Saturday, June 23, 2012

ವಿವಾದದ ಗಾಳಿಗೆ ಸಿಕ್ಕಿರುವ ಸಂವಿಧಾನದ `ತುರ್ತು ದೀಪ' June 18, 2012

ದೆಹಲಿಯ ರೈಸಿನಾಹಿಲ್‌ನ ತುದಿಯ ಸುಮಾರು 450 ಎಕರೆ ಉದ್ಯಾನದ ನಡುವಿನ ಐದು ಎಕರೆ ಜಾಗದಲ್ಲಿ ತಲೆ ಎತ್ತಿನಿಂತಿರುವ ರಾಷ್ಟ್ರಪತಿ ಭವನವನ್ನು ಭಾವುಕ ಕಣ್ಣುಗಳಿಂದ ನೋಡಿದರೆ ಅರಮನೆಯಂತೆ ಕಾಣುತ್ತದೆ. 

ವಿಶಾಲವಾದ ಹಜಾರಗಳು, ಎತ್ತರದ ಬೋದಿಗೆಗಳು, ಅಮೃತಶಿಲೆಯ ನೆಲ, ಅದನ್ನಪ್ಪಿಕೊಂಡ ಬೆಲೆಬಾಳುವ ಪರ್ಷಿಯನ್-ಕಾಶ್ಮೆರಿ ನೆಲಗಂಬಳಿ, ಅಪರೂಪದ ತೈಲಚಿತ್ರಗಳು, ಮೊಗಲ್-ಜೈನ್ ವಾಸ್ತುಶಿಲ್ಪಗಳ ಪ್ರಭಾವದ ಕಟಾಂಜನಗಳು,ಛಜ್ಚಾಗಳು, ಜಾಲರಿ, ಕಲ್ಲು ಗಂಟೆಗಳು...ಹೀಗೆ 20,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಕೆಂಪು ಮರಳುಗಲ್ಲಿನ ಕಟ್ಟಡದಲ್ಲಿ ಅರಮನೆಯ ಎಲ್ಲ ವೈಭವಗಳೂ ಇವೆ.

ಅರಮನೆಯಂತೆ ಕಾಣುತ್ತಿದೆ ಎಂದ ಮಾತ್ರಕ್ಕೆ ಅದರೊಳಗಿನ ನಿವಾಸಿಯನ್ನು ಅರಸ ಎಂದು ಹೇಳುವ ಹಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರಸನಿಗೆ ಜಾಗ ಇಲ್ಲ. ಅಲ್ಲಿರುವವರು ಸಂವಿಧಾನದ ಮನೆಯ ಕಾವಲುಗಾರ. ಸಂವಿಧಾನದ ಪ್ರಕಾರ ರಾಷ್ಟ್ರಪತಿಯವರದು ಅತೀ ಉನ್ನತ, ಗೌರವಪೂರ್ಣ ಮತ್ತು ಪ್ರತಿಷ್ಠೆಯ ಸ್ಥಾನ. 

ಅವರೇ ಸರ್ಕಾರದ ಅಧಿಕೃತ ಯಜಮಾನರು. ಕೇಂದ್ರ ಸರ್ಕಾರದ ಕಾರ್ಯಾಂಗ ಅಧಿಕಾರದ ದಂಡವನ್ನು ಸಂವಿಧಾನ  ಅವರ ಕೈಗೆ ಕೊಟ್ಟಿದೆ. ಕೇಂದ್ರ ಸರ್ಕಾರ ಪ್ರತಿಯೊಂದು ನಿರ್ಧಾರವನ್ನು ರಾಷ್ಟ್ರಪತಿಯವರ ನಾಮಸ್ಮರಣೆಯೊಂದಿಗೆ ಕಾರ್ಯರೂಪಕ್ಕೆ ತರಬೇಕು. ಪ್ರಧಾನಮಂತ್ರಿಯನ್ನು ಮಾತ್ರವಲ್ಲ, ಪ್ರಧಾನಿ ಸಲಹೆ ಮೇರೆಗೆ ಸಚಿವರ ನೇಮಕಾ ಕೂಡಾ ಅವರದ್ದೇ ........

ರಾಷ್ಟ್ರಪತಿ ಸ್ಥಾನದ ಸುತ್ತಲಿನ ಈ ಪ್ರಭಾವಳಿ ಕಂಡು ಮೈಮರೆಯುವ ಮುನ್ನ ಸಂವಿಧಾನದ ಪುಟಗಳನ್ನು ತಿರುವಿಹಾಕಬೇಕು. `ಕೇಂದ್ರ ಸರ್ಕಾರ ತನ್ನ ಕಾರ್ಯಾಂಗ ಅಧಿಕಾರವನ್ನು ಸಂವಿಧಾನಕ್ಕೆ ಅನುಗುಣವಾಗಿ ರಾಷ್ಟ್ರಪತಿಯವರ ಮೂಲಕ ಕಾರ್ಯಗತಗೊಳಿಸಬೇಕು` ಎಂದು ಸಂವಿಧಾನ ಹೇಳಿದೆ. `

ರಾಷ್ಟ್ರಪತಿಗಳು ಸಚಿವ ಮಂಡಳಿಯ ನೆರವು ಮತ್ತು ಸಲಹೆ ಮೇರೆಗೆ ಕಾರ್ಯನಿರ್ವಹಿಸಬೇಕು` ಎಂದು ಸಂವಿಧಾನದ 74 (1)ನೇ ಪರಿಚ್ಛೇದ ಹೇಳಿದೆ. `ರಾಷ್ಟ್ರಪತಿ ಸಂವಿಧಾನದ ಮುಖ್ಯಸ್ಥರಾದರೂ ಅವರು ಸಚಿವ ಮಂಡಳಿಯ ಸಲಹೆಯಂತೆಯೇ ಕಾರ್ಯನಿರ್ವಹಿಸಬೇಕಾಗುತ್ತದೆ` ಎಂದು ಸುಪ್ರೀಂಕೋರ್ಟ್ ಹಲವಾರು ತೀರ್ಪುಗಳಲ್ಲಿ ಸ್ಪಷ್ಟಪಡಿಸಿದೆ.

ಅಂದರೆ ರಾಷ್ಟ್ರಪತಿಗಳು ಆಡಳಿತಾರೂಢರ ಕೈಯಲ್ಲಿನ `ರಬ್ಬರ್ ಸ್ಟಾಂಪ್` ಎನ್ನುವ ಕೊಂಕುನುಡಿ ನಿಜವೇ? ಇದಕ್ಕೆ ಉತ್ತರ ರೈಸಿನಾಹಿಲ್‌ನ ನಿವಾಸಿಯಾದ ದೇಶದ ಪ್ರಥಮ ಪ್ರಜೆಯ ನಡೆ-ನುಡಿಯಲ್ಲಿದೆ. ಅರಸೊತ್ತಿಗೆಯಲ್ಲಿ ಸಿಂಹಾಸನವೇ ಮುಖ್ಯ, ಅದರ ಮೇಲೆ ಪಾದುಕೆಗಳನ್ನಿಟ್ಟುಬೇಕಾದರೂ ಬೇರೆಯವರು ರಾಜ್ಯಭಾರ ಮಾಡಬಹುದು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಾಗಲ್ಲ, ಇಲ್ಲಿ ಆಸನಕ್ಕೆ ಗೌರವ ಬರುವುದು ಆಸೀನರಾಗುವ ವ್ಯಕ್ತಿಯಿಂದ. ಸಾಂವಿಧಾನಿಕ ಹುದ್ದೆಗಳ ಹಕ್ಕು-ಬಾಧ್ಯತೆಗಳನ್ನು ಸಂವಿಧಾನದಲ್ಲಿ ಬಿಡಿಸಿ ಹೇಳಲಾಗಿಲ್ಲ. ಆ ಸ್ಥಾನದಲ್ಲಿ ಕೂರುವವರು ಇರುವ ನೀತಿ-ನಿಯಮಾವಳಿಗಳನ್ನು ತನ್ನ ವಿವೇಚನೆಯಿಂದ ಬಳಸಿಕೊಂಡು ವ್ಯಾಖ್ಯಾನಿಸಬೇಕಾಗುತ್ತದೆ. 

ಈ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕಾಗುವ ಪರಿಸ್ಥಿತಿಯನ್ನು ಪ್ರತಿಯೊಬ್ಬ ರಾಷ್ಟ್ರಪತಿಗಳು ಎದುರಿಸುತ್ತಾರೆ. ಈ ಕಾರ್ಯನಿರ್ವಹಣೆಯ ಮೇಲೆ ಇತಿಹಾಸದ ಪುಟಗಳಲ್ಲಿ ಅವರ ವ್ಯಕ್ತಿತ್ವದ ಚಿತ್ರಗಳು ದಾಖಲಾಗುತ್ತವೆ. ಎದುರಾದ ಬಿಕ್ಕಟ್ಟುಗಳನ್ನು ಮೀರಿ ನಿಂತವರೂ ಇದ್ದಾರೆ, ಜಾರಿಬಿದ್ದವರೂ ಇದ್ದಾರೆ.

ಭಾರತದ ರಾಷ್ಟ್ರಪತಿಗಳ ಹೆಸರಿನ ಕೆಳಗೆ ಎರಡು ಸಂದರ್ಭಗಳಲ್ಲಿ ಕೆಂಪುಗೆರೆ ಕಾಣಿಸಿಕೊಳ್ಳುತ್ತದೆ. ಮೊದಲನೆಯದು ಕೇಂದ್ರದಲ್ಲಿ ಚುನಾವಣೆಯ ನಂತರ ನಡೆಯುವ ಸರ್ಕಾರ ರಚನೆಯ ಪ್ರಕ್ರಿಯೆ, ಎರಡನೆಯದು ರಾಜ್ಯಗಳಲ್ಲಿನ ಚುನಾಯಿತ ಸರ್ಕಾರದ ವಿಸರ್ಜನೆ.

ರಾಜಕೀಯ ಪಿತೂರಿಯಿಂದಾಗಿ ಮೂರನೆ ಸಂದರ್ಭ ಕೂಡಾ ಸೃಷ್ಟಿಯಾಗುವುದುಂಟು. ಉದಾಹರಣೆಗೆ ಪ್ರಧಾನಿ ರಾಜೀವ್‌ಗಾಂಧಿಯವರನ್ನು ಕಿತ್ತುಹಾಕಲು ಆಗಿನ ರಾಷ್ಟ್ರಪತಿ ಜೈಲ್‌ಸಿಂಗ್ ಪ್ರಯತ್ನ.

ಮೊದಲಿನ ಎರಡೂ ಸಂದರ್ಭಗಳಲ್ಲಿಯೂ ರಾಷ್ಟ್ರಪತಿಗಳು ಅಸಹಾಯಕರೇನಲ್ಲ, ಅವರು ಕೇಂದ್ರಸರ್ಕಾರದ `ರಬ್ಬರ್ ಸ್ಟಾಂಪ್` ಆಗಿಯೇ ಕಾರ್ಯನಿರ್ವಹಿಸಬೇಕಾದ ಅಗತ್ಯವೂ ಇಲ್ಲ. ಚುನಾವಣೆಯ ನಂತರ ಕೇಂದ್ರದಲ್ಲಿ ಸರ್ಕಾರ ರಚನೆಯ ಸಂದರ್ಭದಲ್ಲಿ ರಾಷ್ಟ್ರಪತಿಗಳು ಸರ್ವಸ್ವತಂತ್ರರು. 

ಆಗ ಅವರಿಗೆ ಸಲಹೆ ನೀಡುವ ಮೂಲಕ ಪರೋಕ್ಷವಾಗಿ ನಿಯಂತ್ರಿಸುವ ಸಚಿವಮಂಡಳಿ ಅಸ್ತಿತ್ವದಲ್ಲಿ ಇಲ್ಲದೆ ಇರುವ ಕಾರಣ ಅವರ ಮೇಲೆ ಶಾಸಕಾಂಗದ ಒತ್ತಡ ಇರುವುದಿಲ್ಲ. ಮೈತ್ರಿಕೂಟದ ಇಂದಿನ ಹೊಸ ರಾಜಕೀಯ ಯುಗದಲ್ಲಿ ಇದೊಂದು ದೊಡ್ಡ ಸವಾಲು. ಆದರೆ ಇದನ್ನು ಎದುರಿಸಿದವರೆಲ್ಲರೂ ನಿರಾಶೆಗೊಳಿಸಿಲ್ಲ.

1996ರಲ್ಲಿ ಸ್ಪಷ್ಟ ಬಹುಮತ ಹೊಂದಿಲ್ಲದ ಅಟಲಬಿಹಾರಿ ವಾಜಪೇಯಿ ಅವರಿಗೆ ಸರ್ಕಾರ ರಚನೆಗೆ ಅವಕಾಶ ನಿರಾಕರಿಸಲು ಕಾರಣಗಳಿದ್ದವು. ಆಗಿನ ರಾಷ್ಟ್ರಪತಿ ಶಂಕರದಯಾಳ್ ಶರ್ಮ ಹಾಗೆ ನಡೆದುಕೊಂಡಿದ್ದರೆ ಅವರೊಬ್ಬ `ಕಾಂಗ್ರೆಸ್ ಏಜಂಟ್` ಎಂಬ ಆರೋಪ ಖಂಡಿತ ಕೇಳಿಬರುತ್ತಿತ್ತು. ಅವರು ಹಾಗೆ ಮಾಡದೆ ಅವಕಾಶ ನೀಡಿದರೂ ವಾಜಪೇಯಿ ನೇತೃತ್ವದ ಸರ್ಕಾರ ಹದಿಮೂರು ದಿನಗಳಲ್ಲಿಯೇ ಪತನಗೊಂಡಿತ್ತು. 

ಅದರ ನಂತರ ಹದಿಮೂರು ತಿಂಗಳ ಕಾಲ ಪ್ರಧಾನಿಯಾದ ವಾಜಪೇಯಿ ಅವರು ಸರ್ಕಾರ ರಚನೆಯ ಅವಕಾಶ ಕೋರಿದಾಗಲೂ ನಿರಾಕರಿಸಲು ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಬಳಿಯೂ ಕಾರಣಗಳಿದ್ದವು. 

`ಆ ಸಂದರ್ಭದ ರಾಜಕೀಯ ಮೈತ್ರಿಯಿಂದ ಸುಭದ್ರ ಸರ್ಕಾರ ರಚನೆ ಸಾಧ್ಯ ಇಲ್ಲ` ಎಂದು ಹೇಳಿ ಅವಕಾಶ ನಿರಾಕರಿಸಬಹುದಿತ್ತು. ಅವರೂ ಹಾಗೆ ಮಾಡದೆ ಅವಕಾಶ ನೀಡಿದರು. `ಅಭದ್ರತೆಯ ಭೀತಿ` ನಿಜ ಎಂಬಂತೆ ಕೊನೆಗೆ ಎಡಿಎಂಕೆ ನಾಯಕಿ ಜೆ.ಜಯಲಲಿತಾ ಬೆಂಬಲ ವಾಪಸು ಪಡೆದು ಸರ್ಕಾರ ಉರುಳಿಸಿದ್ದರು. 

ಅದೇ ನಾರಾಯಣನ್ ಪೂರ್ವಾಶ್ರಮದಲ್ಲಿ ಅಪ್ಪಟ ಕಾಂಗ್ರೆಸಿಗರೇ ಆಗಿದ್ದರೂ ಸೋನಿಯಾಗಾಂಧಿ 272 ಸದಸ್ಯರ ಬೆಂಬಲ ತಮಗಿದೆ ಎಂದು ಹೇಳಿದ್ದನ್ನು ಒಪ್ಪಿಕೊಂಡಿರಲಿಲ್ಲ ಎನ್ನುವುದು ಗಮನಾರ್ಹ.

ರಾಷ್ಟ್ರಪತಿಗಳ ತಲೆಮೇಲೆ ಸದಾ ತೂಗುತ್ತಿರುವ ಇನ್ನೊಂದು ವಿವಾದದ ಕತ್ತಿ-ಸಂವಿಧಾನದ 356ನೇ ಪರಿಚ್ಛೇದದ ಮೂಲಕ ನಡೆಯುವ ವಿಧಾನಸಭೆಗಳ ವಿಸರ್ಜನೆ. ಸ್ವತಂತ್ರಭಾರತದಲ್ಲಿ ನೂರಕ್ಕೂ ಹೆಚ್ಚು ಬಾರಿ ಈ ಅಸ್ತ್ರದ ಪ್ರಯೋಗ ನಡೆದಿದೆ.ಕೇಂದ್ರದ ಆಡಳಿತಾರೂಢ ಪಕ್ಷ ರಾಜಭವನದಲ್ಲಿ ಕೂರಿಸಿರುವ `ಕೈಗೊಂಬೆ` ರಾಜ್ಯಪಾಲರ ಮೂಲಕ ವರದಿಗಳನ್ನು ತರಿಸಿ ರಾತೋರಾತ್ರಿ ರಾಜ್ಯಸರ್ಕಾರಗಳನ್ನು ವಿಸರ್ಜಿಸಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಉದಾಹರಣೆಗಳಿವೆ. 

ಇಂತಹ ಸಂದರ್ಭಗಳಲ್ಲಿ ಈಗಿನ ರಾಷ್ಟ್ರಪತಿಗಳು ಹಿಂದಿನವರಷ್ಟು ಅಸಹಾಯಕರಲ್ಲ. ಜನತಾ ಸರ್ಕಾರ 1978ರಲ್ಲಿ ಸಂವಿಧಾನದ 74ನೇ ಪರಿಚ್ಛೇದಕ್ಕೆ ಮಾಡಿದ 44ನೆ ತಿದ್ದುಪಡಿಯಿಂದಾಗಿ ರಾಷ್ಟ್ರಪತಿಗಳು ಸಚಿವ ಸಂಪುಟದ ತೀರ್ಮಾನವನ್ನು ಮೊದಲ ಬಾರಿ ತಿರಸ್ಕರಿಸಬಹುದು. ಆದರೆ ಸಚಿವ ಸಂಪುಟ ಮತ್ತೊಂದು ಬಾರಿ ಅಂಗೀಕರಿಸಿ ಕಳುಹಿಸಿದರೆ ಒಪ್ಪಿಗೆಯ ಮುದ್ರೆ ಒತ್ತುವುದು ಅನಿವಾರ್ಯ.

ಈ ತಿದ್ದುಪಡಿಯನ್ನು ಬಳಸಿಕೊಂಡು ತನ್ನ ಅಧಿಕಾರವನ್ನು ಮೊದಲು ಚಲಾಯಿಸಿದ್ದು ರಾಷ್ಟ್ರಪತಿ ಕೆ.ಆರ್.ನಾರಾಯಣನ್. ಉತ್ತರಪ್ರದೇಶದ ಕಲ್ಯಾಣ್‌ಸಿಂಗ್ ಸರ್ಕಾರದ ವಿಸರ್ಜನೆಗೆ ಐ.ಕೆ.ಗುಜ್ರಾಲ್ ಸರ್ಕಾರ ಮಾಡಿದ್ದ ತೀರ್ಮಾನವನ್ನು ಅವರು ತಿರಸ್ಕರಿಸಿದ್ದರು. ಮರುವರ್ಷ ವಾಜಪೇಯಿ ಸಂಪುಟ ಬಿಹಾರದ ಲಾಲುಯಾದವ್ ಸರ್ಕಾರದ ವಿಸರ್ಜನೆಗೆ ಕೈಗೊಂಡ ತೀರ್ಮಾನವನ್ನು ಕೂಡಾ ಅವರು ಒಪ್ಪಿಕೊಳ್ಳಲಿಲ್ಲ. 

ಎರಡೂ ಸಂದರ್ಭಗಳಲ್ಲಿ ಕೇಂದ್ರ ಸರ್ಕಾರ ಎರಡನೆ ಬಾರಿಗೆ ತನ್ನ ತೀರ್ಮಾನವನ್ನು ರಾಷ್ಟ್ರಪತಿಯವರಿಗೆ ಕಳುಹಿಸಿಕೊಡುವ ಹಟಮಾರಿ ಧೋರಣೆ ತೋರಿಸದೆ ದೇಶದ ಪ್ರಥಮ ಪ್ರಜೆಯ ಗೌರವಕ್ಕೆ ಕುಂದುಬರದಂತೆ ನೋಡಿಕೊಂಡಿತ್ತು.

ಪೂರ್ವಾಶ್ರಮದಲ್ಲಿ ರಾಜಕಾರಣಿಗಳಲ್ಲದ ರಾಷ್ಟ್ರಪತಿಗಳು ತೋರಿದ ಈ ದಿಟ್ಟತನವನ್ನು ರಾಜಕಾರಣಿಯಲ್ಲದ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ತೋರಲಿಲ್ಲ. ರಾಷ್ಟ್ರಪತಿ ಸ್ಥಾನದ ಘನತೆ ಉಳಿಸಿಕೊಂಡೇ ಸಾಮಾನ್ಯರನ್ನು ತಲುಪುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದ್ದ ಕಲಾಂ ಅವರು ತಾನು ಕೂತ ಕುರ್ಚಿಯ ನಿಜವಾದ ಕರ್ತವ್ಯ ನಿರ್ವಹಿಸುವಾಗ ಮಾತ್ರ ಎಡವಿಬಿದ್ದಿದ್ದರು. 

2005ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಯಾವ ಪಕ್ಷಕ್ಕೂ ಬಹುಮತ ಇಲ್ಲದೆ ರಾಷ್ಟ್ರಪತಿಗಳ ಆಳ್ವಿಕೆ ಹೇರಲಾಗಿತ್ತು. ಆದರೆ ಇದ್ದಕ್ಕಿದ್ದ ಹಾಗೆ ಒಂದು ದಿನ ಎನ್‌ಡಿಎ ಸರ್ಕಾರ ರಚಿಸಲು ಮುಂದಾದಾಗ ಅಲ್ಲಿ ರಾಜ್ಯಪಾಲರಾಗಿದ್ದ ಬೂಟಾಸಿಂಗ್ ವಿಧಾನಸಭೆಯ ವಿಸರ್ಜನೆಗೆ ಶಿಫಾರಸು ಮಾಡಿದ್ದರು.

ಇದನ್ನು ಅಷ್ಟೇ ಅವಸರದಲ್ಲಿ ಮಧ್ಯರಾತ್ರಿಯ ಸಭೆಯಲ್ಲಿ ಪರಿಶೀಲಿಸಿ ಕೇಂದ್ರ ಸಚಿವ ಸಂಪುಟ ನೀಡಿದ ಒಪ್ಪಿಗೆಗೆ ಅಬ್ದುಲ್ ಕಲಾಂ ಅವರು ದೂರದ ರಷ್ಯಾದಲ್ಲಿಯೇ ಕೂತು ಅಂಕಿತ ಹಾಕಿಬಿಟ್ಟಿದ್ದರು. ಈ ನಿರ್ಧಾರವನ್ನು ನಂತರದ ದಿನಗಳಲ್ಲಿ ಸುಪ್ರೀಂಕೋರ್ಟ್  ಅಕ್ರಮ ಎಂದು ಸಾರಿತ್ತು. ಇದು ಕಲಾಂ ಅವರ ಅಧಿಕಾರವಧಿಯ ಕಪ್ಪು ಚುಕ್ಕೆ.

ಸಂವಿಧಾನದ ರಚನೆಕಾರರಿಗೆ ಉಳಿದೆಲ್ಲ ಸಾಂವಿಧಾನಿಕ ಹುದ್ದೆಗಳಂತೆ ರಾಷ್ಟ್ರಪತಿ ಕೂಡಾ ಭವಿಷ್ಯದಲ್ಲಿ ಎದುರಿಸಬಹುದಾದ ಸವಾಲುಗಳ ನಿರೀಕ್ಷೆ ಇರಲಿಲ್ಲ. ಈ ಕಾರಣದಿಂದಾಗಿಯೇ ಆ ಹುದ್ದೆಯ ಅಧಿಕಾರ ಮತ್ತು ಕರ್ತವ್ಯಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಲು ಹೋಗದೆ ಗೌರವದ ಸ್ಥಾನ ನೀಡಿ ಸುಮ್ಮನಾಗಿದ್ದರು. ಏಕಪಕ್ಷದ ಆಳ್ವಿಕೆಯ ಬಿಗಿ ಸಡಿಲುಗೊಂಡು ಮೈತ್ರಿಕೂಟಗಳು ರಾಜಕೀಯದ ಮೇಲೆ ನಿಯಂತ್ರಣ ಪಡೆದುಕೊಳ್ಳುತ್ತಿದ್ದಂತೆಯೇ ರಾಷ್ಟ್ರಪತಿಗಳ ಮುಂದಿನ ಸವಾಲುಗಳು ಇನ್ನಷ್ಟು ಕಠಿಣವಾಗತೊಡಗಿವೆ. 

