Friday, July 3, 2015

ಭಸ್ಮಾಸುರರನ್ನು ಸೃಷ್ಟಿಸುವುದು ಸುಲಭ ನಿಯಂತ್ರಿಸುವುದು ಕಷ್ಟ

ಘಟನೆ-1
ನಾನಿನ್ನೂ ಆರನೇ ತರಗತಿ ವಿದ್ಯಾರ್ಥಿ, ಉಡುಪಿ ತಾಲ್ಲೂಕಿನ ಹೆಜಮಾಡಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ.ಮುಂಬೈ ನೆಲದಿಂದ ನನ್ನನ್ನು ಕಿತ್ತು ತಂದು ಅಲ್ಲಿ ನೆಟ್ಟಿದ್ದರು. ಇನ್ನೂ ಬೇರು ಬಿಟ್ಟಿರಲಿಲ್ಲ, ಹೊಂದಿಕೊಳ್ಳಲು ಹೆಣಗಾಡುತ್ತಿದ್ದ ಕಾಲ.ಮುಂಬೈನಿಂದ ಬಂದವ ಎನ್ನುವ ಕಾರಣಕ್ಕೆ ನನ್ನ ಸಹಪಾಠಿಗಳ ಒಂದು ಗುಂಪು ನನ್ನನ್ನು ಗೋಳಾಡಿಸುತ್ತಿತ್ತು. ಅವರ ಪ್ರಮುಖ ಅಸ್ತ್ರವೆಂದರೆ ಅಶ್ಲೀಲ ಬೈಗುಳು. ಕುಂಡದ ಹೂವಿನಂತೆ ಬೆಳೆದಿದ್ದ ನಾನು ಅಲ್ಲಿಯವರೆಗೆ ಅಂತಹ ಬೈಗುಳಗಳನ್ನೇ ಕೇಳಿರಲಿಲ್ಲ. ಯಾರಿಗೂ ಹೇಳಿಕೊಳ್ಳಲಾಗದೆ ಖಿನ್ನತೆಗೊಳಗಾಗಿದ್ದ ನಾನು ಬಿಡುಗಡೆಯ ದಾರಿ ಎಂಬಂತೆ ವಾಪಸು ಕೊಡಲು ನಿರ್ಧರಿಸಿದೆ. ಅವರು ಹೇಳುತ್ತಿರುವ ಬೈಗುಳಗಳನ್ನೆಲ್ಲ ನೋಟ್ ಬುಕ್ ನಲ್ಲಿ ಬರೆದುಕೊಳ್ಳತೊಡಗಿದೆ. (ಹಳ್ಳಿ ಹುಡುಗರ ಬೈಗುಳು ಬಹಳ ಕ್ರಿಯೇಟಿವ್ ಆಗಿರುತ್ತೆ. ಅವುಗಳನ್ನೆಲ್ಲ ಇಲ್ಲಿ ಬರೆಯಲಾರೆ). ನೋಟ್ಸ್ ಇಟ್ಟುಕೊಂಡು ಹೊಸ ಬೈಗುಳಗಳನ್ನು ನಾನೇ ಸೃಷ್ಟಿ ಮಾಡತೊಡಗಿದೆ. (ಬಹುಷ: ನನ್ನ ಬರವಣಿಗೆಯ ಹವ್ಯಾಸ ಅಲ್ಲಿಂದಲೇ ಪ್ರಾರಂಭವಾಗಿರಬಹುದೇನೋ). ಸಂಪೂರ್ಣ ಸನ್ನದ್ಧನಾದ ನಂತರ ಧೈರ್ಯ ತಂದುಕೊಂಡು ನನಗೆ ಬೈದವರನ್ನು ಕೆಣಕಿ ಕೆಣಕಿ ನಾನೇ ಬೈಯ್ಯತೊಡಗಿದೆ. ಬೈಯ್ಯುತಾ ಹೋದಂತೆ ನನ್ನ ಬೈಗುಳ ಶಬ್ದಕೋಶ ಯಾವ ಪರಿಯಲ್ಲಿ ಬೆಳೆಯಿತೆಂದರೆ ಶಾಲೆಯಲ್ಲಿ ಅತ್ಯಂತ ಕೆಟ್ಟದಾಗಿ ಬೈಯ್ಯುವವರು ಯಾರೆಂದರೆ ಎಲ್ಲರೂ ನನ್ನ ಕಡೆ ತೋರಿಸುತ್ತಿದ್ದರು. ಪ್ರೈಮರಿ ಶಾಲೆ ಬಿಡುವ ಹೊತ್ತಿಗೆ ಹವ್ಯಾಸವನ್ನು ಬಿಟ್ಟುಬಿಟ್ಟೆ. ಅಷ್ಟರಲ್ಲಿ ನನಗೆ ಬೈಯ್ಯುತ್ತಿದ್ದವರೆಲ್ಲ ನನ್ನ ಗೆಳೆಯರಾಗಿಬಿಟ್ಟಿದ್ದರು.

ಘಟನೆ-2
ವಿವೇಕಾನಂದರ ಕುರಿತ ನನ್ನ ವಿವಾದಾತ್ಮಕ ಅಂಕಣ ಪ್ರಕಟವಾಗಿದ್ದ ಕಾಲ. ಅದು ಪ್ರಕಟವಾದ ದಿನದ ಬೆಳಿಗ್ಗೆ ಎಂಟರಿಂದ ಹೆಚ್ಚು ಕಡಿಮೆ ಮೂರು ದಿನಗಳ ಕಾಲ ನನ್ನ ಮೊಬೈಲ್ ರಿಂಗ್ ಆಗುವುದು ನಿಂತಿರಲಿಲ್ಲ. ಆಫ್ ಮಾಡಿಟ್ಟ ಮೊಬೈಲ್ ಅನ್ನು ರಾತ್ರಿ ಹನ್ನೆರಡು ಗಂಟೆಗೆ ಆನ್ ಮಾಡಿದರೂ ಯಾರಾದರೊಬ್ಬ ಕಾಲ್ ಮಾಡಿ ಬೈಯ್ಯುವವ. ಅಕ್ಕ, ಅಣ್ಣ, ಅಪ್ಪ, ಅಮ್ಮ, ಹೆಂಡತಿ,ಮಗಳು ಎಲ್ಲರನ್ನೂ ಸೇರಿಸಿ ಅಶ್ಲೀಲವಾಗಿ ಬೈಯ್ಯುತ್ತಿದ್ದರು. ಸಹಿಸಿಕೊಳ್ಳಲಿಕ್ಕಾಗದಂತಹ ಬೈಗುಳು. ಬೈಯ್ಯುತ್ತಿದ್ದವರೆಲ್ಲರೂ ಸಂಸ್ಕೃತಿ ಪ್ರಚಾರಕರು. ರೆಗ್ಯುಲರ್ ಆಗಿ ರೀತಿ ಕಾಲ್ ಮಾಡುತ್ತಿದ್ದ ಕೆಲವರ ನಂಬರ್ ಗಳನ್ನುಲೋಪರ್-1, -2 ಎಂದೆಲ್ಲ ಸೇವ್ ಮಾಡಿಟ್ಟುಕೊಂಡಿದ್ದೆ. ಅವರಲ್ಲಿ ಒಬ್ಬ ಹುಬ್ಬಳ್ಳಿಯ ಹುಡುಗ. ಬಾಲ್ಯದ ನನ್ನ ಗೆಳೆಯರ ನೆನೆಪಾಗುವ ರೀತಿಯಲ್ಲಿ ಬೈಯ್ಯುತ್ತಿದ್ದ. 
ನಾನು ಅಸಹಾಯಕ. ತಿರುಗಿ ಬೈಯ್ಯಬೇಕೆಂದರೂ ಎಲ್ಲಿ ಕೂತು ಬೈಯ್ಯಲಿ? ಮನೆಯಲ್ಲಿ ರೀತಿ ಬೈಯ್ಯುತ್ತಾ ಕೂತರೆ ನನ್ನ ಹೆಂಡತಿ ಮತ್ತು ಮಗಳುಇವರೂ ಹೀಗೇನಾ? ಎಂದು ನನ್ನನ್ನೇ ಸಂಶಯಿಸುತ್ತಿದ್ದರೋ ಏನೋ? ಆಫೀಸಿಗೆ ಹೋಗುವಾಗ ಬಸ್ ನಲ್ಲಿ ಬೈದರೆ ಸಹಪ್ರಯಾಣಿಕರೆಲ್ಲ ಹುಚ್ಚರೆಂದು ಅಂದುಕೊಳ್ಳುತ್ತಿದ್ದರೇನೋ? ಆಫೀಸಿನಲ್ಲಿಯೂ ಇಂತಹ ಕೆಲಸ ಮಾಡುವಂತಿರಲಿಲ್ಲ. ಬೈಯ್ಯುವುದನ್ನು ಏರು ದನಿಯಲ್ಲಿಯೇ ಮಾಡಬೇಕೇ ಹೊರತು ಪಿಸುಗುಟ್ಟುವಂತಿಲ್ಲ. ಬೈಯ್ಯುವುದು ಕೂಡಾ ನಮ್ಮಂತಹವರಿಗೆ ಕಷ್ಟ ಎನ್ನುವುದು ನನಗೆ ಆಗಲೇ ಗೊತ್ತಾಗಿದ್ದು.
ಕೊನೆಗೂ ಹುಡುಗನ ಕಾಟ ತಾಳಲಾರದೆ ಬೆಳಿಗ್ಗೆ ಆರು ಗಂಟೆಗೆ ವಾಕಿಂಗ್ ಹೊರಡುವವ ನಾಲ್ಕು ಗಂಟೆಗೆ ಹೊರಟೆ. ಅದಕ್ಕಿಂತ ಮೊದಲು ತುಳು,ಕನ್ನಡ,ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಏನೆಲ್ಲಾ ಬೈಯ್ಯಬಹುದು ಮತ್ತು ಹೇಗೆಲ್ಲಾ ಬೈಯ್ಯಬಹುದೆಂದು ನಾನು ಮನನ ಮಾಡಿಕೊಂಡು ತಯರಾಗಿದ್ದೆ. ದಿನ ನಾನು ವಾಕ್ ಮಾಡುವ ಮೈದಾನದಲ್ಲಿ ಯಾರಿನ್ನೂ ಬಂದಿರಲಿಲ್ಲ. ಮೈದಾನದ ಮಧ್ಯೆನಿಂತು ಹುಬ್ಬಳ್ಳಿಯಲೋಫರ್ -1’ಗೆ ಪೋನ್ ಮಾಡಿದೆ. ಆತ ಪೋನ್ ಎತ್ತಿಕೊಂಡ ಕೂಡಲೇ ಆತನಿಗೆ ಮಾತನಾಡಲಿಕ್ಕೆ ಅವಕಾಶವೂ ಕೊಡದ ಹಾಗೆ ಎಲ್ಲ ಕೆಟ್ಟ,ಅಶ್ಲೀಲ ಪದಗಳನ್ನು ಉಗಿದುಬಿಟ್ಟೆ. ಅವನು ಸ್ವಲ್ಪ ಹೊತ್ತು ಪೋನ್ ಕಟ್ ಮಾಡಿ ಆನ್ ಮಾಡುವುದು ಮತ್ತೆ ನಾನು ಪೋನ್ ಮಾಡುವುದು ಸುಮಾರು ಒಂದು ಗಂಟೆ ಕಾಲ ನಡೆಯಿತು. ಅವನು ಹೆದರಿ ಮನೆಯಿಂದ ಹೊರಗೆ ಬಂದು ಬೈಕ್ ಸ್ಟಾರ್ಟ್ ಮಾಡಿ ಹೊರಟ.( ಶಬ್ದ ನನಗೆ ಕೇಳಿಸುತ್ತಿತ್ತು) ಯಾರದೋ ಮನೆಮುಂದೆ ಬೈಕ್ ನಿಲ್ಲಿಸಿ ಅವರೊಡನೆ ಮಾತನಾಡಿ ಪೋನ್ ಆಫ್ ಮಾಡಿದ. ಅದರ ನಂತರ ಆತ ನನಗೆ ಬೈದು ಪೋನ್ ಮಾಡಿಲ್ಲ. ಅಷ್ಟೊಂದು ಬೈದ ನಂತರ ನಾನೂ ನಿರಾಳವಾಗಿ ಬಿಟ್ಟೆ. ಆದರೆ ಯಾವುದಕ್ಕೋ ಕಲ್ಲೆಸೆಯಬಾರದು ಅಂತಾರಲ್ಲ, ಅಂತಹದ್ದನ್ನು ನಾನು ಯಾಕೆ ಮಾಡಿದೆ ಎಂದು ನನ್ನ ಬಗ್ಗೆಯೇ ಅಸಹ್ಯವೆನಿಸಿತು.

