Saturday, June 18, 2016

ನಕ್ಷತ್ರದ ಧೂಳು

ಎಲ್ಲಿದೆ ಜಾತಿ? ಎಲ್ಲಿದೆ ಅಸ್ಪೃಶ್ಯತೆ? ಎಂದು ಉಡಾಫೆಯಿಂದ ಮೀಸಲಾತಿಯನ್ನು ಪ್ರಶ್ನಿಸುವವರು, ಸಾಮಾಜಿಕ ನ್ಯಾಯದ ಸಿದ್ದಾಂತವನ್ನು ಗೇಲಿಮಾಡುವವರು, ಮೀಸಲಾತಿಯ ಫಲಾನುಭವಿಗಳನ್ನು ಹಂಗಿಸುವವವರು ಕಣ್ಣೀರಾಗಿ ಹೋಗಿರುವ ರೋಹಿತ ವೇಮುಲನ ಅಮ್ಮನಲ್ಲಿ ಈ ಪ್ರಶ್ನೆಗಳನ್ನು ಕೇಳಿ ಎದೆಮುಟ್ಟಿಕೊಳ್ಳಬೇಕು. ಸಾಧ್ಯವಾದರೆ ತಮ್ಮ ಮುಖಗಳನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಬೇಕು.
ಇದು ಕೇವಲ ಒಬ್ಬ ರೋಹಿತನ ಕತೆಯೆಂದು, ಇದು ಕೇವಲ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದೊಳಗೆ ಮಾತ್ರ ನಡೆಯುತ್ತಿರುವ ಅಮಾನುಷ ನಡವಳಿಕೆಯೆಂದು ತಿಳಿದುಕೊಂಡವರು ಮೂರ್ಖರು. ದೇಶದ ವಿಶ್ವವಿದ್ಯಾಲಯಗಳ ಒಳಹೊಕ್ಕು ನೋಡಿದರೆ ಒಂದು ಕೈಯಲ್ಲಿ ವಿಷದ ಬಾಟಲಿ, ಇನ್ನೊಂದು ಕೈಯಲ್ಲಿ ನೇಣಿನ ಹಗ್ಗ ಹಿಡಿದುಕೊಂಡ ನೂರಾರು ರೋಹಿತ ವೇಮುಲರನ್ನು ಕಾಣಬಹುದು. ನಾವಿಂದು ಯೋಚಿಸಬೇಕಾಗಿರುವುದು ಅನ್ಯಾಯ-ಅವಮಾನಗಳನ್ನು ನುಂಗಿಕೊಂಡು ಉಳಿದುಕೊಂಡವರನ್ನು ಉಳಿಸಿಕೊಳ್ಳುವುದು ಹೇಗೆ ಎಂದು.

Wednesday, June 8, 2016

ಮುಂಗಾರು ಪತ್ರಿಕೆ: ವಿಧಾನಸಭೆಯೇ ಬರಲಿದೆ ಜಿಲ್ಲೆಗೆ..

ಇದು ೩೮ನೇ ಸ್ವಾತಂತ್ರ್ಯೋತ್ಸವದಂದು ಮುಂಗಾರು ಪತ್ರಿಕೆಗೆ ನಾನು ಮಾಡಿದ್ದ ನೀರುಸಾಬರ ಸಂದರ್ಶನ. ಪ್ರವಾದಿಯಂತೆ ಅಂದು ಅವರು ವ್ಯಕ್ತಪಡಿಸಿದ್ದ ಅನೇಕ ಅಭಿಪ್ರಾಯಗಳುಇಂದು ನಿಜವಾಗಿದೆ.
ಮಾತುಕತೆ ಮುಗಿದ ನಂತರ ನನ್ನೂರಿನ ಬಗ್ಗೆ ವಿಚಾರಿಸಿದ್ದರು. ನಾನು ನಮ್ಮೂರಿನ ಕುಡಿಯುವ ನೀರಿನ ಸಮಸ್ಯೆಯನ್ನು ಸ್ವಲ್ಪ ಭಾವುಕವಾಗಿಯೇ ವಿವರಿಸಿದ್ದೆ. ತಕ್ಷಣ ಅವರು PHE ಎಂಜನಿಯರ್ ಅವರನ್ನು ಕರೆಸಿ ನಮ್ಮೂರಿಗೊಂದು ಬೋರ್ ವೆಲ್ ಹಾಕಲು.ಆದೇಶಿಸಿದ್ದರು. ಅದು ನಮ್ಮೂರಿನ ಮೊದಲ ಬೋರ್ ವೆಲ್. ಈಗ ಅದು ಬತ್ತಿಹೋಗಿದೆ, ಆದರೆ ಅವರ ನೆನಪು ಮಾತ್ರ ಎಂದೂ ಬತ್ತಿ ಹೋಗದು.
ಅವರು ನಿಧನರಾದಾಗ 'ಅಲ್ಲಾ ನೀಡಿದ ವಿಚಿತ್ರ ಪವಾಡ' ಎಂಬ ದೀರ್ಘವಾದ Obituary ಬರೆದಿದ್ದೆ. ಹುಡುಕಿದರೆ ಸಿಗಬಹುದು.
ಅಂದ ಹಾಗೆ ಈ ಫೊಟೋದಲ್ಲಿರುವ ಸಂದರ್ಶಕ ನಾನೇ. ಇದಕ್ಕೆ ಸಾಕ್ಷಿ ಕೇಶವ ವಿಟ್ಲ, ಅವನೇ ಫೋಟೋ ತೆಗೆದದ್ದು.

Monday, June 6, 2016

ಮುಂಗಾರು ಇಂದಿಗೂ ಉಳಿದಿದ್ದರೆ ಅವಿಭಜಿತ ದಕ್ಷಿಣ ಕನ್ನಡ ತಥಾಕಥಿತ ‘ಹಿಂದುತ್ವದ ಪ್ರಯೋಗಶಾಲೆ’; ಖಂಡಿತ ಆಗುತ್ತಿರಲಿಲ್ಲ

ಮುಂಗಾರು ಪತ್ರಿಕೆಯಲ್ಲಿ ನಾನು ಮಾಡಿದ್ದ ವರದಿಯೊಂದನ್ನು ಉಲ್ಲೇಖಿಸಿ ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ ಮೂಡಿರುವ ಗೊಂದಲ ನಿವಾರಣೆಗೆ ಈ ಪ್ರಯತ್ನ. ಭಿನ್ನಾಭಿಪ್ರಾಯಕ್ಕೆ ಸ್ವಾಗತ.
ವೃತ್ತಿಯಾಗಿದ್ದ ಮಾಧ್ಯಮ ಕ್ಷೇತ್ರ ಸಂಪೂರ್ಣವಾಗಿ ಉದ್ಯಮವಾಗಿ ಬದಲಾವಣೆಯಾಗಿರುವ ವಾಸ್ತವವನ್ನು ಒಪ್ಪಿಕೊಂಡು ಇಂದಿನ ಪತ್ರಕರ್ತರು ಕೆಲಸಮಾಡಬೇಕಾದ ಪರಿಸ್ಥಿತಿ ಇದೆ.. ಈ ಬಗ್ಗೆ ಆಕ್ಷೇಪ ಇದ್ದವರು ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ. ಇದರ ಬದಲಿಗೆ ‘’ನಾನು ಒಳಗಿದ್ದೇ ಹೋರಾಡುತ್ತೇನೆ, ಇವರನ್ನೆಲ್ಲ ಬಯಲುಮಾಡುತ್ತೇನೆ, ಇದನ್ನು ಬದಲಾಯಿಸಿಯೇ ತೀರುತ್ತೇನೆ ಎಂದು ಹೊರಟವರ ಹೋರಾಟ ತಕ್ಷಣದ ಫಲ ನೀಡಲಾರದು. ಆ ಹೋರಾಟದ ಹಾದಿ ಹಿಡಿದರೆ ಪತ್ರಕರ್ತನಾಗಿ ತಾನು ಮಾಡಬಯಸಿದ್ದನ್ನು ಕೂಡಾ ಮಾಡಲಾಗದೆ ಕೊರಗುತ್ತಾ ಇರಬೇಕು- ಇದು ನನ್ನ ಖಚಿತ ಅಭಿಪ್ರಾಯ.
‘ಏನ್ಸಾರ್, ನೀವೂ ಹೀಗೆ ಹೇಳಿದರೆ ಹೇಗೆ? ಎಂದು ನನ್ನ ಯುವಪತ್ರಕರ್ತ ಮಿತ್ರರು ನನ್ನನ್ನು ದಬಾಯಿಸಬಹುದು. ಉದ್ಯಮಿಗಳ ಹಿಡಿತದಿಂದ ಮಾಧ್ಯಮ ಕ್ಷೇತ್ರವನ್ನು ಬಿಡುಗಡೆಗೊಳಿಸುವುದು ಸುದೀರ್ಘವಾದ ಹೋರಾಟ. ಅದು ನನ್ನ ತಲೆಮಾರಿನಲ್ಲಿ ಮುಗಿಯುವ ಭರವಸೆ ನನಗಿಲ್ಲವಾದರೂ ಈ ಹೋರಾಟ ವ್ಯರ್ಥ ಎಂದು ನಾನು ಹೇಳಲಾರೆ. ಈ ಹೋರಾಟ ಮುಂದುವರಿಯಬೇಕು. ನ್ಯಾಯಾಲಯದ ಒಂದು ತೀರ್ಪು, ಜ್ಞಾನೋದಯದ ಫಲವಾಗಿ ಶಾಸಕಾಂಗ ಕೈಗೊಳ್ಳುವ ಒಂದು ಜನಪರ ತೀರ್ಮಾನ ಎಲ್ಲವನ್ನೂ ಬದಲಾಯಿಸಿಬಿಡಬಹುದೇನೋ? ಆ ಭರವಸೆ ನಮ್ಮಲಿರಲಿ.
ಆದರೆ ಆ ದಿನ ಬರುವ ವರೆಗೆ ನಾನು ಪೆನ್ ಕೈಗೆತ್ತಿಕೊಳ್ಳುವುದಿಲ್ಲ ಕೀಪ್ಯಾಡ್ ಮುಟ್ಟುವುದೇ ಇಲ್ಲ ಎಂದು ಪತ್ರಕರ್ತರು ತೀರ್ಮಾನ ಕೈಗೊಂಡರೆ ಅದು ಮೂರ್ಖತನವಾಗುತ್ತದೆ. ನಮ್ಮಂತಹವರೆಲ್ಲ ಐಕಾನ್ ಎಂದು ಸ್ವೀಕರಿಸಿರುವ ಪಿ.ಸಾಯಿನಾಥ್ ‘ Everybody loves a good drought’ ಪುಸ್ತಕದ ಲೇಖನಗಳನ್ನು ಬರೆದಿರುವುದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಎನ್ನುವುದನ್ನು ಮರೆಯಬಾರದು. ಸಾಯಿನಾಥ್ ತನ್ನದೊಂದು ಆಸಕ್ತಿಯ ಕ್ಷೇತ್ರವನ್ನು ಹುಡುಕಿಕೊಳ್ಳದೆ ಮೊದಲು ಟೈಮ್ಸ್ ಆಫ್ ಇಂಡಿಯಾದೊಳಗೆ ಸಂಪಾದಕೀಯ ವಿಭಾಗದ ತಲೆಮೇಲೆ ಕೂತಿರುವ ಜಾಹಿರಾತು ವಿಭಾಗದವರ ವಿರುದ್ಧವೇ ಬರೆಯುತ್ತೇನೆ, ಇಲ್ಲದೆ ಇದ್ದರೆ ಅದರ ಮಾಲೀಕರಾದ ಜೈನ್ ಬಳಗದ ಉದ್ಯಮದ ಬಗ್ಗೆಯೇ ತನಿಖಾ ವರದಿ ಮಾಡುತ್ತೇನೆ ಎಂದು ಹೊರಟಿದ್ದರೆ ನಮಗೊಬ್ಬ ಸಾಯಿನಾಥ್ ಸಿಗುತ್ತಿರಲಿಲ್ಲ. 
ಸಾಯಿನಾಥ್ ಕೆಲಸ ಮಾಡಿದ ಪತ್ರಿಕೆಗಳಲ್ಲೆಲ್ಲಾ ಇಂತಹ ಬಿಕ್ಕಟ್ಟುಗಳಿದ್ದವು. ಕಾಸಿಗಾಗಿ ಸುದ್ದಿ ಹಗರಣದ ಬಗ್ಗೆ ಅವರು ಬರೆದದ್ದು ಇತ್ತೀಚಿನ ವರ್ಷಗಳಲ್ಲಿ. ಅಲ್ಲಿಯ ವರೆಗೆ ಸುದ್ದಿಯ ಛದ್ಮವೇಷದಲ್ಲಿ ಪ್ರಕಟಗೊಳ್ಳುತ್ತಿರುವ ಜಾಹೀರಾತು ಬಗ್ಗೆ ಅವರಿಗೆ ಗೊತ್ತಿರಲಿಲ್ಲವೇ? ಖಂಡಿತ ಗೊತ್ತಿತ್ತು. ಆದರೆ ಅವರ ಆದ್ಯತೆ ಬೇರೆ ಇತ್ತು. ಈ ವಿವೇಚನೆ ಒಬ್ಬ ಪತ್ರಕರ್ತನಿಗೆ ಇರಬೇಕೆಂದು ನನ್ನ ಅಭಿಪ್ರಾಯ. ಇದನ್ನು ಪ್ರಾಯೋಗಿಗ ನೋಟ ಎನ್ನುತ್ತಿರೋ? ವ್ಯವಸ್ಥೆಯ ಜತೆ ರಾಜೀ ಎನ್ನುತ್ತಿರೋ ಇದು ನಿಮಗೆ ಬಿಟ್ಟದ್ದು.
ನಾನು ಪ್ರಜಾವಾಣಿಯಲ್ಲಿದ್ದಾಗ ಹೊಸಬರ ನೇಮಕದ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದೆ. ಹೆಚ್ಚಿನವರಿಗೆ ವರದಿಗಾರರಾಗಬೇಕೆಂಬ ಅದರಲ್ಲೂ ರಾಜಕೀಯ ವರದಿಗಾರರಾಗುವ ಆಸೆ. ಯಾರೊಬ್ಬರೂ ‘’ನನಗೆ ಸಾಯಿನಾಥ್ ರೀತಿಯ ಪತ್ರಕರ್ತನಾಗಬೇಕೆಂಬ ಉದ್ದೇಶ ಎಂದು ಹೇಳಿದ್ದನ್ನು ಕೇಳಿರಲಿಲ್ಲ. ಇದು ನಮ್ಮ ಸಮಸ್ಯೆ.
ಆರು ವರ್ಷಗಳ ಹಿಂದೆ ನಾನು ತೀರಾ ಅನಾರೋಗ್ಯದಿಂದ ಚೇತರಿಸಿಕೊಂಡು ಕಚೇರಿಗೆ ಬಂದಾಗ ನಮ್ಮ ಸಂಪಾದಕರು ರಾಜ್ಯದಲ್ಲಿ ಅತಿವೃಷ್ಟಿ ಪೀಡಿತ ಪ್ರದೇಶದ ಪರಿಹಾರ ಕಾರ್ಯದ ಬಗ್ಗೆ ಹೋಗಿ ವರದಿಮಾಡಿ ಎಂದರು. ಆಗಿನ್ನೂ ನಾನೂ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ, ಯಾರಾದರೂ ಕಿರಿಯರು ತಾವು ಹೋಗ್ತೇವೆ ಎಂದು ಕೈ ಎತ್ತಬಹುದೇ ಎಂದು ಕಾದೆ. ಯಾರೂ ಕಾಣಲಿಲ್ಲ. ಈಗ ಪತ್ರಿಕೋದ್ಯಮದ ಬಗ್ಗೆ ತಮ್ಮ ಅಂಕಣಗಳಲ್ಲಿ ಪಾಠ ಮಾಡುವ ನನ್ನ ಹಿರಿಯ ಸಹದ್ಯೋಗಿಗಳು ಕೂಡಾ ಬಾಯಿ ಬಿಟ್ಟಿರಲಿಲ್ಲ.
ಅದರ ನಂತರ ಅಸ್ಸಾಂ ಗಲಭೆಪೀಡಿತ ಪ್ರದೇಶಕ್ಕೆ ಹೋದೆ, ಉತ್ತರಪ್ರದೇಶದ ವಿಧಾನಸಭಾ ಚುನಾವಣೆಕಾಲದಲ್ಲಿ ಒಂದು ತಿಂಗಳು ಸುತ್ತಿದೆ,ರಾಜ್ಯದ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಸುಮಾರು 5000 ಕಿ.ಮೀ. ಸುತ್ತಿದೆ. ನನ್ನ ಢಂಗುರ ಬಾರಿಸಲು ಇದನ್ನು ಹೇಳುತ್ತಿಲ್ಲ. ನಾನು ಈ ವರದಿಮಾಡಲು ಹೋಗದೆ ಪ್ರಜಾವಾಣಿ ಮಾಲೀಕರು ಯಾವುದೋ ಡಿನೋಟಿಪೀಕೆಷನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಬಗ್ಗೆಯೇ ವರದಿಮಾಡುತ್ತೇನೆಂದು ಪಟ್ಟು ಹಿಡಿದು ಕೂತಿದ್ದಲ್ಲಿ ನನಗೆ ಈ ವರದಿಗಳನ್ನು ಮಾಡಲು ಅವಕಾಶ ಸಿಗುತ್ತಿತ್ತೇ? 
ಅಂದಹಾಗೆ ಇಂತಹ ಆರೋಪ-ಅನುಮಾನಗಳು ಗಾಳಿಯಲ್ಲಿ ಸುಳಿದಾಡುತ್ತಿರುವಾಗಲೇ ನಾನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ಕಟುಟೀಕೆಗಳ ಸರಮಾಲೆಯ ಅಂಕಣಗಳನ್ನು ಬರೆದೆ. ಸಂಪಾದಕರು ಅದರ ಒಂದು ಸಾಲು ಬದಲಿಸದೆ, ಸಣ್ಣ ಆಕ್ಷೇಪದ ಗೊಣಗಾಟವನ್ನೂ ಮಾಡದೆ ನನಗೆ ಸ್ವಾತಂತ್ರ್ಯ ಕೊಟ್ಟಿದ್ದರು.
ನಾನು ಪ್ರಾಯೋಗಿಕವಾಗಿ ನೋಡಲು ಹೋಗಿ ವ್ಯವಸ್ಥೆಯ ಜತೆ ರಾಜಿಮಾಡಿಕೊಂಡೆ ಎಂದು ಹೇಳುತ್ತಿರಾ? ತೀರ್ಮಾನ ನಿಮಗೆ ಬಿಟ್ಟದ್ದು. ನನ್ನ ತೀರ್ಮಾನದ ಹಿಂದೆ ನಾನು ಪ್ರಾರಂಭದಲ್ಲಿಯೇ ಕಲಿತ ಪಾಠ ಮತ್ತು ಕಟು ವಾಸ್ತವದ ಅರಿವು ಇತ್ತು ಎಂದಷ್ಟೇ ನಾನು ಹೇಳಬಲ್ಲೆ. 
ಮುಂಗಾರು ಪತ್ರಿಕೆಗೆ ಹೊಟೇಲ್ ಉದ್ಯಮಿ ರಾಂಪಣ್ಣ ಕೂಡಾ ಒಬ್ಬ ನಿರ್ದೇಶಕರಾಗಿದ್ದರು. ಅವರ ಮನೆಯಲ್ಲಿ ನಡೆದ ಭೂತದ ಕೋಲದ ಪೋಟೊ ಮುಂಗಾರು ಪತ್ರಿಕೆಯಲ್ಲಿ ಪ್ರಕಟವಾಗಬೇಕೆಂದು ಅವರ ಬಯಕೆಯಾಗಿತ್ತು. ಇದಕ್ಕಾಗಿ ಆಗಿನ ನಮ್ಮ ಸಂಪಾದಕೀಯ ಬಳಗದಲ್ಲಿ ಒಂದು ದೊಡ್ಡ ‘ಸೈದ್ಧಾಂತಿಕ ಯುದ್ಧ’ವೇ ನಡೆದಿತ್ತು. ತಿರುಗಿನೋಡಿದಾಗ ಆ ಯುದ್ಧದಲ್ಲಿ ಪಾಲ್ಗೊಂಡವರಿಗೂ ಅಂದಿನ ಜಗಳ ಬಾಲಿಷ ಅನಿಸಬಹುದು. ಮುಂಗಾರು ಇಂದಿಗೂ ಉಳಿದಿದ್ದರೆ ಅವಿಭಜಿತ ದಕ್ಷಿಣ ಕನ್ನಡ ತಥಾಕಥಿತ ‘ಹಿಂದುತ್ವದ ಪ್ರಯೋಗಶಾಲೆ’; ಖಂಡಿತ ಆಗುತ್ತಿರಲಿಲ್ಲ ಎನ್ನುವುದು ನನ್ನ ನಂಬಿಕೆ. ವೃತ್ತಿಯ ಪ್ರಾರಂಭದ ದಿನಗಳಲ್ಲಿ ನಾನು ಬೆರಗುಕಣ್ಣುಗಳಿಂದ ನೋಡುತ್ತಿದ್ದ, ಗುರುವೆಂದು ಈಗಲೂ ತಿಳಿದುಕೊಂಡಿರುವ ಎನ್.ಎಸ್. ಶಂಕರ್ ಅವರ ಅಭಿಪ್ರಾಯ ಬೇರೆ ಇರಬಹುದೇನೋ? ಅದನ್ನು ತಿಳಿದುಕೊಳ್ಳುವ ಆಸೆ ನನಗೂ ಇದೆ.
ಇದನ್ನೆಲ್ಲ ಬರೆಯುತ್ತಲೇ ಹೋಗಬಹುದು, ಮತ್ತೊಮ್ಮೆ ಈ ಬಗ್ಗೆ ಮಾತಾಡೋಣ. ಭವಿಷ್ಯದ ಬಗ್ಗೆ ಭರವಸೆ ಇಟ್ಟುಕೊಂಡು ಮುನ್ನಡೆಯುವ. ಬೀದಿಗಳಲ್ಲಿ ಹುಚ್ಚು ನಾಯಿಗಳು ಬೊಗಳುತ್ತಲೇ ಇರಲಿ.