`ರಾಷ್ಟ್ರಪತಿ ಸ್ಥಾನ ಎನ್ನುವುದು `ತುರ್ತುಕಾಲದ ದೀಪ` ಇದ್ದ ಹಾಗೆ, ಬಿಕ್ಕಟ್ಟು ಉದ್ಭವವಾದಾಗ ಅದು ತನ್ನಿಂದ ತಾನೆ ಹತ್ತಿಕೊಳ್ಳುತ್ತದೆ. ಅದು ನಿವಾರಣೆಯಾಗುತ್ತಿದ್ದ ಹಾಗೆ ಆರಿಹೋಗುತ್ತದೆ` ಎಂದು ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಹೇಳಿದ್ದರು. ಆದರೆ ಮೈತ್ರಿಕೂಟಗಳ ಯುಗದಲ್ಲಿ ರಾಷ್ಟ್ರಪತಿಗಳ ಸ್ಥಾನ ಕೇವಲ `ತುರ್ತುಕಾಲದ ದೀಪ`ವಾಗಿ ಉಳಿದಿಲ್ಲ. ಇದು ನಿತ್ಯ ಉರಿಯುತ್ತಲೇ ಇರಬೇಕಾದ `ದೀಪ`ವಾಗಿ ಹೋಗಿದೆ.

 ರಾಜಕೀಯ ವಿವಾದದ ಗಾಳಿಗೆ ಸಿಕ್ಕಿ ಸಂವಿಧಾನದ ಈ  `ದೀಪ` ಆರಿಹೋಗದಂತೆ ಕಾಪಾಡಬೇಕಾದರೆ ಬದಲಾಗುತ್ತಿರುವ ರಾಜಕೀಯ ಪರಿಸ್ಥಿತಿಯನ್ನು ಸ್ವತಂತ್ರವಾಗಿ ಎದುರಿಸುವ ರೀತಿಯಲ್ಲಿ ರಾಷ್ಟ್ರಪತಿ ಸ್ಥಾನವನ್ನು ಬಲಪಡಿಸಬೇಕು. ಇದರ ಜತೆಯಲ್ಲಿ ರಾಷ್ಟ್ರಪತಿಗಳು  ವಿವಾದದಲ್ಲಿ ಸಿಕ್ಕಿಹಾಕಿಕೊಳ್ಳುವ ಸಂದರ್ಭಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬೇಕು. 

ಇಂತಹದ್ದೊಂದು ವಿವಾದಕ್ಕೆ  ಪ್ರಣವ್ ಮುಖರ್ಜಿ ಅವರೇ ಕಾರಣವಾಗಿದ್ದರು ಎನ್ನುವುದನ್ನು ಇತಿಹಾಸದ ಪುಟಗಳು ಹೇಳುತ್ತಿವೆ. ರಾಷ್ಟ್ರಪತಿಯವರ ಸಾವಿನ ಸಂದರ್ಭದಲ್ಲಿ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವುದು ಹೇಗೆ ಎಂದು ಸಂವಿಧಾನ ಸ್ಪಷ್ಟವಾಗಿ ಹೇಳಿದೆ. ಆದರೆ ಪ್ರಧಾನಿ ಅನಿರೀಕ್ಷಿತವಾಗಿ ಸಾವಿಗೀಡಾದಾಗ ಏನು ಮಾಡಬೇಕು ಎಂಬ ಪ್ರಶ್ನೆಗೆ ಸಂವಿಧಾನದಲ್ಲಿ ಉತ್ತರ ಇಲ್ಲ. 

ಈ ಕಾರಣದಿಂದಾಗಿಯೇ ಪ್ರಧಾನಿ ಇಂದಿರಾಗಾಂಧಿ ಹತ್ಯೆ ನಡೆದಾಗ ರಾಷ್ಟ್ರಪತಿ ಜೈಲ್‌ಸಿಂಗ್ ಅವರು ರಾಜೀವ್‌ಗಾಂಧಿಯವರನ್ನು ನೇರವಾಗಿ ಪ್ರಧಾನಿಯಾಗಿ ನೇಮಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. `ರಾಷ್ಟ್ರಪತಿಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಿರ್ಧಾರಕ್ಕಾಗಿ ಕಾಯಬೇಕಾಗಿತ್ತು, ಅಲ್ಲಿಯ ವರೆಗೆ ಸಂಪುಟದ ಅತ್ಯಂತ ಹಿರಿಯ ನಾಯಕನನ್ನು ಉಸ್ತುವಾರಿ ಪ್ರಧಾನಿಯಾಗಿ ನೇಮಿಸಬಹುದಿತ್ತು....`ಎಂಬೀತ್ಯಾದಿ ಟೀಕೆಗಳು ಆ ಕಾಲದಲ್ಲಿ ಕೇಳಿಬಂದಿದ್ದವು. 

ಆ ಟೀಕೆಗೆ  ಪ್ರಣವ್ ಮುಖರ್ಜಿ ಅವರು ರಾಜೀವ್‌ಗಾಂಧಿಯವರಿಗೆ ನೀಡಿದ್ದ ಸಲಹೆ ಪ್ರೇರಣೆಯಾಗಿತ್ತು.ಇಂದಿರಾಗಾಂಧಿಯವರ ಹತ್ಯೆ ನಡೆದಾಗ ಕೊಲ್ಕೊತ್ತಾ ಪ್ರವಾಸದಲ್ಲಿದ್ದ ರಾಜೀವ್‌ಗಾಂಧಿಯವರ ಜತೆಯಲ್ಲಿದ್ದ ಪ್ರಣವ್ ಮುಖರ್ಜಿ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಈ ಸಲಹೆ ನೀಡಿದ್ದರು. 

ಆ ಕಾಲದಲ್ಲಿ ಸಂಪುಟದ ಅತ್ಯಂತ ಹಿರಿಯ ನಾಯಕ ಪ್ರಣವ್ ಅವರೇ ಆಗಿದ್ದ ಕಾರಣ ಆ ಸಲಹೆಯನ್ನು ರಾಜೀವ್‌ಗಾಂಧಿ ತಪ್ಪಾಗಿ ಅರ್ಥಮಾಡಿಕೊಂಡಿದ್ದರು. ಈ ತಪ್ಪುತಿಳುವಳಿಕೆ ಅಂತಿಮವಾಗಿ ಪ್ರಣವ್ ಮುಖರ್ಜಿ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿ ಪ್ರತ್ಯೇಕ ಪಕ್ಷ ಸ್ಥಾಪನೆಗೆ ಕಾರಣವಾಗಿತ್ತು. 

ಈಗ ಅವರೇ ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್‌ಪಕ್ಷದ ಅಧಿಕೃತ ಅಭ್ಯರ್ಥಿ. ರಾಷ್ಟ್ರಪತಿ ಸ್ಥಾನದ ಮಹತ್ವವನ್ನು ಅರಿತಿರುವ ಪ್ರಣವ್ ಮುಖರ್ಜಿ `ರಬ್ಬರ್ ಸ್ಟಾಂಪ್` ಆಗಲಾರರೆಂದೇ ಎಲ್ಲರ ನಿರೀಕ್ಷೆ. ಇದು ಕಾಂಗ್ರೆಸ್ ಪಕ್ಷದ ಭೀತಿ ಕೂಡಾ ಆಗಿರಬಹುದು.

ನರೇಂದ್ರಮೋದಿ ಅವರಿಂದ ಬಿಜೆಪಿ ಅಪಹರಣ June 11, 2012

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಬ್ಬ ಆದರ್ಶ ಸ್ವಯಂಸೇವಕನಿಂದ ಬಯಸುವ ಎಲ್ಲ ಗುಣಗಳು ಸಂಜಯ್ ಜೋಷಿ ಅವರಲ್ಲಿವೆ.  ಆರ್‌ಎಸ್‌ಎಸ್ ಸಿದ್ಧಾಂತವನ್ನು ಮೂರುಹೊತ್ತು ಉಸಿರಾಡುತ್ತಿರುವ ಜೋಷಿ ಒಬ್ಬ ಸರಳ, ಪ್ರಾಮಾಣಿಕ, ಸಮರ್ಥ, ಸಜ್ಜನ ವ್ಯಕ್ತಿ. ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ, ಪ್ರಚಾರದ ಹಪಾಹಪಿ ಇಲ್ಲದ,  ಗಂಟೆ-ದಿನಗಳನ್ನು ಲೆಕ್ಕಿಸದೆ ಕೆಲಸ ಮಾಡಬಲ್ಲ ಶ್ರಮಜೀವಿ. 

ಆರ್‌ಎಸ್‌ಎಸ್ ಸಿದ್ಧಾಂತವನ್ನು ಒಪ್ಪದವರು ಸೈದ್ಧಾಂತಿಕವಾಗಿ ಅವರೊಡನೆ ನೂರೆಂಟು ತಕರಾರುಗಳನ್ನು ತೆಗೆಯಬಹುದು. ಆದರೆ ಆರ್‌ಎಸ್‌ಎಸ್ ನುಡಿದಂತೆಯೇ ನಡೆಯುವಂತಿದ್ದರೆ ಅದಕ್ಕೆ ಜೋಷಿ ಅವರಲ್ಲಿ ಎಳ್ಳುಕಾಳಿನಷ್ಟು ದೋಷ ಕಾಣಿಸಬಾರದಿತ್ತು.

ಆಗಿರುವುದೇನು?  ಬಿಜೆಪಿ ತೀರಾ ಅವಮಾನಕಾರಿಯಾಗಿ ಜೋಷಿ ಅವರನ್ನು ಹೊರಹಾಕಿದಾಗ ಸ್ವಯಂಸೇವಕರಿಗೆ ಆದರ್ಶದ ಪಾಠ ಹೇಳುತ್ತಿರುವ ಆರ್‌ಎಸ್‌ಎಸ್ ತನ್ನೊಬ್ಬ ಆದರ್ಶಸ್ವರೂಪಿ ಪ್ರಚಾರಕನಿಗೆ ಆಗುತ್ತಿರುವ ಅನ್ಯಾಯವನ್ನು ನೋಡಿಯೂ ನೋಡದವರಂತೆ ಕಣ್ಣುಮುಚ್ಚಿಕೊಂಡು ಅವರ ವಿರೋಧಿಗಳ ಜತೆ ಶಾಮೀಲಾಗಿದೆ.

2005ರ ಡಿಸೆಂಬರ್‌ನ ಕೊನೆ ವಾರದಲ್ಲಿ  ಭಾರತೀಯ ಜನತಾ ಪಕ್ಷಕ್ಕೆ ಇಪ್ಪತ್ತೈದು ತುಂಬಿದಾಗ ಐದು ದಿನಗಳ ರಜತ ಜಯಂತಿಯನ್ನು ಮುಂಬೈನಲ್ಲಿ ಆಚರಿಸಲಾಗಿತ್ತು. ಅದನ್ನು ವರದಿಮಾಡಲೆಂದು ಹೋಗಿದ್ದ ನಾನು  ಬೆಳಿಗ್ಗೆ ಪತ್ರಕರ್ತರ ಗ್ಯಾಲರಿಯಲ್ಲಿ ಕುಳಿತಿದ್ದಾಗ ಯುವಕನೊಬ್ಬ ಬಂದು ಮಡಚಿದ್ದ ಬಿಳಿಹಾಳೆಯನ್ನು ಕೈಗಿತ್ತು ಮಾಯವಾಗಿ ಹೋದ. 

ಪಕ್ಷದ ಹೇಳಿಕೆ ಇರಬಹುದೆಂದು ಬಿಡಿಸಿ ನೋಡಿದರೆ ಅದು `ಸಂಜಯ್ ಜೋಷಿ ಅವರು ನನ್ನ ಜತೆ ಲೈಂಗಿಕ ಸಂಬಂಧ ಹೊಂದಿದ್ದರು....` ಎಂದು ಆರೋಪಿಸಿ ಮಹಿಳೆಯೊಬ್ಬರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಸಲ್ಲಿಸಿದ್ದ ದೂರಿನ ಪ್ರತಿ. 

ಆಶ್ಚರ್ಯದಿಂದ ಅಕ್ಕಪಕ್ಕ ನೋಡಿದರೆ ಅಂತಹ ಪ್ರತಿಗಳು ಇನ್ನೂ ಕೆಲವರ ಕೈಯಲ್ಲಿದ್ದವು. ಕೆಲವು ಪತ್ರಕರ್ತರಂತೂ ಮೊದಲೇ ಗೊತ್ತಿದ್ದವರಂತೆ `ಸಿಡಿ ಹೈ, ದೇಖ್ ನ ಹೈ ಕ್ಯಾ?` ಎಂದು ಕಣ್ಣುಮಿಟುಕಿಸತೊಡಗಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿಯೇ ಸಂಜಯ್ ಜೋಷಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸುದ್ದಿ ಹೊರಬಿತ್ತು. ಪಕ್ಷದ ಬೆಳ್ಳಿಹಬ್ಬದ ಸಂಭ್ರಮ ಸಿ.ಡಿ ಹಗರಣದಲ್ಲಿ ಕರಗಿ ಹೋಗಿತ್ತು. 

ಇದು ಯಾರ ಕೈವಾಡ ಎನ್ನುವ ಚರ್ಚೆ ಅಲ್ಲಿ ನಡೆದಿದ್ದಾಗ ಕೇಳಿಬಂದ ಮೊದಲ ಹೆಸರು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ ಅವರದ್ದು. ನಂತರದ ದಿನಗಳಲ್ಲಿ ಪೊಲೀಸರು ತನಿಖೆ ನಡೆಸಿ ಅದು ನಕಲಿ ಸಿ.ಡಿ. ಎಂದು ತೀರ್ಮಾನಕ್ಕೆ ಬಂದರು. ಆ ಸಿ.ಡಿ.ಯನ್ನು ಗುಜರಾತ್ ಪೊಲೀಸರು ವಿತರಿಸಿದ್ದರು ಎನ್ನುವುದು ಕೂಡಾ ಬಯಲಾಯಿತು. 

ಆದರೆ ಅದರ ಹಿಂದಿರುವ ವ್ಯಕ್ತಿ ಯಾರು ಎನ್ನುವ ಪ್ರಶ್ನೆಗೆ ಈಗಲೂ ಉತ್ತರ ಸಿಕ್ಕಿಲ್ಲ. (ಗುಜರಾತ್‌ನಲ್ಲಿ ನಡೆದ ನರಮೇಧ ಮತ್ತು ಹರೇನ್ ಪಾಂಡ್ಯ ಹತ್ಯೆಯ ರೂವಾರಿ ಯಾರೆಂಬ ಪ್ರಶ್ನೆಯ ಹಾಗೆ). 

ಅವಮಾನದಿಂದ ಕುಗ್ಗಿಹೋಗಿ ವರ್ಷಗಳ ಕಾಲ ಅಜ್ಞಾತವಾಸದಲ್ಲಿದ್ದ ಸಂಜಯ್ ಜೋಷಿ ತನ್ನ ಮೇಲಿನ ಆರೋಪದಿಂದ ಮುಕ್ತರಾದ ನಂತರ ಮತ್ತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಆಗ ಮತ್ತೆ  ಬುಸುಗುಟ್ಟತೊಡಗಿದ್ದವರು ನರೇಂದ್ರ ಮೋದಿ. 

ಈ ಬಾರಿ ಪಕ್ಷವನ್ನೇ ತನ್ನ ಬೇಕು-ಬೇಡಗಳಿಗೆ ಒಪ್ಪುವ ಹಾಗೆ ಕುಣಿಸುವಷ್ಟು ಬೆಳೆದಿರುವ ಮೋದಿ ನೇರ ಕಾರ್ಯಾಚರಣೆಯಲ್ಲಿ ಜೋಷಿ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಮೋದಿ ಮತ್ತು ಜೋಷಿ ಇಬ್ಬರೂ ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಆರ್‌ಎಸ್‌ಎಸ್ ಪ್ರವೇಶಿಸಿದವರು. 

ಗುಜರಾತ್‌ನಲ್ಲಿ ಇಂದು ಬಿಜೆಪಿ ಭದ್ರವಾಗಿ ಬೇರೂರಿದ್ದರೆ ಅದಕ್ಕೆ ಮೋದಿ ಅವರಂತೆ ಜೋಷಿಯವರೂ ಕಾರಣ. 2001ರಲ್ಲಿ ಕೇಶುಭಾಯಿ ಪಟೇಲ್ ಪದಚ್ಯುತಿಯಾದ ನಂತರ  ಗುಜರಾತ್ ಮುಖ್ಯಮಂತ್ರಿಯಾದ ನರೇಂದ್ರ ಮೋದಿ ಮೊದಲು ಮಾಡಿದ ಕೆಲಸ ಸಂಜಯ್ ಜೋಷಿ ಅವರನ್ನು ರಾಜ್ಯದಿಂದ ಹೊರಹಾಕಿದ್ದು. ಆಗಲೂ ಮೋದಿ ಒತ್ತಡಕ್ಕೆ ಮಣಿದ ಬಿಜೆಪಿ ಜೋಷಿ ಅವರನ್ನು ಗುಜರಾತ್‌ನಿಂದ ಕರೆಸಿಕೊಂಡು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿತ್ತು.

ಬಿಜೆಪಿಯ ಈಗಿನ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಸಂಜಯ್ ಜೋಷಿ ಇಬ್ಬರದ್ದೂ ಒಂದೇ ಊರು. ನಾಗಪುರದಲ್ಲಿ ಇಬ್ಬರೂ ಜತೆಯಲ್ಲಿ ಆರ್‌ಎಸ್‌ಎಸ್ ಶಾಖೆಗೆ ಹೋಗುವ ಮೂಲಕ ಪರಿವಾರ ಸೇರಿದವರು. ಇಬ್ಬರು ಬೆಳೆಯುತ್ತಾ ಹೋದಂತೆ ಹಿಡಿದ ದಾರಿ ಮಾತ್ರ ಎಂದೂ ಪರಸ್ಪರ ಸಂಧಿಸಲು ಸಾಧ್ಯ ಇಲ್ಲದ್ದು.

ಮೊನ್ನೆಮೊನ್ನೆವರೆಗೆ ಜೋಷಿ ಅವರ ಬೆಂಬಲಕ್ಕೆ ನಿಂತಿದ್ದ ಪಕ್ಕಾ ವ್ಯಾಪಾರಿಯಂತೆ ಕಾಣುವ ಗಡ್ಕರಿ  ಇದ್ದಕ್ಕಿದ್ದಂತೆ ಬಾಲ್ಯದ ಗೆಳೆಯನ ಕೈಬಿಟ್ಟು ಮೋದಿ ಜತೆ ಸೇರಿಕೊಂಡಿದ್ದಾರೆ. ಆರ್‌ಎಸ್‌ಎಸ್‌ಭೀಷ್ಮಾಚಾರ್ಯರೆಲ್ಲ  `ಹಿಂದೂ ಹೃದಯ ಸಾಮ್ರಾಟ`ನ ಆದೇಶಕ್ಕೆ ತಲೆಯಾಡಿಸುತ್ತಾಕೂತಿದ್ದಾರೆ.

ಮುಂಬೈನಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕಾರಿಣಿ ನಂತರದ ಬೆಳವಣಿಗೆಗಳನ್ನು ನೋಡಿದರೆ ಪಕ್ಷದ ಏಕಮೇವಾದ್ವಿತಿಯ ನಾಯಕನಾಗಿ ನರೇಂದ್ರಮೋದಿ  ಉದಯಿಸಿರುವ ಹಾಗೆ ಕಾಣುತ್ತಿದೆ. `ಮೋದಿ ಅವರೇ ಮುಂದಿನ ಪ್ರಧಾನಿ` ಎಂದು ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗುವ ಮೊದಲೇ ಅವರ ಅಭಿಮಾನಿ ಬಳಗ ಜಯಘೋಷ ಮಾಡುತ್ತಿದೆ. 

ವಿಚಿತ್ರವೆಂದರೆ ಈ ಸಂಭ್ರಮ-ಸಡಗರ ಮೋದಿ ಅವರ ಪಕ್ಷದ ಇಲ್ಲವೇ, ಆರ್‌ಎಸ್‌ಎಸ್, ವಿಎಚ್‌ಪಿ, ಎಬಿವಿಪಿ, ಎಚ್‌ಎಂಎಸ್‌ನ ನಾಯಕರ ಮುಖಗಳಲ್ಲಿ ಕಾಣುತ್ತಿಲ್ಲ. ಮೋದಿ ಅವರ ಬಹುಕಾಲದ ವಿರೋಧಿಗಳಾಗಿರುವ ಕೇಶುಭಾಯಿ ಪಟೇಲ್, ಸುರೇಶ್‌ಮೆಹ್ತಾ, ರಾಣಾ ಮೊದಲಾದವರು ರಾಜ್ಯದಲ್ಲಿ ಮತ್ತೆ ಬಂಡೆದ್ದಿದ್ದಾರೆ. 

ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮೊದಲಾದವರು ಬಹಿರಂಗವಾಗಿ ಮೋದಿ ಅವರ ನಡವಳಿಕೆಯನ್ನು ವಿರೋಧಿಸಿದ್ದಾರೆ. ಬಿಜೆಪಿಯ ಹಿರಿಯ ನಾಯಕ ಲಾಲ್‌ಕೃಷ್ಣ ಅಡ್ವಾಣಿ ಅವರು ಇತ್ತೀಚೆಗೆ ತಮ್ಮ ಬ್ಲಾಗ್‌ನಲ್ಲಿ ನಿತಿನ್ ಗಡ್ಕರಿ ಕಾರ್ಯಶೈಲಿಯನ್ನು ಟೀಕಿಸಿದ್ದರೂ ಅವರ ಬಾಣದ ಗುರಿ ನರೇಂದ್ರಮೋದಿಯವರೇ ಆಗಿದ್ದಾರೆ.

ಸಂಘ ಪರಿವಾರ ಎನ್ನುವುದು ಈಗ ಒಡೆದ ಮನೆ. ಬಿಜೆಪಿಯ ಮುಖವಾಣಿ ಪತ್ರಿಕೆಯಾದ `ಕಮಲ ಸಂದೇಶ`ದಲ್ಲಿ ಮೋದಿ ವಿರುದ್ಧ ಲೇಖನ ಪ್ರಕಟವಾಗಿದ್ದರೆ, ಆರ್‌ಎಸ್‌ಎಸ್ ಮುಖವಾಣಿ `ಆರ್ಗನೈಸರ್` ಪತ್ರಿಕೆಯಲ್ಲಿ ಮೋದಿ ಅವರನ್ನು ಅಟಲಬಿಹಾರಿ ವಾಜಪೇಯಿ ಅವರಿಗೆ ಹೋಲಿಸಿ ಹೊಗಳಿ ಬರೆಯಲಾಗಿದೆ.

ನಿಯಂತ್ರಣ ಮೀರಿ ಬೆಳೆಯುತ್ತಿರುವ ಮೋದಿ ಬಗ್ಗೆ ಆರ್‌ಎಸ್‌ಎಸ್ ನಾಯಕರಲ್ಲಿಯೂ ಅಸಮಾಧಾನ ಇದೆ. ಅನುಯಾಯಿಗಳ ಒತ್ತಡದಿಂದಾಗಿ ಅವರೂ ತುಟಿ ಬಿಚ್ಚಲಾರರು. ಬಿಜೆಪಿ ಮೂಲಕ ಅಧಿಕಾರದ ರುಚಿ ಕಂಡಿರುವ ಆರ್‌ಎಸ್‌ಎಸ್ ನಾಯಕರು ಇತ್ತೀಚಿನ ವರ್ಷಗಳಲ್ಲಿ ಬದಲಾಗಿ ಹೋಗಿದ್ದಾರೆ. 

ಆದರೆ ಸಂಘ ಸಾರುತ್ತಿದ್ದ ಹಿಂದುತ್ವದ ಮೂಲಸಿದ್ಧಾಂತಕ್ಕೆ ಈಗಲೂ ಬದ್ಧವಾಗಿರುವ ಅನುಯಾಯಿಗಳ ಒಂದು ವರ್ಗ ಮೋದಿ ಅವರಲ್ಲಿಯೇ ಭವಿಷ್ಯದ ನಾಯಕನನ್ನು ಕಾಣತೊಡಗಿದೆ. 