ನರೇಂದ್ರ ಮೋದಿಯವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಒಂದಕ್ಷರ ಯಾರೇ ಬರೆದರೂ ಹೆಣ್ಣು-ಗಂಡು, ಹಿರಿಯರು-ಕಿರಿಯರು ಯಾವುದನ್ನೂ ಲೆಕ್ಕಿಸದೆ ಅವರ ಭಕ್ತರ ಗುಂಪು ಅಶ್ಲೀಲವಾಗಿ ಬೈಯ್ಯುವುದು, ನಿಂದಿಸುವುದು, ಚಾರಿತ್ರ್ಯಹರಣ ಮಾಡುತ್ತಿರುವುದನ್ನು ನೋಡಿದಾಗ ಎರಡು ಘಟನೆಗಳು ನೆನಪಾಯಿತು. ಬೈಗುಳ ವೀರರೆಲ್ಲರೂ ವಿದ್ಯಾವಂತರು. ಇವರು ಭಿನ್ನಾಭಿಪ್ರಾಯಗಳನ್ನು ಸೈದ್ಧಾಂತಿಕವಾಗಿ ಚರ್ಚಿಸಲು ಬರುವುದಿಲ್ಲ. ಬರೀ ಬೈಗುಳು. ತಮಗೊಲ್ಲದವರನ್ನು ಚುಚ್ಚಿ ಸಂತೋಷ ಪಡುವ ವಿಕೃತಾನಂದರು. ಇತ್ತೀಚೆಗೆ ಯಾರಾದರೂ ಬೈದರೆ ಈತ ಮೋದಿ ಅಭಿಮಾನಿ ಇರಬಹುದೇನೋ ಎಂದು ಸಂಶಯ ಪಡುವಷ್ಟು ಮೋದಿ ಭಕ್ತರ ಹಾವಳಿ ಆವರಿಸಿಕೊಂಡುಬಿಟ್ಟಿದೆ. ಇಂತಹವರನ್ನು ಕಾನೂನಿನ ಮೂಲಕವೇ ಸರಿಪಡಿಸಬಹುದೇನೋ ಎಂಬ ಸಣ್ಣ ಆಸೆಯಿಂದ ನಾನು ಪೊಲೀಸರಿಗೆ ದೂರು ನೀಡಿದರೆಅಭಿವ್ಯಕ್ತಿ ಸ್ವಾತಂತ್ರ್ಯ ಹರಣಎಂದು ಗುಲ್ಲೆಬ್ಬಿಸಲಾಯಿತು. ಸ್ವತ: ನರೇಂದ್ರ ಮೋದಿಯವರು ಮಾತ್ರವಲ್ಲ, ಸಂಸದ ಪ್ರತಾಪ ಸಿಂಹ ಕೂಡಾ ತಮ್ಮ ವಿರುದ್ದ ಬರೆದವರ ವಿರುದ್ಧ ಸೆಕ್ಷನ್ 66 ಬಳಸಿಕೊಂಡು ದೂರು ನೀಡಿದ್ದನ್ನು ಅವರು ಮರೆತೇ ಬಿಟ್ಟಿದ್ದರು.
ಆದರೆ ರೀತಿ ಬರೆಯುವ ಮೂಲಕ ಜಗತ್ತಿನ ಮುಂದೆ ತಾವು ಬೆತ್ತಲಾಗುತ್ತಿದ್ದೇವೆ ಎನ್ನುವ ಅರಿವು ಮೋದಿ ಭಕ್ತರಿಗಿಲ್ಲ. ಇತ್ತೀಚೆಗೆ ಇವರಲ್ಲಿ ಕೆಲವರನ್ನು ನಾನು ಬ್ಲಾಕ್ ಮಾಡಿದ್ದೇನೆ. ಇನ್ನು ಕೆಲವರನ್ನು ಉಳಿಸಿಕೊಂಡಿದ್ದೇನೆ. ಮೋದಿಯವರಿಗೆ ಎಂತೆಂತಹ ಅಭಿಮಾನಿಗಳಿದ್ದಾರೆನ್ನುವುದು ಜಗತ್ತಿಗೆ ಗೊತ್ತಾಗಲಿ. ಇವರನ್ನೆಲ್ಲ ಬಳಸಿಕೊಂಡು ಅಧಿಕಾರಕ್ಕೆ ಬಂದ ನರೇಂದ್ರಮೋದಿಯವರು ಈಗ ಸೋಷಿಯಲ್ ಮೀಡಿಯಾದಲ್ಲಿರುವ ತನ್ನ ಅಭಿಮಾನಿಗಳಿಗೆ ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದನ್ನು ಓದಿ ಇದನ್ನು ಬರೆಯಬೇಕೆನಿಸಿತು. ತಮ್ಮ ಆರಾಧ್ಯ ದೈವದ ಮಾತಿಗೆ ಭಕ್ತರು ಹೇಗೆ ಪ್ರತಿಕ್ರಿಯಿಸುತ್ತಾರೆನ್ನುವುದನ್ನು ಕಾದು ನೋಡಬೇಕು. ಭಸ್ಮಾಸುರರನ್ನು ಸೃಷ್ಟಿಸುವುದು ಸುಲಭ ನಿಯಂತ್ರಿಸುವುದು ಕಷ್ಟ.

Wednesday, July 1, 2015

ಬಾಪು ನಾಡಿನಲ್ಲಿ ಸತ್ಯವನ್ನು ಶೋಧಿಸುತ್ತಾ.... ( ಅನಾವರಣ, ಪ್ರಜಾವಾಣಿ, ಏಪ್ರಿಲ್ 12, 2010)

ನರೇಂದ್ರಮೋದಿ ರಾಜ್ಯಭಾರದ ಇತಿಹಾಸದ ಹೊಟ್ಟೆ ಬಗೆಯುವುದು ಕೂಡಾ ಬೀಭತ್ಸವಾದುದು. ದೇವರನ್ನು ನಂಬುವವರಾಗಿದ್ದರೆ ‘ತಪ್ಪಿತಸ್ಥರಿಗೆ ದೇವರೇ ಶಿಕ್ಷೆ ನೀಡಲಿ’ ಎಂದು ಹಾರೈಸಿ ಸುಮ್ಮನಿರುವುದರಲ್ಲಿಯೇ ಮನಃಶಾಂತಿ ಇದೆ. ಆದರೆ ಇತಿಹಾಸದ ಹೊಟ್ಟೆಯಿಂದಲೇ ವರ್ತಮಾನ ಹುಟ್ಟಿರುವುದರಿಂದ ಇತಿಹಾಸವನ್ನು ಮರೆಯುವುದೂ ಕಷ್ಟ.
ಇತಿಹಾಸಕ್ಕೆ ಸಾಕ್ಷಿಯಾದವರಿಗೆ ಅದು ಇನ್ನೂ ಕಷ್ಟ. ಮರೆಯಬೇಕೆನಿಸಿದರೂ ಸಮಯ-ಸಂದರ್ಭ ನೆನಪಿಸಿಕೊಳ್ಳುವಂತೆ ಮಾಡುತ್ತದೆ. ‘ಎರಡು ಸಾವಿರ ಜನರ ಸಾವಿಗೆ ವಿಷಾದವಾದರೂ ಬೇಡವೇ’ ಎಂಬ ನನ್ನ ಅಂಕ-ಣಕ್ಕೆ(ಮಾರ್ಚ್.29)ಹಿರಿಯಪತ್ರಕರ್ತ ಎಚ್. ಎನ್.ಆನಂದ್ ಅವರು ನೀಡಿರುವ ಪ್ರತಿಕ್ರಿಯೆ ಇಂತಹದ್ದೊಂದು ಸಂದರ್ಭವನ್ನು ಸೃಷ್ಟಿಸಿದೆ.

