Monday, November 5, 2012

ರಾಹುಲ್ ಭವಿಷ್ಯ ಅವರ ಕೈಯಲ್ಲಿಯೇ ಇದೆ Nov 05 2012


ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ತಾನು ಹೋದಲ್ಲೆಲ್ಲಾ `ಇಸ್ ಪ್ರದೇಶ್ ಕಾ ಭವಿಷ್ಯ್ ಆಫ್ ಕಾ ಹಾಥ್ ಮೇ ಹೈ~ ಎಂದು ಕೈ ಎತ್ತಿ ಎತ್ತಿ ಹೇಳುತ್ತಿದ್ದರು. ರಾಹುಲ್ ಲಖನೌದ ಸಾರ್ವಜನಿಕ ಸಭೆಯಲ್ಲಿ ಇದೇ ರೀತಿ ಹೇಳುತ್ತಿದ್ದಾಗ ಪಕ್ಕದಲ್ಲಿದ್ದ ಪತ್ರಕರ್ತ ಗೆಳೆಯನೊಬ್ಬ `ಉತ್ತರಪ್ರದೇಶ್ ಕಾ ನಹೀ, ಆಪ್ ಕಾ ಭವಿಷ್ಯ್~ ಎಂದು ಕಣ್ಣುಮಿಟುಕಿಸಿ ನಕ್ಕಿದ್ದ.
`2007ರ ಚುನಾವಣೆಯ ಕಾಲದಲ್ಲಿ ನಾನಿಲ್ಲಿ ಬಂದಿದ್ದಾಗಲೂ ನೀವೆಲ್ಲ ಹೀಗೆಯೇ ಹೇಳಿದ್ದ ನೆನಪು, ಆದರೆ 403 ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 25 ಸ್ಥಾನಗಳನ್ನು ಗೆದ್ದರೂ ರಾಹುಲ್ ಭವಿಷ್ಯ ಮಂಕಾಗಲಿಲ್ಲವಲ್ಲಾ? ಆತ ಈಗಲೂ ನಾಯಕನಲ್ಲವೇ?~ ಎಂದು ಆ ಗೆಳೆಯನನ್ನು ಕಿಚಾಯಿಸಿದ್ದೆ. ಹೌದು ಇದು ವಂಶಪರಂಪರೆಯ ಶಕ್ತಿ.
ಯಾವಾಗಲೂ ಹೀಗೆ, ಮೇಲೇರುವುದು ಸುಲಭ, ಏರಿರುವ ಎತ್ತರವನ್ನು ಉಳಿಸಿಕೊಳ್ಳುವುದು ಕಷ್ಟ. ರಾಹುಲ್‌ಗಾಂಧಿ ಈಗ ಎದುರಿಸುತ್ತಿರುವುದು ಈ ಕಷ್ಟವನ್ನು. ನಿರೀಕ್ಷೆಯ ಭಾರದಿಂದ ಆಗಲೇ ಅವರು ಬಗ್ಗಿಹೋಗಿದ್ದಾರೆ.
ಕಾಂಗ್ರೆಸ್ ಪಕ್ಷ ಮಾತ್ರ ಅಲ್ಲ, ಇಡೀ ದೇಶದ ಕಣ್ಣು ರಾಹುಲ್‌ಗಾಂಧಿ ಕಡೆಗಿದೆ. ಇನ್ನೇನು ಕೇಂದ್ರ ಸಚಿವ ಸಂಪುಟ ಸೇರಿಯೇ ಬಿಡುತ್ತಾರೆ ಎಂಬ ಊಹಾಪೋಹ ಪುನರ‌್ರಚನೆಯ ಹಿಂದಿನ ಕ್ಷಣದ ವರೆಗೂ ಕೇಳಿಬಂದಿತ್ತು. ಈ ಬಾರಿಯೂ ಅವರು ಧೈರ್ಯ ತೋರಲಿಲ್ಲ. ಹಾಗಾಗದಿದ್ದರೂ ಸಣ್ಣಖಾತೆಗಳನ್ನು ಹೊಂದಿದ್ದ ಯುವಸಚಿವರಿಗೆ ನೀಡಲಾಗಿರುವ ಬಡ್ತಿಯನ್ನೇ `ಸಂಪುಟಕ್ಕೆ ಯುವ ರಕ್ತ~ ಎಂದು ಬಣ್ಣಿಸಲಾಗುತ್ತಿದೆ. ಇತ್ತೀಚೆಗೆ ಸರ್ಕಾರ ಮತ್ತು ಪಕ್ಷದ ಪ್ರತಿಯೊಂದು ನಿರ್ಧಾರದಲ್ಲಿಯೂ ಮಾಧ್ಯಮಗಳ ಕಣ್ಣಿಗೆ `ರಾಹುಲ್ ಮೊಹರು~  ಕಾಣುತ್ತಿದೆ. ಭಾರತದ ಯಾವ ಯುವ ರಾಜಕಾರಣಿಗೆ ಈ ಅನುಕೂಲತೆಗಳು ಒದಗಿ ಬಂದಿವೆ? ಆದರೆ  ಇವುಗಳನ್ನೆಲ್ಲ ಬಳಸಿಕೊಂಡು ರಾಹುಲ್‌ಗಾಂಧಿ ಬೆಳೆದಿದ್ದಾರೆಯೇ ಎನ್ನುವುದು ಪ್ರಶ್ನೆ. ರಾಜಕೀಯದಲ್ಲಿ ಅನುಕೂಲತೆಗಳನ್ನೇ ಬಳಸಿಕೊಳ್ಳಲಾಗದವರು ಅನಾನೂಕುಲತೆಗಳನ್ನು ಹೇಗೆ ಎದುರಿಸಲು ಸಾಧ್ಯ?
ರಾಹುಲ್‌ಗಾಂಧಿಯ ರಾಜಕೀಯ ಪ್ರವೇಶದ ನಂತರದ ಎಂಟುವರ್ಷಗಳ ಅವಧಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ` ಈ ಯುವ ನಾಯಕ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿಯೇ ಇಲ್ಲ~ ಎಂದು ಅನಿಸಿಬಿಡುತ್ತದೆ. ಉತ್ತರಪ್ರದೇಶದ ಚುನಾವಣೆಯ ನಂತರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು `ಈ ಬಾರಿ ನೀವು ಅಲ್ಲಿಗೆ ಹೋಗಿದ್ದಾಗ ರಾಹುಲ್‌ನಲ್ಲಿ ಏನಾದರೂ ಬದಲಾವಣೆಯನ್ನು ಕಾಣಲು ಸಾಧ್ಯವಾಯಿತೇ?~ಎಂದು ಬಹಳ ನಿರೀಕ್ಷೆಯಿಂದ ನನ್ನನ್ನು ಕೇಳಿದ್ದರು. ಆಗಿನ್ನೂ ಚುನಾವಣೆಯ ಫಲಿತಾಂಶ ಪ್ರಕಟವಾಗಿರಲಿಲ್ಲ.
 `ಚುನಾವಣೆಗೆ ಮೊದಲೇ ನಡೆಸಿದ್ದ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆಯಲ್ಲಿ ವಹಿಸಿದ್ದ ಪಾತ್ರ, ಆಕ್ರಮಣಕಾರಿ ಪ್ರಚಾರ ಶೈಲಿ, ಕೆಲವೆಡೆ ಸಡಿಲಗೊಂಡರೂ ಆತ್ಮವಿಶ್ವಾಸದಿಂದ ಕೂಡಿದ ಮಾತುಗಳು ಇವೆಲ್ಲವನ್ನೂ ನೋಡಿದಾಗ ಕೊನೆಗೂ ರಾಹುಲ್‌ಗಾಂಧಿ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿದಂತೆ ಕಾಣುತ್ತಿತ್ತು.
ಆದರೆ ಒಬ್ಬ ರಾಜಕೀಯ ನಾಯಕನ ನಿಜವಾದ ಬಣ್ಣ ಗೊತ್ತಾಗುವುದು ಚುನಾವಣೆಯಲ್ಲಿ ಸೋತಾಗ ನಡೆದುಕೊಳ್ಳುವ ರೀತಿಯಿಂದ. ಅಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತರೂ ಕುಗ್ಗಿಹೋಗದೆ ಮರುದಿನದಿಂದಲೇ ಪಕ್ಷ ಸಂಘಟನೆಗಾಗಿ ಉತ್ತರಪ್ರದೇಶದಲ್ಲಿ ಓಡಾಡಿದರೆ ರಾಹುಲ್‌ಗಾಂಧಿ ರಾಜಕೀಯವನ್ನು ಗಂಭೀರವಾಗಿ ಸ್ವೀಕರಿಸಿದ್ದಾರೆ ಎಂದು ಹೇಳಬಹುದು.
ಮತದಾನ ಮುಗಿದ ಮರುದಿನವೇ ದಣಿವಾರಿಸಿಕೊಳ್ಳಲು ವಿದೇಶಕ್ಕೆ ಹಾರಿದರೆ ಆತ ಗಂಭೀರವಾಗಿಲ್ಲ ಎಂದು ಹೇಳಬೇಕಾಗುತ್ತದೆ~ ಎಂದು ಅವರಿಗೆ ಉತ್ತರಿಸಿದ್ದೆ. ಫಲಿತಾಂಶ ಪ್ರಕಟವಾದ ಕೆಲವು ದಿನಗಳ ನಂತರ ರಾಹುಲ್ ಯಾವುದೋ ದೇಶಕ್ಕೆ ಹೋಗಿ ಹಲವು ದಿನಗಳನ್ನು ಹಾಯಾಗಿ ಕಳೆದು ಬಂದಿದ್ದರು. ನನಗೆ ನಿರಾಶೆಯಾಗಿರಲಿಲ್ಲ, ಯುವನಾಯಕನ ಬಗ್ಗೆ ಭರವಸೆ ಇಟ್ಟುಕೊಂಡಿದ್ದ ಕಾಂಗ್ರೆಸ್‌ನ ಆ ಹಿರಿಯರಿಗೆ ನಿರಾಶೆಯಾಗಿತ್ತು.
ರಾಜಕೀಯ ಎನ್ನುವುದು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲವೂ ತೊಡಗಿಕೊಳ್ಳಬೇಕಾದ ಗಂಭೀರ ವೃತ್ತಿ. ಐದು ದಿನ ಕೆಲಸ ಮಾಡಿ ವಾರಾಂತ್ಯದ ಎರಡು ದಿನಗಳನ್ನು ಎಲ್ಲಿಯೋ ಮೋಜಿನ ತಾಣದಲ್ಲಿ ಕಳೆದು ದಣಿವಾರಿಸಿಕೊಳ್ಳುವ ಕಾರ್ಪೋರೇಟ್ ಉದ್ಯೋಗ ಅಲ್ಲ. ಖಾದಿ ಜುಬ್ಬಾಪೈಜಾಮ ಧರಿಸಿ ಹಳ್ಳಿಗಳಲ್ಲಿ ತಿರುಗಾಡಿ, ದಲಿತರ ಮನೆಗಳಲ್ಲಿ ಒಂದು ತುಂಡು ರೊಟ್ಟಿ ತಿಂದು ನಂತರ ದೆಹಲಿಗೆ ಹೋಗಿ ಟೀಶರ್ಟ್, ಜೀನ್ಸ್‌ಪ್ಯಾಂಟ್ ಧರಿಸಿ `ಪೇಜ್ ತ್ರಿ~ಪಾರ್ಟಿಗೆ ಹೋಗಿ ಕುಣಿಯುವುದರಿಂದ ರಾಜಕೀಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಇಲ್ಲ. ಭಾರತದ ಮತದಾರರ ಮನಸ್ಥಿತಿ ಕೂಡಾ ಭಿನ್ನ.
ಇಲ್ಲಿನ ಮತದಾರರು ಆತ್ಮವಿಶ್ವಾಸದಿಂದ ಕೂಡಿದ  ಆಕ್ರಮಣಕಾರಿ ನಡವಳಿಕೆಯ ಮತ್ತು ಕ್ಷಿಪ್ರನಿರ್ಧಾರ ಕೈಗೊಳ್ಳುವ ಧೈರ್ಯವಂತ ನಾಯಕರನ್ನು ಇಷ್ಟಪಡುತ್ತಾರೆ. ಅಂತರ್ಮುಖಿಯಾದ, ಸೌಮ್ಯಸ್ವಭಾವದ ಮತ್ತು ನಿರ್ಧಾರಕೈಗೊಳ್ಳಲು ಹಿಂಜರಿಯುವ ಪುಕ್ಕಲುತನದ ನಾಯಕರು ಅವರ ಆಯ್ಕೆ ಅಲ್ಲ.  ಒಂದೆರಡು ಕಡೆ  ಜುಬ್ಬಾದ ತೋಳುಗಳನ್ನು ಮೇಲೆತ್ತಿ ವೀರಾವೇಶದ ಭಾಷಣ ಮಾಡಿದ ಕೂಡಲೇ ಯಾರೂ ನಾಯಕರಾಗುವುದಿಲ್ಲ. ರಾಹುಲ್‌ಗಾಂಧಿ ತಾನೊಬ್ಬ ಕಸುಬುದಾರ ರಾಜಕಾರಣಿಯೆಂದು ಇನ್ನೂ ಸಾಬೀತುಪಡಿಸಿಲ್ಲ.
ರಾಹುಲ್‌ಗಾಂಧಿಗೆ ಹೋಲಿಸಿದರೆ ತಾಯಿ ಸೋನಿಯಾಗಾಂಧಿಯೇ ನಿಜವಾದ ನಾಯಕಿಯಂತೆ ಕಾಣುತ್ತಾರೆ. ಗಂಡ ರಾಜಕೀಯ ಪ್ರವೇಶ ಮಾಡುವುದರ ವಿರುದ್ಧ `ಹುಲಿಯಂತೆ ಹೋರಾಟ~ ಮಾಡಿದ್ದ ಸೋನಿಯಾಗಾಂಧಿ ಅನಿವಾರ್ಯವಾಗಿ ಪ್ರವೇಶ ಮಾಡಿದ ರಾಜಕೀಯದಲ್ಲಿ ಉಳಿಯಲು ಅದೇ ರೀತಿಯ ಹೋರಾಟ ನಡೆಸುತ್ತಾ ಬಂದಿದ್ದಾರೆ. ಪಕ್ಷ ಎದುರಿಸಿದ ಸೋಲಿನ ಸರಮಾಲೆ, ವಿದೇಶಿ ಮಹಿಳೆ ಎಂಬ ಚುಚ್ಚುನುಡಿ, ನಾಡಿನ ಭಾಷೆ-ಸಂಸ್ಕೃತಿ ಗೊತ್ತಿಲ್ಲದ ಪರಕೀಯ ಭಾವನೆ... ಇವೆಲ್ಲದರ ವಿರುದ್ಧ ಹೋರಾಡುತ್ತಲೇ ಬಂದಿರುವ ಸೋನಿಯಾಗಾಂಧಿ ಇತ್ತೀಚೆಗೆ ತನ್ನ  ಅನಾರೋಗ್ಯದ ವಿರುದ್ಧವೂ ಹೋರಾಟ ನಡೆಸಿದ್ದಾರೆ. ಮಗ ಅಮ್ಮನಿಂದಾದರೂ ಪ್ರೇರಣೆ ಪಡೆಯಬಾರದೇ?
ಸಂಪುಟ ಸೇರಲು ಪ್ರಧಾನಿ ಮನಮೋಹನ್‌ಸಿಂಗ್ ನೀಡುತ್ತಲೇ ಇರುವ ಆಹ್ಹಾನದ ನಿರಾಕರಣೆಯಲ್ಲಿಯೂ ಪೂರ್ಣಪ್ರಮಾಣದ ರಾಜಕೀಯ ನಾಯಕನ ಪಾತ್ರವಹಿಸಲು ಹಿಂದೇಟು ಹಾಕುತ್ತಿರುವ ರಾಹುಲ್‌ಗಾಂಧಿಯ ದೌರ್ಬಲ್ಯವನ್ನು ಕಾಣಬಹುದು. ಯುಪಿಎ ಎರಡನೆ ಅವಧಿಯಲ್ಲಿಯಾದರೂ ರಾಹುಲ್ ಸಂಪುಟ ಸೇರಿ ಅನುಭವ ಗಳಿಸಿಕೊಳ್ಳಬಹುದಿತ್ತು. ರಾಜೀವ್‌ಗಾಂಧಿ ತನ್ನೆಲ್ಲ ಒಳ್ಳೆಯತನ ಮತ್ತು ಜನಪರ ಕಾಳಜಿಯ ಹೊರತಾಗಿಯೂ ವಿಫಲಗೊಳ್ಳಲು ಕಾರಣ ಅನುಭವದ ಕೊರತೆ ಎನ್ನುವುದನ್ನು ರಾಹುಲ್ ಅರ್ಥಮಾಡಿಕೊಂಡಿಲ್ಲ. ಈ ಕೊರತೆಯನ್ನು ನೀಗಿಸಲು ಗೆಳೆಯರ ಗುಂಪಿನ ಮೊರೆಹೋದ ರಾಜೀವ್‌ಗಾಂಧಿ ಅವರ ಮಾತುಕೇಳಿ ಬಹಳಷ್ಟು ತಪ್ಪು ನಿರ್ಧಾರಗಳನ್ನು ಕೈಗೊಂಡಿದ್ದರು.
ಅವರಿಗೆ ಎರಡನೆ ಅವಧಿ ಸಿಕ್ಕಿಬಿಟ್ಟಿದ್ದರೆ ದೇಶಕ್ಕೆ ಒಳ್ಳೆಯ ಪ್ರಧಾನಿ ಸಿಗುತ್ತಿದ್ದರೇನೋ? ಪ್ರಧಾನಿಯಾದ ನಂತರ ಮುಂಬೈನಲ್ಲಿ ನಡೆದ ಕಾಂಗ್ರೆಸ್ ಮಹಾಅಧಿವೇಶನದಲ್ಲಿ ಮಾತನಾಡಿದ್ದ ರಾಜೀವ್ `ಪಕ್ಷದಲ್ಲಿ ಅಧಿಕಾರದ ದಲ್ಲಾಳಿಗಳಿದ್ದಾರೆ~ ಎಂದು ಹೇಳಿ ಸೇರಿದ್ದವರನ್ನು ಬೆಚ್ಚಿಬೀಳಿಸಿದ್ದರು. ಅಂತಹ ದಿಟ್ಟತನವನ್ನು ಪ್ರದರ್ಶಿಸಿದ್ದಕ್ಕಾಗಿಯೇ ಅರುಣ್‌ಶೌರಿಯವರಂತಹ ನೆಹರೂ ಕುಟುಂಬದ ಕಟುಟೀಕಾಕಾರ ಪತ್ರಕರ್ತರೂ ಒಂದಷ್ಟು ಕಾಲ ರಾಜೀವ್‌ಗಾಂಧಿ ಅಭಿಮಾನಿಗಳಾಗಿಬಿಟ್ಟಿದ್ದರು.
ಬಹಳಷ್ಟು ಮಂದಿ ರಾಹುಲ್‌ಗಾಂಧಿಯನ್ನು ಅಪ್ಪ ರಾಜೀವ್‌ಗಾಂಧಿಗೆ ಹೋಲಿಸುತ್ತಾರೆ. ರೂಪವೊಂದನ್ನು ಬಿಟ್ಟರೆ ಇಬ್ಬರ ನಡುವೆ ಸಮಾನ ಅಂಶಗಳು ಕಡಿಮೆ ಎಂದೇ ಹೇಳಬೇಕಾಗುತ್ತದೆ. ಮೊದಲನೆಯದಾಗಿ ರಾಜೀವ್ ತಾನು ಪ್ರೀತಿಸಿದ್ದ ಕ್ರಿಶ್ಚಿಯನ್ ಧರ್ಮದ ವಿದೇಶಿ ಹುಡುಗಿಯನ್ನು 21ನೇ ವರ್ಷಕ್ಕೆ ಮದುವೆಯಾಗುವ ಧೈರ್ಯ ತೋರಿಸಿದ್ದರು. 26ನೇ ವರ್ಷಕ್ಕೆ ರಾಹುಲ್‌ಗಾಂಧಿ ಹುಟ್ಟಿಯೇ ಬಿಟ್ಟಿದ್ದರು. ನಲ್ವತ್ತೆರಡು ದಾಟಿದರೂ ರಾಹುಲ್‌ಗಾಂಧಿಗೆ ತನ್ನ ಮದುವೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ.   ರಾಜಕೀಯ ಪ್ರವೇಶ ರಾಜೀವ್‌ಗಾಂಧಿಯವರ ಜೀವನದ ಉದ್ದೇಶವಾಗಿರಲಿಲ್ಲ.
ಸೋದರ ಸಂಜಯ್‌ಗಾಂಧಿ ಸಾವಿನ ನಂತರ ತಾಯಿಗೆ ನೆರವಾಗಲು ಒಲ್ಲದ ಮನಸ್ಸಿನಿಂದ ಅವರು ರಾಜಕೀಯ ಪ್ರವೇಶಿಸಬೇಕಾಯಿತು. ಆದರೆ ರಾಜಕೀಯದಲ್ಲಿ ನೆಹರೂ ಕುಟುಂಬದ ಪರಂಪರೆಯನ್ನು ಉಳಿಸಿಕೊಳ್ಳಲು ಇಂದಲ್ಲ ನಾಳೆ ರಾಜಕೀಯ ಪ್ರವೇಶಿಸುವುದು ಅನಿವಾರ್ಯ ಎಂದು ರಾಹುಲ್‌ಗಾಂಧಿಗೆ ಗೊತ್ತಿತ್ತು. ರಾಜೀವ್ ಗಾಂಧಿಯಂತೆ ರಾಜಕೀಯ ಮಾರ್ಗದರ್ಶನ ನೀಡಲು ಇಂದಿರಾಗಾಂಧಿಯಂತಹ ತಾಯಿ ರಾಹುಲ್‌ಗೆ ಇರಲಿಲ್ಲ ನಿಜ, ಆದರೆ ಮಾನಸಿಕವಾಗಿ ಸಿದ್ಧಗೊಳ್ಳಲು ಅವರಿಗೆ ಬೇಕಾದಷ್ಟು ಕಾಲಾವಕಾಶ ಇತ್ತು. ರಾಜೀವ್‌ಗಾಂಧಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು 37ನೇ ವರ್ಷದಲ್ಲಿ, ಅವರಿಗಿಂತ ಮೂರುವರ್ಷ ಕಡಿಮೆ ವಯಸ್ಸಿನಲ್ಲಿಯೇ ರಾಹುಲ್ ಅಮೇಠಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಅಲ್ಲಿಂದ ಇಲ್ಲಿಯ ವರೆಗೆ ನಿರಂತರ ಎಂಟು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಬಾಯಿಬಿಟ್ಟು ಹೇಳಬೇಕಾಗಿಲ್ಲ ಕೇವಲ ಸನ್ನೆಯ ಮೂಲಕವೇ ಸರ್ಕಾರಕ್ಕೆ ಆದೇಶವನ್ನು ನೀಡುವಂತಹ ಸ್ಥಾನದಲ್ಲಿ ರಾಹುಲ್‌ಗಾಂಧಿ ಇದ್ದಾರೆ. ಆದರೆ ಮಾಡಿದ್ದೇನು?
ಭಾರತದ ಮತದಾರರು ರಾಜಕೀಯದಲ್ಲಿ ವಂಶಪರಂಪರೆಯನ್ನು ಎಂದೋ ಸ್ವೀಕರಿಸಿಬಿಟ್ಟಿದ್ದಾರೆ. ಆದರೆ ಕೇವಲ ಅದರ ಬಲದಿಂದಲೇ ರಾಜಕೀಯದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವಷ್ಟು ಇಂದಿನ ಮತದಾರರು ಉದಾರಿಗಳಲ್ಲ. ವಂಶದ ಬಲದಿಂದ ರಂಗಪ್ರವೇಶವಷ್ಟೇ ಸಲೀಸು, ಆದರೆ ರಂಗದ ಮೇಲೆ ಉಳಿಸುವುದು ಸಾಧನೆ ಮಾತ್ರ. ಅದರಲ್ಲಿ ಸೋತುಹೋದರೆ ಜೈಕಾರ ಹಾಕಿದ ಅದೇ ಜನ ಮುಖತಿರುಗಿಸಿಬಿಡುತ್ತಾರೆ. ಇದಕ್ಕಾಗಿಯೇ ಅಗಾಧವಾದ ಸಾಧ್ಯತೆಗಳನ್ನು ಹೊಂದಿರುವಂತಹ ನಾಯಕ ದೊಡ್ಡದೊಡ್ಡ ಕನಸುಗಳನ್ನು ಕಾಣಬೇಕು, ಇತರರನ್ನು ಬೆರಗುಗೊಳಿಸುವಂತಹ ಸವಾಲುಗಳನ್ನು ಸ್ವೀಕರಿಸಬೇಕು. ಅದರ ಮೂಲಕವೇ ತಾನೊಬ್ಬ ನಾಯಕನೆಂಬುದನ್ನು ಸಾಬೀತುಪಡಿಸಬೇಕು. ರಾಮಮನೋಹರ ಲೋಹಿಯಾ ಅವರಿಂದ `ಗೂಂಗಿಗುಡಿಯಾ~ ಎಂದು ಗೇಲಿಮಾಡಿಸಿಕೊಂಡ ಇಂದಿರಾಗಾಂಧಿ,  `ದುರ್ಗಿ~ ಎಂದು ಅಟಲಬಿಹಾರಿ ವಾಜಪೇಯಿ ಅವರಿಂದ ಅಭಿಮಾನದಿಂದ ಕರೆಸಿಕೊಳ್ಳುವವರೆಗೆ ಸವೆಸಿದ್ದ ರಾಜಕೀಯ ಪಯಣದ ಹಾದಿ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಸಂಜಯ್ ಮತ್ತು ರಾಜೀವ್ ಕೂಡಾ ಇಂತಹ ಸವಾಲುಗಳನ್ನು ಮೈಮೇಲೆ ಎಳೆದುಕೊಂಡಿದ್ದರು.
ಭಾರತವನ್ನು ಇಪ್ಪತ್ತೊಂದನೆ ಶತಮಾನಕ್ಕೆ ಕೊಂಡೊಯ್ಯುವ ಮಾತನ್ನು ಪ್ರವಾದಿಯಂತೆ ರಾಜೀವ್ ಹೇಳಿದಾಗ ಗೇಲಿಮಾಡಿದವರೇ ಹೆಚ್ಚು. ಆ ಕನಸು ಒಂದು ತಲೆಮಾರಿನ ಆಯುಷ್ಯದೊಳಗೆಯೇ ನಿಜವಾದಾಗ ರಾಜೀವ್‌ಗಾಂಧಿಯವರ ದೂರಾಲೋಚನೆಯನ್ನು ಶ್ಲಾಘಿಸದಿರಲು ಹೇಗೆ ಸಾಧ್ಯ?
ಒಂದೆರಡು ಲಿಖಿತ ಭಾಷಣಗಳನ್ನು ಓದಿರುವುದನ್ನು ಬಿಟ್ಟರೆ ಲೋಕಸಭೆಯ ಯಾವ ಚರ್ಚೆಯಲ್ಲಿಯೂ ಓರಗೆಯ ಇತರ ಯುವನಾಯಕರಂತೆ ರಾಹುಲ್ ಭಾಗವಹಿಸಿಲ್ಲ.  ಯಾವುದೇ ಪತ್ರಿಕೆ ಇಲ್ಲವೇ ಟಿವಿಚಾನೆಲ್‌ಗಳಿಗೆ ಪೂರ್ಣಪ್ರಮಾಣದ ಸಂದರ್ಶನವನ್ನು ನೀಡಿಲ್ಲ. ಒಂದಷ್ಟು ಚುನಾವಣಾ ಭಾಷಣಗಳು,ಪತ್ರಿಕಾ ವರದಿಗಳು ಮತ್ತು ಟಿವಿ ಬೈಟ್‌ಗಳ ಹೊರತಾಗಿ ರಾಹುಲ್ ಮನಸ್ಸಲ್ಲೇನಿದೆ ಎಂದು ತಿಳಿದುಕೊಳ್ಳಲು ಬೇರೆದಾರಿ ಇಲ್ಲ.
ನಾಲ್ಕು ದಿಕ್ಕುಗಳಿಂದಲೂ ಮಾಧ್ಯಮಗಳು ಮುತ್ತಿಕೊಂಡಿರುವ ಈಗಿನ ದಿನಮಾನದಲ್ಲಿ ಅದರಿಂದ ದೂರ ಓಡುವವ ಹೇಗೆ ರಾಷ್ಟ್ರವನ್ನು ಮುನ್ನಡೆಸಬಲ್ಲ ನಾಯಕನಾಗಲು ಸಾಧ್ಯವೋ ಗೊತ್ತಿಲ್ಲ. ಮಾಹಿತಿ ಹಕ್ಕು ಕಾಯ್ದೆ, ಸಾಮಾಜಿಕ ಜಾಲತಾಣಗಳು ಮತ್ತು ಭ್ರಷ್ಟಾಚಾರದ ವಿರುದ್ದದ ಹೋರಾಟದಿಂದಾಗಿ ಭಾರತದ ರಾಜಕೀಯ ಕ್ಷೇತ್ರ ಅನಿವಾರ್ಯವಾಗಿ ಪಾರದರ್ಶಕತೆಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲೇಬೇಕಾಗಿದೆ. ಕಳೆದ ಒಂದು ವಾರದಿಂದ ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ತಾಯಿ-ಮಗನ ವಿರುದ್ಧ ಹಣದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಗಂಭೀರ ಆರೋಪಮಾಡಿದ್ದಾರೆ.
ಇದಕ್ಕೆಲ್ಲ ಕಾಂಗ್ರೆಸ್ ಬೆಂಬಲಿಗರಿಂದ ಉತ್ತರ ಕೊಡಿಸಿ ರಾಹುಲ್‌ಗಾಂಧಿ ಎಷ್ಟು ದಿನ ದಂತಗೋಪುರದಲ್ಲಿ ಉಳಿಯಲು ಸಾಧ್ಯ? ಉಳಿದ ಕ್ಷೇತ್ರಗಳಂತೆ ರಾಜಕೀಯದಲ್ಲಿಯೂ ತನ್ನ ಶಿಲುಬೆಯನ್ನು ತಾನೇ ಹೊರಬೇಕು.
ಸಚಿವ ಸಂಪುಟ ಸೇರುವ ಅವಕಾಶವನ್ನು ರಾಹುಲ್‌ಗಾಂಧಿ ಕಳೆದುಕೊಂಡಿದ್ದಾರೆ. ಈಗ ಪಕ್ಷದಲ್ಲಿ ಮಹತ್ವದ ಸ್ಥಾನವನ್ನು ಅಲಂಕರಿಸುವ ಬಗ್ಗೆ ಊಹಾಪೋಹಗಳು ಎದ್ದಿವೆ. ರಾಜಕೀಯ ಜೀವನವನ್ನು ರಾಹುಲ್‌ಗಾಂಧಿ ನಿಜಕ್ಕೂ ಗಂಭೀರವಾಗಿ ಸ್ವೀಕರಿಸಲು ನಿರ್ಧರಿಸಿದ್ದರೆ ಅಲಂಕಾರಿಕ ಹುದ್ದೆಗಳಲ್ಲಿ ಕೂರುವುದಲ್ಲ, ತಾಯಿಗೆ ನಿವೃತ್ತಿಯನ್ನು ದಯಪಾಲಿಸಿ ಪಕ್ಷದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು.  ಜವಾಹರಲಾಲ್ ನೆಹರೂ 40ನೇ ವರ್ಷಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಬಿಟ್ಟಿದ್ದರು.ಆ ಧೈರ್ಯ ರಾಹುಲ್‌ಗಾಂಧಿಯಲ್ಲಿದೆಯೇ?

Monday, October 22, 2012

ಪ್ರತ್ಯೇಕತೆಯ ಕತ್ತಿ ಬೀಸುವ ಮುನ್ನ


ಕೃಷಿ ಸಚಿವ ಉಮೇಶ್ ಕತ್ತಿಯವರ ಪ್ರತ್ಯೇಕ ರಾಜ್ಯದ ಕೂಗು ಸಮಗ್ರ ಉತ್ತರಕರ್ನಾಟಕದ ಜನರ ಅಭಿಪ್ರಾಯ ಖಂಡಿತ ಅಲ್ಲವಾದ ಕಾರಣ ಅದನ್ನು ಗಂಭೀರವಾಗಿ ಸ್ವೀಕರಿಸುವ ಅಗತ್ಯ ಇಲ್ಲ. ಇಂತಹ ಬೇಜವಾಬ್ದಾರಿ ಬುಡಬುಡಿಕೆಗಳಿಗೆ ಸಮೀಪದಲ್ಲಿರುವ ಕಸದ ಬುಟ್ಟಿಯೇ ಸರಿಯಾದ ಜಾಗ.
ವೃತ್ತಿಯಲ್ಲಿ ಉದ್ಯಮಿ-ವ್ಯಾಪಾರಿಯಾಗಿದ್ದುಕೊಂಡು  ತಾವು ಕಟ್ಟಿಕೊಂಡಿರುವ ಸಾಮ್ರಾಜ್ಯದ ರಕ್ಷಣೆಗಾಗಿ ರಾಜಕೀಯವನ್ನು ಹವ್ಯಾಸವಾಗಿ ಸ್ವೀಕರಿಸಿರುವವರ ಸಂಖ್ಯೆ ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿಯೂ ಹೆಚ್ಚಾಗುತ್ತಿದೆ. (ಕನ್ನಡಿಗರಾದ ವಿಜಯ ಮಲ್ಯ ಇನ್ನೊಂದು ಉದಾಹರಣೆ).