ಇದರಿಂದಾಗಿ ತಮ್ಮ ಮೇಲೆ ಸವಾರಿ ಮಾಡಲು ಹೊರಟಿರುವ ನರೇಂದ್ರ ಮೋದಿ ಅವರ ಬಗ್ಗೆ ಎಷ್ಟೇ ಅಸಮಾಧಾನ ಇದ್ದರೂ ಆರ್‌ಎಸ್‌ಎಸ್ ಅನಿವಾರ್ಯವಾಗಿ ಮೋದಿ ಅವರನ್ನು ಬೆಂಬಲಿಸುತ್ತಿರುವಂತೆ ಕಾಣುತ್ತಿದೆ.

ನರೇಂದ್ರ ಮೋದಿಯವರು ಹೊಸದೇನನ್ನೂ ಮಾಡಲು ಹೊರಟಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಗುಜರಾತ್‌ನಲ್ಲಿಯೇ ಮಾಡಿದ್ದನ್ನು ಈಗ ರಾಷ್ಟ್ರಮಟ್ಟದಲ್ಲಿ ಮಾಡಲು ಹೊರಟಿದ್ದಾರೆ.

ಮುಖ್ಯಮಂತ್ರಿಯಾದ ನಂತರ ನರೇಂದ್ರ ಮೋದಿ ಗುಜರಾತ್‌ನಲ್ಲಿ ಮೊದಲು ಮಾಡಿದ್ದು ವಿಶ್ವಹಿಂದೂ ಪರಿಷತ್, ಎಚ್‌ಎಂಎಸ್, ಎಬಿವಿಪಿ ಮೊದಲಾದ ಸಂಘ ಪರಿವಾರದ ಅಂಗಸಂಸ್ಥೆಗಳ ನಾಯಕರ ಬಾಯಿಮುಚ್ಚಿಸಿದ್ದು. ವಿಎಚ್‌ಪಿಯ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯಾ ಈಗಲೂ ತನ್ನ ಹುಟ್ಟೂರಿನಲ್ಲಿಯೇ ತುಟಿಬಿಚ್ಚುವಂತಿಲ್ಲ.

ಎಲ್.ಕೆ.ಅಡ್ವಾಣಿ ಅವರು ಈಗ ಗುಡುಗುತ್ತಿದ್ದರೂ ಪಕ್ಷದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅವರು ಮೋದಿ ಹಿತರಕ್ಷಕನಾಗಿಯೇ ಕೆಲಸ ಮಾಡಿದ್ದು. `ರಾಜಧರ್ಮ` ಪಾಲಿಸುವಂತೆ ವಾಜಪೇಯಿ ಕರೆಕೊಟ್ಟ ನಂತರ ಇನ್ನೇನು ಮೋದಿ ಪದಚ್ಯುತಿಯಾಗಿಯೇ ಹೋಯಿತು ಎಂದು ಎಲ್ಲರೂ ತಿಳಿದಿದ್ದರು.

ಆಗ ಅವರನ್ನು ರಕ್ಷಿಸಿದ್ದು ಅಡ್ವಾಣಿ. ಮೋದಿ ನೆರವಿಲ್ಲದೆ ಇದ್ದರೆ ಲೋಕಸಭೆಗೆ ಆರಿಸಿಬರುವುದು ಕಷ್ಟ ಎನ್ನುವುದು ಈ ಶರಣಾಗತಿಗೆ ಒಂದು ಕಾರಣವಾದರೆ, ಪ್ರಧಾನಮಂತ್ರಿ ಸ್ಥಾನದ ಓಟಕ್ಕೆ ಇಳಿದಾಗ ಮೋದಿ ಬೆಂಬಲಿಸಬಹುದು ಎಂಬ ದೂರಾಲೋಚನೆ ಇನ್ನೊಂದು ಕಾರಣ ಇರಬಹುದು.

ಗುಜರಾತ್‌ನಲ್ಲಿ ಈಗ ಇರುವುದು ದೇಶದ ಉಳಿದೆಡೆ ಕಾಣುತ್ತಿರುವ ಬಿಜೆಪಿ ಖಂಡಿತ ಅಲ್ಲ, ಅದು ನರೇಂದ್ರ ಮೋದಿ ಬಿಜೆಪಿ. ಆ ರಾಜ್ಯದ ಬಿಜೆಪಿಯನ್ನು ಅವರು ಪ್ರತ್ಯೇಕ ಪ್ರಾದೇಶಿಕ ಪಕ್ಷದಂತೆಯೇ ನಡೆಸಿಕೊಂಡು ಬಂದಿದ್ದಾರೆ. ಪಕ್ಕಾ ಪಾಳೆಯಗಾರನಂತೆ ವಿರೋಧಿಸಿದವರ ತಲೆ ಕಡಿಯುತ್ತಾ, ಶರಣಾದವರನ್ನು ಅಡಿಯಾಳುಗಳನ್ನಾಗಿ ಮಾಡುತ್ತಾ ಬಂದಿದ್ದಾರೆ. 

ಈಗ ಇಡೀ ಪಕ್ಷವನ್ನೇ ಅಪಹರಣ ಮಾಡಲು ಹೊರಟಿದ್ದಾರೆ. ಅಪಹರಣ ಎಂದರೆ ಪ್ರತಿಭಟಿಸಿದವರ ಕೈಕಾಲು ಕಟ್ಟಿಹಾಕಿ, ಬಾಯಿಮುಚ್ಚಿಸಿ ಹೊತ್ತುಕೊಂಡು ಹೋಗುವುದು. ಮೋದಿ ಅದನ್ನೇ ಮಾಡುತ್ತಿದ್ದಾರೆ. ಕಾನೂನು ಪ್ರಕಾರ ಅಪಹರಣ ಎನ್ನುವುದು ಅಪರಾಧ.

ಆದರೆ `ಅಪಹರಣಕಾರನ` ಜತೆ ಶಾಮೀಲಾಗಿರುವ ಆರ್‌ಎಸ್‌ಎಸ್‌ನ ನ್ಯಾಯಶಾಸ್ತ್ರದಲ್ಲಿ ಅಪಹರಣಕ್ಕೆ ಬೇರೆ ಅರ್ಥ ಇದ್ದರೂ ಇರಬಹುದು ಇಲ್ಲವೇ ಅಪಹರಣಕಾರರ ಜತೆಯಲ್ಲಿಯೇ ಬದುಕುತ್ತಾ ಕೊನೆಗೆ ಆತನನ್ನೇ ಪ್ರೀತಿಸುವ `ಸ್ಟಾಕ್‌ಹೋಂ ಸಿಂಡ್ರೋಮ್`ಗೆ ಆರ್‌ಎಸ್‌ಎಸ್ ಒಳಗಾಗಿರಬಹುದು.

ಉಳಿದವರ ಗೊಂದಲ ಏನೇ ಇದ್ದರೂ ನರೇಂದ್ರ ಮೋದಿ ಅವರಿಗೆ ತನ್ನ ಮುಂದಿನ ದಾರಿ ಬಗ್ಗೆ ಸ್ಪಷ್ಟತೆ ಇರುವಂತೆ ಕಾಣುತ್ತಿದೆ. ಅವರ ರಾಜಕೀಯ ಜೀವನದಲ್ಲಿ ಮುಂದಿನ ಎರಡು ವರ್ಷಗಳು ನಿರ್ಣಾಯಕವಾದುದು. 

ಈ ವರ್ಷದ ಕೊನೆಯಲ್ಲಿ ಅವರು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿದೆ, ಆ ಚುನಾವಣೆಯ ಫಲಿತಾಂಶ, ನಂತರದ ಒಂದೂವರೆ ವರ್ಷಗಳ ಅವಧಿಯಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಅವರ ಪಾತ್ರವನ್ನು ನಿರ್ಧರಿಸಲಿದೆ. 

ಇದಕ್ಕಾಗಿಯೇ ಅವರು ತಾಲೀಮು ಪ್ರಾರಂಭಿಸಿರುವುದು. ಅಡ್ವಾಣಿಯವರನ್ನೋ, ಸುಷ್ಮಾ ಸ್ವರಾಜ್ ಅವರನ್ನೋ ಪ್ರಧಾನಿಯಾಗಿ ಮಾಡುವುದು ಅವರ ಉದ್ದೇಶ ಖಂಡಿತ ಅಲ್ಲ. ತಾನೇ ಪ್ರಧಾನಿಯಾಗಬೇಕೆಂಬ ಆಕಾಂಕ್ಷೆ ಅವರಲ್ಲಿ ಎಂದೋ ಹುಟ್ಟಿಕೊಂಡು ಬಲವಾಗಿ ಬೇರುಬಿಟ್ಟಿದೆ. 

ಈ ಮಹತ್ವಾಕಾಂಕ್ಷಿ ಮೋದಿಯವರನ್ನು ನೊಡಿದಾಗ ಯಾಕೋ ಅಧಿಕಾರವನ್ನು ಉಳಿಸಿಕೊಳ್ಳಲು ಸರ್ವಾಧಿಕಾರಿಯಾಗಿ ಬದಲಾಗಿ ಹೋದ ಇಂದಿರಾಗಾಂಧಿ ನೆನಪಾಗುತ್ತಾರೆ. ಅವರ ವಿರೋಧಿಗಳು ಕೂಡಾ ಮೋದಿ ಅವರನ್ನು ಸರ್ವಾಧಿಕಾರಿ ಎಂದು ಟೀಕಿಸಿದ್ದಾರೆ. 

ಇಂದಿರಾಗಾಂಧಿಯವರಂತೆಯೇ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿರುವ ಮೋದಿ ಬಯಸಿದ್ದನ್ನು ಪಡೆಯಲು ಏನು ಬೇಕಾದರು ಮಾಡಲು ಹಿಂಜರಿಯಲಾರರು. ಮಹತ್ವಾಕಾಂಕ್ಷಿಗಳ ಹಾದಿ ತಪ್ಪಿಸುವುದು ಸೋಲಿನ ಭೀತಿಯಿಂದ ಹುಟ್ಟುವ ಹತಾಶೆ.

ಹತಾಶೆಗೀಡಾದ ವ್ಯಕ್ತಿ ಪರಿಣಾಮವನ್ನು ಲೆಕ್ಕಿಸದೆ ತನಗೆ ಸರಿಕಂಡ ದಾರಿಯಲ್ಲಿ ನುಗ್ಗುತ್ತಾನೆ. ಹತ್ತುವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಕೋಮುಗಲಭೆಯನ್ನು ಕಣ್ಣಾರೆ ನೋಡಿದ ನನಗೆ  ಯಾಕೋ ದೇಶದಲ್ಲಿ ಗುಜರಾತ್ ಕಾಣತೊಡಗಿದೆ. ನನ್ನ ಭೀತಿ 

Thursday, June 7, 2012

ಸಿದ್ದರಾಮಯ್ಯನವರಿಗೆ ಬೇರೆ ದಾರಿಯೇ ಇಲ್ಲ June 04, 2012

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ವಿರೋಧಪಕ್ಷಗಳ ಅಗತ್ಯ ಇಲ್ಲವೇ ಇಲ್ಲ, ಮತದಾರರೂ ಬೇಕಾಗಿಲ್ಲ. ಕಾಂಗ್ರೆಸ್ ಪಕ್ಷವೇ ಸಾಕು. ಭ್ರಷ್ಟಾಚಾರ, ಭಿನ್ನಮತ ಮತ್ತು ಅನೈತಿಕ ಚಟುವಟಿಕೆಗಳಿಂದಾಗಿ ಅವಸಾನದ ಪ್ರಪಾತದೆಡೆಗೆ ರಭಸದಿಂದ ಸಾಗುತ್ತಿರುವ ಆಡಳಿತಾರೂಢ ಬಿಜೆಪಿ, ಚುನಾವಣೆಯನ್ನು ಎದುರಿಸುವ ಮೊದಲೇ ಸೋಲಿನ ಭೀತಿಯಲ್ಲಿದೆ. 

ಕಳೆದ ಏಳುವರ್ಷಗಳಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿರುವ ಕಾಂಗ್ರೆಸ್  ರಾಜಕೀಯವಾಗಿ ಅನುಕೂಲವಾಗಿರುವ ಈ ಪರಿಸ್ಥಿತಿಯಲ್ಲಿ ನಿರಾಯಾಸವಾದ ಗೆಲುವಿನ ಕನಸನ್ನಾದರೂ ಕಾಣಲು ಸಾಧ್ಯವಾಗಬೇಕಾಗಿತ್ತು, ಆದರೆ, ಅದರ ನಾಯಕರನ್ನು ಸೋಲಿನ ದುಃಸ್ವಪ್ನ  ಬೆಚ್ಚಿಬೀಳಿಸತೊಡಗಿದೆ.

ಕರ್ನಾಟಕವೇನು ಕಾಂಗ್ರೆಸ್ ತಲೆ ಎತ್ತಲಾಗದಷ್ಟು ನೆಲಕಚ್ಚಿರುವ ಉತ್ತರಪ್ರದೇಶ, ಬಿಹಾರ ರಾಜ್ಯಗಳಂತಲ್ಲ. ಭೇದಿಸಲಾಗದ ರೀತಿಯಲ್ಲಿ ವಿರೋಧಪಕ್ಷಗಳು ಕೋಟೆ ಕಟ್ಟಿಕೊಂಡಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ರಾಜ್ಯಗಳೂ ಅಲ್ಲ. ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಪಾರು ಮಾಡಿದ ರಾಜ್ಯ ಕರ್ನಾಟಕ, ಇಂದಿರಾಗಾಂಧಿಗೆ ರಾಜಕೀಯ ಮರುಹುಟ್ಟುನೀಡಿದ, ಸೋನಿಯಾಗಾಂಧಿಯವರನ್ನು ಗೆಲ್ಲಿಸಿ ಕಳುಹಿಸಿದ ರಾಜ್ಯ ಇದು. 

ಸ್ವತಂತ್ರ ಭಾರತದಲ್ಲಿ ನಡೆದ ಹದಿಮೂರು ಚುನಾವಣೆಗಳಲ್ಲಿ ಮೂರನ್ನು ಹೊರತುಪಡಿಸಿದರೆ ಉಳಿದೆಲ್ಲವನ್ನೂ ಕಾಂಗ್ರೆಸ್ ಇಲ್ಲಿ ಗೆದ್ದಿದೆ. ಕಳೆದ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರ ಸಂಖ್ಯೆಯ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಸೋತಿದ್ದರೂ, ಬಿಜೆಪಿಗಿಂತ ಶೇಕಡಾ 0.74ರಷ್ಟು ಹೆಚ್ಚು ಮತಗಳನ್ನು ಪಡೆದಿತ್ತು.
 
ಹೀಗಿದ್ದರೂ ಮುಂದಿನ ಚುನಾವಣೆಯ ನಂತರ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂದು ಆತ್ಮವಿಶ್ವಾಸದಿಂದ ಹೇಳುವ ಕಾಂಗ್ರೆಸ್ ನಾಯಕರ ಸಂಖ್ಯೆ ಕಡಿಮೆ. ಇದಕ್ಕೆ ಮುಖ್ಯ ಕಾರಣ ದೆಹಲಿಯಲ್ಲಿ ಕೂತಿರುವ ಹೈಕಮಾಂಡ್ ನಾಯಕರು ಒಂದಾದರ ಮೇಲೊಂದರಂತೆ ಕೈಗೊಳ್ಳುತ್ತಾ ಬಂದ ಆತ್ಮಹತ್ಯಾಕಾರಿ ನಿರ್ಧಾರಗಳು.

ಇವುಗಳಲ್ಲಿ ಇತ್ತೀಚಿನದು ಸಿದ್ದರಾಮಯ್ಯನವರು ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಬೆಳವಣಿಗೆ. ಜನಪ್ರಿಯ ನಾಯಕನೊಬ್ಬ ಯಾವುದೇ ರಾಜಕೀಯ ಪಕ್ಷದ ಪಾಲಿಗೆ ಸಮಸ್ಯೆಯ ಪರಿಹಾರ ಮತ್ತು ಸಮಸ್ಯೆ ಎರಡೂ ಆಗಲು ಸಾಧ್ಯ. ಅವರು ಏನಾಗುತ್ತಾರೆ ಎನ್ನುವುದು ಪಕ್ಷ ಮತ್ತು ಆ ನಾಯಕನ ನಡವಳಿಕೆಯನ್ನು ಅವಲಂಬಿಸಿರುತ್ತದೆ.  ಕಾಂಗ್ರೆಸ್ ಪಕ್ಷಕ್ಕಾಗಲಿ, ಸಿದ್ದರಾಮಯ್ಯನವರಾಗಲಿ ರಾಜಕೀಯ ಶಾಲೆಯ ಈ ಸಾಮಾನ್ಯ ಪಾಠ ಗೊತ್ತಿಲ್ಲ ಎಂದು ಹೇಳಲಾಗದು. 

ಸಿದ್ದರಾಮಯ್ಯನವರ ಕಣ್ಣಿಗೆ ಎಲ್ಲವೂ ನುಣ್ಣಗೆ ಕಾಣಲು ಕಾಂಗ್ರೆಸ್ ಪಕ್ಷ ದೂರದ ಬೆಟ್ಟ ಅಲ್ಲ. ಅದರ ಜತೆಯಲ್ಲಿಯೇ ಅವರು ಗುದ್ದಾಡಿಕೊಂಡು ರಾಜಕೀಯ ಮಾಡಿಕೊಂಡು ಬಂದವರು. ಅದೇ ರೀತಿ ಸಿದ್ದರಾಮಯ್ಯ ಕೂಡಾ ಅನ್ಯಗ್ರಹದಿಂದ ಉದುರಿಬಿದ್ದ ನಾಯಕನಲ್ಲ, ಅವರನ್ನು ಕಾಂಗ್ರೆಸ್ ಪಕ್ಷದೊಳಗೆ ಎಳೆದುಕೊಂಡು ಬಂದವರಿಗೂ ಅವರ ಗುಣ-ಸ್ವಭಾವ, ನೀತಿ-ನಿಲುವುಗಳೆಲ್ಲವೂ ಗೊತ್ತಿತ್ತು. 

ಪ್ರಾದೇಶಿಕ ಪಕ್ಷದ ನಾಯಕತ್ವಕ್ಕೆ ಹೇಳಿ ಮಾಡಿಸಿದಂತಹ ರಾಜಕೀಯ ವ್ಯಕ್ತಿತ್ವದ ಸಿದ್ದರಾಮಯ್ಯ, ಹೈಕಮಾಂಡ್ ಸಂಸ್ಕೃತಿಯ ಕಾಂಗ್ರೆಸ್ ಪಕ್ಷಕ್ಕೆ ಹೊಂದಿಕೊಳ್ಳುವುದು ಕಷ್ಟ ಎನ್ನುವುದನ್ನು ಅವರ ಶತ್ರುಗಳು ಮಾತ್ರವಲ್ಲ ಮಿತ್ರರೂ  ಹೇಳುತ್ತಿದ್ದರು. ಪರಸ್ಪರ ಗುಣಾವಗುಣಗಳ ಅರಿವಿದ್ದು  ಮಾಡಿಕೊಂಡ ಸಂಬಂಧ ಈಗ ಮುರಿದುಬೀಳುವ ಸ್ಥಿತಿಯಲ್ಲಿದೆ.

ಸಿದ್ದರಾಮಯ್ಯನವರ ಆಯ್ಕೆಯ ಅಭ್ಯರ್ಥಿಗಳ ಅರ್ಹತೆ-ಅನರ್ಹತೆಗಳು ಪ್ರತ್ಯೇಕ ಚರ್ಚೆಯ ವಿಚಾರ. ಆದರೆ ರಾಷ್ಟ್ರೀಯ ಪಕ್ಷವೊಂದರಲ್ಲಿ ವಿಧಾನಪರಿಷತ್‌ಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಶಾಸಕಾಂಗ ಪಕ್ಷದ ನಾಯಕನ ಜತೆ ಸಮಾಲೋಚನೆ ಮಾಡದೆ ಇರುವುದು ಮೂರ್ಖತನವಲ್ಲದೆ ಮತ್ತೇನಲ್ಲ. ಅವಮಾನಿಸಲೇಬೇಕೆಂಬ ದುರುದ್ದೇಶ ಇಲ್ಲದೆ ಹೋದರೆ ಈ ರೀತಿ ಯಾವ ಪಕ್ಷವೂ ಮಾಡಲು ಸಾಧ್ಯ ಇಲ್ಲ. 

ಸಿದ್ದರಾಮಯ್ಯನವರು ಸಿಡಿಯಲು ಈಗಿನ ಅಸಮಾಧಾನವೊಂದೇ ಖಂಡಿತ ಕಾರಣ ಅಲ್ಲ. ಪಕ್ಷದ ನಿರ್ಲಕ್ಷ್ಯ ಮತ್ತು ಅವಮಾನ ಸಿದ್ದರಾಮಯ್ಯನವರಿಗೆ ಹೊಸತಲ್ಲ, ಕಾಂಗ್ರೆಸ್ ಸೇರಿದ ನಂತರದ ಕಳೆದ ಆರು ವರ್ಷಗಳ ಅವಧಿಯಲ್ಲಿ ಅವರು ಅದನ್ನು ಎದುರಿಸುತ್ತಲೇ ಬಂದಿದ್ದಾರೆ.
 
ಸಿದ್ದರಾಮಯ್ಯನವರ ಸಹಜ ಸ್ವಭಾವದ ಪ್ರಕಾರ ಅವರೆಂದೋ ಸ್ಫೋಟಿಸಬೇಕಾಗಿತ್ತು. ಸಂಯಮವನ್ನು ಕಾಪಾಡಿಕೊಂಡು ಹೋಗಬೇಕೆಂಬ ಔದಾರ್ಯದಿಂದಲೋ, ಬೇರೆ ಮಾರ್ಗಗಳಿಲ್ಲದ ಅಸಹಾಯಕತೆಯಿಂದಲೋ ಅವರು ಬಾಯಿಮುಚ್ಚಿಕೊಂಡು ಸಹಿಸುತ್ತಾ ಬಂದಿದ್ದಾರೆ. ಎರಡನೆಯದೇ ನಿಜವಾದ ಕಾರಣ ಇರಬಹುದು.

ಕಾಂಗ್ರೆಸ್ ರಾಜಕಾರಣವನ್ನು ನೋಡುತ್ತಾ ಬಂದವರಿಗೆ ಸಿದ್ದರಾಮಯ್ಯನವರನ್ನು ಆ ಪಕ್ಷ ನಡೆಸಿಕೊಂಡು ಬಂದ ರೀತಿಯಿಂದ ಅಚ್ಚರಿಯಾಗದು. ವಿರೋಧ ಪಕ್ಷವನ್ನು ದುರ್ಬಲಗೊಳಿಸಲು ಅದರೊಳಗಿನ ಅತೃಪ್ತ ನಾಯಕರನ್ನು ಮೊದಲು ಸೆಳೆದುಕೊಳ್ಳುವುದು ನಂತರ ಅವರನ್ನು ಎಲ್ಲೋ ಮೂಲೆಗೆ ತಳ್ಳಿಬಿಡುವುದು ಅದರ ಹಳೆಯ ಕಾರ್ಯತಂತ್ರ. ಒಮ್ಮೆ ಮೂಲ ಪಕ್ಷವನ್ನು ತೊರೆದುಬಂದ ನಂತರ ಮರಳಿಹೋಗುವ ಸ್ಥಿತಿಯಲ್ಲಿ ಅವರು ಇರುವುದಿಲ್ಲ. ಅವಮಾನ-ಅನಾದರಣೆಯನ್ನು ಸಹಿಸಿಕೊಂಡು ಇಲ್ಲಿಯೇ ಇರಬೇಕಾಗುತ್ತದೆ. 

ಗುಜರಾತ್‌ನಲ್ಲಿ ಬಿಜೆಪಿ ಬಿಟ್ಟುಬಂದ ಶಂಕರ್‌ಸಿಂಗ್ ವಘೇಲಾ, ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಟ್ಟುಬಂದ ಛಗನ್ ಭುಜಬಲ್ ಮೊದಲಾದವರು ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯಲು ಅವಕಾಶ ಸಿಗಲೇ ಇಲ್ಲ. ಸಿದ್ದರಾಮಯ್ಯನವರದ್ದೂ ಇದೇ ಸ್ಥಿತಿ.