‘ಗುಜರಾತ್ ಕೋಮುಗಲಭೆಯಲ್ಲಿ ಹತ್ಯೆಗೀಡಾದ ಕೌಸರ್‌ಬಾನು ಹೊಟ್ಟೆಯಲ್ಲಿದ್ದ ಭ್ರೂಣ ಸುರಕ್ಷಿತವಾಗಿತ್ತು ಎಂದು ಅವರ ಮರಣೋತ್ತರ ಪರೀಕ್ಷೆ ನಡೆಸಿದ್ದ ಸರ್ಕಾರಿ ವೈದ್ಯ ಡಾ.ಜೆ.ಎಸ್ಕನೋರಿಯಾ ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಹೇಳಿದ್ದಾರೆ. ನೀವು ಬೇರೆಯೇ ಬರೆದಿದ್ದೀರಿ. ಯಾರನ್ನು ನಂಬುವುದು?’ ಎನ್ನುವುದು ಆನಂದ್ ಅವರಲ್ಲಿ ಹುಟ್ಟಿರುವ ಜಿಜ್ಞಾಸೆ.
‘ಕರ್ನಾಟಕಕ್ಕಿಂತ ಹೆಚ್ಚು ಗುಜರಾತ್ ಸುತ್ತಿರುವ, 2002ರ ಕೋಮುಗಲಭೆ ಮಾತ್ರವಲ್ಲ ಅಲ್ಲಿನ ಎರಡು ವಿಧಾನಸಭಾ ಚುನಾವಣೆಗಳ ಕಾಲದಲ್ಲಿ ಪ್ರತ್ಯಕ್ಷವಾಗಿ ತೆರಳಿ ವರದಿ ಮಾಡಿ ಆ ರಾಜ್ಯವನ್ನು ತಕ್ಕಮಟ್ಟಿಗೆ ತಿಳಿದುಕೊಂಡಿರುವ ನಿಮ್ಮ ಹಳೆಯ ಸಹೋದ್ಯೋಗಿಯಾದ ನನ್ನನ್ನೇ ನಂಬಿಬಿಡಿ ಸಾರ್’ ಎಂದು ಅವರಿಗೆ ನಮ್ರನಾಗಿ ಉತ್ತರಿಸಿ ಸುಮ್ಮನಿರಬಹುದಿತ್ತೋ ಏನೋ?
ಆದರೆ ಈ ರೀತಿ ಹುಟ್ಟಿಕೊಂಡ ಪ್ರಶ್ನೆಗಳಿಂದ ತೊಳಲಾಡುತ್ತಿರುವ ಇತರರ ಮನಃಶಾಂತಿಗಾಗಿಯಾದರೂ ಗುಜರಾತ್ ಕೋಮುಗಲಭೆಯ ರಕ್ತಸಿಕ್ತ ಇತಿಹಾಸದ ಪುಟಗಳನ್ನು ತಿರುವಿಹಾಕಿ ಕೆಲವು ಸತ್ಯಗಳನ್ನು ಅನಾವರಣಗೊಳಿಸಬೇಕಾಗಿದೆ.ಮೋದಿಯವರ ಬಗ್ಗೆ ಬರೆದ ಅಂಕಣಕ್ಕೆ ಪ್ರತಿಕ್ರಯಿಸಿದ ಕಿರಿಯ ಮಹಿಳಾ ಸಹದ್ಯೋಗಿಯೊಬ್ಬರು ‘ನೀವು ಬಿಲ್ಕಿಸ್ ಬಾನು ಬಗ್ಗೆಯೂ ಬರೆಯಬೇಕಿತ್ತು’ ಎಂದಿದ್ದರು. ನಮ್ಮ ಬಹಳಷ್ಟು ಜಾಗೃತ, ಸ್ವಾಭಿಮಾನಿ ಮತ್ತು ಸಾಹಸಿ ಹೆಣ್ಣುಮಗಳ ಪಾಲಿನ ‘ಹೀರೊಯಿನ್’ ಈ ಬಿಲ್ಕಿಸ್ ಬಾನು.
ಗುಜರಾತ್ ಕೋಮುಗಲಭೆಯ ಸಂದರ್ಭದಲ್ಲಿ ಹೆದರಿ ಊರು ಬಿಟ್ಟು ಓಡಿಹೋಗುತ್ತಿದ್ದವರನ್ನು ಬೆನ್ನಟ್ಟಿಕೊಂಡು ಬಂದ ದುಷ್ಕರ್ಮಿಗಳು ನಡುದಾರಿಯಲ್ಲಿ ಅಡ್ಡಹಾಕಿ ಬಿಲ್ಕಿಸ್ಬಾನು ಮತ್ತು ಆಕೆಯ ತಾಯಿ ಸೇರಿದಂತೆ ನಾಲ್ವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಕೈಗೆ ಸಿಕ್ಕವರನ್ನೆಲ್ಲ ಸಾಯಿಸಿದ್ದರು. ಊರುಬಿಟ್ಟ ಹದಿನಾರು ಮಂದಿಯಲ್ಲಿ ಉಳಿದುಕೊಂಡವರು ಮೂವರು ಮಾತ್ರ. ದುರ್ಬಲ ಮನಸ್ಸಿನ ಹೆಣ್ಣುಮಕ್ಕಳಾದರೆ ಅಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೋ ಏನೋ? ಆದರೆ ಮೈ-ಮನಸ್ಸು ತುಂಬಾ ಗಾಯಗಳಾಗಿದ್ದರೂ ಹಿಂಜರಿಯದ ಬಿಲ್ಕಿಸ್‌ಬಾನು ಬದುಕುಳಿದ ತನ್ನ ಮೂರುವರ್ಷದ ಮಗನನ್ನು ಕಟ್ಟಿಕೊಂಡು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು.
ಅನಕ್ಷರಸ್ಥೆಯಾದ ಬಿಲ್ಕಿಸ್‌ಬಾನು ಹೇಳಿದ್ದೇ ಒಂದು, ಪೊಲೀಸರು ಬರೆದುಕೊಂಡದ್ದೇ ಇನ್ನೊಂದು. ಎರಡು ದಿನಗಳ ನಂತರ ಪತ್ರಿಕೆ¬ಯೊಂದು ಬಿಲ್ಕಿಸ್‌ಬಾನು ಕುಟುಂಬದ ಎಂಟು ಸದಸ್ಯರ ಕೊಳೆತುಹೋದ ಶವಗಳ ಚಿತ್ರ ಪ್ರಕಟಿಸಿದಾಗ ಪೊಲೀಸರು ಹೋಗಿ ವೈದ್ಯರಿಂದ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದರು.
ಕೆಲವು ತಿಂಗಳುಗಳ ನಂತರ ಪೊಲೀಸರು ‘ನಡೆದಿದ್ದು ನಿಜ, ಪತ್ತೆಯಾಗಿಲ್ಲ’ ಎಂದು ಹೇಳಿ ಪ್ರಕರಣವನ್ನು ಮುಚ್ಚಿಹಾಕಿದ್ದರು. ಅದನ್ನು ಒಪ್ಪದ ಬಿಲ್ಕಿಸ್‌ಬಾನು ಈ ಪ್ರಕರಣದ ಮರುತನಿಖೆ ನಡೆಸುವಂತೆ ಕೋರಿ ಸುಪ್ರೀಂ-ಕೋರ್ಟ್‌ಗೆ ಮೊರೆ ಹೋದರು. ಮರುತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಿದ ಸುಪ್ರೀಂಕೋರ್ಟ್ ಅದರ ವಿಚಾರಣೆಯನ್ನು ಮುಂಬೈ ಹೈಕೋರ್ಟ್ ಉಸ್ತುವಾರಿಯ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿತ್ತು.
ಹೂತಿದ್ದ ಶವಗಳನ್ನೆಲ್ಲ ಹೊರತೆಗೆಸಿ ಮರು ಮರಣೋತ್ತರ ಪರೀಕ್ಷೆ ನಡೆಸಿದ ಸಿಬಿಐ ‘ಆರು ಮಂದಿ ಪೊಲೀಸರು ಹಾಗೂ ಮೊದಲ ಮರಣೋತ್ತರ ಪರೀಕ್ಷೆ ನಡೆಸಿದ್ದ ಇಬ್ಬರು ವೈದ್ಯರು ಷಾಮೀಲಾಗಿ ಆರೋಪಿಗಳನ್ನು ಬಚಾವು ಮಾಡಲು ಸಾಕ್ಷ್ಯಗಳನ್ನೆಲ್ಲಾ ನಾಶಮಾಡಿದ್ದಾರೆ’ ಎಂದು ಆರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಮುಂಬೈನ ವಿಶೇಷ ನ್ಯಾಯಾಲಯ 20 ಆರೋಪಿಗಳಲ್ಲಿ ಹನ್ನೊಂದು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಬಿಲ್ಕಿಸ್‌ಬಾನು ಕುಟುಂಬದ ಮೃತ ಸದಸ್ಯರ ಮೊದಲ ಮರಣೋತ್ತರ ಪರೀಕ್ಷೆ ನಡೆಸಿದ್ದ ಇಬ್ಬರು ಸರ್ಕಾರಿ ವೈದ್ಯರನ್ನು ನಂಬುವುದಾದರೆ ಕೌಸರ್ಬಾನು ಮರಣೋತ್ತರ ಪರೀಕ್ಷೆ ನಡೆಸಿದ್ದ ಡಾ.ಕನೋರಿಯಾ ಅವರನ್ನೂ ನಂಬಬಹುದೇನೋ? ಆದರೆ ಸುಪ್ರೀಂಕೋರ್ಟ್ ಕೂಡಾ ಗುಜರಾತ್‌ನ ಸರ್ಕಾರಿ ವೈದ್ಯರು ಮತ್ತು ಪೊಲೀಸರನ್ನು ಮಾತ್ರವಲ್ಲ ಅಲ್ಲಿನ ಮುಖ್ಯಮಂತ್ರಿಯವರನ್ನೇ ನಂಬಲಿಲ್ಲ. ಇದಕ್ಕಾಗಿಯೇ ಅಲ್ಲವೇ ಬೆಸ್ಟ್ ಬೇಕರಿ ಮತ್ತು ಬಿಲ್ಕಿಸ್‌ಬಾನು ಪ್ರಕರಣಗಳನ್ನು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿದ್ದು.
ಕೋಮುಗಲಭೆಯ ಕಾಲದಲ್ಲಿ ದಾಖಲಾಗಿದ್ದ 4,252 ಪ್ರಕರಣಗಳಲ್ಲಿ 2000 ಪ್ರಕರಣಗಳನ್ನು ಪೊಲೀಸರು ಕೈಬಿಟ್ಟಿದ್ದರೆನ್ನುವುದು ಗಮನಾರ್ಹ. ಈ ರೀತಿ ಮುಚ್ಚಿಹಾಕಲಾದ ಪ್ರಕರಣಗಳ ಮರುತನಿಖೆ ನಡೆಸುವಂತೆ ಗುಜರಾತ್ ಸರ್ಕಾರಕ್ಕೆ ಆದೇಶ ನೀಡಿದ್ದ ಸುಪ್ರೀಂಕೋರ್ಟ್ ಇದಕ್ಕಾಗಿಯೇ ವಿಶೇಷ ತನಿಖಾ ದಳವನ್ನು ರಚಿಸಿದೆ. ಇತ್ತೀಚೆಗೆ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಜರಾಗಿದ್ದು ಇದೇ ತನಿಖಾದಳದ ಮುಂದೆ. ಒಂದು ರಾಜ್ಯದ ಸರ್ಕಾರವನ್ನೇ ಸುಪ್ರೀಂಕೋರ್ಟ್ ನಂಬದಿರುವಾಗ ಅಲ್ಲಿನ ಒಬ್ಬ ಸರ್ಕಾರಿ ವೈದ್ಯನನ್ನು ನಂಬುವುದು ಹೇಗೆ ಸಾಧ್ಯ?
ಗುಜರಾತ್‌ನಲ್ಲಿ ಆಮಿಷ ಇಲ್ಲವೇ ಬೆದರಿಕೆ ಮೂಲಕ ಹೇಗೆ ಸಾಕ್ಷಿಗಳ ಬಾಯಿ ಮುಚ್ಚಿಸಲಾಗುತ್ತಿದೆ ಎನ್ನುವುದಕ್ಕೆ ಬೆಸ್ಟ್‌ಬೇಕರಿ ಹತ್ಯಾಕಾಂಡ ಒಳ್ಳೆಯ ಉದಾಹರಣೆ. ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಜಾಹೀರಾ ಶೇಖ್ ಬರೋಡಾ ಸೆಷನ್ಸ್ ನ್ಯಾಯಾಲಯದ ಮುಂದೆ ತಿರುಗಿಬಿದ್ದಿದ್ದಳು. (ಸುಳ್ಳು ಸಾಕ್ಷಿ ಹೇಳಲು ಆಕೆಗೆ ಹದಿನೆಂಟು ಲಕ್ಷ ರೂಪಾಯಿ ನೀಡಿದ್ದಾಗಿ ಬಿಜೆಪಿ ಶಾಸಕ ಮಧು ಶ್ರೀವಾಸ್ತವ ತೆಹೆಲ್ಕಾ ಪತ್ರಿಕೆಯ ‘ಕುಟುಕು ಕಾರ್ಯಾರಚಾರಣೆ’ಯಲ್ಲಿ ಒಪ್ಪಿಕೊಂಡಿದ್ದರು).
