನಂತಮೂರ್ತಿಯವರ ಸಾವಿನ ನಷ್ಟವನ್ನು ಭರಿಸುವುದಕ್ಕೆ ನಮ್ಮೆದುರು ಇರುವ ಏಕೈಕ ದಾರಿಯೆಂದರೆ ಸಜ್ಜನರೆನಿಸಿಕೊಂಡವರು ಮೌನದ ಕಂಬಳಿ ಕಿತ್ತೊಗೆದು ಮಾತನಾಡಲು ಶುರು ಮಾಡುವುದು. ಅನಂತಮೂರ್ತಿಯವರಂತೆಯೇ ಯಾವುದೇ ಟೀಕೆ-ಟಿಪ್ಪಣಿ, ಅಪಪ್ರಚಾರಕ್ಕೆ ಜಗ್ಗದೆ ತಮಗೆ ಸರಿ ಕಂಡದ್ದನ್ನು ಅಂಜದೆ, ಅಳುಕದೆ ಅಭಿವ್ಯಕ್ತಿಸುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಶ್ರದ್ದಾಂಜಲಿ. ಈ ಮೂಲಕವೇ ನಾವು ಅನಂತಮೂರ್ತಿಯವರನ್ನು ಜೀವಂತವಾಗಿಡಬೇಕಾಗಿದೆ, ಅವರಿಗಾಗಿ ಅಲ್ಲ, ನಮಗಾಗಿ.
    ಕೊನೆ ಕ್ಷಣ: ಸಾವಿನ ಎರಡು ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಯ ಐಸಿಯುನಲ್ಲಿ ದೇಹದ ತುಂಬೆಲ್ಲಾ ನಳಿಕೆಗಳನ್ನು ಪೋಣಿಸಿಕೊಂಡು ಮಲಗಿದ್ದ ಅನಂತಮೂರ್ತಿಯವರು ನನ್ನ ಕೈ ಹಿಡಿದು ‘ಮೈ ಬಾಡಿ ಈಸ್ ಫೈಟಿಂಗ್ ದಿನೇಶ್’ ಎಂದರು. ಆಗಲೂ ಅವರಿಗೆ ಅವರ ‘ಮೈಂಡ್’ನ ಆರೋಗ್ಯದ ಬಗ್ಗೆ ವಿಶ್ವಾಸ ಇತ್ತು. ಮಾನಸಿಕ ಶಕ್ತಿ ಮೂಲಕವೇ ದೇಹಕ್ಕೆ ತಗಲಿರುವ ರೋಗವನ್ನು ಗೆಲ್ಲಬಹುದೆಂಬ ಆತ್ಮ ವಿಶ್ವಾಸವನ್ನು ಅವರು ಹೊಂದಿದ್ದರು. ಅದು ಗೊತ್ತಿದ್ದ ನಾನು ‘ಯುವರ ಮೈಂಡ್ ಈಸ್ ಫೈಟಿಂಗ್ ಸರ್’ ಎಂದೆ. ನನ್ನ ಅಂಗೈಯನ್ನು ಅಮುಕಿ ನಕ್ಕರು. ಜೀವಂತವಾಗಿ ಅವರನ್ನು ನೋಡಿದ್ದು ಅದೇ ಕೊನೆ. ಎರಡು ದಿನಗಳ ನಂತರ ಹೋದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಎಷ್ಟೇ ಅನಾರೋಗ್ಯದಿಂದಿರಲಿ, ಡಯಾಲಿಸಿಸ್ ಮಾಡಿಸಿಕೊಳ್ಳುತ್ತಲೇ ಇರಲಿ, ಅವರಲ್ಲಿಗೆ ಹೋದಾಗ ಮಾತನಾಡದೆ ಎಂದೂ ನನ್ನನ್ನು ವಾಪಸ್ ಕಳುಹಿಸುತ್ತಿರಲಿಲ್ಲ. ಸಾವಿನ ಹಿಂದಿನ ದಿನ ಹೋಗಿದ್ದಾಗ ಮಾತ್ರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಅದರ ನಂತರ ಕಣ್ಣು ತೆರೆಯಲೇ ಇಲ್ಲ. ಮೌನಹೊದ್ದು ಮಲಗಿದ್ದ ಅನಂತಮೂರ್ತಿಯವರನ್ನು ನಾನು ನೋಡಲೇ ಬಾರದಿತ್ತು. ನನ್ನೊಡನೆ ಮಾತನಾಡಿದ್ದ ಅನಂತಮೂರ್ತಿಯವರ ಭೇಟಿಯೇ ಕೊನೆಯದಾಗಬೇಕಿತ್ತು ಎಂದು ತೀವ್ರವಾಗಿ ಅನಿಸುತ್ತಿದೆ. ಮೌನಿ ಅನಂತಮೂರ್ತಿಯವರನ್ನು ನಾನು ಊಹಿಸಿಕೊಳ್ಳುವುದೂ ಸಾಧ್ಯ ಇಲ್ಲ..
    ಹೋಗ್ಲಿ ಬಿಡಿ ಸಾರ್, ವಿವಾದ ಬೆಳೆಸಲು ಹೋಗಬೇಡಿ, ಸುಮ್ಮನೆ ನಿಮಗೆ ಕಿರಿಕಿರಿ’ ಎನ್ನುತ್ತಿದ್ದೆ. ಆದರೆ ಮರುಕ್ಷಣದಲ್ಲಿಯೇ ಯಾವುದಾದರೂ ಟಿವಿ ಚಾನೆಲ್ ನಲ್ಲಿ ಅವರ ಸಂದರ್ಶನ ಪ್ರಸಾರವಾಗುತ್ತಿತ್ತು. ಇದು ಅನಂತಮೂರ್ತಿ. ಅವರ ಹೇಳಿಕೆಗಳನ್ನು ನೋಡಿ ಕೆಲವರು ಅವರನ್ನು ಪ್ರಚಾರಪ್ರಿಯರು ಎಂದು ಟೀಕಿಸಿದ್ದೂ ಉಂಟು. ಆದರೆ ಪ್ರಚಾರಪ್ರಿಯರು ತಮಗೆ ಹಿತವಾದುದೇ ಪ್ರಚಾರವಾಗಲಿ ಎಂದು ಬಯಸುತ್ತಾರೆ, ಯಾವ ಪ್ರಚಾರಪ್ರಿಯ ಅನಂತಮೂರ್ತಿಯವರಂತೆ ‘ಹೇಟ್ ಕ್ಯಾಂಪೇನ್’ಗೆ ತಮ್ಮನ್ನು ಒಡ್ಡಿಕೊಳ್ಳಲು ಇಷ್ಟಪಡುತ್ತಾರೆ?

Thursday, July 3, 2014

Media advisor to Karnataka CM visits Kannadiga journalists association

News and pics: Rons Bantwal
Daijiworld Media Network- Mumbai (EP)

Mumbai, June 3: “It is sad that many newspapers have closed down as they were being sold at a low cost. It is necessary to encourage the minor regional newspapers. Media should be pro people. Journalists should be the hope of the masses instead of misleading them," said senior journalist and media adviser to the Chief Minister Dinesh Amin Mattu.

"You are bound to succeed if you proceed believing in the history of journalism. While reading is the strength of journalists, questions
are their weapon. However stay away from asking questions in a taunting manner," he added.


Dinesh Amin spoke during his visit to the association of Kannadiga journalists at Santa Cruz east on Saturday morning May 31.

In the meeting presided by Chandrashekar Palethady, president of Kannadiga Journalist's association, senior journalists and columnists
Ravi R Anchan, Gregory L Almeida advisor to the association and businessman Sudhakar Uchil were present on the dais. Paledthady and
other office bearers lauded several decades of service by Dinesh Mattu and felicitated him with a shawl, memento and a bouquet.

"The work of giving suggestions is being considered as a work of revenge these days. In these circumstances, it is heartening to see the
association of journalists recognizing my service of giving suggestions and correcting the society. The land of Mumbai is known
for adventure. It is also a land that gives success to those who struggle. It is ideal for the common man. People prefer such places. It
is a matter of pride to know of an association that is indulged in loving and serving Tulu-Kannadigas. The people here are unity oriented
and they are proceeding with social responsibility," he said.

"In this age when newspapers are unable to be pro readers and people, they owe something to the readers. While only courts and media can create opposition force, newspapers should inform the truth. They should not be sold as a means of misleading information. They should not be controlled by paid news channels. You can contact me for healthy discussions on Maharastra-Karnataka state's media colleagues," he added.

"It is a matter of pride that the association is active for the betterment of journalists. It should develop the novelty in journalism and new journalists. It should think of the middle class people. Let the association identify thoughts on a grass root level and be service oriented," he concluded.

Chandrashekar Palethady in his presidential address emphasized on the need for a newspaper bhavan for the activities of the association.

Rons Bantwal, the honorary secretary gave an introductory speech saying, "May 31, 2014 is a memorable day for the Mumbai- Kannadiga journalism. Well known journalist, columnist and media adviser of Chief Minister Siddaramaiah, Dinesh Amin Mattu has visited the Patrika Bhavan of the Sangha on his own. Mattu was born in Hejmady and passed his primary and high school education there amidst poverty."

Sangha secretary Harish K Hejmady welcomed and compeered the programme. Working committee member Sham M Hande proposed the vote of thanks. Joint secretary Pramnath B Shetty Mundkoor, committee member Gurudatt Poonja Mundkoor, sports committee president Jaya C Bhandary, Vishwanath Amin Niddodi, Ramesh Udyavara, Sridhar Uchil, S Daya, Harry R Sequeira, Arif Kalkatta and Vasanth Poojary were present and participated in the questions and answer session.

                                                                                                                                                              (Source: Daijiworld webiste)

Friday, November 22, 2013

21 ನವೆಂಬರ್ 2013ರಂದು ಮಂಗಳೂರು ವಿವಿಯ ಕನಕದಾಸ ಅಧ್ಯಯನ ಪೀಠದ 10ರ ಸಂಭ್ರಮ ಹಾಗೂ "ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ" ದ ಸಂವಾದ ಕಾರ್ಯಕ್ರಮ







21 ನವೆಂಬರ್ 2013ರಂದು ಮಂಗಳೂರು ವಿವಿಯ ಕನಕದಾಸ ಅಧ್ಯಯನ ಪೀಠದ 10ರ ಸಂಭ್ರಮ ಹಾಗೂ "ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ" ದ ಸಂವಾದ ಕಾರ್ಯಕ್ರಮ (ವಾತಾ೯ಭಾರತಿ)

ಮಂಗಳೂರು ವಿವಿಯ ಕನಕದಾಸ ಅಧ್ಯಯನ ಪೀಠ 10 ಸಂಭ್ರಮ ಹಾಗೂ "ಕನಕ ತತ್ವ ಚಿಂತನ ಪ್ರಚಾರೋಪನ್ಯಾಸ" ದ ಸಂವಾದ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಉದ್ಘಾಟಿಸಿ ಮಾತನಾಡುತ್ತಿರುವುದು

Tuesday, October 29, 2013

29-10-2013ರಂದು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಪ.ಜಾತಿ, ಪ.ಪಂಗಡಗಳ ಸಂಘಟನೆ ಆಯೋಜಿಸಿದ್ದ ಬಾಬಾ ಸಾಹೇಬ ಅಂಬೇಡ್ಕರ್ ಅವರ 122ನೇ ಜಯಂತಿ ಕಾಯ೯ಕ್ರಮ

ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಪ.ಜಾತಿ, ಪ.ಪಂಗಡಗಳ ಸಂಘಟನೆ ಆಯೋಜಿಸಿದ್ದ ಬಾಬಾ ಸಾಹೇಬ ಅಂಬೇಡ್ಕರ್ ಅವರ ೧೨೨ನೇ ಜಯಂತಿ ಕಾಯ೯ಕ್ರಮದಲ್ಲಿ ಮಾತನಾಡುತ್ತಿರುವುದು.

ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಪ.ಜಾತಿ, ಪ.ಪಂಗಡಗಳ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. 

Monday, October 28, 2013

28-10-2013ರಂದು ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಯುಜಿಸಿ ಆಯೋಜಿಸಿದ್ದ "ಮಾಧ್ಯಮ ಮತ್ತು ಸಾಮಾಜಿಕ ಅಭಿವೃದ್ಧಿ - ಕನಾ೯ಟಕ ಒಂದು ಅಧ್ಯಯನ" ಸಮಾರಂಭ

ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿ ಮಾನ್ಯರು.

ಯುಜಿಸಿ ಹಾಗೂ ಮೈಸೂರು ವಿವಿ ಹೊರತಂದ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡುತ್ತಿರುವ ಅತಿಥಿ ಮಾನ್ಯರು.