ಸಿದ್ದರಾಮಯ್ಯನವರ ಬಗ್ಗೆ ಕಾಂಗ್ರೆಸ್ ನಡವಳಿಕೆಯೇ ಮೂರ್ಖತನದ್ದು, ಮೊದಲನೆಯದಾಗಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಪಕ್ಷದೊಳಗೆ ಆಗಲೇ ಹಿರಿಯ ನಾಯಕರು ತುಂಬಿ ತುಳುಕಾಡುತ್ತಿದ್ದರು, ಜತೆಗೆ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಪಕ್ಷಾಂತರಗೊಂಡವರ ಕಾರಣದಿಂದ `ಮೂಲನಿವಾಸಿಗಳು` ಮತ್ತು `ವಲಸೆಕೋರರ` ನಡುವಿನ ಸಂಘರ್ಷ ಪ್ರಾರಂಭವಾಗಿ ಬಿಟ್ಟಿತ್ತು. 

ಈ ಸ್ಥಿತಿಯಲ್ಲಿ ಸಿದ್ದರಾಮಯ್ಯನವರಂತಹ ಹಿರಿಯ ನಾಯಕರನ್ನು ಕರೆತಂದರೂ ಉನ್ನತ ಸ್ಥಾನಮಾನ ನೀಡುವುದು ಸುಲಭದ ಕೆಲಸ ಆಗಿರಲಿಲ್ಲ. ಎರಡನೆಯದಾಗಿ ಸೇರಿಸಿಕೊಂಡ ನಂತರ ಆಂತರಿಕ ವಿರೋಧಗಳೇನೇ ಇದ್ದರೂ ಅದನ್ನು ಲೆಕ್ಕಿಸದೆ  ಸೂಕ್ತ ಸ್ಥಾನಮಾನ ನೀಡಿ ಅವರನ್ನು ಪಕ್ಷದ ಬಲವರ್ಧನೆಗೆ ಬಳಸಿಕೊಳ್ಳಬೇಕಾಗಿತ್ತು. ಆದರೆ ಕಾಂಗ್ರೆಸ್ ಮಾಡಿದ್ದೇ ಬೇರೆ. ಸಿದ್ದರಾಮಯ್ಯನವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕೈಬಿಟ್ಟು ಬಿಟ್ಟಿತು. 

ಅಲ್ಲಿಗೆ ಪಕ್ಷದೊಳಗಿನ ಅತೃಪ್ತನಾಯಕರ ಪಟ್ಟಿಗೆ ಇನ್ನೊಬ್ಬರು ಸೇರ್ಪಡೆಯಾದರು ಅಷ್ಟೆ.
ಪಕ್ಷಕ್ಕೆ ಸೇರಿಸಿಕೊಳ್ಳಲು ತಮ್ಮ ಮೇಲಿನ ಪ್ರೀತಿಗಿಂತಲೂ ಹೆಚ್ಚಾಗಿ ದೇವೇಗೌಡರ ಮೇಲಿನ ದ್ವೇಷ ಕಾರಣ ಎನ್ನುವುದು ಸಿದ್ದರಾಮಯ್ಯನವರಿಗೂ ಗೊತ್ತಿತ್ತು. ಪ್ರೀತಿ ಇದ್ದಿದ್ದರೆ ಅದು ತಮ್ಮ ಸಮುದಾಯದ ನಾಯಕನೆಂಬ ಅಭಿಮಾನದಿಂದಾಗಿ  ಅವರನ್ನು ಪಕ್ಷಕ್ಕೆ ಕರೆತರಲು ಬಹಿರಂಗವಾಗಿಯೇ ಪ್ರಯತ್ನದಲ್ಲಿ ತೊಡಗಿದ್ದ ಎಚ್. ವಿಶ್ವನಾಥ್ ಮತ್ತು ಎಚ್.ಎಂ.ರೇವಣ್ಣನಂತಹವರಲ್ಲಿತ್ತೋ ಏನೋ? 

ಆದರೆ, ಅವರಿಗಿಂತಲೂ ನಿರ್ಣಾಯಕ ಪಾತ್ರವನ್ನು ವಹಿಸಿದ್ದವರು ಆಗ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದ ಎಸ್. ಎಂ.ಕೃಷ್ಣ ಅವರು. ಅದಕ್ಕೆ ಕಾರಣ ಅವರಿಗೆ ದೇವೇಗೌಡರ ಮೇಲೆ ರಾಜಕೀಯವಾಗಿ ಇದ್ದ ದ್ವೇಷ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಅತೃಪ್ತ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ದೇವೇಗೌಡರ ಪಕ್ಷದ ಬಲ ಕುಂದಿಸುವುದು ಅವರ ಲೆಕ್ಕಾಚಾರವಾಗಿತ್ತು. 

ಕಾಂಗ್ರೆಸ್ ಪಕ್ಷಕ್ಕೂ ಇದು ಬೇಕಾಗಿತ್ತು. ಈ ಪ್ರೀತಿ-ದ್ವೇಷದ ಆಟದ ಬಗ್ಗೆ ಅರಿವಿದ್ದೂ ಸಿದ್ದರಾಮಯ್ಯ ದಾಳವಾದರು. ಜೆಡಿ(ಎಸ್) ಬಿಟ್ಟು ಹೊರಬಂದ ಸಿದ್ದರಾಮಯ್ಯನವರ ಬಗ್ಗೆ ಕೃಷ್ಣ ಅವರಿಗೂ ಹೆಚ್ಚಿನ ಆಸಕ್ತಿ ಇರಲಿಲ್ಲ. ಸಿದ್ದರಾಮಯ್ಯನವರ ಜತೆ ಕೂಡಿಕೊಂಡರೆ ಮೈತ್ರಿಯನ್ನು ಮುರಿಯುತ್ತೇನೆ ಎಂದು ದೇವೇಗೌಡರು ನೀಡಿದ ಎಚ್ಚರಿಕೆಯನ್ನು ಧಿಕ್ಕರಿಸಿದ ಕಾರಣಕ್ಕೆ ಜೆಡಿ(ಎಸ್) ಜತೆಗಿನ ಮೈತ್ರಿಕೂಟದ ಸರ್ಕಾರವನ್ನೇ ಕಳೆದುಕೊಂಡ ಕಾಂಗ್ರೆಸ್, ಒಂದು ಸರ್ಕಾರದ ಬೆಲೆತೆತ್ತು ಬರಮಾಡಿಕೊಂಡ ಸಿದ್ದರಾಮಯ್ಯವನರನ್ನು ಮಾತ್ರ ಸರಿಯಾಗಿ ಬಳಸಿಕೊಳ್ಳಲಿಲ್ಲ.

ಸಿದ್ದರಾಮಯ್ಯನವರನ್ನು ಬಾಜಾ-ಭಜಂತ್ರಿಯೊಂದಿಗೆ ಪಕ್ಷಕ್ಕೆ ಸೇರಿಸಿಕೊಂಡ ಕಾಂಗ್ರೆಸ್ ಮೂರು ವರ್ಷಗಳ ಕಾಲ ಪಕ್ಷದಲ್ಲಿ ಯಾವುದೇ ಸ್ಥಾನಮಾನ ನೀಡದೆ ನಿರ್ಲಕ್ಷಿಸಿತ್ತು. ಖಾಲಿ ಹುದ್ದೆಗಳೇ ಇರಲಿಲ್ಲ, ಯಾರ ಹುದ್ದೆಯನ್ನೂ ಖಾಲಿ ಮಾಡಿಸುವ ಆಸಕ್ತಿಯೂ ಪಕ್ಷದ ಹೈಕಮಾಂಡ್‌ಗೆ ಇರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಎನ್. ಧರ್ಮಸಿಂಗ್ ವಿರಾಜಮಾನರಾಗಿದ್ದರು. 

ತಾಂತ್ರಿಕ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರದೆ ಜೆಡಿ (ಎಸ್)ನಲ್ಲಿಯೇ ಉಳಿದಿದ್ದ ಅವರ ಬೆಂಬಲಿಗರು ಕೂಡಾ ಮೂಲೆಗುಂಪಾಗಿ ಹೋಗಿದ್ದರು. ಅಷ್ಟು ಮಾತ್ರವಲ್ಲ ಯಾವ ಪಕ್ಷವನ್ನು ದುರ್ಬಲಗೊಳಿಸಬೇಕೆಂದು ಸಿದ್ದರಾಮಯ್ಯನವರನ್ನು ಅಲ್ಲಿಂದ ಹೊರಗೆಳೆದು ಕರೆತರಲಾಯಿತೋ ಅದೇ ಪಕ್ಷದ ಜತೆ ವಿಧಾನಸಭೆಗೆ ನಡೆಯಲಿದ್ದ ಮಧ್ಯಂತರ ಚುನಾವಣೆಯಲ್ಲಿ ಮೈತ್ರಿಮಾಡಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡತೊಡಗಿದ್ದರು.

ದೆಹಲಿಯಲ್ಲಿ ಆಸ್ಕರ್ ಫರ್ನಾಂಡಿಸ್, ಕೆ.ಎಚ್.ಮುನಿಯಪ್ಪ, ಮಾರ್ಗರೇಟ್ ಆಳ್ವ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರ ಮೂಗಿಗೆ ಎಚ್.ಡಿ.ದೇವೇಗೌಡರು ತುಪ್ಪ ಹಚ್ಚಿಬಿಟ್ಟಿದ್ದರು. ಇವರಲ್ಲಿ ಕೆಲವರು ಮುಖ್ಯಮಂತ್ರಿಯಾಗುವ ಕನಸು ಕಾಣತೊಡಗಿದ್ದರು. ಈ ಮೈತ್ರಿ ಪ್ರಯತ್ನದಿಂದ ಅಸಮಾಧಾನಗೊಂಡಿದ್ದ ಸಿದ್ದರಾಮಯ್ಯನವರಿಗೆ ರಾಜೀನಾಮೆ ಸಲ್ಲಿಸಿ ಪ್ರತಿಭಟಿಸಲು ಹುದ್ದೆಗಳು ಇರಲಿಲ್ಲವಾದ ಕಾರಣ ಮಾರಿಷಸ್-ಗೋವಾಗಳಿಗೆ ಬೆಂಬಲಿಗರೊಡನೆ ಹೋಗಿ ಗುಪ್ತಸಭೆ ನಡೆಸಿದ್ದರು. 

ಬಿಜೆಪಿ ಸೇರಬಹುದೆಂಬ ಗಾಳಿಸುದ್ದಿಯೂ ಹರಡಿತ್ತು. ಆದರೆ ಸೋನಿಯಾಗಾಂಧಿ ವಿರೋಧದಿಂದಾಗಿ ಆ ಮೈತ್ರಿ ತಪ್ಪಿಹೋಯಿತು. ಸಿದ್ದರಾಮಯ್ಯನವರ ಕಷ್ಟ ಅಲ್ಲಿಗೆ ಕೊನೆಗೊಳ್ಳಲಿಲ್ಲ. ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮಹಾರಾಷ್ಟ್ರದಲ್ಲಿ ರಾಜ್ಯಪಾಲರಾಗಿದ್ದ ಎಸ್.ಎಂ.ಕೃಷ್ಣ ಅವರು ಸಕ್ರಿಯ ರಾಜಕಾರಣಕ್ಕೆ ವಾಪಸು ಬಂದರು. ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸದಿದ್ದರೂ ಕೃಷ್ಣ ಅವರ ಪ್ರವೇಶದಿಂದ ಸಿದ್ದರಾಮಯ್ಯನವರ ಪ್ರತಿಸ್ಪರ್ಧಿಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಯಿತು.

ಮಲ್ಲಿಕಾರ್ಜುನ ಖರ್ಗೆ ಲೋಕಸಭೆಗೆ ಆಯ್ಕೆಯಾಗಿ ಹೋದ ಕಾರಣದಿಂದಾಗಿ ಖಾಲಿಯಾದ ವಿರೋಧ ಪಕ್ಷದ ನಾಯಕನ ಸ್ಥಾನವೇನೋ ಸಿದ್ದರಾಮಯ್ಯನವರಿಗೆ ಕೊನೆಗೂ ಸಿಕ್ಕಿತು. ಆದರೆ ಪಕ್ಷದ ಆಂತರಿಕ ವ್ಯವಹಾರದಲ್ಲಿ ಅವರು ಹೊರಗಿನವರಾಗಿಯೇ ಉಳಿದಿದ್ದರು. ಡಾ.ಜಿ.ಪರಮೇಶ್ವರ್ ಅವರು ಕೆಪಿಸಿಸಿ ನೂತನ ಅಧ್ಯಕ್ಷರಾದ ನಂತರ ಪಕ್ಷ ಮತ್ತು ಅವರ ನಡುವಿನ ಬಿರುಕು ಬೆಳೆಯುತ್ತಾ ಹೋಯಿತು. 

ಈ ನಿರ್ಲಕ್ಷ್ಯದ ಮುಂದುವರಿಕೆಯಂತೆ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರನ್ನು ದೂರ ಇಡಲಾಯಿತು. ಮುಂದಿನ ಒಂದು ವರ್ಷದೊಳಗೆ ವಿಧಾನಸಭೆಗೆ ನಡೆಯಲಿರುವ ಚುನಾವಣೆ ತನ್ನ ರಾಜಕೀಯ ಬದುಕಿನ ನಿರ್ಣಾಯಕ ಘಟ್ಟ ಎಂಬ ಅರಿವಿನ ಕಾರಣದಿಂದಲೋ ಏನೋ ಸಿದ್ದರಾಮಯ್ಯನವರು ಬಂಡಾಯದ ಬಾವುಟ ಹಾರಿಸಿದ್ದಾರೆ. 

ಸಿದ್ದರಾಮಯ್ಯನವರ ಮುಂದೆಯೂ ಬಹಳ ಆಯ್ಕೆಗಳಿಲ್ಲ. ಸೈದ್ಧಾಂತಿಕವಾಗಿ ವಿರೋಧಿಸುತ್ತಾ ಬಂದ ಬಿಜೆಪಿಗೆ ಅವರು ಸೇರಲಾರು. ಅಪ್ಪ-ಮಕ್ಕಳ ರಾಜಕಾರಣದ ವಿರುದ್ಧವೇ ಸೆಡ್ಡುಹೊಡೆದು ಹೊರಬಂದ ನಂತರ ಹಳೆಯ ಪಕ್ಷಕ್ಕೂ ಮರಳುವ ಸ್ಥಿತಿಯಲ್ಲಿಯೂ ಅವರಿಲ್ಲ. ಉಳಿದಿರುವ ಏಕೈದ ದಾರಿ ಪ್ರಾದೇಶಿಕ ಪಕ್ಷದ ಸ್ಥಾಪನೆ. ಆರು ವರ್ಷಗಳ ಹಿಂದೆ ಕಾಂಗ್ರೆಸ್ ಸೇರುವ ಮೊದಲು ಈ ಅವಕಾಶ ಅವರ ಮನೆಬಾಗಿಲು ತಟ್ಟಿತ್ತು. 

ದೇವೇಗೌಡರಿಗೆ ಸವಾಲು ಹಾಕಿ ಪಕ್ಷ ಬಿಟ್ಟು ಹೊರಬಂದ ಸಿದ್ದರಾಮಯ್ಯವರು `ಅಹಿಂದ` ಸಮಾವೇಶಗಳನ್ನು ಮಾಡುತ್ತಾ ರಾಜ್ಯ ಸುತ್ತುತ್ತಿದ್ದಾಗ ಅವರಿಂದ ಪ್ರಾದೇಶಿಕ ಪಕ್ಷದ ಸ್ಥಾಪನೆಯನ್ನು ನಿರೀಕ್ಷಿಸಿದವರಿದ್ದರು. ಆದರೆ `ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಕ್ಕೆ ಭವಿಷ್ಯವೇ ಇಲ್ಲ` ಎಂದು ಘೋಷಿಸಿ ಕಾಂಗ್ರೆಸ್ ಪಕ್ಷವನ್ನು ಸೇರಿಕೊಳ್ಳುವ ಮೂಲಕ ಆ ನಿರೀಕ್ಷೆಯನ್ನು ಅವರು ಹುಸಿಗೊಳಿಸಿದ್ದರು. 

ಅದರ ನಂತರ `ಅಹಿಂದ` ಸಂಘಟನೆ ಹಲವಾರು ಗುಂಪುಗಳಾಗಿ ಒಡೆದುಹೋಗಿವೆ. ಈ ಪರಿಸ್ಥಿತಿಯಲ್ಲಿ ಒಂದೊಮ್ಮೆ ಮತ್ತೆ `ಅಹಿಂದ` ಸಂಘಟನೆಗಿಳಿದರೂ ಹಿಂದಿನ ಬೆಂಬಲ ಸಿಗುವ ಸಾಧ್ಯತೆ ಕಡಿಮೆ. ಈ ಅಸಹಾಯಕತೆಯೇ  ಸಿದ್ದರಾಮಯ್ಯನವರನ್ನು ಬಲಹೀನರನ್ನಾಗಿ ಮಾಡಿದೆ. ಈಗ ಅವರ ಮುಂದೆ ಇರುವ ಏಕೈಕ ಸುರಕ್ಷಿತ ದಾರಿ ಕಾಂಗ್ರೆಸ್ ಜತೆಯಲ್ಲಿಯೇ ಇನ್ನಷ್ಟು ಚೌಕಾಶಿ ಮಾಡಿಕೊಂಡು ಮುಂದುವರಿಯುವುದು. ಅದನ್ನೇ ಅವರು ಮಾಡಬಹುದೇನೋ?

ನ್ಯಾಯ ಕೇಳುವವರಿಗೆ ಅನ್ಯಾಯದ ಅರಿವಿರಬೇಕು May 28, 2012

ಬರಪೀಡಿತ ಕರ್ನಾಟಕಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ಒತ್ತಾಯಿಸಿ ರಾಜ್ಯದ ಸಂಸತ್ ಸದಸ್ಯರು ಸಂಸತ್‌ನಲ್ಲಿ ಗದ್ದಲ ಮಾಡುತ್ತಿದ್ದುದನ್ನು ನೋಡಿದವರಿಗೆ, `ಪ್ರತಿಯೊಬ್ಬರೂ ಬರಗಾಲವನ್ನು ಪ್ರೀತಿಸುತ್ತಾರೆ` ಎಂದು ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ದಶಕಗಳ ಹಿಂದೆ ವ್ಯಂಗ್ಯವಾಗಿ ಹೇಳಿದ್ದು ನೆನಪಾಗದೆ ಇರದು.
 
ಲೋಕಸಭೆಯಲ್ಲಿ ಇಂತಹ ಪ್ರಹಸನ ನಡೆದದ್ದು ಇದೇನೂ ಮೊದಲ ಸಲವಲ್ಲ. ಬಹಳ ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಅನಾವೃಷ್ಟಿ ಇಲ್ಲವೇ ಅತಿವೃಷ್ಟಿ ಎದುರಾದ ಸಂದರ್ಭದಲ್ಲಿ ಕೇಂದ್ರದಲ್ಲಿ ವಿರೋಧ ಪಕ್ಷದ ಸರ್ಕಾರ ಇದ್ದರೆ ರಾಜ್ಯಸರ್ಕಾರ ಮೊದಲು ಮಾಡುವ ಕೆಲಸ- ಹೆಚ್ಚುವರಿ ಪರಿಹಾರಕ್ಕೆ ಮೊರೆ ಇಡುವುದು. 

ಅದರ ನಂತರ ಕೇಂದ್ರದ ಮೇಲೆ ಒತ್ತಡ ಹೇರಲು ಸರ್ವಪಕ್ಷಗಳ ನಿಯೋಗವೊಂದನ್ನು ದೆಹಲಿಗೆ ಕರೆದೊಯ್ಯುವುದು, ಕೊನೆಗೆ `ನಾವು ಕೇಳಿದಷ್ಟು ಪರಿಹಾರವನ್ನು ನೀಡದೆ ಕೇಂದ್ರ ಸರ್ಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ` ಎಂದು ಆರೋಪಿಸುವುದು.
 
ಅನಾವೃಷ್ಟಿಯಾಗಿದ್ದರೆ ಈ ಜಗಳ ಮುಗಿಯುವ ಹೊತ್ತಿಗೆ ಮಳೆ ಬಂದಿರುತ್ತದೆ, ಅತಿವೃಷ್ಟಿಯಾಗಿದ್ದರೆ ಮಳೆ ನಿಂತಿರುತ್ತದೆ. ಅಷ್ಟರಲ್ಲಿ ಕೇಳಿದವರು ಮತ್ತು ಕೊಡುವವರು -ಇಬ್ಬರೂ ಮರೆತುಬಿಡುತ್ತಾರೆ. ಇದು ದಶಕಗಳಿಂದ ರಾಜ್ಯದ ಜನತೆ ನೋಡುತ್ತಾ ಬಂದ ಪ್ರಕೃತಿ ವಿಕೋಪ ಪರಿಹಾರದ ಪ್ರಹಸನ.

`ಪ್ರಕೃತಿ ವಿಕೋಪದ ಪರಿಹಾರಕ್ಕಾಗಿ ರಾಜ್ಯ ಸರ್ಕಾರ  ಕಳೆದ ಹತ್ತುವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಕೇಳಿರುವ ನೆರವಿನ ಮೊತ್ತ ಸುಮಾರು 28 ಸಾವಿರ ಕೋಟಿ ರೂಪಾಯಿ, ಪಡೆದದ್ದು 2,800 ಕೋಟಿ ದಾಟಿಲ್ಲ` ಎನ್ನುತ್ತಾರೆ ವಿಧಾನಸೌಧದಲ್ಲಿ ಕೂತಿರುವ ಹಿರಿಯ ಅಧಿಕಾರಿಯೊಬ್ಬರು. 

ಈ ಬಾರಿಯೂ ರಾಜ್ಯ ಸರ್ಕಾರ 5,864 ಕೋಟಿ ರೂಪಾಯಿಗಳ ಹೆಚ್ಚುವರಿ ಪರಿಹಾರವನ್ನು ಕೇಳಿದೆ. ಇಲ್ಲಿಯವರೆಗೆ ಪೈಸೆ ಹಣ ಬಂದಿಲ್ಲ, ಕೇಂದ್ರ ಸರ್ಕಾರ ನೆರವು ನೀಡಿದರೂ ಅದು ಕೇಳಿರುವ ಮೊತ್ತದ ಶೇಕಡಾ ಹತ್ತರಷ್ಟನ್ನು ದಾಟಲಾರದು. 

ಇದನ್ನು ಅನ್ಯಾಯವೆನ್ನುವುದಾದರೆ ಇದಕ್ಕೆ ಕೇಂದ್ರ ಸರ್ಕಾರ ಮಾತ್ರ ಅಲ್ಲ, ನಮ್ಮನ್ನು ಆಳುತ್ತಾ ಬಂದ ರಾಜ್ಯ ಸರ್ಕಾರಗಳು ಮತ್ತು ನಾವೇ ಆರಿಸಿ ಕಳುಹಿಸಿದ ಜನಪ್ರತಿನಿಧಿಗಳೂ ಕಾರಣ. ಕರ್ನಾಟಕವನ್ನು ಹೊರತುಪಡಿಸಿದರೆ ಉಳಿದ ಯಾವ  ರಾಜ್ಯಕ್ಕೂ ಈ ರೀತಿಯ ಅನ್ಯಾಯ ಆಗಿಲ್ಲ. 

ಯಾಕೆ ಹೀಗಾಗುತ್ತಿದೆ?ರಾಜ್ಯಕ್ಕೆ ಅನ್ಯಾಯವಾಗುತ್ತಿದೆ... ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ..` ಎಂದು ರಾಜ್ಯದ ಸಂಸದರು ಕಳೆದ ವಾರ ಲೋಕಸಭೆಯಲ್ಲಿ ಎದೆ ಬಡಿದುಕೊಂಡರು. 

ಅವರ ಭಾಷಣಕ್ಕೆ ಮುಖ್ಯ ಆಧಾರ- ಸರ್ವಪಕ್ಷಗಳ ನಿಯೋಗ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳು ಬರೆದುಕೊಟ್ಟಿರುವ ಮನವಿಪತ್ರ. ಅದರ ಆಚೆಗೆ ಹೋಗಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಮೂಲವನ್ನು ಶೋಧಿಸಲು ಯಾರೂ ಹೋಗಲಿಲ್ಲ.
 
ಮೂಲದಲ್ಲಿಯೇ ಅನ್ಯಾಯವನ್ನು ಸರಿಪಡಿಸದೆ ಹೋದರೆ ಪ್ರತಿ ವರ್ಷ ಆರೋಪ-ಪ್ರತ್ಯಾರೋಪಗಳ ಪ್ರಹಸನಕ್ಕೆ ರಾಜ್ಯದ ಜನತೆ ಮೂಕ ಪ್ರೇಕ್ಷಕರಾಗಬೇಕಾಗುತ್ತದೆ ಅಷ್ಟೆ.

ವಿಪತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರ ನೀಡುವ ಆರ್ಥಿಕ ನೆರವು ಭಾರತದ ಒಕ್ಕೂಟ ವ್ಯವಸ್ಥೆಯೊಳಗಿನ ಆರ್ಥಿಕ ಸಂಬಂಧದ ಪ್ರಮುಖ ಭಾಗ. ಈ ನೆರವಿನ ಪಾಲಿನ ತೀರ್ಮಾನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿರುವುದು ಕೇಂದ್ರ ಹಣಕಾಸು ಆಯೋಗ. 

ಪ್ರಕೃತಿ ವಿಕೋಪದಂತಹ ಅನಿರೀಕ್ಷಿತ ಸಂಕಷ್ಟಗಳನ್ನು ರಾಜ್ಯ ಸರ್ಕಾರಗಳು ಸ್ವಂತ ಬಲದಿಂದ ಎದುರಿಸುವುದು ಕಷ್ಟವಾದ ಕಾರಣ ಇದಕ್ಕೆ ಕೇಂದ್ರ ಸರ್ಕಾರ ನೆರವಾಗಬೇಕು ಎಂಬ ಎರಡನೆ ಹಣಕಾಸು ಆಯೋಗದ ಶಿಫಾರಸಿನಿಂದಾಗಿ `ಮಾರ್ಜಿನಲ್ ಮನಿ ಸ್ಕೀಮ್` ಜಾರಿಗೆ ಬಂದಿತ್ತು. 

ಹಣಕಾಸು ಆಯೋಗದ ಆಶಯ ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿದ್ದು ಒಂಬತ್ತನೆ ಹಣಕಾಸು ಆಯೋಗ ವಿಪತ್ತು ಪರಿಹಾರ ನಿಧಿ (ಸಿಆರ್‌ಎಫ್) ಸ್ಥಾಪಿಸಿದ `ಇಷ್ಟರಿಂದಲೇ ನಮ್ಮ ಕಷ್ಟ ಬಗೆಹರಿಯಲಾರದು, ಇನ್ನೂ ಹೆಚ್ಚಿನ ನೆರವು ಬೇಕು` ಎಂಬ ರಾಜ್ಯ ಸರ್ಕಾರಗಳ ಮೊರೆಗೆ ಓಗೊಟ್ಟ ಹತ್ತನೆ ಹಣಕಾಸು ಆಯೋಗ `ರಾಷ್ಟ್ರೀಯ ವಿಕೋಪ ಪರಿಹಾರ ಸಂಚಿತ ನಿಧಿ` (ಎನ್‌ಸಿಸಿಎಫ್)  ಸ್ಥಾಪಿಸಿತು. 2005ರ ಪ್ರಕೃತಿ ವಿಕೋಪ ಪರಿಹಾರ ಕಾಯ್ದೆ ಜಾರಿಗೆ ಬಂದ ಮೇಲೆ ಈ ಎರಡು ನಿಧಿಗಳ ಹೆಸರು ಬದಲಾಯಿಸಲಾಗಿದೆ. 

ಸಿಆರ್‌ಎಫ್ ಎನ್ನುವುದು `ರಾಜ್ಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ನಿಧಿ` (ಎಸ್‌ಡಿಆರ್‌ಎಫ್) ಮತ್ತು  ಎನ್‌ಸಿಸಿಎಫ್ ಎನ್ನುವುದು `ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ನಿಧಿ` (ಎನ್‌ಡಿಆರ್‌ಎಫ್) ಆಗಿದೆ. ಹದಿನೈದನೆ ಕೇಂದ್ರ ಹಣಕಾಸು ಆಯೋಗ 2010ರಲ್ಲಿ ಮಾಡಿದ ಈ ಬದಲಾವಣೆಯಿಂದ ಪರಿಹಾರ ನಿಧಿಗಳ ಮೂಲ ರಚನೆ ಮತ್ತು ಉದ್ದೇಶದಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ.

ಸಿಆರ್‌ಎಫ್‌ನಂತೆ ಎಸ್‌ಡಿಆರ್‌ಎಫ್‌ಗೆ ಕೂಡಾ ಕೇಂದ್ರ ಮತ್ತು ರಾಜ್ಯ ಸರ್ಕಾರ 75:25ರ ಅನುಪಾತದಲ್ಲಿ ಹಣ ನೀಡುತ್ತದೆ. ಐದು ವರ್ಷಗಳ ಅವಧಿಗೆ ಈ ನಿಧಿಯ ಒಟ್ಟು ಮೊತ್ತ ಮತ್ತು ಅದರಿಂದ ಪ್ರತಿಯೊಂದು ರಾಜ್ಯ ಪಡೆಯುವ ಪಾಲನ್ನು ನಿರ್ಧಾರ ಮಾಡುವುದು ಕೂಡಾ ಹಣಕಾಸು ಆಯೋಗ. 

ರಾಜ್ಯಗಳ ಸಾಮಾನ್ಯ ಹವಾಮಾನ, ಭೂಮಿಯ ಫಲವತ್ತತೆ, ಬರಪೀಡಿತ ಪ್ರದೇಶದ ವಿಸ್ತೀರ್ಣ, ಬರದ ಅವಧಿ, ಬರದ ಮರುಕಳಿಕೆಯ ಪ್ರಮಾಣ, ಪ್ರಕೃತಿ ವಿಕೋಪಗಳ ಇತಿಹಾಸ ಮತ್ತು ಇವೆಲ್ಲಕ್ಕಿಂತಲೂ ಮುಖ್ಯವಾಗಿ ಹಿಂದಿನ ಹತ್ತುವರ್ಷಗಳ ಅವಧಿಯಲ್ಲಿ ಪ್ರಕೃತಿ ವಿಕೋಪದ ಪರಿಹಾರಕ್ಕಾಗಿ ಖರ್ಚು ಮಾಡಿರುವ ಹಣ-ಇವೆಲ್ಲವನ್ನು ಆಧಾರವಾಗಿಟ್ಟುಕೊಂಡು ರಾಜ್ಯದ ಪಾಲನ್ನು ನಿರ್ಧರಿಸಲಾಗುತ್ತದೆ. ವಿಪತ್ತು ಪರಿಹಾರ ನಿಧಿ ಅಸ್ತಿತ್ವಕ್ಕೆ ಬಂದ ದಿನದಿಂದ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ  ಅನ್ಯಾಯವಾಗುತ್ತಾ ಬಂದಿದೆ.  

ಹದಿನೈದನೇ ಹಣಕಾಸು ಆಯೋಗ 2010-2015ರ ಐದು ವರ್ಷಗಳ ಅವಧಿಗೆ `ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ`ಗೆ (ಎಸ್‌ಡಿಆರ್‌ಎಫ್) ನಿಗದಿಪಡಿಸಿರುವ ಹಣದ ಒಟ್ಟು ಮೊತ್ತ 33,580 ಕೋಟಿ ರೂಪಾಯಿ. ಇದರಲ್ಲಿ ಕರ್ನಾಟಕಕ್ಕೆ ನಿಗದಿಪಡಿಸಿದ ಪಾಲಿನ ಹಣ ಕೇವಲ 889.41 ಕೋಟಿ ರೂಪಾಯಿ.

 ಈ ಅನ್ಯಾಯ ಇನ್ನಷ್ಟು ಸ್ಪಷ್ಟವಾಗಬೇಕಾದರೆ ಬೇರೆ ರಾಜ್ಯಗಳ ಪಾಲಿನ ಹಣವನ್ನು ತಿಳಿದುಕೊಳ್ಳಬೇಕು. ಒಟ್ಟು ಬರಪೀಡಿತ ಪ್ರದೇಶದ ಲೆಕ್ಕಾಚಾರದಲ್ಲಿ ಮೊದಲೆರಡು ಸ್ಥಾನಗಳಲ್ಲಿರುವುದು ರಾಜಸ್ತಾನ ಮತ್ತು ಕರ್ನಾಟಕ. ವಿಸ್ತೀರ್ಣದಲ್ಲಿ ರಾಜಸ್ತಾನ ದೊಡ್ಡ ರಾಜ್ಯವಾದರೂ ಜನಸಂಖ್ಯೆಯಲ್ಲಿ ಎರಡೂ ರಾಜ್ಯಗಳು ಸಮನಾಗಿವೆ. ಆದರೆ ಎಸ್‌ಡಿಆರ್‌ಎಫ್‌ನಲ್ಲಿ ರಾಜಸ್ತಾನಕ್ಕೆ ನಿಗದಿಪಡಿಸಿರುವ ಪಾಲು 3,319 ಕೋಟಿ ರೂಪಾಯಿ. 

ಜನಸಂಖ್ಯೆ ಮತ್ತು ವಿಸ್ತಿರ್ಣದಲ್ಲಿ ಉಳಿದ ರಾಜ್ಯಗಳಿಗೆ ಹೋಲಿಕೆಯಲ್ಲಿ ಕರ್ನಾಟಕ ಕ್ರಮವಾಗಿ 9 ಮತ್ತು 8ರ ಸ್ಥಾನದಲ್ಲಿದೆ. ಆದರೆ ವಿಸ್ತೀರ್ಣದಲ್ಲಿ ಕರ್ನಾಟಕದ ಅರ್ಧದಷ್ಟೂ ಇರದ, ಜನಸಂಖ್ಯೆಯಲ್ಲಿ ಮೂರನೆ ಎರಡರಷ್ಟಿರುವ ಅಸ್ಸಾಂನ ಪಾಲು 1457.51 ಕೋಟಿ ರೂಪಾಯಿ. ಅಸ್ಸಾಂಗಿಂತಲೂ ಸಣ್ಣ ರಾಜ್ಯವಾದ ಹರಿಯಾಣದ  ಪಾಲು 1,065 ಕೋಟಿ ರೂಪಾಯಿ. 

ವಿಸ್ತೀರ್ಣ ಮತ್ತು ಜನಸಂಖ್ಯೆಯಲ್ಲಿ ಹೆಚ್ಚುಕಡಿಮೆ ಕರ್ನಾಟಕದಷ್ಟೇ ಇರುವ ಮತ್ತು ಅಭಿವೃದ್ದಿ ಹೊಂದಿರುವ ರಾಜ್ಯವೆಂದೇ ಬಿಂಬಿಸಲಾಗುತ್ತಿರುವ ಗುಜರಾತ್‌ನ ಪಾಲು 2,774.54 ಕೋಟಿ ರೂಪಾಯಿ. ಉಳಿದಂತೆ ಎಸ್‌ಡಿಆರ್‌ಎಫ್‌ನಲ್ಲಿ ದೊಡ್ಡ ಪಾಲನ್ನು ಪಡೆದಿರುವ ರಾಜ್ಯಗಳೆಂದರೆ ಆಂಧ್ರಪ್ರದೇಶ (2,811.64 ಕೋಟಿ ರೂಪಾಯಿ), ಒರಿಸ್ಸಾ  (2,163 ಕೋಟಿ ರೂಪಾಯಿ), ತಮಿಳುನಾಡು (1,621.90 ಕೋಟಿ ರೂಪಾಯಿ) ಮೊದಲಾದ ರಾಜ್ಯಗಳು.

ಹಣಕಾಸು ಆಯೋಗ ಸಾಮಾನ್ಯವಾಗಿ ನಿಷ್ಪಕ್ಷಪಾತವಾಗಿ ಹಣ ಹಂಚಿದರೂ ಆ ಕಾಲದ ರಾಜಕೀಯ ಪರಿಸ್ಥಿತಿ, ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳ ಬಲ, ಮುಖ್ಯಮಂತ್ರಿಗಳ ಆಸಕ್ತಿ, ಅಧಿಕಾರಿಗಳ ಕಾರ್ಯಕ್ಷಮತೆ ಮೊದಲಾದ ಅಂಶಗಳ ಪ್ರಭಾವ ಇದ್ದೆ ಇರುತ್ತದೆ. ಇಲ್ಲಿಯೇ ಕರ್ನಾಟಕ ಸೋತುಹೋಗಿರುವುದು. 

ಮೊದಲನೆಯದಾಗಿ, ರಾಷ್ಟ್ರೀಯ ಪಕ್ಷದ ಬಗ್ಗೆಯೇ ಒಲವು ತೋರಿಸುತ್ತಾ ಬಂದಿರುವ ಕರ್ನಾಟಕ ಮೈತ್ರಿಕೂಟದ ರಾಜಕಾರಣದಲ್ಲಿ ದನಿ ಇಲ್ಲದ ದುರ್ಬಲ ರಾಜ್ಯವಾಗಿಯೇ ಉಳಿದುಬಿಟ್ಟಿದೆ. ಎನ್.ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಕಿರುಅವಧಿಯನ್ನು ಹೊರತುಪಡಿಸಿದರೆ ಕಳೆದ ಹದಿಮೂರು ವರ್ಷಗಳಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಪಕ್ಷದ ಆಡಳಿತವನ್ನು ಕರ್ನಾಟಕ ಕಂಡಿಲ್ಲ. 

ಎನ್‌ಡಿಎ ಸರ್ಕಾರಕ್ಕೆ ಬಾಹ್ಯಬೆಂಬಲ ನೀಡುತ್ತಾ, ಅಂತರಂಗದಲ್ಲಿ ಬ್ಲಾಕ್‌ಮೇಲ್ ಮಾಡುತ್ತಾ ಬಂದ ತೆಲುಗುದೇಶಂನ ಆಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೂರುವರ್ಷಗಳ ಅವಧಿಯಲ್ಲಿ ವಿವಿಧ ಯೋಜನೆ ಮತ್ತು ನೆರವಿನ ರೂಪದಲ್ಲಿ 27,000 ಕೋಟಿ ರೂಪಾಯಿ ಪಡೆದಿದ್ದರು. 

ತಮಿಳುನಾಡಿನ ಒಂದಲ್ಲ ಒಂದು ಪಕ್ಷ ಕೇಂದ್ರದ ಮೈತ್ರಿಕೂಟದಲ್ಲಿ ಸ್ಥಾನ ಪಡೆಯುತ್ತಾ ಬಂದ ಕಾರಣ ಆ ರಾಜ್ಯಕ್ಕೆ ಕೂಡಾ ಅನ್ಯಾಯವಾಗಿಲ್ಲ. ಆದರೆ ಕರ್ನಾಟಕದ ಭಿಕ್ಷಾಪಾತ್ರೆಗೆ ಕೇಂದ್ರ ಸರ್ಕಾರ ಎಸೆಯುತ್ತಾ ಬಂದದ್ದು ಪುಡಿಗಾಸು ಮಾತ್ರ. ಆದರೆ ಈವರೆಗಿನ ಯಾವ ಮುಖ್ಯಮಂತ್ರಿಯೂ ಈ ಅನ್ಯಾಯವನ್ನು ಬಳಸಿಕೊಂಡು ಕೇಂದ್ರದ ವಿರುದ್ದ ರಾಜಕೀಯ ಹೋರಾಟಕ್ಕೆ ಮುಂದಾಗಲೇ ಇಲ್ಲ.

ಎರಡನೆಯದಾಗಿ ರಾಜ್ಯ ಸರ್ಕಾರದ ನಿರಾಸಕ್ತಿ. ಹಣಕಾಸು ಆಯೋಗ ವರದಿ ತಯಾರಿಸುವ ಮುನ್ನ ರಾಜ್ಯ ಸರ್ಕಾರಗಳ ಜತೆ ಅನೇಕ ಸುತ್ತಿನ ಮಾತುಕತೆ ನಡೆಸುತ್ತದೆ. ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್, ತಮಿಳುನಾಡು, ಕೇರಳ ರಾಜ್ಯಗಳು ಮೊದಲಿನಿಂದಲೂ ಈ ಬಗ್ಗೆ ವಿಶೇಷ ಆಸಕ್ತಿ ವಹಿಸಿ ತಮ್ಮ ರಾಜ್ಯಗಳ ಪ್ರಕೃತಿ ವಿಕೋಪದ ಪರಿಸ್ಥಿತಿಯ ವಿವರ ನೀಡುವುದರ ಜತೆಯಲ್ಲಿ ರಾಜಕೀಯ ಪ್ರಭಾವವನ್ನೂ ಬಳಸಿಕೊಂಡು ತಮ್ಮ ಪಾಲು ಹೆಚ್ಚುಮಾಡಿಕೊಳ್ಳುತ್ತಾ ಬಂದಿವೆ. 

ಈ ರಾಜ್ಯಗಳು ನೀಡಿರುವ ಮನವಿ ಪತ್ರಗಳ ವಿವರಗಳು ಹಣಕಾಸು ಆಯೋಗದ ವರದಿಗಳಲ್ಲಿವೆ. ಆದರೆ, ಅಲ್ಲೆಲ್ಲೂ ಕರ್ನಾಟಕದ ಹೆಸರಿಲ್ಲ. ಅಂತಹ ಯಾವ ಪ್ರಯತ್ನವನ್ನೂ ಕರ್ನಾಟಕ ಇತ್ತೀಚಿನವರೆಗೆ ಮಾಡಿಲ್ಲ. 

ಮೊದಲ ಬಾರಿಗೆ ಹದಿನೈದನೆ ಹಣಕಾಸು ಆಯೋಗದ ಮುಂದೆ ಹಾಜರಾದ ರಾಜ್ಯದ ಕೆಲವು ಅಧಿಕಾರಿಗಳು  ಸ್ವಂತ ಆಸಕ್ತಿ ವಹಿಸಿ ಕರ್ನಾಟಕದ ಪರಿಸ್ಥಿತಿಯನ್ನು ವಿವರಿಸಿದರೂ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.

ಒಮ್ಮೆ ಹಣಕಾಸು ಆಯೋಗ `ಎಸ್‌ಡಿಆರ್‌ಎಫ್`ನ ಹಣದ ಪಾಲು ನಿರ್ಧರಿಸಿದ ನಂತರ ಐದು ವರ್ಷಗಳ ಕಾಲ ಅದರಲ್ಲಿ ಬದಲಾವಣೆ ಮಾಡುವಂತಿಲ್ಲ. ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ನೆರವನ್ನು `ಎನ್‌ಡಿಆರ್‌ಎಫ್`ನಿಂದ ಮಾತ್ರ ಪಡೆಯಲು ಸಾಧ್ಯ. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಣ, ಈ ನಿಧಿಗೆ ರಾಜ್ಯ ಸರ್ಕಾರ ತನ್ನ ಪಾಲು ಕೊಡಬೇಕಾಗಿಲ್ಲ . 

ಕೇಂದ್ರದ ಗೃಹ, ಕೃಷಿ ಮತ್ತು ಹಣಕಾಸು ಸಚಿವರು ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರನ್ನೊಳಗೊಂಡ ಉನ್ನತಾಧಿಕಾರದ ತಂಡ  ಮೊದಲು ರಾಜ್ಯ ಸರ್ಕಾರ ಸಲ್ಲಿಸುವ ಮನವಿಪತ್ರವನ್ನು ಪರಿಶೀಲಿಸುತ್ತದೆ. ಅದರ ನಂತರ ಪರಿಸ್ಥಿತಿಯ ಅಧ್ಯಯನಕ್ಕೆ ತಜ್ಞರ ತಂಡವನ್ನು ಕಳುಹಿಸಿ ವರದಿಯನ್ನು ಪಡೆಯುತ್ತದೆ. 

ಅದರ ಆಧಾರದಲ್ಲಿ ಹೆಚ್ಚುವರಿ ನೆರವಿನ ಮೊತ್ತವನ್ನು ನಿರ್ಧರಿಸುತ್ತದೆ. ಕೇಂದ್ರ ಮತ್ತು ರಾಜ್ಯದ ನಡುವೆ ಈಗ ನಡೆಯುತ್ತಿರುವ ಜಟಾಪಟಿ ಈ ಹಣಕ್ಕಾಗಿ. ಕರ್ನಾಟಕ ಇಲ್ಲಿಯೂ ಎಡವಿದೆ. ಬರಪರಿಸ್ಥಿತಿ ನಿರ್ಮಾಣವಾಗಿ ತಿಂಗಳುಗಳೇ ಕಳೆದಿದ್ದರೂ ಮಳೆ ಬೀಳುವ ಹೊತ್ತಿಗೆ ಸರ್ವಪಕ್ಷಗಳ ನಿಯೋಗವನ್ನು ಕರೆದೊಯ್ದು ನೆರವಿಗಾಗಿ ರಾಜ್ಯಸರ್ಕಾರ ಮನವಿಪತ್ರ ಅರ್ಪಿಸಿದೆ. 

ಇದನ್ನು ಗೃಹಸಚಿವ ಪಿ.ಚಿದಂಬರಂ ಛೇಡಿಸಿಯೂ ಆಗಿದೆ.ಕೇಂದ್ರ ಸರ್ಕಾರದಿಂದ ಹೆಚ್ಚುವರಿ ನೆರವನ್ನು ಪಡೆಯಲು ರಾಜ್ಯಸರ್ಕಾರದ ಜತೆಯಲ್ಲಿ ನಿಂತು ಪ್ರಯತ್ನ ನಡೆಸಬೇಕಾದವರು ಸಂಸತ್ ಸದಸ್ಯರು. ಸದನದ ಒಳಗೆ ಮತ್ತು ಹೊರಗೆ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಆಧಾರ ಸಹಿತವಾಗಿ ಮುಂದಿಟ್ಟು ನ್ಯಾಯ ಪಡೆಯಲು ಸಂಸದರು ನೆರವಾಗಬೇಕು. 

ಆಗಿರುವ ಅನ್ಯಾಯದ ಬಗ್ಗೆಯೇ ಅಜ್ಞಾನಿಗಳಾಗಿರುವವರು ನ್ಯಾಯಕ್ಕಾಗಿ ಹೋರಾಟ ನಡೆಸಲು ಹೇಗೆ ಸಾಧ್ಯ? ಹಾಗಿಲ್ಲದಿದ್ದರೆ ಕೇಂದ್ರ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆ ಒಬ್ಬ ಸಂಸದರಾದರೂ ಬಾಯಿ ಬಿಚ್ಚಬೇಕಿತ್ತಲ್ಲ?

Wednesday, May 23, 2012

ಅರವತ್ತು ತುಂಬಿದೆ ಎಂದು ಸಂಭ್ರಮ ಪಡೋಣವೇ? May 21, 2012

ಮೊದಲ cಯಲ್ಲಿ ಶೇ 58ರಷ್ಟಿದ್ದ ಪದವೀಧರ ಸದಸ್ಯರ ಪ್ರಮಾಣ ಈಗ 79ಕ್ಕೆ ಏರಿದೆ.  ಸ್ನಾತಕೋತ್ತರ ಪದವೀಧರ ಸದಸ್ಯರ ಪ್ರಮಾಣ ಶೇ 18ರಿಂದ 29ಕ್ಕೆ ಹೆಚ್ಚಿದೆ ಮತ್ತು ಕೇವಲ ಏಳನೆ ತರಗತಿವರೆಗೆ ಓದಿದ ಸದಸ್ಯರ ಪ್ರಮಾಣ ಶೇ 52ರಿಂದ 9ಕ್ಕೆ ಇಳಿದಿದೆ. ವಯಸ್ಸಾದವರು ಅನುಭವಿಗಳೂ ಹೌದು ಎನ್ನುವುದಾದರೆ ಲೋಕಸಭೆಯಲ್ಲಿ ಅನುಭವಿಗಳ ಸಂಖ್ಯೆ ಹೆಚ್ಚಾಗಿದೆ.

ಮೊದಲ ಲೋಕಸಭೆಯಲ್ಲಿ 56ಕ್ಕಿಂತ ಹೆಚ್ಚು ವಯಸ್ಸಾದವರ ಪ್ರಮಾಣ ಕೇವಲ ಶೇ 26ರಷ್ಟಿದ್ದರೆ, ಈಗ ಅದು ಶೇ 43ಆಗಿದೆ. 70ಕ್ಕಿಂತ ಹೆಚ್ಚು ವಯಸ್ಸಾದವರ ಪ್ರಮಾಣ ಈಗ ಶೇ 7ರಷ್ಟಿದ್ದರೆ ಮೊದಲ ಲೋಕಸಭೆಯಲ್ಲಿ ಈ ವಯಸ್ಸಿನ ಸದಸ್ಯರೇ ಇರಲಿಲ್ಲ.

ಸಂಸತ್ ಸದಸ್ಯರ `ಹುಡುಗಾಟ` ಕೂಡಾ ಕಡಿಮೆಯಾಗಿದೆ. 40ಕ್ಕಿಂತಲೂ ಕಡಿಮೆ ವಯಸ್ಸಿನ ಸದಸ್ಯರ ಸಂಖ್ಯೆ ಶೇ 26ರಿಂದ 14ಕ್ಕೆ ಇಳಿದಿದೆ. ಮಹಿಳಾ ಮೀಸಲಾತಿ ಜಾರಿಗೆ ಬರದೆ ಇದ್ದರೂ ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಶೇ 5ರಿಂದ 15ಕ್ಕೆ ಏರಿದೆ.