ಅಲ್ಲಿ ಸುಳ್ಳುಹೇಳಿದ್ದೆ ಎಂದು ಸುಪ್ರೀಂಕೋರ್ಟ್‌ನಲ್ಲಿ ಒಪ್ಪಿಕೊಂಡ ಜಾಹೀರಾ ಶೇಖ್, ಮುಂಬೈ ವಿಶೇಷ ನ್ಯಾಯಾಲಯದಲ್ಲಿ ಮತ್ತೆ ತನ್ನ ಮೂಲ ಹೇಳಿಕೆಯನ್ನೇ ಸಮರ್ಥಿಸಿಕೊಂಡಳು. ಆದರೆ ಇದನ್ನು ನಂಬದ ವಿಶೇಷ ನ್ಯಾಯಾಲಯ ಗುಜರಾತ್‌ನ ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದ್ದ ಎಂಟು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಿತಲ್ಲದೆ ಜಾಹೀರಾಳನ್ನು ‘ಸುಳ್ಳು ಸಾಕ್ಷಿ’ (ಪರ್ಜುರ್)ಯ ಅಪರಾಧಕ್ಕಾಗಿ ಜೈಲಿಗೆ ಕಳುಹಿಸಿತು.
ಗುಜರಾತ್ ಕೋಮುಗಲಭೆಯ ಪ್ರಕರಣಗಳನ್ನು ಕೆದಕುತ್ತಾ ಹೋದರೆ ಅಲ್ಲಿನ ರಾಜಕಾರಣಿಗಳು ಮತ್ತು ಅಧಿಕಾರಿಗಳು ಷಾಮೀಲಾಗಿ ನ್ಯಾಯಕ್ಕೆ ಬಗೆದ ಇಂತಹ ದ್ರೋಹದ ಕತೆಗಳು ಒಂದೊಂದಾಗಿ ಹೊರಬೀಳುತ್ತವೆ.ಗುಜರಾತ್‌ನ ಅಂದಿನ ಪರಿಸ್ಥಿತಿ ಹೇಗಿತ್ತೆಂದರೆ ಒಬ್ಬ ಅಧಿಕಾರಿ ಪ್ರಾಮಾಣಿಕವಾಗಿ ವೃತ್ತಿಧರ್ಮ ಪಾಲನೆ ಮಾಡಲು ಹೊರಟರೂ ಅದು ಸಾಧ್ಯ ಇರಲಿಲ್ಲ. ಇದಕ್ಕೆ ಕೋಮುಗಲಭೆಯ ಕಾಲದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ ಆರ್.ಬಿ.ಶ್ರೀಕುಮಾರ್ ಸಾಕ್ಷಿ.
ಕೋಮುಗಲಭೆಯ ಕಾಲದಲ್ಲಿ ಇಡೀ ಆಡಳಿತ ವ್ಯವಸ್ಥೆ ಹೇಗೆ ಮುಸ್ಲಿಮರ ವಿರುದ್ಧವಾಗಿತ್ತೆಂಬ ಬಗ್ಗೆ ಶ್ರೀಕುಮಾರ್ ಗಲಭೆ ನಡೆದ ಮೂರು ತಿಂಗಳ ನಂತರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅದರಲ್ಲಿ ಹೇಳಿದದನ್ನೇ ಕೋಮುಗಲಭೆಯ ತನಿಖೆಗೆ ನೇಮಿಸಲಾಗಿದ್ದ ನಾನಾವತಿ-ಶಹಾ ಆಯೋಗದ ಮುಂದೆ ಶ್ರೀಕುಮಾರ್ ಹೇಳಿದರೆ ಏನು ಗತಿ ಎಂದು ಗಾಬರಿಯಾದ ಸರ್ಕಾರ ಅವರ ಮೇಲೆ ನಾನಾಬಗೆಯ ಒತ್ತಡ ಹೇರಿತ್ತು.
ಗೃಹ ಕಾರ್ಯ ದರ್ಶಿ ಜಿ.ಸಿ.ಮುರ್ಮು ಮತ್ತು ಸರ್ಕಾರಿ ವಕೀಲ ಅರವಿಂದ್ ಪಾಂಡ್ಯ ಅವರು ಶ್ರೀಕುಮಾರ್ ಅವರನ್ನು ಕರೆಸಿ ನಾನಾವತಿ ಆಯೋಗದ ಮುಂದೆ ‘ಏನು ಹೇಳಬೇಕು ಮತ್ತು ಏನು ಹೇಳಬಾರದು’ ಎಂಬ ಬಗ್ಗೆ ಬೋಧನೆ ಮಾಡಿದ್ದರು. ಹೇಳಿದಂತೆ ಕೇಳದಿದ್ದರೆ ಪರಿಣಾಮ ನೆಟ್ಟಗಾಗಲಿಕ್ಕಿಲ್ಲ ಎನ್ನುವ ಬೆದರಿಕೆಯೂ ಬೋಧನೆಯಲ್ಲಿತ್ತು. ಇದನ್ನೆಲ್ಲ ಮೊದಲೇ ನಿರೀಕ್ಷಿಸಿದ್ದ ಶ್ರೀಕುಮಾರ್ ಆ ಸಂಭಾಷಣೆಯನ್ನು ರಹಸ್ಯವಾಗಿ ಧ್ವನಿಮುದ್ರಿಸಿಕೊಂಡು ನಂತರ ಪತ್ರಿಕೆಗಳಿಗೆ ಬಿಡುಗಡೆ ಮಾಡಿದಾಗ ನರೇಂದ್ರಮೋದಿ ಸರ್ಕಾರ ಬತ್ತಲಾಗಿತ್ತು.
ಬೆಸ್ಟಬೇಕರಿ ಮತ್ತು ಬಿಲ್ಕಿಸ್‌ಬಾನು ಪ್ರಕರಣ ಸೇರಿದಂತೆ ಪೊಲೀಸರು ಕೈಬಿಟ್ಟ ಪ್ರಕರಣಗಳ ಮರುತನಿಖೆಗೆ ಆದೇಶ ನೀಡಿದವರು ಸುಪ್ರೀಂಕೋರ್ಟ್‌ನ ಆಗಿನ ಮುಖ್ಯನ್ಯಾಯಮೂರ್ತಿ ವಿ.ಎನ್.ಖರೆ ಅವರು. ಕೋಮು-ಗಲಭೆಯಲ್ಲಿ ಬಲಿಯಾದವರಿಗೆ ಒಂದಷ್ಟು ನ್ಯಾಯಸಿಕ್ಕಿದ್ದರೆ ಅದು ಈ ಖರೆ ಎಂಬ ಪುಣ್ಯಾತ್ಮನಿಂದಾಗಿ. ‘ಗುಜರಾತ್ ಸರ್ಕಾರ ಮತ್ತು ಪ್ರಾಸಿಕ್ಯೂಷನ್ ಮೇಲೆ ನನಗೆ ನಂಬಿಕೆ ಉಳಿದಿಲ್ಲ. ನೀವು ಜನರನ್ನು ರಕ್ಷಿಸಬೇಕು, ತಪ್ಪಿತಸ್ಥರನ್ನು ಶಿಕ್ಷಿಸಬೇಕು.
ಇದಲ್ಲದೆ ಮತ್ತೆ ಯಾವುದು ರಾಜಧರ್ಮ? ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲು ಸಾಧ್ಯವಾಗದಿದ್ದರೆ ಅಧಿಕಾರದಿಂದ ಕೆಳಗಿಳಿಯಿರಿ, ಅದೇನು ಸ್ವಂತ ಆಸ್ತಿಯಲ್ಲ. ಜನರಿಗೆ ರಕ್ಷಣೆ ನೀಡಲಾಗದಿದ್ದರೆ ನೀವು ಅಧಿಕಾರದಲ್ಲಿ ಮುಂದುವರಿಯುವಂತಿಲ್ಲ...’ ಎಂದು 2003ರ ಸೆಪ್ಟೆಂಬರ್ ಹನ್ನೆರಡರಂದು ಮುಖ್ಯನ್ಯಾಯಮೂರ್ತಿಗಳು ತುಂಬಿದ ನ್ಯಾಯಾಲಯದಲ್ಲಿ ನರೇಂದ್ರಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ನಿವೃತ್ತಿಯಾದ ನಂತರ ಅವರು ಬರೆಯುತ್ತಾರೆ: ‘....ಸರ್ಕಾರವೊಂದಕ್ಕೆ ಮೂರು ಜವಾಬ್ದಾರಿಗಳಿರುತ್ತವೆ.ಮೊದಲನೆಯದು ಜನತೆಗೆ ಜಾತಿ-ಧರ್ಮದ ಭೇದವಿಲ್ಲದೆ ರಕ್ಷಣೆ ನೀಡುವುದು, ಎರಡನೆಯದು ಕಾನೂನು ಮುರಿದವರನ್ನು ಶಿಕ್ಷಿಸುವುದು ಮೂರನೆಯದು ಅನ್ಯಾಯ ಹಿಂಸೆಗೆ ಬಲಿಯಾದವರಿಗೆ ಪರಿಹಾರ ಕಲ್ಪಿಸುವುದು. ರಸ್ತೆ ನಿರ್ಮಿಸುವುದು, ಶಿಕ್ಷಣ ನೀಡುವುದು ಎಲ್ಲವೂ ಮುಖ್ಯ ಎನ್ನುವುದು ಸರಿ, ರಕ್ಷಣೆ ಇಲ್ಲದ ಜನತೆ ಈ ಸೌಲಭ್ಯಗಳನ್ನು ಕಟ್ಟಿಕೊಂಡು ಏನು ಮಾಡಬೇಕು?’
ಕೊನೆಯದಾಗಿ ವಿವಾದಾತ್ಮಕ ಕೌಸರ್‌ಬಾನು ಹತ್ಯೆ ಪ್ರಕರಣ. ಇದರಲ್ಲಿ ಮುಖ್ಯ ಆರೋಪಿಗಳು ಇಬ್ಬರು. ಒಬ್ಬ ರತಿಲಾಲ್ ರಾಥೋಡ್ ಅಲಿಯಾಸ್ ಭವಾನಿಸಿಂಗ್ ಎಂಬ ಗುಜರಾತ್ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಕಂಡಕ್ಟರ್, ಇನ್ನೊಬ್ಬ ಬಾಬು ಬಜರಂಗಿ ಎಂಬ ವಿಶ್ವಹಿಂದೂ ಪರಿಷತ್ ನಾಯಕ. ಎರಡು ವರ್ಷಗಳ ಹಿಂದೆ ‘ಕುಟುಕು ಕಾರ್ಯಾಚರಣೆ’ಯಲ್ಲಿ ತೊಡಗಿದ್ದ ತೆಹೆಲ್ಕಾ ಪತ್ರಿಕೆಯ ವರದಿಗಾರನೆದುರು ಬಾಬು ಬಜರಂಗಿ ನರೋಡಾ ಪಾಟಿಯಾದಲ್ಲಿನ ತನ್ನ ‘ಸಾಹಸ’ಗಳನ್ನು ಕೊಚ್ಚಿಕೊಂಡಿದ್ದ. ‘. ಏಕ್ ವೋ ಪ್ರೆಗ್ನೆಂಟ್ ತಿ, ಉಸ್ಕೊ ಹಮೆ ಚೀರ್ ದೀಯಾ ತಾ...’ ಎಂದು ಹೇಳಿಕೊಂಡಿದ್ದ.
ಹಾಗಿದ್ದರೆ ಡಾ.ಕನೋರಿಯಾ ಮರಣೋತ್ತರ ಪರೀಕ್ಷೆ ನಡೆಸಿದ್ದು ಯಾರದ್ದು? ನಿಜವಾಗಿ ನಡೆದದ್ದೇನು ಎಂದು ಇನ್ನೊಬ್ಬ ಆರೋಪಿಯಾದ ಭವಾನಿಸಿಂಗ್‌ನನ್ನಾದರೂ ಕೇಳೋಣವೆಂದರೆ ಆತನನ್ನು ಎಲ್ಲಿ ಹುಡುಕುವುದು? ಐದು ವರ್ಷಗಳ ಹಿಂದೆ ಗಾಂಧಿನಗರದ ನರ್ಮದಾ ಕಾಲುವೆಯಲ್ಲಿ ಆತನ ಶವ ಪತ್ತೆಯಾಗಿತ್ತು. ಪಾಪ ಪ್ರಜ್ಞೆಯಿಂದಾಗಿ ಹುಚ್ಚನಂತೆ ಆಡುತ್ತಿದ್ದ ಭವಾನಿಸಿಂಗ್ ಆತ್ಮಹತ್ಯೆ ಮಾಡಿಕೊಂಡ ಎನ್ನುವವರಿದ್ದಾರೆ. ಅದು ಆತ್ಮಹತ್ಯೆ ಅಲ್ಲ, ತಪ್ಪೊಪ್ಪಿಗೆ ಮಾಡಬಹುದೆಂಬ ಭಯದಿಂದ ಆತನನ್ನು ಸಾಯಿಸಲಾಗಿದೆ ಎಂದು ಹೇಳುವವರೂ ಇದ್ದಾರೆ. ಸತ್ಯ ಸಾವು ಕಂಡರಲ್ಲವೇ ಸುಳ್ಳು ಬದುಕುವುದು. ಸತ್ಯಕ್ಕೆ ಸಾವಿಲ್ಲ ಎಂದವರು ಯಾರು?