Sunday, June 5, 2016

ಮುಂಗಾರು ಪತ್ರಿಕೆ: (17-08-1986)

ಇದು ನಾನು ಸುಮಾರು ಮೂರುದಶಕಗಳ ಹಿಂದೆ ಮುಂಗಾರು ಪತ್ರಿಕೆಗೆ ಮಾಡಿದ ವರದಿ. ಹಳೆಯ ಕಡತಗಳನ್ನು ಕೆದಕಿದಾಗ ಸಿಕ್ಕ ವರದಿ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು.

ಈ ವರದಿ ನೋಡಿ ಕೆಂಡಾಮಂಡಲವಾದ ವಡ್ಡರ್ಸೆಯವರು ನನಗೆ ನೋಟೀಸ್ ನೀಡಿದ್ದು ಮಾತ್ರವಲ್ಲ ಕೆಲವು ದಿನ ಮಾತನಾಡಿರಲಿಲ್ಲ.

ಕಾರಣ ಇಷ್ಟೆ: ಮುಂಗಾರು ಪತ್ರಿಕೆಗೆ ದುಡ್ಡು ಹಾಕಿದವರಲ್ಲಿ ಕೆಲವರು ಅಬಕಾರಿ ಕಂಟ್ರಾಕ್ಟರ್ ಗಳಿದ್ದರು. ಪತ್ರಿಕೆ ನಡೆಸಲಿಕ್ಕಾಗದೆ ಆಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ವಡ್ಡರ್ಸೆಯವರ ಮೇಲೆ ಆ ಕಂಟ್ರಾಕ್ಟರ್ ಗಳು ಈ ವರದಿ ನೋಡಿ ಕೋಪ ಮಾಡಿಕೊಂಡಿದ್ದರು. ಪತ್ರಿಕೆಯ ನೆರವಿಗೆ ಬರ್ತಿಲ್ಲ ಎನ್ನುವ ಕಾರಣಕ್ಕೆ ಹೀಗೆಲ್ಲ ಬರೆಸಿ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನುವುದು ಅವರ ಆರೋಪವಾಗಿತ್ತು. ಇನ್ನೊಂದೆಡೆ 'ನಮ್ಮವ' ನೊಬ್ಬ ನಮ್ಮ ವಿರುದ್ದವೇ ಬರೆದನಲ್ಲಾ ಎಂದು ಆ ಅಬಕಾರಿ ಕಂಟ್ರಾಕ್ಟರ್ ಗಳು ನನ್ನ ವಿರುದ್ಧ ಗರಂ ಆಗಿದ್ದರು. ನಡುವೆ ಸಿಕ್ಕ ನಾನು ಪಟ್ಚ.
ನಿಜಸಂಗತಿ ಏನೆಂದರೆ ಆಗ ನಮಗಿದ್ದ ಸಂಪಾದಕೀಯ ಸ್ವಾತಂತ್ರ್ಯ ದಲ್ಲಿ ಎಷ್ಟೋ ತನಿಖಾ ವರದಿಗಳು ಕೂಡಾ ವಡ್ಡರ್ಸೆಯವರ ಗಮನಕ್ಕೆ ಬರದೆ ಅಚ್ಚಾಗುತ್ತಿತ್ತು. ಇದು ಆ ರೀತಿ ಪ್ರಕಟವಾದ ವರದಿ.
ಆ ಕಾಲದಲ್ಲಿ ನನಗೂ ಕೋಪ ಬಂದಿತ್ತು. ಆದರೆ ಈಗ? ನಾವು ಸ್ವಲ್ಪ ಕಣ್ಣು ತೆರೆದು ಪ್ರಾಯೋಗಿಕವಾಗಿ ಯೋಚಿಸಿ ವಡ್ಡರ್ಸೆಯವರನ್ನು ಅರ್ಥಮಾಡಿಕೊಳ್ಳಬೇಕಿತ್ತು ಎಂದು ಅನಿಸುತ್ತಿದೆ.

ಇದೇ ರೀತಿ ಇಂಧೂದರ,ಎನ್.ಎಸ್. ಶಂಕರ್, ಕೆ.ರಾಮಯ್ಯ,ಪುಟ್ಟಸ್ವಾಮಿ ಮೊದಲಾದ ಪ್ರಾರಂಭಿಕ ಮುಂಗಾರು ಬಂಡಾಯಗಾರರಿಗೂ ಅನಿಸುತ್ತಿರಬಹುದೇ?

Wednesday, April 13, 2016

ಜಾತಿ ಗಣತಿಯ ವಿವಾದದ ಧೂಳು ಝಾಡಿಸುತ್ತಾ...

