Wednesday, April 24, 2013

ಎಸ್‌ಡಿಪಿಐ ಎಂದರೆ ಬಿಜೆಪಿಗೆ ಪ್ರೀತಿ, ಕಾಂಗ್ರೆಸ್‌ಗೆ ಭಯ.

ಮಂಗಳೂರು: `ಹಿಂದೂ ಕೋಮುವಾದದ ಬಗ್ಗೆ ಇಷ್ಟೆಲ್ಲ ಕೂಗಾಡುವ ನಿಮ್ಮ ಕಣ್ಣಿಗೆ ಮುಸ್ಲಿಂ ಕೋಮುವಾದ ಕಾಣುವುದೇ ಇಲ್ವಾ' ಎಂದು ಹಿಂದೂ ಸಂಘಟನೆಯ ನಾಯಕರು ಜಾತ್ಯತೀತರೆಂದು ಹೇಳಿಕೊಳ್ಳುವವರ
ನ್ನು ಆಗಾಗ ಕೆಣಕುವುದುಂಟು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈ ಪ್ರಶ್ನೆ ಉಳಿದೆಲ್ಲ ಕಡೆಗಿಂತಲೂ ಹೆಚ್ಚು ಕೇಳಿಸುತ್ತದೆ. ಇದು ತಳ್ಳಿಹಾಕುವಂತಹ ಪ್ರಶ್ನೆಯೂ ಅಲ್ಲ.
ಹಿಂದೂಗಳಂತೆ ಮುಸ್ಲಿಮರಲ್ಲಿ ಕೋಮುವಾದಿಗಳಿದ್ದರೂ ಇತ್ತೀಚಿನವರೆಗೆ ಅವರಿಗೆ ಸಂಘಟನೆಯ ಬೆಂಬಲ ಇರಲಿಲ್ಲ. ಬದಲಾಗಿರುವ ಪರಿಸ್ಥಿತಿಯಲ್ಲಿ `ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ' ಎಂಬ ಸಂಘಟನೆ ಆ ಕೊರತೆಯನ್ನು ತುಂಬುವಂತೆ ಬೆಳೆಯುತ್ತಿದೆ. ಸಂಘ ಪರಿವಾರದ ನಾಯಕರು `ಮುಸ್ಲಿಂ ಗುಮ್ಮ'ನನ್ನು ತೋರಿಸಿ ಸಂಘಟನೆಯನ್ನು ಬೆಳೆಸುತ್ತಿದ್ದರೆ, ಪಾಪ್ಯುಲರ್ ಫ್ರಂಟ್ `ಹಿಂದೂ ಗುಮ್ಮ'ನನ್ನು ತಮ್ಮ ಸಂಘಟನೆ ಬಲಪಡಿಸಿಕೊಳ್ಳಲು ಬಳಸಿಕೊಳ್ಳುತ್ತಿದೆ.
ಇದರಿಂದಾಗಿ ಹಿಂದೂ ಕೋಮುವಾದ ಬೆಳೆಯುತ್ತಾ ಹೋದಂತೆ ಸಮಾನಾಂತರವಾಗಿ ಮುಸ್ಲಿಂ ಕೋಮುವಾದವೂ ಜಿಲ್ಲೆಯಲ್ಲಿ ಬೆಳೆಯುತ್ತಿದೆ. ವಿಚಿತ್ರವೆಂದರೆ ಈ ಬೆಳವಣಿಗೆಯಿಂದ ಮುಸ್ಲಿಂ ವಿರೋಧಿ ಎಂಬ ಆರೋಪಕ್ಕೊಳಗಾಗಿರುವ ಬಿಜೆಪಿ ನಿಶ್ಚಿಂತೆಯಿಂದಿದ್ದರೆ, ಮುಸ್ಲಿಂ ಪರ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ತಳಮಳಕ್ಕೀಡಾಗಿದೆ. ಈ ವಿಲಕ್ಷಣ ವಿದ್ಯಮಾನವೇ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣೆಯನ್ನು ಕುತೂಹಲಕಾರಿಯಾಗಿ ಮಾಡಿದೆ.
`ಪಾಪ್ಯುಲರ್ ಫ್ರಂಟ್'ನ ಸಂಘಟನೆಯ ರೂಪ, ಉದ್ದೇಶ ಮತ್ತು ಚಟುವಟಿಕೆಗಳನ್ನು ಗಮನಿಸಿದವರು ಇದು `ಮುಸ್ಲಿಮರ ಆರ್‌ಎಸ್‌ಎಸ್' ಎಂದು ಆರೋಪಿಸುವುದುಂಟು. ಆರ್‌ಎಸ್‌ಎಸ್ ರೀತಿಯಲ್ಲಿಯೇ ಇದಕ್ಕೆ ಹಲವಾರು ಅಂಗ ಸಂಸ್ಥೆಗಳಿವೆ.
ವಿಶ್ವಹಿಂದೂ ಪರಿಷತ್ ಮಾದರಿಯಲ್ಲಿ ಧಾರ್ಮಿಕ ಗುರುಗಳಿಗಾಗಿ `ಆಲ್ ಇಂಡಿಯಾ ಇಮಾಮಿ ಕೌನ್ಸಿಲ್', ಎಬಿವಿಪಿ ಮಾದರಿಯಲ್ಲಿ ವಿದ್ಯಾರ್ಥಿಗಳಿಗಾಗಿ `ಸ್ಟೂಡೆಂಟ್ ಕ್ಯಾಂಪಸ್ ಫ್ರಂಟ್', ದುರ್ಗಾವಾಹಿನಿಯನ್ನು ಹೋಲುವಂತೆ ಮಹಿಳೆಯರಿಗಾಗಿ `ನ್ಯಾಷನಲ್ ವುಮೆನ್ ಫ್ರಂಟ್' ಮತ್ತು ಬಿಜೆಪಿ ಮಾದರಿಯಲ್ಲಿ ರಾಜಕೀಯ ಮುಖವಾಗಿ `ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ' (ಎಸ್‌ಡಿಪಿಐ) ಇವೆ. ಆರ್‌ಎಸ್‌ಎಸ್ ಖಾಕಿ ಚಡ್ಡಿ ಧರಿಸಿದರೆ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಸೈನಿಕರ ಸಮವಸ್ತ್ರ ಧರಿಸಿ ಸಮಾವೇಶಗಳಲ್ಲಿ ಪಾಲ್ಗೊಳ್ಳುತ್ತಾರೆ.
ಸಂಘ ಪರಿವಾರದ ನಾಯಕರಂತೆ ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಈ ಸಂಘಟನೆಯ ನಾಯಕರ ಮಾತು-ಕೃತಿಗಳಲ್ಲಿ ಧಾರ್ಮಿಕ ಮೂಲಭೂತವಾದದ ವಾಸನೆ ಬಡಿಯುತ್ತಿದೆ. ಮುಸ್ಲಿಂ ಹುಡುಗನ ಜತೆ ಹಿಂದೂ ಹುಡುಗಿ ಕಾಣಿಸಿಕೊಂಡರೆ ಸಂಘ ಪರಿವಾರದ ಸದಸ್ಯರು ದಾಳಿ ಮಾಡಿದರೆ, ಹಿಂದೂ ಹುಡುಗನ ಜತೆ ಮುಸ್ಲಿಂ ಹುಡುಗಿ ಕಾಣಿಸಿಕೊಂಡರೆ ಪಾಪ್ಯುಲರ್ ಫ್ರಂಟ್‌ನ ಕಾರ್ಯಕರ್ತರು ಅದನ್ನೇ ಮಾಡುತ್ತಾರೆ. ಇವರ ದಾಳಿಗಳ ಸಂಖ್ಯೆ ಕಡಿಮೆ ಇರಬಹುದು, ಉದ್ದೇಶದಲ್ಲಿ ವ್ಯತ್ಯಾಸ ಇಲ್ಲ. ಇತ್ತೀಚೆಗೆ ಜಿಲ್ಲೆಯ ಬಜಪೆಯಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.
ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಮುಸ್ಲಿಮರನ್ನು ವಿರೋಧಿಸುವ ಯಾವ ಅವಕಾಶವನ್ನೂ ಬಿಟ್ಟುಕೊಡದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಮೂಲಭೂತವಾದಿ ಮುಸ್ಲಿಮರ ಸಂಘಟನೆ ಎಂಬ ಆರೋಪಕ್ಕೊಳಗಾಗಿರುವ `ಪಾಪ್ಯುಲರ್ ಫ್ರಂಟ್' ವಿರುದ್ಧ ಗಟ್ಟಿದನಿಯಲ್ಲಿ ಮಾತನಾಡಿದ್ದು ಕಡಿಮೆ. `ಪಾಪ್ಯುಲರ್ ಫ್ರಂಟ್' ಇಷ್ಟೊಂದು ಪ್ರಮಾಣದಲ್ಲಿ ಬೆಳೆದಿರುವುದೇ ಕಳೆದ ಐದು ವರ್ಷಗಳ ಬಿಜೆಪಿ ಆಡಳಿತ ಕಾಲದಲ್ಲಿ ಎನ್ನುವುದು ಗಮನಾರ್ಹ. ಪೊಲೀಸ್ ಇಲಾಖೆಯನ್ನು ಅಂಗೈಯಲ್ಲಿಟ್ಟುಕೊಂಡಿರುವ ಸಂಘ ಪರಿವಾರದ ನಾಯಕರು ಪಾಪ್ಯುಲರ್ ಫ್ರಂಟ್‌ನ ಬೆಳವಣಿಗೆಯನ್ನು ತಡೆಯುವ ಪ್ರಯತ್ನವನ್ನೇ ಮಾಡಿಲ್ಲ.
ಸರ್ಕಾರದಿಂದ ಯಾವುದೇ ಬಗೆಯ ಕಿರುಕುಳ ಅನುಭವಿಸಿದ ಬಗ್ಗೆ ಪಾಪ್ಯುಲರ್ ಫ್ರಂಟ್ ನಾಯಕರೂ ದೂರಿಲ್ಲ. ಇವರು ಬಿಜೆಪಿಗಿಂತಲೂ ಹೆಚ್ಚಾಗಿ ಕಾಂಗ್ರೆಸ್ ಪಕ್ಷವನ್ನೇ ದಾಳಿಗೆ ಗುರಿ ಮಾಡುತ್ತಿರುವುದು ಕೂಡಾ ನಿಜ. ಇವೆಲ್ಲವನ್ನೂ ನೋಡಿದವರು ಎಲ್ಲೋ ಒಂದು ಕಡೆ ಎರಡೂ ಸಂಘಟನೆಗಳ ನಡುವೆ ಹೊಂದಾಣಿಕೆ ಇದೆಯೇನೋ ಎಂಬ ಸಂಶಯ ವ್ಯಕ್ತ ಪಡಿಸುತ್ತಿರುವುದು ಸಹಜವೇ ಆಗಿದೆ.
ಆರ್‌ಎಸ್‌ಎಸ್ ಮಾಜಿ ನಾಯಕರೊಬ್ಬರ ಜತೆ ಮಾತನಾಡುತ್ತಿದ್ದಾಗ ಅವರೊಂದು ಘಟನೆಯನ್ನು ಹೇಳಿದರು. ನಾಲ್ಕೈದು ತಿಂಗಳ ಹಿಂದೆ ಪಾಪ್ಯುಲರ್ ಫ್ರಂಟ್ ಇಲ್ಲಿನ ನೆಹರೂ ಮೈದಾನದಲ್ಲಿ ಮುಸ್ಲಿಮರ ಬೃಹತ್ ಸಮಾವೇಶವೊಂದನ್ನು ಏರ್ಪಡಿಸಿತ್ತು. ಇದನ್ನು ನೋಡಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಜಿಲ್ಲೆಯ ಸಂಘ ಪರಿವಾರದ ಪ್ರಮುಖ ನಾಯಕರೊಬ್ಬರ ಬಳಿ ಹೋಗಿ ಮುಸ್ಲಿಮರಿಗಿಂತ ದೊಡ್ಡದಾದ ಹಿಂದೂ ಸಮಾಜೋತ್ಸವ ಮಾಡಬೇಕೆಂದು ಒತ್ತಾಯಿಸಿದರಂತೆ.
ಅವರ ಮಾತು ಕೇಳಿ ನಕ್ಕ ಆ ನಾಯಕರು `ಮೂರ್ಖ ನಿನಗೆ ಬುದ್ಧಿ ಇಲ್ಲ, ನಾವೇನೂ ಮಾಡುವುದು ಬೇಡ, ಅವರಿಗೆ ಇನ್ನಷ್ಟು ಸಮ್ಮೇಳನಗಳನ್ನು ಮಾಡಲು ದುಡ್ಡು ಕೊಟ್ಟು ಬಿಡುವ' ಎಂದರಂತೆ. ಮುಸ್ಲಿಮರು ಬಹಿರಂಗವಾಗಿ ಸೇರಿ ಶಕ್ತಿ ಪ್ರದರ್ಶನ ಮಾಡಿದರೆ ಅದರಿಂದ ಅಸುರಕ್ಷತೆಗೀಡಾಗುವ ಹಿಂದೂಗಳು ಇನ್ನಷ್ಟು ಸಂಖ್ಯೆಯಲ್ಲಿ ತಮ್ಮ ಕಡೆ ಬರುತ್ತಾರೆ ಎನ್ನುವುದು ಆ ನಾಯಕರ ತಂತ್ರ. ಪಾಪ್ಯುಲರ್ ಫ್ರಂಟ್‌ನ ನಾಯಕರಲ್ಲಿಯೂ ಈ ಉದ್ದೇಶ ಇದ್ದ ಹಾಗಿದೆ.
ಇದೇ ಪಾಪ್ಯುಲರ್ ಫ್ರಂಟ್‌ನ ರಾಜಕೀಯ ಮುಖ ಎಸ್‌ಡಿಪಿಐ. 2009ರಲ್ಲಿ ಎಸ್‌ಡಿಪಿಐ ಸ್ಥಾಪಿಸಿದಾಗ ಬಹಳ ಮಂದಿ ಇದನ್ನು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಅಲ್ಲಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಭಾಗವಹಿಸಿದ್ದ ಎಸ್‌ಡಿಪಿಐ ಇತ್ತೀಚೆಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 206 ಕಡೆ ಸ್ಪರ್ಧಿಸಿ ಹದಿನೇಳು ಸ್ಥಾನಗಳನ್ನು ಗೆದ್ದಿರುವುದು ಮಾತ್ರವಲ್ಲ, ಹದಿನೆಂಟು ಕಡೆ ಎರಡನೆ ಸ್ಥಾನ ಪಡೆದ ನಂತರ ರಾಜಕೀಯ ಪಕ್ಷಗಳು ಜಾಗೃತವಾಗಿವೆ.
ಈಗ ರಾಜ್ಯದ 25 ಕ್ಷೇತ್ರಗಳಲ್ಲಿ ಎಸ್‌ಡಿಪಿಐ ಸ್ಪರ್ಧೆಗಿಳಿದಿದ್ದರೂ ಅದು ಗಮನ ಕೇಂದ್ರೀಕರಿಸಿರುವುದು ದಕ್ಷಿಣ ಕನ್ನಡದ ಮೇಲೆ. ಇಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಎಸ್‌ಡಿಪಿಐ, ಬೆಳ್ತಂಗಡಿ ಕ್ಷೇತ್ರದಲ್ಲಿ ಬಿಎಸ್‌ಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತಿದೆ.
ಬಹಿರಂಗವಾಗಿ `ಬಿಜೆಪಿ ಮತ್ತು ಕಾಂಗ್ರೆಸ್ ನಮಗೆ ಸಮಾನ ಶತ್ರುಗಳು' ಎಂದು ಹೇಳುವ ಎಸ್‌ಡಿಪಿಐ ನಾಯಕರು ಖಾಸಗಿಯಾಗಿ `ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸುತ್ತೇವೆ' ಎನ್ನುತ್ತಾರೆ. ಇದು ಎಷ್ಟು ಸಾಧ್ಯವಾಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಕಾರ್ಯತಂತ್ರ ಸ್ಪಷ್ಟ. ಮುಸ್ಲಿಮರ ಮತಗಳನ್ನು ನೆಚ್ಚಿಕೊಳ್ಳದೆ ಇರುವ ಬಿಜೆಪಿಗೆ ಆ ಮತಗಳು ಬರದೆಹೋದರೂ ನಷ್ಟ ಇಲ್ಲ. ಇದೇ ಮಾತನ್ನು ಕಾಂಗ್ರೆಸ್ ಪಕ್ಷದ ಬಗ್ಗೆ ಹೇಳಲಾಗದು. ಕೆಲವು ಸಾವಿರದಷ್ಟು ಮುಸ್ಲಿಂ ಮತಗಳನ್ನು ಎಸ್‌ಡಿಪಿಐ ಕಿತ್ತುಕೊಂಡರೂ ಒಂದೆರಡು ಕ್ಷೇತ್ರಗಳಲ್ಲಿ ಗೆಲುವಿನ ಸಾಧ್ಯತೆ ಬುಡಮೇಲಾಗಬಹುದು.
ಉದಾಹರಣೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಎಂಟು ಕ್ಷೇತ್ರಗಳಲ್ಲಿ ನಾಲ್ಕರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಮುಸ್ಲಿಂ ಮತಗಳು ಗಣನೀಯ ಸಂಖ್ಯೆಯಲ್ಲಿರುವ ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷದ ರಮಾನಾಥ ರೈ ಗೆದ್ದಿರುವುದು ಕೇವಲ 1251 ಮತಗಳಿಂದ. ಈ ಬಾರಿಯೂ ಅಲ್ಲಿ ತುರುಸಿನ ಸ್ಪರ್ಧೆ ಇದೆ. ಈ ಸ್ಥಿತಿಯಲ್ಲಿ ಅಲ್ಲಿ ಕಣದಲ್ಲಿರುವ ಎಸ್‌ಡಿಪಿಐ ಅಭ್ಯರ್ಥಿ ಪಡೆಯುವ ಒಂದೆರಡು ಸಾವಿರ ಮತಗಳು ಕೂಡಾ ಕಾಂಗ್ರೆಸ್ ಪಾಲಿಗೆ ದುಬಾರಿಯಾಗಬಹುದು. ಇದೇ ರೀತಿ ಮುಸ್ಲಿಂ ಮತದಾರರು ನಿರ್ಣಾಯಕ ಸಂಖ್ಯೆಯಲ್ಲಿರುವ ಮಂಗಳೂರು ಕ್ಷೇತ್ರದಲ್ಲಿ ಯು.ಟಿ.ಖಾದರ್ ಗೆದ್ದಿರುವುದು 7149 ಮತಗಳಿಂದ. ಅಲ್ಲಿನ ಎಸ್‌ಡಿಪಿಐ ಅಭ್ಯರ್ಥಿ ಏಳೆಂಟು ಸಾವಿರ ಮತಗಳನ್ನು ಪಡೆದರೆ ಕಾಂಗ್ರೆಸ್ ದೋಣಿ ಮುಳುಗಬಹುದು.
`ತಾತ್ವಿಕವಾಗಿ ನೀವೇ ವಿರೋಧಿಸುತ್ತಿರುವ ಬಿಜೆಪಿಯನ್ನು ನಿಮ್ಮ ಸ್ಪರ್ಧೆಯಿಂದಾಗಿ ಗೆಲ್ಲಿಸಿದ ಹಾಗಾಗುವುದಿಲ್ಲವೇ? ಬಿಜೆಪಿ ಜತೆ ಇಂತಹದ್ದೊಂದು ಗುಪ್ತ ಹೊಂದಾಣಿಕೆಯನ್ನೂ ನೀವು ಮಾಡಿಕೊಂಡಿದ್ದೀರಿ ಎಂಬ ಆರೋಪವೂ ಇದೆ ಅಲ್ಲವೇ?' ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕರ್ ಕುಳಾಯಿ ಅವರನ್ನು ಕೇಳಿದರೆ `ಅಂತಹ ಆರೋಪಗಳಿಗೆ ಯಾವ ಆಧಾರವೂ ಇಲ್ಲ. ಈ ಚುನಾವಣೆಯಲ್ಲಿ ಹಾಗೆ ಅನಿಸಲೂಬಹುದು. ಆದರೆ ಇದರಿಂದಾಗಿ ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳಿಗೆ ಪರ್ಯಾಯವಾಗಿ ನಾವು ಬೆಳೆಯಲು ಸಾಧ್ಯವಾಗುತ್ತದೆ' ಎಂದರು.
`ಅವರ ಉದ್ದೇಶ ಸ್ಪಷ್ಟ. ಅದು ಮೂಲಭೂತವಾದಿಗಳ ಜತೆಯಲ್ಲಿ ಕೈಜೋಡಿಸಿ ಜಾತ್ಯತೀತ ಶಕ್ತಿಗಳನ್ನು ಸೋಲಿಸುವುದು. ಇಂತಹ ಕುತಂತ್ರಗಳಿಗೆ ಮುಸ್ಲಿಮರು ಬಲಿಯಾಗಲಾರರು' ಎಂಬ ವಿಶ್ವಾಸ ವ್ಯಕ್ತಪಡಿಸಿದವರು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶದ ನಂತರ ಗೆಲುವಿನ ಸಂಭ್ರಮದಲ್ಲಿದ್ದ ಕಾಂಗ್ರೆಸ್ ಪಕ್ಷವನ್ನು ಒಂದೆಡೆ ಟಿಕೆಟ್ ವಂಚಿತರ ಬಂಡಾಯ ಬೆದರಿಸುತ್ತಿದ್ದರೆ ಇನ್ನೊಂದೆಡೆ ಎಸ್‌ಡಿಪಿಐ ಭೂತ ಕಾಡುತ್ತಿದೆ.

Tuesday, April 23, 2013

ಬಿಜೆಪಿ ವಿರುದ್ಧ ಸಿಡಿದೆದ್ದಿರುವ ಕರಾವಳಿ ಮಹಿಳೆಯರು

ಮಂಗಳೂರು: `ಯಾನ್ ಕಾಲೇಜ್‌ಗ್ ಪೋನಗನೆ ಮಿಡಿ-ಮಿನಿ ಪಾಡೊಂದಿತ್ತೆ. ವುಂದು ದಾನೆ ಪೊಸತ್ತಾ ಎಂಕಲೆಗ್? ಇತ್ತೆ ಎನ್ನ ಮಗಲ್ ಆ ಡ್ರೆಸ್ ಪಾಡುನಿ ಬೊಡ್ಚಿಂದ್ ಎಂಚ ಪನ್ಪಿನಿ?' (
ನಾನು ಕಾಲೇಜಿಗೆ ಹೋಗುವಾಗಲೇ ಮಿನಿ-ಮಿಡಿ ಧರಿಸುತ್ತಿದ್ದೆ. ಇದೇನು ನಮಗೆ ಹೊಸದಾ? ಈಗ ನನ್ನ ಮಗಳು ಧರಿಸುವಾಗ ಬೇಡ ಎಂದು ಹೇಗೆ ಹೇಳಲಿ) ಎಂದು ಕೇಳುತ್ತಾರೆ ಸುಮಾರು ಐವತ್ತರ ಆಜುಬಾಜಿನಲ್ಲಿರುವ ಸುರತ್ಕಲ್‌ನ ಶಶಿಕಲಾ ಶೆಟ್ಟಿ.
`ಎಂಕುಲ್‌ದಾನೆ ಹಾಳಾದ್ ಪೋತನಾ, ಗೌರವೊಡು ಸಂಸಾರ ಮಲ್ತೊಂದ್ ಇಜ್ಜನಾ' (ನಾವೇನು ಹಾಳಾಗಿ ಹೋಗಿದ್ದೇವೆಯೇ? ಗೌರವದಿಂದ ಸಂಸಾರ ಮಾಡಿಕೊಂಡು ಇಲ್ಲವೇ?) ಎನ್ನುವ ಇನ್ನೆರಡು ಪ್ರಶ್ನೆಗಳನ್ನೂ ಕೇಳಿ ಯಾರದೋ ಮೇಲಿನ ಸಿಟ್ಟನ್ನು ಅವರು ತೀರಿಸಿಕೊಂಡರು.
ಇದು ಇಲ್ಲಿನ ಒಬ್ಬಿಬ್ಬರು ಹೆಣ್ಣುಮಕ್ಕಳ ವೈಯಕ್ತಿಕ ಅಭಿಪ್ರಾಯ ಅಲ್ಲ, ಅತಿರೇಕಕ್ಕೆ ಹೋಗುತ್ತಿರುವ `ನೈತಿಕ ಪೊಲೀಸ್‌ಗಿರಿ'ಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಹುಸಂಖ್ಯಾತ ಮಹಿಳೆಯರು ರೋಸಿಹೋಗಿದ್ದಾರೆ.
`ವುಂದ್ ಮುಲ್ತ ಕಲ್ಚರ್‌ಗ್ ಇನ್‌ಸಲ್ಟ್‌ಯೇ ಅಣ್ಣಾ' (ಇದು (ನೈತಿಕ ಪೊಲೀಸ್‌ಗಿರಿ) ಇಲ್ಲಿನ ಸಂಸ್ಕೃತಿಗೆ ಅವಮಾನ) ಎಂದವಳು ಮಂಗಳೂರಿನ ಕಾಲೇಜು ವಿದ್ಯಾರ್ಥಿನಿ ರಾಜಶ್ರೀ ಬಂಗೇರ. `ಅಣ್ಣಾ, ಅಕ್ಕಾ ಸಂಬೋಧನೆ, ಇಂಗ್ಲಿಷ್‌ಮಿಶ್ರಿತ ತುಳು' ಕೂಡಾ ಇಲ್ಲಿನ ಸಂಸ್ಕೃತಿಯ ಭಾಗ. ಚುನಾವಣೆಯಲ್ಲಿ ರಾಜಕೀಯವೇ ಚರ್ಚೆಯ ಪ್ರಮುಖ ವಿಷಯವಾದರೂ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿ ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸಂಸ್ಕೃತಿ ಕೂಡಾ ಚರ್ಚೆಗೊಳಗಾಗುತ್ತಿದೆ.
ಕರಾವಳಿಯ ಹೆಣ್ಣುಮಕ್ಕಳು ಮನೆಯಿಂದ ಹೊರಗೆ ಕಾಲಿಟ್ಟು ದಶಕಗಳೇ ಕಳೆದಿವೆ. ಇಲ್ಲಿನ ಮೀನುಗಾರ ಮಹಿಳೆಯರು ಊರೂರಿಗೆ ಬುಟ್ಟಿಯಲ್ಲಿ  ಹೊತ್ತುಕೊಂಡು ಹೋಗಿ ಇಲ್ಲವೆ ಸಂತೆಯಲ್ಲಿ ಕೂತು ಮೀನು ಮಾರಿಯೇ ಕುಟುಂಬವನ್ನು ಸಲಹುತ್ತಾ ಬಂದವರು. ಇವರ ಜತೆಗೆ ಬೀಡಿಕಟ್ಟುವ ಮಹಿಳೆಯರು, ತರಕಾರಿ ಬೆಳೆದು ಮಾರುವ ಕ್ರಿಶ್ಚಿಯನ್ ಮಹಿಳೆಯರು...ಹೀಗೆ ಕರಾವಳಿಯ ಉದ್ಯೋಗಸ್ಥ ಮಹಿಳಾವರ್ಗ ವಿಶಾಲವಾದುದು.
ಇವರೆಲ್ಲ ಉದ್ಯೋಗಕ್ಕಾಗಿ ಮನೆಬಿಟ್ಟು ಹೊರಗೆ ಅಡ್ಡಾಡುವವರು. ಬೆಂಗಳೂರು ನಗರವನ್ನು ಹೊರತುಪಡಿಸಿದರೆ ಇಡೀ ರಾಜ್ಯದಲ್ಲಿ ಉದ್ಯೋಗಸ್ಥ ಮಹಿಳೆಯರು ಅತಿಹೆಚ್ಚಿನ ಸಂಖ್ಯೆಯಲ್ಲಿರುವುದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಎಂದು ಹೇಳಲು ಸಮೀಕ್ಷೆಯ ಅಗತ್ಯ ಇಲ್ಲ. ಹೊರಜಗತ್ತಿನ ಪರಿಚಯ ಇರುವುದರಿಂದ ಆಧುನಿಕತೆಯ ಗಾಳಿಗೆ ಇವರೆಲ್ಲ ಎಂದೋ ಮೈಯೊಡ್ಡಿಯಾಗಿದೆ.
ಜಗತ್ತಿನ ಯಾವುದೋ ಮೂಲೆಯಲ್ಲಿ ಹೊಸ ಫ್ಯಾಷನ್ ಬಂದರೂ ಅದು ಮುಂಬೈ-ದುಬೈ ಮೂಲಕ ರಾಜ್ಯದಲ್ಲಿ ಮೊದಲು ಬರುತ್ತಿದ್ದದ್ದು ಮಂಗಳೂರಿಗೆ. ಬಾರ್ ಎಂಡ್ ರೆಸ್ಟೋರೆಂಟ್‌ಗಳಲ್ಲಿ ಗಂಡ ಬಿಯರ್ ಕುಡಿಯುತ್ತಿರುವಾಗ ಎದುರಿಗೆ ಹೆಂಡತಿ ಕೂತು ಊಟ ಮಾಡುವುದು ಇಲ್ಲಿ ಸಾಮಾನ್ಯ ದೃಶ್ಯ. ಮಂಗಳೂರಿನ ಹೆಣ್ಣುಮಕ್ಕಳು ಸ್ಪಲ್ಪ `ಫಾಸ್ಟ್' ಎನ್ನುವ ಅಭಿಪ್ರಾಯ ಹಿಂದಿನಿಂದಲೂ ಇದೆ. ಆದರೆ ತಮ್ಮ ಭವಿಷ್ಯದ ವಿಷಯದಲ್ಲಿ ತೀರಾ ಲೆಕ್ಕಾಚಾರದ ಈ ಹೆಣ್ಣುಮಕ್ಕಳು ಅತಿರೇಕಕ್ಕೆ ಹೋಗಿ ವೈಯಕ್ತಿಕ ಜೀವನವನ್ನು ಹಾಳುಮಾಡಿಕೊಂಡದ್ದು ಕಡಿಮೆ.
ಇಂತಹ ನಾಡಿನಲ್ಲಿ  ಹಿಂದೂ ಸಂಸ್ಕೃತಿಯ ರಕ್ಷಣೆಯ ಹೆಸರಲ್ಲಿ ನಡೆಸಲಾಗುತ್ತಿರುವ ನೈತಿಕ ಪೊಲೀಸ್‌ಗಿರಿ  ಪ್ರಜ್ಞಾವಂತ ಸಮುದಾಯವನ್ನು ಕೆರಳಿಸಿದೆ. ಹೆಚ್ಚುಕಡಿಮೆ ಪ್ರತಿದಿನ ಒಂದಲ್ಲ ಒಂದು ಸ್ಥಳದಲ್ಲಿ ಪರಸ್ಪರ ಮಾತನಾಡುತ್ತಿರುವ ಇಲ್ಲವೆ ಜತೆಯಲ್ಲಿ ಹೋಗುವ ಮುಸ್ಲಿಂ ಹುಡುಗ ಮತ್ತು ಹಿಂದೂ ಹುಡುಗಿಯ ಮೇಲೆ ಹಲ್ಲೆ ನಡೆಯುತ್ತಿರುತ್ತದೆ. ಕಾನೂನು ಪ್ರಕಾರ ಇದನ್ನು ಅಪರಾಧ ಎಂದು ಪರಿಗಣಿಸಲು ಅಸಾಧ್ಯವಾಗಿರುವ ಕಾರಣ ಅಧಿಕೃತವಾಗಿ ದೂರು ದಾಖಲಾಗುವುದು ಕಡಿಮೆ.
ದೈಹಿಕವಾಗಿ ಹಲ್ಲೆ ನಡೆಸುವ ಮತ್ತು ಪೊಲೀಸರ ಮೂಲಕ ಹೆದರಿಸುವ ಕೃತ್ಯಗಳು ನಡೆಯುತ್ತಲೇ ಇವೆ. ಸಂಘ ಪರಿವಾರದ ಕುಮ್ಮಕ್ಕಿನಿಂದಲೇ ಇದು ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇದರ ವಿರುದ್ಧ ಬಿಜೆಪಿಯ ಸಾಂಪ್ರದಾಯಿಕ ಬೆಂಬಲಿಗ ಕುಟುಂಬಗಳ ಮಹಿಳೆಯರೇ ತಿರುಗಿಬಿದ್ದಿದ್ದಾರೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಸೋಲು ಇದಕ್ಕೆ ಸಾಕ್ಷಿ.
ಸಂಘ ಪರಿವಾರದ ಚುನಾವಣಾ ಕಾರ್ಯತಂತ್ರದ ದೋಣಿ ಪ್ರತಿಕೂಲ ಗಾಳಿಗೆ ಸಿಕ್ಕಿ ಅಡಿಮೇಲಾಗುತ್ತಿರುವುದು ಈ ಬೆಳವಣಿಗೆಗಳಿಂದಾಗಿ. ಕಾಂಗ್ರೆಸ್ ಪಕ್ಷದ ನಾಯಕರು ಗೆದ್ದೇಬಿಟ್ಟೆವು ಎಂದು ಮೈಮರೆಯಲು ಕೂಡಾ ಇದು ಕಾರಣ. ಇದಕ್ಕೆ ಸರಿಯಾಗಿ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯವರು ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಸಿದ ವಿಧವೆಯರಿಗೆ ಮಂಗಳದ್ರವ್ಯ ನೀಡುವ ಮತ್ತು ದಲಿತ ಮಹಿಳೆಯರ ಪಾದತೊಳೆದ ಕೆಲಸಗಳು ಸಂಘ ಪರಿವಾರ ಮಹಿಳೆಯರ ಮೇಲೆ ನಡೆಸುತ್ತಿರುವ `ಸಾಂಸ್ಕೃತಿಕ ದಾಳಿ'ಗೆ ಪ್ರತಿದಾಳಿ ಎಂಬಂತೆ ಜನಪ್ರಿಯವಾಗಿವೆ.
ಪೂಜಾರಿಯವರೂ ಕಡು ಜಾತ್ಯತೀತರೇನಲ್ಲ, ಮಂಗಳೂರಿನಲ್ಲಿ ಬಿಜೆಪಿಯನ್ನು `ಮೆದು ಹಿಂದುತ್ವ'ದ ಮೂಲಕವೇ ಎದುರಿಸಲು ಹೊರಟವರು ಅವರು. ಸಂಘ ಪರಿವಾರವನ್ನು ಮೀರಿಸುವಂತೆ ಪ್ರತಿವರ್ಷ ದಸರಾ ಉತ್ಸವ ಆಚರಿಸುವ ಮೂಲಕ ಮನೆಯಲ್ಲಿದ್ದ ಧರ್ಮವನ್ನು ಬೀದಿಗೆ ತಂದು ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಿದ್ದಾರೆ ಎಂಬ ಆರೋಪ ಕೂಡಾ ಅವರ ಮೇಲಿದೆ. ಧಾರ್ಮಿಕವಾಗಿ ಪುರುಷರಿಗೆ ಸಮನಾದ ಸ್ಥಾನಮಾನವನ್ನು ಮಹಿಳೆಯರಿಗೆ ನೀಡಿ ಗೌರವಿಸುವುದನ್ನು ಒಂದು ಸೈದ್ಧಾಂತಿಕ ವಿರೋಧದ ಕಾರ್ಯಕ್ರಮ ಎಂದು ಅವರು ರೂಪಿಸದೆ ಇದ್ದರೂ ವರ್ತಮಾನದ ಪರಿಸ್ಥಿತಿಯಿಂದಾಗಿ ಅದು ಆ ರೂಪ ಪಡೆದಿದೆ.
ಇತ್ತೀಚಿನ ವರ್ಷಗಳಲ್ಲಿ ಸಂಖ್ಯೆ ಮತ್ತು ಸಂಪನ್ಮೂಲಗಳೆರಡರ ದೃಷ್ಟಿಯಿಂದಲೂ ಬಿಜೆಪಿಗೆ ಪ್ರಮುಖ ಆಧಾರಸ್ತಂಭವಾಗಿದ್ದ ಬಂಟ ಸಮಾಜದ ಮಹಿಳೆಯರೇ, ಹೆಣ್ಣುಮಕ್ಕಳನ್ನು ಗುರಿಯಾಗಿಟ್ಟುಕೊಂಡ ನಡೆದಿರುವ `ನೈತಿಕ ಪೊಲೀಸ್‌ಗಿರಿ'ಯಿಂದ ಹೆಚ್ಚು ಅಸಮಾಧಾನಕ್ಕೀಡಾಗಿರುವುದು ಗಮನಾರ್ಹ. ಭೂಸುಧಾರಣೆ ಜಾರಿಗೆ ಬರುವ ಮೊದಲು ಭೂಮಾಲೀಕರಾಗಿದ್ದ ಬಂಟರು ಹಿಂದೂ ಸಮುದಾಯದಲ್ಲಿ ಉಳಿದವರಿಗಿಂತ ಮೊದಲು ಆಧುನಿಕತೆಗೆ ತೆರೆದುಕೊಂಡವರು.
ಐಶ್ವರ್ಯ ರೈ, ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿ ಮೊದಲಾದ ಚಿತ್ರತಾರೆಯರೆಲ್ಲ `ಬೋಲ್ಡ್ ಎಂಡ್ ಬ್ಯೂಟಿಫುಲ್' ಎಂದೇ ಕರೆಯಲಾಗುವ ಬಂಟ ಮಹಿಳಾ ಸಮುದಾಯಕ್ಕೆ ಸೇರಿದವರು. ಉದ್ಯಮಶೀಲತೆಯ ಗುಣವನ್ನು ಹುಟ್ಟಿನಿಂದಲೇ ಪಡೆದಿರುವ ಈ ಸಮುದಾಯ ಹೋಟೆಲ್, ವೈದ್ಯಕೀಯ, ಎಂಜಿನಿಯರಿಂಗ್ ಮೊದಲಾದ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಯಿಂದಾಗಿ ಸಹಜವಾಗಿ ಶ್ರಿಮಂತಿಕೆಯ ಜೀವನಶೈಲಿಗೆ ಒಗ್ಗಿಹೋಗಿರುವವರು. ಇವರ ಮೇಲೆ ಬಲವಂತದಿಂದ ಹೇರಲಾಗುತ್ತಿರುವ ನಿರ್ಬಂಧಿತ ಸಾಮಾಜಿಕ ಜೀವನ ಸಹಜವಾಗಿಯೇ ಕಿರಿಕಿರಿ ಉಂಟುಮಾಡುತ್ತಿದೆ.
ಪಾಶ್ಚಾತ್ಯ ಸಂಸ್ಕೃತಿ ಕೂಡಾ ಇಲ್ಲಿಗೆ ಇತ್ತೀಚಿನ ಆಮದು ಅಲ್ಲ. ಇಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಕ್ರೈಸ್ತ ಸಮುದಾಯದ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ ಮೊದಲಿನಿಂದಲೂ ಇದೆ. 60 ವರ್ಷದ ಮಹಿಳೆ ಕೂಡಾ ಸ್ಕರ್ಟ್ ಧರಿಸುವುದು, ಮನೆಯಲ್ಲಿ ಕುಟುಂಬದ ಜತೆ ಮಹಿಳೆಯರೂ ಮದ್ಯ ಸೇವಿಸುವುದು ಇಲ್ಲಿನ ಕ್ರಿಶ್ಚಿಯನ್ ಸಮಾಜದಲ್ಲಿ ಸಾಮಾನ್ಯ ನಡವಳಿಕೆ.
ಇದರ ಪ್ರಭಾವ ಇತರ ಸಮುದಾಯದ ಮೇಲೆ ಕೂಡಾ ಆಗಿದೆ. `ಈ ರೀತಿಯ ನಡವಳಿಕೆಗಳಲ್ಲಿ ಸರಿ-ತಪ್ಪುಗಳ ಮಧ್ಯೆ ಸೂಕ್ಷ್ಮ ಗೆರೆ ಇರುತ್ತದೆ. ಮನೆಯ ಮಕ್ಕಳು ಎಚ್ಚರತಪ್ಪಿ ತಪ್ಪಿನ ಕಡೆ ಸರಿದಾಗ ಬುದ್ಧಿಹೇಳುವ, ಶಿಕ್ಷಿಸುವ ಕೆಲಸವನ್ನು ಲೋಕದ ಎಲ್ಲ ಪಾಲಕರಂತೆ ಇಲ್ಲಿನ ತಂದೆತಾಯಿಗಳು ಮಾಡುತ್ತಾ ಬಂದಿದ್ದಾರೆ. ಆದರೆ ನಮ್ಮ ಮನೆಮಕ್ಕಳ ಮೇಲೆ ಯಾರೋ ಅಪರಿಚಿತರು ಸಂಸ್ಕೃತಿ ರಕ್ಷಣೆಯ ಹೆಸರಲ್ಲಿ ದಾಳಿ ನಡೆಸುವುದನ್ನು ಸಹಿಸಲಿಕ್ಕಾಗದು' ಎನ್ನುತ್ತಾರೆ ಮಂಗಳೂರಿನ ಶಿಕ್ಷಕ ರಮಾನಂದ.
ಈ ರೀತಿ ದಂಡಪ್ರಯೋಗದ ಮೂಲಕ `ಬುದ್ಧಿಕಲಿಸಲು' ಹೊರಟವರಲ್ಲಿ ಯಾರೂ ಕಾವಿತೊಟ್ಟ ವಿರಾಗಿಗಳಿಲ್ಲ, ಇವರಲ್ಲಿ ಹೆಚ್ಚಿನವರು ಪೊಲೀಸ್ ದಾಖಲೆಯಲ್ಲಿರುವ ಪುಂಡು ಪೋಕರಿಗಳು ಮತ್ತು ಸಂಘ ಪರಿವಾರದ ಸದಸ್ಯರು ಎನ್ನುವುದು ಇವರನ್ನು ಇನ್ನಷ್ಟು ಕೆರಳಿಸಿದೆ.
ಶೂದ್ರ ಸಂಸ್ಕೃತಿಯ ತುಳುನಾಡಿನಲ್ಲಿ  ವೈದಿಕ ಸಂಸ್ಕೃತಿಯ ವಿರುದ್ಧದ ಪ್ರತಿಭಟನೆ ನಿರಂತರವಾಗಿ ನಡೆಯುತ್ತಾ ಬಂದಿರುವುದನ್ನು ತುಳುನಾಡಿನ ಇತಿಹಾಸದಲ್ಲಿ ಕಾಣಬಹುದು. ಒಂದು ಕಾಲದಲ್ಲಿ `ಸೋಷಿಯಲ್ ಆ್ಯಕ್ಟಿವಿಸ್ಟ್'ಗಳಾಗಿದ್ದ ಭೂತ-ದೈವಗಳ ಕತೆಯೇ ಇದಕ್ಕೆ ಸಾಕ್ಷಿ. ಇಲ್ಲಿನ ಬಹುಸಂಖ್ಯಾತ ಹಿಂದೂ ಸಮುದಾಯ ಆರಾಧಿಸುತ್ತಾ ಬಂದಿರುವ ಈ ಭೂತ-ದೈವಗಳೆಲ್ಲ ತಮ್ಮ ಭಕ್ತರಂತೆಯೇ ಮಾಂಸ-ಮೀನು ತಿನ್ನುವ, ಶೇಂದಿ-ಮದ್ಯ (ಇತ್ತೀಚೆಗೆ ಬೀರು-ವಿಸ್ಕಿ) ಕುಡಿಯುವ ವರ್ಗಕ್ಕೆ ಸೇರಿರುವುದರಿಂದ ಅವುಗಳ ಆರಾಧನೆಯ ಸಮಯದಲ್ಲಿ ಅದನ್ನೇ ಹರಕೆ ಮೂಲಕ ಅರ್ಪಿಸಲಾಗುತ್ತದೆ.
ಈ ಎರಡು ಜಿಲ್ಲೆಗಳಲ್ಲಿ ರಾಮ, ಕೃಷ್ಣ, ಶಿವನಿಗಿಂತ ಜುಮಾದಿ, ಕೋರ‌್ದಬ್ಬು-ತನ್ನಿಮಾನಿಗಾ, ಪಂಜುರ್ಲಿಗಳೇ ಹೆಚ್ಚು ಜನಪ್ರಿಯ. ಪುರುಷಪ್ರಧಾನ ಸಮಾಜದಲ್ಲಿನ ಲಿಂಗ ಅಸಮಾನತೆ ಬಗ್ಗೆ ಸಿಡಿದೆದ್ದ ಸಿರಿ, ತನ್ನಿಮಾನಿಗಾ ಮೊದಲಾದ ವೀರಮಹಿಳೆಯರ ಕತೆಗಳು ಇಲ್ಲಿನ ಜಾನಪದ ಸಾಹಿತ್ಯವಾದ ಪಾಡ್ದನಗಳಲ್ಲಿ ಸಿಗುತ್ತವೆ. ಇವರನ್ನು `ಶುದ್ಧ ಹಿಂದೂ'ಗಳಾಗಿ ಮತಾಂತರ ಮಾಡುವ ಪ್ರಯತ್ನದ ಅಂಗವಾಗಿಯೇ ಇಲ್ಲಿನ ಭೂತಕೋಲ, ನಾಗಮಂಡಲ ನಡೆಯುವ ಸ್ಥಳದಲ್ಲಿ ಭಗವಾಧ್ವಜಗಳು ಹಾರಾಡುತ್ತಿರುತ್ತವೆ. `ಮುಸ್ಲಿಂ ಭೂತ'ವನ್ನು ತೋರಿಸಿ ಅವರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.
ಆದರೆ  ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಗಿದ್ದ ಇಲ್ಲಿನ ಶೂದ್ರ ಸಮುದಾಯ ಕರಾವಳಿಯ ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದಾಗಿ ಎಚ್ಚೆತ್ತುಕೊಳ್ಳುತ್ತಿರುವಂತೆ ಕಾಣುತ್ತಿದೆ. ಪರಾಕಾಷ್ಠೆ ತಲುಪಿರುವ `ನೈತಿಕ ಪೊಲೀಸ್‌ಗಿರಿ'ಯ ಜತೆಯಲ್ಲಿಯೇ ಬಿಜೆಪಿ ಶಾಸಕರೊಬ್ಬರ ಮೇಲೆ ಬ್ಲೂಫಿಲ್ಮ್ ವೀಕ್ಷಣೆಯ ಆರೋಪ, ಇನ್ನೊಬ್ಬ ಶಾಸಕರ ಪತ್ನಿಯ ನಿಗೂಢ ಸಾವು ಮತ್ತು ಬೇರೆ ಹೆಣ್ಣಿನ ಜತೆಗಿದ್ದ ವಿಡಿಯೊ, ರೇವ್‌ಪಾರ್ಟಿಯ ಕಿರಿಕಿರಿ ಮೊದಲಾದ ಘಟನೆಗಳಿಂದಾಗಿ ಬಿಜೆಪಿ ವಿಶ್ವಾಸದ್ರೋಹ ಮಾಡಿದೆ ಎಂಬ ಭಾವನೆ ಮುಖ್ಯವಾಗಿ ಕರಾವಳಿಯ ಮಹಿಳೆಯರಲ್ಲಿ ಮೂಡಲು ಕಾರಣವಾಗಿದೆ. ಈ ಅಸಮಾಧಾನ ರಾಜಕೀಯ ನಿರ್ಧಾರವಾಗಿ ಪರಿವರ್ತನೆಗೊಂಡರೆ ಕರಾವಳಿಯ `ಹಿಂದುತ್ವದ ಪ್ರಯೋಗ ಶಾಲೆ'ಯನ್ನು ಮುಚ್ಚಬೇಕಾಗಬಹುದು.