ಯುಜಿಸಿ ಹಾಗೂ ಮೈಸೂರು ವಿವಿ ಹೊರತಂದ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಮಾತನಾಡುತ್ತಿರುವುದು.

Wednesday, October 23, 2013

23-10-13ರಂದು ಬೆಂಗಳೂರಿನ ಹೊರವಲಯದಲ್ಲಿ ಆಯೋಜಿಸಿದ್ದ ‘ರಂಗಕಹಳೆ’ ಮಕ್ಕಳ ಮನೆ ಕಾಯ೯ಕ್ರಮ.

23-10-2013ರಂದು ಬೆಂಗಳೂರಿನ ಹೊರವಲಯದಲ್ಲಿ ಆಯೋಜಿಸಿದ್ದ ‘ರಂಗಕಹಳೆ’ ಮಕ್ಕಳ ಮನೆ ಕಾಯ೯ಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮಿನ್ ಮಟ್ಟು ಅವರು ಸಸಿ ನೆಡುತ್ತಿರುವುದು.   
‘ರಂಗಕಹಳೆ’ ಮಕ್ಕಳ ಮನೆಯ ಸ್ಟುಡಿಯೋ ಉದ್ಘಾಟಿಸಿ ಮಾತನಾಡುತ್ತಿರುವುದು.
23-10-2013ರಂದು ಬೆಂಗಳೂರಿನ ಹೊರವಲಯದಲ್ಲಿ ಆಯೋಜಿಸಿದ್ದ ‘ರಂಗಕಹಳೆ’ ಕಾಯ೯ಕ್ರಮದಲ್ಲಿ ಮಾತನಾಡುತ್ತಿರುವುದು.

Sunday, October 6, 2013

06/10/2013 ತುಮಕೂರಿನ ಜನಪರ ಸಂಘಟನೆಗಳ ಒಕ್ಕೂಟವು ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಅಭಿನಂದನಾ ಸಮಾರಂಭ

6 ಅಕ್ಟೋಬರ್ 2013ರಂದು ತುಮಕೂರಿನ ಜನಪರ ಸಂಘಟನೆಗಳ ಒಕ್ಕೂಟವು ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ಅತಿಥಿ ಮಾನ್ಯರು.
6 ಅಕ್ಟೋಬರ್ 2013ರಂದು ತುಮಕೂರಿನ ಜನಪರ ಸಂಘಟನೆಗಳ ಒಕ್ಕೂಟವು ಆಯೋಜಿಸಿದ್ದ ವಿಚಾರ ಸಂಕಿರಣ ಮತ್ತು ಅಭಿನಂದನಾ ಸಮಾರಂಭದಲ್ಲಿ "ಪ್ರಜಾಪ್ರಭುತ್ವದ ಬಲಸಂವರ್ಧನೆಯಲ್ಲಿ ನಾಗರೀಕರ ಪಾತ್ರ" ವಿಷಯದ ಕುರಿತು ಮಾತನಾಡುತ್ತಿರುವುದು.



ಇದೇ ಸಂದಭ೯ದಲ್ಲಿ ಅಡ್ವೊಕೇಟ್ ಜನರಲ್ ಪ್ರೊ.ರವಿವಮ೯ಕುಮಾರ್ ಅವರನ್ನು ಸನ್ಮಾನಿಸಲಾಯಿತು.

Thursday, October 3, 2013

ಕೇರಳವೆಂಬ `ಹುಚ್ಚಾಸ್ಪತ್ರೆ'ಯಲ್ಲಿ ವಿವೇಕ ಬಿತ್ತಿದ ಗುರು

ವಾತಾ೯ಭಾರತಿಯ ದಿನಪತ್ರಿಕೆಯ 11ನೇ ವರ್ಷದ ವಿಶೇಷ ಸಂಚಿಕೆಯಲ್ಲಿ ಪ್ರಕಟಗೊಂಡ ಲೇಖನ.


     ಕನಾ೯ಟಕದ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಕೋಮುವಾದಿಗಳ ವಿರುದ್ದದ ಜಾತ್ಯತೀತರ ಗೆಲುವು ಎಂದು ವ್ಯಾಖ್ಯಾನಿಸುವವರಿದ್ದಾರೆ. ಇಲ್ಲ ಇದು ಒಂದು ಪಕ್ಷ ಸೋತು ಇನ್ನೊಂದು ಪಕ್ಷ ಗೆದ್ದ ಸಾಮಾನ್ಯ ರಾಜಕೀಯ ಬದಲಾವಣೆ ಎಂದು ಸರಳೀಕರಿಸುವವರೂ ಇದ್ದಾರೆ. ವಾಸ್ತವ ಎಲ್ಲೋ ಈ ಎರಡು ಅಭಿಪ್ರಾಯಗಳ ಮಧ್ಯೆ ಇದ್ದ ಹಾಗಿದೆ. ಇಂತಹ ಭಿನ್ನ ಅಭಿಪ್ರಾಯಗಳೇನಿದ್ದರೂ ಈ ಚುನಾವಣೆಯಲ್ಲಿ ನೆಲಕಚ್ಚಿದ ಕೋಮುವಾದಿ ರಾಜಕಾರಣ ಮತ್ತೆ ಜೀವಪಡೆಯದಂತೆ ನೋಡಿಕೊಳ್ಳುವ ಹೊಣೆ ರಾಜ್ಯದ ಎಲ್ಲ ಪ್ರಜ್ಞಾವಂತರ ಮೇಲಿದೆ. ಇದು ಸಾಧ್ಯವಾಗಬೇಕಾದರೆ 'ಕೋಮುವಾದ ರಾಜಕಾರಣ'ಕ್ಕೆ ವಿರುದ್ದವಾಗಿ 'ಸಾಮಾಜಿಕ ನ್ಯಾಯ'ದ ರಾಜಕಾರಣವನ್ನು ಕಟ್ಟುವ ಕೆಲಸ ನಡೆಸಬೇಕಾಗಿದೆ. ಈ ಮೂಲಕ ಕೋಮುವಾದ ರಾಜಕಾರಣ ಮಾಡುತ್ತಾ ಬಂದವರೂ ಅನಿವಾರ್ಯವಾಗಿ 'ಸಾಮಾಜಿಕ ನ್ಯಾಯ'ದ ರಾಜಕೀಯದ ಆಟದ ನಿಯಮಗಳನ್ನೇ ಪಾಲಿಸುವಂತೆ ಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಬೇಕಾಗಿದೆ.

     'ಸಾಮಾಜಿಕ ನ್ಯಾಯ'ದ ರಾಜಕಾರಣಕ್ಕೆ ದಾರಿತೋರಿಸಬಲ್ಲ ಅನೇಕ ಯಶಸ್ವಿ ಚಿಂತನೆಗಳ ಮಾದರಿಗಳು ನಮ್ಮ ಮುಂದಿವೆ. ಇವರಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ರಾಮಮನೋಹರ ಲೋಹಿಯಾ ಚಿಂತನೆಯ ಮಾದರಿಗಳ ಬಗ್ಗೆ ವಿಸ್ತೃತವಾದ ಚಚೆ೯ ಕನಾ೯ಟಕದಲ್ಲಿ ನಡೆದಿವೆ. ರಾಜ್ಯದಲ್ಲಿ ಹೆಚ್ಚು ಚಚೆ೯ಗೊಳಗಾಗದ ಇನ್ನೊಂದು ಮಾದರಿ ಕೇರಳದ ಸಮಾಜ ಸುಧಾರಕ ನಾರಾಯಣ ಗುರುಗಳ ಚಿಂತನೆಯದ್ದು. ನಾವಿಂದು ಕಾಣುತ್ತಿರುವ ಪುರೋಗಾಮಿ ಮತ್ತು ಪ್ರಗತಿಗಾಮಿ ಕೇರಳದ ರೂವಾರಿ ನಾರಾಯಣ ಗುರುಗಳು. ಅವರ ಪ್ರವೇಶಕ್ಕೆ ಮುನ್ನ ಹಿಂದೂ ಸಮಾಜದ ಸುಧಾರಣೆಯ ಪ್ರಯತ್ನದಲ್ಲಿದ್ದ ಸ್ವಾಮಿ ವಿವೇಕಾನಂದರೇ ಕೇರಳ ರಾಜ್ಯ ಒಂದು ಹುಚ್ಚಾಸ್ಪತ್ರೆ' ಎಂದು ಕೈಚೆಲ್ಲಿ ಹೋಗಿದ್ದರು. ಜಾತಿವ್ಯವಸ್ಥೆ ಆ ರೀತಿಯ ಭೀಕರ ಮನೋರೋಗಿಗಳನ್ನು ಅಲ್ಲಿ ಸೃಷ್ಟಿಸಿತ್ತು. ದೇವಸ್ಥಾನ ಪ್ರವೇಶ ದೂರವೇ ಉಳಿಯಿತು. ಅದರ ಎದುರಿನ ರಸ್ತೆಯಲ್ಲಿ ಕೂಡಾ ಅಸ್ಪೃಶ್ಯರು ನಡೆದಾಡುವಂತಿರಲಿಲ್ಲ. ಮಹಾತ್ಮ ಗಾಂಧೀಜಿ ಮತ್ತು ನಾರಾಯಣ ಗುರುಗಳ ನೇತೃತ್ವದಲ್ಲಿ ನಡೆದ ಐತಿಹಾಸಿಕ ವೈಕಂ ಸತ್ಯಾಗ್ರಹ ನಡೆದದ್ದು ದೇವಸ್ಥಾನ ಪ್ರವೇಶಕ್ಕಾಗಿ ಅಲ್ಲ, ಅದರ ಮುಂಭಾಗದ ರಸ್ತೆಯಲ್ಲಿ ನಡೆದಾಡುವ ಸ್ವಾತಂತ್ರ್ಯಕ್ಕಾಗಿ ಎಂಬುದು ಗಮನಾರ್ಹ. ಒಂದೆಡೆ ಮೂಡನಂಬಿಕೆ,ಕಂದಾಚಾರಗಳು, ಇನ್ನೊಂದೆಡೆ ಮೇಲ್ವರ್ಗದವರ ದೌರ್ಜನ್ಯದಿಂದ ಅಲ್ಲಿ ಬಹುಸಂಖ್ಯೆಯಲ್ಲಿರುವ ತಳಸಮುದಾಯ ನಲುಗಿಹೋಗಿತ್ತು.

     ಆದರೆ, ಇದೇ ಕೇರಳ ಇಂದು ದೇಶದಲ್ಲಿಯೇ ಅತ್ಯಂತ ಹೆಚ್ಚು ಸಾಕ್ಷರತೆ ಇರುವ ಮತ್ತು ಪ್ರಗತಿಪರ ಚಿಂತಕರಿರುವ ರಾಜ್ಯ. ಪ್ರಜಾಸತಾತ್ಮಕವಾಗಿ ಆಯ್ಕೆಯಾದ ದೇಶದ ಮೊದಲ ಹಾಗೂ ಜಗತ್ತಿನ ಎರಡನೇ ಕಮ್ಯೂನಿಸ್ಟ್ ಸಕಾ೯ರ ಅಸ್ತಿತ್ವಕ್ಕೆ ಬಂದದ್ದು ಕೇರಳದಲ್ಲಿ. ದೇಶ ವಿಭಜನೆ ಕಾಲದಲ್ಲಿ ಉತ್ತರ ಭಾರತ ಕೋಮುದಳ್ಳುರಿಯಲ್ಲಿ ಹತ್ತಿ ಉರಿಯುತ್ತಿದ್ದಾಗ ಶೇ.18ಕ್ಕೂ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ ಕೇರಳ ಶಾಂತವಾಗಿತ್ತು. ಅಡ್ವಾನಿಯವರ ರಥಯಾತ್ರೆಯ ನಂತರ ದೇಶಾದ್ಯಂತ ಕೋಮುಗಲಭೆ ಭುಗಿಲೆದ್ದಾಗಲೂ ಅಲ್ಲಿ ಯಾವ ಅಹಿತಕರ ಘಟನೆಗಳು ನಡೆಯಲಿಲ್ಲ. ದಕ್ಷಿಣದ ರಾಜ್ಯಗಳಲ್ಲಿ ಪ್ರಯಾಸಪಟ್ಟು, ಪ್ರವೇಶ ಪಡೆದ ಬಿಜೆಪಿಯನ್ನು ಈಗಲೂ ಹೊಸಲಿನಾಚೆ ನಿಲ್ಲಿಸಿರುವ ರಾಜ್ಯ ಕೇರಳ. ಕೇವಲ ನೂರು ವರ್ಷಗಳ ಅವಧಿಯಲ್ಲಿ ಕೇರಳದಲ್ಲಿ ನಡೆದ ಈ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗೆ ಕಾರಣಗಳನ್ನು ಶೋಧಿಸುತ್ತಾ ಹೋದರೆ ನಮ್ಮೆದುರು ನಿಧಾನವಾಗಿ ನಾರಾಯಣ ಗುರು ಎಂಬ ಸಂತ ನಡೆಸಿದ್ದ ಧಾಮಿ೯ಕ ಚಳುವಳಿ ತೆರೆದುಕೊಳ್ಳುತ್ತದೆ. ನಾರಾಯಣ ಗುರುಗಳು ಹುಟ್ಟಿ ಸರಿಯಾಗಿ ನೂರು ವರ್ಷಗಳ ಅವಧಿಯಲ್ಲಿ ಕೇರಳದಲ್ಲಿ ಮೊದಲ ಬಾರಿಗೆ ಕಮ್ಯುನಿಸ್ಟ್ ಸಕಾ೯ರ ಅಸ್ತಿತ್ವಕ್ಕೆ ಬಂತೆಂಬುದು ಉಲ್ಲೇಖನೀಯ. ನಾರಾಯಣ ಗುರುಗಳು ಪ್ರಾರಂಭಿಸಿದ ಧಾಮಿ೯ಕ ಸುಧಾರಣಾ ಚಳವಳಿಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಅವರ ಕಾರ್ಯತಂತ್ರ ಉಳಿದ ಸಮಾಜ ಸುಧಾರಕರಿಗಿಂತ ಯಾಕೆ ಭಿನ್ನವಾಗಿತ್ತು ಎಂಬ ಪ್ರಶ್ನೆಗಳಿಗೆ ಈ ಹಿನ್ನೋಟದಲ್ಲಿ ಉತ್ತರ ಇದೆ.