ಇಂತಹ ಹವ್ಯಾಸಿ ರಾಜಕಾರಣಿಗಳಲ್ಲಿ ರಾಜ್ಯಹಿತದ ದೂರದೃಷ್ಟಿ, ಸಾಮಾಜಿಕ ಜವಾಬ್ದಾರಿ ಇಲ್ಲವೇ ನಾಡು-ನುಡಿಯ ಬಗ್ಗೆ ಕಾಳಜಿಯನ್ನು ಕಾಣುವುದು ಸಾಧ್ಯ ಇಲ್ಲ. ಕತ್ತಿಯವರ ಹಿನ್ನೆಲೆ ಮತ್ತು  ನಡವಳಿಕೆಯನ್ನು ನೋಡಿದರೆ ಅವರೂ ಇಂತಹವರ ಸಾಲಿಗೆ ಸೇರಿರುವಂತೆ ಕಾಣುತ್ತಿದೆ. 
ನಾಲಿಗೆ ಸಡಿಲಬಿಟ್ಟು ಅವರು ಆಡಿರುವ ಮಾತುಗಳಲ್ಲಿ ಬೇಜವಾಬ್ದಾರಿತನ ಮತ್ತು ಅಜ್ಞಾನ ಮಾತ್ರ ಅಲ್ಲ ದುಷ್ಟ ಯೋಜನೆಯೂ ಇದ್ದಂತಿದೆ.ಪ್ರತ್ಯೇಕ ರಾಜ್ಯದ ಕೂಗು ಹಾಕಿದವರಲ್ಲಿ ಕತ್ತಿಯವರು ರಾಜ್ಯದಲ್ಲಿಯಾಗಲಿ, ದೇಶದಲ್ಲಿಯಾಗಲಿ  ಮೊದಲಿಗರಲ್ಲ. ಕೊನೆಯವರು ಆಗುವುದೂ ಇಲ್ಲ.  ದೇಶದ ಮೊದಲ ರಾಜ್ಯ ಪುನರ್‌ವಿಂಗಡಣಾ ಸಮಿತಿ ಭಾಷಾವಾರು ರಾಜ್ಯಗಳ ರಚನೆ ಮಾಡಿದೆ ಎಂದು ಸಾಮಾನ್ಯವಾಗಿ ಹೇಳುವುದಿದ್ದರೂ ಅದಕ್ಕೆ ಭಾಷೆಯೊಂದೇ ಆಧಾರವಾಗಿರಲಿಲ್ಲ ಎನ್ನುವುದು ವಾಸ್ತವ.
ಹಾಗಾಗಿದ್ದರೆ ಅಲ್ಪಸ್ವಲ್ಪ ಬದಲಾವಣೆಯೊಡನೆ ಹಿಂದಿ ಭಾಷೆಯನ್ನು ಆಡುವ ಉತ್ತರಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶಗಳು ಒಂದೇ ರಾಜ್ಯವಾಗಬೇಕಿತ್ತು. ಮೊದಲು ಸ್ಥಾಪನೆಗೊಂಡ ಹದಿನಾಲ್ಕು ರಾಜ್ಯಗಳ ಪೈಕಿ ಕರ್ನಾಟಕ, ಆಂಧ್ರಪ್ರದೇಶ,ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಗಳು ಮಾತ್ರ ಭಾಷೆಯ ಆಧಾರದಲ್ಲಿ ರಚನೆಗೊಂಡ ರಾಜ್ಯಗಳು. ಉಳಿದ ರಾಜ್ಯಗಳ ರಚನೆಗೆ ಭಾಷೆಯ ಜತೆಗೆ ಬೇರೆ ಕಾರಣಗಳೂ ಇದ್ದವು.

ಇದರಿಂದಾಗಿಯೇ ಭಾಷೆಯ ಆಧಾರದಲ್ಲಿ ರಚನೆಗೊಂಡ ರಾಜ್ಯಗಳಲ್ಲಿಯೂ ಪ್ರತ್ಯೇಕ ರಾಜ್ಯದ ಕೂಗು ಎದ್ದಿರುವುದು. ಭಾಷಾಭಿಮಾನದ ಭಾವುಕತೆ ಇಳಿಯುತ್ತಿದ್ದಂತೆಯೇ ಎದುರಾದ ಹಿಂದುಳಿಯುವಿಕೆ ಮತ್ತು ಪ್ರಾದೇಶಿಕ ಅಸಮಾನತೆಯ ವಾಸ್ತವ  ಪ್ರತ್ಯೇಕ  ರಾಜ್ಯದ ಬೇಡಿಕೆಗೆ ಮುಖ್ಯ ಪ್ರೇರಣೆ.
ಈ ಹಿನ್ನೆಲೆಯಿಂದಲೇ ಕತ್ತಿಯವರ ಹೇಳಿಕೆಯನ್ನು ಗಮನಿಸಬೇಕಾಗುತ್ತದೆ. ರಾಜ್ಯದಲ್ಲಿ ಈವರೆಗೆ ಸರ್ಕಾರದಿಂದ ಮತ್ತು ಸ್ವತಂತ್ರವಾಗಿ ನಡೆದಿರುವ ಬಹುತೇಕ ಸಾಮಾಜಿಕ-ಆರ್ಥಿಕ ಸಮೀಕ್ಷೆಗಳು ಹಿಂದುಳಿದಿದೆ ಎಂದು ಗುರುತಿಸಿರುವುದು ಉತ್ತರ ಕರ್ನಾಟಕದ ಗುಲ್ಬರ್ಗ, ಬಿಜಾಪುರ, ಬಾಗಲಕೋಟೆ, ಬೀದರ್, ಕೊಪ್ಪಳ ,ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳನ್ನು.
ಮಾನವ ಅಭಿವೃದ್ಧಿಯ ಸೂಚಿಗಳಾದ ಸಾಕ್ಷರತೆ, ಶಿಕ್ಷಣ, ಆರೋಗ್ಯ, ಲಿಂಗಸಮಾನತೆ ಮತ್ತು ಪರಿಶಿಷ್ಟಜಾತಿ-ಪಂಗಡಗಳ ಸ್ಥಿತಿಗತಿಗಳ ನೆಲೆಯಿಂದ ನೋಡಿದರೂ ಈ ಏಳು ಜಿಲ್ಲೆಗಳು ಹಿಂದುಳಿದಿರುವುದು ಸ್ಪಷ್ಟ. ರಾಜ್ಯದ ಜನಸಂಖ್ಯೆಯಲ್ಲಿ ಈ ಏಳು ಜಿಲ್ಲೆಗಳ ಪಾಲು ಶೇಕಡಾ ಇಪ್ಪತ್ತೈದು, ಆದರೆ ರಾಜ್ಯದ ವರಮಾನದಲ್ಲಿ ಪಡೆದಿರುವ ಪಾಲು ಶೇಕಡಾ ಹದಿನೇಳು.
ಹಿಂದುಳಿದಿರುವ ಈ ಜಿಲ್ಲೆಗಳ ಜತೆ ಅವಿಭಜಿತ ಧಾರವಾಡವನ್ನಾಗಲಿ ಇಲ್ಲವೇ ಬೆಳಗಾವಿ ಜಿಲ್ಲೆಯನ್ನಾಗಲಿ ಹೋಲಿಸುವುದು ಸಾಧ್ಯ ಇಲ್ಲ. ಘಟಪ್ರಭಾ ಮತ್ತು ಮಲಪ್ರಭಾ ಮಾತ್ರವಲ್ಲ ಕೃಷ್ಣಾ ನದಿ ನೀರನ್ನು ಪಡೆದಿರುವ ಬೆಳಗಾವಿ ಜಿಲ್ಲೆಯ ರೈತರು ಉತ್ತರಕರ್ನಾಟಕದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಸಾಕಷ್ಟು ಸ್ಥಿತಿವಂತರೇ ಆಗಿದ್ದಾರೆ. ಈ ಜಿಲ್ಲೆಯ ಬೆಳಗಾವಿ, ರಾಯಭಾಗ, ಹುಕ್ಕೇರಿ, ಚಿಕ್ಕೋಡಿ ಹಾಗೂ ಗೋಕಾಕ ಮತ್ತು ಅಥಣಿ ತಾಲ್ಲೂಕಿನ ಕೆಲವು ಭಾಗಗಳು ಸಮೃದ್ಧವಾಗಿವೆ.
ಹಿಂದುಳಿದಿರುವುದು ಬೈಲಹೊಂಗಲ, ರಾಮದುರ್ಗ ಹಾಗೂ ಗೋಕಾಕ ಮತ್ತು ಅಥಣಿಯ ಕೆಲವು ಭಾಗಗಳು ಮಾತ್ರ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಜತೆ ಇರುವ ಸಂಪರ್ಕ ಕೂಡಾ ಇಲ್ಲಿನ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ದಿಗೆ ನೆರವಾಗಿದೆ. ಉತ್ತರ ಕರ್ನಾಟಕದ ಇತರ ಜಿಲ್ಲೆಗಳ ಜತೆಗಿನ ಹೋಲಿಕೆಯಲ್ಲಿ ಬೆಳಗಾವಿ ಹಿಂದುಳಿದಿದೆ ಇಲ್ಲವೇ ಪ್ರಾದೇಶಿಕ ಅಸಮಾನತೆಗೆ ಗುರಿಯಾಗಿದೆ ಎಂದು ಆರೋಪಿಸುವಂತಿಲ್ಲ.
 ಮಹಾರಾಷ್ಟ್ರ ಕಣ್ಣಿಟ್ಟಿರುವ ಕಾರಣಕ್ಕಾಗಿ ಇದು ಕರ್ನಾಟಕ ರಾಜ್ಯದ ಮುದ್ದಿನ ಕೂಸು. ಮತ್ತೆಮತ್ತೆ ಬೆಳಗಾವಿ ನಮ್ಮದು ಎನ್ನುವುದನ್ನು ಸಾಬೀತುಪಡಿಸುವುದಕ್ಕಾಗಿ ರಾಜ್ಯ ಸರ್ಕಾರ ಬೊಕ್ಕಸದಿಂದ ಧಾರಾಳವಾಗಿ ಇಲ್ಲಿಗೆ ಹಣ ಹರಿಸುತ್ತದೆ. ಇದಕ್ಕೆ ಇತ್ತೀಚಿನ ಉದಾಹರಣೆ ಅಲ್ಲಿ ನಿರ್ಮಿಸಲಾದ ಸುವರ್ಣ ಸೌಧ.
ಪ್ರಾದೇಶಿಕ ಅಸಮಾನತೆ ಮತ್ತು ಹಿಂದುಳಿಯುವಿಕೆಯನ್ನು ತೊಡೆದುಹಾಕುವ ಉದ್ದೇಶದಿಂದ ನೋಡಿದರೆ ಈ ಸುವರ್ಣಸೌಧ ಗುಲ್ಬರ್ಗ ಇಲ್ಲವೇ ಬೀದರ್ ಜಿಲ್ಲಾ ಕೇಂದ್ರಗಳಲ್ಲಿ ನಿರ್ಮಾಣವಾಗಬೇಕಿತ್ತು. ಬೆಳಗಾವಿ ನಮ್ಮದಾಗಿಯೇ ಉಳಿಸಬೇಕೆಂಬ ಬದ್ಧತೆ ಸಮಸ್ತ ಕನ್ನಡಿಗರಿಗೆ ಇರುವ ಕಾರಣಕ್ಕಾಗಿಯೇ ರಾಜ್ಯ ಸರ್ಕಾರ ಸಾರ್ವಜನಿಕ ತೆರಿಗೆ ಹಣವನ್ನು ಉದಾರವಾಗಿ ಬೆಳಗಾವಿ ಜಿಲ್ಲೆಗೆ ನೀಡಿದಾಗಲೂ ಯಾರೂ ಅದರ ವಿರುದ್ಧ ಚಕಾರ ಎತ್ತಿಲ್ಲ.
ಇದರ ಹೊರತಾಗಿಯೂ ಅಲ್ಲಿನ ಚುನಾಯಿತ ಪ್ರತಿನಿಧಿಯೊಬ್ಬರು ಪ್ರತ್ಯೇಕತೆಯ ಕತ್ತಿಯನ್ನು ಅನಗತ್ಯವಾಗಿ ಝಳಪಿಸಿ ಅಮಾಯಕ ಜನರ ದಾರಿ ತಪ್ಪಿಸುವ ಕೆಲಸ ಮಾಡಲು ಹೊರಟಿರುವುದನ್ನು ನೋಡಿದರೆ ಅವರಿಗೆ ಬೇರೆ ಉದ್ದೇಶಗಳಿರಬಹುದೆಂಬ ಅನುಮಾನ ಮೂಡುತ್ತದೆ.
ಮುಂದೊಂದು ದಿನ ಉತ್ತರಕರ್ನಾಟಕ ಎಂಬ ರಾಜ್ಯ ರಚನೆಯಾದರೆ ಅದರ ರಾಜಧಾನಿ ಬೆಳಗಾವಿಯಾಗಲಿ, ಅದರ ಮುಖ್ಯಮಂತ್ರಿ ಬೆಳಗಾವಿಯವರಾಗಲಿ ಎಂಬ ದೂರಾಲೋಚನೆಯೂ ಅವರಲ್ಲಿದ್ದಿರಬಹುದೇನೋ?
ಬಹುಭಾಷೆ,ಧರ್ಮ ಮತ್ತು ಸಂಸ್ಕೃತಿ ಮಾತ್ರವಲ್ಲ ಬಹು ಬಗೆಯ ಅಸಮಾನತೆಯ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿರುವ ಒಂದು ದೇಶದಲ್ಲಿ ಪ್ರತ್ಯೇಕ ರಾಜ್ಯದ ಎಲ್ಲ ಬೇಡಿಕೆಗಳನ್ನು ಸಾರಾಸಗಟಾಗಿ ತಳ್ಳಿಹಾಕಲಾಗುವುದಿಲ್ಲ ಎನ್ನುವುದು ನಿಜ. ಪ್ರತಿಯೊಂದನ್ನೂ ಪ್ರತ್ಯೇಕ ಮಾನದಂಡಗಳ ಮೂಲಕ 
ಪರಿಶೀಲನೆಗೊಳಪಡಿಸಬೇಕಾಗುತ್ತದೆ. ಉದಾಹರಣೆಗೆ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳು ಹಿಂದುಳಿಯಲು ಅದರ ವಿಸ್ತೀರ್ಣವೂ ಪ್ರಮುಖ ಕಾರಣವಾಗಿತ್ತು. ಸರ್ಕಾರ ಮತ್ತು ಪ್ರಜೆಗಳ ನಡುವಿನ ಮಾನಸಿಕ ದೂರ ಮಾತ್ರವಲ್ಲ ಭೌಗೋಳಿಕ ದೂರ ಕೂಡಾ ಪ್ರಗತಿಗೆ ಮಾರಕವಾಗಬಲ್ಲದು.
ಜಯಪ್ರಕಾಶ್ ನಾರಾಯಣ್ ಅವರೇ ಉತ್ತರಪ್ರದೇಶವನ್ನು ಐದುರಾಜ್ಯಗಳಾಗಿ ವಿಂಗಡಿಸಬೇಕೆಂಬ ಸಲಹೆ ನೀಡಿದ್ದರು. ಹನ್ನೆರೆಡು ವರ್ಷಗಳ ಹಿಂದೆ ಜಾರ್ಖಂಡ್, ಉತ್ತರಖಂಡ ಮತ್ತು ಛತ್ತೀಸ್‌ಗಡ ರಾಜ್ಯಗಳ ರಚನೆಯಾಗಿದ್ದು ಭಾಷೆ, ಜಾತಿ,ಧರ್ಮದ ಆಧಾರಗಳಲ್ಲಿ ಅಲ್ಲ.
ಆಡಳಿತದ ಅನುಕೂಲತೆಯ ದೃಷ್ಟಿಯಿಂದ ರಚನೆಗೊಂಡ ಆ ರಾಜ್ಯಗಳ ಪ್ರಗತಿ ಅವುಗಳ ಮೂಲ ರಾಜ್ಯಗಳಾದ ಬಿಹಾರ ಮತ್ತು ಉತ್ತರಪ್ರದೇಶಗಳಿಗಿಂತ ಉತ್ತಮವಾಗಿವೆ. ಈ ಅನುಭವದ ಹಿನ್ನೆಲೆಯಲ್ಲಿಯೇ  ಹರಿತ್‌ಪ್ರದೇಶ ಮತ್ತು ಪೂರ್ವಾಂಚಲಗಳೆಂಬ ಎರಡು ಪ್ರತ್ಯೇಕ ರಾಜ್ಯರಚನೆಯ ಬೇಡಿಕೆ ಉತ್ತರಪ್ರದೇಶದಲ್ಲಿ ಹುಟ್ಟಿಕೊಂಡಿರುವುದು.
ಆದರೆ ಜಾತಿ-ಧರ್ಮ, ಭಾಷಾ ವೈವಿಧ್ಯ, ಸಂಸ್ಕೃತಿ-ಉಪಸಂಸ್ಕೃತಿ, ಜನಾಂಗೀಯ ಅನನ್ಯತೆಯ ಅಂಶಗಳ ಆಧಾರದಲ್ಲಿ ಪ್ರತ್ಯೇಕ ರಾಜ್ಯಗಳನ್ನು ಮಾಡುವುದು ಕೊನೆಯಿಲ್ಲದ ಕಸರತ್ತು ಎನ್ನುವುದನ್ನು ದೇಶದ ಈಶಾನ್ಯಭಾಗದ ಅನುಭವ ಹೇಳುತ್ತಿದೆ.
ಸ್ವಾತಂತ್ರ್ಯಪೂರ್ವದ ಅಸ್ಸಾಂ ಈಗ ಏಳು ರಾಜ್ಯಗಳಾಗಿ ಒಡೆದುಹೋಗಿರುವುದು ಹಿಂದುಳಿಯುವಿಕೆ ಇಲ್ಲವೇ ಪ್ರಾದೇಶಿಕ ಅಸಮಾನತೆಯಿಂದಾಗಿ ಅಲ್ಲ, ಅದಕ್ಕೆ ಜಾತಿ,ಧರ್ಮ ಮತ್ತು ಜನಾಂಗೀಯ ಪ್ರತ್ಯೇಕತೆ ಕಾರಣ.

ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ,ನಾಗಾಲ್ಯಾಂಡ್, ಅರುಣಾಚಲ ಮತ್ತು ತ್ರಿಪುರ ಸೇರಿದಂತೆ ಈಶಾನ್ಯದ `ಸಪ್ತಸುಂದರಿಯರ~  ಒಟ್ಟು ಜನಸಂಖ್ಯೆ ಸುಮಾರು ಮೂರು ಮುಕ್ಕಾಲು ಕೋಟಿ, ಒಟ್ಟು ವಿಸ್ತೀರ್ಣ ಎರಡೂವರೆ ಲಕ್ಷ ಚದರ ಕಿ.ಮೀ. ಏಳು ಭಾಗಗಳಾದ ನಂತರವೂ ಅಲ್ಲಿ ಪ್ರತ್ಯೇಕತೆಯ ಬೇಡಿಕೆ ನಿಂತಿಲ್ಲ  ಮಾತ್ರವಲ್ಲ ಪ್ರತ್ಯೇಕಗೊಂಡ ರಾಜ್ಯಗಳಲ್ಲಿ ಆರ್ಥಿಕ,ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ನಿರೀಕ್ಷೆಗೆ ತಕ್ಕಂತೆ ನಡೆದಿಲ್ಲ ಎನ್ನುವುದನ್ನು ಗಮನಿಸಬೇಕಾಗುತ್ತದೆ. ಈ ಏಳೂ ರಾಜ್ಯಗಳ ಒಳಗೆ  ಪ್ರತ್ಯೇಕ  ರಾಜ್ಯ ಮತ್ತು ಸ್ವಾಯತ್ತ ಪ್ರದೇಶ ಬೇಕೆಂದು  ಮಾತ್ರವಲ್ಲ ಪ್ರತ್ಯೇಕ ದೇಶ ಬೇಕೆಂಬ ಕೂಗೂ ಕೇಳುತ್ತಿದೆ.
ಈ ಹಿನ್ನೆಲೆಯಲ್ಲಿ ಒಂದು ಪ್ರದೇಶದ ಭಾಷೆ, ಧರ್ಮ ಮತ್ತು ಸಂಸ್ಕೃತಿಯ ಅನನ್ಯತೆಯನ್ನುಉಳಿಸಲು ಇಲ್ಲವೇ ಆ ಪ್ರದೇಶದ   ಪ್ರಾದೇಶಿಕ ಅಸಮಾನತೆಯನ್ನು ತೊಡೆದುಹಾಕಲು ಪ್ರತ್ಯೇಕ ರಾಜ್ಯ ರಚನೆ ಮಾತ್ರ ದಾರಿಯೇ ಎಂಬ ಬಗ್ಗೆ ಮರುಚಿಂತನೆ ನಡೆಸಬೇಕಾದ ಅಗತ್ಯ ಇದೆ.
ಉತ್ತರಕರ್ನಾಟಕದಲ್ಲಿ ಆಗಾಗ ಕೇಳಿಬರುತ್ತಿರುವ  ಪ್ರತ್ಯೇಕ  ರಾಜ್ಯದ ಬೇಡಿಕೆಗೆ ಖಂಡಿತ ಜಾತಿ-ಧರ್ಮ ಇಲ್ಲವೇ ಭಾಷೆ ಕಾರಣ ಅಲ್ಲ. ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರದ ಜಿಲ್ಲೆಗಳು ಹಿಂದುಳಿದಿರುವುದು ನಿಜವಾದರೂ ಇದಕ್ಕೆ ರಾಜ್ಯದ ವಿಸ್ತೀರ್ಣ ಇಲ್ಲವೇ ಭೌಗೋಳಿಕ ದೂರ ಕಾರಣ ಎಂದು ಹೇಳಲಾಗದು.  ಕರ್ನಾಟಕ ರಾಜ್ಯದ ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆ ದೇಶದ ಹಲವಾರು ರಾಜ್ಯಗಳಿಗಿಂತ ಉತ್ತಮವಾಗಿದೆ.
ಉತ್ತರಕರ್ನಾಟಕದ ಹಿಂದುಳಿಯುವಿಕೆ ಬಗ್ಗೆ ನಡೆಯುವ ಚರ್ಚೆಗಳಲ್ಲಿ ಸಾಮಾನ್ಯವಾಗಿ ಅಲ್ಲಿನ ಭೂಮಿಯ ಅಸಮಾನ ಹಂಚಿಕೆಯ ಪ್ರಸ್ತಾಪವಾಗುವುದಿಲ್ಲ. ಗುಲ್ಬರ್ಗ, ಬಿಜಾಪುರ, ಬಾಗಲಕೋಟೆ, ಬೀದರ್, ಕೊಪ್ಪಳ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಭೂ ಹಿಡುವಳಿಗಳ ಒಟ್ಟು ವಿಸ್ತೀರ್ಣ 51.31 ಲಕ್ಷ ಹೆಕ್ಟೇರ್‌ಗಳು. ಇದರಲ್ಲಿ  ಅತಿಸಣ್ಣ, ಸಣ್ಣ ಮತ್ತು ಅರೆಮಧ್ಯಮ ರೈತರಿಗೆ ಸೇರಿದ ಹಿಡುವಳಿಯ ಪ್ರಮಾಣ ಶೇಕಡಾ 76.35,
ಜಮೀನ್ದಾರರೆನಿಸಿಕೊಂಡ ಮಧ್ಯಮ ಮತ್ತು ದೊಡ್ಡ ರೈತರಿಗೆ ಸೇರಿದ ಹಿಡುವಳಿಯ ಪ್ರಮಾಣ ಶೇಕಡಾ 23.65. ಈ ಏಳು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರ ಜಿಲ್ಲೆಗಳಲ್ಲಿ ರೈತರ ಹಿಡುವಳಿಯ ಪ್ರಮಾಣ ಶೇಕಡಾ 90.78 ಮತ್ತು ಜಮೀನ್ದಾರಿ ಹಿಡುವಳಿಗಳ ಪ್ರಮಾಣ ಶೇಕಡಾ 9.22. ಈ ಅಸಮಾನತೆಯ ವಿರುದ್ಧ ಉಮೇಶ್ ಕತ್ತಿಯವರಂತಹ ನಾಯಕರು ಎಂದಾದರೂ ದನಿ ಎತ್ತಿದ್ದಾರೆಯೇ?
 ಉತ್ತರ ಕರ್ನಾಟಕ ಹಿಂದುಳಿಯಲು ಇಲ್ಲವೆ ಪ್ರಾದೇಶಿಕ ಅಸಮಾನತೆಗೆ ಗುರಿಯಾಗಲು ಮುಖ್ಯವಾಗಿ ಈ ರಾಜ್ಯವನ್ನು ಆಳಿದವರ ಧೋರಣೆ ಕಾರಣ. ಇದು ಕೇವಲ ದಕ್ಷಿಣಕರ್ನಾಟಕದ ರಾಜಕಾರಣಿಗಳ ಪೂರ್ವಗ್ರಹ ಎನ್ನುವುದಕ್ಕೂ ಆಧಾರಗಳಿಲ್ಲ. ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕುರ್ಚಿಯಲ್ಲಿ ಕೂತ ಉತ್ತರಕರ್ನಾಟಕದ `ಮಣ್ಣಿನ ಮಕ್ಕಳ~ ಕಾಲದಲ್ಲಿಯೂ ಈ ಅನ್ಯಾಯ ಮುಂದುವರಿದಿದೆ.

ಸರ್ಕಾರವೆಂದರೆ ಕೇವಲ ಮುಖ್ಯಮಂತ್ರಿ ಇಲ್ಲವೇ ವಿಧಾನಸೌಧದಲ್ಲಿ ಕೂತಿರುವ ಒಂದಷ್ಟು ಅಧಿಕಾರಿಗಳು ಮಾತ್ರ ಅಲ್ಲ. ಸರ್ವಾಧಿಕಾರಿಯೆಂದು ಆರೋಪಿಸುವಂತಹ ಸರ್ವಶಕ್ತ ಮುಖ್ಯಮಂತ್ರಿಗಳ ಕಾಲ ಕಳೆದುಹೋಗಿದೆ. ಬಹಳಷ್ಟು ಸಂದರ್ಭಗಳಲ್ಲಿ ಮುಖ್ಯಮಂತ್ರಿಯವರಿಗಿಂತ ಉಮೇಶ್ ಕತ್ತಿಯವರಂತಹ ಸಚಿವರು ರಾಜಕೀಯವಾಗಿ ಹೆಚ್ಚು ಬಲಶಾಲಿಯಾಗಿರುತ್ತಾರೆ.
ಮನಸ್ಸು ಮಾಡಿದರೆ ಇಂತಹವರು ಸರ್ಕಾರದ ಮೇಲೆ ಒತ್ತಡ ಹೇರಿ ಎಂತಹ ಅಸಾಧ್ಯ ಕೆಲಸವನ್ನೂ ಮಾಡಿಸುವಷ್ಟು ಸಶಕ್ತರು. ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಮೂರು ವರ್ಷಗಳ ಹಿಂದಿನ ಅತಿವೃಷ್ಟಿಯಿಂದಾಗಿ ಮನೆಮಾರು ಕಳೆದುಕೊಂಡ ಬಹಳಷ್ಟು ಕುಟುಂಬಗಳು ಈಗಲೂ ಸ್ವಂತಕ್ಕೊಂದು ಸೂರು ಪಡೆಯಲಿಕ್ಕಾಗದೆ  ತಗಡುಶೀಟುಗಳ ತಾತ್ಕಾಲಿಕ ಮನೆಗಳಲ್ಲಿ ನರಕಯಾತನೆ ಅನುಭವಿಸುತ್ತಿವೆ.
ಉತ್ತರ ಕರ್ನಾಟಕಕ್ಕೆ ಸೇರಿರುವವರೇ ಮುಖ್ಯಮಂತ್ರಿಗಳಾದರೂ ಅವರ ಬವಣೆ ಕೊನೆಗೊಂಡಿಲ್ಲ. ಪ್ರತ್ಯೇಕ  ರಾಜ್ಯದ ಬಗ್ಗೆ ಮಾತನಾಡುತ್ತಿರುವ ಉಮೇಶ್ ಕತ್ತಿಯವರು ಮೊದಲು ದನಿ ಎತ್ತಬೇಕಾಗಿರುವುದು ಈ ರೀತಿ ನೊಂದವರ ಪರವಾಗಿ ಅಲ್ಲವೇ?
ಆಳುವವರ ಇಂತಹ ಅಸಂವೇದನಾಶೀಲ ಮನಸ್ಥಿತಿ ಬದಲಾಗದೆ ಬೆಳಗಾವಿಯಲ್ಲಿ ಕಟ್ಟಿದ ಸುವರ್ಣ ಸೌಧದಲ್ಲಿ ಇನ್ನೊಂದು ಮುಖ್ಯಮಂತ್ರಿಯವರ ಕುರ್ಚಿಯನ್ನು  ಮಾಡಿಸಿ ಅದರಲ್ಲಿ ಕತ್ತಿ ಇಲ್ಲವೇ ಕೋರೆಯವರನ್ನು ಕೂರಿಸಿದರೂ ಉತ್ತರ ಕರ್ನಾಟಕದ ಭಾಗ್ಯದ ಬಾಗಿಲು ತೆರೆಯಲಾರದು. ಆದುದರಿಂದ ಇಂತಹ ದೂರಾಲೋಚನೆ ಇಲ್ಲವೇ ದುರಾಲೋಚನೆಯ `ಕತ್ತಿ~ಯನ್ನು ಒರೆಯಲ್ಲಿಡುವುದೇ ಕ್ಷೇಮ.

ಎಸ್.ಎಂ. ಕೃಷ್ಣ ಸಮಸ್ಯೆಯೇ, ಪರಿಹಾರವೇ? OCT 29 2012


ವಿದೇಶಾಂಗ ವ್ಯವಹಾರ ಸಚಿವ ಖಾತೆಗೆ ರಾಜೀನಾಮೆ ನೀಡಿರುವ ಎಸ್.ಎಂ. ಕೃಷ್ಣ  ರಾಜ್ಯ ರಾಜಕಾರಣಕ್ಕೆ ಯಾವ ಪಾತ್ರ ಧರಿಸಿ ಮರಳಲಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟ ಇಲ್ಲ. ಆದರೆ ರಾಜಕೀಯ ಸನ್ಯಾಸವನ್ನು ಘೋಷಿಸದೆ ಇರುವುದರಿಂದ ಕೃಷ್ಣ ಅವರು ಬೆಂಗಳೂರಿಗೆ ಬಂದು ಇಲ್ಲಿನ ರಾಜಕೀಯವನ್ನು `ಯುವಕರಿಗೆ~ ಬಿಟ್ಟುಕೊಟ್ಟು ತಮ್ಮ ನೆಚ್ಚಿನ ಶಟಲ್ ಬ್ಯಾಡ್ಮಿಂಟನ್ ಆಡುತ್ತಾ ಕಾಲ ಕಳೆಯಲಿದ್ದಾರೆ ಎಂದು ಹೇಳಲಾಗುವುದಿಲ್ಲ.