ನಮ್ಮ ಈಗಿನ ಸಂಸದರು ಮಾಡುತ್ತಿರುವುದು `ಬಿಟ್ಟಿ ಚಾಕರಿ` ಅಲ್ಲ. ಎರಡು ವರ್ಷಗಳ ಹಿಂದೆಯಷ್ಟೆ ಸಂಸದರು ತಮ್ಮ ಸಂಬಳ ಮತ್ತು ಭತ್ಯೆಯನ್ನು 300 ಪಟ್ಟು ಹೆಚ್ಚಿಸಿಕೊಂಡಿದ್ದಾರೆ. ಈಗ ಅವರು ಪ್ರತಿ ತಿಂಗಳು ಮೂಲವೇತನ, ಕ್ಷೇತ್ರ ಭತ್ಯೆ ಮತ್ತು ಕಚೇರಿ ಭತ್ಯೆ ರೂಪದಲ್ಲಿ 1.40 ಲಕ್ಷ ರೂ ಪಡೆಯುತ್ತಿದ್ದಾರೆ. ಇದರ ಜತೆಗೆ ಅಧಿವೇಶನ ನಡೆಯುವ ದಿನಗಳಲ್ಲಿ ದಿನಭತ್ಯೆ 2000 ರೂ ಪಡೆಯುತ್ತಾರೆ.

ವರ್ಷದಲ್ಲಿ 34 ಬಾರಿ ಉಚಿತ ವಿಮಾನ ಪ್ರಯಾಣ, ಪ್ರಥಮದರ್ಜೆ ರೈಲಿನಲ್ಲಿ ಲೆಕ್ಕವಿಲ್ಲದಷ್ಟು ಸಲ ಉಚಿತ ಪ್ರಯಾಣ, ದೆಹಲಿಯಲ್ಲಿ ಉಚಿತ ವಸತಿ, ಉಚಿತ ವಿದ್ಯುತ್,ನೀರು, ದೂರವಾಣಿ ಮತ್ತು ಇಂಟರ್‌ನೆಟ್ ಸೌಲಭ್ಯ ಪಡೆಯುತ್ತಾರೆ.

ಒಂದು ಅಂದಾಜಿನ ಪ್ರಕಾರ ಸಂಸದರ ಮಾಸಿಕ ಸಂಬಳ,ಭತ್ಯೆ ಮತ್ತು ಸೌಲಭ್ಯಗಳ ಒಟ್ಟು ಖರ್ಚು ತಲಾ 5 ಲಕ್ಷ ರೂಪಾಯಿಗಳಷ್ಟಾಗುತ್ತದೆ. ಸಂಸದ ಬಡ ಭಾರತೀಯನ ದುಬಾರಿ ಪ್ರತಿನಿಧಿ!

 ಕಳೆದ 60 ವರ್ಷಗಳಲ್ಲಿ ಸಂಸದರ ಶಿಕ್ಷಣ ಮತ್ತು ಅನುಭವದ ಮಟ್ಟ ಏರಿರುವುದು ಮಾತ್ರವಲ್ಲ ಸಂಬಳ-ಭತ್ಯೆ ಕೂಡಾ ಹೆಚ್ಚಿದೆ. ಹಾಗಿದ್ದರೆ  ಹಿಂದಿಗಿಂತಲೂ ಹೆಚ್ಚು ಶಿಕ್ಷಿತ ಮತ್ತು ಅನುಭವಿಗಳೂ ಆಗಿರುವ, ಆರ್ಥಿಕ ಭದ್ರತೆ ಪಡೆದಿರುವ ಸದಸ್ಯರ ಕಾಣಿಕೆ ಲೋಕಸಭೆಯ ಕಾರ್ಯನಿರ್ವಹಣೆಯಲ್ಲಿ ಪ್ರತಿಫಲನಗೊಳ್ಳಬೇಕಿತ್ತಲ್ಲವೇ? ಅಲ್ಲಿನ ಚಿತ್ರ ಹೀಗಿದೆ:

1950ರಲ್ಲಿ ಲೋಕಸಭೆಯ ಕಲಾಪ 127 ದಿನ ಮತ್ತು ರಾಜ್ಯಸಭೆಯ ಕಲಾಪ 93 ದಿನ ನಡೆದಿದ್ದರೆ 2011ರಲ್ಲಿ ಎರಡೂ ಸದನಗಳ ಕಲಾಪ ತಲಾ 73ದಿನಗಳಿಗೆ ಇಳಿದಿದೆ. ಮೊದಲ ಲೋಕಸಭೆಯ ಅವಧಿಯಲ್ಲಿ ಪ್ರತಿವರ್ಷ ಸರಾಸರಿ 72 ಮಸೂದೆಗಳಿಗೆ ಅಂಗೀಕಾರ ದೊರೆತಿದ್ದರೆ 15ನೇ ಲೋಕಸಭೆಯಲ್ಲಿ ಇದು 40ಕ್ಕೆ ಇಳಿದಿದೆ.

ಕಳೆದ ಚಳಿಗಾಲದ ಅಧಿವೇಶನದವರೆಗೆ 15ನೇ ಲೋಕಸಭೆ, ನಿಗದಿತ ಸಮಯದ ಕೇವಲ ಶೇಕಡಾ 70ರಷ್ಟು ಭಾಗವನ್ನು ಮಾತ್ರ ಬಳಸಿಕೊಂಡಿದೆ. ಇದು ಕಳೆದ 25 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಅವಧಿ ಕೆಲಸ ಮಾಡಿರುವ ಲೋಕಸಭೆ.

ಯಾಕೆ ಹೀಗಾಗಿದೆ ಎನ್ನುವುದಕ್ಕೆ ಒಂದಷ್ಟು ಮಾಹಿತಿ; ಹದಿನೈದನೆ ಲೋಕಸಭೆಯ 543 ಸದಸ್ಯರು ಚುನಾವಣೆಗೆ ಸ್ವರ್ಧಿಸುವ ಸಂದರ್ಭದಲ್ಲಿ ಸಲ್ಲಿಸಿರುವ ಸ್ವಪರಿಚಯದ ಪ್ರಮಾಣಪತ್ರಗಳ ಅಧ್ಯಯನ ನಡೆಸಿರುವ `ರಾಷ್ಟ್ರೀಯ ಚುನಾವಣಾ ವೀಕ್ಷಣೆ ಮತ್ತು ಪ್ರಜಾಸತ್ತಾತ್ಮಕ ಸುಧಾರಣೆಯ ಸಂಘಟನೆ`ಯ ವರದಿಯಲ್ಲಿದೆ.

ಇದರ ಪ್ರಕಾರ ಲೋಕಸಭೆಯಲ್ಲಿರುವ 162 ಸದಸ್ಯರ ವಿರುದ್ದ ಕ್ರಿಮಿನಲ್ ಮೊಕದ್ದಮೆಗಳು ವಿಚಾರಣೆಯಲ್ಲಿವೆ. ಇವರಲ್ಲಿ 76 ಸದಸ್ಯರ ವಿರುದ್ಧ ಕೊಲೆ, ಸುಲಿಗೆ, ವಂಚನೆ, ಅತ್ಯಾಚಾರದಂತಹ ಗಂಭೀರ ಸ್ವರೂಪದ ಆರೋಪಗಳಿವೆ.

2004ರ ಲೋಕಸಭೆಯಲ್ಲಿ 128 ಸದಸ್ಯರ ವಿರುದ್ಧ ಮಾತ್ರ ಕ್ರಿಮಿನಲ್ ಆರೋಪಗಳಿದ್ದವು. ಕಳೆದ ಲೋಕಸಭೆಗಿಂತ ಕಳಂಕಿತರ ಪ್ರಮಾಣ ಶೇ 24ರಷ್ಟು ಹೆಚ್ಚಾಗಿದೆ.

ಹತ್ತಕ್ಕಿಂತ ಹೆಚ್ಚು ಲೋಕಸಭಾ ಸದಸ್ಯರನ್ನು ಹೊಂದಿರುವ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಕ್ರಿಮಿನಲ್ ಆರೋಪಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಶಿವಸೇನೆ (ಶೇ 82)ಯಲ್ಲಿ.

ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಸಂಯುಕ್ತ ಜನತಾದಳ (ಶೇ 40), ಸಮಾಜವಾದಿ ಜನತಾಪಕ್ಷ (ಶೇ 39) ಬಿಜೆಪಿ (ಶೇ 38),ಬಿಎಸ್‌ಪಿ (ಶೇ 29)ಡಿಎಂಕೆ  (ಶೇ 22) ಕಾಂಗ್ರೆಸ್ (ಶೇ 21) ಮತ್ತು ಸಿಪಿಎಂ (ಶೇ 19) ಇವೆ. ಆರ್‌ಜೆಡಿಯ ನಾಲ್ವರು ಸದಸ್ಯರಲ್ಲಿ ಮೂರು ಮಂದಿ, ಜೆಡಿ (ಎಸ್)ನ ಮೂವರಲ್ಲಿ ಇಬ್ಬರು, ಎಡಿಎಂಕೆಯ ಒಂಬತ್ತರಲ್ಲಿ ನಾಲ್ವರು ಕ್ರಿಮಿನಲ್ ಆರೋಪಿಗಳು.

ಲೋಕಸಭೆಯ ಕಳಂಕಕ್ಕೆ ದೊಡ್ಡ ಕೊಡುಗೆಯನ್ನು ನೀಡಿರುವುದು ಉತ್ತರಪ್ರದೇಶ, ಮಹಾರಾಷ್ಟ್ರ ಮತ್ತು ಬಿಹಾರ ರಾಜ್ಯಗಳು. ಕ್ರಿಮಿನಲ್ ಆರೋಪದ 163 ಸದಸ್ಯರಲ್ಲಿ 75 ಸದಸ್ಯರು ಈ ಮೂರು ರಾಜ್ಯಗಳಿಗೆ ಸೇರಿದವರು. 28 ಸದಸ್ಯರಲ್ಲಿ ಒಂಬತ್ತು ಮಂದಿ ಕ್ರಿಮಿನಲ್ ಆರೋಪಿಗಳನ್ನು ಹೊಂದಿರುವ ಕರ್ನಾಟಕ ಆರನೇ ಸ್ಥಾನದಲ್ಲಿದೆ.
ಹೀಗಿದ್ದರೂ `ಸಂಸದರು ಕೊಲೆಗಡುಕರು` ಎಂದರೆ ಇವರಿಗೆ ಕೋಪ ಉಕ್ಕಿ ಬರುತ್ತದೆ.
ಭಾರತೀಯರ ವಾರ್ಷಿಕ ತಲಾವಾರು ಆದಾಯ 50,000 ರೂಪಾಯಿ.  ಸಂಸತ್ ಎನ್ನುವುದು ಪ್ರಜೆಗಳ ಪ್ರಾತಿನಿಧಿಕ ಸಂಸ್ಥೆ ಎನ್ನುವುದಾದರೆ ಈ ಬಡಭಾರತವನ್ನೇ ಸಂಸತ್ ಪ್ರತಿನಿಧಿಸಬೇಕಲ್ಲವೇ? ಆದರೆ ನಮ್ಮ ಲೋಕಸಭಾ ಸದಸ್ಯರ ಆಸ್ತಿ ವಿವರವನ್ನು ಗಮನಿಸಿದಾಗ ದೇಶದ ತುಂಬಾ ಕೋಟ್ಯಧಿಪತಿಗಳೇ ತುಂಬಿ ತುಳುಕಾಡುತ್ತಿರಬಹುದೆಂಬ ಅಭಿಪ್ರಾಯ ಮೂಡುತ್ತದೆ.
ಹದಿನೈದನೆ ಲೋಕಸಭೆಯಲ್ಲಿರುವ ಕೋಟ್ಯಧಿಪತಿಗಳ ಸಂಖ್ಯೆ 315. ಸದಸ್ಯರ ಸರಾಸರಿ ವಾರ್ಷಿಕ ಆದಾಯ 5.33 ಕೋಟಿ ರೂ. ಹಿಂದಿನ ಲೋಕಸಭೆಯಲ್ಲಿ ಈ ಸಂಖ್ಯೆ 156 ಮತ್ತು ಸರಾಸರಿ ಆದಾಯ 1.86 ಕೋಟಿ ರೂ ಆಗಿತ್ತು. ಅಂದರೆ ಕೋಟ್ಯಧಿಪತಿಗಳ ಸಂಖ್ಯೆಯಲ್ಲಿ ಶೇ 102ರಷ್ಟು ಮತ್ತು ಸರಾಸರಿ ಆದಾಯದಲ್ಲಿ ಶೇ 186ರಷ್ಟು ಹೆಚ್ಚಳವಾಗಿದೆ.

ಅತಿ ಹೆಚ್ಚಿನ ಕೋಟ್ಯಧಿಪತಿಗಳಿರುವುದು ಶಿವಸೇನೆ (ಶೇ 82) ನಂತರದ ಸ್ಥಾನಗಳಲ್ಲಿ ಕ್ರಮವಾಗಿಯಲ್ಲಿ  ಡಿಎಂಕೆ (ಶೇ 72) ಕಾಂಗ್ರೆಸ್ (ಶೇ 71) ಬಿಜೆಪಿ (ಶೇ 51), ಬಿಎಸ್‌ಪಿ (ಶೇ 62), ಎಸ್‌ಪಿ (ಶೇ 61) ಬಿಜೆಡಿ (ಶೇ 43), ಸಂಯುಕ್ತ ಜನತಾದಳ (ಶೇ 40) ಮತ್ತು ತೃಣಮೂಲ ಕಾಂಗ್ರೆಸ್ ( ಶೇ 37) ಇವೆ. ಸಿಪಿಎಂನ ಹದಿನಾರು ಸದಸ್ಯರಲ್ಲಿ ಒಬ್ಬರು ಮಾತ್ರ ಕೋಟ್ಯಧಿಪತಿ.

ಇಂತಹ ಸಂಸತ್‌ಗೆ ಅರವತ್ತು ತುಂಬಿದ್ದಕ್ಕಾಗಿ ಸಂಭ್ರಮಪಡೋಣವೇ? ಇದು ನಮ್ಮ ರಾಷ್ಟ್ರ ನಿರ್ಮಾಪಕರು ಕನಸು ಕಂಡಿದ್ದ ಸಂಸತ್ ಖಂಡಿತಾ ಆಗಿರಲಾರದು. ಸಂಸತ್ ಎಂದರೆ ಕೇವಲ ಕಲ್ಲು-ಇಟ್ಟಿಗೆಗಳ ಸ್ಥಾವರ ಅಲ್ಲ. ಅದು ದೇಶದ ಸಾರ್ವಭೌಮತೆಯ ಸಂಕಲ್ಪದ ಪ್ರಾತಿನಿಧಿಕ ಸ್ವರೂಪ. ಚುನಾಯಿತ ಪ್ರತಿನಿಧಿಗಳ ಮೂಲಕ ಜನತೆ ಸಂಸದೀಯ ವ್ಯವಸ್ಥೆಯಲ್ಲಿ ಭಾಗವಹಿಸುವ ಒಂದು ಅನನ್ಯ ವ್ಯವಸ್ಥೆ.

ಹಾಗಿದೆಯೇ  ನಮ್ಮ ಸಂಸತ್? ಹಾಗಿದ್ದಾರೆಯೇ ನಮ್ಮ ಸಂಸದರು? ಕೊಲೆ,ಸುಲಿಗೆ,ಅತ್ಯಾಚಾರದ ಆರೋಪಿಗಳು ಮಾತ್ರವಲ್ಲ, ಸದನದೊಳಗೆ ಮತ ಚಲಾಯಿಸಲು ತಮ್ಮನ್ನು ಮಾರಿಕೊಂಡವರು, ಪ್ರಶ್ನೆ ಕೇಳಲು ದುಡ್ಡು ಪಡೆದವರು, ಕ್ಷೇತ್ರಾಭಿವೃದ್ದಿ ನಿಧಿಯ ಹಣವನ್ನೇ ನುಂಗಿ ಹಾಕಿದವರು, ತಮ್ಮ ಉದ್ಯಮದ ಹಿತಾಸಕ್ತಿ ರಕ್ಷಣೆಗಾಗಿ ಸ್ಥಾನವನ್ನು ದುರುಪಯೋಗಪಡಿಸಿಕೊಂಡವರು, ...ಹೀಗೆ `ವರ್ಣರಂಜಿತ ಕಳಂಕಿತರು` ಸಂಸತ್‌ನೊಳಗೆ ವಿರಾಜಮಾನರಾಗಿದ್ದಾರೆ!

 ಇವೆಲ್ಲ ಇತ್ತೀಚಿನ ವಿದ್ಯಮಾನಗಳಲ್ಲ. ಕಳಂಕಿತ ಸದಸ್ಯರ ಸಂಖ್ಯೆ ಮತ್ತು ದುವರ್ತನೆಯ ಪ್ರಮಾಣವಷ್ಟೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಾ ಬಂದಿದೆ. ಮೊದಲ ಲೋಕಸಭೆಯಲ್ಲಿಯೇ ಬಾಂಬೆ ಬುಲಿಯನ್ ಅಸೋಸಿಯೇಷನ್ ಪರವಾಗಿ ಸಂಸತ್‌ನಲ್ಲಿ ಪ್ರಚಾರ ನಡೆಸಲು ಸದಸ್ಯ ಎಚ್.ಜಿ.ಮುದಗಲ್ ಅವರು ಆರ್ಥಿಕ ಲಾಭ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು.

ಅದರ ತನಿಖೆಗಾಗಿ ಪ್ರಧಾನಿ ಜವಾಹರಲಾಲ್ ನೆಹರೂ ನೇಮಿಸಿದ್ದ ಟಿ.ಟಿ.ಕೃಷ್ಣಮಾಚಾರಿ ನೇತೃತ್ವದ ಸಮಿತಿ ಮುದಗಲ್ ಅವರನ್ನು ದೋಷಿ ಎಂದು ತೀರ್ಮಾನಿಸಿದ್ದ ಕಾರಣ ಮುದಗಲ್ ಅವರನ್ನು ಸದನದಿಂದ ಹೊರಹಾಕಲಾಗಿತ್ತು. ಆ ಸಮಿತಿಯಲ್ಲಿದ್ದ ಸದಸ್ಯೆ ದುರ್ಗಾಬಾಯಿ ಸಂಸತ್ ಸದಸ್ಯರಿಗಾಗಿ ಆಚಾರ ಸಂಹಿತೆಯ ಹನ್ನೆರಡು ಸೂತ್ರಗಳನ್ನು ರಚಿಸಿದ್ದರು.

ನಂತರದ ದಿನಗಳಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಅಧ್ಯಕ್ಷರ ಎಪ್ಪತ್ತಾರು ಸಮ್ಮೇಳನಗಳು ನಡೆದಿವೆ. ಅವು ನೂರಾರು ಗೊತ್ತುವಳಿಗಳನ್ನು ಅಂಗೀಕರಿಸಿವೆ. ಸ್ವಾತಂತ್ರ್ಯದ ಸ್ವರ್ಣಮಹೋತ್ಸವದ ಸಂದರ್ಭದಲ್ಲಿ ಕರೆಯಲಾದ ವಿಶೇಷ ಅಧಿವೇಶನ ಸಂಸತ್‌ನ ಘನತೆ ಮತ್ತು ಗೌರವದ ರಕ್ಷಣೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ನಿರ್ಣಯಗಳನ್ನು ಕೈಗೊಂಡಿತ್ತು.

 2001ರಲ್ಲಿ ಆಗಿನ ಲೋಕಸಭಾಧ್ಯಕ್ಷ ಜಿ.ಎಂ.ಸಿ.ಬಾಲಯೋಗಿ ಅವರ ಅಧ್ಯಕತೆಯಲ್ಲಿ ನಡೆದ ಸಭಾಧ್ಯಕ್ಷರ ಸಮ್ಮೇಳನ ಆಚಾರಸಂಹಿತೆ ರಚನೆಯ ಜತೆಗೆ ಅದರ ಅನುಷ್ಠಾನಕ್ಕೆ ನಿಯಮಾವಳಿಗಳಲ್ಲಿ ತಿದ್ದುಪಡಿ, ಸದಸ್ಯರ ಹಕ್ಕು ಸಮಿತಿಯನ್ನು ಹಕ್ಕು ಮತ್ತು ನೀತಿ ಸಮಿತಿಯಾಗಿ ಪುನರ‌್ರಚನೆ, ಸಂಸದರ ನಡವಳಿಕೆಗಳ ಬಗ್ಗೆ ಮತದಾರರು ನೀಡುವ ದೂರು ಪರಿಶೀಲಿಸಲು ಆ ಸಮಿತಿಗೆ ಅಧಿಕಾರ-ಇವೇ ಮೊದಲಾದ ಗೊತ್ತುವಳಿಗಳನ್ನು ಅಂಗೀಕರಿಸಿತ್ತು.

ಸದನದ `ಬಾವಿ`ಯೊಳಗೆ ನುಗ್ಗಿ `ಪುಂಡಾಟ` ನಡೆಸುವ ಸದಸ್ಯರನ್ನು ಅಮಾನತುಗೊಳಿಸುವುದರಿಂದ ಹಿಡಿದು, ವರ್ಷಕ್ಕೆ ಕನಿಷ್ಠ 100 ದಿನಗಳ ಕಲಾಪ ನಡೆಸುವುದನ್ನು ಕಡ್ಡಾಯಗೊಳಿಸುವವರೆಗೆ ಹಲವಾರು ಸುಧಾರಣಾ ಕ್ರಮಗಳ ಬಗ್ಗೆ ಕಳೆದ 60 ವರ್ಷಗಳಿಂದ ಸದಸ್ಯರು ಚರ್ಚೆ ನಡೆಸಿದ್ದಾರೆ. ಯಾವ ಗೊತ್ತುವಳಿಗಳಾಗಲಿ, ನೀತಿ ಸಂಹಿತೆಯಾಗಲಿ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ.

ಸುಪ್ರೀಂಕೋರ್ಟ್ ಬೆನ್ನುಹತ್ತಿದ್ದ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಅನಿವಾರ್ಯವಾಗಿ ಅಪರಾಧಗಳ ಹಿನ್ನೆಲೆ, ಆಸ್ತಿ ಮತ್ತು ಶಿಕ್ಷಣದ ವಿವರಗಳನ್ನೊಳಗೊಂಡ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿದೆ. ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಕ್ರಮಕೈಗೊಳ್ಳುವ ವ್ಯವಸ್ಥೆ ಮಾತ್ರ ಇನ್ನೂ ಬಂದಿಲ್ಲ.

ತಮ್ಮ ಸಂಬಳ-ಭತ್ಯೆ ಏರಿಕೆ ಮಸೂದೆಯ ಬಗ್ಗೆ ಚರ್ಚೆಯನ್ನೇ ನಡೆಸದೆ ಅದಕ್ಕೆ ಕ್ಷಣಾರ್ಧದಲ್ಲಿ ಅಂಗೀಕಾರ ನೀಡಲು ಒಂದಿಷ್ಟೂ ನಾಚಿಕೆ ಪಟ್ಟುಕೊಳ್ಳದ ಸಂಸದರು, ದಾರಿ ತಪ್ಪುತ್ತಿರುವ ಸದಸ್ಯರಿಗೆ ಕಡಿವಾಣ ಹಾಕುವ ಕ್ರಮಗಳಿಗೆ ಕಾನೂನಿನ ರೂಪಕೊಡಲು ಒಪ್ಪುತ್ತಿಲ್ಲ. ಇವೆಲ್ಲವನ್ನೂ `ಸ್ವಯಂ ನಿಯಂತ್ರಣ`ದ ಮೂಲಕವೇ ಸಾಧಿಸಬೇಕು ಎನ್ನುತ್ತಾರೆ ಅವರು.

ಸ್ವಯಂ ನಿಯಂತ್ರಣ ಎಂದರೆ ನಿಯಂತ್ರಣವೇ ಇಲ್ಲ ಎನ್ನುವುದು ಎಲ್ಲ ಕ್ಷೇತ್ರಗಳಲ್ಲಿನ  ಇಲ್ಲಿಯವರೆಗಿನ ಅನುಭವ. ಉಳಿದಿರುವುದು ಒಂದೇ ದಾರಿ ಮತದಾರರಾಗಿರುವ ಜನತೆಯೇ ತಮ್ಮ ಪ್ರತಿನಿಧಿಗಳನ್ನು ನಿಯಂತ್ರಿಸುವುದು. ಈಗಿನ ಚುನಾವಣಾ ವ್ಯವಸ್ಥೆಯಲ್ಲಿ ಇದೂ ಅಸಾಧ್ಯ.