Monday, April 22, 2013

ರೇವಣ್ಣರನ್ನು ಕಾಡುತ್ತಿರುವ ಪುಟ್ಟಸ್ವಾಮಿಗೌಡ `ಭೂತ'

ಹೊಳೆನರಸಿಪುರ (ಹಾಸನ ಜಿಲ್ಲೆ): ಸ್ಥಳೀಯ ಶಾಸಕರು ಯಾರೆಂದು ಗೊತ್ತಿಲ್ಲದೆ ಹೊಳೆನರ
ಸಿಪುರ ಕ್ಷೇತ್ರದ ಉದ್ದಗಲಕ್ಕೆ ಅಡ್ಡಾಡಿದ ಅಪರಿಚಿತರು ಅಲ್ಲಿನ ಶಾಸಕರನ್ನು ಮರು ಆಯ್ಕೆ ಮಾಡುವಂತೆ ಮತದಾರರಿಗೆ ಶಿಫಾರಸು ಮಾಡಲೂ ಬಹುದು. ಪಟ್ಟಣದಲ್ಲಿ ಮಾತ್ರವಲ್ಲ ಹಳ್ಳಿಹಳ್ಳಿಗಳಲ್ಲಿಯೂ ಕಾಂಕ್ರೀಟು ರಸ್ತೆಗಳು, ವಿದ್ಯುತ್ ಸಬ್‌ಸ್ಟೇಷನ್‌ಗಳು, ಸುಸಜ್ಜಿತ ಆಸ್ಪತ್ರೆ, ನರ್ಸಿಂಗ್‌ನಿಂದ ಪಾಲಿಟೆಕ್ನಿಕ್ ವರೆಗೆ,ಕಾನೂನಿನಿಂದ ಗೃಹವಿಜ್ಞಾನದ ವರೆಗೆ ಶಿಕ್ಷಣ ಸಂಸ್ಥೆಗಳು, ಕ್ಷೇತ್ರದ ಬಹಳಷ್ಟು ವಿದ್ಯಾವಂತ ಯುವಕ-ಯುವತಿಯರಿಗೆ ಸರ್ಕಾರಿ ಉದ್ಯೋಗ... ಇನ್ನೇನು ಬೇಕು?
ಒಂದು ವಿಧಾನಸಭಾ ಕ್ಷೇತ್ರವನ್ನು ಹೇಗೆ ಅಭಿವೃದ್ಧಿ ಮಾಡಬಹುದೆಂಬುದಕ್ಕೆ ಹೊಳೆನರಸಿಪುರ ಮಾದರಿಯಂತಿದೆ. ಇಷ್ಟೆಲ್ಲ ಅಭಿವೃದ್ಧಿಯ ಚಿತ್ರವನ್ನು ನೋಡಿ ಸಂಭ್ರಮ ಪಟ್ಟವರ ಅಭಿಪ್ರಾಯ ಇಲ್ಲಿನ ಶಾಸಕರ ಹೆಸರು ಹರದನಹಳ್ಳಿ ದೇವೇಗೌಡ ರೇವಣ್ಣ ಎಂದು ಗೊತ್ತಾದ ಕೂಡಲೇ ಬದಲಾಗಲೂಬಹುದು.
ತಪ್ಪು ರೇವಣ್ಣ ಅವರದ್ದಲ್ಲ, ದೊಡ್ಡ ರಾಜಕೀಯ ಕುಟುಂಬದಿಂದ ಬಂದ ವ್ಯಕ್ತಿಯ ಹೆಗಲಮೇಲೆ ಆ ಪರಂಪರೆಯ ಹೊರೆ ಇದ್ದೇ ಇರುತ್ತದೆ. ರೇವಣ್ಣ  ಅವರು ಹೊಳೆನರಸಿಪುರದ ಶಾಸಕ ಎನ್ನುವುದಕ್ಕಿಂತಲೂ ಮುಖ್ಯವಾಗಿರುವುದು ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಗ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತಮ್ಮ ಎನ್ನುವುದು.
ಆದುದರಿಂದ ಎಲ್ಲರೂ ಅದೇ ವಂಶಪರಂಪರೆಯ ಕನ್ನಡಕದಲ್ಲಿಯೇ ಅವರನ್ನು ನೋಡುತ್ತಾರೆ. ಮತಹಾಕುವವರ ತಲೆಯಲ್ಲಿ ರೇವಣ್ಣ ಮಾತ್ರ ಇಲ್ಲ ಇಡೀ ದೇವೇಗೌಡರ ಕುಟುಂಬ ಇರುತ್ತದೆ. ಹೊಳೆನರಸಿಪುರ ಎಂಬ ವಿಧಾನಸಭಾ ಕ್ಷೇತ್ರ ಎನ್ನುವುದು ಒಂದು ರೀತಿ ಇಂದಿರಾಗಾಂಧಿ ಕುಟುಂಬಕ್ಕೆ ರಾಯಬರೇಲಿ ಎಂಬ ಲೋಕಸಭಾ ಕ್ಷೇತ್ರ ಇದ್ದ ಹಾಗೆ.
ಸ್ವಾತಂತ್ರ್ಯಾನಂತರ ಈ ಕ್ಷೇತ್ರದಲ್ಲಿ ನಡೆದ ಹದಿಮೂರು ಚುನಾವಣೆಗಳಲ್ಲಿ ನಾಲ್ಕು ಬಾರಿ ಬಿಟ್ಟರೆ ಉಳಿದೆಲ್ಲ ಸಲ ಗೆದ್ದದ್ದು ದೇವೇಗೌಡರ ಕುಟುಂಬ. ದೇವೇಗೌಡರು ಆರುಬಾರಿ ಮತ್ತು ರೇವಣ್ಣ ಮೂರು ಬಾರಿ ಗೆದ್ದಿದ್ದಾರೆ. ರಾಜಕೀಯ ಪ್ರವೇಶದ ಪ್ರಾರಂಭದಲ್ಲಿ ದೇವೇಗೌಡರು ಪಕ್ಷೇತರರಾಗಿ ಇಲ್ಲಿ ಎರಡು ಬಾರಿ ಗೆದ್ದಿದ್ದರು.
ಇಷ್ಟು ಸುರಕ್ಷಿತವಾಗಿದ್ದ ಕ್ಷೇತ್ರವನ್ನು ರೇವಣ್ಣ ಅವರು ಬೆಂಗಳೂರಿನಲ್ಲಿಯೇ ಕೂತು ಗೆಲ್ಲಬೇಕಾಗಿತ್ತು. ಆದರೆ ಅವರು ಪತ್ನಿ ಮತ್ತು ಮಗನ ಜತೆ ಬಂದು ಇಲ್ಲಿ ರಾತ್ರಿಹಗಲು ಬೆವರು ಸುರಿಸುತ್ತಿದ್ದಾರೆ. `ಚುನಾವಣೆಯ ಕಾಲದಲ್ಲಿ ಮಾತ್ರವಲ್ಲ ಬಾಕಿ ದಿನಗಳಲ್ಲಿಯೂ ವಾರಕ್ಕೆರಡು ದಿನ ತಪ್ಪದೆ ಇಲ್ಲಿಗೆ ಬರುತ್ತೇನೆ' ಎಂದರು ಹೊಳೆನರಸಿಪುರದ ತಮ್ಮ ಮನೆಯಲ್ಲಿ ಕೂತಿದ್ದ ರೇವಣ್ಣ. ಪತ್ನಿ ಭವಾನಿ ಪಕ್ಷದ ಕಾರ್ಯಕರ್ತರನ್ನು ಉಪಚರಿಸುತ್ತಾ ಮನೆ ತುಂಬಾ ಓಡಾಡುತ್ತಿದ್ದರು.
ಇವರನ್ನು ಕಾಡುತ್ತಿರುವ ಅಸುರಕ್ಷತೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಈ ಕ್ಷೇತ್ರದ ರಾಜಕೀಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಅಭಿವೃದ್ಧಿಯ ವಿಷಯ ಈಗಲೂ ಇಲ್ಲಿ ಚುನಾವಣಾ ಚರ್ಚಾ ವಸ್ತು ಅಲ್ಲ.  ಇನ್ನಷ್ಟು ಸೂಕ್ಷ್ಮವಾಗಿ ನೋಡಿದರೆ ಇಲ್ಲಿ ಅಭ್ಯರ್ಥಿಗಳಾಗಿರುವ ರೇವಣ್ಣ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಸ್.ಜಿ. ಅನುಪಮ ಕೂಡಾ ಪ್ರಧಾನ ಪಾತ್ರಧಾರಿಗಳಲ್ಲ. ಇವರಿಬ್ಬರ ಹಿನ್ನೆಲೆಯಲ್ಲಿ ಕ್ರಮವಾಗಿ ಅವರಿಬ್ಬರ ಅಪ್ಪ ಮತ್ತು ಮಾವನ ರಾಜಕೀಯದ ನೆರಳಿದೆ.
ಪುಟ್ಟಸ್ವಾಮಿಗೌಡರು ಜೀವಂತ ಇರುವ ವರೆಗೆ ಹೊಳೆನರಸಿಪುರ ಕ್ಷೇತ್ರದಲ್ಲಿ ದೇವೇಗೌಡರ ಏಕಚಕ್ರಾಧಿಪತ್ಯಕ್ಕೆ ಸವಾಲೊಡ್ಡುತ್ತಲೇ ಇದ್ದವರು. ಪ್ರಾರಂಭದ ದಿನದ ಸ್ನೇಹವನ್ನು ಕಡಿದುಕೊಂಡು ದೇವೇಗೌಡರಿಂದ ಅವರು ದೂರವಾದ ನಂತರ ಈ ಕ್ಷೇತ್ರದ ಚುನಾವಣೆ ಎಂದರೆ  ಇಬ್ಬರು ಗೌಡರ ನಡುವಿನ ಕಾಳಗ ಎಂದೇ ಪರಿಗಣಿಸಲಾಗುತ್ತಿತ್ತು. ಈಗ ಅಪ್ಪನ ಪರವಾಗಿ ಮಗ, ಮಾವನ ಪರವಾಗಿ ಸೊಸೆ ಕದನ ಕಣದಲ್ಲಿದ್ದಾರೆ. ಕಾಂಗ್ರೆಸ್ ಪರ ಪ್ರಚಾರ ಮಾಡುವವರು ಅನುಪಮಾ ಅವರಿಗಿಂತ ಹೆಚ್ಚಾಗಿ ಪುಟ್ಟಸ್ವಾಮಿಗೌಡರ ಹೆಸರು ಕೂಗಿ ಜೈಕಾರ ಹಾಕುತ್ತಿರುವುದು ಮತ್ತು ರೇವಣ್ಣ ಮಾತೆತ್ತಿದರೆ `ದೊಡ್ಡಗೌಡರ' ನಾಮಸ್ಮರಣೆ ಮಾಡುವುದು ಇದೇ ಕಾರಣಕ್ಕಾಗಿ.
ಪುಟ್ಟಸ್ವಾಮಿಗೌಡರ ಸಾವಿನ ನಂತರ ಗೌಡರ ಕಾಳಗದಲ್ಲಿ ದೇವೇಗೌಡ ಕುಟುಂಬ ಕೈ ಮೇಲಾಗಿರುವುದು ಸ್ಪಷ್ಟ. ಮಾವನನ್ನು ಮಾತ್ರವಲ್ಲ ಗಂಡನನ್ನೂ ಕಳೆದುಕೊಂಡ ಅನುಪಮಾ ಅವರ ಪರವಾಗಿ ಅನುಕಂಪದ ಅಲೆಯ ಜತೆಗೆ ಪುಟ್ಟಸ್ವಾಮಿಗೌಡರ ಕಟ್ಟಾ ಬೆಂಬಲಿಗರ ಪಡೆ ಇರುವುದು ನಿಜ. ಆದರೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಕಾಣಿಸುತ್ತಿಲ್ಲ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಗಂಡಸಿ ಶಿವರಾಂ ಅವರು ಅನುಪಮಾ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದವರಲ್ಲ. ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಆಗಿರುವ ನಿರಾಶೆ ಅವರ ಗೈರುಹಾಜರಿಯಲ್ಲಿ ಕಾಣುತ್ತಿದೆ. ಇಷ್ಟೆಲ್ಲ ಪ್ರತಿಕೂಲ ಅಂಶಗಳ ನಡುವೆಯೂ ಅನುಪಮಾ ಮಾವನ ಸಾವಿನ ನಂತರದ ದಿನಗಳಲ್ಲಿ ಗೌಡರ ಕುಟುಂಬದ ವಿರುದ್ಧದ ಹೋರಾಟವನ್ನು ಮುಂದುವರಿಸಿದ್ದಾರೆ.
`ರೇವಣ್ಣ ಬೆಂಬಲಿಗರು ಕಟ್ಟಾ ನಿಷ್ಠಾವಂತರು ಎನ್ನುವ ಹಾಗಿಲ್ಲ, ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ರೇವಣ್ಣ ಅವರ ಮಾತು ಸರ್ಕಾರದಲ್ಲಿ ಬೆಲೆ ಇರುವುದು ಗೊತ್ತಾಗಿರುವ ಕಾರಣಕ್ಕೆ ಈ ಬೆಂಬಲಿಗರು ಸುತ್ತುವರಿದಿರಬಹುದು. ಆದರೆ ಅನುಪಮಾ ಬೆಂಬಲಿಗರು ರೇವಣ್ಣ ಒಡ್ಡುತ್ತಲೇ ಇರುವ ಎಲ್ಲ ಬಗೆಯ ಆಸೆ-ಆಮಿಷಗಳನ್ನು ಮೆಟ್ಟಿನಿಂತು ಜತೆಯಲ್ಲಿರುವವರು' ಎಂದು ಹೇಳುತ್ತಾರೆ ತನ್ನನ್ನು ಪಕ್ಷಾತೀತ ಎಂದು ಹೇಳಿಕೊಂಡ ಅಗ್ರಹಾರ-ಚೋಳೇನಹಳ್ಳಿಯ ಶಿವರಾಮೇಗೌಡರು.
ರೇವಣ್ಣ ಅವರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಇರುವ ಯಾವ ಚಿಂತೆಯೂ ಇಲ್ಲ. `ತಂದೆ-ಮಕ್ಕಳ ಪಕ್ಷ' ಎಂದೇ ವಿರೋಧಿಗಳು ಗೇಲಿ ಮಾಡುವ ಜೆಡಿ (ಎಸ್)ನಲ್ಲಿ ಕನಿಷ್ಠ ಕ್ಷೇತ್ರದ ಮಟ್ಟಿಗೆ ಅವರದ್ದೇ ಕೊನೆಮಾತು.
ದೇವೇಗೌಡರು ಹಾಸನ ಲೋಕಸಭಾ ಸದಸ್ಯರೂ ಆಗಿರುವುದರಿಂದ ಅವರ ಪರವಾಗಿರುವ ಮತಗಳೂ ಕೂಡಾ ರೇವಣ್ಣ ಬುಟ್ಟಿಗೆ ಬಂದು ಬೀಳಬಹುದು. ಆದರೆ ಅಣ್ಣ ಕುಮಾರಸ್ವಾಮಿ ಅವರಂತೆ ರೇವಣ್ಣ ಅವರದ್ದು ಜನಪ್ರಿಯ ರಾಜಕಾರಣದ ಕಾರ್ಯಶೈಲಿ ಅಲ್ಲ. ಪಕ್ಷದ ಕಾರ್ಯಕರ್ತರು, ನಾಯಕರು ಯಾರೇ ಇರಲಿ ಯಾರೂ ರೇವಣ್ಣ ಮುಂದೆ ಕೂರುವ ಹಾಗಿಲ್ಲ, ಕೈಕಟ್ಟಿಕೊಂಡು ನಿಲ್ಲಲೇ ಬೇಕು. ಇದು ಕುಮಾರಸ್ವಾಮಿಯವ `ಬ್ರದರ್' ರಾಜಕೀಯದಿಂದ ಭಿನ್ನ.
ಮುಖಚಹರೆ, ದೇಹದ ಅಂಗಾಂಗಗಳ ಮೇಲೆ ಕೈಬೆರಳುಗಳ ಚಲನೆ, ಧ್ವನಿಯ ಏರಿಳಿತದಲ್ಲಿ ಮಾತ್ರವಲ್ಲ ಕಾರ್ಯಶೈಲಿಯಲ್ಲಿಯೂ ರೇವಣ್ಣ ಅವರಿಗೆ ಅಪ್ಪನ ಹೋಲಿಕೆ ಇದೆ. ಸರ್ಕಾರಿ ಕಡತಗಳನ್ನು ಓದಿ ಗ್ರಹಿಸುವ ದೇವೇಗೌಡರ ಸೂಕ್ಷ್ಮಬುದ್ದಿ ಓದಿದ್ದು ಕಡಿಮೆಯಾದರೂ ರೇವಣ್ಣ ಅವರಲ್ಲಿಯೂ ಇದೆ. ಇದರಿಂದಾಗಿಯೇ ಸಚಿವರಾಗಿದ್ದಾಗಲೂ ಅಧಿಕಾರಿಗಳ ಮೇಲೆ ಅವರಿಗೆ ನಿಯಂತ್ರಣ ಇತ್ತು. ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ದದ ಆರೋಪಗಳ ಅನೇಕ ಕಡತಗಳು ಪ್ರಧಾನ ವಿರೋಧಪಕ್ಷದ ನಾಯಕರಿಗೆ ಸಿಗದೆ ರೇವಣ್ಣ ಕೈಸೇರುತ್ತಿದ್ದದ್ದಕ್ಕೆ ಕೂಡಾ ಇದು ಕಾರಣ. ಇದನ್ನೇ ಕೈಯಲ್ಲಿಟ್ಟುಕೊಂಡು ರೇವಣ್ಣ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎಂಬ ಆರೋಪವೂ ಇದೆ.
`ಅಜೀರ್ಣವಾಗುವಷ್ಟು ಅಭಿವೃದ್ಧಿ ಮಾಡಿದ್ದಾರೆ. ಇದನ್ನು ಕ್ಷೇತ್ರದ ಮತದಾರರ ಹಿತದೃಷ್ಟಿಗಿಂತಲೂ ಹೆಚ್ಚಾಗಿ ಬೆಂಬಲಿಗ ಗುತ್ತಿಗೆದಾರರಿಗೆ ನೆರವಾಗಲು ಮಾಡಿದ್ದಾರೆ' ಎನ್ನುವುದೇ ರೇವಣ್ಣ ಅವರ ಮೇಲಿನ ಪ್ರಮುಖ ಆರೋಪ.  ಸರಿಯಾಗಿರುವ ರಸ್ತೆಗಳೂ ದುರಸ್ತಿಯಾಗುತ್ತಿರುವುದು ಅಲ್ಲಲ್ಲಿ ಕಣ್ಣಿಗೆ ಬೀಳುತ್ತದೆ.
`ಅಭಿವೃದ್ಧಿಯ ಅಜೀರ್ಣತೆ' ಬಗ್ಗೆ ಆರೋಪಿಸುವವರು ಪಟ್ಟಣದ ಮಧ್ಯ ಹಾದುಹೋಗುವ ಹೇಮಾವತಿ ನದಿಗೆ 36 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿರುವುದನ್ನು ತೋರಿಸುತ್ತಾರೆ. `ಕಳೆದ 2-3 ದಶಕಗಳಲ್ಲಿ ಹೇಮಾವತಿ ನದಿಯಲ್ಲಿ ನೆರೆ ಬಂದಿಲ್ಲ. ಹೀಗಿದ್ದಾಗ ತಡೆಗೋಡೆ ಯಾಕೆ? ಆ ದುಡ್ಡನ್ನು ಹಳ್ಳಿಗಳಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಡಬಹುದಿತ್ತಲ್ಲವೇ? ಎಂದು ಪ್ರಶ್ನಿಸುತ್ತಾರೆ ರೇವಣ್ಣ ಅವರ ಪ್ರತಿಸ್ಪರ್ಧಿ ಎಸ್.ಜಿ. ಅನುಪಮಾ. ಅಭಿವೃದ್ಧಿ ಕಾಮಗಾರಿಗಳಲ್ಲಿ ಕೂಡಾ ಪಕ್ಷ ರಾಜಕೀಯ ನಡೆದಿದೆ ಎಂದು ಅವರು ಆರೋಪಿಸುತ್ತಾರೆ. ವಿಚಿತ್ರವೆಂದರೆ ಅಭಿವೃದ್ಧಿ ಇಲ್ಲಿನ ಚುನಾವಣೆಯಲ್ಲಿ ಚರ್ಚೆಯಾಗುತ್ತಿರುವುದು ಅಭಿವೃದ್ಧಿ ಆಗಿಲ್ಲ ಎಂದಲ್ಲ, ಅಜೀರ್ಣವಾಗುವಷ್ಟು ಆಗಿದೆ ಎಂದು.
`ಸೋಲು-ಗೆಲುವಿನ ಬಗ್ಗೆ ಅಣ್ಣಾವ್ರ ತಲೆಕೆಡಿಸಿಕೊಂಡಿಲ್ಲ, `ಹೂ ಬಿದ್ದಾಗಿದೆ' ಅವರೇ ಗೆಲ್ಲುತ್ತಾರೆ' ಎನ್ನುತ್ತಾರೆ ಹೆಸರು ಬರೆಯಬೇಡಿ ಎಂದು ಕೇಳಿಕೊಂಡ ರೇವಣ್ಣ ಬೆಂಬಲಿಗರೊಬ್ಬರು. ದೇವೇಗೌಡರಂತೆ ರೇವಣ್ಣ ಅವರಿಗೂ ದೇವರು, ಜ್ಯೋಷಿಗಳ ಮೇಲೆ ಅಪಾರ ನಂಬಿಕೆ. ಗಳಿಗೆ-ಮುಹೂರ್ತ ನೋಡದೆ ಮನೆಯಿಂದ ಹೊರಗೆ ಕಾಲಿಡುವವರಲ್ಲ. ಅವರ ಎಲ್ಲ ಲೆಕ್ಕಾಚಾರಗಳೂ ಜ್ಯೋತಿಷಿಗಳ ಸಲಹೆ ಮೇಲೆ ನಡೆಯುವುದು. ರೇವಣ್ಣನವರು ಬೆವರು ಸುರಿಸುತ್ತಿರುವುದು ಜ್ಯೋತಿಷಿ ನುಡಿದಿರುವ ಭವಿಷ್ಯ ನಿಜಮಾಡುವುದಕ್ಕೋ, ಸುಳ್ಳುಮಾಡುವುದಕ್ಕೋ ಎಂಬುದನ್ನು ಅವರೇ ಹೇಳಬೇಕು, ಹೇಳುವುದಿಲ್ಲ.

Saturday, April 20, 2013

ಬೆಳಗಾವಿ ಜಿಲ್ಲೆಯ `ಸಿಂಡಿಕೇಟ್ ಪ್ರಜಾಪ್ರಭುತ್ವ'