ಅವರು ಅಂತಹ ನಿರ್ಧಾರ ಮಾಡಿದರೂ ಬೆಂಬಲಿಗರು ಅವರನ್ನು ಸುಮ್ಮನಿರಲು ಬಿಡಲಾರರು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷತೆ, ಮುಖ್ಯಮಂತ್ರಿ, ರಾಜ್ಯಪಾಲ, ಕೇಂದ್ರ ಸಚಿವ ಹೀಗೆ ರಾಜಕಾರಣದಲ್ಲಿ ಮಹತ್ವದ ಸ್ಥಾನಗಳೆಲ್ಲವನ್ನೂ ಅಲಂಕರಿಸಿರುವ ಕೃಷ್ಣ ಅವರಿಗೆ ಅವರದ್ದೇ ಆಗಿರುವ ಬೆಂಬಲಿಗರಿದ್ದಾರೆ.
ಅವರ ಶಕ್ತಿ, ಅನುಭವ, ಸಂಪರ್ಕ, ಸಂಪನ್ಮೂಲಗಳ ವಿಸ್ತಾರ ದೊಡ್ಡದು. ವಯಸ್ಸಿನಲ್ಲಿಯೂ ಹಿರಿಯರು, ಹೈಕಮಾಂಡ್‌ನಲ್ಲಿ ಈಗಲೂ ಅವರ ಮಾತಿಗೆ ಒಂದಿಷ್ಟು ಬೆಲೆ ಇದೆ. ಆದುದರಿಂದ ಅವರು ಕರ್ನಾಟಕಕ್ಕೆ ಯಾವ ಪಾತ್ರದಲ್ಲಿ ಪ್ರವೇಶಿಸಿದರೂ ರಾಜ್ಯ ರಾಜಕಾರಣ ಮೊದಲಿನಂತೆ ಇರಲಾರದು.
ರಾಜ್ಯದ ಕಾಂಗ್ರೆಸ್ ಪಕ್ಷದಲ್ಲಿ ಕೃಷ್ಣ ಸಕ್ರಿಯವಾದರೆ ಅನುಕೂಲತೆಗಳಿವೆಯೇ? ಖಂಡಿತ ಇವೆ. ಮೊದಲನೆಯದಾಗಿ ಕೃಷ್ಣ ತಮ್ಮ `ಇಮೇಜ್~ ಬಗ್ಗೆ ಸದಾ ಧ್ಯಾನಸ್ಥರಾಗಿರುವವರು. ವಿದೇಶಿ ಶಿಕ್ಷಣ, ಇಂಗ್ಲಿಷ್ ಭಾಷೆಯ ಮೇಲಿನ ಪ್ರಭುತ್ವ, ಎಚ್ಚರಿಕೆಯ ಮಾತುಗಳು, ಉಡುಗೆ-ತೊಡುಗೆ, ಅಪಾರವಾದ ಸಂಯಮ, ಎದುರಿಗಿದ್ದವರಲ್ಲಿ ಗೌರವದ ಭಾವನೆಯನ್ನು ಹುಟ್ಟಿಸುವಂತಹ ನಡವಳಿಕೆಗಳ ಮೂಲಕ ಅವರು ತಮ್ಮ `ಇಮೇಜ್~ ಪೋಷಿಸಿಕೊಂಡು ಬಂದವರು.
ಕಳೆದ ಏಳೆಂಟು ವರ್ಷಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ ರಾಜಕಾರಣಿಗಳು ಗೌರವ ಕಳೆದುಕೊಂಡಿದ್ದು, ಬೀದಿಬೀದಿಗಳಲ್ಲಿ ಜನ ತುಚ್ಚವಾಗಿ ಮಾತನಾಡುವಂತಾಗಿದೆ. ರಾಜಕಾರಣಿಗಳು ಭ್ರಷ್ಟರು ಎನ್ನುವುದಷ್ಟೇ ಇದಕ್ಕೆ ಕಾರಣ ಅಲ್ಲ, ಭ್ರಷ್ಟಾಚಾರದ ಹಣದಿಂದ ಗಳಿಸಿದ ಶ್ರೀಮಂತಿಕೆಯ ಅಸಹ್ಯಕರ ಪ್ರದರ್ಶನ, ರೆಸಾರ್ಟ್ ರಾಜಕೀಯ, ಸದನದಲ್ಲಿಯೇ ಅಶ್ಲೀಲಚಿತ್ರಗಳ ವೀಕ್ಷಣೆ, ಸೊಂಟದ ಕೆಳಗಿನ ಭಾಷೆಯಲ್ಲಿ ಬೈದಾಟ, ರಕ್ತದ ರುಚಿ ತೋರಿಸುವ ಬೆದರಿಕೆ ಮೊದಲಾದ ಅವರ ಒಟ್ಟು ನಡವಳಿಕೆಯೇ ಜನರಲ್ಲಿ ರೇಜಿಗೆ ಹುಟ್ಟಿಸಿದೆ.
ಇಂತಹ ವಾತಾವರಣದಲ್ಲಿ ಎಸ್.ಎಂ.ಕೃಷ್ಣ ಅವರ `ಭಿನ್ನ ವ್ಯಕ್ತಿತ್ವ~ ಸಹಜವಾಗಿಯೇ ಜನರ ಮನಸ್ಸನ್ನು ಸೆಳೆಯಬಹುದು. ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ನಗರಕೇಂದ್ರಿತ, ಮಧ್ಯಮವರ್ಗ ಮತ್ತು ಯುವವರ್ಗಕ್ಕೆ ಸೇರಿರುವ ಮತದಾರರಲ್ಲಿ ಬಹಳಷ್ಟು ಮಂದಿಗೆ ಕೃಷ್ಣ ಇಷ್ಟವಾಗಬಹುದು.
ಎರಡನೆಯ ಅನುಕೂಲತೆ ಅವರಲ್ಲಿರುವ ಅಭಿವೃದ್ಧಿಯ ಮುನ್ನೋಟ. ಬಹಳಷ್ಟು ರಾಜಕೀಯ ಪಕ್ಷಗಳು ಸೀರೆ, ಮಂಗಳಸೂತ್ರ, ಸೈಕಲ್ ಹಂಚಿಕೆ ಇತ್ಯಾದಿ ಅಗ್ಗದ ಜನಪ್ರಿಯ ಕಾರ್ಯಕ್ರಮಗಳ ದೌರ್ಬಲ್ಯಕ್ಕೆ ಬಿದ್ದುಬಿಡುತ್ತವೆ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರಚಿಸಿದ್ದ ತೆರಿಗೆ ಸುಧಾರಣಾ ಆಯೋಗ, ಆಡಳಿತ ಸುಧಾರಣಾ ಆಯೋಗ, ಬೆಂಗಳೂರು ಅಭಿವೃದ್ಧಿ ಕಾರ್ಯಪಡೆ, ಬಂಡವಾಳ ಹೂಡಿಕೆದಾರರ ಜಾಗತಿಕ ಸಮಾವೇಶ, ಐಟಿ ಮತ್ತು ಬಿಟಿ ಉದ್ಯಮಕ್ಕೆ ಕೊಟ್ಟ ಪ್ರೋತ್ಸಾಹ, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟ, ಗ್ರಾಮೀಣಪ್ರದೇಶದಲ್ಲಿ ವಸತಿ ನಿರ್ಮಾಣದಂತಹ ಯೋಜನೆಗಳು ಒಂದು ಸರ್ಕಾರ ಹೊಂದಿರಬೇಕಾದ ಅಭಿವೃದ್ಧಿಯ ಮುನ್ನೋಟಕ್ಕೆ ಮಾದರಿಯಾಗಿತ್ತು. ಕಳೆದ ಎಂಟು ವರ್ಷಗಳ ಆಡಳಿತವನ್ನು ಕಂಡ ಮತದಾರನಿಗೆ ಕೃಷ್ಣ ಅವರ ಕಾಲದ ಸಾಧಾರಣ ಸಾಧನೆ ಕೂಡಾ ಹಿರಿದಾದುದು ಎಂದು ಅನಿಸದೆ ಇರದು.
ಮೂರನೆಯದಾಗಿ ಕೃಷ್ಣ ಅವರ ವಯಸ್ಸು ಮತ್ತು ಅನುಭವ ಸಹಜವಾಗಿ ಯಜಮಾನನ ಸ್ಥಾನವನ್ನು ತಂದುಕೊಟ್ಟಿದೆ. ಅವರಿಗಿಂತ ಹಿರಿಯ ಜನಪ್ರಿಯ ನಾಯಕರು ರಾಜ್ಯ ಕಾಂಗ್ರೆಸ್‌ನಲ್ಲಿ ಬೇರೆ ಯಾರೂ ಇಲ್ಲ. ಒಳಜಗಳಕ್ಕೆ ಕುಖ್ಯಾತಿ ಪಡೆದ ಪಕ್ಷ ಕಾಂಗ್ರೆಸ್.
ಮೂರು ಮಂದಿ ಇದ್ದಲ್ಲಿ ನಾಲ್ಕು ಗುಂಪುಗಳಿರುತ್ತವೆ. ಡಾ.ಪರಮೇಶ್ವರ್, ಸಿದ್ದರಾಮಯ್ಯ, ಶಾಮನೂರು ಶಿವಶಂಕರಪ್ಪ ಹೀಗೆ ಪ್ರತಿ ನಾಯಕನ ಸುತ್ತ ಮರಿನಾಯಕರ ಗುಂಪುಗಳಿರುತ್ತವೆ. ಇವರ ನಡುವಿನ ಜಗಳ ಬಿಡಿಸುವ ಪಂಚಾಯಿತಿ ಕೆಲಸ ಮಾಡುವುದು ಕೃಷ್ಣ ಅವರಂತಹ ಹಿರಿಯ ಮತ್ತು ವಿವಾದಾತೀತ ನಾಯಕನಿಗೆ ಉಳಿದವರಿಗಿಂತ ಸುಲಭ.
ಈ ಮೂಲಕ ಪಕ್ಷಕ್ಕೆ ತುರ್ತಾಗಿ ಬೇಕಾಗಿರುವ ಒಗ್ಗಟ್ಟನ್ನು ಮೂಡಿಸಲು ಸಾಧ್ಯ.
ನಾಲ್ಕನೆಯದಾಗಿ ಕೃಷ್ಣ ಅವರ ಜಾತಿ. ಬಿಜೆಪಿಯ ಬೆಂಬಲಕ್ಕಿರುವ ಲಿಂಗಾಯತ ಮತಗಳನ್ನು ಒಡೆಯಲು ಕಾಂಗ್ರೆಸ್ ಪ್ರಯತ್ನ ಪಡಬೇಕಾಗಿಲ್ಲ. ಆ ಕೆಲಸವನ್ನು ಮಾಡಲು ಆಗಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಿದ್ಧತೆ ಪ್ರಾರಂಭಿಸಿದ್ದಾರೆ. ಇನ್ನೊಂದು ಎದುರಾಳಿ ಪಕ್ಷವಾದ ಜೆಡಿ(ಎಸ್) ಬೆಂಬಲಕ್ಕಿರುವ ಒಕ್ಕಲಿಗರ ಮತಗಳನ್ನು ಒಡೆದು ಸೆಳೆಯುವಂತಹ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ.
ಕೃಷ್ಣ ಅವರು ಪ್ರಶ್ನಾತೀತ ಒಕ್ಕಲಿಗ ನಾಯಕರಲ್ಲದೆ ಇದ್ದರೂ ಆ ಕೆಲಸವನ್ನು ತಮ್ಮ ಮಿತಿಯಲ್ಲಿಯೇ ಅವರು ಮಾಡಬಲ್ಲರು. ಕಾಂಗ್ರೆಸ್ ಪಕ್ಷದೊಳಗಿರುವ ಬಹಳಷ್ಟು ಅತೃಪ್ತ ಲಿಂಗಾಯತ ನಾಯಕರಿಗೂ ಎಸ್.ಎಂ.ಕೃಷ್ಣ ಆಪ್ತರು. ಅವರಲ್ಲಿ ಬಹಳಷ್ಟು ಮಂದಿ  ಶಾಮನೂರು ಶಿವಶಂಕರಪ್ಪನವರನ್ನು ಕೈಬಿಟ್ಟು ಕೃಷ್ಣ ಅವರನ್ನು ಸ್ವಾಗತಿಸಲು ಹೂವಿನ ಹಾರ ಹಿಡಿದುಕೊಂಡು ನಿಂತಿದ್ದಾರೆ.
ಮೇಲ್ನೋಟಕ್ಕೆ ಇವೆಲ್ಲವೂ ಕಾಂಗ್ರೆಸ್ ಪಕ್ಷದ ಗೆಲುವಿಗೆ ನೆರವಾಗಬಲ್ಲಂತಹ ಅನುಕೂಲಗಳಂತೆ ಕಾಣುತ್ತಿವೆ. ಆದರೆ ಈ ನಾಲ್ಕು ಅನುಕೂಲತೆಗಳನ್ನು ಇನ್ನೊಂದು ಮಗ್ಗುಲಿನಿಂದ ನೋಡಿದರೆ ಇವು ಹೊಸ ಸಮಸ್ಯೆಗಳಾಗಿ ಕಾಣುತ್ತವೆ.
ಮೊದಲನೆಯದಾಗಿ ಕೃಷ್ಣ ಹೊಂದಿರುವ ಮತ್ತು ಮನುಷ್ಯ ಪ್ರಯತ್ನದ ಮೂಲಕ ಬದಲಾಯಿಸಲಾಗದ ಅನಾನುಕೂಲತೆ ಅವರ ವಯಸ್ಸು. ಅವರು 80 ವರ್ಷ ಪೂರ್ಣಗೊಳಿಸಿ 81ಕ್ಕೆ ಕಾಲಿಟ್ಟಿದ್ದಾರೆ. ಒಬ್ಬ ವ್ಯಕ್ತಿಯ `ಇಮೇಜ್~ನಲ್ಲಿ ವಯಸ್ಸಿನ ಪಾತ್ರವೂ ಇದೆ. ಜನಸಂಖ್ಯೆಯಲ್ಲಿ ಶೇಕಡಾ 65ರಷ್ಟಿರುವ 35 ವರ್ಷಗಳೊಳಗಿನ ಯುವಜನರು 80 ವರ್ಷದ ನಾಯಕನನ್ನು ಆತ ಎಷ್ಟೇ ಸಮರ್ಥನಾಗಿದ್ದರೂ ಒಪ್ಪಿಕೊಳ್ಳುತ್ತಾರೆಯೇ? ಉದ್ಯಮ ಕ್ಷೇತ್ರಗಳ ನಾಯಕರ ಸರಾಸರಿ ವಯಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ನಿಧಾನವಾಗಿಯಾದರೂ ಈ ಬದಲಾವಣೆ ರಾಜಕೀಯದಲ್ಲಿಯೂ ಪ್ರಾರಂಭವಾಗಿದೆ. ಉತ್ತರಪ್ರದೇಶದಲ್ಲಿ ಮುಲಾಯಂಸಿಂಗ್ ತನ್ನ ಮಗನನ್ನು ಮುಖ್ಯಮಂತ್ರಿ ಮಾಡಿಬಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಂಜಾಬ್ ಮತ್ತು ತಮಿಳುನಾಡಿನಲ್ಲಿ ಈಗಿನ ಆಡಳಿತ ಪಕ್ಷಗಳೇ ಪುನರಾಯ್ಕೆಯಾದರೂ ಮುಖ್ಯಮಂತ್ರಿ ಸ್ಥಾನದಲ್ಲಿ ತಂದೆಯ ಬದಲಿಗೆ ಮಕ್ಕಳು ಕೂರಬಹುದು.
ಮಹಾರಾಷ್ಟ್ರ, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ, ಆಂಧ್ರಪ್ರದೇಶ, ಒಡಿಶಾ, ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳೆಲ್ಲ 60 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರು. ಕೃಷ್ಣ ಅವರ ಪಕ್ಷವೇ ಯುವನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎದುರಿಸಲು ಹೊರಟಿದೆ.
ಈ ಪರಿಸ್ಥಿತಿಯಲ್ಲಿ ಎಂಬತ್ತು ದಾಟಿದ ಕೃಷ್ಣ ಅವರು ಪಾಂಚಜನ್ಯ ಊದಿದರೆ ಎಷ್ಟು ಮಂದಿ ಯುವಕ-ಯುವತಿಯರು ಓಡಿಬರಬಹುದು?ಎರಡನೆಯದಾಗಿ, 1999ರಲ್ಲಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಮೊದಲ ಬಾರಿಗೆ ಕೂತಾಗ ಅವರು ಹೊಂದಿದ್ದ `ಕ್ಲೀನ್ ಇಮೇಜ್~ ಈಗಲೂ ಇದೆ ಎಂದು ಹೇಳುವುದು ಕಷ್ಟ. ತಮ್ಮ ಆಡಳಿತ ಭ್ರಷ್ಟಚಾರ ಮುಕ್ತವಾಗಿತ್ತು ಎಂದು ಹೇಳುವ ಎದೆಗಾರಿಕೆ ಕೃಷ್ಣ ಅವರಿಗೂ ಇರಲಾರದು. 
ನೈಸ್ ಹಗರಣದಲ್ಲಿ ಲೋಕಾಯುಕ್ತ ವಿಶೇಷ ನ್ಯಾಯಾಲಯ ಅವರನ್ನು ಆರೋಪಿಯನ್ನಾಗಿ ಮಾಡಿರುವುದು ಇತ್ತೀಚಿನ ಘಟನೆ. ಅವರ ಅಧಿಕಾರಾವಧಿಯ ಕಾಲದಲ್ಲಿಯೇ ಅಕ್ರಮ ಗಣಿಗಾರಿಕೆಯ ಅಧ್ಯಾಯ ಪ್ರಾರಂಭವಾಗಿದ್ದು. ಕಾಲ ಬದಲಾಗಿದೆ, ಸಾಮಾನ್ಯ ಜನರು ಹಿಂದಿನಷ್ಟು ಅಸಹಾಯಕರಲ್ಲ. ಅವರ ಕೈಗೆ ಸಿಕ್ಕಿರುವ ಮಾಹಿತಿ ಹಕ್ಕು ಕಾಯಿದೆಯ ಅಸ್ತ್ರ ಮತ್ತು ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಂತಹ ಪ್ರಾಮಾಣಿಕ ರಾಜಕಾರಣಿಯ ಎದೆಯಲ್ಲಿಯೂ ದಿಗಿಲು ಹುಟ್ಟಿಸುವಂತಿದೆ.

ಈಗಿನ ಹೋರಾಟ ಆಟದ ನಿಯಮಗಳನ್ನು ಬದಲಿಸಿಬಿಟ್ಟಿದೆ. ರಾಜಕಾರಣಿಗಳ ಮಕ್ಕಳು ಮಾತ್ರವಲ್ಲ ಅಳಿಯಂದಿರ ಬಂಡವಾಳ ಕೂಡಾ ಬಯಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಐದು ದಶಕಗಳ ಕಾಲ ದೀರ್ಘ ರಾಜಕೀಯ ಮಾಡಿ ಅಧಿಕಾರದ ಹಲವಾರು ಸ್ಥಾನಮಾನಗಳನ್ನು ಅನುಭವಿಸಿರುವ ಕೃಷ್ಣ ಅವರ `ಕ್ಲೀನ್ ಇಮೇಜ್~ನ ಕೋಟೆಯನ್ನು ಒಡೆದುಹಾಕಲು ರಾಜಕೀಯ ವಿರೋಧಿಗಳು ಖಂಡಿತ ಪ್ರಯತ್ನ ನಡೆಸಬಹುದು.
ಕೃಷ್ಣ ಒಬ್ಬ ಉತ್ತಮ ಆಡಳಿತಗಾರನೆನ್ನುವ ಖ್ಯಾತಿಯ ಜತೆಯಲ್ಲಿ, ಅವರ ಅಭಿವೃದ್ಧಿಯ ಮುನ್ನೋಟ  ನಗರ ಕೇಂದ್ರಿತವಾಗಿತ್ತು ಎಂಬ ಆರೋಪ ಕೂಡಾ ಇದೆ. ಬೆಂಗಳೂರು ನಗರವನ್ನು `ಸಿಲಿಕಾನ್ ಸಿಟಿ~ಯಾಗಿ ಬೆಳೆಸಲು ತೋರಿದ ಆಸಕ್ತಿಯನ್ನು ಅವರು ಗ್ರಾಮೀಣ ಅಭಿವೃದ್ಧಿಗಾಗಿ ತೋರಿಸಲಿಲ್ಲ ಎಂದು ದೂರುವವರಿದ್ದಾರೆ. ಅ
ವರ ಕಾಲದಲ್ಲಿ ಕಾಣಿಸಿಕೊಂಡ ಬರಗಾಲವನ್ನು ಎದುರಿಸಲು ವಿಫಲವಾಗಿದ್ದು ಕೂಡಾ ಕಾಂಗ್ರೆಸ್ ಸೋಲಿಗೆ ಕಾರಣ ಎನ್ನುವವರಿದ್ದಾರೆ. ಈ ದೇಶದಲ್ಲಿ ನಗರಕೇಂದ್ರಿತ ಅಭಿವೃದ್ಧಿಯ ಪೂರ್ವಗ್ರಹ ಹೊಂದಿರುವವರು ಚುನಾವಣೆಯಲ್ಲಿ ಯಶಸ್ಸು ಕಂಡದ್ದು ಕಡಿಮೆ. ಇದಕ್ಕೆ ಉದಾಹರಣೆಯಾಗಿ ಡಾ. ಮನಮೋಹನ್‌ಸಿಂಗ್ ಅವರನ್ನೇ ಉಲ್ಲೇಖಿಸಬಹುದು.
ಶರದ್ ಪವಾರ್ ತನ್ನ ವಿರುದ್ಧದ ಭ್ರಷ್ಟಾಚಾರದ ನೂರೆಂಟು ಆರೋಪಗಳ ಹೊರತಾಗಿಯೂ ರಾಜಕೀಯವಾಗಿ ಇಂದಿಗೂ ಯಶಸ್ಸು ಕಾಣಲು ಸಾಧ್ಯವಾಗಿರುವುದು ಗ್ರಾಮಕೇಂದ್ರಿತ ಅಭಿವೃದ್ಧಿ ಯೋಜನೆಗಳಿಂದಾಗಿ. ಎಚ್.ಡಿ. ದೇವೇಗೌಡರು  ಬಹಳ ಜಾಣತನದಿಂದ `ಮಣ್ಣಿನ ಮಗ~ ಎಂಬ ಬಿರುದನ್ನು ಕಾಪಾಡಿಕೊಂಡು ಬಂದ ಕಾರಣದಿಂದಾಗಿಯೇ ಈಗಲೂ ರಾಜಕೀಯವಾಗಿ ಪ್ರಸ್ತುತವಾಗಿ ಉಳಿದಿದ್ದಾರೆ.
 ನಗರದ ಮತದಾರರು ಕೃಷ್ಣ ಅವರಂತಹ ರಾಜಕಾರಣಿಗಳ ಬಗ್ಗೆ ಒಲವು ಹೊಂದಿರಬಹುದು. ಆದರೆ ನಗರ ಪ್ರದೇಶದಲ್ಲಿ ಚಲಾವಣೆಯಾಗುವ ಮತಗಳ ಪ್ರಮಾಣ ಎಷ್ಟು? ನಗರದ ಮತದಾರರಲ್ಲಿ ಅಷ್ಟೊಂದು ರಾಜಕೀಯ ಜಾಗೃತಿ ಹೊಂದಿದ್ದರೆ, ಜಾತಿ, ದುಡ್ಡು ಮೊದಲಾದ ದೌರ್ಬಲ್ಯಗಳು ಅವರಲ್ಲಿ ಇಲ್ಲವೆಂದಾದರೆ ಬೆಂಗಳೂರು ಪದವೀಧರ ಮತದಾರ ಕ್ಷೇತ್ರದಲ್ಲಿ ಅಶ್ವಿನ್ ಮಹೇಶ್ ಅವರಂತಹ ನಗರಪ್ರೇಮಿ, ಶಿಕ್ಷಿತ, ಜಾಗೃತ ಅಭ್ಯರ್ಥಿ ಸೋತು ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಮಚಂದ್ರಗೌಡರಂತಹವರು ಗೆಲ್ಲಲು ಹೇಗೆ ಸಾಧ್ಯ?
ಮೂರನೆಯದಾಗಿ ಕೃಷ್ಣ ಅವರ ಆಗಮನದಿಂದ ರಾಜ್ಯ ಕಾಂಗ್ರೆಸ್‌ನಲ್ಲಿರುವ ಒಳಜಗಳ ಶಮನವಾಗಲಿದೆ ಎಂದು ಆ ಪಕ್ಷದಲ್ಲಿರುವ ಕಡು ಆಶಾವಾದಿಗಳು ನಂಬಿದ್ದಾರೆ. 2008ರಲ್ಲಿ ಇದೇ ಕೆಲಸಕ್ಕಾಗಿ ಕೃಷ್ಣ ಅವರನ್ನು ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ಕೊಡಿಸಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕಕ್ಕೆ ಕಳುಹಿಸಿತ್ತೆನ್ನುವುದನ್ನು ಅವರು ಮರೆತುಬಿಟ್ಟಿದ್ದಾರೆ.
ಆದರೆ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ದರಾಮಯ್ಯನವರ ಗುಂಪುಗಳ ನಡುವಿನ ಒಳಜಗಳ ಬಗೆಹರಿಸಲು ಕೃಷ್ಣ ಅವರಿಗೆ ಸಾಧ್ಯವಾಗಲಿಲ್ಲ, ಆ ಜಗಳ ಕಾಂಗ್ರೆಸ್ ಸೋಲಿನಲ್ಲಿಯೇ ಕೊನೆಗೊಂಡದ್ದು. ಆಗ ಮಾಡಲಾಗದ ಪವಾಡವನ್ನು ಕೃಷ್ಣ ಈಗ ಮಾಡುತ್ತಾರೆ ಎನ್ನುವುದಕ್ಕೆ ಖಾತರಿ ಏನಿದೆ?  ತಮ್ಮ ಮಹತ್ವಾಕಾಂಕ್ಷೆಯ ಈಡೇರಿಕೆಗೆ ಕೃಷ್ಣ ನೆರವಾಗಬಹುದು ಎನ್ನುವ ವಿಶ್ವಾಸ ಇರುವವರೆಗೆ ಪರಮೇಶ್ವರ್ ಇಲ್ಲವೇ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಇರಬಹುದು.

ಆ ವಿಶ್ವಾಸ ಕಳೆದುಕೊಂಡ ಮರುಕ್ಷಣ ಅವರಿಬ್ಬರೂ ಇಲ್ಲವೇ ಅವರಲ್ಲೊಬ್ಬರು ತಿರುಗಿಬೀಳಬಹುದು. ಈ ಇಬ್ಬರು ಕಾಂಗ್ರೆಸ್ ನಂಬಿಕೊಂಡ ಮತಬ್ಯಾಂಕ್‌ನಲ್ಲಿರುವ ದಲಿತ ಮತ್ತು ಹಿಂದುಳಿದ ಜಾತಿಗಳಿಗೆ ಸೇರಿದವರು. ಕೃಷ್ಣ ತಂದುಕೊಡುವ ಒಕ್ಕಲಿಗರ ಮತಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಲಿತ-ಹಿಂದುಳಿದ ಜಾತಿಗಳ ಮತಗಳನ್ನು ಕಾಂಗ್ರೆಸ್ ಕಳೆದುಕೊಳ್ಳುವಂತಾದರೆ ಲಾಭಕ್ಕಿಂತ ನಷ್ಟ ಹೆಚ್ಚಾಗಬಹುದು.
ಈ ಕಾರಣಗಳಿಂದಾಗಿಯೇ ಒಂದು ಕೋನದಲ್ಲಿ ರಾಜ್ಯ ಕಾಂಗ್ರೆಸ್ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರದಂತೆ ಕಾಣುವ ಎಸ್.ಎಂ. ಕೃಷ್ಣ ಇನ್ನೊಂದು ಕೋನದಲ್ಲಿ ಸಮಸ್ಯೆಯಂತೆ ಕಾಣುತ್ತಿರುವುದು.

Thursday, October 18, 2012

ಮನಸ್ಸಿದ್ದರೆ ವಿವಾದ ಇತ್ಯರ್ಥಕ್ಕೆ ಮಾರ್ಗವೂ ಇದೆ October 15, 2012

ಕಾವೇರಿ ನೀರು ಹಂಚಿಕೆಯ ವಿಷಯ ರಾಷ್ಟ್ರದ ಗಮನ ಸೆಳೆಯುವುದು ವಿವಾದ ಉಲ್ಬಣಗೊಂಡಾಗ ಮಾತ್ರ. ಈ ಸಂದರ್ಭದಲ್ಲಿ  ದಿಢೀರ್ `ಕಾವೇರಿ ತಜ್ಞ`ರಾಗಿಬಿಡುವ ರಾಜಕಾರಣಿಗಳು, ಕನ್ನಡ ಹೋರಾಟಗಾರರು ಮತ್ತು ಚಲನಚಿತ್ರ ನಟ-ನಟಿಯರ ಅರೆಬೆಂದ ತಿಳಿವಳಿಕೆ ಮಾತುಗಳ ಮೂಲಕವೇ ಈ ವಿವಾದವನ್ನು ಇತರರು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. 

`ಪ್ರಾಣ ಕೊಡುವ` `ರಕ್ತ ಹರಿಸುವ`... ಇವರ ವೀರಾವೇಶದ ಮಾತುಗಳ ಅಬ್ಬರದ ನಡುವೆ ಸಮಚಿತ್ತದ ಮತ್ತು ಪ್ರಜ್ಞಾವಂತಿಕೆಯ ಮಾತುಗಳು ನಮ್ಮವರಿಗೂ ರುಚಿಸುವುದಿಲ್ಲ. ಬೆಂಕಿ ಕಾರುವ ಮಾತುಗಳನ್ನೆಲ್ಲ ಕೇಳುವಾಗ ಸಂಘರ್ಷದ ಹಾದಿಯಲ್ಲದೆ ವಿವಾದ ಇತ್ಯರ್ಥಕ್ಕೆ ಬೇರೆ ದಾರಿಯೇ ಇಲ್ಲವೇನೋ ಎಂದು ಅನಿಸುವ ಅಪಾಯ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆಯ ಪ್ರಮುಖ ಅಭಿವ್ಯಕ್ತಿಯಾದ ಬಂದ್, ಧರಣಿ, ಮುಷ್ಕರ-  ಒಂದು ಹಂತದವರೆಗೆ ಅವಶ್ಯಕವಾದರೂ ಅದರಿಂದಲೇ ವಿವಾದ ಇತ್ಯರ್ಥ ಸಾಧ್ಯ ಇಲ್ಲ.  ಬೇರೆ ಮಾರ್ಗಗಳೂ ಇವೆ, ಮನಸ್ಸು ಮಾಡಬೇಕು ಅಷ್ಟೆ. ಅಂತಹ  ಏಳು ಮಾರ್ಗಗಳು ಇಲ್ಲಿವೆ:

1. ನೀರನ್ನು ಮಂತ್ರದ ಮೂಲಕ ಸೃಷ್ಟಿಸಲಾಗುವುದಿಲ್ಲ, ಯಂತ್ರದ ಮೂಲಕ ಉತ್ಪಾದಿಸಲೂ ಆಗುವುದಿಲ್ಲ. ನೀರಿಗೆ ಇರುವ ಏಕೈಕ ಮೂಲ ಮಳೆ ಮಾತ್ರ. ಇದರಿಂದಾಗಿ ನಮ್ಮ ಬಳಕೆಗೆ ಅಗತ್ಯ ಇರುವಷ್ಟು ನೀರನ್ನು ಪಡೆಯಲು ಇರುವುದು ಎರಡೇ ಮಾರ್ಗ - ಒಂದು ಮಳೆ, ಇನ್ನೊಂದು ಮಳೆಯಿಂದ ಪಡೆದ ನೀರಿನ ವೈಜ್ಞಾನಿಕ ಬಳಕೆ. ಕಾವೇರಿ ಉಳಿದ ನದಿಗಳಂತಲ್ಲ, ಇದರಲ್ಲಿ ಲಭ್ಯ ಇರುವ ನೀರು ಕೇವಲ 740 ಟಿಎಂಸಿ. ಎಷ್ಟೇ ಮಳೆ ಬಂದರೂ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳು ಕೇಳುತ್ತಿರುವ ಸುಮಾರು 1200 ಟಿಎಂಸಿಗಳಷ್ಟು ನೀರನ್ನು ಒದಗಿಸುವುದು ಸಾಧ್ಯವೇ ಇಲ್ಲ. 

ಈ ಹಿನ್ನೆಲೆಯಲ್ಲಿ ನೀರಿನ ವೈಜ್ಞಾನಿಕ ಬಳಕೆಯ ಬಗ್ಗೆ ಯೋಚಿಸಲೇಬೇಕಾಗಿದೆ. ಇದಕ್ಕೆ ಇರುವ ಒಂದು ದಾರಿ ಬೆಳೆ ಪರಿವರ್ತನೆ. ಕಾವೇರಿ ಕಣಿವೆಯಲ್ಲಿರುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಬಹುಪಾಲು ರೈತರು ಬೆಳೆಯುತ್ತಿರುವುದು ಹೆಚ್ಚು ನೀರಿನ ಅಗತ್ಯ ಇರುವ ಭತ್ತ ಮತ್ತು ಕಬ್ಬು. ಒಂದು ಅಂದಾಜಿನ ಪ್ರಕಾರ ಎರಡೂ ರಾಜ್ಯಗಳ ಕನಿಷ್ಠ ಶೇಕಡಾ 30ರಷ್ಟು ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಮತ್ತು ಕಬ್ಬು ಬೆಳೆಯ ಬದಲಿಗೆ ಕಡಿಮೆ ನೀರನ್ನು ಬಳಸಿ ಹತ್ತಿ, ಸೂರ್ಯಕಾಂತಿ ಮತ್ತು ನೆಲಗಡಲೆ ಬೆಳೆಸಲು ಸಾಧ್ಯ.

2. ಬೆಳೆ ಪರಿವರ್ತನೆ ಸಾಧ್ಯವೇ ಇಲ್ಲದ ಕಾವೇರಿ ಕೊಳ್ಳದ ಶೇಕಡಾ 70ರಷ್ಟು ಪ್ರದೇಶದಲ್ಲಿ ನೀರು ಪೋಲಾಗುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ನಮ್ಮಲ್ಲಿ ಕೃಷಿನೀರು ಬಳಕೆಯ ಬಗ್ಗೆ `ಸಾಮಾಜಿಕ ಲೆಕ್ಕಪರಿಶೋಧನೆ` (ಸೋಷಿಯಲ್ ಅಡಿಟ್) ನಡೆದೇ ಇಲ್ಲ.

 ಹೆಚ್ಚಿನ ನೀರಾವರಿ ಯೋಜನೆಗಳಲ್ಲಿ ರೈತರ ಗದ್ದೆಗಳಿಗೆ ಹರಿಯುವುದಕ್ಕಿಂತ ಹೆಚ್ಚು ನೀರು ಕಾಲುವೆಗಳಲ್ಲಿ ಪೋಲಾಗುತ್ತದೆ. ಶೇಕಡಾ 40ರಷ್ಟು ನೀರು ಇಂಗಿ ನಷ್ಟವಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಕಾಲುವೆಗಳ ಸಿಮೆಂಟ್ ಲೈನಿಂಗ್, ಸ್ಲ್ಯೂಸ್‌ಗಳ ದುರಸ್ತಿ, ಬೇಕಾಬಿಟ್ಟಿ ಕೆರೆಗಳಿಗೆ ಹರಿಸುವ ಬದಲಿಗೆ ಗದ್ದೆಕಾಲುವೆಗಳ (ಫೀಲ್ಡ್ ಚಾನೆಲ್) ನಿರ್ಮಾಣ ಇತ್ಯಾದಿ ಕ್ರಮಗಳ ಮೂಲಕ ನೀರು ಉಳಿಸಲು ಸಾಧ್ಯ. ಸಹಜವಾಗಿಯೇ ಇದಕ್ಕೆ ಹಣ ಎಲ್ಲಿದೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಇದಕ್ಕೂ ದಾರಿಗಳಿವೆ. ಅಂತಹದ್ದೊಂದು ದಾರಿ ಅಂದಾಜು 5,100 ಕೋಟಿ ರೂಪಾಯಿ ವೆಚ್ಚದ ವಿಶ್ವಸಂಸ್ಥೆ ನೆರವಿನ `ಕಾವೇರಿ ಆಧುನೀಕರಣ ಯೋಜನೆ`. ಇದು ಮೂರು ದಶಕಗಳಿಂದ ದೂಳು ತಿನ್ನುತ್ತಾ ಬಿದ್ದಿದೆ. ನ್ಯಾಯಮಂಡಳಿ ಮತ್ತು ನ್ಯಾಯಾಲಯದಲ್ಲಿ ಕಾವೇರಿ ವಿವಾದ ಇರುವವರೆಗೆ ಈ ಯೋಜನೆಯನ್ನು ಜಾರಿಗೆ ತರುವುದು ಸಾಧ್ಯ ಇಲ್ಲ. 

3. ಕಾವೇರಿ ನ್ಯಾಯಮಂಡಳಿಯಿಂದ ರಾಜ್ಯದ ಕುಡಿಯುವ ನೀರಿನ ಪಾಲಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಸುಪ್ರೀಂಕೋರ್ಟ್‌ಗೆ ಮೊರೆಹೋಗಲು ಅವಕಾಶ ಇದೆ. ರಾಷ್ಟ್ರೀಯ ಜಲನೀತಿಯಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಾಗಿದೆ. ಆದರೆ ನ್ಯಾಯಮಂಡಳಿ ಇದಕ್ಕೆ ಕೊನೆಯ ಆದ್ಯತೆ ನೀಡಿರುವುದು ಮಾತ್ರವಲ್ಲ ನೀರಿನ ಲೆಕ್ಕಾಚಾರದಲ್ಲಿಯೂ ಎಡವಿದೆ.  ಬೆಂಗಳೂರು ಮಹಾನಗರ ಸೇರಿದಂತೆ ಕಾವೇರಿ ಕಣಿವೆಯ ಎಲ್ಲ ಹಳ್ಳಿ-ಪಟ್ಟಣಗಳ ಕುಡಿಯುವ ನೀರಿಗಾಗಿ ಕರ್ನಾಟಕ ಕೇಳಿದ್ದು 50 ಟಿಎಂಸಿ. ನ್ಯಾಯಮಂಡಳಿ ಗುರುತಿಸಿರುವುದು 17.22 ಟಿಎಂಸಿ. 

