Sunday, September 1, 2013

ನಾರಾಯಣ ಗುರುಗಳ ಚಳವಳಿ

(13ನೇ ಫೆಬ್ರುವರಿ 2000ದಂದು ತೃತೀಯ ಗೋರೆಗಾಂವ್ ವಿಚಾರಭಾರತಿ ಸಮ್ಮೇಳನದಲ್ಲಿ "ಸುಧಾರಣಾವಾದಿಗಳು ಮತ್ತು ಚಳವಳಿಗಳು" ಎಂಬ ಗೋಷ್ಟಿಯಲ್ಲಿ "ನಾರಾಯಣ ಗುರುಗಳ ಚಳವಳಿ"ಗಳ ಕುರಿತು ದಿನೇಶ್ ಅಮಿನ್ ಮಟ್ಟು ಅವರು ಮಂಡಿಸಿದ ಪ್ರಬಂಧ.)

ಇಂಡಿಯಾ ದೇಶದ ಧಾಮರ್ಿಕ ಪರಂಪರೆಯಷ್ಟೇ ಧೀರ್ಘವಾದದ್ದು ಅದಕ್ಕೆ ಎದುರಾಗಿ ಬಂದ ಪ್ರತಿಭಟನಾ ಚಳವಳಿಗಳ ಪರಂಪರೆ. ಬುದ್ಧ, ಬಸವನಂದ ಪ್ರಾರಂಭಗೊಂಡು ಭಕ್ತಿಪಂಥದ ಮೂಲಕ ಮುಂದುವರೆದು ಜ್ಯೋತಿಬಾ ಪುಲೆ, ನಾರಾಯಣ ಗುರು, ಪೆರಿಯಾರ್, ಅಂಬೇಡ್ಕರ್, ಗಾಂಧಿ, ಲೋಹಿಯಾವರೆಗೆ ನಡೆದುಕೊಂಡು ಬಂದ ಈ ಚಳವಳಿಗಳಲ್ಲಿ ಪ್ರತಿಭಟನೆಯ ಭಿನ್ನ ಅಭಿವ್ಯಕ್ತಿಗಳನ್ನು ಕಾಣಬಹುದು. ಧರ್ಮ ಸಮಾಜವನ್ನು ಜಡಗೊಳಿಸಿದಾಗೆಲ್ಲ ಅದಕ್ಕೆ ಚಲನಶೀಲತೆಯನ್ನು ತಂದು ಕೊಟ್ಟದ್ದು ಈ ಚಳವಳಿಗಳು.
 19ನೇ ಶತಮಾನದುದ್ದಕ್ಕೂ, ದೇಶದ ವಿವಿಧೆಡೆಗಳಲ್ಲಿ ಎರಡು ಪ್ರತ್ಯೇಕ ವಿಚಾರಧಾರೆಗಳ ಸುಧಾರಣಾವಾಧಿ ಚಳವಳಿಗಳು ನಡೆದವು. ಮೊದಲನೆಯದ್ದು ರಾಜಾರಾಮ್ ಮೋಹನ್ರಾಯ, ದಯಾನಂದ ಸರಸ್ವತಿ, ಕೇಶವ ಸೇನ್, ರಾನಡೆ, ದೇವಿಂದ್ರನಾಥ ಠಾಕೂರ್, ಅನಬೆಸೆಂಟ್ ಮೊದಲಾದ ಇಂಗ್ಲೀಷ್ ಕಲಿ ಮೇಲ್ಜಾತಿಯಿಂದಲೇ ಬಂದವರ ನೇತೃತ್ವದ ಚಳವಳಿಗಳು. ಇವು ಮಹಿಳೆಯರು ಮತ್ತು ಶೋಷಿತರಿಗಾಗುತ್ತಿರುವ ಅನ್ಯಾಯದ ವಿರುದ್ದ, ಧನ ಎತ್ತಿದವು.
 ಸತಿಪದ್ದತಿ, ವಿಧವಾ ವಿವಾಹ, ವರದಕ್ಷಿಣಿ, ಮೊದಲಾದ ಬಹುಮಟ್ಟಿಗೆ ಮೇಲ್ಜಾತಿ ಸಮಾಜದಲ್ಲಿನ ಅದರಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಸಂಬಂಧಿಸಿದ ಸಾಮಾಜಿಕ ಅನಷ್ಟಗಳ ನವಾರಣಿ, ಈ ಚಳವಳಿಗಳ ಮುಖ್ಯ ಉದ್ದೇಶವಾಗಿತ್ತು. ಆರ್ಯ ಸಮಾಜ ಪ್ರಾರಂಭಿಸಿದ್ದ 'ಶುದ್ಧಿ ಚಳವಳಿ' ಯನ್ನು ಗಮಿಸಿದರೆ, ಕೆಳವರ್ಗದ ಜನ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವದನ್ನು ತಪ್ಪಿಸುವುದು ಕೂಡ ಈ ಚಳವಳಿಗಳ ಮುಖ್ಯ ಉದ್ದೇಶವಾಗಿತ್ತು. ಈ ಚಳವಳಿ ಕೈಗೆತ್ತಿಕೊಂಡ ಬಹಳಷ್ಟು ಸಮಸ್ಯೆಗಳು ಕೆಳವರ್ಗದ ಜನರ ಜ್ವಲಂತ ಸಮಸ್ಯೆಯಾಗಿರಲಿಲ್ಲ.
 ಅದೇ ಕಾಲಕ್ಕೆ ಕೆಳವರ್ಗದಿಂದಲೇ ಮೂಡಿ ಬಂದ ನಾಯಕರು, ವಣರ್ಾಶ್ರಮ ವ್ಯವಸ್ಥೆಯನ್ನು ಪ್ರಶ್ನಿಸುವ ಚಳವಳಿಗಳ ನೇತೃತ್ವ ವಹಿಸಿದ್ದರು. ಒರಿಸ್ಸಾದಲ್ಲಿ ಮಹಿಮಾ ಸ್ವಾಮಿ ಎಂಬುವವರ ನೇತೃತ್ವದಲ್ಲಿ ಆದಿವಾಸಿಗಳು ತಮಗೆ ಪ್ರವೇಶವಿಲ್ಲವೆಂಬ ಕಾರಣಕ್ಕೆ ಪುರಿಯ ಜಗನ್ನಾಥ ದೇವಾಲಯವನ್ನು ಸುಡಲು ಪ್ರಯತ್ನಿಸಿದರು.
 ಕೊನೆಗೆ ಮಹಿಮಾ ಸ್ವಾಮಿ 1850ರಲ್ಲಿ ಮಹಿಮಾ ಧರ್ಮವನ್ನು ಭೋಧಿಸಿದ. ಅದೇ ಕಾಲಕ್ಕೆ ಮಧ್ಯಪ್ರದೇಶದ ಛತ್ತೀಸಘಡದ ಅಸ್ಪೃಶ್ಯರ ಒಂದು ಪಂಗಡವಾಗಿದ್ದ ಚಮ್ಮಾರರಲ್ಲಿ ಸತ್ನಮ್ ಪಂಥ ಹುಟ್ಟಿಕೊಂಡಿದೆ. ಅವರು ಪ್ರತಿಭಟನೆಯ ಅಂಗವಾಗಿ ತಾವೇ ಜನವಾರ ಹಾಕಿಕೊಳ್ಳತೊಡಗಿದರು. 1873ರಲ್ಲಿ ಪುಲೆ, ಸತ್ಯಶೋಧಕ ಸಮಾಜದ ಮೂಲಕ ಜಾತಿನಾಶ, ಮಹಿಳಾ ವಿಮೋಚನೆಯ ಕಾರ್ಯ ಪ್ರಾರಂಭಿಸಿದರು. ಕೋಲ್ಲಾಪುರದ ಸಾಹು ಮಹಾರಾಜರು, ನ್ಯಾಯಾಲಯಗಳಲ್ಲಿನ ಹುದ್ದೆಗಳಲ್ಲಿ ಶೇ.50ರಷ್ಟನ್ನು ಬ್ರಾಹ್ಮಣೇತರರಿಗೆ ಮೀಸಲಿಟ್ಟಿದ್ದರು. ತಮಿಳು ನಾಡಿನಲ್ಲಿ ಪೆರಿಯಾರ್ ಅವರ ಸ್ವಾಭಿಮಾನ ಚಳವಳಿಗೆ ರಂಗ ಸಜ್ಜಾಗತೊಡಗಿತ್ತು. ಸತ್ಯಶೋಧಕ ಸಮಾಜ, ಮಹಿಮಾ ಧರ್ಮ, ಸತ್ನಾಂ ಪಂಥ, ಪೆರಿಯಾರ್ ಅವರ ಸ್ವಾಭಿಮಾನ ಚಳವಳಿ ಅಲ್ಲಿನ ಸಮಾಜಗಳಲ್ಲಿ ಯಾವ ರೀತಿಯ ಕಂಪನಗಳನ್ನು ಉಂಟು ಮಾಡಿತ್ತೋ, ಅಂತಹದ್ದೇ ಒಂದು ಸ್ಪೋಟಕ ಸ್ಥಿತಿ 1888ರಲ್ಲಿ ನಾರಾಯಣ ಗುರುಗಳು ಅರವಿಪುರಂ ನಲ್ಲಿ ಶಿವದೇವಾಲಯ ಸ್ಥಾಪಿಸಿದಾಗ, ಕೇರಳದ ಹಿಂದೂ ಸಮಾಜದಲ್ಲಿ ನಿಮರ್ಾಣವಾಯಿತು.
 ಅದು ಶಂಕರಚಾರ್ಯರು ಹುಟ್ಟಿದ ನಾಡಿನಲ್ಲಿ ಅಸ್ಪೃಶ್ಯನೊಬ್ಬ, ಅಸ್ಪೃಶ್ಯರಿಗಾಗಿ ನಿಮರ್ಿಸಿದ ಸ್ಪೃಶ್ಯ ದೇವರ ದೇವಾಲಯ.
 ಮೊದಲ ದೇವಾಲಯ ಸ್ಥಾಪನೆಯ ನಂತರದ 48ವರ್ಷಗಳ ಕಾಲ ಅಲ್ಲಿನ ಶೋಷಿತರ ಕೊರಳ ದನಿಯಾಗಿ ಮೂಡಿ ಬಂದ ಸುಧಾರಣಾ ಚಳವಳಿ ಕೇರಳದ ಧಾಮರ್ಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳ ಚಿತ್ರವನ್ನೇ ಪಲ್ಲಟಗೊಳಿಸಿತ್ತು.
 ಈ ಚಳವಳಿಯ ಮೊದಲ 40ವರ್ಷಗಳಲ್ಲಿ ನಾರಾಯಣ ಗುರುಗಳು ಜೊತೆಯಲ್ಲಿದ್ದುಕೊಂಡೇ ಮಾರ್ಗದರ್ಶನ ನೀಡಿದರೆ, ಅವರ ಸಾವಿನ ನಂತರ 8ವರ್ಷಗಳ ಹೋರಾಟಕ್ಕೆ ಅವರ ತತ್ವಗಳೇ ಚಳವಳಿಯ ದಾರಿಗೆ ಬೆಳಕಾಗಿತ್ತು. ದಲಿತರಿಗೂ ದೇವಸ್ಥಾನ ಪ್ರವೇಶ ಅವಕಾಶ ನಡುವ 'ದೇವಾಲಯ ಪ್ರವೇಶ' ಘೋಷಣೆ ಹೊರಬಿದ್ದಾಗ ಆ ದಿನವನ್ನು ನೋಡಲು ನಾರಾಯಣ ಗುರುಗಳು ಜೀವಂತವಿರಲಿಲ್ಲ.
 ಒಂದು ಚಳವಳಿಯ ಸೋಲು-ಗೆಲುವು, ಅದರ ಸಿದ್ದಾಂತ, ಸಂಘಟನೆ ಮತ್ತು ಹೋರಾಟದ ನೆಲಗಳನ್ನು ಅವಲಂಭಿಸಿರುತ್ತೇ. ನಾರಾಯಣ ಗುರು ಚಳವಳಿಯ ಎಲ್ಲಾ ಮಗ್ಗಲುಗಳನ್ನು ಈ ರೀತಿ ಸಮಾಜ ವಿಜ್ಞಾನದ ಹಿನ್ನೆಲೆಯಲ್ಲಿ ಅಧ್ಯಯನ ನಡೆಸುವ ಪ್ರಯತ್ನ ಕನ್ನಡದಲ್ಲಿ ನಡೆದಿಲ್ಲ. ಈ ರೀತಿಯ ಅಧ್ಯಯನದ ಕೊರತೆಯಿಂದಾಗಿಯೇ ನಾರಾಯಣ ಗುರು ಒಬ್ಬರದ್ದೇ ವೈಭವೀಕರಣ ನಡೆದು ಆ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ನಾರಾಯಣ ಗುರುಗಳ, ಅನೇಕ ಅನುಯಾಯಿಗಳ ಪರಿಚಯ ಹೊರಜಗತ್ತಿಗೆ ಆಗಿಲ್ಲ.
ನಾರಾಯಣ ಗುರು ಚಳವಳಿ, ಪ್ರಮುಖವಾಗಿ 5ಹಂತಗಳಲ್ಲಿ ನಡೆಯಿತು.
 ಮೊದಲನೇಯದು ಡಾ.ಪಲ್ಪು ನೇತೃತ್ವದ ಸಾಮಾಜಿಕ ಜಾಗೃತಿ, ಎರಡನೇಯದ್ದು ನಾರಾಯಣ ಗುರು ನೇತೃತ್ವದ ಸಾಮಾಜಿಕ ಸುಧಾರಣೆ, ಮೂರನೆಯದ್ದು ಕುಮಾರನ್ ಆಶಾನ್ ನೇತೃತ್ವದ ಸಕರ್ಾರಿ ಶಾಲೆಗಳಲ್ಲಿ ಪ್ರವೇಶಕ್ಕಾಗಿ ನಡೆದ ಚಳವಳಿ, ನಾಲ್ಕನೇಯದ್ದು ಟಿ.ಕೆ ಮಾಧವನ್ ನೇತೃತ್ವದಲ್ಲಿ ದೇವಾಲಯಗಳ ಪ್ರವೇಶ ಮತ್ತು ಅಸ್ಪೃಶ್ಯತೆಯ ವಿರುದ್ಧ ನಡೆದ ಚಳವಳಿ ಹಾಗೂ ಕೊನೆಯದ್ದು, ಸಿ.ಕೇಶವನ್ ನೇತೃತ್ವದಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ನಡೆದ ಹೋರಾಟ. ಈ ಎಲ್ಲಾ ಹೋರಾಟಗಳು ನಾರಾಯಣ ಗುರುಗಳ ಸಿದ್ಧಾಂತ ನೆಲೆಗಟ್ಟಿನ ಮೇಲೆಯೇ ನಡೆದಿವೆ.
 ಧಾಮರ್ಿಕ ಸುಧಾರಣೆಯ ಮೂಲಕ ಪ್ರಾರಂಭಗೊಂಡ ನಾರಾಯಣ ಗುರು ಚಳವಳಿ ಕಾಲ ಸರಿದಂತೆ ಶೈಕ್ಷಣಿಕ, ಆಥರ್ಿಕ ಮತ್ತು ರಾಜಕೀಯ ಆಯಾಮಗಳನ್ನು ಪಡೆದುಕೊಂಡು ಬೆಳೆಯುತ್ತಾ ಹೋಗಿದ್ದು ಕೇವಲ ಆಕಸ್ಮಿಕವಲ್ಲ. ಅದು ನಾರಾಯಣ ಗುರುಗಳೇ ರೂಪಿಸಿದ ಕಾರ್ಯ ತಂತ್ರವಾಗಿತ್ತು. ಸಮಾಜದ ಅಮೂಲಾಗ್ರ ಬದಲಾವಣೆ ಎಂದರೆ, ಪ್ರಮುಖವಾಗಿ ಆಥರ್ಿಕ ಮತ್ತು ಸಾಮಾಜಿಕ ಬದಲಾವಣೆ ಎಂಬುದನ್ನು ನಾರಾಯಣ ಗುರು ಅರಿತಿದ್ದರು. ಇಂತಹ ಬದಲಾವಣೆಗೆ ಸಮುದಾಯದ ಮನಸ್ಸನ್ನು ಸಿದ್ದಗೊಳಿಸುವ ಪ್ರಾಥಮಿಕ ಕಾರ್ಯವನ್ನು ಅವರು ದೇವಾಲಯಗಳ ಸ್ಥಾಪನೆ ಮೂಲಕ ಮಾಡಿದರು.
 ನಾರಾಯಣ ಗುರುಗಳ ಮಹತ್ವ ಅರಿಯಬೇಕಾದರೆ, ಅವರಿಗಿಂತ ಹಿಂದಿನ ಕೇರಳದ ಸ್ಥಿತಿಯ ಸ್ಥೂಲ ಚಿತ್ರಣ ತಿಳಿದುಕೊಳ್ಳುವುದು ಅನವಾರ್ಯ. ದರಿದ್ರರಲ್ಲಿ, ರೋಗಿಗಳಲ್ಲಿ ದೇವರನ್ನು ಕಾಣಬೇಕೆಂದು ಹೇಳಿದ ವಿವೇಕಾನಂದರು ಕೇರಳ ಮನೋರೋಗಿಗಳ ಆಸ್ಪತ್ರೆ ಎಂದು ಹೇಳಿ ಕೈಚೆಲ್ಲಿ ಹೋಗಿದ್ದರು.
 ಜಾತಿ ವ್ಯವಸ್ಥೆ ಆ ರೀತಿಯ ಭೀಕರ ಮನೋರೋಗಿಯನ್ನು ಅಲ್ಲಿ ಸೃಷ್ಟಿಸಿತು. ದೇವಸ್ಥಾನ ಪ್ರವೇಶ ದೂರವೇ ಉಳಿಯಿತು. ಆದರೆ, ಎದುರಿನ ರಸ್ತೆಯಲ್ಲಿಯೂ ಅಸ್ಪೃಶ್ಯರು ನಡೆಯುವಂತಿರಲಿಲ್ಲ. ಗಾಂಧೀಜಿ ಮತ್ತು ನಾರಾಯಣ ಗುರು ಮಾರ್ಗದರ್ಶನದಲ್ಲಿಯೇ ನಡೆದ ಐತಿಹಾಸಿಕ ವೈಕಂ ಸತ್ಯಾಗ್ರಹ ನಡೆದದ್ದು ದೇವಸ್ಥಾನ ಪ್ರವೇಶಕ್ಕಾಗಿ ಅಲ್ಲ, ಅದರ ಮುಂಭಾಗದ ರಸ್ತೆಯಲ್ಲಿ ನಡೆದಾಡುವ ಸ್ವಾತಂತ್ರ್ಯಕ್ಕಾಗಿ ಎಂಬುದು ಗಮನಾರ್ಹ.
 ಕೆಳಜಾತಿ ಜನರು ಮಧ್ಯಾಹ್ನದ ಬಿಸಿಲಿನಲ್ಲಿ ಮಾತ್ರ ಹೊರಗಡೆ ಬರಬೇಕಿತ್ತು. ಯಾಕೆಂದರೆ, ಉಳಿದ ಸಮಯಗಳಲ್ಲಿ ಉದ್ದಕ್ಕೆ ಚಾಚಿಕೊಳ್ಳುವ ನೆರಳು ಎದುರಿಗೆ ಬರುವ ಸವಣರ್ಿಯರ ಮೇಲೆ ಬಿದ್ದು ಅಪವಿತ್ರವಾಗುವ ಭಯ. ಆತ ಕಾಲಿಗೆ ಚಪ್ಪಲಿ, ತಲೆಗೆ ವಸ್ತ್ರ ಹಾಕುವಂತಿರಲಿಲ್ಲ. ಬ್ಯಾಂಕ್ ಅಂಚೆ ಕಛೇರಿಗಳ ಒಳಗೆ ಸವಣರ್ೀಯರಿದ್ದರೆ, ಒಳ ಪ್ರವೇಶಿಸುವಂತಿರಲಿಲ್ಲ. ಕಥಕ್ಕಳಿಯಂತಹ ನೃತ್ಯದಲ್ಲಿ ಅವರು ದೇವರುಗಳ ಪಾತ್ರ ಮಾಡುವಂತಿರಲಿಲ್ಲ.
 ಕೆಳ ವರ್ಗದ ಮಹಿಳೆಯರ ಸ್ಥಿತಿ ಇನ್ನೂ ನರಕ ಸದೃಶ್ಯ. ಅವರು ಎದೆಯ ಮೇಲೆ ಬಟ್ಟೆ ಧರಿಸುವಂತಿರಲಿಲ್ಲ. ಇದನ್ನು ಪ್ರತಿಭಟಿಸಿದ ಸ್ವಾಭಿಮಾನಿ ಮಹಿಳೆಯೊಬ್ಬರು, ತನ್ನ ಸ್ತನಗಳನ್ನೇ ಕುಯ್ದು ಅಪರ್ಿಸಿ, ಪ್ರಾಣಾರ್ಪಣೆ ಮಾಡಿದ ಹೃದಯವಿಧ್ರಾವಕ ಘಟನೆ ಅಲ್ಲಿ ನಡೆದಿತ್ತು. ಅವರು ಹೂ ಮುಡಿಯುವಂತಿರಲಿಲ್ಲ. ಎಷ್ಟೋ ಕಡೆಗಳಲ್ಲಿ ಮದುವೆಯ ಮೊದಲು ರಾತ್ರಿಗಳನ್ನು ಊರಿನ ನಂಬೂದರಿ ನಾಯಕರ ಜೊತೆಯಲ್ಲಿ ಕಳೆಯಬೇಕಿತ್ತು.
 ಇವೆಲ್ಲದರ ಜೊತೆಗೆ ನೂರೆಂಟು ಮೂಡನಂಬಿಕೆಗಳು ಮತ್ತು ದುಂದುವೆಚ್ಚದ ಇಂತಹ ಸಂಪ್ರದಾಯಗಳನ್ನು ಅವರು ಕುತ್ತಿಗೆಗೆ ಗಂಟು ಹಾಕಲಾಗಿತ್ತು. ಮೈ ನೆರೆಯುವ ಮೊದಲೇ, ಯಾವುದಾದರೂ ಒಬ್ಬ ವ್ಯಕ್ತಿಯಿಂದ ತಾಳಿ ಕಟ್ಟಿಸುವ, "ತಾಳಿಕೆಟ್ಟು ಕಲ್ಯಾಣಂ" ಎಂಬ ಬಾಲ್ಯ ವಿವಾಹಗಿಂತಲೂ ಅಮಾನವನೀಯವಾದ ಸಂಪ್ರದಾಯವೊಂದು ಕೇರಳದಲ್ಲಿತ್ತು. ಬಾಲ್ಯ ವಿವಾಹದಲ್ಲಿ ಕನಿಷ್ಟ ಮದುವೆಯ ಒಪ್ಪಂದವಿತ್ತು. ಇಲ್ಲಿ ಅದೊಂದು ಅಣಕು ಮದುವೆ. ಮೈ ನೆರದದ್ದನ್ನು ಊರಿಗೆಲ್ಲ ಘೋಷಿಸುವ "ತಿರುಂಡಕಲಿ" ಗಭರ್ೀಣಿಯಾದ ಕೂಡಲೇ "ಪುಲೂಕೂಡಿ" ಎಂಬ ಸೀಮಂತ ನಡೆಸುವ ಸಂಪ್ರದಾಯ ಆಡಂಭರದ ಮದುವೆ ಈ ಸಂಪ್ರದಾಯಗಳ ಕಾರಣದಿಂದಾಗಿಯೇ ಈಳವ ಜನ ವಂಶ ಪಾರಂಪರ್ಯವಾಗಿ ನಂಬೂದಿರಿ ನಾಯರ್ಗಳ ಸಾಲಗಾರರಾಗಿ ಜೀತದ ಜೀವನ ಸಾಗಿಸಬೇಕಾಗಿತ್ತು. ಆದರೆ, ಇದೇ ಕೇರಳ ಹಿಂದೂ ದೇಶದಲ್ಲಿಯೇ ಅತ್ಯಂತ ಹೆಚ್ಚು ಸಾಕ್ಷರತೆ ಇರುವ ಮತ್ತು ಪ್ರಗತಿಪರ ಚಿಂತಕರಿರುವ ಪ್ರಜಾಸತಾತ್ಮಕವಾಗಿ ಆಯ್ಕೆಯಾದ ದೇಶದ ಮೊದಲ ಹಾಗೂ ಜಗತ್ತಿನ ಎರಡನೇ ಕಮ್ಯೂನಿಷ್ಟ ಸಕರ್ಾರ ಅಸ್ತಿತ್ವಕ್ಕೆ ಬಂದದ್ದು ಕೇರಳದಲ್ಲಿ. ದೇಶ ವಿಭಜನೆ ಕಾಲದಲ್ಲಿ ಉತ್ತರ ಭಾರತ ಕೋಮುದಳ್ಳುರಿಯಲ್ಲಿ ಹತ್ತಿ ಉರಿಯುತ್ತಿದ್ದಾಗ ಶೇ.18ಕ್ಕೂ ಹೆಚ್ಚು ಮುಸ್ಲಿಂ ಜನಸಂಖ್ಯೆಯೇ ಇರುವ ಕೇರಳ ಶಾಂತವಾಗಿತ್ತು.
ಅಡ್ವಾನಿಯವರ ರಥಯಾತ್ರೆಯ ನಂತರ ದೇಶಾದ್ಯಂತ ಕೋಮುವಾದಿ ಚಟುವಟಿಕೆಗಳ ಬುಗಿಲೆದ್ದಾಗಲೂ ಇಲ್ಲಿ, ಯಾವ ಗಲಭೆಗಳು ನಡೆಯಲಿಲ್ಲ.
 ದಕ್ಷಿಣದ ರಾಜ್ಯಗಳಲ್ಲಿ ಪ್ರಯಾಸಪಟ್ಟು, ಪ್ರವೇಶ ಪಡೆದ ಬಿಜೆಪಿಯನ್ನು ಈಗಲೂ ಹೊಸಲಿನಾಚೆ ನಲ್ಲಿಸಿರುವ ರಾಜ್ಯ ಕೇರಳ. ಇದು ಕೇವಲ ನೂರು ವರ್ಷಗಳ ಅವಧಿಯಲ್ಲಿ ನಡೆದ ಬದಲಾವಣೆ. ನಾರಾಯಣ ಗುರುಗಳು ಹುಟ್ಟಿ ಸರಿಯಾಗಿ ನೂರು ವರ್ಷಗಳ ಅವಧಿಯಲ್ಲಿ ನಡೆದ ಬದಲಾವಣೆ. ಅದೇ ನೂರು ವರ್ಷಗಳ ನಂತರ ಕೇರಳದಲ್ಲಿ ಮೊದಲ ಬಾರಿಗೆ ಕಮ್ಯೂನಷ್ಟ ಸಕರ್ಾರ ಅಸ್ತಿತ್ವಕ್ಕೆ ಬಂತೆಂಬುದು ಉಲ್ಲೇಖನಯ. ನಾರಾಯಣ ಗುರುಗಳು ಪ್ರಾರಂಭಿಸಿದ ಧಾಮರ್ಿಕ ಸುಧಾರಣಾ ಚಳವಳಿಯನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಅವರ ಕಾರ್ಯತಂತ್ರ ಉಳಿದ ಸಮಾಜ ಸುಧಾರಕರಿಗಿಂತ ಯಾಕೆ ಭಿನ್ನವಾಗಿತ್ತು ಎಂಬ ಪ್ರಶ್ನೆಗಳಿಗೆ ಈ ಹಿನ್ನೋಟದಲ್ಲಿ ಉತ್ತರ ಇದೆ. ಅಸಶ್ಯತೆಯ ವಿರುದ್ಧದ ಹೋರಾಟಗಳಲ್ಲಿ ದೇವಸ್ಥಾನ ಪ್ರವೇಶ ಚಳವಳಿಯದ್ದು ಪ್ರಮುಖ ಪಾತ್ರವಾದರೆ, ನಾರಾಯಣ ಗುರುಗಳು ಅದನ್ನೇ ಕೈಬಿಟ್ಟಿದ್ದರು. ಅವರು ಸವಣರ್ೀಯರ ಒಡೆತನದ ದೇವಾಲಯ ಪ್ರವೇಶಿಸಲಿಲ್ಲ. ಅದನ್ನು ಬಹಿಷ್ಕರಿಸಿದರು. ಮತ್ತು ಅವಣರ್ಿಯ ದೇವಾಲಯಗಳನ್ನು ಸ್ಥಾಪಿಸಿದರು. ಆದರೆ, ಅವರು ಮತ್ತೊಂದು ಧರ್ಮವನ್ನು ಕೂಡ ಸ್ಥಾಪಿಸಲು ಹೋಗಲಿಲ್ಲ.
ಮೊದಲು ದೇವಸ್ಥಾನ ಪ್ರವೇಶ ಚಳವಳಿ ನಡೆಸದೆ, ದೇವಸ್ಥಾನ ನಮರ್ಿಸುವ ಅವರ ಕಾರ್ಯತಂತ್ರ ಎರಡು ರೀತಿಯಲ್ಲಿ ಅವರಿಗೆ ನೆರವಾಯಿತು. ದೇವಸ್ಥಾನ ಪ್ರವೇಶ ಹೋರಾಟಕ್ಕೆ ಎದುರಾಗುವ ಪ್ರತಿಭಟನೆಯನ್ನು ಎದುರಿಸುವ ಸಂಘಟನಾ ಶಕ್ತಿ ಆಗಿನ್ನೂ ಇರಲಿಲ್ಲ ಎಂದು ನಾರಾಯಣ ಗುರುಗಳಿಗೆ ತಿಳಿದಿತ್ತು. ಮುಂದೆ ಮೂವತ್ತಾರು ವರ್ಷಗಳ ನಂತರ ದೇವಾಲಯಗಳ ಮುಂಭಾಗದ ರಸ್ತೆಗಳಲ್ಲಿ ನಡೆಯುವ ಹಕ್ಕಿಹಾಗಿ ನಡೆದ ವೈಕಂ ಸತ್ಯಾಗ್ರಹಕ್ಕೆ ಎದುರಾದ ಪ್ರತಿಭಟನೆಯನ್ನು ನೋಡಿದರೆ, ಇದು ಸ್ಪಷ್ಟವಾಗುತ್ತದೆ.
ದೇವಸ್ಥಾನದ ಸ್ಥಾಪನೆಯನ್ನು ಪ್ರಶ್ನಿಸಿದ ಪುರೋಹಿತರಿಗೆ ನಾನು ಸ್ಥಾಪಿಸಿದ್ದು ಈಳವರ ಶಿವ ಎಂಬ ಮಾಮರ್ಿಕ ಉತ್ತರ ಕೊಟ್ಟು ಗುರುಗಳು ಯುದ್ದಕ್ಕೆ ಬಂದ ಅವರನ್ನು ಶಸಪ್ರಯೊಗವಿಲ್ಲದೆಯೇ ನಶಸಗೊಳಿಸಿದರು. ಅದೇ ರೀತಿ, ಸಹಸ್ರಮಾನಗಳಿಂದ ತಮ್ಮಿಂದ ದೂರವೇ ಉಳಿದಿದ್ದ ದೇವಸ್ಥಾನಗಳಿಗೆ ಪ್ರವೇಶಿಸಲು ಅಡ್ಡಿಯಾಗುವ ಸಾಂಪ್ರದಾಯಿಕ ಮನಸ್ಸಿನ ಹಿಂಜರಿಕೆ ಹಾಗೂ ಭೀತಿಯಿಂದಲೂ ಕೆಳವರ್ಗದ ಜನರನ್ನು ಅವರು ಮುಕ್ತಗೊಳಿಸಿದರು. ದೇವಾಲಯಕ್ಕೆ ಹೋಗುವ ಹಕ್ಕು ನಮಗಿಲ್ಲವಾದರೆ, ದೇವಾಲಯವನ್ನೇ ನಮ್ಮಲ್ಲಿಗೆ ತರುತ್ತೇನೆ ಎಂದು ಅಸ್ಪಶ್ಯರಿಗೆ ಪೂಜೆಯ ಹಕ್ಕನ್ನು ನಡುವ ಮೂಲಕ ಅವರಲ್ಲಿ ಸ್ವಾಭಿಮಾನ ಜಾಗೃತಿಗೆ ಕಾರಣರಾದರು.
ದೇವಸ್ಥಾನಗಳ ಸ್ಥಾಪನೆ ಅಂದಿನ ಪುರೋಹಿತಶಾಹಿಗೆ ಅಘಾತಕಾರಿಯಾದ ಹೊಡೆತ, ಭಕ್ತ ಸಮೂಹದಲ್ಲಿ ದೈಹಿಕವಾಗಿ ದೂರವೇ ಉಳಿದಿದ್ದ ಮೂರನೇ ಎರಡರಷ್ಟಿದ್ದ ಕೆಳವರ್ಗದ ಜನರು ಮಾನಸಿಕವಾಗಿ ಕೂಡ ದೂರವೇ ಉಳಿದರೆ, ಹುಂಡಿ ತುಂಬುವುದು ಹೇಗೆ? ಅದರ ಮೂಲಕ ಉದರ ತುಂಬುವುದು ಹೇಗೆ ? ಎಂಬ ಭೀತಿ ಅವರನ್ನಾವರಿಸಿತ್ತು. ನಾರಾಯಣ ಗುರುಗಳ ನಂತರ ಕೇರಳದಲ್ಲಿ ಸವಣರ್ಿಯ ದೇವಾಲಯಗಳ ಆದಾಯದಲ್ಲಿ ಗಣನಯ ಕುಸಿತ ಕಂಡುಬಂದಿರುವುದು ದಾಖಲೆಯಲ್ಲಿದೆ.
ನಾರಾಯಣ ಗುರುಗಳು ಎಂದೂ ಹಿಂದೂ ಧರ್ಮವನ್ನು ಪುಲೆ, ಪೆರಿಯಾರ್, ಅಂಬೇಡ್ಕರ್ರವರಂತೆ ಸಾರಾಸಗಟಾಗಿ ತಿರಸ್ಕರಿಸಲಿಲ್ಲ. ಆ ವಿಚಾರದಲ್ಲಿ ಅವರು ಬಸವಣ್ಣನ ತತ್ವಗಳಿಗೆ ಹತ್ತಿರವಾಗಿದ್ದರು. ಅವರು ತಮ್ಮ ಜೀವನದುದ್ದಕ್ಕೂ ಧಾಮರ್ಿಕ ಪುನರುತ್ಥಾನದ ಬಗ್ಗೆ ಮಾತನಾಡುತ್ತಿದ್ದರು. ಇಲ್ಲಿ ದೇವನೂರು ಮಹಾದೇವ ಅವರ ಮಾತೊಂದು ನೆನಪಿಗೆ ಬರುತ್ತದೆ.
ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನವಾದ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೆ ಕುಯ್ಯುವಂತೆ ಗಾಂಧೀಜಿ ಕಾಣಿಸಿದರೆ, ಅಂಬೇಡ್ಕರ್ ಹೊರಗಿನಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವಂತೆ ಕಾಣುತ್ತಾರೆ ಎಂದು ಗಾಂಧೀ ಮತ್ತು ಅಂಬೇಡ್ಕರ್ ಅವರ ಸೈದ್ಧಾಂತಿಕ ಸಂಘರ್ಷವನ್ನು ಪ್ರಸ್ತಾಪಿಸುತ್ತಾ ದೇವನೂರು ಹೇಳುತ್ತಾರೆ.
ಗಾಂಧೀ ಆ ಕೆಲಸ ಮಾಡಿರುವ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ನಾರಾಯಣ ಗುರುಗಳ ಧಾಮರ್ಿಕ ಸುಧಾರಣಾವಾದಿ ಚಳವಳಿ ಮಾತ್ರ ಈ ಕಂಬ ಕುಯ್ಯುವ ಕೆಲಸವನ್ನು ಮಾಡಿದೆ. ಅವರದ್ದು ಸಂಘರ್ಷದ ಹಾದಿಯಾಗಿರಲಿಲ್ಲ. ಅವರ ಹೋರಾಟದ ಎಲ್ಲಾ ಕಾರ್ಯತಂತ್ರಗಳನ್ನು ಅವಲೋಕಿಸುತ್ತಾ ಬಂದರೆ, ಅವರಲ್ಲೊಬ್ಬ ಚತುರ ರಾಜಕಾರಣಿ ಇದ್ದನೆಂಬುದು ಸ್ಪಷ್ಟವಾಗುತ್ತದೆ. ಅವರು ಸಮಾಜ ಸುಧಾರಕನ ಕೆಲಸ ಮಾಡಲಿಕ್ಕೆಂದೇ ಸನ್ಯಾಸಿಯ ಪಾತ್ರವನ್ನು ಧರಿಸಿದರೇನೋ ಎಂಬ ಅನುಮಾನ ಬರುತ್ತದೆ.
ಅವರು ದೇವಸ್ಥಾನ ಪ್ರವೇಶಾವಕಾಶದ ಬಗ್ಗೆ ಎಂದೂ ಗಂಭೀರವಾಗಿ ಪ್ರಯತ್ನ ನಡೆಸಲಿಲ್ಲ. ಅವರು ಸಾವಿನ ಎಂಟು ವರ್ಷಗಳ ನಂತರ ಕೇರಳ ಸರಕಾರ ದೇವಾಲಯ ಪ್ರವೇಶ ಘೋಷಣೆಯನ್ನು ಹೊರಡಿಸಿತ್ತು. ಆಗಲೇ ನಾರಾಯಣ ಗುರುಗಳು ಕೇರಳ, ಮದ್ರಾಸ್ ಮತ್ತು ಮಂಗಳೂರಿನಲ್ಲಿಯೂ ದೇವಸ್ಥಾನಗಳನ್ನು ಸ್ಥಾಪಿಸಿದ್ದರು. ನೂರಾರು ಗುರುಮಂದಿರ ಹಾಗೂ ಆಶ್ರಮಗಳು ಪ್ರಾರಂಭವಾಗಿದ್ದವು.
ದೇವಸ್ಥಾನಗಳ ಬಗೆಗಿನ ಅವರ ಪರಿಕಲ್ಪನೆಯೇ ಕ್ರಾಂತಿಕಾರಿಯಾದುದು. ಅರವಿಪುರಂನಲ್ಲಿ ಲಿಂಗಸ್ಥಾಪನೆ ಮಾಡಿದ ಗುರುಗಳು ತಮ್ಮ ಕೊನೆಯ ಪ್ರತಿಷ್ಠಾಪನೆಯನ್ನು ಕಳವಂ ಕೋಡಂ ನಲ್ಲಿ ಕನ್ನಡಿಯೊಂದನ್ನು ಸ್ಥಾಪಿಸುವ ಮೂಲಕ ನಡೆಸಿದರು. ಅದರ ನಡುವೆ ಒಂದೆಡೆ ಸತ್ಯ, ಧರ್ಮ, ಶಾಂತಿ, ದಯೆ ಎಂಬ ಸಂದೇಶವನ್ನು ಸಾರುವ ಲಕವನ್ನಷ್ಟೇ ಸ್ಥಾಪಿಸಿದರೆ, ಕರಮಕ್ಕು ಎಂಬಲ್ಲಿ ನಂದಾ ದೀಪವನ್ನಷ್ಟೇ ಹಚ್ಚಿದರು. ಕೊನೆಗಾಲದಲ್ಲಿ ಶಿವಗಿರಿಯಲ್ಲಿ ಅವರ ಚಿಂತನೆಯ ಮೂಲಧಾತುವಾದ ಅರಿವು ಸಂಕೇತವಾಗಿ ಸರಸ್ವತಿಯ ಮೂತರ್ಿಯನ್ನು ಪ್ರತಿಷ್ಠಾಪಿಸಿಸದರೆ, ಶಂಕರಾಚಾರ್ಯರು ಹುಟ್ಟೂರಿಗೆ ಸಮೀಪದ ಅಲ್ವಾಯಿನಲ್ಲಿ  ನಮರ್ಿಸಿ ಅದ್ವೆತಾಶ್ರಮದಲ್ಲಿ ಮೂತರ್ಿಯನ್ನೇ ಸ್ಥಾಪಿಸಲಿಲ್ಲ. ಕೊನೆಗಾಲದಲ್ಲಿ ದೇವಸ್ಥಾನಗಳ ಸ್ಥಾಪನೆ ನಲ್ಲಿಸಿ ಎಂದು ಅನುಯಾಯಿಗಳಿಗೆ ಕರೆ ನಡಿದರು. ನಾರಾಯಣ ಗುರುಗಳು ತಮ್ಮ ಚಳವಳಿ ಉದ್ದಕ್ಕೂ ದೇವಾಲಯಗಳನ್ನು ಸಾಮಾಜಿಕ ಪರಿವರ್ತನೆಯ ಸಾಧನವಾಗಿ ಬಳಸುತ್ತಾ ಬಂದುದ್ದನ್ನು ಕಾಣಬಹುದು. ಅದು ಸನಾತನ ಧಮರ್ಾವಲಂಭಿಗಳ ಆಶಯಕ್ಕೆ ತದ್ವಿರುದ್ದವಾದದು. ದೇವಾಲಯಗಳ ಪೂಜೆ-ಹವನ-ಹೋಮಗಳಲ್ಲಿ ಮುಳುಗಿ ವ್ಯಾಪಾರಿ ಕೇಂದ್ರಗಳಾಗುವ ಬದಲಿಗೆ ಅವುಗಳನ್ನು ಸಾಮೂಹಿಕ ಪ್ರಾರ್ಥನಾ ಮಂದಿರವಾಗಿ ಉಳಿಸಬೇಕೆಂದು ಅವರು ಬಯಸಿದ್ದರು. ಈ ದೃಷ್ಟಿಯಿಂದ ಅವರ ದೇವಾಲಯದ ಪರಿಕಲ್ಪನೆ ಮಸೀದಿ, ಚಚರ್ುಗಳಿಗೆ ಹೆಚ್ಚು ಹತ್ತಿರವಾಗಿತ್ತು. ದೇವಸ್ಥಾನಗಳ ಭಕ್ತಿ ಪೀಠವಾಗುವದರ ಜೊತೆಯಲ್ಲಿ ಅಧ್ಯಯನ ಕೇಂದ್ರವಾಗಬೇಕು. ಉದ್ಯಾನ, ವಾಚನಾಲಯಗಳನ್ನೊಳಗೊಂಡು ಅವು ಸ್ವಚ್ಛ ಪರಿಸರದಲ್ಲಿ ನಮರ್ಾಣಗೊಳ್ಳಬೇಕು ಎಂದು ಅವರು ಹೇಳುತ್ತಿದ್ದರು. ಅವರು ಸ್ಥಾಪಿಸಿದ ಎಲ್ಲಾ ದೇವಾಲಯಗಳು ಈ ಅಭಿಪ್ರಾಯವನ್ನೇ ಬಿಂಬಿಸುತ್ತದೆ.
ನಾರಾಯಣ ಗುರುಗಳದ್ದು ಮುಖಾಮುಖಿ ಹೋರಾಟವಲ್ಲ. ಅವರು ವೈದಿಕ ಶಾಹಿ ಏಕಸ್ವಾಮ್ಯಕ್ಕೆ ನೇರ ಸವಾಲು ಹಾಕಲಿಲ್ಲ. ಅದರ ಬದಲಿಗೆ ವೈದಿಕ ಅಧಿಪತ್ಯದ ಬೇರುಗಳನ್ನೇ ಅಲ್ಲಾಡಿಸಿದರು. ಸಂಸ್ಕೃತವನ್ನು ಸಂಪೂರ್ಣವಾಗಿ ತಿರಸ್ಕರಿಸದೇ ಅದನ್ನು ಅಧ್ಯಯನ ಮಾಡಿ ಶೂದ್ರರೂ  ಅದನ್ನು ಕಲಿತು ಅರಗಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟರು. ವೇದಾಧ್ಯಯನಕ್ಕೆ ಜಾತಿ  ಅಸ್ಪಶ್ಯವಲ್ಲ ಎಂದು ಸಾರಿದ ಗುರುಗಳು ಶಂಕರಾಚಾರ್ಯರ ಅಧ್ವೆತಾ ವೇದಾಂತವನ್ನು ಕಲಿತರು. ಆತ್ಮೋಪದೇಶ ಶತಕಂ ಸೇರಿದಂತೆ ಹಲವಾರು ಸಂಸ್ಕೃತ ಗ್ರಂಥಗಳನ್ನು ಬರೆದರು. ಬ್ರಹ್ಮಸೂತ್ರದ ವಿಶ್ಲೇಷಣೆ ಮಾಡಿದ ಮೊದಲ ಅಸ್ಪಶ್ಯರು ಅವರು.
ದೇವಸ್ಥಾನಗಳಷ್ಟೇ ಸ್ಥಾಪಿಸದೆ ಅಲ್ಲಿ ಅರ್ಚಕರಾಗಿ ಕೆಳವರ್ಗದ ಜಾತಿ ಜನರನ್ನೇ ನೇಮಿಸಿದರು. ಅವರ ತರಬೇತಿಗಾಗಿ ಶಿವಗಿರಿಯಲ್ಲಿ ಬ್ರಹ್ಮ ಮೀಮಾಂಸ ಶಾಲೆಗಳನ್ನು ತೆರೆದು ಬ್ರಹ್ಮ ವಿದ್ಯೆ ಕಲಿಸಿದರು. ಅವರಿಂದ ಸ್ಥಾಪನೆಗೊಂಡ ಬ್ರಹ್ಮ ವಿದ್ಯಾ ಕೇಂದ್ರದಲ್ಲಿ ಈಳವರಲ್ಲದೆ, ಪುಲಯ, ಪರಯ ಮೊದಲಾದ ಇನ್ನತರ ಕೆಳಜಾತಿಯ ಜನರಲ್ಲದೆ, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರೂ ಆಗಮಶಾಸವನ್ನೊಳಗೊಂಡಂತೆ ವೇದಾಧ್ಯಯನ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ ಈಗಲೂ ಬಿಲ್ಲವರ ಜಾತಿಯ ಮದುವೆಯನ್ನು ಬಿಲ್ಲವ ಅರ್ಚಕರೇ ಮಾಡುತ್ತಿದ್ದಾರೆ. ಅವರೆಲ್ಲರೂ ಮೂಲತಃ ಶಿವಗಿರಿಯಲ್ಲಿ ತರಬೇತಿ ಪಡೆದವರು. ಆದರೆ, ಈಗ ಅವರಲ್ಲಿಯೂ ಬೆಳೆಯುತ್ತಿರುವ ನವಬ್ರಾಹ್ಮಣರಿಗೆ ಬಿಲ್ಲವ ಅರ್ಚಕರು ಪಥ್ಯವಾಗುವುದಿಲ್ಲ ಎಂಬುದು ಬೇರೆ ಮಾತು.
ಅರವೀಪುರಂನಲ್ಲಿ ದೇವಾಲಯ ಸ್ಥಾಪನೆ ನಂತರ 1961 ರಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗ ಸ್ಥಾಪನೆಯಾಗುವವರಿಗೆ ಕೇರಳ ರಾಜ್ಯ ಮಾತ್ರವಲ್ಲ ತಮಿಳುನಾಡು ಮತ್ತು ಮಂಗಳೂರಿಗೂ ಭೇಟಿ ನಡಿ ದೇವಾಲಯಗಳನ್ನು ಸ್ಥಾಪಿಸಿದರು. ಕೆಳವರ್ಗದ ಜನರಲ್ಲಿದ್ದ ಮೂಡನಂಬಿಕೆ ಮತ್ತು ದುಂದುವೆಚ್ಚದ ಅಂಧ ಸಂಪ್ರದಾಯಗಳನ್ನು ಕಿತ್ತೊಗೆಯಲು ಹೋರಾಟ ನಡೆಸಿದರು. ವಿವಾಹಗಳನ್ನು ಸರಳಗೊಳಿಸಿದರು. ವಿವಾಹಕ್ಕೆ ಮಾಡುವ ದುಂದು ವೆಚ್ಚಗಳನ್ನು ವೃದ್ಧಾಪ್ಯದ ದಿನಗಳಿಗಾಗಿ ಉಳಿತಾಯ ಮಾಡುವಂತೆ ಸಲಹೆ ನಡಿದರು. ಸಹಭೋಜನಕ್ಕೆ ಪ್ರೋತ್ಸಾಹ ನಡಿದರು. ಮಧ್ಯವನ್ನು ಮಾಡಬೇಡಿ, ಮಾರಬೇಡಿ ಮತ್ತು ಕುಡಿಯಬೇಡಿ ಎಂದು ಹೇಳುವ ಮೂಲಕ ಮಧ್ಯಪಾನದ ವಿರುದ್ಧ ವ್ಯಾಪಕ ಚಳವಳಿಯನ್ನೇ ನಡೆಸಿದರು. ಇದರಿಂದ ಸಾಂಪ್ರದಾಯಿಕವಾಗಿ ಸೇಂದಿ ತೆಗೆಯುವ ವೃತ್ತಿಯನ್ನು ಮಾಡುತ್ತಿದ್ದ ಈಳವರು ಆ ವೃತ್ತಿಯನ್ನು ತ್ಯಜಿಸಿ, ಬೇರೆ ವೃತ್ತಿ ಕೈಗೆತ್ತಿಕೊಳ್ಳುವಂತಾಯಿತು.
ಈ ಎಲ್ಲಾ ಸುಧಾರಣೆಗಳನ್ನು ಅವರು ಮೊದಲು ತಮ್ಮ ಶ್ರೀಮಂತ ಅನುಯಾಯಿಗಳ ಮನೆಯಲ್ಲಿಯೇ ಮಾಡಿದರು. ತಾಳಿಕೆಟ್ಟು, ತಿರುಂಡಕಳಿ ಮೊದಲಾದ ಸಂಪ್ರದಾಯಗಳನ್ನು ಆಚರಿಸುವ ಆಡಂಬರದ ಮದುವೆಗಳನ್ನು ಮಾಡುವ ಶ್ರೀಮಂತ ಅನುಯಾಯಿಗಳ ಮನೆಗಳನ್ನೇ ಬಹಿಷ್ಕರಿಸಿದರು.
 1916ರಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗ ಸ್ಥಾಪನೆಯ ಮೂಲಕ ನಾರಾಯಣ ಗುರು ಚಳವಳಿ ಸಂಘರ್ಷದ ಹಾದಿಗೆ ಇಳಿಯಿತು. ಆಗ ಅವರಿಗೆ ಜೊತೆಯಾದವರು ಡಾ.ಪಲ್ಪು,  ಪಲ್ಪು ಮತ್ತು ಅವರಣ್ಣ ವೇಲು ಇಬ್ಬರೂ ಕೇರಳದ ಜಾತಿ ವ್ಯವಸ್ಥೆಗೆ ಬಲಿಯಾಗಿ ಹುಟ್ಟೂರಿನಲ್ಲಿ ಶಿಕ್ಷಣ ಮತ್ತು ಉದ್ಯೋಗ ಎರಡೂ ಸಿಗದೆ,  ಊರು ಬಿಟ್ಟು ಹೋದರು.
 ವೇಲು ಈಳವ ಜನಾಂಗದ ಮೊದಲ ಪದವೀ ಧರ. ಆತ ಮದ್ರಾಸ್ನಲ್ಲಿಯೇ ಕಲಿತು, ಅಲ್ಲಿಯೇ ಸಕರ್ಾರಿ ನೌಕರಿ ಸೇರಿದರೆ, ಪಲ್ಪು ಮದ್ರಾಸ್ನಲ್ಲಿ ಓದಿ ಮೈಸೂರಿನಲ್ಲಿ ಸಕರ್ಾರಿ ವೈದ್ಯರಾಗುತ್ತಾರೆ. ಈಳವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಬೇಕೆಂದು ಕೋರುವ ಮೊದಲ ಮನವಿಯನ್ನು ತಿರುವಾಂಕೂರಿನ ದಿವಾನರಿಗೆ ಅಪರ್ಿಸುವ ಮೂಲಕ ಡಾ.ಪಲ್ಪು ತನ್ನ ಹೋರಾಟ ಆರಂಭಿಸುತ್ತಾರೆ. ತಿರುವಾಂಕೂರಿನ ದಿವಾನರು, ವೈಸ್ರಾಯ್, ಬ್ರಿಟಿಷ್ ಪಾಲರ್ಿಮೆಂಟ್, ಕಾಂಗ್ರೇಸ್ ಪಕ್ಷ ಹಾಗೂ ಇಂಗ್ಲೀಷ್ ದಿನಪತ್ರಿಕೆಗಳಿಗೆ ಈಳವರ ಸ್ಥಿತಿಯನ್ನು ಮನವರಿಕೆ ಮಾಡಿಕೊಡಲು ಅವರು ಸತತ ಪ್ರಯತ್ನ ನಡೆಸುತ್ತಾರೆ.
 ಅದಕ್ಕೆ ನಿರೀಕ್ಷಿತ ಫಲ ಸಿಗದಾಗ, ಬೆಂಗಳೂರಿನಲ್ಲಿ ಡಾ.ಪಲ್ಪು ಸ್ವಾಮಿ ವಿವೇಕಾನಂದರನ್ನು ಭೇಟಿಯಾಗುತ್ತಾರೆ. ಕೇರಳದ ಪರಿಸ್ಥಿತಿಯ ಸಂಪೂರ್ಣ ಅರಿವಿದ್ದ ವಿವೇಕಾನಂದರು "ಆದ್ಯಾತ್ಮಿಕ ನಾಯಕರೊಬ್ಬರ ನೇತೃತ್ವದಲ್ಲಿ ಸಾಮಾಜಿಕ ಚಳವಳಿಯನ್ನು ಹುಟ್ಟುಹಾಕಿದರೆ, ಮಾತ್ರ ಕೇರಳದಲ್ಲಿ ಪರಿವರ್ತನೆ ಸಾಧ್ಯ" ಎನ್ನುತ್ತಾರೆ. ಅಲ್ಲಿಂದ ಕೇರಳಕ್ಕೆ ಹಿಂದಿರುಗಿದ ಡಾ.ಪಲ್ಪು ನಾರಾಯಣ ಗುರುಗಳನ್ನು ಭೇಟಿ ಮಾಡುತ್ತಾರೆ. ಈ ಭೇಟಿಗೆ ಐತಿಹಾಸಿಕ ಮಹತ್ವವಿದೆ.