     ಒಂದು ಚಳವಳಿಯ ಸೋಲು-ಗೆಲುವು, ಅದರ ಸಿದ್ದಾಂತ, ಸಂಘಟನೆ ಮತ್ತು ಹೋರಾಟದ ನೆಲಗಳನ್ನು ಅವಲಂಭಿಸಿರುತ್ತೇ. ನಾರಾಯಣ ಗುರು ಚಳವಳಿಯ ಎಲ್ಲಾ ಮಗ್ಗಲುಗಳನ್ನು ಈ ರೀತಿ ಸಮಾಜ ವಿಜ್ಞಾನದ ಹಿನ್ನೆಲೆಯಲ್ಲಿ ಅಧ್ಯಯನ ನಡೆಸುವ ಪ್ರಯತ್ನ ಕನ್ನಡದಲ್ಲಿ ನಡೆದಿಲ್ಲ. ಈ ರೀತಿಯ ಅಧ್ಯಯನದ ಕೊರತೆಯಿಂದಾಗಿಯೇ ನಾರಾಯಣ ಗುರು ಒಬ್ಬರದ್ದೇ ವೈಭವೀಕರಣ ನಡೆದು ಆ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನಾರಾಯಣ ಗುರುಗಳ, ಅನೇಕ ಅನುಯಾಯಿಗಳ ಪರಿಚಯ ಹೊರಜಗತ್ತಿಗೆ ಆಗಿಲ್ಲ.

   
ನಾರಾಯಣ ಗುರು ಚಳವಳಿ, ಪ್ರಮುಖವಾಗಿ ಐದು ಹಂತಗಳಲ್ಲಿ ನಡೆಯಿತು.ಮೊದಲನೆಯದು ಡಾ.ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ, ಎರಡನೇಯದ್ದು ನಾರಾಯಣ ಗುರು ನೇತೃತ್ವದ ಸಾಮಾಜಿಕ ಸುಧಾರಣೆ, ಮೂರನೆಯದ್ದು ಕುಮಾರನ್ ಆಶಾನ್ ನೇತೃತ್ವದ ಸಕಾ೯ರಿ ಶಾಲೆಗಳಲ್ಲಿ ಪ್ರವೇಶಕ್ಕಾಗಿ ನಡೆದ ಚಳವಳಿ, ನಾಲ್ಕನೇಯದ್ದು ಟಿ.ಕೆ ಮಾಧವನ್ ನೇತೃತ್ವದಲ್ಲಿ ದೇವಾಲಯಗಳ ಪ್ರವೇಶ ಮತ್ತು ಅಸ್ಪೃಶ್ಯತೆಯ ವಿರುದ್ಧ ನಡೆದ ಚಳವಳಿ ಹಾಗೂ ಕೊನೆಯದ್ದು, ಸಿ.ಕೇಶವನ್ ನೇತೃತ್ವದಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆದ ಹೋರಾಟ. ಈ ಎಲ್ಲಾ ಹೋರಾಟಗಳು ನಾರಾಯಣ ಗುರುಗಳ ಸಿದ್ಧಾಂತ ನೆಲೆಗಟ್ಟಿನ ಮೇಲೆಯೇ ನಡೆದಿವೆ.

     ಧಾಮಿ೯ಕ ಸುಧಾರಣೆಯ ಮೂಲಕ ಪ್ರಾರಂಭಗೊಂಡ ನಾರಾಯಣ ಗುರು ಚಳವಳಿ ಕಾಲ ಸರಿದಂತೆ ಶೈಕ್ಷಣಿಕ, ಆಥಿ೯ಕ ಮತ್ತು ರಾಜಕೀಯ ಆಯಾಮಗಳನ್ನು ಪಡೆದುಕೊಂಡು ಬೆಳೆಯುತ್ತಾ ಹೋಗಿದ್ದು ಆಕಸ್ಮಿಕವಲ್ಲ, ಅದು ಗುರುಗಳೇ ರೂಪಿಸಿದ ಕಾರ್ಯ ತಂತ್ರವೇನೋ ಎಂಬ ಅನುಮಾನ ಮೂಡುತ್ತದೆ.. ಸಮಾಜದ ಅಮೂಲಾಗ್ರ ಬದಲಾವಣೆ ಎಂದರೆ, ಪ್ರಮುಖವಾಗಿ ಆಥಿ೯ಕ ಮತ್ತು ಸಾಮಾಜಿಕ ಬದಲಾವಣೆ ಎಂಬುದನ್ನು ನಾರಾಯಣ ಗುರು ಅರಿತಿದ್ದರು. ಇಂತಹ ಬದಲಾವಣೆಗೆ ಸಮುದಾಯದ ಮನಸ್ಸನ್ನು ಸಿದ್ದಗೊಳಿಸುವ ಪ್ರಾಥಮಿಕ ಕಾರ್ಯವನ್ನು ಅವರು ದೇವಾಲಯಗಳ ಸ್ಥಾಪನೆ ಮೂಲಕ ಮಾಡಿದರು.

     ಅಸ್ಪೃಶ್ಯತೆಯ ವಿರುದ್ಧದ ಹೋರಾಟಗಳಲ್ಲಿ ದೇವಸ್ಥಾನ ಪ್ರವೇಶ ಚಳವಳಿಯದ್ದು ಪ್ರಮುಖ ಪಾತ್ರವಾದರೆ, ನಾರಾಯಣ ಗುರುಗಳು ಅದನ್ನೇ ಕೈಬಿಟ್ಟಿದ್ದರು. ಅವರು ಅವಣಿ೯ಯರ ಒಡೆತನದ ದೇವಾಲಯ ಪ್ರವೇಶಿಸಲಿಲ್ಲ. ಅದನ್ನು ಬಹಿಷ್ಕರಿಸಿದರು. ಮತ್ತು ಅವಣಿ೯ಯ ದೇವಾಲಯಗಳನ್ನು ಸ್ಥಾಪಿಸಿದರು. ಆದರೆ, ಅವರು ಮತ್ತೊಂದು ಧರ್ಮವನ್ನು ಕೂಡ ಸ್ಥಾಪಿಸಲು ಹೋಗಲಿಲ್ಲ.

     ಮೊದಲು ದೇವಸ್ಥಾನ ಪ್ರವೇಶ ಚಳವಳಿ ನಡೆಸದೆ, ದೇವಸ್ಥಾನ ನಿಮಿ೯ಸುವ ಅವರ ಕಾರ್ಯತಂತ್ರ ಎರಡು ರೀತಿಯಲ್ಲಿ ಅವರಿಗೆ ನೆರವಾಯಿತು. ದೇವಸ್ಥಾನ ಪ್ರವೇಶ ಹೋರಾಟಕ್ಕೆ ಎದುರಾಗುವ ಪ್ರತಿಭಟನೆಯನ್ನು ಎದುರಿಸುವ ಸಂಘಟನಾ ಶಕ್ತಿ ಅಸ್ಪೃಶ್ಯರಲ್ಲಿ ಆಗಿನ್ನೂ ಇರಲಿಲ್ಲ ಎಂದು ನಾರಾಯಣ ಗುರುಗಳಿಗೆ ತಿಳಿದಿತ್ತು. ನಾರಾಯಣ ಗುರು ಮೊದಲ ದೇವಸ್ಥಾನ ಸ್ಥಾಪಿಸಿದ ಮೂವತ್ತಾರು ವರ್ಷಗಳ ನಂತರ ದೇವಾಲಯಗಳ ಮುಂಭಾಗದ ರಸ್ತೆಗಳಲ್ಲಿ ನಡೆಯುವ ಹಕ್ಕಿಹಾಗಿ ನಡೆದ ವೈಕಂ ಸತ್ಯಾಗ್ರಹಕ್ಕೆ ಎದುರಾದ ಪ್ರತಿಭಟನೆಯನ್ನು ನೋಡಿದರೆ, ಇದು ಸ್ಪಷ್ಟವಾಗುತ್ತದೆ.

     ದೇವಸ್ಥಾನದ ಸ್ಥಾಪನೆಯನ್ನು ಪ್ರಶ್ನಿಸಿದ ಪುರೋಹಿತರಿಗೆ ನಾನು ಸ್ಥಾಪಿಸಿದ್ದು ಈಳವರ ಶಿವ ಎಂಬ ಮಾಮರ್ಿಕ ಉತ್ತರ ಕೊಟ್ಟು ಗುರುಗಳು ಯುದ್ದಕ್ಕೆ ಬಂದ ಅವರನ್ನು ಶಸ್ತ್ರಪ್ರಯೊಗವಿಲ್ಲದೆಯೇ ನಿಶ್ಯಸ್ತ್ರಗೊಳಿಸಿದರು. ಅದೇ ರೀತಿ, ಸಹಸ್ರಾರು ವರ್ಷಗಳಿಂದ ತಮ್ಮಿಂದ ದೂರವೇ ಉಳಿದಿದ್ದ ದೇವಸ್ಥಾನಗಳಿಗೆ ಪ್ರವೇಶಿಸಲು ಅಡ್ಡಿಯಾಗುವ ಸಾಂಪ್ರದಾಯಿಕ ಮನಸ್ಸಿನ ಹಿಂಜರಿಕೆ ಹಾಗೂ ಭೀತಿಯಿಂದಲೂ ಕೆಳವರ್ಗದ ಜನರನ್ನು ಅವರು ಮುಕ್ತಗೊಳಿಸಿದರು. ದೇವಾಲಯಕ್ಕೆ ಹೋಗುವ ಹಕ್ಕು ನಿಮಗಿಲ್ಲವಾದರೆ, ದೇವಾಲಯವನ್ನೇ ನಮ್ಮಲ್ಲಿಗೆ ತರುತ್ತೇನೆ ಎಂದು ಅಸ್ಪೃಶ್ಯರಿಗೆ ಪೂಜೆಯ ಹಕ್ಕನ್ನು ನಡುವ ಮೂಲಕ ಅವರಲ್ಲಿ ಸ್ವಾಭಿಮಾನ ಜಾಗೃತಿಗೆ ಕಾರಣರಾದರು.

     ದೇವಸ್ಥಾನಗಳ ಸ್ಥಾಪನೆ ಅಂದಿನ ಪುರೋಹಿತಶಾಹಿಗೆ ಅಘಾತಕಾರಿಯಾದ ಹೊಡೆತ, ಭಕ್ತ ಸಮೂಹದಲ್ಲಿ ದೈಹಿಕವಾಗಿ ದೂರವೇ ಉಳಿದಿದ್ದ ಮೂರನೇ ಎರಡರಷ್ಟಿದ್ದ ಕೆಳವರ್ಗದ ಜನರು ಮಾನಸಿಕವಾಗಿ ಕೂಡ ದೂರವೇ ಉಳಿದರೆ, ದೇವಸ್ಥಾನಗಳ ಹುಂಡಿ ತುಂಬುವುದು ಹೇಗೆ? ಅದರ ಮೂಲಕ ಉದರ ತುಂಬುವುದು ಹೇಗೆ ? ಎಂಬ ಭೀತಿ ಅವರನ್ನಾವರಿಸಿತ್ತು. ನಾರಾಯಣ ಗುರುಗಳ ನಂತರ ಕೇರಳದಲ್ಲಿ ಸವಣರ್ಿಯ ದೇವಾಲಯಗಳ ಆದಾಯದಲ್ಲಿ ಗಣನೀಯ ಕುಸಿತ ಕಂಡುಬಂದಿರುವುದು ದಾಖಲೆಯಲ್ಲಿದೆ.