ಇದರಲ್ಲಿ ಬೆಂಗಳೂರಿಗೆ 8.70 ಮತ್ತು ಇತರ ಪ್ರದೇಶಕ್ಕೆ 8.52 ಟಿಎಂಸಿ. ಈ 17.22 ಟಿಎಂಸಿಯಲ್ಲಿ ಅರ್ಧದಷ್ಟು ನೀರು ಅಂತರ್ಜಲದಿಂದ ಲಭ್ಯ ಎಂದು ನ್ಯಾಯಮಂಡಳಿ ಹೇಳಿದೆ. ಅಷ್ಟಕ್ಕೆ ಸುಮ್ಮನಾಗದೆ ನೀರು ಬಳಕೆಯಾದ ನಂತರ ಶೇಕಡಾ 80 ಭಾಗ ಭೂಮಿ ಸೇರಿ ಅಂತರ್ಜಲವಾಗುವುದರಿಂದ ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆ ಪ್ರದೇಶದ ಕುಡಿಯುವ ನೀರಿನ ಅವಶ್ಯಕತೆ  1.75 ಟಿಎಂಸಿ ಮಾತ್ರ ಎಂದು ಹೇಳಿ ಗಾಯದ ಮೇಲೆ ಬರೆ ಹಾಕಿದೆ. ಈ ಅನ್ಯಾಯಕ್ಕೆ ಅವೈಜ್ಞಾನಿಕವಾದ ಲೆಕ್ಕಾಚಾರ ಮಾತ್ರ ಕಾರಣ ಅಲ್ಲ, ಬೆಂಗಳೂರು ನಗರದ ಮೂರನೆ ಎರಡು ಭಾಗ ಪೆನ್ನಾರ್ ನದಿ ಕಣಿವೆಯಲ್ಲಿದೆ ಎಂಬ ಅಭಿಪ್ರಾಯವೂ ಕಾರಣ. 

ಇಷ್ಟು ಮಾತ್ರವಲ್ಲ ಕುಡಿಯುವ ನೀರನ್ನು ಲೆಕ್ಕಹಾಕುವಾಗ ಬೆಂಗಳೂರು ಮಹಾನಗರದ 2011ರ ಜನಸಂಖ್ಯೆಯನ್ನು ಮಾತ್ರ ಗಣನೆಗೆ ತೆಗೆದುಕೊಳ್ಳಲಾಗಿದೆ. ಯಾವ ಕೋನದಿಂದ ಈ ನೀರು ವಿತರಣೆಯ ಕ್ರಮವನ್ನು ನೋಡಿದರೂ ಇದರಿಂದ ಅನ್ಯಾಯವಾಗಿರುವುದು ಸ್ಪಷ್ಟ. 

ಕುಡಿಯುವ ನೀರಿನ ವಿಚಾರದಲ್ಲಿ ನದಿ ಕಣಿವೆಯ ಗಡಿಗಳನ್ನು ಎಂದೋ ಉಲ್ಲಂಘಿಸಿಯಾಗಿದೆ. ಕಾವೇರಿ ನ್ಯಾಯಮಂಡಳಿ ಕಾರ್ಯನಿರ್ವಹಿಸುತ್ತಿದ್ದ ದೆಹಲಿ ಮಹಾನಗರ ಯಮುನಾ ನದಿ ಕಣಿವೆಗೆ ಸೇರಿದ್ದು, ಅಲ್ಲಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿರುವುದು ರಾವಿ-ಬಿಯಾಸ್‌ನಿಂದ ಎಂಬುದನ್ನು ನ್ಯಾಯಮೂರ್ತಿಗಳು ಹೇಗೆ ಮರೆತರೋ ಗೊತ್ತಿಲ್ಲ. ಆಂಧ್ರಪ್ರದೇಶ ಮತ್ತು ಕರ್ನಾಟಕ ತಮ್ಮ ಪಾಲನ್ನೂ ಮದ್ರಾಸ್ ನಗರದ ಕುಡಿಯುವ ನೀರಿಗಾಗಿ ನೀಡಿಲ್ಲವೇ? ಕಾವೇರಿ ಕಣಿವೆಯಿಂದ ಬೆಂಗಳೂರು ನಗರಕ್ಕೆ ನೀರು ಪೂರೈಸಲು ಕಣಿವೆಯ ಗಡಿ ಅಡ್ಡಿ ಆಗಲೇ ಬಾರದು.ಇದರ ಜತೆಗೆ ನ್ಯಾಯಮಂಡಳಿಯೇ ಬೆಂಗಳೂರು ನಗರದ ಮೂರನೆ ಎರಡು ಭಾಗ ಪೆನ್ನಾರ್ ನದಿ ಕಣಿವೆಗೆ ಸೇರಿದೆ ಎಂದು ಹೇಳಿರುವ ಕಾರಣ ಪೆನ್ನಾರ್-ಕಾವೇರಿ ನದಿಗಳ ಜೋಡಣೆಯ ಯೋಜನೆಗೆ ಚಾಲನೆ ನೀಡಬಹುದು.

4. ಈಗಿನ ವ್ಯವಸ್ಥೆಯಲ್ಲಿ ಕೃಷ್ಣರಾಜ ಸಾಗರದಿಂದ ಬಿಟ್ಟನೀರು ಬಿಳಿಗುಂಡ್ಲು ಮೂಲಕ ನೇರವಾಗಿ ಮೆಟ್ಟೂರು ಜಲಾಶಯಕ್ಕೆ ಹೋಗುತ್ತದೆ, ಅಲ್ಲಿಂದ ಸಮುದ್ರಕ್ಕೆ. ಕೆ.ಆರ್.ಸಾಗರದಿಂದ ಬಿಳಿಗುಂಡ್ಲು ವರೆಗಿನ ನಡುಹಾದಿಯಲ್ಲಿ ಯಾವ ಬ್ಯಾರೇಜ್ ಇಲ್ಲವೆ ಆಣೆಕಟ್ಟು ಇಲ್ಲ. ಈ ನಡುಮಾರ್ಗದಲ್ಲಿ ಬರುವ ಮೇಕೆದಾಟು, ಶಿವನಸಮುದ್ರ, ಹೊಗೆನಕಲ್ ಮತ್ತು ರಾಸಿಮಲೆಯಲ್ಲಿ ಆಣೆಕಟ್ಟುಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ರಾಷ್ಟ್ರೀಯ ಜಲವಿದ್ಯುತ್ ನಿಗಮ ತಯಾರಿಸಿತ್ತು. ಮೇಕೆದಾಟು ಮತ್ತು ಶಿವನಸಮುದ್ರ ಕರ್ನಾಟಕದ ಗಡಿಯೊಳಗೆ ಬರುವುದರಿಂದ ಇವುಗಳನ್ನು ನಾವೇ ಅನುಷ್ಠಾನಗೊಳಿಸುತ್ತೇವೆ ಎಂದು ಕರ್ನಾಟಕ ಸರ್ಕಾರ ಬಹಳ ಹಿಂದೆಯೇ ಹೇಳಿತ್ತು. 

ಆದರೆ ಈ ಯೋಜನೆಗಳಿಗೆ ನಮ್ಮಿಂದ ಅನುಮತಿ ಪಡೆಯಬೇಕೆಂದು ತಮಿಳುನಾಡು ಹಟ ಹಿಡಿದು ಕೂತಿದೆ. ಮೇಕೆದಾಟುವಿನಲ್ಲಿ 60ರಿಂದ 80 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ಮಿಸಿದರೆ ಅವಶ್ಯಕತೆ ಇದ್ದಾಗ ಮೆಟ್ಟೂರಿಗೆ ಅಲ್ಲಿಂದ ನೀರು ಹರಿಸಬಹುದು ಇಲ್ಲದಿದ್ದರೆ ಅದರಿಂದ ವಿದ್ಯುತ್ ಉತ್ಪಾದನೆ ಮಾಡಬಹುದು. ಈ ಯೋಜನೆಗಳಿಗೆ ತಮಿಳುನಾಡು ರಾಜ್ಯದ ಒಪ್ಪಿಗೆ ಪಡೆಯಲು ಕೇಂದ್ರ ಸರ್ಕಾರ ಮಧ್ಯಸ್ತಿಕೆ ವಹಿಸಬೇಕೆಂದು ಕರ್ನಾಟಕ ಸರ್ಕಾರ ಕೋರಬಹುದು.

5. ಮೆಟ್ಟೂರು ಆಣೆಕಟ್ಟು ಮತ್ತು ಅದರ ಮೂಲಕ ನಿರ್ಮಿಸಲಾಗಿರುವ ಸ್ಟಾನ್ಲಿ ಜಲಾಶಯ ಸುಮಾರು 78 ವರ್ಷಗಳಷ್ಟು ಹಳೆಯದು. ಇತ್ತೀಚಿನ ವರ್ಷಗಳಲ್ಲಿ ಹೂಳು ತುಂಬಿ ಜಲಾಶಯದ ಸಂಗ್ರಹ ಸಾಮರ್ಥ್ಯ ಗಣನೀಯವಾಗಿ ಕುಸಿದಿದ್ದು ದುರಸ್ತಿ ಮಾಡುವ ಪ್ರಯತ್ನ ನಡೆದಿಲ್ಲ. ಇದರಿಂದಾಗಿ ತನ್ನ ಮೂಲ ಸಾಮರ್ಥ್ಯದಷ್ಟನ್ನು ಸಂಗ್ರಹಿಸಿಟ್ಟುಕೊಳ್ಳಲಾಗದೆ ಜಲಾಶಯದಿಂದ ಬಿಟ್ಟ ನೀರು ಸಮುದ್ರದ ಪಾಲಾಗುತ್ತಿದೆ. ಜಲಾಶಯದ ಹೂಳು ತೆಗೆದು ದುರಸ್ತಿ ಮಾಡುವ ಮೂಲಕ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸಬಹುದು.

6. `ಕಾವೇರಿ ಕುಟುಂಬ`ವನ್ನು ಸಕ್ರಿಯಗೊಳಿಸುವ ಪ್ರಯತ್ನಕ್ಕೆ ಚಾಲನೆ ನೀಡಬೇಕಾಗಿದೆ. ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ರೈತರ ಮುಖಂಡರನ್ನೊಳಗೊಂಡ ಈ ಸಂಘಟನೆಯನ್ನು ಹುಟ್ಟುಹಾಕಿದ್ದು `ಮದ್ರಾಸ್ ಅಭಿವೃದ್ಧಿ ಅಧ್ಯಯನ ಸಂಸ್ಥೆ`. 2003-04ರಲ್ಲಿ ಎರಡೂ ರಾಜ್ಯಗಳ ನಡುವಿನ ನೀರಿನ ವ್ಯಾಜ್ಯ ತಾರಕಕ್ಕೇರಿದಾಗ ಸೌಹಾರ್ದಯುತ ವಾತಾವರಣ ನಿರ್ಮಾಣಕ್ಕೆ ಈ ಸಂಘಟನೆ ಶ್ರಮಿಸಿತ್ತು. 

ತಮಿಳುನಾಡಿನ ರೈತ ನಾಯಕ ರಂಗನಾಥನ್ ನೇತೃತ್ವದ ತಂಡ ಕರ್ನಾಟಕದ ಕಾವೇರಿ ಕಣಿವೆ ಪ್ರದೇಶಕ್ಕೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪುಟ್ಟಣ್ಣಯ್ಯ, ಸಾಹಿತಿ ಎಚ್.ಎಲ್. ಕೇಶವಮೂರ್ತಿ, ಬೋರಯ್ಯ ಮತ್ತಿತರನ್ನೊಳಗೊಂಡ ತಂಡ ತಮಿಳುನಾಡಿನ ಕಾವೇರಿ ಕಣಿವೆ ಪ್ರದೇಶಕ್ಕೆ ಭೇಟಿ ನೀಡಿತ್ತು. ಎರಡೂ ರಾಜ್ಯಗಳ ರೈತನಾಯಕರು ಸೇರಿ ಈಗಾಗಲೇ ಹದಿನಾಲ್ಕು ಸಭೆಗಳನ್ನು ನಡೆಸಿದ್ದಾರೆ. ಈ ವರ್ಷದ ಆಗಸ್ಟ್ ತಿಂಗಳಲ್ಲಿ ನಿಗದಿಗೊಳಿಸಲಾಗಿದ್ದ ಸಭೆ ನಡೆದಿದ್ದರೆ ಈಗಿನ ಸಂಘರ್ಷದ ಕಾವು ಕಡಿಮೆಯಾಗುತ್ತಿತ್ತೋ ಏನೋ?

7. ಕಾವೇರಿ ನದಿ ನೀರಿನ ವಿವಾದವೂ ಸೇರಿದಂತೆ ರಾಜ್ಯದ ನೆಲ-ಜಲ-ಭಾಷೆಗಳ ರಕ್ಷಣೆಯ ಜವಾಬ್ದಾರಿ ಆಯಾ ಕ್ಷೇತ್ರಗಳ ಹೋರಾಟಗಾರರಿಗೆ ಒಪ್ಪಿಸಿಬಿಟ್ಟು ಉಳಿದವರು ಆರಾಮವಾಗಿ ಇದ್ದು ಬಿಟ್ಟಿದ್ದಾರೆ. ಬೆಂಗಳೂರಿನಲ್ಲಿ ರಸ್ತೆ ಕೆಟ್ಟುಹೋಗಿದೆ, ವಾಹನ ದಟ್ಟಣೆ ಹೆಚ್ಚಾಗಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಎಂಟು ವರ್ಷಗಳ ಹಿಂದೆ ಭೂಮಿ-ಆಕಾಶ ಒಂದು ಮಾಡಿಬಿಟ್ಟಿದ್ದರು.
 
ದೆಹಲಿಯ ಪತ್ರಿಕೆಗಳಲ್ಲಿಯೂ ಇದು ದೊಡ್ಡ ಸುದ್ದಿಯಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎನ್.ಧರ್ಮಸಿಂಗ್ ಎದ್ದೆನೋ, ಬಿದ್ದೆನೋ ಎಂದು ದೆಹಲಿಗೆ ಓಡಿಹೋಗಿ ಪ್ರಧಾನಿಯಿಂದ ಹಿಡಿದು ಅವರ ಪಕ್ಷದ ನಾಯಕ-ನಾಯಕಿಯರವರೆಗೆ ಎಲ್ಲರಿಗೂ ಸ್ಪಷ್ಟೀಕರಣ ಕೊಟ್ಟಿದ್ದರು. ಪತ್ರಿಕಾ ಸಂಪಾದಕರನ್ನು ಭೇಟಿ ಮಾಡಿ ಕೈಜೋಡಿಸಿ ಬೇಡಿಕೊಂಡಿದ್ದರು. ರಸ್ತೆಗಳು ಇಂದಿಗೂ ಹಾಗೆಯೇ ಇವೆ ಎನ್ನುವುದು ಬೇರೆ ಮಾತು. ನಾರಾಯಣ ಮೂರ್ತಿಗಳು ಮಾತ್ರ ನಂತರ ಯಾಕೋ ಮೌನವಾಗಿಬಿಟ್ಟರು. 

ಈ ರೀತಿಯ ಪ್ರಭಾವಶಾಲಿ ಗಣ್ಯರ ದೊಡ್ಡ ದಂಡು ನಮ್ಮಲ್ಲಿದೆ. (ತಮಿಳುನಾಡಿನಲ್ಲಿ ಇಲ್ಲ). ರಾಜಕಾರಣಿಗಳ ವಿಶ್ವಾಸಾರ್ಹತೆ ಪಾತಾಳ ತಲುಪಿರುವುದರಿಂದ ಅವರನ್ನು ನೆಚ್ಚಿಕೊಳ್ಳುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು. ನಾರಾಯಣಮೂರ್ತಿ, ಅಜೀಂ ಪ್ರೇಮ್‌ಜಿ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಯು.ಆರ್.ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಡಾ.ದೇವಿಪ್ರಸಾದ್ ಶೆಟ್ಟಿ ಮೊದಲಾದವರು ನಿಯೋಗ ಹೋಗಿ ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಿ ಮನಮೋಹನ್‌ಸಿಂಗ್ ಅವರಿಗೆ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ಮನವರಿಕೆ ಮಾಡಿಕೊಡಬಾರದೇಕೆ? ಕಾವೇರಿ ಕಣಿವೆಯ ಕುಡಿಯುವ ನೀರಿಗೆ 1.75 ಟಿಎಂಸಿ, ಕೈಗಾರಿಕಾ ಬಳಕೆಗಾಗಿ 0.10 ಟಿಎಂಸಿ ನೀಡಿರುವುದು ನ್ಯಾಯವೇ ಎಂದಾದರೂ ಕೇಳಬಹುದಲ್ಲವೇ?

ಬೇಕಾಗಿರುವುದು ಸುಡುವ ಬೆಂಕಿ ಅಲ್ಲ; ಅರಿವಿನ ಬೆಳಕು - ದಿನೇಶ್ ಅಮೀನ್ ಮಟ್ಟು October 08, 2012


ಗೋಡೆಯವರೆಗೆ ತಳ್ಳಿಸಿಕೊಂಡ ಮನುಷ್ಯನಿಗೆ ತಿರುಗಿ ಬೀಳುವುದನ್ನು ಬಿಟ್ಟು ಬೇರೆ ಆಯ್ಕೆಗಳಿರುವುದಿಲ್ಲ. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ರೈತರದ್ದು ಈಗ ಇದೇ ಸ್ಥಿತಿ. ಅಸಹಾಯಕತೆಯಿಂದಾಗಿ ಹತಾಶರಾಗಿರುವ ಅವರು ಎಲ್ಲರ ಮೇಲೆ ಎರಗಿ ಬೀಳುತ್ತಿದ್ದಾರೆ.
ಅನ್ಯಾಯದ ಪರಂಪರೆಗೆ ಸಿಕ್ಕಿ ಸೋತುಹೋದವರಿಗೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳು, ಅಲ್ಲಿ ವಾದ ಮಂಡಿಸುವ ನಮ್ಮ ವಕೀಲರು, ಕಾವೇರಿ ನದಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪ್ರಧಾನಿಗಳು, ರಾಜ್ಯದ ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಕೊನೆಗೆ ಬೀದಿಯಲ್ಲಿ ತಮ್ಮ ಪಾಡಿಗೆ ಹೋಗುತ್ತಿರುವ ಅಮಾಯಕ ಜನ.. ಎಲ್ಲರೂ ತಮ್ಮ ಶತ್ರುಗಳಂತೆಯೇ ಕಾಣಿಸುವುದು ಸಹಜ.
(ಇವರಲ್ಲಿ ಕೆಲವರು ಶತ್ರುಗಳೆನ್ನುವುದೂ ನಿಜ). ಈ ರೀತಿಯ ಭಾವಾವೇಶದ ಉಗ್ರ ಅಭಿವ್ಯಕ್ತಿ ವೈಯಕ್ತಿಕವಾದ ಹತಾಶೆಯನ್ನು ಕಡಿಮೆ ಮಾಡಿ  ಒಂದಷ್ಟು ಸಮಾಧಾನವನ್ನು ತಂದುಕೊಡಬಹುದು, ಆದರೆ ನ್ಯಾಯವನ್ನು ಪಡೆಯಲು ಸಾಧ್ಯವಾಗಬಹುದೇ?
ಈ ರೋಷ-ದ್ವೇಷಗಳ  ಪ್ರದರ್ಶನ ಹೆಚ್ಚೆಂದರೆ ಈ ತಿಂಗಳ ಅಂತ್ಯದವರೆಗೆ ಇರಬಹುದು.
ತಮಿಳುನಾಡಿನಲ್ಲಿ ಈಶಾನ್ಯ ಮಾರುತ ಸುರಿಯಲಾರಂಭಿಸುತ್ತಿದ್ದಂತೆ ಆ ಕಡೆಯ ಒತ್ತಡ ಕಡಿಮೆಯಾಗುತ್ತದೆ. ಅಷ್ಟರಲ್ಲಿ ದೇವೇಗೌಡರ ಕಣ್ಣೀರು ಆರಿಹೋಗುತ್ತದೆ, ನಟ ಅಂಬರೀಷ್ ಅವರ ಅಭಿನಯವೂ ಮುಗಿದಿರುತ್ತದೆ, ಮಾದೇಗೌಡರ ಸಿಟ್ಟು ತಣ್ಣಗಾಗುತ್ತದೆ, ಕನ್ನಡ ಹೋರಾಟಗಾರರು ಹಳೆಯ ಭಿತ್ತಿಪತ್ರಗಳನ್ನು ಕಿತ್ತುಹಾಕಿ ಹೊಸ ಹೋರಾಟದ ಭಿತ್ತಿಪತ್ರಗಳನ್ನು ಅಂಟಿಸಲು ಗೋಡೆಗಳನ್ನು ಹುಡುಕುತ್ತಿರುತ್ತಾರೆ.

ಮಾಧ್ಯಮಗಳು ಮತ್ತೊಂದು ರೋಚಕ ಸುದ್ದಿಯ ಬೆನ್ನು ಹತ್ತಿರುತ್ತವೆ. ಕಾವೇರಿ ಕಣಿವೆಯ ರೈತರು ರಾಗಿಮುದ್ದೆ ತಿಂದು ಕಂಬಳಿ ಹೊದ್ದುಕೊಂಡು ಮಲಗಿಬಿಡುತ್ತಾರೆ.
ಮುಂದಿನವರ್ಷದ ಜುಲೈ ತಿಂಗಳ ಹೊತ್ತಿಗೆ ಜಯಲಲಿತಾ ಇಲ್ಲವೇ ಕರುಣಾನಿಧಿ  `ಕರ್ನಾಟಕ ನೀರು ಬಿಡುತ್ತಿಲ್ಲ` ಎಂದು ಪ್ರಧಾನಮಂತ್ರಿಗೆ ಪತ್ರ ಬರೆದಾಗ  ನಿದ್ದೆ ಹೋದ ರೈತರಾದಿಯಾಗಿ ವಿರಮಿಸುತ್ತಿದ್ದ ಪ್ರತಿಭಟನೆಯ ಹಳೆಯ ಪಾತ್ರಧಾರಿಗಳೆಲ್ಲ  ಮೈಮುರಿದು ಕೊಡವಿಕೊಂಡು ಎದ್ದು ನಿಲ್ಲುತ್ತಾರೆ.
ನೆಲ-ಜಲದ ಪ್ರೇಮ ಭೋರ್ಗರೆದು ಹರಿಯುತ್ತದೆ. ಮತ್ತೆ ಪ್ರತಿಭಟನೆ, ಬಂದ್, ಒಂದಷ್ಟು ಆರೋಪ ನಂತರ ಎಲ್ಲವೂ ಯಥಾಸ್ಥಿತಿ. ಇಪ್ಪತ್ತೊಂದು ವರ್ಷಗಳ ಹಿಂದೆ ಕಾವೇರಿ ನ್ಯಾಯಮಂಡಳಿ ಮಧ್ಯಂತರ ಐತೀರ್ಪು ನೀಡಿದ ದಿನದಿಂದ ಇಲ್ಲಿಯ ವರೆಗೆ ನಡೆಯುತ್ತಾ ಬಂದದ್ದು ಇದೇ  ನಾಟಕ.
(ಪುರಾವೆಗಳು ಬೇಕು ಎನ್ನುವವರು ಈ 21 ವರ್ಷಗಳ ಪತ್ರಿಕೆಗಳನ್ನು ಹುಡುಕಿ ಜುಲೈ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಪ್ರಕಟವಾದ ಸುದ್ದಿಗಳ ಮೇಲೆ ಕಣ್ಣುಹಾಯಿಸಬಹುದು.)

ಪ್ರತಿಬಾರಿ ತಮಿಳುನಾಡು ಕರ್ನಾಟಕವನ್ನು ಈ ರೀತಿಯ `ಖೆಡ್ಡಾ`ಕ್ಕೆ ಬೀಳಿಸಿ ಚಂದ ನೋಡುತ್ತಾ ತಣ್ಣಗೆ ಕೂತಿರುತ್ತದೆ. ಗುಂಡಿಗೆ ಬಿದ್ದವರು ಸಹಜವಾಗಿಯೇ ಲಬೋಲಬೋ ಎಂದು ಎದೆಬಡಿದುಕೊಳ್ಳುತ್ತಾರೆ.
ತಮಿಳುನಾಡಿನ ರಾಜಕಾರಣಿಗಳು ಈ ರೀತಿ ಕೂಗಾಡುತ್ತಿರುವ ಕನ್ನಡಿಗರನ್ನು ತೋರಿಸಿ `ಕನ್ನಡಿಗರಿಗೆ ನ್ಯಾಯಾಲಯ, ಪ್ರಜಾಪ್ರಭುತ್ವ, ಒಕ್ಕೂಟ ವ್ಯವಸ್ಥೆ ಹೀಗೆ ಯಾವುದರ ಮೇಲೆಯೂ ನಂಬಿಕೆ ಇಲ್ಲ. ಇವರು ಜಗಳಗಂಟರು, ಭಾಷಾಂಧರು....` ಎಂಬ ಆರೋಪಗಳನ್ನು ಮಾಡುತ್ತಾರೆ.
ಈ ಆರೋಪವನ್ನು ಸಾಬೀತುಪಡಿಸುವಂತೆ ಕನ್ನಡಿಗರು ಇನ್ನಷ್ಟು ಉಗ್ರರೀತಿಯಲ್ಲಿ ಭಾಷಣ ಮಾಡುತ್ತಾರೆ, ಘೋಷಣೆ ಕೂಗುತ್ತಾರೆ. ರಕ್ತ ಹರಿಸುವ, ನೀರಿಗೆ ಧುಮುಕುವ ವೀರಾವೇಶದ ಮಾತುಗಳನ್ನಾಡುತ್ತಾರೆ. ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನು ತಿಳಿದುಕೊಳ್ಳಲು ತನಿಖಾ ಸಮಿತಿ ನೇಮಿಸಬೇಕಾಗಿಲ್ಲ.
ಕಾವೇರಿ ನದಿಯ ಇತಿಹಾಸವನ್ನು ತೆಗೆದುನೋಡಿದರೆ ಸಾಕು, ಆಗಿರುವ ಅನ್ಯಾಯಕ್ಕೆ ಪುಟಪುಟಗಳಲ್ಲಿ ಸಾಕ್ಷಿ ಸಿಗುತ್ತದೆ. ಆದರೆ ಕರ್ನಾಟಕದಿಂದ ಹೊರಗೆ ಮುಖ್ಯವಾಗಿ ರಾಜಧಾನಿ ದೆಹಲಿಯಲ್ಲಿ ಜನಾಭಿಪ್ರಾಯ ಅನ್ಯಾಯಕ್ಕೊಳಗಾದ ಕರ್ನಾಟಕದ ಪರವಾಗಿ ಇಲ್ಲ, ಕರ್ನಾಟಕದ ಪ್ರಾಂತೀಯ ಧೋರಣೆಗೆ ಬಲಿಯಾಗುತ್ತಿದ್ದೇವೆ ಎಂದು ಸುಳ್ಳುಸುಳ್ಳೇ ರೋದಿಸುತ್ತಿರುವ ತಮಿಳುನಾಡು ಪರವಾಗಿ ಇದೆ.
ಹೀಗೆಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. (ದೆಹಲಿಯಲ್ಲಿದ್ದಷ್ಟು ಕಾಲ ಅಲ್ಲಿನ ಪತ್ರಕರ್ತರು, ಅಧಿಕಾರಿಗಳು ಮತ್ತು ರಾಜಕಾರಣಿಗಳ ಜತೆಗಿನ ಒಡನಾಟದ ಆಧಾರದಲ್ಲಿ, ಜವಾಬ್ದಾರಿಯಿಂದಲೇ ಇದನ್ನು ಹೇಳುತ್ತಿದ್ದೇನೆ.)

ಯಾಕೆ ಹೀಗಾಗುತ್ತಿದೆ ?ಕಾವೇರಿ ನ್ಯಾಯಮಂಡಳಿ ಸ್ಥಾಪನೆಯ ಹಿಂದಿನ ಇತಿಹಾಸವನ್ನು ಕೆದಕುವುದು ಬೇಡ, ಅದರ ನಂತರದ ಬೆಳವಣಿಗೆಗಳನ್ನು ಗಮನಿಸುತ್ತಾ ಬಂದರೂ ಕರ್ನಾಟಕ ಮತ್ತೆಮತ್ತೆ ಎಡವಿ ಬಿದ್ದ ಹೆಗ್ಗುರುತುಗಳು ಕಾಣಸಿಗುತ್ತವೆ.
ಜಲವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಯಾವಾಗಲೂ ನಮಗೆ ಅನ್ಯಾಯವಾಗಿದೆ ಎಂಬ ಭಾವನೆಯನ್ನು ಹುಟ್ಟಿಸುವಂತಹ ತೀರ್ಪುಗಳನ್ನೇ ಯಾಕೆ ನೀಡುತ್ತಿದೆ ಎಂಬ ಪ್ರಶ್ನೆಗೂ ಹೆಜ್ಜೆ ತಪ್ಪಿದ ಕರ್ನಾಟಕದ ನಡವಳಿಕೆಯಲ್ಲಿ ಉತ್ತರ ಇದೆ. 

ಕರ್ನಾಟಕದ ಆಯ್ಕೆ ನ್ಯಾಯಮಂಡಳಿ ಖಂಡಿತ ಆಗಿರಲಿಲ್ಲ, ಮಾತುಕತೆಯ ಮೂಲಕವೇ ವಿವಾದವನ್ನು ಬಗೆಹರಿಸಿಕೊಳ್ಳಬೇಕೆಂಬುದು ರಾಜ್ಯದ ಬಯಕೆಯಾಗಿತ್ತು. ಇದರ ಹೊರತಾಗಿಯೂ ಸುಪ್ರೀಂಕೋರ್ಟ್ 1990ರಲ್ಲಿ ಕಾವೇರಿ ನ್ಯಾಯಮಂಡಳಿ ಸ್ಥಾಪನೆಗೆ ಆದೇಶ ನೀಡಿದ್ದರಿಂದ ಸಹಜವಾಗಿಯೇ ಕರ್ನಾಟಕಕ್ಕೆ ಅಸಮಾಧಾನವಾಗಿತ್ತು.
ಮರುವರ್ಷವೇ ನ್ಯಾಯಮಂಡಳಿ ನೀಡಿದ ಮಧ್ಯಂತರ ಐತೀರ್ಪು ಈ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿತ್ತು.  ಸರ್ಕಾರ ಬದಲಾದರೂ, ಆಡಳಿತ ಪಕ್ಷಗಳು ಬದಲಾದರೂ ನ್ಯಾಯಮಂಡಳಿಯ ಬಗೆಗಿನ ಕರ್ನಾಟಕದ ಅಸಹನೆ ಕಡಿಮೆಯಾಗಲೇ ಇಲ್ಲ.
1991ರಲ್ಲಿ ಕಾವೇರಿ ಕಣಿವೆಗೆ ಭೇಟಿ ನೀಡಿದ್ದ ನ್ಯಾಯಮಂಡಳಿಯ ನ್ಯಾಯಮೂರ್ತಿಗಳನ್ನು ರಾಜ್ಯದ ಜನತೆ ಸ್ವಾಗತಿಸಿದ್ದು ಕಪ್ಪುಬಾವುಟ ಮತ್ತು `ಗೊ ಬ್ಯಾಕ್` ಎಂಬ ಘೋಷಣೆಗಳ ಮೂಲಕ. ಇಷ್ಟು ಮಾತ್ರವಲ್ಲ, ನ್ಯಾಯಮಂಡಳಿ ಕಾವೇರಿ ಕಣಿವೆಯ ರಾಜ್ಯಗಳಿಗೆ ಭೇಟಿ ನೀಡಿದಾಗ ತಮಿಳುನಾಡಿನಲ್ಲಿ ನ್ಯಾಯಮೂರ್ತಿಗಳ ಪತ್ನಿಯರಿಗೆ ಸೀರೆ-ಬಳೆ ಕೊಟ್ಟರು ಎಂದು ಗುಲ್ಲೆಬ್ಬಿಸಿ ಕೊನೆಗೆ ಸುಪ್ರೀಂಕೋರ್ಟ್‌ವರೆಗೆ ದೂರು ಕೊಂಡೊಯ್ದದದ್ದು ಕೂಡಾ ಕರ್ನಾಟಕ.
ರಾಜ್ಯಕ್ಕೆ ನ್ಯಾಯಮಂಡಳಿ ಭೇಟಿ ನೀಡಿದ್ದಾಗ ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಔತಣಕೂಟಕ್ಕೆ  ನ್ಯಾಯಮೂರ್ತಿಗಳೊಬ್ಬರು ನಗರದಲ್ಲಿರುವ ತಮ್ಮ ಸಂಬಂಧಿಕರನ್ನು ಆಹ್ಹಾನಿಸಲು ಬಯಸಿದಾಗ ಕೆಲವು ಅಧಿಕಾರಿಗಳು ನಿರಾಕರಿಸಿ ಮುಜುಗರಕ್ಕೆ ಈಡು ಮಾಡಿದ್ದರು.
ಆಗ ಇದ್ದ ಮೂವರು ನ್ಯಾಯಮೂರ್ತಿಗಳಲ್ಲಿ ಒಬ್ಬರು ಅಂತಿಮ ಐತೀರ್ಪು ನೀಡಿದ ನ್ಯಾಯಮಂಡಳಿಯಲ್ಲಿಯೂ ಇದ್ದರು. ಈ ರೀತಿ ನ್ಯಾಯಮೂರ್ತಿಗಳನ್ನು ಕೆಣಕಿದ ಹಲವಾರು ಉದಾಹರಣೆಗಳಿವೆ. ತಮಿಳುನಾಡಿನ ನಡವಳಿಕೆ ಇದಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು.
ನ್ಯಾಯಮಂಡಳಿಯ ಸದಸ್ಯರು ಸಾಗುವ ಹಾದಿಯಲ್ಲೆಲ್ಲ ಅವರನ್ನು ಸ್ವಾಗತಿಸುವ ಬ್ಯಾನರ್‌ಗಳು, ಕಮಾನುಗಳನ್ನು ಹಾಕಲಾಗಿತ್ತು. ತಂಜಾವೂರಿನ ಜಿಲ್ಲಾಧಿಕಾರಿಗಳು ನ್ಯಾಯಮೂರ್ತಿಗಳ ಕಾಲಿಗೆ ಬಿದ್ದುಬಿಟ್ಟಿದ್ದರು. ಜಯಲಲಿತಾ ಆಗ ಅಧಿಕಾರದಲ್ಲಿ ಇಲ್ಲದೆ ಇದ್ದರೂ ಬಂದು ನ್ಯಾಯಮೂರ್ತಿಗಳನ್ನು ಎದುರುಗೊಂಡಿದ್ದರು. ಇದು ತಮಿಳುನಾಡು ಶೈಲಿ.ಅದೆಂದೂ ನ್ಯಾಯಮಂಡಳಿಯನ್ನು ಕೆಣಕಲು ಹೋಗಿಲ್ಲ.