ಗೋಕಾಕ (ಬೆಳಗಾವಿ ಜಿಲ್ಲೆ) : ಪಾಳೆಪಟ್ಟುಗಳು ಅಳಿದುಹೋಗಿ ಜನರ ಕೈಗೆ ಅಧಿಕಾರ ಬಂದಿದೆ ಎಂದು ಹೇಳುವವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ,ಗೋಕಾಕ, ಅರಬಾವಿ, ಯಮಕನಮರಡಿ ಕಡೆ ಹೋಗಿ ಇಣುಕಿ ಬರಬೇಕು. `ಪ್ರಜೆಗಳು,
ಪ್ರಜೆಗಳಿಗಾಗಿ, ಪ್ರಜೆಗಳಿಂದ... ಎನ್ನುವ ಪ್ರಜಾಪ್ರಭುತ್ವ ತತ್ವಾಧಾರಿತ ವ್ಯಾಖ್ಯಾನಕ್ಕೆ ಇಲ್ಲಿನ ರಾಜಕೀಯದಲ್ಲಿ ಕವಡೆಕಾಸಿನ ಕಿಮ್ಮತ್ತಿಲ್ಲ. ಇಲ್ಲಿರುವ `ಪ್ರಜಾಪ್ರಭುತ್ವದ ಪಾಳೆಯಗಾರರು' ನಡೆಸುತ್ತಾ ಬಂದಿರುವ ರಾಜಕಾರಣವನ್ನು ಸಾಂಪ್ರದಾಯಿಕ ರೀತಿಯಲ್ಲಿ ವ್ಯಾಖ್ಯಾನಿಸುವುದು ಕಷ್ಟ. ಇಲ್ಲಿರುವುದು `ಸಂಸದೀಯ ಪ್ರಜಾಪ್ರಭುತ್ವ' ಅಲ್ಲವೇ ಅಲ್ಲ, ಇದೊಂದು ರೀತಿಯ `ಸಿಂಡಿಕೇಟ್ ಪ್ರಜಾಪ್ರಭುತ್ವ'.
ಗೋಕಾಕದ ಜಾರಕಿಹೊಳಿ ಸೋದರರು ಮತ್ತು ಹುಕ್ಕೇರಿಯ ಕತ್ತಿ ಸೋದರರು ಕಳೆದ ಕೆಲವು ವರ್ಷಗಳಿಂದ ಸುಭದ್ರವಾದ ಪ್ರತ್ಯೇಕ ರಾಜಕೀಯ ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ನೆಮ್ಮದಿಯಾಗಿದ್ದಾರೆ. ಇವರ ಸಾಲಿನಲ್ಲಿಯೇ ಇರುವ ಪ್ರಭಾಕರ ಕೋರೆ, ಪ್ರಕಾಶ್ ಹುಕ್ಕೇರಿ ಮೊದಲಾದವರ ರಾಜಕೀಯ ಜೀವನ ಕೂಡಾ ಅಷ್ಟೇ ಸುರಕ್ಷಿತವಾಗಿದೆ . ಒಂದು ಕಾಲದಲ್ಲಿ `ಬೆಳಗಾವಿ ಹುಲಿ' ಎಂಬ ಖ್ಯಾತಿ ಪಡೆದಿದ್ದ ವಿ.ಎಲ್.ಪಾಟೀಲ್ ಅವರೂ ನಡೆಸಿದ್ದು ಇದೇ ಮಾದರಿ ರಾಜಕೀಯ. ತಮ್ಮ ಉದ್ಯಮ ಮತ್ತು ರಾಜಕೀಯ ಸಾಮ್ರಾಜ್ಯದ ರಕ್ಷಣೆಗಾಗಿ ಕಟ್ಟಿಕೊಂಡಿರುವ `ರಾಜಕೀಯ ಸಿಂಡಿಕೇಟ್' ಇವರೆಲ್ಲರ ಯಶಸ್ಸಿನ ಗುಟ್ಟು `ಜಾತ್ಯತೀತ ಮತ್ತು ಪಕ್ಷಾತೀತವಾದ ಈ `ಸಿಂಡಿಕೇಟ್' ಯಾವ  ದಾಖಲೆಯಲ್ಲಿಯೂ ಇಲ್ಲ, ಕಣ್ಣಿಗೂ ಕಾಣುವುದಿಲ್ಲ. ಆದರೆ  ಗ್ರಾಮಪಂಚಾಯತ್‌ನಿಂದ ಲೋಕಸಭೆಯ ವರೆಗೆ, ಸಹಕಾರಿ ಬ್ಯಾಂಕ್‌ನಿಂದ ಹಾಲಿನ ಸೊಸೈಟಿ ವರೆಗೆ ನಡೆಯುವ ಎಲ್ಲ ಚುನಾವಣೆಗಳ ಫಲಿತಾಂಶದಲ್ಲಿ ಈ `ಸಿಂಡಿಕೇಟ್'ನ ನೆರಳನ್ನು ಕಾಣಬಹುದು.
ಈಗಿನ ವಿಧಾನಸಭೆಯಲ್ಲಿ ಜಾರಕಿಹೊಳಿ ಕುಟುಂಬದ ಮೂವರು ಸೋದರರು ಸದಸ್ಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಯಮಕನಮರಡಿಯಿಂದ ಮತ್ತು ರಮೇಶ್ ಜಾರಕಿಹೊಳಿ ಗೋಕಾಕ ಕ್ಷೇತ್ರಗಳಿಂದ ಕಾಂಗ್ರೆಸ್ ಹುರಿಯಾಳುಗಳಾಗಿ ಆರಿಸಿ ಬಂದಿದ್ದರು. ಬಾಲಚಂದ್ರ ಜಾರಕಿಹೊಳಿ ಜಾತ್ಯತೀತ ಜನತಾದಳದಿಂದ ಅರಬಾವಿಯಿಂದ ಗೆದ್ದು ನಂತರ ಆಪರೇಷನ್‌ಕಮಲದಲ್ಲಿ ಬಿಜೆಪಿ ಸೇರಿದ್ದಾರೆ. ಈ ಕ್ಷೇತ್ರದ ಪಕ್ಕದಲ್ಲಿಯೇ ಇರುವ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಸದಸ್ಯ ಉಮೇಶ್ ಕತ್ತಿ, ಅವರ ಸೋದರ ರಮೇಶ್ ಕತ್ತಿ ಲೋಕಸಭಾ ಸದಸ್ಯ. ಈ ರೀತಿ ಒಂದೇ ಜಿಲ್ಲೆಯ ಅಕ್ಕಪಕ್ಕದ ಮೂರು ಕ್ಷೇತ್ರಗಳಲ್ಲಿ ಮೂವರು ಸೋದರರು ಶಾಸಕರಾಗಿರುವ ಹಾಗೂ ಪಕ್ಕದ ಕ್ಷೇತ್ರಗಳಲ್ಲಿ ಅಣ್ಣತಮ್ಮಂದಿರು ಶಾಸಕ ಮತ್ತು ಸಂಸದರಾಗಿರುವ ಉದಾಹರಣೆ ದೇಶದಲ್ಲೆಲ್ಲೂ ಇಲ್ಲ.
ಇವರಲ್ಲಿ ಯಾರಿಗೂ ಈಗಿನ ಚುನಾವಣೆಯಲ್ಲಿ ಗೆಲುವಿನ ಬಗ್ಗೆಯೂ ಹೆಚ್ಚಿನ ಚಿಂತೆ ಇಲ್ಲ. ಮತದಾರರ ಅಂತರಂಗದಲ್ಲಿ ಏನೇ ಅಭಿಪ್ರಾಯ ಇದ್ದರೂ ಮತಯಂತ್ರದ ಮೇಲೆ ಕೈಯಾಡಿಸಿದಾಗ ಬೆರಳುಗಳು ತಮ್ಮನ್ನೇ ಆಯ್ಕೆ ಮಾಡುತ್ತವೆ ಎಂಬ ನಂಬಿಕೆ ಇವರಲ್ಲಿದೆ. ಹಿಂದಿನ ಚುನಾವಣೆಗಳ ಫಲಿತಾಂಶದ ಮೇಲೆ ಕಣ್ಣಾಡಿಸಿದರೆ ಈ ನಾಯಕರ ನಂಬಿಕೆ ಹುಸಿಯಾಗಬಹುದು ಎಂದು ಅನಿಸುವುದಿಲ್ಲ. ಉಮೇಶ್ ಕತ್ತಿ ಕಳೆದ ಐದು ಚುನಾವಣೆಗಳನ್ನು ಐದು ಪಕ್ಷಗಳಿಂದ ಗೆದ್ದಿದ್ದಾರೆ. ಆಪರೇಷನ್ ಕಮಲದಲ್ಲಿ ಭಾಗಿಯಾಗಿ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಾಲಚಂದ್ರ ಜಾರಕಿಹೊಳಿ ಉಪಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಮರುಆಯ್ಕೆಯಾಗಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿದ್ದ ಸತೀಶ್ ಜಾರಕಿಹೊಳಿ ಕ್ಷೇತ್ರವಿಂಗಡಣೆಯ ನಂತರ ಯಮಕನಮರಡಿ ಎಂಬ ಹೊಸ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ.
ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕೂಡಾ ಬೆಳಗಾವಿ ಜಿಲ್ಲೆಯ `ಸಿಂಡಿಕೇಟ್' ರಾಜಕೀಯದ ಒಳನೋಟವನ್ನು ನೀಡುತ್ತದೆ. ಈ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 361 ಕ್ಷೇತ್ರಗಳ ಪೈಕಿ 196 ಪಕ್ಷೇತರರ ಪಾಲಾಗಿವೆ. ಗೋಕಾಕ ನಗರಸಭೆಯ 31ಕ್ಕೆ 31 ಸ್ಥಾನಗಳಲ್ಲಿ, ಚಿಕ್ಕೋಡಿ ಪುರಸಭೆಯ 23ಕ್ಕೆ 23ರಲ್ಲಿ, ಖಾನಾಪುರ ಪಟ್ಟಣ ಪಂಚಾಯತ್‌ನ 16ಕ್ಕೆ 16ರಲ್ಲಿ, ಚಿಕ್ಕೊಡಿ ಸದಲಗಾ ಪಟ್ಟಣ ಪಂಚಾಯತ್‌ನ 20ಕ್ಕೆ 20ರಲ್ಲಿ, ಗೋಕಾಕದ ಕೊಣ್ಣೂರು ಪಟ್ಟಣಪಂಚಾಯತ್‌ನ 17ಕ್ಕೆ 15ರಲ್ಲಿ ಪಕ್ಷೇತರರು ಆರಿಸಿ ಬಂದಿದ್ದಾರೆ. ಅಲ್ಲೆಲ್ಲ ಬೇರೆಬೇರೆ ಪಕ್ಷಗಳಿಗೆ ಸೇರಿರುವ ಶಾಸಕರಿದ್ದಾರೆ. ಆದರೆ ಅವರ ಪಕ್ಷದ ಸದಸ್ಯರೇ ಅಲ್ಲ, ಹೇಗೆ? ಮನಸ್ಸು ಮಾಡಿದರೆ ಈ ಶಾಸಕರು ತಮ್ಮ ಪಕ್ಷದ ಸದಸ್ಯರನ್ನೂ ಗೆಲ್ಲಿಸಬಲ್ಲರು ಎನ್ನುವುದಕ್ಕೆ ಹುಕ್ಕೇರಿ ಸಾಕ್ಷಿ.
ಇಲ್ಲಿನ ಶಾಸಕರಾದ ಉಮೇಶ್ ಕತ್ತಿಯವರು ಬಿಜೆಪಿಯೋ, ಕೆಜೆಪಿಯೋ ಎನ್ನುವ ಗೊಂದಲದಲ್ಲಿರುವಾಗಲೇ ಇಲ್ಲಿನ ಪಟ್ಟಣ ಪಂಚಾಯತ್‌ನ 19ರಲ್ಲಿ 18 ಸ್ಥಾನಗಳಲ್ಲಿ ಮತ್ತು ಇದೇ ಕ್ಷೇತ್ರಕ್ಕೆ ಸೇರಿದ ಸಂಕೇಶ್ವರ ಪುರಸಭೆಯ 23ಕ್ಕೆ 22ರಲ್ಲಿ ಬಿಜೆಪಿ ಗೆದ್ದಿದೆ. ತಮ್ಮ ಪಕ್ಷದ ಶಾಸಕರು ಇರುವ ಕಡೆಗಳಲ್ಲಿ ಪಕ್ಷದ ಸದಸ್ಯರು ಯಾಕೆ ಆರಿಸಿ ಬಂದಿಲ್ಲ ಎಂದು ಆ ಪಕ್ಷಗಳು ಕೇಳಬೇಕಲ್ಲವೇ? ಉದಾಹರಣೆಗೆ ಗೋಕಾಕ ನಗರಸಭೆ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿಯವರ ವ್ಯಾಪ್ತಿಯಲ್ಲಿ ಬರುತ್ತದೆ. ಅವರನ್ನು ಯಾರು ಕೇಳಿದ್ದಾರೆ? ಆರಿಸಿಬಂದಿರುವ ಪಕ್ಷೇತರರಲ್ಲಿ ಬಹುಸಂಖ್ಯಾತರು ಸ್ಥಳೀಯ ಶಾಸಕರ ಅನುಯಾಯಿಗಳು. ಉಳಿದವರನ್ನು ಶಾಸಕರು `ಮ್ಯಾನೇಜ್' ಮಾಡ್ತಾರೆ. ಆಡಳಿತದ ಸೂತ್ರ ಮಾತ್ರ ಶಾಸಕರ ಕೈಯಲ್ಲಿರುತ್ತದೆ. ಇದು ಒಟ್ಟು ಕಾರ್ಯತಂತ್ರ.
ಇಷ್ಟೊಂದು ಲೀಲಾಜಾಲವಾಗಿ ಚುನಾವಣೆಯಲ್ಲಿ ಗೆಲ್ಲಲು `ಸಿಂಡಿಕೇಟ್ ರಾಜಕಾರಣ' ಒಂದೇ ಅಲ್ಲದೆ ಬೇರೆ ಕಾರಣಗಳೂ ಇವೆ. ಜಾರಕಿಹೊಳಿ, ಕತ್ತಿ,ಕೋರೆ ಮೊದಲಾದವರ ಮೊದಲ ಆಸಕ್ತಿ ರಾಜಕೀಯ ಅಲ್ಲ ಉದ್ಯಮ. ಉಮೇಶ್ ಕತ್ತಿಯವರು ಖಾಸಗಿ ಸಕ್ಕರೆ ಕಾರ್ಖಾನೆಯ ಮಾಲೀಕರು ಮಾತ್ರವಲ್ಲ, ಸಹಕಾರಿ ಸಕ್ಕರೆ ಕಾರ್ಖಾನೆಯೊಂದು ಕೂಡಾ ಅವರ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿ ಇಲ್ಲಿ ಮಾತ್ರ ಇರುವ ಸಹಕಾರಿ ವಿದ್ಯುತ್ ವಿತರಣಾ ಸಂಘದ ಜತೆ ಹುಕ್ಕೇರಿ ಕ್ಷೇತ್ರದಲ್ಲಿರುವ ಸಹಕಾರಿ ರಂಗದ ಎಲ್ಲ ಸಂಸ್ಥೆಗಳು ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಕತ್ತಿ ಅವರ ಹಿಡಿತದಲ್ಲಿವೆ. ಇದರ ಜತೆಗೆ ಶಿಕ್ಷಣ ಸಂಸ್ಥೆಗಳಿವೆ. ಜಾರಕಿಹೊಳಿ ಕುಟುಂಬ ಒಂದು ಕಾಲದಲ್ಲಿ ಅಬಕಾರಿ ಉದ್ಯಮದಲ್ಲಿದ್ದವರು. ಸಾರಾಯಿ ನಿಷೇಧದ ನಂತರ ಸ್ವಲ್ಪ ಹಿನ್ನಡೆಯಾದರೂ ಸಂಪೂರ್ಣವಾಗಿ ಮದ್ಯದ ಉದ್ಯಮವನ್ನು ಬಿಟ್ಟಿಲ್ಲ. ಸತೀಶ್ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಕ್ಕರೆ ಕಾರ್ಖಾನೆಗಳಿವೆ. ಇದರ ಜತೆಗೆ ಬೆಂಗಳೂರಿನಿಂದ ಬೆಳಗಾವಿ ವರೆಗೆ ಬೇರೆಬೇರೆ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿದ್ದಾರೆ. ರಾಜಕೀಯಕ್ಕೆ ಬೇಕಾದ ದುಡ್ಡಿನ ಅವಶ್ಯಕತೆ ಪೂರೈಸಲು ಗುತ್ತಿಗೆದಾರರು ಇದ್ದೇ ಇರುತ್ತಾರೆ.
ಹಾಗಿದ್ದರೆ ದುಡ್ಡೊಂದೇ ಇವರ ರಾಜಕೀಯ ಯಶಸ್ಸಿಗೆ ಕಾರಣವೇ? ಇವರಿಗಿಂತ ನೂರಾರು ಪಟ್ಟು ಶ್ರಿಮಂತರು ರಾಜ್ಯದಲ್ಲಿದ್ದಾರೆ, ವಿಧಾನಸಭೆಯ ಒಂದು ಟಿಕೆಟ್‌ಗಾಗಿ ಕೋಟಿ-ಕೋಟಿ ರೂಪಾಯಿ ಚೆಲ್ಲುವವರಿದ್ದಾರೆ.  ಅವರಿಗೆ ಯಾಕೆ ರಾಜಕೀಯ ಯಶಸ್ಸು ಸಿಗಲಿಲ್ಲ ಎನ್ನುವ ಪ್ರಶ್ನೆಯೂ ಇದೆ. ಕಾರಣಗಳು ಬೇರೆ ಇವೆ. ಮಹಾರಾಷ್ಟ್ರದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳ ಲಾಬಿಯ ಸೋಂಕು ಆ ರಾಜ್ಯದ ಗಡಿಭಾಗದಲ್ಲಿರುವ ಬೆಳಗಾವಿಗೂ ತಗಲಿದೆ. ದೇಶದಲ್ಲಿ ಈ ರೀತಿಯ `ಸಿಂಡಿಕೇಟ್ ರಾಜಕಾರಣ'ಕ್ಕೆ ಖ್ಯಾತಿಯೋ, ಕುಖ್ಯಾತಿಯೋ ಪಡೆದವರು ಶರದ್ ಪವಾರ್. ಇಲ್ಲಿನ ರಾಜಕೀಯ ಬಹುಪಾಲು ಅವರ ತಂತ್ರವನ್ನು ಹೋಲುತ್ತದೆ.
ಇವರಲ್ಲಿ ಯಾರಿಗೂ ತಾವಿದ್ದ ಪಕ್ಷದ ಮೇಲೆ ಕಟ್ಟಾ ನಿಷ್ಠೆ ಇಲ್ಲ. ಇವರ ರಾಜಕೀಯ ಜೀವನದ ಪಕ್ಷಾಂತರಗಳ ಇತಿಹಾಸವೇ ಇದಕ್ಕೆ ಸಾಕ್ಷಿ.   ರಾಜಕೀಯ ಎದುರಾಳಿಗಳು ತಲೆಎತ್ತದಂತೆ ನಿರ್ನಾಮ ಮಾಡಿಬಿಡುವುದು, ಜನತೆಯ ಪಾಲುದಾರಿಕೆ ಇರುವ ಎಲ್ಲ ಸಂಸ್ಥೆಗಳ ಮೇಲೆ ನಿಯಂತ್ರಣ, ಪಕ್ಷಾತೀತವಾಗಿ ರಾಜಕೀಯ ನಾಯಕರ ಜತೆ ಸೌಹಾರ್ದಯುತ ಹೊಂದಾಣಿಕೆ ಮತ್ತು ಮತದಾರರ ತಲೆ ಮೇಲೆ ವೈಯಕ್ತಿಕ ಋಣಭಾರದ ಹೇರಿಕೆ- ಇದು ಇವರ ರಾಜಕೀಯ ಕಾರ್ಯಚರಣೆಯ ಮೋಡಸ್ ಅಪರೆಂಡಿ. ಚುನಾವಣೆಯಲ್ಲಿ ಎದುರಾಳಿ ಅಭ್ಯರ್ಥಿ ದುರ್ಬಲ ವಾಗಿರುವಂತೆ ತಮ್ಮೆಲ್ಲ ಸಂಪರ್ಕ -ಸಾಮರ್ಥ್ಯವನ್ನು ಬಳಸಿಕೊಂಡು ಇವರು ಪರಸ್ಪರ ನೆರವಾಗುತ್ತಾರೆ. ಉದಾಹರಣೆಗೆ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಉಮೇಶ್ ಕತ್ತಿ ಜನತಾದಳ ಇಲ್ಲವೆ ಬಿಜೆಪಿಯಿಂದ ಸ್ಪರ್ಧಿಸಿದಾಗ `ಸಿಂಡಿಕೇಟ್'ನಲ್ಲಿರುವ ಕಾಂಗ್ರೆಸ್ ಸದಸ್ಯರು ಅವರ ಎದುರು ದುರ್ಬಲ ಅಭ್ಯರ್ಥಿ ಕಣಕ್ಕಿಳಿಸುವಂತೆ ನೋಡಿಕೊಳ್ಳುತ್ತಾರೆ.
ಅರಬಾವಿಯಿಂದ ಬಾಲಚಂದ್ರ ಜಾರಕಿಹೊಳಿ ಜೆಡಿ(ಎಸ್)ನಿಂದ ಸ್ಪರ್ಧಿಸಿದಾಗ ಅವರ ಎದುರಾಳಿಯಾಗಿದ್ದದ್ದು ಕಾಂಗ್ರೆಸ್‌ನ ದುರ್ಬಲ ಅಭ್ಯರ್ಥಿ. ಪಕ್ಷ ಯಾವುದೇ ಇರಲಿ ಇಡೀ ಜಾರಕಿಹೊಳಿ ಕುಟುಂಬಕ್ಕೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರ ಮೇಲೆ ಇರುವ ನಿಷ್ಠೆಯೂ ಇದಕ್ಕೆ ನೆರವಾಗಿದೆ ಎಂಬ ಆರೋಪ ಇದೆ. ಹುಕ್ಕೇರಿ ಕ್ಷೇತ್ರದಿಂದ ಸತತವಾಗಿ ಆರಿಸಿ ಬರುತ್ತಿರುವ ಉಮೇಶ್ ಕತ್ತಿ ಎದುರು ವಿರೋಧ ಪಕ್ಷಗಳು ಬಲಿಷ್ಠ ಅಭ್ಯರ್ಥಿಗಳನ್ನು ನಿಲ್ಲಿಸಿದ್ದೇ ಅಪರೂಪ. ಇದ್ದ ಒಬ್ಬ ವಿರೋಧಿ ಎ.ಬಿ.ಪಾಟೀಲ್ ಕ್ಷೇತ್ರ ವಿಂಗಡಣೆಯ ನಂತರ ಅನಾಥರಾಗಿದ್ದಾರೆ. ಅಂತರಂಗದಲ್ಲಿ ದ್ವೇಷಾಸೂಯೆಗಳಿದ್ದರೂ ಸಾಮಾನ್ಯವಾಗಿ `ಸಿಂಡಿಕೇಟ್' ಸದಸ್ಯರು ಒಬ್ಬರು ಮತ್ತೊಬ್ಬರ ಕಾರ್ಯಕ್ಷೇತ್ರಕ್ಕೆ ಅಕ್ರಮವಾಗಿ ಪ್ರವೇಶ ಮಾಡುವುದಿಲ್ಲ.
ಇವರೆಲ್ಲರೂ ತಮ್ಮ ಜನಪ್ರಿಯತೆಯಿಂದಲೇ ಆರಿಸಿಬರುತ್ತಾರೆ ಎಂದು ಹೇಳಲಿಕ್ಕೂ ಆಗದು. ಜನರನ್ನು ಮಾತಿಗೆಳೆದರೆ ಇದು ಸ್ಪಷ್ಟವಾಗುತ್ತದೆ. `ಇವರನ್ನು ಸೋಲಿಸುವ ಅಭ್ಯರ್ಥಿಗಳು ಬೇಕಲ್ಲಾ? ಅಂತಹವರು ಬಂದರೆ ಜನಾನೂ ಬದಲಾವಣೆಗೆ ಸಿದ್ಧರಾಗಬಹುದು. ಉಳಿದವರನ್ನು ಬೆಳೆಯಲಿಕ್ಕೆ ಬಿಡುವುದೇ ಇಲ್ಲವಲ್ಲಾ?' ಎಂದ ಯರಗಟ್ಟಿಯಲ್ಲಿ ಸಿಕ್ಕ ರೈತ ಶಿವನಗೌಡ ಪಾಟೀಲರ ಅಭಿಪ್ರಾಯವೇ ಈ ಕ್ಷೇತ್ರಗಳ ಬಹಳ ಮಂದಿಯಲ್ಲಿದೆ. ಇವರೆಲ್ಲರ ಮಾತು ಕೇಳಿದರೆ ಈ ಅಸಹಾಯಕ ಜನ ತಮ್ಮನ್ನು ರಾಜಕೀಯ ಗುಲಾಮಗಿರಿಯಿಂದ ಪಾರು ಮಾಡಲು `ಕುದುರೆ ಏರಿ ಬರುವ ಸರದಾರ'ನಿಗಾಗಿ ಕಾಯುತ್ತಿರುವಂತೆ ಕಾಣುತ್ತಿದೆ. ಆ `ಸರದಾರ' ಸದ್ಯಕ್ಕೆ ಬರುವ ಹಾಗೆ ಕಾಣುವುದಿಲ್ಲ.

Friday, April 19, 2013

ಹರಿದು ಹಂಚಿಹೋಗಿರುವ `ರೈತ ಮತಬ್ಯಾಂಕ್'

ನರಗುಂದ: `ಇಂದಿನ ರಾಜಕೀಯ ಹಾದಿ ತಪ್ಪಲು ಅದನ್ನು ನಿಯಂತ್ರಿಸುವ ಸಾಮರ್ಥ್ಯದ ಚಳವಳಿಗಳು ಇಲ್ಲದಿರುವುದು
ಕಾರಣ' ಎಂದು ಹೇಳುವವರಿದ್ದಾರೆ. ಈ ರೀತಿ ಹೇಳುವವರೆಲ್ಲರೂ ಎಂಬತ್ತರ ದಶಕದ ರೈತ,ಭಾಷಾ ಮತ್ತು ದಲಿತ ಚಳವಳಿಗಳನ್ನು ನೆನಪುಮಾಡಿಕೊಳ್ಳುತ್ತಾರೆ. `ರಾಜಕೀಯದ  ಆಕರ್ಷಣೆಯಿಂದಾಗಿಯೇ ಚಳವಳಿಗಳು ಅಕಾಲ ಸಾವು ಎದುರಿಸುವಂತಾಯಿತು' ಎಂದು ದೂರುವವರೂ ಇದ್ದಾರೆ. ಈ ರೀತಿ ಹೇಳುವವರು ಎಂಬತ್ತರ ದಶಕದ ಉತ್ತರಾರ್ಧದ ಕಾಂಗ್ರೆಸೇತರ ರಾಜಕಾರಣವನ್ನು ಉಲ್ಲೇಖಿಸುತ್ತಾರೆ. ಈ ಎರಡೂ ಅಭಿಪ್ರಾಯಗಳಲ್ಲಿ ಇರುವ ಸತ್ಯಕ್ಕೆ ಸಾಕ್ಷಿಯಾಗಿರುವುದು ನರಗುಂದ.
ರಾಜ್ಯದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಬೆಳವಣಿಗೆಗಳ ಬೀಜ ಮೊಳಕೆಯೊಡೆದದ್ದು ನರಗುಂದದ ಕಪ್ಪುಮಣ್ಣಿನಲ್ಲಿ. ಮಲಪ್ರಭಾ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿರುವ ನರಗುಂದ, ನವಲಗುಂದ ಮತ್ತು ಸವದತ್ತಿ ತಾಲ್ಲೂಕುಗಳ ರೈತರ ಬಂಡಾಯ ಬೆಳೆಯುತ್ತಾ ಬೇರೆಬೇರೆ ರೂಪಗಳಲ್ಲಿ ರಾಜ್ಯವ್ಯಾಪಿ ವಿಸ್ತರಣೆಗೊಂಡು ಕೊನೆಗೆ  ಚುನಾವಣಾ ಕಣದಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿತ್ತು. ರೈತ ಚಳವಳಿಯ ಮೂಲ ಉದ್ದೇಶ, ಅಭಿವೃದ್ಧಿ ಕರ ಮತ್ತು ನೀರಿನ ಶುಲ್ಕದ ರದ್ದತಿ ಹಾಗೂ ವೈಜ್ಞಾನಿಕ ಬೆಲೆ ನಿಗದಿಯಾಗಿತ್ತೇ ಹೊರತು ರಾಜಕೀಯ ಬದಲಾವಣೆ ಅಲ್ಲದೆ ಇದ್ದರೂ ಅದು ನಡೆದು ಹೋಯಿತು. ಆಗಲೇ ಚುನಾವಣೆಯ ಫಲಿತಾಂಶದ ಮೇಲೆ ರೈತ ಚಳವಳಿ ಉಂಟು ಮಾಡಿದ ಪರಿಣಾಮ ರಾಜಕೀಯ ಪಕ್ಷಗಳ ಗಮನಸೆಳೆದದ್ದು. ಇದರಿಂದಾಗಿ ಅಲ್ಲಿಯ ವರೆಗೆ ಅದೃಶ್ಯವಾಗಿದ್ದ `ರೈತ ಮತಬ್ಯಾಂಕ್' ಕಡೆ ರಾಜಕಾರಣಿಗಳು ಕಣ್ಣುಹರಿಸುವಂತಾಯಿತು.
ಮಲಪ್ರಭಾ ರೈತಹೋರಾಟ ಸಮನ್ವಯ ಸಮಿತಿಯ ಸಂಚಾಲಕರಾಗಿದ್ದ ಬಿ.ಆರ್.ಯಾವಗಲ್ ಕ್ರಾಂತಿರಂಗದ ಅಭ್ಯರ್ಥಿಯಾಗಿ 1983ರಲ್ಲಿ ನರಗುಂದ ಕ್ಷೇತ್ರದಿಂದ ಆಯ್ಕೆಯಾಗಿದ್ದು ರಾಜ್ಯ ರೈತಚಳವಳಿಯಲ್ಲಿನ ದೊಡ್ಡ ತಿರುವು. ವಿಚಿತ್ರವೆಂದರೆ ನರಗುಂದದ ಜತೆಯಲ್ಲಿಯೇ ತೀವ್ರಸ್ವರೂಪದ ರೈತ ಚಳವಳಿ ನಡೆದಿದ್ದ ನವಲಗುಂದ ಮತ್ತು ಸವದತ್ತಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಇಷ್ಟು ಮಾತ್ರವಲ್ಲ ಈ ಮೂರೂ ಕ್ಷೇತ್ರಗಳಲ್ಲಿ ಗೆದ್ದವರು ಭೂಮಾಲೀಕರಾಗಿದ್ದರು. ಆ ಚುನಾವಣೆಯ  ನಂತರವಾದರೂ ರಾಜಕೀಯ ಮಧ್ಯಪ್ರವೇಶದ ಬಗ್ಗೆ ರೈತ ಚಳವಳಿಯ ನಾಯಕರು ಎಚ್ಚೆತ್ತುಕೊಳ್ಳಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಅದರ ನಂತರ ಕರ್ನಾಟಕ ರಾಜ್ಯ ರೈತ ಸಂಘವೇ ನೇರವಾಗಿ ಚುನಾವಣೆಯ ಅಖಾಡಕ್ಕಿಳಿಯಿತು. ಬಾಬಾಗೌಡ ಪಾಟೀಲರು ಕಿತ್ತೂರು ಮತ್ತು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯೂ ಆಗಿಬಿಟ್ಟರು.
ಕಳೆದ ಮೂರು ದಶಕಗಳಲ್ಲಿ ಮಲಪ್ರಭೆಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಒಂದು ಕಾಲದಲ್ಲಿ ರೈತ ಚಳವಳಿಯಲ್ಲಿದ್ದ ನಾಯಕರು ಕಾಂಗ್ರೆಸ್, ಬಿಜೆಪಿ, ಜೆಡಿ(ಎಸ್)ಗಳಲ್ಲಿ ಹಂಚಿಹೋಗಿದ್ದಾರೆ. ಇಪ್ಪತ್ತು ವರ್ಷಗಳ ಹಿಂದೆ ಯುವ ರೈತ ಮುಖಂಡರಾಗಿ ಕಾಂಗ್ರೆಸ್ ವಿರುದ್ಧವೇ ಸ್ಪರ್ಧಿಸಿದ್ದ ಬಿ.ಆರ್.ಯಾವಗಲ್ ಈಗ ನರಗುಂದದಲ್ಲಿ ಅದೇ ಪಕ್ಷದ ಅಭ್ಯರ್ಥಿ. ಅವರ ಎದುರಾಳಿ ಕಳಸಾ-ಬಂಡೂರಿ ಚಳವಳಿಯ ಕಾಲದಲ್ಲಿ ಓಡಾಡುತ್ತಿದ್ದ ಸಿ.ಸಿ. ಪಾಟೀಲ್. ಬಾಬಾಗೌಡ ಪಾಟೀಲ್ ಅವರು ಒಮ್ಮೆ ಬಿಜೆಪಿ ಸೇರಿ ಮತ್ತೆ ಹೊರಬಂದು ಈಗ ಬಿಜೆಪಿ ಸೇರಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ ಪುಟ್ಟಣ್ಣಯ್ಯ ಬಣ ನೇರವಾಗಿ ಕೆಜೆಪಿ ಜತೆ ಮೈತ್ರಿ ಮಾಡಿಕೊಂಡು ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿದಿದೆ. ಇನ್ನೊಂದು ಬಣದ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮತ್ತೊಂದು ರಂಗ ಕಟ್ಟಿಕೊಂಡು ಕೆಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.  ಈ ಎಲ್ಲ ಬೆಳವಣಿಗೆಗಳಿಂದಾಗಿ ಪ್ರಾಮಾಣಿಕವಾಗಿ ಸಂಘಟನೆಗೆಂದು ಹೊರಡುವ ನಾಯಕರನ್ನು ಹಳ್ಳಿಗಳಲ್ಲಿ ರೈತರೇ ನಂಬುತಿಲ್ಲ. ರಾಜಕೀಯ ಉದ್ದೇಶದಿಂದಲೇ ಇದನ್ನು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸುತ್ತಾರೆ. ಈ ಕಾರಣಕ್ಕಾಗಿಯೇ ಹಾವೇರಿಯ ರೈತ ನಾಯಕ ಶಿವಾನಂದ ಗುರುಮಠ್ ಅವರು `ಕರ್ನಾಟಕ ರಾಜ್ಯ ರೈತ (ಚುನಾವಣೇತರ) ಸಂಘಟನೆ'ಯನ್ನು ಕಟ್ಟಿಕೊಂಡಿದ್ದಾರೆ. ಇರುವುದರಲ್ಲಿ ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಹಳೆಯ ಚಳವಳಿಯ ನೆನಪಿನ ಚುಂಗು ಹಿಡಿದುಕೊಂಡು ಕೂತಿದೆ.
`1980ರ ಜುಲೈ 21ನೇ ದಿನ ನನಗಿನ್ನೂ ನೆನಪಿದೆ. ನರಗುಂದದಲ್ಲಿ ಎಂಟರಿಂದ ಹತ್ತು ಸಾವಿರದಷ್ಟು ರೈತರು ಸೇರಿದ್ದರು. ಕಚೇರಿ ಪ್ರವೇಶಿಸಲು ಬಿಡದ ತಹಶೀಲ್ದಾರ್ ಪೊಲೀಸರನ್ನು ಕರೆಸಿ ಲಾಠಿ ಪ್ರಹಾರ ಮಾಡಿಸಿದರು.ಕೊನೆಗೆ ಗೋಲಿಬಾರ್ ನಡೆಯಿತು. ಚಿಕ್ಕನರಗುಂದದ ಈರಪ್ಪ ಕಡ್ಲಿಕೊಪ್ಪ ಎಂಬ ಯುವರೈತ ಸ್ಥಳದಲ್ಲಿಯೇ ಮೃತಪಟ್ಟ. ಅದೇ ಹೊತ್ತಿನಲ್ಲಿ ನವಲಗುಂದದಲ್ಲಿ ನಡೆದ ಗೋಲಿಬಾರ್‌ಗೆ ಅಳಗವಾಡಿಯ ಬಸಪ್ಪ ಲಕ್ಕುಂಡಿ ಬಲಿಯಾದ. ಇದರಿಂದ ರೊಚ್ಚಿಗೆದ್ದ ರೈತರು ಮೂವರು ಪೊಲೀಸರನ್ನು ಸಾಯಿಸಿದರು. ಅದರ ನಂತರ ನರಗುಂದ-ನವಲಗುಂದಗಳಲ್ಲಿ ನಡೆದದ್ದು ಭೀಕರ ಪೊಲೀಸ್ ಅಟ್ಟಹಾಸ. ನೂರಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡರು, ಸಾವಿರಾರು ರೈತರು ಗಾಯಗೊಂಡರು-ಇವೆಲ್ಲ ವಿಧಾನಸೌಧದಲ್ಲಿ ಹೋಗಿ ಕೂರ‌್ಲಿಕ್ಕೇನು? ಅಲ್ಲಿ ಹೋದವರಾದರೂ ರೈತರ ಹಿತಾಸಕ್ತಿಯ ರಕ್ಷಣೆಯಾದರೂ ಮಾಡಿದರೇ? ಅದೂ ಇಲ್ಲ' ಎಂದು ಸಿಟ್ಟಿನಿಂದಲೇ ಪ್ರಶ್ನಿಸುತ್ತಾರೆ 1980ರ ನರಗುಂದ ರೈತ ಬಂಡಾಯದಲ್ಲಿ ಭಾಗವಹಿಸಿದ್ದ ರೈತ ಮುಖಂಡ ಎಸ್.ಎನ್.ಈರೇಶನವರ್.
ಕಳೆದ ಮೂರು ದಶಕಗಳಲ್ಲಿ ಮಲಪ್ರಭೆಯಲ್ಲಿ ಸಾಕಷ್ಟು ನೀರು ಹರಿದುಹೋಗಿದೆ. ಒಂದು ಕಾಲದಲ್ಲಿ ವರಲಕ್ಷ್ಮಿ ಹತ್ತಿ ರೈತರ ಪಾಲಿನ ಲಕ್ಷ್ಮಿಯಾಗಿತ್ತು. ಈಗ ಶಾಪವಾಗಿದೆ. ಈಗ ರೈತರು ಹತ್ತಿಹಾಕುವುದನ್ನೇ ನಿಲ್ಲಿಸಿ ಮೆಕ್ಕೆಜೋಳ, ಸೂರ್ಯಕಾಂತಿ, ಜೋಳ, ಗೋಧಿಯ ಮೊರೆಹೋಗಿದ್ದಾರೆ. ಇತ್ತೀಚಿನ 2-3 ವರ್ಷಗಳಲ್ಲಿ ಬಿಟಿ ಹತ್ತಿಯ ಹುಚ್ಚು ಹತ್ತಿಕೊಂಡಿದೆ. ಭೂಮಿ ಕ್ಷಾರವಾಗುತ್ತಿದೆ. ಕೃಷಿಕೂಲಿಕಾರರ ಅಭಾವ, ಉತ್ಪಾದನಾ ವೆಚ್ಚದಲ್ಲಿ ಏರಿಕೆ, ಇಳುವರಿಯಲ್ಲಿ ಇಳಿಕೆಯಿಂದಾಗಿ ಕೃಷಿ ಯಾರಿಗೂ ಬೇಡದ ವೃತ್ತಿಯಾಗಿದೆ. ಇದರಿಂದಾಗಿ `ಗೈರುಹಾಜರಿ ಜಮೀನ್ದಾರಿಕೆ' ಹೆಚ್ಚಾಗುತ್ತಿದೆ. ರೈತರ ಬದುಕಿನಲ್ಲಿ ಸಮಸ್ಯೆ ಈಗಲೂ ಇದೆ. ಪ್ರಾರಂಭದಲ್ಲಿ ಮಲಪ್ರಭಾ ಜಲಾಶಯದಿಂದ ವರ್ಷಕ್ಕೆ ಐದು ತಿಂಗಳು ನೀರು ಬಿಡ್ತಾ ಇದ್ದರು. ಈಗ 30 ದಿನ ಬಿಟ್ಟರೆ ಹೆಚ್ಚು. ಅಲ್ಲಿಯೂ ನೀರಿಲ್ಲ. ಜಲಾಶಯದಲ್ಲಿ ಹೂಳು ತುಂಬಿದೆ, ಕಾಲುವೆಗಳು ದುರಸ್ತಿಯಾಗಿಲ್ಲ. ಮಳೆ ಕಡಿಮೆಯಾಗುತ್ತಿದೆ. 300-400 ಅಡಿಯಷ್ಟು ಕೊಳವೆ ಬಾಗಿ ಕೊರೆದರೂ ನೀರಿಲ್ಲ. ಇದು ಯಾವುದೂ ಇಲ್ಲಿ ಈ ಬಾರಿಯ ಚುನಾವಣಾ ವಿಷಯ ಅಲ್ಲ. ಹಳ್ಳಿ ಕಟ್ಟೆಯಲ್ಲಿ ಕೂತ ರೈತರು ಬಿಜೆಪಿ-ಕೆಜೆಪಿ ಬಲಾಬಲದ ಚರ್ಚೆಯಲ್ಲಿ ತೊಡಗಿದ್ದರು. ಗೋಲಿಬಾರ್‌ನಲ್ಲಿ ಸಾವಿಗೀಡಾದ ಬಸಪ್ಪ ಲಕ್ಕುಂಡಿ ಮತ್ತು ಈರಪ್ಪ ಕಡ್ಲಿಕೊಪ್ಪನವರಿಗೆ ನಿರ್ಮಿಸಲಾಗಿರುವ ಹುತಾತ್ಮ ಸ್ಮಾರಕಗಳು ಇಂತಹ ಚರ್ಚೆಗಳಿಗೆ ಮೂಕಸಾಕ್ಷಿಯಾಗಿವೆ.
ಮಲಪ್ರಭೆಗೆ ಕಳಸಾ-ಬಂಡೂರಿ ಹಳ್ಳಗಳನ್ನು ಜೋಡಿಸುವ ಮಹದಾಯಿ ಯೋಜನೆಗಾಗಿ ನಡೆದ ಚಳವಳಿ ಮತ್ತೊಮ್ಮೆ ಈ ಭಾಗದ ರೈತರಲ್ಲಿ ಹುರುಪು ತುಂಬಿತ್ತು.  ಇದಕ್ಕಾಗಿಯೇ ರಚನೆಗೊಂಡ ಯುವ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷರಾಗಿದ್ದ ಬಿ.ವಿ.ಸೋಮಾಪುರ 2004ರಲ್ಲಿ ಜೆಡಿ (ಎಸ್)ಟಿಕೆಟ್‌ನಲ್ಲಿ ಸ್ಪರ್ಧಿಸಿ 1300 ಮತಪಡೆದು ಸೋತುಹೋದರು. ಅದರ ನಂತರ ಯುವರೈತ ಮುಖಂಡ ವಿಜಯ ಕುಲಕರ್ಣಿ ಚಳವಳಿಯನ್ನು ಮುನ್ನಡೆಸುತ್ತಾ ಬಂದಿದ್ದಾರೆ. `ನರಗುಂದದ ಮಣ್ಣಿನಲ್ಲಿಯೇ ಹೋರಾಟದ ಕೆಚ್ಚು ಇದ್ದರೂ ರಾಜಕೀಯದ ಕೈಗೆ ಸಿಕ್ಕಿ ದಾರಿತಪ್ಪುತ್ತಿದೆ' ಎನ್ನುವುದು ಕುಲಕರ್ಣಿಯವರ ವಿಷಾದದ ಮಾತು. ರಾಜ್ಯಜಲ ಸಂಪನ್ಮೂಲ ಸಚಿವರಾಗಿರುವ ಬಸವರಾಜ ಬೊಮ್ಮಾಯಿ  ಚಳವಳಿಯನ್ನು ಬಿಜೆಪಿ ಕಡೆ ಎಳೆದೊಯ್ಯುವ ಪ್ರಯತ್ನವನ್ನು ಮಾಡಿದ್ದರೂ ಅವರು ತೋರಿದ ಆಸಕ್ತಿಯಿಂದಾಗಿ ಒಂದಷ್ಟು ಕಾಮಗಾರಿ ನಡೆದಿದೆ. ಸದ್ಯಕ್ಕೆ ಕೇಂದ್ರ ಸರ್ಕಾರ ವಿವಾದದ ಇತ್ಯರ್ಥಕ್ಕೆ ನ್ಯಾಯಮಂಡಳಿಯನ್ನು ರಚಿಸಿರುವ ಕಾರಣ ಚಳವಳಿ ಕಾವು ಕಳೆದುಕೊಂಡಿದೆ.
`ಸಾಲಮನ್ನಾ, ಪುಕ್ಕಟೆ ವಿದ್ಯುತ್, ನೀರಿನ ಕರ ರದ್ದತಿ ಮೊದಲಾದ ಬೇಡಿಕೆಗಳು ಈಗ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಉದಾರ ಆರ್ಥಿಕ ನೀತಿಯ ಫಲವಾದ ಭೂಸುಧಾರಣೆ, ಎಪಿಎಂಸಿ, ಭೂಸ್ವಾಧೀನ, ಬೀಜ ಮತ್ತು ಪೇಟೆಂಟ್ ಕಾನೂನುಗಳಿಗೆ ಆಗಿರುವ ತಿದ್ದುಪಡಿಗಳು ರೈತನ ಬದುಕಲ್ಲಿ ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿವೆ' ಎನ್ನುತ್ತಾರೆ ನರಗುಂದ ರೈತ ಬಂಡಾಯದ ರೂವಾರಿಗಳಲ್ಲೊಬ್ಬರಾದ ಬಿ.ಎಸ್.ಸೊಪ್ಪಿನ್. ಇತ್ತೀಚೆಗೆ ಈ ಚಳವಳಿಯ ಇತಿಹಾಸವನ್ನು ದಾಖಲಿಸುವ ಪುಸ್ತಕವೊಂದನ್ನೂ ಇವರು ಬರೆದಿದ್ದಾರೆ. `ಬದಲಾಗುತ್ತಿರುವ ಕಾಲದ ಅವಶ್ಯಕತೆಗಳಿಗೆ ತಕ್ಕಂತೆ ಚಳವಳಿಯನ್ನು ಪುನರ್‌ರೂಪಿಸಲು ಸಾಧ್ಯವಾದರೆ  ಈಗಲೂ ರೈತ ಮತಬ್ಯಾಂಕ್ ರಾಜಕೀಯ ಶಕ್ತಿಯಾಗಿ ಬೆಳೆಯಲು ಸಾಧ್ಯ' ಎನ್ನುವ ವಿಶ್ವಾಸ ಸೊಪ್ಪಿನ್ ಅವರದ್ದು. ಆದರೆ ವಿಧಾನಸೌಧ ಪ್ರವೇಶಿಸುವ ಧಾವಂತದಲ್ಲಿರುವ ರೈತ ನಾಯಕರಿಗೆ ಚಳವಳಿಯನ್ನು ಕಟ್ಟಲು ಬೇಕಾದ ತಾಳ್ಮೆ ಮತ್ತು ವಿಶ್ವಾಸ ಇದ್ದ ಹಾಗಿಲ್ಲ.

Thursday, April 18, 2013

ಸುಂಟರಗಾಳಿಯೊಂದು ಬೀಸಿ ಹೋದ ಮೇಲೆ...