     ನಾರಾಯಣ ಗುರುಗಳು ಎಂದೂ ಹಿಂದೂ ಧರ್ಮವನ್ನು ಪೆರಿಯಾರ್, ಅಂಬೇಡ್ಕರ್ರವರಂತೆ ಸಾರಾಸಗಟಾಗಿ ತಿರಸ್ಕರಿಸಲಿಲ್ಲ. ಅವರು ತಮ್ಮ ಜೀವನದುದ್ದಕ್ಕೂ ಧಾಮರ್ಿಕ ಪುನರುತ್ಥಾನದ ಬಗ್ಗೆ ಮಾತನಾಡುತ್ತಿದ್ದರು. ಇಲ್ಲಿ ದೇವನೂರು ಮಹಾದೇವ ಅವರ ಮಾತೊಂದು ನೆನಪಿಗೆ ಬರುತ್ತದೆ.

      ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನವಾದ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೆ ಕುಯ್ಯುವಂತೆ ಗಾಂಧೀಜಿ ಕಾಣಿಸಿದರೆ, ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವಂತೆ ಕಾಣುತ್ತಾರೆ ಎಂದು ಗಾಂಧೀ ಮತ್ತು ಅಂಬೇಡ್ಕರ್ ಅವರ ಸೈದ್ಧಾಂತಿಕ ಸಂಘರ್ಷವನ್ನು ಪ್ರಸ್ತಾಪಿಸುತ್ತಾ ದೇವನೂರು ಹೇಳುತ್ತಾರೆ.

      ಗಾಂಧೀ ಆ ಕೆಲಸ ಮಾಡಿರುವ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ನಾರಾಯಣ ಗುರುಗಳ ಧಾಮಿ೯ಕ ಸುಧಾರಣಾವಾದಿ ಚಳವಳಿ ಮಾತ್ರ ಈ ಕಂಬ ಕುಯ್ಯುವ ಕೆಲಸವನ್ನು ಮಾಡಿದೆ. ಅವರದ್ದು ಸಂಘರ್ಷದ ಹಾದಿಯಾಗಿರಲಿಲ್ಲ. ಅವರ ಹೋರಾಟದ ಎಲ್ಲಾ ಕಾರ್ಯತಂತ್ರಗಳನ್ನು ಅವಲೋಕಿಸುತ್ತಾ ಬಂದರೆ, ಅವರಲ್ಲೊಬ್ಬ ಚತುರ ರಾಜಕಾರಣಿ ಇದ್ದನೆಂಬುದು ಸ್ಪಷ್ಟವಾಗುತ್ತದೆ. ಅವರು ಸಮಾಜ ಸುಧಾರಕನ ಕೆಲಸ ಮಾಡಲಿಕ್ಕೆಂದೇ ಸನ್ಯಾಸಿಯ ಪಾತ್ರವನ್ನು ಧರಿಸಿದರೇನೋ ಎಂಬ ಅನುಮಾನ ಬರುತ್ತದೆ. ಕೋಮುವಾದಿ ರಾಜಕಾರಣವನ್ನು ಎದುರಿಸಲು ಇಂದು ಬೇಕಾಗಿರುವುದು ಇಂತಹ ನಾಯಕತ್ವ.

     ಅವರು ದೇವಸ್ಥಾನ ಪ್ರವೇಶಾವಕಾಶದ ಬಗ್ಗೆ ಎಂದೂ ಗಂಭೀರವಾಗಿ ಪ್ರಯತ್ನ ನಡೆಸಲಿಲ್ಲ. ಅವರು ಸಾವಿನ ಎಂಟು ವರ್ಷಗಳ ನಂತರ ಕೇರಳ ಸರಕಾರ ದೇವಾಲಯ ಪ್ರವೇಶ ಘೋಷಣೆಯನ್ನು ಹೊರಡಿಸಿತ್ತು. ಆಗಲೇ ನಾರಾಯಣ ಗುರುಗಳು ಕೇರಳ, ಮದ್ರಾಸ್ ಮತ್ತು ಮಂಗಳೂರಿನಲ್ಲಿಯೂ ದೇವಸ್ಥಾನಗಳನ್ನು ಸ್ಥಾಪಿಸಿದ್ದರು. ನೂರಾರು ಗುರುಮಂದಿರ ಹಾಗೂ ಆಶ್ರಮಗಳು ಪ್ರಾರಂಭವಾಗಿದ್ದವು.

     ದೇವಸ್ಥಾನಗಳ ಬಗೆಗಿನ ಅವರ ಪರಿಕಲ್ಪನೆಯೇ ಕ್ರಾಂತಿಕಾರಿಯಾದುದು. ಅರವಿಪುರಂನಲ್ಲಿ ಲಿಂಗಸ್ಥಾಪನೆ ಮಾಡಿದ ಗುರುಗಳು ತಮ್ಮ ಕೊನೆಯ ಪ್ರತಿಷ್ಠಾಪನೆಯನ್ನು ಕಳವಂ ಕೋಡಂ ನಲ್ಲಿ ಕನ್ನಡಿಯೊಂದನ್ನು ಸ್ಥಾಪಿಸುವ ಮೂಲಕ ನಡೆಸಿದರು. ಅದರ ನಡುವೆ ಒಂದೆಡೆ ಸತ್ಯ, ಧರ್ಮ, ಶಾಂತಿ, ದಯೆ ಎಂಬ ಸಂದೇಶವನ್ನು ಸಾರುವ ಲಕವನ್ನಷ್ಟೇ ಸ್ಥಾಪಿಸಿದರೆ, ಕರಮಕ್ಕು ಎಂಬಲ್ಲಿ ನಂದಾ ದೀಪವನ್ನಷ್ಟೇ ಹಚ್ಚಿದರು. ಕೊನೆಗಾಲದಲ್ಲಿ ಶಿವಗಿರಿಯಲ್ಲಿ ಅವರ ಚಿಂತನೆಯ ಮೂಲಧಾತುವಾದ ಅರಿವು ಸಂಕೇತವಾಗಿ ಸರಸ್ವತಿಯ ಮೂತಿ೯ಯನ್ನು ಪ್ರತಿಷ್ಠಾಪಿಸಿದರೆ, ಶಂಕರಾಚಾರ್ಯರು ಹುಟ್ಟೂರಿಗೆ ಸಮೀಪದ ಅಲ್ವಾಯಿನಲ್ಲಿ ನಿಮಿ೯ಸಿದ ಅದ್ವೆತಾಶ್ರಮದಲ್ಲಿ ಮೂತಿ೯ಯನ್ನೇ ಸ್ಥಾಪಿಸಲಿಲ್ಲ. ಕೊನೆಗಾಲದಲ್ಲಿ ದೇವಸ್ಥಾನಗಳ ಸ್ಥಾಪನೆ ನಿಲ್ಲಿಸಿ ಎಂದು ಅನುಯಾಯಿಗಳಿಗೆ ಕರೆ ನಡಿದರು. ನಾರಾಯಣ ಗುರುಗಳು ತಮ್ಮ ಚಳವಳಿ ಉದ್ದಕ್ಕೂ ದೇವಾಲಯಗಳನ್ನು ಸಾಮಾಜಿಕ ಪರಿವರ್ತನೆಯ ಸಾಧನವಾಗಿ ಬಳಸುತ್ತಾ ಬಂದುದ್ದನ್ನು ಕಾಣಬಹುದು. ಅದು ಸನಾತನ ಧಮಾ೯ವಲಂಭಿಗಳ ಆಶಯಕ್ಕೆ ತದ್ವಿರುದ್ದವಾದದು. ದೇವಾಲಯಗಳ ಪೂಜೆ-ಹವನ-ಹೋಮಗಳಲ್ಲಿ ಮುಳುಗಿ ವ್ಯಾಪಾರಿ ಕೇಂದ್ರಗಳಾಗುವ ಬದಲಿಗೆ ಅವುಗಳನ್ನು ಸಾಮೂಹಿಕ ಪ್ರಾರ್ಥನಾ ಮಂದಿರವಾಗಿ ಉಳಿಸಬೇಕೆಂದು ಅವರು ಬಯಸಿದ್ದರು. ಈ ದೃಷ್ಟಿಯಿಂದ ಅವರ ದೇವಾಲಯದ ಪರಿಕಲ್ಪನೆ ಮಸೀದಿ, ಚಚೆ೯ಗಳಿಗೆ ಹೆಚ್ಚು ಹತ್ತಿರವಾಗಿತ್ತು. ದೇವಸ್ಥಾನಗಳ ಭಕ್ತಿ ಪೀಠವಾಗುವದರ ಜೊತೆಯಲ್ಲಿ ಅಧ್ಯಯನ ಕೇಂದ್ರವಾಗಬೇಕು. ಉದ್ಯಾನ, ವಾಚನಾಲಯಗಳನ್ನೊಳಗೊಂಡು ಅವು ಸ್ವಚ್ಛ ಪರಿಸರದಲ್ಲಿ ನಿಮಾ೯ಣಗೊಳ್ಳಬೇಕು ಎಂದು ಅವರು ಹೇಳುತ್ತಿದ್ದರು. ಅವರು ಸ್ಥಾಪಿಸಿದ ಎಲ್ಲಾ ದೇವಾಲಯಗಳು ಈ ಅಭಿಪ್ರಾಯವನ್ನೇ ಬಿಂಬಿಸುತ್ತದೆ.

    ನಾರಾಯಣ ಗುರುಗಳದ್ದು ಮುಖಾಮುಖಿ ಹೋರಾಟವಲ್ಲ. ಅವರು ವೈದಿಕಶಾಹಿ ಏಕಸ್ವಾಮ್ಯಕ್ಕೆ ನೇರ ಸವಾಲು ಹಾಕಲಿಲ್ಲ. ಅದರ ಬದಲಿಗೆ ವೈದಿಕ ಆಧಿಪತ್ಯದ ಬೇರುಗಳನ್ನೇ ಅಲ್ಲಾಡಿಸಿದರು. ಸಂಸ್ಕೃತವನ್ನು ಸಂಪೂರ್ಣವಾಗಿ ತಿರಸ್ಕರಿಸದೇ ಅದನ್ನು ಅಧ್ಯಯನ ಮಾಡಿ ಶೂದ್ರರೂ ಅದನ್ನು ಕಲಿತು ಅರಗಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟರು. ವೇದಾಧ್ಯಯನಕ್ಕೆ ಜಾತಿ ಅಸ್ಪಶ್ಯವಲ್ಲ ಎಂದು ಸಾರಿದ ಗುರುಗಳು ಶಂಕರಾಚಾರ್ಯರ ಅದ್ವೈತ ವೇದಾಂತವನ್ನು ಕಲಿತರು. ಆತ್ಮೋಪದೇಶ ಶತಕಂ ಸೇರಿದಂತೆ ಹಲವಾರು ಸಂಸ್ಕೃತ ಗ್ರಂಥಗಳನ್ನು ಬರೆದರು. ಬ್ರಹ್ಮಸೂತ್ರದ ವಿಶ್ಲೇಷಣೆ ಮಾಡಿದ ಮೊದಲ ಅಸ್ಪೃಶ್ಯ ಅವರು.

     ದೇವಸ್ಥಾನಗಳಷ್ಟೇ ಸ್ಥಾಪಿಸದೆ ಅಲ್ಲಿ ಅರ್ಚಕರಾಗಿ ಕೆಳವರ್ಗದ ಜಾತಿ ಜನರನ್ನೇ ನೇಮಿಸಿದರು. ಅವರ ತರಬೇತಿಗಾಗಿ ಶಿವಗಿರಿಯಲ್ಲಿ ಬ್ರಹ್ಮ ಮೀಮಾಂಸ ಶಾಲೆಗಳನ್ನು ತೆರೆದು ಬ್ರಹ್ಮ ವಿದ್ಯೆ ಕಲಿಸಿದರು. ಅವರಿಂದ ಸ್ಥಾಪನೆಗೊಂಡ ಬ್ರಹ್ಮ ವಿದ್ಯಾ ಕೇಂದ್ರದಲ್ಲಿ ಈಳವರಲ್ಲದೆ, ಪುಲಯ, ಪರಯ ಮೊದಲಾದ ಇನ್ನತರ ಕೆಳಜಾತಿಯ ಜನರಲ್ಲದೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರೂ ಆಗಮಶಾಸವನ್ನೊಳಗೊಂಡಂತೆ ವೇದಾಧ್ಯಯನ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಬಿಲ್ಲವರ ಜಾತಿಯ ಮದುವೆಯನ್ನು ಬಿಲ್ಲವ ಅರ್ಚಕರೇ ಮಾಡುತ್ತಿದ್ದಾರೆ. ಅವರೆಲ್ಲರೂ ಮೂಲತಃ ಶಿವಗಿರಿಯಲ್ಲಿ ತರಬೇತಿ ಪಡೆದವರು. ಆದರೆ, ಈಗ ಬಿಲ್ಲವ ಸಮುದಾಯದಲ್ಲಿಯೂ ಬೆಳೆಯುತ್ತಿರುವ ನವಬ್ರಾಹ್ಮಣರಿಗೆ ಬಿಲ್ಲವ ಅರ್ಚಕರು ಪಥ್ಯವಾಗುವುದಿಲ್ಲ ಎಂಬುದು ಬೇರೆ ಮಾತು.