ಇನ್ನೇನು ನ್ಯಾಯಮಂಡಳಿ ಅಂತಿಮ ಐತೀರ್ಪು ನೀಡುವ ಕೆಲವೇ ತಿಂಗಳುಗಳ ಮೊದಲು ಇಬ್ಬರು ಸದಸ್ಯ ನ್ಯಾಯಮೂರ್ತಿಗಳು ಕಾವೇರಿ ಕಣಿವೆಯಲ್ಲಿ ಪ್ರವಾಸ ಹೋಗಲು ಇಚ್ಚಿಸಿದಾಗಲೂ ವಿರೋಧಿಸಿದ್ದು ಕರ್ನಾಟಕ.
ಈ ಪ್ರವಾಸಕ್ಕೆ ನ್ಯಾಯಮಂಡಳಿಯ ಅಧ್ಯಕ್ಷರಾದ ನ್ಯಾಯಮೂರ್ತಿ ಎನ್.ಪಿ.ಸಿಂಗ್ ವ್ಯಕ್ತಪಡಿಸಿದ್ದ ವಿರೋಧವನ್ನೇ ಪ್ರಸ್ತಾಪಿಸಿ `ಅಧ್ಯಕ್ಷರು ಮತ್ತು ಸದಸ್ಯರ ನಡುವಿನ ಜಗಳದಿಂದ ನ್ಯಾಯಮಂಡಳಿ ಮುರಿದುಬಿದ್ದಿದೆ.
ಈ ಪರಿಸ್ಥಿತಿಯಲ್ಲಿ ನ್ಯಾಯಮಂಡಳಿಯನ್ನು ಪುನರ‌್ರಚಿಸಬೇಕು` ಎಂದು ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘ ಸುಪ್ರೀಂಕೋರ್ಟಿಗೆ ಮೊರೆ ಹೋಗಿತ್ತು. ಅದರ ಹಿಂದೆ ರಾಜ್ಯದ ಪ್ರಭಾವಶಾಲಿ ನಾಯಕರೊಬ್ಬರಿದ್ದರು ಎನ್ನುವುದು  ಗುಟ್ಟಿನ ಸಂಗತಿಯಾಗಿರಲಿಲ್ಲ.

ಅಂತಿಮವಾಗಿ ನ್ಯಾಯಮಂಡಳಿಯನ್ನು ಪುನರ‌್ರಚಿಸಬೇಕು ಎಂದು ರಾಜ್ಯ ಸರ್ಕಾರವೇ ಸುಪ್ರೀಂಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು. ಈ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು ಮಾತ್ರವಲ್ಲ ಕರ್ನಾಟಕಕ್ಕೆ ಮಾತಿನ ಚಾಟಿಯಿಂದ ಬಾರಿಸಿತ್ತು.

ಈ ರೀತಿಯ `ಅಧಿಕ ಪ್ರಸಂಗತನ`ದ ನಡವಳಿಕೆಯನ್ನು ಅತೀ ಎಚ್ಚರಿಕೆಯ ಸ್ವಭಾವದ ಎಸ್.ಎಂ.ಕೃಷ್ಣ ಅಧಿಕಾರದಲ್ಲಿದ್ದಾಗಲೂ ಮುಂದುವರಿಸಿದರು. 1.25 ಟಿಎಂಸಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶ ಮತ್ತು 0.8 ಟಿಎಂಸಿ ನೀರು ಹರಿಸಬೇಕೆಂದು ಕಾವೇರಿ ನದಿಪ್ರಾಧಿಕಾರ ನೀಡಿದ್ದ ಆದೇಶಗಳೆರಡನ್ನೂ ಧಿಕ್ಕರಿಸಿದ್ದ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾವೇರಿ ಕಣಿವೆಯಲ್ಲಿ ಪಾದಯಾತ್ರೆ ನಡೆಸುವ ಮೂಲಕ ಜನಪ್ರಿಯ ರಾಜಕೀಯದ ದೌರ್ಬಲ್ಯಕ್ಕೆ ಬಿದ್ದು ಬಿಟ್ಟರು.
ಇದರಿಂದ ಕೆರಳಿದ ಸುಪ್ರೀಂಕೋರ್ಟ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಮೊಕದ್ದಮೆಯನ್ನೂ ದಾಖಲಿಸಿತ್ತು. ಆ ಕಾಲದಲ್ಲಿ ಸುಪ್ರೀಂಕೋರ್ಟ್‌ನ ಸಂದರ್ಶಕರ ಬಾಕ್ಸ್‌ನಲ್ಲಿ ಖಾದಿ ಬಟ್ಟೆಧರಿಸಿದ್ದ ರಾಜಕಾರಣಿಗಳನ್ನು ನೋಡಿದ ಕೂಡಲೇ ನ್ಯಾಯಮೂರ್ತಿಗಳು ಕೆಂಡಾಮಂಡಲವಾಗುತ್ತಿದ್ದರು.
ಇದರಿಂದ ತಪ್ಪಿಸಿಕೊಳ್ಳಲಿಕ್ಕಾಗಿಯೇ ಆಗಿನ ಆಡಳಿತ ಪಕ್ಷದ ಹಲವು ನಾಯಕರು ಕಪ್ಪುಕೋಟ್ ಧರಿಸಿ ನ್ಯಾಯಾಲಯಕ್ಕೆಬರುತ್ತಿದ್ದರು. ಸುಪ್ರೀಂಕೋರ್ಟ್‌ಗೆ  ಕರ್ನಾಟಕದ ಬಗ್ಗೆ ಅಷ್ಟೊಂದು ಸಿಟ್ಟಿತ್ತು.  ಈ ರೀತಿ ಕಾವೇರಿ ನದಿನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ಮತ್ತು ನ್ಯಾಯಾಲಯಗಳನ್ನು ಎದುರುಹಾಕಿಕೊಳ್ಳುವ ಯಾವ ಅವಕಾಶವನ್ನು ರಾಜ್ಯದ ರಾಜಕಾರಣಿಗಳು ಬಿಟ್ಟುಕೊಟ್ಟಿಲ್ಲ.
ತಮಿಳುನಾಡು ಎಂದೂ ಈ ರೀತಿ ವರ್ತಿಸದೆ ಉಪಾಯದಿಂದ ಎಲ್ಲರನ್ನೂ ಒಲಿಸಿಕೊಂಡು ಕೆಲಸ ಸಾಧಿಸಿಕೊಳ್ಳುತ್ತಾ ಬಂದಿದೆ. ರಾಜ್ಯವನ್ನು ಆಳಿದ ರಾಜಕೀಯ ಪಕ್ಷಗಳೆಲ್ಲವೂ ಕಾವೇರಿ ವಿವಾದದ ಬಗೆಗಿನ ತೀರ್ಮಾನಗಳನ್ನು ರಾಜಕೀಯ ಲಾಭ-ನಷ್ಟಗಳ ಲೆಕ್ಕಾಚಾರದ ಆಧಾರದಲ್ಲಿಯೇ ಕೈಗೊಳ್ಳುತ್ತಾ ಬಂದಿವೆಯೇ ಹೊರತು ಕಾನೂನು ಮತ್ತು ನೀರಾವರಿ ತಜ್ಞರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ.
ಈಗಿನ ವಿವಾದವನ್ನೇ ನೋಡುವುದಾದರೆ, `ಸದ್ಭಾವನೆಯ ಸಂಕೇತವಾಗಿ ಕಾವೇರಿ ನದಿ ಪ್ರಾಧಿಕಾರದ ಸಭೆ ನಡೆಯುವ ವರೆಗೆ ಹತ್ತುಸಾವಿರ ಕ್ಯೂಸೆಕ್ ನೀರು ಬಿಡಲು ತಯಾರು` ಎಂದು ಹೇಳಿ ತನ್ನ ಕೊರಳನ್ನು ಪ್ರಾಧಿಕಾರಕ್ಕೆ ಒಪ್ಪಿಸಿದ್ದು ಯಾರು? 

ಇಷ್ಟೊಂದು ನೀರು ಬಿಟ್ಟುಬಿಟ್ಟರೆ ಕರ್ನಾಟಕದ ರೈತರಿಗೆ ತೊಂದರೆಯಾಗುತ್ತದೆ ಎಂದು ರಾಜ್ಯದ ಜಲಸಂಪನ್ಮೂಲ ಸಚಿವರಿಗಾಗಲಿ, ಮುಖ್ಯಮಂತ್ರಿಗಳಿಗಾಗಲಿ ಗೊತ್ತಾಗಲಿಲ್ಲವೇ? ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಲೆಂದೇ ಜಲಸಂಪನ್ಮೂಲ ಸಚಿವರು ಹೀಗೆ ಮಾಡಿದರೇ?

ಕರ್ನಾಟಕದಲ್ಲಿ ಈಗಲೂ ಕಾವೇರಿ ವಿವಾದದ ಮಾಹಿತಿಯನ್ನು ಬೆರಳತುದಿಯಲ್ಲಿ ಇಟ್ಟುಕೊಂಡವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಈಗಲೂ ದೆಹಲಿಯಲ್ಲಿ ಅವರ ಮಾತಿಗೆ ತೂಕ ಇದೆ.
ಇಂತಹವರು ಎಲ್ಲ ಮುಗಿದ ಮೇಲೆ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರು ಹಾಕಿ ಮುತ್ಸದ್ಧಿತನ ಮೆರೆಯುವ ಬದಲಿಗೆ ಮೊದಲೇ ಹೋಗಿ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಬಹುದಿತ್ತಲ್ಲವೇ?
ಕೇಂದ್ರದಲ್ಲಿ ಎನ್‌ಡಿಎ ಅಧಿಕಾರದಲ್ಲಿದ್ದಾಗ ಅನಂತಕುಮಾರ್ ಅವರನ್ನು ಕಟ್ಟಿಕೊಂಡು ಹೋಗಿ ಆಗಿನ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರಿಗೆ ಮನವೊಲಿಸಲು ಪ್ರಯತ್ನಿಸಿರಲಿಲ್ಲವೇ? ಈ ಬಾರಿ ಯಾಕೆ ಸುಮ್ಮನಿದ್ದರು?  ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ಕಾವೇರಿ ಜನ ತಿರುಗಿಬಿದ್ದರೆ ತಮ್ಮ ಪಕ್ಷಕ್ಕೆ ಲಾಭ ಎಂಬ ರಾಜಕೀಯ ಲೆಕ್ಕಚಾರವೇನಾದರೂ ಅವರಲ್ಲಿತ್ತೇ?

ರೆಬೆಲ್‌ಸ್ಟಾರ್ ಖ್ಯಾತಿಯ ಅಂಬರೀಷ್ ಅವರು ಈಗ ಕಾವೇರಿ ಚಳವಳಿಯ ನಾಯಕರು. ಮಂಡ್ಯದ ಮತದಾರರು ಪ್ರೀತಿಯಿಂದ ಅವರನ್ನು ಆರಿಸಿ ಲೋಕಸಭೆಗೆ ಕಳುಹಿಸಿದ್ದರು. ಹತ್ತು ವರ್ಷ ಲೋಕಸಭೆಯಲ್ಲಿದ್ದ ಅವರು ರಾಜ್ಯಕ್ಕೆ ಸಂಬಂಧಿಸಿದ ಉಳಿದ ವಿಷಯ ಬಿಡಿ,ಕನಿಷ್ಠ ಕಾವೇರಿ ಬಗ್ಗೆಯಾದರೂ ಒಂದು ದಿನ ಮಾತನಾಡಿದ್ದರೇ? 
ಯುಪಿಎ ಸರ್ಕಾರ ಅವರನ್ನು ಸಚಿವರನ್ನಾಗಿ ಮಾಡಿದರೆ ಪ್ರಮಾಣವಚನ ಸ್ವೀಕರಿಸಿ ಬೆಂಗಳೂರಿಗೆ ಬಂದವರು ತಿರುಗಿ ಹೋಗಲಿಲ್ಲ.  ಕೇಂದ್ರ ಸಚಿವ ಮಂಡಳಿಯಲ್ಲಿ ರಾಜ್ಯಕ್ಕೆ ಸೇರಿರುವ ನಾಲ್ಕು ಮಂದಿ ಸಚಿವರಿದ್ದಾರೆ.  ಅವರಲ್ಲೊಬ್ಬರು ಮಂಡ್ಯದ ಮಣ್ಣಿನ ಮಗ.
ಉಳಿದವರು ಬಿಡಿ ಕನಿಷ್ಠ ಮಂಡ್ಯದ ಮಣ್ಣಿನ ಮಗನಾಗಿರುವ ಎಸ್.ಎಂ.ಕೃಷ್ಣ ಅವರಿಗೂ ರಾಜ್ಯದ ರೈತರ ಹಿತಾಸಕ್ತಿಯನ್ನು ರಕ್ಷಿಸಬೇಕೆಂದು ಅನಿಸಲಿಲ್ಲವೇ? ನಮ್ಮ ರೈತರು ಎಷ್ಟೊಂದು ವಿಶಾಲಹೃದಯಿಗಳೆಂದರೆ ತಮ್ಮ ಕೈಬಿಟ್ಟವರನ್ನೇ ತಲೆಮೇಲೆ ಕೂರಿಸಿಕೊಂಡು ಮೆರವಣಿಗೆ ಮಾಡುತ್ತಾರೆ.
ಇನ್ನೊಂದೆಡೆ ಅನಗತ್ಯವಾಗಿ ನ್ಯಾಯಾಲಯ, ನ್ಯಾಯಮಂಡಳಿ ವಿರುದ್ಧ ಕೂಗಾಡಿ ದ್ವೇಷ ಕಟ್ಟಿಕೊಳ್ಳುತ್ತಾರೆ. ಕನ್ನಡಿಗರ ರೋಷವೇ ಹೀಗೆ, ಅದರಲ್ಲಿ ಎಲ್ಲವನ್ನೂ ಸುಟ್ಟುಹಾಕುವ ಬೆಂಕಿ ಸ್ವಲ್ಪ ಹೆಚ್ಚು, ಕತ್ತಲಲ್ಲಿಯೂ ದಾರಿ ತೋರುವ ಬೆಳಕು ಕಡಿಮೆ.  ಈ ವರ್ಷದ ಸಮಸ್ಯೆಯೇನೋ ಇನ್ನು ಕೆಲವುದಿನಗಳಲ್ಲಿ ಮುಗಿದುಹೋಗುತ್ತದೆ.

ಮುಂದಿನ ದಿನಗಳು ಇನ್ನಷ್ಟು ಗಂಡಾಂತರಕಾರಿಯಾಗಲಿವೆ. ಮುಂದೇನು? ಅರಿವಿನ ಬೆಳಕಲ್ಲಿ ನೋಡಿದರೆ ದಾರಿಗಳು ಹಲವು ಇವೆ. ಇದು ಕೇವಲ ಮೈಸೂರು-ಮಂಡ್ಯದ ರೈತರ ಸಮಸ್ಯೆ ಅಲ್ಲ. ಇದನ್ನು ತಿಳಿದುಕೊಳ್ಳಬೇಕಾದರೆ ಯಾರಾದರೂ ತೆಪ್ಪಗೆ ಕೂತು ಐದು ಸಂಪುಟಗಳಲ್ಲಿರುವ ಕಾವೇರಿ ನ್ಯಾಯಮಂಡಳಿಯ ಐತೀರ್ಪನ್ನು ಓದಬೇಕು. ಆಗಲಾದರೂ ಬುದ್ದಿ ಬರಬಹುದೇನೋ?
ರಾಜ್ಯದ ಪುನರ್‌ಪರಿಶೀಲನಾ ಅರ್ಜಿಯನ್ನೇನಾದರೂ ಸುಪ್ರೀಂಕೋರ್ಟ್ ತಿರಸ್ಕರಿಸಿ ಐತೀರ್ಪನ್ನು ಅಂತಿಮ ಎಂದು ಸಾರಿದರೆ ಮೊದಲು ನೀರಿಲ್ಲದೆ ಸಾಯುವವರು ಬೆಂಗಳೂರು ಜನ. ಈ ಮಹಾನಗರಕ್ಕಾಗಿ ನಾವು ಕೇಳಿರುವುದು 30 ಟಿಎಂಸಿಅಡಿ ಕಾವೇರಿ ನೀರು, ನ್ಯಾಯಮಂಡಳಿ ನಿಗದಿಪಡಿಸಿರುವುದು 1.75 ಟಿಎಂಸಿಅಡಿ.

ಕಷ್ಟ ಹಂಚಿಕೊಳ್ಳುವುದು ಸುಖ ಹಂಚಿಕೊಳ್ಳುವಷ್ಟು ಸುಲಭ ಅಲ್ಲ September 17, 2012

ಕಾವೇರಿ ನದಿನೀರು ಹಂಚಿಕೆಯ ವಿವಾದವನ್ನು ಕೊರಳಿಗೆ ಸುತ್ತಿಕೊಂಡು ಎರಡು ಶತಕಗಳಿಗಿಂತಲೂ ಹೆಚ್ಚು ಕಾಲ ಸುಸ್ತಾಗುವಷ್ಟು ಜಗಳವಾಡಿ, ಹಳ್ಳಿಯಿಂದ ದಿಲ್ಲಿ ವರೆಗೆ ಸುತ್ತಾಡಿ, ಇಷ್ಟ ಬಂದಷ್ಟು ಖರ್ಚು ಮಾಡಿದರೂ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಕರ್ನಾಟಕ ಮತ್ತು ತಮಿಳುನಾಡಿಗೆ ಸಾಧ್ಯವಾಗಿಲ್ಲ. 

ಈಗ ಎರಡೂ ರಾಜ್ಯಗಳು ಹೊರಟ ಜಾಗದಲ್ಲಿಯೇ ಮತ್ತೆ ಬಂದು ನಿಂತಿವೆ. 1799ರಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಕೆರೆಗಳ ದುರಸ್ತಿಯನ್ನು ವಿರೋಧಿಸಿ ತಂಜಾವೂರು ಜಿಲ್ಲೆಯ ರೈತರು ಮೊದಲ ಬಾರಿ ನಡೆಸಿದ ಪ್ರತಿಭಟನೆಯ ದಿನದಿಂದ ಪ್ರಾರಂಭವಾಗಿರುವ ನೀರಿನ ಜಗಳ ಇನ್ನೂ ನಿಂತಿಲ್ಲ. 

ಇದೇ ಸೆಪ್ಟೆಂಬರ್ 19ರಂದು ನಡೆಯಲಿರುವ ಪ್ರಧಾನಿ ಅಧ್ಯಕ್ಷರಾಗಿರುವ ಮತ್ತು ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುವ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ಮತ್ತೊಂದು ಸುತ್ತಿನ ಕಾದಾಟಕ್ಕೆ ಎರಡೂ ರಾಜ್ಯಗಳು ತಾಲೀಮು ನಡೆಸತೊಡಗಿವೆ.

ಸುಪ್ರೀಂಕೋರ್ಟ್ ಆದೇಶದಂತೆಯೇ ರಚನೆಯಾದ ಕಾವೇರಿ ನ್ಯಾಯಮಂಡಳಿ ಅಂತಿಮ ಐತೀರ್ಪು ನೀಡಿದ ನಂತರವೂ ಮೂಲವಿವಾದ ಬಗೆಹರಿದಿಲ್ಲ ಎನ್ನುವುದಕ್ಕೆ ಈಗಿನ ಜಗಳವೇ ಸಾಕ್ಷಿ. `ಮಳೆಗಾಲದಲ್ಲಿ ನೂರಾರು ನೆಂಟರು, ಬರಗಾಲ ಅನಾಥ` ಎಂಬಂತಾಗಿದೆ ಕಾವೇರಿ ಕಣಿವೆಯ ರೈತರ ಸ್ಥಿತಿ. ಹದಿನಾರು ವರ್ಷಗಳಷ್ಟು ದೀರ್ಘಕಾಲ ಅಳೆದು, ತೂಗಿ, ಸೋಸಿ ನೀಡಿದ ಅಂತಿಮ ಐತೀರ್ಪು ಕೊನೆಗೂ ಮಳೆಬಂದ ದಿನಗಳಲ್ಲಿ ನೀರನ್ನು ಹಂಚಿಕೊಳ್ಳುವುದು ಹೇಗೆ ಎಂಬುದನ್ನಷ್ಟೇ ಹೇಳಿದ್ದು. 

ಇದಕ್ಕಿಂತಲೂ ಮುಖ್ಯವಾಗಿ ಮಳೆ ಇಲ್ಲದ ದಿನಗಳ ಸಂಕಷ್ಟವನ್ನು ಹಂಚಿಕೊಳ್ಳುವುದು ಹೇಗೆ ಎಂಬುದನ್ನು ನ್ಯಾಯಮಂಡಳಿ ಹೇಳಬೇಕಾಗಿತ್ತು. ಆದರೆ `ಮಳೆ ಕೊರತೆಯ ವರ್ಷದಲ್ಲಿ ಕಡಿಮೆಯಾಗುವ ನೀರಿನ ಉತ್ಪನ್ನದ ಅನುಪಾತಕ್ಕೆ ಅನುಗುಣವಾಗಿ ಬಿಡಬೇಕಾಗಿರುವ ನೀರಿನ ಪಾಲು ಕಡಿಮೆಯಾಗಲಿದೆ` ಎಂದಷ್ಟೇ ಹೇಳಿರುವ ನ್ಯಾಯಮಂಡಳಿ ಇದಕ್ಕೊಂದು ಸ್ಪಷ್ಟವಾದ ಸೂತ್ರ ಇಲ್ಲವೇ ಮಾರ್ಗಸೂಚಿಯನ್ನು ನೀಡದೆ ಜಾರಿಕೊಂಡಿದೆ.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನೀರಿನ ಜಗಳವನ್ನು ಇನ್ನಷ್ಟು ಸರಳವಾಗಿ ವ್ಯಾಖ್ಯಾನಿಸುವುದಾದರೆ ಇದು ಮುಖ್ಯವಾಗಿ `ಮಳೆ ಇಲ್ಲದ ಕಷ್ಟದ ದಿನಗಳಲ್ಲಿನ ನೀರು ಹಂಚಿಕೆಯ ಸಮಸ್ಯೆ`. ಸಮೃದ್ಧವಾಗಿ ಮಳೆ ಬಿದ್ದಾಗ ನೀರು ಹರಿಸಲು ಕರ್ನಾಟಕ ತಕರಾರು ಮಾಡುವುದಿಲ್ಲ, ನೀರು ಬಿಡಲೇಬೇಕೆಂದು ತಮಿಳುನಾಡು ಕೂಡಾ ಹಟ ಹಿಡಿಯುವುದಿಲ್ಲ. 

1991ರಲ್ಲಿ ಮಧ್ಯಂತರ ಐತೀರ್ಪು ನೀಡಿದ ನಂತರದ ಇಪ್ಪತ್ತೊಂದು ವರ್ಷಗಳಲ್ಲಿ ನಾಲ್ಕು ವರ್ಷಗಳನ್ನು ( 2001-02: 189 ಟಿಎಂಸಿ, 2002-03: 109.45 ಟಿಎಂಸಿ, 2003-04: 75.87 ಟಿಎಂಸಿ ಮತ್ತು 2004-05: 185.55 ಟಿಎಂಸಿ) ಹೊರತುಪಡಿಸಿ ಉಳಿದೆಲ್ಲ ವರ್ಷಗಳಲ್ಲಿ ನ್ಯಾಯಮಂಡಳಿಯ ಐತೀರ್ಪಿನ ಪ್ರಕಾರ ಹರಿಸಬೇಕಾಗಿರುವ 192 ಟಿಎಂಸಿಗಿಂತಲೂ ಹೆಚ್ಚು ನೀರು ಕರ್ನಾಟಕದಿಂದ ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹರಿದುಹೋಗಿದೆ. 

ವಿವಾದ ಒಟ್ಟು ನೀರಿನ ಪಾಲಿಗೆ ಸಂಬಂಧಿಸಿದ್ದಲ್ಲ, ಅದು ಜೂನ್‌ನಿಂದ ಸೆಪ್ಟೆಂಬರ್ ವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ ಹರಿಸಬೇಕಾಗಿರುವ ನೀರಿನ ಪಾಲಿನದ್ದು. ಇದರಿಂದಾಗಿಯೇ ಮಳೆ ಇಲ್ಲದ ಸಂಕಷ್ಟದ ಕಾಲದಲ್ಲಿ ಎರಡು ರಾಜ್ಯಗಳ ನಡುವೆ ಸಂಘರ್ಷದ ಕಿಡಿಹಾರುತ್ತಿರುವುದು.

ಇದು ಗೊತ್ತಿದ್ದರೂ ಇದಕ್ಕೊಂದು ಸರ್ವಸಮ್ಮತ ಪರಿಹಾರವನ್ನು ಸೂಚಿಲು ಸಾಧ್ಯವಾಗದೆ ಇರುವುದು ಕಾವೇರಿ ನ್ಯಾಯಮಂಡಳಿಯ ದೊಡ್ಡ ವೈಫಲ್ಯ. `ಮಳೆ ಕೊರತೆಯ ದಿನಗಳಲ್ಲಿ ಬಳಸಲು ಸಾಧ್ಯವಾಗುವಂತೆ ಉತ್ತಮ ಮಳೆಯ ಸಾಮಾನ್ಯ ಜಲವರ್ಷದ ಕೊನೆಯಲ್ಲಿ ಜಲಾಶಯಗಳಲ್ಲಿ ಸಾಧ್ಯ ಇದ್ದಷ್ಟು ನೀರಿನ ಸಂಗ್ರಹ ಇಟ್ಟುಕೊಳ್ಳಬೇಕು. 

ಸತತ ಎರಡು ವರ್ಷ ಮಳೆ ಕೊರತೆ ಕಾಣಿಸಿಕೊಂಡಲ್ಲಿ ಕಾವೇರಿ ಜಲನಿರ್ವಹಣಾ ಮಂಡಳಿ ಇಲ್ಲ ಕಾವೇರಿ ನದಿ ಪ್ರಾಧಿಕಾರ ನೀರು ಬಿಡುಗಡೆಯ ಮಾಸಿಕ ಕಂತುಗಳ ಪ್ರಮಾಣವನ್ನು ಕಡಿಮೆಗೊಳಿಸಬಹುದು` ಎಂದಷ್ಟೇ ಅಂತಿಮ ಐತೀರ್ಪು ಹೇಳಿದೆ ( ಐದನೆ ಸಂಪುಟ, ಪುಟ 213). ಸ್ಪಷ್ಟ ಪರಿಹಾರದ ಮಾರ್ಗವನ್ನು ಅದು ತೋರಿಸಿಲ್ಲ.

ಜೂನ್-ಸೆಪ್ಟೆಂಬರ್ ವರೆಗಿನ ವಿವಾದಾತ್ಮಕ ನಾಲ್ಕು ತಿಂಗಳ ಅವಧಿಯಲ್ಲಿ ಕರ್ನಾಟಕ 137 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು ಮಧ್ಯಂತರ ಐತೀರ್ಪು ಹೇಳಿತ್ತು. ಅದರಲ್ಲಿ ಮೂರು ಟಿಎಂಸಿಯನ್ನಷ್ಟೇ ಕಡಿಮೆ ಮಾಡಿರುವ ಅಂತಿಮ ಐತೀರ್ಪು ವಿವಾದದ ಮೂಲಕಾರಣವನ್ನು ಜೀವಂತವಾಗಿ ಇಟ್ಟಿದೆ. 

ಜೂನ್‌ನಿಂದ ಸೆಪ್ಟೆಂಬರ್ ವರೆಗೆ 100 ಟಿಎಂಸಿ ಅದರ ನಂತರ 92 ಟಿಎಂಸಿ ನೀರು ಹರಿಸಿ ಎಂದು ನ್ಯಾಯಮಂಡಳಿ ಹೇಳಿದ್ದರೂ ವಿವಾದದ ಇತ್ಯರ್ಥಕ್ಕೆ ನೆರವಾಗುತ್ತಿತ್ತೊ ಏನೋ? ತಮಿಳುನಾಡು ಖುದ್ದಾಗಿ ಒಪ್ಪಿಕೊಂಡ 20 ಟಿಎಂಸಿ ಅಂತರ್ಜಲದ ಬಳಕೆಯನ್ನು ಗಣನೆಗೆ ತೆಗೆದುಕೊಂಡಿದ್ದರೂ ಕರ್ನಾಟಕದ ಮೇಲಿನ ಅಷ್ಟು ಭಾರ ಕಡಿಮೆಯಾಗಲು ಸಾಧ್ಯ ಇತ್ತು.

ನ್ಯಾಯಮಂಡಳಿ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡ ಕಾರಣದಿಂದಾಗಿ ಮಧ್ಯಂತರ ಐತೀರ್ಪಿನಲ್ಲಿ ಹೇಳಿರುವಂತೆ ಮಳೆ ಇಲ್ಲದ ಕಾಲದಲ್ಲಿ ಸಂಕಷ್ಟ ಹಂಚಿಕೆ ಸೂತ್ರವನ್ನು ರೂಪಿಸುವ ಜವಾಬ್ದಾರಿ 1998ರಲ್ಲಿ ರಚನೆಗೊಂಡ ಪ್ರಧಾನಿ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರದ್ದಾಗಿದೆ. ನ್ಯಾಯಮಂಡಳಿ ತನಗೊಪ್ಪಿಸಿರುವ ಜವಾಬ್ದಾರಿಯ ನಿರ್ವಹಣೆಗಾಗಿ ಕಾವೇರಿ ಉಸ್ತುವಾರಿ ಸಮಿತಿಯನ್ನು ಪ್ರಾಧಿಕಾರ ರಚಿಸಿದೆ. 

ಉಸ್ತುವಾರಿ ಸಮಿತಿ ಇದಕ್ಕಾಗಿ ತಾಂತ್ರಿಕ ಸಮಿತಿಯನ್ನು ರಚಿಸಿದೆ. ಈ ಮೂಲಕ ಕಾವೇರಿ ನದಿ ನೀರು ಹಂಚಿಕೆಯ ವಿವಾದವನ್ನು ಇತ್ಯರ್ಥಗೊಳಿಸಬೇಕಾಗಿರುವ ಸುಪ್ರೀಂಕೋರ್ಟ್‌ನ ಆದೇಶದ ಮೂಲಕ ರಚನೆಗೊಂಡ ನ್ಯಾಯಮಂಡಳಿಯ ಹೊಣೆ ಅಂತಿಮವಾಗಿ ಒಂದಷ್ಟು ಅಧಿಕಾರಿಗಳನ್ನೊಳಗೊಂಡ ತಾಂತ್ರಿಕ ಸಮಿತಿಯ ಹೆಗಲ ಮೇಲೆ ಬಂದು ಕೂತಿದೆ. ಕಳೆದ ಹನ್ನೆರಡು ವರ್ಷಗಳಿಂದ ಈ ತಾಂತ್ರಿಕ ಸಮಿತಿ `ಸಂಕಷ್ಟ ಹಂಚಿಕೆಯ ಸೂತ್ರ`ಗಳನ್ನು ಹೆಣೆಯುತ್ತಲೇ ಇದ್ದರೂ ಅದಕ್ಕೆ ಕಾವೇರಿ ಕಣಿವೆಯ ನಾಲ್ಕು ರಾಜ್ಯಗಳನ್ನು ಒಪ್ಪಿಸಲು ಸಾಧ್ಯವಾಗಿಲ್ಲ. 

ಈ ಬಾರಿ ಕೂಡಾ ಕರ್ನಾಟಕದಲ್ಲಿ ನಡೆದ ಸರ್ವಪಕ್ಷಗಳ ಸಭೆ `ಸಂಕಷ್ಟ ಹಂಚಿಕೆ ಸೂತ್ರ`ವನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ನಿರ್ಣಯದೊಂದಿಗೆ ಬರ್ಖಾಸ್ತುಗೊಂಡಿದೆ. ಇದರಿಂದಾಗಿ ವಿವಾದ ಪ್ರಾಧಿಕಾರದ ಹೊಸ್ತಿಲಲ್ಲಿ ಬಂದು ನಿಂತಿದೆ.
ತಮಿಳುನಾಡಿನ ರಾಜಕೀಯ ಒತ್ತಡಕ್ಕೆ ಈಡಾಗುತ್ತ ಬಂದಿರುವ ಕಾವೇರಿ ನದಿ ಪ್ರಾಧಿಕಾರ ಇಲ್ಲಿಯ ವರೆಗೆ ರಚಿಸಿದ ಸಂಕಷ್ಟ ಹಂಚಿಕೆಯ ಕರಡು ಸೂತ್ರಗಳೆಲ್ಲವೂ ತಮಿಳುನಾಡಿನ ರೈತರ ಹಿತವನ್ನಷ್ಟೇ ಕಾಯಲು ರೂಪುಗೊಂಡಿರುವಂತಹದ್ದು ಎಂದು ಹೇಳಲು ಆಧಾರಗಳಿವೆ. 