Tuesday, June 30, 2015

ಕೌಸರ್ ಬಾನು ನೆನಪಲ್ಲಿ ಕರಗಿಹೋದ ಸೆಲ್ಪಿ ಸಂಭ್ರಮ

ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಯ ಮೇರೆಗೆ ನಮ್ಮ ಅನೇಕ ಸ್ನೇಹಿತರು ಮಗಳ ಜತೆ ತೆಗೆಸಿಕೊಂಡ ಸೆಲ್ಪಿಗಳನ್ನು ನೋಡಿದಾಗ ಖುಷಿಯಾಗುತ್ತದೆ.ಈ ಚಿತ್ರಗಳನ್ನೆಲ್ಲ ನೋಡುತ್ತಿದ್ದಾಗ ನನಗೂ ನನಗಿರುವ ಒಬ್ಬಳೇ ಮಗಳ ಜತೆ ಸೆಲ್ಪಿ ತೆಗೆದು ಪ್ರಧಾನಿಯವರಿಗೆ ಕಳುಹಿಸಿಕೊಡಬೇಕೆನಿಸಿತು. ಹಾಗೆಂದು ಯೋಚಿಸಿದಾಕ್ಷಣ ನುಗ್ಗಿಬಂದು ದಾಳಿಮಾಡುತ್ತಿವೆ ಹಾಳು ನೆನಪುಗಳು. ನಮ್ಮ ಬಹಳಷ್ಟು ಯುವಜನರು ಯಾಕೆ ಇಷ್ಟೊಂದು ಖುಷಿಯಲ್ಲಿರುತ್ತಾರೆಂದರೆ ಅವರಿಗೆ ಇತಿಹಾಸದ ನೆನಪುಗಳಿರುವುದಿಲ್ಲ. ನನ್ನಂತಹ ಸ್ವಲ್ಪ ಹಿರಿಯರು ಅವರಂತೆ ಸದಾ ನಗುನಗುತ್ತಾ ಖುಷಿಖುಷಿಯಾಗಿರಲು ಸಾಧ್ಯವಾಗದೆ ‘ಸಿನಿಕ’ರೆಂದು ಕರೆಸಿಕೊಳ್ಳುತ್ತಾ ನರಳಾಡುತ್ತಿರುವುದು ಯಾಕೆಂದರೆ ನಮ್ಮಲ್ಲಿ ಕಾಡುವ ನೆನಪುಗಳಿರುತ್ತವೆ.
ಸೆಲ್ಪಿ ಸಂಭ್ರಮದಲ್ಲಿ ನಮ್ಮ ಅನೇಕ ಸ್ನೇಹಿತರು ಮೈಮರೆತಿರುವಾಗ ಯಾವುದೋ ನೆನಪುಗಳ ಕಾಟದಿಂದಾಗಿ ನಿದ್ದೆಬಾರದೆ ಬೆಳಗಾವಿಯ ಹೊಟೇಲ್ ನ ಹಾಸಿಗೆಯಲ್ಲಿ ಹೊರಳಾಡಿ ಮುಂಜಾನೆ ನಾಲ್ಕುಗಂಟೆಗೆ ಎದ್ದು ಇದನ್ನು ಬರೆಯಲುಕೂತಿರುವೆ.
ಸೆಲ್ಪಿ ಸಂಭ್ರಮದ ನಡುವೆ ನನ್ನನ್ನು ಕಾಡುತ್ತಿರುವ ಮಹಿಳೆ ಆಗಿನ್ನೂ 22ರ ಹರಯದವಳಾಗಿದ್ದ ಹೀನಾ ಕೌಸರ್ ಅಲಿಯಾಸ್ ಕೌಸರ್ ಬಾನು. ಆಕೆಯ ಹೊಟ್ಟೆಯಲ್ಲಿದ್ದ ಮಗು ಬದುಕಿದ್ದರೆ ಕಳೆದ ಭಾನುವಾರಕ್ಕೆ ಅದಕ್ಕೆ ಹದಿಮೂರು ವರ್ಷ ಐದು ತಿಂಗಳಾಗುತ್ತಿತ್ತು, ಕೌಸರ್ ಬಾನು ಕೂಡಾ ತನ್ನ ಮಗಳ ಜತೆ ಸೆಲ್ಪಿ ತೆಗೆದು ನರೇಂದ್ರ ಮೋದಿಯವರಿಗೆ ಕಳುಹಿಸಿಕೊಡುತ್ತಿದ್ದಳೋ ಏನೋ? ಆದರೆ ಹಾಗಾಗಲಿಲ್ಲ.
‘ಚೋಟಾ ಕರ್ನಾಟಕ’ ಎಂದೇ ಕರೆಯಲಾಗುವ ಅಹ್ಮದಾಬಾದ್ ನ ನರೋಡಾ ಪಾಟಿಯಾದಲ್ಲಿ ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ರಿಕ್ಷಾಚಾಲಕ ಫಿರೋಜ್ ಮತ್ತು ಕೌಸರ್ ಬಾನು ಬಡತನದಲ್ಲಿಯೂ ನೆಮ್ಮದಿಯಾಗಿದ್ದರು. 2002ರ ಫೆಬ್ರವರಿ 28ರಂದು ಗುಜರಾತ್ ನಲ್ಲಿ ಕೋಮುಹಿಂಸಾಚಾರ ಭುಗಿಲೆದ್ದಾಗ ಫಿರೋಜ್ ಮನೆಯಲ್ಲಿರಲಿಲ್ಲ. ‘ಸೀಮಂತ’ಕ್ಕೆ ಬಂದಿದ್ದ ಕೌಸರ್ ತಂದೆ,ಸಹೋದರ್ ಜಾಹಿದ್, ಆತನ ಪತ್ನಿ ಮತ್ತು ಇಬ್ಬರು ಮಕ್ಕಳು ಮನೆಯಲ್ಲಿದ್ದರು. ಆ ದಿನ ನರೋಡಾ ಪಾಟಿಯಾದ ಫಿರೋಜ್ ಮನೆಗೆ ನುಗ್ಗಿದ್ದ ದುರುಳರು ಮನೆಯಲ್ಲಿದ್ದವರನ್ನೆಲ್ಲ ಹೊರಗೆಳೆದು ತಂದಿದ್ದಾರೆ. ದುರುದ್ದೇಶವಿಟ್ಟುಕೊಂಡಿದ್ದ ದುರುಳರು ಕೌಸರ್ ತುಂಬು ಗರ್ಭಿಣಿಯೆಂದು ಗೊತ್ತಾದಾಗ ಇನ್ನಷ್ಟು ಕೆರಳಿರಬಹುದು. ಆ ಸಿಟ್ಟಿನಲ್ಲಿಯೇ ಆಕೆಯ ಹೊಟ್ಟೆಯನ್ನು ಸೀಳಿದ್ದಾರೆ, ಆ ಇರಿತಕ್ಕೆ ಭ್ರೂಣ ಹೊರಬಂದಿದೆ. ಅದರ ನಂತರ ಆಕೆಯನ್ನು ಬೆಂಕಿಗೆ ಎಸೆದಿದ್ದಾರೆ. 

ಓಡೋಡುತ್ತಾ ಬಂದ ಗಂಡ ಕಂಡದ್ದು ಹೆಂಡತಿಯ ಅರ್ಧಸುಟ್ಟ ನಗ್ನದೇಹ. ಆ ಹಿಂಸಾಕಾಂಡದಲ್ಲಿ ಫಿರೋಜ್ ತಂಗಿ, ಮಾವ, ಕೌಸರ್ ಬಾನು ಸೋದರನ ಪತ್ನಿ ಮತ್ತು ಇಬ್ಬರು ಮಕ್ಕಳು ಕೂಡಾ ಪ್ರಾಣ ಕಳೆದುಕೊಂಡಿದ್ದರು. ಈ ಕುಟುಂಬ ಕರ್ನಾಟಕ ಮೂಲದ್ದು. ಅಹ್ಮದಾಬಾದ್ ನಲ್ಲಿಯೇ ಇದ್ದ ಕೌಸರ್ ಬಾನು ತಂದೆ ಪ್ರಾಣ ಬೆದರಿಕೆಯ ಕಾರಣದಿಂದಾಗಿ ವರ್ಷಗಳ ಹಿಂದೆಯೇ ಕರ್ನಾಟಕಕ್ಕೆ ಹಿಂದಿರುಗಿದ್ದರು. ... ಇಷ್ಟೆಲ್ಲ ನಡೆಯುತ್ತಿರುವಾಗ ಗುಜರಾತ್ ಎಂಬ ರಾಜ್ಯದಲ್ಲಿ, ಈಗಿನ “ಬೇಟಿ ಬಚಾವೋ’ ಆಂದೋಲನದ ನೇತರಾರರೂ ಮತ್ತು ಈ ದೇಶದ ಪ್ರಧಾನಿಗಳೂ ಆಗಿರುವ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದರು. 'ರಾಜಧರ್ಮ' ಪಾಲಿಸು ಎಂದು ಅವರ ಪಕ್ಷದ ಹಿರಿಯರೂ ಮತ್ತು ಆಗಿನ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಕೂಗಿಕೂಗಿ ಹೇಳುತ್ತಿದ್ದರೂ ಮೋದಿ ಕಿವುಡಾಗಿದ್ದರು.

ಈ ನೆನಪುಗಳನ್ನು ಹೊತ್ತುಕೊಂಡು ನಾನು ನನ್ನ ಮಗಳೊಂದಿಗೆ ಸೆಲ್ಪಿ ತೆಗೆಸಿ ಪ್ರಧಾನಿಗೆ ಹೇಗೆ ಕಳುಹಿಸಲಿ? ನನ್ನ ಸ್ನೇಹಿತರ ಸೆಲ್ಪಿ ಸಂಭ್ರಮದಲ್ಲಿ ಹೇಗೆ ಕೂಡಿಕೊಳ್ಳಲಿ. ತುರ್ತಾಗಿ ನನಗೆ ನೆಮ್ಮದಿಯ ನಿದ್ದೆ ಬೇಕಾಗಿದೆ. ಗುಡ್ ಮಾರ್ನಿಂಗ್.