ಗದಗ: ಸುಂಟರಗಾಳಿಯೊಂದು ಬೀಸಿಹೋದ ನಂತರದ ಸ್ಥಿತಿ ಗದಗ ಜಿಲ್ಲೆಯಲ್ಲಿದೆ. `ಹುಲಕೋಟಿಯ ಹುಲಿ' ಮತ್ತು ಅದರ `ಮರಿ'ಗಳು ಸುಮಾರು ಮೂರು-ನಾಲ್ಕು ದಶಕಗಳಿಂದ ಕಷ್ಟಪಟ್ಟು ಕಟ್ಟಿಕೊಂಡಿದ್ದ ರಾಜಕೀಯ ಸಾಮ್ರಾಜ್ಯವನ್ನು ಬಳ್ಳಾರಿ
ಕಡೆಯಿಂದ ಬಂದ ಶ್ರಿರಾಮುಲು ಎಂಬ ಸುಂಟರಗಾಳಿ ಕಳೆದ ಚುನಾವಣೆಯಲ್ಲಿ ಕೆಡವಿಹಾಕಿತ್ತು. ಇಂದಿನ ರಾಜಕೀಯದಲ್ಲಿ ಅಪರೂಪವಾಗಿರುವ ಅಭಿವೃದ್ಧಿಯ ಮುನ್ನೋಟ ಮತ್ತು ಸ್ವಚ್ಚ ರಾಜಕಾರಣದ ಹಂಬಲವನ್ನು ಹೊಂದಿರುವ ಎಚ್.ಕೆ.ಪಾಟೀಲ್ ಮತ್ತು ಡಿ.ಆರ್.ಪಾಟೀಲ್ ಎಂಬ ಸೋದರರು  ರಾಮುಲು ಅವರ `ಕೊಡುಗೈ ದಾನಿ' ವ್ಯಕ್ತಿತ್ವದ ಎದುರು ನಿಸ್ಸಹಾಯಕರಾಗಿದ್ದರು.  ಹಣದ ಬಲದಿಂದ ನೋಡನೋಡುತ್ತಿದ್ದಂತೆಯೇ ರಾಮುಲು ಪ್ರತಿಸಾಮ್ರಾಜ್ಯವನ್ನು ಕಟ್ಟಿ ನಿಲ್ಲಿಸಿದ್ದರು.
ಗತವೈಭವದ ಆ ದಿನಗಳನ್ನು ಮೆಲುಕುಹಾಕುತ್ತಾ ವಿರಹಿಗಳಂತೆ ನಿಟ್ಟುಸಿರು ಬಿಡುತ್ತಿರುವ ಹಳೆಯ ಫಲಾನುಭವಿಗಳನ್ನು ಈಗಲೂ ಗದಗ ನಗರದ ಬೀದಿಗಳಲ್ಲಿ ಕಾಣಬಹುದು. ಕ್ರಿಕೆಟ್, ನಾಟಕ, ಮದುವೆ, ಸಾವು ಎಲ್ಲವೂ ದುಡ್ಡು ಹಂಚಲಿಕ್ಕೆ ಒಂದು ನೆಪವಾಗಿತ್ತು ಅಷ್ಟೆ. ಈ ಊರಲ್ಲಿ ಇಂತಹ ರಾಜಕೀಯ ಸಂಸ್ಕೃತಿಗೆ ಅವಕಾಶ ಇರಲಾರದು ಎಂದು ತಿಳಿದುಕೊಂಡವರೆಲ್ಲ ಮೂಗಿನ ಮೇಲೆ ಬೆರಳಿಡುವ ರೀತಿಯಲ್ಲಿ ಜನ ಕಿಂದರಿಜೋಗಿಯ ಹಿಂದೆ ಹೋಗಿದ್ದ ಮೂಷಕಸಂಕುಲದಂತೆ ಕೊಚ್ಚಿಕೊಂಡು ಹೋಗಿದ್ದರು.
ಎಚ್.ಕೆ.ಪಾಟೀಲರ ಸಹಕಾರ ತತ್ವದ ಪಾಠ, ಡಿ.ಆರ್.ಪಾಟೀಲರ ಗ್ರಾಮಸ್ವರಾಜ್ಯದ ಬಗೆಗಿನ ಬೋಧನೆಯನ್ನು ಕೇಳುವವರೇ ಇಲ್ಲದಂತಾಗಿತ್ತು. ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ್ ಪರಾಭವ ಹೊಂದಿದ್ದರು. ಇವೆಲ್ಲವೂ ಈಗ ಹಳೆಯ ಕತೆ.  ಐದೇ ವರ್ಷಗಳ ಅವಧಿಯಲ್ಲಿ ರಾಮುಲು ಎಂಬ ಸುಂಟರಗಾಳಿ ಬೀಸಿ ಬಂದಷ್ಟೆ ವೇಗವಾಗಿ ಶಕ್ತಿ ಕಳೆದುಕೊಂಡು ದುರ್ಬಲವಾಗಿ ಹುಟ್ಟಿದೂರಿನಲ್ಲಿಯೇ  ಅಸ್ತಿತ್ವ ಉಳಿಸಿಕೊಳ್ಳಲು ಒದ್ದಾಡುತ್ತಿದೆ.  ಗದಗ ಜಿಲ್ಲೆಯ ಐದು ವರ್ಷಗಳ ಕಿರು ಅವಧಿಯಲ್ಲಿ ನಡೆದ ಕ್ಷಿಪ್ರಗತಿಯ ರಾಜಕೀಯದ ಏಳು-ಬೀಳುಗಳು ರಾಜಕೀಯ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಒಳ್ಳೆಯ ವಸ್ತು.
`ನಿಮ್ಮ ತಪ್ಪು ಇರಲಿಲ್ಲವೇ?' ಎಂದು ಚುನಾವಣಾ ಪ್ರಚಾರದಲ್ಲಿದ್ದ ಎಚ್.ಕೆ.ಪಾಟೀಲರನ್ನು  ಕೇಳಿದೆ. ಅವರು ಎಂದಿನಂತೆ ನಕ್ಕು ಸುಮ್ಮನಾದರು. ಇದೇ ಪ್ರಶ್ನೆಯನ್ನು ಜನರನ್ನು ಕೇಳಿದೆ. `ಮನುಷ್ಯ ಒಳ್ಳೆಯವರು, ಪ್ರಾಮಾಣಿಕರು, ಬುದ್ಧಿವಂತರು. ಆದರೆ ಸಾಮಾನ್ಯ ಮನುಷ್ಯರ ಜತೆ ಬೆರೆಯುತ್ತಿರಲಿಲ್ಲ. ಅವರದ್ದೇನಿದ್ದರೂ ಹುಬ್ಬಳ್ಳಿ ಕ್ಯಾಂಪ್. ಪಾಟೀಲ್ ಸೋದರರು ಮತ್ತು ರಾಮುಲು ಅವರ ವ್ಯಕ್ತಿತ್ವಗಳ ನಡುವೆ ರಾತ್ರಿಹಗಲುಗಳ ಅಂತರ ಇದೆ. ಸೋದರರಿಬ್ಬರದ್ದೂ ಥಟ್ಟನೆ ಆಕರ್ಷಿಸುವ ವ್ಯಕ್ತಿತ್ವ ಅಲ್ಲ, ನಿಧಾನವಾಗಿ ಅರ್ಥಮಾಡಿಕೊಳ್ಳುವಂತಹದ್ದು. ಹಿರಿಯರಿಗೆ ಇದು ಗೊತ್ತಿತ್ತು, ಅಷ್ಟೊಂದು ವ್ಯವಧಾನ ಇಲ್ಲದ ಕಿರಿಯರು ಥಳುಕುಬಳುಕಿನ ರಾಜಕೀಯದ ಹಿಂದೆ ಹೋಗಿಬಿಟ್ಟರು. ಸಂಕೋಚ ಇಲ್ಲದೆ  ಎಲ್ಲರ ಜತೆ ಬೆರೆಯುವ  `ಹಳ್ಳಿಹೈದ' ರಾಮುಲು `ನಮ್ಮವನು' ಎಂದು ಅನಿಸಿದ್ದು ಕೂಡಾ ಪಾಟೀಲ್ ಸೋಲಿಗೆ ಕಾರಣ ಇರಬಹುದು' ಎಂದರು ವಕೀಲರೊಬ್ಬರು.
ಬಹುಶಃ ಎಚ್‌ಕೆ ಬದಲಿಗೆ ಡಿ.ಆರ್. ಪಾಟೀಲರು ಸ್ಪರ್ಧಿಸಿದ್ದರೆ ಗೆದ್ದುಬಿಡುತ್ತಿದ್ದರೋ ಏನೋ ಎಂದು ಹೇಳುವವರೂ ಇದ್ದಾರೆ. ಮೂರು ಬಾರಿ ತಾನು ಪ್ರತಿನಿಧಿಸಿದ್ದ ಕ್ಷೇತ್ರವನ್ನು ಮರುಮಾತಿಲ್ಲದೆ ತಮ್ಮನಿಗೆ ಕೊಟ್ಟುಬಿಟ್ಟವರು ಡಿ.ಆರ್.ಪಾಟೀಲರು. ತನ್ನ ಸ್ಥಾನವನ್ನು ಬಿಟ್ಟುಕೊಟ್ಟಿರುವುದು ಮಾತ್ರ ಅಲ್ಲ ತಮ್ಮನ ಗೆಲುವಿಗಾಗಿ ರಾತ್ರಿಹಗಲು ಶ್ರಮಿಸುತ್ತಿರುವವರು ಡಿ.ಆರ್.ಪಾಟೀಲ್. ಭಾರತದ ರಾಜಕಾರಣದಲ್ಲಿ ಇಂತಹ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ.
ರಾಜಕಾರಣಿಗಳು ಸೋಲಿನಿಂದ ಪಾಠವನ್ನು ಕಲಿಯುವುದು ಕಡಿಮೆ. ಆದರೆ ಎಚ್.ಕೆ.ಪಾಟೀಲ್ ಸ್ವಲ್ಪ ಭಿನ್ನ ರಾಜಕಾರಣಿ. ತನ್ನ ದೋಷವನ್ನು ಎತ್ತಿ ತೋರಿಸಿದ ಚುನಾವಣಾ ಫಲಿತಾಂಶದಿಂದ ಪಾಠ ಕಲಿತ ಎಚ್‌ಕೆ ಜನರನ್ನು ನೇರವಾಗಿ ಮುಟ್ಟಬಲ್ಲಂತಹ ದಾರಿಯ ಹುಡುಕಾಟದಲ್ಲಿದ್ದಾಗ ಅವರಿಗೆ ತೋಚಿದ್ದು ಶುದ್ಧ ಕುಡಿಯುವ ನೀರು ಪೂರೈಕೆಯ ಯೋಜನೆ.  ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆ ಗದಗ. ಗದಗ ನಗರದಲ್ಲಿಯೇ 20-25 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯಲಿಕ್ಕೆ ನೀರು ಕೊಟ್ಟರಷ್ಟೇ ಸಾಕು ಎನ್ನುವ ವಾತಾವರಣ ಇದೆ. ಇನ್ನು ಶುದ್ಧ ಕುಡಿಯುವ ನೀರನ್ನು ಕೊಡುವವರು ಯಾರು? ತಮ್ಮ ಆಸ್ಪತ್ರೆಯಲ್ಲಿದ್ದ ಇಂತಹದ್ದೊಂದು ಘಟಕವನ್ನು ನೋಡಿದ ಪಾಟೀಲರಿಗೆ ಇದನ್ನು ಸಾರ್ವಜನಿಕರಿಗಾಗಿಯೂ ನಿರ್ಮಿಸಿದರೆ ಹೇಗೆ ಎನ್ನುವ ಯೋಚನೆ ಬಂತು. ಇದರ ಪರಿಣಾಮವಾಗಿ ಗದಗ ಮತ್ತು ಸುತ್ತಮುತ್ತಲಿನ 101 ಕಡೆಗಳಲ್ಲಿ  ದಿನದ 24 ಗಂಟೆಗಳ ಕಾಲ `ಶುದ್ಧ ಜೀವ ಜಲ' ನೀಡುವ ಘಟಕಗಳನ್ನು ಸ್ಥಾಪಿಸಿದ್ದಾರೆ.
`ಶುದ್ಧ ಜೀವ ಜಲ' ಘಟಕದ ಮುಂದೆ ನೀರಿಗೆ ನಿಂತ ಜನಕೊಳವೆಬಾವಿ ನೀರನ್ನೇ ಆಧುನಿಕ ತಂತ್ರಜ್ಞಾನದ ಮೂಲಕ ಏಳುಹಂತಗಳಲ್ಲಿ ಶುದ್ಧೀಕರಿಸಿ ಹತ್ತು ಪೈಸೆಗೆ ಹತ್ತು ಲೀಟರ್‌ನಂತೆ ನೀಡಲಾಗುತ್ತಿದೆ. ಒಂದೊಂದು ಘಟಕಗಳಲ್ಲಿಯೂ ಹತ್ತರಿಂದ ಹದಿನೈದು ಸಾವಿರ ಲೀಟರ್ ನೀರನ್ನು ಜನ ಕೊಂಡೊಯ್ಯುತ್ತಾರೆ. ರಾಜಕೀಯದಲ್ಲಿ ವಿರೋಧಿಗಳಿಗೆ ನೀರು ಕುಡಿಸಿ ಗೆಲ್ಲುವುದುಂಟು. ಎಚ್.ಕೆ. ಪಾಟೀಲ್ ತಾನು ನಂಬಿದ ಜನರಿಗೆ ನೀರು ಕುಡಿಸಿ ಗೆಲ್ಲಲು ಹೊರಟಿದ್ದಾರೆ. `ಪಾಟೀಲರು ಸೋಲದೆ ಇದ್ದಿದ್ದರೆ ಇಂತಹದ್ದೊಂದು ಯೋಜನೆ ಬರುತ್ತಿತ್ತೊ ಇಲ್ಲವೋ ಗೊತ್ತಿಲ್ಲ. ಈ ದೃಷ್ಟಿಯಿಂದ ಅವರು ಸೋತಿದ್ದು ಒಳ್ಳೆಯದೇ ಆಯಿತು' ಎಂದ ಎಚ್‌ಕೆ ಅಭಿಮಾನಿಯೊಬ್ಬ ಮುಗುಳ್ನಗುತ್ತಾ.
ಗದಗ ಕ್ಷೇತ್ರ ಮಾತ್ರವಲ್ಲ ಇಡೀ ಜಿಲ್ಲೆಯ ರಾಜಕೀಯದ ಗಾಳಿ ದಿಕ್ಕು ಬದಲಾಗಿರುವ ಸೂಚನೆಗಳು ಹೋದಲ್ಲಿ ಬಂದಲ್ಲಿ ಸಿಗುತ್ತವೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರೋಣ ಜಿಲ್ಲೆಯ ಗಜೇಂದ್ರಗಡ ಮತ್ತು ನರಗುಂದ ಜಿಲ್ಲೆಯನ್ನು ಹೊರತುಪಡಿಸಿದರೆ ಉಳಿದೆಲ್ಲೆಡೆ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಗದಗ-ಬೆಟಗೇರಿಯ 35 ಸ್ಥಾನಗಳಲ್ಲಿ 20, ಮುಳಗುಂದದ ಎಲ್ಲ 16 ಸ್ಥಾನಗಳು ಕಾಂಗ್ರೆಸ್ ಪಾಲಾಗಿವೆ. ರಾಮುಲು ಗಾಳಿಯ ಬಲದಿಂದಾಗಿ ಗದಗ ಕ್ಷೇತ್ರದಲ್ಲಿ ಗೆದ್ದ ಬಿಜೆಪಿಯ ಶ್ರಿಶೈಲಪ್ಪ ಬಿದರೂರು ಈಗ ಗಾಳಿ ಇಲ್ಲದ ಬಲೂನ್ ಆಗಿದ್ದಾರೆ. ಕೆಜೆಪಿಗೆ ಹೋಗಿಯೇ ಬಿಟ್ಟರು ಎಂದು ಹೇಳಲಾಗುತ್ತಿದ್ದ ಬಿದರೂರು ಕೊನೆಗೂ ಬಿಜೆಪಿಯಲ್ಲಿಯೇ ಉಳಿದು ಅಭ್ಯರ್ಥಿಯಾಗಿದ್ದಾರೆ. ಅವರು ಆ ಕಡೆ ಹೋದರೆ ತಮಗೆ ಟಿಕೆಟ್ ಖಂಡಿತ ಎಂದು ಕಾಯುತ್ತಿದ್ದ ಎಸ್.ಬಿ.ಸಂಕಣ್ಣವರ ಈಗ ಅನಿವಾರ್ಯವಾಗಿ ಕೆಜೆಪಿ ಅಭ್ಯರ್ಥಿ. ಇವರ ಜತೆಗೆ ಬಿಎಸ್‌ಆರ್ ಕಾಂಗ್ರೆಸ್‌ನ ಅನಿಲ್ ಮೆಣಸಿನಕಾಯಿ ಕಣದಲ್ಲಿದ್ದಾರೆ. ಇವರು ಮೂವರು ಲಿಂಗಾಯತ ಪಂಚಮಸಾಲಿ ಬಣಕ್ಕೆ ಸೇರಿದವರಾಗಿರುವುದು ಜಾತಿ ಲೆಕ್ಕಾಚಾರ ಕೂಡಾ ಪಾಟೀಲರ ಪರವಾಗಿರುವಂತೆ ಮಾಡಿದೆ. ಜೆಡಿಎಸ್ ಅಭ್ಯರ್ಥಿಯ ಸುಳಿವೇ ಇಲ್ಲ.
ಹಾವೇರಿ ಜಿಲ್ಲೆ ಬಿಟ್ಟರೆ ಯಡಿಯೂರಪ್ಪನವರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದು ಗದಗ ಜಿಲ್ಲೆಯ ಮೇಲೆ. ಜಗದೀಶ್ ಶೆಟ್ಟರ್ ಅವರಿಗೆ ವೈಯಕ್ತಿಕವಾಗಿ ಸಮೀಪದವರಾಗಿರುವ ಕಳಕಪ್ಪ ಬಂಡಿ (ರೋಣ) ಅವರನ್ನು ಹೊರತುಪಡಿಸಿದರೆ ಉಳಿದ ಮೂವರು ಶಾಸಕರಾದ ಶ್ರಿಶೈಲಪ್ಪ ಬಿದರೂರು (ಗದಗ), ಸಿ.ಸಿ. ಪಾಟೀಲ್ (ನರಗುಂದ) ಮತ್ತು ರಾಮಣ್ಣ ಲಮಾಣಿ (ಶಿರಹಟ್ಟಿ) ಬಹಿರಂಗವಾಗಿಯೇ ಯಡಿಯೂರಪ್ಪನವರ ಜತೆ ಗುರುತಿಸಿಕೊಂಡಿದ್ದರು. ಕೊನೆಗೆ ಮೂವರೂ ಬಿಜೆಪಿಯಲ್ಲಿಯೇ ಉಳಿದರು. ಇದರಿಂದಾಗಿ ಕೆಜೆಪಿ ಕೂಡಾ ಇಲ್ಲಿ ದುರ್ಬಲ. ಸದ್ಯಕ್ಕೆ ಎಲ್ಲ ರಾಜಕೀಯ ಅನುಕೂಲತೆಗಳು ಪಾಟೀಲ್ ಪರವಾಗಿಯೇ ಇದೆ. ಇದನ್ನು ಕಂಡ ರಾಜಕೀಯ ವಿರೋಧಿಗಳು ಪಾಟೀಲ್ ವಿರುದ್ಧ ಏಕ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆಯೂ ಕೊನೆಗಳಿಗೆಯಲ್ಲಿ ಪ್ರಯತ್ನ ನಡೆಸಿದ್ದರು. ಇಂತಹ ಯಾವ ಪ್ರಯತ್ನವೂ ಈ ಬಾರಿ ಎಚ್ಕೆಯವರಿಗೆ ಇರುವ ಅವಕಾಶವನ್ನು ಕಿತ್ತುಕೊಳ್ಳಲಾರದೇನೋ? ಚುನಾವಣಾ ರಾಜಕೀಯವೇನೇ ಇರಲಿ, ಆದರೆ ಎಚ್,ಕೆ. ಪಾಟೀಲ್ ಅವರಂತಹ ರಾಜಕಾರಣಿಗಳು  ವಿಧಾನಸಭೆಯಲ್ಲಿ ಇರಬೇಕಾಗಿರುವುದು ನ್ಯಾಯ.
ಹುಲಕೋಟಿ ಮಾದರಿ
ಪಾಟೀಲ್ ಸೋದರರಲ್ಲಿ ಬಹಳಷ್ಟು ಕಡಿಮೆ ರಾಜಕಾರಣಿಗಳಲ್ಲಿರುವ ಅಭಿವೃದ್ಧಿಯ ಮುನ್ನೋಟ ಇದೆ. ಇದು ಕುಟುಂಬದ ಹಿರಿಯ ಕೆ.ಎಚ್.ಪಾಟೀಲರಿಂದ ವಂಶಪರಂಪರೆಯಾಗಿ ಬಂದ ಗುಣ. ಈ ಮುನ್ನೋಟಕ್ಕೆ ಸಾಕ್ಷಿ ಹುಲಕೋಟಿ.  ಈ ಊರಿನ ಸುಮಾರು 36 ಎಕರೆ ಜಮೀನಿನಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ವಸತಿ ಶಾಲೆ, 50 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ, ಪ್ರಕೃತಿ ಚಿಕಿತ್ಸೆಯ ಘಟಕ ಮತ್ತು ಕೃಷಿ ವಿಕಾಸ ಕೇಂದ್ರಗಳಿವೆ. ಯುವ ಉದ್ಯಮಶೀಲರಿಗಾಗಿಯೇ ನಿರ್ಮಿಸಲಾಗಿರುವ ನೂರು ಉದ್ಯಮಗಳ ಕೈಗಾರಿಕಾ ಕೇಂದ್ರ ಇದೆ. ಎಲ್ಲವೂ ಸಹಕಾರ ತತ್ವದಡಿಯಲ್ಲಿಯೇ ಸ್ಥಾಪಿಸಲಾಗಿದೆ.
ಸುಮಾರು ಹತ್ತು ಸಾವಿರ ಜನಸಂಖ್ಯೆಯ ಪುಟ್ಟ ಊರಿನಲ್ಲಿ ಗದಗ ನಗರದಲ್ಲಿ ಇಲ್ಲದ ಒಳಚರಂಡಿ ವ್ಯವಸ್ಥೆ ಇದೆ. ಎಲ್ಲರಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಇದೆ. ಇಲ್ಲಿನ ಸರ್ವಜಾತಿಗಳ ಸಾರ್ವಜನಿಕ ಸ್ಮಶಾನವನ್ನು ಸುಂದರ ಉದ್ಯಾನದ ರೀತಿ ನಿರ್ಮಿಸಿ ನಿರ್ವಹಿಸಲಾಗುತ್ತಿದೆ. ಇಲ್ಲಿನ ವಸತಿ ಶಾಲೆಯಲ್ಲಿ ಕಲಿತ ಕನಿಷ್ಠ 25 ವಿದ್ಯಾರ್ಥಿಗಳು ವಿದೇಶಗಳಲ್ಲಿ ನೆಲೆಸಿದ್ದಾರೆ.
ಗ್ರಾಮೀಣ ಅಭಿವೃದ್ಧಿಗೆ ಹುಲಕೋಟಿಗಿಂತ ಪರಿಪೂರ್ಣವಾದ ಇನ್ನೊಂದು ಮಾದರಿ ಇಡೀ ದೇಶದಲ್ಲಿ ಇರಲಾರದೇನೋ? ಆದರೆ ಪಾಟೀಲ್ ಸೋದರರು ಇದನ್ನು ಕನಿಷ್ಠ ಗದಗ ಜಿಲ್ಲೆಗಾದರೂ  ಯಾಕೆ ವಿಸ್ತರಿಸಲಿಲ್ಲವೋ ಗೊತ್ತಿಲ್ಲ. ಬಹಳಷ್ಟು ಮತದಾರರು ಕೂಡಾ ಕೇಳುವ ಪ್ರಶ್ನೆ ಇದು.

Wednesday, April 17, 2013

ಹಾವೇರಿಯಲ್ಲಿ ಕಾವೇರಿದ ಚುನಾವಣಾ ಕದನ

ಹಾವೇರಿ: ಭಾರತೀಯ ಜನತಾ ಪಕ್ಷದ ಆಳ್ವಿಕೆಯ ಐದು ವರ್ಷಗಳ ಅವಧಿಯಲ್ಲಿ ಸದಾ ಸುದ್ದಿಯಲ್ಲಿದ್ದ ಜಿಲ್ಲೆ ಹಾವೇರಿ. ಅಧಿಕಾರಕ್ಕೆ ಬಂದ ಪ್ರಾರಂಭದ ದಿನಗಳ ವಿಜಯೋತ್ಸಾಹಕ್ಕೆ `ದೃಷ್ಟಿಬೊಟ್ಟು' ಇಟ್ಟಂತೆ ನಡೆದ ರೈತರ ಮೇಲಿನ ಗೋಲಿಬಾರ್, ಬಿಜೆಪಿ ತೊರೆದು ಬಂದ ಬಿ.ಎಸ್.ಯಡಿಯೂರಪ್ಪನವರ ಶಕ್ತಿ ಪ್ರದರ್ಶನದ ಸಮಾವೇಶ, ಒಂದು ಜಿಲ್ಲೆಯ
ಬಹುಪಾಲು ಬಿಜೆಪಿ ಶಾಸಕರ ಪಕ್ಷಾಂತರ... ಎಲ್ಲವೂ ನಡೆದದ್ದು ಈ ಜಿಲ್ಲೆಯಲ್ಲಿ.
ಕಳೆದ ಚುನಾವಣೆಯಲ್ಲಿ ಇಲ್ಲಿನ ಆರರಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಅವರಲ್ಲಿ ನಾಲ್ಕು ಮಂದಿಯ ಜತೆಗೆ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಿವರಾಜ್ ಸಜ್ಜನರ್ ಕೂಡಾ ಈಗ ಕೆಜೆಪಿ ಅಭ್ಯರ್ಥಿಗಳು. ಯಡಿಯೂರಪ್ಪ  ಸ್ಪರ್ಧಿಸದೆ ಇದ್ದರೂ ಈ ಜಿಲ್ಲೆ ಅವರ ಪಾಲಿನ ಪ್ರತಿಷ್ಠೆಯ ಕಣ. ಇಲ್ಲಿ ಅವರು ಗೆದ್ದರೆ ಕೆಜೆಪಿ ಚುನಾವಣೆಯನ್ನು ಅರ್ಧ ಗೆದ್ದಂತೆ.
ತನ್ನನ್ನು ನಂಬಿಕೊಂಡು ಬೆನ್ನಹಿಂದೆ ಬಂದ ಐದು ಮಂದಿ ಬೆಂಬಲಿಗರನ್ನು ಇಲ್ಲಿ ಗೆಲ್ಲಿಸುವ ಜತೆಯಲ್ಲಿ ಕೊನೆಕ್ಷಣದಲ್ಲಿ ಕೈಕೊಟ್ಟ `ನೀಲಿ ಕಣ್ಣಿನ ಹುಡುಗ' ಬಸವರಾಜ್ ಬೊಮ್ಮಾಯಿ ಅವರನ್ನು ಸೋಲಿಸುವ ಸವಾಲು ಯಡಿಯೂರಪ್ಪನವರ ಮುಂದಿದೆ. ಇದಕ್ಕಾಗಿ ಜಾತಿ,ದುಡ್ಡು, ಕಣ್ಣೀರು ಎಲ್ಲವೂ ಬಳಕೆಯಾಗುತ್ತಿದೆ.  ಸಾದರ ಜಾತಿಗೆ ಸೇರಿದ ಬೊಮ್ಮಾಯಿಯವರಿಗೆ ಇದಿರಾಗಿ ಸಂಖ್ಯೆಯಲ್ಲಿ ಹೆಚ್ಚಿರುವ ಮತ್ತು ಸಂಘಟನಾತ್ಮಕವಾಗಿ ಬಲವಾಗಿರುವ ಪಂಚಮಸಾಲಿ ಬಣಕ್ಕೆ ಸೇರಿರುವ ಬಾಪುಗೌಡ ಪಾಟೀಲರನ್ನು ಶಿಗ್ಗಾವಿ ಕ್ಷೇತ್ರದಲ್ಲಿ ಯಡಿಯೂರಪ್ಪ ಅಖಾಡಕ್ಕಿಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕಣ್ಣುಮುಚ್ಚಿ ಬೊಮ್ಮಾಯಿ ಅವರನ್ನು ಬೆಂಬಲಿಸಿದ್ದ ಪಂಚಮಸಾಲಿ ಸಮುದಾಯ ಈಗ ಕಣ್ಣುಬಿಡುತ್ತಿರುವುದಕ್ಕೆ ಅಲ್ಲಲ್ಲಿ ನಡೆಯುತ್ತಿರುವ ಗುಪ್ತ ಸಭೆಗಳು ಸಾಕ್ಷಿ. `ಇಪ್ಪತ್ತರ ನಂತರ ಎಲ್ಲ ನಿರ್ಧಾರ ಆಗ್ತೈತಿ. ಅಲ್ಲಿಯ ವರೆಗೆ ಸುಮ್ಮನಿರಾಕ ಹೇಳ್ಯಾರೆ, ಅಜ್ಜಾವ್ರ (ಪಂಚಮಸಾಲಿ ಮಠದ ಸ್ವಾಮಿಗಳು) ಹೇಳ್ದಂಗ ಮಾಡ್ತೇವ್ರಿ' ಎನ್ನುವ ಶಿವಾನಂದ ಬಾಗೂರು ಹಿಂದಿನ ದಿನವಷ್ಟೇ ಇಂತಹದ್ದೇ ಗುಪ್ತಸಭೆಯಲ್ಲಿ ಭಾಗವಹಿಸಿ ಬಂದವ.
`ಯಡಿಯೂರಪ್ಪನವರ ಬೆನ್ನಿಗೆ ಬೊಮ್ಮಾಯಿ ಚೂರಿ ಹಾಕಿದರು' ಎನ್ನುವ ಸಾಮಾನ್ಯ ಅಭಿಪ್ರಾಯ ಜನತೆಯಲ್ಲಿದೆ. ಕೆಜೆಪಿ ಸಮಾವೇಶಕ್ಕೆ ಮುನ್ನ ಹಾವೇರಿಯ ಶಿವರಾಜ್ ಸಜ್ಜನರ್ ಮನೆಯಲ್ಲಿ ನಡೆದ `ಟೀ ಪಾರ್ಟಿ'ಯಲ್ಲಿಯೂ ಭಾಗವಹಿಸಿ ಬೆಂಬಲ ಸೂಚಿಸಿದ್ದ ಬೊಮ್ಮಾಯಿ ನಂತರ ಯಾಕೆ ಹಿಂದೆ ಸರಿದರು ಎನ್ನುವುದು ಎಲ್ಲರ ಕುತೂಹಲದ ಪ್ರಶ್ನೆ. ಬಿಜೆಪಿಯಲ್ಲಿಯೇ ಉಳಿದರೂ ಅಲ್ಲಿಯೂ ಇವರೇನು ಸರ್ವಜನಪ್ರಿಯರಲ್ಲ. ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಇದಿರಾಗಿ ಪ್ರತಿಸ್ಪರ್ಧಿಯೊಬ್ಬನನ್ನು ನಿಲ್ಲಿಸಬೇಕೆಂಬ ರಾಜಕೀಯ ಉದ್ದೇಶದಿಂದಲೇ ಯಡಿಯೂರಪ್ಪನವರು  ಬೊಮ್ಮಾಯಿ ಅವರನ್ನು ಬೆಳೆಸಿದ್ದರು. ಇದಕ್ಕಾಗಿಯೇ ಜಲಸಂಪನ್ಮೂಲದಂತಹ ಪ್ರಮುಖ ಖಾತೆಯನ್ನು ವಹಿಸಿಕೊಡುವ ಜತೆಯಲ್ಲಿ ರಾಜಕೀಯ ಬೆಂಬಲವನ್ನು ಅವರಿಗೆ ಧಾರೆಯೆರೆದಿದ್ದರು. ಈ ಹುನ್ನಾರವನ್ನು ಬಲ್ಲ ಶೆಟ್ಟರ್ ಹೃತ್ಪೂರ್ವಕವಾಗಿ ಬೊಮ್ಮಾಯಿ ಗೆಲುವಿಗೆ ಪ್ರಯತ್ನಿಸುತ್ತಾರೆ ಎಂದು ಹೇಳಲಾಗದು.   
ಹಾವೇರಿ ಜಿಲ್ಲೆಯಲ್ಲಿ ಯಡಿಯೂರಪ್ಪನವರ ಸೇನಾಪತಿ ಚನ್ನಬಸಪ್ಪ ಮಹಾಲಿಂಗಪ್ಪ ಉದಾಸಿ. ಬೊಮ್ಮಾಯಿಯವರಂತೆ ಉದಾಸಿಯವರಿಗೂ ಯಡಿಯೂರಪ್ಪನವರು ಪ್ರಮುಖವಾದ ಲೋಕೋಪಯೋಗಿ ಖಾತೆಯನ್ನು ನೀಡಿ ರಾಜಕೀಯವಾಗಿ ಪ್ರೊತ್ಸಾಹ ನೀಡಿದ್ದರು. ಮುಂಬೈ ಕರ್ನಾಟಕದ ಮಟ್ಟಿಗೆ ಉದಾಸಿ-ಬೊಮ್ಮಾಯಿ ಇಬ್ಬರೂ ಯಡಿಯೂರಪ್ಪನವರ ಎಡಗೈ-ಬಲಗೈಗಳಾಗಿದ್ದವರು. ಉದಾಸಿ ವಿಶ್ವಾಸ ಭಂಗಗೊಳಿಸದೆ ಯಡಿಯೂರಪ್ಪನವರ ಜತೆಯಲ್ಲಿಯೇ ಉಳಿದಿದ್ದಾರೆ.
ಪಕ್ಕದ ಬೆಳಗಾವಿ ಜಿಲ್ಲೆಯಲ್ಲಿ ಯಡಿಯೂರಪ್ಪನವರ ಇನ್ನೊಬ್ಬ ಬಂಟ ಉಮೇಶ್ ಕತ್ತಿ ಬಿಜೆಪಿ ಲೋಕಸಭಾ ಸದಸ್ಯನಾದ ತನ್ನ ಸೋದರನ ಕಾರಣಕ್ಕಾಗಿ ಪಕ್ಷದಲ್ಲಿಯೇ ಉಳಿದರೆಂದು ಹೇಳಲಾಗುತ್ತಿದೆ. ಅಂತಹ ಸಂದಿಗ್ಧ ಪರಿಸ್ಥಿತಿಯನ್ನು ಉದಾಸಿಯವರೂ ಎದುರಿಸಿದ್ದಾರೆ. ಆದರೆ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗಿರುವ ಮಗನ ರಾಜಕೀಯ ಭವಿಷ್ಯವನ್ನು ಲೆಕ್ಕಿಸದೆ ಅವರು ಕೆಜೆಪಿ ಜತೆ ಗುರುತಿಸಿಕೊಂಡಿದ್ದಾರೆ.
ಬಿಜೆಪಿ ಈಗಾಗಲೇ ಲೋಕಸಭಾ ಸದಸ್ಯ ಶಿವಕುಮಾರ್ ಉದಾಸಿ ಅವರನ್ನು ಅಮಾನತ್‌ಗೊಳಿಸಿದೆ.ವೈಯಕ್ತಿಕವಾಗಿ ಉದಾಸಿ ಅವರಿಗೆ ತಾವು ಎದುರಿಸುತ್ತಿರುವ ಈ ಚುನಾವಣೆ ಸೆಮಿಫೈನಲ್, ಇನ್ನೊಂದು ವರ್ಷಕ್ಕೆ ಮಗ ಎದುರಿಸಲಿರುವ ಮುಂದಿನ ಲೋಕಸಭಾ ಚುನಾವಣೆಯೇ ಫೈನಲ್. ಈ ಹಿನ್ನೆಲೆಯಲ್ಲಿ ತಮ್ಮ ಹಾಗೂ ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹಾವೇರಿ ಜಿಲ್ಲೆಯಲ್ಲಿ ಕೆಜೆಪಿಯನ್ನು ಗೆಲ್ಲಿಸುವುದು ಉದಾಸಿ ಅವರಿಗೆ ಅನಿವಾರ್ಯ.
ತಾವೂ ಸೇರಿದಂತೆ ನಾಲ್ವರು ಹಾಲಿ ಶಾಸಕರಾದ ನೆಹರೂ ಓಲೇಕಾರ್ (ಹಾವೇರಿ) ಜಿ.ಶಿವಣ್ಣ (ರಾಣೆಬೆನ್ನೂರು), ಮತ್ತು ಸುರೇಶ್‌ಗೌಡ ಪಾಟೀಲ್ (ಬ್ಯಾಡಗಿ) ಕೆಜೆಪಿಯಲ್ಲಿರುವುದು ಉದಾಸಿ ಅವರು ಹೊಂದಿರುವ ಅನುಕೂಲತೆ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಾನಗಲ್, ಬ್ಯಾಡಗಿ ಮತ್ತು ಹಿರೇಕೆರೂರಿನಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವುದು ಕೆಜೆಪಿ.
ಮೂಲತಃ ಜನತಾ ಪರಿವಾರಕ್ಕೆ ಸೇರಿದ್ದ ಉದಾಸಿ ಅವರಿಗೆ ಇದು ಎಂಟನೆ ಚುನಾವಣೆ. ಹಿಂದಿನ ಏಳು ಚುನಾವಣೆಗಳಲ್ಲಿ ಐದರಲ್ಲಿ ಗೆದ್ದಿದ್ದಾರೆ. ಹಿಂದಿನ ಏಳು ಚುನಾವಣೆಗಳಲ್ಲಿಯೂ ಉದಾಸಿ ಅವರಿಗೆ ಪ್ರತಿಸ್ಪರ್ಧಿಯಾಗಿದ್ದವರು ಕಾಂಗ್ರೆಸ್ ಪಕ್ಷದ ಮನೋಹರ್ ತಹಶೀಲ್ದಾರ್. ಈ ಬಾರಿಯೂ ಅವರೇ ಎದುರಾಳಿ. ವಿಚಿತ್ರವೆಂದರೆ ಚುನಾವಣೆಯಲ್ಲಿ ಜಾತಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಹೇಳಲಾಗುತ್ತಿದ್ದರೂ ಇಬ್ಬರು ಅಭ್ಯರ್ಥಿಗಳಿಗೂ ಹೇಳಿಕೊಳ್ಳುವಂತಹ ಜಾತಿ ಬಲ ಇಲ್ಲ. ಉದಾಸಿ ಅವರ ಲಿಂಗಾಯತ ಬಣವಾದ ಬಣಜಿಗರ ಸಂಖ್ಯೆ ಅವರ ಸ್ವಂತ ಕ್ಷೇತ್ರವಾದ ಹಾನಗಲ್‌ನಲ್ಲಿ ಕಡಿಮೆ.
ಹಿಂದುಳಿದ ಬೆಸ್ತ ಜಾತಿಗೆ ಸೇರಿದ ಮನೋಹರ್ ತಹಶೀಲ್ದಾರ್ ಅವರ ಜಾತಿಯವರನ್ನು ದೂರದರ್ಶಕ ಹಿಡಿದುಕೊಂಡು ಹುಡುಕಬೇಕು. ಈ ದೃಷ್ಟಿಯಿಂದ ಹಾನಗಲ್ ಮಟ್ಟಿಗೆ ಚುನಾವಣೆ ಜಾತ್ಯತೀತವಾದುದು. `ಬಿಜೆಪಿಯಲ್ಲಿದ್ದಾಗ ಈ ವೈಶಿಷ್ಟತೆಯ ಲಾಭವನ್ನು ಪಡೆದುಕೊಳ್ಳಲಾಗಿರಲಿಲ್ಲ. ಪ್ರಾರಂಭದಿಂದಲೂ ನನ್ನನ್ನು ಬೆಂಬಲಿಸುತ್ತಾ ಬಂದಿದ್ದ ಮುಸ್ಲಿಂ ಮತದಾರರು ಬಿಜೆಪಿಯಿಂದ ಸ್ಪರ್ಧಿಸಿದ್ದ ಕಳೆದೆರಡು ಚುನಾವಣೆಗಳಲ್ಲಿ ದೂರವಾಗಿದ್ದರು. ಈಗ ಮತ್ತೆ ಹತ್ತಿರವಾಗಿದ್ದಾರೆ. ನಗರಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮುಸ್ಲಿಂ ಕೇರಿಗಳಲ್ಲಿಯೇ ನಮ್ಮ ಅಭ್ಯರ್ಥಿಗಳು ಗೆದ್ದಿರುವುದು ಇದಕ್ಕೆ ಸಾಕ್ಷಿ' ಎನ್ನುತ್ತಾರೆ ಸಿ.ಎಂ.ಉದಾಸಿ.
ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಹುಬ್ಬಳ್ಳಿ ಕೇಂದ್ರ ಸ್ಥಾನವಾಗಿರುವಂತೆ ಕೆಜೆಪಿಗೆ ಹಾವೇರಿ. ಪಕ್ಷದ ರಾಜ್ಯ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಅಭ್ಯರ್ಥಿಗಳ ತವರೂರಾಗಿರುವ ಅವಿಭಜಿತ ಧಾರವಾಡ ಜಿಲ್ಲೆಯ ಚುನಾವಣೆ ಬಿಜೆಪಿ ಪಾಲಿಗೂ ಪ್ರತಿಷ್ಠೆಯ ಪ್ರಶ್ನೆ. ಕೆಜೆಪಿ-ಬಿಜೆಪಿ ನಡುವಿನ ನಿಜವಾದ ರಾಜಕೀಯ ಸಮರಕ್ಕೆ ಹಾವೇರಿ ಜಿಲ್ಲೆ ರಣರಂಗವಾಗಲಿದೆ. ಈ ಎರಡು ಪಕ್ಷಗಳ ಹೊಡೆದಾಟವನ್ನು ದೂರದಿಂದಲೇ ನೋಡುತ್ತಿರುವ  ಕಾಂಗ್ರೆಸ್ ಪಕ್ಷ ಯುದ್ಧಕ್ಕಿಳಿಯದೆ ಯುದ್ಧದ ಲಾಭ ಪಡೆಯುವ ಲೆಕ್ಕಾಚಾರದಲ್ಲಿದೆ.
`ಅತ್ತ ಸಾಯಂಗಿಲ್ಲ, ಇತ್ತ ಬದುಕೊಂಗಿಲ್ಲ...'
ಚುನಾವಣಾ ರಾಜಕೀಯದ ಗದ್ದಲದಲ್ಲಿ ಐದು ವರ್ಷಗಳ ಹಿಂದೆ ರೈತರ ಮೇಲೆ ನಡೆದ ಗೋಲಿಬಾರ್ ಘಟನೆ ಈ ಜಿಲ್ಲೆಯ ಸಾಮಾನ್ಯ ಮತದಾರನ ನೆನೆಪಿನಿಂದಲೂ ಮರೆಯಾಗಿ ಹೋಗಿದೆ. ಮೃತಪಟ್ಟ ಇಬ್ಬರು ರೈತರಾದ ಪುಟ್ಟಪ್ಪ ಹೊನ್ನತ್ತಿ ಮತ್ತು ಸಿದ್ದಲಿಂಗಪ್ಪ ಚೂರಿ ಕುಟುಂಬಗಳ ಸದಸ್ಯರು ಕೂಡಾ `ಸಮಸ್ಯೆ ಏನೂ ಇಲ್ಲಾರಿ, ಆರಾಮವಾಗಿದ್ದೀವಿ' ಎಂದು ಹೇಳುವಷ್ಟು ನಿಶ್ಚಿಂತೆಯಾಗಿದ್ದಾರೆ. ಚುನಾವಣೆಯಲ್ಲಿ ಪ್ರಧಾನ ವಿಷಯವಾಗಿ ರಾಜಕೀಯ ಪಕ್ಷಗಳನ್ನು `ಸತ್ತವರು ರೈತರಲ್ಲ ಗೂಂಡಾಗಳು' ಎಂದು ನಾಲಗೆ ಸಡಿಲಬಿಟ್ಟು ಮಾತನಾಡಿದ್ದ ಹಾವೇರಿ ಶಾಸಕ ನೆಹರೂ ಓಲೇಕಾರ್ ಕೆಜೆಪಿಯಿಂದ  ಮರು ಆಯ್ಕೆ ಬಯಸಿ ಕಣದಲ್ಲಿದ್ದಾರೆ. ಗೋಲಿಬಾರ್ ಘಟನೆಯ ಬಗ್ಗೆ ತನಿಖೆ ನಡೆಸಿದ್ದ ನ್ಯಾಯಮೂರ್ತಿ ಜಗನ್ನಾಥ್ ಶೆಟ್ಟಿ ಆಯೋಗದ ವರದಿ ವಿಧಾನಸೌಧದಲ್ಲಿ ಎಲ್ಲೋ ದೂಳು ತಿನ್ನುತ್ತಾ ಬಿದ್ದಿದೆ.
ಗಾಯಗೊಂಡಿದ್ದ ಹದಿಮೂರು ಮಂದಿ ಮಾತ್ರ ನರಕಯಾತನೆ ಅನುಭವಿಸುತ್ತಿದ್ದಾರೆ. `ಗುಂಡು ಬಿದ್ದು ಸತ್ತ್ ಹೋಗಿದ್ರೆ ಮನಿಮಂದಿಗೆ ಒಂದಿಷ್ಟ್ ರೊಕ್ಕ ಬರ‌್ತಿತ್ತು. ಈಗ ಅತ್ತ ಸಾಯಂಗಿಲ್ಲ, ಇತ್ತ ಬದುಕೊಂಗಿಲ್ಲ ತ್ರಿಸಂಕು ಸ್ಥಿತಿ ಆಗೈತೆ. ಇದರಿಂದ ಪಾರು ಮಾಡಿ' ಎಂದು ಕೈಮುಗಿಯುತ್ತಾನೆ ಆಲದಕಟ್ಟಿಯ ಅಬ್ದುಲ್ ರಜಾಕ್. ಇದೇ ಸ್ಥಿತಿ ಉಳಿದವರದ್ದು. ಗುಂಡು ತಗಲಿದ್ದ ಈತನ ಬಲಗೈ ಸಂಪೂರ್ಣ ನಿಷ್ಕ್ರೀಯವಾಗಿದೆ. ಹಮಾಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ರಜಾಕ್ ಕುಟುಂಬಕ್ಕೆ ಈಗ ನಾಲ್ವರು ಹೆಣ್ಣುಮಕ್ಕಳು ಮಾಡುವ ಕೂಲಿ ಕೆಲಸವೇ ಜೀವನಾಧಾರ. ಇನ್ನೊಬ್ಬ ಗಾಯಾಳು ಹೆಡಿಗ್ಗೊಂಡದ ಮಲ್ಲಪ್ಪ ಬಣಕಾರ್ ಅವರದ್ದೂ ಇದೇ ಸ್ಥಿತಿ. ತೋಳಿಗೆ ಗುಂಡು ತಗಲಿದ ನಂತರ ಬೇಸಾಯ ಮಾಡಲಿಕ್ಕಾಗದೆ ಇದ್ದ ಎರಡು ಎಕರೆ ಹೊಲವನ್ನು ಲಾವಣಿಗೆ ಕೊಟ್ಟಿದ್ದಾರೆ.
`ಮೂರೂ ಹೊತ್ತು ತೋಳು ಹರಿತೈತಿ, ನೋವ್ ಮರ‌್ಯಾಕ್ ಇಂಜಕ್ಷನ್ ಚುಚ್ಚಿಸಿಕೊಂಡು ಜೀವ್ನಾ ಸಾಕಾಗಿಹೋಗೈತಿ' ಎನ್ನುತ್ತಾರೆ ಬಣಕಾರ್.ಪೊಲೀಸರ ಲಾಠಿ ಏಟಿನಿಂದಾಗಿ ಬಲ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿರುವ ನೆಲೋಗಲ್‌ನ ವೀರಭದ್ರ ಬಸವನಗೌಡರಿಗೆ ಆಗಾಗ ತಲೆ ಸುತ್ತುವುದರಿಂದ ಒಬ್ಬಂಟಿಯಾಗಿ ಮನೆಯಿಂದ ಹೊರಗೆ ಕಾಲಿಡುವ ಹಾಗಿಲ್ಲ. ಇವರೂ ಇದ್ದ ಮೂರು ಎಕರೆ ಜಮೀನನ್ನು ಲಾವಣಿಗೆ ಕೊಟ್ಟು ಅದರಿಂದ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಗಾಯಾಳುಗಳಿಗೆಲ್ಲ ಪ್ರಾರಂಭದಲ್ಲಿ 25 ರಿಂದ 50 ಸಾವಿರ ರೂಪಾಯಿ ಕೊಟ್ಟು ಕೈತೊಳೆದುಕೊಂಡ ಸರ್ಕಾರ ಆ ಮೇಲೆ ಇವರ ಕಡೆ ಕಣ್ಣೆತ್ತಿ ನೋಡಿಲ್ಲ.  ನ್ಯಾ.ಜಗನ್ನಾಥ್ ಶೆಟ್ಟಿ ಆಯೋಗ ಶಿಫಾರಸು ಮಾಡಿದಂತೆ ಗಾಯಾಳುಗಳಾಗಿರುವ ತಮಗೆ ತಲಾ ಮೂರು ಲಕ್ಷ ರೂಪಾಯಿ ನೀಡಬೇಕೆಂದು ಕೋರಿ ಕನಿಷ್ಠ ಹತ್ತು ಬಾರಿ ಬೆಂಗಳೂರಿಗೆ ಹೋಗಿ ಅರ್ಜಿ ನೀಡಿ ಬಂದಿದ್ದಾರೆ.
`ಗೋಲಿಬಾರ್ ನಡೆದದ್ದು ಬೀಜ ಮತ್ತು ಗೊಬ್ಬರಕ್ಕಾಗಿ ರೈತರು ನಡೆಸಿದ ಪ್ರತಿಭಟನೆಯನ್ನು ಹತ್ತಿಕ್ಕಲು. ಆ ಸಮಸ್ಯೆ ಈಗಲೂ ಇದೆ. ಈ ಜಿಲ್ಲೆಯಲ್ಲಿ ತುಂಗಾಭದ್ರಾ, ವರದಾ, ಕುಮದ್ವತಿ ಮತ್ತು ಧರ್ಮಾ ನದಿಗಳು ಹರಿಯುತ್ತಿದ್ದರೂ ನೀರಾವರಿ ಯೋಜನೆಗಳೇ ಇಲ್ಲ. ಏನಿದ್ದರೂ ಪಂಪ್‌ಸೆಟ್ ನೀರಾವರಿ. ಇವೆಲ್ಲವೂ ಚುನಾವಣೆಯ ಕಾಲದಲ್ಲಿ ಚರ್ಚೆಗೆ ಬರಬೇಕಿತ್ತು. ಯಾರೂ ಮಾತನಾಡುವವರೇ ಇಲ್ಲ. ರೈತರೂ ಪರಿಸ್ಥಿತಿಗೆ ಒಗ್ಗಿಹೋಗಿದ್ದಾರೆ. ಹನ್ನೆರಡು ವರ್ಷಗಳ ಹಿಂದೆ ಬಿಟಿ ಹತ್ತಿ ವಿರೋಧಿಸಿ ಚಳವಳಿ ನಡೆದ ಜಿಲ್ಲೆಯಲ್ಲಿ ಈಗ ರೈತರು ಅತಿಹೆಚ್ಚಿನ ಪ್ರದೇಶದಲ್ಲಿ ಬಿಟಿ ಹತ್ತಿ ಬೆಳೆಯುತ್ತಿದ್ದಾರೆ' ಎಂದು ದೀರ್ಘ ನಿಟ್ಟುಸಿರು ಬಿಟ್ಟರು ಕರ್ನಾಟಕ ರಾಜ್ಯ ರೈತ (ಚುನಾವಣೇತರ) ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಗುರುಮಠ್.