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಸಂಬಂಧಿಸಿದ ಕೆಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿದ್ದ ನಾನು ಮಾತನಾಡಲು ಮಾಡಿಕೊಂಡ ಟಿಪ್ಪಣಿಗಳು ಇವು. ಈ ಸಮೀಕ್ಷೆ ಬಗ್ಗೆ ಸದುದ್ದೇಶ ಮತ್ತು ದುರುದ್ದೇಶದಿಂದ ಎತ್ತಿರುವ ಕೆಲವು ಪ್ರಶ್ನೆಗಳಿಗಾದರೂ ಉತ್ತರಿಸಲು ಇದು ನೆರವಾಗಬಹುದು
.1. ಜಾತಿ ಗಣತಿಗೆ ಅವಕಾಶ ಇದೆಯೇ?
ಮೊದಲನೆಯದಾಗಿ, ಸಾಮಾಜಿಕ ನ್ಯಾಯದ ಹೋರಾಟದ ಭಾಗವಾದ ಜಾತಿ ಆಧರಿತ ಮೀಸಲಾತಿ ಮತ್ತು ಜಾತಿ ಗುರುತಿಸಲು ನೆರವಾಗುವ ಜಾತಿಗಣತಿಗೆ ಸಂಬಂಧಿಸಿದ ಸರ್ಕಾರದ ನಿರ್ಧಾರಗಳ ಹಿಂದೆ ನಿರ್ಣಾಯಕ ಪಾತ್ರವನ್ನು ವಹಿಸುತ್ತಾ ಬಂದಿರುವುದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಹಾಗೂ ಈ ಮೂರು ಕಂಬಗಳ ಮೇಲೆ ನಿಂತಿರುವ ಸಂವಿಧಾನ.
ಜಾತಿ, ವರ್ಣ, ಧರ್ಮ, ಲಿಂಗ, ಹುಟ್ಟಿದ ಸ್ಥಳ ಮತ್ತು ವಾಸಸ್ಥಾನಗಳನ್ನು ಮೀರಿ ಭಾರತೀಯರೆಲ್ಲರೂ ಸಮಾನರು ಎಂದು ಸಾರಿರುವ ಸಂವಿಧಾನವೇ ನಾಲ್ಕು ವರ್ಗಗಳಿಗೆ ನಿರ್ದಿಷ್ಟ ಕಾರಣಗಳಿಗಾಗಿ ‘ಸಮಾನತೆ’ಯಿಂದ ವಿನಾಯಿತಿಯನ್ನು ನೀಡಿದೆ. ಈ ನಾಲ್ಕು ವರ್ಗಗಳು ಯಾವುದು? ಮತ್ತು ಅವುಗಳ ಮುನ್ನಡೆಗೆ ಏನು ಮಾಡಬೇಕೆಂಬುದನ್ನು ಸಂವಿಧಾನದ 15 (3), 15 (4) 16 (4) ಮತತು 46ನೇ ಪರಿಚ್ಛೇದ ಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸಂವಿಧಾನದ 15(3)ನೇ ಪರಿಚ್ಛೇದದ ಪ್ರಕಾರ ಜಾತಿ ಧರ್ಮಗಳ ತಾರತಮ್ಯ ಮಾಡದೆ ಮಹಿಳೆ ಮತ್ತು ಮಕ್ಕಳಿಗಾಗಿ ವಿಶೇಷ ಸವಲತ್ತುಗಳನ್ನು ನೀಡಬಹುದಾಗಿದೆ. ಪರಿಚ್ಛೇದ 15 (4)ರ ಪ್ರಕಾರ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮುನ್ನ
ಡೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಪರಿಚ್ಛೇದ 16 (4) ರ ಪ್ರಕಾರ ಸರ್ಕಾರಿ ಇಲಾಖೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯದಿರುವ ಹಿಂದುಳಿದ ವರ್ಗಗಳಿಗೆ ನೇಮಕಾತಿಯಲ್ಲಿ ಆದ್ಯತೆ ಕಲ್ಪಿಸಬಹುದಾಗಿದೆ. ದುರ್ಬಲ ವರ್ಗಗಳಿಗೆ ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳ ರಕ್ಷಣೆಗೆ ವಿಶೇಷ ಗಮನ ನೀಡುವುದರ ಜತೆಗೆ ಸಾಮಾಜಿಕ ನ್ಯಾಯ ಮತ್ತು ಎಲ್ಲ ಬಗೆಯ ಶೋಷಣೆಗಳಿಂದ ಅವರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಸಂವಿಧಾನದ 46ನೇ ಪರಿಚ್ಛೇದ ಹೇಳಿದೆ.
ಈಗಿನ ಮೀಸಲಾತಿಗೆ ಆಧಾರವಾಗಿರುವ ಆಯೋಗಗಳ ಜಾತಿ ಗಣತಿಯ ವೈಜ್ಞಾನಿಕತೆಯನ್ನು ನಿರಂತರವಾಗಿ ಸುಪ್ರೀಂಕೋರ್ಟ್ ಪ್ರಶ್ನಿಸುತ್ತಾ ಬಂದಿದೆ. ಮಂಡಲ್ ವರದಿ ಅನುಷ್ಠಾನವನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆಯಿಂದ, ಯುಪಿಎ ಸರ್ಕಾರ ನೀಡಿದ ಉನ್ನತ ಶಿಕ್ಷಣದಲ್ಲಿನ ಮೀಸಲಾತಿ ವಿರುದ್ಧದ ಅರ್ಜಿಯ ವಿಚಾರಣೆ ವರೆಗೆ ಎಲ್ಲ ಪ್ರಕರಣಗಳಲ್ಲಿಯೂ ಸುಪ್ರೀಂ ಕೋರ್ಟ್ ಮೀಸಲಾತಿಗೆ ಆಧಾರವಾಗಿರುವ ಜಾತಿ ಮಾಹಿತಿಯನ್ನು ಪ್ರಶ್ನಿಸಿದೆ.
‘ವೈಜ್ಞಾನಿಕವಾಗಿ ಸಂಗ್ರಹಿಸಿರುವ ಜಾತಿ ಗಣತಿ ಬೇಕು ಮತ್ತು ಹಿಂದುಳಿದ ವರ್ಗಗಳ ಗುಂಪಿಗೆ ಯಾವ ಜಾತಿಯ ಸೇರ್ಪಡೆಯಾಗಬೇಕು, ಬೇರ್ಪಡೆಯಾಗಬೇಕು ಎನ್ನುವುದನ್ನು ತೀರ್ಮಾನಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತ ಹಿಂದುಳಿದ ಆಯೋಗಗಳನ್ನು ರಚಿಸಬೇಕು’ ಎಂದು ಸುಪ್ರೀಂ ಕೋರ್ಟ್ ಇಂದಿರಾ ಸಾಹ್ನಿ ಪ್ರಕರಣದಲ್ಲಿ (ಮಂಡಲ್ ವರದಿ ಪ್ರಕರಣ) 23 ವರ್ಷಗಳ ಹಿಂದೆ ನೀಡಿದ್ದ ತೀರ್ಪಿನಲ್ಲಿ ಹೇಳಿತ್ತು.
ಜಾತಿ ಗಣತಿ ಯಾಕೆ ಬೇಕು?
ಸಂವಿಧಾನ ವಿಶೇಷವಾಗಿ ಗುರುತಿಸಿರುವ ವರ್ಗಗಳ ಪೈಕಿ ಮಹಿಳೆ, ಮಕ್ಕಳು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಲೆಕ್ಕ ಹತ್ತುವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಸಿಗುತ್ತದೆ. ಆದರೆ ಸಂವಿಧಾನ ಹೇಳಿರುವ ಹಿಂದುಳಿದ ವರ್ಗಗಳು ಯಾವುದು? ಅದರ ರೂಪ,ಗಾತ್ರ, ಸ್ಥಿತಿಗತಿ ಏನು? ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳನ್ನು ಹೊರತುಪಡಿಸಿ ಹಿಂದೂ ಧರ್ಮಕ್ಕೆ ಸೇರಿರುವ ಉಳಿದೆಲ್ಲ ಜಾತಿಗಳನ್ನು ‘ಹಿಂದೂ’ ಹೆಸರಿನಡಿಯಲ್ಲಿಯೇ ಸೇರಿಸಲಾಗುತ್ತದೆ. ಆದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಹಿಂದುಳಿದ ಜಾತಿಗಳಿಗೆ ಪ್ರ‍ತ್ಯೇಕವಾದ ಮೀಸಲಾತಿ ಕಲ್ಪಿಸಲಾಗಿದೆ, ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕೆ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಹೇಗೆ? ಜಾತಿ ಗಣತಿ ಅಲ್ಲದೆ ಬೇರೆ ಮಾರ್ಗ ಇದೆಯೇ?
ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಯೋಜನೆಗಳು ಜಾತಿ ಆಧಾರಿತವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಕುರುಬ,ನೇಕಾರ,ಈಡಿಗ, ಕ್ಷೌರಿಕ, ಮುಸ್ಲಿಮ್, ಕ್ರಿಶ್ಚಿಯನ್ ಹೀಗೆ ವಿವಿಧ ಬಗೆಯ ಜಾತಿ ಮತ್ತು ಧರ್ಮ ನಿರ್ದಿಷ್ಠ ಯೋಜನೆಗಳನ್ನು ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸುತ್ತಾ ಬಂದಿವೆ.
ಒಂದೊಂದು ಜನವರ್ಗದ ಸಮಸ್ಯೆಗಳು ಒಂದೊಂದು ಬಗೆಯವು. ಪರಿಶಿಷ್ಟ ಜಾತಿ ಜನರ ಪಾಲಿಗೆ ಅಸ್ಪೃಶ್ಯತೆ ಎನ್ನುವುದೇ ದೊಡ್ಡ ಸಮಸ್ಯೆಯಾದರೆ, ಪರಿಶಿಷ್ಟ ಪಂಗಡಕ್ಕೆ ಅಸ್ಪೃಶ್ಯತೆಗಿಂತಲೂ ಪ್ರತ್ಯೇಕತೆ ಮತ್ತು ನಿರ್ಲಕ್ಷ್ಯದ ಸಮಸ್ಯೆ. ಹಿಂದುಳಿದ ಜಾತಿ ಜನರ ಸಮಸ್ಯೆ ಅಸ್ಪೃಶ್ಯತೆ ಅಲ್ಲ ಅವಕಾಶ ಮತ್ತು ಪ್ರಾತಿನಿಧ್ಯದ ಸಮಸ್ಯೆ. ಅಲ್ಪಸಂಖ್ಯಾತರನ್ನು ಭೀತಿಗೀಡುಮಾಡಿರುವುದು ಕೋ
ಮುವಾದ. ಮಹಿಳೆಯರ ಪಾಲಿಗೆ ಲಿಂಗತಾರತಮ್ಯವೇ ದೊಡ್ಡ ಸಮಸ್ಯೆ.
ನೇಕಾರರಿಗೆ ಕೈಮಗ್ಗದ ಸುಧಾರಣೆಗೆ ಪ್ಯಾಕೇಜ್ ಬೇಕು, ಮಡಿವಾಳರಿಗೆ ದೋಬಿಘಾಟ್ ನಿರ್ಮಾಣವಾಗಬೇಕು. ಕ್ಷೌರಿಕರಿಗೆ ಸಲೂನ್ ಗಳನ್ನು ತೆರೆಯಲು ಆರ್ಥಿಕ ನೆರವು ಬೇಕು, ಕುರುಬರಿಗೆ ಕುರಿಸಾಕಾಣಿಕೆಗೆ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಮೀನುಗಾರರಲ್ಲಿ ಮೀನುಗಾರಿಕೆಯ ಸಮಸ್ಯೆಗಳಿವೆ. ಜಾತಿವಾರು ಆರ್ಥಿಕ-ಶೈಕ್ಷಣಿಕ ಸಮೀಕ್ಷೆಯ ಮೂಲಕ ಪಡೆಯುವ ಮಾಹಿತಿ ಇಲ್ಲದೆ ಇವರ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ, ಇವರ ಬೇಡಿಕೆಗಳನ್ನು ಈಡೇರಿಸುವುದು ಹೇಗೆ?
ಇವರನ್ನೆಲ್ಲ ಒಂದೇ ಗುಂಪು ಮಾಡಿ ಇವರೆಲ್ಲರೂ ಶೋಷಿತರು, ಅವಕಾಶ ವಂಚಿತರು ಎನ್ನುವ ವರ್ಗದಡಿಯಲ್ಲಿ ಕೂಡಿಹಾಕಿ ರಾಷ್ಟ್ರಮಟ್ಟದ ಒಂದು ಸಾಮಾನ್ಯ ಯೋಜನೆಯ ಮೂಲಕ ಇವರ ಅಭಿವೃದ್ಧಿ ಮಾಡಲು ಸಾಧ್ಯ ಇಲ್ಲ. ಅರಮನೆ ಮೈದಾನದಲ್ಲಿ ಶೋಷಿತರೆಲ್ಲರ ಸಭೆ ಕರೆದು ಸಮಸ್ಯೆಗಳನ್ನೆಲ್ಲ ಚರ್ಚಿಸಲು ಸಾಧ್ಯ ಇಲ್ಲ. ಇಲ್ಲದೆ ಇದ್ದರೆ ಹಿಂದೂ, ಮುಸ್ಲಿಮ್, ದಲಿತ ಸಮಾವೇಶ ನಡೆಸಿಯೂ ಈ ವರ್ಗಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದು. ಯಾಕೆಂದರೆ ಇಲ್ಲಿರುವುದು ಜಾತಿನಿರ್ದಿಷ್ಟ ಸಮಸ್ಯೆಗಳು.
ಆದರೆ ಸ್ವತಂತ್ರ ಭಾರತದಲ್ಲಿ ವೈಜ್ಞಾನಿಕ ರೀತಿಯಲ್ಲಿ ಸಮಗ್ರ ಸ್ವರೂಪದ ಜಾತಿಗಣತಿ ನಡೆದೇ ಇಲ್ಲವಾದ ಕಾರಣ ಧರ್ಮ ಮತ್ತು ಜಾತಿ ನಿರ್ದಿಷ್ಟವಾದ ಎಲ್ಲ ಜನಕಲ್ಯಾಣ ಕಾರ್ಯಕ್ರಮಗಳು ವಿಶ್ವಾಸಾರ್ಹ ಅಲ್ಲದ ತಪ್ಪುಗಳಿಂದ ಕೂಡಿದ ಜಾತಿ ಮಾಹಿತಿಯ ಆಧಾರದಲ್ಲಿ ಅನುಷ್ಠಾನಗೊಂಡು ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ.
ಸಾಚಾರ್ ವರದಿ ಜಾರಿಯಾಗುವ ಮೊದಲು ಮುಸ್ಲಿಮರು ರಾಜಕೀಯ ಓಲೈಕೆಯಿಂದಾಗಿ ಮಿತಿಮೀರಿ ಬೆಳೆದುಬಿಟ್ಟಿದ್ದಾರೆ. ಸರ್ಕಾರದ ಬಜೆಟ್ ಹಣದ ಬಹುಪಾಲು ಮುಸ್ಲಿಮರ ಪಾಲಾಗುತ್ತಿದೆ ಎನ್ನುವ ಅಪಪ್ರಚಾರ ವ್ಯಾಪಕವಾಗಿ ನಡೆದಿತ್ತು. ಆದರೆ ಮುಸ್ಲಿಮರ ಸಾಮಾಜಿಕ-ಆರ್ಥಿಕ-ಶೈಕ್ಷಣಿಕೆ ಸಮೀಕ್ಷೆ ನಡೆಸಿದ ಸಾಚಾರ್ ಸಮಿತಿ ಬಯಲುಗೊಳಿಸಿದ ಸತ್ಯವೇ ಬೇರೆ. ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಸ್ಲಿಮರು ದಲಿತರಿಗಿಂತಲೂ ನಿಕೃಷ್ಟ ಸ್ಥಿತಿಯಲ್ಲಿದ್ದಾರೆ ಎಂದು ಸಾಚಾರ ವರದಿ ಹೇಳಿತ್ತು.
ಜಾತಿ ಗಣತಿಯಿಂದ ಜಾತೀಯತೆ ಹೆಚ್ಚಾಗುವುದಿಲ್ಲವೇ?
1931ರಿಂದ ಇಲ್ಲಿಯ ವರೆಗೆ ಜಾತಿ ಗಣತಿ ನಡೆದೇ ಇಲ್ಲ. ಹಾಗಿದ್ದರೆ ಜಾತಿ ನಾಶವಾಗಬೇಕಿತ್ತಲ್ಲವೇ? ಯಾಕೆ ಅದು ಹೆಚ್ಚಾಯಿತು? ಕಳೆದ 65 ವರ್ಷಗಳಿಂದ ಹಿಂದು,ಮುಸ್ಲಿಮ್,ಕ್ರಿಶ್ಚಿಯನ್ ಬೌದ್ಧ ,ಜೈನ ಹೀಗೆ ಧರ್ಮಗಣತಿ ಅರ್ಥಾತ್ ಕೋಮುಗಣತಿ ನಡೆಯುತ್ತಿದೆ. ದೇಶವನ್ನು ತಲ್ಲಣಕ್ಕೀಡು ಮಾಡುತ್ತಿರುವ ಕೋಮುವಾದಕ್ಕೆ ಈ ಧರ್ಮ ಇಲ್ಲವೆ ಕೋಮು ಗಣತಿ ಕಾರಣವೆಂದು ಹೇಳಬಹುದೇ?
ಕಳೆದ 60 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಗಣತಿ ನಡೆಯುತ್ತಿದೆ. ಇದರಿಂದಾಗಿ ದಲಿತರಲ್ಲಿ ಜಾತೀಯತೆ ಹೆಚ್ಚಾಗಿ ಅದರಿಂದಾಗಿ ದಲಿತರ ಶೋಷಣೆ ಮತ್ತು ದೌರ್ಜನ್ಯ ನಡೆಯುತ್ತಿದೆ ಎಂದು ಹೇಳಬಹುದೇ? ಮುಸ್ಲಿಮರ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯನ್ನು ತೆರೆದಿಟ್ಟ ಸಾಚಾರ್ ವರದಿಯಿಂದಾಗಿ ಮುಸ್ಲಿಮರಲ್ಲಿ ಕೋಮುವಾದ ಬೆಳೆಯಿತೆಂದು ಹೇಳಬಹುದೇ?
ಜಾತಿ ಬೇಡ ಎನ್ನುವುದು ಒಂದು ಪುರೋಗಾಮಿ ನಿಲುವು, ಜಾತಿ ಇಲ್ಲ ಎನ್ನುವುದು ಆತ್ಮವಂಚನೆ. ನಮ್ಮದು ಆತ್ಮವಂಚಕ ಸಮಾಜ. ಇಲ್ಲಿ ಜಾತಿ ಇದೆ ಎನ್ನುವುದನ್ನು ಒಪ್ಪಿಕೊಳ್ರಯ್ಯಾ ಎನ್ನುವವರನ್ನು ಜಾತಿವಾದಿಗಳೆಂದು ಗೇಲಿಮಾಡಲಾಗುತ್ತಿದ್ದೆ. ಅಯ್ಯೋ ಎಲ್ಲಿದೆ ಜಾತಿ ಎಂದು ಉಡಾಫೆಯ ದನಿಯಲ್ಲಿ ಮಾತನಾಡುತ್ತಾ ಒಳಗಡೆ ಜಾತಿ ಎನ್ನುವ ರೋಗವನ್ನು ಕಟ್ಟಿಕೊಂಡಿರುವವರನ್ನು ಜಾತ್ಯತೀತರೆಂದು ಬಣ್ಣಿಸಲಾಗುತ್ತದೆ.
ಜಾತಿ ಮತ್ತು ಜಾತೀಯತೆ ಮೊದಲಿನಿಂದಲೂ ಇತ್ತು. ಆದರೆ ಈ ಪಟ್ಟಭದ್ರ ಜಾತಿಯನ್ನು ಯಾರೂ ಪ್ರಶ್ನಿಸದೆ ಇದಕ್ಕೆ ಶರಣಾಗಿ ಒಪ್ಪಿಕೊಂಡಿದ್ದಾಗ ಯಾರಿಗೂ ಜಾತಿ ಕಾಣಿಸುತ್ತಿರಲಿಲ್ಲ. ಜಾತಿಯಿಂದ ನೊಂದವರು ನೋವುಣ್ಣುತ್ತಿರುವವರು ಅದನ್ನು ಪ್ರಶ್ನಿಸಿದ ಕೂಡಲೇ ಜಾತಿ ಕಾಣಿಸತೊಡಗಿದೆ. ಪ್ರಶ್ನಿಸುತ್ತಿರುವವರು ಜಾತಿವಾದಿಗಳಾಗಿ ಕಾಣಿಸತೊಡಗಿದ್ದಾರೆ.
ಜಾತಿ ಎಂದರೆ ಏನು? ಎಲ್ಲಿಂದ ಬಂತು? ಹೇಗೆ ಹುಟ್ಟಿಕೊಂಡಿತು ಎನ್ನುವುದರ ಬಗ್ಗೆ ಹಲವಾರು ವ್ಯಾಖ್ಯಾನಗಳಿವೆ. ಇವುಗಳಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ಸಿದ್ಧಾಂತ ಮಹತ್ವದ್ದು. ಅವರ ಪ್ರಕಾರ ಜಾತಿ ಎನ್ನುವುದು ತಲೆಮರೆಸಿಕೊಂಡ ವರ್ಗ.
‘ಜಾತಿ ಪ್ರಶ್ನಾತೀತವೂ ಅಲ್ಲ, ದೋಷಾತೀತವೂ ಅಲ್ಲ. ಜಾತಿ ಕೂಡಾ ತನ್ನ ಒಡಲಲ್ಲಿ ವರ್ಗವನ್ನು ಬೆಚ್ಚಗೆ ಕಾಯ್ದುಕೊಂಡು ಬರುತ್ತದೆ.ತನ್ನ ಶ್ರಮ ಮತ್ತು ಪ್ರಯತ್ನದ ಮೂಲಕ ಒಂದು ವರ್ಗದಿಂದ ಮತ್ತೊಂದು ವರ್ಗಕ್ಕೆ ಏರುವ ಮತ್ತು ಇಳಿಯುವ ಸಾಧ್ಯತೆಯನ್ನು ನಿರಾಕರಿಸುವುದೇ ಜಾತಿಯ ಉದ್ದೇಶ ಎಂದು ಅಂಬೇಡ್ಕರ್ ಅಭಿಪ್ರಾಯಪಡುತ್ತಾರೆ.
ಇದರಿಂದಾಗಿ ಒಬ್ಬ ಕ್ಷೌರಿಕ, ನೇಕಾರ,ಕುರುಬ, ಈಡಿಗ ತನ್ನ ಜಾತಿ ಕಸುಬನ್ನು ತೊರೆದು ಬೇರೆ ವೃತ್ತಿ ಮಾಡಿದರೂ ಆತನನ್ನು ಆತ ಹುಟ್ಟಿದ ಜಾತಿಯಿಂದಲೇ ನೋಡಲಾಗುತ್ತದೆ. ಜಾತಿ ಅವನ ಚರ್ಮಕ್ಕೆ ಅಂಟಿರುತ್ತದೆ. ಅದೇ ರೀತಿ ಒಬ್ಬ ಮೇಲ್ಜಾತಿಯವ ಬ್ಯೂಟಿಪಾರ್ಲರ್, ಬಾರ್ ಎಂಡ್ ರೆಸ್ಟೋರೆಂಟ್ ಇಟ್ಟುಕೊಂಡರೂ ಅವರು ಜಾತಿಯ ಶ್ರೇಣಿಯಿಂದ ಕೆಳಗಿಳಿಯುವುದಿಲ್ಲ.
ಜಾತಿ ಎನ್ನವುದು ಒಂದು ರಾಜಕೀಯ ಪಕ್ಷ ಇಲ್ಲವೇ ಯುವಕ ಸಂಘ ಅಲ್ಲ. ಜಾತಿವ್ಯವಸ್ಥೆಯ ಸದಸ್ಯತ್ವ ಮುಕ್ತವಾಗಿಲ್ಲ. ಹುಟ್ಟಿನ ಆಧಾರದಲ್ಲಿ ಜಾತಿಯ ಸದಸ್ಯತ್ವ ನಿರ್ಧಾರವಾಗುತ್ತದೆ. ಅದರ ಸದಸ್ಯರಾದವರು ಅದರಿಂದ ಬಿಡುಗಡೆ ಪಡೆಯುವ ಹಾಗಿಲ್ಲ.
ಜಾತಿಯ ಮುಖ್ಯ ಲಕ್ಷಣವೇ ತಾರತಮ್ಯ. ಪ್ರತಿಯೊಂದು ಜಾತಿಗೂ ಒಂದು ಶ್ರೇಣಿ ಇದೆ. ಈ ಶ್ರೇಣಿಕೃತ ವ್ಯವಸ್ಥೆಯೇ ಜಾತಿ. ಎಲ್ಲರೂ ಎಲ್ಲರನ್ನು ಮುಟ್ಟಲಾಗದ, ಜತೆಯಲ್ಲಿ ಕೂತು ಊಟ ಮಾಡಲಾಗದ ಎಲ್ಲರೂ ಎಲ್ಲ ಉದ್ಯೋಗ ಮಾಡಲಾಗದ, ಎಲ್ಲರೂ ಎಲ್ಲ ಮನೆಯನ್ನು ಪ್ರವೇಶಿಸಲಾಗದ ವ್ಯವಸ್ಥೆಯೇ ಜಾತಿ. ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿದ ಕಾರಣಕ್ಕೆ ಒಬ್ಬ ಉತ್ತಮನಾಗುತ್ತಾನೆ, ಇನ್ನೊಬ್ಬ ಅಧಮನಾಗುತ್ತಾನೆ. ಹಿಂದಿನ ಕಾಲದಲ್ಲಿ ಜಾತಿ ಎನ್ನುವುದು ಶ್ರೇಣಿಕೃತ ವ್ಯವಸ್ಥೆಗಷ್ಟೇ ಕಾರಣವಾಗಿದ್ದರೆ ಈಗ ಅದು ಸಾರ್ವಜನಿಕ ಮತ್ತು ಖಾಸಗಿ ಸವಲತ್ತುಗಳನ್ನು ಹಂಚುವ ವಿತರಣಾ ವ್ಯವಸ್ಥೆಯಾಗಿದೆ.