ಕರ್ನಾಟಕ ನೀಡಿರುವ ಸಲಹೆಗಳನ್ನು ಪ್ರಾಧಿಕಾರದಿಂದ ನೇಮಕಗೊಂಡ ತಾಂತ್ರಿಕ ಸಮಿತಿ ಪರಿಗಣಿಸಿಯೇ ಇಲ್ಲ. ಅವುಗಳು ಹೀಗಿವೆ:

-ಕರ್ನಾಟಕದಲ್ಲಿ ಬಹುಪಾಲು ಮಳೆಯನ್ನು ತಂದುಕೊಡುವ ನೈರುತ್ಯ ಮಾರುತದ ಮಳೆಯನ್ನಷ್ಟೇ ಪರಿಗಣಿಸದೆ ತಮಿಳುನಾಡಿನಲ್ಲಿ ಅಕ್ಟೋಬರ್ ಮಧ್ಯಭಾಗದಿಂದ ಜನವರಿ ವರೆಗೆ ಸುರಿಯವ ಈಶಾನ್ಯ ಮಾರುತವನ್ನೂ ಪರಿಗಣಿಸಬೇಕು. ತಮಿಳುನಾಡಿನ ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತರು ಕುರುವೈ ಬೆಳೆಗೆ ನೈರುತ್ಯ ಮಾರುತವನ್ನು ಅವಲಂಬಿಸಿದ್ದರೆ ನಂತರ ಬೆಳೆಯುವ ಸಾಂಬಾ ಬೆಳೆಗೆ ಬೇಕಾಗಿರುವ ಮಳೆಯ ಮೂರನೆ ಎರಡರಷ್ಟರನ್ನು ಈಶಾನ್ಯ ಮಾರುತದಿಂದ ಪಡೆಯುತ್ತಾರೆ. 

ಇಲ್ಲಿಯ ವರೆಗಿನ ಸಂಕಷ್ಟ ಹಂಚಿಕೆ ಸೂತ್ರಗಳು ಈಶಾನ್ಯ ಮಾರುತವನ್ನು ಪರಿಗಣಿಸಿಲ್ಲ. ( ಪ್ರತಿವರ್ಷ ಕಾವೇರಿ ಕಣಿವೆಯ ಎಲ್ಲ ಜಲಾಶಯಗಳ ನೀರು ಸಂಗ್ರಹ ಮತ್ತು ಜೂನ್ ಒಂದರಿಂದ ಅಕ್ಟೋಬರ್ 15ರ ವರೆಗಿನ ನೈರುತ್ಯ ಮಾರುತ ಮತ್ತು ಅಕ್ಟೋಬರ್ 16ರಿಂದ ಜನವರಿ 31ರ ವರೆಗಿನ ಈಶಾನ್ಯ ಮಾರುತದ ಮಳೆಯನ್ನು ದಾಖಲಿಸುವ ಹೊಣೆಯನ್ನು ನ್ಯಾಯಮಂಡಳಿ ಅಂತಿಮ ಐತೀರ್ಪಿನಲ್ಲಿ ಕಾವೇರಿ ನಿಯಂತ್ರಣಾ ಪ್ರಾಧಿಕಾರ ಮತ್ತು ನಿರ್ವಹಣಾ ಸಮಿತಿಗೆ ಒಪ್ಪಿಸಿರುವುದು ಕರ್ನಾಟಕದ ಈ ಸಲಹೆಗೆ ಬಲ ತಂದುಕೊಟ್ಟಿದೆ.)

-ನೈರುತ್ಯ ಮಾರುತ ಕೊನೆಗೊಳ್ಳುವ ಸೆಪ್ಟೆಂಬರ್ ತಿಂಗಳ ಅಂತ್ಯದ ವರೆಗಿನ ನೀರಿನ ಕೊರತೆಯನ್ನಷ್ಟೇ ಲೆಕ್ಕ ಹಾಕಿ ಅಲ್ಲಿಂದ ನಂತರದ ದಿನಗಳ ಸಂಕಷ್ಟವನ್ನು ಹಂಚಿಕೊಳ್ಳಬೇಕೆಂಬ ಸೂತ್ರ ಸರಿ ಅಲ್ಲ. ನ್ಯಾಯಮಂಡಳಿ ಐತೀರ್ಪು ನೀಡುವಾಗ ಜೂನ್‌ನಿಂದ ಡಿಸೆಂಬರ್ ವರೆಗೆ ಬಿಟ್ಟ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡಿದ್ದು ಸಂಕಷ್ಟ ಸ್ಥಿತಿಯ ಅಂದಾಜಿಗೆ ನೀರಿನ ಕೊರತೆಯನ್ನು ಲೆಕ್ಕ ಹಾಕುವಾಗಲೂ ಆ ಅವಧಿಯನ್ನೇ (ಜೂನ್-ಡಿಸೆಂಬರ್) ಪರಿಗಣಿಸಬೇಕು.

-ಸಂಕಷ್ಟ ಹಂಚಿಕೆ ಸೂತ್ರ ರಚಿಸುವಾಗ ಕರ್ನಾಟಕದ ನಾಲ್ಕು ಜಲಾಶಯಗಳ ಜಲಾನಯನ ಪ್ರದೇಶವನ್ನಷ್ಟೇ ಪರಿಗಣಿಸದೆ ತಮಿಳುನಾಡಿನ ಜಲಾಶಯಗಳ ನೀರು ಸಂಗ್ರಹವನ್ನೂ ಪರಿಗಣಿಸಬೇಕು. ನೀರಾವರಿ ವರ್ಷದ ಪ್ರಾರಂಭದಲ್ಲಿ ಮೆಟ್ಟೂರು ಜಲಾಶಯದಲ್ಲಿ ಸಂಗ್ರಹ ಇರುವ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಬೇಕು. 

ನರ್ಮದಾ ನದಿ ನೀರು ಹಂಚಿಕೆ ವಿವಾದವನ್ನು ಇತ್ಯರ್ಥಗೊಳಿಸಿದ್ದ ನ್ಯಾಯಮಂಡಳಿ `..ನಿರ್ದಿಷ್ಠ ನೀರಾವರಿ ವರ್ಷದಲ್ಲಿ ಬಳಕೆಗೆ ಲಭ್ಯ ಇರುವ ನೀರಿನ ಪ್ರಮಾಣದಲ್ಲಿ ಹಿಂದಿನ ವರ್ಷದ ಮಿಗತೆ ನೀರಿನ ಪ್ರಮಾಣ ಕೂಡಾ ಸೇರಿದೆ..` ಎಂದು ತನ್ನ ಐತೀರ್ಪಿನಲ್ಲಿ ಹೇಳಿದೆ.

- ಕೇಂದ್ರ ಜಲ ಆಯೋಗದ ನಿಯಂತ್ರಣದಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರ ಮತ್ತು ಮೆಟ್ಟೂರು ಜಲಾಶಯದ ನಡುವೆ 5535 ಚದರ ಕಿ.ಮೀ. ವಿಸ್ತೀರ್ಣದ ಜಲಾನಯನ ಪ್ರದೇಶ ಇದೆ. ಸಂಕಷ್ಟದ ಸ್ಥಿತಿಯನ್ನು ಲೆಕ್ಕಹಾಕುವಾಗ ಈ ಜಲಾನಯನ ಪ್ರದೇಶದಲ್ಲಿ ಪ್ರತಿ ಜಲವರ್ಷ ಉತ್ಪತ್ತಿಯಾಗುವ ಸುಮಾರು 25 ಟಿಎಂಸಿ ನೀರನ್ನು ಗಣನೆಗೆ ತೆಗೆದುಕೊಳ್ಳಬೇಕು.

-ತಮಿಳುನಾಡಿಗೆ ಬಿಟ್ಟ ನೀರಿನ ಲೆಕ್ಕವನ್ನು ಬಿಳಿಗುಂಡ್ಲುವಿನಲ್ಲಿರುವ ಕೇಂದ್ರ ಜಲ ಆಯೋಗದ ಜಲಮಾಪನ ಕೇಂದ್ರದ ಆಧಾರದಲ್ಲಿಯೇ ನಡೆಸಬೇಕು. ಮೆಟ್ಟೂರಿನಲ್ಲಿ ಅಧಿಕೃತ ಜಲಮಾಪನ ವ್ಯವಸ್ಥೆಯೇ ಇಲ್ಲದೆ ಇರುವುದರಿಂದ ಅಲ್ಲಿನ ನೀರಿನ ದಾಖಲೆಯನ್ನು ಪರಿಗಣಿಸುವುದು ಸರಿ ಅಲ್ಲ. (ಬಿಳಿಗುಂಡ್ಲು ಜಲಮಾಪನದ ನೀರಿನ ಲೆಕ್ಕವೇ ಅಧಿಕೃತ ಎಂದು ನ್ಯಾಯಮಂಡಳಿಯ ಅಂತಿಮ ಐತೀರ್ಪಿನಲ್ಲಿ ಹೇಳಿರುವುದು ಈ ಸಲಹೆಗೆ ಪೂರಕವಾಗಿದೆ.)

-ಎರಡು ಗರಿಷ್ಠ ಮತ್ತು ಎರಡು ಕನಿಷ್ಠ ಮಳೆಯ ವರ್ಷಗಳ ಸರಾಸರಿಯನ್ನು ಪರಿಗಣಿಸದೆ, 1974ರಿಂದ ಈ ವರೆಗಿನ ಮಳೆ ಸರಾಸರಿಯನ್ನು ಗಣನೆಗೆ ತೆಗೆದುಕೊಳ್ಳಬೇಕು.
ಕಾವೇರಿ ನದಿ ಪ್ರಾಧಿಕಾರದ ಕಾರ್ಯನಿರ್ವಹಣೆಯನ್ನು ಕಳೆದ ಹನ್ನೆರಡು ವರ್ಷಗಳಿಂದ ಗಮನಿಸುತ್ತಾ ಬಂದ ಯಾರು ಕೂಡಾ ಕರ್ನಾಟಕದ ಈ ಸಲಹೆಗಳಿಗೆ ಮಾನ್ಯತೆ ಸಿಗಬಹುದು ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯ ಇಲ್ಲ. 

ಸೂತ್ರ ರಚನೆ ತಾಂತ್ರಿಕ ಸ್ವರೂಪದ್ದಾಗಿದ್ದರೂ ಅಂತಿಮವಾಗಿ ಅದೊಂದು ರಾಜಕೀಯ ತೀರ್ಮಾನವಾಗಿರುವುದು ಪರಿಹಾರ ಕಗ್ಗಂಟಾಗಲು ಕಾರಣ. ಮಳೆಯ ಪ್ರಮಾಣ, ಜಲಾಶಯದಲ್ಲಿ ನೀರಿನ ಸಂಗ್ರಹ ಮತ್ತು ರೈತರ ನೀರಿನ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಸೂತ್ರ ರಚನೆಯಾಗಬೇಕಾಗಿದ್ದರೂ ಅಲ್ಲಿ ಮುಖ್ಯವಾಗಿ ಗಣನೆಗೆ ಬರುವುದು ರಾಜಕೀಯ ಲೆಕ್ಕಾಚಾರ.

ಕೇಂದ್ರ ಸರ್ಕಾರವನ್ನು ಸದಾ ತನ್ನ ಋಣದ ಉರುಳಲ್ಲಿ ಇಟ್ಟುಕೊಂಡಿರುವ ತಮಿಳುನಾಡು, ರಾಜಕೀಯ ಬಲಾಬಲದ ಪರೀಕ್ಷೆ ಎದುರಾದಾಗೆಲ್ಲ ಸುಲಭದಲ್ಲಿ ಕರ್ನಾಟಕವನ್ನು ಹಿಂದಕ್ಕೆ ತಳ್ಳುತ್ತಾ ಬಂದಿದೆ. ಈ ಬಾರಿಯೂ ಹಾಗಾಗುವುದಿಲ್ಲ ಎನ್ನುವುದಕ್ಕೆ ಪ್ರಬಲವಾದ ಯಾವ ಕಾರಣಗಳೂ ಹೊಳೆಯುತ್ತಿಲ್ಲ. ರಾಜಕೀಯವಾಗಿ ಕರ್ನಾಟಕ ಇಂದಿನಷ್ಟು ದುರ್ಬಲ ಹಿಂದೆಂದೂ ಆಗಿರಲಿಲ್ಲ.

ಸಕೀನಾಬಾಯಿ ನಂಬಿಕೆ ಉಳಿಸಿದ ಶಿವ September 10, 2012

ನರೋಡಾ ಪಾಟಿಯಾ ಹತ್ಯಾಕಾಂಡದ ಅಪರಾಧಿಗಳಿಗೆ ಗುಜರಾತ್ ವಿಶೇಷ ನ್ಯಾಯಾಲಯ ಶಿಕ್ಷೆ ವಿಧಿಸಿದ್ದನ್ನು ಕೇಳಿದಾಗ ನನಗೆ ನೆನಪಾದವರು ಸಕೀನಾ ಬಾಯಿ. ಐದು ವರ್ಷಗಳ ಹಿಂದೆ ಗುಜರಾತ್ ವಿಧಾನಸಭಾ ಚುನಾವಣೆಯ ಸಮೀಕ್ಷೆಗೆಂದು ಹೋದವನಿಗೆ ನರೋಡಾ ಪಾಟಿಯಾದಲ್ಲಿ ಭೇಟಿಯಾಗಿದ್ದ ಸಕೀನಾಬಾಯಿ ಹಳೆಯ ದಿನಗಳನ್ನು ಮೆಲುಕುಹಾಕುತ್ತಾ `ನಾವೆಲ್ಲ ಒಂದು ಕುಟುಂಬದ ರೀತಿ ಇದ್ದವರು, ಆ ಕಾಲ ಹೊರಟೋಯ್ತು, ಈಗ ಎಲ್ಲೋ ಗಲಭೆ ನಡೆದ ಗಾಳಿಸುದ್ದಿ ಬಂದರೂ ಎದೆ ನಡ್‌ಗತೈತಿ. ಯಾರ ಮೇಲೂ ನಂಬಿಕೆ ಬರೋಲ್ಲ, ಆ ಶಿವನೇ ಕಾಯಬೇಕು` ಎಂದಿದ್ದರು ಅಚ್ಚ ಕನ್ನಡದಲ್ಲಿ. (ಪ್ರಜಾವಾಣಿ ವರದಿ: 15.12.2007). ಮುಸ್ಲಿಂ ಧರ್ಮಕ್ಕೆ ಸೇರಿದವರೆಂಬ ಕಾರಣಕ್ಕಾಗಿ `ಹಿಂದೂ ಶಿವ`ಯಾದಗೀರ್ ತಾಲ್ಲೂಕಿನ ಅತ್ತಿಗುಣಿಯ ಸಕೀನಾಬಾಯಿಯ ಕೈಬಿಡಲಿಲ್ಲ. ಅವರು ತನ್ನ ಮೇಲೆ ಇಟ್ಟ ನಂಬಿಕೆಯನ್ನು ಹುಸಿಮಾಡದೆ `ನ್ಯಾಯದೇವತೆಯ ಕಣ್ಣು ತೆರೆಸಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ.`

ಆದರೆ ನ್ಯಾಯಕ್ಕೆ ಸಿಕ್ಕಿದ ಈ ಜಯಕ್ಕಾಗಿ ಉಳಿದೆಲ್ಲರಿಗಿಂತ ಹೆಚ್ಚು ಸಂತಸ ಪಡಬೇಕಾದವರು ತಾವು ಎಂದು ಕರ್ನಾಟಕದ ಬಹಳಷ್ಟು ಜನರಿಗೆ ತಿಳಿದಿಲ್ಲ. 35 ಮಕ್ಕಳು, 32 ಮಹಿಳೆಯರು ಮತ್ತು 30 ಗಂಡಸರು ಸೇರಿದಂತೆ ನರೋಡಾ ಪಾಟಿಯಾದಲ್ಲಿ ಹತ್ಯೆಗೀಡಾದವರ ಅಧಿಕೃತ ಸಂಖ್ಯೆ 97. ಇವರಲ್ಲಿ ಹೆಚ್ಚಿನವರು ಕರ್ನಾಟಕ ಮತ್ತು ಮಹಾರಾಷ್ಟ್ರ ಮೂಲದವರು. ಹುಬ್ಬಳ್ಳಿ, ಧಾರವಾಡ, ಹಾನಗಲ್, ಸುರಪುರ, ಶಹಪುರ, ಜೇವರ್ಗಿ, ಯಾದಗೀರ್ ಕಡೆಗಳಿಂದ ವರ್ಷಗಳ ಹಿಂದೆ ಅಲ್ಲಿಗೆ ವಲಸೆ ಹೋದವರಿದ್ದಾರೆ. ಸಕೀನಾಬಾಯಿಯಂತೆ ಅಚ್ಚಕನ್ನಡ ಮಾತನಾಡುವವರು ಈಗಲೂ ಅಲ್ಲಿದ್ದಾರೆ. ಇದಕ್ಕಾಗಿಯೇ ಸ್ಥಳೀಯರು ನರೋಡಾ ಪಾಟಿಯಾಕ್ಕೆ `ಛೋಟಾ ಕರ್ನಾಟಕ್` ಎನ್ನುತ್ತಾರೆ.  ಊರಲ್ಲಿ ನೇಕಾರಿಕೆ ಮಾಡುತ್ತಿದ್ದ ಇವರು  ಕೈಮಗ್ಗ ನಿಂತುಹೋದ ಮೇಲೆ ಅಹಮದಾಬಾದ್‌ಗೆ ಹೋಗಿ ಬಟ್ಟೆಗಿರಣಿಗಳಲ್ಲಿ ಸೇರಿಕೊಂಡಿದ್ದರು. ಗಿರಣಿಗಳು ಯಾಂತ್ರಿಕೃತಗೊಳ್ಳುತ್ತಿದ್ದಂತೆಯೇ ಅದಕ್ಕೆ ಬೇಕಾದ ಕೌಶಲ ಇಲ್ಲದೆ ನಿರುದ್ಯೋಗಿಗಳಾಗಿ ಅನಿವಾರ್ಯವಾಗಿ ಟೈಲರಿಂಗ್, ಲಾರಿ-ಅಟೋರಿಕ್ಷಾ ಓಡಿಸುವುದು, ಮಾಂಸ ಮಾರಾಟ, ಎಲೆಕ್ಟ್ರಿಕಲ್ ರಿಪೇರಿ ಮೊದಲಾದ ಸಣ್ಣಪುಟ್ಟ ವೃತ್ತಿಯಲ್ಲಿ ತೊಡಗಿಸಿಕೊಂಡು ಬಡತನದ ನಡುವೆಯೂ ತಮ್ಮ ಪಾಡಿಗೆ ತಾವಿದ್ದರು. ಹತ್ತು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಒಂದು ದಿನ ಅವರ ಬದುಕಿಗೆ ಬೆಂಕಿ ಬಿತ್ತು. ಕೋಮುಗಲಭೆಯ ನಂತರ ಶಹಾ ಅಲಂ ನಿರಾಶ್ರಿತರ ಶಿಬಿರದಲ್ಲಿ ಭೇಟಿಯಾಗಿದ್ದ ಸುರಪುರ ತಾಲ್ಲೂಕಿನ ಜೈನುಲ್ಲಾ ನನ್ನ ಕೈಹಿಡಿದು  `ಸಾಯಲಿಕ್ಕೆ ಇಲ್ಲಿಗೆ ಬರಬೇಕಿತ್ತಾ?` ಎಂದು ಕೇಳಿದ್ದು (ಪ್ರಜಾವಾಣಿ ವರದಿ, ಮಾರ್ಚ್ 8, 2002)  ಕಿವಿಯಲ್ಲಿ ಈಗಲೂ ಗುಂಯ್‌ಗುಡುತ್ತಿದೆ.

ಅಹಮದಾಬಾದ್ ನಗರದಿಂದ ಸುಮಾರು 15 ಕಿ.ಮೀ.ದೂರದ ಹೊರವಲಯದಲ್ಲಿರುವ ನರೋಡಾ ಪಾಟಿಯಾಕ್ಕೂ ಗೋಧ್ರಾಹತ್ಯಾಕಾಂಡಕ್ಕೂ ಸಂಬಂಧವೇ ಇಲ್ಲ. ಇದು ಆ ಪ್ರಕರಣದ ವಿಚಾರಣೆಯಲ್ಲಿಯೂ ಸಾಬೀತಾಗಿದೆ. `ಪ್ರತೀಕಾರ`ಕ್ಕಾಗಿ ನರೋಡಾಪಾಟಿಯಾವನ್ನೇ ಆರಿಸಿಕೊಳ್ಳಲು ಮುಖ್ಯವಾಗಿ ಎರಡು ಕಾರಣ. ಮೊದಲನೆಯದು ಒಂದೇ ಕಡೆ ಸುಲಭದಲ್ಲಿ ನೂರಾರು  ಮುಸ್ಲಿಂ ತಲೆಗಳು ಸಿಗುತ್ತವೆ ಎಂಬ ದುಷ್ಟ ಮನಸ್ಸಿನ ಯೋಚನೆ. ಸುಮಾರು 15 ಸಾವಿರ ಜನಸಂಖ್ಯೆಯ ನರೋಡಾಪಾಟಿಯಾ ಬಡಾವಣೆಗೆ ಸೇರಿರುವ ಹುಸೇನ್‌ನಗರ, ಜವಾಹರ ನಗರ, ಪಂಡಿತ್ ಕೀ ಚಾಳ್, ಮಸ್ಜೀದ್‌ಗಲ್ಲಿಗಳಲ್ಲಿ ಸುಮಾರು 250-300  ಮುಸ್ಲಿಂ ಕುಟುಂಬಗಳಿವೆ. ಅಲ್ಲಿರುವ ಹಿಂದೂ ಕುಟುಂಬಗಳ ಸಂಖ್ಯೆ 25 ಕೂಡಾ ದಾಟಲಾರದು. ನರೋಡಾ ಪಾಟಿಯಾದ ಈ ಚಾಳ್‌ಗಳನ್ನು ಗಂಗೋತ್ರಿ ಸೊಸೈಟಿ ಮತ್ತು ಗೋಪಿನಾಥ್ ಸೊಸೈಟಿ ಎಂಬ ಎರಡು ವಸತಿಸಂಕೀರ್ಣಗಳು ಸುತ್ತುವರಿದಿವೆ. 

`ರಕ್ಷಣೆ ಕೋರಿ ಓಡಿ ಬಂದ ನಮ್ಮನ್ನು ಪೊಲೀಸರು ಕತ್ತಲಾದ ಮೇಲೆ ಬೇರೆ ಕಡೆ ಸಾಗಿಸುತ್ತೇವೆ ಎಂದು ಹೇಳಿ ಒಂದು ಕಡೆ ಸೇರಿಸಿಬಿಟ್ಟಿದ್ದರು. ಎರಡು ವಸತಿಸಂಕೀರ್ಣಗಳ ನಡುವಿನ ಓಣಿಯಲ್ಲಿ ಸೇರಿದ್ದ ನಮ್ಮ ಮೇಲೆ ಕಟ್ಟಡಗಳ ಮೇಲಿನಿಂದ ಪೆಟ್ರೋಲ್-ಸೀಮೆ ಎಣ್ಣೆ ಸುರಿಯತೊಡಗಿದ್ದರು. ಆಗ ಪ್ರತ್ಯಕ್ಷವಾದ ಬೆಂಕಿ ಕೊಳ್ಳಿ ಹಿಡಿದುಕೊಂಡ ಗುಂಪು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದವರನ್ನೆಲ್ಲ ಬೆಂಕಿಗೆ ದೂಡಿತ್ತು. ಅವರೆಲ್ಲ ಮೊದಲೇ ಪ್ಲಾನ್ ಮಾಡಿದ್ದರು ಸಾಬ್...` ಎಂದು ಕುರೇಷಿಲಾಲ್ ಆ ಕರಾಳ ದಿನದ ಘಟನಾವಳಿಗಳನ್ನು ಗಲಭೆಯ ನಂತರ ವಿವರಿಸಿದ್ದರು.

ಎರಡನೆ ಕಾರಣ ಈಗ ಜೈಲು ಸೇರಿರುವ ಮಾಯಾಬೆನ್ ಕೊಡ್ನಾನಿಯ ಬೆಂಬಲ. ಸ್ಥಳೀಯ ಶಾಸಕರ ನಿಯಂತ್ರಣದಲ್ಲಿ ಪೊಲೀಸರು ಇರುವುದರಿಂದ ಅಪರಾಧಿಗಳಿಗೆ ರಕ್ಷಣೆ ನೀಡುವುದು ಮತ್ತು ಜನಬಲ-ಸಂಪನ್ಮೂಲ ಹೊಂದಿಸಿಕೊಳ್ಳುವುದು ಸುಲಭ. ಈ ಲೆಕ್ಕಾಚಾರ ಕೂಡಾ ಹುಸಿಯಾಗಲಿಲ್ಲ. ನರೋಡಾ ಪಾಟಿಯಾದ ಎದುರಿನ ರಸ್ತೆಯಲ್ಲಿಯೇ ರಾಜ್ಯ ಮೀಸಲು ಪಡೆಯ ಕೇಂದ್ರ ಕಚೇರಿ ಇದ್ದರೂ ಯಾವ ಪೊಲೀಸರೂ 2002ರ ಫೆಬ್ರವರಿ 28ರಂದು ಬೆಳಿಗ್ಗೆಯಿಂದ ಸಂಜೆ ವರೆಗೆ ರಕ್ಷಣೆಗೆ ಬಂದಿರಲಿಲ್ಲ. ರಕ್ಷಣೆ ಕೋರಿ ಓಡಿಬಂದ ಮಹಿಳೆಯರು ಮತ್ತು ಮಕ್ಕಳ ಮೇಲೆಯೇ ಪೊಲೀಸರು ಅಶ್ರುವಾಯು ಸಿಡಿಸಿದ್ದರು. ಖಾಕಿಧಾರಿ ಖಳನಾಯಕರಲ್ಲಿ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾಗಿರುವ ಸ್ಥಳೀಯ ಇನ್‌ಸ್ಪೆಕ್ಟರ್ ಎಂ.ಕೆ.ಮೈಸೂರ್‌ವಾಲಾ ಒಬ್ಬರು. ಇಷ್ಟೆ ಅಲ್ಲ, ನರೋಡಾಪಾಟಿಯಾದ ಅಗ್ನಿಕಾಂಡಕ್ಕೆ ಬಳಸಿದ್ದು ಎದುರಿನ ರಸ್ತೆಯಲ್ಲಿರುವ ರಾಜ್ಯ ರಸ್ತೆಸಾರಿಗೆಯ ದಾಸ್ತಾನು ಮಳಿಗೆಯಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್.

ಅಲ್ಲಿ ಬದುಕುಳಿದವರ ಬಾಯಿಯಿಂದಲೇ ಕೇಳದೆ ಇದ್ದರೆ ಎಲ್ಲರಂತೆ ತಾಯಿಯ ಹೊಟ್ಟೆಯಿಂದ ಬಂದ ಮನುಷ್ಯರು ಈ ರೀತಿ ವರ್ತಿಸಲು ಸಾಧ್ಯ ಎನ್ನುವುದನ್ನು ನಂಬುವುದು ಕಷ್ಟ. ಗುಜರಾತ್‌ನಲ್ಲಿ ಕೋಮುಗಲಭೆಯ ನಂತರ ಅಲ್ಲಿನ ನಿರಾಶ್ರಿತರು ಹೇಳಿದ್ದ ಕತೆಗಳನ್ನು ನಾನು ಕೂಡಾ ಆಗ ಸಂಪೂರ್ಣವಾಗಿ ನಂಬಿರಲಿಲ್ಲ. ಇಂತಹ ಘಟನೆಗಳು ನಡೆದಿದ್ದರೂ ಅದು ಕೋಮುದ್ವೇಷದಿಂದ ಕುರುಡರಾಗಿರುವ ಹುಚ್ಚರು ಮತ್ತು ಒಂದಷ್ಟು ಪುಂಡರು ಇದನ್ನು ನಡೆಸಿರಬಹುದೆಂದು ಬಹಳ ಮಂದಿಯಂತೆ ನಾನು ತಿಳಿದಿದ್ದೆ. ಆದರೆ ನಂತರದ ದಿನಗಳಲ್ಲಿ ಹೊರಬರತೊಡಗಿದ  ಸತ್ಯಸಂಗತಿಗಳು  ಬೆಚ್ಚಿಬೀಳಿಸುವಂತಹದ್ದು. 

28 ವರ್ಷಗಳ ಜೈಲುಶಿಕ್ಷೆಗೆ ಒಳಗಾಗಿರುವ ಮಾಯಾ ಕೊಡ್ನಾನಿ ಮಹಿಳೆ ಮತ್ತು ಸ್ಥಳೀಯ ಶಾಸಕಿ ಮಾತ್ರವಲ್ಲ, ಸ್ತ್ರೀರೋಗ ತಜ್ಞೆ ಕೂಡಾ. ದೇಶ ವಿಭಜನೆಯ ಕಾಲದಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿದ್ದ ಸಿಂಧಿ ಸಮುದಾಯಕ್ಕೆ  ಸೇರಿರುವ ಮಾಯಾ ಕೊಡ್ನಾನಿ ವಿದ್ಯಾರ್ಥಿದೆಸೆಯಿಂದಲೇ ಆರ್‌ಎಸ್‌ಎಸ್ ಜತೆ ಗುರುತಿಸಿಕೊಂಡವರು ಮತ್ತು ನರೇಂದ್ರ ಮೋದಿಯವರ ಜತೆಗಿದ್ದವರು.  ಈ ಪ್ರಕರಣದ ವಿಚಾರಣೆಯ ಪ್ರಾರಂಭದ ದಿನಗಳಲ್ಲಿ ಮಾಯಾ ಕೊಡ್ನಾನಿ ಹೆಸರು ಹೆಚ್ಚು ಕೇಳಿಬಂದಿರಲಿಲ್ಲ. ಆದರೆ ಈಕೆಯ ಬೆನ್ನುಹತ್ತಿದ ರಾಹುಲ್ ಶರ್ಮಾ ಎಂಬ ದಿಟ್ಟ ಪೊಲೀಸ್ ಅಧಿಕಾರಿ 2002ರ ಫೆಬ್ರವರಿ 28ರಂದು ಮಾಯಾ ಕೊಡ್ನಾನಿ ಮತ್ತು ಬಾಬು ಬಜರಂಗಿ ನರೋಡಾಪಾಟಿಯಾದ ಆಸುಪಾಸಿನಲ್ಲಿಯೇ ಇದ್ದರೆನ್ನುವ ಮಾಹಿತಿಯನ್ನು ಮೊಬೈಲ್ ಸಿಗ್ನಲ್‌ಗಳ ದಾಖಲೆಗಳಿಂದ ಸಂಗ್ರಹಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಮಾಹಿತಿಯನ್ನು ರಾಜ್ಯಸರ್ಕಾರಕ್ಕೆ ನೀಡದೆ ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರೆಂಬ ಕಾರಣಕ್ಕೆ ನರೇಂದ್ರಮೋದಿ ಸರ್ಕಾರ ಶರ್ಮಾ ಅವರನ್ನು ದುರ್ವರ್ತನೆಯ ಆರೋಪದಡಿ ಶಿಕ್ಷಿಸಲು ಪ್ರಯತ್ನಿಸಿತ್ತು. ಶರ್ಮಾ ಅವರ ಪ್ರಯತ್ನ ವಿಫಲವಾಗಲಿಲ್ಲ.

`ಗುಜರಾತ್ ಕೋಮುಗಲಭೆ ಗೋಧ್ರಾ ಹತ್ಯಾಕಾಂಡಕ್ಕೆ ಸಹಜವಾಗಿ ವ್ಯಕ್ತವಾದ ಪ್ರತಿಕ್ರಿಯೆ, ಇದರಲ್ಲಿ ಸರ್ಕಾರ ಇಲ್ಲವೇ ಪಕ್ಷದ ಪಾತ್ರ ಇಲ್ಲ` ಎಂದು ಕಳೆದ ಹತ್ತುವರ್ಷಗಳಲ್ಲಿ ಹೇಳುತ್ತಾ ಬಂದಿರುವ ಮುಖ್ಯಮಂತ್ರಿ ನರೇಂದ್ರಮೋದಿ ಅವರ ಸಮರ್ಥನೆಯನ್ನು ಕೂಡಾ ವಿಶೇಷ ನ್ಯಾಯಾಲಯ ಸುಳ್ಳೆಂದು ಸಾಬೀತುಮಾಡಿದೆ. 

ಗೋಧ್ರಾ ಹತ್ಯಾಕಾಂಡ ನಂತರ ಮುಸ್ಲಿಮರನ್ನೇ ಗುರಿಯಾಗಿಟ್ಟುಕೊಂಡು ನಡೆದ ಕೊಲೆ,ಸುಲಿಗೆ, ಅತ್ಯಾಚಾರಗಳೆಲ್ಲವೂ ಪೂರ್ವಯೋಜಿತ ಮತ್ತು ಅದರಲ್ಲಿ ತೊಡಗಿದ್ದ ಅಪರಾಧಿಗಳಿಗೆಲ್ಲ ಸರ್ಕಾರ ರಕ್ಷಣೆ ನೀಡುತ್ತ ಬಂದಿದೆ ಎಂಬ ಆರೋಪವನ್ನು ಮುಖ್ಯಮಂತ್ರಿ ನರೇಂದ್ರಮೋದಿ ನಿರಾಕರಿಸುವ ಸ್ಥಿತಿಯಲ್ಲಿ ಈಗ ಇಲ್ಲ. ಗಲಭೆಯ ಸಂದರ್ಭದಲ್ಲಿ ಕೇವಲ ಶಾಸಕಿಯಾಗಿದ್ದ ಮಾಯಾ ಕೊಡ್ನಾನಿಯನ್ನು  2007ರಲ್ಲಿ ಸಚಿವರನ್ನಾಗಿ ನೇಮಿಸಿದ್ದಾಗ ಗಲಭೆಯಲ್ಲಿ ಆಕೆಯ ಪಾತ್ರದ ಬಗ್ಗೆ ಮೋದಿ ಅವರಿಗೆ ತಿಳಿದಿರಲಿಲ್ಲ ಎಂದು ಹೇಳಿದರೂ ಯಾರೂ ನಂಬಲಾರರು.