Monday, April 8, 2013

ರಾಹುಲ್ ಗಾಂಧಿ ಕಳೆದುಕೊಳ್ಳುತ್ತಿರುವ ಅವಕಾಶ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗದೆ ಏದುಸಿರು ಬಿಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಅನುಭವ ಹೊಸದೇನಲ್ಲ. ವಿವಾದವೇ ಇಲ್ಲದೆ  ಚುನಾವಣಾ ಅಭ್ಯರ್ಥಿಗಳ ಆಯ್ಕೆ ಸುಸೂತ್ರವಾಗಿ ನಡೆದ ಉದಾಹರಣೆ ಕಾಂಗ್ರೆಸ್ ಪಕ್ಷದಲ್ಲಿ  ಇಲ್ಲ. ಟಿಕೆಟ್‌ಗಾಗಿ ಬಹಿರಂಗವಾಗಿ ನಡೆಯುತ್ತಿರುವ ಕಾದಾಟ, ಗುಟ್ಟಾಗಿ ನಡೆಯುವ ಮಸಲತ್ತು, ಪ್ರತಿಭಟನೆ, ಬಂಡಾಯ, ವಶೀಲಿ, ಆಮಿಷ, ಪ್ರಭಾವ, ಕಣ್ಣೀರು, ಜೈಕಾರ, ಧಿಕ್ಕಾರ ...ಇವೆಲ್ಲವೂ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯ ಪ್ರಕ್ರಿಯೆಯ ಭಾಗವೇ ಆಗಿಬಿಟ್ಟಿದೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ಕಾಲದಲ್ಲಿ ದೆಹಲಿಯ ಸರ್ಕಾರಿ ಭವನಗಳು, ಹೊಟೇಲ್‌ಗಳು ತುಂಬಿ ತುಳುಕಾಡುವುದು, ಸೋನಿಯಾಗಾಂಧಿ ಮನೆ ಮತ್ತು ಎಐಸಿಸಿ ಕಚೇರಿಗಳಿರುವ ಜನಪಥ ಮತ್ತು ಅಕ್ಬರ್ ರಸ್ತೆ ತುಂಬಾ ಜನಜಂಗುಳಿ ಎಲ್ಲವೂ ಸಾಮಾನ್ಯ ದೃಶ್ಯ. ಆದರೆ ಈ ಬಾರಿ ಹೀಗಾಗಲಿಕ್ಕಿಲ್ಲ ಎಂದು ತಿಳಿದುಕೊಂಡಿದ್ದ ಒಂದಷ್ಟು ಕಡು ಆಶಾವಾದಿಗಳಿದ್ದರು.
ಇತ್ತೀಚೆಗೆ ಹಲವಾರು ವೇದಿಕೆಗಳಲ್ಲಿ ಕಾಂಗ್ರೆಸ್ ಪಕ್ಷದ ನೂತನ ಉಪಾಧ್ಯಕ್ಷ ರಾಹುಲ್‌ಗಾಂಧಿಯವರು ಮಾತನಾಡಿದ ಆದರ್ಶ ರಾಜಕಾರಣದ ಮಾತುಗಳು ಈ ಆಶಾವಾದಕ್ಕೆ ಕಾರಣ. `ರಾಜಕೀಯ ಅಧಿಕಾರದ ಹಿಂದೆ ಓಡಬೇಡಿ, ಅದು ಪಾಷಾಣ' ಎಂದು ರಾಹುಲ್ ಜೈಪುರ ಚಿಂತನಾ ಶಿಬಿರದಲ್ಲಿ ಎಚ್ಚರಿಸಿದ್ದರು. ಅಲ್ಲಿ ಅವರು ಆಡಿದ ಮಾತುಗಳು ದೇಶದ ಅಮಾಯಕ ಜನರನ್ನು ರೋಮಾಂಚನಗೊಳಿಸಿದ್ದು ಮಾತ್ರವಲ್ಲ ಕಡು ನಿರಾಶವಾದಿಗಳಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿತ್ತು. ಹಿಂದಿನ ಮಾತುಗಳ ಮುಂದುವರಿಕೆಯಂತೆ ನಂತರದ ದಿನಗಳಲ್ಲಿ ಮಾತನಾಡಿದ ರಾಹುಲ್ `ಹೈಕಮಾಂಡ್ ಸಂಸ್ಕೃತಿಯನ್ನು ಕೊನೆಗೊಳಿಸಬೇಕು' ಎಂದಿದ್ದರು. ಕೊನೆಯದಾಗಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಾರಂಭವಾಗುವಾಗ  `ಅಭ್ಯರ್ಥಿಗಳ ಆಯ್ಕೆ ಸ್ಥಳೀಯ ಮಟ್ಟದಲ್ಲಿಯೇ ನಡೆಯುತ್ತದೆ, ಯಾರೂ ದೆಹಲಿಗೆ ಬರುವ ಅಗತ್ಯ ಇಲ್ಲ' ಎಂದಿದ್ದರು. ಇವೆಲ್ಲವನ್ನು ಹೇಳಿದ ರಾಹುಲ್‌ಗಾಂಧಿಯ ನಾಲಗೆಯ ಪಸೆ ಆರುವುದರೊಳಗಾಗಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳ ಅಸಹ್ಯ ಪ್ರದರ್ಶನ ಯಥಾ ಪ್ರಕಾರ ಪ್ರಾರಂಭವಾಗಿತ್ತು.
ರಾಹುಲ್‌ಗಾಂಧಿಯವರಂತೆ, ಅವರ ಅಮ್ಮನೂ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಿಸಿಕೊಂಡ ಪ್ರಾರಂಭದ ದಿನಗಳಲ್ಲಿ ಇಂತಹದ್ದೇ ಆದರ್ಶ ರಾಜಕಾರಣದ ಮಾತುಗಳನ್ನಾಡಿದ್ದು ಮಾತ್ರವಲ್ಲ ಬದಲಾವಣೆಯ ಪ್ರಯತ್ನಕ್ಕೂ ಕೈಹಾಕಿದ್ದರು. ಅಟಲಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ 1999ರಲ್ಲಿ ಎರಡನೇ ಬಾರಿ ಲೋಕಸಭಾ ಚುನಾವಣೆ ಗೆದ್ದಾಗ ಸೋನಿಯಾಗಾಂಧಿ ಕಂಗಾಲಾಗಿದ್ದರು. ಸೀತಾರಾಂ ಕೇಸರಿಯವರನ್ನು ಕೆಳಗಿಳಿಸಿ ಪಕ್ಷದ ಅಧ್ಯಕ್ಷರಾದ ಸೋನಿಯಾ ನಾಯಕತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೇವಲ 119 ಸ್ಥಾನಗಳನ್ನು ಗಳಿಸಿದ್ದ ಕಾಲ ಅದು. ಸೋಲಿಗೆ ಕಾರಣಗಳನ್ನು ಹುಡುಕಿ ಗೆಲುವಿಗೆ ದಾರಿ ತೋರಿಸಲು ಎ.ಕೆ.ಆಂಟನಿ ನೇತೃತ್ವದ 19 ಸದಸ್ಯರ ಸಮಿತಿಯೊಂದನ್ನು ಸೋನಿಯಾಗಾಂಧಿ ರಚಿಸಿದ್ದರು. ಸಮಿತಿ ಸದಸ್ಯರು ಒಂಬತ್ತು ರಾಜ್ಯಗಳಲ್ಲಿ  ಕಾಲ ಓಡಾಡಿ ಅಭಿಪ್ರಾಯ ಸಂಗ್ರಹಿಸಿದ್ದರು. 40 ದಿನಗಳ ಅಧ್ಯಯನದ ನಂತರ ಆಂಟನಿ ಸಮಿತಿ 200 ಪುಟಗಳ ವರದಿಯನ್ನು ಪಕ್ಷದ ಅಧ್ಯಕ್ಷರಿಗೆ ಸಲ್ಲಿಸಿದ್ದರು. ಈ ವರದಿಯನ್ನು ಗೌಪ್ಯವಾಗಿಡುವ ಉದ್ದೇಶದಿಂದ ಅದರ ಒಂದು ಪ್ರತಿಯನ್ನು ಮಾತ್ರ ಮಾಡಲಾಗಿತ್ತಂತೆ. (ಯಾಕೆ ಈ ರಹಸ್ಯವೊ ಗೊತ್ತಿಲ್ಲ) ಸೋನಿಯಾಗಾಂಧಿ ಮತ್ತು ಕೆಲವು ಆಪ್ತರನ್ನು ಹೊರತುಪಡಿಸಿದರೆ ಅದನ್ನು ನೋಡಿದವರೂ ಇಲ್ಲ. ದೆಹಲಿಯಲ್ಲಿರುವಾಗ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರೊಬ್ಬರ ಕೈಯಲ್ಲಿದ್ದ ವರದಿ ಮೇಲೆ ಕಣ್ಣಾಡಿಸಿದ್ದ ನನ್ನ ನೆನಪಿನ ಪ್ರಕಾರ ಅದರ ಕೆಲವು ಮುಖ್ಯಾಂಶಗಳು ಹೀಗಿವೆ:
-ಚುನಾವಣೆಗೆ ಅಭ್ಯರ್ಥಿಗಳನ್ನು ಮೂರು ತಿಂಗಳ ಮೊದಲೇ ಆಯ್ಕೆ ಮಾಡಿ ಪ್ರಚಾರಕ್ಕೆ ಅನುಕೂಲ ಮಾಡಿಕೊಡಬೇಕು.
-ಗೆಲುವಿನ ಅವಕಾಶದ ಖಾತರಿ ಇಲ್ಲದೆ ನಾಯಕರ ಪತ್ನಿ ಇಲ್ಲವೆ ಮಕ್ಕಳಿಗೆ ಟಿಕೆಟ್ ನೀಡಬಾರದು.
-ಪಕ್ಷದ ಜಿಲ್ಲಾಸಮಿತಿಗಳು ಶೇಕಡಾ 75ರಷ್ಟು, ಪ್ರದೇಶ ಕಾಂಗ್ರೆಸ್ ಸಮಿತಿ ಶೇಕಡಾ 20ರಷ್ಟು ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಶೇಕಡಾ ಐದರಷ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.
-ಚುನಾವಣೆಯ ಪೂರ್ವದಲ್ಲಿ ಯಾರನ್ನೂ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬಾರದು.
-ಪ್ರಚಾರದಲ್ಲಿ ಅಭಿವೃದ್ಧಿಯ ಚರ್ಚೆಗೆ ಮಹತ್ವ ನೀಡಬೇಕು, ಇದಕ್ಕೆ ಅನುಗುಣವಾಗಿ ಚುನಾವಣಾ ತಂತ್ರವನ್ನು ರೂಪಿಸಬೇಕು
-ಸಾಮಾಜಿಕ ಜಾಲತಾಣಗಳ ಮೂಲಕ ಜನಾಭಿಪ್ರಾಯವನ್ನು ಸಂಗ್ರಹಿಸಬೇಕು.
ಇಂತಹ ಮಾನದಂಡಗಳನ್ನು ಶಿಫಾರಸು ಮಾಡಿದ್ದು ಆಂಟನಿ ಸಮಿತಿಯೊಂದೇ ಅಲ್ಲ, 1998ರಲ್ಲಿ ಪಿ.ಎ.ಸಂಗ್ಮಾ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. 2003ರಲ್ಲಿ ರಾಜಸ್ತಾನ, ಮಧ್ಯಪ್ರದೇಶ ಮತ್ತು ಚತ್ತೀಸ್‌ಗಡ ವಿಧಾನಸಭಾ ಚುನಾವಣೆ ಸೋತಾಗ ಪ್ರಣಬ್ ಮುಖರ್ಜಿ ಅಧ್ಯಕ್ಷತೆಯ ಸಮಿತಿ ವರದಿಯನ್ನು ನೀಡಿತ್ತು. ಮನಮೋಹನ್‌ಸಿಂಗ್, ಕರುಣಾಕರನ್ ಹೀಗೆ ಪಕ್ಷದ ಹಿರಿಯ ನಾಯಕರೆಲ್ಲ ತಲೆಗೊಂದರಂತೆ ಚುನಾವಣಾ ಸೋಲಿನ ಆತ್ಮಾವಲೋಕನ ಮತ್ತು ಮಾನದಂಡಗಳ ಪಾಲನೆ ಬಗ್ಗೆ ವರದಿಗಳನ್ನು ನೀಡಿದ್ದರು. 2012ರಲ್ಲಿ ಉತ್ತರಪ್ರದೇಶ, ಪಂಜಾಬ್, ಗೋವಾ, ಚತ್ತೀಸ್‌ಗಡಗಳಲ್ಲಿ ಪಕ್ಷ ಪರಾಭವಗೊಂಡ ನಂತರ ಆಂಟನಿ ನೇತೃತ್ವದ ಸಮಿತಿ ವರದಿಯನ್ನು ನೀಡಿತ್ತು. ಇವೆಲ್ಲವೂ 1999ರ ಆಂಟನಿ ವರದಿಯ ಮಾದರಿಯಲ್ಲಿಯೇ ಇವೆ. ಗೆಲುವಿನ ಕಾರ್ಯತಂತ್ರ, ಸೋಲಿನ ಆತ್ಮಾವಲೋಕನ, ಮಾನದಂಡ-ನೀತಿ ಸಂಹಿತೆಗಳ ವರದಿಗಳಿಗೇನು ಕಾಂಗ್ರೆಸ್ ಪಕ್ಷದಲ್ಲಿ ಬರ ಇಲ್ಲ.
`ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ಜಿಲ್ಲಾ ಸಮಿತಿಗಳೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು, ದೆಹಲಿಗೆ ಬರಬಾರದು ...ಇತ್ಯಾದಿ ಬುದ್ದಿಮಾತುಗಳನ್ನು ಆಂಟನಿ ವರದಿಯ ದೂಳು ಕೊಡವಿದ ನಂತರವೇ ರಾಹುಲ್‌ಗಾಂಧಿ ಹೇಳಿರುವುದು. ಇದನ್ನು ಪಾಲಿಸುವವರು ಯಾರು? ಪಾಲಿಸುವಂತೆ ಮಾಡುವವರು ಯಾರು?
ಕರ್ನಾಟಕ ವಿಧಾನಸಭಾ ಚುನಾವಣೆಗೆ ಈ ಬಾರಿ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ಪಕ್ಷ ಕೇಂದ್ರ ಮತ್ತು ರಾಜ್ಯದಲ್ಲಿ ಚುನಾವಣಾ ಸಮಿತಿಗಳಲ್ಲದೆ ಹಿರಿಯ ನಾಯಕರ ನೇತೃತ್ವದಲ್ಲಿ ಪ್ರಾಂತೀಯ ಸಮಿತಿಗಳನ್ನು ಕೂಡಾ ರಚಿಸಿತ್ತು. ಜಿಲ್ಲಾ ಸಮಿತಿ ಅಧ್ಯಕ್ಷರು ಒಂದು ಇಲ್ಲವೆ ಎರಡು ಹೆಸರುಗಳನ್ನು ಮಾತ್ರ ಶಿಫಾರಸು ಮಾಡಬೇಕೆಂದು ತಿಳಿಸಲಾಗಿತ್ತು. ಇಷ್ಟೆಲ್ಲ ಕಸರತ್ತಿನ ನಂತರ ನಡೆದದ್ದು ಮಾತ್ರ ಹಳೆಯ ಪ್ರಹಸನದ ಮರುಪ್ರದರ್ಶನ. ಯಥಾಪ್ರಕಾರ ಬೆಂಬಲಿಗರೊಂದಿಗೆ ನಾಯಕರ ದಂಡು ದೆಹಲಿಗೆ ದಾಳಿ ಹಾರಿತು. ಹೋದವರೆಲ್ಲರೂ ತಮ್ಮ ಸಾಮರ್ಥ್ಯಕ್ಕೆ ಎಟುಕಬಲ್ಲ  ನಾಯಕರನ್ನು ಭೇಟಿ ಮಾಡಿದರು. ಒಂದಷ್ಟು ಮಹಿಳಾ ಆಕಾಂಕ್ಷಿಗಳು ಸೋನಿಯಾ ಮನೆ ಮುಂದೆ ಧರಣಿಯನ್ನೂ ಮಾಡಿದರು. ಇಷ್ಟೆಲ್ಲಾ ನಡೆಯುವಾಗ `ದೆಹಲಿಗೆ ಬರಬೇಡಿ' ಎಂಬ ಆದೇಶ ನೀಡಿದ್ದ ರಾಹುಲ್‌ಗಾಂಧಿ ಎಲ್ಲಿದ್ದರು? ತಮ್ಮ ಆದೇಶ ಉಲ್ಲಂಘಿಸಿದ್ದ ನಾಲ್ಕು ನಾಯಕರಿಗೆ ಟಿಕೆಟ್ ನಿರಾಕರಿಸುವ ಶಿಸ್ತುಕ್ರಮಕೈಗೊಂಡಿದ್ದರೆ ಉಳಿದವರು ಕರ್ನಾಟಕಕ್ಕೆ ಓಡಿಬರುತ್ತಿದ್ದರು. ಇದನ್ನೆಲ್ಲ ನೋಡಿದ ಟಿಕೆಟ್ ವಂಚಿತ ಯುವ ಅಭ್ಯರ್ಥಿಯೊಬ್ಬ `ನಮ್ಮ ನಾಯಕರ ಮಾತು ಕೇಳಿ ದೆಹಲಿಗೆ ಹೋಗದೆ ಇಲ್ಲಿಯೇ ಇದ್ದು ತಪ್ಪು ಮಾಡಿದೆ. ನನ್ನನ್ನು ವಿರೋಧಿಸಿ ಅಲ್ಲಿಗೆ ಹೋದವರೆಲ್ಲರೂ ಸಂಚು ಮಾಡಿ ಟಿಕೆಟ್ ತಪ್ಪಿಸಿದರು' ಎಂದು ಗೋಳಾಡುತ್ತಿದ್ದ.
2008ರಲ್ಲಿ ಸತತ ಎರಡನೆ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತಾಗ ಪಕ್ಷದ ಹೈಕಮಾಂಡ್ ಚಿಂತಾಕ್ರಾಂತವಾಗಿತ್ತು. ಆಗಲೂ ಸೋಲಿನ ಕಾರಣಗಳನ್ನು ಹುಡುಕಲು ಎ.ಕೆ.ಆಂಟನಿ ನೇತೃತ್ವದಲ್ಲಿಯೇ ಸಮಿತಿ ರಚಿಸಲಾಗಿತ್ತು. ಬೆಳಕಿಗೆ ಬಾರದ ಈ ವರದಿಯಲ್ಲಿಯೂ `ಕಾಂಗ್ರೆಸ್ ಸೋಲಿಗೆ ಆಂತರಿಕ ಕಚ್ಚಾಟ ಮತ್ತು ಹಿರಿಯ ನಾಯಕರು ಸ್ವಂತ ಕ್ಷೇತ್ರಗಳಲ್ಲಿ ಗೆಲ್ಲಲು ವಿಫಲವಾಗಿದ್ದು ಕಾರಣ' ಎಂಬ ಅಂಶ ಪ್ರಮುಖವಾಗಿ ಉಲ್ಲೇಖವಾಗಿತ್ತಂತೆ. `ಕಾಂಗ್ರೆಸ್ ಸೋಲಿಗೆ ಕಾಂಗ್ರೆಸಿನವರೇ ಸಾಕು, ವಿರೋಧಪಕ್ಷಗಳು ಬೇಕಿಲ್ಲ' ಎನ್ನುವ ವ್ಯಂಗ್ಯೋಕ್ತಿ ರಾಜ್ಯದ ರಾಜಕಾರಣದಲ್ಲಿ ಪ್ರಚಾರದಲ್ಲಿದೆ. ಇದನ್ನು ಸುಳ್ಳೆಂದು ಕಾಂಗ್ರೆಸಿನವರೇ ಹೇಳುವುದಿಲ್ಲ. ಕಳೆದ ವರ್ಷ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ಮಾತನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. 2008ರ ಚುನಾವಣಾ ಕಾಲದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಖರ್ಗೆ ಅವರು ಬಹಿರಂಗವಾಗಿ ಹೇಳಲಾಗದ ಇನ್ನಷ್ಟು ಸತ್ಯಗಳನ್ನು ಬಚ್ಚಿಟ್ಟುಕೊಂಡಿರಬಹುದು.
2008ರ ಕಾಂಗ್ರೆಸ್ ಪಕ್ಷದ ಸೋಲಿಗೆ ದಲಿತ ನಾಯಕನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಪರೋಕ್ಷವಾಗಿ ಬಿಂಬಿಸಿದ್ದೂ ಕಾರಣ ಎಂದು ಇಂದಿಗೂ ಹೇಳುವವರಿದ್ದಾರೆ. ಆದರೆ ಆಂಟನಿ ಸಮಿತಿ ಎತ್ತಿರುವ ಪ್ರಶ್ನೆಗಳಿಗೆ ಯಾರೂ ಉತ್ತರ ನೀಡುವುದಿಲ್ಲ. ಕಳೆದ ಚುನಾವಣೆಯಲ್ಲಿ ಸ್ಪರ್ಧೆಯಲ್ಲಿದ್ದ 34 ಮಾಜಿ ಸಚಿವರು ಸೋಲು ಅನುಭವಿಸಿದ್ದರು ಎನ್ನುವುದನ್ನು ಬಹಳ ಮಂದಿ ಮರೆತೇ ಬಿಟ್ಟಿದ್ದಾರೆ. ಸೋಲಿನ ಸರದಾರರ ಪಟ್ಟಿಯಲ್ಲಿ ಎನ್.ಧರ್ಮಸಿಂಗ್, ಆರ್.ವಿ.ದೇಶಪಾಂಡೆ, ಎಚ್.ಕೆ.ಪಾಟೀಲ್, ಎಚ್.ವಿಶ್ವನಾಥ್, ಅಂಬರೀಷ್, ಎಚ್.ಸಿ.ಶ್ರಿಕಂಠಯ್ಯ, ಡಿ.ಬಿ.ಚಂದ್ರೇಗೌಡ, ಎಂ.ಪಿ.ಪ್ರಕಾಶ್, ಕಾಗೋಡು ತಿಮ್ಮಪ್ಪ, ವಸಂತ್ ವಿ.ಸಾಲ್ಯಾನ್,ಎಂ.ವೈ ಮೇಟಿ, ಕೆ.ಬಿ.ಕೋಳಿವಾಡ್, ಶ್ರಿನಿವಾಸಗೌಡ ಮೊದಲಾದವರ ಹೆಸರುಗಳಿವೆ. ಇವರಲ್ಲಿ ಒಂದಷ್ಟು ಮಂದಿ ಮುಖ್ಯಮಂತ್ರಿ ಪದವಿಯ ಆಕಾಂಕ್ಷಿಗಳೂ ಆಗಿದ್ದರು. ಇವರಲ್ಲಿ ಹತ್ತು ನಾಯಕರು ಗೆದ್ದುಬಿಟ್ಟಿದ್ದರೂ ರಾಜ್ಯದ ರಾಜಕೀಯ ಚಿತ್ರವೇ ಬದಲಾಗಿರುತ್ತಿತ್ತು. ಬೇರೆ ಕ್ಷೇತ್ರಗಳಿಗೆ ಹೋಗಿ ಪ್ರಚಾರಮಾಡಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕಾಗಿದ್ದ ಈ ನಾಯಕರನ್ನು ಅವರ ಕ್ಷೇತ್ರಗಳಲ್ಲಿ ಗೆಲ್ಲಿಸಲು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಪ್ರಚಾರಕ್ಕೆ ಹೋಗಬೇಕಿತ್ತೇ? ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ `ಕಾಲೆಳೆಯುವ ರಾಜಕಾರಣ' ಕೂಡಾ ಕಾರಣ ಎನ್ನುವುದನ್ನು ಆಂಟನಿ ಗುರುತಿಸಿದ್ದಾರೆ. ಹಲವಾರು ನಾಯಕರು ಪಕ್ಷದಲ್ಲಿರುವ ತಮ್ಮ ವಿರೋಧಿಗಳನ್ನು ಸೋಲಿಸಲು ವಿರೋಧಪಕ್ಷಗಳ ಅಭ್ಯರ್ಥಿಗೆ ಹಣಕಾಸು ನೆರವು ನೀಡಿದ್ದ ಪ್ರಕರಣಗಳನ್ನು ಕೂಡಾ ಪಕ್ಷದ ಹಿರಿಯ ನಾಯಕರು ಆಂಟನಿ ಅವರ ಗಮನಕ್ಕೆ ತಂದಿದ್ದರು. ಆದರೆ ಯಾರ ತಲೆಯೂ ಉರುಳಲಿಲ್ಲ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಹಾಕಿದ ಆರೋಪ ಹೊತ್ತವರಿಗೆ ಟಿಕೆಟ್ ನೀಡಿದ ನಂತರ ಯಾವ ತಲೆ ಉರುಳಲು ಸಾಧ್ಯ?
ತಾನು ಕನಸು ಕಾಣುತ್ತಿರುವ ಆದರ್ಶ ರಾಜಕಾರಣವನ್ನು ಕಾರ್ಯರೂಪಕ್ಕೆ ತರಲು ರಾಹುಲ್‌ಗಾಂಧಿ ಈ ಬಾರಿ ಕರ್ನಾಟಕವನ್ನು ಪ್ರಯೋಗಶಾಲೆಯಾಗಿ ಮಾಡಬಹುದಿತ್ತು. ಅಂತಹದ್ದೊಂದು ಅಪೂರ್ವ ಅವಕಾಶ ಕೂಡಿ ಬಂದಿತ್ತು. ಇತ್ತೀಚಿನ ಎಲ್ಲ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್ ಪಕ್ಷ ಬಹುಮತ ಗಳಿಸಬಹುದೆಂಬ ಭವಿಷ್ಯ ನುಡಿಯುತ್ತಿವೆ.  `ರಾಜಕೀಯ ಆತ್ಮಹತ್ಯೆ' ಮಾಡಿಕೊಳ್ಳದಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಹೆಚ್ಚಿದೆ. ರಾಜಕೀಯ ಪಕ್ಷವೊಂದು `ರಿಸ್ಕ್'ತೆಗೆದುಕೊಳ್ಳಲು ಸಾಧ್ಯವಾಗುವುದೇ ಇಂತಹ ಅನುಕೂಲಕರ ಪರಿಸ್ಥಿತಿಯಲ್ಲಿ. ಅಷ್ಟೇನು ಜನಪ್ರಿಯರಲ್ಲದ, ಜಾತಿ ಮತ್ತು ದುಡ್ಡಿನ ಬಲ ಇಲ್ಲದ, ಸಜ್ಜನ, ಪ್ರಾಮಾಣಿಕ, ಕಳಂಕರಹಿತ ಮತ್ತು ಸೇವಾಸಕ್ತ ವ್ಯಕ್ತಿಗಳನ್ನು ಗುರುತಿಸಿ ಟಿಕೆಟ್‌ನೀಡಲು ಇದೊಂದು ಅವಕಾಶ. ಪಕ್ಷದ ಜನಪ್ರಿಯತೆಯ ಅಲೆಯ ಮೇಲೇರಿ ಇಂತಹವರು ಗೆಲುವಿನ ದಡ ಸೇರುವ ಸಾಧ್ಯತೆ ಇರುತ್ತದೆ. ಮುಳುಗುತ್ತಿರುವ ಹಡಗಿನಂತಾಗಿರುವ ಬಿಜೆಪಿ ಇಂತಹ ದಿಟ್ಟತನದ ರಾಜಕೀಯ ನಿರ್ಧಾರವನ್ನು ತೋರಿಸುವ ಸ್ಥಿತಿಯಲ್ಲಿ ಇಲ್ಲ.  ಆದರೆ ಈಗಾಗಲೇ ಬಿಡುಗಡೆಗೊಂಡಿರುವ ಅಭ್ಯರ್ಥಿಗಳ ಪಟ್ಟಿ ಮತ್ತು ಅದರ ಬೆನ್ನಲ್ಲಿಯೇ ಎದ್ದಿರುವ ವಿವಾದಗಳನ್ನು ನೋಡಿದರೆ ಕಾಂಗ್ರೆಸ್ ಪಕ್ಷ ರಾಹುಲ್‌ಗಾಂಧಿ ತೋರುತ್ತಿರುವ ದಾರಿಯನ್ನು ಬಿಟ್ಟು ಹಳೆಯ ದಾರಿಯಲ್ಲಿಯೇ ಸಾಗುವ ಹಾಗೆ ಕಾಣುತ್ತಿದೆ. ಇಷ್ಟೆಲ್ಲ ಅವಾಂತರಗಳ ನಂತರವೂ ಕಾಂಗ್ರೆಸ್ ಪಕ್ಷವೇ ಚುನಾವಣೆಯಲ್ಲಿ ಬಹುಮತ ಗಳಿಸಬಹುದು, ಆ ಪಕ್ಷವೇ ಸರ್ಕಾರ ರಚಿಸಬಹುದು. ಆದರೆ ಪಕ್ಷ ಗೆದ್ದರೂ ಕೂಡ ಪ್ರಧಾನಮಂತ್ರಿಯಾಗಲು ಹೊರಟ ರಾಹುಲ್‌ಗಾಂಧಿಯ ಆದರ್ಶದ ಸೋಲು ಆಗಲಿದೆ.