 ಇಬ್ಬರ ಮಿಲನದಿಂದಲೇ ಶ್ರೀ ನಾರಾಯಣ ಗುರು ಧರ್ಮಪರಿಪಾಲನಾ ಯೋಗಂ ಸ್ಥಾಪನೆಯಾಗುತ್ತದೆ. ಈಳವರಲ್ಲಿ ಧಾಮರ್ಿಕ ಮತ್ತು ಜಾತ್ಯಾತೀತ ಶಿಕ್ಷಣ ಹಾಗೂ ಉದ್ಯಮಶೀಲ ಮನೋಭಾವನೆಯನ್ನು ಬೆಳೆಸುವುದು ಇದರ ಉದ್ದೇಶವಾಗಿತ್ತು.
 ಈ ಹಂತದಲ್ಲಿ ಕುಮಾರನು ಆಶಾನ್ ಇವರಿಬ್ಬರ ಜೊತೆಯಾಗುತ್ತಾರೆ. ಮೂಲತಃ ಕವಿ ಮತ್ತು ಲೇಖಕನಾದ ಆಶಾನ್ ತನ್ನ ಕಾವ್ಯ ಪ್ರತಿಭೆ, ಬರಹ, ಭಾಷಣಗಳ ಮೂಲಕ ಚಳವಳಿಗೆ ಜೀವ ತುಂಬಿದರು. ಅವರ ಸಂಪಾದಕತ್ವದ ವಿವೇಕೋದಯಂ ಪತ್ರಿಕೆ ಚಳವಳಿಯ ಮುಖವಾಣಿಯಾಗಿತ್ತು.
 ಎಸ್ಎನ್ಡಿಪಿ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿನ ಅನ್ಯಾಯದ ವಿರುದ್ಧದ ಹೋರಾಟದ ಕಣಕ್ಕಿಳಿದ ಈಳವರು, ಸಾಕಷ್ಟು ಜಾಗೃತರಾಗಿದ್ದರು. ತಮ್ಮದೇ ದೇವಾಲಯಗಳು ಅವರ ಸಂಘಟನೆಗೆ ಶಕ್ತಿ ತುಂಬಿದ್ದವು. ಎಸ್ಎನ್ಡಿಪಿ ಕೈಗಾರಿಕಾ ಸಮ್ಮೇಳನ ಮತ್ತು ಮಹಿಳಾ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿತ್ತು. ಹಲವಾರು ಯುವಕರು ಮದ್ರಾಸ್ ಬೆಂಗಳೂರಿಗೆ ಹೋಗಿ ಇಂಗ್ಲೀಷ್ ಆಯುವರ್ೇದ ವ್ಯಾಸಾಂಗ ಮಾಡಿ ಬಂದಿದ್ದರು.
 ನಾರಾಯಣ ಗುರುಗಳ ದೂರದಶರ್ಿತ್ವ ಮತ್ತು ಕಾರ್ಯತಂತ್ರ ಅರಿವಾಗುವುದು ಇಲ್ಲಿ. ದೇವಸ್ಥಾನ ಪ್ರವೇಶಕ್ಕೆ ಅವರು ಹೋರಾಟ ನಡೆಸಲಿಲ್ಲ. ಬದಲಿಗೆ ಅವರೇ ದೇವಸ್ಥಾನಗಳನ್ನು ಸ್ಥಾಪಿಸಿದರು. ಆದರೆ, ಶಾಲೆಗಳ ಸ್ಥಾಪನೆಗೆ ಆಡಳಿತದ ಅನುಮತಿ ಬೇಕಿತ್ತು. ಅದಕ್ಕಾಗಿ ಸಕರ್ಾರಿ ಶಾಲೆಗಳ ಪ್ರವೇಶದ ಹಕ್ಕಿನ ಹೋರಾಟಕ್ಕೆ ಅವರು ಚಾಲನೆ ನೀಡಿದರು.
 ಶಾಲೆಗಳ ಪ್ರವೇಶಕ್ಕಾಗಿ ಎಸ್ಎನ್ಡಿಪಿ ಹೋರಾಟ ಪ್ರಾರಂಭಿಸಿದರೂ ಅದು ಅಷ್ಟೊಂದು ಸರಳವಾಗಿರಲಿಲ್ಲ. ಈಳವರಲ್ಲಿ ಬೆಳೆಯುತ್ತಿರುವ ಜಾಗೃತಿ ನಂಬೂದರಿ ಮತ್ತು ನಾಯಕ್ ಜನಾಂಗದಲ್ಲಿ ದ್ವೇಷದ ಕಿಚ್ಚು ಹತ್ತಿಸಿತು. ದೇವಸ್ಥಾನ ಸ್ಥಾಪನೆಯ ಕಾಲದಲ್ಲಿ ಎದುರಾಗದ ವಿರೋಧ ಈಗ ದಟ್ಟವಾಗತೊಡಗಿತ್ತು. ಎಸ್ಎನ್ಡಿಪಿ ಚಳವಳಿಯಲ್ಲಿ ಈ ಕಾಲ ನಿಣರ್ಾಯಕವಾದದ್ದು. ಈಗ ಎಲ್ಲೆಡೆ ನಾಯರ್-ಈಳವರ ಸಂಘರ್ಷ ನಡೆಯುತ್ತದೆ. ಈಳವ ಮಹಿಳೆಯರ ಮೇಲೆ ಬಹಿರಂಗವಾಗಿ ದೌರ್ಜನ್ಯವೆಸಗಲಾಗುತ್ತದೆ. ಎಸ್ಎನ್ಡಿಪಿಯನ್ನು ಬೆಂಬಲಿಸುವ ಪತ್ರಿಕೆಗಳ ಕಚೇರಿಯನ್ನು ಸುಟ್ಟು ಹಾಕಲಾಗುತ್ತದೆ.
 ಚಳವಳಿಯ ಒತ್ತಡಕ್ಕೆ ಮಣಿದ ತಿರುವಾಂಕೂರು ದಿವಾನರು ಈಳವರಿಗೆ ಅವರದ್ಧೆ ಶಾಲೆಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತಾರೆ. ಸರಕಾರಿ ಶಾಲೆಗಳಲ್ಲಿ ಎಲ್ಲಾ ಜಾತಿ ಜನರಿಗೆ ಮುಕ್ತ ಪ್ರವೇಶ ನೀಡುವ ಮಸೂದೆ ಜಾರಿಗೆ ಬರುತ್ತದೆ. ನಾರಾಯಣ ಗುರು ಚಳವಳಿಯಲ್ಲಿ ದೇವಸ್ಥಾನ ಸ್ಥಾಪನೆಗಿಂತಲೂ ಮುಖ್ಯವಾದ ಘಟನೆಯಿದು. ಇದು ಕುಮಾರನ್ ಆಶಾನ್ ಮತ್ತು ಡಾ.ಪಲ್ಪು ಅವರ ನಾಯಕತ್ವದ ಜಯ. ಆದರೆ, ಸಕರ್ಾರಿ ಸೇವೆಗೆ ಸೇರುವ ಅವಕಾಶವನ್ನು ಕೊನೆಗೂ ತಮ್ಮ ಜೀವಮಾನದಲ್ಲಿ ನಾರಾಯಣ ಗುರುಗಳಿಗೆ ಕಾಣಲಾಗುವುದಿಲ್ಲ. 1936ರಲ್ಲಿ ಸಕರ್ಾರ ಲೋಕಸೇವಾ ಆಯೋಗವನ್ನು ಸ್ಥಾಪಿಸಿ, ಉನ್ನತ ಹುದ್ದೆಗಳನ್ನು ಹೊರತುಪಡಿಸಿ, ಹಿಂದುಳಿದವರಿಗೆ ಶೇ.40ರಷ್ಟು ಮೀಸಲಾತಿಯನ್ನು ನೀಡುತ್ತದೆ.
 ಶಿಕ್ಷಣ ಮತ್ತು ಉದ್ಯೋಗದ ಕ್ಷೇತ್ರದಲ್ಲಿನ ಮೀಸಲಾತಿ ಈಳವ ಜನಾಂಗದಲ್ಲಿ ಎರಡೂ ವರ್ಗಗಳ ಬುದ್ಧಿಜೀವಿಗಳ ಸೃಷ್ಟಿಗೆ ಕಾರಣವಾಯಿತು. ಸಾಹಿತಿಗಳು, ಪತ್ರಕರ್ತರು, ಶಿಕ್ಷಕರು ಮತ್ತು ಧಾಮರ್ಿಕ ನಾಯಕರದ್ದು ಒಂದು ಗುಂಪಾದರೆ, ವೈದ್ಯರು, ವಕೀಲರು, ಉದ್ಯಮಿಗಳು, ಆಡಳಿತಾಧಿಕಾರಿಗಳು ಮತ್ತು ರಾಜಕಾರಣಿಗಳು ಇನ್ನೊಂದು ಗುಂಪಿನಲ್ಲಿದ್ದರು. ಕೇರಳದಲ್ಲಿ ಶಿಕ್ಷಣದ ಪ್ರಸಾರದಲ್ಲಿ ಆರ್.ಶಂಕರ್ ಅವರದ್ದು ನಿಣರ್ಾಯಕ ಪಾತ್ರ. ಇವರು ಸ್ಥಾಪಿಸಿದ್ದ "ಶ್ರೀ ನಾರಾಯಣ ಟ್ರಸ್ಟ್" 1952ರಲ್ಲಿಯೇ ನೂರಾರು ಶಾಲೆ, ಪಾಲಿಟೆಕ್ನಿಕ್, ಶಿಕ್ಷಕ ತರಬೇತಿ ಸಂಸ್ಥೆ ಮತ್ತು ಆಸ್ಪತ್ರೆಗಳನ್ನು ಹೊಂದಿದ್ದವು.
 ವಾಣಿಜ್ಯ ಮತ್ತು ಉದ್ಯಮ ಕ್ಷೇತ್ರದಲ್ಲಿ ಈಳವರು ಅಭಿವೃದ್ಧಿ ಹೊಂದಿದ್ದರು. ಎಸ್ಎನ್ಡಿಯ ಮೊದಲ ಅಧಿವೇಶನದ ಕಾಲದಲ್ಲಿಯೇ ನಾರಾಯಣ ಗುರುಗಳು ಕೈಗಾರಿಕಾ ಸಮ್ಮೇಳನವನ್ನು ನಡೆಸಿದ್ದರು. ಆನಂತರ ಅದು ವಾಷರ್ಿಕ ಕಾರ್ಯಕ್ರಮವಾಯಿತು. ತೆಂಗಿನನಾರು ಉದ್ದಿಮೆ ಜನಪ್ರಿಯವಾಗತೊಡಗಿದ್ದು ಅದೇ ಕಾಲದಲ್ಲಿ. ಪ್ರತಿ ದೇವಾಲಯ, ಆಶ್ರಮ ಮತ್ತು ಮಂದಿರಗಳಲ್ಲಿ ತೆಂಗು ನಾರಿನ ಉದ್ದಿಮೆಯ ಘಟಕಗಳನ್ನು ಸ್ಥಾಪಿಸುವಂತೆ ಅವರು ಪ್ರೇರೆಪಿಸಿದ್ದರು. ಈಗ ತೆಂಗುನಾರಿನ ಉದ್ದಿಮೆಯಲ್ಲಿ ಕೇರಳ ದೇಶದಲ್ಲಿಯೇ ಏಕಸ್ವಾಮ್ಯವನ್ನು ಪಡೆದಿದೆ.
 ಈ ಹಂತದಲ್ಲಿ ಎಸ್ಎನ್ಡಿಪಿ ಮುಂದಿನ ಹೋರಾಟವನ್ನು ರಾಜಕೀಯ ಪ್ರಾತಿನಿದ್ಯಕ್ಕಾಗಿ ಕೇಂದ್ರಿಕರಿಸುತ್ತದೆ. ಈ ಹೋರಾಟದಲ್ಲಿ ಅವರಿಗೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಜನಾಂಗಗಳು ಜೊತೆಯಾಗುತ್ತವೆ. ಈ ಮೂರು ಜನಾಂಗಗಳ ಒಟ್ಟು ಜನಸಂಖ್ಯೆ ತಿರುವಾಂಕೂರು ಸಂಸ್ಥಾನದ ಒಟ್ಟು ಜನಸಂಖ್ಯೆಯ ಮೂರನೇ ಎರಡರಷ್ಟಿತ್ತು. ತಿರುವಾಂಕೂರು ಸಂಸ್ಥಾನದಲ್ಲಿ 1888ರಲ್ಲಿಯೇ ವಿಧಾನಸಭೆ ರಚನೆಯಾಗಿ ಚುನಾವಣೆಗಳು ನಡೆಯುತ್ತಾ ಬಂದಿದ್ದರೂ, 1935ರವರೆಗೆ ನಡೆದ 15 ಚುನಾವಣೆಗಳಲ್ಲಿ ಶೇ.26ರಷ್ಟಿದ್ದ ಈಳವರಲ್ಲಿ ಒಬ್ಬರೂ ಕೂಡ ಆಯ್ಕೆಯಾಗಿರಲಿಲ್ಲ. ಶೇ.22ರಷ್ಟಿದ್ದ ಕ್ರಿಶ್ಚಿಯನ್ರು ಮತ್ತು ಶೇ.18ರಷ್ಟಿದ್ದ ಮುಸ್ಲಿಂರ ಪ್ರಾತಿನಿಧ್ಯ ಮೂರು-ನಾಲ್ಕರ ಗಡಿ ದಾಟಿರಲಿಲ್ಲ.
 5ರೂ. ತೆರಿಗೆ ನೀಡುವವರು ಮಾತ್ರ ಮತದಾನದ ಹಕ್ಕು ಪಡೆದಿರುವುದು ಈ ಅನ್ಯಾಯಕ್ಕೆ ಕಾರಣವಾಗಿತ್ತು. ಆ ಕಾಲದ ಭೂಒಡೆತನ ಬಹುಪಾಲು ನಾಯರ್ ಮತ್ತು ನಂಬೂದರಿಗಳ ಕೈಯಲ್ಲಿದ್ದ ಕಾರಣ ಉಳಿದ ಜನಾಂಗ ಮತದಾನದ ಹಕ್ಕನ್ನೇ ಪಡೆಯುವುದು ಅಸಾಧ್ಯವಾಗಿತ್ತು. ಇದನ್ನು ಪ್ರತಿಭಟಿಸಲೆಂದೇ ಮೂರು ಜನಾಂಗಗಳು ಕೂಡಿ "ಸಂಯುಕ್ತ ರಾಜಕೀಯ ಸಂಘಟನೆ"ಯನ್ನು ರಚಿಸಿಕೊಂಡು 1935ರ ಚುನಾವಣೆಯನ್ನು ಬಹಿಷ್ಕರಿಸಿತು. ಈ ಹೋರಾಟದ ಕಾವಿಗೆ ಮಣಿದ ತಿರುವಾಂಕೂರು ಸಂಸ್ಥಾನ ಜಾತಿ ಪ್ರಮಾಣಕ್ಕೆ ಅನುಗುಣವಾಗಿ ರಾಜಕೀಯ ಮೀಸಲಾತಿ ಘೋಷಿಸಿತು. ಆದರೆ, ಈ ರಾಜಕೀಯ ಚಳವಳಿ ಮುಂದಿನ ದಿನಗಳಲ್ಲಿ ಕೇರಳದ ರಾಜಕೀಯ ಸ್ಥಿತ್ಯಂತರಗಳಿಗೆ ಕಾರಣವಾದಂತೆಯೇ ಎಸ್ಎನ್ಡಿಪಿ ಸಂಘಟನೆಯಲ್ಲಿ ಬಿರುಕು ಮೂಡಲು ಕೂಡ ಕಾರಣವಾಗಿದ್ದು ಮಾತ್ರ ದುರಂತ.
 1936ರಲ್ಲಿ ಎಸ್ಎನ್ಡಿಪಿ ಸಂಘಟನಾ ಜಾಲ ವ್ಯಾಪಕವಾಗಿ ಹರಡಿತ್ತು. ಅದರ ಹತ್ತು ಯೂನಿ ಯನ್ಗಳು, 245 ಶಾಖೆಗಳು ಸ್ಥಾಪನೆಯಾಗಿದ್ದವು. 50,000ಕ್ಕೂ ಹೆಚ್ಚಿನವರು ಅದರ ಸಕ್ರೀಯ ಸದಸ್ಯರಾಗಿದ್ದರು. ಎಸ್ಎನ್ಡಿಪಿಯ ಮುಖ್ಯ ಉದ್ದೇಶ ಗಳು ಈಡೇರಿದ್ದವು. ರಾಜ್ಯದ ಅತಿ ಹೆಚ್ಚು ಜನಸಂಖ್ಯೆ ಜಾತಿಯೊಂದರ ಸಂಘಟನೆಯ ಮೇಲೆ ರಾಜಕೀಯ ನಾಯಕರ ಕಣ್ಣು ಬಿದ್ದಿತ್ತು. ಸಂಘಟನೆಯಲ್ಲಿದ್ದ ಅನೇಕರ ಲ್ಲಿ ರಾಜಕೀಯ ಆಕಾಂಕ್ಷೆಗಳು ಹುಟ್ಟಿಕೊಂಡಿದ್ದವು.
 ನಾರಾಯಣ ಗುರುಗಳ ಸಾವಿನ ನಂತರ ಪರಸ್ಪರ ಭಿನ್ನ ವಿಚಾರಧಾರೆಯನ್ನು ಹೊಂದಿದ್ದ ನಾಯಕರು ಎಸ್ಎನ್ಡಿಪಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನ ಪಟ್ಟರು. ಮೊದಲನೆಯದಾಗಿ ಮೇಲ್ಜಾತಿ ಜನರ ವೈರಿ ಎಂದು ಬಗೆಯಲಾದ ಬ್ರಿಟೀಷ್ರನ್ನು ಸ್ನೇಹಿತರೆಂದು ತಿಳಿದುಕೊಳ್ಳಲಾದ ಮಿತವಾದಿ ಕೃಷ್ಣನ್, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಮೂಲಕವೇ ಈಳವರು ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕೆಂದು ಹೇಳುತ್ತಿದ್ದ ಕಾಂಗ್ರೇಸ್ ಒಲವಿನ ಟಿ.ಕೆ ಮಾಧವನ್ ಮತ್ತು ಸಿ.ಕೇಶವನ್, ಸಮಾಜವಾದಿ ಮತ್ತು ಪುರೋಗಾಮಿ ವಿಚಾರಧಾರೆಯ ಸಹೋದರ ಅಯ್ಯಪ್ಪನ್ ಅವರ ಸಮಾಜವಾದಿ-ಪುರೋಗಾಮಿ ವಿಚಾರಧಾರೆಗಳನ್ನು ಮೇಳೈಸಲು ಯತ್ನಿಸುತ್ತಿದ್ದ ಇನ್ನೊಂದು ಗುಂಪು ಇದರಲ್ಲಿ ಪ್ರಮುಖವಾದವುಗಳು. ಈ ಕೊನೆಯ ಗುಂಪನ್ನೇ ಕಮ್ಯೂನಿಷ್ಟರೆಂದು ಕರೆಯಲಾಗುತ್ತಿತ್ತು.
 ಕೇರಳದ ಕಮ್ಯೂನಿಷ್ಟ ಪಕ್ಷವನ್ನು ನಾರಾಯಣ ಗುರು ಚಳವಳಿಯ ಮುಂದುವರೆದ ಭಾಗವೆನ್ನಬಹುದು. ಅಧಿಕೃತವಾಗಿ ನಾರಾಯಣ ಗುರು ಚಳವಳಿಗೆ ಎಸ್ಎನ್ಡಿಪಿಯೇ ಉತ್ತರಾಧಿಕಾರವನ್ನು ಪಡೆದಿದ್ದರೂ ಅದು ಕಮ್ಯೂನಿಷ್ಟ ಚಳವಳಿಗೆ ನಾಂದಿಯಾಗಿದ್ದನ್ನು ಇತಿಹಾಸ ಹೇಳುತ್ತದೆ. ಈ ಬೆಳವಣಿಗೆಗೆ ಮುಖ್ಯವಾಗಿ ಕಾರಣಕರ್ತರಾದವರು ಸಹೋದರ ಅಯ್ಯಪ್ಪನ್.
 ಪ್ರಗತಿಪರ ಚಿಂತನೆಯ, ನೇರನಡೆನುಡಿಯ ಅಯ್ಯಪ್ಪನ್ ಹುಟ್ಟಿನಿಂದಲೇ ಹೋರಾಟಗಾರ ಮತ್ತು ಅಪ್ರತಿಮ ಧೈರ್ಯಶಾಲಿ. ಜಾತಿ ಶ್ರೇಣಿಯಲ್ಲಿ ಈಳವರಿಗಿಂತ ಕೆಳಗಿದ್ದ ಪುಲಯರ ಜೊತೆ ತಮ್ಮೂರಿನಲ್ಲಿ ಸಹಭೋಜನ ಮಾಡಿಸಿ ಜಾತಿಯಿಂದ ಬಹಿಷ್ಕೃತನಾದ ಅಯ್ಯಪ್ಪನ ಜಾತಿ ನಿಮರ್ೂಲನೆಯ ಪ್ರಬಲ ಪ್ರತಿಪಾದಕ. ಅಯ್ಯಪ್ಪನ್ ಅವರನ್ನು ಗುರುತಿಸಿದ ಗುರುಗಳು ಅವರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡುವ ಉದ್ಧೇಶ ಹೊಂದಿದ್ದರಂತೆ. ಮೂಲತಃ ನಾಸ್ತಿಕನಾದ ಅಯ್ಯಪ್ಪನ್ "ಸ್ವತಂತ್ರ ಸಮುದಾಯ ಪ್ರತಿಷ್ಠಾನ"ವನ್ನು ಸ್ಥಾಪಿಸಿ ಸಹೋದರ ಎನ್ನುವ ಪತ್ರಿಕೆ ಪ್ರಾರಂಭಿಸಿ ಜಾತಿ ವಿನಾಶ ಚಳವಳಿಯನ್ನು ನಡೆಸುತ್ತಿದ್ದರು. ಅವರನ್ನು ಪುಲಯರ ಅಯ್ಯಪ್ಪನ್ ಎಂದು ಗೇಲಿ ಮಾಡುತ್ತಿದ್ದರಂತೆ.
 1937ರಲ್ಲಿ ಕೇರಳದಲ್ಲಿ ಕಮ್ಯೂನಿಷ್ಟ ಪಕ್ಷ ಪಿ.ಕೃಷ್ಣಪಿಳ್ಳೆ ಮತ್ತು ಇ.ಎಂ.ಎಸ್ ನಂಬೂದಿರಿ ಪಾಡ್ ನೇತೃತ್ವದಲ್ಲಿ ಸ್ಥಾಪನೆಯಾಯಿತು. ಅಯ್ಯಪ್ಪನ್, ದಾಮೋದರನ್, ಸುಕುಮಾರನ್ ಮೊದಲಾದವರು ಕಮ್ಯೂನಿಷ್ಟ್ ಪಕ್ಷವನ್ನು ಬೆಂಬಲಿಸುತ್ತಿದ್ದರೆ ಆ ಕಾಲದ, ಎಸ್.ಎನ್.ಡಿ.ಪಿ ಯ ನಾಯಕರಾದ ಸಿ.ಕೇಶವನ್, ಟಿ.ಕೆ ಮಾಧವನ್ ಮತ್ತು ಆರ್.ಶಂಕರ್ ಕಾಂಗ್ರೇಸ್ ಒಲವುಳ್ಳವರಾಗಿದ್ದರು. ವಿಪರ್ಯಾಸವೆಂದರೆ ಎಸ್.ಎನ್.ಡಿ.ಪಿ ಚಳವಳಿಯಿಂದ ಜಾಗೃತರಾದ ಕೆಳವರ್ಗದ ಜನಸಮೂಹ ಎಡಪಕ್ಷಗಳ ಕಡೆ ಆಕಷರ್ಿತರಾಗಿದ್ದರು. ಅವರಲ್ಲಿ ಭೂ ಹೀನ ಕಾಮರ್ಿಕರು ಗೇಣಿದಾರರು ಸೇಂದಿ ತೆಗೆಯುವವರು, ಪ್ಲಾಂಟೇಷನ್ ಕಾಮರ್ಿಕರು, ಗೇರುಬೀಜ ಕಾಖರ್ಾನೆ ಕಾಮರ್ಿಕರು ಮೊದಲಾದವರಿದ್ದರು. ಆ ವರ್ಗಗಳಲ್ಲಿ ಸಕ್ರೀಯವಾಗಿದ್ದ ಕಾಮರ್ಿಕರ ಸಂಘಟನೆಗಳು ಕಮ್ಯೂನಿಷ್ಟ್ ಪಕ್ಷವನ್ನು ಬೆಂಬಲಿಸಿದವು.
 ಆದರೆ, ಕಮ್ಯೂನಿಷ್ಟ್ ಪಕ್ಷದಲ್ಲಿ ನಾಯಕತ್ವ ಮಾತ್ರ ಈಳವ, ಪುಲಯ, ಪರವರ ಕೈಗೆ ಬರಲಿಲ್ಲ. ಅದು ನಂಬೂದಿರಿ ನಾಯಕ್ ಕೈಯಲ್ಲಿ ಭದ್ರವಾಗಿಯೇ ಉಳಿದಿದೆ. ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಪಡೆದಿದ್ದ ಹಿರಿಯ ನಾಯಕಿ ಕೆ.ಆರ್ ಗೌರಿಯವರನ್ನು ವ್ಯವಸ್ಥಿತ ಸಂಚಿನಿಂದ ಪಕ್ಷದಿಂದ ಹೊರಹಾಕಿದ್ದು ಆ ಕಾಲಘಟ್ಟದಲ್ಲಿನ ಉದಾಹರಣೆಗಳಾಗಿದ್ದವು.
 ಕಾಂಗ್ರೇಸ್ ಪಕ್ಷವು ಈಳವರಿಗೆ ರಾಜಕೀಯ ಅಧಿಕಾರವನ್ನು ನೀಡಿತು. 1951ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದಾಗ ಸಿ.ಕೇಶವನ್ ಮುಖ್ಯಮಂತ್ರಿಯಾದರು. 1962ರಲ್ಲಿ ಆರ್. ಶಂಕರ್ ಮುಖ್ಯಮಂತ್ರಿಯಾದರು. 1971ರಲ್ಲಿ ಅಲ್ಲಿನ ವಿಧಾನಸಭೆಯಲ್ಲಿ 28 ಈಳವ ಶಾಸಕರಿದ್ದರು. ಇಂದು ಕೂಡಾ ಕೇರಳದಲ್ಲಿ ಎಸ್.ಡಿ.ಪಿ ಮತ್ತು ನಾರಾಯಣ ಗುರುಗಳು ಸ್ಥಾಪಿಸಿದ್ದ ದೇವಾಲಯಗಳು ಹಾಗೂ ಸನ್ಯಾಸಿ ಸಂಘದ ಮೇಲೆ ನಿಯಂತ್ರಣ ಸ್ಥಾಪಿಸಲು ಕಾಂಗ್ರೇಸ್ ಮತ್ತು ಎಡಪಕ್ಷಗಳ ನಡುವೆ ಸಂಘರ್ಷ ನಡೆಯುತ್ತಿದೆ. ಎಸ್.ಎನ್.ಡಿ.ಪಿ, ಶ್ರೀ ನಾರಾಯಣ ಟ್ರಸ್ಟ್ ಮತ್ತು ಸನ್ಯಾಸಿ ಸಂಘ ಇಂದು ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದೆ.
 ಹಿಂದಿನ ಚುನಾವಣಿಯಲ್ಲಿ ಅಧಿಕಾರ ಕಳೆದುಕೊಂಡ  ಸನ್ಯಾಸಿ ಸಂಘದ ಮುಖ್ಯಸ್ಥರಾದ ಸ್ವಾಮಿಗಳು ಅಧಿಕಾರ ಬಿಟ್ಟುಕೊಡದಾಗ ಎ.ಕೆ ಆಂಟೋನಿ ಸಕರ್ಾರ ಅಲ್ಲಿ ಆಡಳಿತಾಧಿಕಾರಿಯನ್ನು ನೇಮಿಸಿತು. ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ನಿರಾಕರಿಸಿದ ಸ್ವಾಮಿಗಳು ಮುಸ್ಲಿಂ ಉಗ್ರಗಾಮಿಗಳ ನೆರವು ಪಡೆದು ಮಠದೊಳಗೆ ಬಂದೂಕು-ಬಾಂಬುಗಳನ್ನು ಶೇಖರಿಸಿಟ್ಟು ಪ್ರತಿರೋಧ ವ್ಯಕ್ತಪಡಿಸಿದರು. ನಾರಾಯಣ ಗುರು ಚಳವಳಿ ಅವರ ಮರಣಾ ನಂತರದ 60 ವರ್ಷಗಳಲ್ಲಿ ತಲುಪಿರುವ ದುರಂತ ಸ್ಥಿತಿ ಇದು.
 ಮೇಲ್ಜಾತಿ ಜನರೂ ಸೇರಿದಂತೆ, ಎಲ್ಲ ವರ್ಗಗಳೊಳಗಿನಿಂದಲೂ ಸುಧಾರಣೆಯ ಧ್ವನಿ ಏಳುವಂತೆ ಮಾಡಿದ್ದು ನಾರಾಯಣಗುರು ಚಳವಳಿಯ ಇನ್ನೊಂದು ಸಾಧನೆ. ನಾಯರ್ ಸೇವಾ ಸಂಘ, ಪುಲಯ ಮಹಾಜನ ಸಭಾ ಮತ್ತು ನಂಬೂದಿರಿಗಳ ಯೋಗಕ್ಷೇಮ ಸಭಾಗಳು ಎಸ್.ಎನ್.ಡಿ.ಪಿ ಮಾದರಿಯಲ್ಲಿಯೇ ತಮ್ಮ ಜನಾಂಗಗಳ ಸುಧಾರಣೆಗೆ ಪ್ರಯತ್ನ ನಡೆಸಿದವು. ಸುಧಾರಣಾ ಚಳವಳಿಯಲ್ಲಿ ಭಾಗವಹಿಸಿದ್ದ ನಂಬೂದಿರಿ ಯುವಕರು ಬಹುಬೇಗನೆ ಕಮ್ಯೂನಿಷ್ಟ ಪಕ್ಷದತ್ತ ಆಕಷರ್ಿತರಾದರು. ಮುಂದೆ ಕಮ್ಯೂನಿಷ್ಟ ಪಕ್ಷದ ನಾಯಕತ್ವ ನಂಬೂದಿರಿ, ನಾಯರ್ಗಳ ಪಾಲಾಗಿ ಇತಿಹಾಸ ಮರುಕಳಿಸಿದ್ದನ್ನು ಕಾಣಬಹುದು.
 ನಾರಾಯಣ ಗುರು ಚಳವಳಿ ಕೇರಳದಲ್ಲಿ ನಡೆಯದೇ ಹೋಗಿದ್ದರೆ, ಏನಾಗುತ್ತಿತ್ತು ಎಂಬ ಪ್ರಶ್ನೆಗೆ ರಾಜಗೋಪಾಲಚಾರಿ ಅವರು ಆ ಚಳವಳಿ ನಡೆಯುತ್ತಿದ್ದ ಕಾಲದಲ್ಲಿಯೇ ಉತ್ತರ ನೀಡಿದ್ದರು. ತಿರುವಾಂಕೂರು ಸಂಸ್ಥಾನದ ದಿವಾನರು ದೇವಸ್ಥಾನ ಪ್ರವೇಶ ಘೋಷಣೆ ಹೊರಡಿಸಲು ವಿಳಂಬ ಮಾಡುತ್ತಿದ್ದನ್ನು ಕಂಡ ರಾಜಗೋಪಾಲಾಚಾರಿಯವರು ದಿವಾನರಿಗೆ ಪತ್ರ ಬರೆದು "ನಾರಾಯಣ ಗುರುಗಳ ಸುಧಾರಣಾ ಚಳವಳಿ ನಡೆಯದಿದ್ದರೆ, ಕೇರಳದಲ್ಲಿನ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿ ಹೋಗುತ್ತಿದ್ದರು" ಎಂದು ಎಚ್ಚರಿಸಿದರು. ಕೇರಳದ ಆಗಿನ ಸ್ಥಿತಿಯಲ್ಲಿ ಈ ಎಚ್ಚರಿಕೆ ಉತ್ಪ್ರೇಕ್ಷೆ ಆಗಿರಲಿಲ್ಲ.
 ವಾಸ್ಕೋಡಗಾಮ ಮೊದಲು ಬಂದಿಳಿದ ಕೇರಳದಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಉಳಿದೆಲ್ಲಾ ಕಡೆಗಳಿಗಿಂತ ಹೆಚ್ಚು ಕ್ರೀಯಾಶೀಲವಾಗಿದ್ದವು. ನಾರಾಯಣಗುರುಗಳ ಪ್ರವೇಶವಾಗುವ ಮೊದಲು ಅಲ್ಲಿ ಜಾತಿ ಆಧಾರಿತ ದೌರ್ಜನ್ಯದಿಂದ ಬೇಸತ್ತ ಕೆಳವರ್ಗದ ಜನ ಸಾಮೂಹಿಕವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ, ದೇಶದಲ್ಲಿ ಅತಿಹೆಚ್ಚು ಕ್ರಿಶ್ಚಿಯನ್ ಜನಸಂಖ್ಯೆ ಇರುವ ರಾಜ್ಯ ಕೇರಳ. ಅಲ್ಲಿ ಶೇ.24ರಷ್ಟು ಕ್ರಿಶ್ಚಿಯನ್ರು ಇರುವುದು ಈ ಮತಾಂತರಕ್ಕೆ ಸಾಕ್ಷಿ.
 ನಾರಾಯಣ ಗುರುಗಳ ಚಳವಳಿಯುದ್ದಕ್ಕೂ ಹಲವಾರು ಬಾರಿ ತಮ್ಮ ಅನುಯಾಯಿಗಳಿಂದಲೆ ಮತಾಂತರದ ಬೆದರಿಕೆಯನ್ನು ಎದುರಿಸಿದ್ದರು. ವೈಕಂ ಸತ್ಯಾಗ್ರಹದ ಕಾಲದಲ್ಲಿ ಮತ್ತು ಅದಕ್ಕಿಂತ ಮೊದಲು ಮತಾಂತರದ ವಿಚಾರ ಮತ್ತೇ ಎಸ್.ಎನ್.ಡಿ.ಪಿಯಲ್ಲಿ ದೊಡ್ಡ ವಿವಾದ ಸೃಷ್ಟಿಸಿತ್ತು. ಗುರುಗಳ ಪ್ರಮುಖ ಶಿಷ್ಯರಲ್ಲಿ ಸಿ.ವಿ ಕುಂಜುರಾಮನ್ ಕ್ರಿಶ್ಚಿಯನ್ ಮತಾಂತರವನ್ನು ಪ್ರತಿಪಾದಿಸುತ್ತಿದ್ದರೆ, ಸಹೋದರ ಅಯ್ಯಪ್ಪನ್ ಮತ್ತು ಸಿ.ಕೃಷ್ಣನ್ ಬೌದ್ಧ ಧರ್ಮದ ಪರ ಒಲವು ತೋರಿಸಿದ್ದರು. ಕುಮಾರ್ ಆಶಾನ್ ಕೂಡ ಬೌದ್ಧ ಧರ್ಮದ ಕಡೆ ಆಕಷರ್ಿತರಾಗಿದ್ದರೂ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಟಿ.ಕೆ ಮಾಧವನ್ ಮತಾಂತರವನ್ನೇ ವಿರೋಧಿಸುತ್ತಿದ್ದರು.
 ಎಸ್.ಎನ್.ಡಿ.ಪಿ ಅಸ್ತಿತ್ವವನ್ನೇ ಅಲುಗಾಡಿಸಿದ ಈ ವಿವಾದ ನಾರಾಯಣ ಗುರುಗಳಿಗೆ ಒಂದು ಸವಾಲಾಗಿತ್ತು. ತಕ್ಷಣ ಸ್ವಾಮಿಗಳು ಅಲ್ವಾಯಿಯಲ್ಲಿ 1924 ಪೆಬ್ರುವರಿಯಲ್ಲಿ ಎರಡು ದಿನಗಳ ಸರ್ವಧರ್ಮ ಸಮ್ಮೇಳನ ನಡೆಸಿದರು. ಈ ಸಮ್ಮೇಳನ ನಡೆಯುತ್ತಿರುವುದು "ತರ್ಕ ನಡೆಸುವದಕ್ಕಾಗಲಿ, ಗೆಲ್ಲುವುದಕ್ಕಾಗಲಿ ಅಲ್ಲ. ಪರಸ್ಪರ ತಿಳಿದುಕೊಳ್ಳುವುದು ಮತ್ತು ತಿಳಿಸಿಕೊಡುವುದು ಇದರ ಉದ್ದೇಶ" ಎಂದು ನಾರಾಯಣ ಗುರುಗಳು ಘೋಷಿಸಿದ್ದರು. ಸ್ವಾಮಿಗಳು "ಒಂದು ಜಾತಿ, ಒಂದು ಮತ, ಒಂದೇ ದೇವರು" ಎಂಬ ಸಂದೇಶ ಸಾರಿದರು. ಮನುಷ್ಯ ಬದಲಾದರೆ, ಜಾತಿ ಬದಲಾಯಿಸಬೇಕಾದ ಅಗತ್ಯ ಇಲ್ಲವೆಂದು ಅವರು ಹಿಂದೂ ಧರ್ಮದ ನಾಯಕರನ್ನು ಉದ್ದೇಶಿಸಿ ಹೇಳಿದರು. ಮತಾಂತರದ ವಿವಾದ ಅಲ್ಲಿಗೆ ತಣ್ಣಗಾಯಿತು.
 ಚಳವಳಿಯುದ್ದಕ್ಕೂ ನಾರಾಯಣ ಗುರುಗಳಲ್ಲಿ ಯಾವುದೇ ರೀತಿಯ ಗೊಂದಲ, ಹತಾಶೆ, ನಿರಾಶೆ ಮೂಡಿದ್ದು ಕಾಣುವುದಿಲ್ಲ. ಆದರೆ, ಜೀವನದ ಕೊನೆಯ ಎರಡು ವರ್ಷಗಳಲ್ಲಿ ನಾರಾಯಣ ಗುರುಗಳು ಖಿನ್ನರಾಗಿದ್ದರು. ತಮ್ಮ ಅನುಯಾಯಿಗಳಲ್ಲಿ ಹುಟ್ಟಿಕೊಂಡ ರಾಜಕೀಯ ಆಕಾಂಕ್ಷೆ ಮತ್ತು ಆಸ್ತಿ ಮೇಲೆ ನಿಯಂತ್ರಣಕ್ಕೆ ಅವರು ನಡೆಸುತ್ತಿದ್ದ ಶೀತಲ ಸಮರ ಅವರ ಗಮನಕ್ಕೆ ಬಂದಿತ್ತು. ಇದೇ ಬೇಸರದಿಂದ ಅವರು ಶ್ರೀಲಂಕಾಕ್ಕೆ ಹೋಗಿ ಅಲ್ಲಿಯೇ ಶಾಶ್ವತವಾಗಿ ನೆಲಸಲು ಬಯಸಿದ್ದರು. ಆದರೆ, ಅನುಯಾಯಿಗಳ ಒತ್ತಡಕ್ಕೆ ಮಣಿದು ಹಿಂದಿರುಗಿದರೂ ಅವರು 2ವರ್ಷಗಳಿಗಿಂತ ಹೆಚ್ಚು ಕಾಲ ಬದುಕಲಿಲ್ಲ.
 ನಾರಾಯಣ ಗುರುಗಳು ಚಳವಳಿಗೂ ಹನ್ನೆರಡನೇ ಶತಮಾನದಲ್ಲಿ ಕನರ್ಾಟಕದಲ್ಲಿ ನಡೆದ ಬಸವ ಚಳವಳಿಗೂ ಸಿದ್ಧಾಂತ ಮತ್ತು ಕಾರ್ಯತಂತ್ರಗಳಲ್ಲಿ ಕಂಡುಬರುವ ಹಲವಾರು ಸಾಮ್ಯಗಳು ಇನ್ನೊಂದು ಪ್ರತ್ಯೇಕ ಅಧ್ಯಯನಕ್ಕೆ ವಸ್ತುವಾಗಬಲ್ಲುದು. ಇಬ್ಬರೂ ವಣರ್ಾಶ್ರಮ ವ್ಯವಸ್ಥೆಯನ್ನು ಪ್ರಶ್ನಿಸುತ್ತಲೇ ಧರ್ಮವನ್ನು ಜನಪರಗೊಳಿಸಿ, ಪೂಜಾವಿಧಾನವನ್ನು ಸರಳಗೊಳಿಸುವ ಪ್ರಯತ್ನ ಮಾಡುತ್ತಾರೆ. ಗುರುಗಳು ಬಸವಣ್ಣನವರಂತೆಯೇ ಸವಣರ್ೀಯರ ದೇವಾಲಯಗಳನ್ನು ತಿರಸ್ಕರಿಸಿದರೆ, ಹೊರತು ದೇವರನ್ನಲ್ಲ.
 ಎರಡೂ ಚಳವಳಿಯಲ್ಲಿ ಕಾಣುವ ಪ್ರಜಾಸತಾತ್ಮಕ ಮೌಲ್ಯಗಳು ಅನನ್ಯವಾದುದು. ಮೂಲತಃ ನಾರಾಯಣ ಗುರುಗಳು ಸತ್ಯಾಗ್ರಹದ ಬಗ್ಗೆ ವಿರೋಧ ಹೊಂದಿದ್ದರು. ಅದೊಂದು ಭಾವನಾತ್ಮಕ ಶೋಷಣೆಯೆಂದು  ಹೇಳುತ್ತಿದ್ದರು. ಆದರೆ, ತಮ್ಮ ಶಿಷ್ಯ ಟಿ.ಕೆ ಮಾಧವನ್ ವೈಕಂ ಸತ್ಯಾಗ್ರಹ ಪ್ರಾರಂಭಿಸಿದಾಗ ದೇವಸ್ಥಾನ ಪ್ರವೇಶ ಚಳವಳಿ ಮತ್ತು ಸತ್ಯಾಗ್ರಹ ಎರಡರ ಬಗ್ಗೆ ವಿರೋಧವಿದ್ದರೂ ಅದನ್ನು ಬೆಂಬಲಿಸಿದರು.
 ನಾರಾಯಣ ಗುರುಗಳ ಪ್ರೀತಿಯ ಅನುಯಾಯಿಯಾದ ಸಹೋದರ ಅಯ್ಯಪ್ಪನ್ ಪುಲಯರೊಂದಿಗೆ ಸಹಭೋಜನ ಮಾಡಿ ಜಾತಿಯಿಂದ ತಿರಸ್ಕೃತರಾದಾಗ ಅವರು ಅಯ್ಯಪ್ಪನನ್ನು ಬೆಂಬಲಿಸುತ್ತಾರೆ. ದೇವಾಲಯಗಳ ಸ್ಥಾಪನೆಯನ್ನು ವಿರೋಧಿಸುತ್ತಲೇ ಬಂದ ಅಯ್ಯಪ್ಪನ್ ಕರಮಕೊಂಡಂನಲ್ಲಿ ದೇವಾಲಯ ಸ್ಥಾಪನೆ ಮಾಡಲು  ಬಂದ ಗುರುಗಳ ವಿರುದ್ಧವೇ ಪ್ರತಿಭಟನೆ ಮಾಡುತ್ತಾರೆ. ಅದಕ್ಕೆ ಮಣಿದ ಗುರುಗಳು ಮುಂದೆ ದೇವಾಲಯಗಳ ಸ್ಥಾಪನೆಯನ್ನೇ ನಿಲ್ಲಿಸುತ್ತಾರೆ.
 ಮತಾಂತರ ವಿಷಯದಲ್ಲಿ ಗುರು ಮತ್ತು ಅನುಯಾಯಿಗಳ ನಡುವೆ ಭಿನ್ನಾಭಿಪ್ರಾಯವಿದ್ದರೂ ಕೊನೆಗೆ ಎಲ್ಲರೂ ಗುರುಗಳ ಅಭಿಪ್ರಾಯಕ್ಕೆ ಬದ್ಧರಾಗುತ್ತಾರೆ. ಇಂತಹದ್ದೇ ಬೆಳವಣಿಗೆಗೆಳನ್ನು ಬಸವ ಚಳವಳಿಯೊಳಗೂ ಕಾಣಬಹುದು. ಎರಡೂ ಚಳವಳಿಗಳ ಅನುಯಾಯಿಗಳಲ್ಲಿಯೂ ಸಾಕಷ್ಟು ಹೋಲಿಕೆ ಇದೆ. ಬಸವಣ್ಣನ ಅನುಯಾಯಿಗಳಾದ ಅಲ್ಲಮ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಸಿದ್ಧರಾಮೇಶ್ವರ ಹಾಗೂ ನಾರಾಯಣ ಗುರು ಅನುಯಾಯಿಗಳಾದ ಪಲ್ಪು, ಆಶಾನ್, ಅಯ್ಯಪ್ಪನ್ ಮೊದಲಾದವರಲ್ಲಿ ಸಾಮ್ಯಗಳಿವೆ. ಎರಡು ಚಳವಳಿಯ ನಾಯಕರ ಅಂತ್ಯಕ್ಕೂ ಅಷ್ಟೇ ಹೋಲಿಕೆಗಳಿವೆ. ಇಬ್ಬರೂ ಕೊನೆಗಾದಲ್ಲಿ ಅನುಯಾಯಿಗಳ ಮೇಲೆ ನಿಯಂತ್ರಣ ಇಟ್ಟುಕೊಳ್ಳಲಾಗದೆ ಸಂಕಟ ಅನುಭವಿಸುತ್ತಾರೆ. ಸಾವಿನ ನಂತರ ಇಬ್ಬರೂ ಭಕ್ತರ ಕೈಯಲ್ಲಿ ಬಂಧಿಯಾಗಿ ಕಲ್ಲಿನ ಮೂತರ್ಿಗಳಾಗುತ್ತಾರೆ.
 ಕೇರಳದಿಂದಾಚೆಗೆ ತಮಿಳುನಾಡು ಹಾಗೂ ಕನರ್ಾಟಕದ ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತು ಪಡಿಸಿದರೆ, ಬೇರೆಡೆ ನಾರಾಯಣ ಗುರು ಚಳವಳಿ ಹೆಚ್ಚು ಪರಿಚಿತವಲ್ಲ. ನಾರಾಯಣ ಗುರುಗಳ ಶಿಷ್ಯರೇ ಆದ ಡಾ.ಪಲ್ಪು ಅವರ ಮಗ ನಟರಾಜ ಗುರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುಗಳ ಚಿಂತನೆಯ ಪ್ರಸಾರ ಮಾಡಿದರು. ಅವರು ಶಿವಗಿರಿಯ ಸಮೀಪ ಸ್ಥಾಪಿಸಿರುವ ಈಸ್ಟ್ವೆಸ್ಟ್ ವಿಶ್ವವಿದ್ಯಾಲಯವಿದೆ. ಆದರೆ, ಕೇರಳ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನೂರಾರು ಗುರುಮಂದಿರಗಳಲ್ಲಿ ಅವರಿಗಾಗಿಯೇ ಕಟ್ಟಿದ ದೇವಾಲಯಗಳಲ್ಲಿ ನಾರಾಯಣ ಗುರುಗಳ ಆರಾಧನೆ-ಭಜನೆಗಳು ಕೂಡ ನಾರಾಯಣನೆಂಬ ಈ "ನರ"ನ ಸಾಧನೆಯ ಬಗ್ಗೆ ತಪ್ಪು ಕಲ್ಪನೆಗಳನ್ನೇ ಬಿತ್ತುತ್ತಿವೆ.
 ಸಾವಿರಾರು ವರ್ಷಗಳಿಂದ ಬೇರುಬಿಟ್ಟ ವೈದಿಕ ಶಾಹಿ, ಪ್ಯಾಸಿಸ್ಟ್ ಶಕ್ತಿ ತನ್ನನ್ನು ಪ್ರಶ್ನಿಸಿದವರನ್ನು ನಾಶ ಮಾಡಲು ಪ್ರಯತ್ನಿಸುತ್ತದೆ. ಸಾಧ್ಯವಾಗದಿದ್ದರೆ, ತನ್ನೊಳಗೆ ಜೀಣರ್ಿಸಿಕೊಂಡು ಬಿಡುತ್ತದೆ. ಬುದ್ಧ ವಿಷ್ಣುವಿನ ಅವತಾರದ ಬಸವಣ್ಣ ನಂದಿಯ ಅವತಾರವಾದ ದುರಂತವೇ ನಾರಾಯಣ ಗುರುಗಳಿಗಾಗಿದೆ. ಸನ್ಯಾಸಿಯಾದ ದಿನದಿಂದ ಸಾವಿನವರೆಗೂ ಕೇರಳದ ಅತ್ಯಂತ ಕೀಳು ಜಾತಿಯವರೆನಿಸಿದ ಪುಲಯ ಜನಾಂಗದ ಅಡಿಗೆಯವನಿಂದಲೆ ಕೈತುತ್ತು ತಿಂದು ಬದುಕಿದ ಈ ಅಪ್ರತಿಮ ಮಾನವತಾವಾದಿ ಇಂದು ಈಳವ - ಬಿಲ್ಲವ ಜಾತಿ ಜನರ ನಾಯಕನಾಗಿಬಿಟ್ಟಿದ್ದಾರೆ.
 ವಿದ್ಯೆಯಿಂದ ಸ್ವತಂತ್ರರಾಗಿರಿ ಎಂದ ಗುರುಗಳ ಚಿಂತನೆಯನ್ನು ವಿದ್ಯೆ ಎಂದರೆ, ಅಕಾಡೆಮಿಕ್ ಶಿಕ್ಷಣ ಎಂದು ತಿಳಿದಷ್ಟೇ ಕಾರಣ. ಅವರ ಅನುಯಾಯಿಗಳೆನಿಸಿಕೊಂಡವರು ಇಂದಿಗೂ ಬೌದ್ಧಿಕ ದಾಸ್ಯದಿಂದ ಮುಕ್ತವಾಗಿಲ್ಲ. ಹಾಗಿಲ್ಲದಿದ್ದರೆ, ವಣರ್ಾಶ್ರಮ ವ್ಯವಸ್ಥೆಗೆ ಸವಾಲಾಗಿ ನಾರಾಯಣ ಗುರುಗಳು ಮಂಗಳೂರಿನಲ್ಲಿ ಸ್ಥಾಪಿಸಿದ ದೇವಾಲಯವನ್ನು ಜೀಣರ್ೋದ್ಧಾರಗೊಳಿಸಿದ ಅವರ ಅನುಯಾಯಿಗಳು, ಅದನ್ನು ವಣರ್ಾಶ್ರಮ ವ್ಯವಸ್ಥೆಯನ್ನು ಇಂದಿಗೂ ಪ್ರತಿಪಾದಿಸುವ ಶೃಂಗೇರಿ ಮಠದ ಸ್ವಾಮಿಗಳಿಂದ ಉದ್ಘಾಟನೆ ಮಾಡಿಸುತ್ತಿರಲಿಲ್ಲ.
 ಒಂದು ಜಾತಿ, ಒಂದು ಮತ, ಒಂದೇ ದೇವರು ಎಂದು ಸಾರಿದ ನಾರಾಯಣ ಗುರುಗಳು ಇಲ್ಲಿ ಒಂದು ಜಾತಿಯ ಮಂದಿರಗಳಲ್ಲಿ ಬಂಧಿಯಾಗಿದ್ದಾರೆ. ಆ ಜಾತಿ ಜನರಾದವರೂ ಗುರುಗಳ ತತ್ವವನ್ನು ಪಾಲಿಸುತ್ತಿದ್ದಾರೆಯೇ? ನಾರಾಯಣ ಗುರುಗಳನ್ನು ಇಂದಿನ ಬಂಧನದಿಂದ ಬಿಡಿಸುವವರ್ಯಾರು?
 ಭಕ್ತಸಮೂಹ, ಭಜನಾ ಮಂಡಳಿಗಳಾಚೆ ನಡೆಯುವ ಈ ರೀತಿಯ ವೈಚಾರಿಕ ಚಚರ್ೆ ಸಂವಾದಗಳು ಮಾತ್ರ ನಾರಾಯಣ ಗುರುಗಳನ್ನು ಈಗಿನ ಬಂಧನದಿಂದ ಬಿಡುಗಡೆಗೊಳಿಸಬಹುದೆಂದು ನಾನು ನಂಬಿದ್ದೇನೆ.
ಮುಗಿಯಿತು..
 