ನರೋಡಾ ಪಾಟಿಯಾ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಇನ್ನೂ ಒಂದು ಕಾರಣಕ್ಕಾಗಿ ಮಹತ್ವಪೂರ್ಣವಾದುದು. ಸಾಮಾನ್ಯವಾಗಿ ಕೋಮುಗಲಭೆಗಳ ಪ್ರಕರಣದಲ್ಲಿ ಗೂಂಡಾಗಳು, ನಿರುದ್ಯೋಗಿಗಳು, ಬಡವರು, ನಿರ್ಗತಿಕರು, ಹಿಂದುಳಿದವರು, ದಲಿತರೇ ಅಪರಾಧಿಗಳೆನಿಸಿಕೊಂಡು ಶಿಕ್ಷೆ ಅನುಭವಿಸುತ್ತಾರೆ. ಹಿಂದೂ ಧರ್ಮದ ರಕ್ಷಣೆಗಾಗಿ ನಡೆದ ಉತ್ತರಪ್ರದೇಶದ ಬಾಬ್ರಿಮಸೀದಿ ಧ್ವಂಸದ ಕಾರ್ಯಾಚರಣೆಯಿಂದ ಹಿಡಿದು ಮಂಗಳೂರಿನ ಹೋಂಸ್ಟೇ ಮೇಲಿನ ದಾಳಿವರೆಗಿನ ಎಲ್ಲ ಪ್ರಕರಣಗಳಲ್ಲಿಯೂ ಇದು ಸತ್ಯ. ಇದನ್ನು ಯಾರಿಗಾದರೂ ಪರಾಮರ್ಶಿಸಿಕೊಳ್ಳಬೇಕೆಂದು ಅನಿಸಿದರೆ ಸ್ವಾತಂತ್ರ್ಯಾನಂತರ ದೇಶದಲ್ಲಿ ನಡೆದ ಕೋಮುಗಲಭೆಗಳಿಗೆ ಸಂಬಂಧಿಸಿದ  ಪ್ರಥಮ ಮಾಹಿತಿ ವರದಿ ಮತ್ತು ಆರೋಪಪಟ್ಟಿಗಳಲ್ಲಿ ಇರುವ ಹೆಸರುಗಳನ್ನು ಪರಿಶೀಲಿಸಬಹುದು. 

ಆರೋಪಿಗಳಾದವರಲ್ಲಿ ಶೇಕಡಾ 99ರಷ್ಟು ಮಂದಿ ಬರೀ `ಪಾತ್ರಧಾರಿಗಳು`. `ಸೂತ್ರಧಾರಿಗಳು` ತಮ್ಮ ಸುತ್ತ  ಭದ್ರತೆಗಾಗಿ ಪೊಲೀಸರನ್ನು ಇಟ್ಟುಕೊಂಡು ಸುರಕ್ಷಿತವಾಗಿರುತ್ತಾರೆ. `ಪಾತ್ರಧಾರಿಗಳು` ಜೈಲು ಸೇರುತ್ತಾರೆ, ಅವರ ಕುಟುಂಬಗಳು ಬೀದಿಗೆ ಬೀಳುತ್ತವೆ. ಇದು ಹಿಂದೂ ಮತ್ತು ಮುಸ್ಲಿಂ ಧರ್ಮಗಳೆರಡಕ್ಕೂ ಸೇರಿರುವ ಸತ್ಯ.ಆದರೆ ಇದೇ ಮೊದಲ ಬಾರಿಗೆ `ಸೂತ್ರದಾರರು` ಕೂಡಾ ಶಿಕ್ಷೆಗೊಳಗಾಗಿದ್ದಾರೆ. ಹಾಲಿ ಶಾಸಕಿ ಮಾಯಾ ಕೊಡ್ನಾನಿಗೆ ನ್ಯಾಯಾಲಯ ವಿಧಿಸಿರುವ  28 ವರ್ಷಗಳ ಸೆರೆವಾಸದ ಶಿಕ್ಷೆ `ಕಂಡವರ ಮಕ್ಕಳನ್ನು ಬಾಯಿಗೆ ತಳ್ಳುವ` ದುಷ್ಟ ಮನಸ್ಸುಗಳಿಗೆಲ್ಲ ಎಚ್ಚರಿಕೆಯ ಗಂಟೆಯಂತಿದೆ.

ಬಾಬ್ರಿ ಮಸೀದಿ ಧ್ವಂಸದ ನಂತರ ದೇಶದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕೋಮುದ್ವೇಷದ ಜ್ವಾಲೆ ನಿಯಂತ್ರಣಕ್ಕೆ ಬರಬಹುದೇನೋ ಎಂಬ ಸಣ್ಣ ಆಸೆಯ ಬೆಳಕು ಕೂಡಾ ಗುಜರಾತ್‌ವಿಶೇಷ ನ್ಯಾಯಾಲಯದ ತೀರ್ಪಿನಲ್ಲಿದೆ. ಹಿಂದೂ ಕೋಮುವಾದಕ್ಕೆ ವಿರುದ್ಧವಾಗಿ ಅಷ್ಟೇ ಅಪಾಯಕಾರಿಯಾಗಿ ಮುಸ್ಲಿಂ ಕೋಮುವಾದ ಇತ್ತೀಚೆಗೆ ಬೆಳೆಯುತ್ತಿದೆ. ಮುಸ್ಲಿಂ ಕೋಮುವಾದವನ್ನು ಬೆಳೆಸುವವರು ಕೂಡಾ ಇಲ್ಲಿಯ ವರೆಗೆ ಬಳಸುತ್ತಾ ಬಂದಿರುವುದು ಗುಜರಾತ್ ಮತ್ತಿತರ ಕಡೆಗಳಲ್ಲಿ ನಡೆದಿರುವ ಕೋಮುಗಲಭೆಗಳ ಅತಿರಂಜಿತ ವರದಿಗಳನ್ನು. ಇವರು ಮುಸ್ಲಿಂ ಯುವಕರ ತಲೆಕೆಡಿಸುವುದೇ `ಗುಜರಾತ್‌ನಲ್ಲಿ ಸರ್ಕಾರವೇ ಮುಂದೆ ನಿಂತು ಸಾವಿರಾರು ಮುಸ್ಲಿಮರ ಮಾರಣ ಹೋಮ ನಡೆಸಿದರೂ ನೊಂದವರಿಗೆ ಇಲ್ಲಿಯ ವರೆಗೆ ನ್ಯಾಯ ಸಿಕ್ಕಿಲ್ಲ. ನ್ಯಾಯಾಲಯಗಳಿಂದಲೂ ರಕ್ಷಣೆ ಸಿಗದೆ ಇದ್ದರೆ ಈ ದೇಶದ ಮೇಲೆ ಹೇಗೆ ಭರವಸೆ ಇಟ್ಟುಕೊಳ್ಳಲು ಸಾಧ್ಯ?` ಎನ್ನುವ ಪ್ರಶ್ನೆಯೊಂದಿಗೆ. ಇಂತಹದ್ದೇ ಪ್ರಶ್ನೆಯನ್ನು ನರೋಡಾ ಪಾಟಿಯಾದ ಇಸ್ಲಾಮಿಕ್ ಪರಿಹಾರ ಸಮಿತಿಯ ಕಾರ್ಯದರ್ಶಿ ನಜೀರ್‌ಖಾನ್ ಪಠಾಣ್ ಐದು ವರ್ಷಗಳ ಹಿಂದೆ ನನಗೂ ಕೇಳಿದ್ದರು. ಆಗ ನನ್ನಲ್ಲಿಯೂ ಉತ್ತರ ಇರಲಿಲ್ಲ, ಈಗ  ಕೈಯಲ್ಲಿರುವ ಗುಜರಾತ್ ವಿಶೇಷ ನ್ಯಾಯಾಲಯದ ತೀರ್ಪನ್ನು ತೋರಿಸಿ ಉತ್ತರಿಸ ಬಲ್ಲೆ.

 `ಇತ್ತೀಚೆಗೆ ಮದರಸಾಕ್ಕೆ ಬರುತ್ತಿರುವ ಹುಡುಗರೆಲ್ಲ ಮಾತೆತ್ತಿದರೆ ಸದ್ದಾಂಹುಸೇನ್, ಒಸಾಮ ಬಿನ್ ಲಾಡೆನ್ ಎನ್ನುತ್ತಿದ್ದಾರೆ..` ಎಂದು ವಿಷಾದದಿಂದ ಅದೇ ಪಠಾಣ್ ಹೇಳಿದ್ದರು. ಆ ಹುಡುಗರೆಲ್ಲ ಮಾತನಾಡಿಕೊಳ್ಳಲು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜ್ಯೊತ್ನಾ ಯಾಗ್ನಿಕ್‌ನಿಂದ ಹಿಡಿದು ನಿವೃತ್ತ ನ್ಯಾಯಮೂರ್ತಿಗಳಾದ ಜೆ.ಎಸ್.ವರ್ಮಾ, ಅರಿಜಿತ್ ಪಸಾಯತ್ ಮತ್ತು ಹೊಸಬೆಟ್ಟು ಸುರೇಶ್, ಪೊಲೀಸ್ ಅಧಿಕಾರಿಗಳಾದ ಆರ್.ಬಿ.ಶ್ರೀಕುಮಾರ್, ರಾಹುಲ್ ಶರ್ಮಾ ಮತ್ತು ಸಂಜೀವ್ ಭಟ್, ವಕೀಲರಾದ ಮುಕುಲ್ ಸಿನ್ಹಾ ಮತ್ತು ಗೋವಿಂದ್ ಪರಮಾರ್, ಸಾಮಾಜಿಕ ಕಾರ್ಯಕರ್ತರಾದ ತೀಸ್ತಾ ಸೆಟಲ್‌ವಾದ್, ಕಲಾವಿದೆ ಮಲ್ಲಿಕಾ ಸಾರಾಭಾಯ್, ಇಳಿವಯಸ್ಸಿನಲ್ಲಿಯೂ ಹಿಂದೂ-ಮುಸ್ಲಿಂ ಸೌಹಾರ್ದತೆಗಾಗಿ ಶ್ರಮಿಸುತ್ತಿರುವ  ಪ್ರೊ.ಬಂದೂಕ್‌ವಾಲಾ ಸೇರಿದಂತೆ ಎಷ್ಟೊಂದು ಹೆಸರುಗಳಿವೆಯಲ್ಲಾ ಎಂದು ಅವರಿಗೆ ಹೇಳಬೇಕೆಂದಿದ್ದೇನೆ.

ಊಹಾಪೋಹ ಮಹಾಪೂರದಲ್ಲಿ ಕೊಚ್ಚಿಹೋಗುವ ಮುನ್ನ... September 03, 2012


ಕಳೆದ ನಾಲ್ಕಾರು ದಿನಗಳಲ್ಲಿ ಮಾಧ್ಯಮಗಳ ಮೂಲಕ ಸೋರಿಬರುತ್ತಿರುವ ಸುದ್ದಿಗಳೆಲ್ಲವೂ ನಿಜವಾಗಿದ್ದರೆ ದೇಶದ ಭವಿಷ್ಯ ಭಯಾನಕವಾಗಿದೆ. ರಾಜ್ಯದ ಕೆಲವು ರಾಜಕಾರಣಿಗಳು ಮತ್ತು ಪತ್ರಕರ್ತರ ಹತ್ಯೆಗೆ ಸಂಚು ರೂಪಿಸಿರುವ ಆರೋಪದ ಮೇಲೆ ಹನ್ನೊಂದು ಮುಸ್ಲಿಮ್ ಯುವಕರನ್ನು ಬಂಧಿಸಿದ ನಂತರದ `ಸುದ್ದಿ ಸ್ಫೋಟ`ವನ್ನು ನಂಬಿದ ಯಾರಲ್ಲಿಯೂ ಹೊರಗೆ ಹೊರಟ ಮೇಲೆ ಸುರಕ್ಷಿತವಾಗಿ ಮನೆಗೆ ಮರಳುತ್ತೇನೆ ಎಂಬ ವಿಶ್ವಾಸ ಹುಟ್ಟಲಾರದು.

`...ರಾಜ್ಯದ ಮೆಟ್ರೊ ರೈಲ್ವೆ ನಿಲ್ದಾಣದಿಂದ ಹಿಡಿದು ಕೈಗಾ ಅಣುಸ್ಥಾವರದವರೆಗೆ, ಗಣೇಶೋತ್ಸವದಿಂದ ಹಿಡಿದು ಮೈಸೂರು ದಸರಾದ ವರೆಗೆ ಹಲವಾರು ಕಡೆ ಬಾಂಬು ಸ್ಫೋಟ ನಡೆಸುವ ಉದ್ದೇಶವನ್ನು ಈ ಶಂಕಿತ ಉಗ್ರರು ಹೊಂದಿದ್ದರು. ಎಲ್‌ಇಟಿ, ಹುಜಿ ಸೇರಿದಂತೆ ಹಲವು ಪ್ರಮುಖ ಉಗ್ರಗಾಮಿ ಸಂಘಟನೆಗಳ ಜತೆ ಇವರು ಸಂಪರ್ಕ ಹೊಂದಿದ್ದರು. ಉತ್ತರಪ್ರದೇಶ, ಮಹಾರಾಷ್ಟ್ರ, ಹೈದರಾಬಾದ್‌ಗಳಲ್ಲಿಯೂ ಇವರ ಜಾಲ ಹರಡಿದೆ, ಪಾಕಿಸ್ತಾನ ಮಾತ್ರವಲ್ಲ ಆಫ್ಘಾನಿಸ್ತಾನ ಮತ್ತು ಸೌದಿ ಅರೆಬಿಯಾ ದೇಶಗಳಿಗೂ ಇವರು ಭೇಟಿ ನೀಡಿದ್ದರು......` ಇತ್ಯಾದಿ ಊಹಾಪೋಹ ಆಧರಿತ ಸುದ್ದಿಗಳ ಮಹಾಪೂರವೇ ಹರಿದುಬರುತ್ತಿದೆ.

 ಇವುಗಳಲ್ಲಿ ಯಾವುದೂ ಪೊಲೀಸರ ಅಧಿಕೃತ ಹೇಳಿಕೆಗಳಲ್ಲ, ಸಾರ್ವಜನಿಕ ದಾಖಲೆಯಾಗಿರುವ ಪ್ರಥಮ ಮಾಹಿತಿ ವರದಿಯನ್ನೂ ಪೊಲೀಸರು ಹೊರಗೆ ಬಿಟ್ಟುಕೊಡುತ್ತಿಲ್ಲ.

ಹೀಗೆ ಹೇಳಿದ ಮಾತ್ರಕ್ಕೆ ಅವರು ಕಟ್ಟುನಿಟ್ಟಾಗಿ ತನಿಖೆಯ ರಹಸ್ಯಪಾಲನೆ ಮಾಡುತ್ತಿದ್ದಾರೆ ಎಂದು ಅರ್ಥವಲ್ಲ, ಪರಿಚಿತ ಪತ್ರಕರ್ತರಿಗೆ ಪೊಲೀಸ್ ಅಧಿಕಾರಿಗಳು ಮುಕ್ತವಾಗಿ `ತನಿಖೆಯ ವಿವರ`ಗಳನ್ನು ಸೋರಿಬಿಡುತ್ತಿದ್ದಾರೆ. ಒಬ್ಬರು ಹೇಳಿರುವುದನ್ನು ಇನ್ನೊಬ್ಬರು ನಿರಾಕರಿಸುತ್ತಿದ್ದಾರೆ. ಕೈಗಾ ಅಣುಸ್ಥಾವರ ಶಂಕಿತ ಉಗ್ರರ ಗುರಿಯಾಗಿತ್ತು ಎಂದು ಸುದ್ದಿಸಂಸ್ಥೆಯೊಂದು ಮಾಡಿರುವ ವರದಿಯನ್ನು ರಾಜ್ಯದ ಪೊಲೀಸ್ ಮಹಾನಿರ್ದೇಶಕರೇ ನಿರಾಕರಿಸುತ್ತಿದ್ದಾರೆ.

ಮೆಟ್ರೊ ನಿಲ್ದಾಣ ಸ್ಫೋಟ ಪ್ರಯತ್ನದ ಸುದ್ದಿಯನ್ನು ಕೂಡಾ ನಿರಾಕರಿಸಲಾಗಿದೆ. ಹಳೆಯ ಸುದ್ದಿಗಳನ್ನು ನಿರಾಕರಿಸಲಾಗುತ್ತಿದ್ದಂತೆಯೇ ಹೊಸ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಪೈಪೋಟಿಯ ಯುಗದಲ್ಲಿ ಸಿಕ್ಕ ಸುದ್ದಿಯನ್ನು ದೃಢೀಕರಿಸಲು ಬೇಕಾದ ಸಮಯಾವಕಾಶ ಪತ್ರಕರ್ತರಿಗೂ ಇಲ್ಲ. ಮಾಧ್ಯಮರಂಗದ ಈ ದೌರ್ಬಲ್ಯವನ್ನು ಪೊಲೀಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೋ ಏನೋ ಎಂದು ಅನುಮಾನ ಪಡುವ ರೀತಿಯಲ್ಲಿ `ಸುದ್ದಿಸ್ಫೋಟ` ನಡೆಯುತ್ತಿದೆ.

ಇವೆಲ್ಲವನ್ನೂ ನೋಡುತ್ತಿದ್ದಾಗ `ಕಾಶ್ಮೆರ್ ಟೈಮ್ಸ` ಪತ್ರಿಕೆಯ ದೆಹಲಿ ಬ್ಯೂರೊ ಮುಖ್ಯಸ್ಥರಾದ ಇಫ್ತಿಕರ್ ಗಿಲಾನಿ ಎಂಬ ಪತ್ರಕರ್ತ ನೆನಪಾಗುತ್ತಿದ್ದಾರೆ. ದೆಹಲಿಯಲ್ಲಿ ನಮ್ಮ ಪತ್ರಿಕೆಯ ಕಚೇರಿ ಇರುವ ಐಎನ್‌ಎಸ್ ಕಟ್ಟಡದಲ್ಲಿಯೇ ಗಿಲಾನಿ ಅವರ ಪತ್ರಿಕೆಯ ಕಚೇರಿಯೂ ಇದೆ. ಸ್ವಲ್ಪ ಕುಳ್ಳಗಿನ, ಸೌಮ್ಯ ಸ್ವಭಾವದ ಸುಮಾರು 35ರ ಆಜುಬಾಜಿನ ಈ ಗಿಲಾನಿ `ಪಾಕಿಸ್ತಾನದ ಜತೆ ಸಂಪರ್ಕ ಹೊಂದಿದ್ದ ಭಯೋತ್ಪಾದಕ`ನೆಂದು ಒಂದು ದಿನ ಇದ್ದಕ್ಕಿದ್ದಂತೆ ಟಿವಿಚಾನೆಲ್‌ಗಳು ಕಿರಿಚಾಡುತ್ತಿರುವಾಗ ಅವರನ್ನು ಮೂರು ವರ್ಷಗಳಿಂದ ಆಗಾಗ ನೋಡುತ್ತಿದ್ದ ನನಗೆ ಆಘಾತವಾಗಿತ್ತು.

ಇಫ್ತಿಕರ್ ಗಿಲಾನಿ ಅವರು ಕಾಶ್ಮೆರದ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಹಾ ಗಿಲಾನಿ ಅಳಿಯನೆಂದು ಹೆಚ್ಚಿನವರಿಗೆ ಗೊತ್ತಾಗಿದ್ದು ಕೂಡಾ ಅವರ ಬಂಧನದ ನಂತರ. 2002ರ ಜುಲೈ ಒಂಬತ್ತರಂದು ದೆಹಲಿಯ ಮಾಳವೀಯ ನಗರದ ಅವರ ಮನೆ ಮೇಲೆ ದಾಳಿ ನಡೆಸಿದ ವರಮಾನ ಇಲಾಖೆ ಅಧಿಕಾರಿಗಳ ಜತೆಯಲ್ಲಿ ಬಂದ ಐಬಿ ಅಧಿಕಾರಿಗಳು ಗಿಲಾನಿ ಅವರನ್ನು ಉಟ್ಟ ಬಟ್ಟೆಯಲ್ಲಿಯೇ ಬಂಧಿಸಿ ಕರೆದೊಯ್ದಿದ್ದರು.

`ಅಧಿಕೃತ ರಹಸ್ಯ ಕಾಯಿದೆ`ಯಡಿ ಬಂಧಿಸಲಾದ ಅವರ ಮೇಲೆ ಬೇಹುಗಾರಿಕೆ, ರಾಜದ್ರೋಹದ ಆರೋಪಗಳನ್ನು ಮಾತ್ರವಲ್ಲ ಅಬ್ದುಲ್ ಗನಿ ಲೋನ್ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಆರೋಪಗಳನ್ನೂ ಹೊರಿಸಲಾಗಿತ್ತು. ಅವರನ್ನು ಬಂಧಿಸಿದ ಎರಡು ತಿಂಗಳ ನಂತರ `ಅಶ್ಲೀಲ ಚಿತ್ರಗಳ ಪ್ರದರ್ಶನ ಮತ್ತು ಮಾರಾಟ ನಡೆಸುತ್ತಿದ್ದರು` ಎಂಬ ಹೊಸ ಆರೋಪ ಮಾಡಲಾಗಿತ್ತು.

 ಈ ಎಲ್ಲ ಆರೋಪಗಳಿಗೆ ಗುಪ್ತಚರ ಇಲಾಖೆ ಆಧಾರವಾಗಿ ಬಳಸಿದ್ದು ಅವರ ಕಂಪ್ಯೂಟರ್‌ನಿಂದ ವಶಪಡಿಸಿಕೊಂಡ `ಫ್ಯಾಕ್ಟ್‌ಶೀಟ್ ಆನ್ ಇಂಡಿಯನ್ ಫೋರ್ಸಸ್ ಇನ್ ಇಂಡಿಯಾ ಹೆಲ್ಡ್ ಕಾಶ್ಮೆರ್` ಎಂಬ ಹೆಸರಿನ ಫೈಲ್‌ನಲ್ಲಿದ್ದ ಐದು ಪುಟಗಳ ದಾಖಲೆ. ಕಾಶ್ಮೆರದ ಉತ್ತರ ಕಮಾಂಡ್‌ನ ವ್ಯಾಪ್ತಿಯಲ್ಲಿರುವ ಭಾರತೀಯ ಸೇನೆ ಮತ್ತು ಅರೆಸೇನಾಪಡೆಯ ಸಾಮರ್ಥ್ಯದ ಬಗ್ಗೆ ಅದರಲ್ಲಿ ವಿವರಗಳಿದ್ದವು.

ಈ ಬಗ್ಗೆ ಸೇನಾ ಗುಪ್ತಚರ ಮಹಾನಿರ್ದೇಶಕರ (ಡಿಜಿಎಂಐ) ಅಭಿಪ್ರಾಯ ಪಡೆಯಲಾಗಿತ್ತು. ` ..ಈ ಮಾಹಿತಿ ದೇಶದ ಭದ್ರತೆಗೆ ಅಪಾಯಕಾರಿ ಹಾಗೂ ಜಮ್ಮು ಮತ್ತು ಕಾಶ್ಮೆರದಲ್ಲಿನ ಕಾರ್ಯಾಚರಣೆಯ ಮೇಲೆ ಗಂಭೀರ ಪರಿಣಾಮ ಉಂಟುಮಾಡಲಿದೆ..`ಎಂದು ಡಿಜಿಎಂಐ ಹೇಳಿತ್ತು. ಇಂಟಲಿಜೆನ್ಸ್ ಬ್ಯೂರೋ (ಐಬಿ) ಆಗಲೇ ಗಿಲಾನಿ ಅಪರಾಧಿ ಎಂದು ತೀರ್ಮಾನಿಸಿಯಾಗಿತ್ತು.

ಏಳು ತಿಂಗಳ ನಂತರ ಆರೋಪಮುಕ್ತರಾಗಿ ಹೊರಬಂದ ಗಿಲಾನಿ ತಿಹಾರ್ ಜೈಲಿನೊಳಗೆ ಪ್ರವೇಶಿಸಿದ ಮೊದಲ ದಿನದ ಅನುಭವವನ್ನು  `ಮೈ ಡೇಸ್ ಇನ್ ಪ್ರಿಸನ್` ಎಂಬ ತಮ್ಮ ಪುಸ್ತಕದಲ್ಲಿ ಹೀಗೆ ಬರೆದುಕೊಂಡಿದ್ದಾರೆ:

`.....ತಿಹಾರ್ ಜೈಲು ಪ್ರವೇಶಿಸುತ್ತಿದ್ದಂತೆಯೇ ಅಲ್ಲಿದ್ದ ಒಬ್ಬ ಅಧಿಕಾರಿ ತನ್ನನ್ನು ಹಿಂಬಾಲಿಸುವಂತೆ ನನಗೆ ಸೂಚನೆ ನೀಡಿದರು. ಅಲ್ಲಿರುವ ಮೇಜಿನ ಹಿಂದೆ ಕಿಶನ್ ಎನ್ನುವ ಅಧಿಕಾರಿ ಕೂತಿದ್ದರು,ಅವರ ಸುತ್ತ 10-12 ಮಂದಿ ನೆರೆದಿದ್ದರು. ಅವರಲ್ಲಿ ಕೆಲವರು ಜೈಲು ಸಿಬ್ಬಂದಿ, ಉಳಿದವರು ಕೈದಿಗಳು.

ನನ್ನ ಹೆಸರೇನೆಂದು ಕಿಶನ್ ಕೇಳಿದರು. ನಾನು ಉತ್ತರಿಸುವಷ್ಟರಲ್ಲಿ ಅಲ್ಲಿದ್ದ ಜೈಲು ಸಿಬ್ಬಂದಿಯೊಬ್ಬ ನನ್ನ ಕೆನ್ನೆಗೆ ಬೀಸಿ ಹೊಡೆದ. ತಕ್ಷಣ ಅಲ್ಲಿದ್ದವರೆಲ್ಲರೂ ನನ್ನ ಮೇಲೆ ಎರಗಿದರು, ಹೊಟ್ಟೆ,ಬೆನ್ನು, ತಲೆ ಸೇರಿದಂತೆ ಸಿಕ್ಕಸಿಕ್ಕಲ್ಲಿ ಹೊಡೆದದ್ದು ಮಾತ್ರವಲ್ಲ ನನ್ನ ಕೂದಲನ್ನು ಹಿಡಿದು ಜಗ್ಗಿ ತಲೆಯನ್ನು ಮೇಜಿಗೆ ಅಪ್ಪಳಿಸಿದರು. ನನ್ನ ಬಾಯಿ,ಕಿವಿ, ಮೂಗುಗಳಿಂದ ರಕ್ತ ಸುರಿಯುತ್ತಿತ್ತು.

`ಸಾಲಾ, ಗದ್ದಾರ್, ಪಾಕಿಸ್ತಾನಿ ಏಜಂಟ್, ನಿನ್ನಂತಹವರು ಬದುಕಬಾರದು, ನೇರವಾಗಿ ಗಲ್ಲಿಗೇರಿಸಬೇಕು..` ಎಂದು ಬೈಯ್ಯುತ್ತಿರುವುದು ಪ್ರಜ್ಞೆ ತಪ್ಪುವವರೆಗೆ ಕೇಳುತ್ತಲೇ ಇತ್ತು. ಪ್ರಜ್ಞೆ ಬಂದ ಮೇಲೆ ನನ್ನ ಅಂಗಿಯಿಂದ ಟಾಯ್ಲೆಟ್ ಶುಚಿ ಮಾಡುವಂತೆ ತಿಳಿಸಿ ಮೂರು ದಿನಗಳ ಕಾಲ ಅದೇ ಅಂಗಿಯನ್ನು ತೊಡುವಂತೆ ಮಾಡಿದರು......`

ಯಾವ ಉದ್ದೇಶದಿಂದ ಗಿಲಾನಿ ಅವರನ್ನು ಬಂಧಿಸಿದ್ದರೆಂಬುದು ಈಗಲೂ ನಿಗೂಢವಾಗಿಯೇ ಉಳಿದಿದೆ. ಬಂಧಿಸಿದ ಮರುಕ್ಷಣವೇ ಐಬಿ ಅಧಿಕಾರಿಗಳಿಗೆ ತಮ್ಮ ತಪ್ಪಿನ ಅರಿವಾಗಿರಬಹುದು.

ಮಾಡಿರುವ ಆರೋಪವನ್ನು ಸಮರ್ಥಿಸಿಕೊಳ್ಳುವ ಸಾಕ್ಷ್ಯಾಧಾರಗಳು ಅವರಲ್ಲಿ ಇರಲಿಲ್ಲ. ಆಗ ಗೃಹಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ಅವರು ಹದಿನೇಳು ಬಾರಿ ಗಿಲಾನಿ ಸಂಬಂಧಿತ ಕಡತವನ್ನು ತರಿಸಿಕೊಂಡು ಪರಿಶೀಲಿಸಿದ್ದಾರೆ. ಪ್ರತಿಬಾರಿ ಸೂಕ್ತ ಸಾಕ್ಷ್ಯಾಧಾರಗಳನ್ನು ಕೇಳಿದ್ದರು. ಮಾಡಿರುವ ತಪ್ಪನ್ನು ಒಪ್ಪಿಕೊಳ್ಳುವ ಬದಲಿಗೆ ಐಬಿ ಅಧಿಕಾರಿಗಳು ಒಂದಷ್ಟು ಸುಳ್ಳುಕತೆಗಳನ್ನು ಕಟ್ಟಿ ಮಾಧ್ಯಮಗಳಲ್ಲಿ ತೇಲಿ ಬಿಡತೊಡಗಿದ್ದರು.

ಮಾಧ್ಯಮಗಳು ಕೂಡಾ `ನಂಬಲರ್ಹ ಮೂಲಗಳು` ಕೊಟ್ಟ ಮಾಹಿತಿಯನ್ನು ಪರಾಮರ್ಶಿಸಲು ಹೋಗದೆ ಪ್ರಕಟಣೆ-ಪ್ರಸಾರ ನಡೆಸಿದವು. `ಹಿಂದಿ ಟಿವಿ ಚಾನೆಲ್‌ನ ಒಬ್ಬ ವರದಿಗಾರ ತಮ್ಮ ಮನೆಯ ಮುಂಭಾಗದಲ್ಲಿ ತನ್ನ ಹೆಸರಿದ್ದ ಅಂಚೆಪೆಟ್ಟಿಗೆಯ ಮುಂದೆ ನಿಂತು `ಗಿಲಾನಿ ಪರಾರಿಯಾಗಿದ್ದಾರೆ` ಎಂದು ಹೇಳುತ್ತಿರುವಾಗ ಮನೆಯೊಳಗೆ ಐಬಿ ಅಧಿಕಾರಿಗಳು ತಮ್ಮನ್ನು ಕೂರಿಸಿಕೊಂಡು ವಿಚಾರಣೆ ನಡೆಸುತ್ತಿದ್ದುದನ್ನು ಗಿಲಾನಿ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ದೆಹಲಿಯ ಪ್ರಸಿದ್ಧ ಇಂಗ್ಲಿಷ್ ಪತ್ರಿಕೆಯ ಪತ್ರಕರ್ತೆಯೊಬ್ಬರು `ನಾನು ಐಎಸ್‌ಐ ಏಜಂಟ್ ಎಂದು ಗಿಲಾನಿ ತಪ್ಪೊಪ್ಪಿಕೊಂಡಿದ್ದಾರೆ` ಎಂದು ಐಬಿ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದರು. ಇದರಿಂದ ನೊಂದ ಗಿಲಾನಿ ಪತ್ನಿ ಅನಿಸಾ ಅವರು ಆ ಪತ್ರಿಕೆಯ ಮಾಲೀಕರನ್ನು ಸಂಪರ್ಕಿಸಿ ಆಗಿರುವ ಅನಾಹುತವನ್ನು ತಿಳಿಸಿದ್ದರು. ಮರುದಿನ ಪತ್ರಿಕೆ ಕ್ಷಮಾಪಣೆ ಕೇಳಿತ್ತು.

ನಿಜಾಂಶ ಏನೆಂದರೆ ಗಿಲಾನಿ ಅವರ ಮೇಲೆ `ಅಧಿಕೃತ ರಹಸ್ಯ ಕಾಯ್ದೆ`ಯ ಉಲ್ಲಂಘನೆಯ ಆರೋಪಕ್ಕೆ ಕಾರಣವಾದ ಅವರದ್ದೇ ಕಂಪ್ಯೂಟರ್‌ನಿಂದ ವಶಪಡಿಸಿಕೊಂಡ ದಾಖಲೆ ಭಾರತ ಸರ್ಕಾರದ್ದಾಗಿರದೆ, ಪಾಕಿಸ್ತಾನದ್ದಾಗಿತ್ತು. ಡಾ.ನಾಸಿರ್ ಕಮಾಲ್ ಎಂಬ ಪಾಕಿಸ್ತಾನಿ ರಕ್ಷಣಾ ತಜ್ಞರು ಬರೆದ ಈ ಲೇಖನವನ್ನು ಇಸ್ಲಾಮಾಬಾದ್‌ನ ರಕ್ಷಣಾ ಅಧ್ಯಯನ ಸಂಸ್ಥೆ ಪ್ರಕಟಿಸಿತ್ತು. ಅದನ್ನು ಗಿಲಾನಿ ತಮ್ಮ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿ ಇಟ್ಟುಕೊಂಡಿದ್ದರು.

ಇದು ಆಗಲೇ ರಕ್ಷಣಾ ಖಾತೆಯ ಗ್ರಂಥಾಲಯಗಳಲ್ಲಿ ಲಭ್ಯ ಇತ್ತು. ಪಾಕಿಸ್ತಾನಿಗಳು ಜಮ್ಮು ಮತ್ತು ಕಾಶ್ಮೆರವನ್ನು ಹಾಗೆಂದು ಕರೆಯದೆ `ಇಂಡಿಯನ್ ಹೆಲ್ಡ್ ಕಾಶ್ಮೆರ್` ಎಂದೇ ಈಗಲೂ ಕರೆಯುವುದು. (ಅವರು `ಆಜಾದಿ ಕಾಶ್ಮೆರ` ಎಂದು ಹೇಳುತ್ತಿರುವ ಪ್ರದೇಶವನ್ನು ನಾವು `ಪಾಕಿಸ್ತಾನ ಆಕ್ರಮಿತ ಕಾಶ್ಮೆರ` ಎಂದು ಕರೆಯುತ್ತೇವೆಯಲ್ಲ ಹಾಗೆ). ಇದರ ಅರಿವಿದ್ದ ಐಬಿ ತಾನು ವಶಪಡಿಸಿಕೊಂಡ ದಾಖಲೆಯಲ್ಲಿ `ಇಂಡಿಯನ್‌ಹೆಲ್ಡ್ ಕಾಶ್ಮೆರ` ಎಂದು ಇದ್ದ ಕಡೆಗಳೆಲ್ಲ `ಜಮ್ಮು ಮತ್ತು ಕಾಶ್ಮೆರ` ಎಂದು ತಿದ್ದಿತ್ತು.