Sunday, March 31, 2013

ಮುಲಾಯಂ ಮುಲಾಮಿನಿಂದ ಎದ್ದು ನಿಂತ ಅಡ್ವಾಣಿ

ತೃತೀಯ ರಂಗದ ಗಂಟೆ ಆಗಾಗ ಮೊಳಗಿ ಸುಮ್ಮನಾಗುವುದು ರೂಢಿಯಾಗಿಬಿಟ್ಟಿರುವ ಕಾರಣದಿಂದಾಗಿ
ಯೇ ಇದನ್ನು ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಲೇವಡಿ ಮಾಡುತ್ತಿವೆ. ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಗ್ಯಾಂಗ್ ತೃತೀಯರಂಗದ ಗಾಳಿಪಟವನ್ನು ಎಷ್ಟು ಎತ್ತರಕ್ಕೆ ಹಾರಿಸಿದರೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೆ ಕೆಳಗೆ ಇಳಿದುಬಂದು ನಮ್ಮ ಮನೆಬಾಗಿಲು ಬಡಿಯಲೇಬೇಕು ಎನ್ನುವುದು ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಗೊತ್ತಿದೆ.
ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸಮಾನ ದೂರದಲ್ಲಿಟ್ಟು ನಿಜವಾದ ತೃತೀಯ ರಂಗ ಅಧಿಕಾರಕ್ಕೆ ಬರುವ ರಾಜಕೀಯ ವಾತಾವರಣ ಸದ್ಯಕ್ಕೆ ದೇಶದಲ್ಲಿ ಇಲ್ಲ. ಅಂದ ಮಾತ್ರಕ್ಕೆ ಪ್ರಾದೇಶಿಕ ರಾಜಕಾರಣದ `ಚಾಣಕ್ಯ' ಮುಲಾಯಂಸಿಂಗ್ ಹಾಗೆ ಸುಮ್ಮನೆ ತೃತೀಯರಂಗದ ಗಂಟೆ ಆಡಿಸುವವರೂ ಅಲ್ಲ. ಯುಪಿಎಗೆ ಪರ್ಯಾಯವಾಗಿ ಎನ್‌ಡಿಎಯನ್ನು ಬಲಪಡಿಸುವ ಉದ್ದೇಶವೇನಾದರೂ ಅವರಲ್ಲಿದೆಯೇ? ಇದನ್ನೇ ಬಳಸಿಕೊಂಡು ಮೋದಿಯವರನ್ನು ಪಕ್ಕಕ್ಕೆ ಸರಿಸಿ ಅಡ್ವಾಣಿ ಅವರನ್ನು ಮೇಲಕ್ಕೆತ್ತುವ ತಂತ್ರವನ್ನು ಮೋದಿ ವಿರೋಧಿ ಬಿಜೆಪಿ ನಾಯಕರು ಹೆಣೆಯುತ್ತಿದ್ದಾರೆಯೇ?
ಇದೇ ಅಂಕಣದಲ್ಲಿ ಹಿಂದೆ ಹಲವಾರು ಬಾರಿ ಚರ್ಚಿಸಿದಂತೆ ತತ್ವಾಧಾರಿತವಾದ ನೈಜ ತೃತೀಯರಂಗ ದೆಹಲಿ ಗದ್ದುಗೆ ಏರಲು ಇನ್ನೂ ರಾಜಕೀಯ ಕಾಲ ಪಕ್ವವಾಗಿಲ್ಲ. ಯಾವುದೇ ಪಕ್ಷ ಇಲ್ಲವೇ ಮೈತ್ರಿಕೂಟ ಕೇಂದ್ರದಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆಬರಲು ಕನಿಷ್ಠ 272 ಸದಸ್ಯರ ಬೆಂಬಲ ಬೇಕು.
1952ರಿಂದ 2009ರ ವರೆಗಿನ ಹದಿನೈದು ಲೋಕಸಭಾ ಚುನಾವಣೆಗಳ ಇತಿಹಾಸವನ್ನು ಅವಲೋಕಿಸಿದರೆ 1977ರ ಚುನಾವಣೆಯೊಂದನ್ನು ಹೊರತುಪಡಿಸಿ ಬೇರೆ ಯಾವುದರಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ (1980ರ ಮೊದಲು ಜನಸಂಘ)ಯೇತರ ಪಕ್ಷಗಳ  ಒಟ್ಟು ಸಂಖ್ಯಾಬಲ 272ರ ಸಮೀಪಕ್ಕೂ ಬಂದಿಲ್ಲ. (1977ರಲ್ಲಿ ಜನಸಂಘ ಆಗಿನ ಜನತಾಪಕ್ಷದಲ್ಲಿ ವಿಲೀನಗೊಂಡಿತ್ತು ಎನ್ನುವುದನ್ನೂ ಗಮನಿಸಬೇಕಾಗಿದೆ.) ಕಾಂಗ್ರೆಸ್ ಮತ್ತು ಬಿಜೆಪಿಯ ಒಟ್ಟು ಬಲ ಎಂದೂ 272ಕ್ಕಿಂತ ಕೆಳಗೆ ಇಳಿದಿಲ್ಲ. ಕನಿಷ್ಠ ಬಲ ಎಂದರೆ 1989ರಲ್ಲಿ ಈ ಎರಡು ಪಕ್ಷಗಳು ಒಟ್ಟಾಗಿ ಗಳಿಸಿದ್ದ 282 ಸ್ಥಾನಗಳು.
1991ರ ಲೋಕಸಭಾ ಚುನಾವಣೆಯನ್ನು ಹೊರತುಪಡಿಸಿದರೆ ಈ ಎರಡು ಪಕ್ಷಗಳು ಅತ್ಯಧಿಕ ಸ್ಥಾನ ಗಳಿಸಿರುವುದು 2009ರ ಚುನಾವಣೆಯಲ್ಲಿ (ಕಾಂಗ್ರೆಸ್ 206+ ಬಿಜೆಪಿ 114= 320), ಅಂದರೆ  ಆ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ಹೊರತಾಗಿ ಇತರ ಎಲ್ಲ ಪಕ್ಷಗಳು ಗಳಿಸಿದ್ದ ಒಟ್ಟು ಸ್ಥಾನಗಳು 220 ಮಾತ್ರ.
ಇದನ್ನು ನೋಡಿದರೆ ಬಹುಮತಕ್ಕೆ ಬೇಕಾಗುವ ಸಂಖ್ಯೆ ಗಳಿಸುವುದು ತೃತೀಯರಂಗಕ್ಕೆ ಅಸಾಧ್ಯ ಎಂದು ಮೇಲ್ನೋಟಕ್ಕೆ ಅನಿಸುವುದಿಲ್ಲ ಎನ್ನುವುದು ನಿಜ. ಅಂತರ ಇರುವುದು 40-50 ಸ್ಥಾನಗಳಲ್ಲವೇ? ಅದನ್ನು ಗಳಿಸುವುದು ಅಷ್ಟೇನು ಕಷ್ಟವಾಗಲಾರದು ಎಂದು ಯಾರಾದರೂ ಅಂದುಕೊಳ್ಳಬಹುದು. ಆದರೆ ಇದರಲ್ಲೊಂದು ಒಳ ಲೆಕ್ಕಾಚಾರ ಇದೆ.ಒಂದೊಮ್ಮೆ ತೃತೀಯರಂಗದ ಪಕ್ಷಗಳ ಒಟ್ಟು ಸದಸ್ಯಬಲ 272 ತಲುಪಿದರೂ ಆಗಲೂ ಕಷ್ಟಗಳಿವೆ. ಈ ಪ್ರಾದೇಶಿಕ ಪಕ್ಷಗಳಲ್ಲಿನ ಪರಸ್ಪರ ವಿರೋಧ, ಕಾಂಗ್ರೆಸ್ ಮತ್ತು ಬಿಜೆಪಿ ಬಗ್ಗೆ ಅವುಗಳ ಒಟ್ಟು ವಿರೋಧಕ್ಕಿಂತಲೂ ತೀವ್ರವಾಗಿದೆ. ಉ
ತ್ತರಪ್ರದೇಶದಲ್ಲಿ ಎಸ್-ಬಿಎಸ್‌ಪಿ, ತಮಿಳುನಾಡಿನಲ್ಲಿ ಡಿಎಂಕೆ-ಎಡಿಎಂಕೆ, ಪಶ್ಚಿಮ ಬಂಗಾಳದಲ್ಲಿ ಸಿಪಿಎಂ-ತೃಣಮೂಲ ಕಾಂಗ್ರೆಸ್, ಮತ್ತು ಬಿಹಾರದಲ್ಲಿ ಜೆಡಿ(ಯು)-ಆರ್‌ಜೆಡಿ ಪಕ್ಷಗಳು ಎಂದಾದರೂ ಒಂದೇ ಮೈತ್ರಿಕೂಟದಲ್ಲಿ ಸೇರಿಕೊಳ್ಳಲು ಸಾಧ್ಯವೇ?
ರಾಜಕೀಯದ ಈ ಗಣಿತ ಗೊತ್ತಿಲ್ಲದಷ್ಟು ಮುಲಾಯಂಸಿಂಗ್ ದಡ್ಡರಲ್ಲ. ಅವರ ತಲೆಯಲ್ಲಿ ಬೇರೆ ರಾಜಕೀಯ ಲೆಕ್ಕಾಚಾರ ಸುಳಿದಾಡುತ್ತಿರುವ ಹಾಗೆ ಕಾಣುತ್ತಿದೆ. ತೃತೀಯರಂಗದ ಬಗ್ಗೆ ಚರ್ಚೆ ಪ್ರಾರಂಭಿಸಿದ ಬೆನ್ನಲ್ಲೇ ಅವರು ಬಿಜೆಪಿ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರನ್ನು ಹೊಗಳಿ ಅಟ್ಟಕ್ಕೇರಿಸಿರುವುದು ಅವರ ನಡೆ-ನುಡಿಯನ್ನು ಅನುಮಾನದಿಂದ ನೋಡುವಂತೆ ಮಾಡಿದೆ.ಬಿಜೆಪಿ ಮತ್ತು ಅದರ ಪೂರ್ವಾಶ್ರಮದ ರೂಪವಾದ ಜನಸಂಘ ತನ್ನ ಬಲಪಂಥೀಯ ತತ್ವವನ್ನು ಬಹಿರಂಗವಾಗಿಯೇ ಪ್ರತಿಪಾದಿಸುತ್ತಾ ಬಂದಿದ್ದರೂ ಕಾಂಗ್ರೆಸೇತರ ವಿರೋಧ ಪಕ್ಷಗಳು ಆ ಕಾರಣಕ್ಕಾಗಿಯೇ ಅದನ್ನು ಎಂದೂ ದೂರ ಇಟ್ಟಿರಲಿಲ್ಲ.
1977ರಲ್ಲಿ ಜನಸಂಘ, ಜನತಾಪಕ್ಷದ ಜತೆ ವಿಲೀನಗೊಂಡಿದ್ದರೆ 1989ರಲ್ಲಿ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗದಲ್ಲಿ ಬಿಜೆಪಿ ಮಾತ್ರವಲ್ಲ ಎಡಪಕ್ಷಗಳು ಕೂಡಾ ಸೇರಿಕೊಂಡಿದ್ದವು.ಆದರೆ ಬಾಬರಿ ಮಸೀದಿಯ ಧ್ವಂಸದ ಘಟನೆ ದೇಶದ ರಾಜಕಾರಣದ ಸಮೀಕರಣವನ್ನೇ ಬದಲಾಯಿಸಿಬಿಟ್ಟಿತು. ಕಾಂಗ್ರೆಸ್ ಮಾತ್ರವಲ್ಲ ಕಾಂಗ್ರೆಸೇತರ ಪಕ್ಷಗಳು ಕೂಡಾ ಬಿಜೆಪಿಯನ್ನು ತಮ್ಮ ಗುಂಪಿಗೆ ಸೇರಿಸಿಕೊಳ್ಳದೆ ದೂರ ಇಟ್ಟುಬಿಟ್ಟಿವೆ. ಅದರ ನಂತರದ ದಿನಗಳಲ್ಲಿಯೇ ದೇಶದ ರಾಜಕಾರಣದಲ್ಲಿ `ಕೋಮುವಾದ' ಮತ್ತು `ಜಾತ್ಯತೀತ' ನೆಲೆಯ ಧ್ರುವೀಕರಣ ಪ್ರಾರಂಭವಾಗಿದ್ದು.
ಈ `ರಾಜಕೀಯ ಅಸ್ಪೃಶ್ಯತೆ'ಯಿಂದ ತನ್ನನ್ನು ಮುಕ್ತಗೊಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಲೇ ಬಂದಿದೆ. ಇದರ ಫಲಸ್ವರೂಪವೇ  ಎನ್‌ಡಿಎ ರಚನೆ. ಸಮಾಜವಾದಿ ಜಾರ್ಜ್ ಫರ್ನಾಂಡಿಸ್ ಮತ್ತು ನಿತೀಶ್‌ಕುಮಾರ್, ದ್ರಾವಿಡ ಪಕ್ಷಗಳ ಜಯಲಲಿತಾ ಮತ್ತು ಕರುಣಾನಿಧಿಯವರಿಂದ  ದಲಿತ ನಾಯಕ ರಾಮ್‌ವಿಲಾಸ್ ಪಾಸ್ವಾನ್ ವರೆಗೆ ಎಲ್ಲರನ್ನೂ ಜತೆಯಲ್ಲಿ ಸೇರಿಸಿಕೊಂಡಿದ್ದು ಇದೇ ಪ್ರಯತ್ನದ ಭಾಗವಾಗಿತ್ತು.
ಬಹುಜನ ಸಮ್ಮತ ಮುಖ ವಾಜಪೇಯಿ ಅವರನ್ನು ಮುಂದಿಟ್ಟುಕೊಂಡು ಬಿಜೆಪಿ ನಡೆಸಿದ ಈ ಪ್ರಯತ್ನವನ್ನು ಮತ್ತೆ ಭಂಗಗೊಳಿಸಿದವರು ನರೇಂದ್ರಮೋದಿ. ಬಾಬರಿ ಮಸೀದಿ ಧ್ವಂಸದ ಕಳಂಕ ನಿಧಾನವಾಗಿ ಅಳಿಸಿಹೋಗುತ್ತಿದ್ದಾಗ ಮತ್ತೆ ಬಿಜೆಪಿಯ ಮುಖಕ್ಕೆ ಕೋಮುವಾದದ ಮಸಿ ಬಳಿದವರು ಮೋದಿ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ನಡೆದ ಕೋಮು ಹಿಂಸಾಚಾರದಿಂದಾಗಿ ಬಿಜೆಪಿ ರಾಜಕೀಯವಾಗಿ ಅಸ್ಪೃಶ್ಯವಾಗಿಯೇ ಉಳಿಯುವಂತಾಯಿತು. ಲೋಕಜನಶಕ್ತಿ ಪಕ್ಷ, ತೆಲುಗುದೇಶಂ, ನ್ಯಾಷನಲ್ ಕಾಂಗ್ರೆಸ್ ಮೊದಲಾದ ಪಕ್ಷಗಳು ಎನ್‌ಡಿಎ ತೊರೆದುಹೋಗಲು ಗುಜರಾತ್ ಗಲಭೆ ಕಾರಣ.
ಹನ್ನೊಂದು ವರ್ಷಗಳಿಂದ ಈ ಕಳಂಕವನ್ನು ತೊಳೆಯಲು ಬಿಜೆಪಿ ಒದ್ದಾಡುತ್ತಿದೆ. `ಎನ್‌ಡಿಎ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ದೇಶದಲ್ಲಿಯಾಗಲಿ ಇತರ ರಾಜ್ಯದಲ್ಲಿಯಾಗಲಿ ಕೋಮುಗಲಭೆಗಳು ನಡೆದಿಲ್ಲ' ಎಂದು ಆ ಪಕ್ಷದ ನಾಯಕರು ಸಾರಿ ಸಾರಿ ಹೇಳುತ್ತಿರುವುದು ಮತ್ತು  ನರೇಂದ್ರಮೋದಿ ಅವರು ಕೋಮುವಾದದ ಬಗ್ಗೆ ಉಸಿರೆತ್ತದೆ ಗುಜರಾತ್‌ನಲ್ಲಿ ನಡೆದಿರುವ ಅಭಿವೃದ್ಧಿ ಚಟುವಟಿಕೆಗಳನ್ನೇ ಪ್ರಸ್ತಾಪಿಸುತ್ತಾ ತಾನೊಬ್ಬ `ವಿಕಾಸ ಪುರುಷ'ನೆಂಬ ರೀತಿಯಲ್ಲಿ ತನ್ನನ್ನು ಬಿಂಬಿಸಿಕೊಳ್ಳುತ್ತಿರುವುದು-ಎಲ್ಲವೂ ಈ `ಆತ್ಮಾವಲೋಕನದ ರಾಜಕಾರಣ'ದ ಚಿತ್ರಕತೆಯ ಭಾಗ.
ಮೋದಿ ಅವರು ತನ್ನಿಂದ ತಪ್ಪಾಗಿದೆ ಎಂದು ತಲೆಕೆಳಗೆ ಕಾಲು ಮೇಲೆ ಮಾಡಿ ದೇಶದ ಜನರ ಕ್ಷಮೆ ಕೇಳಿದರೂ ಜನಸಂಖ್ಯೆಯಲ್ಲಿ ಶೇಕಡಾ 13ರಷ್ಟಿರುವ ಮುಸ್ಲಿಮರು ಅವರನ್ನು ಕ್ಷಮಿಸಲಾರರು. ಈ ಕ್ಷಮೆ ಸಿಗದೆ  ಕಾಂಗ್ರೆಸೇತರ ಪಕ್ಷಗಳು ಬಿಜೆಪಿಯ ಜತೆಗೂಡುವುದು ಕಷ್ಟ. ಆದರೆ ಕಳೆದ ಒಂದು ದಶಕದ ಅವಧಿಯಲ್ಲಿ ಕಾಂಗ್ರೆಸೇತರ ರಾಜಕೀಯ ಪಕ್ಷಗಳ ಒಟ್ಟು ಬಿಜೆಪಿ ವಿರೋಧ ಈಗ ಆ ಪಕ್ಷದ ಒಬ್ಬ ನಾಯಕನಾದ ನರೇಂದ್ರಮೋದಿ ಬಗ್ಗೆಯಷ್ಟೇ ಸೀಮಿತವಾಗಿರುವುದು ವಿಶೇಷ.
ಹಾಗಿದ್ದರೆ ನರೇಂದ್ರಮೋದಿ ಅವರನ್ನು ಕೈಬಿಟ್ಟು ಬೇರೆಯಾರನ್ನಾದರೂ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದರೆ ಬಿಜೆಪಿ ಮನೆಯೊಳಗೆ ಜಾತ್ಯತೀತ ಪಕ್ಷಗಳು ಪ್ರವೇಶಿಸಿ ಅಸ್ಪೃಶ್ಯತೆಯನ್ನು ತೊಲಗಿಸಲು ಸಿದ್ಧ ಇವೆಯೇ? `ಹೌದು' ಎಂದು ಮುಲಾಯಂಸಿಂಗ್ ಯಾದವ್ ಬಾಯಿಬಿಟ್ಟು ಹೇಳುವ ಒಂದು ದಿನ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ.
ಬಿಜೆಪಿಯೊಳಗಿನ ಕೆಲವು ನಾಯಕರು ಇಂತಹ ದಿನಕ್ಕಾಗಿಯೇ ಕಾಯುತ್ತಿರುವಂತಿದೆ. ಮೋದಿ ಅಲ್ಲದೆ ಇದ್ದರೆ ಬೇರೆ ಯಾರು ಎನ್ನುವ ಪ್ರಶ್ನೆಗೆ ಉತ್ತರ ಹುಡುಕಲು ಕಷ್ಟಪಡಬೇಕಾಗಿಲ್ಲ. ಆಗಲೇ ಲಾಲ್‌ಕೃಷ್ಣ ಅಡ್ವಾಣಿಯವರು ಎದ್ದು ನಿಂತಿದ್ದಾರೆ. ತುಸು ಬಾಗಿದಂತಿದ್ದ ಅವರ ಬೆನ್ನು ಮುಲಾಯಂ ಹೊಗಳಿಕೆಯ ಮುಲಾಮು ಹಚ್ಚಿದ ಮೇಲೆ ನೆಟ್ಟಗಾಗಿದೆ, ಅವರನ್ನು ಕಾಡುತ್ತಾ ಬಂದಿರುವ ಪ್ರಧಾನಿ ಪಟ್ಟದ ಹಳೆಯ ಕನಸು ಮತ್ತೆ ಚಿಗುರೊಡೆದಿದೆ.
ಆದರೆ ಮುಲಾಯಂಸಿಂಗ್ ಅವರಿಗೆ ಕಾಂಗ್ರೆಸ್ ಬಗ್ಗೆ ಎಷ್ಟೇ ದ್ವೇಷವಿದ್ದರೂ ಆ ಕಾರಣಕ್ಕಾಗಿ ಲಾಲ್‌ಕೃಷ್ಣ ಅಡ್ವಾಣಿಯವರನ್ನು ಪ್ರಧಾನಿ ಮಾಡಲು ಅವರು ಹೊರಡಲಾರರು. ಮೋದಿಯನ್ನು ಕೈಬಿಟ್ಟ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡರೂ ಪ್ರಧಾನಿ ಪಟ್ಟಕ್ಕೆ ಮುಲಾಯಂಸಿಂಗ್ ಅವರ ಮೊದಲ ಆಯ್ಕೆ ಮುಲಾಯಂಸಿಂಗ್ ಅವರೇ ಎಂಬುದು ಸ್ಪಷ್ಟ.
ಇತ್ತೀಚೆಗೆ ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾಗಿ ನಿತೀಶ್‌ಕುಮಾರ್ ಅವರನ್ನು ಯಾಕೆ ಬಿಂಬಿಸಬಾರದು ಎಂಬ ಬಗ್ಗೆ ಚರ್ಚೆ ನಡೆಯುತ್ತಿರುವುದು ಕೂಡಾ ಮುಲಾಯಂಸಿಂಗ್ ಯಾದವ್   ಇದ್ದಕ್ಕಿದ್ದಂತೆ ಸಕ್ರಿಯವಾಗಲು ಕಾರಣ ಇರಬಹುದು. ಇದರ ಜತೆಗೆ ಯುಪಿಎ ಮೇಲೆ ಒತ್ತಡ ಹೇರಿ ಕಾರ್ಯ ಸಾಧಿಸಿಕೊಳ್ಳುವ ದುರಾಲೋಚನೆಯೂ ಅವರಲ್ಲಿದ್ದಿರಬಹುದು. ನಿಜವಾಗಿಯೂ ಎನ್‌ಡಿಎ ಜತೆ ಸೇರಿಕೊಳ್ಳುವ ಉದ್ದೇಶ ಮುಲಾಯಂ ಮತ್ತಿತರ ತೃತೀಯರಂಗದ ನಾಯಕರು ಹೊಂದಿದ್ದರೆ ಕಾಂಗ್ರೆಸ್ ಪಕ್ಷದ ನಿದ್ದೆ ಹಾಳಾಗಲಿದೆ.
ಈಗಿನ ಸಂಖ್ಯಾಬಲದ ಹಿನ್ನೆಲೆಯಲ್ಲಿ ಹೇಳುವುದಾದರೆ ತೃತೀಯರಂಗದ ನಾಯಕರೆಲ್ಲರೂ ಒಟ್ಟು ಸೇರಿದರೂ ಯುಪಿಎ ಸರ್ಕಾರವನ್ನು ಉರುಳಿಸಿ ಎನ್‌ಡಿಎ ಅಧಿಕಾರಕ್ಕೆ ಬರುವುದು ಸಾಧ್ಯ ಇಲ್ಲ ಎನ್ನುವುದು ವಾಸ್ತವ. ಇದು ಸಾಧ್ಯವಾಗಬೇಕಾದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ 150ಕ್ಕಿಂತ ಕೆಳಗಿಳಿಯಬೇಕು,ಬಿಜೆಪಿಯ ಬಲ 150ಕ್ಕಿಂತ ಮೇಲೇರಬೇಕು ಮತ್ತು ತೃತೀಯರಂಗದ ಗಂಟೆ ಆಡಿಸುತ್ತಿರುವ ಎಸ್‌ಪಿ, ಟಿಎಂಸಿ,ಡಿಎಂಕೆ ಇಲ್ಲವೆ ಎಡಿಎಂಕೆ,ಬಿಜೆಡಿ, ತೆಲುಗುದೇಶಂ, ಜೆಡಿ (ಎಸ್) ಮೊದಲಾದ ಪಕ್ಷಗಳು ಕನಿಷ್ಠ ಈಗ ಇರುವ ಸಂಖ್ಯಾಬಲವನ್ನಾದರೂ ಉಳಿಸಿಕೊಳ್ಳಬೇಕು. ಅದು ಸಾಧ್ಯವಾದರೆ ಈಗಿನ ಮಿತ್ರಪಕ್ಷಗಳ ಜತೆ ತೃತೀಯ ರಂಗದ ನಾಯಕರ ಬೆಂಬಲವನ್ನೂ ಬಳಸಿಕೊಂಡು ಉಳಿದ 100-120 ಸ್ಥಾನಗಳನ್ನು ಹೊಂದಿಸಿಕೊಳ್ಳುವುದು ಬಿಜೆಪಿಗೆ ಕಷ್ಟವಾಗಲಾರದು. ಅಂತಹ ಸಂದರ್ಭದಲ್ಲಿ ಈಗ ಯುಪಿಎನಲ್ಲಿರುವ ಶರದ್ ಪವಾರ್ ಅವರ ಎನ್‌ಸಿಪಿ, ಅಜಿತ್‌ಸಿಂಗ್ ಅವರ ಆರ್‌ಎಲ್‌ಡಿ  ಕೂಡಾ ಶಿಬಿರ ಬದಲಾಯಿಸಬಹುದು.
ಬದಲಾಗಿರುವಂತೆ ಕಾಣುತ್ತಿರುವ ಮುಲಾಯಂಸಿಂಗ್ ಅವರ ಹೊಗಳಿಕೆಯಲ್ಲಿ ಲಾಲ್‌ಕೃಷ್ಣ ಅಡ್ವಾಣಿಯವರಿಗೆ `ಸುರಂಗದ ಕೊನೆಯಲ್ಲಿನ ಬೆಳಕು' ಕಂಡಿರಲೂಬಹುದು. ಪ್ರಧಾನಿ ಅಭ್ಯರ್ಥಿಯಾಗಲು ತುದಿಗಾಲಲ್ಲಿ ನಿಂತಿರುವ ನರೇಂದ್ರಮೋದಿಯವರನ್ನು ಪಕ್ಕಕ್ಕೆ ತಳ್ಳಿ ತನ್ನ ಬದುಕಿನ ಕೊನೆಯ ಆಸೆಯನ್ನು ಈಡೇರಿಸಿಕೊಳ್ಳಲು ಈ ಅವಕಾಶವನ್ನು ಯಾಕೆ ಬಳಸಿಕೊಳ್ಳಬಾರದು ಎಂಬ ಯೋಚನೆ ಅವರಲ್ಲಿ ಹುಟ್ಟಿರಲೂ ಬಹುದು.
ಮಿತ್ರಪಕ್ಷಗಳಾದ ಜೆಡಿ (ಯು) ಮತ್ತು ಶಿವಸೇನೆ ಮಾತ್ರವಲ್ಲ ಬಿಜೆಪಿಯೊಳಗಿನ ಬಹುತೇಕ ಹಿರಿಯ ನಾಯಕರು ಕೂಡಾ ನರೇಂದ್ರಮೋದಿ ಅವರಿಗೆ ವಿರುದ್ಧವಾಗಿರುವುದರಿಂದ ತೃತೀಯರಂಗದ ನಾಯಕರು ಸ್ನೇಹಹಸ್ತ ಚಾಚಿದರೆ ಮೋದಿ ಅವರನ್ನು ಕೊಡವಿಕೊಳ್ಳುವುದು ಪಕ್ಷಕ್ಕೆ ಕಷ್ಟವಾಗಲಾರದು. ಮುಸ್ಲಿಮರನ್ನು ಓಲೈಸುತ್ತಿದ್ದಾರೆಂದು ಆರೋಪಿಸಿ ಸಮಾಜವಾದಿ ಪಕ್ಷದ ನಾಯಕನನ್ನು `ಮುಲ್ಲಾ ಮುಲಾಯಂ' ಎಂದು ದೂಷಿಸಿದ್ದ ಸಂಘ ಪರಿವಾರದ ನಾಯಕರು ಇಂತಹ `ಅಪವಿತ್ರ ಸಂಬಂಧ'ವನ್ನು ಒಪ್ಪಬಹುದೇ?
ದೇವರ ಮೂರ್ತಿಗಳಿಗೆ ಚಪ್ಪಲಿ ಹಾರ ಹಾಕಿದ ದ್ರಾವಿಡ ಪಕ್ಷಗಳ ಜತೆಯಲ್ಲಿಯೇ ಸೇರಿಕೊಂಡಾಗ ಆಕ್ಷೇಪ ಎತ್ತದವರು ಇದನ್ನು ಯಾಕೆ ಒಪ್ಪಲಾರರು? ಪಕ್ಷಕ್ಕೆ ಅಧಿಕಾರ ಬಂದರೆ ತಮಗೆ ಬಂದಂತೆ ಎಂದು ಅವರು ಅನುಭವದ ಬಲದಿಂದ ಕಂಡುಕೊಂಡಿಲ್ಲವೇ?  ಅಧಿಕಾರವನ್ನು ಚಪ್ಪರಿಸಿದವರಿಗೆ ಅದರ ಸವಿ ಗೊತ್ತಿಲ್ಲವೇ?