Monday, May 13, 2013

ಜಾತಿ ಮೀರಿ ಯೋಚನೆ ಮಾಡಿದ ರಾಜ್ಯದ ಮತದಾರ

ರ್ನಾಟಕದ ರಾಜಕಾರಣಿಗಳು ಮಾತ್ರವಲ್ಲ ಮತದಾರರೂ ಜಾತಿವಾದಿಗಳು ಎಂಬ ಅಭಿಪ್ರಾಯ ಇತ್ತೀಚಿನ ವರ್ಷಗಳಲ್ಲಿ ದೇಶದಾದ್ಯಂತ ಹರಡಿತ್ತು. ಇದನ್ನು ವಿಶ್ವಾಸಪೂರ್ವಕವಾಗಿ ನಿರಾಕರಿಸುವ ಸ್ಥಿತಿಯಲ್ಲಿ ಕನ್ನಡಿಗರೂ ಇರಲಿಲ್ಲ. ಸಾಮಾನ್ಯವಾಗಿ ಜಾತಿಯನ್ನೇ ಆಧರಿಸಿ ಹುಟ್ಟಿಕೊಂಡ ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಇಂತಹದ್ದೊಂದು ಅಭಿಪ್ರಾಯ ಹುಟ್ಟಿಕೊಳ್ಳುವುದು ಸಹಜ.
ಉದಾಹರಣೆಗೆ ಉತ್ತರಪ್ರದೇಶ, ಬಿಹಾರ, ತಮಿಳುನಾಡು, ಆಂಧ್ರಪ್ರದೇಶ ಇತ್ಯಾದಿ. ಆದರೆ ಸಾಮಾನ್ಯವಾಗಿ ರಾಷ್ಟ್ರೀಯ ಪಕ್ಷಗಳ ಸರ್ಕಾರಗಳಿಗೆ `ಜಾತಿವಾದಿ ಸರ್ಕಾರ' ಎಂಬ ಹಣೆಪಟ್ಟಿ ಎಲ್ಲರೂ ಆಡಿಕೊಳ್ಳುವಂತೆ ಅಂಟಿಕೊಳ್ಳುವುದು ಕಡಿಮೆ. ಕರ್ನಾಟಕ ಪ್ರಾದೇಶಿಕ ಪಕ್ಷಗಳನ್ನು ಬೆಂಬಲಿಸದೆ ಸದಾ ರಾಷ್ಟ್ರೀಯ ಪಕ್ಷಗಳ ಪರವಾಗಿ ನಿಂತ ರಾಜ್ಯ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿಯೂ ಈ ಆರೋಪ ಕನ್ನಡಿಗರು ನಾಚಿಕೆಪಟ್ಟುಕೊಳ್ಳುವ ರೀತಿಯಲ್ಲಿ ಕೇಳಿಬಂತು. `ನಾವೆಲ್ಲ ಹಿಂದೂ, ಜಾತಿ ಮೀರಿ ನಾವೆಲ್ಲ ಒಂದು' ಎಂಬ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ಬಂದ ಭಾರತೀಯ ಜನತಾ ಪಕ್ಷದ ಆಳ್ವಿಕೆಯ ಕಾಲದಲ್ಲಿಯೇ ಇದು ಜೋರಾಗಿ ಕೇಳಿಬಂದದ್ದು ವಿಪರ್ಯಾಸ.
ಇದಕ್ಕೆ ಕಾರಣಗಳು ಅನೇಕ. ಬಾಬ್ರಿ ಮಸೀದಿ ಧ್ವಂಸದ ನಂತರ ಎದ್ದ `ಹಿಂದುತ್ವ'ದ ಅಲೆಯ ಮೇಲೇರಿ ರಾಷ್ಟ್ರಮಟ್ಟದಲ್ಲಿ ಬಿಜೆಪಿ ರಾಜಕೀಯವಾಗಿ ಬೆಳೆಯುವ ಸೂಚನೆ ನೀಡಿದಾಗಲೂ 1994ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅದು ಗೆಲ್ಲಲು ಸಾಧ್ಯವಾಗಿದ್ದು 40 ಸ್ಥಾನಗಳನ್ನು ಮಾತ್ರ. ಅದರ ನಂತರದ ಚುನಾವಣೆಯಲ್ಲಿಯೂ ಬಿಜೆಪಿ ಪ್ರಯಾಸಪಟ್ಟು ನಾಲ್ಕು ಸ್ಥಾನಗಳನ್ನಷ್ಟೇ ಹೆಚ್ಚುವರಿಯಾಗಿ ಗಳಿಸಿತ್ತು. ಆಗಲೇ ಬಿಜೆಪಿ ನಾಯಕರು ಕರ್ನಾಟಕದಲ್ಲಿ `ಸೋಷಿಯಲ್ ಎಂಜಿನಿಯರಿಂಗ್' ಹೆಸರಲ್ಲಿ ಜಾತಿ ರಾಜಕಾರಣವನ್ನು ಬಹಿರಂಗವಾಗಿಯೇ ಪ್ರಾರಂಭಿಸಿದ್ದು. ಇದಕ್ಕಾಗಿ ಲಿಂಗಾಯತರಾದ ಬಿ.ಎಸ್.ಯಡಿಯೂರಪ್ಪನವರನ್ನು ನಾಯಕನಾಗಿ ಬಿಂಬಿಸಿದ್ದು. 1999ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ವೀರೇಂದ್ರ ಪಾಟೀಲರ ಪದಚ್ಯುತಿಯಿಂದಾಗಿ ಅಸಮಾಧಾನಕ್ಕೀಡಾದ ಲಿಂಗಾಯತರನ್ನು ಸೆಳೆಯುವ
ಯೋಚನೆ ಕೂಡಾ ಬಿಜೆಪಿಯದ್ದಾಗಿತ್ತು. 79 ಶಾಸಕರನ್ನು ಗೆಲ್ಲಿಸಿದ್ದ 2004ರ ವಿಧಾನಸಭಾ ಚುನಾವಣೆ ಬಿಜೆಪಿಯ ಜಾತಿ ರಾಜಕಾರಣದ ಲೆಕ್ಕಾಚಾರವನ್ನು ಇನ್ನಷ್ಟು ಗಟ್ಟಿಗೊಳಿಸಿತ್ತು. ಎಚ್.ಡಿ.ಕುಮಾರಸ್ವಾಮಿಯವರ ಮೇಲಿನ ವಚನಭ್ರಷ್ಟತೆಯ ಆರೋಪವನ್ನೇ ಪ್ರಧಾನ ಅಸ್ತ್ರವಾಗಿ ಬಳಸಿಕೊಂಡ 2008ರ ಚುನಾವಣೆಯಲ್ಲಿ ಕಣ್ಣಿಗೆ ರಾಚುವ ರೀತಿಯಲ್ಲಿ ಜಾತಿ ರಾಜಕಾರಣ ಮೆರೆದಾಡಿತು. `ಲಿಂಗಾಯತ ಯಡಿಯೂರಪ್ಪನವರಿಗೆ ಆಗಿರುವ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳಲೆಂದೇ ಮತ ಹಾಕಿ' ಎಂದು ನೇರವಾಗಿ ಹೇಳುವ ಮಟ್ಟಕ್ಕೆ ಬಿಜೆಪಿ ಚುನಾವಣಾ ಪ್ರಚಾರವನ್ನು ಕೊಂಡೊಯ್ದಿತ್ತು.
ರಾಜ್ಯದ ಮತದಾರರು ಮುಖ್ಯವಾಗಿ ಲಿಂಗಾಯತರು ಬಿಜೆಪಿಯ ಜಾತಿ ಕೂಗಿಗೆ ಓಗೊಟ್ಟರೇನೋ ಎಂದು ಅನುಮಾನ ಮೂಡಿಸುವ ರೀತಿಯಲ್ಲಿ ಫಲಿತಾಂಶವೂ ಹೊರಬಿತ್ತು. ಬಿಜೆಪಿ 110 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಅಲ್ಲಿಂದಲೇ ಬಿಜೆಪಿಯ ಅದರಲ್ಲೂ ಮುಖ್ಯವಾಗಿ ಬಿ.ಎಸ್.ಯಡಿಯೂರಪ್ಪ ಎಂಬ ನಾಯಕನ ಪತನ ಪ್ರಾರಂಭವಾಗಿದ್ದು. ಆ ಚುನಾವಣೆಯಲ್ಲಿ 59 ಲಿಂಗಾಯತ ಶಾಸಕರು ಆಯ್ಕೆಯಾಗಿದ್ದು ಮಾತ್ರವಲ್ಲ ಅವರಲ್ಲಿ 38 ಶಾಸಕರು ಬಿಜೆಪಿಗೆ ಸೇರಿದವರಾಗಿದ್ದರು. ಅಷ್ಟು ಮಾತ್ರವಲ್ಲ ಒಕ್ಕಲಿಗರು ಮತ್ತು ಮುಸ್ಲಿಮರನ್ನು ಹೊರತುಪಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (29), ಹಿಂದುಳಿದ ವರ್ಗ (16) ಹಾಗೂ ಬ್ರಾಹ್ಮಣ (9) ಶಾಸಕರು ಕೂಡಾ ಅತಿಹೆಚ್ಚಿನ ಸಂಖ್ಯೆಯಲ್ಲಿ ಆರಿಸಿಬಂದದ್ದು ಕೂಡಾ ಬಿಜೆಪಿಯಲ್ಲಿ. ಲಿಂಗಾಯತರು ಬಿಜೆಪಿಯಲ್ಲಿರುವ ಲಿಂಗಾಯತ ಅಭ್ಯರ್ಥಿಗಳಿಗೆ ಮಾತ್ರ ಮತ ಹಾಕದೆ ಆ ಪಕ್ಷದಿಂದ ಸ್ಪರ್ಧಿಸಿದ್ದ ಅನ್ಯ ಜಾತಿಯ ಅಭ್ಯರ್ಥಿಗಳಿಗೂ ಮತಹಾಕಿದ್ದು ಇದರಿಂದ ಸ್ಪಷ್ಟ.
ತಮಗೆ ಅನುಕೂಲವಾಗಿರುವ `ಜನಾಭಿಪ್ರಾಯ'ದ ಕುದುರೆಯೇರಿ ಯಡಿಯೂರಪ್ಪನವರೂ ಹೊರಟರು. ಮುಖ್ಯಮಂತ್ರಿಯಾಗುವವರೆಗೆ ರಾಜಾರೋಷವಾಗಿ ತನ್ನನ್ನು ಲಿಂಗಾಯತ ನಾಯಕನೆಂದು ಬಿಂಬಿಸಿಕೊಳ್ಳದೆ ಇದ್ದ ಯಡಿಯೂರಪ್ಪ ನಿಧಾನವಾಗಿ ಆ ಕೆಲಸವನ್ನು ಶುರು ಮಾಡಿದ್ದರು. ಜಾತಿ ನಾಯಕರಾಗುವ ಮೂಲಕ ಯಡಿಯೂರಪ್ಪ ರಾಜಕೀಯ ಪ್ರವೇಶ ಮಾಡಿದವರಲ್ಲ. ಅಧಿಕಾರಕ್ಕೆ ಬರುವವರೆಗೆ ಅಂತಹ ಆರೋಪವೂ ಅವರ ಮೇಲೆ ಇರಲಿಲ್ಲ. ಆರ್‌ಎಸ್‌ಎಸ್‌ನ ನಿಷ್ಠಾವಂತ ಅನುಯಾಯಿಯಾಗಿದ್ದ ಅವರು ಅದು ಬಹಿರಂಗವಾಗಿ ಪ್ರತಿಪಾದಿಸುವ `ಜಾತಿಮೀರಿದ ಧರ್ಮ'ವನ್ನೇ ಹೆಚ್ಚು ನಂಬಿ ರಾಜಕಾರಣ ಮಾಡಿದವರು. ಆದರೆ ಕಳೆದ ಚುನಾವಣೆಯ ಫಲಿತಾಂಶ ಯಡಿಯೂರಪ್ಪನವರ ತಲೆಯನ್ನೂ ತಿರುಗಿಸಿಬಿಟ್ಟಿತು. ಅವರ ಹೃದಯದೊಳಗೆ ಜಾತಿ ಇತ್ತೋ ಇಲ್ಲವೋ ಆದರೆ ಬಹಿರಂಗವಾಗಿ ತಮ್ಮನ್ನು ಲಿಂಗಾಯತರ ನಾಯಕನಾಗಿಯೇ ಬಿಂಬಿಸಿಕೊಳ್ಳುವುದರಲ್ಲಿಯೇ ಯಡಿಯೂರಪ್ಪನವರು ಸಂಭ್ರಮಪಟ್ಟರು. ಇದರಿಂದ ರಾಜಕೀಯವಾಗಿ ಲಾಭವಾಗಲಿದೆ ಎಂಬ ಬೆಂಬಲಿಗರ ಮಾತನ್ನು ನಂಬಿಬಿಟ್ಟರು. ಅಗತ್ಯಕ್ಕಿಂತಲೂ ಹೆಚ್ಚಾಗಿ ವೀರಶೈವ ಮಠಗಳಿಗೆ ಭೇಟಿಕೊಟ್ಟರು. ರಾಜ್ಯದ ಬಜೆಟ್‌ನಲ್ಲಿ ಆ ಮಠಗಳಿಗೆ ಅನುದಾನವನ್ನು ಬೇಕಾಬಿಟ್ಟಿಯಾಗಿ ಹಂಚುವ ಕೆಟ್ಟಸಂಪ್ರದಾಯವನ್ನು ಪ್ರಾರಂಭಿಸಿದರು. ತನ್ನ ವಿರುದ್ಧ ಭ್ರಷ್ಟಾಚಾರದ ಆರೋಪ ಎದುರಾದಾಗ ಜಾತಿಯ ಗುರಾಣಿ ಬಳಸಿಕೊಂಡು ಬಚಾವಾಗುವ ಪ್ರಯತ್ನ ಪಟ್ಟರು. ಕೊನೆಗೆ ಅದೇ ಜಾತಿಯನ್ನು ನಂಬಿ ಸ್ವಂತ ಪಕ್ಷವನ್ನೂ ಕಟ್ಟಿದರು.
ಇದನ್ನೆಲ್ಲ ನೋಡುತ್ತಾ ಲಿಂಗಾಯತರಲ್ಲಿದ್ದ `ಪ್ರಜ್ಞಾವಂತ'ರೆನಿಸಿಕೊಂಡವರು ಕೂಡಾ ಜಾತಿ ಬಳಸಿಕೊಂಡೇ ಹೆಚ್ಚು ಖಾಸಗಿಯಾಗಿ, ಸ್ವಲ್ಪ ಬಹಿರಂಗವಾಗಿ ಯಡಿಯೂರಪ್ಪನವರನ್ನು ಸಮರ್ಥಿಸಿಕೊಳ್ಳತೊಡಗಿದರು. ಆ ಸಮಯದಲ್ಲಿಯೇ `ಬೇರೆ ಜಾತಿಗಳ ಮುಖ್ಯಮಂತ್ರಿಗಳು ಭ್ರಷ್ಟಾಚಾರ ಮಾಡಿಲ್ಲವೇ?' ಎಂಬ ನೀತಿಗೆಟ್ಟ ಸಮರ್ಥನೆಗಳು ಕೇಳಿಬರತೊಡಗಿದ್ದು. ಇಲ್ಲಿಯೇ ನಮ್ಮ ಅನೇಕ ಬುದ್ದಿಜೀವಿಗಳು, ಪ್ರೊಫೆಸರ್‌ಗಳು, ಪತ್ರಕರ್ತರು, ಸಮಾಜವಿಜ್ಞಾನಿಗಳು ಎಡವಿದ್ದು. ಇವರಲ್ಲಿ ಹೆಚ್ಚಿನವರು ಸಾಮಾನ್ಯ ಲಿಂಗಾಯತ ಮತದಾರರ ಅಂತರಾಳವನ್ನು ಅರಿತುಕೊಳ್ಳಲು ವಿಫಲರಾಗಿದ್ದರು. ಮನಸ್ಸಿನೊಳಗೆ ಎಷ್ಟೇ ಜಾತಿಪ್ರೀತಿ ಇದ್ದರೂ ಸಾಮಾನ್ಯವಾಗಿ ಯಾವ ವ್ಯಕ್ತಿ ಕೂಡಾ ತನ್ನನ್ನು ಜಾತಿವಾದಿ ಎಂದು ಕರೆಸಿಕೊಳ್ಳಲು ಇಷ್ಟಪಡುವುದಿಲ್ಲ, ತಾನೊಬ್ಬ ಜಾತ್ಯತೀತ ಎಂದೇ ಹೇಳಿಕೊಳ್ಳುತ್ತಾನೆ. ಈ ನಡವಳಿಕೆಯನ್ನು ಆತ್ಮವಂಚನೆ ಎಂದೂ ಹೇಳಬಹುದು. ಆದರೆ ಸಜ್ಜನರೆಂದು ಅನಿಸಿಕೊಳ್ಳುವವರು ಕನಿಷ್ಠ ಇಷ್ಟರಮಟ್ಟಿಗೆ ಮುಜುಗರವನ್ನು ಇಟ್ಟುಕೊಳ್ಳಬೇಕಾಗುತ್ತದೆ.
ಕಳೆದ ಐದು ವರ್ಷಗಳಲ್ಲಿ ಅಸಹ್ಯಕರವಾಗಿ ವಿಜೃಂಭಿಸತೊಡಗಿದ್ದ ಜಾತಿಯ ಆವುಟವನ್ನು ನೋಡಿದ ನಂತರ ಲಿಂಗಾಯತರು ಮಾತ್ರವಲ್ಲ ಎಲ್ಲ ಜಾತಿಗಳ ಮತದಾರರಲ್ಲಿ ಇಂತಹದ್ದೊಂದು ಮುಜುಗರ ಹುಟ್ಟಿಕೊಂಡದ್ದು ನಿಜ. ಇದನ್ನು ಮೀರುವ ಪ್ರಯತ್ನವನ್ನು ಮತದಾರರು ಮಾಡಿರುವುದು 2013ರ ಫಲಿತಾಂಶದಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಿದೆ. ಈ ಬಾರಿ ಗೆದ್ದಿರುವ 50 ಲಿಂಗಾಯತ ಶಾಸಕರಲ್ಲಿ 27 ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರು. ಬಿಜೆಪಿಯ ಪಾಲು ಕೇವಲ ಹತ್ತು. ಲಿಂಗಾಯತ ಮತದಾರರನ್ನೇ ನಂಬಿ ಪಕ್ಷ ಕಟ್ಟಿದ ಬಿ.ಎಸ್.ಯಡಿಯೂರಪ್ಪನವರು ಗೆಲ್ಲಿಸಿಕೊಳ್ಳಲು ಸಾಧ್ಯವಾಗಿದ್ದು ಕೇವಲ ಆರು ಲಿಂಗಾಯತ ಶಾಸಕರನ್ನು. ಜಾತಿ ಮೀರಿದ ಮತದಾನವನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ರಾಜಕೀಯ ಪಕ್ಷಗಳು ಬಿಂಬಿಸಿದ್ದ ಮುಖ್ಯಮಂತ್ರಿ ಅಭ್ಯರ್ಥಿಗಳ ಜಾತಿಗಳನ್ನು ನೋಡಬೇಕು.
`ಲಿಂಗಾಯತ ಇಲ್ಲವೇ ಒಕ್ಕಲಿಗರ ನಾಯಕರ ನೇತೃತ್ವ ಇಲ್ಲದೆ ಇದ್ದರೆ ಅಧಿಕಾರಕ್ಕೆ ಬರಲು ಸಾಧ್ಯ ಇಲ್ಲ' ಎನ್ನುವ ಬಹುದೊಡ್ಡ `ಮಿಥ್' ಅನ್ನು ಕೂಡಾ ಈ ಚುನಾವಣೆ ಒಡೆದುಹಾಕಿದೆ. ಬಿಜೆಪಿ ಮತ್ತು ಕೆಜೆಪಿ ಕ್ರಮವಾಗಿ ಲಿಂಗಾಯತ ನಾಯಕರಾದ ಜಗದೀಶ ಶೆಟ್ಟರ್ ಮತ್ತು ಬಿ.ಎಸ್.ಯಡಿಯೂರಪ್ಪನವರನ್ನು ಮುಖ್ಯಮಂತ್ರಿಗಳಾಗಿ ಬಿಂಬಿಸಿದ್ದರೆ ಜೆಡಿ (ಎಸ್)ನ ಆಯ್ಕೆ ಎಚ್.ಡಿ.ಕುಮಾರಸ್ವಾಮಿ ಆಗಿದ್ದರು. ಕಾಂಗ್ರೆಸ್ ಪಕ್ಷ ತನ್ನ ಸಂಪ್ರದಾಯದಂತೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಇದ್ದರೂ ಓಟದಲ್ಲಿದ್ದವರು ಹಿಂದುಳಿದ ಜಾತಿಗೆ ಸೇರಿರುವ ಸಿದ್ದರಾಮಯ್ಯ ಮತ್ತು ದಲಿತರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿ.ಪರಮೇಶ್ವರ್ ಎನ್ನುವುದು ಮತದಾರರಿಗೆ ಗೊತ್ತಿತ್ತು. ಚುನಾವಣೆಯ ಮೊದಲು ಮಾತ್ರವಲ್ಲ ಫಲಿತಾಂಶದ ನಂತರ ಕೂಡಾ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳೆಂದು ಬಿಂಬಿಸಿಕೊಂಡವರಲ್ಲಿಯೂ ಲಿಂಗಾಯತ ಜಾತಿಗೆ ಸೇರಿರುವ ಗಂಭೀರ ಅಭ್ಯರ್ಥಿಗಳು ಇರಲಿಲ್ಲ ಎನ್ನುವುದನ್ನೂ ಗಮನಿಸಬೇಕಾಗುತ್ತದೆ. ಸಿದ್ದರಾಮಯ್ಯ ತಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮೊದಲ ದಿನದಿಂದಲೇ ಆತ್ಮವಂಚನೆ ಇಲ್ಲದೆ ಹೇಳಿಕೊಂಡು ಬಂದಿದ್ದರು. ಹೀಗಿದ್ದರೂ ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿಗಳನ್ನಾಗಿ ಬಿಂಬಿಸಿದ್ದ ಬಿಜೆಪಿ ಮತ್ತು ಕೆಜೆಪಿ ಹಾಗೂ ಒಕ್ಕಲಿಗ ನಾಯಕನನ್ನು ಬಿಂಬಿಸಿದ್ದ ಜೆಡಿ (ಎಸ್) ಪಕ್ಷಗಳನ್ನು ರಾಜ್ಯದ ಜನತೆ ತಿರಸ್ಕರಿಸಿದ್ದು ಮಾತ್ರವಲ್ಲ ಕಾಂಗ್ರೆಸ್ ಪಕ್ಷವನ್ನು ಆರಿಸಿದ್ದನ್ನು ಐತಿಹಾಸಿಕ ಬದಲಾವಣೆ ಎನ್ನದೆ ಬೇರೇನು ಹೇಳಲು ಸಾಧ್ಯ?
ಕಳೆದ ಬಾರಿಯ ಫಲಿತಾಂಶಕ್ಕೆ ತದ್ವಿರುದ್ಧವಾಗಿ ಒಕ್ಕಲಿಗರನ್ನು ಹೊರತುಪಡಿಸಿ ಉಳಿದೆಲ್ಲ ಜಾತಿಗಳಿಗೆ ಸೇರಿದ ಅತೀ ಹೆಚ್ಚಿನ ಶಾಸಕರನ್ನು (ಪರಿಶಿಷ್ಟ ಜಾತಿ-17, ಪರಿಶಿಷ್ಟ ಪಂಗಡ-11, ಹಿಂದುಳಿದ ವರ್ಗ 27, ಮುಸ್ಲಿಮ್-9, ಬ್ರಾಹ್ಮಣ -5, ಕ್ರೈಸ್ತ-2, ಜೈನ-2 ) ಕಾಂಗ್ರೆಸ್ ಹೊಂದಿರುವುದು ಕೂಡಾ ವಿಶೇಷ. ಇದು ರಾಜ್ಯದ ಮತದಾರರು ಜಾತಿ ಮೀರಿದ ಪ್ರಜ್ಞಾವಂತಿಕೆಯಿಂದ ಪ್ರತಿನಿಧಿಗಳನ್ನು ಆಯ್ಕೆ ಮಾಡಿರುವುದಕ್ಕೆ ಸಾಕ್ಷಿ. ಉದಾಹರಣೆಗೆ ಉತ್ತರಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಲಿಂಗಾಯತ ಶಾಸಕರು ಹೆಚ್ಚಿನಸಂಖ್ಯೆಯಲ್ಲಿ ಆರಿಸಿಬರಲು ಲಿಂಗಾಯತ ಮತದಾರರಲ್ಲದೆ ಬೇರೆ ಜಾತಿಗಳ ಮತದಾರರೂ ಹೇಗೆ ಕಾರಣವೋ, ಅದೇ ರೀತಿ ಲಿಂಗಾಯತೇತರ ಶಾಸಕರು ಉಳಿದ ಪಕ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿಬರಲಿಕ್ಕೆ ಅವರವರ ಜಾತಿಯ ಮತದಾರರಲ್ಲದೆ ಲಿಂಗಾಯತರೂ ಮತಹಾಕಿದ್ದು ಕಾರಣ. ರಾಜ್ಯದ ಮತದಾರರು ತಮ್ಮ ಜಾತಿಯವರನ್ನೇ ಆಯ್ಕೆ ಮಾಡುವಾಗಲೂ ಅಭ್ಯರ್ಥಿಯ ಅರ್ಹತೆ ಮತ್ತು ಅವರು ಪ್ರತಿನಿಧಿಸುವ ಪಕ್ಷವನ್ನು ಆಧಾರವಾಗಿಟ್ಟುಕೊಂಡಿರುವುದು ಫಲಿತಾಂಶದ ವಿಶ್ಲೇಷಣೆಯಿಂದ ಗೊತ್ತಾಗುತ್ತದೆ.
ಈ ಚುನಾವಣೆಯಲ್ಲಿ ರಾಜ್ಯದ ಮತದಾರರು ಜಾತಿಯನ್ನು ಮಾತ್ರವಲ್ಲ ದುಡ್ಡಿನ ಆಮಿಷವನ್ನು ಕೂಡಾ ಮೀರಲು ಪ್ರಯತ್ನ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಹರಿದಿದ್ದ ದುಡ್ಡಿನ ಹೊಳೆಯಲ್ಲಿ ಮತದಾರರೂ ಕೊಚ್ಚಿಕೊಂಡು ಹೋಗಿದ್ದರು. ಫಲಿತಾಂಶ ಹೊರಬಿದ್ದ ನಂತರ ಪ್ರಾರಂಭವಾದ `ಆಪರೇಷನ್ ಕಮಲ'ಕ್ಕೆ ರಾಜಕಾರಣಿಗಳು ಮಾತ್ರವಲ್ಲ ಮತದಾರರೂ ಬಲಿಯಾಗಿದ್ದರು. ಪಕ್ಷಾಂತರಿ ಶಾಸಕರು ರಾಜೀನಾಮೆ ನೀಡಿ ಮಧ್ಯಂತರ ಚುನಾವಣೆ ಎದುರಿಸಲು ಹೊರಟ ಕಾರಣ ಪಕ್ಷಾಂತರ ನಿಷೇಧ ಕಾಯ್ದೆ ಕೂಡಾ ನಿಷ್ಪ್ರಯೋಜಕವಾಗಿತ್ತು. ಈ ಪಕ್ಷಾಂತರಿಗಳು ಎದುರಿಸಿದ ಮೊದಲ ಮಧ್ಯಂತರ ಚುನಾವಣೆಯಲ್ಲಿಯೇ ಮತದಾರರು ಸೋಲಿಸಿಬಿಟ್ಟಿದ್ದರೆ ರಾಜ್ಯದ ರಾಜಕಾರಣ ಈ ರೀತಿ ಅನೈತಿಕತೆಯ ಕೆಸರಲ್ಲಿ ಹೊರಳಾಡುತ್ತಿರಲಿಲ್ಲ. ಮತದಾರರ ಪ್ರತಿಕ್ರಿಯೆಯಿಂದ ಉತ್ತೇಜಿತರಾದ ಬಿಜೆಪಿ ನಾಯಕರು ಗಣಿಲೂಟಿಕೋರರ ದುಡ್ಡನ್ನುಬಳಸಿಕೊಂಡು `ಯಾರನ್ನಾದರೂ, ಯಾವುದನ್ನಾದರೂ ಖರೀದಿಸಿಬಿಡಬಹುದು' ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದರು. ಇದರಿಂದಾಗಿಯೇ ಅಗತ್ಯ ಇಲ್ಲದಿದ್ದರೂ ಶಾಸಕರ `ಖರೀದಿ' ನಡೆದದ್ದು. ಕೆಲವೇ ಕೆಲವು ಮಂದಿ ಆಡುತ್ತಿರುವ ಈ ದುಡ್ಡಿನ ಆಟವನ್ನು ದೂರದಲ್ಲಿ ನಿಂತು ನೋಡುತ್ತಿದ್ದ ಜನ ಅಸಹಾಯಕರಾಗಿದ್ದರು. ಇದಕ್ಕೆ ಕೊನೆಯೇ ಇಲ್ಲವೇ ಎಂದು ಅವರ ಮನಸ್ಸು ರೋದಿಸುತ್ತಿತ್ತೋ ಏನೋ?.
ಆಗಲೇ ಬದಲಾವಣೆಯ ಬಿರುಗಾಳಿ ಬೀಸಲಾರಂಭಿಸಿದ್ದು. ಈಗಿನದ್ದು ಆಗಿನ ಬದಲಾವಣೆಯ ಮುಂದುವರಿದ ಭಾಗ. ಗಣಿಲೂಟಿ ಮಾಡಿದ ಆರೋಪ ಎದುರಿಸುತ್ತಿದ್ದ ಸಚಿವರು ಮಾತ್ರವಲ್ಲ ಸಾಕ್ಷಾತ್ ಮುಖ್ಯಮಂತ್ರಿಗಳೇ ಜೈಲಿಗೆ ಹೋದದ್ದು, ಅಧಿಕಾರವನ್ನು ಕಳೆದುಕೊಂಡದ್ದು... ಎಲ್ಲವೂ ನಡೆದುಹೋಯಿತು. ಇದರ ತಾರ್ಕಿಕ ಅಂತ್ಯ ಎಂಬಂತೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ಮಣ್ಣುಮುಕ್ಕಿ ಬಿಟ್ಟಿದೆ. ಕೇವಲ ಐದು ವರ್ಷಗಳ ಕಿರುಅವಧಿಯಲ್ಲಿ ರಾಜ್ಯದ ಜನತೆ ರಾಜಕಾರಣದ ಈ ಏಳು-ಬೀಳುಗಳಿಗೆ ಸಾಕ್ಷಿಯಾಗಿದ್ದಾರೆ. `ತಪ್ಪು ಮಾಡಿದವರಿಗೆ ಶಿಕ್ಷೆ ಆಗಿಯೇ ಆಗುತ್ತದೆ' ಎಂಬ ಸಾಮಾನ್ಯ ಜನರ ಮುಗ್ಧ ನಂಬಿಕೆ ಹುಸಿಯಾಗಲಿಲ್ಲ. ರಾಜ್ಯದ ಪ್ರಜ್ಞಾವಂತ ಮತದಾರರು ಜಾತಿಯ ದೌರ್ಬಲ್ಯ, ದುಡ್ಡಿನ ಆಮಿಷವನ್ನು ಮೀರಿ ಹೊಸ ಕರ್ನಾಟಕವೊಂದನ್ನು ತೆರೆದಿಟ್ಟಿದ್ದಾರೆ. ಬದಲಾವಣೆಯ ಹೊಸ್ತಿಲಲ್ಲಿ ರಾಜ್ಯ ನಿಂತಿದೆ, ಅದೇ ದಾರಿಯಲ್ಲಿ ಅದನ್ನು ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಸಿದ್ದರಾಮಯ್ಯನವರ ಮೇಲಿದೆ.