ಸಾಧ್ಯವಾಗಬೇಕಾದರೆ ಜಾತಿ, ದುಡ್ಡು ಮತ್ತು ತೋಳ್ಬಲಗಳ ನಿಯಂತ್ರಣದಿಂದ ಚುನಾವಣಾ ವ್ಯವಸ್ಥೆಯನ್ನು ಬಿಡುಗಡೆಗೊಳಿಸಬೇಕು. ಇದಕ್ಕಾಗಿ ನೆನೆಗುದಿಗೆ ಬಿದ್ದಿರುವ ಚುನಾವಣಾ ಸುಧಾರಣೆಯ ಪ್ರಸ್ತಾವಗಳನ್ನು ಅನುಷ್ಠಾನಕ್ಕೆ ತರಬೇಕು.

ಇದಕ್ಕೆ ಸಂಸದರು ಅವಕಾಶ ಮಾಡಿಕೊಡಬೇಕಲ್ಲ? ಎಂತಹ ವಿಷವರ್ತುಲದಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ ನಾವು. ಇದಕ್ಕಾಗಿಯೇ ಇರಬೇಕು, `ಪ್ರಜೆಗಳು ತಮ್ಮ ಅರ್ಹತೆಗೆ ತಕ್ಕ ಸರ್ಕಾರವನ್ನು ಪಡೆಯುತ್ತಾರೆ` ಎನ್ನುವುದು.

ಬಿಜೆಪಿ ಗಂಟಲಿನೊಳಗಿನ ಬಿಸಿತುಪ್ಪ ಯಡಿಯೂರಪ್ಪ, ದಿನೇಶ್ ಅಮೀನ್ ಮಟ್ಟು May 14, 2012

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನು ಸುತ್ತಿಕೊಂಡಿರುವ ಜೋತಿಷಿಗಳು ಮತ್ತು ಅವರು ಅಡ್ಡಬೀಳುತ್ತಿರುವ ದೇವರುಗಳ ಮನಸ್ಸಲೇನಿದೆ ಎಂದು ಗೊತ್ತಿಲ್ಲ, ಆದರೆ ಎದುರಾಗಿರುವ ಪ್ರತಿಕೂಲ ಪರಿಸ್ಥಿತಿಯ ಹೊರತಾಗಿಯೂ, ಹೋರಾಟದ ಮೂಲಕ `ಬೂದಿಯಿಂದ ಎದ್ದು ಬರುತ್ತೇನೆ` ಎಂಬ ಛಲವನ್ನು ಯಡಿಯೂರಪ್ಪನವರು ಇಟ್ಟುಕೊಂಡಿದ್ದರೆ ಅದಕ್ಕೆ ಭಾರತೀಯ ಜನತಾ ಪಕ್ಷದಲ್ಲಿ ಅವಕಾಶ ಸಿಗುವುದು ಕಷ್ಟ. ಆ ಪಕ್ಷದಲ್ಲಿ ಅವರಿಗೆ ರಾಜಕೀಯ ಭವಿಷ್ಯ ಇಲ್ಲ.

ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಯಡಿಯೂರಪ್ಪನವರು ತಮ್ಮ ದಾರಿ ನೋಡಿಕೊಳ್ಳಬೇಕಾಗಬಹುದು, ಅದು ಕೂಡಾ ಹೂ ಚೆಲ್ಲಿದ ಹಾದಿ ಅಲ್ಲ, ಅಲ್ಲಿಯೂ ಕಲ್ಲು-ಮುಳ್ಳು, ಹೊಂಡ-ಖೆಡ್ಡಾಗಳಿವೆ. ಯಡಿಯೂರಪ್ಪನವರ ರಾಜಕೀಯ ಪಯಣ ನಿಜಕ್ಕೂ ಕಷ್ಟದಲ್ಲಿದೆ.

ಸಿಬಿಐ ತನಿಖೆ ಪ್ರಾರಂಭವಾದ ಕೂಡಲೇ ರಾಜಕಾರಣಿಯೊಬ್ಬನ ಭವಿಷ್ಯ ಅಂತ್ಯಗೊಳ್ಳಬೇಕಾಗಿಲ್ಲ. ಸೆರೆಮನೆವಾಸ ಮಾಡಿಬಂದ ನಂತರವೂ ಚುನಾವಣೆಯಲ್ಲಿ ಗೆದ್ದು ಮೊದಲಿನ (ಮುಖ್ಯಮಂತ್ರಿಯಾಗಿ ಮಾಡಿದ್ದ) `ಪಾಪ`ಗಳನ್ನು ತೊಳೆಯುವ ರೀತಿಯಲ್ಲಿ ದಕ್ಷತೆಯಿಂದ ರೈಲು ಸಚಿವರಾಗಿ ಹೆಸರು ಮಾಡಿದ ಲಾಲುಪ್ರಸಾದ್ ನಮ್ಮ ಕಣ್ಣಮುಂದೆ ಇದ್ದಾರೆ. ಬಿಹಾರದ ರಾಜಕೀಯದಲ್ಲಿ ಅವರ ಆಟ ಮುಗಿದಿದೆ ಎಂದು ಹೇಳುವ ಹಾಗಿಲ್ಲ. ಜೈಲುವಾಸದ ಹೊರತಾಗಿಯೂ ಕುಮಾರಿ  ಜಯಲಲಿತಾ ಮತ್ತೆ ತಮಿಳುನಾಡಿನ ಮುಖ್ಯಮಂತ್ರಿಯಾಗಲಿಲ್ಲವೇ? ಜೈಲಿನಲ್ಲಿದ್ದುಕೊಂಡೇ ಚುನಾವಣೆಯಲ್ಲಿ ಗೆದ್ದಿರುವ ಕೊಲೆ-ಸುಲಿಗೆಯ ಆರೋಪಿಗಳಿಲ್ಲವೇ? ನೂರೆಂಟು ಹೀನ ಅಪರಾಧಗಳ ಆರೋಪಗಳನ್ನು ತಲೆಮೇಲೆ ಹೊತ್ತಿದ್ದರೂ, ಎಲ್ಲಿಯವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಾನೂನಿನಲ್ಲಿ ಇರುತ್ತದೋ, ಎಲ್ಲಿಯವರೆಗೆ ಅಂಥವರನ್ನು ಬೇರೆ ಬೇರೆ ಕಾರಣಗಳಿಗಾಗಿ (ಜಾತಿ,ದುಡ್ಡು, ತೋಳ್ಬಲ) ಆಯ್ಕೆಮಾಡುವ ಮೂರ್ಖ, ಭ್ರಷ್ಟ, ಅಸಹಾಯಕ ಮತದಾರರು ಇರುತ್ತಾರೋ ಅಲ್ಲಿಯವರೆಗೆ ಯಾವ ಪಾಪಿ ರಾಜಕಾರಣಿಯ ಭವಿಷ್ಯವೂ ಕೊನೆಗೊಳ್ಳುವುದಿಲ್ಲ.

ಬೇರೆಬೇರೆ ಕಾರಣಗಳಿಗಾಗಿ ಕಳಂಕಿತರಾದ ನಾಯಕರ ಪಟ್ಟಿ ನೋಡಿದರೆ `ಪಾಪ ಸುಟ್ಟುಹಾಕಿದ ಬೂದಿ`ಯಿಂದ ಎದ್ದು ಬಂದವರಲ್ಲಿ ಹೆಚ್ಚಿನವರು ಪ್ರಾದೇಶಿಕ ಪಕ್ಷಗಳ ನಾಯಕರು ಎನ್ನುವುದು ಸ್ಪಷ್ಟವಾಗುತ್ತದೆ. ರಾಷ್ಟ್ರೀಯ ಪಕ್ಷಗಳಲ್ಲಿ ಇಂತಹವರಿಗೆ ಅವಕಾಶ ಕಡಿಮೆ. ರಾಜಕೀಯವಾಗಿ ತಮಗೆ ಹೊರೆ ಎಂದು ಅನಿಸಿದ ಕೂಡಲೇ ರಾಷ್ಟ್ರೀಯ ಪಕ್ಷಗಳು ಇಂತಹವರನ್ನು ಮರುಯೋಚನೆ ಮಾಡದೆ ಹೊರಗೆತ್ತಿ ಎಸೆದುಬಿಡುತ್ತವೆ. ಆರೋಪಗಳಿಂದ ಖುಲಾಸೆ ಹೊಂದಿದ ಬಳಿಕ ಪಕ್ಷ ಇಲ್ಲವೇ ಸರ್ಕಾರದಲ್ಲಿ ಸಣ್ಣಪುಟ್ಟ ಹುದ್ದೆಗಳಿಗಷ್ಟೆ ಅವರು ತೃಪ್ತರಾಗಬೇಕು. ಉದಾಹರಣೆಗೆ ಮುಂದೊಂದು ದಿನ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕೆಂದುಕೊಂಡಿದ್ದ ಸುರೇಶ್ ಕಲ್ಮಾಡಿ ಕನಸು ನನಸಾಗುವುದು ಕಷ್ಟ. ಬಂಗಾರು ಲಕ್ಷ್ಮಣ್ ಅವರ ರಾಜಕೀಯ ಕೊನೆಗೊಂಡು ಆಗಲೇ ಹತ್ತುವರ್ಷಗಳಾಗಿ ಹೋಯಿತು. ಇದರ ಅರ್ಥ ರಾಷ್ಟ್ರೀಯ ಪಕ್ಷಗಳು ಬಹಳ ಪ್ರಾಮಾಣಿಕವಾದ, ಮೌಲ್ಯಾಧಾರಿತ ರಾಜಕಾರಣಕ್ಕೆ ಬದ್ದವಾಗಿವೆ ಎಂದಲ್ಲ. ಅದು ರಾಷ್ಟ್ರರಾಜಕಾರಣದ ಅನಿವಾರ್ಯತೆ ಅಷ್ಟೆ. ಇದೇ ಮಾತನ್ನು ಲಾಲುಪ್ರಸಾದ್, ಮಧು ಕೋಡಾ, ಕನಿಮೋಳಿ ಮೊದಲಾದ ಪ್ರಾದೇಶಿಕ ಪಕ್ಷಗಳ ನಾಯಕರ ಬಗ್ಗೆ ಹೇಳಲಾಗದು. ಇದಕ್ಕಾಗಿಯೇ ಭ್ರಷ್ಟರು ತಾವೇ ಹೈಕಮಾಂಡ್ ಆಗಿರುವ ಪ್ರತ್ಯೇಕ ಪಕ್ಷವೊಂದನ್ನು ಕಟ್ಟಿಕೊಂಡು ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಲು ಪ್ರಯತ್ನಿಸುತ್ತಾರೆ.

ಈ ಹಿನ್ನೆಲೆಯಿಂದ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಭವಿಷ್ಯವನ್ನು ನೋಡಬೇಕಾಗುತ್ತದೆ. ಭಾರತೀಯ ಜನತಾ ಪಕ್ಷ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯುಪಿಎ ವಿರುದ್ದ  ಭ್ರಷ್ಟಾಚಾರವನ್ನು ಮುಖ್ಯ ಅಸ್ತ್ರವಾಗಿ ಬಳಸಿಕೊಳ್ಳಲು ಸಿದ್ಧತೆ ನಡೆಸಿದೆ. ಯುಪಿಎ ಸರ್ಕಾರದ 2ಜಿ ಸ್ಪೆಕ್ಟ್ರಂ, ಕಾಮನ್‌ವೆಲ್ತ್ ಗೇಮ್ಸ, ಆದರ್ಶ ಹೌಸಿಂಗ್ ಸೊಸೈಟಿ ಮೊದಲಾದ ಬಹುಕೋಟಿ ಹಗರಣಗಳನ್ನು ಸಂಸತ್‌ನ ಒಳಗೆ ಮತ್ತು ಹೊರಗೆ ಮತ್ತೆಮತ್ತೆ ಕೆದಕಿ ಜೀವಂತವಾಗಿಡಲು ಪ್ರಯತ್ನಿಸುತ್ತಿರುವುದು ಇದೇ ಕಾರಣಕ್ಕೆ. ಆದರೆ  ಬಿಜೆಪಿಯಿಂದ ತೂರಿಬರುತ್ತಿರುವ ಭ್ರಷ್ಟಾಚಾರ ವಿರೋಧಿ ಬಾಣಗಳನ್ನು ಕಾಂಗ್ರೆಸ್ ಪಕ್ಷ ಕರ್ನಾಟಕದ ಭ್ರಷ್ಟ ಸರ್ಕಾರದ ಗುರಾಣಿಯನ್ನು ಮುಂದೊಡ್ಡಿ ಮುರಿದುಹಾಕುತ್ತಿದೆ. ಯಡಿಯೂರಪ್ಪನವರನ್ನು ಬಗಲಲ್ಲಿ ಕಟ್ಟಿಕೊಂಡು ಭ್ರಷ್ಟಾಚಾರ ವಿರೋಧಿ ರಾಜಕೀಯ ಹೋರಾಟವನ್ನು ಬಿಜೆಪಿ ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಲಾರದು. ರಾಜಸ್ತಾನದಲ್ಲಿ ವಸುಂಧರ ರಾಜೇ ಅವರ ಬಂಡಾಯದ ಭೀತಿ, ಬಾಬರಿ ಮಸೀದಿ ಧ್ವಂಸದ ಪ್ರಕರಣದಲ್ಲಿ ಮತ್ತೆ ಎಲ್.ಕೆ.ಅಡ್ವಾಣಿ ವಿರುದ್ದ ತನಿಖೆ ಪುನರಾರಂಭಿಸಲು ಸಿಬಿಐ ತೋರಿಸುತ್ತಿರುವ ಆಸಕ್ತಿ, ಪಕ್ಷದ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಲಂಚ ಹಗರಣದಲ್ಲಿ ಜೈಲಿಗೆ ಹೋಗಿರುವಂತಹ ಮುಜುಗರದ ಪರಿಸ್ಥಿತಿ-ಇವೆಲ್ಲವೂ ಬಿಜೆಪಿಯನ್ನು ನಿತ್ರಾಣಗೊಳಿಸಿದೆ.
ಇಂತಹ ಸ್ಥಿತಿಯಲ್ಲಿ ಭ್ರಷ್ಟನಾಯಕನೊಬ್ಬನನ್ನು ತಲೆಮೇಲೆ ಕೂರಿಸಿಕೊಂಡು ಮುನ್ನಡೆಯುವಷ್ಟು ತ್ರಾಣ ಆ ಪಕ್ಷಕ್ಕೂ ಇದ್ದ ಹಾಗಿಲ್ಲ.  ತನ್ನ ಸುತ್ತ ಸೃಷ್ಟಿಸಿಕೊಂಡಿರುವ ಹುಸಿ ನೈತಿಕತೆಯ ಪ್ರಭಾವಳಿ ಯಡಿಯೂರಪ್ಪನವರಿಂದಾಗಿ ಮಂಕಾಗಿ ಹೋಗುತ್ತಿರುವುದು ಸಂಘ ಪರಿವಾರಕ್ಕೂ ಇರುಸುಮುರುಸು ಉಂಟುಮಾಡುತ್ತಿದೆ. ಆದ್ದರಿಂದ ಪಕ್ಷ ಮತ್ತು ಪರಿವಾರ ಎರಡಕ್ಕೂ ಯಡಿಯೂರಪ್ಪ ಗಂಟಲಲ್ಲಿರುವ ಬಿಸಿತುಪ್ಪ.

ಯಡಿಯೂರಪ್ಪ ವಿರುದ್ಧದ ಸಿಬಿಐ ತನಿಖೆ ಐದಾರು ತಿಂಗಳಲ್ಲಿ ಮುಗಿದುಹೋಗುವಂತಹದ್ದಲ್ಲ, ಹಾಗೆ ಮುಗಿದುಹೋಗಲು ಕೇಂದ್ರ ಸರ್ಕಾರ ಬಿಡಲಾರದು. ಇದನ್ನು ಮುಂದಿನ ರಾಜ್ಯ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯವರೆಗೂ ಎಳೆದುಕೊಂಡು ಹೋಗಲು ಅಧಿಕಾರವನ್ನು ಉಪಯೋಗಿಸಿಕೊಂಡೋ, ದುರುಪಯೋಗಮಾಡಿಕೊಂಡೋ ಕಾಂಗ್ರೆಸ್ ಖಂಡಿತ ಪ್ರಯತ್ನಿಸಲಿದೆ. ಬಂಗಾರು ಲಕ್ಷ್ಮಣ್ ಅವರಂತೆ ಯಡಿಯೂರಪ್ಪನವರು ತಮ್ಮ ಪಾಡಿಗೆ ಮೂಲೆಯಲ್ಲಿದ್ದು ಬಿಟ್ಟರೆ ಸಮಸ್ಯೆ ಇಲ್ಲ. ಹಾಗೆ ಇರುವುದು ಅವರ ಜಾಯಮಾನ ಅಲ್ಲ.

ಮುಖ್ಯಮಂತ್ರಿ ಇಲ್ಲವೇ ಪಕ್ಷದ ಅಧ್ಯಕ್ಷ ಯಾರೇ ಆಗಲಿ, ಪ್ರಮುಖ ನಿರ್ಧಾರಗಳು ಮಾತ್ರ ತಮ್ಮ ಮನೆಯ ಉಪಹಾರದ ಮೇಜಿನಲ್ಲಿಯೇ ನಡೆಯಬೇಕು ಎಂಬ ಹಟಮಾರಿತನವನ್ನು ಹೊಂದಿರುವವರು ಯಡಿಯೂರಪ್ಪ. ಪಕ್ಷ ಮತ್ತು ಸರ್ಕಾರದ ಅತ್ಯುನ್ನತ ಹುದ್ದೆಗಳನ್ನು ಏರುವುದು ಸಾಧ್ಯ ಇಲ್ಲ ಎಂದಾದರೆ ಅಲ್ಲಿ ತಮ್ಮ ಕೈಗೊಂಬೆಗಳು ಇರಬೇಕು ಎಂದು ಬಯಸುತ್ತಾರೆ ಯಡಿಯೂರಪ್ಪ. ಬಿಜೆಪಿ ಇದನ್ನು ಒಪ್ಪಿಕೊಳ್ಳಬಹುದೇ?

ಬಿಜೆಪಿ ಮುಂದೆ ಇರುವ ಇನ್ನೊಂದು ದಾರಿ ಯಡಿಯೂರಪ್ಪನವರನ್ನು ಒಂದೋ ಪಕ್ಷದಿಂದ ಉಚ್ಚಾಟಿಸುವುದು ಇಲ್ಲವೇ ಅವರ ಯಾವ ಬೇಡಿಕೆಗಳನ್ನೂ ಈಡೇರಿಸಲು ಹೋಗದೆ ಅವರಾಗಿಯೇ ಪಕ್ಷ ಬಿಟ್ಟು ಹೋಗುವಂತೆ ಮಾಡುವುದು. ಅಲ್ಲಿಯೂ ಅಪಾಯ ಇದೆ. ಮುಖ್ಯಮಂತ್ರಿಯಾದ ನಂತರ ಯಡಿಯೂರಪ್ಪನವರು ತಮ್ಮ ನಡೆ-ನುಡಿ ಮತ್ತು ಅಧಿಕಾರದ ಮೂಲಕ ತಮ್ಮನ್ನು ಲಿಂಗಾಯತ ನಾಯಕರಾಗಿ ಬಿಂಬಿಸಿಕೊಳ್ಳುವುದರಲ್ಲಿ  ಯಶಸ್ವಿಯಾಗಿದ್ದಾರೆ. ಜಾತಿ ಕಾರಣಕ್ಕಾಗಿ ಬೆಂಬಲ ನೀಡುವ ಮತದಾರರು ತಮ್ಮ ಆಯ್ಕೆಯ ನಾಯಕನ ವಿರುದ್ದದ ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ ಎನ್ನುವುದು ಚುನಾವಣೆಯ ಇತಿಹಾಸವನ್ನು ನೋಡಿದರೆ ಮನವರಿಕೆಯಾಗುತ್ತದೆ. ಉಚ್ಚಾಟನೆ ಇಲ್ಲವೇ ಬಂಡಾಯದ ಮೂಲಕ ಪಕ್ಷ ಬಿಟ್ಟು ಹೋದವರಿಗೆ ಗೆಲ್ಲುವ ಸಾಮರ್ಥ್ಯ ಇರದೆ ಇದ್ದರೂ ತಾವು ಹಿಂದೆ ಇದ್ದ ಪಕ್ಷವನ್ನು ಸೋಲಿಸುವ ಶಕ್ತಿ ಇರುತ್ತದೆ. ಯಡಿಯೂರಪ್ಪನವರ ವಿಷಯದಲ್ಲಿಯೂ ಇದು ಸತ್ಯ.  ಅವರು ಪಕ್ಷ ಬಿಟ್ಟುಹೋಗಿ ಸ್ವಂತ ಬಲದಿಂದ ಮುಂದಿನ ವಿಧಾನಸಭೆ ಚುನಾವಣೆ ಎದುರಿಸಿ ಗೆದ್ದು ಬಂದು ಮುಖ್ಯಮಂತ್ರಿಯಾಗಲಾರರು, ಆದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ಮಾಡಬಲ್ಲರು.

ಯಡಿಯೂರಪ್ಪನವರ ಭವಿಷ್ಯದ ಹಾದಿ ಕೂಡಾ ನಿರಾತಂಕವಾಗಿಲ್ಲ. ಪಕ್ಷದಲ್ಲಿಯೇ ಉಳಿದು ಒಂದಷ್ಟು ದಿನ ಬಾಯಿಮುಚ್ಚಿಕೊಂಡು ನ್ಯಾಯಾಂಗದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು ಅವರ ಮುಂದಿನ ಒಂದು ಹಾದಿ. ಇದು ವೈಯಕ್ತಿಕವಾಗಿ ಸುರಕ್ಷಿತ ಹಾದಿ. ಇದರಲ್ಲಿ ಬಹಳ ಅಪಾಯಗಳು ಕಡಿಮೆ. ಆದರೆ ಯಡಿಯೂರಪ್ಪ ಆ ರೀತಿ ತೆಪ್ಪಗೆ ಕೂರುವವರಲ್ಲ. ಆಡಳಿತ ಪಕ್ಷದಲ್ಲಿದ್ದರೂ ಅವರು ವಿರೋಧ ಪಕ್ಷದ ನಾಯಕರಂತೆ ಗದ್ದಲ ಉಂಟು ಮಾಡುತ್ತಿದ್ದವರು. ಅವರು ಸುಮ್ಮನಿದ್ದರೂ ಅವರ ಸುತ್ತಮುತ್ತ ಇರುವ ಬೆಂಬಲಿಗರು ಸುಮ್ಮನಿರಲು ಬಿಡಲಾರರು.

ಅಂತಹ ಸಂದರ್ಭದಲ್ಲಿ ಅವರ ಮುಂದೆ ಇರುವ ಇನ್ನೊಂದು ದಾರಿ ಈಗಿನ ಪಕ್ಷ ತ್ಯಜಿಸಿ ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯವಾಗಿ ಸಕ್ರಿಯವಾಗಿ ಇರುವುದು. ಇದರಲ್ಲಿ ಅಪಾಯಗಳು ಹೆಚ್ಚು. ಮೊದಲನೆಯದಾಗಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಎಂದೂ ಯಶಸ್ಸು ಕಂಡಿಲ್ಲ. ಇದಕ್ಕೆ ಯಡಿಯೂರಪ್ಪನವರ ಜಿಲ್ಲೆಯವರೇ ಆಗಿದ್ದ ಎಸ್.ಬಂಗಾರಪ್ಪನವರ ರಾಜಕೀಯ ಜೀವನವೇ ಉತ್ತಮ ನಿದರ್ಶನ. ಕಾಂಗ್ರೆಸ್ ಪಕ್ಷದ ವಿರುದ್ಧ ಅವರು ಬಂಡೆದ್ದು ಸ್ಥಾಪಿಸಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷ ಶೇ 7.5ರಷ್ಟು ಮತ ಮತ್ತು ಹತ್ತು ಶಾಸಕರನ್ನು ಗಳಿಸಲಷ್ಟೇ ಸಾಧ್ಯವಾಗಿತ್ತು. ಚುನಾವಣೆಯ ನಂತರ ಆ ಶಾಸಕರು ಕೂಡಾ ಬಂಗಾರಪ್ಪನವರ ಜತೆ ಉಳಿಯಲಿಲ್ಲ. ಬಂಗಾರಪ್ಪನವರಿಗೆ ಇಲ್ಲದ ಜಾತಿ ಬೆಂಬಲದ ಯಡಿಯೂರಪ್ಪನವರಿಗೆ ಇದೆ ಎನ್ನುವುದರಲ್ಲಿ ಅನುಮಾನ ಇಲ್ಲ. ಇದೇ ಜಾತಿ ಬಲದಿಂದ ದಕ್ಷಿಣ ಕರ್ನಾಟಕದಲ್ಲಿ ಎಚ್.ಡಿ.ದೇವೇಗೌಡರು ಮಾಡುತ್ತಿರುವ ರಾಜಕೀಯವನ್ನು ಉತ್ತರಕರ್ನಾಟಕದಲ್ಲಿ ತಾವೂ ಮಾಡಬಹುದು ಎಂಬ ಲೆಕ್ಕಚಾರವೂ ಅವರ ತಲೆಯಲ್ಲಿ ಸುಳಿದಾಡುತ್ತಿರಬಹುದು.