Thursday, June 18, 2015

ಸಾಂಸ್ಕೃತಿಕ ರಾಜಕಾರಣ

ಪ್ರಜೆಗಳ ಆರೋಗ್ಯವನ್ನಷ್ಟೇ ಗಮನದಲ್ಲಿಟ್ಟುಕೊಂಡು ನಾಡಿನ ಪ್ರಭುಗಳು ಯೋಗ ದಿನ ಆಚರಿಸಲು ಹೊರಟರೆ ಅದಕ್ಕೆ ಧರ್ಮ, ಪಕ್ಷಗಳನ್ನು ತಳಕುಹಾಕಿ ಯಾಕೆ ರಾಡಿ ಮಾಡ್ತಿದ್ದೀರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಮೇಲ್ನೋಟಕ್ಕೆ ಈ ಪ್ರಶ್ನೆ ಸದಾಶಯವನ್ನೊಳಗೊಂಡಂತೆ ಕಂಡರೂ, ಹೀಗೆ ಪ್ರಶ್ನಿಸುವವರೆಲ್ಲರೂ ಈ ಸದಾಶಯವನ್ನು ಮಾತ್ರ ಹೊಂದಿದ್ದಾರೆಂದು ಅನಿಸದಿರುವ ಕಾರಣದಿಂದಾಗಿಯೇ ವಿವಾದ ಹುಟ್ಟಿಕೊಂಡಿದೆ. ಕತ್ತಿ ಅದರಷ್ಟಕ್ಕೆ ಅಪಾಯಕಾರಿಯಾದುದಲ್ಲ, ಅದರ ಒಳಿತು-ಕೆಡುಕುಗಳು ಕತ್ತಿ ಕೈಗೆತ್ತಿಕೊಂಡವನ ಉದ್ದೇಶ-ದುರುದ್ದೇಶಗಳನ್ನು ಅವಲಂಬಿಸಿರುತ್ತದೆ. ಕತ್ತಿಯಿಂದ ಪೈರನ್ನಾದರೂ ಕೊಯ್ಯಬಹುದು, ಮನುಷ್ಯನ ಕತ್ತನ್ನಾದರೂ ಕೊಯ್ಯಬಹುದು.
ಯೋಗವು ವೈದ್ಯಕೀಯ ವಿಜ್ಞಾನದ ಭಾಗ ಎನ್ನುವುದರ ಬಗ್ಗೆ ಯಾರ ತಕರಾರೂ ಇಲ್ಲ. ಎಲ್ಲ ಧರ್ಮ, ಪಂಥ, ವರ್ಗದವರೂ ಯೋಗಾಭ್ಯಾಸ ಮಾಡುತ್ತಾರೆ. ಇದು ಹಲವು ರೋಗಗಳಿಗೆ ಯಶಸ್ವಿ ಚಿಕಿತ್ಸೆ ಎನಿಸಿಕೊಂಡಿರುವುದೂ  ಸಾಬೀತಾಗಿದೆ. ಆದರೆ ಯೋಗಾಭ್ಯಾಸದ ಪ್ರಚಾರಕ್ಕೆ ಹೊರಟವರು ಜನತೆಯ ಆರೋಗ್ಯ ಸುಧಾರಣೆ ದೃಷ್ಟಿಯನ್ನು ಮಾತ್ರ ಹೊಂದಿದ್ದಾರೆಯೇ ಎನ್ನುವುದಷ್ಟೇ ಈಗಿನ ಪ್ರಶ್ನೆ. ಘರ್ ವಾಪಸಿ, ಲವ್ ಜಿಹಾದ್, ನೈತಿಕ ಪೊಲೀಸ್‌ಗಿರಿ, ಜ್ಯೋತಿಷ, ವಾಸ್ತು ಬಗ್ಗೆ ಬೊಬ್ಬಿಡುವವರು ಯೋಗದ ಬಗ್ಗೆ ಮಾತನಾಡುವುದನ್ನು ಕಂಡಾಗ ಸಹಜವಾಗಿಯೇ ಉದ್ದೇಶದ ಬಗ್ಗೆ ಅನುಮಾನ ಮೂಡುತ್ತದೆ. ಈ ಅನುಮಾನ ನಿರಾಧಾರವಾದುದು ಕೂಡಾ ಅಲ್ಲ.
ಬಹಿರಂಗವಾಗಿ ಪಕ್ಷ ರಾಜಕಾರಣವನ್ನು, ಗುಪ್ತವಾಗಿ ಸಾಂಸ್ಕೃತಿಕ ರಾಜಕಾರಣವನ್ನು ನಡೆಸುತ್ತಿರುವ ಬಿಜೆಪಿಗೆ ಎರಡು ಬಗೆಯ ಅಜೆಂಡಾಗಳಿವೆ. ಈ ಪಕ್ಷದ ಬಹಿರಂಗ ಅಜೆಂಡಾ ಲೋಕಸಭಾ ಚುನಾವಣೆಗೆ ಮುನ್ನ  ಪ್ರಕಟಿಸಿದ ಚುನಾವಣಾ ಪ್ರಣಾಳಿಕೆಯಲ್ಲಿದೆ. ಅಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತಿ ರಾಜ್ಯದಲ್ಲಿ ನವದೆಹಲಿಯಲ್ಲಿರುವ ‘ಏಮ್ಸ್’ ಮಾದರಿಯ ಆಸ್ಪತ್ರೆಗಳಿಂದ ಹಿಡಿದು ಸೊಳ್ಳೆ ನಿಯಂತ್ರಣ ಮಿಷನ್ ಸ್ಥಾಪನೆವರೆಗೆ ಹಲವಾರು ಆಶ್ವಾಸನೆಗಳಿವೆ. ಎಲ್ಲಿಯೂ ಯೋಗ ದಿನಾಚರಣೆ ಇಲ್ಲವೆ ಯೋಗ ಪ್ರಚಾರದ ಉಲ್ಲೇಖ ಇಲ್ಲ. ಅದು ಇರುವುದು ಬಿಜೆಪಿಯ ಗುಪ್ತ ಅಜೆಂಡಾದ ಬುಟ್ಟಿಯಲ್ಲಿ.
ಬಿಜೆಪಿಯ  ಗುಪ್ತ ಸಾಂಸ್ಕೃತಿಕ ರಾಜಕಾರಣಕ್ಕೆ ಅದು ತನ್ನದೆಂದು ಹೇಳಿಕೊಳ್ಳುತ್ತಿರುವ ಸಾಂಸ್ಕೃತಿಕ ರಾಷ್ಟ್ರೀಯತೆಯೇ ಪ್ರೇರಣೆ. ಈ ಸಾಂಸ್ಕೃತಿಕ ರಾಷ್ಟ್ರೀಯತೆ ಬಹುಸಂಸ್ಕೃತಿಯನ್ನು ಒಪ್ಪುವುದಿಲ್ಲ.  ಸಾಂಸ್ಕೃತಿಕ ರಾಷ್ಟ್ರೀಯತೆಗೆ ಸಾವರ್ಕರ್ ಪ್ರತಿಪಾದಿಸಿದ್ದ ಹಿಂದುತ್ವವೇ ಸ್ಫೂರ್ತಿ. ‘ಮುಸ್ಲಿಮ್ ಇಲ್ಲವೆ ಕ್ರೈಸ್ತರಿಗೆ ವಂಶಪಾರಂಪರ್ಯವಾಗಿ ಭಾರತ ಪಿತೃಭೂಮಿಯಾಗಿದ್ದರೂ ಅವರನ್ನು ಹಿಂದೂಗಳೆನ್ನಲು ಸಾಧ್ಯ ಇಲ್ಲ. ಅವರ ಪುಣ್ಯಭೂಮಿ ಅರೇಬಿಯಾ ಇಲ್ಲವೇ ಪ್ಯಾಲೆಸ್ಟೀನ್‌ನಲ್ಲಿದೆ. ಅವರು ಹಿಂದೂ ಧರ್ಮವನ್ನು ಒಪ್ಪಿಕೊಂಡರೆ ಮಾತ್ರ ಹಿಂದೂಗಳು’ ಎಂದು ಸಾವರ್ಕರ್ ತಮ್ಮ ‘ಹಿಂದುತ್ವ’ ಪುಸ್ತಕದಲ್ಲಿ ಬರೆದಿದ್ದಾರೆ.
ಈ ವ್ಯಾಖ್ಯಾನವನ್ನು ಒಪ್ಪುವ ಪಕ್ಷ ಮತ್ತು ಸಂಘಟನೆ ಯೋಗಾಭ್ಯಾಸದ ಬಗ್ಗೆ ಪ್ರಚಾರದಲ್ಲಿ ತೊಡಗಿದಾಗ ಬೇರೆ ಧರ್ಮೀಯರಲ್ಲಿ ಆತಂಕ ಸಹಜ. ಸಾವರ್ಕರ್ ಅವರ ಹಿಂದುತ್ವದ ವ್ಯಾಖ್ಯಾನವನ್ನು ಒಪ್ಪುವುದಿಲ್ಲ ಎಂದಾದರೆ  ಮತ್ತು ‘ಭಾರತದ ನೆಲದಲ್ಲಿ ಹುಟ್ಟಿದವರೆಲ್ಲರೂ ಭಾರತೀಯರು’ ಎನ್ನುವ ಮಹಾತ್ಮ ಗಾಂಧೀಜಿ ವ್ಯಾಖ್ಯಾನವನ್ನು ಒಪ್ಪುವುದಾದರೆ, ಬೇರೆ ಧರ್ಮಗಳಲ್ಲಿಲ್ಲದ ಯೋಗವನ್ನು ಭಾರತೀಯ ಸಂಸ್ಕೃತಿ ಎಂದು ಹೇಗೆ ಒಪ್ಪಿಕೊಳ್ಳಲು ಸಾಧ್ಯ?  ಯೋಗಾಭ್ಯಾಸ ಮಾತ್ರವಲ್ಲ, ಆಯುರ್ವೇದ, ಶಾಸ್ತ್ರೀಯ ಸಂಗೀತ ಎಲ್ಲವೂ ಧರ್ಮಾತೀತವಾದವು. ಆದರೆ ಇವುಗಳನ್ನು ರಾಜಕೀಯ ಉದ್ದೇಶಕ್ಕಾಗಿ ಸಾಂಸ್ಕೃತಿಕ ರಾಜಕಾರಣದ ಅಸ್ತ್ರಗಳನ್ನಾಗಿ ಬಳಸಿಕೊಳ್ಳಲು ಹೊರಟಾಗಲೇ ವಿವಾದಗಳು ಹುಟ್ಟಿಕೊಳ್ಳುವುದು.
ಯೋಗವನ್ನು ಭಾರತೀಯ ಸಂಸ್ಕೃತಿ, ಪರಂಪರೆಯ ಭಾಗವಾಗಿ ಬಿಂಬಿಸುವ ಪ್ರಯತ್ನದ ಬಗ್ಗೆ ಹಿಂದೂ ಧರ್ಮದೊಳಗೂ ಭಿನ್ನಾಭಿಪ್ರಾಯಗಳಿವೆ. ಬೇರೆ ಧರ್ಮಗಳನ್ನು ಬಿಟ್ಟುಬಿಡಿ ದೇಶದ ಜನಸಂಖ್ಯೆಯಲ್ಲಿ ಶೇಕಡ 80ರಷ್ಟಿರುವ ಹಿಂದೂಗಳಲ್ಲಿ ಎಷ್ಟು ಮಂದಿ ಯೋಗವನ್ನು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಭಾಗ ಎಂದು ತಿಳಿದುಕೊಂಡಿದ್ದಾರೆ. ತಾತ-ಮುತ್ತಾತರನ್ನು ಬಿಟ್ಟುಬಿಡಿ, ನನ್ನ ತಂದೆ-ತಾಯಿ ಕೂಡಾ ಯೋಗದ ಬಗ್ಗೆ ಮನೆಯಲ್ಲಿ ಮಾತನಾಡಿದ್ದನ್ನು ನಾನು ಕೇಳಿಲ್ಲ. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಮತ್ತು ಟಿ.ವಿ. ಚಾನೆಲ್‌ಗಳ ಮೂಲಕ ಯೋಗ ಜನಪ್ರಿಯವಾಗಿರುವುದು ನಿಜ.
ಇದರಿಂದ ಆರೋಗ್ಯ ಸುಧಾರಣೆಯಾಗುತ್ತಿರುವುದು ಕೂಡಾ ಈ ಜನಪ್ರಿಯತೆಗೆ ಕಾರಣ ಇರಬಹುದು. ಇಷ್ಟು ಮಾತ್ರಕ್ಕೆ ಯೋಗವನ್ನು ನಮ್ಮ ಸಂಸ್ಕೃತಿ-ಪರಂಪರೆ ಭಾಗ ಎನ್ನಲಾದೀತೇ? ಅವೈದಿಕ ಪರಂಪರೆಯಲ್ಲಿ ಮೈಮುರಿದು, ಬೆವರು ಸುರಿಸಿ ದುಡಿಯುವ ಶ್ರಮ ಸಂಸ್ಕೃತಿ ಇದೆಯೇ ಹೊರತು ಏಕಾಂತದಲ್ಲಿ ಕೂತು ಕಣ್ಣುಮುಚ್ಚಿ, ಕಾಲುಮಡಚಿ ನಡೆಸುವ ಯಾವ ಕಸರತ್ತುಗಳೂ ಇಲ್ಲ  ಎನ್ನುವುದೂ ಸತ್ಯ. ಶ್ರಮಜೀವಿಯಾದ ರೈತ-ಕಾರ್ಮಿಕರಿಗೆ ಈಗಲೂ ಯೋಗದ ಅಗತ್ಯ ಇಲ್ಲ. ಯೋಗ ಜನಪ್ರಿಯವಾಗಿರುವುದು ಶ್ರಮ ಸಂಸ್ಕೃತಿಯಿಂದ ದೂರವಾಗುತ್ತಿರುವ ನಗರಗಳಲ್ಲಿ.
ಕೇಂದ್ರ ಸರ್ಕಾರದ ಯೋಗ ದಿನಾಚರಣೆ ಗುರಿ ನಮ್ಮ ಶಾಲೆಗಳು. ಮಕ್ಕಳ ಆರೋಗ್ಯಕ್ಕೆ ಯೋಗ ನೆರವಾಗುತ್ತದೆ ಎಂದು ತಥಾಕಥಿತ ಆರೋಗ್ಯ ತಜ್ಞರು ಹೇಳುತ್ತಿರುವಾಗ ಆ ಮಕ್ಕಳು ಹಿರಿಯರ ಅಜ್ಞಾನಕ್ಕೆ ಮುಸಿಮುಸಿ ನಗುತ್ತಿವೆ. ಯಾವ ಮಕ್ಕಳೂ ಕಣ್ಣುಮುಚ್ಚಿ, ಕಾಲುಮಡಚಿ, ಬಾಯಿಮುಚ್ಚಿ ಬಹಳ ಹೊತ್ತು ಕೂರುವುದನ್ನು ಇಷ್ಟಪಡುವುದಿಲ್ಲ. ಈ ಕಾರಣಕ್ಕಾಗೇ ಮಕ್ಕಳಿಗೆ ಅತಿ ಶಿಸ್ತಿನ ತರಗತಿಗಳು ಜೈಲುಗಳೆಂದು ಅನಿಸುವುದು. ಮಕ್ಕಳಿಗೆ ಕುಣಿಯುತ್ತಾ, ಕುಪ್ಪಳಿಸುತ್ತಾ, ಓಡುತ್ತಾ, ಆಡುತ್ತಾ ಇರುವುದೇ ಖುಷಿ.
ಇದರಿಂದಲೇ ಅವುಗಳಿಗೆ ಆರೋಗ್ಯ. ಮಕ್ಕಳ ದೈಹಿಕ ಆರೋಗ್ಯದ ಬಗ್ಗೆ ಯಾವುದೇ ಸರ್ಕಾರ ಪ್ರಾಮಾಣಿಕ ಕಾಳಜಿ ಹೊಂದಿದ್ದರೆ, ಮೊದಲು ಎಲ್ಲ ಶಾಲೆಗಳಿಗೆ ಸುಸಜ್ಜಿತವಾದ ಆಟದ ಮೈದಾನ ನಿರ್ಮಿಸಬೇಕು, ಆಸಕ್ತಿ ಇರುವ ದೈಹಿಕ ಶಿಕ್ಷಣಾಧಿಕಾರಿಗಳನ್ನು ನೇಮಿಸಬೇಕು, ಕ್ರೀಡಾ ಸಲಕರಣೆ ಒದಗಿಸಬೇಕು. ಹೆಚ್ಚು ದೈಹಿಕ ಕಸರತ್ತಿನ ಅಗತ್ಯ ಇಲ್ಲದ, ಜೂಜು-ಮೋಜುಗಳಿಂದ ಮಕ್ಕಳ ಮನಸ್ಸು ಕೆಡಿಸುವ ಕ್ರಿಕೆಟ್ ಆಟದ ಎದುರು ಕಬಡ್ಡಿ, ಹಾಕಿ  ಸೇರಿದಂತೆ  ಭಾರತೀಯ ಕ್ರೀಡೆಗಳೆಲ್ಲ ಮೂಲೆಗುಂಪಾಗಿವೆ. ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ ಕ್ರೀಡಾಕೂಟಗಳಲ್ಲಿ ಭಾರತದ ಸ್ಥಾನ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಸರ್ಕಾರ ಈ ಬಗ್ಗೆ ಯೋಚನೆ ಮಾಡಬೇಕಾಗಿದೆ.
ಮಕ್ಕಳ ಆರೋಗ್ಯದ ದೃಷ್ಟಿಯಿಂದಲೇ ಯೋಗಾಭ್ಯಾಸ ಅಗತ್ಯ ಎನ್ನುವ ಬಿಜೆಪಿ ಸರ್ಕಾರದ ಸಮರ್ಥನೆ ಆತ್ಮವಂಚನೆಯಿಂದ ಕೂಡಿದೆ ಎನ್ನುವುದಕ್ಕೆ ಇನ್ನೂ ಒಂದು ಉದಾಹರಣೆ ಕೊಡಬಹುದು. ಪೌಷ್ಟಿಕಾಂಶದ ಕೊರತೆಯಿಂದ ನಿಮಿಷಕ್ಕೊಂದು ಮಗು ಸಾಯುತ್ತಿರುವ ಭಾರತದಲ್ಲಿ ಸರ್ಕಾರದ ಆದ್ಯತೆ ಏನಿರಬೇಕು? ಯೋಗಾಭ್ಯಾಸವೇ? ಪೌಷ್ಟಿಕಾಂಶ ಆಹಾರವೇ? ಅನ್ನಭಾಗ್ಯ, ಕ್ಷೀರಭಾಗ್ಯವನ್ನು ಗೇಲಿ ಮಾಡುವ, ಬಹುಸಂಖ್ಯಾತ ಮಕ್ಕಳು ಬಯಸುವ ಪೋಷಕಾಂಶ ಭರಿತ ಮೊಟ್ಟೆಯನ್ನು ಶಾಲೆಗಳಲ್ಲಿ ನೀಡುವುದನ್ನು ಧಾರ್ಮಿಕ ಕಾರಣಕ್ಕಾಗಿ ವಿರೋಧಿಸುವವರು, ಮಕ್ಕಳ ಆರೋಗ್ಯಕ್ಕಾಗಿ ಯೋಗ ಎಂದು ಪ್ರತಿಪಾದಿಸುತ್ತಿರುವುದು ಹಾಸ್ಯ ಪ್ರಸಂಗದಂತೆ ಕಾಣುತ್ತಿಲ್ಲವೇ?