ಜಾತಿ ಗಣತಿಯಿಂದ ಜಾತಿ ನಾಶ ಸಾಧ್ಯವೇ?
ಸಂಪೂರ್ಣ ಸಾಧ್ಯ ಇಲ್ಲದೆ ಇದ್ದರೂ ಜಾತಿ ನಾಶದ ಹಾದಿಯಲ್ಲಿ ಇದೊಂದು ಉತ್ತಮ ಪ್ರಯತ್ನ ಎಂದು ಹೇಳಬಹುದು. ಇದೊಂದು ವಿಚಿತ್ರವಾದ ವಾದವೆಂದು ಮೇಲ್ನೋಟಕ್ಕೆ ಅನಿಸಬಹುದು. ಜಾತಿಯ ಎರಡು ಅನಿಷ್ಠ ಲಕ್ಷಣಗಳೆಂದರೆ ಅಸ್ಪೃಶ್ಯತೆ ಮತ್ತು ಅಸಮಾನತೆ. ಅಸ್ಪೃಶ್ಯತೆ ಆಚರಣೆಯನ್ನು ಕಾನೂನಿನ ಮೂಲಕ ನಿಷೇಧಿಸಲಾಗಿದೆ. ಅಂತಿಮವಾಗಿ ಈ ಮಾನವ ವಿರೋಧಿ ನಡವಳಿಕೆ ಕೂಡಾ ಮನುಷ್ಯನ ಮನಪರಿರ್ತನೆಯಿಂದ ಆಗುವಂತಹದ್ದು. ಇಲ್ಲದೆ ಹೋದರೆ ಈಗಿನಂತೆ ಗೋಚರ ಅಸ್ಪೃಶ್ಯತೆ ಕಡಿಮೆಯಾಗಿ, ಅಗೋಚರ ಅ
ಸ್ಪೃಶ್ಯತೆ ಹೆಚ್ಚಾಗುತ್ತದೆ.
ಜಾತಿಯ ಇನ್ನೊಂದು ಅನಿಷ್ಠ ಲಕ್ಷಣವಾದ ಅಸಮಾನತೆಯನ್ನು ಆರ್ಥಿಕ ಸಬಲೀಕರಣದ ಮೂಲಕ ನಿವಾರಿಸಲು ಸಾಧ್ಯ. ಇದರಿಂದ ಜಾತಿ ಸಂಪೂರ್ಣವಾಗಿ ನಾಶವಾಗದೆ ಇದ್ದರೂ ಅದರ ಪರಿಣಾಮ ಮತ್ತು ಪ್ರಭಾವ ಕಡಿಮೆಯಾಗಬಹುದು.
ಉದಾಹರಣೆಗೆ, ಹಳ್ಳಿಯಲ್ಲಿರುವ ಒಬ್ಬ ಸಾಮಾನ್ಯ ದಲಿತ ಮತ್ತು ಐಎ ಎಸ್-ಐಪಿಎಸ್ ದಲಿತನನ್ನು ಒಂದೇ ದೃಷ್ಟಿಕೋನದಲ್ಲಿ ಸಮಾಜ ನೋಡುವುದಿಲ್ಲ.ಐಎಎಸ್-ಐಪಿಎಸ್ ದಲಿತ ಅಧಿಕಾರಿಯನ್ನು ಯಾವುದೇ ಮುಜುಗರ ಇಲ್ಲದೆ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿ ಹೆಣ್ಣುಮಕ್ಕಳು ಮದುವೆಯಾಗಿಬಿಡುತ್ತಾರೆ. (ಉದಾಹರಣೆಯ ಅಗತ್ಯ ಇಲ್ಲ ಎಂದೆನಿಸುತ್ತದೆ). ಆದರೆ ಹಳ್ಳಿಯಲ್ಲಿರುವ ಒಬ್ಬ ಬಡ ದಲಿತ ಯುವಕ ಮೇಲ್ಜಾತಿಯ ಯುವತಿಯನ್ನು ಪ್ರೀತಿಸಿ ಮದುವೆಯಾದರೂ ಆತನನ್ನು ಸಾಯಿಸಿಬಿಡುತ್ತಾರೆ. (ಇದಕ್ಕೂ ಉದಾಹರಣೆ ಬೇಡ ಎಂದೆನಿಸುತ್ತದೆ).
ಬಡತನ ಮತ್ತು ಶ್ರೀಮಂತಿಕೆಗೆ ಜಾತಿ ಇಲ್ಲ ಎನ್ನುವುದು ಎಷ್ಟು ನಿಜವೋ, ಶ್ರೀಮಂತಿಕೆ ಮತ್ತು ಬಡತನಕ್ಕೆ ಜಾತಿ ಕೂಡಾ ಕಾರಣ ಎನ್ನುವುದು ಅಷ್ಟೇ ನಿಜ. ಬಿಪಿಎಲ್ ವರ್ಗಕ್ಕೆ ಸೇರಿರುವ ಕುಟುಂಬಗಳ ಸಮೀಕ್ಷೆ ನಡೆಸಿದರೆ ಅವರಲ್ಲಿ ಬಹುಸಂಖ್ಯೆಯಲ್ಲಿ ದಲಿತ,ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕುಟುಂಬಗಳೇ ಹೆಚ್ಚಿರುವುದನ್ನು ಕಾಣಬಹುದು.
ಜಾತಿ ವ್ಯವಸ್ಥೆಯನ್ನು ಯಾರು ನಾಶ ಮಾಡಬೇಕು? ಜಾತಿಯಿಂದಾಗಿ ಅನ್ಯಾಯ, ಅವಮಾನ,ಹಿಂಸೆ, ಉಪವಾಸ ಅನುಭವಿಸಿದವರೋ ಇಲ್ಲವೇ ಜಾತಿಯ ಬಲದಿಂದ ಶ್ರಮ ಇಲ್ಲದ ಆದಾಯ, ಅರ್ಹತೆ ಇಲ್ಲದೆ ಸ್ಥಾನಮಾನ, ಮತ್ತು ಜನಬೆಂಬಲ ಇಲ್ಲದ ಅಧಿಕಾರ ಪಡೆದವರೋ? ಜಾತಿಯನ್ನು ಯಾರಾದರೂ ಅಪರಾಧ ಎಂದು ಪರಿಗಣಿಸುವುದಾದರೆ ಅದನ್ನು ತೊಡೆದುಹಾಕುವ ಪ್ರಯತ್ನವನ್ನುಮೊದಲು ಜಾತಿಯ ಅಪರಾಧಿಗಳು ಮಾಡಬೇಕೇ ಹೊರತು ಜಾತಿ ವ್ಯವಸ್ಥೆಗೆ ಬಲಿಯಾದವರಲ್ಲ.ಜಾತೀಯತೆಗೆ ಬಲಿಯಾದವರು ಜಾತಿ ಬಿಡುತ್ತೇನೆ ಎಂದರೂ ಜಾತಿ ಅವರನ್ನು ಬಿಡುವುದಿಲ್ಲ, ಕಳೆದುಕೊಂಡವರು ತ್ಯಾಗ ಮಾಡಲಿಕ್ಕಾಗುವುದಿಲ್ಲ ಪಡೆದುಕೊಂಡವರು ಮಾಡಬೇಕು.
ಜಾತೀಯತೆ ಅಳಿಯುವುದು ಜಾತಿ ಕುರುಡಿನಿಂದಲ್ಲ, ಕಣ್ತೆರೆದು ಅದಕ್ಕೆ ಮುಖಾಮುಖಿಯಾಗುವ ಮೂಲಕ. ಜಾತಿಯನ್ನು ಕಣ್ಣುಬಿಟ್ಟು, ಭಯಬಿಟ್ಟು ,ಎದೆಗೆ ಕಿವಿಕೊಟ್ಟು ಎದುರಿಸಬೇಕು. ತಿಳಿದುಕೊಳ್ಳಬೇಕು. ಇದನ್ನು ಮಾಡುತ್ತಲೇ ಅದರ ನಾಶಕ್ಕೆ ಪ್ರಯತ್ನ ಮಾಡಬೇಕು.ಜಾತಿ ಎನ್ನುವುದು ಒಂದು ರೋಗ. ರೋಗಕ್ಕೆ ಚಿಕಿತ್ಸೆ ನೀಡಬೇಕಾದರೆ ಮೊದಲು ರೋಗಿ ರೋಗ ಇದೆ ಎನ್ನುವುದನ್ನು ಒಪ್ಪಿಕೊಳ್ಳಬೇಕು. ಅದೇ ರೀತಿ ಜಾತಿರೋಗವನ್ನು ಸಮಾಜ ಒಪ್ಪಿಕೊಳ್ಳಬೇಕು. ಮೀಸಲಾತಿ ಎನ್ನುವುದು ಔಷಧಿಯಾದರೆ ಜಾತಿ ಗಣತಿ ಎಂದರೆ ರೋಗ ನಿದಾನ, ಡಯಗ್ನಾಸಿಸ್. ಮೇಲ್ಜಾತಿ ಮನಸ್ಸುಗಳು ಮೇಲರಿಮೆಯ ಶ್ರೇಷ್ಟತೆಯ ವ್ಯಸನದಿಂದ ಮುಕ್ತರಾಗಬೇಕು, ಅದೇ ರೀತಿ ತಳಸಮುದಾಯದ ಮನಸ್ಸುಗಳು ಕೀಳರಿಮೆಯ ದೈನೇಸಿ ಭಾವದಿಂದ ಬಿಡುಗಡೆ ಹೊಂದಬೇಕು.
ಜಾತಿ ಗಣತಿಯಿಂದ ಮೀಸಲಾತಿಯ ಬೇಡಿಕೆ ಹೆಚ್ಚಾಗುವುದೇ?
ಖಂಡಿತ ಹೆಚ್ಚಾಗುವುದಿಲ್ಲ. ಮೀಸಲಾತಿಗೆ ಅರ್ಹವಾದ ಜಾತಿಗಳು ತಿಪ್ಪರಲಾಗ ಹಾಕಿದರೂ ಒಟ್ಟು ಮೀಸಲಾತಿಯ ಪ್ರಮಾಣ ಶೇಕಡಾ 50 ಅನ್ನು ಮೀರಿಲ್ಲ. ಹಾಗೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿಬಿಟ್ಟಿದೆ. ಆದರೆ ಜಾತಿಗಣತಿಯಿಂದ ಮೀಸಲಾತಿಯ ದುರುಪಯೋಗವನ್ನು ತಡೆಯಬಹುದಾಗಿದೆ. ಇದರ ಉದ್ದೇಶ ಮೀಸಲಾತಿಯನ್ನು ವಿಸ್ತರಿಸುವುದಲ್ಲ, ಮೀಸಲಾತಿಯ ದುರುಪಯೋಗವನ್ನು ತಡೆದು ಅದರ ಲಾಭ ಅರ್ಹರಿಗೆ ತಲುಪುವಂತೆ ಮಾಡುವುದು.
ಮೀಸಲಾತಿ ದುರುಪಯೋಗದ ಹಲವಾರು ಪ್ರಕರಣಗಳು ಇತ್ತೀಚೆಗೆ ವ್ಯಾಪಕವಾಗಿ ಚರ್ಚೆಗೀಡಾಗಿವೆ. 2009ರ ಅಕ್ಟೋಬರ್ 27ರಂದು ಹಿಂದಿನ ಬಿಜೆಪಿ ಸರ್ಕಾರ ವೀರಶೈವ/ಲಿಂಗಾಯತ ಉಪಜಾತಿಗಳಾದ ಕುಡುಒಕ್ಕಲ, ಲಾಳಗೊಂಡ, ಹೂಗಾರ, ಆದಿಬಣಜಿಗ, ಬಣಗಾರ, ಗಾಣಿಗ, ನಗರ್ತ, ವೀರಶೈವ ಜಂಗ, ವೀರಶೈವ ಬೇಡುವ ಜಂಗಮ, ಶಿವಚಾರ ನಗರ್ತ, ಆದಿವೀರಶೈವ, ವೀರಶೈವ ಪಂಚಮಸಾಲಿ, ಕುರುಹಿನಶೆಟ್ಟಿ/ನೇಕಾರ/ಜಾಡ, ವೀರಶೈವ ಸಿಂಪಿ, ರೆಡ್ಡಿ ,ಸಾದರ, ಆರಾಧ್ಯ, ಗುರುವ/ಗುರವ ಈ 19 ಉಪಜಾತಿಗಳನ್ನು ಪ್ರವರ್ಗ -3 (ಬಿ) ಪಟ್ಟಿಗೆ ಸೇರಿಸಿತು.
3(ಬಿ)ಯಲ್ಲಿ ಕ್ರಿಶ್ಚಿಯನ್, ಜೈನ (ದಿಗಂಬರ), ಮರಾಠ ಜಾತಿಗಳಲ್ಲದೆ ಲಿಂಗಾಯತ ಉಪಜಾತಿಗಳಾದ ಹೆಳವ, ಅಂಬಿಗ,ಬೋಯಿ, ಗಂಗಾಮತ, ಸುಣಗಾರ, ಅಗಸ, ಮಡಿವಾಳ, ಕುಂಬಾರ,ಕುರುಬ, ಭಜಂತ್ರಿ, ಭಂಡಾರಿ, ಹಡಪದ,ನಾಯಿಂದ, ಅಕ್ಕಸಾಲಿ, ಬಡಿಗೇರ, ಕಮ್ಮಾರ, ಪಾಂಚಾಳ, ಮೇದಾರ,ಉಪ್ಪಾರ, ಗೌಳಿ ಮೊದಲಾದ ಜಾತಿಗಳಿವೆ. ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಯಾವುದೇ ಕಾರಣವನ್ನು ನೀಡದೆ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಿತು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿರುವ ‘ಬುಡ್ಗಜಂಗಮ’ ಎಂಬ ಅಲೆಮಾರಿ ಜಾತಿಯ ಹೆಸರಿನಲ್ಲಿ ‘ಬೇಡುವ ಜಂಗಮ’ರು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.
ರಾಜ್ಯದಲ್ಲಿ ಈಗಿರುವ ಮೀಸಲಾತಿ ನೀತಿ ಪ್ರಕಾರ ಹಿಂದುಳಿದ ಜಾತಿಗಳಿಗೆ ಶೇಕಡಾ 32ರಷ್ಟು ಮೀಸಲಾತಿ ಇದೆ. ಈ ಹಿಂದುಳಿದ ಜಾತಿಗಳಲ್ಲಿ ಲಿಂಗಾಯತ ಮತ್ತು ಒಕ್ಕಲಿಗ ಉಪಜಾತಿಗಳೂ ಇವೆ ಎನ್ನುವುದು ಗಮನಾರ್ಹ. ಹಿಂದೂಗಳಲ್ಲಿರುವ ಅನೇಕ ಜಾತಿಗಳು ಲಿಂಗಾಯತ ಉಪಜಾತಿಗಳಲ್ಲಿವೆ. ಆದರೆ ಲಿಂಗಾಯತರಲ್ಲಿರುವ ಈ ಹಿಂದುಳಿದ ಉಪಜಾತಿಗಳಿಗೆ ಹಿಂದೂಗಳಲ್ಲಿರುವ ಉಪಜಾತಿಗಳಿಗೆ ಇರುವ ಪ್ರಮಾಣದ ಮೀಸಲಾತಿ ಇಲ್ಲ.
ಪ್ರವರ್ಗ 2(ಎ)ಯಲ್ಲಿ ಹಿಂದೂ ಧರ್ಮಕ್ಕೆ ಸೇರಿರುವ 103 ಉಪಜಾತಿಗಳಿಗೆ ಶೇಕಡಾ 15ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ ಲಿಂಗಾಯತರಲ್ಲಿರುವ ಇದೇ ಜಾತಿಗಳಿಗೆ ಪ್ರವರ್ಗ 3(ಬಿ)ಯಲ್ಲಿ ಶೇಕಡಾ ಐದರಷ್ಟು ಮೀಸಲಾತಿ ಮಾತ್ರ ಇದೆ. ಜಾತಿ ಗಣತಿನಡೆಯಬೇಕಾಗಿರುವುದು ಮೀಸಲಾತಿ ಹೆಚ್ಚಳಕ್ಕಲ್ಲ, ಅದರ ದುರುಪಯೋಗವನ್ನು ತಡೆಯಲು ಎನ್ನುವುದು ಗಮನಾರ್ಹ.
ಜಾತಿ ಗಣತಿ ಕೋಮುವಾದಿಗಳಿಗೆ ನೆರವಾಗಬಹುದೇ?
ಜಾತಿ ಗಣತಿ ಎನ್ನುವುದು ಆರ್ ಎಸ್ ಎಸ್‍ ನ ಹಿಂದೂ ರಾಷ್ಟ್ರ ಸ್ಥಾಪನೆಯ ಪ್ರಯತ್ನಕ್ಕೆ ನೆರವಾಗಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸುತ್ತಾರೆ. ನಮ್ಮ ತಥಾಕಥಿತ ಹಿಂದೂ ರಾಷ್ಟ್ರವಾದಿಗಳು ಜಾತಿಯ ಪ್ರಶ್ನೆ ಎದುರಾದಾಗ ಓಡಿಹೋಗುತ್ತಾರೆ. ಯಾಕೆಂದರೆ ಜಾತಿಯ ಜತೆ ಎದುರಾಗುವ ಅಸ್ಪೃಶ್ಯತೆ, ಅಸಮಾನತೆ, ಪಂಕ್ತಿಭೇದ, ಮೂಡನಂಬಿಕೆ, ಕಂದಾಚಾರಗಳ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇಲ್ಲ. ಇದಕ್ಕಾಗಿ ಅವರು ಜಾತಿಯ ಹುಣ್ಣನ್ನು ಒಳಗೆ ಕೊಳೆಯಲು ಬಿಟ್ಟು ಮೇಲೆ ಧರ್ಮದ ಮುಲಾಮು ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಜಾತಿ ಗಣತಿ ನಡೆದರೆ ಈ ಹಿಂದೂಗಳಲ್ಲಿ ಕಳೆದುಕೊಂಡವರು ಯಾರು? ಪಡೆದುಕೊಂಡವರು ಯಾರು? ಎಂಬ ಲೆಕ್ಕ ಸಿಕ್ಕಿದರೆ ಬಯಲಾಗುವುದು ಯಾರ ಮುಖಗಳು ಎನ್ನುವುದನ್ನು ಬಿಡಿಸಿ ಹೇಳಬೇಕೇ?
ಜಾತಿ ಗಣತಿಯಿಂದ ಏನು ಲಾಭ?
ಈಗಾಗಲೇ ಹೇಳಿದ ಹಾಗೆ ಸರ್ಕಾರಿ ಸೌಲಭ್ಯಗಳ ಸದ್ಬಳಕೆ ಮತ್ತು ಮೀಸಲಾತಿ ದುರುಪಯೋಗ ತಡೆಯುವ ಜತೆಗೆ ಈಗಿನ ಸರ್ಕಾರಿ ಮೀಸಲಾತಿಗಿಂತ ಆಚೆಗೆ ನೋಡಲು ಈ ಜಾತಿ ಗಣತಿ ನೆರವಾಗಬಹುದು. ಜಾತಿ ಗಣತಿ ನಡೆದರೆ ಪ್ರತಿಯೊಬ್ಬರ ಉದ್ಯೋಗದ ವಿವರ ಕೂಡಾ ಲಭ್ಯ ಇರುವುದರಿಂದ ಖಾಸಗಿ ಕ್ಷೇತ್ರಗಳಲ್ಲಿರುವ ಉದ್ಯೋಗಿಗಳ ಜಾತಿ-ಧರ್ಮದ ಬಹುಮುಖ್ಯ ಮಾಹಿತಿ ಲಭ್ಯವಾಗುತ್ತದೆ. ಇಲ್ಲಿಯ ವರೆಗೆ ಖಾಸಗಿ ಕಂಪೆನಿಗಳು ಈ ಮಾಹಿತಿಯನ್ನು ಒದಗಿಸಲು ನಿರಾಕರಿಸುತ್ತಾ ಬಂದಿವೆ.
ಸರ್ಕಾರ ಬಹುತೇಕ ತನ್ನ ಸೇವೆಗಳನ್ನು ಖಾಸಗಿಕರಣಗೊಳಿಸಿರುವುದರಿಂದ ಸರ್ಕಾರಿ ಉದ್ಯೋಗಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೆ ವಿಸ್ತರಿಸದೆ ನಿರುದ್ಯೋಗ ನಿವಾರಣೆ, ಉದ್ಯೋಗದ ಸಮಾನ ಅವಕಾಶ ಸಾಧ್ಯ ಇಲ್ಲ.
ಖಾಸಗಿ ಎನ್ನುವುದು ಎಷ್ಟು ಖಾಸಗಿ ಎನ್ನುವ ಪ್ರಶ್ನೆಯನ್ನು ಕೂಡಾ ನಾವು ಕೇಳಬೇಕಾಗಿದೆ. ಸರ್ಕಾರ ನೀಡುವ ಅಗ್ಗದ ದರದಲ್ಲಿ ಭೂಮಿ, ಕಡಿಮೆ ಬಡ್ಡಿದರದಲ್ಲಿ ಸಾಲ, ಟ್ಯಾಕ್ಸ್ ಹಾಲಿಡೇ, ವಿದ್ಯುತ್, ನೀರು, ತೆರಿಗೆ ವಿನಾಯಿತಿ, ಸಬ್ಸಿಡಿ ಬೆಂಬಲ ಇಲ್ಲದೆ ಖಾಸಗಿ ಕ್ಷೇತ್ರದ ಬಂಡವಾಳ ಬೆಳೆಯಲು ಸಾಧ್ಯವೇ ಇಲ್ಲ.
ಈ ಖಾಸಗಿ ಕಂಪೆನಿಗಳಲ್ಲಿ ಷೇರುಗಳಲ್ಲಿ ತಮ್ಮ ಅಲ್ಪ ಉಳಿತಾಯವನ್ನು ಹೂಡುತ್ತಿರುವವರು ಸಾಮಾನ್ಯ ಜನರು. ಹರ್ಷದ್ ಮೆಹ್ತಾನ ವಂಚನೆಯಿಂದ, ಸತ್ಯ ಕಂಪ್ಯೂಟರ್ ನ ಮೋಸಕ್ಕೆ ಬಲಿಯಾದವರು ಅದರ ಷೇರುಗಳನ್ನು ಖರೀದಿಸಿದ್ದ ಸಾಮಾನ್ಯ ಜನ.
ಭಾರತದಲ್ಲಿ ಮೀಸಲಾತಿ ಸರ್ಕಾರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರೆ ಅನೇಕ ದೇಶಗಳಲ್ಲಿ ಉದಾಹರಣೆಗೆ ಅಮೆರಿಕಾ, ಉತ್ತರ ಐರ್ಲಾಂಡ್, ದಕ್ಷಿಣ ಆಫ್ರಿಕಾ, ಮಲೇಷಿಯಾ ಮೊದಲಾದ ದೇಶಗಳಲ್ಲಿ ಮೀಸಲಾತಿಯಂತಹ ದೃಡ ಸಂಕಲ್ಪ (Affirmative Action) ನೀತಿಗಳು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಜಾರಿಯಲ್ಲಿವೆ.
ಸರ್ಕಾರದ ವಿವಿಧ ಸವಲತ್ತುಗಳನ್ನು ಅನುಭವಿಸುವ ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದ ಸಾಲಪಡೆಯುವ ಎಲ್ಲ ಕೈಗಾರಿಕೆಗಳು, ವಸತಿ, ಶಿಕ್ಷಣ, ರಾಜಕೀಯ ಪಕ್ಷಗಳು ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ Affirmative Action ಜಾರಿಯಲ್ಲಿದೆ. ಇದು ಕೇವಲ ಔಪಚಾರಿಕ ಮಟ್ಟದಲ್ಲಿ ಉಳಿಯದೆ ಇವುಗಳ ಚಾಲನೆ ಮತ್ತು ಕಾರ್ಯಗತಕ್ಕೆ ಸಂಬಂದಪಟ್ಟ ಕಾನೂನುಗಳು ಮತ್ತು ಸಂಸ್ಥೆಗಳಿರುವುದನ್ನು ಕಾಣಬಹುದು.
ಅಮೆರಿಕಾದಲ್ಲಿ Equal Opportunity (employment) Laws , Equal Employment Opportunity Commission, ದಕ್ಷಿಣ ಆಫ್ರಿಕಾದಲ್ಲಿ The Promotion of Equality and Prevention of Unfair Discrimination Act 2000 ನೆದರ್ ಲ್ಯಾಂಡಿನಲ್ಲಿ ‍‍‍Fair Employment Act ಗಳಿವೆ.
ಜಾತಿ ಸಮೀಕ್ಷೆಯಿಂದ ಮೇಲ್ಜಾತಿಯವರಿಗೆ ಏನು ಲಾಭ?
ಮೊದಲನೆಯದಾಗಿ ಈಗ ನಡೆಯುತ್ತಿರುವ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಬಳಕೆಯಲ್ಲಿ ಜಾತಿ ಗಣತಿ ಎಂದು ಹೇಳಿದರೂ ಇದಕ್ಕೆ ಅಷ್ಟು ಸೀಮಿತವಾದ ಅರ್ಥ ಇಲ್ಲ. ಇದು ರಾಜ್ಯದಲ್ಲಿರುವ ಒಟ್ಟು ಜನಸಂಖ್ಯೆಯ, ಎಲ್ಲ ಜಾತಿ-ಧರ್ಮಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ.
ಸಾಮಾನ್ಯವಾಗಿ ಮೀಸಲಾತಿಯ ಬಗ್ಗೆ ಚರ್ಚೆ ನಡೆದಾಗೆಲ್ಲ ಮೇಲ್ಜಾತಿಯವರಲ್ಲಿ ಬಡವರಿಲ್ಲವೇ ಎಂಬ ಪ್ರಶ್ನೆ ತೂರಿ ಬರುತ್ತದೆ. ಈ ಪ್ರಶ್ನೆ ಬಹಳ ಪ್ರಸ್ತುತವಾದುದು ಕೂಡಾ. ಖಂಡಿತ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರಲ್ಲಿ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿಯೂ ಬಡವರಿದ್ದಾರೆ. ಆದರೆ ಈ ಬಗ್ಗೆ ಸರ್ಕಾರದಲ್ಲಿ ಯಾವ ಮಾಹಿತಿಯೂ ಇಲ್ಲ.
ಈಗಿನ ಆರ್ಥಿಕ-ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಂಡಾಗ ದಲಿತ-ಹಿಂದುಳಿದ-ಅಲ್ಪಸಂಖ್ಯಾತರಲ್ಲಿರುವ ಬಡವರ ಸಂಖ್ಯೆ ಮಾತ್ರವಲ್ಲ, ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗರಲ್ಲಿನ ಬಡವರ ಸಂಖ್ಯೆ ಮತ್ತು ಅವರ ಸ್ಥಿತಿಗತಿಯ ಮಾಹಿತಿ ಲಭ್ಯವಾಗುತ್ತದೆ. ಅದರ ಆಧಾರದಲ್ಲಿ ಮೇಲ್ಜಾತಿಗಳಲ್ಲಿರುವ ಬಡವರ ಅಭಿವೃದ್ಧಿಗಾಗಿಯೂ ಕಾರ್ಯಕ್ರಮಗಳನ್ನು ರೂಪಿಸುವಂತೆ ಒತ್ತಡ ಹೇರಲು ಸಾಧ್ಯವಿದೆ.