Thursday, May 9, 2013

ಬಿಜೆಪಿಗೆ ಮುಖಭಂಗ... ಜೆಡಿಎಸ್‌ಗೆ ಆಶಾಭಂಗ... ಕೆಜೆಪಿಗೆ ಗರ್ವಭಂಗ...

ಬದಲಾವಣೆಗಿದು ಜನಾದೇಶ

ಬೆಂಗಳೂರು: ದುರಾಡಳಿತದ ವಿರುದ್ಧದ ಆಕ್ರೋಶ, `ಆಪರೇಷನ್ ಕಮಲ'ವನ್ನೊಳಗೊಂಡ ಅನೈತಿಕ ರಾಜಕಾರಣಕ್ಕೆ ಪ್ರತಿರೋಧ, ದಕ್ಷ ಆಡಳಿತದ ಆಶಯ ಮತ್ತು ಬದಲಾವಣೆಯ ನಿರೀಕ್ಷೆಯನ್ನೊಳಗೊಂಡ ರಾಜ್ಯದ ಜನಾದೇಶ ಬಿಜೆಪಿ ಹಾಗೂ ಕೆಜೆಪಿಗಳೆರಡನ್ನೂ ಸ್ಪಷ್ಟವಾಗಿ ತಿರಸ್ಕರಿಸಿ ಒಂಬತ್ತು ವರ್ಷಗಳ ನಂತರ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ನೀಡಿದೆ.
ಬಿಜೆಪಿಯನ್ನು ಧ್ವಂಸ ಮಾಡುವ ಉದ್ದೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಫಲರಾದರೂ ತಾವು ಕಟ್ಟಿದ ಕೆಜೆಪಿಯನ್ನು ಪ್ರಾದೇಶಿಕ ಪಕ್ಷದ ರೂಪದಲ್ಲಿ ನೆಲೆಗೊಳಿಸಲು ಅವರು ವಿಫಲರಾಗಿದ್ದಾರೆ. ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿ ಮತ್ತು ಕೆಜೆಪಿಯನ್ನು ಪ್ರತ್ಯೇಕವಾಗಿ ನೋಡಲು ಹೋಗದೆ ಒಂದೇ ನಾಣ್ಯದ ಎರಡು ಮುಖಗಳೆಂದೇ ಪರಿಗಣಿಸಿ ತಿರಸ್ಕರಿಸಿದ್ದಾರೆ. ಈ ಮೂಲಕ ಯಡಿಯೂರಪ್ಪನವರ ನಿರ್ಗಮನದಿಂದ ತಮ್ಮ ಪಕ್ಷ ಕಳಂಕಮುಕ್ತವಾಗಿ ಸ್ವಚ್ಛವಾಗಿದೆ ಎಂಬ ಬಿಜೆಪಿಯ ವಾದ ಮತ್ತು ಬಿಜೆಪಿಯಿಂದ ಅನ್ಯಾಯವಾಗಿದೆ ಎಂಬ ಯಡಿಯೂರಪ್ಪನವರ ಅಳಲುಗಳೆರಡನ್ನೂ ತಳ್ಳಿಹಾಕಿದ್ದಾರೆ.
ಕಳೆದ ಚುನಾವಣೆಯ ಕಾಲದಲ್ಲಿ ಎದುರಾದ ವಚನಭ್ರಷ್ಟತೆಯ ಆರೋಪದಿಂದಾಗಿ ಕುಸಿದುಹೋಗಿದ್ದ ಜಾತ್ಯತೀತ ಜನತಾದಳದ ಸಾಧನೆ ನಿರೀಕ್ಷೆಯನ್ನು ಮೀರಿದ್ದು. ಆದರೆ ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ ಜೆ.ಡಿ (ಎಸ್) ಗಳಿಸಿದ ಬಹುಪಾಲು ಸ್ಥಾನಗಳು ಹಳೆಮೈಸೂರು ಭಾಗಕ್ಕೆ ಸೇರಿವೆ  (40ರಲ್ಲಿ 27) ಎಂಬುದು ಗಮನಾರ್ಹ. ಇದರಿಂದಾಗಿ ಉತ್ತರಕರ್ನಾಟಕಕ್ಕೆ ದಾಳಿ ಮಾಡಿ `ಗಡಿ ವಿಸ್ತರಣೆ' ಮಾಡುವ ಅದರ ಪ್ರಯತ್ನ ಮತ್ತೊಮ್ಮೆ ವಿಫಲಗೊಂಡಿದೆ. ಬೆಂಗಳೂರು ನಗರ ಮತ್ತು ಗ್ರಾಮೀಣ ಜಿಲ್ಲೆಗಳಲ್ಲಿ ಜೆ.ಡಿ (ಎಸ್)ಗಳಿಸಿದ ಸ್ಥಾನಗಳು (5) ಪಕ್ಷದ ನೆಲೆಯನ್ನು ವಿಸ್ತರಿಸುವ ಸಾಧ್ಯತೆಯನ್ನು ತೋರಿಸಿದೆ. ಕಾಂಗ್ರೆಸ್ ಪಕ್ಷ ತನ್ನ ಬಲವರ್ಧನೆ ಮಾಡಿಕೊಂಡರೂ ಹಳೆಮೈಸೂರು ಭಾಗದ ತನ್ನ ಸಾಮ್ರಾಜ್ಯವನ್ನು ಜೆಡಿ (ಎಸ್) ಬಿಟ್ಟುಕೊಟ್ಟಿಲ್ಲ.

ಸರ್ಕಾರ ರಚನೆಗೆ ಬೇಕಾದ ಬಹುಮತವನ್ನಷ್ಟೇ ಪಡೆದಿರುವ ಕಾಂಗ್ರೆಸ್ ಪಕ್ಷ ಗೆಲುವಿನಿಂದ ಬೀಗುವ ಸ್ಥಿತಿಯಲ್ಲಿ ಇಲ್ಲ. ಮಹಾನಗರ ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಆಡಳಿತ ವೈಫಲ್ಯದಿಂದಾಗಿ ನಾಗರಿಕರಲ್ಲಿ ಹುಟ್ಟಿಕೊಂಡಿರುವ ಅಸಮಾಧಾನವನ್ನು ಬಳಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ. ಇದರ ಜತೆಗೆ ಟಿಕೆಟ್ ಹಂಚಿಕೆಯಿಂದಾಗಿ ಉದ್ಭವವಾಗಿರುವ ಭಿನ್ನಮದಿಂದಾಗಿ ಸುಲಭದಲ್ಲಿ ಗೆಲ್ಲಬಹುದಾದ ಕೆಲವು ಸ್ಥಾನಗಳನ್ನು ಕಳೆದುಕೊಂಡಿದೆ. ಈ ಪಕ್ಷದ ರಾಜ್ಯ ಅಧ್ಯಕ್ಷರೇ ಮರು ಆಯ್ಕೆಯಾಗಲು ವಿಫಲಗೊಂಡಿರುವುದು ಗೆಲುವಿನ ಸಂಭ್ರಮವನ್ನು ತುಸು ಮಂಕುಗೊಳಿಸಿದೆ. ಇದರಿಂದ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಉದ್ದನೆಯ ಪಟ್ಟಿಯಲ್ಲಿದ್ದ ಒಂದು ಹೆಸರು ಕಡಿಮೆಯಾಗಿದೆ ಅಷ್ಟೆ.
ಚುನಾವಣಾಪೂರ್ವ ಸಮೀಕ್ಷೆಯಲ್ಲಿ `ಪ್ರಜಾವಾಣಿ' ನಿರೀಕ್ಷಿಸಿದಂತೆಯೇ ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದ ಮತದಾರರು ಜನಾದೇಶದ `ಆಟ ಬದಲಿಸಿದ್ದಾರೆ'. ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ, ವಿಜಾಪುರ ಮತ್ತು ಧಾರವಾಡ ಜಿಲ್ಲೆಗಳನ್ನೊಳಗೊಂಡ ಮುಂಬೈ ಕರ್ನಾಟಕದಲ್ಲಿರುವ ಒಟ್ಟು 50 ಸ್ಥಾನಗಳಲ್ಲಿ ಕಳೆದ ಬಾರಿ ಬಿಜೆಪಿ 36 ಸ್ಥಾನಗಳನ್ನು ಗಳಿಸಿದ್ದರೆ ಈ ಬಾರಿ ಅದಕ್ಕೆ ಉಳಿಸಲು ಸಾಧ್ಯವಾಗಿದ್ದು ಹನ್ನೆರಡು ಮಾತ್ರ. ಇದೇ ವೇಳೆ ಕಳೆದ ಚುನಾವಣೆಯಲ್ಲಿ ಕೇವಲ 12 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ ಈ ಬಾರಿ ತನ್ನ ಬಲವನ್ನು 31ಕ್ಕೆ ಹೆಚ್ಚಿಸಿಕೊಂಡಿದೆ.
ಹೈದರಾಬಾದ್ ಕರ್ನಾಟಕದಲ್ಲಿಯೂ ಸ್ಥಾನಪಲ್ಲಟ ಸ್ಪಷ್ಟವಾಗಿದೆ. ಗುಲ್ಬರ್ಗ, ಬೀದರ್, ರಾಯಚೂರು ,ಕೊಪ್ಪಳ ಮತ್ತು ಬಳ್ಳಾರಿಗಳನ್ನೊಳಗೊಂಡ ಹೈದರಾಬಾದ್ ಕರ್ನಾಟಕದಲ್ಲಿರುವ ಒಟ್ಟು 39 ಸ್ಥಾನಗಳಲ್ಲಿ ಕಳೆದ ಬಾರಿ 19ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಚುನಾವಣೆಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಐದು ಮಾತ್ರ. ಇದಕ್ಕೆ ವಿರುದ್ಧವಾಗಿ 15 ಸ್ಥಾನಗಳನ್ನು ಗಳಿಸಿದ್ದ ಕಾಂಗ್ರೆಸ್ 21ಕ್ಕೆ ತನ್ನ ಬಲ ವೃದ್ಧಿಸಿಕೊಂಡಿದೆ. ಈ `ಎರಡು ಕರ್ನಾಟಕ'ಗಳ ಒಟ್ಟು 89 ಸ್ಥಾನಗಳ ಪೈಕಿ ಬಿಜೆಪಿ ಬಲ 55ರಿಂದ 17ಕ್ಕೆ ಇಳಿದಿರುವುದು ಮತ್ತು ಕಾಂಗ್ರೆಸ್ ಬಲ 22ರಿಂದ 55ಕ್ಕೆ ಹೆಚ್ಚಿರುವುದು ಈ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸಿರುವ ಮುಖ್ಯ ಬೆಳವಣಿಗೆ. ಕುಸಿದುಹೋಗಿರುವ ಜನಪ್ರಿಯತೆಯನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮೋಡಿ ಎತ್ತಿಹಿಡಿಯುತ್ತದೆ ಎಂದು ನಿರೀಕ್ಷಿಸಿದ್ದ ಬಿಜೆಪಿಯ ನಿರೀಕ್ಷೆ ಹುಸಿಯಾಗಿರುವುದಕ್ಕೆ ರಾಜ್ಯದ ಕರಾವಳಿ ಭಾಗದ ಫಲಿತಾಂಶವೇ ಸಾಕ್ಷಿ.
`ಹಿಂದುತ್ವದ ಪ್ರಯೋಗಶಾಲೆ' ಎಂದೇ ಬಣ್ಣಿಸಲಾಗುತ್ತಿದ್ದ ರಾಜ್ಯದ ಕರಾವಳಿ ಭಾಗದಲ್ಲಿಯೂ ಮೋದಿ ಪ್ರಚಾರವು ಬಿಜೆಪಿ ದೂಳಿಪಟವಾಗುವುದನ್ನು ತಪ್ಪಿಸಲಾಗಿಲ್ಲ. ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ಒಟ್ಟು ಹದಿಮೂರು ಕ್ಷೇತ್ರಗಳಲ್ಲಿ ಹತ್ತರಲ್ಲಿ ಕಾಂಗ್ರೆಸ್ ಜಯಗಳಿಸಿದೆ. ಬಿಜೆಪಿಗೆ ಉಳಿಸಿಕೊಂಡಿರುವುದು ಎರಡನ್ನು ಮಾತ್ರ. ನೈತಿಕ ಪೊಲೀಸ್‌ಗಿರಿ ಮತ್ತು ಕೋಮುದ್ವೇಷಕ್ಕೆ ಪ್ರಚೋದನೆ ನೀಡುವ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ದದ ಸ್ಪಷ್ಟವಾದ ತೀರ್ಪನ್ನು ಕರಾವಳಿಯ ಮತದಾರರು ನೀಡಿದ್ದಾರೆ.
ಮೋದಿ ಭಾಷಣಕ್ಕೆ ಹೇಗೆ ಜನ ಮರುಳಾಗಿಲ್ಲವೋ ಹಾಗೆಯೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಯುಪಿಎ ಸರ್ಕಾರದ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆಯೂ ರಾಜ್ಯದ ಮತದಾರರು ತಲೆ ಕೆಡಿಸಿಕೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಯನಿರ್ವಹಣೆಯನ್ನು ಪ್ರತ್ಯೇಕವಾಗಿ ಗಮನಿಸುವ ಪ್ರಬುದ್ಧತೆ ಇದಕ್ಕೆ ಕಾರಣ ಇರಬಹುದು. `ಆಪರೇಷನ್ ಕಮಲ'ದ ದೌರ್ಬಲ್ಯಕ್ಕೆ ಬಲಿಯಾಗಿದ್ದ ಪ್ರಮುಖರನ್ನು ಸೋಲಿಸುವ ಮೂಲಕ ದುಡ್ಡಿನ ಬಲದಿಂದ ಜನಾಭಿಪ್ರಾಯವನ್ನೂ ಖರೀದಿಸಲು ಸಾಧ್ಯ ಎಂಬ ಅಭಿಪ್ರಾಯವನ್ನು ಕೂಡಾ ಮತದಾರರು ಹುಸಿಗೊಳಿಸಿದ್ದಾರೆ. ಹಣದ ಹೊಳೆ ಹರಿಸಿದ ಅನೇಕ ಸಿರಿವಂತ ಅಭ್ಯರ್ಥಿಗಳು ಸೋಲಿನ ಶಿಕ್ಷೆಗೆ ಈಡಾಗಿದ್ದಾರೆ.
ಈ ಚುನಾವಣೆಯಲ್ಲಿ ಜಾತಿ ವಹಿಸಿರುವ ಪಾತ್ರವನ್ನು ನಿರಾಕರಿಸಲಾಗದಿದ್ದರೂ ನಿರ್ದಿಷ್ಟ ಜಾತಿಯ ಜನರು ಯಾವುದಾದರೂ ಒಂದು ಪಕ್ಷ ಇಲ್ಲವೇ ಒಬ್ಬ ನಾಯಕನನ್ನು ಬೆಂಬಲಿಸುತ್ತಾರೆಂಬ ಜನಪ್ರಿಯ ಅಭಿಪ್ರಾಯವನ್ನು ಮತದಾರರು ಹುಸಿಗೊಳಿಸಿದ್ದಾರೆ. ವೀರಶೈವ ಮಠಗಳಿಗೆ ಉದಾರವಾಗಿ ಬಜೆಟ್‌ನಲ್ಲಿ ಹಣ ನೀಡಿದ ಯಡಿಯೂರಪ್ಪನವರನ್ನು ಲಿಂಗಾಯತರ ಪ್ರಶ್ನಾತೀತ ನಾಯಕರೆಂದೇ ಬಿಂಬಿಸಲಾಗಿದ್ದರೂ ಕೆಜೆಪಿಗೆ ಆ ಜಾತಿಯ ಮತದಾರರಿಂದ ಹೆಚ್ಚಿನ ಬೆಂಬಲ ವ್ಯಕ್ತವಾಗಿಲ್ಲ ಎನ್ನುವುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗುತ್ತದೆ. ಇದೇ ವೇಳೆ ಅನೇಕ ಕ್ಷೇತ್ರಗಳಲ್ಲಿ ಜಾತಿ ಬಲ ಇಲ್ಲದ ವೈ.ಎಸ್.ವಿ.ದತ್ತ, ರಮೇಶ್‌ಕುಮಾರ್, ಅಭಯಚಂದ್ರ ಜೈನ್, ಡಿ.ಸುಧಾಕರ್, ಅಜಯಸಿಂಗ್ ಮೊದಲಾದ ನಾಯಕರನ್ನು ಮತದಾರರು ತಮ್ಮ  ಪ್ರತಿನಿಧಿಗಳಾಗಿ ಆಯ್ಕೆ ಮಾಡಿದ್ದಾರೆ. ಮಂಡ್ಯದ ಮೇಲುಕೋಟೆ ಕ್ಷೇತ್ರದಿಂದ ರೈತಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರು ಆಯ್ಕೆಯಾಗಿರುವುದು ಕೂಡಾ ಚುನಾವಣಾ ಫಲಿತಾಂಶದ ಅಚ್ಚರಿಗಳಲ್ಲೊಂದು.
ಆಡಳಿತ ವಿರೋಧಿ ಅಲೆಯಲ್ಲಿ ಸೋಮಣ್ಣ, ಎ.ರಾಮದಾಸ್, ಮುರುಗೇಶ ನಿರಾಣಿ, ಬಚ್ಚೇಗೌಡ, ಸೊಗಡು ಶಿವಣ್ಣ ಸೇರಿದಂತೆ ರಾಜ್ಯದ ಹನ್ನೆರಡು ಸಚಿವರು ಕೊಚ್ಚಿಕೊಂಡು ಹೋಗಿದ್ದಾರೆ. ಕೊನೆ ಗಳಿಗೆಯಲ್ಲಿ ಸರ್ಕಾರದಿಂದ ಹೊರಬಂದರೂ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಮತ್ತು ಸದನದಲ್ಲಿ ಬ್ಲೂಫಿಲಂ ವೀಕ್ಷಣೆಯ ಆರೋಪಕ್ಕೊಳಗಾಗಿರುವ ಮಾಜಿ ಸಚಿವ ಕೃಷ್ಣ ಪಾಲೇಮಾರ್ ಅವರು ಸೋಲುಂಡಿದ್ದಾರೆ. ಇದೇ ವೇಳೆ  ಎಚ್.ಕೆ.ಪಾಟೀಲ್, ರಮೇಶಕುಮಾರ್. ಹಾಲಾಡಿ ಶ್ರಿನಿವಾಸ ಶೆಟ್ಟಿ, ಬಿ.ಆರ್.ಪಾಟೀಲ್, ಸುರೇಶ್‌ಕುಮಾರ್ ಡಾ.ಎ.ಬಿ.ಮಾಲಕರೆಡ್ಡಿ. ಕಾಗೋಡು ತಿಮ್ಮಪ್ಪ , ಕಿಮ್ಮನೆ ರತ್ನಾಕರ, ವೈ.ಎಸ್.ವಿ.ದತ್ತ ಮೊದಲಾದ ಒಂದಷ್ಟು ಸಜ್ಜನ ರಾಜಕಾರಣಿಗಳನ್ನು ಪಕ್ಷಾತೀತವಾಗಿ ಜನ ಗೆಲ್ಲಿಸಿದ್ದಾರೆ.
1999ರ ಚುನಾವಣೆಯ ನಂತರ ಬೆಳಗಾವಿ ನಗರದಲ್ಲಿ ಯಾವುದೇ ಸ್ಥಾನವನ್ನು ಗೆಲ್ಲಲಾಗದ ಎಂಇಎಸ್ ತಣ್ಣಗಾಗಿತ್ತು. ಈ ಬಾರಿ ಅದು ನಗರದಲ್ಲಿ ಮತ್ತೆ ಖಾತೆ ತೆರೆದಿದೆ. ಆ ಸಂಘಟನೆಯ ಬೆಂಬಲ ಪಡೆದು ಆಯ್ಕೆಯಾಗಿರುವ ಇಬ್ಬರು (ಖಾನಾಪುರದಲ್ಲಿ ಸ್ಥಾನ ಉಳಿಸಿಕೊಂಡಿದೆ) ಶಾಸಕರು ಮತ್ತೆ ಗಡಿವಿವಾದವನ್ನು ಕೆದಕುವ ದುಸ್ಸಾಹಸ ಮಾಡಬಹುದು. ಇನ್ನೊಂದು ಬೆಳವಣಿಗೆಯಲ್ಲಿ ಚಾಮರಾಜನಗರದ ಕನ್ನಡ ಚಳಚಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಸೋತುಹೋಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸ್ಪರ್ಧಿಸಿದ್ದ ಸಿಪಿಎಂನ ಜಿ.ವಿ. ಶ್ರೀರಾಮ ರೆಡ್ಡಿ ಅವರ ಸೋಲಿನೊಂದಿಗೆ ವಿಧಾನಸಭೆಯಲ್ಲಿ ಮತ್ತೆ ಖಾತೆ ತೆರೆಯುವ ಅವಕಾಶವನ್ನು ಎಡ ಪಕ್ಷ ಕಳೆದುಕೊಂಡಿದೆ.

Monday, May 6, 2013

ಕಾಂಗ್ರೆಸ್ ಸರ್ಕಾರ ರಚಿಸಬಹುದು, ಆದರೆ...?

ರ್ನಾಟಕದಲ್ಲಿ ಈ ಬಾರಿ ಚುನಾವಣೋತ್ತರ ಭವಿಷ್ಯ ನುಡಿಯುವುದಕ್ಕೆ ಚುನಾವಣಾ ಶಾಸ್ತ್ರದ ಪರಿಣತಿ ಬೇಕಾಗಿಲ್ಲ. ಮೊದಲಿನ ನಾಲ್ಕು ಸ್ಥಾನಗಳ
ಲ್ಲಿ ಯಾರು ಇರುತ್ತಾರೆ ಎನ್ನುವುದು ಚುನಾವಣೆ ಘೋಷಣೆಯಾಗುವ ದಿನವೇ ನಿರ್ಧಾರವಾಗಿದೆ. ಅದು ಕ್ರಮವಾಗಿ ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್) ಮತ್ತು ಕೆಜೆಪಿ. ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎನ್ನುವುದನ್ನು ಊಹಿಸುವುದು ಕೂಡಾ ಕಷ್ಟದ ಕೆಲಸ ಅಲ್ಲ, ಅದು ಕಾಂಗ್ರೆಸ್. ಯಾವ ಪಕ್ಷದವರು ಮುಖ್ಯಮಂತ್ರಿಯಾಗಬಹುದು ಎನ್ನುವುದನ್ನು ಕೂಡಾ ಹೇಳಿಬಿಡಬಹುದು, ಅದೂ ಕಾಂಗ್ರೆಸ್. ಇಷ್ಟು ಹೇಳಿದ ಮಾತ್ರಕ್ಕೆ ಚುನಾವಣೋತ್ತರ ಭವಿಷ್ಯ ಪೂರ್ಣವಾಗುವುದಿಲ್ಲ. ಯಾಕೆಂದರೆ ಇದರೊಳಗೆ ಒಂದಷ್ಟು ಒಳಸುಳಿಗಳಿವೆ.
ಕಾಂಗ್ರೆಸ್ ಎಷ್ಟೇ ಕಡಿಮೆ ಸ್ಥಾನಗಳಿಸಿದರೂ ಎಂಬತ್ತಕ್ಕಿಂತ ಕೆಳಗಿಳಿಯಲಾರದು. ಅದು 80,90,100,120 ಹೀಗೆ ಯಾವುದೇ ಸಂಖ್ಯೆಯಲ್ಲಿ ಹೋಗಿ ನಿಲ್ಲಬಹುದು. ಚುನಾವಣಾಪೂರ್ವ ಮೈತ್ರಿ ಇಲ್ಲದ ಸಂದರ್ಭಗಳಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸಿದ ಪಕ್ಷವನ್ನು ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ಹಾನಿಸುವುದು ಸಂಪ್ರದಾಯ. ಇದನ್ನು ಮುರಿದ ಅನೇಕ ಪ್ರಸಂಗಗಳಿದ್ದರೂ ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ನಂತರ ರಾಜ್ಯಪಾಲರೆಲ್ಲರೂ ಎಚ್ಚರಿಕೆಯಿಂದ ನಡೆದುಕೊಳ್ಳತೊಡಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಒಂದು ಅನುಕೂಲತೆ ಇದೆ. ಇಲ್ಲಿನ ರಾಜ್ಯಪಾಲರು ಒಂದು ಕಾಲದಲ್ಲಿ ಕಾಂಗ್ರೆಸಿಗರಾಗಿದ್ದವರು ಮಾತ್ರವಲ್ಲ ತಮ್ಮ ಹಳೆಯ ಪಕ್ಷದ ಬಗೆಗಿನ ಒಲವನ್ನು ಬಚ್ಚಿಟ್ಟುಕೊಳ್ಳಲಾಗದಷ್ಟು ಪಕ್ಷ ನಿಷ್ಠರಾಗಿರುವುದರಿಂದ ಮೊದಲ ಆಹ್ವಾನ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದು ಖಾತರಿ.
ಒಮ್ಮೆ ರಾಜ್ಯಪಾಲರಿಂದ ಆಹ್ವಾನ ಬಂದುಬಿಟ್ಟರೆ ಬಹುಮತವನ್ನು ಗಳಿಸುವುದು ಯಾವ ರಾಜಕೀಯ ಪಕ್ಷಕ್ಕೂ ಕಷ್ಟದ ಕೆಲಸ ಅಲ್ಲ.
ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದರೆ ಎಂಬತ್ತು ತಲುಪಬಲ್ಲ ಇಲ್ಲವೆ ಅದಕ್ಕಿಂತಲೂ ಮುಂದೆ ಹೋಗಬಲ್ಲ ಯಾವ ರಾಜಕೀಯ ಪಕ್ಷವೂ ಸದ್ಯ ಚುನಾವಣಾ ಕಣದಲ್ಲಿ ಇಲ್ಲ. ಸ್ವಂತ ಬಲದಿಂದ ಸರ್ಕಾರ ರಚಿಸುವುದಾಗಿ ಬಿಜೆಪಿ ನಾಯಕರು ಸಾರ್ವಜನಿಕವಾಗಿ ಕೂಗಿ ಕೂಗಿ ಹೇಳಿದರೂ ಖಾಸಗಿಯಾಗಿ ಅವರು ಕೊಡುವ ಲೆಕ್ಕಾಚಾರ ಅರವತ್ತರ ಸಂಖ್ಯೆಯನ್ನು ದಾಟುವುದಿಲ್ಲ. ದೇವೇಗೌಡರು ತಮ್ಮ ಪಕ್ಷವೇ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಎಂದು ಗುಡುಗಿದರೂ ಅವರ ಶಾಸಕರ ಸಂಖ್ಯೆ 30-40ಕ್ಕಿಂತ ಮೇಲೇರಲಾರದು. ಕರ್ನಾಟಕ ಜನತಾ ಪಕ್ಷ (ಕೆಜೆಪಿ)ದ ನಾಯಕ ಬಿ.ಎಸ್.ಯಡಿಯೂರಪ್ಪನವರೇ ಒಪ್ಪಿಕೊಂಡಿರುವ ಪ್ರಕಾರ ಅವರ ನಿರೀಕ್ಷೆಯ ಗರಿಷ್ಠ ಸಂಖ್ಯೆ ಅರವತ್ತು.
ಯಡಿಯೂರಪ್ಪನವರ ಲೆಕ್ಕದ ಮೂರನೆ ಒಂದರಷ್ಟು ಸ್ಥಾನಗಳನ್ನು ಗೆದ್ದರೂ ಅದು ಅವರ ಪಕ್ಷದ ದೊಡ್ಡ ಸಾಧನೆ. `ಸ್ವಂತಬಲದಿಂದ ಸರ್ಕಾರ ರಚಿಸಲಿದ್ದೇವೆ' ಎಂದು ದೇವೇಗೌಡ ಇಲ್ಲವೆ ಯಡಿಯೂರಪ್ಪನವರು ಹೇಳುತ್ತಿಲ್ಲ, `ನಮ್ಮನ್ನು ಬಿಟ್ಟು ಬೇರೆಯವರು ಸರ್ಕಾರ ರಚನೆ ಮಾಡುವುದು ಸಾಧ್ಯ ಇಲ್ಲ' ಎಂದಷ್ಟೇ ಅವರ ವಾದ. ಈ ರೀತಿ ಕಾಂಗ್ರೆಸ್ ಪಕ್ಷವೇ ಅತ್ಯಧಿಕ ಸ್ಥಾನಗಳನ್ನು ಗಳಿಸಲಿದೆ ಎಂದು ವಿರೋಧಪಕ್ಷಗಳೇ ಪರೋಕ್ಷವಾಗಿ ಒಪ್ಪಿಕೊಂಡಿರುವಾಗ ಸರ್ಕಾರ ರಚನೆಗಾಗಿ  ಕಾಂಗ್ರೆಸ್ ಪಕ್ಷ ಮೊದಲ ಆಹ್ವಾನ ಪಡೆಯುವುದಕ್ಕೆ ಏನು ಅಡ್ಡಿ ಇದೆ?
ಕಾಂಗ್ರೆಸ್ ಪಕ್ಷವೇನೋ ಸರ್ಕಾರ ರಚಿಸಿಬಿಡಬಹುದು. ಆದರೆ ಆ ಸರ್ಕಾರ ಏಕಪಕ್ಷದ್ದೇ ಇಲ್ಲವೆ ಮೈತ್ರಿಕೂಟದ್ದೇ? ಎನ್ನುವುದನ್ನು ಮಾತ್ರ  ಚುನಾವಣಾ ಫಲಿತಾಂಶ ನಿರ್ಧರಿಸಬೇಕಾಗಿದೆ. ಬಹುಮತಕ್ಕೆ ಬೇಕಾಗಿರುವ 113 ಸ್ಥಾನಗಳನ್ನು ಗಳಿಸಿದರೆ ಕಾಂಗ್ರೆಸ್ ವಿಧಾನಸೌಧ ಪ್ರವೇಶಿಸಲು ಬೇರೆಯವರ ನೆರವು ಬೇಕಾಗಲಾರದು. ಒಂದೊಮ್ಮೆ ಅದು 105ರ ವರೆಗೂ ಇಳಿದರೂ ಸಮಸ್ಯೆಯಾಗಲಾರದು, ಏಳೆಂಟು ಪಕ್ಷೇತರರು ಮತ್ತುಬಂಡುಕೋರರು ಆರಿಸಿಬರುವ ಸಾಧ್ಯತೆ ಇರುವುದರಿಂದ ಅವರನ್ನು ಕಟ್ಟಿಕೊಂಡು ಸರ್ಕಾರ ರಚಿಸಬಹುದು. ಆದರೆ ನೂರು ಇಲ್ಲವೆ ಅದಕ್ಕಿಂತಲೂ ಕೆಳಗಿಳಿದರೆ ಮಿತ್ರಪಕ್ಷಗಳನ್ನು ಹುಡುಕುವುದು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ. ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಂದೆ ಇರುವುದು ಎರಡೇ ಆಯ್ಕೆ - ಜಾತ್ಯತೀತ ಜನತಾದಳ ಮತ್ತು ಕರ್ನಾಟಕ ಜನತಾ ಪಕ್ಷ. ಚುನಾವಣಾ ಪ್ರಚಾರವನ್ನು ಗಮನಿಸಿದರೆ ಈ ಎರಡು ಪಕ್ಷಗಳಲ್ಲಿ ಜೆಡಿ(ಎಸ್) ನಿರಂತರವಾಗಿ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ ಪಕ್ಷದ ವಿರುದ್ಧ. ಬಿಜೆಪಿ ಬಗೆಗಿನ ಅದರ ಮೆದುಧೋರಣೆ `ಎರಡು ಪಕ್ಷಗಳೊಳಗೆ ಒಳಒಪ್ಪಂದ ಆಗಿದೆ' ಎಂದು ಆರೋಪಿಸುವಷ್ಟು ಎದ್ದು ಕಾಣುತ್ತಿತ್ತು. ಅಧಿಕಾರಾರೂಢ ಪಕ್ಷ ಬಿಜೆಪಿಯಾದರೂ ಜೆಡಿ (ಎಸ್) ಆ ಪಕ್ಷವನ್ನು ಕಾಂಗ್ರೆಸ್‌ನಷ್ಟು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿಲ್ಲ ಎನ್ನುವುದು ಗಮನಾರ್ಹ.
ಇದೇ ರೀತಿ ಕೆಜೆಪಿ ಗುರಿ ಮಾಡಿದ್ದು ಜೆಡಿ (ಎಸ್) ಮತ್ತು ಬಿಜೆಪಿಯನ್ನು ಕಾಂಗ್ರೆಸ್ ಪಕ್ಷವನ್ನಲ್ಲ. ಚುನಾವಣಾ ಪ್ರಚಾರದ ಮಧ್ಯೆ ಮಾತಿಗೆ ಸಿಕ್ಕಿದ್ದ ಕೆಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪನವರು ಕಾಂಗ್ರೆಸ್ ಮತ್ತು ಕೆಜೆಪಿ ಮೈತ್ರಿಕೂಟದ ಸರ್ಕಾರದ ಇಂಗಿತ ವ್ಯಕ್ತಪಡಿಸಿದ್ದರು. ಸ್ಪಷ್ಟವಾಗಿ ಏನನ್ನೂ ಹೇಳದೆ ಇದ್ದರೂ ಕಾಂಗ್ರೆಸ್ ಪಕ್ಷದ ದೆಹಲಿ ನಾಯಕರ ಮೇಲೆ ವಿಪರೀತ ಭರವಸೆಯಿಂದ ಅವರು ಮಾತನಾಡಿ ಅಚ್ಚರಿಗೊಳಿಸಿದ್ದರು. ಯಡಿಯೂರಪ್ಪನರು ಇನ್ನೂ ಸಿಬಿಐ ಕಣ್ಗಾವಲಿನಲ್ಲಿ ಇರುವುದರಿಂದ ಅವರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಸುಲಭ ಮತ್ತು ವೈಯಕ್ತಿಕವಾಗಿ ದೇವೇಗೌಡರಿಗಿಂತ ಇವರು ವಾಸಿ ಎನ್ನುವ ಕಾಂಗ್ರೆಸ್ ನಾಯಕರ ಅಭಿಪ್ರಾಯ ನಿಜ ಇರಬಹುದು. ಆದರೆ ಕೆಜೆಪಿ ಜತೆ ಮೈತ್ರಿಗೆ ಕಾಂಗ್ರೆಸ್ ಸಿದ್ಧ ಇದೆಯೇ ಎನ್ನುವುದು ಪ್ರಶ್ನೆ. ಯಡಿಯೂರಪ್ಪನವರ ವಿರುದ್ಧ ಭ್ರಷ್ಟಾಚಾರದ ಆರೋಪ ಎದುರಾದಾಗ ಅವರ ರಾಜೀನಾಮೆಗೆ ಪಟ್ಟು ಹಿಡಿದ ಕಾಂಗ್ರೆಸ್ ಯಾವ ಮುಖ ಹೊತ್ತು ಅವರ ನೇತೃತ್ವದ ಪಕ್ಷದ ಜತೆ ಮೈತ್ರಿ ಮಾಡಲು ಸಾಧ್ಯ? ಇನ್ನೇನು ಒಂದು ವರ್ಷದೊಳಗೆ ಎದುರಾಗಲಿರುವ ಲೋಕಸಭಾ ಚುನಾವಣೆಯನ್ನು ಯಡಿಯೂರಪ್ಪನವರನ್ನು ಕಟ್ಟಿಕೊಂಡು ಎದುರಿಸಲು ಸಾಧ್ಯವೇ?
ಇದು ಸಾಧ್ಯ ಇಲ್ಲ ಎಂದಾದರೆ ಕಾಂಗ್ರೆಸ್‌ಗೆ ಉಳಿದಿರುವ ಆಯ್ಕೆ ಜೆಡಿ (ಎಸ್). ಈ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವುದರ ಬದಲಿಗೆ ವಿರೋಧಪಕ್ಷದಲ್ಲಿ ಕೂರುವುದು ಒಳ್ಳೆಯ ಮಾರ್ಗ ಎನ್ನುವವರು ಕಾಂಗ್ರೆಸ್‌ನಲ್ಲಿ ಬಹಳ ಸಂಖ್ಯೆಯಲ್ಲಿದ್ದಾರೆ.  ಈ ಮೈತ್ರಿಯಲ್ಲಿ ಸೈದ್ಧಾಂತಿಕವಾದ ತೊಡಕುಗಳಿಲ್ಲ, ನೈತಿಕ ಪ್ರಶ್ನೆಗಳ ಮುಜುಗರವೂ ಇಲ್ಲ. ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರಿದರೆ ಬಿಜೆಪಿಯನ್ನು ಮಣಿಸಬಹುದು ಎಂಬ ಲೆಕ್ಕಾಚಾರ ಕೂಡಾ ಒಪ್ಪುವಂತಹದ್ದು. ಆದರೆ ಈ ಮೈತ್ರಿ ಬಗ್ಗೆ ಇಡೀ ಕಾಂಗ್ರೆಸ್ ಪಕ್ಷದಲ್ಲಿ ಭಯ ಇದೆ. ಹಿಂದಿನ ಇಪ್ಪತ್ತು ತಿಂಗಳ ಅವಧಿಯ ಮೈತ್ರಿ ಸರ್ಕಾರದ ದುಃಸ್ವಪ್ನ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ. ದೇವೇಗೌಡರ ಜತೆ ಚೌಕಾಶಿ ಮಾಡುವುದು ಸುಲಭದ ಕೆಲಸ ಅಲ್ಲ. ಕಾಂಗ್ರೆಸ್ ಕಡೆಯಿಂದ ಮೈತ್ರಿ ಕೋರಿ ಯಾರಾದರೂ ಕೈಚಾಚಿದರೆ ಗೌಡರು ಹಳೆಸಾಲವನ್ನೆಲ್ಲ ಬಡ್ಡಿ ಸಮೇತ ತೀರಿಸಿಕೊಳ್ಳಲು ಮುಂದಾಗಬಹುದು.
ದೇವೇಗೌಡರಿಗೆ ಸಂಪೂರ್ಣ ಶರಣಾಗಿ  ಜೆಡಿ (ಎಸ್) ಜತೆ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್ ಪಕ್ಷ ಮೊದಲ ಬಂಡಾಯವನ್ನು ಮನೆಯೊಳಗಿಂದಲೇ ಎದುರಿಸಬೇಕಾಗಬಹುದು. ಜೆಡಿ (ಎಸ್) ಜತೆ ಮೈತ್ರಿ ಏರ್ಪಟ್ಟರೆ  ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದನ್ನು ದೇವೇಗೌಡರು ಖಂಡಿತ ಒಪ್ಪಲಾರರು.  ಜೀವಂತವಿರುವಾಗಲೇ ಬೀದಿಗಳಲ್ಲಿ ಸಿದ್ದರಾಮಯ್ಯನವರ ಬೆಂಬಲಿಗರು ತನ್ನ `ಹೆಣ'ಸುಟ್ಟದ್ದನ್ನು ಮರೆತುಬಿಡುವವರು ಗೌಡರಲ್ಲ. ದೇವೇಗೌಡರಿಂದ ಇಂತಹದ್ದೊಂದು ಷರತ್ತು ಎದುರಾದರೆ ಅದನ್ನು ಸಿದ್ದರಾಮಯ್ಯ ಸುಮ್ಮನಿದ್ದು ಸಹಿಸಿಕೊಳ್ಳುವವರೂ ಅಲ್ಲ. ಪಕ್ಷ ತೊರೆಯುವ ಅತಿರೇಕದ ನಿರ್ಧಾರವನ್ನು ಕೈಗೊಳ್ಳಲು ಕೂಡಾ ಅವರು ಹಿಂಜರಿಯಲಾರರು. ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ತನ್ನ ಬೆಂಬಲಿಗರಿಗೂ ಒಂದಷ್ಟು ಟಿಕೆಟ್ ಕೊಡಿಸಿರುವುದರಿಂದ ಒಂದೊಮ್ಮೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಹೊರಗೆ ಕಾಲಿಟ್ಟರೆ ಜತೆಯಲ್ಲಿ ಒಂದಷ್ಟು ಶಾಸಕರೂ ಅವರನ್ನು ಹಿಂಬಾಲಿಸಬಹುದು. ಇಂತಹ ಸಂದರ್ಭದಲ್ಲಿ ಜೆಡಿ (ಎಸ್) ಬೆಂಬಲದ ಮೂಲಕ ಸಂಖ್ಯೆಯನ್ನು ಹೊಂದಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಲಾರದು ನಿಜ, ಆದರೆ ದೇವೇಗೌಡರನ್ನು ನಂಬಿಕೊಂಡು ಸಿದ್ದರಾಮಯ್ಯನವರನ್ನು ತ್ಯಾಗ ಮಾಡಲು ಕಾಂಗ್ರೆಸ್ ಮುಂದಾಗಬಹುದೇ?
ಈ ಎರಡು ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೆ ಸಂಖ್ಯಾಬಲ ಗಳಿಸುವ ಮೂರನೆಯ ದಾರಿಯೂ ಇದೆ, ಇದು ಅಡ್ಡದಾರಿ. ಇದು ಕಳೆದ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪನವರು ಹಿಡಿದ ದಾರಿಯೂ ಹೌದು. ಈ ಬಾರಿ ಕಾಂಗ್ರೆಸ್ ಇಂತಹ ಅಡ್ಡದಾರಿ ಹಿಡಿದರೆ ಅದಕ್ಕೆ ಬಲಿಯಾಗಲಿರುವುದು ಅದೇ ಯಡಿಯೂರಪ್ಪನವರ ನೇತೃತ್ವದ ಕರ್ನಾಟಕ ಜನತಾ ಪಕ್ಷ. ಕೆಜೆಪಿ 30ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸಿದರೆ `ಮನೆಮುರಿಯುವುದು' ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಬಹುದು. ಒಂದೊಮ್ಮೆ ಕೆಜೆಪಿ 15-20ರಲ್ಲಿ ಉಳಿದುಬಿಟ್ಟರೆ `ಆಪರೇಷನ್ ಕೈ' ನಡೆಯಬಹುದು. ಬಿಜೆಪಿಯಂತೆ ಶಾಸಕರಿಂದ ರಾಜೀನಾಮೆ ಕೊಡಿಸದೆ ನೇರವಾಗಿ ಕೆಜೆಪಿಯ ಮೂರನೆಯ ಎರಡರಷ್ಟು ಶಾಸಕರನ್ನು ಕಾಂಗ್ರೆಸ್ ಹೊತ್ತುಕೊಂಡು ಹೋಗಬಹುದು. ವೈಯಕ್ತಿಕ ಮತ್ತು ರಾಜಕೀಯ ನಡವಳಿಕೆಯ ಹಲವಾರು ಮಾದರಿಗಳಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರನ್ನು ಹೋಲುವ ಯಡಿಯೂರಪ್ಪನವರು ಈ ವಿಷಯದಲ್ಲಿಯೂ ಸೊರಬದ ಸರದಾರ ಎದುರಿಸಿದ ಪರಿಸ್ಥಿತಿಯನ್ನೇ ಎದುರಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. 2004ರಲ್ಲಿ ಬಂಗಾರಪ್ಪನವರು ಸ್ವತಂತ್ರ ಪಕ್ಷ ಕಟ್ಟಿ ಗೆಲ್ಲಿಸಿಕೊಂಡು ಬಂದ ಹತ್ತು ಶಾಸಕರಲ್ಲಿ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಜನತಾದಳ ಸೇರಿಬಿಟ್ಟಿದ್ದರು. ಅದೇ ರೀತಿ ಯಡಿಯೂರಪ್ಪನವರೂ ತನ್ನ ಶಾಸಕರ ಪಕ್ಷದ್ರೋಹಕ್ಕೆ ಬಲಿಯಾಗಲೂಬಹುದು. ಇಂತಹ `ಆಪರೇಷನ್'ಗಳಲ್ಲಿ ಕಾಂಗ್ರೆಸ್ ಹಳೆಯ ವೈದ್ಯ ಎನ್ನುವುದನ್ನು ಮರೆಯಬಾರದು.
ಇದರ ಹೊರತಾಗಿ ಸರ್ಕಾರ ರಚನೆಯ ಇನ್ನೊಂದು ಸಾಧ್ಯತೆಯೂ ಇದೆ. ರಾಜ್ಯದ ಒಟ್ಟು 224 ಸ್ಥಾನಗಳಲ್ಲಿ ಕಾಂಗ್ರೆಸ್ ನೂರನ್ನು ಗೆದ್ದರೂ ಉಳಿಯುವುದು 124 ಎನ್ನುವುದು ಸರಳ ಲೆಕ್ಕ. ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ಈ 124 ಶಾಸಕರು ಒಟ್ಟಾಗಿಬಿಟ್ಟರೆ? ಅಂದರೆ ಬಿಜೆಪಿ,ಕೆಜೆಪಿ,ಜೆಡಿ (ಎಸ್),ಬಿಎಸ್‌ಆರ್ ಮತ್ತು ಪಕ್ಷೇತರರೆಲ್ಲರೂ ಒಂದಾಗಿಬಿಟ್ಟರೆ? ಈ ರೀತಿ  ಮೈತ್ರಿಕೂಟ ಸರ್ಕಾರದ ರಚನೆ  ಅಸಾಧ್ಯವಲ್ಲ. ಆದರೆ ಇದು ಸಾಧ್ಯವಾಗಬೇಕಾದರೆ ಮೊದಲ ಆಹ್ಹಾನ ಪಡೆದ ಕಾಂಗ್ರೆಸ್ ಬಹುಮತವನ್ನು ಹೊಂದಿಸಿಕೊಳ್ಳಲಾಗದೆ ಅವಕಾಶವನ್ನು ಬಿಟ್ಟುಕೊಡಬೇಕು ಮತ್ತು ಜೆಡಿ (ಎಸ್) ಹಾಗೂ ಕೆಜೆಪಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜತೆ ಸೇರಿಕೊಳ್ಳುವುದಿಲ್ಲ ಎನ್ನುವ ದೃಢ ನಿರ್ಧಾರ ಕೈಗೊಳ್ಳಬೇಕು. ಆದರೆ ಈ ಎರಡು ಪಕ್ಷಗಳಲ್ಲಿ ಕನಿಷ್ಠ ಕೆಜೆಪಿಯ ಮಂಡಿ ಊರಿಸುವುದು ಹೇಗೆ ಎನ್ನುವುದು ಕಾಂಗ್ರೆಸ್ ಪಕ್ಷಕ್ಕೆ ಗೊತ್ತು. ಸಿಬಿಐ ಇರುವುದಾದರೂ ಯಾಕೆ?
ಚುನಾವಣೋತ್ತರ ಸ್ಥಿತಿಯ ಈ ಚಿತ್ರ ಸುಮಾರು ಇಪ್ಪತ್ತು ದಿನಗಳ ಕಾಲ ರಾಜ್ಯದಲ್ಲಿ ಅಡ್ಡಾಡಿದಾಗ ಎದುರಾದ ಮತದಾರರ ಅಭಿಪ್ರಾಯವನ್ನು ಆಧರಿಸಿದ್ದು. ಕಳೆದ ಒಂಬತ್ತು ವರ್ಷಗಳ ಅವಧಿಯ ಅಭದ್ರ ಸರ್ಕಾರಗಳು ಸಾಮಾನ್ಯ ಜನರನ್ನು ಕೆರಳಿಸಿದೆ. ಈ ಹತಾಶ ಮತದಾರ ವರ್ಗ ಒಳ್ಳೆಯವರೋ ,ಕೆಟ್ಟವರೋ ಯಾವುದೋ ಒಂದು ಪಕ್ಷ ಇರಲಿ ಎಂದು ಮತಹಾಕುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಮುಖ್ಯವಾಗಿ ಈ ಚುನಾವಣೆಯಲ್ಲಿ ಸೇರ್ಪಡೆಯಾಗಿರುವ 35 ಲಕ್ಷ ಯುವ ಮತದಾರರಲ್ಲಿ ನಾನು ಕಂಡ ಈ ಅಭಿಪ್ರಾಯ ಅವರು ಹಾಕುವ ಮತಗಳಲ್ಲಿ ಪ್ರತಿಫಲಿಸಿದರೆ ಯಾವುದಾದರೂ ಒಂದು ರಾಜಕೀಯ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಬಹುದು. ಮತದಾನದ ಪ್ರಮಾಣ ಶೇಕಡಾ 70-75 ದಾಟಿ ಬಿಟ್ಟರೆ ಈ ಸಾಧ್ಯತೆ ಇನ್ನೂ ಹೆಚ್ಚಿದೆ. ಕಾದು ನೋಡೋಣ.