Monday, June 15, 2015

ಸರಳ ವಿವಾಹ

ಪ್ರಜಾವಾಣಿಯ ಹಿರಿಯ ವರದಿಗಾರರಾದ,ನನ್ನ ಕಿರಿಯ ಮಿತ್ರ ವಿ.ಎಸ್.ಸುಬ್ರಹ್ಮಣ್ಯ ಮಂತ್ರಮಾಂಗಲ್ಯ ವಚನ ಸ್ವೀಕಾರದ ಮೂಲಕ ಸರಳವಾಗಿ ಮದುವೆಯಾಗಿದ್ದಾರೆ. ಮದುವೆ ನಡೆದದ್ದು ಕುಪ್ಪಳ್ಳಿಯಿಂದ ಸುಮಾರು ೩೦ ಕಿ.ಮೀ ದೂರದಲ್ಲಿರುವ ಹುಂಚಿಕೊಪ್ಪ ಎನ್ನುವ ಮಲೆನಾಡಿನ ಸೆರಗಿನಲ್ಲಿರುವ ಕುಗ್ರಾಮದಲ್ಲಿ. ಇದು ತನ್ನೂರಿನ ಮಣ್ಣಿನ ಮಗ ಕುವೆಂಪು ಅವರಿಗೆ ಹೊಸತಲೆಮಾರು ಸಲ್ಲಿಸಿದ ಗೌರವವೂ ಹೌದು. ಬೋದಿಸುವುದಷ್ಟೇ ತಮ್ಮ ಕೆಲಸ ಬೋದಿಸಿದ್ದನ್ನು ಪಾಲಿಸುವುದಲ್ಲ ಎಂದು ಎಲ್ಲರಂತೆ ಪತ್ರಕರ್ತರೂ ತಿಳಿದುಕೊಂಡಿರುವ ಕಾಲದಲ್ಲಿ ಸುಬ್ರಹ್ಮಣ್ಯ ಮತ್ತು ನಂದಿನಿ ನಿರ್ಧಾರ ಮಾದರಿಯಾಗಿದೆ. ಈ ಸಮಾರಂಭದಲ್ಲಿ ಮಂತ್ರಮಾಂಗಲ್ಯದ ವಚನ ಬೋಧನೆಯನ್ನು ನನ್ನಿಂದ ಮಾಡಿಸಿದ ಕುಟುಂಬದ ಹಿರಿಯರಿಗೆ ನಾನು ಕೃತಜ್ಞನಾಗಿದ್ದೇನೆ

Monday, June 8, 2015

Lecture on contemporary cultural shuffles in Karnataka Sangha


News and pics: Rons Bantwal
Daijiworld Media Network – Mumbai (EP)
Mumbai, June 8: “Cultural shuffles always occur in development oriented society. The undivided Dakshina Kannada district is the cradle of several cultures. However there is cultural domination these days which is dangerous” lamented Chief media advisor to the Chief Minister of Karnataka and senior journalist Dinesh Amin Mattu.