Friday, March 25, 2016

ಗಾಂಧಿಯೊಬ್ಬರೇ ಸಾಕಾಗಲ್ಲ..

ನಾನಿನ್ನೂ ಸ್ನಾನ ಮಾಡಿಲ್ಲ, ಸ್ವಲ್ಪ ಹೊತ್ತು ಮೊದಲು ಪೋನ್ ಕಿವಿಯಲ್ಲಿ ಇಟ್ಟುಕೊಂಡೇ ತಿಂಡಿ ತಿಂದೆ. ಮೊಬೈಲ್ ಚೀರುತ್ತಲೇ ಇದೆ. ಪ್ರಜಾವಾಣಿಯ ದಿನಗಳ ಸೋಮವಾರ ನೆನಪಾಗುತ್ತಿದೆ. ಇಂದಿನ ಪ್ರಜಾವಾಣಿಯ ಸಂಗತದಲ್ಲಿ ನನ್ನದೊಂದು ಪ್ರತಿಕ್ರಿಯೆ ಪ್ರಕಟವಾಗಿದೆ.
ಸಹೃದಯಿ ಓದುಗರ ಪ್ರತಿಕ್ರಿಯೆಗಳಿಗೆ ಖುಷಿಯಾಗುತ್ತಿದೆ ನಿಜ, ಆದರೆ ಎದೆಯ ಎಲ್ಲೋ ಮೂಲೆಯಲ್ಲಿ ಕಳೆದ ಮೂರುವರ್ಷಗಳಲ್ಲಿ ನಾನು ಕಳೆದುಕೊಂಡಿದ್ದೇನು ಎನ್ನುವುದೂ ಅರಿವಾಗಿ ಗಿಲ್ಟ್ ಆಗುತ್ತಿದೆ.
ಥ್ಯಾಂಕ್ಯೂ ಜತೆಗೆ ಸಾರಿ.

Thursday, March 3, 2016

ಲೈಪು ಅಂದರೆ ಹೀಗೆಯೇ.... ಮತ್ತು ಹೀಗೆಯೇ ಇರಬೇಕು.

ಎಷ್ಟೋ ಸಂದರ್ಭಗಳಲ್ಲಿ ಅರ್ಥವಿಲ್ಲದ ಮೌನ ದುಮ್ಮಾನಕ್ಕೆ ಕಾರಣವಾಗಿ ಮನಸ್ಸು ಭಾರವಾಗುವುದುಂಟು. ಈ ವಾರದ ಅಗ್ನಿ ವಾರಪತ್ರಿಕೆಯನ್ನು ಓದಿದಾಗ ಮನಸ್ಸಿನ ಭಾರವನ್ನು ಇಳಿಸಬೇಕೆನಿಸಿತು.
ಲೇಖಕ ಮತ್ತು ಪತ್ರಕರ್ತ ಅಗ್ನಿ ಶ್ರೀಧರ್ ಅವರ ಅನುಭವ, ಓದಿನ ವಿಸ್ತಾರ, ಒಳನೋಟಗಳ ಜತೆಗೆ ಸಮಾನತೆ ಮತ್ತು ಜಾತ್ಯತೀತ ನಿಲುವಿನ ಬಗೆಗಿನ ನಿಷ್ಠುರವಾದ ಅವರ ಬದ್ದತೆ ಬಗ್ಗೆ ನನಗೆ ವಿಶೇಷವಾದ ಅಭಿಮಾನ. ಅಗ್ನಿ ಪತ್ರಿಕೆಯ ಸಂಪಾದಕರಾದ ಇಂದೂಧರ್ ಹೊನ್ನಾಪುರ ಅವರೂ ಅಷ್ಟೇ ಆಪ್ತರು ನನಗೆ. ಮುಂಗಾರು ಪತ್ರಿಕೆಗೆ ನಾನು ಸೇರಿದಾಗ ಇಂದೂಧರ ಹೊನ್ನಾಪುರ ಅವರು ಅದರ ಕಾರ್ಯನಿರ್ವಾಹಕ ಸಂಪಾದಕರಾಗಿದ್ದು ನಮ್ಮನ್ನು ಬೆಳೆಸಿದವರು.

ಕೆಲವು ವಾರಗಳ ಹಿಂದೆ ಲೇಖನವೊಂದರ ಸಂಬಂಧ ಹುಟ್ಟಿದ ಭಿನ್ನಾಭಿಪ್ರಾಯದಿಂದ ನಾನು ಮತ್ತು ಈ ಹಿರಿಯರಿಬ್ಬರು ಮನಸ್ಸು ಕಹಿಮಾಡಿಕೊಳ್ಲಬೇಕಾಯಿತು. ಭಾವುಕನಾಗಿ ಪ್ರತಿಕ್ರಿಯಿಸಿದೆ ಎಂದು ನನಗೂ ಆ ಮೇಲೆ ಅನಿಸಿತ್ತು. ಅವರಿಗೂ ಅನಿಸಿರಲೂಬಹುದು. ಮನಸ್ಸುಗಳೇನು ಮುರಿದು ಹೋಗಿರಲಿಲ್ಲ, ಅಲ್ಲಿಯೇ ಮುದುಡಿಕೊಂಡಿತ್ತು. ಇದರಿಂದ ನಮಗಿಂತಲೂ ಹೆಚ್ಚು ನೊಂದುಕೊಂಡವರು ನಮ್ಮ ಹಿರಿಯ-ಕಿರಿಯ ಸ್ನೇಹಿತರು.
ಕೆಲವು ವಾರಗಳ ಹಿಂದೆ ಯಥಾ ಪ್ರಕಾರ ಸಂಘ ಪರಿವಾರ ನನ್ನ ಮೇಲೆ ಮುಗಿಬಿದ್ದಾಗಲೂ ಅಗ್ನಿ ನನಗೆ ಬೆಂಬಲ ಸೂಚಿಸಿ ವೈಯಕ್ತಿಕ ಸಂಬಂಧವನ್ನು ಮೀರಿದ್ದು ಪತ್ರಿಕಾಧರ್ಮ ಎನ್ನುವುದನ್ನು ಹೇಳಿತ್ತು. ಈ ಬಾರಿ ಇಂದೂಧರ ಅವರು ಸಂಪಾದಕೀಯದಲ್ಲಿ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಚೇತನಾ ತೀರ್ಥಹಳ್ಳಿ ಮತ್ತು ನನ್ನೊಂದಿಗೆ ಅಗ್ನಿ ಬಳಗ ಇದೆ ಎಂದು ಬರೆದಿದ್ದಾರೆ.
ಇದನ್ನು ಓದಿದ ನಂತರ ನಾಲ್ಕು ಸಾಲು ಬರೆದು ಮನಸ್ಸನ್ನು ಹಗುರಮಾಡಿಕೊಳ್ಳಬೇಕೆನಿಸಿತು. ವಿರೋಧಿಗಳು ಬೆನ್ನತ್ತಿರುವ ಈ ಕಾಲದಲ್ಲಿ ಜಗಳಕ್ಕೆಲ್ಲಿದೆ ಪುರುಸೊತ್ತು? ಇದು ಸಮಾನ ಮನಸ್ಕರೆಲ್ಲ ಪರಸ್ಪರ ಪ್ರೀತಿಸುವ, ಅರ್ಥಮಾಡಿಕೊಳ್ಳುವ ಹೊತ್ತು.
ಜಗಳವೇ ಇಲ್ಲದ ಸ್ನೇಹ ಬಹಳ ಕೃತಕವಾದುದು, ಆದರೆ ಜಗಳವಾಡುವಾಗಲೂ ಒಳಗೆ ಸ್ನೇಹದ ಒರತೆ ಜಿನುಗುತ್ತಿರುವುದು ಪರಸ್ಪರರ ಗಮನಕ್ಕೆ ಬರಬೇಕು. ಅಂತಹ ಸ್ನೇಹ ಯಾರು ಹುಳಿ ಹಿಂಡಿದರೂ ಗಟ್ಟಿಯಾಗಿ ಉಳಿಯುತ್ತದೆ. ಥ್ಯಾಂಕ್ಯೂ ಶ್ರೀಧರ್ ಮತ್ತು ಇಂದೂಧರ್. ನಮ್ಮ ಜಗಳದ ನಡುವೆ ಸಿಕ್ಕಿಹಾಕಿಕೊಂಡಿದ್ದ ಗೆಳೆಯ ಮಂಜುನಾಥ ಅದ್ದೆಯವರೂ ಈಗ ನಿರಾಳ.

Wednesday, March 2, 2016

ಅಪಪ್ರಚಾರಕ್ಕೆ ನನ್ನ ಮೌನ ಕಾರಣವಾಗಬಾರದೆಂದು..