ಆಗಲೇ ಡಿಜಿಎಂಐಗೆ ತಪ್ಪಿನ ಅರಿವಾಗಿ ತಾನು ಮೊದಲು ನೀಡಿದ್ದ ಅಭಿಪ್ರಾಯವನ್ನು ವಾಪಸು ಪಡೆದು `ಪ್ರಾರಂಭದಲ್ಲಿ ನಾವು ನೀಡಿದ್ದ ಅಭಿಪ್ರಾಯ ಅತಿರಂಜಿತವಾಗಿತ್ತು. ಈ ದಾಖಲೆ ಎಲ್ಲ ಕಡೆ ಸುಲಭದಲ್ಲಿ ಲಭ್ಯ ಇರುವುದರಿಂದ ಅದಕ್ಕೆ ಭದ್ರತಾ ಮೌಲ್ಯ ಇಲ್ಲ` ಎಂಬ ಪರಿಷ್ಕೃತ ಅಭಿಪ್ರಾಯ ನೀಡಿತ್ತು.

ಅಷ್ಟು ಹೊತ್ತಿಗೆ ಪ್ರಾರಂಭದಿಂದಲೂ ಈ ಪ್ರಕರಣದಲ್ಲಿ ಗಿಲಾನಿ ಬಗ್ಗೆ ಅನುಕಂಪ ಹೊಂದಿದ್ದ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಪ್ರಧಾನಿ ಅಟಲಬಿಹಾರಿ ವಾಜಪೇಯಿಯವರಿಗೆ ಕೂಡಾ ಐಬಿ ಎಡವಿರುವುದನ್ನು ಮನವರಿಕೆ ಮಾಡಿಕೊಟ್ಟಿದ್ದರು.

ಕೊನೆಗೆ ಏಳು ತಿಂಗಳ ನಂತರ ಇಫ್ತಿಕರ್ ಗಿಲಾನಿ ಅವರನ್ನು 2003 ಜೂನ್ 13ರಂದು ಬಿಡುಗಡೆ ಮಾಡಲಾಯಿತು. ಆದರೆ ಯಾರದೋ ಒತ್ತಡಕ್ಕೆ ಸಿಕ್ಕಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸಿದ ಅಧಿಕಾರಿಗಳ ಬಗ್ಗೆ ಯಾವ ವಿಚಾರಣೆಯೂ ನಡೆಯಲಿಲ್ಲ.

ಭಯೋತ್ಪಾದಕರು ಮತ್ತು ನಕ್ಸಲೀಯರ ಜತೆ ಸಂಪರ್ಕ ಕಲ್ಪಿಸಿ ಪತ್ರಕರ್ತರನ್ನು ಬಂಧಿಸಿ ಹಿಂಸಿಸುವ ಕಾರ್ಯ ದೇಶದಾದ್ಯಂತ ಈಗಲೂ ಮುಂದುವರಿದಿದೆ. ಕಳೆದ ಫೆಬ್ರವರಿಯಲ್ಲಿ ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿಯ ಸಿಬ್ಬಂದಿಯ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇರಾನಿ ವಾರ್ತಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಮ್ಮದ್ ಕಾಜ್ಮಿ ಎಂಬ ಪತ್ರಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.

ಐದು ತಿಂಗಳುಗಳಾದರೂ ಅವರು ಬಿಡುಗಡೆಯಾಗಿಲ್ಲ. ಬೆಂಗಳೂರು ಬಾಂಬು ಸ್ಫೋಟಕ್ಕೆ ಸಂಬಂಧಿಸಿದ ಇಬ್ಬರು ಸಾಕ್ಷಿಗಳ ಜತೆ ಮಾತನಾಡಿದ್ದರು ಎನ್ನುವ ಕಾರಣಕ್ಕೆ ದೆಹಲಿಯ ವಾರಪತ್ರಿಕೆಯ ಕೇರಳ ವರದಿಗಾರರಾಗಿದ್ದ ಶಾಹಿನಾ ಎಂಬುವವರ ಮೇಲೆ ಕರ್ನಾಟಕ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.

ಇಫ್ತಿಕರ್ ಗಿಲಾನಿ ಅವರು ನಿರಪರಾಧಿಯಾಗಿ ಹೊರಬಂದ ಮಾತ್ರಕ್ಕೆ ಭಯೋತ್ಪಾದನೆ ಸಂಬಂಧಿ ಆರೋಪಿಗಳೆಲ್ಲರೂ ನಿರಪರಾಧಿಗಳಿರಲಾರರು. ಆದರೆ ಮಾಡಿದ ಆರೋಪಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಲಾಗದ ನಮ್ಮ ಪೊಲೀಸ್ ತನಿಖಾ ವ್ಯವಸ್ಥೆಯಲ್ಲಿನ ದೋಷಗಳಿಂದಾಗಿ ನಿರಪರಾಧಿಗಳು ಅಪರಾಧಿಯಾಗುತ್ತಿರುವುದು ಮಾತ್ರವಲ್ಲ, ಅಪರಾಧಿ ನಿರಪರಾಧಿ ಎಂದು ಅನಿಸಿಕೊಂಡು ತಪ್ಪಿಸಿಕೊಳ್ಳುವ ಸಾಧ್ಯತೆಗಳೂ ಇವೆ.

ಮೊದಲನೆಯದರಷ್ಟೇ ಎರಡನೆಯದೂ ಅಪಾಯಕಾರಿ. ಆರೋಪಗಳನ್ನು ಹೊರಿಸಲು ಒಂದೆರಡು ನಾಲಿಗೆ, ಒಂದಷ್ಟು ಕಿವಿಗಳಷ್ಟೇ ಸಾಕು. ಆದರೆ ಅದನ್ನು ಸಾಬೀತುಪಡಿಸಲು ಅಷ್ಟೇ ಸಾಲದು, ಸತ್ಯದ ನೆರವು ಕೂಡಾ ಬೇಕಾಗುತ್ತದೆ.

Monday, August 27, 2012

ನ್ಯಾಯಾಂಗದ ಗಾಜಿನ ಮನೆಗೆ ಕಲ್ಲು ಹೊಡೆದ ಮಮತಾ August 27, 2012

ನ್ಯಾಯಾಂಗದ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ಕಲ್ಲೆಸೆಯಲು ಹೊರಟವರು ಮೊದಲು ಗಾಜಿನ ಮನೆಯಲ್ಲಿ ಕೂತಿರುವ ನ್ಯಾಯಾಂಗದ ಕಡೆ  ಕಣ್ಣುಹಾಯಿಸಬೇಕು.  ಮಮತಾ ಬ್ಯಾನರ್ಜಿ ಅವರಿಗೆ ಈ ರೀತಿಯ ಆರೋಪ ಹೊರಿಸುವುದಕ್ಕೆ ವೈಯಕ್ತಿಕವಾದ ಕಾರಣಗಳು ಇದ್ದಿರಬಹುದು.

ಆದರೆ ಅವರು ಹೇಳಿರುವುದು ಸಂಪೂರ್ಣ ಸುಳ್ಳು ಎಂದು ಎದೆಮುಟ್ಟಿ ಹೇಳುವ ಧೈರ್ಯ ವಕೀಲರು, ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನೊಳಗೊಂಡ ನ್ಯಾಯಾಂಗ ವ್ಯವಸ್ಥೆಗೆ ಇದೆಯೇ?

2007ರಲ್ಲಿ `ಟ್ರಾನ್ಸಪರೆನ್ಸಿ ಇಂಟರ್‌ನ್ಯಾಷನಲ್` ಮತ್ತು ದೆಹಲಿ ಮೂಲದ ಸಂಶೋಧನಾ ಸಂಸ್ಥೆ `ಮಾಧ್ಯಮ ಅಧ್ಯಯನ ಕೇಂದ್ರ` ಭಾರತದಲ್ಲಿನ ಭ್ರಷ್ಟಾಚಾರದ ಬಗ್ಗೆ ಅಧ್ಯಯನ ನಡೆಸಿತ್ತು.  ಸಾರ್ವಜನಿಕ ಸೇವೆ ನೀಡುವ ಮತ್ತು ಪಡೆಯುವ ವ್ಯಕ್ತಿಗಳ ಜತೆಗಿನ ಸಂದರ್ಶನವೂ ಸೇರಿದಂತೆ ಇಪ್ಪತ್ತು ರಾಜ್ಯಗಳ 14,405 ವ್ಯಕ್ತಿಗಳ ಪ್ರತಿಕ್ರಿಯೆ ಪಡೆದು ಈ ಎರಡು ಸಂಸ್ಥೆಗಳು ಸಮೀಕ್ಷಾ ವರದಿಯೊಂದನ್ನು ನೀಡಿದ್ದವು.

`ಹನ್ನೊಂದು ಬಗೆಯ ಸಾರ್ವಜನಿಕ ಸೇವೆಗಳನ್ನು ಪಡೆಯಲು ಭಾರತೀಯರು ವರ್ಷಕ್ಕೆ 21,068 ಕೋಟಿ ರೂಪಾಯಿಗಳನ್ನು ಲಂಚದ ರೂಪದಲ್ಲಿ ನೀಡುತ್ತಿದ್ದಾರೆ. ಇದರಲ್ಲಿ ನ್ಯಾಯಾಂಗದ ಪಾಲು 2,630 ಕೋಟಿ ರೂಪಾಯಿ.

  ಶೇಕಡಾ 59ರಷ್ಟು ವಕೀಲರು, ಶೇಕಡಾ 30ರಷ್ಟು ನ್ಯಾಯಾಲಯದ ಅಧಿಕಾರಿಗಳು ಮತ್ತು ಶೇಕಡಾ ಐದರಷ್ಟು ನ್ಯಾಯಮೂರ್ತಿಗಳು ಲಂಚಪಡೆಯುತ್ತಿದ್ದಾರೆ` ಎಂದು ಆ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಸ್.ಪಿ.ಭರೂಚಾ ಅವರು ಹತ್ತುವರ್ಷಗಳ ಹಿಂದೆಯೇ ನ್ಯಾಯಾಂಗ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. `

ಶೇಕಡಾ 20ರಷ್ಟು ನ್ಯಾಯಮೂರ್ತಿಗಳು ಭ್ರಷ್ಟರು` ಎಂಬ ಅವರ ಆರೋಪ ಸಾರ್ವಜನಿಕವಾಗಿ ಸಂಚಲನವನ್ನುಂಟುಮಾಡಿತ್ತು. ಈ ಹತ್ತು ವರ್ಷಗಳ ಅವಧಿಯಲ್ಲಿ ನ್ಯಾಯಾಂಗದ ಭ್ರಷ್ಟಾಚಾರದ ಮಟ್ಟ ಕಡಿಮೆಯಾಗಿದೆ ಎಂದು ಹೇಳಲು ಆಧಾರಗಳು ಸಿಗುತ್ತಿಲ್ಲ, ಹೆಚ್ಚಾಗಿದೆ ಎಂದು ಅನುಮಾನ ಪಡಲು ಕಾರಣಗಳಿವೆ.

ನ್ಯಾ.ಭರೂಚಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ ಆರುತಿಂಗಳ ನಂತರ ಪಂಜಾಬ್ ಹೈಕೋರ್ಟ್‌ನ ನ್ಯಾಯಮೂರ್ತಿಗಳು ಶಾಮೀಲಾಗಿದ್ದ ಕೋಟ್ಯಂತರ ರೂಪಾಯಿ ಲಂಚದ ಆರೋಪದ ಲೋಕಸೇವಾ ಹಗರಣ ಬಯಲಾಯಿತು. ಪ್ರಶ್ನೆಪತ್ರಿಕೆಯ ಸೋರಿಕೆಗೆ ಅವಕಾಶ ನೀಡಿರುವುದು ಮಾತ್ರವಲ್ಲ ಉತ್ತರಪತ್ರಿಕೆಗಳನ್ನು ತಿದ್ದಲು ನ್ಯಾಯಮೂರ್ತಿಗಳು ಅವಕಾಶ ನೀಡಿದ್ದರೆಂದು ರಾಜ್ಯ ಜಾಗೃತದಳ ಆರೋಪ ಮಾಡಿತ್ತು.

ಭೂ ಮಾಫಿಯಾಗಳಿಂದ ಹಣ-ಹೆಂಡ-ಹೆಣ್ಣುಗಳನ್ನು ಪಡೆದು ತೀರ್ಪು ನೀಡಿದ್ದಾರೆಂಬ ಆರೋಪದ ಮೇಲೆ ಸಿಬಿಐ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಶಮಿತ್ ಮುಖರ್ಜಿ ಅವರನ್ನು ಬಂಧಿಸಿತ್ತು. ನ್ಯಾಯಾಲಯದ ಸಿಬ್ಬಂದಿಯ ಭವಿಷ್ಯನಿಧಿ ಹಣವನ್ನು ದುರ್ಬಳಕೆ ಮಾಡಿದ್ದಾರೆಂದು ಸುಪ್ರೀಂಕೋರ್ಟ್‌ನಿಂದ ಹಿಡಿದು ಕೆಳ ನ್ಯಾಯಾಲಯದವರೆಗಿನ 34 ನ್ಯಾಯಮೂರ್ತಿಗಳ ವಿರುದ್ಧ ಆರೋಪ ಕೇಳಿಬಂದಿತ್ತು.

ಅಹ್ಮದಾಬಾದ್‌ನ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ 40,000 ರೂಪಾಯಿ ಹಣ ಪಡೆದು ರಾಷ್ಟ್ರಪತಿಗಳ ವಿರುದ್ಧವೇ ಬಂಧನದ ವಾರೆಂಟ್ ಹೊರಡಿಸಿರುವುದನ್ನು ಒಂದು ಟಿವಿಚಾನೆಲ್ ಕುಟುಕುಕಾರ್ಯಾಚರಣೆ ಮೂಲಕ ಬಯಲಿಗೆಳೆದಿತ್ತು. ಅಕ್ರಮ ಗಣಿಗಾರಿಕೆಯ ಆರೋಪ ಹೊತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರಿಗೆ ಸಂಬಂಧಿಸಿದ ಜಾಮೀನು ನೀಡಿಕೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಆಂಧ್ರಪ್ರದೇಶದ ನಾಲ್ವರು ನ್ಯಾಯಾಧೀಶರು ಕಂಬಿ ಎಣಿಸುತ್ತಿರುವುದು ಇತ್ತೀಚಿನ ಉದಾಹರಣೆ.

ಭ್ರಷ್ಟಾಚಾರದ ವಿಷಯದಲ್ಲಿ ಈಗಲೂ ನ್ಯಾಯಾಂಗವನ್ನು ಕಾರ್ಯಾಂಗ ಮತ್ತು ಶಾಸಕಾಂಗಗಳ ಸಮಕ್ಕೆ ಹೋಲಿಸಲಾಗದು. ನಮ್ಮ ಬಹುಸಂಖ್ಯಾತ ನ್ಯಾಯಮೂರ್ತಿಗಳು ವೃತ್ತಿನಿಷ್ಠೆಯಿಂದ ಕಾರ್ಯನಿರ್ವಹಿಸುವ ಪ್ರಾಮಾಣಿಕರೆನ್ನುವುದು ನಿಜ. ಆದರೆ ಕೆಳನ್ಯಾಯಾಲಯಗಳಿಗೆ ಸೀಮಿತವಾಗಿದ್ದ ಭ್ರಷ್ಟಾಚಾರದ ವೈರಸ್ ನಿಧಾನವಾಗಿ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗಳಿಗೂ ಪ್ರವೇಶಿಸಿದೆ.

ಸಂವಿಧಾನದ ಉಳಿದೆರಡು ಅಂಗಗಳ ರೀತಿಯಲ್ಲಿ ನ್ಯಾಯಾಂಗಕ್ಕೆ ತಗಲಿರುವ ರೋಗವನ್ನು ಸುಲಭದಲ್ಲಿ ನಿಯಂತ್ರಿಸುವುದು ಕಷ್ಟ. ಇದಕ್ಕೆ ಮೊದಲನೆಯ ಕಾರಣ- ನ್ಯಾಯಾಂಗದ ಭ್ರಷ್ಟತೆಯ ಬಗ್ಗೆ ಮಾತನಾಡುವ ನೈತಿಕತೆಯನ್ನು ಕಾರ್ಯಾಂಗ ಮತ್ತು ಶಾಸಕಾಂಗ ಮಾತ್ರವಲ್ಲ ಮಾಧ್ಯಮರಂಗವೂ ಉಳಿಸಿಕೊಳ್ಳದೆ ಇರುವುದು. ಎರಡನೆಯ ಕಾರಣ-ಉಳಿದ ಮೂರು ಅಂಗಗಳನ್ನೂ ಮೀರಿದ ವಿಶೇಷ ರಕ್ಷಣೆ (ಇಮ್ಯುನಿಟಿ)ಯನ್ನು ನ್ಯಾಯಾಂಗ ಪಡೆದಿರುವುದು.

ಭಾರತದಲ್ಲಿ ಈಗಲೂ ನ್ಯಾಯಾಂಗ ಎನ್ನುವುದು ಒಂದು `ಪವಿತ್ರಗೋವು`. ಬೀದಿಯಲ್ಲಿ ನಿಂತು ಅಧಿಕಾರಿಗಳು ಮತ್ತು ರಾಜಕಾರಣಿಗಳ ಬಗ್ಗೆ ಆಡುವ ಮಾತುಗಳನ್ನು ನ್ಯಾಯಮೂರ್ತಿಗಳ ಬಗ್ಗೆ ಮಾತನಾಡಲಾಗದು. ನ್ಯಾಯಾಂಗ ನಿಂದನೆಯ ಕತ್ತಿ ತಲೆ ಮೇಲೆ ಸದಾ ತೂಗುತ್ತಿರುತ್ತದೆ.

ಬಹುಪದರಗಳ ಈ `ಆತ್ಮರಕ್ಷಣೆ`ಯ ವ್ಯವಸ್ಥೆಯೇ ನ್ಯಾಯಾಂಗದ ಆರೋಗ್ಯವನ್ನು ಒಳಗಿಂದೊಳಗೆ ಕೆಡಿಸುತ್ತಿದೆಯೇ?ಈಗಿನ ಕಾನೂನಿನ ಪ್ರಕಾರ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳ ಪೂರ್ವಾನುಮತಿ ಇಲ್ಲದೆ ನ್ಯಾಯಮೂರ್ತಿಗಳ ವಿರುದ್ಧ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸುವಂತಿಲ್ಲ.

ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದೂ ಸಾಧ್ಯ ಇಲ್ಲ. ಹೈಕೋರ್ಟ್ ಇಲ್ಲವೆ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳನ್ನು ಸಂಸತ್‌ನ ಎರಡೂ ಸದನಗಳ ಸದಸ್ಯರು ಬಹುಮತದ `ವಾಗ್ದಂಡನೆ` ಮೂಲಕವಷ್ಟೇ ಕಿತ್ತುಹಾಕಬಹುದು. ಆದರೆ  ಇಲ್ಲಿಯವರೆಗೆ ಯಾವ ನ್ಯಾಯಮೂರ್ತಿಯವರನ್ನೂ `ವಾಗ್ದಂಡನೆ`ಯ ಮೂಲಕ ಕಿತ್ತುಹಾಕಲು ಸಂಸತ್‌ಗೆ ಸಾಧ್ಯವಾಗಿಲ್ಲ. ನ್ಯಾಯಮೂರ್ತಿ ವಿ.ರಾಮಸ್ವಾಮಿ ಅವರಿಗೆ ವಾಗ್ದಂಡನೆ  ವಿಧಿಸಬೇಕೆಂಬ ಮಸೂದೆಗೆ ಸಂಸತ್‌ನಲ್ಲಿ ಅಂಗೀಕಾರವೇ ಸಿಗದೆ ಬಿದ್ದುಹೋಗಿತ್ತು. ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲಿಯೂ ಕಾಂಗ್ರೆಸ್ ಸದಸ್ಯರು ಗೈರುಹಾಜರಾಗಿದ್ದರು.

ನ್ಯಾಯಾಲಯದ ರಿಸೀವರ್ ಆಗಿ ಸ್ವೀಕರಿಸಿದ್ದ 24 ಲಕ್ಷ ರೂಪಾಯಿಯನ್ನು ದುರುಪಯೋಗ ಮಾಡಿಕೊಂಡಿದ್ದ ಕೊಲ್ಕೊತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸೌಮಿತ್ರಸೇನ್ ವಿರುದ್ಧದ ವಾಗ್ದಂಡನೆಗೆ ಲೋಕಸಭೆ ಅಂಗೀಕಾರ ನೀಡಿದರೂ, ಅದು ರಾಜ್ಯಸಭೆಗೆ ಹೋಗುವ ಮೊದಲೇ ಅವರು  ರಾಜೀನಾಮೆ ನೀಡಿದ್ದರು. ತನಿಖೆ ನಡೆಯುತ್ತಿರುವಾಗಲೇ ನ್ಯಾಯಮೂರ್ತಿ ಪಿ.ಡಿ.ದಿನಕರನ್ ರಾಜೀನಾಮೆ ನೀಡಿದ ಕಾರಣ  ಅವರಿಗೂ ವಾಗ್ದಂಡನೆ ನೀಡಲು ಸಾಧ್ಯವಾಗಲಿಲ್ಲ.

ಆರೋಪ ಹೊತ್ತ ನ್ಯಾಯಮೂರ್ತಿಗಳ ವಿಚಾರಣೆ ನಡೆಸುವ ಈಗಿನ ವ್ಯವಸ್ಥೆ ತೀರಾ ದುರ್ಬಲವಾಗಿದೆ. ಇದೊಂದು `ಗೃಹಸಮಿತಿ`. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯ ನ್ಯಾಯಾಂಗ ಆಯೋಗದಲ್ಲಿ ಹೈಕೋರ್ಟ್‌ನ ತಲಾ ಇಬ್ಬರು ನ್ಯಾಯಮೂರ್ತಿಗಳು ಸದಸ್ಯರು.

ನ್ಯಾಯಮೂರ್ತಿಗಳ ಮೇಲಿನ ಆರೋಪ ಸಾಬೀತಾದಾರೂ ಆಯೋಗ ಹೆಚ್ಚೆಂದರೆ ಆರೋಪಿ ನ್ಯಾಯಮೂರ್ತಿಗಳನ್ನು ಅಮಾನತ್‌ನಲ್ಲಿಡಬಹುದು ಇಲ್ಲವೆ ವರ್ಗಾವಣೆ ಮಾಡಬಹುದು. ಆಯೋಗಕ್ಕೆ ಕಾನೂನುಬದ್ಧ ಅಧಿಕಾರ ಇಲ್ಲ. ಆರೋಪಿ ಸ್ಥಾನದಲ್ಲಿರುವವರು ಆಯೋಗದ ನಿರ್ಧಾರವನ್ನು ಪ್ರಶ್ನಿಸಬಹುದು.

ನ್ಯಾಯಾಂಗ ಎದುರಿಸುತ್ತಿರುವ ಈಗಿನ ಆರೋಪಗಳಿಗೆ ನ್ಯಾಯಮೂರ್ತಿಗಳ ನೇಮಕದಲ್ಲಿರುವ ದೋಷವೂ ಕಾರಣ. 1950ರಿಂದ 1993ರ ವರೆಗೆ ನ್ಯಾಯಮೂರ್ತಿಗಳ ನೇಮಕದ ಅಧಿಕಾರ ಶಾಸಕಾಂಗದ ಕೈಯಲ್ಲಿಯೇ ಇತ್ತು. `ಸೆಕೆಂಡ್ ಜಡ್ಜಸ್` ಎಂದೇ ಜನಪ್ರಿಯವಾಗಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಒಂಬತ್ತು ಸದಸ್ಯರ ಪೀಠ ಸಂವಿಧಾನದ 124ನೇ ಕಲಂ ಅನ್ನು ಪುನರ್‌ವ್ಯಾಖ್ಯಾನಿಸಿ ನ್ಯಾಯಮೂರ್ತಿಗಳ ನೇಮಕದಲ್ಲಿ ನ್ಯಾಯಾಂಗಕ್ಕೆ ಪರಮಾಧಿಕಾರವನ್ನು ನೀಡಿತ್ತು.

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳದ್ದೇ ಅಂತಿಮ ನಿರ್ಧಾರ. ಈ ಬಗ್ಗೆ ಕೇಂದ್ರ ಸರ್ಕಾರದ `ಸಲಹೆ`ಪಡೆದರಷ್ಟೇ ಸಾಕು, `ಅನುಮತಿ` ಬೇಕಾಗಿಲ್ಲ. ಮುಖ್ಯನ್ಯಾಯಮೂರ್ತಿಗಳು ಇಬ್ಬರು ಹಿರಿಯಸಹೋದ್ಯೋಗಿಗಳ ಜತೆ ಸಮಾಲೋಚನೆ ನಡೆಸಿ ಕೈಗೊಳ್ಳುವ ನಿರ್ಧಾರವನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲೇಬೇಕು. ಕೆಲವು ವಿವಾದಾತ್ಮಕ ನ್ಯಾಯಮೂರ್ತಿಗಳ ಪ್ರಕರಣವನ್ನು ಪರಿಶೀಲಿಸಿದರೆ ನೇಮಕಾತಿಯ ಈ ವ್ಯವಸ್ಥೆಯಲ್ಲಿನ ದೋಷ ಸ್ಪಷ್ಟವಾಗುತ್ತದೆ.

ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ಸೌಮಿತ್ರಸೇನ್ ಹಣ ದುರುಪಯೋಗ ಮಾಡಿಕೊಂಡದ್ದು 1993ರಲ್ಲಿ. ಆದರೆ ಅದು ಬೆಳಕಿಗೆ ಬಂದದ್ದು 2009ರಲ್ಲಿ. ನ್ಯಾಯಮೂರ್ತಿ ಸೇನ್ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವ ಮೊದಲು ಹಳೆಯ ಆರೋಪಗಳನ್ನು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಯಾಕೆ ಪರಿಶೀಲಿಸಿರಲಿಲ್ಲ? ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದಾಗ ಪಿ.ಡಿ.ದಿನಕರನ್ ಅವರು ಅಕ್ರಮವಾಗಿ ನೂರಾರು ಎಕರೆ ಜಮೀನು ಕಬಳಿಸಿದ್ದಾರೆ ಎನ್ನುವುದು ಆರೋಪ.

ಆದರೆ ಅದು ಬಯಲಿಗೆ ಬಂದಿರುವುದು ಅವರನ್ನು ಸುಪ್ರೀಂಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ನೇಮಕ ಮಾಡಿದ ಸಂದರ್ಭದಲ್ಲಿ. ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದರೆ ಸುಪ್ರೀಂಕೋರ್ಟ್ ಸಮಿತಿ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಹೇಗೆ ನೇಮಿಸಿತು?

ಇದು ಆರೋಪಕ್ಕೊಳಗಾಗಿರುವ ಒಬ್ಬಿಬ್ಬರು ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ ಲೋಪಗಳಲ್ಲ. ಕಳೆದ ಐದಾರು ವರ್ಷಗಳ ಅವಧಿಯಲ್ಲಿ ಆರೋಪಗಳನ್ನು ಎದುರಿಸುತ್ತಿರುವ ಹಲವಾರು ನ್ಯಾಯಮೂರ್ತಿಗಳ ಹಿನ್ನೆಲೆ ಸಂಶಯಾಸ್ಪದವಾಗಿಯೇ ಇದ್ದರೂ ಅವರೆಲ್ಲ ಸಲೀಸಾಗಿ  ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ.

 ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದ ಯಾರೂ ಕೂಡಾ ನ್ಯಾಯಾಂಗ ಎನ್ನುವುದು 50ವರ್ಷಗಳ ಹಿಂದಿನಷ್ಟೇ ಆರೋಗ್ಯಕರವಾಗಿದೆ ಎಂದು ಹೇಳಲಾರರು. ಆರೋಗ್ಯ ಹಾಳಾಗಿದ್ದರೆ ಚಿಕಿತ್ಸೆ ಅನಿವಾರ್ಯ. ಆದರೆ ನಮ್ಮ ಸಂವಿಧಾನದಲ್ಲಿ ನ್ಯಾಯಾಂಗದ ಅನಾರೋಗ್ಯಕ್ಕೆ ಔಷಧಿ ಏನೆಂದು ಹೇಳಿಲ್ಲ.

ಭವಿಷ್ಯದಲ್ಲಿ ನ್ಯಾಯಮೂರ್ತಿಗಳ ಪ್ರಾಮಾಣಿಕತೆಯನ್ನೇ ಸಂಶಯಿಸುವಂತಹ ದಿನಗಳು ಬರಬಹುದೆಂದು ಸಂವಿಧಾನ ರಚನೆಯ ಕಾಲದಲ್ಲಿ  ಸ್ವತ: ವಕೀಲರಾಗಿದ್ದ ಬಾಬಾಸಾಹೇಬ್ ಅಂಬೇಡ್ಕರ್ ಸೇರಿದಂತೆ ಯಾರೂ ಊಹಿಸಿರಲಿಲ್ಲವೇನೋ? ನ್ಯಾಯಾಂಗವನ್ನು ಪ್ರಶ್ನಾತೀತವಾಗಿ ಉಳಿಸಿಕೊಳ್ಳಬೇಕೆಂಬ ಅವರ ಸದಾಶಯವೂ ಇದಕ್ಕೆ ಕಾರಣ ಇರಬಹುದು. ಆದರೆ ಈ ಭರವಸೆಯನ್ನು ನ್ಯಾಯಾಂಗ ಉಳಿಸಿಕೊಂಡಿದೆಯೇ?

ಇತ್ತೀಚಿನ ವರ್ಷಗಳಲ್ಲಿ ಬಯಲಾಗುತ್ತಿರುವ ನ್ಯಾಯಾಂಗದ ಹಗರಣಗಳ ನಂತರ ನ್ಯಾಯಮೂರ್ತಿಗಳನ್ನು ಕೂಡಾ ಸಮಾಜಕ್ಕೆ ಉತ್ತರದಾಯಿಯನ್ನಾಗಿ ಮಾಡಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸಂವಿಧಾನ ಪುನರ್‌ಪರಿಶೀಲನಾ ಆಯೋಗ  `ರಾಷ್ಟ್ರೀಯ ನ್ಯಾಯಾಂಗ ಆಯೋಗ` ರಚನೆಗೆ ಶಿಫಾರಸು ಮಾಡಿತ್ತು. ಎನ್‌ಡಿಎ ಸರ್ಕಾರದ ಕಾಲದಲ್ಲಿ ನ್ಯಾಯಮೂರ್ತಿಗಳ ನೇಮಕ ಮತ್ತು ವರ್ಗಾವಣೆಯ ಅಧಿಕಾರವನ್ನೂ ಒಳಗೊಂಡ `ರಾಷ್ಟ್ರೀಯ ನ್ಯಾಯಾಂಗ ಆಯೋಗ`ದ ಮಸೂದೆಯನ್ನು ರೂಪಿಸಿತ್ತು.

ಕೇಂದ್ರ ಕಾನೂನು ಸಚಿವರು ಮತ್ತು ಕೇಂದ್ರ ಸರ್ಕಾರದಿಂದ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡ ಆಯೋಗದ ಮುಂದೆ ನ್ಯಾಯಮೂರ್ತಿಗಳು ಆಸ್ತಿ ಘೋಷಣೆ ಮಾಡಬೇಕು ಎಂದು ಮಸೂದೆ ಹೇಳಿತ್ತು. ಆಗಲೂ ನ್ಯಾಯಮೂರ್ತಿಗಳು ಆಯೋಗ ರಚನೆಯನ್ನು ವಿರೋಧಿಸಿದ್ದರು.

ವಿಳಂಬವಾಗಿಯಾದರೂ ಈ ವರ್ಷದ ಮೇ ತಿಂಗಳಲ್ಲಿ ಲೋಕಸಭೆ `ನ್ಯಾಯಾಂಗ ಗುಣಮಟ್ಟ ಮತ್ತು ಉತ್ತರದಾಯಿತ್ವ ಮಸೂದೆ 2002`ಕ್ಕೆ ಅನುಮೋದನೆ ನೀಡಿದೆ. 2011ರಲ್ಲಿ ಮಂಡನೆಯಾಗಿದ್ದ ಈ ಮಸೂದೆಯನ್ನು ತಿದ್ದುಪಡಿಯೊಂದಿಗೆ ಮರಳಿ ಮಂಡಿಸಲಾಗಿತ್ತು. ಆದರೆ ಆಗಲೇ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ಅವರು  ಮಸೂದೆಯ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ನ್ಯಾಯಾಂಗದ ಸುಧಾರಣೆಯ ಪ್ರಯತ್ನ ನಡೆದಾಗಲೆಲ್ಲ, ಅದನ್ನು ನ್ಯಾಯಾಂಗದ ಮೇಲೆ ಶಾಸಕಾಂಗದ ಆಕ್ರಮಣ ಎಂದೇ ಬಿಂಬಿಸುತ್ತಾ ನ್ಯಾಯಮೂರ್ತಿಗಳು ಆತ್ಮರಕ್ಷಣೆಗಿಳಿಯುವುದು ಸಹಜ. ಈಗಿನ ಮುಖ್ಯನ್ಯಾಯಮೂರ್ತಿಗಳು ಅದನ್ನು ಮಾತಿನಲ್ಲಿ ಹೇಳದೆ ಇದ್ದರೂ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ತನ್ನ ಕಬಂಧಬಾಹುಗಳನ್ನು ಎಲ್ಲೆಡೆ ಚಾಚುತ್ತಿರುವ ಸಮಯದಲ್ಲಿ ಎಲ್ಲ ವ್ಯವಸ್ಥೆಗಳೂ  ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಿ ಆಗಿರಬೇಕು ಎಂದು ಸಾರ್ವಜನಿಕರು ಬಯಸುತ್ತಿದ್ದಾರೆ. ಇಂತಹ ಸಮಯದಲ್ಲಿ ಬಹಳ ದಿನಗಳ ಕಾಲ ನ್ಯಾಯಾಂಗ ಮುಸುಕುಹಾಕಿಕೊಂಡು ತನ್ನನ್ನು ರಕ್ಷಿಸಿಕೊಳ್ಳುವುದು ಸಾಧ್ಯವಾಗಲಾರದು.