     ಅರವಿಪುರಂನಲ್ಲಿ ದೇವಾಲಯ ಸ್ಥಾಪನೆ ನಂತರ 1961 ರಲ್ಲಿ 'ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ' ಸ್ಥಾಪನೆಯಾಗುವ ವರೆಗೆ ಕೇರಳ ರಾಜ್ಯ ಮಾತ್ರವಲ್ಲ ತಮಿಳುನಾಡು ಮತ್ತು ಮಂಗಳೂರಿಗೂ ಭೇಟಿ ನೀಡಿ ದೇವಾಲಯಗಳನ್ನು ಸ್ಥಾಪಿಸಿದರು. ಕೆಳವರ್ಗದ ಜನರಲ್ಲಿದ್ದ ಮೂಡನಂಬಿಕೆ ಮತ್ತು ದುಂದುವೆಚ್ಚದ ಅಂಧ ಸಂಪ್ರದಾಯಗಳನ್ನು ಕಿತ್ತೊಗೆಯಲು ಹೋರಾಟ ನಡೆಸಿದರು. ವಿವಾಹಗಳನ್ನು ಸರಳಗೊಳಿಸಿದರು. ವಿವಾಹಕ್ಕೆ ಮಾಡುವ ದುಂದು ವೆಚ್ಚಗಳನ್ನು ವೃದ್ಧಾಪ್ಯದ ದಿನಗಳಿಗಾಗಿ ಉಳಿತಾಯ ಮಾಡುವಂತೆ ಸಲಹೆ ನೀಡಿದರು. ಸಹಭೋಜನಕ್ಕೆ ಪ್ರೋತ್ಸಾಹ ನೀಡಿದರು. 'ಮದ್ಯವನ್ನು ಮಾಡಬೇಡಿ, ಮಾರಬೇಡಿ ಮತ್ತು ಕುಡಿಯಬೇಡಿ' ಎಂದು ಹೇಳುವ ಮೂಲಕ ಮದ್ಯಪಾನದ ವಿರುದ್ಧ ವ್ಯಾಪಕ ಚಳವಳಿಯನ್ನೇ ನಡೆಸಿದರು. ಇದರಿಂದ ಸಾಂಪ್ರದಾಯಿಕವಾಗಿ ಸೇಂದಿ ತೆಗೆಯುವ ವೃತ್ತಿಯನ್ನು ಮಾಡುತ್ತಿದ್ದ ಈಳವರು ಆ ವೃತ್ತಿಯನ್ನು ತ್ಯಜಿಸಿ, ಬೇರೆ ವೃತ್ತಿ ಕೈಗೆತ್ತಿಕೊಳ್ಳುವಂತಾಯಿತು. ಈ ಎಲ್ಲಾ ಸುಧಾರಣೆಗಳನ್ನು ಅವರು ಮೊದಲು ತಮ್ಮ ಶ್ರೀಮಂತ ಅನುಯಾಯಿಗಳ ಮನೆಯಲ್ಲಿಯೇ ಮಾಡಿದರು. 'ತಾಳಿಕೆಟ್ಟು', 'ತಿರುಂಡಕಳಿ' ಮೊದಲಾದ ಅಂಧಸಂಪ್ರದಾಯಗಳನ್ನು ಆಚರಿಸುವ ಮತ್ತು ಆಡಂಬರದ ಮದುವೆಗಳನ್ನು ಮಾಡುವ ಶ್ರೀಮಂತ ಅನುಯಾಯಿಗಳ ಮನೆಗಳನ್ನೇ ಬಹಿಷ್ಕರಿಸಿದರು.

     1916ರಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಸ್ಥಾಪನೆಯ ಮೂಲಕ ನಾರಾಯಣ ಗುರು ಚಳವಳಿ ಸಂಘರ್ಷದ ಹಾದಿಗೆ ಇಳಿಯಿತು. ಆಗ ಅವರಿಗೆ ಜೊತೆಯಾದವರು ಡಾ.ಪಲ್ಪು, ಪಲ್ಪು ಮತ್ತು ಅವರಣ್ಣ ವೇಲು ಇಬ್ಬರೂ ಕೇರಳದ ಜಾತಿ ವ್ಯವಸ್ಥೆಗೆ ಬಲಿಯಾಗಿ ಹುಟ್ಟೂರಿನಲ್ಲಿ ಶಿಕ್ಷಣ ಮತ್ತು ಉದ್ಯೋಗ ಎರಡೂ ಸಿಗದೆ, ಊರು ಬಿಟ್ಟು ಹೋದವರು.ವೇಲು ಈಳವ ಜನಾಂಗದ ಮೊದಲ ಪದವೀಧರ. ಆತ ಮದ್ರಾಸ್ನಲ್ಲಿಯೇ ಕಲಿತು, ಅಲ್ಲಿಯೇ ಸಕಾ೯ರಿ ನೌಕರಿ ಸೇರಿದರೆ, ಪಲ್ಪು ಮದ್ರಾಸ್ನಲ್ಲಿ ಓದಿ ಮೈಸೂರಿನಲ್ಲಿ ಸಕಾ೯ರಿ ವೈದ್ಯರಾಗುತ್ತಾರೆ. ಈಳವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ಕೋರುವ ಮೊದಲ ಮನವಿಯನ್ನು ತಿರುವಾಂಕೂರಿನ ದಿವಾನರಿಗೆ ಅಪಿ೯ಸುವ ಮೂಲಕ ಡಾ.ಪಲ್ಪು ತನ್ನ ಹೋರಾಟ ಆರಂಭಿಸುತ್ತಾರೆ. ತಿರುವಾಂಕೂರಿನ ದಿವಾನರು, ವೈಸ್ರಾಯ್, ಬ್ರಿಟಿಷ್ ಪಾಲಿ೯ಮೆಂಟ್, ಕಾಂಗ್ರೇಸ್ ಪಕ್ಷ ಹಾಗೂ ಇಂಗ್ಲೀಷ್ ದಿನಪತ್ರಿಕೆಗಳಿಗೆ ಈಳವರ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಅವರು ಸತತ ಪ್ರಯತ್ನ ನಡೆಸುತ್ತಾರೆ. ಅದಕ್ಕೆ ನಿರೀಕ್ಷಿತ ಫಲ ಸಿಗದಾಗ, ಬೆಂಗಳೂರಿನಲ್ಲಿ ಡಾ.ಪಲ್ಪು ಸ್ವಾಮಿ ವಿವೇಕಾನಂದರನ್ನು ಭೇಟಿಯಾಗುತ್ತಾರೆ. ಕೇರಳದ ಪರಿಸ್ಥಿತಿಯ ಸಂಪೂರ್ಣ ಅರಿವಿದ್ದ ವಿವೇಕಾನಂದರು "ಆದ್ಯಾತ್ಮಿಕ ನಾಯಕರೊಬ್ಬರ ನೇತೃತ್ವದಲ್ಲಿ ಸಾಮಾಜಿಕ ಚಳವಳಿಯನ್ನು ಹುಟ್ಟುಹಾಕಿದರೆ, ಮಾತ್ರ ಕೇರಳದಲ್ಲಿ ಪರಿವರ್ತನೆ ಸಾಧ್ಯ" ಎನ್ನುತ್ತಾರೆ. ಅಲ್ಲಿಂದ ಕೇರಳಕ್ಕೆ ಹಿಂದಿರುಗಿದ ಡಾ.ಪಲ್ಪು ನಾರಾಯಣ ಗುರುಗಳನ್ನು ಭೇಟಿ ಮಾಡುತ್ತಾರೆ. ಈ ಭೇಟಿಗೆ ಐತಿಹಾಸಿಕ ಮಹತ್ವವಿದೆ. ಇಬ್ಬರ ಮಿಲನದಿಂದಲೇ ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಯೋಗಂ ಸ್ಥಾಪನೆಯಾಗುತ್ತದೆ. ಈಳವರಲ್ಲಿ 'ಧಾಮರ್ಿಕ ಮತ್ತು ಜಾತ್ಯಾತೀತ ಶಿಕ್ಷಣ ಹಾಗೂ ಉದ್ಯಮಶೀಲ ಮನೋಭಾವನೆ'ಯನ್ನು ಬೆಳೆಸುವುದು ಇದರ ಉದ್ದೇಶವಾಗಿತ್ತು.

   
ಈ ಹಂತದಲ್ಲಿ ಕುಮಾರ ಆಶಾನ್ ಇವರಿಬ್ಬರ ಜೊತೆಯಾಗುತ್ತಾರೆ. ಮೂಲತಃ ಕವಿ ಮತ್ತು ಲೇಖಕನಾಗಿದ್ದ ಆಶಾನ್ ತನ್ನ ಕಾವ್ಯ ಪ್ರತಿಭೆ, ಬರಹ, ಭಾಷಣಗಳ ಮೂಲಕ ಚಳವಳಿಗೆ ಜೀವ ತುಂಬಿದರು. ಅವರ ಸಂಪಾದಕತ್ವದ ವಿವೇಕೋದಯಂ ಪತ್ರಿಕೆ ಚಳವಳಿಯ ಮುಖವಾಣಿಯಾಗಿತ್ತು.

      ಎಸ್ಎನ್ಡಿಪಿ ನೇತೃತ್ವದಲ್ಲಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿನ ಅನ್ಯಾಯದ ವಿರುದ್ಧದ ಹೋರಾಟದ ಕಣಕ್ಕಿಳಿದ ಈಳವರು ಆಗಲೇ ಧಾಮಿ೯ಕ ಚಳುವಳಿಯಿಂದಾಗಿ ಸಾಕಷ್ಟು ಜಾಗೃತರಾಗಿದ್ದರು. ತಮ್ಮದೇ ದೇವಾಲಯಗಳು ಅವರ ಸಂಘಟನೆಗೆ ಶಕ್ತಿ ತುಂಬಿದ್ದವು. ಎಸ್ಎನ್ಡಿಪಿ ಕೈಗಾರಿಕಾ ಸಮ್ಮೇಳನ ಮತ್ತು ಮಹಿಳಾ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿತ್ತು. ಹಲವಾರು ಯುವಕರು ಮದ್ರಾಸ್ ಬೆಂಗಳೂರಿಗೆ ಹೋಗಿ ಇಂಗ್ಲೀಷ್ ಆಯುವೇ೯ದ ವ್ಯಾಸಾಂಗ ಮಾಡಿ ಬಂದಿದ್ದರು.

      ನಾರಾಯಣ ಗುರುಗಳ ದೂರದಶಿ೯ತ್ವ ಮತ್ತು ಕಾರ್ಯತಂತ್ರ ಅರಿವಾಗುವುದು ಇಲ್ಲಿ. ದೇವಸ್ಥಾನ ಪ್ರವೇಶಕ್ಕೆ ಅವರು ಹೋರಾಟ ನಡೆಸಲಿಲ್ಲ. ಬದಲಿಗೆ ಅವರೇ ದೇವಸ್ಥಾನಗಳನ್ನು ಸ್ಥಾಪಿಸಿದರು. ಆದರೆ, ಶಾಲೆಗಳ ಸ್ಥಾಪನೆಗೆ ಆಡಳಿತದ ಅನುಮತಿ ಬೇಕಿತ್ತು. ಅದಕ್ಕಾಗಿ ಸಕಾ೯ರಿ ಶಾಲೆಗಳ ಪ್ರವೇಶದ ಹಕ್ಕಿನ ಹೋರಾಟಕ್ಕೆ ಅವರು ಚಾಲನೆ ನೀಡಿದರು. ಶಾಲೆಗಳ ಪ್ರವೇಶಕ್ಕಾಗಿ ಎಸ್ಎನ್ಡಿಪಿ ಹೋರಾಟ ಪ್ರಾರಂಭಿಸಿದರೂ ಅದು ಅಷ್ಟೊಂದು ಸರಳವಾಗಿರಲಿಲ್ಲ. ಈಳವರಲ್ಲಿ ಬೆಳೆಯುತ್ತಿರುವ ಜಾಗೃತಿ ನಂಬೂದಿರಿ ಮತ್ತು ನಾಯರ್ ಜನಾಂಗದಲ್ಲಿ ದ್ವೇಷದ ಕಿಚ್ಚು ಹತ್ತಿಸಿತ್ತು. ದೇವಸ್ಥಾನ ಸ್ಥಾಪನೆಯ ಕಾಲದಲ್ಲಿ ಎದುರಾಗದ ವಿರೋಧ ಈಗ ದಟ್ಟವಾಗತೊಡಗಿತ್ತು. ಎಸ್ಎನ್ಡಿಪಿ ಚಳವಳಿಯಲ್ಲಿ ಈ ಕಾಲ ನಿಣಾ೯ಯಕವಾದದ್ದು. ಆಗ ಎಲ್ಲೆಡೆ ನಾಯರ್-ಈಳವರ ಸಂಘರ್ಷ ನಡೆಯುತ್ತದೆ. ಈಳವರ ಮೇಲೆ ಬಹಿರಂಗವಾಗಿ ದೌರ್ಜನ್ಯವೆಸಗಲಾಗುತ್ತದೆ. ಎಸ್ಎನ್ಡಿಪಿಯನ್ನು ಬೆಂಬಲಿಸುವ ಪತ್ರಿಕೆಗಳ ಕಚೇರಿಯನ್ನು ಸುಟ್ಟು ಹಾಕಲಾಗುತ್ತದೆ.