Saturday, May 4, 2013

ಚುನಾವಣೆ ಸಂಭ್ರಮ ಮಂಕುಗೊಳಿಸಿರುವ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು: ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಯಿಂದಾಗಿ ಪ್ರಜಾಪ್ರಭುತ್ವದ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಾ ಬಂದಿರುವ ಚುನಾವಣೆ  ತನ್ನ ಸಾಂಪ್ರದಾಯಿಕ ಸಂಭ್ರಮ-ಸಡಗರಗಳನ್ನು ಕಳೆದುಕೊಳ್ಳುತ್ತಿದೆಯೇ?.
ಚುನಾವಣಾ ಕಾಲದಲ್ಲಿ ಸಾಮಾನ್ಯವಾಗಿ ನಡೆಯುವ  ಚರ್ಚೆ -ಜಗಳಗಳೂ ಕೂಡಾ ಅಂಜಿಕೆ-ಅಳುಕಿನ ವಾತಾವರಣದಿಂದಾಗಿ ನಡೆಯದೆ  ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗತ್ಯವಾದ ಸಾರ್ವಜನಿಕ ಸಂವಾದ ನಡೆಯದಂತಾಗಿದೆಯೇ? ರಾಜ್ಯದಲ್ಲಿ ಈ ಬಾರಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯನ್ನು ಬೀದಿಗಳಲ್ಲಿ ನೋಡುತ್ತಾ ಬಂದವರನ್ನು ಇಂತಹ ಪ್ರಶ್ನೆಗಳು ಖಂಡಿತ ಕಾಡಬಹುದು.
ಇಪ್ಪತ್ತು ದಿನ ರಾಜ್ಯದ ಹನ್ನೆರಡು ಜಿಲ್ಲೆಗಳಲ್ಲಿ ನಾನು ಅಂದಾಜು ಎರಡುಸಾವಿರ ಕಿ.ಮೀ. ಪ್ರಯಾಣ ಮಾಡಿದ್ದೇನೆ. ರಾಜಕೀಯ ಸಭೆಗಳ ವೇದಿಕೆಗಳನ್ನು ಹೊರತುಪಡಿಸಿದರೆ ಎಲ್ಲಿಯೂ ಪೋಸ್ಟರ್,ಬ್ಯಾನರ್, ಕರಪತ್ರ, ಬ್ಯಾಡ್ಜ್, ಪಕ್ಷಗಳ ಧ್ವಜಗಳು ಕಣ್ಣಿಗೆ ಬಿದ್ದಿಲ್ಲ. ನನ್ನ ಕಣ್ಣಿನಲ್ಲಿಯೇ ದೋಷ ಇರಬಹುದೇನೋ ಎಂಬ ಅನುಮಾನ ಮೂಡಿ ಎಲ್ಲಿಯಾದರೂ ಪೋಸ್ಟರ್-ಬ್ಯಾನರ್ ಕಣ್ಣಿಗೆ ಬಿದ್ದರೆ ಕಾರು ನಿಲ್ಲಿಸುವಂತೆ ಚಾಲಕನಿಗೂ ಹೇಳಿದ್ದೆ. ಅವನ ಕಣ್ಣಿಗೂ ಬೀಳಲಿಲ್ಲ. ಇದನ್ನು ಕಂಡು ಎಷ್ಟೊಂದು ಕಟ್ಟುನಿಟ್ಟಿನಿಂದ ಚುನಾವಣೆ ನಡೆಯುತ್ತಿದೆ ಎಂದು ಸಂತೋಷಪಡೋಣವೇ?
ಊರು ತುಂಬಾ ಪೋಸ್ಟರ್,ಬ್ಯಾನರ್‌ಗಳು,ಕಾರು-ಅಟೋರಿಕ್ಷಾಗಳಲ್ಲಿ ಮೈಕ್ ಪ್ರಚಾರ, ಕರಪತ್ರ, ಬ್ಯಾಡ್ಜ್‌ಗಳನ್ನು ಸಂಗ್ರಹಿಸಲು ಕಾರು-ರಿಕ್ಷಾಗಳ ಹಿಂದೆ ಓಡುವ ಬಾಲಕರು, ಪಕ್ಷ ನಿಷ್ಠೆಯನ್ನು ಬಹಿರಂಗವಾಗಿ ಘೋಷಿಸುವ ರೀತಿಯಲ್ಲಿ ಮನೆಗಳ ಮೇಲೆ ಹಾರಾಡುವ ಧ್ವಜಗಳು...ಇವೆಲ್ಲವೂ ಚುನಾವಣೆಯ ಕಾಲದಲ್ಲಿ  ಹಬ್ಬದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದ ಕಾಲವೊಂದಿತ್ತು.
ಎಲ್ಲೆಲ್ಲೂ ಖಾಲಿ ಖಾಲಿ: ಪಕ್ಷಗಳ ಪರವಿರೋಧದಿಂದಾಗಿ ನಡೆಯುವ ಸಣ್ಣಪುಟ್ಟ ಜಗಳ ಮತ್ತು  ಕೋಪ-ದ್ವೇಷಗಳು ಒಂದಷ್ಟು ದಿನ ಸ್ನೇಹ-ಸಂಬಂಧಗಳನ್ನು ಕದಡಿ ನಂತರ ತಿಳಿಯಾಗುತ್ತಿತ್ತು. ಆದರೆ ಇಂದು ಯಾವುದಾದರೂ ಊರೊಳಗೆ ಪ್ರವೇಶಿಸಿದರೆ ಇಂತಹ ವಾತಾವರಣವನ್ನು ಕಾಣಲು ಸಾಧ್ಯವಿಲ್ಲ. ಎಲ್ಲಿಯೂ ಚುನಾವಣೆಯ ಸುಳಿವೇ ಇಲ್ಲ. ಎಲ್ಲವೂ ಖಾಲಿ-ಖಾಲಿ, ಬೋಳು-ಬೋಳು.
`ಅನಗತ್ಯ ವೆಚ್ಚವನ್ನು ಕಡಿಮೆ ಮಾಡುವ ಇಂತಹ ಕ್ರಮಗಳು ಸ್ವಾಗತಾರ್ಹ' ಎಂದು ಹೇಳುವವರಿದ್ದಾರೆ. ಚುನಾವಣಾ ಪ್ರಚಾರದ ಅವಧಿಯನ್ನು ಒಂದುವಾರಕ್ಕೆ ಸೀಮಿತಗೊಳಿಸಿದರೆ ಮತದಾರರಿಗೆ ಒಡ್ಡುವ ಆಮಿಷ ಇನ್ನೂ ಕಡಿಮೆಯಾಗಬಹುದು' ಎಂದು ಸಲಹೆ ನೀಡುವವರೂ ಇದ್ದಾರೆ.
ಆದರೆ ದುಡ್ಡು,ಹೆಂಡ,ಬಾಡು,ಸೀರೆ ಹಂಚುವ, ಜಾತಿ-ಧರ್ಮವನ್ನು ಬಳಸಿಕೊಳ್ಳುವ ಚುನಾವಣಾ ಅಕ್ರಮಗಳ ಅತಿರೇಕ ಒಂದೆಡೆಯಾದರೆ, ಈ ಅಕ್ರಮಗಳನ್ನೆಲ್ಲ ತಡೆಯಲು ಹೊರಟು ಚುನಾವಣೆಯಲ್ಲಿ ಜನರು ಸಂಭ್ರಮದಿಂದ ಪಾಲ್ಗೊಳ್ಳದಂತೆ ಮಾಡುವುದು ಇನ್ನೊಂದು ಅತಿರೇಕದಂತೆ ಕಾಣಿಸುತ್ತದೆ.
`ದುಡ್ಡು ಹಂಚುವುದನ್ನು ತಡೆಯಲಿ, ಪ್ರಚಾರಕ್ಕೆ ಬಂದ ಕಾರ್ಯಕರ್ತರು ಊಟ ಮಾಡಿದ ತಟ್ಟೆಗಳನ್ನೂ ಲೆಕ್ಕ ಮಾಡುವುದು ಏನು ಅಸಹ್ಯ ಸಾರ್? ನಮಗಾಗಿ ಬಂದು ಈ ಬಿಸಿಲಿನಲ್ಲಿ ಅವರು ಬೆವರು ಸುರಿಸುತ್ತಾರೆ ಅವರಿಗೆ ಅಷ್ಟೂ ಕೊಡುವುದು ಬೇಡವೇ? ರೂ16 ಲಕ್ಷದಲ್ಲಿ ಚುನಾವಣೆ ಮಾಡ್ಲಿಕ್ಕಾಗುತ್ತಾ? ಎಂದು ಪ್ರಶ್ನಿಸಿದ ಗುಲ್ಬರ್ಗ ಜಿಲ್ಲೆಯ ಕ್ಷೇತ್ರವೊಂದರ ಅಭ್ಯರ್ಥಿಯೊಬ್ಬ.
`ಚುನಾವಣಾ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿಯಿಂದಾಗಿ ನಿಜವಾಗಿ ನಿಮ್ಮ ಚುನಾವಣಾ ವೆಚ್ಚ ಕಡಿಮೆಯಾಗಿದೆಯೇ?' ಎಂಬ ಪ್ರಶ್ನೆಯನ್ನು ಹಲವಾರು ಅಭ್ಯರ್ಥಿಗಳನ್ನು ನಾನು ಕೇಳಿದ್ದೆ. ಕೆಲವರು ವ್ಯಂಗ್ಯವಾಗಿ ನಕ್ಕು ಸುಮ್ಮನಾದರು, ಇನ್ನೂ ಕೆಲವರು ದುಡ್ಡು ಯಾಕೆ ಮತ್ತು ಹೇಗೆ ಖರ್ಚಾಗುತ್ತದೆ ಎಂಬ ವಿವರ ನೀಡಿದರೇ ಹೊರತು  ಯಾರೊಬ್ಬರೂ `ಈ ಬಾರಿ ಖರ್ಚು ಕಡಿಮೆ' ಎಂದು  ಹೇಳಲಿಲ್ಲ.
ಈ ಪೋಸ್ಟರ್,ಬ್ಯಾನರ್,ಕರಪತ್ರ, ಟೋಪಿ, ಬ್ಯಾಡ್ಜ್‌ಗಳಿಗೆ ಒಬ್ಬ ಅಭ್ಯರ್ಥಿ ಮಾಡುವ ಖರ್ಚು ಕೆಲವು ಲಕ್ಷ         ರೂಪಾಯಿ ಮಾತ್ರ. ಸಾಮಾನ್ಯವಾಗಿ ಇವುಗಳನ್ನೆಲ್ಲ ಪಕ್ಷಗಳೇ ಪೂರೈಸುತ್ತವೆ. ಮತದಾರರಿಗೆ ಆಮಿಷವೊಡ್ಡಲು ನೀಡುವ ಹಣದ ಮೊತ್ತವೇ ದೊಡ್ಡದು. ಇದು ಕಡಿಮೆಯಾಗಿದೆಯೇ?
ಹಣದ ಪ್ರಭಾವ ಕಡಿಮೆ?: ಅಕ್ರಮವಾಗಿ ಹಣ ಸಂಗ್ರಹ ಮತ್ತು ಸಾಗಾಣಿಕೆಯ ವಿರುದ್ಧದ ಕ್ರಮದಿಂದಾಗಿ ಚುನಾವಣೆಯಲ್ಲಿ ಹಣದ ಪ್ರಭಾವ ಕಡಿಮೆಯಾಗಿದೆ ಎನ್ನುವ ಅಭಿಪ್ರಾಯವೂ ಇದೆ. ಹೆದ್ದಾರಿಗಳಲ್ಲಿ ಅಲ್ಲಲ್ಲಿ ಚೆಕ್‌ಪೋಸ್ಟ್‌ಗಳನ್ನು ಹಾಕಿ ವಾಹನಗಳ ತಪಾಸಣೆ  ನಡೆಸಲಾಗುತ್ತದೆ.  ಪ್ರವಾಸದುದ್ದಕ್ಕೂ ಕನಿಷ್ಠ 25-30 ಕಡೆಗಳಲ್ಲಿ ನಮ್ಮ ಕಾರಿನ ತಪಾಸಣೆ ನಡೆಸಿದ್ದಾರೆ. ಎಲ್ಲ ಕಡೆಗಳಲ್ಲಿ ತಪಾಸಣೆಯ ಕ್ರಮ ಒಂದೇ ರೀತಿಯದ್ದು. ಕಾರು ನಿಲ್ಲಿಸಿದ ಮೇಲೆ ಡಿಕ್ಕಿ ತೆರೆಯಲು ಹೇಳುವುದು, ಎಲ್ಲಿಂದ ಬಂದಿದ್ದೀರಿ? ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಕೇಳುವುದು, ಚಾಲಕನ ಹೆಸರು ಮತ್ತು ಕಾರಿನ ನಂಬರ್ ಬರೆದುಕೊಳ್ಳುವುದು-ಅಲ್ಲಿಗೆ ತಪಾಸಣೆ ಮುಗಿಯಿತು. ಯಾರೂ ಕೂಡಾ ಕಾರಿನಲ್ಲಿದ್ದ ನನ್ನನ್ನು ಯಾರು ಎಂದು ಕೇಳಿಲ್ಲ, ಕಾರಿನೊಳಗಿದ್ದ ನನ್ನ ಬ್ಯಾಗ್ ಚೆಕ್ ಮಾಡಿಲ್ಲ. `ಈ ರೀತಿ ಹೆದ್ದಾರಿಯಲ್ಲಿ ತಪಾಸಣೆ ಮಾಡುವುದರಿಂದ ಹಣದ ಸಾಗಾಣಿಕೆಗೆ ತೊಂದರೆಯಾಗಿದೆಯೇ?' ಎಂದು ರಾಜಕೀಯ ಪಕ್ಷದ ನಾಯಕರೊಬ್ಬರನ್ನು ಕೇಳಿದೆ. `ದುಡ್ಡು ಸಾಗಿಸುವವರು ಹೆದ್ದಾರಿಯಲ್ಲಿ  ಅದೂ ಕಾರುಗಳಲ್ಲಿ  ಹೋಗುತ್ತಾರೆಯೇ? ಹೆದ್ದಾರಿ ಬಿಟ್ಟು ಊರೊಳಗೆ ಒಳದಾರಿಗಳಿಲ್ಲವೇ? ಕಾರು ಯಾಕೆ ಬೇಕು, ಮೋಟಾರ್ ಸೈಕಲ್,ಬಸ್,ಲಾರಿಗಳಿಲ್ಲವೇ? ಎಂದು ಪ್ರಶ್ನಿಸಿದ, ಆತ ದುಡ್ಡು ಸಾಗಿಸುವ ಅನೇಕ ಹೊಸ ವಿಧಾನಗಳನ್ನು ತಿಳಿಸಿ ಅಚ್ಚರಿಗೊಳಿಸಿದ.
`ಚುನಾವಣಾ ಆಯೋಗದ ಕ್ರಮಗಳಿಂದಾಗಿ ಬರುವ ದುಡ್ಡು ಹೋಯಿತು' ಎಂದು ಹಳ್ಳಿಗಳಲ್ಲಿ ಜನ ಕೊರಗುತ್ತಿದ್ದಾರೆ. `ಖರ್ಚು ಕಡಿಮೆಯಾಗಿಲ್ಲ' ಎಂದು ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಹಾಗಿದ್ದರೆ ದುಡ್ಡೆಲ್ಲಿ ಹೋಯಿತು? ಚುನಾವಣೆ ಘೋಷಣೆಯಾದ ಕೂಡಲೇ ಬಹಳಷ್ಟು ರಾಜಕಾರಣಿಗಳು  ಊರುಗಳಲ್ಲಿರುವ ತಮ್ಮ ಬೆಂಬಲಿಗರ ಮನೆಗಳಿಗೆ ಹಣ ಸಾಗಿಸಿದ್ದಾರೆ.
`ಸಮಸ್ಯೆ ಹಣದ್ದು ಸಾರ್, ಸಾಗಿಸುವುದು, ವಿತರಿಸುವುದು ಅಲ್ಲ. ಅದಕ್ಕೆ ಬೇಕಾದಷ್ಟು ದಾರಿಗಳಿವೆ ' ಎಂದ ಹಾಸನದ ರಾಜಕೀಯ ಕಾರ್ಯಕರ್ತನೊಬ್ಬ. `ನಮ್ಮ ಲೀಡರ್‌ಗಳಿಗೆ ದುಡ್ಡು ಕೊಟ್ಟಿದ್ದಾರಂತೆ, ಎಲೆಕ್ಷನ್ ಅಧಿಕಾರಿಗಳ ಭಯ ತೋರಿಸಿ ಅದನ್ನು ತಾವೇ ಇಟ್ಟುಕೊಂಡಿದ್ದಾರೆ' ಎಂದ ಬಳ್ಳಾರಿಯ ಮತದಾರನೊಬ್ಬ.
ಇದಕ್ಕೆಲ್ಲ ಏನು ಪರಿಹಾರ? ಹಿಂದಿನ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಅಕ್ರಮ ಸಂಗ್ರಹಿಸಿದ್ದ ಮತ್ತು ಸಾಗಿಸುತ್ತಿದ್ದ ಹಲವಾರು ಕೋಟಿ ರೂಪಾಯಿಗಳನ್ನು ಚುನಾವಣಾ ಆಯೋಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಅಂಬ್ಯುಲೆನ್ಸ್‌ನಲ್ಲಿ ಹಣ ಸಾಗಿಸುತ್ತಿರುವವರನ್ನೂ ಬಂಧಿಸಿದ್ದರು. ಆ ಪ್ರಕರಣಗಳೇನಾಯಿತು? ಯಾರಿಗಾದರೂ ಶಿಕ್ಷೆಯಾಯಿತೇ? ಇಂತಹ ಅಕ್ರಮಗಳನ್ನು ಮಾಡಿದ್ದ ಎಷ್ಟು ಮಂದಿ ಶಾಸಕರನ್ನು ಅನರ್ಹಗೊಳಿಸಲಾಗಿದೆ? ಕೋಟ್ಯಂತರ ರೂಪಾಯಿ ಖರ್ಚು ಮಾಡುವವರಿಗೆ ಅದರಲ್ಲಿ ಒಂದಷ್ಟು ಪಾಲು ಕೈಬಿಟ್ಟುಹೋದರೂ ತಲೆಕೆಡಿಸಿಕೊಳ್ಳುವುದಿಲ್ಲ. ಶಿಕ್ಷೆಯ ಭಯದಿಂದ ಮಾತ್ರ ಅವರನ್ನು ಹದ್ದುಬಸ್ಸಿನಲ್ಲಿಡಲು ಸಾಧ್ಯ. ಅದು ಆಗುತ್ತಿಲ್ಲ.
ಕೋಟ್ಯಧಿಪತಿಗಳಲ್ಲದವರು ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆಯನ್ನೂ ಮಾಡದಂತಹ ಸ್ಥಿತಿ ಇದೆ. ಯಾವ ರಾಜಕೀಯ ಪಕ್ಷವೂ ದುಡ್ಡಿಲ್ಲದವರಿಗೆ ಟಿಕೆಟ್ ನೀಡುವುದಿಲ್ಲ. ಟಿಕೆಟ್ ಆಕಾಂಕ್ಷಿ ಕೋಟ್ಯಧಿಪತಿಗಳ ದುಡ್ಡಿನ ಮೂಲ ಯಾವುದು? ಅದು ಅಕ್ರಮವೇ,ಸಕ್ರಮವೇ? ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ಸ್ವ ಇಚ್ಛೆಯಿಂದ ನೀಡಿದ ಆಸ್ತಿವಿವರದ ಸತ್ಯಾಸತ್ಯತೆಯನ್ನು ಯಾರಾದರೂ ಪರಿಶೀಲಿಸುತ್ತಾರೆಯೇ? ಅದನ್ನು ಮಾಡಲು ಚುನಾವಣಾ ಆಯೋಗದಲ್ಲಿ ಸಿಬ್ಬಂದಿಯೂ ಇಲ್ಲ, ಅದಕ್ಕೆ ಸಮಯವೂ ಇಲ್ಲ.
ಚುನಾವಣೆ ಮುಗಿದ ನಂತರವಾದರೂ ಅಭ್ಯರ್ಥಿಗಳ ಆಸ್ತಿ ವಿವರವನ್ನು ವರಮಾನ ತೆರಿಗೆ ಇಲಾಖೆಗೆ ಕಳುಹಿಸಿ ಎಂದು ಪರಿಶೀಲನೆಗೆ ಒಳಪಡಿಸಬಹುದಲ್ಲಾ? ಈ ರೀತಿ ಚುನಾವಣೆಯಲ್ಲಿ ಹಣದ ಪ್ರಭಾವವನ್ನು ಅದರ ಮೂಲದಲ್ಲಿಯೇ ತಡೆಯುವ ಪ್ರಯತ್ನ ಮಾಡದೆ ಪೋಸ್ಟರ್,ಬ್ಯಾನರ್‌ಗಳ ಮೇಲೆ ಕಡಿವಾಣ ಹಾಕುವುದರಿಂದ ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಲು ಸಾಧ್ಯವೇ? ಇಂತಹ `ಕಟ್ಟುನಿಟ್ಟಿನ ಕ್ರಮಗಳು' ಚುನಾವಣೆಯ ಸಂಭ್ರಮವನ್ನು ಮಂಕುಗೊಳಿಸಬಹುದು ಅಷ್ಟೆ.

Friday, May 3, 2013

ಜಾತ್ಯತೀತ ಜನತಾದಳ ಕೈಗೆ ಎಟುಕದಿರುವ `ಉತ್ತರ'

ತುಮಕೂರು: ತಮ್ಮದು ರಾಷ್ಟ್ರೀಯ ಪಕ್ಷ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಎಷ್ಟೇ ಹೇಳಿಕೊಂಡರೂ ಮೂಲತಃ ಜಾತ್ಯತೀತ ಜನತಾದಳ ಹಳೆ ಮೈಸೂರು ಭಾಗಕ್ಕೆ ಸೇರಿರುವ ಒಂದು ಪ್ರಾದೇಶಿಕ ಪಕ್ಷ. ಈ ಇಮೇಜನ್ನು ತೊಡೆದುಹಾಕಿ ಕನಿಷ್ಠ ರಾಜ್ಯಮಟ್ಟದ ಒಂದು ಪ್ರಬಲ ಪ್ರಾದೇಶಿಕ ಪಕ್ಷವಾಗಿ ಜೆಡಿ (ಎಸ್) ಅನ್ನು ಬೆಳೆಸಬೇಕೆಂಬ ಪ್ರಯತ್ನ ನಿರಂತರವಾಗಿ ನಡೆದಿದೆ. ಕಳೆದೆರಡು ಚುನಾವಣೆಗಳಲ್ಲಿ ಈ ಪ್ರಯತ್ನದಲ್ಲಿ ವಿಫಲವಾಗಿರುವ ಪಕ್ಷದ ನಾಯಕತ್ವ ವಹಿಸಿರುವ ದೇವೇಗೌಡರು ಮತ್ತು ಮಗ ಎಚ್.ಡಿ.ಕುಮಾರಸ್ವಾಮಿ ಈ ಬಾರಿ ಮತ್ತೆ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ.
ಉತ್ತರ ಕರ್ನಾಟಕದ ಮತದಾರರು ಕೈಹಿಡಿದರೆ ಮಾತ್ರ ಈ ಕನಸು ನನಸಾಗಲು ಸಾಧ್ಯ ಎಂಬ ಸತ್ಯವನ್ನು ಚೆನ್ನಾಗಿಯೇ ಬಲ್ಲ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎಡೆಬಿಡದೆ ಆ ಭಾಗದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ವಚನಭಂಗದಿಂದಾಗಿ ಹಿಡಿದ ಗ್ರಹಣದಿಂದ ಜೆಡಿ (ಎಸ್) ಇನ್ನೂ ಸಂಪೂರ್ಣವಾಗಿ ಬಿಡುಗಡೆ ಪಡೆದ ಹಾಗಿಲ್ಲ.
ಕೇವಲ 28 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾದ 2008ರ ವಿಧಾನಸಭಾ ಚುನಾವಣೆಯನ್ನು ಒಂದು ದುಃಸ್ವಪ್ನದಂತೆ ಮರೆತುಬಿಟ್ಟು 58 ಸ್ಥಾನಗಳ ಗೆಲುವಿಗೆ ಕಾರಣವಾದ 2004ರ ವಿಧಾನಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಬಹುದೆಂಬ ಕನಸನ್ನು ಜೆಡಿ (ಎಸ್) ಕಾಣುತ್ತಿದೆ.  2004ರ ಚುನಾವಣೆಯಲ್ಲಿ ರಾಜ್ಯಮಟ್ಟದ ಪ್ರಾದೇಶಿಕ ಪಕ್ಷವಾಗಿ ಬೆಳೆಯುವ ಸೂಚನೆಯನ್ನು ಜೆಡಿ(ಎಸ್) ನೀಡಿದ್ದು ನಿಜ. ಆ ಚುನಾವಣೆಯಲ್ಲಿ ಜೆಡಿ(ಎಸ್) ಪಕ್ಷದಿಂದ ಆರಿಸಿ ಬಂದಿರುವ 58 ಶಾಸಕರಲ್ಲಿ 20ಕ್ಕೂ ಹೆಚ್ಚು ಶಾಸಕರು ಉತ್ತರ ಕರ್ನಾಟಕಕ್ಕೆ ಸೇರಿರುವ  ಬೀದರ್, ಗುಲ್ಬರ್ಗ,ರಾಯಚೂರು,ಕೊಪ್ಪಳ,ಬಳ್ಳಾರಿ, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಸೇರಿದವರು.
ಗೆಲುವಿನ ಚೈತ್ರಯಾತ್ರೆ ಮುಂದುವರಿಯುವ ಎಲ್ಲ ಸಾಧ್ಯತೆಗಳಿದ್ದವು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳ ಅವಧಿ ರಾಜ್ಯದಲ್ಲಿ ಅವರ ಪರವಾದ ಸದ್ಭಾವನೆಯ ಅಲೆಯನ್ನು ಎಬ್ಬಿಸಿತ್ತು. ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎಚ್.ಡಿ.ದೇವೇಗೌಡರು ಗಳಿಸಲಾಗದ ಜನಪ್ರಿಯತೆಯನ್ನು ಕುಮಾರಸ್ವಾಮಿ ಅವರು  ಅಧಿಕಾರದ ಕಿರು ಅವಧಿಯಲ್ಲಿ ಉತ್ತರ ಕರ್ನಾಟಕದಲ್ಲಿ ಪಡೆದುಕೊಂಡಿದ್ದರು. ಆದರೆ, ವಚನಭಂಗದ ಬಿರುಗಾಳಿ ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು. ಜನಪ್ರಿಯತೆಯ ಜತೆಯಲ್ಲಿ ಹಿಂದಿನ ಚುನಾವಣೆಯಲ್ಲಿ ಗಳಿಸಿದ್ದ ಸ್ಥಾನಗಳಲ್ಲಿ 30 ಸ್ಥಾನಗಳನ್ನು ಕೂಡಾ ಜೆಡಿ (ಎಸ್) ಕಳೆದುಕೊಳ್ಳಬೇಕಾಯಿತು.
2008ರ ಚುನಾವಣೆಯಲ್ಲಿ ಆಯ್ಕೆಯಾದ 28 ಶಾಸಕರಲ್ಲಿ 18 ಶಾಸಕರು ಹಳೆಮೈಸೂರು ಭಾಗಕ್ಕೆ ಸೇರಿರುವ ಹಾಸನ, ಮಂಡ್ಯ,ತುಮಕೂರು, ರಾಮನಗರ,ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಸೇರಿದವರೆಂಬುದು ಗಮನಾರ್ಹ. ಈಗ ಮತ್ತೆ ಜೆಡಿ (ಎಸ್)ಗೆ ರಾಜ್ಯಮಟ್ಟದ ಪ್ರಾದೇಶಿಕ ಪಕ್ಷ ವರ್ಚಸ್ಸು ತಂದುಕೊಡುವ ಪ್ರಯತ್ನ ನಡೆದಿದೆಯಾದರೂ ಅವಕಾಶಗಳು ಕ್ಷೆಣವಾಗಿವೆ.
ಉತ್ತರ ಕರ್ನಾಟಕದ ಒಂದಷ್ಟು ಶಾಸಕರು ಆಪರೇಷನ್ ಕಮಲಕ್ಕೆ ಬಲಿಯಾಗಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ. ಪಕ್ಷದಲ್ಲಿಯೇ ಉಳಿದುಕೊಂಡವರು ವೈಯಕ್ತಿಕವಾದ ಆಡಳಿತವಿರೋಧಿ ಅಲೆ ಎದುರಿಸುತ್ತಿದ್ದಾರೆ. ಜೆಡಿ(ಎಸ್) ಶಾಸಕರಾಗಿದ್ದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮತ್ತು ಅರಬಾವಿ ಕ್ಷೇತ್ರಗಳ ಉಮೇಶ್ ಕತ್ತಿ ಮತ್ತು ಬಾಲಚಂದ್ರ ಜಾರಕಿಹೊಳಿ, ಕೊಪ್ಪಳ ಕ್ಷೇತ್ರದ ಕರಡಿ ಸಂಗಣ್ಣ, ದೇವದುರ್ಗ ಕ್ಷೇತ್ರದ ಶಿವನಗೌಡ ನಾಯಕ ಮೊದಲಾದವರು ಈಗ ಬಿಜೆಪಿ ಪಕ್ಷದ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿ (ಎಸ್) ಹಿನ್ನಡೆಗೆ ಇನ್ನೊಂದು ಪ್ರಮುಖ ಕಾರಣ, ಕರ್ನಾಟಕ ಜನತಾ ಪಕ್ಷ (ಕೆಜೆಪಿ). ಕಾಂಗ್ರೆಸ್ ಮತ್ತು ಬಿಜೆಪಿ ಎರಡನ್ನೂ ವಿರೋಧಿಸುವವರು ಇಲ್ಲವೆ ಆ ಪಕ್ಷಗಳಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗದೆ ಇರುವವರಿಗೆ ಹಿಂದಿನ ಚುನಾವಣೆಗಳಲ್ಲಿ ಇದ್ದ ಆಯ್ಕೆ ಜೆಡಿ (ಎಸ್) ಮಾತ್ರ. ಈ ಬಾರಿ ಆ ಸ್ಥಾನವನ್ನು ಕೆಜೆಪಿ ಆಕ್ರಮಿಸಿಕೊಂಡಿದೆ.
ಉದಾಹರಣೆಗೆ 2004ರ ಚುನಾವಣೆಯಲ್ಲಿ ಗುಲ್ಬರ್ಗ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ವೈಜನಾಥ ಪಾಟೀಲ್, ಬಿ.ಆರ್.ಪಾಟೀಲ್ ಮತ್ತು ಎಂ.ವೈ.ಪಾಟೀಲ್ ಈ ಬಾರಿ ಕೆಜೆಪಿ ಅಭ್ಯರ್ಥಿಗಳು. ರಾಯಚೂರು ಜಿಲ್ಲೆಯ ಲಿಂಗಸಗೂರು, ರಾಯಚೂರು, ಸಿಂಧನೂರು ಮತ್ತು ಮಾನ್ವಿ, ಬೀದರ್‌ನ ಬಸವಕಲ್ಯಾಣ, ಗುಲ್ಬರ್ಗ ಜಿಲ್ಲೆಯ ಅಫ್ಜಲ್‌ಪುರ ಮತ್ತು ಅಳಂದ, ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರಗಳನ್ನು ಹೊರತುಪಡಿಸಿ ಹೈದರಾಬಾದ್ ಕರ್ನಾಟಕದ ಬೇರೆ ಕ್ಷೇತ್ರಗಳಲ್ಲಿ ಜೆಡಿ (ಎಸ್) ವಿರೋಧಿ ಅಭ್ಯರ್ಥಿಗಳಿಗೆ ಪೈಪೋಟಿ ಕೊಡುವ ಸ್ಥಿತಿಯಲ್ಲಿ ಇಲ್ಲ.
ಇದರಿಂದಾಗಿ ಜೆಡಿ (ಎಸ್) ತನ್ನ ಸಂಖ್ಯಾವೃದ್ಧಿಗಾಗಿ ಹಳೆಮೈಸೂರು ಭಾಗವನ್ನೇ ನೆಚ್ಚಿಕೊಳ್ಳಬೇಕಾಗಿ ಬಂದಿದೆ. ಈ ಭಾಗದಲ್ಲಿ ಜೆಡಿ (ಎಸ್)ನ ಸಾಂಪ್ರದಾಯಿಕ ನೆಲೆಗಳಿರುವ ಹಾಸನ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿಯೇ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಹಾಸನದ ಮೂವರು ನಿಷ್ಠಾವಂತರಾದ ಸಿ.ಎಸ್.ಪುಟ್ಟೇಗೌಡ, ಎಚ್.ಎಂ.ವಿಶ್ವನಾಥ ಮತ್ತು ಜವರೇಗೌಡ ಪಕ್ಷ ತ್ಯಜಿಸಿದ್ದಾರೆ.
ಅವರಲ್ಲೊಬ್ಬರನ್ನು ಬಿಟ್ಟು ಉಳಿದಿಬ್ಬರು ಕ್ರಮವಾಗಿ ಕಾಂಗ್ರೆಸ್ ಮತ್ತು ಕೆಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅವರು ಪಕ್ಷದ ವಿರುದ್ಧ ಬಂಡೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ನೆಲೆ ಪಡೆದುಕೊಳ್ಳುತ್ತಿರುವ ಕೆಜೆಪಿ,  ಕಾಂಗ್ರೆಸ್ ವಿರೋಧಿ ಮತಬುಟ್ಟಿಗೆ  ಕೈಹಾಕಲಿದೆ. ಇದರಿಂದಾಗಿ ತುರುವೆಕೆರೆ ಮತ್ತು ಗುಬ್ಬಿಯ ಹಾಲಿ ಶಾಸಕರು ಕೆಜೆಪಿಯಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ. ಮಧುಗಿರಿ ಕ್ಷೇತ್ರದ ಶಾಸಕಿಯಾಗಿದ್ದ ಅನಿತಾ ಕುಮಾರಸ್ವಾಮಿ ಚನ್ನಪಟ್ಟಣಕ್ಕೆ ಪಲಾಯನ ಮಾಡಿರುವುದರಿಂದ ಆ ಕ್ಷೇತ್ರಕ್ಕೆ ಸ್ವಯಂನಿವೃತ್ತಿ ಪಡೆದಿರುವ ಅಧಿಕಾರಿ ವಿ.ವೀರಭದ್ರಯ್ಯ ಅವರನ್ನು ತರಾತುರಿಯಲ್ಲಿ ಕರೆತಂದು ಜೆಡಿ (ಎಸ್) ಕಣಕ್ಕಿಳಿಸಿದೆ.
ಕಳೆದೆರಡು ಚುನಾವಣೆಗಳಲ್ಲಿ ಅಲ್ಪಮತಗಳಿಂದ ಸೋತಿರುವ ಜಿಲ್ಲೆಯ ಜನಪ್ರಿಯ ನಾಯಕ ಕೆ.ಎನ್.ರಾಜಣ್ಣ ಈ ಕ್ಷೇತ್ರದಲ್ಲಿ ಜೆಡಿ (ಎಸ್)ಗೆ ನಿರಾಶೆ ಉಂಟುಮಾಡಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಕೊರಟಗೆರೆಯಲ್ಲಿ ಈಕ್ಷಣದ ವರೆಗೆ ಜೆಡಿ (ಎಸ್) ಅಭ್ಯರ್ಥಿ ಗೆಲ್ಲುವ ಅವಕಾಶ ಹೆಚ್ಚಿದ್ದರೂ ಕೊನೆಕ್ಷಣದ ಬೆಳವಣಿಗೆಗಳು ಫಲಿತಾಂಶವನ್ನು ಬದಲಿಸಿಬಿಡಬಹುದು.
`ಉತ್ತರ'ದ ಕಡೆ ಚಾಚಿರುವ ಕೈಗಳಿಗೆ ಬಯಸಿದ್ದು ಸಿಗದೆ ಹೋಗುವ ಸಾಧ್ಯತೆಗಳಿರುವ ಈಗಿನ ಪರಿಸ್ಥಿತಿಯಲ್ಲಿ ಕೈಯಲ್ಲಿದ್ದುದನ್ನಾದರೂ ಉಳಿಸಿಕೊಳ್ಳುವ ಸವಾಲು ಜೆಡಿ (ಎಸ್) ಮುಂದಿದೆ.
ಇಷ್ಟು ಮಾತ್ರವಲ್ಲ, ವಯಸ್ಸಿನ ಭಾರದಿಂದ ಕುಗ್ಗಿಹೋಗಿರುವ ಎಚ್.ಡಿ.ದೇವೇಗೌಡರು ಮುಂದಿನ ಚುನಾವಣೆಗಳಲ್ಲಿ ಈಗಿನಷ್ಟು ಸಕ್ರಿಯವಾದ ಪಾತ್ರವನ್ನು ವಹಿಸಲು ಸಾಧ್ಯವಾಗದೆ ಹೋಗಬಹುದು. ಅವರ ಅನುಭವ ಮತ್ತು ಜನಪ್ರಿಯತೆಯ ಗರಿಷ್ಠ ಬಳಕೆ ಈ ಚುನಾವಣೆಯಲ್ಲಿ ಮಾತ್ರ ಸಾಧ್ಯ. ರಾಜ್ಯದಲ್ಲಿ ಜೆಡಿ (ಎಸ್) ಪಕ್ಷವನ್ನು ತೃತೀಯರಂಗವಾಗಿ ಕಟ್ಟಿ ಅಧಿಕಾರಕ್ಕೆ ತರಬೇಕೆಂಬ ಕನಸು ಕಂಡ ದೇವೇಗೌಡರು ತಮ್ಮ ಮಕ್ಕಳ ಮೂಲಕವಾದರೂ ಅದು ನನಸಾದೀತೆಂಬ ನಿರೀಕ್ಷೆ ಇಟ್ಟುಕೊಂಡವರು. ಈ ಕಾರಣಗಳಿಂದಾಗಿ ಜೆಡಿ (ಎಸ್) ಪಾಲಿಗೆ ಈಗಿನ ಚುನಾವಣೆ ಅತ್ಯಂತ ನಿರ್ಣಾಯಕ.