ಕಳೆದ ಶನಿವಾರ ಉಡುಪಿಯಲ್ಲಿ ಕೆಮ್ಮಲಜೆ ಜಾನಪದ ಪ್ರಕಾಶನ ಏರ್ಪಡಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಡಿದ ನನ್ನ ಮಾತುಗಳ ಆಯ್ದ ಭಾಗಗಳ ಪ್ರಕಟಿತ ವರದಿಯನ್ನು ಆಧರಿಸಿ ತಥಾಕಥಿತ ‘ದೇಶಪ್ರೇಮಿ’ಗಳು ನನ್ನನ್ನು ದೇಶದ್ರೋಹದ ಆರೋಪದಲ್ಲಿ ಗಲ್ಲಿಗೇರಿಸಲು ಹೊರಟಿದ್ದಾರೆ. ಇತ್ತೀಚೆಗೆ ಇಂತಹ ಕೀಟಳೆಗಳು ಸಾಮಾನ್ಯವಾಗತೊಡಗಿರುವ ಕಾರಣ ಪ್ರತಿಕ್ರಿಯಿಸಬಾರದೆಂದು ಸುಮ್ಮನಿದ್ದೆ. ಆದರೆ ಅಪಪ್ರಚಾರಕ್ಕೆ ನನ್ನ ಮೌನ ಕಾರಣವಾಗಬಾರದೆಂದು ಅಲ್ಲಿ ಮಾತನಾಡಿದ್ದನ್ನು ಸಂಕ್ಷಿಪ್ತವಾಗಿ ಇಲ್ಲಿ ಹೇಳಿದ್ದೇನೆ:
1. “ ...ನಾವೆಲ್ಲ ಜಾನಪದ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕೆಂದು ಹೇಳುತ್ತೇವೆ. ಆದರೆ ಅದನ್ನು ಉಳಿಸುವವರು ಯಾರು? ಜಾನಪದ ಸಂಸ್ಕೃತಿಯ ಸಂಶೋಧಕರೇ? ಇಲ್ಲವೆ ಜಾನಪದ ಸಂಸ್ಕೃತಿಯನ್ನು ಜೀವಂತವಾಗಿಟ್ಟಿರುವ ಕಲಾವಿದರೇ? ಜಾನಪದ ಸಂಶೋಧಕರಿಗೆ ಸರ್ಕಾರವೇ ಸುಭದ್ರವಾದ ಉದ್ಯೋಗ ನೀಡಿ ಸಂಶೋದನೆಗೆ ಅನುವು ಮಾಡಿಕೊಡುತ್ತದೆ. ಆದರೆ ಜಾನಪದ ಕಲಾವಿದರ ಸ್ಥಿತಿ ಏನು? ಭೂತಾರಾಧನೆಯೂ ಜಾನಪದ ಸಂಸ್ಕೃತಿಯ ಭಾಗ. ಈ ಭೂತ ಕಟ್ಟುವವರು ದಲಿತ ಸಮುದಾಯಕ್ಕೆ ಸೇರಿದವರು. ಭೂತಾರಾಧನೆಯ ಸಂಸ್ಕೃತಿಯನ್ನು ಉಳಿಸಬೇಕೆಂದು ಈ ದಲಿತ ಕಲಾವಿದರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸದೆ, ಉದ್ಯೋಗಕ್ಕೆ ಸೇರಿಸದೆ ಭೂತ ಕಟ್ಟುವ ಕಲಾವಿದರನ್ನಾಗಿಯೇ ಉಳಿಸಬೇಕೆಂಬುದು ತೀರಾ ಅಮಾನವೀಯವಾದುದು. ದಲಿತ ತಂದೆ-ತಾಯಿ ಕೂಡಾ ತಮ್ಮ ಮಕ್ಕಳು ಡಾಕ್ಟರ್,ಎಂಜನಿಯರ್ ಆಗಬೇಕೆಂದು ಬಯಸಿದರೆ ತಪ್ಪೇ?
2. ಇದೇ ರೀತಿ ಇತ್ತೀಚೆಗೆ ಧರ್ಮ ರಕ್ಷಣೆಗಾಗಿ ಹೋರಾಟ ನಡೆಸಬೇಕೆಂದು ಧಾರ್ಮಿಕ ನಾಯಕರು ಕರೆಕೊಡುತ್ತಾ ಇದ್ದಾರೆ. ಆದರೆ ಈ ಧರ್ಮ ರಕ್ಷಣೆಗಾಗಿ ಬೀದಿಗಿಳಿದು ಪೊಲೀಸ್ ಕೇಸ್ ಹಾಕಿಸಿಕೊಂಡು ಜೈಲು ಸೇರುತ್ತಿರುವವರು ಶೂದ್ರರು ಮತ್ತು ಬಡವರು. ಧರ್ಮ ರಕ್ಷಣೆಗಾಗಿ ಕರೆನೀಡುತ್ತಿರುವ ನಾಯಕರ ಮಕ್ಕಳು ಡಾಕ್ಟರ್, ಎಂಜನಿಯರ್ ಗಳಾಗುತ್ತಾ ದೇಶ-ವಿದೇಶದಲ್ಲಿ ಆರಾಮವಾಗಿದ್ದಾರೆ. ಇದು ಯಾವ ಧರ್ಮ ರಕ್ಷಣೆ?
3. ಇತ್ತೀಚಿನ ದಿನಗಳಲ್ಲಿ ದೇಶಪ್ರೇಮ ಕೂಡಾ ಇದ್ದಕ್ಕಿದ್ದ ಹಾಗೆ ಎಲ್ಲರಲ್ಲಿಯೂ ಉಕ್ಕಿ ಹರಿಯತೊಡಗಿದೆ. ವಿಪರ್ಯಾಸದ ಸಂಗತಿಯೆಂದರೆ ಈ ರೀತಿ ದೇಶಪ್ರೇಮದ ಬಗ್ಗೆ ಭಯಂಕರ ಭಾಷಣ ಮಾಡುತ್ತಿರುವವರ ಕುಟುಂಬದಲ್ಲಿ ಯಾರೂ ಸೇನೆ ಸೇರುವುದಿಲ್ಲ, ವೈದ್ಯಕೀಯ, ಎಂಜನಿಯರಿಂಗ್ ಕಾಲೇಜುಗಳನ್ನು ಸೇರುತ್ತಾರೆ. ಕೊನೆಗೂ ಸೇನೆ ಸೇರಿ ಪ್ರಾಣ ಕಳೆದುಕೊಳ್ಳುವವರು ಬಡವರ ಮಕ್ಕಳೇ ಆಗಿದ್ದಾರೆ. ಅವರ ದೇಶಪ್ರೇಮದ ಬಗ್ಗೆ ಗೌರವ ಸೂಚಿಸುತ್ತಲೇ ಒಂದು ಮಾತು ಹೇಳುವುದಾದರೆ ಈ ರೀತಿ ಹುತಾತ್ಮರಾದವರು ಸೇನೆ ಸೇರಲು ಬಡತನವೂ ಕಾರಣ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕು.
4. ಜಾನಪದ ಸಂಸ್ಕೃತಿಯನ್ನು ಉಳಿಸಲು, ಧರ್ಮವನ್ನು ರಕ್ಷಿಸಲು ಮತ್ತು ದೇಶವನ್ನು ರಕ್ಷಿಸಲು ಬಡವರೇ ಯಾಕೆ ಬೇಕು?
- ಇದು ನಾನು ಅಲ್ಲಿ ಎತ್ತಿದ ಮುಖ್ಯ ಪ್ರಶ್ನೆ .ಈ ಮಾತನ್ನು ಇದೇ ಮೊದಲ ಬಾರಿ ನಾನು ಹೇಳುತ್ತಿಲ್ಲ. ಕಾರ್ಗಿಲ್ ಯುದ್ದದ ಸಮಯದಲ್ಲಿ ಹುತಾತ್ಮ ಯೋಧರ ಶವದ ಪೆಟ್ಟಿಗೆಗಳು ರಾಜ್ಯದ ಬಡವರ ಮನೆಗೆ ಹೋದಾಗಲೂ ಬರೆದಿದ್ದೆ. ಸಂಸತ್ ಮೇಲೆ ಭಯೋತ್ಪಾದಕರ ದಾಳಿಯನ್ನು ಎದುರಿಸಿ ಹುತಾತ್ಮರಾದ ಭದ್ರತಾ ಪಡೆಗಳ ಕುಟುಂಬ ಪರಿಹಾರಕ್ಕಾಗಿ ಅಲೆದಾಡುತ್ತಿದ್ದಾಗಲೂ ಬರೆದಿದ್ದೆ. ಮುಂಬೈನಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಭದ್ರತಾ ಸಿಬ್ಬಂದಿ ಪ್ರಾಣಕಳೆದುಕೊಂಡಾಗಲೂ ಬರೆದಿದ್ದೆ. ಇವೆಲ್ಲವೂ ಹುತಾತ್ಮರಾದವರಿಗೆ ನಾನು ಸಲ್ಲಿಸುವ ಗೌರವ ಎಂದೇ ನಾನು ತಿಳಿದುಕೊಂಡಿದ್ದೇನೆ. ಇದನ್ನೇ ದೇಶದ್ರೋಹ ಎನ್ನುವುದಾದರೆ ನಾನು ಗಲ್ಲಿಗೇರಲು ಸಿದ್ದನಿದ್ದೇನೆ.

Wednesday, February 24, 2016

‘ದೇಶಪ್ರೇಮಿಗಳು’ಅಂತಾರಲ್ಲಾ ಅವರ ಬಗ್ಗೆ....