He was addressing 'Sahitya Chintana 20', programme recently held by Karnataka Sangha, Mumbai at their Samarasa Bhavana in Mahim west.
Amin who gave a lecture on Contemporary cultural shuffles said that there are several definitions for culture. “It is a subject for debate. It is not easy to reflect culture. Culture is a definition of love of language and life of values. Conflict is not a part of our culture. So may the Indian culture be free from friction”, he suggested.
Dr Vyasaraya Ninjuru, advocate Vasanth Kalakoti, Mamatha Rao, Dr S K Bhavani, Dr Sunitha M Shetty, Mohan Marnad, Sushila Devadiga, Harish K Hejmadi, S T Vijayakumar Thingalaya, Surekha Devadiga, Sadaya, Gopala Trasi and others participated in the discussion programme held later.
Former president of the Sangha, Manohar M Kori presented a shawl and memento to Mattu and honored him. Honorary secretary of the Sangha, Omdas Kannangar welcomed, gave a key note address and compered the programme. Dr Bharathkumar Polipu proposed Vote of thanks.
                                                                                                               (Source: Daijiworld webiste)

Wednesday, May 13, 2015

ಹಳ್ಳೀಗಾಡಿನ ಪ್ರತಿಭೆ ಕೇಶವ ವಿಟ್ಲ

ನಮ್ಮಂತಹ ಅಬ್ಬೆಪಾರಿಗಳನ್ನೆಲ್ಲ ಗುರುವಾಗಿ ಸಲುಹಿದ ವಡ್ಡರ್ಸೆ ರಘುರಾಮ ಶೆಟ್ಟಿಯವರ 'ಕ್ಯಾಮೆರಾ' ಕಣ್ಣಿಗೆ ಬಿದ್ದ ಹಳ್ಳಿಗಾಡಿನ ಪ್ರತಿಭೆ ಕೇಶವ ವಿಟ್ಲ. ಆ ಕಾಲದ ಬಾಲಪ್ರತಿಭೆ ಇಂದು ಅಂತರರಾಷ್ಟ್ರೀಯ ಪೋಟೋಗ್ರಾಪರ್ ಗಳ ಹೆಗಲಿಗೆ ಸಮನಾಗಿ ನಿಲ್ಲುವಂತಹ ದೈತ್ಯ ಪ್ರತಿಭೆಯಾಗಿ ಬೆಳೆದಿದ್ದಾನೆ.
ವಡ್ಡರ್ಸೆಯವರು ಯಾರ ತಲೆಗೆ ಕೈ ಇಟ್ಟಿದ್ದರೋ ಅವರ್ಯಾರೂ ಕಳೆದು ಹೋಗಿಲ್ಲ. ವೃತ್ತಿಯಲ್ಲಿ ಕಸುಬುಗಾರಿಕೆ, ಹೊಸ ಸವಾಲುಗಳನ್ನು ಹುಡುಕಿಕೊಂಡು ಹೋಗುವ ಸಾಹಸ ಮತ್ತು ಜನಪರವಾದ ಕಾಳಜಿ ವಡ್ಡರ್ಸೆಯವರ ಶಿಷ್ಯಕೋಟಿಯಲ್ಲಿ ಕಾಣಬಹುದಾದ ಸಾಮಾನ್ಯ ಗುಣಗಳು. ಇವೆಲ್ಲ ಗುಣಲಕ್ಷಣಗಳು ಈ ವಿಟ್ಲ ನೆಂಬ 'ಬಾಲಕ'ನಲ್ಲಿದೆ.
ಇಂದು ಈತನ ಮಹತ್ವಾಕಾಂಕ್ಷೆಯ ಚಿತ್ರಪುಸ್ತಕ ಬಿಡುಗಡೆ. ಈ ಪುಸ್ತಕ ನಮ್ಮನ್ನು ಬೆರಗಿನ ಮತ್ತೊಂದು ಲೋಕಕ್ಕೆ ಕೊಂಡೊಯ್ಯುತ್ತದೆ. ತನ್ನ ಬಾಲಚೇಷ್ಠೆಯ ನಡುವೆಯೂ ಹತ್ತು ವರ್ಷಗಳ ಕಾಲ ನಡೆಸಿದ ತಪಸ್ಸಿನ ಫಲ ಈ ಪುಸ್ತಕ. ಇಂದು ಸಂಜೆ ನಾಲ್ಕು ಗಂಟೆಗೆ ಚಿತ್ರಕಲಾ ಪರಿಷತ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದನ್ನು ಬಿಡುಗಡೆಗೊಳಿಸಲಿದ್ದಾರೆ. ಬನ್ನಿ, ಈ ಸಾಹಸಿಯನ್ನು ಹರಸಿ ಬೆಂಬಲಿಸಿ.

Sunday, May 10, 2015

ಅಮ್ಮನ ದಿನ

   ಒಂದಿಷ್ಟು ತ್ಯಾಗದ ಗುಣ ಇಲ್ಲದ ಯಾವ ಪ್ರೀತಿಯೂ ಪರಿಪೂರ್ಣವಾದುದಲ್ಲ. ತಮ್ಮ ಅಮ್ಮ-ಅಪ್ಪನಿಗೆ ಇಂತಹ ಪ್ರೀತಿ ನೀಡಿದವರು/ನೀಡುತ್ತಿರುವವರು ಕೆಟ್ಟವರಾಗಿರಲು ಸಾಧ್ಯ ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಮನುಷ್ಯನನ್ನು ಅರ್ಥಮಾಡಿಕೊಳ್ಳಲು ನಾನೇ ರೂಪಿಸಿಕೊಂಡ ಈ ಸರಳ ಸೂತ್ರ ನನ್ನ ಸಂಪರ್ಕಕ್ಕೆ ಬಂದ ಬಹುಪಾಲು ವ್ಯಕ್ತಿಗಳನ್ನು ಅರ್ಥಮಾಡಿಕೊಳ್ಳಲು ನನಗೆ ನೆರವಾಗಿದೆ.
   ಪ್ರೀತಿ ಎಂದರೆ ನಮ್ಮಲ್ಲಿದ್ದುದನ್ನು ಕೊಡುವುದಲ್ಲ,ನಾವು ಪ್ರೀತಿಸುವವರ ಅವಶ್ಯಕತೆ ಏನಿದೆ ಎನ್ನುವುದನ್ನು ಅರ್ಥಮಾಡಿಕೊಂಡು ಅದನ್ನು ಕೊಡುವುದು. ಈಗ ನನ್ನೂರಿಗೆ ಹೋದರೆ ಬಹಳ ಬದಲಾವಣೆಯಾಗಿದೆ. ಬಾಲ್ಯದಲ್ಲಿ ನಾನು ಕಂಡಿದ್ದ ಬಡತನದ ಬೇಗೆ ಕಾಣುವುದಿಲ್ಲ. ಆದರೆ ಇಡೀ ಊರು ವೃದ್ಧಾಶ್ರಮದಂತೆ ಕಾಣುತ್ತಿದೆ.
   ಊರಿನಲ್ಲಿ ನನ್ನ ಪರಿಚಯದ ನಿವೃತ್ತ ಶಿಕ್ಷಕರ ಕುಟುಂಬವೊಂದಿದೆ. ಅವರ ಮಗಳು-ಅಳಿಯ ಅಮೆರಿಕಾದಲ್ಲಿದ್ದಾರೆ.ಮಗ-ಸೊಸೆ ಇಂಗ್ಲಂಡ್ ನಲ್ಲಿದ್ದಾರೆ. ಇಬ್ಬರು ಮಕ್ಕಳನ್ನು ಎಂಜಿನಿಯರ್ ಮಾಡಲು ಈ ಶಿಕ್ಷಕ ದಂಪತಿಗಳು ಬಹಳ ಕಷ್ಟಪಟ್ಟಿದ್ದಾರೆ. ಮಕ್ಕಳು ಕೆಟ್ಟವರೇನಲ್ಲ. ತಿಂಗಳುತಿಂಗಳು ದುಡ್ಡು ಕಳುಹಿಸುತ್ತಾರೆ. ಆಗಾಗ ಸ್ಕೈಪ್ ನಲ್ಲಿಮಾತನಾಡುತ್ತಾರೆ. ಮೊಮ್ಮಕ್ಕಳನ್ನು ಟಿವಿ ಪರದೆಯಲ್ಲಿ ತೋರಿಸುತ್ತಾರೆ. 2-3 ವರ್ಷಕ್ಕೊಮ್ಮೆ ಊರಿಗೂ ಬರುತ್ತಾರೆ. ಇದನ್ನೇ ಹೆತ್ತವರನ್ನು ಪ್ರೀತಿಸುವುದು ಎಂದು ಅವರು ತಿಳಿದುಕೊಂಡಿದ್ದಾರೆ. ಆದರೆ ತಂದೆ-ತಾಯಿ ಬಯಸುವ ಪ್ರೀತಿ ಇದೇನಾ?
ಇಳಿವಯಸ್ಸಿಗೆ ಸಹಜವಾದ ಕಾಯಿಲೆಗಳಿಂದ ಬಳಲುತ್ತಿರುವ ಆ ತಂದೆ-ತಾಯಿಯನ್ನು ಇತ್ತೀಚೆಗೆ ನಾನು ಊರಿಗೆ ಹೋಗಿದ್ದಾಗ ಭೇಟಿ ಮಾಡಿದ್ದೆ. ನಡುಗುವಕೈಗಳಿಂದ ಅವರು ನನ್ನನ್ನು ಹಿಡಿದುಕೊಂಡು ‘ನಮ್ಮ ಮಗನನ್ನು ಎಂಜಿನಿಯರಿಂಗ್ ಮಾಡದೆ ಬಿಇಡ್ ಓದಿಸಿ ಶಿಕ್ಷಕನನ್ನಾಗಿ ಮಾಡಬೇಕಾಗಿತ್ತು. ಇಲ್ಲಿಯೇ ಎಲ್ಲೋ ಹತ್ತಿರದಲ್ಲಿರುತ್ತಿದ್ದ, ನಮ್ಮಕಷ್ಟಕ್ಕೆ ಆಗುತ್ತಿದ್ದ’ ಎಂದು ನಿಟ್ಟುಸಿರು ಬಿಟ್ಟಿದ್ದರು.
   ವೃದ್ಧಾಪ್ಯ, ಅನಾರೋಗ್ಯ,ಒಂಟಿತನ, ಅಸಹಾಯಕತೆಯಿಂದ ನಡುಗುತ್ತಿರುವ ಕೈಗಳಿಗೆ ಬೇಕಾಗಿರುವುದು ದುಡ್ಡಲ್ಲ ಆಸರೆಗಾಗಿಹಿಡಿದುಕೊಳ್ಳಲು ಒಂದು ದೃಡವಾದ ಹೆಗಲು.
   ಸಜ್ಜನರೆನಿಸಿಕೊಂಡವರೂ ಸೇರಿದಂತೆ ನಮ್ಮ ಬಹುಪಾಲು ಯುವಕ-ಯುವತಿಯರು ನಗರದಲ್ಲಿರುವ ತಮ್ಮ ಮನೆಯಲ್ಲಿ ತಂದೆತಾಯಿಗಳನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಅವರ ಖಾಸಗಿತನಕ್ಕೆ ಭಂಗ ಉಂಟಾಗುತ್ತದೆ ಎನ್ನುವ ಭಯ ಅವರಿಗೆ. ಅಮ್ಮನಿಗೆ ಡಿಮಾಂಡ್ ಇದೆ, ಅಪ್ಪನಿಗೆ ಇಲ್ಲ. ಇದಕ್ಕೆ ಕಾರಣ ಅಮ್ಮನ ಮೇಲಿನ ವಿಶೇಷ ಪ್ರೀತಿ ಅಲ್ಲ. ಅಮ್ಮನಾದರೆ ಅಡುಗೆ ಮಾಡಿ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾಳೆ. ಈಕಾಲದಲ್ಲಿ ನಂಬಿಕಸ್ತ ಮನೆಯಾಳು ಹುಡುಕುವ ಕಷ್ಟ ತಪ್ಪಿತ್ತಲ್ಲಾ ಎನ್ನುವ ಸಮಾಧಾನ ಅವರಿಗೆ. ಆದರೆ ಅಪ್ಪನಿಗೆ ಡಿಮಾಂಡ್ ಇಲ್ಲ. ಸುಮ್ಮನೆ ಮನೆಯಲ್ಲಿ ಪಿರಿಪಿರಿ-ಕಿರಿಕಿರಿ ಎನ್ನುವ ತಾತ್ಸಾರ.
  ‘ಅಮ್ಮನ ದಿನ’ದಂದು ಇದೆಲ್ಲ ನೆನಪಾಯಿತು. ಇದೇ ನೆನಪಲ್ಲಿ ನಾನು ‘ಪೀಕೂ’ ಫಿಲ್ಮ್ ನೋಡಿದೆ. ಎಲ್ಲರೂ ನೋಡಲೇಬೇಕಾದ ಚಿತ್ರ.