     ಚಳವಳಿಯ ಒತ್ತಡಕ್ಕೆ ಮಣಿದ ತಿರುವಾಂಕೂರು ದಿವಾನರು ಈಳವರಿಗೆ ಅವರದ್ದೇ ಶಾಲೆಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತಾರೆ. ಸರಕಾರಿ ಶಾಲೆಗಳಲ್ಲಿ ಎಲ್ಲಾ ಜಾತಿ ಜನರಿಗೆ ಮುಕ್ತ ಪ್ರವೇಶ ನೀಡುವ ಮಸೂದೆ ಜಾರಿಗೆ ಬರುತ್ತದೆ. ನಾರಾಯಣ ಗುರು ಚಳವಳಿಯಲ್ಲಿ ದೇವಸ್ಥಾನ ಸ್ಥಾಪನೆಗಿಂತಲೂ ಮುಖ್ಯವಾದ ಘಟನೆಯಿದು. ಇದು ಕುಮಾರ ಆಶಾನ್ ಮತ್ತು ಡಾ.ಪಲ್ಪು ಅವರ ನಾಯಕತ್ವದ ಜಯ. ಆದರೆ, ಸಕಾ೯ರಿ ಸೇವೆಗೆ ಹಿಂದುಳಿದ ಜಾತಿ ಸೇರುವ ಅವಕಾಶವನ್ನು ಕೊನೆಗೂ ತಮ್ಮ ಜೀವಮಾನದಲ್ಲಿ ನಾರಾಯಣ ಗುರುಗಳಿಗೆ ಕಾಣಲಾಗುವುದಿಲ್ಲ. 1936ರಲ್ಲಿ ಸಕಾ೯ರ ಲೋಕಸೇವಾ ಆಯೋಗವನ್ನು ಸ್ಥಾಪಿಸಿ, ಉನ್ನತ ಹುದ್ದೆಗಳನ್ನು ಹೊರತುಪಡಿಸಿ, ಹಿಂದುಳಿದವರಿಗೆ ಶೇ.40ರಷ್ಟು ಮೀಸಲಾತಿಯನ್ನು ನೀಡುತ್ತದೆ.

     ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರದಲ್ಲಿನ ಮೀಸಲಾತಿ ಈಳವ ಜನಾಂಗದಲ್ಲಿ ಎರಡೂ ವರ್ಗಗಳ ಬುದ್ಧಿಜೀವಿಗಳ ಸೃಷ್ಟಿಗೆ ಕಾರಣವಾಯಿತು. ಸಾಹಿತಿಗಳು, ಪತ್ರಕರ್ತರು, ಶಿಕ್ಷಕರು ಮತ್ತು ಧಾಮಿ೯ಕ ನಾಯಕರದ್ದು ಒಂದು ಗುಂಪಾದರೆ, ವೈದ್ಯರು, ವಕೀಲರು, ಉದ್ಯಮಿಗಳು, ಆಡಳಿತಾಧಿಕಾರಿಗಳು ಮತ್ತು ರಾಜಕಾರಣಿಗಳು ಇನ್ನೊಂದು ಗುಂಪಿನಲ್ಲಿದ್ದರು. ಕೇರಳದಲ್ಲಿ ಶಿಕ್ಷಣದ ಪ್ರಸಾರದಲ್ಲಿ ಆರ್.ಶಂಕರ್ ಅವರದ್ದು ನಿಣಾ೯ಯಕ ಪಾತ್ರ. ಇವರು ಸ್ಥಾಪಿಸಿದ್ದ "ಶ್ರೀ ನಾರಾಯಣ ಟ್ರಸ್ಟ್" 1952ರಲ್ಲಿಯೇ ನೂರಾರು ಶಾಲೆ, ಪಾಲಿಟೆಕ್ನಿಕ್, ಶಿಕ್ಷಕ ತರಬೇತಿ ಸಂಸ್ಥೆ ಮತ್ತು ಆಸ್ಪತ್ರೆಗಳನ್ನು ಹೊಂದಿದ್ದವು. ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದಲ್ಲಿ ಈಳವರು ಅಭಿವೃದ್ಧಿ ಹೊಂದಿದ್ದರು. ಎಸ್ಎನ್ಡಿಯ ಮೊದಲ ಅಧಿವೇಶನದ ಕಾಲದಲ್ಲಿಯೇ ನಾರಾಯಣ ಗುರುಗಳು ಕೈಗಾರಿಕಾ ಸಮ್ಮೇಳನವನ್ನು ನಡೆಸಿದ್ದರು. ಆನಂತರ ಅದು ವಾಷ೯ಕ ಕಾರ್ಯಕ್ರಮವಾಯಿತು. ತೆಂಗಿನನಾರು ಉದ್ದಿಮೆ ಜನಪ್ರಿಯವಾಗತೊಡಗಿದ್ದು ಅದೇ ಕಾಲದಲ್ಲಿ. ಪ್ರತಿ ದೇವಾಲಯ, ಆಶ್ರಮ ಮತ್ತು ಮಂದಿರಗಳಲ್ಲಿ ತೆಂಗು ನಾರಿನ ಉದ್ದಿಮೆಯ ಘಟಕಗಳನ್ನು ಸ್ಥಾಪಿಸುವಂತೆ ಅವರು ಪ್ರೇರೆಪಿಸಿದ್ದರು. ಈಗ ತೆಂಗುನಾರಿನ ಉದ್ದಿಮೆಯಲ್ಲಿ ಕೇರಳ ದೇಶದಲ್ಲಿಯೇ ಏಕಸ್ವಾಮ್ಯವನ್ನು ಪಡೆದಿದೆ.

     ಈ ಹಂತದಲ್ಲಿ ಎಸ್ಎನ್ಡಿಪಿ ಮುಂದಿನ ಹೋರಾಟವನ್ನು ರಾಜಕೀಯ ಪ್ರಾತಿನಿದ್ಯಕ್ಕಾಗಿ ಕೇಂದ್ರಿಕರಿಸುತ್ತದೆ. ಈ ಹೋರಾಟದಲ್ಲಿ ಅವರಿಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಾಂಗಗಳು ಜೊತೆಯಾಗುತ್ತವೆ. ಈ ಮೂರು ಜನಾಂಗಗಳ ಒಟ್ಟು ಜನಸಂಖ್ಯೆ ತಿರುವಾಂಕೂರು ಸಂಸ್ಥಾನದ ಜನಸಂಖ್ಯೆಯ ಮೂರನೇ ಎರಡರಷ್ಟಿತ್ತು. ತಿರುವಾಂಕೂರು ಸಂಸ್ಥಾನದಲ್ಲಿ 1888ರಲ್ಲಿಯೇ ವಿಧಾನಸಭೆ ರಚನೆಯಾಗಿ ಚುನಾವಣೆಗಳು ನಡೆಯುತ್ತಾ ಬಂದಿದ್ದರೂ, 1935ರವರೆಗೆ ನಡೆದ 15 ಚುನಾವಣೆಗಳಲ್ಲಿ ಶೇ.26ರಷ್ಟಿದ್ದ ಈಳವರಲ್ಲಿ ಒಬ್ಬರೂ ಕೂಡ ಆಯ್ಕೆಯಾಗಿರಲಿಲ್ಲ. ಶೇ.22ರಷ್ಟಿದ್ದ ಕ್ರಿಶ್ಚಿಯನ್ರು ಮತ್ತು ಶೇ.18ರಷ್ಟಿದ್ದ ಮುಸ್ಲಿಂರ ಪ್ರಾತಿನಿಧ್ಯ ಮೂರು-ನಾಲ್ಕರ ಗಡಿ ದಾಟಿರಲಿಲ್ಲ.

     ಐದು ರೂ. ತೆರಿಗೆ ನೀಡುವವರು ಮಾತ್ರ ಮತದಾನದ ಹಕ್ಕು ಪಡೆದಿರುವುದು ಈ ಅನ್ಯಾಯಕ್ಕೆ ಕಾರಣವಾಗಿತ್ತು. ಆ ಕಾಲದ ಭೂಒಡೆತನ ಬಹುಪಾಲು ನಾಯರ್ ಮತ್ತು ನಂಬೂದಿರಿಗಳ ಕೈಯಲ್ಲಿದ್ದ ಕಾರಣ ಉಳಿದ ಜನಾಂಗ ಮತದಾನದ ಹಕ್ಕನ್ನೇ ಪಡೆಯುವುದು ಅಸಾಧ್ಯವಾಗಿತ್ತು. ಇದನ್ನು ಪ್ರತಿಭಟಿಸಲೆಂದೇ ಮೂರು ಜನಾಂಗಗಳು ಕೂಡಿ "ಸಂಯುಕ್ತ ರಾಜಕೀಯ ಸಂಘಟನೆ"ಯನ್ನು ರಚಿಸಿಕೊಂಡು 1935ರ ಚುನಾವಣೆಯನ್ನು ಬಹಿಷ್ಕರಿಸಿತ್ತು. ಈ ಹೋರಾಟಕ್ಕೆ ಮಣಿದ ತಿರುವಾಂಕೂರು ಸಂಸ್ಥಾನ ಜಾತಿ ಪ್ರಮಾಣಕ್ಕೆ ಅನುಗುಣವಾಗಿ ರಾಜಕೀಯ ಮೀಸಲಾತಿ ಘೋಷಿಸಿತು. ಕೇರಳದಲ್ಲಿ ಇಂದು ನಾವು ಕಾಣುತ್ತಿರುವ ರಾಜಕೀಯ ಜಾಗೃತಿಗೆ ಇದು ಮೂಲ ಕಾರಣ.

      ಕೇರಳದ ಕಮ್ಯೂನಿಸ್ಟ್ ಪಕ್ಷವನ್ನು ನಾರಾಯಣ ಗುರು ಚಳವಳಿಯ ಮುಂದುವರೆದ ಭಾಗವೆನ್ನಬಹುದು. ಅಧಿಕೃತವಾಗಿ ನಾರಾಯಣ ಗುರು ಚಳವಳಿಗೆ ಎಸ್ಎನ್ಡಿಪಿಯೇ ಉತ್ತರಾಧಿಕಾರವನ್ನು ಪಡೆದಿದ್ದರೂ ಅದು ಕಮ್ಯೂನಿಸ್ಟ್ ಚಳವಳಿಗೆ ನಾಂದಿಯಾಗಿದ್ದನ್ನು ಇತಿಹಾಸ ಹೇಳುತ್ತದೆ. ಈ ಬೆಳವಣಿಗೆಗೆ ಮುಖ್ಯವಾಗಿ ಕಾರಣಕರ್ತರಾದವರು ಸಹೋದರ ಅಯ್ಯಪ್ಪನ್.ಪ್ರಗತಿಪರ ಚಿಂತನೆಯ, ನೇರನಡೆನುಡಿಯ ಅಯ್ಯಪ್ಪನ್ ಹುಟ್ಟಿನಿಂದಲೇ ಹೋರಾಟಗಾರ ಮತ್ತು ಅಪ್ರತಿಮ ಧೈರ್ಯಶಾಲಿ. ಜಾತಿ ಶ್ರೇಣಿಯಲ್ಲಿ ಈಳವರಿಗಿಂತ ಕೆಳಗಿದ್ದ ಪುಲಯರ ಜೊತೆ ತಮ್ಮೂರಿನಲ್ಲಿ ಸಹಭೋಜನ ಮಾಡಿಸಿ ಜಾತಿಯಿಂದ ಬಹಿಷ್ಕೃತನಾದ ಅಯ್ಯಪ್ಪನ್ ಜಾತಿ ನಿಮೂ೯ಲನೆಯ ಪ್ರಬಲ ಪ್ರತಿಪಾದಕ. ಅಯ್ಯಪ್ಪನ್ ಅವರನ್ನು ಗುರುತಿಸಿದ ಗುರುಗಳು ಅವರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡುವ ಉದ್ದೇಶ ಹೊಂದಿದ್ದರಂತೆ. ಮೂಲತಃ ನಾಸ್ತಿಕನಾದ ಅಯ್ಯಪ್ಪನ್ "ಸ್ವತಂತ್ರ ಸಮುದಾಯ ಪ್ರತಿಷ್ಠಾನ"ವನ್ನು ಸ್ಥಾಪಿಸಿ ಸಹೋದರ ಎನ್ನುವ ಪತ್ರಿಕೆ ಪ್ರಾರಂಭಿಸಿ ಜಾತಿ ವಿನಾಶ ಚಳವಳಿಯನ್ನು ನಡೆಸುತ್ತಿದ್ದರು. ಅವರನ್ನು ಪುಲಯರ ಅಯ್ಯಪ್ಪನ್ ಎಂದು ಜನ ಗೇಲಿ ಮಾಡುತ್ತಿದ್ದರಂತೆ.