Sunday, March 24, 2013

ಸಂಜೂಬಾಬಾಗೆ ಕಣ್ಣೀರಿಡುವ ಮುನ್ನ ಯೋಚಿಸಿ

ಪ್ರಜಾಪ್ರಭುತ್ವದ ಹಾದಿ ತಪ್ಪಿಸುವ ಪ್ರಯತ್ನ ನಡೆದ ಸಂದರ್ಭಗಳಲ್ಲಿ ಕೆಲವರು ವ್ಯಂಗ್ಯವಾಗಿ `ಇಲ್ಲಿ ಎಲ್ಲರೂ ಸಮಾನರು, ಕೆಲವರು ಹೆಚ್ಚು ಸಮಾನರು' ಎಂದು ಹೇಳುವುದುಂಟು. ಮುಂಬೈ ಸ್ಫೋಟದ ಅಪರಾಧಿಗಳಲ್ಲಿ ಒಬ್ಬನಾದ ಹಿಂದಿ ಚಿತ್ರನಟ ಸಂಜಯ್‌ದತ್‌ಗೆ ಐದುವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಕ್ಕಾಗಿ ಗಣ್ಯಾತಿಗಣ್ಯರು ಕಣ್ಣೀರು ಸುರಿಸುತ್ತಿರುವುದು ಇಂತಹದ್ದೊಂದು ಸಂದರ್ಭ. ಚಲನಚಿತ್ರ ನಟನಟಿಯರಿಂದ ಹಿಡಿದು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷರಾದ ನ್ಯಾಯಮೂರ್ತಿ (ನಿವೃತ್ತ) ಮಾರ್ಕಂಡೇಯ ಕಟ್ಜು ವರೆಗೆ ಹಲವು ಖ್ಯಾತನಾಮರು ಸಂಜಯ್‌ದತ್ ಪರವಾಗಿ ಬೊಗಸೆಯೊಡ್ಡಿ ಸರ್ಕಾರ ಮತ್ತು ನ್ಯಾಯಾಲಯದ ಮುಂದೆ ದಯಾಭಿಕ್ಷೆ ಬೇಡುತ್ತಿದ್ದಾರೆ. ಸಾರ್ವಜನಿಕ ಅಭಿಪ್ರಾಯ ರೂಪಿಸುವ ಶಕ್ತಿ ಹೊಂದಿರುವ ಸಮಾಜದ `ಕೆನೆಪದರ'ದಂತಿರುವ ಈ ಗಣ್ಯರು ತಮ್ಮ ಪ್ರಭಾವಳಿಯ ಬಲದಿಂದ ಸಂಜಯ್‌ದತ್‌ಗೆ ಜೈಲು ಶಿಕ್ಷೆಯಾಗದಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿ ಗೆಲ್ಲಲೂ ಬಹುದು. ಆದರೆ ಸಮಾನತೆಯ ಬೀಜ ಮಂತ್ರದ ಪ್ರಜಾಪ್ರಭುತ್ವವನ್ನು ತಾವು ಸೋಲಿಸುತ್ತಿದ್ದೇವೆ ಎಂಬ ಕನಿಷ್ಠ ಜ್ಞಾನವಾದರೂ ಈ ಗಣ್ಯರಿಗಿದೆಯೇ?
ಮುಂಬೈ ಸ್ಫೋಟ ನಡೆದಾಗ ಸಂಜಯ್‌ದತ್ ಎಳೆಯ ಬಾಲಕನಾಗಿರಲಿಲ್ಲ, ಆತನಿಗೆ 33 ವರ್ಷವಾಗಿತ್ತು. ಸರಿ-ತಪ್ಪುಗಳನ್ನು ಅರ್ಥಮಾಡಿಕೊಳ್ಳದಷ್ಟು ಆತ ಅಮಾಯಕನಾಗಿರಲಿಲ್ಲ.  ಲೋಕಸಭಾ ಸದಸ್ಯ ತಂದೆ ಮತ್ತು ಖ್ಯಾತ ನಟಿ ನರ್ಗಿಸ್‌ದತ್‌ನಂತಹ ಪ್ರಭಾವಿ ದಂಪತಿಗಳ ಮುದ್ದಿನ ಮಗನಾದ ಸಂಜಯ್ ಆತನ ಓರಗೆಯ ಇತರ ಕೆಲವು ಯುವಕರು ಅನುಭವಿಸುತ್ತಿದ್ದಂತಹ ಅಸಹಾಯಕತೆ, ಅಸುರಕ್ಷತೆ ಹೊಂದಿರಲು ಕಾರಣಗಳೇ ಇಲ್ಲ. ಒಂದಲ್ಲ ಒಂದು ಬಗೆಯ ಅಪರಾಧಗಳಿಗಾಗಿ ಮುಂಬೈನ ಪತ್ರಿಕೆಗಳಲ್ಲಿ ನಿತ್ಯ ಸುದ್ದಿಯಲ್ಲಿರುತ್ತಿದ್ದ ದಾವೂದ್ ಇಬ್ರಾಹಿಂ, ಅಬುಸಲೇಮ್, ಶರತ್‌ಶೆಟ್ಟಿ ಮೊದಲಾದವರ ಅಸಲಿ ಚಹರೆಯೇನು ಎಂದು ತಿಳಿಯದಷ್ಟು ಸಂಜಯ್‌ದತ್ ಮುಗ್ಧನಾಗಿರಲಿಲ್ಲ. ಬೇಕಿದ್ದರೆ ಆತ್ಮರಕ್ಷಣೆಗಾಗಿ ರೈಫಲ್ ಇಟ್ಟುಕೊಳ್ಳಲು ಪರವಾನಗಿ ಪಡೆಯುವುದು ಸಂಸದರ ಮಗನಿಗೆ ಕಷ್ಟವೂ ಆಗಿರಲಿಲ್ಲ. ಆತ್ಮರಕ್ಷಣೆಗಿಂತ ಬೇರೆ ದುರುದ್ದೇಶ ಆತನಿಗೆ ಇತ್ತು ಎನ್ನುವುದನ್ನು ಆಗಿನ ಸಾಂಧರ್ಭಿಕ ಪುರಾವೆಗಳು ಹೇಳುತ್ತವೆ.
ಗುಜರಾತ್‌ನ ಕರಾವಳಿಯಲ್ಲಿ ಬಂದು ಬಿದ್ದಿದ್ದ ಬಂದೂಕು, ಪಿಸ್ತೂಲ್ ಮತ್ತು ಕೈಬಾಂಬುಗಳನ್ನು ದಾವೂದ್ ಸೂಚನೆ ಮೇರೆಗೆ ಮುಂಬೈಗೆ ತಂದಿದ್ದವನು ಅಬುಸಲೇಮ್. ಅವುಗಳನ್ನು ಎಲ್ಲಿ ಸಂಗ್ರಹಿಸಿಡುವುದು ಎನ್ನುವ ಪ್ರಶ್ನೆ ಎದುರಾದಾಗ ನೆನಪಾದವನು ಪರಿಚಯಸ್ಥನಾದ ಸಂಜಯ್‌ದತ್ ಎಂಬ ನಟ. ದುಬೈನಿಂದ ಬಂದ ಆದೇಶದ ಮೇರೆಗೆ ಈ ಕೆಲಸವನ್ನು ಸಂತೋಷದಿಂದಲೇ ಒಪ್ಪಿಕೊಂಡಿದ್ದ ಸಂಜಯ್‌ದತ್  ಶಸ್ತ್ರಾಸ್ತ್ರಗಳನ್ನೆಲ್ಲ ತಮ್ಮ ಮನೆಯ ಗ್ಯಾರೇಜ್‌ನಲ್ಲಿಟ್ಟುಕೊಂಡಿದ್ದ. ಕೆಲವು ದಿನಗಳನಂತರ ಕೈಬಾಂಬುಗಳನ್ನು ವಾಪಸು ಕೊಂಡುಹೋಗುವಂತೆ ಅಬುಸಲೇಮ್‌ಗೆ ಹೇಳಿದ್ದ ಸಂಜಯದತ್ ಎಕೆ-56 ಬಂದೂಕು ಮತ್ತು ಪಿಸ್ತೂಲ್‌ಗಳನ್ನು ಮಾತ್ರ ತನ್ನಲ್ಲಿಯೇ ಇಟ್ಟುಕೊಂಡಿದ್ದ. ಒಂದು ಪಿಸ್ತೂಲ್ ಮಾತ್ರ ಇಟ್ಟುಕೊಂಡಿದ್ದರೆ ಅದು ಆತ್ಮರಕ್ಷಣೆಗೆಂದು ವಾದವನ್ನಾದರೂ ಮಾಡಬಹುದಿತ್ತು. ಇದರ ಸುಳಿವು ಪೊಲೀಸರಿಗೆ ಇದ್ದರೂ ಮಾರಿಷಸ್‌ನಲ್ಲಿದ್ದ ಸಂಜಯ್‌ದತ್ ದೇಶಕ್ಕೆ ಹಿಂದಿರುಗಲೆಂದು ಕಾಯುತ್ತಾ ಕೂತಿದ್ದರು.ಆದರೆ ಪತ್ರಿಕೆಯೊಂದು ಈ ಸುದ್ದಿ ಪ್ರಕಟಿಸಿದ ಕೂಡಲೇ ವಿಷಯ ತಿಳಿದುಕೊಂಡು ಜಾಗೃತನಾದ ಸಂಜಯ್‌ದತ್ ಗೆಳೆಯರಿಗೆ ಪೋನ್ ಮಾಡಿ ಮನೆಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ನಾಶಪಡಿಸುವಂತೆ ಕೇಳಿಕೊಂಡಿದ್ದ. ಸಂಜಯ್‌ದತ್ ಈ ಎಲ್ಲ ಕೃತ್ಯಗಳನ್ನು ಅಮಾಯಕತನದಿಂದ ಇಲ್ಲವೆ ಆತ್ಮರಕ್ಷಣೆಗಾಗಿ ಮಾಡಿದ್ದ ಎಂದು ಹೇಳುವವರನ್ನು ಮೂರ್ಖರೆನ್ನದೆ ಬೇರೆ ಹೇಗೆ ಕರೆಯಲು ಸಾಧ್ಯ? 1993ರಲ್ಲಿ ಆತ ಏನು ಮಾಡಿದ್ದನೋ ಅದು ಬುದ್ದಿಪೂರ್ವಕವಾಗಿ, ಪರಿಣಾಮದ ಬಗ್ಗೆ ಅರಿವಿದ್ದೂ ಮಾಡಿದ್ದ ಅಪರಾಧ. ಎಲ್ಲರಿಗೂ ಅನ್ವಯವಾಗುವ ಕಾನೂನು ಪ್ರಕಾರ ಒಬ್ಬ ವ್ಯಕ್ತಿ ಅಪರಾಧಿ ಎಂದೆನಿಸಿಕೊಳ್ಳಲು ಇನ್ನೇನು ಬೇಕು?
ಸಂಜಯ್‌ದತ್‌ನ ನುಣುಪು ಕೆನ್ನೆಗಳಿಂದ ಜಾರಿಬೀಳುತ್ತಿರುವ ಕಣ್ಣೀರು ಒರೆಸಲು ಹೊರಟ ಈ ಗಣ್ಯರಿಗೆ 1993ರಲ್ಲಿ ಮುಂಬೈನ ಹನ್ನೆರಡು ಕಡೆಗಳಲ್ಲಿ ನಡೆದ ಬಾಂಬ್ ಸ್ಫೋಟದಿಂದ ಮೃತರಾದ 257 ಅಮಾಯಕರ ಕುಟುಂಬದ ಸದಸ್ಯರು 20 ವರ್ಷಗಳಿಂದ ಹರಿಸುತ್ತಿರುವ ಕಣ್ಣೀರು ಯಾಕೆ ಕಾಣಿಸುತ್ತಿಲ್ಲವೋ ಗೊತ್ತಿಲ್ಲ. ಸಂಜಯ್‌ದತ್ ಬಂಧನದಿಂದ ಆತನ ಮೇಲೆ ಚಿತ್ರನಿರ್ಮಾಪಕರು ಹೂಡಿದ್ದ 250 ಕೋಟಿ ರೂಪಾಯಿ ಮುಳುಗಿ ಹೋಗುತ್ತದೆ ಎನ್ನುವುದು ಇನ್ನು ಕೆಲವರ ಚಿಂತೆ. ಬಾಲಿವುಡ್‌ನ ಬಹುತೇಕ ನಿರ್ಮಾಪಕರ ಹಿನ್ನೆಲೆ ಏನು, ಅವರ ದುಡ್ಡಿನ ಮೂಲ ಯಾವುದು ಎನ್ನುವುದು ಈ ಗಣ್ಯರಿಗೆ ಗೊತ್ತಿಲ್ಲವೇ? ಇದರಿಂದ ಚಿತ್ರರಂಗವನ್ನೇ ನಂಬಿದ್ದ ನೂರಾರು ಕುಟುಂಬಗಳಿಗೆ ಅನ್ಯಾಯವಾಗುತ್ತಿದೆ ಎನ್ನುವ ಎಂದಿನ ಒಗ್ಗರಣೆ ಬೇರೆ. ಮುಂಬೈನ ಬಟ್ಟೆಗಿರಣಿಗಳು ಮುಚ್ಚಿ ಸಾವಿರಾರು ಕಾರ್ಮಿಕರು ಬೀದಿಗೆ ಬಿದ್ದಾಗ ಇವರ‌್ಯಾರೂ ಕಣ್ಣೀರು ಹಾಕಿಲ್ಲ. ಮಹಾರಾಷ್ಟ್ರದಲ್ಲಿಯೇ ಬರದ ಬೇಗೆ ಮತ್ತ ಸಾಲದ ಹೊರೆ ತಾಳಲಾರದೆ ರೈತರು ಆತ್ಮಹತ್ಯೆ ಮಾಡಿಕೊಂಡಾಗಲೂ ಇವರ‌್ಯಾರೂ ದನಿ ಎತ್ತಲಿಲ್ಲ. ವಿರೋಧಿಗಳಿಂದ `ಆಸ್ಥಾನ ವಿದೂಷಕ'ನೆಂದು ಆರೋಪಕ್ಕೊಳಗಾಗಿರುವ ನ್ಯಾ.ಕಟ್ಜು ಅವರು ಒಮ್ಮಮ್ಮೆ ಈ ಪಾತ್ರವನ್ನು ಗಂಭೀರವಾಗಿ ಸ್ವೀಕರಿಸಲು ಹೊರಟವರಂತೆ ಕಾಣುತ್ತಾರೆ. ಮಹಾತ್ಮಗಾಂಧೀಜಿಯನ್ನು ಬಳಸಿಕೊಂಡು ಒಂದೆರಡು ವ್ಯಾಪಾರಿ ಚಿತ್ರಗಳಲ್ಲಿ ನಟಿಸಿದ್ದ ನಟನೊಬ್ಬನನ್ನು ಸಮಾಜಸುಧಾರಕನೆಂದು ಬಿಂಬಿಸಲು ಹೊರಟಿರುವ ನ್ಯಾ.ಕಟ್ಜು ಅವರ ಕುರುಡುಕಣ್ಣಿಗೆ ಏನೆನ್ನಬೇಕು. ಅವರಿಗೆ ಕಾಣದೆ ಇದ್ದದ್ದು ಇನ್ನಷ್ಟು ಇದೆ.
ಯುಸೂಪ್ ನಲ್‌ವಾಲಾ ಜೀವನದಲ್ಲಿ ಮಾಡಿದ್ದ ಏಕೈಕ ತಪ್ಪೆಂದರೆ ಸಂಜಯ್‌ದತ್‌ನ ಇನ್ನೊಂದು ಅಕ್ರಮ ಚಟುವಟಿಕೆಯಾಗಿದ್ದ ಮೃಗ ಬೇಟೆಗೆ ಆಗಾಗ ಜತೆಯಲ್ಲಿ ಹೋಗಿದ್ದು. ಉಳಿದಂತೆ ದಾವೂದ್ ಮತ್ತಿತರ ಪಾತಕಿಗಳ ಜತೆ ಆತನಿಗೆ ಯಾವ ಸಂಬಂಧವೂ ಇರಲಿಲ್ಲ. ಸಂಜಯ್‌ದತ್ ಸೂಚನೆಯಂತೆ ಆತನ ಮನೆಯಲ್ಲಿದ್ದ ಎಕೆ-56 ಮತ್ತು ಪಿಸ್ತೂಲ್‌ಗಳನ್ನು ಕುಲುಮೆಯಲ್ಲಿ ಹಾಕಿ ನಾಶಪಡಿಸಲು ಪ್ರಯತ್ನಿಸಿದ್ದ ನಲ್‌ವಾಲಾ ಈಗಾಗಲೇ ಐದುವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ನಲ್‌ವಾಲಾನಿಗೆ ನೆರವಾಗಿದ್ದ ಕುಲುಮೆಯ ಮಾಲೀಕ ಕೇರ್ಸಿ ಅಡ್‌ಜೇನಿಯಾ ಎರಡು ವರ್ಷ, ಶಸ್ತ್ರಾಸ್ತ್ರ ನಾಶಕ್ಕೆ ಮೊದಲು ಅವುಗಳನ್ನು ಎರಡು ದಿನ ಮನೆಯಲ್ಲಿ ಇಟ್ಟುಕೊಂಡಿದ್ದ ಜೈಬುನ್ಸಿಯಾ ಖಾದ್ರಿ ಐದು ವರ್ಷ, ಶಸ್ತ್ರಾಸ್ತ್ರಗಳನ್ನು ಸಂಜಯ್‌ದತ್ ಮನೆಯಿಂದ ಕೊಂಡೊಯ್ದಿದ್ದ ಮನಸೂರ್ ಅಹ್ಮದ್ ಐದುವರ್ಷ, ಸಂಜಯ್‌ದತ್‌ಗೆ ಶಸ್ತ್ರಾಸ್ತ್ರಗಳನ್ನು ಕೊಟ್ಟಿದ್ದ ಇಬ್ರಾಹಿಂ ಮೂಸಾ ಹತ್ತುವರ್ಷ, ಸಂಜಯ್‌ದತ್ ಮನೆಗೆ ಶಸ್ತ್ರಾಸ್ತ್ರಗಳನ್ನು ಕೊಂಡೊಯ್ದಿದ್ದ ಸಮೀರ್ ಹಿಂಗೋರಾ 9 ವರ್ಷ, ಮತ್ತು ದುಬೈನಲ್ಲಿ ನಡೆದಿದ್ದ ಸಂಚಿನ ಸಭೆಯಲ್ಲಿ ಪಾಲ್ಗೊಂಡಿದ್ದ ಏಜಾಜ್ ಪಠಾಣ್ ಹತ್ತು ವರ್ಷ ಉಗ್ರ ಕಾರಾಗೃಹ ಶಿಕ್ಷೆ ಅನುಭವಿಸಿದ್ದಾರೆ.  ಇವರೆಲ್ಲರಿಗೂ ಮುಂಬೈ ಟಾಡಾ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಶಸ್ತ್ರಾಸ್ತ್ರಗಳ ಸಂಗ್ರಹ ಮತ್ತು ನಾಶದ ಪ್ರಕರಣದಲ್ಲಿ ಸಂಜಯ್‌ದತ್ ಜತೆ ಭಾಗಿಯಾಗಿದ್ದ ಕಾರಣಕ್ಕಾಗಿ ಎರಡರಿಂದ ಹತ್ತುವರ್ಷಗಳ ಜೈಲುಶಿಕ್ಷೆ ಅನುಭವಿಸಿದ್ದ ಏಳು ಮಂದಿಯ ಬಗ್ಗೆ ಯಾರೂ ಹಿಂದೆಯೂ  ಮಾತನಾಡಿಲ್ಲ ಮತ್ತು ಈಗಲೂ ಮಾತನಾಡುತ್ತಿಲ್ಲ. ಇವರಲ್ಲಿ ಹೆಚ್ಚಿನವರಿಗೆ ದೊಡ್ಡ ಅಪರಾಧಗಳ ಹಿನ್ನೆಲೆ ಇರಲಿಲ್ಲ, ಅವರು ಮಾಡಿದ್ದ ಏಕೈಕ ಅಪರಾಧ ಎಂದರೆ ಸಂಜಯ್‌ದತ್ ಜತೆಗಿನ ಸ್ನೇಹ ಮಾಡಿದ್ದು.
ಈ ಏಳು ಮಂದಿಗೆ ಶಿಕ್ಷೆ ವಿಧಿಸಿದ್ದ ನ್ಯಾಯಾಲಯ ಸಂಜಯ್‌ದತ್ ಅವರನ್ನು ಮುಂಬೈ ಬಾಂಬುಸ್ಫೋಟದ ಸಂಚಿನ ಆರೋಪದಿಂದ ಬಿಡುಗಡೆಗೊಳಿಸಿತ್ತು. ಇದರಲ್ಲಿ ಆ ಕಾಲದಲ್ಲಿ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಶಿವಸೇನೆಯ ನಾಯಕ ಬಾಳ್ ಠಾಕ್ರೆ ಪಾತ್ರ ಇತ್ತು. ಮುಸ್ಲಿಮರೆಂದರೆ ಬೆಂಕಿಕಾರುತ್ತಿದ್ದ ಮತ್ತು ಬಾಂಬು ಸ್ಫೋಟದಲ್ಲಿ ಭಾಗವಹಿಸಿದ್ದವರನ್ನೆಲ್ಲ ಗಲ್ಲಿಗೇರಿಸಬೇಕೆಂದು ಮಾತನಾಡುತ್ತಿದ್ದ ಠಾಕ್ರೆ ಅದೇ ಪ್ರಕರಣದ ಒಬ್ಬ ಆರೋಪಿ ಸಂಜಯ್‌ದತ್‌ಗೆ ಯಾಕೆ ನೆರವಾದರು? ಇದರಲ್ಲಿ ಅವರಿಗೆ ಏನು ಆಸಕ್ತಿ ಇತ್ತು? ಈ ಪ್ರಶ್ನೆಗಳ ಬಗ್ಗೆ ಈ ವರೆಗೆ ಚರ್ಚೆಯಾಗಿಲ್ಲ. ಈಗ ಬಾಳ್ ಠಾಕ್ರೆ ಮಾದರಿಯಲ್ಲಿಯೇ ಇತರರು ಮಾತನಾಡತೊಡಗಿದ್ದಾರೆ.
`ಮರಣದಂಡನೆಗೆ ಗುರಿಯಾಗಿರುವವರೆಲ್ಲರೂ ಯಾಕೆ ಸಮಾಜದಲ್ಲಿರುವ ಬಡವರು, ದುರ್ಬಲರು, ದಲಿತರು ಮತ್ತು ಅಲ್ಪಸಂಖ್ಯಾತರು ಮಾತ್ರ ಆಗಿರುತ್ತಾರೆ?' ಎಂದು ಡಾ.ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದಾಗ ಪ್ರಶ್ನಿಸಿದ್ದರು. ಇದೇ ಅಭಿಪ್ರಾಯವನ್ನು ಬೆಂಬಲಿಸುವವರಂತೆ ಮಾತನಾಡಿದ್ದ ಹಿರಿಯ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ` ಯಾಕೆ ಬಡವರು, ಕೆಳಜಾತಿ ಜನರು ಮತ್ತು ವ್ಯವಸ್ಥೆಯನ್ನು ಪ್ರಶ್ನಿಸುವವರು ಮಾತ್ರ ಮರಣದಂಡನೆಗೆ ಗುರಿಯಾಗುತ್ತಾರೆ,  ಶ್ರಿಮಂತರು, ಮೇಲ್ಜಾತಿ ಜನರು ಮತ್ತು ವ್ಯವಸ್ಥೆಯ ಪರಿಪಾಲಕರು ಯಾಕೆ ಮರಣದಂಡನೆಗೀಡಾದವರ ಅಪರಾಧಿಗಳ ಪಟ್ಟಿಯಲ್ಲಿ ಕಾಣುತ್ತಿಲ್ಲ' ಎಂದು ಪ್ರಶ್ನಿಸಿದ್ದರು. ಗಲ್ಲಿಗೇರಲು ಸಿದ್ದವಾಗಿ ಜೈಲಲ್ಲಿ ದಿನ ಎಣಿಸುತ್ತಿರುವ ಅಪರಾಧಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಅಧ್ಯಯನವನ್ನು ಯಾರಾದರೂ ಮಾಡಿದರೆ ಡಾ.ಕಲಾಂ ಮತ್ತು ನ್ಯಾ.ಅಯ್ಯರ್ ಕೇಳಿದ್ದ ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ಮನುಷ್ಯನ ಸಹಜ ಸ್ವಭಾವಗಳಲ್ಲೊಂದಾದ ಅಪರಾಧಗಳಿಗೆ ಜಾತಿ,ಧರ್ಮ ವರ್ಗಗಳ ಭೇದ ಇಲ್ಲದೆ ಇದ್ದರೂ ಅಪರಾಧಿಗಳಲ್ಲಿ ಮಾತ್ರ ಈ ಭೇದ ಯಾಕೆ ಕಾಣುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಲು ಹೋದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯ ನಾವು ನೋಡಲಿಚ್ಚಿಸದ ಇನ್ನೊಂದು ಮುಖ ಅನಾವರಣಗೊಳ್ಳುತ್ತದೆ.
ಪ್ರಶ್ನೆ ಅಷ್ಟೊಂದು ಕಷ್ಟದ್ದಲ್ಲ. ಎಂತಹ ಘನಘೋರ ಅಪರಾಧಗಳನ್ನು ಮಾಡಿದರೂ ಖ್ಯಾತ ವಕೀಲರನ್ನು ನೇಮಿಸಿಕೊಂಡರೆ ಯಾವ ಕಾನೂನಿನಿಂದಲೂ ಕೂದಲು ಕೊಂಕದ ರೀತಿಯಲ್ಲಿ ಪಾರಾಗಬಹುದೆನ್ನುವುದಕ್ಕೆ ಎಷ್ಟಾದರೂ ಉದಾಹರಣೆಗಳನ್ನು ಕೊಡುತ್ತಾಹೋಗಬಹುದು. ಆದರೆ ಆ ಕ್ಷಣದ ಆವೇಶ, ಅಮಾಯಕತನ ಇಲ್ಲವೆ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಅಪರಾಧ ಮಾಡಿ ಜೈಲು ಸೇರುವ ದುರ್ಬಲ,ಬಡವ, ಕೆಳಜಾತಿಯ ಕೈದಿಗಳಿಗೆ ದುಬಾರಿ ವಕೀಲರನ್ನು ನೇಮಿಸಿಕೊಳ್ಳುವ ಆರ್ಥಿಕ ಶಕ್ತಿಯೂ ಇರುವುದಿಲ್ಲ. ಒಂದೊಮ್ಮೆ ನ್ಯಾಯಾಲಯ ಜಾಮೀನು ನೀಡಿದರೂ ಅದನ್ನು ಒದಗಿಸುವ ಸಾಮರ್ಥ್ಯ ಅವರಲ್ಲಿಲ್ಲದೆ ಜೈಲಲ್ಲಿಯೇ ಇದ್ದು ಬಿಡುತ್ತಾರೆ. ಎಷ್ಟೊ ಸಂದರ್ಭಗಳಲ್ಲಿ ಒಡೆಯನ ಮೇಲಿನ ಆರೋಪವನ್ನು ಬೆದರಿಕೆಯಿಂದಲೋ, ದುಡ್ಡಿನ ಆಸೆಯಿಂದಲೋ ತಮ್ಮ ತಲೆಮೇಲೆ ಹೊತ್ತು ಜೈಲು ಸೇರುವವರೂ ಇದ್ದಾರೆ. ಸಲ್ಮಾನ್‌ಖಾನ್ ಡ್ರೈವ್ ಮಾಡುತ್ತಿದ್ದ ಕಾರು ಅಪಘಾತ ಮಾಡಿದರೂ ಆರೋಪಿ ಮಾತ್ರ ಆತನ ಚಾಲಕನಾಗಿರುತ್ತಾನೆ.ವಿಚಾರಾಧೀನ ಕೈದಿಗಳಲ್ಲಿ ಬಹುಪಾಲು ಮಂದಿ ಈ ರೀತಿ ದಾಳಗಳಾಗಿ ಬಳಕೆಯಾದವರು. ಸೂತ್ರದಾರರು ಬೇರೆಲ್ಲೊ ಇರುತ್ತಾರೆ. ಅಪರಾಧಗಳ ಸುಪಾರಿ ಕೊಟ್ಟವರನ್ನು ಪೊಲೀಸರು ಬಂಧಿಸಿದ್ದೇ ಕಡಿಮೆ, ಜೈಲು ಸೇರಿದವರಲ್ಲಿ ಹೆಚ್ಚಿನವರು ಕಾಸಿಗಾಗಿ ಸುಪಾರಿ ಪಡೆದು ಕೊಲೆ-ಹಲ್ಲೆ ನಡೆಸಿದವರು. ಸಾಮಾನ್ಯವಾಗಿ ಅವರಿಗೂ ಮತ್ತು ಅವರಿಗೆ ಬಲಿಯಾದವರಿಗೂ ವೈಯಕ್ತಿಕವಾದ ಯಾವ ದ್ವೇಷವೂ ಇರುವುದಿಲ್ಲ.
ಎಂಟುವರ್ಷಗಳ ಹಿಂದೆ ಅಸ್ಸಾಂನ ಗುಡ್ಡಗಾಡು ಜನಾಂಗಕ್ಕೆ ಸೇರಿದ್ದ ಮಾಚಂಗ್ ಲಲುಂಗ್ ಹೆಸರು ಇಡೀ ದೇಶದ ಗಮನ ಸೆಳೆದಿತ್ತು . ಯಾರದ್ದೋ ಮೇಲೆ ಹಲ್ಲೆ ನಡೆಸಿದ್ದ ಕಾರಣಕ್ಕೆ 23ನೇ ವರ್ಷದಲ್ಲಿ ಬಂಧಿತನಾಗಿದ್ದ ಲಲುಂಗ್ 54 ವರ್ಷಗಳನ್ನು ಜೈಲಲ್ಲಿ ಕಳೆದು 77ನೇ ವರ್ಷದಲ್ಲಿ ಬಿಡುಗಡೆಯಾಗಿದ್ದರು. ಅದರ ನಂತರದ ಎರಡೇ ವರ್ಷಗಳಲ್ಲಿ ಅವರು ಮೃತಪಟ್ಟಿದ್ದರು. ಇದು ಒಬ್ಬ ಲಲುಂಗ್ ಅವರಿಗೆ ಸಂಬಂಧಿಸಿದ್ದ ಕತೆಯಲ್ಲ. ಭಾರತದ ಜೈಲುಗಳ ಒಳಗೆ ಇಣುಕಿದರೆ ಇಂತಹ ನೂರಾರು ಲಲುಂಗ್‌ಗಳು ಪತ್ತೆಯಾಗಬಹುದು. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ದೇಶದ 1356 ಜೈಲುಗಳಲ್ಲಿರುವ ಮೂರುವರೆ ಲಕ್ಷ ಕೈದಿಗಳಲ್ಲಿ ವಿಚಾರಣಾಧೀನ ಕೈದಿಗಳೇ ಶೇಕಡಾ 70ರಷ್ಟಿದ್ದಾರೆ. ಈ ವಿಚಾರಾಧೀನ ಕೈದಿಗಳಲ್ಲಿ ಸುಮಾರು 1.75 ಲಕ್ಷ ಕೈದಿಗಳು ಹಲ್ಲೆ, ಕಳ್ಳತನ ಮೊದಲಾದ ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾಗಿದ್ದವರಂತೆ. ಇವರೆಲ್ಲ ತಮ್ಮ ಮೇಲಿನ ಆರೋಪಿತ ಅಪರಾಧಗಳಿಗೆ ನೀಡಲಾಗುವ ಶಿಕ್ಷೆಯನ್ನು ಎಂದೋ ಅನುಭವಿಸಿಬಿಟ್ಟಿದ್ದಾರೆ. ಇಂತಹ ವಿಚಾರಣಾಧೀನ ಕೈದಿಗಳ ಬಗ್ಗೆ ಶೀಘ್ರಗತಿಯಲ್ಲಿ ವಿಚಾರಣೆ ನಡೆಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸುವಂತೆ ಕೆಳನ್ಯಾಯಾಲಯಗಳಿಗೆ ಸೂಚನೆ ನೀಡುವಂತೆ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಎಂ.ವೀರಪ್ಪ ಮೊಯಿಲಿ  ಕಾನೂನು ಸಚಿವರಾಗಿದ್ದ ಪತ್ರ ಬರೆದಿದ್ದರು. ಇದಕ್ಕಾಗಿ ಬಡ ಮತ್ತು ದುರ್ಬಲ ಕೈದಿಗಳಿಗೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ನೀಡಲು ಕೂಡಾ ಸೂಚನೆ ನೀಡಿದ್ದರು. ಆದರೆ ಪರಿಸ್ಥಿತಿಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ.
ಸಂಜೂಬಾಬಾನಿಗಾಗಿ ಕಣ್ಣೀರು ಸುರಿಸುವವರು ಅದರ ಬದಲಿಗೆ ಜೈಲಲ್ಲಿ ಕೊಳೆಯುತ್ತಿರುವ ಆರೋಪಿಗಳ ಶೀಘ್ರ ವಿಚಾರಣೆಗಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಮುಂದಾದರೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಜನತೆಯ ವಿಶ್ವಾಸವನ್ನು ಉಳಿಸಲು ನೆರವು ನೀಡಿದ ಪುಣ್ಯವನ್ನಾದರೂ ಕಟ್ಟಿಕೊಳ್ಳಬಹುದು. ಅದನ್ನು ಮಾಡಲಿಕ್ಕೆ ಸಾಧ್ಯವಾಗದಿದ್ದರೆ ಕನಿಷ್ಠ ಇಂತಹ `ಗಣ್ಯ ಅಪರಾಧಿ'ಗಳ ನೆರವಿಗೆ ಧಾವಿಸಿ ಪ್ರಜಾಪ್ರಭುತ್ವವನ್ನು ಅಪಹ್ಯಾಸಕ್ಕೀಡು ಮಾಡಬಾರದು, ಬಾಯಿ ಮುಚ್ಚಿಕೊಂಡು ಕೂರಬೇಕು.

Sunday, March 17, 2013

ನ್ಯಾಯಮೂರ್ತಿ ಕಟ್ಜು ಅವರ ತಪ್ಪು ರೋಗನಿದಾನ

ಪತ್ರಕರ್ತರ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿಗೆ ಸಂಬಂಧಿಸಿದ ಹಳೆಯ ವಿವಾದದ ಜೇನುಗೂಡಿಗೆ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ)ಯ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ಮಾರ್ಕಂಡೇಯ ಕಟ್ಜು ಕೈಹಾಕಿದ್ದಾರೆ.
`ಪತ್ರಕರ್ತರಾಗಿ ಕಾರ್ಯನಿರ್ವಹಿಸಲು ಅರ್ಹತೆಯನ್ನು ಕಾನೂನುಬದ್ಧವಾಗಿ ನಿಗದಿಪಡಿಸುವ ಅಗತ್ಯ ಇದೆ' ಎಂದು ಪ್ರತಿಪಾದಿಸಿರುವ ನ್ಯಾ.ಕಟ್ಜು ಮಾಧ್ಯಮ ರಂಗ ಪ್ರವೇಶಿಸಲು ಅಗತ್ಯವಾದ ಅರ್ಹತೆಯೇನಿರಬೇಕೆಂದು ಸೂಚಿಸಲು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.
`ತರಬೇತಿ ಇಲ್ಲದವರ ಪ್ರವೇಶ ಮಾಧ್ಯಮರಂಗದ ಮೇಲೆ ದುಷ್ಪರಿಣಾಮ ಉಂಟುಮಾಡುತ್ತಿದೆ. ಈ ರೀತಿ ಬಂದವರು ಮಾಧ್ಯಮರಂಗದಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡುತ್ತಿಲ್ಲ' ಎಂದು ಯಥಾಪ್ರಕಾರ ತನ್ನದೇ `ತೀರ್ಪು' ಕೂಡಾ ಅವರು ನೀಡಿದ್ದಾರೆ. `....ಬೇರೆ ಯಾವುದೋ ವಿಷಯದ ಮೇಲೆ ಪಿಎಚ್‌ಡಿಯನ್ನೇ ಪಡೆದುಕೊಂಡಿದ್ದರೂ ಪತ್ರಕರ್ತರಾಗಲು ಬಯಸುವವರು ಕಡ್ಡಾಯವಾಗಿ ಪತ್ರಿಕೋದ್ಯಮದ ಶಿಕ್ಷಣವನ್ನು ಪಡೆದಿರಬೇಕು. ಇದಾದ ನಂತರ ವಕೀಲರಿಗೆ ಬಾರ್ ಕೌನ್ಸಿಲ್ ನೀಡುವಂತೆ ಪತ್ರಕರ್ತರಿಗೂ ಪರವಾನಗಿ ಪತ್ರ ನೀಡಬೇಕು. ಪತ್ರಕರ್ತರು ತಪ್ಪುಮಾಡಿದರೆ ಅವರಿಗೆ ನೀಡಲಾಗಿರುವ ಪರವಾನಗಿಯನ್ನು ವಾಪಸು ಪಡೆಯಬೇಕು....' ಎಂದು ನ್ಯಾ.ಕಟ್ಜು ಮೊದಲ ಪತ್ರಿಕಾ ಹೇಳಿಕೆಯ ನಂತರ ನೀಡಿದ ಸ್ಪಷ್ಟೀಕರಣದಲ್ಲಿ ವಿವರಿಸಿದ್ದಾರೆ.
ಪಿಸಿಐ ಅಧ್ಯಕ್ಷರಾಗಿ ನೇಮಕಗೊಂಡ ದಿನದಿಂದ ನ್ಯಾ.ಕಟ್ಜು ಚರ್ಚೆಗೆ ಒಡ್ಡಿರುವ ಹಲವು ವಿಷಯಗಳಲ್ಲಿ ಪತ್ರಕರ್ತರ ಅರ್ಹತೆ ಕೂಡಾ ಒಂದು. ವಕೀಲರು, ವೈದ್ಯರು, ಶಿಕ್ಷಕರಿಗೆಲ್ಲ ನಿರ್ದಿಷ್ಟ ವಿದ್ಯಾರ್ಹತೆ ಮತ್ತು ತರಬೇತಿ ಕಡ್ಡಾಯವಾಗಿರುವಾಗ ಪತ್ರಕರ್ತರಿಗೆ ಯಾಕೆ ಬೇಡ ಎನ್ನುವ ಪ್ರಶ್ನೆಯನ್ನು ನ್ಯಾ.ಕಟ್ಜು ಮಾತ್ರ ಅಲ್ಲ, ಸಾಮಾನ್ಯ ಜನರೂ ಕೇಳುತ್ತಿದ್ದಾರೆ. `
ಪತ್ರಕರ್ತರೆಂದರೆ ರಾಜಕಾರಣಿಗಳು ಇದ್ದ ಹಾಗೆ, ಯಾವುದೇ ಅರ್ಹತೆ ಬೇಡ, ಟಿವಿ ಚಾನೆಲ್‌ಗಳ ಪ್ರವೇಶದ ನಂತರ ಪತ್ರಕರ್ತರಾಗುವುದು ಇನ್ನೂ ಸುಲಭವಾಗಿದೆ. ಓದು-ಬರಹ ಕೂಡಾ ಬೇಡ, ಬಾಯ್ತುಂಬಾ ಮಾತನಾಡಲು ಬಂದರೆ ಸಾಕು ಪತ್ರಕರ್ತರಾಗಬಹುದು' ಎಂಬ ಸಾಮಾನ್ಯ ಜನರ ವ್ಯಂಗ್ಯದ ಮಾತುಗಳನ್ನು ಸಾರಾಸಗಟಾಗಿ ತಳ್ಳಿಹಾಕುವಂತಹ ಸ್ಥಿತಿಯಲ್ಲಿಯೂ ಯಾರೂ ಇಲ್ಲ.
ಆದರೆ ದೇಶದ ಮಾಧ್ಯಮರಂಗಕ್ಕೆ ಹತ್ತಿರುವ ರೋಗಕ್ಕೆ ಪತ್ರಕರ್ತರ  ಶೈಕ್ಷಣಿಕ ಅರ್ಹತೆ ಮತ್ತು ತರಬೇತಿಯ ಕೊರತೆ ಕಾರಣ ಎಂಬ ಸುಲಭ ತೀರ್ಮಾನಕ್ಕೆ ಬರಬಹುದೇ? ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯಗೊಳಿಸುವುದರಿಂದ ರೋಗಗ್ರಸ್ತ ಮಾಧ್ಯಮರಂಗ ಕಳೆದುಕೊಂಡಿರುವ ಆರೋಗ್ಯವನ್ನು ಮರಳಿ ಪಡೆಯಬಹುದೇ?
ಸ್ಥಳೀಯವಾದ ಸಣ್ಣಪುಟ್ಟ ಹಗರಣಗಳನ್ನು ಪಕ್ಕಕ್ಕೆ ಇಟ್ಟುಬಿಡುವ, ದೇಶದ ಮಾಧ್ಯಮರಂಗದ ನೈತಿಕ ಬುನಾದಿಯನ್ನೇ ಅಲುಗಾಡಿಸಿದ `ಕಾಸಿಗಾಗಿ ಸುದ್ದಿ' ಮತ್ತು `ರಾಡಿಯಾ ಟೇಪ್'ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೊಳಗಾಗಿರುವ ಖ್ಯಾತ ಪತ್ರಕರ್ತರು, ಉದ್ಯಮಿಯೊಬ್ಬರಿಂದ ಹಣಸುಲಿಗೆ ಮಾಡಲು ಹೊರಟಿದ್ದರೆಂಬ ಆರೋಪಕ್ಕೊಳಗಾಗಿರುವ ಟಿವಿಚಾನೆಲ್‌ನ ಹಿರಿಯ ಪತ್ರಕರ್ತರು, 2ಜಿ ಹಗರಣದಿಂದ ಹಿಡಿದು ಅಕ್ರಮ ಗಣಿಗಾರಿಕೆ ವರೆಗಿನ ಹಲವಾರು ಹಗರಣಗಳಲ್ಲಿ ಫಲಾನುಭವಿಗಳೆಂಬ ಆರೋಪ ಹೊತ್ತಿರುವ ಪತ್ರಕರ್ತರಲ್ಲಿ ಯಾರು ಅನಕ್ಷರಸ್ಥರು? ಯಾರು ಪತ್ರಿಕೋದ್ಯಮದ ಬಗ್ಗೆ ತರಬೇತಿ ಪಡೆಯದವರು ? ವಿಚಿತ್ರವೆಂದರೆ ಪತ್ರಕರ್ತರಿಗೆ ಅರ್ಹತೆಯನ್ನು ನಿಗದಿಪಡಿಸಲು ಹೊರಟಿರುವ ನ್ಯಾ.ಕಟ್ಜು ಅವರು ಮಾಧ್ಯಮ ಸಂಸ್ಥೆಗಳನ್ನು ಸ್ಥಾಪಿಸುವವರಿಗೆ ಏನು ಅರ್ಹತೆ ಇರಬೇಕೆಂದು ಈ ವರೆಗೆ ಹೇಳಿಲ್ಲ.
`ಕಾಸಿಗಾಗಿ ಸುದ್ದಿ' ಹಗರಣದಲ್ಲಿ ಭಾಗಿಯಾದವರು ಪತ್ರಕರ್ತರಲ್ಲ, ಕೆಲವು ದೊಡ್ಡ ಮಾಧ್ಯಮಸಂಸ್ಥೆಗಳ ಮಾಲೀಕರು. ಪಿಸಿಐ ಕಪಾಟಿನಲ್ಲಿ ದೂಳು ತಿನ್ನುತ್ತಿರುವ ಅವರದ್ದೇ ಸಂಸ್ಥೆಯ ತನಿಖಾ ವರದಿಯನ್ನು ತಿರುವುಹಾಕಿದರೆ ನ್ಯಾ.ಕಟ್ಜು ಅವರಿಗೆ ಸತ್ಯ ಗೊತ್ತಾದೀತು. ಎರಡನೆಯದಾಗಿ `ರಾಡಿಯಾ ಟೇಪ್' ಹಗರಣದಲ್ಲಿ ಆರೋಪ ಕೇಳಿಬಂದ ಪ್ರಖ್ಯಾತ ಪತ್ರಕರ್ತರಾದ ವೀರ್ ಸಾಂಘ್ವಿ, ಬರ್ಖಾದತ್ ಮೊದಲಾದವರಲ್ಲಿ ಯಾವ ಶೈಕ್ಷಣಿಕ ಅರ್ಹತೆ, ತರಬೇತಿಯ ಕಮ್ಮಿ ಇತ್ತು?
ಹುಟ್ಟಿನಿಂದ ಮಾತ್ರ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯದಂತೆ ಶಿಕ್ಷಣ ಮತ್ತು ತರಬೇತಿಯಿಂದ ಮಾತ್ರ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯವೂ ಬಾಲಿಶತನದ್ದು. ಕನಿಷ್ಠ ಪದವಿಯನ್ನೂ ಪಡೆಯಲಾಗದ ವಿನೋದ್ ಮೆಹ್ತಾ, ಪತ್ರಿಕೋದ್ಯಮವನ್ನೇ ಓದದೆ ಇರುವ ಅರುಣ್‌ಶೌರಿ ಮೊದಲಾದವರು ಯಶಸ್ವಿ ಸಂಪಾದಕರಾಗಿರುವ ಉದಾಹರಣೆಗಳು ಕಣ್ಣಮುಂದಿವೆ.
ಈಗಿನ ಜನಾಂಗ ಗೌರವದಿಂದ ನೆನಪು ಮಾಡಿಕೊಳ್ಳುವ ಹಳೆಯ ಪೀಳಿಗೆಯ ಬಹುತೇಕ ಹಿರಿಯ ಪತ್ರಕರ್ತರು ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿದವರಲ್ಲ. ಅವಸರದ ಸೃಷ್ಟಿ ಎಂದೇ ವ್ಯಾಖ್ಯಾನಿಸಲಾಗುವ ಪತ್ರಿಕಾ ಬರವಣಿಗೆಗಳು ಸೃಜನಶೀಲವಾದುದಲ್ಲ ಎನ್ನುವವರಿದ್ದಾರೆ. ಪತ್ರಿಕೋದ್ಯಮವನ್ನು ಪ್ರವೇಶಿಸಿರುವ ತಂತ್ರಜ್ಞಾನ ಇಂತಹ ಟೀಕೆ-ಟಿಪ್ಪಣಿಗಳಿಗೆ ಇನ್ನಷ್ಟು ಅವಕಾಶ ನೀಡಿದೆ. ಭಾಷಾಂತರದ ಸಾಫ್ಟ್‌ವೇರ್ ಕೂಡಾ ಲಭ್ಯ ಇರುವುದರಿಂದ ಕಂಪ್ಯೂಟರ್ ಜ್ಞಾನದ ಬಲದಿಂದಲೇ ಪತ್ರಕರ್ತನಾಗಲು ಸಾಧ್ಯ ಎನ್ನುವ ಅಭಿಪ್ರಾಯವೂ ಹೊಸಪೀಳಿಗೆಯ ಪತ್ರಕರ್ತರಲ್ಲಿದೆ. ಪತ್ರಕರ್ತನ ವೃತ್ತಿಯಲ್ಲಿ ಬರವಣಿಗೆಯ ಕಲೆಯಷ್ಟೇ ತಂತ್ರಜ್ಞಾನ ಕೂಡಾ ಮುಖ್ಯವಾಗುತ್ತಿದೆ.
ಎಲ್ಲರೂ ಮಾಧ್ಯಮ ಮತ್ತು ಸಾಹಿತ್ಯ ಕ್ಷೇತ್ರಗಳೆರಡರಲ್ಲಿಯೂ ಯಶಸ್ಸು ಕಂಡ ಅರ್ನೆಸ್ಟ್ ಹೆಮ್ಮಿಂಗ್ವೆಯಂತಹ ಪತ್ರಕರ್ತರಾಗಲು ಸಾಧ್ಯ ಇಲ್ಲ ಎನ್ನುವುದು ನಿಜವಾದರೂ ಬರವಣಿಗೆಯ ಶಕ್ತಿ ಇಲ್ಲದವರು  ಯಶಸ್ವಿ ಪತ್ರಕರ್ತರಾಗಿ ಬೆಳೆಯುವುದು ಕಷ್ಟ, ಅವರು ಹೆಚ್ಚೆಂದರೆ ಕಾರಕೂನ ಪತ್ರಕರ್ತರಾಗಬಹುದು ಅಷ್ಟೇ. ಬರವಣಿಗೆ ಎನ್ನುವುದು ಸ್ವಂತ ಆಸಕ್ತಿಯಿಂದ ಸಿದ್ದಿಸಿಕೊಳ್ಳಬೇಕಾದ ಕಲೆ, ಅದನ್ನು ಶಿಕ್ಷಣ ಇಲ್ಲವೇ ತರಬೇತಿಯಿಂದ ಒಲಿಸಿಕೊಳ್ಳಲಾಗದು ಎನ್ನುವುದನ್ನು ನ್ಯಾ.ಕಟ್ಜು ಅವರಿಗೆ ತಿಳಿಸಿ ಹೇಳುವವರು ಯಾರು?
ಸಮಕಾಲೀನ ವಿದ್ಯಮಾನಗಳಿಗೆ ಆಗಾಗ ಪ್ರತಿಕ್ರಿಯಿಸುವ ಮೂಲಕ ಪುರೋಗಾಮಿ ಚಿಂತಕನೆಂಬಂತೆ ಬಿಂಬಿಸಿಕೊಳ್ಳುತ್ತಿರುವ ನ್ಯಾ.ಕಟ್ಜು ಅವರು ಸಾಂಪ್ರದಾಯಿಕವಾದ ಶಿಕ್ಷಣದ ಬಗ್ಗೆ ಇಷ್ಟೊಂದು ಭರವಸೆಯನ್ನು ಇಟ್ಟುಕೊಂಡಿರುವುದೇ ಅಚ್ಚರಿ ಹುಟ್ಟಿಸುತ್ತದೆ. ಶಿಕ್ಷಿತರು, ಬುದ್ದಿವಂತರು ಮಾಡಿದಷ್ಟು ಅನ್ಯಾಯ, ಅಕ್ರಮಗಳನ್ನು ಅನಕ್ಷರಸ್ಥರು ಮತ್ತು ದಡ್ಡರು ಮಾಡಿಲ್ಲ ಎನ್ನುವುದು ತೀರಾ ಸರಳೀಕೃತ ಹೇಳಿಕೆ ಎಂದು ಅನಿಸಿದರೂ ಸಾಬೀತುಪಡಿಸಲು ಹೊರಟರೆ ಪುರಾವೆಗಳು ಊರೆಲ್ಲ ಸಿಗುತ್ತವೆ. ವ್ಯತ್ಯಾಸವೆಂದರೆ ಅನಕ್ಷರಸ್ಥರು, ದಡ್ಡರು ತಮಗೆ ತಾವೇ ಅನ್ಯಾಯ ಮಾಡಿಕೊಂಡು ಕಷ್ಟಕಾರ್ಪಣ್ಯಗಳಲ್ಲಿ ನರಳಾಡಿದರೆ, ಶಿಕ್ಷಿತರು, ಬುದ್ದಿವಂತರು ಊರಿಗೆಲ್ಲ ಅನ್ಯಾಯ ಮಾಡಿ ತಾವು ಸುಖವಾಗಿರಲು ನೋಡುತ್ತಾರೆ.
ಸ್ವಾತಂತ್ರ್ಯ ಪಡೆದ ಪ್ರಾರಂಭದ ದಿನಗಳಲ್ಲಿ ಮಾತ್ರವಲ್ಲ ಈಗಲೂ ಶಿಕ್ಷಣವೇ `ಸರ್ವರೋಗಕ್ಕೆ ರಾಮಬಾಣ' ಎಂಬ ಅಭಿಪ್ರಾಯ ಇದೆ. ಬಡತನ, ಅನಾರೋಗ್ಯ, ಮೂಢನಂಬಿಕೆ, ಜಾತೀಯತೆ, ಕೋಮುವಾದ, ಅಪರಾಧ ಹೀಗೆ ಎಲ್ಲ ಬಗೆಯ ಸಾಮಾಜಿಕ ಅನಿಷ್ಟಗಳಿಗೆ ಶಿಕ್ಷಣವೊಂದೇ ಪರಿಹಾರ ಎಂದು ರಾಜಕೀಯ ನಾಯಕರು ಮಾತ್ರವಲ್ಲ, ಆರೋಗ್ಯಪೂರ್ಣ ಸಮಾಜಕ್ಕಾಗಿ ಹಂಬಲಿಸುವ ಪ್ರಜ್ಞಾವಂತ ಹಿರಿಯರು ಕೂಡಾ ಹೇಳುತ್ತಲೇ ಬಂದಿದ್ದಾರೆ. ಆದರೆ ದೇಶ ದಾಟಿ ಬಂದ 65 ವರ್ಷಗಳ ಹಾದಿಗೆ ಕಣ್ಣಾಡಿಸಿದರೆ ಕಾಣುವ ಚಿತ್ರವೇ ಬೇರೆ.
ಬಡತನದ ಪ್ರಮಾಣ ಅಲ್ಪಪ್ರಮಾಣದಲ್ಲಿ ಕಡಿಮೆಯಾಗಿರಬಹುದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಸ್ಪಲ್ಪಮಟ್ಟಿಗೆ ಸುಧಾರಣೆಯಾಗಿರಲೂ ಬಹುದು. ಆದರೆ ಉಳಿದ ಅನಿಷ್ಠಗಳು  ಉಲ್ಭಣಗೊಳ್ಳುತ್ತಿರುವುದು  ಮಾತ್ರವಲ್ಲ ಹಳೆಯದರ ಜತೆಗೆ ಹೊಸ ಪಿಡುಗುಗಳು ಹುಟ್ಟಿಕೊಂಡಿವೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ಎಂಜಲೆಲೆಯ ಮೇಲೆ ಉರುಳಾಡುತ್ತಿರುವವರು, ಟಿವಿಚಾನೆಲ್‌ಗಳಲ್ಲಿ  ಜ್ಯೋತಿಷಿ ಒದರುತ್ತಿರುವ ಸುಳ್ಳು ಭವಿಷ್ಯಗಳನ್ನು ಕೇಳಲು ಮತ್ತು ಅದರಂತೆ ನಡೆದುಕೊಳ್ಳಲು ಮೈಯೆಲ್ಲ ಕಣ್ಣು-ಕಿವಿಯಾಗಿ ಟಿವಿ ಮುಂದೆ ಕೂತಿರುವವರಲ್ಲಿ ಹೆಚ್ಚಿನವರು ಶಿಕ್ಷಿತರು. ಇವರಲ್ಲಿ ವೈದ್ಯರು, ಶಿಕ್ಷಕರು,ವಿಜ್ಞಾನಿಗಳು ಎಲ್ಲರೂ ಸೇರಿದ್ದಾರೆ.
ಕಳೆದೆರಡು ದಶಕಗಳಲ್ಲಿ ದೇಶದಲ್ಲಿ ನಡೆದ ಭ್ರಷ್ಟಾಚಾರದ ಹಗರಣಗಳಲ್ಲಿ ಭಾಗಿಯಾದವರ ಶೈಕ್ಷಣಿಕ ಅರ್ಹತೆಯನ್ನು ಯಾರಾದರೂ ಹುಡುಕಿ ತೆಗೆದು ಪಟ್ಟಿಮಾಡಿದರೆ ಅಪರಾಧ ನಡೆಸಲು ಬೇಕಾಗಿರುವ ಒಂದು ಅರ್ಹತೆ ಶಿಕ್ಷಣ ಇರಬಹುದೇ ಎಂಬ ಅನುಮಾನ ಹುಟ್ಟಲು ಸಾಧ್ಯ. ಪತ್ರಕರ್ತರನ್ನು ಈ ಎಲ್ಲ ಬೆಳವಣಿಗೆಗಳಿಂದ ದೂರ ಇಟ್ಟು ನೋಡಲಾಗುವುದಿಲ್ಲ.
ನ್ಯಾ.ಕಟ್ಜು ಅವರು ನಂಬಿರುವಂತೆ ಇಂದಿನ ಮಾಧ್ಯಮರಂಗವನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆ ಕೇವಲ ಪತ್ರಕರ್ತರ ಅರ್ಹತೆ ಇಲ್ಲವೇ ತರಬೇತಿಯ ಕೊರತೆ ಖಂಡಿತ ಅಲ್ಲ. ರಾಷ್ಟ್ರಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಇಂದಿನ ಬಹುಪಾಲು ಪತ್ರಿಕೆಗಳು ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿಯೇ ಪತ್ರಕರ್ತರನ್ನು ನೇಮಿಸಿಕೊಳ್ಳುತ್ತವೆ. ವಶೀಲಿ ಮಾಡಿ ಸೇರಿಕೊಳ್ಳುವವರಿಗೂ ಕನಿಷ್ಠ ವಿದ್ಯಾರ್ಹತೆ ಇರಲೇ ಬೇಕಾಗುತ್ತದೆ.
ತೀರಾ ಸ್ಥಳೀಯವಾದ ಪತ್ರಿಕೆ-ಚಾನೆಲ್‌ಗಳನ್ನು ಹೊರತುಪಡಿಸಿ ಮಾಧ್ಯಮರಂಗಕ್ಕೆ ಪ್ರವೇಶಿಸುವವರೆಲ್ಲರ  ಕೈಯಲ್ಲಿ ಪದವಿ ಇಲ್ಲವೆ ಸ್ನಾತಕೋತ್ತರ ಪದವಿ ಇರುತ್ತದೆ. ಸೇರ್ಪಡೆಯಾದ ನಂತರ ತರಬೇತಿಯನ್ನು ಪಡೆಯುತ್ತಾರೆ, ಇಂದಿನ ಅಗತ್ಯವಾದ ಕಂಪ್ಯೂಟರ್ ಜ್ಞಾನವೂ ಅವರಲ್ಲಿರುತ್ತದೆ. ಕಾಗುಣಿತ ತಪ್ಪಿಲ್ಲದೆ ಬರೆಯುವುದನ್ನೂ ಕಲಿತಿರುತ್ತಾರೆ. ನ್ಯಾ.ಕಟ್ಜು ಅವರು ನಿರೀಕ್ಷಿಸುತ್ತಿರುವ ಪತ್ರಿಕೋದ್ಯಮದ ಗುಣಮಟ್ಟವನ್ನು ಎತ್ತಿಹಿಡಿಯುವ ಪತ್ರಕರ್ತನಾಗಲು ಇಷ್ಟು ಅರ್ಹತೆ ಮತ್ತು ತರಬೇತಿ ಸಾಕೆ? ಒಬ್ಬ ಒಳ್ಳೆಯ ಪತ್ರಕರ್ತನನ್ನು ರೂಪಿಸುವುದು ಕೇವಲ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿ ಅಲ್ಲ. ಇದರ ಜತೆಗೆ ಎಲ್ಲ ಕ್ಷೇತ್ರಗಳ ವೃತ್ತಿಪರರಂತೆ ಪತ್ರಕರ್ತರಲ್ಲಿ ಪ್ರಾಮಾಣಿಕತೆ, ವೃತ್ತಿನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿ ಇರಬೇಕಾಗುತ್ತದೆ. ವೈಯಕ್ತಿಕವಾಗಿ ಅಳವಡಿಸಿಕೊಳ್ಳಬೇಕಾದ ಈ ಗುಣಗಳನ್ನು ಶಿಕ್ಷಣ ಇಲ್ಲವೇ ತರಬೇತಿಯಿಂದ ನೆಟ್ಟು ಬೆಳೆಸಲು ಸಾಧ್ಯವೇ?.
ನ್ಯಾ.ಕಟ್ಜು ಪತ್ರಕರ್ತರು ಹೊಂದಿರಬೇಕಾದ ಅರ್ಹತೆ ಬಗ್ಗೆ ಪ್ರತಿಪಾದನೆ ಮಾಡುವಾಗಲೂ ತಪ್ಪು ಪ್ರಶ್ನೆಯನ್ನು ಎತ್ತಿಕೊಂಡಿದ್ದಾರೆ. ಇದು ಅರ್ಥವಾಗಬೇಕಾದರೆ ಇಂದಿನ ವಿಶ್ವವಿದ್ಯಾಲಯಗಳಿಂದ ಪತ್ರಿಕೋದ್ಯಮ ಶಿಕ್ಷಣ ಪಡೆದು ಬಂದವರನ್ನು ಕರೆದು ಅವರು ಮಾತನಾಡಿಸಬೇಕು. ಈ ಬಡಪಾಯಿ ವಿದ್ಯಾರ್ಥಿಗಳನ್ನು ದೂರಿಯೂ ಏನೂ ಪ್ರಯೋಜನ ಇಲ್ಲ. ಯಾವುದೋ ಓಬಿರಾಯನ ಕಾಲದ ಪಠ್ಯಕ್ರಮವನ್ನು ಓದಿ ಪ್ರಾಧ್ಯಾಪಕರಾಗಿ ನೇಮಕಗೊಂಡವರು ಅದೇ ಹಳೆಯ ಪಠ್ಯವನ್ನು ಹಿಡಿದುಕೊಂಡು ಮಾಡುವ ಪಾಠವನ್ನು ಕೇಳುವ ವಿದ್ಯಾರ್ಥಿಗಳಿಂದ ವೃತ್ತಿಗೆ ಅವಶ್ಯಕವಾದ ಯಾವ ಅರ್ಹತೆಯನ್ನು ನಿರೀಕ್ಷಿಸಲು ಸಾಧ್ಯ?
  ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರಲ್ಲಿ ಎಷ್ಟು ಮಂದಿಗೆ ಮಾಧ್ಯಮರಂಗದ ಪ್ರತ್ಯಕ್ಷ ಅನುಭವ ಇದೆ? ಅವರಲ್ಲಿ ಎಷ್ಟು ಮಂದಿ ಪತ್ರಿಕಾ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ? ಪ್ರಾಯೋಗಿಕವಾದ ಅನುಭವವೇ ಇಲ್ಲದ ಇವರು ಎಂತಹ ವೃತ್ತಿಪರ ಪತ್ರಕರ್ತರನ್ನು ಸೃಷ್ಟಿಮಾಡಬಲ್ಲರು?
ಇಂದು ಬಹಳಷ್ಟು ವಿದ್ಯಾರ್ಥಿಗಳು ಪತ್ರಕರ್ತರಾಗಬಯಸುತ್ತಿರುವುದು ಆಯ್ಕೆಯಿಂದಲ್ಲ. ಬೇರೆ ಯಾವ ವಿಷಯದಲ್ಲಿಯೂ ಸೀಟು ಸಿಗಲಿಲ್ಲವೆನ್ನುವ ಕಾರಣಕ್ಕೆ ಪತ್ರಿಕೋದ್ಯಮವನ್ನು ಆರಿಸಿಕೊಂಡವರೇ ಹೆಚ್ಚು. ಪತ್ರಿಕೋದ್ಯಮ ಶಿಕ್ಷಣ ಅವರಲ್ಲಿ ವೃತ್ತಿ ಬಗ್ಗೆ ಆಸಕ್ತಿಯನ್ನು ಹುಟ್ಟಿಸದೆ ಇರುವುದರಿಂದ ಅವರ ಪಾಲಿಗೆ ಪತ್ರಕರ್ತನ ವೃತ್ತಿ ಎಂದರೆ ಅದು ಹೊಟ್ಟೆಪಾಡಿಗಾಗಿ ಇರುವ ನೂರೆಂಟು ವೃತ್ತಿಗಳಲ್ಲೊಂದು ಅಷ್ಟೆ. ಇದರಿಂದಾಗಿ ಆ ವೃತ್ತಿಗಳಲ್ಲಿ ಕಾಣಿಸಿಕೊಂಡಿರುವ ಪಿಡುಗುಗಳೆಲ್ಲ ಮಾಧ್ಯಮರಂಗಕ್ಕೂ ತಗಲಿವೆ.
ಪತ್ರಕರ್ತರಾಗಲು ಕಲಿತ ಶಿಕ್ಷಣ ನೆರವಾಗಿದೆಯೇ ಎಂಬ ಪ್ರಶ್ನೆಯನ್ನು ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳ ಉತ್ಪನ್ನಗಳಾದ ಪತ್ರಕರ್ತರನ್ನು ಕೇಳಿದರೆ ಬಹುಪಾಲು ಮಂದಿ ಉತ್ತರಿಸದೆ ತಲೆತಗ್ಗಿಸುತ್ತಾರೆ. ಶಿಕ್ಷಣವನ್ನು ಪತ್ರಕರ್ತರ ಅರ್ಹತೆಯ ಮಾನದಂಡವನ್ನಾಗಿ ಮಾಡಲು ಹೊರಟವರು ಮೊದಲು ಪತ್ರಿಕೋದ್ಯಮ ಶಿಕ್ಷಣ ವ್ಯವಸ್ಥೆಯನ್ನು ಸುಧಾರಣೆಗೊಳಪಡಿಸಬೇಕಾಗುತ್ತದೆ. ನ್ಯಾಯಮೂರ್ತಿ ಕಟ್ಜು ಅವರು ಮಾಧ್ಯಮರಂಗಕ್ಕೆ ತಗಲಿರುವ ರೋಗದ ಕಾರಣವನ್ನೇ ಹುಡುಕಲು ವಿಫಲರಾಗಿದ್ದಾರೆ. ರೋಗನಿದಾನವೇ ತಪ್ಪಾಗಿಬಿಟ್ಟರೆ ಯಾವ ಔಷಧಿಯಿಂದಲೂ ಕಾಯಿಲೆಯನ್ನು ಗುಣಪಡಿಸಲು ಸಾಧ್ಯ ಇಲ್ಲ.