ದೇಶದ ಗಡಿ ಕಾಯುತ್ತಿರುವ ಯೋಧರು ವೀರ ಮರಣವನ್ನಪ್ಪಿದಾಗ ಉಕ್ಕಿ ಹರಿಯುವ ದೇಶಪ್ರೇಮದ ಪ್ರವಾಹವನ್ನು ಕಂಡಾಗಲೆಲ್ಲ ನಾನೇ ಹಿಂದೆ ‘ಪ್ರಜಾವಾಣಿ’ ಯಲ್ಲಿ ಬರೆದಿದ್ದ ಅಂಕಣವೊಂದು ನನ್ನನ್ನು ಕಾಡತೊಡಗುತ್ತದೆ.ಇದು ಮುಂಬೈನ ತಾಜ್ ಹೊಟೇಲ್ ಮೇಲೆ ಭಯೋತ್ಪಾದಕರು ದಾಳಿ ನಡೆದಿದ್ದ ಸಂದರ್ಭದಲ್ಲಿ ಬರೆದದ್ದು.
ಹನುಮಂತ ಕೊಪ್ಪದ ಮತ್ತು ಆತನ ಜತೆಯಲ್ಲಿಯೇ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ವೀರ ಮರಣವನ್ನಪ್ಪಿರುವ ಯೋಧರಿಗಾಗಿ ನಾವೆಲ್ಲ ಕಣ್ಣೀರು ಸುರಿಸುತ್ತಿರುವ ಸಂದರ್ಭದಲ್ಲಿ ಕೂಡಾ ಹುತಾತ್ಮ ಯೋದರು ಮತ್ತು ಅವರ ಕುಟುಂಬದ ಬಗ್ಗೆ ಸಮಾಜದ ಪ್ರತಿಕ್ರಿಯೆಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ .
-------- --------------- --------------------- --------------------------------------------------------------
‘ದೇಶಪ್ರೇಮಿಗಳು’ಅಂತಾರಲ್ಲಾ ಅವರ ಬಗ್ಗೆ....
ಭಾರತದಲ್ಲಿ ದೇಶಭಕ್ತಿಯಷ್ಟು ಸುಲಭದಲ್ಲಿ ಬೇರೇನನ್ನೂ ಸಾಬೀತುಪಡಿಸಲು ಸಾಧ್ಯವಿಲ್ಲವೇನೋ? ಇದಕ್ಕಾಗಿ ಎಷ್ಟೊಂದು ಮಾರ್ಗಗಳು? ಎಸ್‌ಎಂಎಸ್ ಕಳುಹಿಸಬಹುದು, ಟೀಶರ್ಟ್ ಮೇಲೆ ದೇಶಭಕ್ತಿಯ ಘೋಷಣೆಗಳನ್ನು ಪ್ರಿಂಟ್ ಹಾಕಿಸಿಕೊಳ್ಳಬಹುದು,ಕೈಕೈ ಹಿಡಿದು ಮಾನವಸರಪಳಿ ಕಟ್ಟಿಕೊಳ್ಳಬಹುದು, ಭಾರತದ ಭೂಪಟಕ್ಕೆ ದೇವತೆಯ ಚಿತ್ರಅಂಟಿಸಿ ಹೂಮಾಲೆ ಹಾಕಿ ಮೆರವಣಿಗೆ ಮಾಡಬಹುದು,ಗೋಡೆ ಬರಹಗಳನ್ನುಬರೆಯಬಹುದು, ಪತ್ರಿಕೆಗಳವಾಚಕರ ವಾಣಿ ವಿಭಾಗಕ್ಕೆ ಬೆಂಕಿಕಾರುವ ಪತ್ರಬರೆಯಬಹುದು, ಟಿವಿಚಾನೆಲ್‌ಗಳ ಮೈಕ್ ಮುಂದೆ ನಿಂತು ರಾಜಕಾರಣಿಗಳಿಗೆ, ಪಾಕಿಸ್ತಾನಕ್ಕೆ,ಸಾಧ್ಯವಾದರೆ ಮುಸ್ಲಿಮರಿಗೆ ಮನಸಾರೆ ಬೈದುಬಿಡಬಹುದು, ಜತೆಗೆ, ಈಎಲ್ಲಾ ‘ದೇಶಭಕ್ತಿ’ಯ ಕೆಲಸಮಾಡದವರು ದೇಶದ್ರೋಹಿಗಳೆಂದು ಹೀಯಾಳಿಸಬಹುದು, ಇವೆಲ್ಲಕ್ಕಿಂತ ಸುಲಭದ ಮಾರ್ಗವೆಂದರೆ ಕತ್ತಲಾಗುತ್ತ್ತಿದ್ದಂತೆಯೇ ನಾಲ್ಕುಬೀದಿ ಸೇರುವಸ್ಥಳದಲ್ಲಿಗೆಳೆಯ-ಗೆಳತಿಯರೊಂದಿಗೆಕೂಡಿ ರೂಪಾಯಿಗೆ ನಾಲ್ಕು ಸಿಗುವಒಂದಷ್ಟು ಕ್ಯಾಂಡಲ್‌ಗಳನ್ನು ಹೊತ್ತಿಸಬಹುದು (ವಿ.ಸೂ.:ದಯವಿಟ್ಟುಟಿವಿ ಚಾನೆಲ್‌ಗಳಿಗೆ ಮೊದಲೇ ಕಾರ್ಯಕ್ರಮದ ಬಗ್ಗೆ ತಿಳಿಸಿ,ಡ್ರೆಸ್-ಮೇಕಪ್ ಕ್ಯಾಮೆರಾ ಕಣ್ಣಿಗೆ ಒಪ್ಪುವಂತಿರಲಿ).ಅಲ್ಲಿಗೆ ದೇಶಭಕ್ತರೆಂದು ಸಾಬೀತಾಗಿ ಹೋಯಿತು, ಮನೆಗೆಹೋಗಿ ಹೊಟ್ಟೆತುಂಬಾ ಊಟ ಮಾಡಿ ಸೊಂಪಾಗಿ ನಿದ್ದೆ ಮಾಡಬಹುದು.
ಕಳೆದ ಹದಿನೆಂಟುದಿನಗಳಲ್ಲಿ ದೇಶದ ಬಹುತೇಕ ‘ಜಾಗೃತನಾಗರಿಕರು’ ಮಾಡಿದ್ದು ಇದನ್ನೇಅಲ್ಲವೇ? ಮೊನ್ನೆಸಂಸತ್ ಭವನದ ಪಕ್ಕದ ವಿಜಯ ಚೌಕ್ ನಲ್ಲಿ ಒಬ್ಬ ಯುವಕ ‘ಮೇರಾಏಕ್ ಬೈಟ್ ಲೇ ಲೋ’ ಎಂದು ಟಿವಿಚಾನೆಲ್‌ಗಳ ವರದಿಗಾರರರನ್ನು ಗೋಗರೆಯುತ್ತ್ತಿದ್ದ. ‘ಯಾಕಯ್ಯಾ’ಎಂದು ಕೇಳಿದರೆ ಎದುರಿಗಿದ್ದ ಸಂಸತ್ ಭವನದ ಕಡೆ ತೋರಿಸಿ ‘ಮುಜೇ ನೇತಾಲೋಗೊಂಕೋ ಗಾಲಿ ದೇನಾ ಹೈ’ಎಂದು ಕಿರುಚಾಡತೊಡಗಿದ. ‘ಅವರೇನುಮಾಡಿದ್ದಾರೆ?’ ಎಂದು ಪ್ರಶ್ನಿಸಿದರೆ ಹಿಂದಿ ಶಬ್ದಕೋಶದಲ್ಲಿರುವ ಎಲ್ಲ ಬೈಗುಳಗಳನ್ನು ಕಾರಿದ.‘ನೀನೇನು ಮಾಡಿದೆ’ ಎಂದು ಕೆಣಕಿದರೆ ‘ಉನ್ಹೇ ಗಾಲಿ ದೇನೇಕೆ ಲಿಯೇ ಮುಂಬೈ ಸೇ ಆಯಾ ಹ್ಹೂಂ,ಯೆ ಕಮ್ ಹೈ ಕ್ಯಾ?’ಎಂದು ಮರುಪ್ರಶ್ನಿಸಿದ. ಅವನನ್ನು ಪಕ್ಕಕ್ಕೆ ಕರೆದು ‘ನೋಡು, ಮುಂಬೈದಾಳಿಯಲ್ಲಿ ಹದಿನಾಲ್ಕು ಪೊಲೀಸರುಸತ್ತಿದ್ದಾರಲ್ಲಾ, ಅವರಹೆಸರು ಹೇಳು’ ಎಂದರೆ ಮೊದಲ ಬಾರಿ ಆತ ದೆಹಲಿ ಚಳಿಯಲ್ಲಿಯೂ ಬೆವರತೊಡಗಿದ,ತಡವರಿಸತೊಡಗಿದ.‘..ಕರಕರೆಸಾಬ್,ಕಾಮ್ಟೆಸಾಬ್, ಸಾಲಸ್ಕರ್ಸಾ ಬ್......ಒಂಬ್ಲೆ....’ಅದರ ನಂತರ ಒಂದು ಹೆಸರೂ ಅವನ ಬಾಯಿಯಿಂದ ಹೊರಡಲಿಲ್ಲ.
ಎಂತಹ ಮೂರ್ಖ ಯುವಕ ಅಂತೀರಾ? ಹಾಗಿದ್ದರೆ ಹುತಾತ್ಮರಾದ ಉಳಿದ ಹತ್ತು ಪೊಲೀಸರ ಹೆಸರು ನೆನಪಿಗೆ ಬರುತ್ತಾ ನೋಡಿ. ಬಹುಶಃ ಹುತಾತ್ಮ ಪೊಲೀಸರಕುಟುಂಬವರ್ಗ, ಸಹದ್ಯೋಗಿಗಳು ಮತ್ತು ಸ್ನೇಹಿತರನ್ನು ಹೊರತುಪಡಿಸಿ ಉಳಿದವರಲ್ಲಿ ಯಾರಿಗೂ ಅವರ ಹೆಸರುನೆನಪಲ್ಲಿ ಉಳಿದಿಲ್ಲ. ಮರಾಠಿಪತ್ರಿಕೆಗಳನ್ನು ಹೊರತುಪಡಿಸಿ ಬೇರೆ ಪತ್ರಿಕೆಗಳು ಕೂಡಾ ಅವರ ಫೋಟೋಗಳನ್ನು ಸರಿಯಾಗಿ ಪ್ರಕಟಿಸಲಿಲ್ಲ, ಅವರ ಸಾವಿನಿಂದಾಗಿ ಅವರ ಕುಟುಂಬಕ್ಕಾದ ಕಷ್ಟ-ನಷ್ಟದಚಿತ್ರವನ್ನು ನೀಡಿಲ್ಲ. ಟಿವಿಕ್ಯಾಮೆರಾಗಳ ಮುಂದೆ ಪೊಲೀಸರ ತ್ಯಾಗವನ್ನು ಕೊಂಡಾಡಿದವರು,ಕಣ್ಣೀರು ಸುರಿಸಿ ಮೇಕಪ್ ಸರಿಪಡಿಸಿಕೊಂಡವರು ಯಾರೂ ಈ ‘ಅನಾಮಿಕ ಹುತಾತ್ಮರು’ ಯಾರು? ಅವರೆಲ್ಲಿದ್ದಾರೆ? ಮನೆ ಯಜಮಾನನ ಸಾವಿನ ನಂತರ ಅವರ ಮನೆ ಸ್ಥಿತಿ ಏನಾಗಿದೆ?ಎಂದು ತಿಳಿದುಕೊಳ್ಳುವಪ್ರಯತ್ನ ಮಾಡಿಲ್ಲ.
೨೬/೧೧ ಘಟನೆಯ ಮರುಗಳಿಗೆಯಲ್ಲಿಯೇ ರಾಜ್ ಠಾಕ್ರೆಯನ್ನು ಗೇಲಿ ಮಾಡಿ’ಮುಂಬೈಯನ್ನು ರಕ್ಷಿಸಿದವರು ಉತ್ತರ, ದಕ್ಷಿಣದರಾಜ್ಯಗಳ ಯೋಧರು, ಮರಾಠಿಗಳಲ್ಲ’ಎನ್ನುವ ಅರ್ಥದ ಎಸ್‌ಎಂಎಸ್‌ಗಳು ಹರಿದಾಡತೊಡಗಿದವು. ಸತ್ಯಸಂಗತಿ ಏನೆಂದರೆ ಹುತಾತ್ಮ ಪೊಲೀಸರಾದ ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್, ಜಯವಂತ್ ಪಾಟೀಲ್,ಮುಖೇಶ್ ಯಾಧವ್, ಪ್ರಕಾಶ್ ಮೋರೆ, ಆರ್.ಎಸ್.ಶಿಂಧೆ,ಶಶಾಂಕ್ ಶಿಂಧೆ, ವಿಜಯ್ ಖಾಂಡೇಕರ್, ಎ.ಆರ್.ಚಿಂತೇ, ಅಂಬಾದಾಸ್ ಪವಾರ್, ಬಿ.ಸಿ.ಬೋಂಸ್ಲೆ ಮೊದಲಾದವರೆಲ್ಲರೂ ಮರಾಠಿಗರು.ಪಾಕಿಸ್ತಾನದ ಪಾತ್ರವನ್ನು ಸಾಬೀತುಪಡಿಸುವ ಪ್ರಮುಖ ಸಾಕ್ಷಿಯಾಗಿರುವ ಭಯೋತ್ಪಾದಕ ಅಜ್ಮಲ್ ಕಸಬ್ ಬಂಧನಕ್ಕೆ ಕಾರಣರಾದ ಸಹಾಯಕ ಸಬ್‌ಇನ್‌ಸ್ಪೆಕ್ಟರ್ ತುಕರಾಮ್ ಒಂಬ್ಲೆ ಕೂಡಾ ಮರಾಠಿಗ. ತನ್ನ ಗುಂಡಿಗೆಗೆ ಕಸಬ್ ಗುಂಡು ಹೊಡೆಯುತ್ತಿದ್ದರೂ ಲೆಕ್ಕಿಸದೆ ಆತನನ್ನು ಹಿಡಿದಕೈಯ್ಯನ್ನು ಸಡಿಲಿಸದೆ ಪ್ರಾಣಬಿಟ್ಟವರು ಒಂಬ್ಲೆ.
ಪ್ರಾಣ ಕಳೆದುಕೊಂಡರೇನಾಯಿತು,ಸರ್ಕಾರ ಪರಿಹಾರನೀಡುವುದಿಲ್ಲವೇ? ಎಂದುಕೇಳಬಹುದು. ಸಂಸತ್ ಭವನದ ಮೇಲೆ ಭಯೋತ್ಪಾದಕರು ದಾಳಿನಡೆಸಿ ಕಳೆದ ಶನಿವಾರಕ್ಕೆ ಏಳುವರ್ಷಗಳಾಯಿತು. ಆ ಘಟನೆಯಲ್ಲಿ ಗುಂಡಿಗೆ ಎದೆಕೊಟ್ಟು ನಮ್ಮ ಜನಪ್ರತಿನಿಧಿಗಳನ್ನು ಉಳಿಸಿದವರು ಭದ್ರತಾಪಡೆಯ ಏಳು ಅಧಿಕಾರಿಗಳು. ಅವರಲ್ಲೊಬ್ಬರು ಎಎಸ್‌ಐ ನಾನಕ್ ಚಂದ್. ಹುತಾತ್ಮರಾದವರೆಲ್ಲರಿಗೂ ಪರಿಹಾರದ ಜತೆ ಪೆಟ್ರೋಲ್ ಪಂಪ್ ಲೈಸೆನ್ಸ್ ನೀಡುವುದಾಗಿ ಆಗಿನ ಕೇಂದ್ರ ಸರ್ಕಾರ ಘೋಷಿಸಿತ್ತು.
ಆರು ವರ್ಷಗಳ ಕಾಲ ಕಚೇರಿಯಿಂದ ಕಚೇರಿಗೆ ಅಲೆದಾಡಿ,ಸಾಲಮಾಡಿ ದುಡ್ಡು ತಂದು ಲಂಚಕೊಟ್ಟ ನಂತರ (ಪತ್ರಿಕೆಗಳಿಗೆನಿನ್ನೆ ಆ ಕುಟುಂಬವೇ ಹೇಳಿಕೊಂಡಿದೆ) ಕಳೆದ ವರ್ಷ ಸೋನೆಪತ್‌ನಲ್ಲಿರುವ ಕುಟುಂಬಕ್ಕೆ ದೂರದ ಗುಡ್‌ಗಾಂವ್‌ನ ಎಲ್ಲೋ ಮೂಲೆಯಲ್ಲಿ ಪೆಟ್ರೋಲ್ ಪಂಪ್ ಮಂಜೂರು ಮಾಡಲಾಗಿದೆ. ಆ ನಿವೇಶನದಲ್ಲಿ ನೀರು-ಚರಂಡಿವ್ಯವಸ್ಥೆ ಯಾವುದೂ ಸರಿ ಇಲ್ಲ. ಮತ್ತೊಬ್ಬ ಭದ್ರತಾ ಸಹಾಯಕ ಮಾಥುರ್‌ ಸಿಂಗ್ ಕುಟುಂಬಕ್ಕೆಕೇಂದ್ರ ಸರ್ಕಾರ ಹತ್ತು ಲಕ್ಷರೂಪಾಯಿ ಪರಿಹಾರ ನೀಡಿ ಕೈತೊಳೆದುಕೊಂಡುಬಿಟ್ಟಿದೆ.ದೆಹಲಿಯಲ್ಲಿಯೇ ಈ ಗತಿಯಾದರೆ ಉಳಿದ ಕಡೆ ಕರ್ತವ್ಯನಿರತರಾಗಿದ್ದಾಗ ಹುತಾತ್ಮರಾದ ಪೊಲೀಸರ ಗತಿ ಏನಾಗಿರಬಹುದು?
ಮುಂಬೈ ಮೇಲಿನ ಭಯೋತ್ಪಾದಕರ ದಾಳಿಯ ನಂತರ ಇದ್ದಕ್ಕಿದ್ದಂತೆ ಎಲ್ಲರೂ ಪೊಲೀಸರು ಮತ್ತು ಸೇನೆಯನ್ನು ಕೊಂಡಾಡತೊಡಗಿದ್ದಾರೆ.ಭಯೋತ್ಪಾದಕರನ್ನು ಹೊಡೆದುರುಳಿಸಿದ ಎನ್‌ಎಸ್‌ಜಿ ಕಮಾಂಡೋಗಳ ಬಗ್ಗೆ ಪ್ರೀತಿ-ಅಭಿಮಾನಉಕ್ಕಿ ಹರಿಯತೊಡಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಆರನೇ ವೇತನ ಆಯೋಗದ ವರದಿಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಈ ಎರಡೂ ವರ್ಗಗಳು ಗೋಳಾಡುತ್ತಿದ್ದಾಗ ಇದೇ ಜನತೆಯಿಂದ ಕನಿಷ್ಠ ಅನುಕಂಪವ್ಯಕ್ತವಾಗಿಲ್ಲ. ಆಗ ಎಸ್‌ಎಂಎಸ್, ಮಾನವಸರಪಳಿ,ಕ್ಯಾಂಡಲ್‌ಲೈಟ್....ಎಲ್ಲಿಂದಲೂ ಅವರಿಗೆ ಬೆಂಬಲ ವ್ಯಕ್ತವಾಗಲಿಲ್ಲ. ಯಾರೋ ಪೊಲೀಸ್ ಅಧಿಕಾರಿಯೊಬ್ಬ ಕಾನ್‌ಸ್ಟೇಬಲ್‌ಗಳಿಗೆ ವೇತನಆಯೋಗದಿಂದ ಎಷ್ಟ್ಲೆಲಾ ಅನ್ಯಾಯವಾಗಿದೆಎಂದು ಪತ್ರಿಕೆಗೆ ಲೇಖನ ಬರೆದರೆ ಮೇಲಾಧಿಕಾರಿಗಳು ಆತನಿಂದ ವಿವರಣೆಬಯಸಿ ನೋಟೀಸ್ ನೀಡಿರದ್ದರು.
ಭಾರತದ ಎನ್‌ಎಸ್‌ಜಿ ಮತ್ತು ಈ ಪಡೆಗೆ ಸ್ಫೂರ್ತಿಯಾಗಿರುವ ಬ್ರಿಟನ್‌ನ ‘ಸ್ಪೆಷಲ್ ಏರ್ ರ್ಸ್ಕಾಡ್ರನ್’ (ಎಸ್‌ಎಎಸ್)ನತರಬೇತಿ ಮತ್ತು ಸಂಬಳ-ಸವಲತ್ತುಗಳನ್ನು ಹೋಲಿಸಿ ಇಂಗ್ಲಿಷ್ ದಿನಪತ್ರಿಕೆಯೊಂದು ವರದಿ ಮಾಡಿದೆ. ಅದರ ಪ್ರಕಾರ ಎನ್‌ಎಸ್‌ಜಿ ಕಮಾಂಡೋದಲ್ಲಿನ ಯೋಧನಿಗೆ ಮಾಸಿಕ ಹದಿನೈದು ಸಾವಿರಮತ್ತು ಅಧಿಕಾರಿಗೆ ೪೫,೦೦೦ರೂಪಾಯಿ ಸಂಬಳ ನೀಡಲಾಗುತ್ತಿದೆ.
ಆದರೆ ಬ್ರಿಟನ್‌ನ ಎಸ್‌ಎಎಸ್ ಯೋಧ ಮಾಸಿಕ ೩೨ ಲಕ್ಷರೂಪಾಯಿ ಮತ್ತು ಮೇಜರ್ ೫೧ ಲಕ್ಷರೂಪಾಯಿ ವೇತನ ಪಡೆಯುತ್ತಿದ್ದಾರೆ. ಅಂದರೆ ಹುತಾತ್ಮರಾದ ಎನ್‌ಎಸ್‌ಜಿ ಹವಲ್ದಾರ್ ಗಜೇಂದ್ರಸಿಂಗ್‌ಗೆ ಸಿಗುತ್ತ್ತಿದ್ದ ತಿಂಗಳ ಸಂಬಳ ಕೇವಲ ಹದಿನೈದು ಸಾವಿರರೂಪಾಯಿ. ದೇಶದಿಂದ ದೇಶಕ್ಕೆ ಜೀವದ ಬೆಲೆಯಲ್ಲಿ ಎಷ್ಟೊಂದು ವ್ಯತ್ಯಾಸ? ಪ್ರಾಣದಹಂಗಿಲ್ಲದ ಶಸ್ತ್ರಧಾರಿ ಭಯೋತ್ಪಾದಕನ ಎದುರು ಯೋಧನೊಬ್ಬ ನಿಂತಿದ್ದಾನೆ ಎಂದಿಟ್ಟುಕೊದುಳ್ಳಿ. ಅದು ಇಬ್ಬರಲ್ಲಿ ಒಬ್ಬನ ಸಾವು ನಿರ್ಧಾರವಾಗುವ ಕ್ಷಣಗಳು. ಆಗ ಬಂದೂಕು ಹಿಡಿದ ಯೋಧನ ಮನಸ್ಸುಒಂದು ಕ್ಷಣ ತಾನಿಲ್ಲದ ತನ್ನಕುಟುಂಬದ ಸ್ಥಿತಿಯನ್ನು ನೆನೆಸಿಕೊಂಡರೆ,ಅನಾಥರಾಗಲಿರುವ ತಾಯಿ-ಹೆಂಡತಿ-ಮಕ್ಕಳಚಿತ್ರ ಕಣ್ಣಮುಂದೆ ಸುಳಿದರೆ ಆತನ ಕೈಗಳು ಕಂಪಿಸಲಿಕ್ಕಿಲ್ಲವೇ ? ಮನಸ್ಸು ತೊಯ್ದಾಡದೇ?
ಮುಂಬೈ ಮೇಲೆ ಭಯೋತ್ಪಾದಕರುದಾಳಿ ನಡೆಸಿದ ನಂತರದ ದಿನಗಳಲ್ಲಿ ಭಾರತ ಸರ್ಕಾರ ಏನು ಮಾಡಬೇಕೆಂಬಬಗ್ಗೆ ಪುಂಖಾನುಪುಂಖ ಸಲಹೆಗಳುಕೇಳಿಬರುತ್ತಿವೆ. ಅವುಗಳಲ್ಲಿ ಪ್ರಮುಖವಾದದ್ದು ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆ. ಆದರೆ ಅಂತಹ ಯುದ್ಧದಲ್ಲಿ ಪ್ರಾಣಕಳೆದುಕೊಳ್ಳುವವರು ಯಾರು? ಸೇನೆ ಸೇರುವಾಗಲೇ ಸಾವುಕಾದಿದೆ ಎಂದು ಸೈನಿಕರಿಗೆ ಗೊತ್ತಿರುತ್ತದೆ ಎಂದು ಹೇಳಬಹುದು,ವೈರಿ ಗುಂಡಿಗೆ ಬಲಿಯಾದರೆ ದೇಶಕ್ಕೆ ಮಾಡಿದ ಬಲಿದಾನ ಎಂದು ಅವರ ದೇಶಪ್ರೇಮವನ್ನು ವೈಭವೀಕರಿಸಲೂಬಹುದು. ಹುತಾತ್ಮ ಯೋಧರೆಲ್ಲರ ಬಲಿದಾನವನ್ನು ಗೌರವಿಸುತ್ತಲೇ ಹೇಳಬಹುದಾದರೆ ಬಹುತೇಕ ಯುವಕರುಸೇನೆ ಸೇರುವುದಕ್ಕೆ ಕಾರಣ ನಿರುದ್ಯೋಗವೇ ಹೊರತು ದೇಶಪ್ರೇಮವಲ್ಲ. ಈಗಲೂಸೇನೆ ಭರ್ತಿಗೆ ಸಂದರ್ಶನ ನಡೆದಾಗಲೆಲ್ಲಾನೂಕುನುಗ್ಗಲಿನಿಂದ ಸಾವಿಗೀಡಾಗುವ ಘಟನೆಗಳು ನಡೆಯುತ್ತಿರುವುದು ಇದೇ ಕಾರಣಕ್ಕೆ.
ಟಿವಿ ಸ್ಟುಡಿಯೋದಲ್ಲಿ ಕೂತು ಯುದ್ಧ ಘೋಷಿಸುವ ಸಿನಿಮಾ ತಾರೆಯರು,ಉದ್ಯಮಿಗಳು, ಬುದ್ಧಿಜೀವಿಗಳು, ಯುದ್ಧ ತಜ್ಞರು ಯಾರೂ ತಮ್ಮ ಮಕ್ಕಳನ್ನು ಸೇನೆಗೆ ಸೇರಿಸುವುದಿಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ ರಣರಂಗದಿಂದ ರವಾನೆಯಾದ ಹುತಾತ್ಮ ಯೋಧರ ಶವಪೆಟ್ಟಿಗೆಗಳು ‘ಕ್ಯಾಂಡಲ್‌ವಾಲಾ’ಗಳ ಮನೆಗಾಗಲಿ, ನಸುಕಿನಲ್ಲಿಯೇ ಹುಡುಗರನ್ನು ಎಬ್ಬಿಸಿ ಲಾಠಿ ತಿರುಗಿಸಲು ಹೇಳಿಕೊಡುವ ಮೂಲಕ ಹಿಂದೂಗಳ ರಕ್ಷಣೆಗೆ ಯುವಕರನ್ನು ಅಣಿಗೊಳಿಸುವ ‘ದೇಶಪ್ರೇಮಿ’ಗಳ ಮನೆಗಳಿಗಾಗಲಿ ಹೋಗಿರಲಿಲ್ಲ. ಅವೆಲ್ಲವೂ ಹೋಗಿರುವುದು ಯಾವುದೋ ಹಳ್ಳಿಯ ಬಡ ರೈತ-ಕೂಲಿಕಾರ್ಮಿಕರಮನೆಗಳಿಗೆ. ಕಾರ್ಗಿಲ್ ಯುದ್ಧದಲ್ಲಿ ಮಡಿದವರಲ್ಲಿ ಕರ್ನಾಟಕದ ಯೋಧರೂ ಇದ್ದರು. ಶವಪೆಟ್ಟಿಗೆಗಳನ್ನು ಅವರ ಮನೆಗೆ ತಲುಪಿಸಿದ ನಂತರ ತಿರುಗಿ ಆ ಮನೆ ಕಡೆ ಯಾರಾದರೂ ನೋಡಿದ್ದಾರಾ?

Monday, February 15, 2016

'ಎಲ್ರಿ ನಿಮ್ಮ ಹೆಂಡತಿ?'

ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಆಯೋಜಿಸಲಾಗಿದ್ದ ಪ್ರೇಮಿಗಳ ದಿನಾಚರಣೆಯಲ್ಲಿ ಭಾಗವಹಿಸಲು ಹೋದಾಕ್ಷಣ ಹಿರಿಯ-ಕಿರಿಯ ಗೆಳೆಯ-ಗೆಳತಿಯರೆಲ್ಲ ದಬಾಯಿಸುವಂತೆ ಕೇಳಿದ್ದು ಇದೊಂದೇ ಪ್ರಶ್ನೆ.
ಯಾವುದಕ್ಕೂ ಯಾವಾಗಲೂ ಒತ್ತಾಯಿಸಲು ಹೋಗದ ನಾನು ಹೆಂಡತಿಯನ್ನು ಬರುವಂತೆ ಒತ್ತಾಯಿಸಲಾರದೆ ನಾನೊಬ್ಬನೇ ಬಂದಿದ್ದರೂ ಗೆಳೆಯರು ಕೇಳಿದ ಪ್ರಶ್ನೆಯಿಂದ ಗಿಲ್ಟ್ ಅನುಭವಿಸಿದ್ದು ನಿಜ. ಇದಕ್ಕೆ ಸಣ್ಣ ಪರಿಹಾರ ಎಂಬಂತೆ ನನ್ನ ಜತೆ ಇರುವ ಹೆಂಡತಿಯ ಪೊಟೋ ಹುಡುಕಿ ಇಲ್ಲಿ ಹಾಕಿದ್ದೇನೆ.
ನನ್ನನ್ನು ಕಟ್ಟಿಕೊಂಡು ಕಳೆದ 24 ವರ್ಷಗಳಿಂದ ನಾನು ಮೈಮೇಲೆ ಎಳೆದುಕೊಳ್ಳುವ ತರಲೆ-ತಾಪತ್ರಯಗಳ ಜತೆ ಏಗುತ್ತಾ ಬಂದ ಈಕೆಯ ಹೆಸರು ಸುಜಾತ. ಕ್ರಿಸ್ ಮಸ್ ದಿನ ಸಂಜೆ ಮದುವೆಯಾಗಿದ್ದ ಕಾರಣ ರಾಮ,ಕೃಷ್ಣ, ಶಿವನ ಜತೆಯಲ್ಲಿ ಕ್ರಿಸ್ತನ ಆಶೀರ್ವಾದವೂ ಇದ್ದುದ್ದಕ್ಕೋ ಏನೋ ದಾಂಪತ್ಯ ಸುಖಮಯವಾಗಿದೆ.
(ಈ ಪೋಟೋ ಕಾಪು ದೀಪಸ್ಥಂಭದ ತುದಿಯಲ್ಲಿ ನಿಲ್ಲಿಸಿ ನನ್ನ ಮಗಳು ತೆಗೆದದ್ದು)

Sunday, January 31, 2016

ಸಹಬಾಳ್ವೆ ಸಾಗರ

ಮಂಗಳೂರಿನಲ್ಲಿ ನಡೆದ 'ಸಹಬಾಳ್ವೆ ಸಾಗರ' ಕಾರ್ಯಕ್ರಮದಲ್ಲಿ ಯೋಗೇಂದ್ರ ಯಾದವ್ ಮಾತನಾಡುತ್ತಾ, 'ಕೋಮುವಾದವನ್ನು ಎದುರಿಸಲು ಹೊಸ ಭಾಷೆಯನ್ನು ಕಂಡುಕೊಳ್ಳಬೇಕಾಗಿದೆ' ಎಂದರು. ಸಮಾರಂಭದ ಕೊನೆಯಲ್ಪಿ ಪ್ರದರ್ಶನಗೊಂಡ ಪ್ರತಿಭಾ ನಿರ್ದೇಶನದ,'ಕೊಂದವರ್ಯಾರು' ನಾಟಕ. ಯೋಗೇಂದ್ರ ಅವರು ಎತ್ತಿದ್ದ ಪ್ರಶ್ನೆಗೆ ಉತ್ತರದಂತಿತ್ತು.