Thursday, May 2, 2013

ಬದಲಾವಣೆ ನಿರೀಕ್ಷೆಯಲ್ಲಿ ತುಯ್ದಾಡುತ್ತಿರುವ ಬಳ್ಳಾರಿ

ಬಳ್ಳಾರಿ: `ನಳದಲ್ಲಿ ದಿನಾ ಉಪ್ಪು ನೀರು ಬಿಡ್ತಾರೆ, ಮೂರು ದಿವ್ಸಕ್ಕೊಮ್ಮೆ ಒಂದು ತಾಸು ಸಿಹಿನೀರು. ಸವುಳು ನೀರು ಕುಡಿದು ಮಕ್ಕಳ ಕೈಕಾಲೆಲ್ಲ ಸೊಟ್ಟಗಾಗಿವೆ' ಎಂದು ಗೋಳಾಡಿದರು ಮೋಕಾ ಗ್ರಾಮದ ಜಲಜಮ್ಮ. `ಎಂಟನೆ ತರಗತಿ ವರೆಗೆ ಮಾತ್ರ ಇಲ್ಲಿ ಸಾಲಿ ಇದೆ, ಮುಂದೆ ಕಲಿಯುವವರು ಬಳ್ಳಾರಿಗೆ (23 ಕಿ.ಮೀ. ದೂ
ರ) ಹೋಗ್ಬೇಕು, ಮಕ್ಕಳು ನಡೆದುನಡೆದು ಸವೆದುಹೋಗ್ಯಾವೆ' ಎಂದು ದುಃಖಿಸಿದರು ಕಾರೇಕಲ್ ಗ್ರಾಮದ ಈರಮ್ಮ.
`ಮೂರು ವರ್ಷಗಳಿಂದ ಮಳೆ ಇಲ್ಲ, ಒಂದು ಹೆಕ್ಟೇರ್ ಬೆಳೆ ನಷ್ಟಕ್ಕೆ ಐದು ಸಾವಿರ ರೂಪಾಯಿ ಪರಿಹಾರ ಕೊಡ್ತೇವೆ ಎಂದು ಹೇಳಿ ಹೋದರು, ಕೈಗೆ ಬಂದದ್ದು 500 ರೂಪಾಯಿ' ಎಂದು ದೂರಿದರು ೀಳ್ಳಗುರ್ಕಿಯ ರೈತ ಶಂಕ್ರಪ್ಪ. `ಊರಲ್ಲೊಂದು ಸರ್ಕಾರಿ ದವಾಖಾನೆ ಇದೆ, ಅಲ್ಲಿ ಡಾಕ್ಟರ್ ಇಲ್ಲ, ಯಾರು ಹೋಗಿ ಕೇಳಿದರೂ ಅಲ್ಲಿರುವ ನರ್ಸಮ್ಮ ಔಷಧಿ ಇಲ್ಲ ಎಂದು ರಾಗ ತೆಗೆಯುತ್ತಾಳೆ' ಎಂದು ಸಿಟ್ಟುಮಾಡಿಕೊಂಡರು ವೀರಾಪುರದ ಸಮಾಜ ಸೇವಕ ಹೊನ್ನೂರಪ್ಪ...
ಈ ಗ್ರಾಮಗಳ ಜನರ ಕರುಣಾಜನಕ ಬದುಕಿನ ಕತೆಯನ್ನು ಹೀಗೆ ಹೇಳುತ್ತಲೇ ಹೋಗಬಹುದು. ಇವರೆಲ್ಲ ಆಂಧ್ರಪ್ರದೇಶದ ಗಡಿಯಿಂದ ಮೂರು-ನಾಲ್ಕು ಕಿ.ಮೀ. ದೂರದಲ್ಲಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚೇಳ್ಳಗುರ್ಕಿ, ವೀರಾಪುರ, ಕಾರೇಕಲ್, ಮೋಕಾ ಗ್ರಾಮಗಳಿಗೆ ಸೇರಿದವರು. ಈ ಕ್ಷೇತ್ರದ ಹಾಲಿ ಶಾಸಕ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಮಾಜಿ ಸಚಿವ ಶ್ರಿರಾಮುಲು.
ಈ ಗ್ರಾಮಗಳಿಗೆ ಹೋಗುವ ದಾರಿಯಲ್ಲಿಯೇ ಸಿಗುವ ಜೋಳದರಾಶಿಯಲ್ಲಿ ಅರಮನೆಯಂತೆ ಕಟ್ಟಿದ ರಾಮುಲು ಅವರ ಕುಟುಂಬದ ಮೂಲ ಮನೆ ಇದೆ. `ನಮ್ಮೂರಿಗೆ ಯಜಮಾನರೇ ಇಲ್ಲದಂಗ್ ಆಗಿದೆ' ಎಂದಷ್ಟೇ ಹೇಳಿ ತನ್ನ ಹೆಸರನ್ನೂ ತಿಳಿಸದೆ ಆ ಮನೆ ಕಡೆ ಬೆರಳು ಮಾಡಿ ಹೊರಟೇ ಹೋದ ಬಸ್ಸಿಗೆ ಕಾಯುತ್ತಾ ನಿಂತಿದ್ದ ರಾಜವೀರಪ್ಪ.
`ನೀವು ಹೋಗಿದ್ದು ನಾಲ್ಕೈದು ಹಳ್ಳಿಗಳು ಮಾತ್ರ ಸಾರ್, ಇಡೀ ಬಳ್ಳಾರಿ ಜಿಲ್ಲೆ ಹೀಗೆಯೇ ಇದೆ' ಎಂದರು ನನ್ನ ಪ್ರವಾಸದ ಅನುಭವವನ್ನು ಕೇಳಿದ ಬಳ್ಳಾರಿಯ ಪತ್ರಕರ್ತ ಮಿತ್ರರು.
ಹೀಗಿದ್ದರೂ ಶ್ರಿರಾಮುಲು ಈ ಬಾರಿಯೂ ಗೆದ್ದುಬಿಟ್ಟರೆ ನನಗಂತೂ ಆಶ್ಚರ್ಯವಾಗಲಾರದು. ಇದಕ್ಕೆ ಕಾರಣ ತಮ್ಮ ಕಷ್ಟ-ಕಾರ್ಪಣ್ಯಗಳನ್ನೆಲ್ಲ ನೋವಿನಿಂದ ತೋಡಿಕೊಂಡ ಜನರ ಇನ್ನೊಂದು ಮುಖದ ದರ್ಶನ. `ಜೆಡಿಎಸ್' ಎಂದು ಸ್ನೇಹಿತರಿಂದಲೇ ಆರೋಪಕ್ಕೊಳಗಾದ ಚೇಳ್ಳಗುರ್ಕಿಯ ಶಂಕ್ರಪ್ಪ ಅವರನ್ನು ಹೊರತುಪಡಿಸಿ ಉಳಿದಂತೆ ಜಲಜಮ್ಮ, ಈರಮ್ಮ, ಹೊನ್ನೂರಪ್ಪ ಮತ್ತಿತರರು ಶ್ರಿರಾಮುಲು ವಿರುದ್ಧ ಚಕಾರ ಎತ್ತಲಿಲ್ಲ.
`ರಾಮುಲು ಒಳ್ಳೆ ಮನುಷ್ಯ, ಸುತ್ತ ಇರೋ ಜನ ಸರಿ ಇಲ್ಲ', `ಆಯಪ್ಪ ಏನ್ ಮಾಡ್ಲಿಕಾಗ್‌ತ್ತೆ, ಇಡೀ ರಾಜ್ಯ ಸುತ್ತಬೇಕು', `ನಮ್ ಹಣೇಲಿ ಇದೇ ರೀತಿ ಬರೆದುಬಿಟ್ಟಿರುವಾಗ ಬೇರೆಯವರನ್ನು ದೂರಿ ಏನ್ ಲಾಭ?' ಎಂಬಿತ್ಯಾದಿ ಹೇಳಿಕೆಗಳ ಮೂಲಕ ಅವರೆಲ್ಲ ಪರೋಕ್ಷವಾಗಿ ಶ್ರೀರಾಮುಲು ಅವರನ್ನು ಸಮರ್ಥಿಸತೊಡಗಿದ್ದರು. ಊರಿನ ಸಮಸ್ಯೆಗಳನ್ನು ಭೂತಾಕಾರವಾಗಿ ಬಣ್ಣಿಸಿದ ಚೇಳ್ಳಗುರ್ಕಿಯ ಹಿರಿಯರೊಬ್ಬರು ಕೊನೆಗೆ ಶ್ರೀರಾಮುಲು ಅವರನ್ನು ಹೊಗಳತೊಡಗಿದಾಗ ಪಕ್ಕದಲ್ಲಿದ್ದ ಹಿರಿಯನೊಬ್ಬ ಬಳಿಬಂದು ಪಿಸುದನಿಯಲ್ಲಿ `ಅವನ ಜಾತಿ ಕೇಳಿಬಿಡಿ ಸತ್ಯ ಗೊತ್ತಾಗುತ್ತದೆ' ಎಂದ. ನಾನು ಕೇಳಲಿಲ್ಲ ಸತ್ಯ ಗೊತ್ತಾಗಿತ್ತು.
ಅಂದಾಜು ಎರಡರಿಂದ ನಾಲ್ಕು ಸಾವಿರದವರೆಗೆ ಜನಸಂಖ್ಯೆ ಹೊಂದಿರುವ ಈ ಗ್ರಾಮಗಳಲ್ಲಿ ಬಹುಸಂಖ್ಯೆಯಲ್ಲಿರುವವರು ಶ್ರೀರಾಮುಲು ಅವರು ಸೇರಿರುವ ನಾಯಕ ಜಾತಿಯವರು. ಈ ಮುಗ್ಧ ಜನರ ದೂರು, ದುಮ್ಮಾನಗಳೆಲ್ಲ ಮತಯಂತ್ರದ ಬಟನ್ ಒತ್ತುವ ಗಳಿಗೆಯಲ್ಲಿ ಉಕ್ಕಿಬರುವ ಜಾತಿ ಪ್ರೀತಿ ಎದುರು ಕರಗಿಹೋಗುತ್ತದೆ. ಇದು ಶ್ರಿರಾಮುಲು ಅವರಿಗೆ ಮಾತ್ರವಲ್ಲ, ಕೇವಲ ಜಾತಿ ಮತ್ತು ದುಡ್ಡನ್ನಷ್ಟೇ ಬಳಸಿಕೊಂಡು ರಾಜಕೀಯ ಮಾಡುವ ಎಲ್ಲರಿಗೂ ಗೊತ್ತಿರುವ ಸತ್ಯ.
ಜಾತಿ ಆಗಲೇ ಶ್ರಿರಾಮುಲು ಅವರನ್ನು ಅರ್ಧ ಗೆಲ್ಲಿಸಿದೆ, ಇನ್ನರ್ಧ ಗೆಲುವು ಸಂಪಾದನೆಗಾಗಿ ಅವರು `ಕೊಡುಗೈ ದಾನಿ'ಗಳಾಗಬೇಕು. ಮೋಕಾದಲ್ಲಿ ನಮ್ಮ ಕಾರು ಕಂಡು ಆಸೆಯಿಂದ ಓಡಿಬಂದ ಮಧ್ಯವಯಸ್ಕರ ಗುಂಪೊಂದು ವಿಷಯ ತಿಳಿದು `ಹಿಂದೆಲ್ಲ ಇಷ್ಟೊತ್ತಿಗೆ ಒಂದು ರೌಂಡು ಮುಗಿದುಹೋಗುತ್ತಿತ್ತು, ಈ ಬಾರಿ ಬಹಳ ಸ್ಟ್ರಿಕ್ಟ್ ಅಂತೆ ಏನೂ ಬಂದಿಲ್ಲ' ಎಂದು ನಿರಾಶೆ ವ್ಯಕ್ತಪಡಿಸಿದರು. `ಲೀಡರ್‌ಗಳ ಕೈಗೆ ಕೊಟ್ಟು ಹೋಗಿದ್ದಾರಂತೆ, ನಮ್ಮ ಕೈಗೆ ಬಂದಿಲ್ಲ' ಎಂದರು ಇನ್ನೊಬ್ಬ ವ್ಯಕ್ತಿ ದೂರು ಹೇಳುವ ದನಿಯಲ್ಲಿ..
`ಹಿಂದಿನ ಚುನಾವಣೆಯ ಕಾಲದಷ್ಟು ದುಡ್ಡು ಈಗ ಹರಿದಾಡುತ್ತಿಲ್ಲ' ಎನ್ನುವ ಅಭಿಪ್ರಾಯ ಇಲ್ಲಿ ಸಾರ್ವತ್ರಿಕವಾಗಿದೆ. ಜನಾರ್ದನ ರೆಡ್ಡಿಯವರ ಅಣ್ಣ ಸೋಮಶೇಖರ ರೆಡ್ಡಿ ಚುನಾವಣೆಯಿಂದ ಹಿಂದೆ ಸರಿದದ್ದು, ಮತ್ತೊಬ್ಬ ಅಣ್ಣ ಕರುಣಾಕರ ರೆಡ್ಡಿ ಬಿಜೆಪಿಯಲ್ಲಿಯೇ ಉಳಿದದ್ದು,  ಶ್ರಿರಾಮುಲು ಅವರ ಬಂಟ ನಾಗೇಂದ್ರ ಕೂಡ್ಲಿಗಿಯಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು... ಈ ಬೆಳವಣಿಗೆಗಳೆಲ್ಲ ಬಳ್ಳಾರಿ ಜನರನ್ನು ಗೊಂದಲಕ್ಕೆ ತಳ್ಳಿದೆ. `ರೆಡ್ಡಿ ಕುಟುಂಬ ಮತ್ತು ಶ್ರಿರಾಮುಲು ಸಂಬಂಧ ಕೆಟ್ಟುಹೋಗಿದೆ, ಅದಕ್ಕೆ ದುಡ್ಡಿಲ್ಲ' ಎನ್ನುವವರು ಇದ್ದಹಾಗೆಯೇ `ಇವೆಲ್ಲ ಅವರೇ ಕೂಡಿ ಮಾಡುತ್ತಿರುವ ನಾಟಕ' ಎನ್ನುವವರೂ ಇದ್ದಾರೆ.
`ಈ 10-12 ವರ್ಷಗಳಲ್ಲಿ ನಮ್ಮ ಜನರ ಆತ್ಮಸಾಕ್ಷಿಯೇ ಸತ್ತುಹೋಗಿದೆ' ಎಂದು ಸಿಟ್ಟಿನಿಂದಲೇ ಹೇಳಿದರು ಲೋಹಿಯಾ ಪ್ರಕಾಶನದ  ಚೆನ್ನಬಸವಣ್ಣ ಬಳ್ಳಾರಿಯ ಕತೆಯನ್ನು ಬಣ್ಣಿಸುತ್ತಾ.  ಹೆಚ್ಚುಕಡಿಮೆ ದಶಕದ ಅವಧಿಯಲ್ಲಿ ಕಣ್ಣೆದುರೇ ಬದಲಾಗಿ ಹೋದ ಬಳ್ಳಾರಿಯ ಮುಖಗಳನ್ನು ಸಮೀಪದಿಂದ ನೋಡಿ ಸಂಕಟಪಡುತ್ತಿರುವವರು ಅವರು.
`ಕಕ್ಕ, ಮಾಮಾ, ಅಣ್ಣಾ ಈ ರೀತಿ ಸಂಬಂಧ ಹಚ್ಚಿ ಮಾತನಾಡಿಯೇ ನಮಗೆ ಅಭ್ಯಾಸ. ಹಿಂದೆಯೂ ಇಲ್ಲಿಯೂ ಒಂದಷ್ಟು ಗೂಂಡಾಗಿರಿ, ದರ್ಪ ದೌರ್ಜನ್ಯಗಳಿದ್ದವು. ಆದರೆ ಸಾಮಾನ್ಯ ಜನರು ಅವರ ಪಾಡಿಗೆ ಬದುಕಲು ತೊಂದರೆ ಆಗಿರಲಿಲ್ಲ. ಇದ್ದಕ್ಕಿದ್ದ ಹಾಗೆ ಎಲ್ಲವೂ ಬದಲಾಗಿ ಹೋಯಿತು. ಗಣಿಲೂಟಿಕೋರರು ನಡೆಸಿದ ಅಟ್ಟಹಾಸದಿಂದ ನಲುಗಿಹೋಗಿರುವ ನಮ್ಮ ಬಳ್ಳಾರಿ ಸುಧಾರಿಸಿಕೊಳ್ಳಲು ಇನ್ನು ಕೆಲವು ವರ್ಷಗಳು ಬೇಕಾಗಬಹುದು' ಎಂದು ನಿಟ್ಟುಸಿರುಬಿಟ್ಟರು ಚೆನ್ನಬಸವಣ್ಣ.
`ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಬೀದಿಬದಿಯಲ್ಲಿ ಮುತ್ತುರತ್ನ ರಾಶಿ ಹಾಕಿ ಮಾರಾಟ ಮಾಡುತ್ತಿದ್ದರು...' ಎಂಬ ಕತೆಯನ್ನು ಕೇಳುತ್ತಾ ಬೆಳೆದವರು ಬಳ್ಳಾರಿಯ ಜನ. ಇದ್ದಕ್ಕಿದ್ದ ಹಾಗೆ ಅವರು ಗತವೈಭವವನ್ನೇ ಹೋಲುವ ಘಟನಾವಳಿಗಳಿಗೆ ಮೂಕ ಸಾಕ್ಷಿಯಾಗುವಂತಾಯಿತು. `ರೆಡ್ಡಿಗಳು ಬೆಳಿಗ್ಗೆ ತಿಂಡಿತಿನ್ನಲು ಬೆಂಗಳೂರಿಗೆ, ಮಧ್ಯಾಹ್ನ ಬಿರಿಯಾನಿ ತಿನ್ನಲು ಹೈದರಾಬಾದ್‌ಗೆ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಾರಂತೆ', `ರೆಡ್ಡಿಗಳು ಚಿನ್ನದ ಕುರ್ಚಿಯಲ್ಲಿ ಕೂರ‌್ತಾರಂತೆ, ಚಿನ್ನದ ಚಮಚದಲ್ಲಿ ಊಟ ಮಾಡ್ತಾರಂತೆ' ಎಂಬಿತ್ಯಾದಿ ಸುದ್ದಿಗಳು ಬಳ್ಳಾರಿಯ ಗಾಳಿಯಲ್ಲಿ ನಿತ್ಯ ಹಾರಾಡುತ್ತಿದ್ದುದನ್ನು ಇಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ.
ಇಷ್ಟೆಲ್ಲ ಮೆರೆದಾಡಿದ, ಇಡೀ ಸರ್ಕಾರ ತಮ್ಮ ಅಂಗೈಮುಷ್ಟಿಯಲ್ಲಿದೆ ಎಂದು ಹೇಳಿಕೊಂಡು ಅಡ್ಡಾಡುತ್ತಿದ್ದ ರೆಡ್ಡಿಸೋದರರು ಕನಿಷ್ಠ ಬಳ್ಳಾರಿ ನಗರದ ಸುಧಾರಣೆಯನ್ನಾದರೂ ಮಾಡಬಹುದಿತ್ತು. ಒಂದೆರಡು ಮುಖ್ಯ ರಸ್ತೆಗಳನ್ನು ಹೊರತುಪಡಿಸಿದರೆ ಬಳ್ಳಾರಿ ನಗರ ದೊಡ್ಡ ಕೊಳೆಗೇರಿಯಂತಿದೆ. ಗುಂಡಿಬಿದ್ದ ರಸ್ತೆಗಳು, ಕಿತ್ತುಹೋಗಿರುವ ಕಾಲ್ದಾರಿಗಳು, ಅನಿಯಂತ್ರಿತವಾಗಿ ನಡೆಯುತ್ತಿರುವ ಒತ್ತುವರಿಗಳು, ಕೈಕೊಡುತ್ತಲೇ ಇರುವ ವಿದ್ಯುತ್, ಮರೀಚಿಕೆಯಂತೆ ಕಾಡುತ್ತಿರುವ ಕುಡಿಯುವ ನೀರು- ಒಂದು ನಗರಕ್ಕೆ ಅವಶ್ಯಕವಾದ ಮೂಲಸೌಲಭ್ಯಗಳ್ಯಾವುದೂ ಈ ನಗರದಲ್ಲಿ ಇಲ್ಲ.
`ಯಾಕೆ ಇಲ್ಲ ಎಂದರೆ ಬೇಕು ಎಂದು ಕೇಳುವವರೇ ಇಲ್ಲ ಸಾರ್ ಇಲ್ಲಿ. ಎಲ್ಲವನ್ನೂ ಸಹಿಸಿಕೊಂಡು ಇವೆಲ್ಲ ಸಾಮಾನ್ಯ ಎಂಬಂತೆ ಜನ ಬದುಕುತ್ತಿದ್ದಾರೆ. ಬೇರೆ ನಗರಗಳನ್ನು ನೋಡಿ ಬಂದ ನಮಗೆ ಇವೆಲ್ಲ ನೋಡಿ ಅಸಹ್ಯ ಅನಿಸುತ್ತಿದೆ' ಎಂದ ನಿವೃತ್ತ ಎಂಜಿನಿಯರ್ ಶಿವರಾಮಯ್ಯನವರ ಮಾತಿನಲ್ಲಿ ಅಸಹಾಯಕತೆ ಇತ್ತು.
`ಜನರಲ್ಲಿ ದುಡ್ಡಿನ ಲೋಭವನ್ನು ಹುಟ್ಟಿಸಿದ್ದು ಬಿಟ್ಟರೆ ಅವರೇನೂ ಮಾಡಲಿಲ್ಲ, ಕೆಟ್ಟುಹೋದವರಲ್ಲಿ ಹೆಚ್ಚಿನವರು ಯುವಕರು. ಒಂದು ತಲೆಮಾರು ಹಾಳಾಗಿ ಹೋಯಿತು' ಎಂದರು ವೀರಾಪುರದಲ್ಲಿರುವ ತಮ್ಮ ಮನೆಗೆ ಬಳ್ಳಾರಿಯಿಂದ ಬಂದಿದ್ದ ವಕೀಲ ಜಯರಾಮಯ್ಯ. `ಬದಲಾವಣೆ ಎಂದರೆ ಏನು?' ಒಬ್ಬ ಗಣಿಧಣಿಯನ್ನು ಸೋಲಿಸಿ ಇನ್ನೊಬ್ಬನನ್ನು ಆರಿಸುವುದೇ? ಸುಮ್ಮನೆ ರೆಡ್ಡಿ ಸೋದರರನ್ನು ದೂರಿ ಏನು ಪ್ರಯೋಜನ ಸಾರ್. ಈ ಕಾಂಗ್ರೆಸ್ ಪಕ್ಷದವರೇ ಗಣಿಲೂಟಿಯ ಮೂಲಪುರುಷರು. ಅವರು ಹೋಗಿ ಇವರು ಬರಬಹುದು. ಬಳ್ಳಾರಿಗೆ ಗಣಿಲೂಟಿಕೋರರಿಂದ ಮುಕ್ತಿ ಇಲ್ಲ' ಎಂದು ಸಣ್ಣಭಾಷಣವನ್ನೇ ಮಾಡಿಬಿಟ್ಟ ತನ್ನನ್ನು ವಿದ್ಯಾರ್ಥಿ ಮುಖಂಡ ಎಂದು ಪರಿಚಯಿಸಿಕೊಂಡ ಚೇತನ್.
`ಅಷ್ಟೊಂದು ನಿರಾಶರಾಗಬೇಕಾದ ಅಗತ್ಯವೂ ಇಲ್ಲ. ಅತಿರೇಕದ ಎರಡು ತುದಿಗಳನ್ನು ನಾವು ನೋಡಿ ಆಗಿದೆ. ದುಡ್ಡಿನ ಬಲದಿಂದ ನಿರ್ಲಜ್ಜರೀತಿಯಲ್ಲಿ ಮೆರೆದವರನ್ನೂ ನೋಡಿದ್ದೇವೆ. ಆ ರೀತಿ ಮೆರೆದವರು ಜೈಲು ಕಂಬಿ ಎಣಿಸುತ್ತಿರುವುದನ್ನೂ ನೋಡಿದ್ದೇವೆ. ಈ ಬೆಳವಣಿಗೆಗಳನ್ನು ಬಳ್ಳಾರಿಯ ಜನ ಹೇಗೆ ಸ್ವೀಕರಿಸಿದ್ದಾರೆ? ಅವರು ಕಲಿತ ಪಾಠವೇನು? ಇದು ಈ ಚುನಾವಣೆಯ ಫಲಿತಾಂಶದಲ್ಲಿ ಗೊತ್ತಾಗಲಿದೆ' ಎಂದು ಹೇಳಿದ ಚೆನ್ನಬಸವಣ್ಣ ಅವರ ಮಾತಿನಲ್ಲಿ ಬಳ್ಳಾರಿಯ ಜನರ ಬಗ್ಗೆ ಭರವಸೆ ಇತ್ತು.

Wednesday, May 1, 2013

ಕುಸಿದು ಬೀಳುತ್ತಿರುವ ಮುಂಬೈ ಕರ್ನಾಟಕದ ಬಿಜೆಪಿ ಕೋಟೆ

ಬಳ್ಳಾರಿ:  ಮುಂಬೈ ಕರ್ನಾಟಕ ಮತ್ತು ಬಳ್ಳಾರಿ, 2008ರ ವಿಧಾನಸಭಾ ಚುನಾವಣೆಯ `ಆಟ ಬದಲಿಸಿದ' ಪ್ರದೇಶ. ಕಾಂಗ್ರೆಸ್ ದೂಳಿಪಟವಾಗಿದ್ದು ಮತ್ತು ಬಿಜೆಪಿಗೆ ಅಧಿಕಾರಕ್ಕೆ ಬರುವ ಸಂಖ್ಯಾಬಲವನ್ನು ತಂದುಕೊಟ್ಟ ಪ್ರದೇಶ ಇದು. ಬಿಜಾಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳನ್ನೊಳಗೊಂಡ ಈ ಪ್ರದೇಶಕ್ಕೆ ಬಳ್ಳಾರಿಯನ್ನೂ ಸೇರಿಸಿದರೆ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 59 ಆಗುತ್ತದೆ.
ಇದರಲ್ಲಿ 44 ಕ್ಷೇತ್ರಗಳು ಬಿಜೆಪಿ ಪಾಲಾಗಿದ್ದರೆ ಕಾಂಗ್ರೆಸ್ ಉಳಿಸಿಕೊಳ್ಳಲು ಸಾಧ್ಯವಾಗಿದ್ದು ಕೇವಲ ಹದಿಮೂರು ಮಾತ್ರ. ಜೆಡಿ(ಎಸ್) ಪಕ್ಷದಿಂದ ಗೆದ್ದಿದ್ದ ಇಬ್ಬರು ಶಾಸಕರು ಕೂಡಾ ನಂತರ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ಈ ಭಾಗದಲ್ಲಿ ಕಾಂಗ್ರೆಸ್‌ನ ಮಾನ ಉಳಿಸಿದ್ದು, ಏಳು ಶಾಸಕರನ್ನು ನೀಡಿದ ಬೆಳಗಾವಿ ಜಿಲ್ಲೆ ಮಾತ್ರ. ಈ ಬಾರಿ ವಿಧಾನಸಭಾ ಚುನಾವಣೆಯ `ಆಟ ಬದಲಿಸಲಿರುವ' ಪ್ರದೇಶ ಕೂಡಾ ಇದೇ ಎನ್ನುವುದರಲ್ಲಿ ಅನುಮಾನ ಇಲ್ಲ.
ರಾಜ್ಯದ ಕರಾವಳಿ ಇಲ್ಲವೆ ಮಧ್ಯ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಂತೆ ಮುಂಬೈಕರ್ನಾಟಕ ಬಿಜೆಪಿಯ ಸಾಂಪ್ರದಾಯಿಕ ನೆಲೆ ಅಲ್ಲ. ಹೀಗಿದ್ದರೂ ಕಳೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಚೈತ್ರಯಾತ್ರೆಗೆ ಮುಖ್ಯವಾಗಿ ಕಾರಣಗಳು ಮೂರು. ಮೊದಲನೆಯದಾಗಿ ಈ ಭಾಗದಲ್ಲಿ ಸಾಂಪ್ರದಾಯಿಕವಾಗಿ ಇರುವ ಕಾಂಗ್ರೆಸ್ ವಿರೋಧಿ ಮತಗಳು, ಎರಡನೆಯದಾಗಿ ವಚನಭಂಗದಿಂದಾಗಿ ಸಾಮೂಹಿಕವಾಗಿ ಸಿಡಿದೆದ್ದ ಲಿಂಗಾಯತ ಸಮುದಾಯ, ಮೂರನೆಯದಾಗಿ ಬಳ್ಳಾರಿಯ ರೆಡ್ಡಿ ಸೋದರರ ದುಡ್ಡು ಮತ್ತು ಶ್ರಿರಾಮುಲು ಅವರಿಗೆ ವ್ಯಕ್ತವಾದ ಜಾತಿ ಮತದಾರರ ಬೆಂಬಲ.
ಪ್ರಾರಂಭದಲ್ಲಿ ಎಸ್.ನಿಜಲಿಂಗಪ್ಪ ಅವರ ನೇತೃತ್ವದ ಸಂಸ್ಥಾ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದ ಈ ಭಾಗದ ಲಿಂಗಾಯತರು ನಿಧಾನವಾಗಿ ಜನತಾ ಪರಿವಾರದ ಭಾಗವಾಗಿ ಹೋಗಿದ್ದರು. ಎಂಬತ್ತರ ದಶಕದಲ್ಲಿ ಉಚ್ಛ್ರಾಯಸ್ಥಿತಿಯಲ್ಲಿದ್ದ ಜನತಾ ಪರಿವಾರದಲ್ಲಿ ಎಸ್.ಆರ್.ಬೊಮ್ಮಾಯಿ ಅವರಂತಹ ಹಿರಿಯರ ಜತೆ ಧಾರವಾಡ ಜಿಲ್ಲೆಯ ಚಂದ್ರಕಾಂತ ಬೆಲ್ಲದ, ಬಿ.ಆರ್.ಯಾವಗಲ್, ಬಿ.ಜಿ.ಬಣಕಾರ್, ಬಿ.ಎಚ್.ಬನ್ನಿಕೋಡ್, ಪಿ.ಸಿ.ಸಿದ್ದನಗೌಡರ್, ಬಸವರಾಜ ಬೊಮ್ಮಾಯಿ ಬೆಳಗಾವಿ ಜಿಲ್ಲೆಯ ಶಿವಾನಂದ ಕೌಜಲಗಿ, ಉಮೇಶ್ ಕತ್ತಿ, ಎ.ಬಿ.ಪಾಟೀಲ್, ಡಿ.ಬಿ.ಇನಾಂದಾರ್, ಲೀಲಾದೇವಿ ಪ್ರಸಾದ್. ಬಿಜಾಪುರ ಜಿಲ್ಲೆಯ ರಮೇಶ್ ಜಿಗಜಿಣಗಿ, ಗೋವಿಂದಪ್ಪ ಕಾರಜೋಳ, ಎಚ್.ವೈ.ಮೇಟಿ, ಜಗಜೀವನರಾವ್ ದೇಶಮುಖ್ ಮೊದಲಾದ ನಾಯಕರಿದ್ದರು.
ಇವರಲ್ಲಿ ಬಹಳಷ್ಟು ಮಂದಿ ಶಾಸಕರಾಗಿ ಚುನಾಯಿತರಾಗಿ ನಂತರ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದವರು. ಜನತಾ ಪರಿವಾರ ಅಳಿಯುತ್ತಾ ಬಂದಂತೆ ಆ ಜಾಗವನ್ನು ಆಕ್ರಮಿಸಿಕೊಂಡದ್ದು ಬಿಜೆಪಿ. ನಿಧಾನವಾಗಿ ಮುಂಬೈ ಕರ್ನಾಟಕ ಭಾಗದ ಕಾಂಗ್ರೆಸ್ ವಿರೋಧಿ ಮತಗಳನ್ನು ನುಂಗುತ್ತಾ ಬಿಜೆಪಿ ಬೆಳೆಯುತ್ತಾ ಹೋಗಿದ್ದು ಈಗ ಇತಿಹಾಸ. ಅದರ ಅತ್ಯುನ್ನತ ಸ್ಥಿತಿಯನ್ನು ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಣಬಹುದು.
ಇಡೀ ಕರ್ನಾಟಕದಲ್ಲಿ ಲಿಂಗಾಯತ ಬಾಹುಳ್ಯ ಇರುವ ಪ್ರದೇಶ ಮುಂಬೈ ಕರ್ನಾಟಕ. ಲಿಂಗಾಯತರ ಜನಸಂಖ್ಯೆ ರಾಜ್ಯದಲ್ಲಿ ಶೇಕಡಾ ಹದಿನೇಳರಷ್ಟಿದ್ದರೂ ಮುಂಬೈ ಕರ್ನಾಟಕದ ಕೆಲವು ಕ್ಷೇತ್ರಗಳಲ್ಲಿ ಇದು 20ರಿಂದ 30ರಷ್ಟಿದೆ. ಇದರಿಂದಾಗಿಯೇ ಇಲ್ಲಿನ ಹೆಚ್ಚಿನ ಕ್ಷೇತ್ರಗಳ ಮೇಲೆ ಅಪ್ಪಳಿಸಿದ ವಚನಭಂಗದ ವಿರೋಧಿ ಅಲೆಯ ಮೇಲೇರಿ ಬಿಜೆಪಿ ಅಭ್ಯರ್ಥಿಗಳು ಸುಲಭದಲ್ಲಿ ಗೆಲುವಿನ ದಡ ಸೇರಿದ್ದರು. ರಾಜ್ಯದಾದ್ಯಂತ ಬಳ್ಳಾರಿಯ ರೆಡ್ಡಿ ಸೋದರರ ದುಡ್ಡು ಹರಿದಾಡಿದರೂ ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದಲ್ಲಿ ಹಣದ ಹೊಳೆ  ದಡಮೀರಿ ಹರಿದಿತ್ತು.
ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಶ್ರಿರಾಮುಲು ಅವರು ಸಂಘಟಿಸಿದ್ದ ಜಾತಿಮೂಲದ ಬೆಂಬಲ ಕೂಡಾ ಇಲ್ಲಿ ಬಿಜೆಪಿ ಗೆಲುವಿಗೆ  ನೆರವಾಯಿತು.  ಇದರಿಂದಾಗಿಯೇ ಬಳ್ಳಾರಿಯ ಒಂಬತ್ತು ಕ್ಷೇತ್ರಗಳಲ್ಲಿ ಎಂಟರಲ್ಲಿ ಬಿಜೆಪಿ ಗೆದ್ದಿತ್ತು. ಆ ಎಂಟರಲ್ಲಿ ಐವರು ಶಾಸಕರು ರಾಮುಲು ಜಾತಿಯಾದ ನಾಯಕ ಸಮಾಜದವರು ಎಂಬುದು ಗಮನಾರ್ಹ. ಇದರ ಜತೆಯಲ್ಲಿ ಗದಗ ಕ್ಷೇತ್ರದ ಉಸ್ತುವಾರಿ ಸಚಿವರಾಗಿದ್ದ ಶ್ರಿರಾಮುಲು ಆ ಜಿಲ್ಲೆಯ ಎಲ್ಲ ನಾಲ್ಕು ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಬಿಟ್ಟಿದ್ದರು.
ಬಿಜೆಪಿಗೆ ನಿರಾಯಾಸವಾಗಿ ಗೆಲುವು ತಂದುಕೊಟ್ಟ ಮುಂಬೈ ಕರ್ನಾಟಕ ಮತ್ತು ಬಳ್ಳಾರಿಯ ಈಗಿನ ಚಿತ್ರ ಬದಲಾಗಿರುವುದು ಮಾತ್ರವಲ್ಲ ಹೆಚ್ಚುಕಡಿಮೆ ತಲೆಕೆಳಗಾಗಿ ಬಿಟ್ಟಿದೆ. ರಾಜ್ಯದಲ್ಲಿ ಬಿಜೆಪಿಗೆ ಮಾರಣಾಂತಿಕ ಹೊಡೆತ ನೀಡಲಿರುವುದು ಈ ಪ್ರದೇಶ ಎನ್ನುವುದರಲ್ಲಿ ಅನುಮಾನ ಬೇಡ. ಏಳು ಜಿಲ್ಲೆಗಳಲ್ಲಿದ್ದ 46 ಬಿಜೆಪಿ ಶಾಸಕರ ಪೈಕಿ ಹಾವೇರಿಯಿಂದ ನಾಲ್ಕು (ಸಿ.ಎಂ.ಉದಾಸಿ, ನೆಹರೂ ಓಲೇಕಾರ್,ಜಿ.ಶಿವಣ್ಣ ಮತ್ತು ಸುರೇಶ್‌ಗೌಡ) ಮತ್ತು ಬಿಜಾಪುರ ಹಾಗೂ ಧಾರವಾಡದಿಂದ ತಲಾ ಒಬ್ಬ ಶಾಸಕರು ( ವಿಠ್ಠಲ ಕಟಕದೊಂಡ ಮತ್ತು ಚಿಕ್ಕನಗೌಡರ್)  ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಸೇರಿದ್ದಾರೆ. ಇವರಲ್ಲಿ ಸುರೇಶ್‌ಗೌಡ ಪಾಟೀಲ್ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.  ಬಿಜೆಪಿ ಶಾಸಕರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಕೆಜೆಪಿಗೆ ಪಕ್ಷಾಂತರಗೊಂಡಿರುವ ಶಾಸಕರ ಸಂಖ್ಯೆ ಕಡಿಮೆ ಎಂದು ಅನಿಸಿದರೂ ಪರಿಣಾಮ ಅಷ್ಟಕ್ಕೆ ಸೀಮಿತವಾಗಿರಲಾರದು.
ಬಿಜೆಪಿಯ ಕುಸಿತವನ್ನು ತಡೆದು ನಿಲ್ಲಿಸುವಂತಹ ಬಲಿಷ್ಠ ನಾಯಕರು ಇಲ್ಲದಿರುವುದು ಕೂಡಾ ಆ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದರೂ ಮುಂಬೈ ಇಲ್ಲವೆ ಹೈದರಾಬಾದ್ ಕರ್ನಾಟಕದ ಲಿಂಗಾಯತರು ಅವರನ್ನು ಹೆಚ್ಚು ಗಂಭೀರವಾಗಿ ಸ್ವೀಕರಿಸಿದಂತೆ ಕಾಣುತ್ತಿಲ್ಲ.
ಇನ್ನೊಂದೆಡೆ ಕೆಜೆಪಿಯ ದಾಳಿಯನ್ನು ಬಿಜೆಪಿಯಲ್ಲಿ ಅಳಿದುಳಿದ ಜನತಾ ಪರಿವಾರದ ನಾಯಕರಾದ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ ಮೊದಲಾದವರು ಎದುರಿಸುವ ಪ್ರಯತ್ನ ಮಾಡುತ್ತಿದ್ದರೂ ಅದು ಪರಿಣಾಮಕಾರಿಯಾಗಿಲ್ಲ. ಅವರ ಪ್ರಭಾವ ಸ್ವಂತ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಬಿಜೆಪಿಯಲ್ಲಿದ್ದಾಗ ಯಡಿಯೂರಪ್ಪನವರನ್ನು ಬೆಂಬಲಿಸುತ್ತಾ ಬಂದ ಲಿಂಗಾಯತರ ಜತೆ, ಬಿಜೆಪಿಯಲ್ಲಿದ್ದಾರೆ ಎನ್ನುವ ಕಾರಣಕ್ಕಾಗಿ ಅವರನ್ನು ವಿರೋಧಿಸುತ್ತಿದ್ದ ಲಿಂಗಾಯತರು ಕೂಡಾ ಈ ಬಾರಿ ಕೆಜೆಪಿ ಬೆಂಬಲಿಸುತ್ತಿರುವುದನ್ನು ಕಾಣಬಹುದು. ಇವರಲ್ಲಿ ಬಹಳಷ್ಟು ಲಿಂಗಾಯತ ಬುದ್ದಿಜೀವಿಗಳೆನ್ನುವುದು ಆಶ್ಚರ್ಯಕರವಾದರೂ ನಿಜ.
ಬಿ.ಎಸ್.ಯಡಿಯೂರಪ್ಪನವರ ವಿರುದ್ಧದ  ಮುಖ್ಯ ಆರೋಪವಾದ ಭ್ರಷ್ಟಾಚಾರ ಈ ಚುನಾವಣೆಯಲ್ಲಿ  ಮುಖ್ಯವಿಷಯವಾಗಿ ಚರ್ಚೆಗೊಳಗಾಗದೆ ಇರುವುದು ಅವರನ್ನು ಬೆಂಬಲಿಸುತ್ತಿರುವವರ ಮುಜುಗರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ.
ಆದರೆ ಹೈದರಾಬಾದ್ ಕರ್ನಾಟಕದಂತೆ ಇಲ್ಲಿಯೂ ಕೂಡಾ ಕೆಜೆಪಿಗೆ ವ್ಯಕ್ತವಾಗುತ್ತಿರುವ ಬೆಂಬಲ ಸ್ಥಾನಗಳಾಗಿ ಪರಿವರ್ತನೆಯಾಗುವ ಸಾಧ್ಯತೆಗಳು ಕಡಿಮೆ.  ಬಿ.ಎಸ್.ಯಡಿಯೂರಪ್ಪನವರು ಸ್ವಂತ ಪಕ್ಷ ಕಟ್ಟಿದಾಗ ಆಧಾರಸ್ತಂಭಗಳಾಗುತ್ತಾರೆಂದು ನಿರೀಕ್ಷಿಸಿದ್ದ ಸಂಪನ್ಮೂಲಭರಿತ ನಾಯಕರೆಲ್ಲರೂ ಜತೆಯಲ್ಲಿ ಉಳಿದುಕೊಂಡಿದ್ದರೆ ಆಟ ಬದಲಾಗುತ್ತಿತ್ತು.
ಕೊನೆಗಳಿಗೆಯ ವರೆಗೆ ಜತೆಯಲ್ಲಿದ್ದ ಬಸವರಾಜ ಬೊಮ್ಮಾಯಿ, ಮುರುಗೇಶ್ ನಿರಾಣಿ ಮತ್ತು ಉಮೇಶ್ ಕತ್ತಿಯವರು ಕೈಕೊಟ್ಟದ್ದು ಕೆಜೆಪಿಗೆ ದೊಡ್ಡ ಹೊಡೆತ. ಇದರಿಂದಾಗಿ ಕೆಜೆಪಿಯ  ಬಲ ಬಿಜೆಪಿಯನ್ನು ಸೋಲಿಸಲು ವ್ಯಯವಾಗಬಹುದೇ ಹೊರತು ಹೆಚ್ಚಿನ ಸಂಖ್ಯೆಯ ಶಾಸಕರನ್ನು ವಿಧಾನಸಭೆಗೆ ಕಳುಹಿಸಲು  ನೆರವಾಗಲಾರದು. ಇಲ್ಲಿಯೂ ಇಬ್ಬರ ನಡುವಿನ ಜಗಳದ    ಆದಾಯ ತಮಗೆ ಆಗಬಹುದೆಂಬ ನಿರೀಕ್ಷೆಯಲ್ಲಿದೆ ಕಾಂಗ್ರೆಸ್. ಇದರಿಂದಾಗಿ ಕಳೆದ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಸಂಖ್ಯೆ ಅದಲುಬದಲಾದರೂ ಆಶ್ಚರ್ಯ ಪಡಬೇಕಾಗಿಲ್ಲ.