Sunday, March 10, 2013

ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿ ಕಾಣದ ಕೈಗಳ ಕಾಟ

ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ನಾಯಕರು ಬಂದು ಇಲ್ಲಿನ ಪಂಚತಾರಾ ಹೊಟೇಲಲ್ಲಿ ಸಭೆ ನಡೆಸಿ ಏನೆಲ್ಲ ಕಸರತ್ತು ನಡೆಸಿದರೂ ಪಕ್ಷದ ನೂತನ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಲು ಸಾಧ್ಯವಾಗದೆ ಹೋದುದರಲ್ಲಿ ಆಶ್ಚರ್ಯವೇನಿಲ್ಲ.
ಸಮಸ್ಯೆಯ ಮೂಲ ಆ ಸಭೆಯಲ್ಲಿದ್ದ ನಾಯಕರಲ್ಲ, ಅಲ್ಲಿ ಇಲ್ಲದೆ ಇದ್ದ ನಾಯಕರು. ಮೊದಲನೆಯದಾಗಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ, ಎರಡನೆಯದಾಗಿ ಸಂಘ ಪರಿವಾರದ ನಾಯಕರು, ಮೂರನೆಯದಾಗಿ ಅಲ್ಲಿ ಇದ್ದೂ ಇಲ್ಲದಂತಿದ್ದು ತನ್ನದೇ ಲೆಕ್ಕಾಚಾರದಲ್ಲಿ ಮುಳುಗಿದ್ದ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್.
ನಾಯಕನ ಆಯ್ಕೆಯಲ್ಲಿ ಬಿಜೆಪಿ ಎದುರಿಸುತ್ತಿರುವ ಕಷ್ಟಗಳನ್ನು ಅರ್ಥಮಾಡಿಕೊಳ್ಳಬಹುದು. ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ತಾನೇ ಬೆಳೆಸಿದ ನಾಯಕ ಹಠಾತ್ತನೆ ಪಕ್ಷ ಬಿಟ್ಟು ಹೋದಾಗ ನಿರ್ಮಾಣವಾಗಿರುವ ನಿರ್ವಾತವನ್ನು ತುಂಬುವುದು ಸುಲಭದ ಕೆಲಸ ಅಲ್ಲ.
ಬಿ.ಎಸ್.ಯಡಿಯೂರಪ್ಪ ಎಂಬ ನಾಯಕನ ವ್ಯಕ್ತಿತ್ವವೇ ಅಂತಹದ್ದು. ಪಕ್ಷ ತನ್ನ ನಿಯಂತ್ರಣಕ್ಕೆ ಬಂದ ನಂತರ ಎರಡನೆ ಸಾಲಿನ ಯಾವ ನಾಯಕರನ್ನೂ ಅವರು ಬೆಳೆಯಲು ಬಿಡಲಿಲ್ಲ. ಮುಂದೊಂದು ದಿನ ತನ್ನ ಹಾದಿಗೆ ಮುಳ್ಳಾಗಬಹುದೆಂಬ ದೂರಾಲೋಚನೆಯಿಂದ 2008ರ ಚುನಾವಣೆಯ ಗೆಲುವಿನ ನಂತರ ಜಗದೀಶ್ ಶೆಟ್ಟರ್ ಅವರನ್ನೇ ಸಂಪುಟ ಸೇರದಂತೆ ತಡೆದವರು ಬಿಎಸ್‌ವೈ.
ಪಕ್ಷದೊಳಗೆ ಇನ್ನೊಬ್ಬ ಲಿಂಗಾಯತ ನಾಯಕ ತನಗೆ ಸವಾಲಾಗಬಾರದು, ತಾನೇ ಜಾತಿಯ ಪ್ರಶ್ನಾತೀತ ನಾಯಕನಾಗಬೇಕೆಂಬ ಉದ್ದೇಶದಿಂದ ಲಿಂಗಾಯತ ಮಠಗಳಿಗೆ ತೆರಿಗೆಹಣವನ್ನು ಸುರಿದದ್ದು ಕೂಡಾ ಇದೇ ಕಾರಣಕ್ಕೆ. ಇದರಿಂದಾಗಿ ಬಿಜೆಪಿ ದಿಕ್ಕೆಟ್ಟ ಸ್ಥಿತಿಯಲ್ಲಿದೆ. ಬಿಎಸ್‌ವೈ ಪಕ್ಷದ ನಾಯಕರಾಗಿ ಉಳಿಯಲಿಲ್ಲ, ಅವರ ಗೈರುಹಾಜರಿಯಲ್ಲಿ ಅವರಿಗೆ ಸರಿಸಾಟಿಯಾಗಬಲ್ಲ ಬೇರೆ ನಾಯಕರೂ ಇಲ್ಲ.
ಎರಡನೆಯದಾಗಿ ಸಂಘ ಪರಿವಾರದ ನಾಯಕರು. ಬಿಜೆಪಿಗೆ ಉಳಿದ ರಾಜಕೀಯ ಪಕ್ಷಗಳಂತೆ ಇರುವುದು ಒಂದು ಹೈಕಮಾಂಡ್ ಅಲ್ಲ, ಇನ್ನೊಂದೂ ಇದೆ. ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ. ಬಿಜೆಪಿಯ ನಾಯಕನ ಆಯ್ಕೆಗೂ ತಮಗೂ ಸಂಬಂಧ ಇಲ್ಲ ಎಂದು ಸಂಘದ ನಾಯಕರು ಎಷ್ಟೇ ಕೂಗಿಹೇಳಿದರೂ ನಂಬುವವರು ಯಾರು?
ಸಂಬಂಧ ಇಲ್ಲದೆ ಇದ್ದರೆ ಸಂಘದ ಪ್ರತಿನಿಧಿಯನ್ನು ಬಿಜೆಪಿಯ ಸಂಘಟನೆಯ ಕೆಲಸಕ್ಕೆ ಮಾತ್ರ ಎರವಲು ಸೇವೆ ರೂಪದಲ್ಲಿ ಯಾಕೆ ಕಳುಹಿಸಿಕೊಡಲಾಗುತ್ತಿದೆ? ಈ ಸಂಬಂಧದ ಸತ್ಯ ಇನ್ನಷ್ಟು ತಿಳಿದುಕೊಳ್ಳಬೇಕಾದರೆ ಯಡಿಯೂರಪ್ಪ ಮತ್ತು ಅವರ ಪಕ್ಷದ ವಕ್ತಾರ ವಿ.ಧನಂಜಯ ಕುಮಾರ್ ಕಳೆದೆರಡು ತಿಂಗಳುಗಳಿಂದ ನೀಡುತ್ತಿರುವ ಹೇಳಿಕೆಗಳಲ್ಲಿ ಯಾರ ಹೆಸರುಗಳು ಪ್ರಸ್ತಾಪವಾಗುತ್ತಿದೆ ಎಂಬುದನ್ನು ನೋಡಬಹುದು.
ಪಕ್ಷದ ಅಧ್ಯಕ್ಷಸ್ಥಾನದ ಆಯ್ಕೆ ಕಸರತ್ತು ಇಷ್ಟೊಂದು ಜಟಿಲಗೊಳ್ಳಲು ಸಂಘ ಪರಿವಾರ ಎಂಬ ಅಗೋಚರ ಶಕ್ತಿ ಕಾರಣ ಎನ್ನುವುದು ನಿರ್ವಿವಾದ. ಬಿಜೆಪಿ ಅಧಿಕಾರ ಗಳಿಸದೆ ವಿರೋಧಪಕ್ಷದಲ್ಲಿ ಕೂತರೂ ಸರಿ, ಯಾವುದೇ ಕಾರಣಕ್ಕೂ ಪಕ್ಷ ತನ್ನ ನಿಯಂತ್ರಣ ಮೀರಿ ಹೋಗಬಾರದೆನ್ನುವುದು ಸಂಘದ ನಾಯಕರ ಲೆಕ್ಕಾಚಾರ.
ಎನ್‌ಡಿಎ ಅಧಿಕಾರದಲ್ಲಿದ್ದಾಗ ಅಟಲಬಿಹಾರಿ ವಾಜಪೇಯಿ ಮತ್ತು ಲಾಲ್‌ಕೃಷ್ಟ ಅಡ್ವಾಣಿಯವರನ್ನು ಯಾವ ರೀತಿ ಆರ್‌ಎಸ್‌ಎಸ್ ಕಾಡಿತ್ತು, ಈಗಿನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಲ್ಲಿ ಏನೆಲ್ಲ ಕಸರತ್ತು ನಡೆಸಿತ್ತು ಎನ್ನುವುದು ಜನರ ಕಣ್ಣಮುಂದಿದೆ. ರಾಷ್ಟ್ರಮಟ್ಟದಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ  ನಿದ್ದೆಗೆಡಿಸುತ್ತಿರುವ ಈ ಸಂದರ್ಭದಲ್ಲಿ ಸಂಘ ಪರಿವಾರ ಯಾವ ರಾಜ್ಯದಲ್ಲಿಯೂ ಇನ್ನೊಬ್ಬ ಮೋದಿಯೋ, ಯಡಿಯೂರಪ್ಪನೋ ಬೆಳೆಯುವುದನ್ನು ಖಂಡಿತ ಇಷ್ಟಪಡಲಾರದು. ಯಡಿಯೂರಪ್ಪನವರಿಗೆ ಸಮನಾದ ಇನ್ನೊಬ್ಬ ನಾಯಕ ಪಕ್ಷದಲ್ಲಿ ಇಲ್ಲ ಎನ್ನುವುದು ಎಷ್ಟು ನಿಜವೋ, ಅಂತಹ ನಾಯಕ ಸಂಘ ಪರಿವಾರಕ್ಕೆ ಬೇಕಿಲ್ಲ ಎನ್ನುವುದೂ ಅಷ್ಟೇ ನಿಜ.
ಸಂಘ ಪರಿವಾರದ ಮನಸ್ಥಿತಿಯನ್ನು ಇನ್ನಷ್ಟು ಅರ್ಥಮಾಡಿಕೊಳ್ಳಬೇಕಾದರೆ ಸ್ಪರ್ಧೆಯಲ್ಲಿರುವ ಇಬ್ಬರು ನಾಯಕರನ್ನು ಗಮನಿಸಬಹುದು. ಡಿ.ವಿ.ಸದಾನಂದ ಗೌಡರು ಕಳೆದ ಚುನಾವಣೆಯಲ್ಲಿ ಪಕ್ಷ ಗೆದ್ದಾಗ ಅಧ್ಯಕ್ಷರಾಗಿದ್ದವರು, ಅದರ ನಂತರ ಮುಖ್ಯಮಂತ್ರಿಯೂ ಆಗಿಬಿಟ್ಟರು. ಅಧಿಕಾರದಲ್ಲಿದ್ದದ್ದು ಅಲ್ಪಕಾಲವಾದರೂ ಹೆಸರು ಕೆಡಿಸಿಕೊಳ್ಳಲಿಲ್ಲ, ಬಗೆಬಗೆಯ ಒತ್ತಡಗಳ ನಡುವೆಯೂ ತೃಪ್ತಿಕರವಾದ ಆಡಳಿತ ಕೊಟ್ಟವರು.
ರಾಜಕೀಯ ಕಾರಣಗಳಿಗಾಗಿ ಇತ್ತೀಚೆಗೆ ಒಕ್ಕಲಿಗ ಜಾತಿ ಜತೆ ಗುರುತಿಸಿಕೊಂಡರೂ ಜಾತಿವಾದಿ ಎಂಬ ಹಣೆಪಟ್ಟಿ ಬೀಳದಂತೆ ಎಚ್ಚರಿಕೆ ವಹಿಸಿದವರು. ಪಕ್ಷದಲ್ಲಿರುವ ಒಕ್ಕಲಿಗರು ಕೂಡಾ ಗೌಡರನ್ನು ತಮ್ಮ ನಾಯಕನೆಂದು ಹೃತ್ಪೂರ್ವಕವಾಗಿ ಒಪ್ಪಿಕೊಳ್ಳದೆ ಇರುವುದರಿಂದ ಬೇರೆ ಜಾತಿ ನಾಯಕರಲ್ಲಿಯೂ ಅವರ ಬಗ್ಗೆ ಹೆಚ್ಚಿನ ವಿರೋಧ ಇಲ್ಲ. ಇಷ್ಟೆಲ್ಲ ಅನುಕೂಲಕರ ಅಂಶಗಳಿರುವುದೇ ಸದಾನಂದ ಗೌಡರಿಗೆ ಮುಳುವಾಗಿದೆ. ಅಧ್ಯಕ್ಷರಾಗಿಬಿಟ್ಟರೆ ಗೌಡರು ಸಂಪೂರ್ಣವಾಗಿ ತಮ್ಮ ಹಿಡಿತದಲ್ಲಿ ಇರಲಾರರು ಎಂಬ ಅಸುರಕ್ಷತೆ ಸಂಘದ ನಾಯಕರಲ್ಲಿದ್ದ ಹಾಗಿದೆ.
ವೈಯಕ್ತಿಕ ಇಮೇಜ್ ಬಗ್ಗೆ ಸೂಕ್ಷ್ಮಮತಿಯಾಗಿರುವ ಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಂಘ ಪರಿವಾರ ಮುಖ್ಯವಾಗಿ ಕರಾವಳಿಯ `ಪ್ರಭಾವಳಿ' ನಾಯಕರು ಸಲ್ಲಿಸಿದ ಬೇಡಿಕೆಗಳ ಪಟ್ಟಿಯನ್ನು ಕಣ್ಣುಮುಚ್ಚಿ ಒಪ್ಪಿಕೊಳ್ಳದೆ ಇರುವುದೂ ಅವರಿಗೆ ವಿರುದ್ಧವಾಗಿದೆಯಂತೆ. ಹೀಗಲ್ಲದಿದ್ದರೆ ತಾನೇ ಬೆಳೆಸಿದ ನಾಯಕನ ತಲೆಮೇಲಿದ್ದ ಅಭಯಹಸ್ತವನ್ನು ಸಂಘಪರಿವಾರ ಇದ್ದಕ್ಕಿದ್ದಂತೆ ಹಿಂದಕ್ಕೆ ಪಡೆಯಲು ಬೇರೆ ಕಾರಣಗಳ್ಯಾವುದೂ ಕಾಣುತ್ತಿಲ್ಲ.
ಸಂಘ ಪರಿವಾರದ ಒಳಮನಸ್ಸನ್ನು ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾದರೆ ತನ್ನ ಅಭ್ಯರ್ಥಿಯಾಗಿ ಅದು ಬಿಂಬಿಸುತ್ತಿರುವ ನಾಯಕನನ್ನು ನೋಡಬಹುದು. ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿಯವರನ್ನು ಸೋಲಿಸುವ ವರೆಗೆ ನಳಿನಿಕುಮಾರ್ ಕಟೀಲ್ ಮಂಗಳೂರು ಮಹಾನಗರಪಾಲಿಕೆಯಿಂದ ಆಚೆಗೆ ಯಾರಿಗಾದರೂ ಗೊತ್ತಿತ್ತು ಎಂದು ಅನಿಸುವುದಿಲ್ಲ. ಸಾಮಾನ್ಯವಾಗಿ ಸಂಘ ಪರಿವಾರದ ಹಿನ್ನೆಲೆಯಿಂದ ಬಂದವರಲ್ಲಿ ಇರುವ ವಾಕ್ಪಟುತ್ವ ಮತ್ತು ಸಂಘಟನಾ ಚಾತುರ್ಯ ತನ್ನಲ್ಲಿದೆ ಎಂದು ಅವರು ಈ ವರೆಗೆ ಸಾಬೀತುಪಡಿಸಿಲ್ಲ. ತುಳು-ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಅವರು ಮಾತನಾಡಿದ್ದನ್ನು ಯಾರೂ ಕೇಳಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯನ್ನು ಬಿಜೆಪಿಯ ಕೋಟೆ ಎಂದು ಹೇಳಲಾಗುತ್ತಿದ್ದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದದ್ದು ಎಂಟರಲ್ಲಿ ನಾಲ್ಕು ಸ್ಥಾನಗಳನ್ನು ಮಾತ್ರ. ನಳಿನ್‌ಕುಮಾರ್ ಅವರಿಗೆ ಲೋಕಸಭಾ ಟಿಕೆಟ್ ನೀಡಲು ಅವರದ್ದೇ ಜಾತಿಯಾದ ಬಂಟರ ಮತಗಳನ್ನು ಸೆಳೆಯುವ ಒಳ ಉದ್ದೇಶವೂ ಇತ್ತು.ಆದರೆ ಹಾಲಾಡಿ ಶ್ರಿನಿವಾಸ ಶೆಟ್ಟಿಯವರಿಗೆ ಸಚಿವ ಪದವಿ ನಿರಾಕರಣೆ ಜಿಲ್ಲೆಯ ಬಂಟರು ಬಿಜೆಪಿ ವಿರುದ್ಧ ಬಂಡೇಳುವಂತೆ ಮಾಡಿದೆ.
ಇದರ ಜತೆಗೆ ಇನ್ನೊಬ್ಬ ಬಿಜೆಪಿ ನಾಯಕ ನಾಗರಾಜ ಶೆಟ್ಟಿ ಮತ್ತು ಹೊಟೇಲ್‌ಉದ್ಯಮಿ ಸದಾನಂದ ಶೆಟ್ಟಿಯವರು ಜೆಡಿ (ಎಸ್) ಸೇರಿದ್ದಾರೆ. ರಾಜ್ಯದ ಉಳಿದೆಡೆಗಳಲ್ಲಿ ಬಿಡಿ, ತವರು ಜಿಲ್ಲೆಯ ತನ್ನ ಜಾತಿಯ ಮತಗಳನ್ನೇ ಬಿಜೆಪಿಗೆ ತಂದುಕೊಡುವ ಸಾಮರ್ಥ್ಯ ನಳಿನ್‌ಕುಮಾರ್ ಕಟೀಲ್‌ಗೆ ಈಗ ಇದ್ದ ಹಾಗೆ ಇಲ್ಲ. ಹೀಗಿದ್ದರೂ ಸಂಘ ಪರಿವಾರ ನಳಿನ್‌ಕುಮಾರ್ ಬೆಂಬಲಕ್ಕೆ ನಿಲ್ಲಲು ಇರುವ ಏಕೈಕ ಕಾರಣ-'ಹೇಳಿದಂತೆ ಕೇಳಿಕೊಂಡು ಇರಬಲ್ಲ ನಮ್ಮ ಹುಡುಗ' ಎನ್ನುವುದಲ್ಲದೆ ಬೇರೇನಿದೆ?
ಬಿಜೆಪಿಯ ಮೂರನೆಯ ಸಮಸ್ಯೆಯ ಹೆಸರು ಅನಂತಕುಮಾರ್. ಕಳೆದ ನಾಲ್ಕು ವರ್ಷಗಳಲ್ಲಿ ಬಿಜೆಪಿಯೊಳಗೆ ನಡೆದ ತುಮುಲಗಳಲ್ಲೆಲ್ಲ ಅನಂತಕುಮಾರ್ ಕೈವಾಡದ ಆರೋಪಗಳು ಕೇಳಿಬಂದರೂ ಅದು ಬಹಿರಂಗವಾಗಿ ಚರ್ಚೆಯಾಗಿದ್ದು ಕಡಿಮೆ. ಯಡಿಯೂರಪ್ಪನವರು ಪಕ್ಷತ್ಯಜಿಸಿದ ನಂತರವಷ್ಟೇ ಅದು ಅಲ್ಲಲ್ಲಿ ಸ್ಪೋಟಗೊಂಡಿರುವುದು. ಇಂತಹ ಅನಂತಕುಮಾರ್ ತಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದು ಸ್ಪರ್ಧೆಯಲ್ಲಿರುವ ಐವರಲ್ಲಿ ಮೂವರಾದ ಪ್ರಹ್ಲಾದ ಜೋಷಿ, ಆರ್.ಅಶೋಕ್ ಮತ್ತು ಗೋವಿಂದ ಕಾರಜೋಳ ತಿಳಿದುಕೊಂಡಿದ್ದಾರೆ. ಈ ರೀತಿ ಬೆಂಬಲದ ಭರವಸೆ ನೀಡಲು ಅನಂತಕುಮಾರ್ ತಲೆಯಲ್ಲಿರುವ ಬೇರೆ ಲೆಕ್ಕಾಚಾರ ಕಾರಣ ಎಂದು ಹೇಳುವವರೂ ಇದ್ದಾರೆ.
ಜನಸಂಖ್ಯೆಯ ಶೇಕಡಾ ನಾಲ್ಕರಷ್ಟಿರುವ ಬ್ರಾಹ್ಮಣರು ಬಿಜೆಪಿಯ ನಂಬಿಕೆಯ ಮತಬ್ಯಾಂಕ್. ರಾಜ್ಯದಲ್ಲಿರುವ ಹನ್ನೊಂದು ಬ್ರಾಹ್ಮಣ ಶಾಸಕರಲ್ಲಿ ಒಂಬತ್ತು ಮಂದಿ ಇರುವುದು ಬಿಜೆಪಿಯಲ್ಲಿ. ಕನಿಷ್ಠ ಬಿಜೆಪಿಯೊಳಗೆ ಅನಂತಕುಮಾರ್ ಪ್ರಶ್ನಾತೀತವಾಗಿ ಈ ಸಮುದಾಯದ ನಾಯಕ. ಬ್ರಾಹ್ಮಣರಿಗೆ ಅವಕಾಶ ನೀಡಿಲ್ಲ ಎನ್ನುವ ಅಪವಾದ ತನ್ನ ಮೇಲೆ ಬರಬಾರದು ಎಂಬ ಕಾರಣಕ್ಕಾಗಿ ಜೋಷಿ ಅವರ ಹೆಸರನ್ನು ತೇಲಿಬಿಟ್ಟಿದ್ದಾರೆಯೇ ಹೊರತು ಈ ಬಗ್ಗೆ ಅನಂತಕುಮಾರ್ ಗಂಭೀರವಾಗಿಲ್ಲ ಎಂದು ಹೇಳಲಾಗುತ್ತಿದೆ.
ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ  ಎಂದು ಘೋಷಿಸಲಾಗಿರುವ ಜಗದೀಶ್ ಶೆಟ್ಟರ್ ಮತ್ತು ಪ್ರಹ್ಲಾದ ಜೋಷಿ ಒಂದೇ ಊರಿನವರಾಗಿರುವ ಕಾರಣ ಅವರ ನೇಮಕ ಸಾಧ್ಯ ಇಲ್ಲ ಎನ್ನುವುದು ಅನಂತಕುಮಾರ್ ಅವರಿಗೆ ಗೊತ್ತಿಲ್ಲವೇ? ಬ್ರಾಹ್ಮಣ ಸಮುದಾಯಕ್ಕೆ ಅವಕಾಶ ನೀಡಲೇ ಬೇಕಾದರೆ ಬಿಜೆಪಿಯಲ್ಲಿ ಈಗಲೂ ಸಾರ್ವಜನಿಕರ ಗೌರವಕ್ಕೆ ಪಾತ್ರರಾಗಿರುವ ಕೆಲವೇ ನಾಯಕರಲ್ಲಿ ಒಬ್ಬರಾದ ಸಚಿವ ಸುರೇಶ್ ಕುಮಾರ್ ಅವರ ಹೆಸರನ್ನು ಪರಿಗಣಿಸಬಹುದಿತ್ತು. ವಿಚಿತ್ರವೆಂದರೆ ಬೇರೆ ಪಕ್ಷಗಳ ನಾಯಕರು ಮತ್ತು ಮತದಾರರು ಕೂಡಾ ಒಪ್ಪಬಹುದಾದ ಸುರೇಶ್‌ಕುಮಾರ್  ಹೆಸರು ಸ್ಪರ್ಧೆಯಲ್ಲಿಯೇ ಇಲ್ಲ. ಈ ವೈಚಿತ್ರ್ಯದ ಹಿಂದೆ ತನ್ನ ಕೈವಾಡ ಇಲ್ಲ ಎಂದು ಅನಂತಕುಮಾರ್ ಹೇಳಬಹುದು.ಆದರೆ ಇಬ್ಬರ ನಡುವಿನ ಪೈಪೋಟಿಯನ್ನು ಬಲ್ಲ ಯಾರೂ ಈ ಸಮಜಾಯಿಷಿಯನ್ನು ನಂಬಲಾರರು.
ಸಚಿವ ಆರ್.ಅಶೋಕ್ ಅವರಿಗೆ ನೀಡಿರುವ ಬೆಂಬಲದಲ್ಲಿಯೂ ಅನಂತಕುಮಾರ್ ಅವರಿಗೆ ಬೇರೆ ಉದ್ದೇಶ ಇದ್ದಂತಿದೆ. ಯಡಿಯೂರಪ್ಪನವರ ವಿರೋಧದಿಂದಾಗಿ ರಾಜ್ಯದ ಪ್ರಮುಖ ಜಾತಿಯಾದ ಲಿಂಗಾಯತರು ತಮ್ಮ ಪರವಾಗಿಲ್ಲ ಎನ್ನುವುದು ಅನಂತಕುಮಾರ್ ಅವರಿಗೆ ಗೊತ್ತಿದೆ. ಆದುದರಿಂದ ತನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಒಕ್ಕಲಿಗರನ್ನಾದರೂ ಓಲೈಸುವುದು ಅವರಿಗೆ ಅನಿವಾರ್ಯವಾಗಿದೆ.
ಇದೇ ವೇಳೆ ತನ್ನ ಗುಂಪಿನಲ್ಲಿ ಇಲ್ಲದ ಸದಾನಂದ ಗೌಡರ ಅವಕಾಶವನ್ನು ಕೂಡಾ ತಪ್ಪಿಸಬೇಕಾಗಿದೆ. ಅಶೋಕ್ ಅವರನ್ನು ಬೆಂಬಲಿಸುವ ಮೂಲಕ ಅನಂತಕುಮಾರ್ ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆಯುವ ಪ್ರಯತ್ನ ಮಾಡಿದ್ದಾರೆ. ಅಶೋಕ್ ಅವರು ಒಕ್ಕಲಿಗರ ನಾಯಕರಾಗುವುದು ಕಷ್ಟ. ಈಗಲೂ ದೇವೇಗೌಡರೇ ಒಕ್ಕಲಿಗರ ಪ್ರಶ್ನಾತೀತ ನಾಯಕ, ಎರಡನೇ ಸ್ಥಾನದಲ್ಲಿರುವುದು ಎಚ್.ಡಿ.ಕುಮಾರಸ್ವಾಮಿ.
ಕಳೆದ ಚುನಾವಣೆಯಲ್ಲಿ ಒಕ್ಕಲಿಗರ ಪ್ರಾಬಲ್ಯ ಇರುವ ಮಂಡ್ಯ,ಹಾಸನ,ರಾಮನಗರ ಜಿಲ್ಲೆಗಳಲ್ಲಿ ಬಿಜೆಪಿಯ ಒಬ್ಬ ಶಾಸಕ ಕೂಡಾ ಆರಿಸಿ ಬರಲಿಲ್ಲ ಎನ್ನುವುದು ಗಮನಾರ್ಹ. ಇದರ ಜತೆ ಅಶೋಕ್ ಅವರಿಗೆ ಸಂಘ ಪರಿವಾರದ ಬೆಂಬಲವೂ ಇಲ್ಲ. ಈ ಕಾರಣಗಳಿಂದಾಗಿ ಅಶೋಕ್ ಅವರಿಗೆ ಅವಕಾಶ ಕಡಿಮೆ ಎನ್ನುವುದು ಅನಂತಕುಮಾರ್ ಅವರಿಗೆ ತಿಳಿದಿದೆ. ಬೆಂಬಲಿಸಿದ ಹಾಗೂ ಆಗಬೇಕು, ಅವರು ಅಧ್ಯಕ್ಷರಾಗಲೂ ಬಾರದು ಇದು ಅನಂತಕುಮಾರ್ ಲೆಕ್ಕಾಚಾರ ಇರಬಹುದು.
ಹಾಗಿದ್ದರೆ ಅನಂತಕುಮಾರ್ ಯಾರ ಪರವಾಗಿದ್ದಾರೆ ಎನ್ನುವ ಯಕ್ಷ ಪ್ರಶ್ನೆಗೆ ಸಿಗುವ ಮೊದಲ ಉತ್ತರ ಗೋವಿಂದ ಕಾರಜೋಳ. ರಾಜ್ಯದ 33 ಪರಿಶಿಷ್ಟಜಾತಿಯ ಶಾಸಕರಲ್ಲಿ 22 ಶಾಸಕರು ಇರುವುದು ಬಿಜೆಪಿಯಲ್ಲಿ. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿಗೆ ಉಳಿದೆಲ್ಲ ಅಂಶಗಳ ಜತೆ ಅದು ನಡೆಸಿದ್ದ ಸೋಷಿಯಲ್ ಎಂಜನಿಯರಿಂಗ್ ಕೂಡಾ ಕಾರಣ. ಕಾಂಗ್ರೆಸ್ ಪಕ್ಷದಲ್ಲಿ ಪರಿಶಿಷ್ಟ ಜಾತಿಯ ನಾಯಕರು ಬಹುಸಂಖ್ಯೆಯಲ್ಲಿದ್ದರೂ ಅವರಲ್ಲಿ ಶೇಕಡಾ 90ರಷ್ಟು ಬಲಗೈ ಗುಂಪಿಗೆ ಸೇರಿದವರು. ಇದನ್ನು ಗಮನಿಸಿದ ಬಿಜೆಪಿ ಹೆಚ್ಚುಕಡಿಮೆ ಬಲಗೈ ಗುಂಪಿಗೆ ಸಮನಾದ ಸಂಖ್ಯೆಯಲ್ಲಿರುವ ಎಡಗೈ ಗುಂಪಿಗೆ ಗಾಳ ಹಾಕಿತು. ಮೊದಲು ರಮೇಶ್ ಜಿಗಜಿಣಗಿ,ನಂತರ ಕೆ.ಬಿ.ಶಾಣಪ್ಪ ಮತ್ತು ಗೋವಿಂದ ಕಾರಜೋಳ ಮೊದಲಾದ ಎಡಗೈ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿತು.
ಇದರ ಲಾಭವನ್ನೂ ಕಳೆದ ಚುನಾವಣೆಯಲ್ಲಿ ಬಿಜೆಪಿ ಪಡೆದಿದೆ. ಈ ರೀತಿ ಪಕ್ಷಕ್ಕೆ ಬಂದಿರುವ ಎಡಗೈ ಗುಂಪಿನ ದಲಿತ ನಾಯಕರು ಅನಂತಕುಮಾರ್ ಅವರಿಗೆ ನಿಷ್ಠಾವಂತರಾಗಿರುವುದು ನಿಜ. ಈ ಹಿನ್ನೆಲೆಯಲ್ಲಿ ಕಾರಜೋಳ ಅವರು ಅಧ್ಯಕ್ಷರಾಗಿಬಿಟ್ಟರೆ ತಮಗೆ ಅನುಕೂಲ ಎಂದು ಅನಂತಕುಮಾರ್ ಸಹಜವಾಗಿ ತಿಳಿದುಕೊಂಡಿದ್ದಾರೆ. ಆದರೆ ಜನತಾ ಪರಿವಾರದಿಂದ ಬಂದ `ಹೊರಗಿನವರನ್ನು' ಸಂಘ ಪರಿವಾರ ಒಪ್ಪುವುದೇ?
ಅನಂತಕುಮಾರ್ ಅವರ ಈ ಎಲ್ಲ ಲೆಕ್ಕಾಚಾರದೊಳಗೆ ಇನ್ನೊಂದು ಒಳಲೆಕ್ಕ ಇದೆ ಎಂದು ಹೇಳಲಾಗುತ್ತಿದೆ. ಅವರು ಯಾರ ಪರವಾಗಿಯೂ ಇಲ್ಲ ಅಧ್ಯಕ್ಷರಾಗಲು ತಾನೇ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುವವರೂ ಇದ್ದಾರೆ. ಮಹತ್ವಾಕಾಂಕ್ಷಿಯಾದ ಅನಂತಕುಮಾರ್ ಅವರ ಶಕ್ತಿಯ ಮೂಲ ದೆಹಲಿಯಲ್ಲಿರುವ ಎಲ್.ಕೆ.ಅಡ್ವಾಣಿ. ಬಿಜೆಪಿಯ ಬಿಕ್ಕಟ್ಟುಗಳು ಪರಿಹಾರಕ್ಕಾಗಿ ದೆಹಲಿಗೆ ಹೋದಾಗಲೆಲ್ಲ ಆ ಪರಿಹಾರ ತಮ್ಮ ಕಡೆಯಾಗುವಂತೆ ಅನಂತಕುಮಾರ್ ನೋಡಿಕೊಂಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯ ಬಿಕ್ಕಟ್ಟು ದೆಹಲಿಗೆ ರವಾನೆಯಾಗಿರುವುದರಿಂದ ಅಲ್ಲಿ ಯಾರ ಕೈವಾಡ ನಡೆಯಬಹುದೆಂಬುದನ್ನು ಊಹಿಸುವುದು ಕಷ್ಟ ಅಲ್ಲ.