Monday, January 25, 2016

ನಿಮ್ಮ ಉತ್ತರದ ನಿರೀಕ್ಷೆಯಲ್ಲಿ..

ಪ್ರೀತಿಯ ಗೆಳೆಯರಾದ ಸುರೇಶ್ ಕುಮಾರ್, 
‘ಸೆಕ್ಯುಲರ್ ವಾದ’ದ ಕುರಿತು ಕಳೆದ ಶನಿವಾರ ನಾನು ಮಾಡಿದ ಭಾಷಣದ ವರದಿ ಬಗ್ಗೆ ನಿಮ್ಮ ಅವಸರದ ಪ್ರತಿಕ್ರಿಯೆನ್ನು ಗಮನಿಸಿದೆ. ಅದರ ಬಗ್ಗೆ ನನ್ನ ಸ್ಪಷ್ಟೀಕರಣವನ್ನು ವರದಿಮಾಡಿದ ಪತ್ರಿಕೆಗೆ ಪ್ರತ್ಯೇಕವಾಗಿ ಕಳುಹಿಸುತ್ತೇನೆ, ಅದನ್ನು ನೀವು ಓದಿಕೊಳ್ಳಬಹುದು. ನಿಮ್ಮ ಪ್ರತಿಕ್ರಿಯೆಯಲ್ಲಿ ನಾನು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರನ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದೀರಿ. ಅದಕ್ಕಷ್ಟೇ ಈ ಪ್ರತಿಕ್ರಿಯೆ. ರಾಜೀನಾಮೆಯ ಸವಾಲನ್ನು ಸ್ವೀಕರಿಸಲು ನಾನು ರೆಡಿ ಇದ್ದೇನೆ. ಅದಕ್ಕಿಂತ ಮೊದಲು ನನ್ನ ಮನದ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. 

ಹಿಂದೆ ಪತ್ರಕರ್ತನಾಗಿ ಈಗ ಒಬ್ಬ ಜವಾಬ್ದಾರಿಯುತ ನಾಗರಿಕನಾಗಿ ಹಿಂದೂ ಮತ್ತು ಮುಸ್ಲಿಮ್ ಕೋಮುವಾದಗಳೆರಡನ್ನೂ ನಾನು ವಿರೋಧಿಸುತ್ತಾ ಬಂದವನು. ಆರ್ ಎಸ್ ಎಸ್,ವಿಶ್ವಹಿಂದು ಪರಿಷತ್, ಬಜರಂಗದಳ, ಹಿಂದೂ ಜಾಗರಣವೇದಿಕೆ ಮೊದಲಾದ ಸಂಘಟನೆಗಳ ಕೋಮುವಾದವನ್ನು ಮಾತ್ರವಲ್ಲ ಮುಸ್ಲಿಮ್ ಲೀಗ್, ಎಸ್ ಡಿಪಿ ಐ,ಪಾಪ್ಯುಲರ್ ಫ್ರಂಟ್ ಮೊದಲಾದ ಸಂಘಟನೆಗಳ ಕೋಮುವಾದವನ್ನು ಕೂಡಾ ನಾನು ವಿರೋಧಿಸುತ್ತಾ ಬಂದವನು. ಬುರ್ಕಾ ಧಾರಣೆಯನ್ನು ಪ್ರಶ್ನಿಸಿ ನಿಂದನೆಗೆ ಒಳಗಾದವನು. ಪತ್ರಿಕೆಗಳ ನಿಷ್ಠಾವಂತ ಓದುಗನಾಗಿ ನೀವು ಇದನ್ನು ಗಮನಿಸಿದ್ದೀರಿ ಎಂದು
ನಂಬಿದ್ದೇನೆ. 
ಹಿಂದುತ್ವದ ಪ್ರಯೋಗಶಾಲೆಯೆಂಬ ಕುಖ್ಯಾತಿಗೊಳಗಾದ ಊರಿನ ಮೂಲನಿವಾಸಿ ನಾನು. ನನ್ನ ಕಣ್ಣೆದುರೇ ಎರಡೂ ಕೋಮುಗಳ ಹುಡುಗರು ಕೋಮುವಾದದ ಬೆಂಕಿಗೆ ಹಾರಿ ಬದುಕನ್ನು ಸುಟ್ಟುಕೊಳ್ಳುತ್ತಿರುವುದನ್ನು ಕಂಡಾಗ ವೇದನೆಯಾಗುತ್ತದೆ, ಸೂಕ್ಷ್ಮ ಮನಸ್ಸಿನ ನಿಮಗೂ ನೋವಾಗಿರಬಹುದೆಂದು ತಿಳಿದುಕೊಂಡಿದ್ದೇನೆ. ಇದು ನನ್ನಲ್ಲಿ ಆಗಾಗ ಆಕ್ರೋಶವನ್ನು ಹೊರಡಿಸುತ್ತದೆ.
ನಮ್ಮೆಲ್ಲರ ಪಾಲಿಗೆ ಸುಡುವ ಬೆಂಕಿಯಾಗಿ ಕಾಡುತ್ತಿರುವ ಕೋಮುವಾದವನ್ನು ಎದುರಿಸಲು ಭಾಷಣ-ಬರವಣಿಗೆಯ ಜತೆಗೆ ರಚನಾತ್ಮಕವಾಗಿ ಇನ್ನು ಏನನ್ನಾದರೂ ಮಾಡಬೇಕೆಂದು ನನಗನಿಸುತ್ತಿದೆ. 
ಕೋಮುವಾದದ ಬಗ್ಗೆ ನೀವು ವ್ಯಕ್ತಪಡಿಸಿರುವ ಕಳಕಳಿ-ಕಳವಳ ಪ್ರಾಮಾಣಿಕವಾದುದೆಂದು ನಾನು ನಂಬಿರುವುದರಿಂದ ನನ್ನೊಳಗೊಂದು ಆಸೆ ಹುಟ್ಟಿಕೊಂಡಿದೆ. ಆದರೆ ನಾವು ಹೇಳಿರುವುದನ್ನು ನಾವು ಮಾತ್ರ ನಂಬಿದರೆ ಸಾಲದು ಇತರರೂ ನಂಬಬೇಕಾಗುತ್ತದೆ. ನಿಮ್ಮ ಮೇಲೆ ಆ ನಂಬಿಕೆ ಬರಬೇಕಾದರೆ ಎರಡೂ ಧರ್ಮಗಳ ಕೋಮುವಾದವನ್ನು ನೀವು ವಿರೋಧಿಸಬೇಕಾಗುತ್ತದೆ. ರಾಜಕೀಯ ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ನಿಮಗೆ ಇದು ಸಾಧ್ಯವೆಂದು ನನಗನಿಸುವುದಿಲ್ಲ.ಯಾಕೆಂದರೆ ನೀವೆಂದೂ ಹಿಂದೂ ಕೋಮುವಾದವನ್ನು ಬಹಿರಂಗವಾಗಿ ವಿರೋಧಿಸಿಲ್ಲ. ಆದ್ದರಿಂದ ಎಲ್ಲ ಧರ್ಮಗಳ ಕೋಮುವಾದವನ್ನು ನೀವು ಪ್ರಾಮಾಣಿಕವಾಗಿ ವಿರೋಧಿಸುವುದಾದರೆ ನಿಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿ, ಪರಿವಾರದಿಂದ ಕಳಚಿಕೊಂಡು ಹೊರಬರಬೇಕಾಗುತ್ತದೆ. ದಯವಿಟ್ಟು ಆ ಕೆಲಸವನ್ನು ಮಾಡಿ ಪಕ್ಷದ ಬಂಧನದಿಂದ ಹೊರಬನ್ನಿ.
ಅಂತಹದ್ದೊಂದು ನಿರ್ಧಾರವನ್ನು ನೀವು ಕೈಗೊಳ್ಳುವುದಾದರೆ ನಾನು ಕೂಡಾ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರನ ಹುದ್ದೆಗೆ ಈ ಕ್ಷಣದಲ್ಲಿಯೇ ರಾಜೀನಾಮೆ ನೀಡುತ್ತೇನೆ. ನನಗೆ ನಿಮ್ಮ ರೀತಿಯ ಯಾವುದೇ ಪಕ್ಷ-ಪರಿವಾರದ ಬಂಧನ ಇಲ್ಲ. ನಾನು ಈಗಿನ ಹುದ್ದೆಗೆ ರಾಜೀನಾಮೆ ನೀಡುವುದು ಮಾತ್ರವಲ್ಲ ಮುಂದೆಂದೂ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ನೀವು ನಂಬುವ ದೇವರಲ್ಲಿಗೆ ಬಂದು ಪ್ರಮಾಣ ಮಾಡುತ್ತೇನೆ. (ನನ್ನ ನಂಬಿಕೆಗಿಂತ ನಿಮ್ಮ ನಂಬಿಕೆ ಮುಖ್ಯ)
ಇಬ್ಬರೂ ಕೂಡಿ ಕೋಮುವಾದದ ವಿರುದ್ಧ ಕನಿಷ್ಠ ರಾಜ್ಯದಲ್ಲಿಯಾದರೂ ಆಂದೋಲನವನ್ನು ಕಟ್ಟೋಣ. ಅಜರ್ ಮಸೂದ್ ನಿಂದ ಹಿಡಿದು ನಜ್ಮಲ್, ಸೈಯ್ಯದ್, ಅಸೀಪ್, ಸುಹೇಲ್ ಮಾತ್ರವಲ್ಲ, ಸ್ವಾಧ್ವಿ ಪ್ರಜ್ಞಾ, ಅಸೀಮಾನಂದ, ಕರ್ನಲ್ ಪುರೋಹಿತ್, ಭುವಿತ್ ಶೆಟ್ಟಿ ವರೆಗೆ ಕೋಮುವಾದದಲ್ಲಿ ತೊಡಗಿಡಸಿಕೊಂಡಿರುವ ಎಲ್ಲರನ್ನೂ ವಿರೋಧಿಸೋಣ. ಕೋಮುವಾದಕ್ಕೆ ಚಿತಾವಣೆ ನೀಡುತ್ತಿರುವ ಆರ್ ಎಸ್ ಎಸ್, ವಿಶ್ವಹಿಂದು ಪರಿಷತ್, ಬಜರಂಗದಳ, ಮುಸ್ಲಿಮ್ ಲೀಗ್, ಎಸ್ ಡಿಪಿ ಐ, ಪಾಪ್ಯುಲರ್ ಫ್ರಂಟ್ ಮೊದಲಾದ ಎಲ್ಲ ಸಂಘಟನೆಗಳನ್ನೂ ವಿರೋಧಿಸೋಣ. ಜತೆಗೆ ಜಾತೀಯತೆ ಬಗ್ಗೆ ಹಿಂದುತ್ವವಾದಿಗಳ ಆತ್ಮವಂಚಕ ನಡವಳಿಕೆಯನ್ನೂ ಬಯಲಿಗೆಳೆಯೋಣ. ಈ ಮೂಲಕ ಇದೇ ಜಾತೀಯತೆಯಿಂದ ನರಳಿ ಪ್ರಾಣಾರ್ಪಣೆ ಮಾಡಿದ ಸೋದರ ರೋಹಿತ ವೇಮುಲನ ತ್ಯಾಗವನ್ನೂ ಗೌರವಿಸಿದಂತಾಗುತ್ತದೆ.
ದಯವಿಟ್ಟು ಇದನ್ನು ಸವಾಲೆಂದು ತಿಳಿದುಕೊಳ್ಳಬೇಡಿ, ಸಲಹೆ ಎಂದು ಸ್ವೀಕರಿಸಿ. ನನ್ನ ರಾಜೀನಾಮೆಗೆ ಒತ್ತಾಯಿಸಿ ನೀವು ಇಂದು ಪತ್ರಿಕಾಗೋಷ್ಠಿ ನಡೆಸುತ್ತಿದ್ದೀರಿ ಎಂದು ನಿಮ್ಮ ಮಾಧ್ಯಮ ಕಚೇರಿಯ ಆಹ್ಹಾನದ ಮೂಲಕ ತಿಳಿದುಬಂತು. ನನ್ನ ಸಲಹೆಯನ್ನು ನೀವು ಒಪ್ಪುವುದಾದರೆ ನಾನೇ ಅಲ್ಲಿಗೆ ಬರುತ್ತೇನೆ. ಇಬ್ಬರೂ ಒಟ್ಟಿಗೆ ನಮ್ಮ ನಿರ್ಧಾರಗಳನ್ನು ಮಾಧ್ಯಮದ ಮುಂದೆ ಘೋಷಿಸಿಬಿಡುವ.
ನಿಮ್ಮ ಉತ್ತರದ ನಿರೀಕ್ಷೆಯಲ್ಲಿ
ದಿನೇಶ್ ಅಮಿನ್ ಮಟ್ಟು.

Tuesday, January 19, 2016

ಹಸಿವು ವೈಯಕ್ತಿಕವಾದುದು, ಅವಮಾನ ಸಾರ್ವಜನಿಕವಾಗಿ ನಡೆಯುವಂತಹದ್ದು.

ಹಸಿವಿಗಿಂತ ಅವಮಾನದ ನೋವು ಭೀಕರವಾದುದು. ಹಸಿವು-ಅವಮಾನಗಳನ್ನೇ ಉಂಡು ಬೆಳೆದ ಹಿರಿಯ ಜೀವಗಳು ಅವುಗಳನ್ನು ತಾಳಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಂಡಿರುತ್ತವೆ. ಇದರಿಂದಾಗಿ ಸುಲಭದಲ್ಲಿ ಜೀವ ಬಿಟ್ಟುಕೊಡುವುದಿಲ್ಲ. ಇಲ್ಲದೆ ಇದ್ದರೆ ಆತ್ಮಹತ್ಯೆ ಮಾಡಿಕೊಂಡ ದಲಿತರ ಹೆಣಗಳು ಸಾಲುಸಾಲು ಬೀಳಬೇಕಿತ್ತು, ರೈತರದ್ದಲ್ಲ. ಹುಟ್ಟಿನಿಂದಲೇ ಹಸಿವು ಮತ್ತು ಅವಮಾನವನ್ನು ಸಹಿಸಿಕೊಂಡು ಬಂದ ದಲಿತರು ರೈತರ ಹಾಗೆ ದುರ್ಬಲ ಮನಸ್ಸಿನವರಾಗಿದ್ದಿದ್ದರೆ ನಾವೆಲ್ಲ ನಿತ್ಯ ದಲಿತರ ಆತ್ಮಹತ್ಯೆಯ ಲೆಕ್ಕ ಹಾಕಿಕೊಂಡು ಕೂರಬೇಕಿತ್ತು.
ಹಸಿವು ವೈಯಕ್ತಿಕವಾದುದು, ಅದನ್ನು ಸಹಿಸಿಕೊಳ್ಳಬಹುದು. ಅವಮಾನ ಸಾರ್ವಜನಿಕವಾಗಿ ನಡೆಯುವಂತಹದ್ದು. ಒಮ್ಮೊಮ್ಮೆ ಮುಖಮುಚ್ಚಿಕೊಳ್ಳಲು ಜಾಗವೇ ಸಿಗುವುದಿಲ್ಲ. ಹೊಸಪೀಳಿಗೆಯ ರೋಹಿತ ವೇಮುಲನಂತಹ ಸೂಕ್ಷ್ಮವಾದ ಹೂಮನಸ್ಸಿನ ಜೀವಗಳು ಬಹುಬೇಗ ಅವಮಾನದಿಂದ ಬಾಡಿಹೋಗುತ್ತವೆ, ಒಮ್ಮೊಮ್ಮೆ ಉದುರಿಹೋಗಿ ನಮ್ಮನ್ನೆಲ್ಲ ಅಪರಾಧಿಸ್ಥಾನದಲ್ಲಿ ನಿಲ್ಲಿಸಿ ಅಣಕಿಸುತ್ತಿರುತ್ತವೆ.
ಎಲ್ಲಿದೆ ಜಾತಿ? ಎಲ್ಲಿದೆ ಅಸ್ಪೃಶ್ಯತೆ? ಎಂದು ಉಡಾಫೆಯಿಂದ ಮೀಸಲಾತಿಯನ್ನು ಪ್ರಶ್ನಿಸುವವರು, ಸಾಮಾಜಿಕ ನ್ಯಾಯದ ಸಿದ್ದಾಂತವನ್ನು ಗೇಲಿಮಾಡುವವರು, ಮೀಸಲಾತಿಯ ಫಲಾನುಭವಿಗಳನ್ನು ಹಂಗಿಸುವವವರು ಕಣ್ಣೀರಾಗಿ ಹೋಗಿರುವ ರೋಹಿತ ವೇಮುಲನ ಅಮ್ಮನಲ್ಲಿ ಈ ಪ್ರಶ್ನೆಗಳನ್ನು ಕೇಳಿ ಎದೆಮುಟ್ಟಿಕೊಳ್ಳಬೇಕು. ಸಾಧ್ಯವಾದರೆ ತಮ್ಮ ಮುಖಗಳನ್ನೊಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಬೇಕು.
ಇದು ಕೇವಲ ಒಬ್ಬ ರೋಹಿತನ ಕತೆಯೆಂದು, ಇದು ಕೇವಲ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದೊಳಗೆ ಮಾತ್ರ ನಡೆಯುತ್ತಿರುವ ಅಮಾನುಷ ನಡವಳಿಕೆಯೆಂದು ತಿಳಿದುಕೊಂಡವರು ಮೂರ್ಖರು. ದೇಶದ ವಿಶ್ವವಿದ್ಯಾಲಯಗಳ ಒಳಹೊಕ್ಕು ನೋಡಿದರೆ ಒಂದು ಕೈಯಲ್ಲಿ ವಿಷದ ಬಾಟಲಿ, ಇನ್ನೊಂದು ಕೈಯಲ್ಲಿ ನೇಣಿನ ಹಗ್ಗ ಹಿಡಿದುಕೊಂಡ ನೂರಾರು ರೋಹಿತ ವೇಮುಲರನ್ನು ಕಾಣಬಹುದು. ನಾವಿಂದು ಯೋಚಿಸಬೇಕಾಗಿರುವುದು ಅನ್ಯಾಯ-ಅವಮಾನಗಳನ್ನು ನುಂಗಿಕೊಂಡು ಉಳಿದುಕೊಂಡವರನ್ನು ಉಳಿಸಿಕೊಳ್ಳುವುದು ಹೇಗೆ ಎಂದು.