Tuesday, April 30, 2013

`ಕಾಂಗ್ರೆಸ್ ನಾಯಕರಿಗೂ ತಮ್ಮ ತಪ್ಪಿನ ಅರಿವಾಗುತ್ತಿದೆ'

ಗುಲ್ಬರ್ಗ: `ನಮ್ಮಿಂದಾಗಿಯೇ ಬಿಜೆಪಿ 35 ಸೀಟುಗಳನ್ನು ಕಳೆದುಕೊಳ್ಳಲಿದೆ, ಉಳಿದ ಕಡೆ ಅದು ಸೋಲುವುದು ಇದ್ದೇ ಇದೆ. ಕಾಂಗ್ರೆಸ್ 75 ದಾಟುವುದಿಲ್ಲ, ಜೆಡಿಎಸ್ 25 ತಲುಪಿ
ದರೆ ಹೆಚ್ಚು. ಉಳಿದಂತೆ ನಮ್ಮ ಪಕ್ಷ ಗೆಲ್ಲುವ ಸ್ಥಾನಗಳ ಸಂಖ್ಯೆಯನ್ನು ನೀವೇ ಊಹಿಸಿಕೊಳ್ಳಿ' ಎಂದು ಹೇಳುತ್ತಲೇ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೈಯಲ್ಲಿದ್ದ ಚೀಟಿಯನ್ನು ಅಂಗಿಯ ಕಿಸೆಗೆ ತುರುಕಿಸಿದರು. ಪ್ರಕಟಿಸಬಾರದೆಂಬ ಷರತ್ತಿನಲ್ಲಿ ನೋಡಲು ಕೊಟ್ಟ ಆ ಚೀಟಿಯಲ್ಲಿ ಕೆಜೆಪಿ ನೂರಕ್ಕೆ ನೂರರಷ್ಟು ಗೆಲ್ಲಲಿದೆ ಎಂದು ಅವರು ಬಲವಾಗಿ ನಂಬಿರುವ ಕ್ಷೇತ್ರಗಳ ಸಂಖ್ಯೆ ಮತ್ತು ಹೆಸರುಗಳಿದ್ದವು.
`ಫಲಿತಾಂಶ ಪ್ರಕಟವಾಗುವ ದಿನ ನಾನು ಹೇಳಿದ ಸತ್ಯ ನಿಮಗೆ ಗೊತ್ತಾಗುತ್ತದೆ. ಆಗ ನಿಮ್ಮ ಮತ್ತು ನನ್ನ ಪಟ್ಟಿ ತಾಳೆ ನೋಡುವಾ' ಎಂದು ಸವಾಲೆಸೆದ ಅವರ ಮುಖದಲ್ಲಿ ಎಂದಿನ ಆತ್ಮವಿಶ್ವಾಸ ಇತ್ತು.
ಗುಲ್ಬರ್ಗ ನಗರದಲ್ಲಿ ರಾತ್ರಿ ಚುನಾವಣಾ ಪ್ರಚಾರ ನಡೆಸಿ ತಡರಾತ್ರಿ ಹೊಟೇಲ್‌ನಲ್ಲಿ ಬಂದು ಉಳಿದುಕೊಂಡಿದ್ದ ಯಡಿಯೂರಪ್ಪ ಬೆಳಿಗ್ಗೆ ಎಂಟು ಗಂಟೆ ಹೊತ್ತಿಗೆ ಎದ್ದು ಹೆಲಿಕಾಪ್ಟರ್ ಹತ್ತಲು ರೆಡಿಯಾಗಿ ಕೂತಿದ್ದರು. ಈ ಅವಸರದಲ್ಲಿಯೇ ಬಿಡುವು ಮಾಡಿಕೊಂಡು `ಪ್ರಜಾವಾಣಿ' ಜತೆ ಮಾತನಾಡಿದರು.
 ಪ್ರ: ನೀವು ಹೇಳಿದ ಲೆಕ್ಕವನ್ನು ನಂಬಿದರೆ ನಿಮ್ಮ ಪಕ್ಷ ಸ್ವಂತಬಲದಿಂದ ಅಧಿಕಾರಕ್ಕೆ ಬರುವುದು ಸಾಧ್ಯ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ಯಾರ ಜತೆ ಸೇರಿಕೊಳ್ಳುತ್ತೀರಿ? ಬಿಜೆಪಿ? ಕಾಂಗ್ರೆಸ್? ಜೆಡಿಎಸ್?
ಬಿಜೆಪಿ ಜತೆ ಹೋಗುವ ಪ್ರಶ್ನೆಯೇ ಇಲ್ಲ. ಆ ಪಕ್ಷದ ನಾಯಕರು ನಮ್ಮ ಮತದಾರರನ್ನು ಹಾದಿ ತಪ್ಪಿಸಲು ಈ ರೀತಿಯ ವದಂತಿಗಳನ್ನು ಹರಡು ತ್ತಿದ್ದಾರೆ. ಸುಷ್ಮಾ ಸ್ವರಾಜ್ ಅವರೇ ಮೊನ್ನೆ ಈ ರೀತಿ ಹೇಳಿದ್ದರು. ಆ ಪಕ್ಷದಲ್ಲಿ ಒಂದಷ್ಟು ನನ್ನ ಹಿತೈಷಿಗಳಿರು ವುದು ನಿಜ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಭಾನು ವಾರ ರಾಜ್ಯದಲ್ಲಿ ಮಾಡಿದ್ದ ಪ್ರಚಾರ ಭಾಷಣ ದಲ್ಲಿ ಕೂಡಾ ನನ್ನ ಹೆಸರನ್ನೆತ್ತಿ ಟೀಕಿಸಿಲ್ಲ ಎನ್ನುವುದನ್ನು ನೀವು ಗಮನಿಸಿರಬಹುದು. ಬಿಜೆಪಿಯ ಕೆಲವು ನಾಯಕರು ನನ್ನನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಂಪರ್ಕಿಸುತ್ತಿರುವುದು ನಿಜ. ಆದರೆ ಬಿಜೆಪಿ ನನ್ನ ಬದುಕಿನಲ್ಲಿ ಮುಗಿದ ಅಧ್ಯಾಯ. ಇನ್ನು ವಿಶ್ವಾಸದ್ರೋಹ ಮಾಡಿದ ಜೆಡಿಎಸ್ ಜತೆ ಈ ಜನ್ಮದಲ್ಲಿ ಸೇರುವುದಿಲ್ಲ. ಅನುಭವದಿಂದ ಅಷ್ಟು ಪಾಠವನ್ನು ಕಲಿಯದಿದ್ದರೆ ಹೇಗೆ?
ಪ್ರ: ಕಾಂಗ್ರೆಸ್?
ಈ ಚುನಾವಣೆ ನಡೆಯುತ್ತಿರುವುದೇ ನಮ್ಮ ಪಕ್ಷ ಮತ್ತು ಕಾಂಗ್ರೆಸ್ ನಡುವೆ. ಹೊಂದಾಣಿಕೆ ಮಾಡಿಕೊಳ್ಳುವುದು ಎಲ್ಲಿ ಬಂತು? ಆದರೆ ಕಾಂಗ್ರೆಸ್ ನಾಯಕರಿಗೂ ತಮ್ಮ ತಪ್ಪಿನ ಅರಿವಾಗುತ್ತಿದೆ. ನನ್ನ ಮೇಲಿನ ಆರೋಪಗಳು ಬಿಜೆಪಿಯ ಕೆಲವು ನಾಯಕರು ಸೇರಿ ನನ್ನ ವಿರುದ್ಧ ಹೂಡಿದ್ದ ಸಂಚು ಎಂದು ನಿಧಾನವಾಗಿ ಅವರಿಗೆ ಅರ್ಥವಾಗುತ್ತಿದೆ. ನನ್ನನ್ನು ಎದುರುಹಾಕಿಕೊಂಡರೆ ರಾಜ್ಯದ ಒಂದು ದೊಡ್ಡ ಸಮುದಾಯದ ಅಸಮಾಧಾನಕ್ಕೆ ಈಡಾಗಬಹುದೆಂಬ ಭೀತಿಯೂ ಅವರಲ್ಲಿದೆ. ಇದಕ್ಕಾಗಿಯೇ ಅವರು ನನ್ನ ಬಗ್ಗೆ ಹೆಚ್ಚು ಮಾತನಾಡುತ್ತಿಲ್ಲ.
ಪ್ರ: ಇಷ್ಟೊಂದು ಆತ್ಮವಿಶ್ವಾಸದಿಂದ ಗೆಲ್ಲುವ ಅಭ್ಯರ್ಥಿಗಳ ಸಂಖ್ಯೆಯನ್ನು ಹೇಳುತ್ತಿದ್ದೀರಿ, ಇದಕ್ಕೆ ಆಧಾರ ಏನು?
ಜನರ ಮೇಲಿನ ನಂಬಿಕೆಯೇ ಆಧಾರ. ನಾನು ಮಾಡಿದ ಕೆಲಸಗಳೆಲ್ಲ ಜನರಿಗೆ ಗೊತ್ತು, ತಪ್ಪು-ಒಪ್ಪುಗಳ ಹಿಂದಿನ ಸತ್ಯ ಏನು ಎನ್ನುವುದನ್ನೂ ನಿಧಾನವಾಗಿ ಅವರು ತಿಳಿದುಕೊಂಡಿದ್ದಾರೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನಮ್ಮ ಪಕ್ಷಕ್ಕೆ ಇರುವ ಬೆಂಬಲವನ್ನು ನೀವೇ ಕಣ್ಣಾರೆ ನೋಡಿದ್ದೀರಿ. ಇದೇ ರೀತಿ ಮುಂಬೈ ಕರ್ನಾಟಕದಲ್ಲಿಯೂ ಇದೆ. ಹಳೆಮೈಸೂರಿನಲ್ಲಿ ಜೆಡಿಎಸ್‌ಗೆ ಬಹಳ ದೊಡ್ಡ ಪ್ರಮಾಣದಲ್ಲಿ ಹಾನಿ ಮಾಡಲಿದ್ದೇವೆ.
ಪ್ರ: ನಿಮ್ಮ ಶಕ್ತಿ ಎಂದು ಹೇಳಿಕೊಳ್ಳುತ್ತಿರುವ ನಿಮ್ಮ ನಂಬಿಕೆಯೇ ನಿಮ್ಮ ದೌರ್ಬಲ್ಯ ಎಂದು ಈಗಲೂ ಅನಿಸುವುದಿಲ್ಲವೇ? ಸ್ವಂತ ಪಕ್ಷ ರಚಿಸಿದಾಗ ನಿಮ್ಮನ್ನು ಬೆಂಬಲಿಸಬಹುದೆಂದು ನೀವು ನಂಬಿದವರಲ್ಲಿ ಹೆಚ್ಚಿನವರು ಯಾರೂ ನಿಮ್ಮ ಜತೆಯಲ್ಲಿಲ್ಲ. ಇದು ನಿಮ್ಮ ನಂಬಿಕೆಯ ದೋಷ ಅಲ್ಲವೇ?
ಕೆಲವು ನಾಯಕರು ನಾನಿಟ್ಟ ನಂಬಿಕೆಗೆ ದ್ರೋಹ ಬಗೆದದ್ದು ನಿಜ, ಆದರೆ  ಜನ ಹಾಗೆ ಮಾಡಲಾರರು.
ಪ್ರ: ಯಾವ ರೀತಿಯ ದ್ರೋಹ?
ಅವರ ಹೆಸರು ಹೇಳಲು ನನಗಿಷ್ಟ ಇಲ್ಲ, ಅದು ನಿಮಗೂ ಗೊತ್ತಿದೆ. ನನ್ನ ಜತೆಯಲ್ಲಿಯೇ ಇದ್ದವರಂತೆ ನಟಿಸುತ್ತಿದ್ದ ಅವರು ಬಿಜೆಪಿಯಲ್ಲಿದ್ದ ನನ್ನ ವಿರೋಧಿಗಳ ಜತೆ ಷಾಮೀಲಾಗಿದ್ದರು ಎನ್ನುವುದು ನನಗೆ ತಿಳಿಯಲೇ ಇಲ್ಲ. ಅವರೆಲ್ಲ ಕೊನೆ ಗಳಿಗೆಯಲ್ಲಿ ತೀರ್ಮಾನ ಕೈಗೊಂಡು ಬಿಜೆಪಿಯಲ್ಲಿಯೇ ಉಳಿದವರಲ್ಲ. ಈ ಸಂಚನ್ನು ಸಾಕಷ್ಟು ಪೂರ್ವದಲ್ಲಿಯೇ ಪರಸ್ಪರ ಕೂಡಿ ಮಾಡಿದ್ದರು. ಪಕ್ಷಕ್ಕೆ ರಾಜೀನಾಮೆ ಕೊಡುವುದನ್ನು ವಿಳಂಬ ಮಾಡಿಸಿದ್ದು ಕೂಡಾ ಇದೇ ಸಂಚಿನ ಭಾಗ. ಇದೆಲ್ಲ ನನಗೆ ಗೊತ್ತಾಗಲಿಲ್ಲ. ಅವರಿಗಿರುವ ವಕ್ರಬುದ್ಧಿ ನನಗಿಲ್ಲ, ನನ್ನದೇನಿದ್ದರೂ ನೇರಾನೇರ ರಾಜಕೀಯ.
ಪ್ರ: ಯಾವಾಗ ಪಕ್ಷ ಬಿಡುವ ಯೋಜನೆ ಇತ್ತು ನಿಮಗೆ?
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಕ್ಷಣವೇ ಆ ಪಕ್ಷ ಬಿಟ್ಟು ಹೊರಗೆ ಬರಬೇಕಾಗಿತ್ತು. ಆಗ ಹೊಸ ಪಕ್ಷ ಕಟ್ಟಲು ಸಮಯ ಸಿಗುತ್ತಿತ್ತು. ಆ ರೀತಿ ಮಾಡಿದರೆ ನಾನು ಬಲಿಷ್ಠನಾಗುತ್ತೇನೆ ಎಂದು ತಿಳಿದ ಬಿಜೆಪಿ ನಾಯಕರು ನಾನು ನಂಬಿದವರನ್ನೇ ಜತೆಯಲ್ಲಿಟ್ಟುಕೊಂಡು ಹಾದಿ ತಪ್ಪಿಸಿದರು. ದೆಹಲಿಯ ನಾಯಕರು ಸಂಧಾನ ನಡೆಸಿದರು, ಮುಂಬೈಯಲ್ಲಿ ನಡೆದ ಪಕ್ಷದ ಅಧಿವೇಶನಕ್ಕೆ ಕರೆಸಿಕೊಂಡರು. ಇವೆಲ್ಲವೂ ನಾನು ಹೊರಗೆ ಹೋಗುವುದನ್ನು ವಿಳಂಬ ಮಾಡಲು ಬಿಜೆಪಿ ಮಾಡಿದ ಸಂಚು ಎಂದು ನನಗೆ ತಿಳಿಯಲಿಲ್ಲ. ಆಗ ನನ್ನ ಜತೆಯಲ್ಲಿದ್ದವರಿಗೆ ಇದು ಗೊತ್ತಿದ್ದರೂ ಅದನ್ನು ನನಗೆ ತಿಳಿಸಲಿಲ್ಲ. ಅವರನ್ನು ನಂಬಿ ಮೋಸಹೋದೆ. ಅವರಿಗೆ ಒಳ್ಳೆಯದಾಗಲಿ.
ಪ್ರ: ನೀವು  ಅಧಿಕಾರದಲ್ಲಿದ್ದಾಗ ವೀರಶೈವ ಮಠಗಳಿಗೆ ಧಾರಾಳವಾಗಿ ದುಡ್ಡು ಕೊಟ್ಟವರು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಾಯ ಎದುರಾದಾಗ ಕೆಲವು ಸ್ವಾಮಿಗಳು ಬೀದಿಗೆ ಇಳಿದು ಪ್ರತಿಭಟನೆಯನ್ನೂ ನಡೆಸಿದ್ದರು. ಅವರಲ್ಲಿ ಯಾರೊಬ್ಬರೂ ಈಗ ನಿಮ್ಮನ್ನು ಬಹಿರಂಗವಾಗಿ ಬೆಂಬಲಿಸುತ್ತಿಲ್ಲವಲ್ಲಾ? ಅಲ್ಲಿಯೂ ನೀವಿಟ್ಟ ನಂಬಿಕೆ ಹುಸಿಯಾಗಿ ಹೋಯಿತೇ?
ಬಹಿರಂಗವಾಗಿ ಹೇಳಿಕೆ ನೀಡದಿದ್ದ ಮಾತ್ರಕ್ಕೆ ಅವರು ನನ್ನನ್ನು ಬೆಂಬಲಿಸುತ್ತಿಲ್ಲ ಎಂದು ಹೇಳಲಾಗದು. ಕೆಲವು ಸ್ವಾಮೀಜಿಗಳ ಬಂಟರು ಬದಲಾಗಿರಬಹುದು ಅಷ್ಟೆ. ಸ್ವಾಮೀಜಿಗಳು ಮತ್ತು ಅವರ ಅನುಯಾಯಿಗಳು ನಮ್ಮ ಪಕ್ಷದ ಪರವಾಗಿದ್ದಾರೆ. ಅವರ ಆಶೀರ್ವಾದ ನನ್ನ ಮೇಲಿದೆ.
ಪ್ರ: ಈ ಚುನಾವಣೆಯ ನಂತರ ನಿಮ್ಮ ಪಕ್ಷದ ಭವಿಷ್ಯದ ಬಗ್ಗೆ ಏನಾದರೂ ಯೋಚನೆ ಮಾಡಿದ್ದೀರಾ?
ಅಂತಿಮವಾಗಿ ನಾವು ರಾಷ್ಟ್ರಮಟ್ಟದಲ್ಲಿ ತೃತೀಯ ರಂಗದ ಜತೆ ಸೇರಿಕೊಳ್ಳುವವರು. ಈ ಬಗ್ಗೆ ಕೆಲವು ಪಕ್ಷಗಳ ನಾಯಕರು ನಮ್ಮ ಸಂಪರ್ಕದಲ್ಲಿದ್ದಾರೆ. ಅದರ ವಿವರವನ್ನು ಈಗ ಬಹಿರಂಗಪಡಿಸುವುದು ಸರಿಯಾಗುವುದಿಲ್ಲ. ಚುನಾವಣೆ ಮುಗಿದ ನಂತರ ದೆಹಲಿಗೆ ಹೋಗಿ ಅವರ ಜತೆ ಮಾತುಕತೆ ನಡೆಸುತ್ತೇನೆ. ನಮ್ಮದು ಒಂದು ಚುನಾವಣೆಯ ಪಕ್ಷ ಅಲ್ಲ, ಇದು ಯಡಿಯೂರಪ್ಪನಿಗೆ ಅನ್ಯಾಯವಾಗಿದೆ ಎಂಬ ಕಾರಣಕ್ಕಾಗಿ ಹುಟ್ಟಿಕೊಂಡ ಪಕ್ಷ ಅಲ್ಲ. ಅದೊಂದು ನೆಪ ಅಷ್ಟೆ. ರಾಜ್ಯಕ್ಕೆ ಆಗಿರುವ ಮತ್ತು ಆಗಲಿರುವ ಅನ್ಯಾಯದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ.

Monday, April 29, 2013

ಹೈದರಾಬಾದ್ ಕರ್ನಾಟಕದ ಬಾಗಿಲು ಬಡಿಯುತ್ತಿರುವ ಕೆಜೆಪಿ

ಗುಲ್ಬರ್ಗ:   ಹೈದರಾಬಾದ್ ಕರ್ನಾಟಕ ಭಾಗದಲ್ಲಿ ರಾಜಕೀಯವಾಗಿ ನೇಪಥ್ಯಕ್ಕೆ ಸರಿಯುತ್ತಿರುವ ಲಿಂಗಾಯತರು ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಮೂಲಕ ರಾಜಕೀಯ ನೆಲೆಯನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದ್ದಾರೆಯೇ? ರಾಜಕೀಯವಾಗಿ ಅವಕಾಶ ವಂಚಿತರಾಗುತ್ತಿದ್ದೇವೆ ಎಂಬ ಈ ಭಾಗದ ಲಿಂಗಾಯತ ಸಮುದಾಯದಲ್ಲಿರುವ ಅತೃಪ್ತಿಯನ್ನು ಬಳಸಿಕೊಂಡು ಕೆಜೆಪಿ ಇಲ್ಲಿ ಕಾಲೂರುವ ಸನ್ನಾಹದಲ್ಲಿ ತೊಡಗಿದೆಯೇ? ಇಲ್ಲಿನ ಚುನಾವಣಾ ರಾಜಕೀಯದ ವಿದ್ಯಮಾನಗಳ ಒಳಗೊಂದು ನೋಟ ಹರಿಸಿದರೆ ಇಂತಹ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ.
ಈ ಭಾಗದ ಹಿರಿಯ ರಾಜಕಾರಣಿಯಾಗಿದ್ದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲರ ನಂತರ ತಮ್ಮನ್ನು ಪ್ರತಿನಿಧಿಸಬಲ್ಲ ಸಮರ್ಥ ನಾಯಕರು ಹುಟ್ಟಿಬರಲಿಲ್ಲ ಎಂಬ ಕೊರಗು ಇಲ್ಲಿನ ಲಿಂಗಾಯತ ಸಮುದಾಯದಲ್ಲಿ ಬಹಳ ಕಾಲದಿಂದಲೂ ಇದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಧರ್ಮಸಿಂಗ್ ಎಂಬ ಅವಳಿ ನಾಯಕರು ಈ ಪ್ರದೇಶದಲ್ಲಿ ಬಹುಸಂಖ್ಯೆಯಲ್ಲಿರುವ ಲಿಂಗಾಯತೇತರ ಸಮುದಾಯದ ಬೆಂಬಲದೊಂದಿಗೆ ಪ್ರಭಾವಶಾಲಿ ಕಾಂಗ್ರೆಸ್ ನಾಯಕರಾಗಿ ಬೆಳೆಯುತ್ತಾ ಹೋದಂತೆ ಲಿಂಗಾಯತರು ಸಹಜವಾಗಿಯೇ ಪಕ್ಕಕ್ಕೆ ಸರಿದು ನಿಲ್ಲಬೇಕಾಯಿತು.
ನಾಯಕತ್ವದ ಈ ನಿರ್ವಾತವನ್ನು ಬಳಸಿಕೊಳ್ಳಲು ರಾಮಕೃಷ್ಣ ಹೆಗಡೆಯವರು ಹೊರಟಾಗ ಲಿಂಗಾಯತರು ಹೆಚ್ಚುಕಡಿಮೆ ಅವರ ನಾಯಕತ್ವವನ್ನು ಒಪ್ಪಿಕೊಂಡೇ ಬಿಟ್ಟಿದ್ದರು. ಅದರ ನಂತರ ಕಾಣಿಸಿಕೊಂಡವರು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ. ಇವರನ್ನು ಈ ಭಾಗದ ಲಿಂಗಾಯತರು ಬೆಂಬಲಿಸಿರುವುದಕ್ಕೆ 2008ರ ವಿಧಾನಸಭಾ ಚುನಾವಣಾ ಫಲಿತಾಂಶ ಸಾಕ್ಷಿ. ಆಶ್ಚರ್ಯದ ಸಂಗತಿಯೆಂದರೆ ಆ ಚುನಾವಣೆಯಲ್ಲಿ ಲಿಂಗಾಯತ ಮತದಾರರು ಅಭ್ಯರ್ಥಿಗಳ ಜಾತಿಯನ್ನು ನೋಡದೆ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಬೇಕೆಂಬ ಏಕೈಕ ಗುರಿಯಿಂದ ಲಿಂಗಾಯತೇತರ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿರುವುದು ಫಲಿತಾಂಶದ ವಿಶ್ಲೇಷಣೆಯಿಂದ ಕಂಡುಬರುತ್ತದೆ.
ಕಳೆದ ಚುನಾವಣೆಯಲ್ಲಿ ಗುಲ್ಬರ್ಗ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಹೈದರಾಬಾದ್ ಕರ್ನಾಟಕದ ವ್ಯಾಪ್ತಿಯಲ್ಲಿ ಬರುವ ನಲ್ವತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಹತ್ತೊಂಬತ್ತನ್ನು ಗೆದ್ದಿದ್ದರೂ, ಇವರಲ್ಲಿ ಲಿಂಗಾಯತ ಸಮುದಾಯಕ್ಕೆ ಸೇರಿದವರು ಐದು ಶಾಸಕರು ಮಾತ್ರ. ಉಳಿದವರೆಲ್ಲ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗೆ ಸೇರಿದವರು. ಕಾಂಗ್ರೆಸ್ ಪಕ್ಷ ಈ ಭಾಗದ 15 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿದ್ದರೂ ಅವರಲ್ಲಿನ ಲಿಂಗಾಯತ ಶಾಸಕರ ಸಂಖ್ಯೆ ಬಿಜೆಪಿಗಿಂತ ಎರಡು ಹೆಚ್ಚು. ಲಿಂಗಾಯತೇತರ ಅಭ್ಯರ್ಥಿಗಳಿದ್ದ ಕ್ಷೇತ್ರಗಳಲ್ಲಿಯೂ ಲಿಂಗಾಯತರು ಬಿಜೆಪಿಗೆ ಮತದಾನ ಮಾಡಿರುವುದು ಇದರಿಂದ ಸ್ಪಷ್ಟ.
ಜನಪ್ರಿಯ ಜಾತಿ ನಾಯಕರಲ್ಲಿ ಕಾಣಬಹುದಾದ (ಉದಾಹರಣೆಗೆ ಮಾಯಾವತಿ) ಮತವರ್ಗಾವಣೆಯ ಸಾಮರ್ಥ್ಯವನ್ನು ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಪ್ರದರ್ಶಿಸಿದ್ದಾರೆ. ಆದರೆ ಕೇವಲ ಈ ಶಕ್ತಿಯ ಬಲದಿಂದ ಕೆಜೆಪಿ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವೇ ಎನ್ನುವುದು ಪ್ರಶ್ನೆ. ಯಡಿಯೂರಪ್ಪ ಬಿಜೆಪಿಯಲ್ಲಿದ್ದಾಗ ಅವರ ವೈಯಕ್ತಿಕ ಜನಪ್ರಿಯತೆ (ಮುಖ್ಯವಾಗಿ ಜಾತಿ) ಮತ್ತು ಪಕ್ಷದ ಮೂಲಕ ಹರಿದು ಬಂದ ಬೆಂಬಲ ಒಟ್ಟಾಗಿ ಅಭ್ಯರ್ಥಿಗಳನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿತ್ತು. ಆದರೆ ಈ ಬಾರಿ ಕೇವಲ ತನ್ನ ಜನಪ್ರಿಯತೆಯ ಬಲದಿಂದಲೇ ಪಕ್ಷದ ಅಭ್ಯರ್ಥಿಗಳನ್ನು ಆರಿಸಿ ತರಬೇಕಾಗಿದೆ. ಹಿಂದಿನ ಚುನಾವಣೆಯ ಕಾಲದಲ್ಲಿದ್ದ ಮತವರ್ಗಾವಣೆಯ ಸಾಮರ್ಥ್ಯ ಈಗಲೂ ಯಡಿಯೂರಪ್ಪನವರಲ್ಲಿ ಉಳಿದಿದೆಯೇ?
ಆರೋಪಗಳ ಕಳಂಕದ ಹೊರತಾಗಿಯೂ ಹೈದರಾಬಾದ್ ಕರ್ನಾಟಕದ ಬಹುಸಂಖ್ಯಾತ ಲಿಂಗಾಯತರಲ್ಲಿ ಯಡಿಯೂರಪ್ಪನವರ ಬಗ್ಗೆ ಪ್ರೀತಿಯೋ, ಅನುಕಂಪವೋ ಇರುವುದು ಸ್ಪಷ್ಟ. ಆದರೆ ಈ ಮೃದು ಭಾವನೆ ಅವರ ಮತಾಧಿಕಾರವನ್ನು ನಿರ್ದೇಶಿಸುವಷ್ಟು ಪ್ರಭಾವಶಾಲಿಯಾಗಿದೆಯೇ ಎಂಬುದನ್ನು ಕಾದು ನೋಡಬೇಕು. ಈ ಭಾಗದಲ್ಲಿ ಸಮಗ್ರ ಲಿಂಗಾಯತ ಜಾತಿಯನ್ನು ಪ್ರತಿನಿಧಿಸಬಲ್ಲ ಸಾಮರ್ಥ್ಯದ ನಾಯಕರು ಇಲ್ಲದಿರುವುದು ಕೂಡಾ ಯಡಿಯೂರಪ್ಪನವರ ಬಗೆಗಿನ ಅಭಿಮಾನಕ್ಕೆ ಕಾರಣ ಇರಬಹುದು.
ಗುಲ್ಬರ್ಗ ಜಿಲ್ಲೆಯಲ್ಲಿ ವೀರೇಂದ್ರ ಪಾಟೀಲರ ನಂತರ ಕಾಣಿಸಿಕೊಂಡವರು ಜನತಾ ಪರಿವಾರಕ್ಕೆ ಸೇರಿರುವ ವೈಜನಾಥ ಪಾಟೀಲ, ಎಸ್.ಕೆ.ಕಾಂತಾ, ಬಿ.ಆರ್.ಪಾಟೀಲ ಮೊದಲಾದ ನಾಯಕರು. ಇವರಲ್ಲಿ ಯಾರೂ ಲಿಂಗಾಯತ ನಾಯಕರಾಗಿ ತಮ್ಮನ್ನು ಬಿಂಬಿಸಿಕೊಂಡವರಲ್ಲ. ಗುಲ್ಬರ್ಗ ಜಿಲ್ಲೆಯ ಸೇಡಂ ಶಾಸಕ ಡಾ.ಶರಣಪ್ರಕಾಶ ಪಾಟೀಲ ಇಲ್ಲವೆ ಯಾದಗಿರಿ ಶಾಸಕ ಡಾ.ಮಾಲಕರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷ ತಮ್ಮಲ್ಲಿರುವ ಲಿಂಗಾಯತ ನಾಯಕರೆಂದು ಬಿಂಬಿಸುತ್ತಿದ್ದರೂ ಅವರ ಪ್ರಭಾವಲಯ ಸೀಮಿತವಾದುದು.
ಇದೇ ರೀತಿ ಬೀದರ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಭೀಮಣ್ಣ ಖಂಡ್ರೆ ವೀರಶೈವ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರೂ ಸಮುದಾಯದ ಮೇಲೆ ನಿಯಂತ್ರಣ ಹೊಂದಿದವರಲ್ಲ, ಅವರ ಶ್ರಮವೆಲ್ಲ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಗ ಈಶ್ವರ ಖಂಡ್ರೆಯವರನ್ನು ಗೆಲ್ಲಿಸುವುದಕ್ಕಷ್ಟೇ ವ್ಯಯವಾಗುತ್ತಿದೆ. ಅದೇ ಜಿಲ್ಲೆಯ ಗುರುಪಾದಪ್ಪ ನಾಗಮಾರಪಳ್ಳಿ ಹಲವು ಪಕ್ಷಗಳನ್ನು ಸುತ್ತಿ ಈಗ ಕೆಜೆಪಿ ಸೇರಿದ್ದಾರೆ.
ಕೊಪ್ಪಳ ಜಿಲ್ಲೆಯ ಬಸವರಾಜ ಪಾಟೀಲ ಅನ್ವರಿ ಈಗ ಹಿಂದಿನ ಜನಪ್ರಿಯತೆಯನ್ನು ಉಳಿಸಿಕೊಂಡಿಲ್ಲ. ಆ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವ ಬಸವರಾಜ ರಾಯರೆಡ್ಡಿ ಮತ್ತು ಅಮರೇಗೌಡ ಬಯ್ಯಾಪುರ ಹಾಗೂ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ತಮ್ಮ ಕ್ಷೇತ್ರಗಳ ವ್ಯಾಪ್ತಿಯನ್ನು ಮೀರಿ ಲಿಂಗಾಯತ ಮತದಾರರ ಮೇಲೆ ಹಿಡಿತ ಹೊಂದಿದವರಲ್ಲ.
ಏಳರಲ್ಲಿ ಐದು ಕ್ಷೇತ್ರಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾಗಿರುವುದರಿಂದ ರಾಯಚೂರು ಜಿಲ್ಲೆಯಲ್ಲಿ ಲಿಂಗಾಯತ ನಾಯಕರು ಬೆಳೆಯಲು ಅವಕಾಶ ಕಡಿಮೆ. ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಬೋಸರಾಜು ಮತ್ತು ಹಂಪನಗೌಡ ಬಾದರ್ಲಿ ಅವರೇ ಅಲ್ಲಿನ ನಾಯಕರು. ಬಳ್ಳಾರಿ ಜಿಲ್ಲೆಯಲ್ಲಿದ್ದ ಒಬ್ಬ ಲಿಂಗಾಯತ ನಾಯಕರಾದ ಅಲ್ಲಂ ವೀರಭದ್ರಪ್ಪನವರು ಊರು ಬಿಟ್ಟು ಬೆಂಗಳೂರು ಸೇರಿಬಿಟ್ಟಿದ್ದಾರೆ.
ಹೈದರಾಬಾದ್ ಕರ್ನಾಟಕದ ಲಿಂಗಾಯತರಲ್ಲಿರುವ ನಾಯಕತ್ವದ ಕೊರತೆ ಬಿ.ಎಸ್.ಯಡಿಯೂರಪ್ಪನವರಿಗೆ ಇರುವ ಅನುಕೂಲತೆ. ಇದನ್ನು ಅರ್ಥಮಾಡಿಕೊಂಡಿರುವ ಅವರು ಅಳಿದುಳಿದ ಲಿಂಗಾಯತ ನಾಯಕರನ್ನು  ತಮ್ಮ ಜತೆ ಸೇರಿಸಿಕೊಳ್ಳುವ ಪ್ರಯತ್ನವನ್ನು ಪ್ರಾರಂಭದಿಂದಲೇ ಮಾಡುತ್ತಾ ಬಂದಿದ್ದಾರೆ. ಈ ಪ್ರಯತ್ನದಲ್ಲಿ ಸ್ವಲ್ಪ ಯಶಸ್ಸನ್ನೂ ಕಂಡಿದ್ದಾರೆ. ಇದನ್ನು ಮುಖ್ಯವಾಗಿ ಹೈದರಾಬಾದ್ ಕರ್ನಾಟಕದ ಕೇಂದ್ರ ಸ್ಥಾನವಾದ ಗುಲ್ಬರ್ಗ ಜಿಲ್ಲೆಯಲ್ಲಿ ಕಾಣಬಹುದು. ನಂಜುಂಡಪ್ಪ ವರದಿಯ ಅನುಷ್ಠಾನದಿಂದ ಹಿಡಿದು ಸಂವಿಧಾನದ 371ನೇ ಕಲಂ ತಿದ್ದುಪಡಿಯವರೆಗಿನ ಹೈದರಾಬಾದ್ ಕರ್ನಾಟಕದ ಮುಖ್ಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಾ ಬಂದ ವೈಜನಾಥ ಪಾಟೀಲ, ಕಾರ್ಮಿಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಎಸ್.ಕೆ.ಕಾಂತಾ, ಜನತಾ ಪರಿವಾರದಿಂದ ಬಂದ ಸಮಾಜವಾದಿ ಹಿನ್ನೆಲೆಯ ಬಿ.ಆರ್.ಪಾಟೀಲ ಮತ್ತು ಇನ್ನೊಬ್ಬ ಹಿರಿಯ ನಾಯಕ ಎಂ.ವೈ. ಪಾಟೀಲ ಈಗ ಗುಲ್ಬರ್ಗ ಜಿಲ್ಲೆಯಲ್ಲಿ ಕೆಜೆಪಿ ಅಭ್ಯರ್ಥಿಗಳು. ಅದೇ ರೀತಿ ಕೊಪ್ಪಳ ಜಿಲ್ಲೆಯ ಬಸವರಾಜ ಅನ್ವರಿ, ಬೀದರ್ ಜಿಲ್ಲೆಯ ಗುರುಪಾದಪ್ಪ ನಾಗಮಾರಪಳ್ಳಿ ಕೂಡಾ ಕೆಜೆಪಿ ಸೇರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ತಮಗೆ ಇರುವ ಪ್ರಭಾವ ಸೀಮಿತವಾಗಿದ್ದರೂ ಇದು ಯಡಿಯೂರಪ್ಪನವರ ಜನಪ್ರಿಯತೆಯ ಜತೆ ಸೇರಿಕೊಂಡಾಗ ಗೆಲುವಿನ ಹಾದಿ ಹತ್ತಿರವಾಗಬಹುದು ಎಂಬ ನಿರೀಕ್ಷೆ ಕೆಜೆಪಿ ಅಭ್ಯರ್ಥಿಗಳಲ್ಲಿದೆ. ಕೆಜೆಪಿಯ ಜನಪ್ರಿಯತೆ ಅದಕ್ಕೆ ಸ್ಥಾನಗಳನ್ನು ಗೆದ್ದುಕೊಡುವಷ್ಟು ಅಗಾಧವಾಗಿದೆಯೇ? ಇಲ್ಲವೆ ಬೇರೆ ಪಕ್ಷಗಳ ಮತಗಳನ್ನು ತಿಂದುಹಾಕುವುದಕ್ಕಷ್ಟೇ ಸೀಮಿತವಾಗಲಿದೆಯೇ ಎನ್ನುವುದು ಚುನಾವಣಾ ಕಣದಲ್ಲಿರುವ ಕುತೂಹಲ. ಕೆಜೆಪಿ ಬರಿ ಬಿಜೆಪಿಗೆ ಮಾತ್ರವಲ್ಲ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೂ ಹಾನಿ ಉಂಟು ಮಾಡುವ ಸಾಧ್ಯತೆ ಇದ್ದರೂ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕೆಜೆಪಿಯಿಂದ ನಷ್ಟಕ್ಕಿಂತ ಲಾಭವೇ ಹೆಚ್ಚು. ತಮ್ಮ ಅಭ್ಯರ್ಥಿಗಳು ಗೆಲ್ಲಲಾಗದ ಕಡೆಗಳಲ್ಲಿ ಕೊನೆ ಗಳಿಗೆಯಲ್ಲಿ ಕೆಜೆಪಿ ತನ್ನ ಬೆಂಬಲಿಗರಿಗೆ ಕಾಂಗ್ರೆಸ್ ಪರ ಮತಹಾಕಲು ಸೂಚನೆಯನ್ನು ನೀಡಬಹುದೆಂಬ ನಿರೀಕ್ಷೆಯೂ ಕೆಲವು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿದೆ.
ಬಹಿರಂಗವಾಗಿ ಚರ್ಚೆಯಾಗುತ್ತಿರುವಂತೆ ಬಿಜೆಪಿಯನ್ನು ಸೋಲಿಸುವುದೇ ಕೆಜೆಪಿಯ ಮೊದಲ ಉದ್ದೇಶವಾಗಿದ್ದರೆ ಈ ಪ್ರಯತ್ನದಲ್ಲಿ ಅದು ಈಗಾಗಲೇ ಯಶಸ್ಸು ಕಂಡಿದೆ ಎಂದು ಹೇಳಬಹುದು. ಹೈದರಾಬಾದ್ ಕರ್ನಾಟಕದಲ್ಲಿ ಕಳೆದ ಬಾರಿ ಗೆದ್ದಿರುವ 19 ಸ್ಥಾನ ಉಳಿಸಿಕೊಳ್ಳುವುದು ಬಿಜೆಪಿಗೆ ಖಂಡಿತ ಅಸಾಧ್ಯ. ಈ ಸಂಖ್ಯೆ ಅರ್ಧಕ್ಕಿಂತಲೂ ಕೆಳಗಿಳಿದರೂ ಅಚ್ಚರಿ ಪಡಬೇಕಾಗಿಲ್ಲ. ಕೆಜೆಪಿ, ಹೈದರಾಬಾದ್ ಕರ್ನಾಟಕದ ಮನೆಬಾಗಿಲು ಬಡಿಯುತ್ತಿರುವುದು ನಿಜ, ಆದರೆ ಬಾಗಿಲು ತೆರೆಯುವ ಬಗ್ಗೆ ಮನೆ ಯಜಮಾನನ ನಿರ್ಧಾರ ಏನೆಂದು ತಿಳಿದುಕೊಳ್ಳಲು ಕಾಯಬೇಕು.