     ನಾರಾಯಣ ಗುರುಗಳ ಸಾವಿನ ನಂತರ ಪರಸ್ಪರ ಭಿನ್ನ ವಿಚಾರಧಾರೆಯನ್ನು ಹೊಂದಿದ್ದ ನಾಯಕರು ಎಸ್ಎನ್ಡಿಪಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನ ಪಟ್ಟಿದ್ದರು. ಮೊದಲನೆಯದಾಗಿ ಮೇಲ್ಜಾತಿ ಜನರ ವೈರಿ ಎಂದು ಬಗೆಯಲಾದ ಬ್ರಿಟಿಷರನ್ನು ಸ್ನೇಹಿತರೆಂದು ತಿಳಿದುಕೊಂಡಿದ್ದ ಮಿತವಾದಿ ಕೃಷ್ಣನ್, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕವೇ ಈಳವರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕೆಂದು ಹೇಳುತ್ತಿದ್ದ ಕಾಂಗ್ರೇಸ್ ಒಲವಿನ ಟಿ.ಕೆ ಮಾಧವನ್ ಮತ್ತು ಸಿ.ಕೇಶವನ್, ಸಮಾಜವಾದಿ ಮತ್ತು ಪುರೋಗಾಮಿ ವಿಚಾರಧಾರೆಯ ಸಹೋದರ ಅಯ್ಯಪ್ಪನ್ ಅವರ ಸಮಾಜವಾದಿ-ಪುರೋಗಾಮಿ ವಿಚಾರಧಾರೆಗಳನ್ನು ಮೇಳೈಸಲು ಯತ್ನಿಸುತ್ತಿದ್ದ ಇನ್ನೊಂದು ಗುಂಪು ಇದರಲ್ಲಿ ಪ್ರಮುಖವಾದವುಗಳು. ಈ ಕೊನೆಯ ಗುಂಪು ನಂತರದ ದಿನಗಳಲ್ಲಿ ಕಮ್ಯೂನಿಸ್ಟ್ ಪಕ್ಷ ಅಸ್ತಿತ್ವಕ್ಕೆ ಬರಲು ಕಾರಣವಾಯಿತು.

     1937ರಲ್ಲಿ ಕೇರಳದಲ್ಲಿ ಕಮ್ಯೂನಿಷ್ಟ ಪಕ್ಷ ಪಿ.ಕೃಷ್ಣಪಿಳ್ಳೆ ಮತ್ತು ಇ.ಎಂ.ಎಸ್ ನಂಬೂದಿರಿ ಪಾಡ್ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಎಸ್ಎನ್ಡಿಪಿಯ ಅಯ್ಯಪ್ಪನ್, ದಾಮೋದರನ್, ಸುಕುಮಾರನ್ ಮೊದಲಾದವರು ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸುತ್ತಿದ್ದರೆ ಸಿ.ಕೇಶವನ್, ಟಿ.ಕೆ ಮಾಧವನ್ ಮತ್ತು ಆರ್.ಶಂಕರ್ ಕಾಂಗ್ರೇಸ್ ಒಲವುಳ್ಳವರಾಗಿದ್ದರು. ವಿಪರ್ಯಾಸವೆಂದರೆ ಎಸ್.ಎನ್.ಡಿ.ಪಿ ಚಳವಳಿಯಿಂದ ಜಾಗೃತರಾದ ಕೆಳವರ್ಗದ ಜನಸಮೂಹ ಎಡಪಕ್ಷಗಳ ಕಡೆ ಆಕಷರ್ತರಾಗಿದ್ದರು. ಅವರಲ್ಲಿ ಭೂ ಹೀನ ಕಾಮಿ೯ಕರು, ಗೇಣಿದಾರರು, ಸೇಂದಿ ತೆಗೆಯುವವರು, ಪ್ಲಾಂಟೇಷನ್ ಕಾಮಿ೯ಕರು, ಗೇರುಬೀಜ ಕಾಖಾ೯ನೆ ಕಾಮಿ೯ಕರು ಮೊದಲಾದವರಿದ್ದರು. ಆ ವರ್ಗಗಳಲ್ಲಿ ಸಕ್ರಿಯವಾಗಿದ್ದ ಕಾಮಿ೯ಕರ ಸಂಘಟನೆಗಳು ಮಾತ್ರ ಕಮ್ಯೂನಿಸ್ಟ್ ಪಕ್ಷಕ್ಕೆ ಸೇರಿದ್ದಾಗಿತ್ತು.

     ಕಮ್ಯೂನಿಷ್ಟ್ ಪಕ್ಷದಲ್ಲಿ ನಾಯಕತ್ವ ಮಾತ್ರ ಈಳವ, ಪುಲಯ, ಪರವರ ಕೈಗೆ ಬರಲಿಲ್ಲ. ಅದು ನಂಬೂದಿರಿ, ನಾಯರ್ ಕೈಯಲ್ಲಿ ಭದ್ರವಾಗಿಯೇ ಉಳಿದಿದೆ. ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಪಡೆದಿದ್ದ ಹಿರಿಯ ನಾಯಕಿ ಕೆ.ಆರ್ ಗೌರಿ ಅವಕಾಶವಂಚಿತರಾಗಿದ್ದು ಇದಕ್ಕೆ ಒಂದು ಉದಾಹರಣೆ.

     ಕಾಂಗ್ರೇಸ್ ಪಕ್ಷವು ಈಳವರಿಗೆ ರಾಜಕೀಯ ಅಧಿಕಾರವನ್ನು ನೀಡಿತು. 1951ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಿ.ಕೇಶವನ್ ಮುಖ್ಯಮಂತ್ರಿಯಾದರು. 1962ರಲ್ಲಿ ಆರ್. ಶಂಕರ್ ಮುಖ್ಯಮಂತ್ರಿಯಾದರು. 1971ರಲ್ಲಿ ಅಲ್ಲಿನ ವಿಧಾನಸಭೆಯಲ್ಲಿ 28 ಈಳವ ಶಾಸಕರಿದ್ದರು. ಇಂದು ಕೂಡಾ ಕೇರಳದಲ್ಲಿ ಎಸ್.ಎನ್. ಡಿ.ಪಿ ಮತ್ತು ನಾರಾಯಣ ಗುರುಗಳು ಸ್ಥಾಪಿಸಿದ್ದ ದೇವಾಲಯಗಳು ಹಾಗೂ ಸನ್ಯಾಸಿ ಸಂಘದ ಮೇಲೆ ನಿಯಂತ್ರಣ ಸ್ಥಾಪಿಸಲು ಕಾಂಗ್ರೇಸ್ ಮತ್ತು ಎಡಪಕ್ಷಗಳ ನಡುವೆ ಸಂಘರ್ಷ ನಡೆಯುತ್ತಿದೆ. ಎಸ್.ಎನ್.ಡಿ.ಪಿ, ಶ್ರೀ ನಾರಾಯಣ ಟ್ರಸ್ಟ್ ಮತ್ತು ಸನ್ಯಾಸಿ ಸಂಘ ಇಂದು ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದೆ.

     ಮೇಲ್ಜಾತಿ ಜನರೂ ಸೇರಿದಂತೆ, ಎಲ್ಲ ವರ್ಗಗಳೊಳಗಿನಿಂದಲೂ ಸುಧಾರಣೆಯ ಧ್ವನಿ ಏಳುವಂತೆ ಮಾಡಿದ್ದು ನಾರಾಯಣಗುರು ಚಳವಳಿಯ ಇನ್ನೊಂದು ಸಾಧನೆ. ನಾಯರ್ ಸೇವಾ ಸಂಘ, ಪುಲಯ ಮಹಾಜನ ಸಭಾ ಮತ್ತು ನಂಬೂದಿರಿಗಳ ಯೋಗಕ್ಷೇಮ ಸಭಾಗಳು ಎಸ್.ಎನ್.ಡಿ.ಪಿ ಮಾದರಿಯಲ್ಲಿಯೇ ತಮ್ಮ ಜನಾಂಗಗಳ ಸುಧಾರಣೆಗೆ ಪ್ರಯತ್ನ ನಡೆಸಿದವು. ಸುಧಾರಣಾ ಚಳವಳಿಯಲ್ಲಿ ಭಾಗವಹಿಸಿದ್ದ ನಂಬೂದಿರಿ ಯುವಕರು ಬಹುಬೇಗನೆ ಕಮ್ಯೂನಿಸ್ಟ್ ಪಕ್ಷದತ್ತ ಆಕಷ೯ತರಾದರು. ಮುಂದೆ ಕಮ್ಯುನಿಸ್ಟ್ ಪಕ್ಷದ ನಾಯಕತ್ವ ನಂಬೂದಿರಿ, ನಾಯರ್ಗಳ ಪಾಲಾಗಿ ಇತಿಹಾಸ ಮರುಕಳಿಸಿದ್ದನ್ನು ಕಾಣಬಹುದು.

     ನಾರಾಯಣ ಗುರು ಚಳವಳಿ ಕೇರಳದಲ್ಲಿ ನಡೆಯದೇ ಹೋಗಿದ್ದರೆ, ಏನಾಗುತ್ತಿತ್ತು ಎಂಬ ಪ್ರಶ್ನೆಗೆ ರಾಜಗೋಪಾಲಚಾರಿ ಅವರು ಆ ಚಳವಳಿ ನಡೆಯುತ್ತಿದ್ದ ಕಾಲದಲ್ಲಿಯೇ ಉತ್ತರ ನೀಡಿದ್ದರು. ತಿರುವಾಂಕೂರು ಸಂಸ್ಥಾನದ ದಿವಾನರು ದೇವಸ್ಥಾನ ಪ್ರವೇಶ ಘೋಷಣೆ ಹೊರಡಿಸಲು ವಿಳಂಬ ಮಾಡುತ್ತಿದ್ದನ್ನು ಕಂಡ ರಾಜಗೋಪಾಲಾಚಾರಿಯವರು ದಿವಾನರಿಗೆ ಪತ್ರ ಬರೆದು "ನಾರಾಯಣ ಗುರುಗಳ ಸುಧಾರಣಾ ಚಳವಳಿ ನಡೆಯದಿದ್ದರೆ, ಕೇರಳದಲ್ಲಿನ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಹೋಗುತ್ತಿದ್ದರು" ಎಂದು ಎಚ್ಚರಿಸಿದ್ದರು. ಕೇರಳದ ಆಗಿನ ಸ್ಥಿತಿಯಲ್ಲಿ ಈ ಎಚ್ಚರಿಕೆ ಉತ್ಪ್ರೇಕ್ಷೆ ಆಗಿರಲಿಲ್ಲ. ವಾಸ್ಕೋಡಗಾಮ ಮೊದಲು ಬಂದಿಳಿದ ಕೇರಳದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಉಳಿದೆಲ್ಲಾ ಕಡೆಗಳಿಗಿಂತ ಹೆಚ್ಚು ಕ್ರೀಯಾಶೀಲವಾಗಿದ್ದವು. ನಾರಾಯಣಗುರುಗಳ ಪ್ರವೇಶವಾಗುವ ಮೊದಲು ಅಲ್ಲಿ ಜಾತಿ ಆಧಾರಿತ ದೌರ್ಜನ್ಯದಿಂದ ಬೇಸತ್ತ ಕೆಳವರ್ಗದ ಜನ ಸಾಮೂಹಿಕವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ, ದೇಶದಲ್ಲಿ ಅತಿಹೆಚ್ಚು ಕ್ರಿಶ್ಚಿಯನ್ ಜನಸಂಖ್ಯೆ ಇರುವ ರಾಜ್ಯ ಕೇರಳ. ಅಲ್ಲಿ ಶೇ.24ರಷ್ಟು ಕ್ರಿಶ್ಚಿಯನ್ರು ಇರುವುದು ಈ ಮತಾಂತರಕ್ಕೆ ಸಾಕ್ಷಿ.