Sunday, April 28, 2013

`ವಿಕಾಸ ಪುರುಷ'ನ ಹೊಸ ಪಾತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಚಾರ

ಗುಲ್ಬರ್ಗ:  `ನಮ್ಮ ಸಾಧನೆಯನ್ನು ಅರ್ಧ ಆಕಾಶದಲ್ಲಿ, ಇನ್ನರ್ಧ ಭೂಮಿಯಲ್ಲಿ ತೋರಿಸುತ್ತೇನೆ' ಎಂದಿದ್ದರು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗದಲ್ಲಿ ಹೆಲಿಕಾಪ್ಟರ್ ಹತ್ತುವಾಗ. ಬೀದರ್ ಲೋಕಸಭಾ ಸದಸ್ಯ ಎನ್.ಧರ್ಮಸಿಂಗ್ ಅವರೂ ಜತೆಯಲ್ಲಿದ್ದರು.
ಬೆಳಿಗ್ಗೆ ಹತ್ತರಿಂದ ರಾತ್ರಿ ಹತ್ತರ ವರೆಗೆ ಎಡೆಬಿಡದೆ ಐದು ಸ್ಥಳಗಳಲ್ಲಿ ಪ್ರಚಾರ ಭಾಷಣ ಮಾಡಿದ ಇಬ್ಬರೂ ನಾಯಕರು ದಣಿವಿಲ್ಲದಂತೆ ಮಾತನಾಡಿದ್ದು ಹೈದರಾಬಾದ್ ಕರ್ನಾಟಕದಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತ್ರ. ಸಭೆ ಮುಗಿಸಿ ಹೆಲಿಕಾಪ್ಟರ್‌ನಲ್ಲಿ ಬಂದು ಕೂತಾಗಲೂ ಅದೇ ಚರ್ಚೆ ಮುಂದುವರಿಯುತ್ತಿತ್ತು. `ಐದು ವರ್ಷಗಳಲ್ಲಿ ಖರ್ಗೆ ಮತ್ತು ಧರ್ಮಸಿಂಗ್ ಈ ಪ್ರದೇಶಕ್ಕೆ ಏನು ಮಾಡಿದ್ದಾರೆ?' ಎಂಬ ವಿರೋಧಪಕ್ಷಗಳ ಚುಚ್ಚು ಪ್ರಶ್ನೆ ಇಬ್ಬರನ್ನೂ ಘಾಸಿಗೊಳಿಸಿದಂತಿತ್ತು.
ಆಡಳಿತಾರೂಢ ಪಕ್ಷದ ದುರಾಡಳಿತವನ್ನೇ ಚುನಾವಣಾ ಕಾಲದಲ್ಲಿ ವಿರೋಧ ಪಕ್ಷಗಳ ನಾಯಕರು ಪ್ರಚಾರದ ಪ್ರಮುಖ ವಿಷಯವನ್ನಾಗಿ ಮಾಡಿಕೊಳ್ಳುವುದು ಸಹಜ. ಹೈದರಾಬಾದ್ ಕರ್ನಾಟಕದಲ್ಲಿ ಚುನಾವಣಾ ಆಟದ ಈ ನಿಯಮ ಬದಲಾಗಿದೆ.
ರಾಜ್ಯದಲ್ಲಿ ವಿರೋಧ ಪಕ್ಷವಾಗಿರುವ  ಕಾಂಗ್ರೆಸ್‌ನ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ತಮ್ಮ ಸಾಧನೆಗಳನ್ನು ಮುಂದಿಟ್ಟು ಮತಕೇಳುತ್ತಿದ್ದಾರೆ.`ದಲಿತ ನಾಯಕ', `ಉತ್ತರ ಕರ್ನಾಟಕದ ನಾಯಕ' ಎಂಬೀತ್ಯಾದಿ ವಿಶೇಷಣಗಳಿಂದ ಕಳಚಿಕೊಂಡು `ವಿಕಾಸ ಪುರುಷ'ನಾಗಿ ತಮ್ಮನ್ನು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿ ಖರ್ಗೆ ತೊಡಗಿದ್ದಾರೆ.
`ಲೋಕಸಭೆಗೆ ನನ್ನನ್ನು ಆರಿಸಿ ಕಳುಹಿಸಿದರೆ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷಸ್ಥಾನಮಾನ ನೀಡಲು ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ಮಾಡುವುದಾಗಿ ರಾಹುಲ್‌ಗಾಂಧಿ ಭರವಸೆ ನೀಡಿದ್ದರು. ನಾವು ನುಡಿದಂತೆ ನಡೆದಿದ್ದೇವೆ. ಮಾಡಿರುವ ಕೆಲಸಕ್ಕಾಗಿ ಕೂಲಿ ಕೊಡಿ' ಎಂದು ಖರ್ಗೆ ಅವರು ಮತಯಾಚಿಸುತ್ತಿದ್ದಾರೆ. ಅಲ್ಲಿಗೆ ನಿಲ್ಲಿಸದೆ, ನಾಲ್ಕು ವರ್ಷಗಳ ಅವಧಿಯಲ್ಲಿ  ಗುಲ್ಬರ್ಗ  ಜಿಲ್ಲೆಯಲ್ಲಿ ತಾವು ಮಾಡಿದ ಸಾಧನೆಗಳನ್ನು ಪಟ್ಟಿಮಾಡಿ ಹೇಳುತ್ತಿದ್ದರು.
`ಏನು ಮಾಡಿದ್ದಾರೆ ಎಂದು ಕೇಳುವವರು ಇಲ್ಲಿ ಬಂದು ಕಣ್ಣುಬಿಟ್ಟುನೋಡಲಿ, ಅಂದಾಜು ರೂ.1,500 ಕೋಟಿ  ವೆಚ್ಚದಲ್ಲಿ ಇಎಸ್‌ಐ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ವೈದ್ಯಕೀಯ, ಡೆಂಟಲ್,ನರ್ಸಿಂಗ್ ಕಾಲೇಜುಗಳು, ಕೇಂದ್ರೀಯ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಗುಲ್ಬರ್ಗಗಳಲ್ಲಿ ಕೌಶಲ ಸುಧಾರಣಾ ಕೇಂದ್ರ, ಟೆಕ್ಸ್‌ಟೈಲ್ ಪಾರ್ಕ್, ಕೃಷಿ ಸಂಶೋಧನಾ ಕೇಂದ್ರ, ನವೋದಯ ಶಾಲೆ...ಇನ್ನೇನಾಗಬೇಕು? ಗುಲ್ಬರ್ಗ, ರಾಯಚೂರು,ಯಾದಗಿರಿ,ಬಳ್ಳಾರಿ ಮತ್ತು ಅನಂತಪುರ ಮೂಲಕ ಬೆಂಗಳೂರಿಗೆ ಹೋಗುವ ಸುಮಾರು 300 ಕಿ.ಮೀ.ಉದ್ದದ ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೂ ಇತ್ತೀಚೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಇವೆಲ್ಲವೂ ನಾಲ್ಕು ವರ್ಷಗಳಲ್ಲಿ ಆಗಿರುವಂತಹ ಕೆಲಸಗಳು, ಹಿಂದಿನದ್ದೆಲ್ಲವನ್ನು ಇದರಲ್ಲಿ ಸೇರಿಸಿಲ್ಲ. ನನ್ನನ್ನು ಸತತವಾಗಿ ಏಳು ಬಾರಿ ಆಯ್ಕೆಮಾಡಿದ ಗುರುಮಿಠ್ಕಲ್ ಕ್ಷೇತ್ರಕ್ಕೆ ಹೋಗಿ ನೋಡಿದರೆ ಅಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳೇನೆಂದು ಗೊತ್ತಾಗುತ್ತದೆ.  ಕಾಮಾಲೆ ಕಣ್ಣಿಗೆ ಇದೆಲ್ಲ ಕಾಣಿಸುವುದಿಲ್ಲ' ಎಂದ ಖರ್ಗೆಯವರಿಗೆ ಭಾಷಣ ಮುಗಿಸಿದ ಮೇಲೆಯೂ ವಿರೋಧಪಕ್ಷಗಳ ನಾಯಕರ ಪ್ರಶ್ನೆಗಳಿಂದ ಹುಟ್ಟಿಕೊಂಡಿರುವ ಸಿಟ್ಟು ಇಳಿದಿರಲಿಲ್ಲ.
ಪಕ್ಷದ ಶಿಸ್ತಿನ ಶಿಪಾಯಿ: ಅವರ ಮಾತುಗಳನ್ನು ಅರ್ಧಕ್ಕೆ ತಡೆದು `ವಿರೋಧಪಕ್ಷಗಳನ್ನು ಯಾಕೆ ದೂರುತ್ತೀರಿ, ಬೆಂಗಳೂರಿನಲ್ಲಿರುವ ನಿಮ್ಮ ಪಕ್ಷದ ನಾಯಕರಲ್ಲಿ ಎಷ್ಟು ಮಂದಿ ಈ ಬಗ್ಗೆ ಮಾತನಾಡಿದ್ದಾರೆ?' ಎಂದು ಪ್ರಶ್ನಿಸಿದೆ. ಅಲ್ಲಿಯವರೆಗೆ ಆಕ್ರಮಣಕಾರಿ ರಾಜಕೀಯ ನಾಯಕರಂತೆ ಮಾತನಾಡುತ್ತಿದ್ದ ಖರ್ಗೆಯವರು ತಕ್ಷಣ `ಪಕ್ಷದ ಶಿಸ್ತಿನ ಸಿಪಾಯಿ'ಯಾಗಿ ಮೌನವಾಗಿಬಿಟ್ಟರು.
ಆಡಳಿತ ಮತ್ತು ವಿರೋಧಪಕ್ಷದ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದ ಅನುಭವವನ್ನು ಗಣನೆಗೆ ತೆಗೆದುಕೊಂಡರೆ ಪಕ್ಷಾತೀತವಾಗಿ ರಾಜ್ಯದ ಅತ್ಯಂತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ. ಆದರೆ ಅದನ್ನು ಅವರು ಹೇಳಿಕೊಂಡದ್ದು ಕಡಿಮೆ.
`ಸಾಮಾನ್ಯವಾಗಿ ರಾಜಕಾರಣಿಗಳಲ್ಲಿ ಕಂಡುಬರುವ ಮಹತ್ವಾಕಾಂಕ್ಷೆ ಇಲ್ಲದಿರುವುದು ಮತ್ತು ಪಕ್ಷದ ಮೇಲಿನ ಅತಿನಿಷ್ಠೆ ಖರ್ಗೆ ಅವರ ದೌರ್ಬಲ್ಯಗಳು' ಎನ್ನುತ್ತಾರೆ ಅವರ ಬೆಂಬಲಿಗರು. ಇತ್ತೀಚೆಗೆ ಖರ್ಗೆ ಅವರನ್ನು ರಾಜಕೀಯ ಮಹತ್ವಾಕಾಂಕ್ಷೆಗಿಂತಲೂ ಹೆಚ್ಚಾಗಿ ಅಭಿವೃದ್ಧಿ ಕೆಲಸಗಳ ಹುಚ್ಚು ಆವರಿಸಿಕೊಂಡಂತಿದೆ.
ತಮ್ಮ ನಲ್ವತ್ತು ವರ್ಷಗಳ ರಾಜಕೀಯದಲ್ಲಿ ಮಾಡಲು ಸಾಧ್ಯವಾಗದೆ ಇರುವುದನ್ನೆಲ್ಲ ಆದಷ್ಟು ಬೇಗ ಮಾಡಿ ಮುಗಿಸುವ ಅವಸರದಲ್ಲಿದ್ದ ಹಾಗೆ ಕಾಣುತ್ತಿದ್ದಾರೆ. ರಾಜಕೀಯ ವಿಷಯದ ಮೂಲಕ ಅವರೊಡನೆ ಮಾತು ಪ್ರಾರಂಭಿಸಿದರೂ ಅದು ಬಹಳ ಬೇಗ ಅಭಿವೃದ್ಧಿ ಕಾರ್ಯಕ್ರಮಗಳ ಚರ್ಚೆಯ ತಿರುವು ಪಡೆಯುತ್ತಿತ್ತು.
ಗುಲ್ಬರ್ಗದಲ್ಲಿ ಹೆಲಿಕಾಪ್ಟರ್ ಆಕಾಶಕ್ಕೇರಿದ ಸ್ವಲ್ಪ ಹೊತ್ತಿನಲ್ಲಿಯೇ `ಇಲ್ಲಿ ಕೆಳಗೆ ನೋಡಿ' ಎಂದರು ಇಬ್ಬರೂ ನಾಯಕರು ಏಕಕಾಲಕ್ಕೆ. ಅಲ್ಲಲ್ಲಿ ನಿರ್ಮಾಣಗೊಂಡಿರುವ ಬ್ಯಾರೇಜ್‌ಗಳಿಂದಾಗಿ ಭೀಮಾ ನದಿಯಲ್ಲಿ ನೀರು ನಿಂತಿರುವುದು ಮತ್ತು ನದಿದಂಡೆಯಲ್ಲಿ ಹಸಿರು ನಳನಳಿಸುತ್ತಿರುವುದು ಎತ್ತರದಿಂದಲೂ ಸ್ಪಷ್ಟವಾಗಿ ಕಾಣುತ್ತಿತ್ತು.
ಭೀಮಾ, ಕಾಗಿನಾ, ಅಮರ್ಜಾ ನದಿದಂಡೆಗಳ ಮೇಲಿನ ಅಫ್ಜಲ್‌ಪುರ, ಜೇವರ್ಗಿ, ಶಹಬಾದ್, ಚಿಂಚೋಳಿ, ಮಾಗಾಂವ್‌ಗಳಲ್ಲಿಯೇ ಚುನಾವಣಾ ಪ್ರಚಾರದ ಸಭೆಗಳಿದ್ದ ಕಾರಣ ಹೆಲಿಕಾಪ್ಟರ್ ಈ ನದಿದಂಡೆಗಳ ಮೇಲಿನಿಂದಲೇ ಹಾರುತ್ತಿತ್ತು. ನದಿಗಳಲ್ಲಿ ನೀರು ಮತ್ತು ಹಸಿರು ನೋಡಿದಾಕ್ಷಣ ಇಬ್ಬರೂ ನಾಯಕರು `ಕೆಳಗೆ ನೋಡಿ' ಎಂದು ಹೇಳುತ್ತಲೇ ಇದ್ದರು.
`ಏನು ಮಾಡಿದ್ದಾರೆ ಎಂದು ಕೇಳುವವರಿಗೆ ಇದು ಯಾವುದು ಕಾಣುತ್ತಿಲ್ಲವೇ? ಈ ನದಿಗಳಿಗೆ ಸುಮಾರು 20-25 ಬ್ಯಾರೇಜ್ ನಿರ್ಮಿಸಲಾಗಿದೆ. ಇವುಗಳಿಗೆ ಕೇಂದ್ರ ಸರ್ಕಾರದ `ತ್ವರಿತ ನೀರಾವರಿ ಯೋಜನೆ'ಯಿಂದಲೇ ಹೆಚ್ಚಿನ ದುಡ್ಡು ಬಂದಿರುವುದು, ರಾಜ್ಯ ಸರ್ಕಾರ ಎಷ್ಟು ಕೊಟ್ಟಿದೆಯಂತೆ? ಪ್ರಶ್ನಿಸಿದರು ಧರ್ಮಸಿಂಗ್. `ನಮ್ಮ ಸಾಧನೆಯನ್ನು ಆಕಾಶದಲ್ಲಿ ತೋರಿಸುತ್ತೇನೆ' ಎಂದು ಹೇಳಿದ್ದೇ ಇದಕ್ಕಾಗಿ ಎಂದು ದನಿಗೂಡಿಸಿದರು ಖರ್ಗೆ.
ಹೆಲಿಕಾಪ್ಟರ್‌ನ ಮೊದಲ ನಿಲುಗಡೆಯಾಗಿ ಅಫ್ಜಲ್‌ಪುರದಲ್ಲಿ ಇಳಿದಾಗ ಎದುರಾದ ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಭೀಮಾ ನದಿ ದಂಡೆಯ ಬ್ಯಾರೇಜ್‌ಗಳ ವಿಷಯ ಬಿಟ್ಟು ಬೇರೇನೂ ಮಾತನಾಡಲಿಲ್ಲ.  `ಸೊನ್ನ, ಗಾಣಗಾಪುರ, ಗತ್ತರಗಿಗಳಲ್ಲಿ ನಿರ್ಮಾಣಗೊಂಡ ಬ್ಯಾರೇಜ್‌ಗಳಿಂದಾಗಿ ಸುಮಾರು 90ಗ್ರಾಮಗಳ ಜಮೀನಿಗೆ ನೀರು ಬಂದಿದೆ' ಎಂದು ಅವರು ಖರ್ಗೆ ಮತ್ತು ಧರ್ಮಸಿಂಗ್ ಅವರ ಮಾತುಗಳನ್ನು ದೃಡೀಕರಿಸಿದರು.
ಪ್ರಚಾರ ಸಭೆಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಲು ಪ್ರಾರಂಭಿಸುತ್ತಿದ್ದಂತೆಯೇ ಜನ ಜೈಕಾರ ಹಾಕತೊಡಗಿದ್ದರು. ಅವರು ಪ್ರತಿಬಾರಿ ಮುನ್ನೂರ ಎಪ್ಪತ್ತೊಂದು' ಹೇಳಿದಾಗಲೂ ಜನ ಹರ್ಷೋದ್ಗಾರ ಮಾಡುತ್ತಿದ್ದರು. ಸಭೆಯಲ್ಲಿ ಮಾತನಾಡುತ್ತಿದ್ದ ಇತರರು ಖರ್ಗೆ ಹೆಸರು ಹೇಳುತ್ತಿದ್ದಾಗಲೂ ಜನ ಜೈಕಾರ ಹಾಕುತ್ತಿದ್ದರು. ಇದರಿಂದ ಸ್ಪೂರ್ತಿ ಪಡೆದಂತೆ ಖರ್ಗೆ ಎಲ್ಲ ಕಡೆಗಳಲ್ಲಿ ಸಂವಿಧಾನದ 371ನೆ ಕಲಮಿಗೆ ಮಾಡಿದ ತಿದ್ದುಪಡಿಯ ವಿಷಯವನ್ನೇ ಪ್ರಚಾರದ ಪ್ರಮುಖ ವಿಷಯವನ್ನಾಗಿ ಮಾಡಿಕೊಂಡು ಮಾತನಾಡಿದರು.
`ಸಂವಿಧಾನದ 371ನೇ ಕಲಮಿಗೆ ತಿದ್ದುಪಡಿ ಮಾಡುವುದನ್ನು ವಿರೋಧಿಸಿದವರು ಬಿಜೆಪಿ ನಾಯಕರು. ಇದನ್ನು ಮಾಡಿದರೆ ದೇಶ `ತುಕುಡಿ ತುಕುಡಿ' ಆಗುತ್ತದೆ ಎಂದು ಆಗಿನ ಕೇಂದ್ರ ಗೃಹಸಚಿವ ಎಲ್.ಕೆ.ಅಡ್ವಾಣಿ ಹೇಳಿದ್ದರು. ವಿಶೇಷ ಸ್ಥಾನಮಾನ ಪಡೆದ ತೆಲಂಗಾಣ, ವಿದರ್ಭ, ಸೌರಾಷ್ಟ್ರ, ನಾಗಲ್ಯಾಂಡ್‌ಗಳು `ತುಕುಡಿ' ಆಗಿದೆಯೇ? ಎಂದು ಅವರು ಜನರನ್ನು ಪ್ರಶ್ನಿಸುತ್ತಿದ್ದರು.
`ಬಹಳ ಶ್ರಮಪಟ್ಟು ಎಲ್ಲರನ್ನು ಒಪ್ಪಿಸಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ತಿದ್ದುಪಡಿ ಮಾಡಿದ್ದೇವೆ. ಇದು ಸರಿಯಾಗಿ ಅನುಷ್ಠಾನಗೊಳ್ಳಬೇಕಾದರೆ ರಾಜ್ಯ ಸರ್ಕಾರದ ಸಹಕಾರ ಅಗತ್ಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಇದು ಸಾಧ್ಯ. ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಓಟು ಹಾಕಿ' ಎಂದು ಜನತೆಯ ಭಾವನೆಗಳನ್ನು ಮೀಟುವ ಕೆಲಸವನ್ನೂ ಅವರು ಮಾಡುತ್ತಿದ್ದರು.
ಚುನಾವಣಾ ಪ್ರಚಾರ ಸಭೆಗಳಲ್ಲಿ ಸಾಮಾನ್ಯವಾಗಿ ಒಂದು ಪಕ್ಷಕ್ಕೆ ಸೇರಿದ್ದ ಕಾರ್ಯಕರ್ತರು ಮತ್ತು ಬೆಂಬಲಿಗರೇ ಸೇರುವುದರಿಂದ ಪ್ರತಿಕ್ರಿಯೆ ನಿರೀಕ್ಷಿತ ಎಂದಿಟ್ಟುಕೊಂಡರೂ `ಅಭಿವೃದ್ಧಿಯ ಮಂತ್ರ'ಕ್ಕೆ ಜನ ತಲೆದೂಗುತ್ತಿರುವುದು ಹೊಸ ಬೆಳವಣಿಗೆ. ವೈಯಕ್ತಿಕ ಆರೋಪ-ಪ್ರತ್ಯಾರೋಪಗಳನ್ನು ಮೀರಿದ ಈ ರೀತಿಯ ಅಭಿವೃದ್ಧಿ ಕೇಂದ್ರಿತ ಚುನಾವಣಾ ಪ್ರಚಾರ ಈ ಕಾಲದ ಅಗತ್ಯ ಕೂಡಾ ಹೌದು.
ಮಾಗಾಂವ್‌ನಲ್ಲಿ ರಾತ್ರಿ ಹತ್ತುಗಂಟೆಗೆ ಪ್ರಚಾರ ಮುಗಿಸಿ ಗುಲ್ಬರ್ಗಕ್ಕೆ ಹಿಂದಿರುಗುತ್ತಿದ್ದಾಗ ಖರ್ಗೆ ಅವರು `ನಾವೇನು ಮಾಡಿದ್ದೇವೆ ಎನ್ನುವುದನ್ನು ಭೂಮಿಯ ಮೇಲೆಯೂ ನೋಡಿದರಲ್ಲಾ?' ಎಂದು ಕೇಳಿದರು. ಚಿಂಚೋಳಿ ಮೀಸಲು ಕ್ಷೇತ್ರದ ಕಾಳಗಿಗೆ ಹೋದ ನಂತರ ಹೆಲಿಕಾಪ್ಟರ್ ವಾಪಸು ಕಳಿಸಿದ್ದ ಕಾರಣ ರಸ್ತೆಯಿಂದಲೇ ಮಾಗಾಂವ್‌ಗೆ ಬಂದ ಖರ್ಗೆ ದಿನದ ಕೊನೆಯ ಪ್ರಚಾರ ಭಾಷಣ ಮುಗಿಸಿದ್ದರು.
`ಈ ವಯಸ್ಸಿನಲ್ಲಿ ಸತತ ಹನ್ನೆರಡು ಗಂಟೆ ಸುತ್ತಾಟ, ಪ್ರಚಾರ ಎಲ್ಲ ಸುಸ್ತು ಅನಿಸುವುದಿಲ್ಲವೇ? ಎಂದು ಖರ್ಗೆಯವರನ್ನು ಸುಮ್ಮನೆ ಕೆಣಕಿದೆ. `ನನಗೆ ವಯಸ್ಸಾಗಿದೆ ಎಂದು ನಿಮಗೆ ಅನಿಸುತ್ತಾ? ಎಂದು ಅವರು ಮರುಪ್ರಶ್ನಿಸಿದರು. `ಈ ಪ್ರಶ್ನೆಯನ್ನು ನೀವು ಕೇಳಬೇಕಾಗಿರುವುದು ನಿಮ್ಮ ಪಕ್ಷದ ಉಪಾಧ್ಯಕ್ಷರಾದ ರಾಹುಲ್‌ಗಾಂಧಿ ಅವರನ್ನು' ಎಂದೆ ತಮಾಷೆಯಾಗಿ.

Friday, April 26, 2013

ರಾಜ್ಯ ನಾಯಕತ್ವ ಕಳೆದುಕೊಳ್ಳಲಿರುವ ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ:  ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದ ಶಿವಮೊಗ್ಗ ಜಿಲ್ಲೆ ಈ ಬಾರಿಯ ವಿಧಾನಸಭಾ ಚುನಾವಣೆಯ ನಂತರ ಆ ಸ್ಥಾನವನ್ನು ಕಳೆದುಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ. ನಾಲ್ವರು ಮುಖ್ಯಮಂತ್ರಿಗಳು ಮತ್ತು ಆಡಳಿತಾರೂಢ ಪಕ್ಷಕ್ಕೆ ಸಿಂಹಸ್ವಪ್ನರಾಗಿದ್ದ ಸಮಾಜವಾದಿ ನಾಯಕ ಶಾಂತ
ವೇರಿ ಗೋಪಾಲಗೌಡರನ್ನು ರಾಜ್ಯಕ್ಕೆ ನೀಡಿದ ಶಿವಮೊಗ್ಗ ಜಿಲ್ಲೆಯು ರಾಜಕೀಯ ನಾಯಕತ್ವದ ಓಟದಲ್ಲಿ ಸದಾ ಪೈಪೋಟಿ ಕೊಡುತ್ತ ಬಂದಿದೆ.
ಕಾಗೋಡು ಸತ್ಯಾಗ್ರಹ ಮತ್ತು ರೈತ ಚಳವಳಿಯ ಹಿನ್ನೆಲೆಯಿಂದಾಗಿ ರಾಜಕೀಯವಾಗಿ ಜಾಗೃತವಾಗಿದ್ದ ಜಿಲ್ಲೆಯೂ ಹೌದು. ಈ ವಿಶೇಷಣಗಳನ್ನೆಲ್ಲ ಹೊಂದಿದ್ದ ಜಿಲ್ಲೆಯ ರಾಜಕೀಯ ಭವಿಷ್ಯ ಇದೇ ಮೊದಲ ಬಾರಿ ಮಂಕಾಗಿಹೋಗುವ ಭೀತಿ ಎದುರಿಸುತ್ತಿದೆ.
ಮೂರು ಬಾರಿ ಶಾಸಕರಾಗಿದ್ದ ಗೋಪಾಲಗೌಡರ ಕೈಯಲ್ಲಿ ಅಧಿಕಾರ ಇಲ್ಲದೆ ಇದ್ದರೂ ಸಮಾಜವಾದಿ ಚಳವಳಿಯ ಮೂಲಕ ಅವರು ಇಡೀ ರಾಜ್ಯದ ಮನೆಮಾತಾಗಿದ್ದರು. ಅವರ ನಂತರದ ದಿನಗಳಲ್ಲಿ ರಾಜಕೀಯ ನಾಯಕರಾಗಿ ಬೆಳೆದ ಎಸ್.ಬಂಗಾರಪ್ಪ, ಜೆ.ಎಚ್.ಪಟೇಲ್, ಕಾಗೋಡು ತಿಮ್ಮಪ್ಪ ಮೊದಲಾದವರು ಅದೇ ಚಳವಳಿಯ ಉತ್ಪನ್ನಗಳು.
ಕಡಿದಾಳು ಮಂಜಪ್ಪನವರು ಕಿರು ಅವಧಿಗೆ ಮುಖ್ಯಮಂತ್ರಿಯಾಗಿದ್ದರೂ ತಮ್ಮ ಪ್ರಾಮಾಣಿಕ ಜೀವನದ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾದವರು. ಅದರ ನಂತರ ಪ್ರಾರಂಭವಾಗಿದ್ದು ಸಾರೆಕೊಪ್ಪ ಬಂಗಾರಪ್ಪ ಎಂಬ ಬಿರುಗಾಳಿ ನಾಯಕನ ಶಕೆ. ಅವರ ರಾಜಕೀಯ ಅವಸಾನದೊಂದಿಗೆ ಮೂಡಿ ಬಂದವರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಇವರಿಬ್ಬರ ನಡುವೆ ಕಾಣಿಸಿಕೊಂಡ ಜೆ.ಎಚ್. ಪಟೇಲ್ ಜನತಾ ಪರಿವಾರದ ಪ್ರಮುಖ ನಾಯಕರಾಗಿ ಕೊನೆಗೆ ಮುಖ್ಯಮಂತ್ರಿಯೂ ಆದವರು. ಈಗ ಉಳಿದಿರುವವರು ಬಿ.ಎಸ್. ಯಡಿಯೂರಪ್ಪ ಮಾತ್ರ. ಇವರು `ಮಾಡು ಇಲ್ಲವೆ ಮಡಿ' ಎನ್ನುವಷ್ಟು ನಿರ್ಣಾಯಕವಾದ ಚುನಾವಣಾ ರಣರಂಗದ ಮಧ್ಯದಲ್ಲಿದ್ದಾರೆ.
ಬಂಗಾರಪ್ಪನವರದ್ದು ವರ್ಣರಂಜಿತ ವ್ಯಕ್ತಿತ್ವ. ಕಿರುವಯಸ್ಸಿಗೆ ಶಾಸಕರಾಗಿ ನಂತರ ಸಚಿವರೂ ಆಗಿಬಿಟ್ಟ ಬಂಗಾರಪ್ಪ 1983ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿಗಳ ಕಣ್ಮಣಿಯಾಗಿದ್ದರು. ಕ್ರಾಂತಿರಂಗದ ನೇತೃತ್ವ ವಹಿಸಿ ರಾಜ್ಯದ ಮೊದಲ ಕಾಂಗ್ರೆಸೇತರ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದರೂ ಪರಿಸ್ಥಿತಿಯ ಪಿತೂರಿಯಿಂದಾಗಿ ಮುಖ್ಯಮಂತ್ರಿಯಾಗಲು ಮಾತ್ರ ಆಗ ಸಾಧ್ಯವಾಗಿರಲಿಲ್ಲ. ಆ ಚುನಾವಣಾ ಕಾಲದಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿದ ಬಂಗಾರಪ್ಪ ತಮ್ಮ ಸ್ವಂತ ಕ್ಷೇತ್ರ ಸೊರಬಕ್ಕೆ ಭೇಟಿ ನೀಡದೆ ಗೆದ್ದವರು.
ತಮ್ಮ ಪ್ರಚಾರದ ಅಂಗವಾಗಿ ಮನೆಮನೆಗೂ ಕಳುಹಿಸಿಕೊಟ್ಟ ಕಪ್ಪುಕನ್ನಡ ಮತ್ತು ಕಪ್ಪು ಅಂಗಿ ಧರಿಸಿದ್ದ ಅವರ ಭಾವಚಿತ್ರ ಸೊರಬದ ಹಲವಾರು ಮನೆಗಳ ದೇವರ ಪೋಟೊಗಳ ಸ್ಟ್ಯಾಂಡ್‌ನಲ್ಲಿ ಈಗಲೂ ಇವೆ. ನಂತರದ ದಿನಗಳಲ್ಲಿ ಭ್ರಷ್ಟಾಚಾರದ ಆರೋಪ, ಬಂಡಾಯ, ಪಕ್ಷಾಂತರಗಳು ಅವರ ರಾಜಕೀಯ ಜೀವನದ ಭಾಗವೇ ಆಗಿಹೋಯಿತು. ಮುಖ್ಯಮಂತ್ರಿಯಾಗಿ, ಸಚಿವರಾಗಿ ಅವರು ಅಧಿಕಾರ ಅನುಭವಿಸಿದ್ದು ಕಡಿಮೆ ಅವಧಿಗೆ ಆಗಿದ್ದರೂ ಬಂಗಾರಪ್ಪನವರ ಹೆಸರು ಗೊತ್ತಿಲ್ಲದವರು ರಾಜ್ಯದಲ್ಲಿ ಇರಲಾರರು. ಕೊನೆಯವರೆಗೂ ರಾಜಕೀಯವಾಗಿ ತಮ್ಮನ್ನು ಕಡೆಗಣಿಸಲಾಗದ ರೀತಿಯಲ್ಲಿ ಅವರು ಬದುಕಿದವರು. ಅವರ ರಾಜಕೀಯ ಜೀವನದ ಅಂತ್ಯ ಸೋಲುಗಳಲ್ಲಿ ಕೊನೆಗೊಂಡರೂ ಬದುಕಿದ್ದರೆ ಮತ್ತೆ ಈ ಬಾರಿ ಚುನಾವಣೆಯ ಕಣದಲ್ಲಿರುತ್ತಿದ್ದರೇನೋ?
ಛಲದಂಕಮಲ್ಲ: ಸ್ವಂತ ಊರು ಶಿವಮೊಗ್ಗ ಅಲ್ಲದೆ ಇದ್ದರೂ ಮನೆ ಅಳಿಯನಾಗಿ ಬಂದು ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶ ಮಾಡಿ ರಾಜ್ಯದ ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆದ ಬಿ.ಎಸ್.ಯಡಿಯೂರಪ್ಪ ಅವರು ಬಂಗಾರಪ್ಪನವರ ರೀತಿಯಲ್ಲಿಯೇ ಛಲದಂಕಮಲ್ಲ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಬಿಜೆಪಿ  ಅಧಿಕಾರಕ್ಕೆ ತಂದವರೆಂಬ ಹೆಗ್ಗಳಿಕೆಗೂ ಪಾತ್ರರಾದವರು. ರಾಜಕೀಯ ಹೋರಾಟ, ಗೆಲುವಿನ ಸಾಧನೆ, ಭ್ರಷ್ಟಾಚಾರದ ಆರೋಪ, ಬಂಡಾಯದ ಬೆದರಿಕೆ, ಪಕ್ಷಾಂತರ ಹೀಗೆ ಇವರು ಸದಾ ಸುದ್ದಿಯ ಬೆಳಕಲ್ಲಿದ್ದವರು.
ಯಡಿಯೂರಪ್ಪನವರು ಭವಿಷ್ಯದ ರಾಜಕೀಯದಲ್ಲಿ ಪ್ರಸ್ತುತವಾಗಿ ಉಳಿಯಬೇಕಾದರೆ ಶಿವಮೊಗ್ಗ ಜಿಲ್ಲೆಯನ್ನು ಅವರು ಗೆಲ್ಲಬೇಕು. ಈಗಿನ ಪರಿಸ್ಥಿತಿಯಲ್ಲಿ ಜಿಲ್ಲೆಯ ಶಿಕಾರಿಪುರ ಹೊರತುಪಡಿಸಿ ಬೇರೆ ಕ್ಷೇತ್ರಗಳಲ್ಲಿ ಗೆಲ್ಲಬಲ್ಲ ಕರ್ನಾಟಕ ಜನತಾ ಪಕ್ಷದ (ಕೆಜೆಪಿ)  ಅಭ್ಯರ್ಥಿಗಳು ಯಾರೂ ಕಾಣುತ್ತಿಲ್ಲ. ಶಿಕಾರಿಪುರದಲ್ಲಿಯೂ ಅವರು ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪಗೌಡ ಅವರಿಂದ ಪ್ರಬಲ ಸ್ಪರ್ಧೆ ಎದುರಿಸುತ್ತಿದ್ದಾರೆ.
ಮೂರು ದಶಕಗಳಲ್ಲಿ ಶಿವಮೊಗ್ಗ ಮೂಲದ ಈ ಇಬ್ಬರು ನಾಯಕರು ರಾಜ್ಯ ರಾಜಕಾರಣವನ್ನು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ನಿಯಂತ್ರಿಸುತ್ತಾ ಬಂದಿದ್ದಾರೆ. ಎಂಬತ್ತರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಬಂಗಾರಪ್ಪನವರ ಬೆಂಬಲಿಗರು ಆರಿಸಿ ಬರುತ್ತಿದ್ದರೆ, ಎರಡು ಸಾವಿರದ ದಶಕದಲ್ಲಿ ಯಡಿಯೂರಪ್ಪನವರ ಬೆಂಬಲಿಗರು ಜಿಲ್ಲೆಯ ಬಹುತೇಕ ಸ್ಥಾನಗಳನ್ನು ಗೆದ್ದಿದ್ದರು. ಈ ಇಬ್ಬರು ನಾಯಕರಿಗೂ ರಾಜ್ಯಮಟ್ಟದ ನಾಯಕರಾಗಿ ಬೆಳೆಯುವಂತಹ ಶಕ್ತಿ ನೀಡಿದ್ದು ತವರು ಜಿಲ್ಲೆಯಲ್ಲಿ ಮಾಡಿದ್ದ ಸಾಧನೆ.
ಇತ್ತೀಚಿನ ಈ ಇಬ್ಬರು ಹಿರಿಯ ನಾಯಕರ  ರೀತಿಯಲ್ಲಿಯೇ ರಾಜ್ಯಕ್ಕೆ ನಾಯಕತ್ವ ನೀಡಬಲ್ಲ ಇನ್ನೊಬ್ಬ ನಾಯಕ ಸದ್ಯ ಜಿಲ್ಲೆಯಲ್ಲಿರುವ ಯಾವ ರಾಜಕೀಯ ಪಕ್ಷದಲ್ಲಿಯೂ ಕಾಣುತ್ತಿಲ್ಲ. ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿರುವ ಹಿರಿತಲೆ -ಕಾಗೋಡು ತಿಮ್ಮಪ್ಪ ಮಾತ್ರ. ಗೆಲುವಿನ ಮೂಲಕ ಗೌರವಯುತವಾಗಿ ರಾಜಕೀಯದಿಂದ ನಿವೃತ್ತಿಯಾಗಬೇಕೆಂಬ ಆಸೆ ಇಟ್ಟುಕೊಂಡಂತಿರುವ ಇವರಲ್ಲಿ ಹೆಚ್ಚಿನ ಮಹತ್ವಾಕಾಂಕ್ಷೆ ಇಲ್ಲ.
82 ವರ್ಷ ವಯಸ್ಸಿನ ಈ ಹಿರಿಯನಲ್ಲಿ ಅಂತಹ ಚೈತನ್ಯವೂ ಉಳಿದ ಹಾಗಿಲ್ಲ. ಸಾಗರದ ಮಾಲ್ವೆ ಎಂಬ ಊರಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಗೋಡು ಅಲ್ಲಿ ಸೇರಿದ್ದ ಬೆಂಬಲಿಗರನ್ನು ಎದುರಿಗೆ ಕರೆದು `ಇವರೆಲ್ಲ ಹಳೆಯ ತಲೆಮಾರಿನವರು, ಅದರ ನಂತರದವರು ಇವರು, ಇವರ ನಂತರ ಈ ಮಕ್ಕಳು' ಎಂದು ವರ್ಗವಿಂಗಡಣೆ ಮಾಡಿ ನಮಗೆ ಪರಿಚಯಿಸಿದರು.
ಮೊದಲ ತಲೆಮಾರಿನ ಹಿರಿಯರ ಮಾತು ಮತ್ತು ಬಾಗಿದ ತಲೆಗಳು ಈಗಲೂ ನಾಯಕನ ಬಗ್ಗೆ ಪ್ರೀತಿ-ಗೌರವವನ್ನು ಸೂಚಿಸುವಂತಿತ್ತು. ಹಳೆಯ ನೆನೆಪುಗಳೇ ಇಲ್ಲದ ಯುವಕರಲ್ಲಿ ಒಂದು ಬಗೆಯ ನಿರಾಸಕ್ತಿ, ಉಳಿದಂತೆ ಮಕ್ಕಳು ಸೇರಿರುವುದು ಹಂಚುವ ಚಾಕಲೇಟ್‌ಗಳಿಗಾಗಿ ಮಾತ್ರ.
ಚಳವಳಿ ಪ್ರೇರಿತ ರಾಜಕೀಯದ ಮೂಲಕ ಬಂದ ಕಾಗೋಡು ತಿಮ್ಮಪ್ಪನವರಂತಹವರು  ತಮ್ಮ ಸಂಬಂಧಿ ಬೇಳೂರು ಗೋಪಾಲಕೃಷ್ಣ ಎಂಬ ಗಣಿಸಂಸ್ಕೃತಿಯ ಪ್ರಭಾವಕ್ಕೊಳಗಾಗಿರುವ ಅಭ್ಯರ್ಥಿ ಎದುರು ಕಳೆದೆರಡು ಚುನಾವಣೆಗಳನ್ನು ಸೋತಿರುವುದು ಶಿವಮೊಗ್ಗ ಜಿಲ್ಲೆಯ ರಾಜಕೀಯ ಸಾಗುತ್ತಿರುವ ಹಾದಿ  ತೋರಿಸುವಂತಿದೆ. ಇದು ತಿಮ್ಮಪ್ಪನವರು ಪರಿಚಯಿಸಿದ  ಮೂರು ತಲೆಮಾರುಗಳ ಪ್ರತಿಕ್ರಿಯೆಗಳಿಂದಲೂ ಸ್ಪಷ್ಟವಾಗುತ್ತದೆ.
ಬಿಜೆಪಿಯಲ್ಲಿರುವ ಕೆ.ಎಸ್.ಈಶ್ವರಪ್ಪ ತನ್ನ ಗೆಲುವಿಗಾಗಿಯೇ ಏದುಸಿರುಬಿಡುತ್ತಿದ್ದಾರೆ. ಇನ್ನು ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಪಕ್ಷದ ನಾಯಕರಾಗುವುದು ಅಷ್ಟರಲ್ಲಿಯೇ ಇದೆ. ಬಂಗಾರಪ್ಪನವರ ಇಬ್ಬರು ಮಕ್ಕಳಾದ ಕುಮಾರ್ ಮತ್ತು ಮಧು ಚುನಾವಣಾ ಕಣದಲ್ಲಿದ್ದರೂ ಮನೆಯೊಳಗಿನ ಜಗಳದಿಂದಾಗಿ ಪರಸ್ಪರ ಕಾದಾಡುತ್ತ ತಮ್ಮ ರಾಜಕೀಯ ಜೀವನವನ್ನು ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಂಗಾರಪ್ಪನವರ ಶಿಷ್ಯರಾಗಿದ್ದ ಎಚ್. ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಅವರಿಗೆ ತಮ್ಮ ಕ್ಷೇತ್ರಗಳಲ್ಲಿ ಗೆದ್ದರೆ ಸಾಕೆನಿಸಿದೆ.
ಇದೇ ರೀತಿ ಯಡಿಯೂರಪ್ಪನವರ ಮಗ ರಾಘವೇಂದ್ರ ರಾಜಕೀಯ ಪ್ರವೇಶದ ಪ್ರಾರಂಭದ ಹಂತದಲ್ಲಿಯೇ ಭ್ರಷ್ಟಾಚಾರ, ಪಕ್ಷಾಂತರದ ಆರೋಪಗಳನ್ನು ಹೊತ್ತುಕೊಂಡಿದ್ದಾರೆ. ಇವರಲ್ಲಿ ಯಾರೂ ರಾಜ್ಯಮಟ್ಟದ ನಾಯಕರಾಗಿ ಬೆಳೆಯಬಲ್ಲರೆಂಬ ನಿರೀಕ್ಷೆಯನ್ನು ಹುಟ್ಟಿಸುವುದಿಲ್ಲ. ಅಂತಹ ಮಹತ್ವಾಕಾಂಕ್ಷೆಯೂ ಅವರಲ್ಲಿದ್ದ ಹಾಗೆ ಕಾಣುವುದಿಲ್ಲ.
ರಾಜ್ಯ ರಾಜಕೀಯದಲ್ಲಿ ಶಿವಮೊಗ್ಗ ಜಿಲ್ಲೆಯ ಪತಾಕೆ ಎತ್ತಿಹಿಡಿಯುವ ಸಾಮರ್ಥ್ಯ ಈಗಲೂ ಇರುವುದು ಯಡಿಯೂರಪ್ಪನವರಿಗೆ ಮಾತ್ರ. ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸಿ 1994ರ ಚುನಾವಣೆಯಲ್ಲಿ ಸ್ವಂತ ಪಕ್ಷ ಕಟ್ಟಿ ಎದುರಿಸಿದ ಬಂಗಾರಪ್ಪನವರು ಅಧಿಕಾರ ಗಳಿಸುವಷ್ಟು ಸ್ಥಾನಗಳನ್ನು ಗಳಿಸದೆ ಇದ್ದರೂ ಕಾಂಗ್ರೆಸ್ ಪಕ್ಷದ ಪರಾಭವಕ್ಕೆ ಕಾರಣವಾಗಿದ್ದರು. ಯಡಿಯೂರಪ್ಪನವರೂ ಅದೇ ಹಾದಿಯಲ್ಲಿದ್ದಾರೆ.
ಬಂಗಾರಪ್ಪನವರಂತೆ ಗೆದ್ದು ಅಧಿಕಾರಕ್ಕೆ ಬರುವಂತಹ ಶಕ್ತಿ ಯಡಿಯೂರಪ್ಪನವರಿಗೂ ಈಗ ಇಲ್ಲದೆ ಇದ್ದರೂ ಬಿಜೆಪಿಯ ಸೋಲಿಗೆ ಕಾರಣವಾಗಬಲ್ಲರು. ಬಿಜೆಪಿ ವಿರುದ್ಧ ದ್ವೇಷ ಸಾಧನೆಗೆ ಒಳಗಿಂದೊಳಗೆ ತಹತಹಿಸುತ್ತಿರುವ ಯಡಿಯೂರಪ್ಪ ಇದಕ್ಕಾಗಿ ಕಾಂಗ್ರೆಸ್ ಜತೆಯಲ್ಲಿ ಹೊಂದಾಣಿಕೆ ಮಾಡಿಕೊಂಡರೂ ಆಶ್ಚರ್ಯ ಇಲ್ಲ. ಆದರೆ ಕಾಂಗ್ರೆಸ್ ಪಕ್ಷದಿಂದ ಸಿಡಿದುಹೋದ ನಂತರ ಬಂಗಾರಪ್ಪನವರು ಮತ್ತೆ ತಮ್ಮ ರಾಜಕೀಯ ಜೀವನದ ವೈಭವವನ್ನು ಮರಳಿ ಪಡೆಯಲಾಗಿಲ್ಲ. ತಂತಿಮೇಲೆ ನಡೆಯುತ್ತಿರುವ ಯಡಿಯೂರಪ್ಪನವರು ಅದೇ ಅಪಾಯವನ್ನು ಎದುರಿಸುತ್ತಿದ್ದಾರೆ. ಜಾರಿಬಿದ್ದರೆ ಶಿವಮೊಗ್ಗ ಜಿಲ್ಲೆಯನ್ನು ಕಟ್ಟಿಕೊಂಡೇ ಕೆಳಗೆ ಬೀಳಬಹುದು.