     ನಾರಾಯಣ ಗುರುಗಳ ಚಳವಳಿಯುದ್ದಕ್ಕೂ ಹಲವಾರು ಬಾರಿ ತಮ್ಮ ಅನುಯಾಯಿಗಳಿಂದಲೆ ಮತಾಂತರದ ಬೆದರಿಕೆಯನ್ನು ಎದುರಿಸಿದ್ದರು. ವೈಕಂ ಸತ್ಯಾಗ್ರಹದ ಕಾಲದಲ್ಲಿ ಮತ್ತು ಅದಕ್ಕಿಂತ ಮೊದಲು ಮತಾಂತರದ ವಿಚಾರ ಮತ್ತೇ ಎಸ್.ಎನ್.ಡಿ.ಪಿಯಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಗುರುಗಳ ಪ್ರಮುಖ ಶಿಷ್ಯರಲ್ಲಿ ಸಿ.ವಿ ಕುಂಜುರಾಮನ್ ಕ್ರಿಶ್ಚಿಯನ್ ಮತಾಂತರವನ್ನು ಪ್ರತಿಪಾದಿಸುತ್ತಿದ್ದರೆ, ಸಹೋದರ ಅಯ್ಯಪ್ಪನ್ ಮತ್ತು ಸಿ.ಕೃಷ್ಣನ್ ಬೌದ್ಧ ಧರ್ಮದ ಪರ ಒಲವು ತೋರಿಸಿದ್ದರು. ಕುಮಾರ ಆಶಾನ್ ಕೂಡ ಬೌದ್ಧ ಧರ್ಮದ ಕಡೆ ಆಕಷರ್ಿತರಾಗಿದ್ದರೂ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಟಿ.ಕೆ ಮಾಧವನ್ ಮತಾಂತರವನ್ನೇ ವಿರೋಧಿಸುತ್ತಿದ್ದರು.

      ಎಸ್.ಎನ್.ಡಿ.ಪಿ ಅಸ್ತಿತ್ವವನ್ನೇ ಅಲುಗಾಡಿಸಿದ ಈ ವಿವಾದ ನಾರಾಯಣ ಗುರುಗಳಿಗೆ ಒಂದು ಸವಾಲಾಗಿತ್ತು. ತಕ್ಷಣ ಸ್ವಾಮಿಗಳು ಅಲ್ವಾಯಿಯಲ್ಲಿ 1924 ಪೆಬ್ರುವರಿಯಲ್ಲಿ ಎರಡು ದಿನಗಳ ಸರ್ವಧರ್ಮ ಸಮ್ಮೇಳನ ನಡೆಸಿದರು. ಈ ಸಮ್ಮೇಳನ ನಡೆಯುತ್ತಿರುವುದು "ತರ್ಕ ನಡೆಸುವದಕ್ಕಾಗಲಿ, ಗೆಲ್ಲುವುದಕ್ಕಾಗಲಿ ಅಲ್ಲ. ಪರಸ್ಪರ ತಿಳಿದುಕೊಳ್ಳುವುದು ಮತ್ತು ತಿಳಿಸಿಕೊಡುವುದು ಇದರ ಉದ್ದೇಶ" ಎಂದು ನಾರಾಯಣ ಗುರುಗಳು ಘೋಷಿಸಿದ್ದರು. ಸ್ವಾಮಿಗಳು "ಒಂದು ಜಾತಿ, ಒಂದು ಮತ, ಒಂದೇ ದೇವರು" ಎಂಬ ಸಂದೇಶ ಸಾರಿದರು. ಮನುಷ್ಯ ಬದಲಾದರೆ, ಜಾತಿ ಬದಲಾಯಿಸಬೇಕಾದ ಅಗತ್ಯ ಇಲ್ಲವೆಂದು ಅವರು ಹಿಂದೂ ಧರ್ಮದ ನಾಯಕರನ್ನು ಉದ್ದೇಶಿಸಿ ಹೇಳಿದರು. ಮತಾಂತರದ ವಿವಾದ ಅಲ್ಲಿಗೆ ತಣ್ಣಗಾಯಿತು.

    
ಕೇರಳದಿಂದಾಚೆಗೆ ತಮಿಳುನಾಡು ಹಾಗೂ ಕನರ್ಾಟಕದ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತು ಪಡಿಸಿದರೆ, ಬೇರೆಡೆ ನಾರಾಯಣ ಗುರು ಚಳವಳಿ ಹೆಚ್ಚು ಪರಿಚಿತವಲ್ಲ. ನಾರಾಯಣ ಗುರುಗಳ ಶಿಷ್ಯರೇ ಆದ ಡಾ.ಪಲ್ಪು ಅವರ ಮಗ ನಟರಾಜ ಗುರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುಗಳ ಚಿಂತನೆಯ ಪ್ರಸಾರ ಮಾಡಿದರು. ಅವರು ಶಿವಗಿರಿಯ ಸಮೀಪ ಸ್ಥಾಪಿಸಿರುವ ಈಸ್ಟ್ವೆಸ್ಟ್ ವಿಶ್ವವಿದ್ಯಾಲಯವಿದೆ. ಆದರೆ, ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನೂರಾರು ಗುರುಮಂದಿರಗಳಲ್ಲಿ ಅವರಿಗಾಗಿಯೇ ಕಟ್ಟಿದ ದೇವಾಲಯಗಳಲ್ಲಿ ನಾರಾಯಣ ಗುರುಗಳ ಆರಾಧನೆ-ಭಜನೆಗಳು ಕೂಡ ನಾರಾಯಣನೆಂಬ ಈ "ನರ"ನ ಸಾಧನೆಯ ನೈಜ ಚಿತ್ರಣ ನೀಡಲು ವಿಫಲವಾಗಿವೆ. ಸಾವಿರಾರು ವರ್ಷಗಳಿಂದ ಬೇರುಬಿಟ್ಟ ವೈದಿಕಷಾಹಿ, ಫ್ಯಾಸಿಸ್ಟ್ ಶಕ್ತಿ ತನ್ನನ್ನು ಪ್ರಶ್ನಿಸಿದವರನ್ನು ನಾಶ ಮಾಡಲು ಪ್ರಯತ್ನಿಸುತ್ತದೆ. ಸಾಧ್ಯವಾಗದಿದ್ದರೆ, ತನ್ನೊಳಗೆ ಜೀಣಿ೯ಸಿಕೊಂಡು ಬಿಡುತ್ತದೆ. ಬುದ್ಧ ವಿಷ್ಣುವಿನ ಅವತಾರವಾದ, ಬಸವಣ್ಣ ನಂದಿಯಾದ ದುರಂತವೇ ನಾರಾಯಣ ಗುರುಗಳಿಗಾಗಿದೆ. ಸನ್ಯಾಸಿಯಾದ ದಿನದಿಂದ ಸಾವಿನವರೆಗೂ ಕೇರಳದ ಅತ್ಯಂತ ಕೀಳು ಜಾತಿಯವರೆನಿಸಿದ ಪುಲಯ ಜನಾಂಗದ ಅಡಿಗೆಯವನಿಂದಲೇ ಕೈತುತ್ತು ತಿಂದು ಬದುಕಿದ ನಾರಾಯಣ ಗುರುಗಳು ಇಂದು ಈಳವ - ಬಿಲ್ಲವ ಜಾತಿ ಜನರ ನಾಯಕನಾಗಿಬಿಟ್ಟಿದ್ದಾರೆ.

     ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದ ಗುರುಗಳ ಚಿಂತನೆಯನ್ನು ವಿದ್ಯೆ ಎಂದರೆ, ಅಕಾಡೆಮಿಕ್ ಶಿಕ್ಷಣ ಎಂದು ತಿಳಿದ ಕಾರಣದಿಂದಾಗಿಯೇ ಅವರ ಅನುಯಾಯಿಗಳೆನಿಸಿಕೊಂಡವರಲ್ಲಿ ಬಹಳಷ್ಟು ಮಂದಿ ಇಂದಿಗೂ ಬೌದ್ಧಿಕ ದಾಸ್ಯದಿಂದ ಮುಕ್ತವಾಗಿಲ್ಲ. ಹಾಗಿಲ್ಲದಿದ್ದರೆ, ವಣಾ೯ಶ್ರಮ ವ್ಯವಸ್ಥೆಗೆ ಸವಾಲಾಗಿ ನಾರಾಯಣ ಗುರುಗಳು ಮಂಗಳೂರಿನ ಕುದ್ರೋಳಿಯಲ್ಲಿ ಸ್ಥಾಪಿಸಿದ್ದ ದೇವಾಲಯವನ್ನು ಜೀಣೋ೯ದ್ಧಾರಗೊಳಿಸಿದ ಅವರ ಅನುಯಾಯಿಗಳು, ಅದನ್ನು ವಣಾ೯ಶ್ರಮ ವ್ಯವಸ್ಥೆಯನ್ನು ಪ್ರತಿಪಾದಿಸುವ ಶೃಂಗೇರಿ ಮಠದ ಸ್ವಾಮಿಗಳಿಂದ ಉದ್ಘಾಟನೆ ಮಾಡಿಸುತ್ತಿರಲಿಲ್ಲ. ಒಂದು ಜಾತಿ, ಒಂದು ಮತ, ಒಂದೇ ದೇವರು ಎಂದು ಸಾರಿದ ನಾರಾಯಣ ಗುರುಗಳು ಒಂದು ಜಾತಿಯ ಮಂದಿರಗಳಲ್ಲಿ ಬಂಧಿಯಾಗುತ್ತಿರಲಿಲ್ಲ. ಈ 'ಭಕ್ತಸಮೂಹ', 'ಭಜನಾಮಂಡಳಿ'ಗಳಿಂದ ನಾರಾಯಣ ಗುರುಗಳನ್ನು ಬಿಡುಗಡೆಗೊಳಿಸಿ ಅವರನ್ನು ಎಲ್ಲರಿಗೂ ಸಲ್ಲುವ ಗುರುಗಳನ್ನಾಗಿ ಮಾಡಬೇಕಾಗಿದೆ. ಈ ಮೂಲಕವೇ ಕೋಮುವಾದಿ ರಾಜಕಾರಣಕ್ಕೆ ಪ್ರತಿಯಾಗಿ 'ಸಾಮಾಜಿಕ ನ್ಯಾಯದ' ರಾಜಕಾರಣವನ್ನು ರೂಪಿಸುವ ಕಾರ್ಯ ನಡೆಯಬೇಕಾಗಿದೆ. ಇದು 'ಹಿಂದುತ್ವದ ಪ್ರಯೋಗಶಾಲೆ' ಎಂಬ ಕುಖ್ಯಾತಿಗೆ ಈಡಾದ ದಕ್ಷಿಣಕನ್ನಡದಿಂದಲೇ ಪ್ರಾರಂಭವಾಗಬೇಕು.

 

Sunday, September 29, 2013

06-03-2012ರಂದು ಟಿವಿ9 ಸುದ್ದಿವಾಹಿನಿಯಲ್ಲಿ ಉತ್ತರ ಪ್ರದೇಶ, ಉತ್ತರಖಂಡ್, ಪಂಜಾಬ್, ಗೋವಾ ಹಾಗೂ ಮಣಿಪುರ ರಾಜ್ಯಗಳ ಚುನಾವಣಿ ಫಲಿತಾಂಶದ ಕುರಿತ ಚಚೆ೯


07-03-2012ರಂದು ಟಿವಿ9 ಸುದ್ದಿವಾಹಿನಿಯಲ್ಲಿ ಉತ್ತರ ಪ್ರದೇಶ, ಉತ್ತರಖಂಡ್, ಪಂಜಾಬ್, ಗೋವಾ ಹಾಗೂ ಮಣಿಪುರ ರಾಜ್ಯಗಳ ಚುನಾವಣಿ ಫಲಿತಾಂಶದ ಕುರಿತ ಚಚೆ೯


07-03-2012ರಂದು ಟಿವಿ9 ಸುದ್ದಿವಾಹಿನಿಯಲ್ಲಿ ಉತ್ತರ ಪ್ರದೇಶ, ಉತ್ತರಖಂಡ್, ಪಂಜಾಬ್, ಗೋವಾ ಹಾಗೂ ಮಣಿಪುರ ರಾಜ್ಯಗಳ ಚುನಾವಣಿ ಫಲಿತಾಂಶದ ಕುರಿತ ಚಚೆ೯