 ಆದರೆ ಒಂದು ಪ್ರಾದೇಶಿಕ ಪಕ್ಷವನ್ನು ಕಟ್ಟಲು ಬೇಕಾದಷ್ಟು ಸಮಯ, ತಾಳ್ಮೆ, ಜಾಣ್ಮೆ ಯಡಿಯೂರಪ್ಪನವರಲ್ಲಿದೆಯೇ ಎನ್ನುವುದು ಪ್ರಶ್ನೆ. ಅವರು ಎದುರಿಸಬೇಕಾಗಿರುವ ಸಿಬಿಐ ತನಿಖೆ ಯಾವ ಹಾದಿ ಹಿಡಿಯಲಿದೆ ಎನ್ನುವುದನ್ನು ಹೇಳಲಾಗದು.

ಯಡಿಯೂರಪ್ಪನವರ ವಿರುದ್ದದ ಆರೋಪಗಳು ಮತ್ತು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ವ್ಯಕ್ತಪಡಿಸಿರುವ ಗಂಭೀರತೆಯನ್ನು ನೋಡಿದರೆ ಅವರ ಬಂಧನ ಅನಿವಾರ್ಯವಾಗಬಹುದು. ತನಿಖೆ ಅವರ ಕುಟುಂಬದ ಸದಸ್ಯರ ಬೆನ್ನು ಕೂಡಾ ಬಿಡಲಾರದು. ಇದರಿಂದಾಗಿ  ಆರೋಪಗಳಿಂದ ಮುಕ್ತವಾಗಿ ಹೊರಬರಲು ನಡೆಸುವ ಕಾನೂನಿನ ಹೋರಾಟದಲ್ಲಿಯೇ ಅವರು ಮುಳುಗಿಬಿಡುವ ಸಾಧ್ಯತೆಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ ನಡೆಸಿಕೊಂಡು ಹೋಗುವವರು ಯಾರು?

ಯಡಿಯೂರಪ್ಪನವರೊಬ್ಬರನ್ನು ಹೊರತುಪಡಿಸಿದರೆ ಜತೆಯಲ್ಲಿರುವ ಯಾವ ನಾಯಕರಲ್ಲಿಯೂ ಅವರ ಪರವಾಗಿ ರಾಜಕೀಯ ಹೋರಾಟವನ್ನು ಮುಂದುವರಿಸಿಕೊಂಡು ಹೋಗುವ ವರ್ಚಸ್ಸು ಇಲ್ಲವೇ ಸಾಮರ್ಥ್ಯ ಇದ್ದ ಹಾಗಿಲ್ಲ. ಈಗ ರಾಜೀನಾಮೆ ಕೊಟ್ಟವರೆಲ್ಲರೂ ಯಡಿಯೂರಪ್ಪನವರು ಪಕ್ಷ ಬಿಟ್ಟುಹೋದರೆ ಅವರ ಹಿಂದೆ ಹೋಗುತ್ತಾರೆ ಎನ್ನುವುದೂ ಖಾತರಿ ಇಲ್ಲ. ಇವೆಲ್ಲವೂ ತಿಳಿಯದಷ್ಟು ಯಡಿಯೂರಪ್ಪನವರು ದಡ್ಡರಿರಲಾರರು.

ವ್ಯಕ್ತಿ ಎಷ್ಟೇ ಜಾಣನಾಗಿದ್ದರೂ ಕೋಪದ ಕೈಗೆ ಬುದ್ದಿ ಕೊಟ್ಟರೆ ಆಗುವುದೆಲ್ಲವೂ ಅನಾಹುತ. ಅವರ ಮೇಲಿನ ಆರೋಪಗಳಿಗಾಗಲಿ, ಸಿಬಿಐ ಅವರ ವಿರುದ್ಧ ನಡೆಸಲಿರುವ ತನಿಖೆಗಾಗಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಕಾರಣರಲ್ಲ. 

ಗೌಡರು ಕೆಳಗಿಳಿದು ಯಡಿಯೂರಪ್ಪನವರ ಆಪ್ತರು ಮುಖ್ಯಮಂತ್ರಿಯಾದರೂ ಅವರು ಈಗ ಎದುರಿಸುತ್ತಿರುವ ಯಾವ ಕಷ್ಟವೂ ಪರಿಹಾರವಾಗಲಾರದು. ಹೀಗಿದ್ದರೂ ಯಡಿಯೂರಪ್ಪನವರು ತಮ್ಮದೇ ಪಕ್ಷದ ಮುಖ್ಯಮಂತ್ರಿಯ ತಲೆದಂಡಕ್ಕಾಗಿ ಪಟ್ಟು ಹಿಡಿದಿದ್ದಾರೆ. ಇದು ಯಡಿಯೂರಪ್ಪ ಶೈಲಿ. ಅವರು ಸಿಟ್ಟಿಗೆ ಹೆಸರಾದವರೇ ಹೊರತು, ಸಹನೆ-ಸಂಯಮಕ್ಕಲ್ಲ. ತನ್ನ ಒಂದು ಕಣ್ಣುಹೋದರೂ ಸರಿ, ಎದುರಾಳಿಯ ಎರಡೂ ಕಣ್ಣು ಹೋಗಬೇಕೆಂದು ಹೇಳುವಂತಹ ಹಟಮಾರಿ ಅವರು.

ಈ ರೀತಿ ಹತಾಶೆಗೀಡಾಗಿರುವ ವ್ಯಕ್ತಿ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರೇನಾದರೂ ಪಕ್ಷದಿಂದ ಹೊರನಡೆದು ಸ್ವಂತ ಪಕ್ಷ ಕಟ್ಟುವ ನಿರ್ಧಾರಕ್ಕೆ ಬಂದರೆ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಳ್ಳಲಿರುವುದು ಖಚಿತ. ಅದಕ್ಕಿಂತಲೂ ಹೆಚ್ಚು ಅನಾಹುತವಾಗಲಿರುವುದು ಅವರು ಬಾಯಿ ಬಿಟ್ಟಾಗ. ಯಡಿಯೂರಪ್ಪನವರು ಅಕ್ರಮಗಳಲ್ಲಿ ಭಾಗಿಯಾಗಿರುವುದು ನಿಜವೇ ಆಗಿದ್ದರೆ ತನ್ನನ್ನು ಮೌಲ್ಯನಿಷ್ಠ ರಾಜಕೀಯ ಪಕ್ಷ ಎಂದು ಬಿಂಬಿಸಿಕೊಳ್ಳುತ್ತಿರುವ ಅವರ ಪಕ್ಷ ಏನು ಮಾಡುತ್ತಿತ್ತು? ಅದರ ರಾಷ್ಟ್ರೀಯ ಅಧ್ಯಕ್ಷರು ಏನು ಮಾಡುತ್ತಿದ್ದರು, ಶಿಕ್ಷೆ ಅವರೊಬ್ಬರೇ ಯಾಕೆ ಅನುಭವಿಸಬೇಕು? ಆದರೆ ಆಗುತ್ತಿರುವುದೇನು? ಯಡಿಯೂರಪ್ಪನವರ ಕೊರಳಿಗೆ ಸಿಬಿಐ ತನಿಖೆಯ ಕುಣಿಕೆ, ಕರ್ನಾಟಕದ ಬಿಜೆಪಿಯ ಎಲ್ಲ ಕರ್ಮಕಾಂಡಗಳಿಗೆ ಮೂಕಪ್ರೇಕ್ಷಕರಾಗಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ಎರಡನೇ ಅವಧಿಗೆ ಅಧ್ಯಕ್ಷರಾಗುವ ಅವಕಾಶದ ಉಡುಗೊರೆ. ಇದೆಂತಹ ನ್ಯಾಯ?

Saturday, May 12, 2012

ರಾಜಕೀಯದ ಕೆಸರಲ್ಲಿ ರಾಷ್ಟ್ರಪತಿ ಸ್ಥಾನ May 07, 2012

ರಾಷ್ಟ್ರಪತಿ ಸ್ಥಾನಕ್ಕೆ ಕಳೆದೆರಡು ಅವಧಿಗಳಲ್ಲಿ (2002 ಮತ್ತು 2007) ನಡೆದ ಚುನಾವಣೆಯನ್ನು ಸಮೀಪದಿಂದ ಗಮನಿಸಿದವರಲ್ಲಿ ಯಾರಿಗೂ ಈಗ ಚರ್ಚೆಯ ಅಂಗಳದಲ್ಲಿ ಸುಳಿದಾಡುತ್ತಿರುವ ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಭರವಸೆ ಹುಟ್ಟಲಾರದು.
 
ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಇಲ್ಲವೇ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು  ರಾಷ್ಟ್ರಪತಿ ಭವನ ಪ್ರವೇಶಿಸಬಹುದು ಎನ್ನುವ ವಾತಾವರಣವೇ ಈಗ ಇದೆ. ಇವರಲ್ಲೊಬ್ಬರು ಅದೃಷ್ಟವಂತರು ಆಗಲೂಬಹುದು, ಇಲ್ಲವೇ ಕಳೆದೆರಡು ಅವಧಿಗಳಲ್ಲಿ ನಡೆದಂತೆ ಕೊನೆ ಗಳಿಗೆಯಲ್ಲಿ ಯಾವುದಾದರೂ `ಕಪ್ಪು ಕುದುರೆ` ಸ್ಪರ್ಧಾಕಣ ಪ್ರವೇಶಿಸಲೂಬಹುದು.

2002ರ ಜನವರಿ ತಿಂಗಳಲ್ಲಿ ಸಿಪಿಎಂ ನಾಯಕ ಸೋಮನಾಥ ಚಟರ್ಜಿ ಅವರು ವಿರೋಧ ಪಕ್ಷಗಳ ನಾಯಕರನ್ನು ಒಬ್ಬರಾದ ಮೇಲೆ ಒಬ್ಬರಂತೆ ಮನೆಗೆ ಆಹ್ವಾನಿಸತೊಡಗಿದ್ದರು. ಸ್ವಭಾವತಃ ತಿಂಡಿಪೋತರಾದ ಬಂಗಾಳಿಗಳಿಗಿಂತ ಅಲ್ಲಿನ ರಾಜಕಾರಣಿಗಳು ಬೇರೆ ಅಲ್ಲ. ಅವರಿಂದ ಊಟ-ತಿಂಡಿಗೆ ಆಹ್ವಾನ ಬಂದರೆ ಸಾಮಾನ್ಯವಾಗಿ ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ.
 
ಸೋಮನಾಥ ಬಾಬು ಮನೆಯಲ್ಲಿ ಊಟ ಎಂದರೆ `ಬಂಗಾಳಿಗಳ ಬಾಯಿಯಲ್ಲಿ ನೀರೂರಿಸುವ` `ಹಿಲ್ಸಾ` ಮೀನಿನ ಪಲ್ಯ ಇದ್ದೇ ಇರುತ್ತಿತ್ತು. ಆದರೆ ಆ ವರ್ಷದ ಜನವರಿ ತಿಂಗಳ ಔತಣಕೂಟಗಳಲ್ಲಿ `ಹಿಲ್ಸಾ` ಮೀನಿನ ಜತೆ ಅತಿಥಿಗಳು ನಡೆಸುತ್ತಿದ್ದ ಮಾತಿಗೆ ಗ್ರಾಸ ಒದಗಿಸಿದ್ದು ರಾಷ್ಟ್ರಪತಿ ಚುನಾವಣೆ. ಸೋಮನಾಥ ಚಟರ್ಜಿ ಅವರ ಈ `ಔತಣಕೂಟ ರಾಜಕೀಯ`ದ ಹಿಂದೆ ಆಗಿನ್ನೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದ ಜ್ಯೋತಿಬಸು ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಮಾಡುವ ಉದ್ದೇಶ ಇತ್ತು. 

1996ರಲ್ಲಿ ಜ್ಯೋತಿಬಸು ಪ್ರಧಾನಿಯಾಗುವ ಅವಕಾಶವನ್ನು ತಪ್ಪಿಸಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಲು ಸಿಪಿಎಂ ನಾಯಕರು ಕೂಡಾ ಸಿದ್ಧವಾಗಿದ್ದರು.ಇದೇ ವೇಳೆ ಕರಣ್‌ಸಿಂಗ್ ಎಂಬ ಹಳೆಯ ಕಾಂಗ್ರೆಸ್ ನಾಯಕ `ಶಿವಭಕ್ತ` ಎಂಬ ಸುದ್ದಿ  ಹರಡತೊಡಗಿತ್ತು. ಇದು ಬಿಜೆಪಿ ಬೆಂಬಲ ಪಡೆಯುವ ಪ್ರಯತ್ನ ಎಂಬ ವ್ಯಾಖ್ಯಾನ ಕೇಳಿ ಬಂದಿತ್ತು. 

ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ರಾಜಕೀಯ ನಿವೃತ್ತಿ ಬಗ್ಗೆ ಮಾತನಾಡುತ್ತಿದ್ದರು. ನಂತರದ ದಿನಗಳಲ್ಲಿ ಬಿಜೆಪಿ ಸೇರಿದ ನಜ್ಮಾ ಹೆಪ್ತುಲ್ಲಾ ಇದ್ದಕ್ಕಿದ್ದ ಹಾಗೆ ಬಿಜೆಪಿ ಮೇಲೆ ದಾಳಿ ನಡೆಸತೊಡಗಿದ್ದರು. ಈ ಸಂದರ್ಭದಲ್ಲಿ  ಕೇಳಿಬಂದ ಮೊದಲ ಅಚ್ಚರಿಯ ಹೆಸರು ಪಿ.ಸಿ.ಅಲೆಗ್ಸಾಂಡರ್ ಅವರದ್ದು. 

ಐಎಎಸ್ ಅಧಿಕಾರಿಯಾಗಿದ್ದರೂ ಮೂವರು ಪ್ರಧಾನಿಗಳಾದ ಇಂದಿರಾಗಾಂಧಿ, ರಾಜೀವ್‌ಗಾಂಧಿ ಮತ್ತು ಪಿ.ವಿ.ನರಸಿಂಹರಾವ್ ಅವರಜತೆ ಕೆಲಸ ಮಾಡಿದ್ದ ಅಲೆಗ್ಸಾಂಡರ್ `ಕಾಂಗ್ರೆಸಿಗರೇ` ಆಗಿ ಹೋಗಿದ್ದರು. ವಿಪರ್ಯಾಸವೆಂದರೆ ಅವರ ಹೆಸರನ್ನು ಮೊದಲು ಸೂಚಿಸಿದ್ದು ಶಿವಸೇನೆ ನಾಯಕ ಬಾಳಾ ಠಾಕ್ರೆ, ಬೆಂಬಲಿಸಿದ್ದು ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ವಿರೋಧಿಸತೊಡಗಿದ್ದು ಕಾಂಗ್ರೆಸ್. ಅಲೆಗ್ಸಾಂಡರ್ ಹೆಸರಿನ ಪ್ರಸ್ತಾವದ ಹಿಂದೆ ದುರುದ್ದೇಶ ಇದ್ದದ್ದು ನಿಜ. 

ಒಬ್ಬ ಕ್ರಿಶ್ಚಿಯನ್ ರಾಷ್ಟ್ರಪತಿಯಾಗಿ ಬಿಟ್ಟರೆ, ಅದೇ ಧರ್ಮಕ್ಕೆ ಸೇರಿರುವ ಸೋನಿಯಾಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವುದು ಕಾಂಗ್ರೆಸ್ ಪಕ್ಷಕ್ಕೆ ಕಷ್ಟವಾಗಬಹುದು ಎನ್ನುವ ಕಾರಣಕ್ಕಾಗಿಯೇ ಅಲೆಗ್ಸಾಂಡರ್ ಬಗ್ಗೆ ಠಾಕ್ರೆ, ಪವಾರ್ ಮತ್ತು ಪ್ರಮೋದ್ ಮಹಾಜನ್ ಅವರಂಥವರಿಗೆ ಪ್ರೀತಿ ಉಕ್ಕಿ ಹರಿದಿತ್ತು. 

ಇದರ ಪರಿಣಾಮವಾಗಿ ತನ್ನ ವೃತ್ತಿ ಜೀವನದಲ್ಲಿ ಕೇಳದ ಆರೋಪಗಳನ್ನೆಲ್ಲ ಅಲೆಗ್ಸಾಂಡರ್ ಕೇಳುವಂತಾಯಿತು. ರಾಜೀವ್‌ಗಾಂಧಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದ ಕಾಲದಲ್ಲಿ  ಪ್ರಧಾನಿ ಕಾರ್ಯಾಲಯದ ರಹಸ್ಯ ದಾಖಲೆ ಪತ್ರಗಳನ್ನು ಕುಖ್ಯಾತ ಬೇಹುಗಾರ ಕೂಮರ್ ನಾರಾಯಣ್‌ಅವರಿಗೆ ನೀಡಿದ್ದರು ಎನ್ನುವುದು ಅಲೆಗ್ಸಾಂಡರ್ ವಿರುದ್ದ ಕೇಳಿಬಂದ ಮುಖ್ಯ ಆರೋಪ. ಅದರ ನಂತರ ಅವರು ಅನಿವಾರ್ಯವಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.

ಇವೆಲ್ಲವೂ ನಡೆಯುತ್ತಿರುವಾಗಲೇ ಆಗಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರನ್ನೇ ಎರಡನೆ ಅವಧಿಗೆ ಮುಂದುವರಿಸಬೇಕೆಂಬ ಪ್ರಯತ್ನ  ಪ್ರಾರಂಭವಾಗಿತ್ತು. ಸುಮಾರು 150 ಸದಸ್ಯ ಬಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಂಸತ್ ಸದಸ್ಯರ ವೇದಿಕೆ ಸಭೆ ಸೇರಿ ಮುಂದಿನ ರಾಷ್ಟ್ರಪತಿ ಹುದ್ದೆಗೆ ದಲಿತರನ್ನೇ ನೇಮಿಸಬೇಕೆಂಬ ಗೊತ್ತುವಳಿ ಅಂಗೀಕರಿಸಿತ್ತು. 

ಕೆ.ಆರ್.ನಾರಾಯಣನ್ ಅವರನ್ನು ಉಪರಾಷ್ಟ್ರಪತಿ ಮಾಡಲು ಆ ಕಾಲದಲ್ಲಿ ವೇದಿಕೆಯ ಅಧ್ಯಕ್ಷರಾಗಿದ್ದ ಕರ್ನಾಟಕದ ರಾಜ್ಯಸಭಾ ಸದಸ್ಯ ಎಚ್.ಹನುಮಂತಪ್ಪ ನೇತೃತ್ವದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರಿಂದ ಈ ಪ್ರಯತ್ನವನ್ನು ಯಾರೂ ತಳ್ಳಿಹಾಕುವಂತೆ ಇರಲಿಲ್ಲ. ನಾರಾಯಣನ್ ಅವರು ಮುಂದುವರಿಯಲು ಬಯಸಿದರೆ ದಲಿತ ರಾಷ್ಟ್ರಪತಿಗೆ ಇನ್ನೊಂದು ಅವಕಾಶವನ್ನು ನಿರಾಕರಿಸುವ ಸ್ಥಿತಿಯಲ್ಲಿ ಬಿಜೆಪಿಯೂ ಇರಲಿಲ್ಲ. 

ಅನಾರೋಗ್ಯದಿಂದ ಬಳಲುತ್ತಿದ್ದ ನಾರಾಯಣನ್ ಖುದ್ದಾಗಿ ಸ್ಪರ್ಧೆಯಿಂದ ಹಿಂದೆ ಸರಿದುಬಿಟ್ಟರು. ಆಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೃಷ್ಣಕಾಂತ್ ಹೆಸರು ಮುಂದೆ ತಂದಿದ್ದರು. ಆವರ ಆಯ್ಕೆಗೆ ಅವರದ್ದೇ ಪಕ್ಷದ ನಾಯಕರು ಒಲವು ತೋರಲಿಲ್ಲ. 

ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಬಾಗಿಲು ಮುರಿದು ಒಳಗೆ ನುಗ್ಗಿದ   ಹಾಗೆ   ಕಾಣಿಸಿಕೊಂಡ  `ಕಪ್ಪು ಕುದುರೆ`-ಎ.ಪಿ.ಜೆ. ಅಬ್ದುಲ್ ಕಲಾಮ್. ಇದು ಯಾರ ಬತ್ತಳಿಕೆಯಿಂದ ಹೊರಟ `ಕ್ಷಿಪಣಿ` ಎಂಬ ಬಗ್ಗೆ ಆ ದಿನಗಳಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು. ನಾಲ್ಕು ತಿಂಗಳ ಹಿಂದೆ ಸಮಾಜವಾದಿ ಪಕ್ಷದ ನಾಯಕ ಮುಲಾಯಂಸಿಂಗ್ ಯಾದವ್ ಅವರು ಲೋಕಾಭಿರಾಮವಾಗಿ ಮಾತನಾಡುತ್ತಾ ಕಲಾಮ್ ಹೆಸರು ಪ್ರಸ್ತಾಪಿಸಿದ್ದರು. ನಂತರದ ದಿನಗಳಲ್ಲಿ ಆ ಹೆಸರನ್ನು ಎಲ್ಲರೂ ಮರೆತೇ ಬಿಟ್ಟಿದ್ದರು. 

ಕೊನೆಗಳಿಗೆಯಲ್ಲಿ ಅದನ್ನು ಕೈಗೆತ್ತಿಕೊಂಡದ್ದು ಆಗಿನ ಪ್ರಧಾನಿ ಅಟಲಬಿಹಾರಿ ವಾಜಪೇಯಿ ಮತ್ತು  ಚಂದ್ರಬಾಬು ನಾಯ್ಡು. ಕಲಾಮ್ ಅವರನ್ನು ಮೊದಲು ಸಂಪರ್ಕಿಸಿದ್ದು ಕೂಡಾ ಈ ಇಬ್ಬರು ನಾಯಕರು. ಅಲೆಗ್ಸಾಂಡರ್ ಹೆಸರಿಗೆ ಪಟ್ಟು ಹಿಡಿದಿದ್ದ ಬಾಳ ಠಾಕ್ರೆಯವರನ್ನು ಒಲಿಸಿಕೊಳ್ಳಲು ಪ್ರಮೋದ್ ಮಹಾಜನ್ ಅವರನ್ನು ವಾಜಪೇಯಿ ತಕ್ಷಣ ಮುಂಬೈಗೆ ಕಳುಹಿಸಿದ್ದರು.  

ಮುಲಾಯಂಸಿಂಗ್ ಆಗಲೇ ಎನ್‌ಡಿಎ ಅಭ್ಯರ್ಥಿಗೆ ಕೈ ಎತ್ತಿದ್ದರು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಇಕ್ಕಟ್ಟಿಗೆ ಸಿಲುಕಿದ್ದವು. ಕಲಾಮ್ ಅವರನ್ನು ಬೆಂಬಲಿಸದೆ ಬೇರೆ ದಾರಿ ಅವರಿಗೂ ಇರಲಿಲ್ಲ. ಸುಮಾರು ಆರು ತಿಂಗಳ ಕಾಲ ನಡೆದ ಚರ್ಚೆಯಲ್ಲಿ ಕನಿಷ್ಠ 20 ಸಂಭವನೀಯ ಅಭ್ಯರ್ಥಿಗಳ ಹೆಸರು ಗಾಳಿಯಲ್ಲಿ ಹಾರಾಡಿದ್ದವು. ರಾಷ್ಟ್ರಪತಿ ಸ್ಥಾನ ಕೊನೆಗೂ ಒಲಿದಿದ್ದು ಅಬ್ದುಲ್ ಕಲಾಮ್ ಅವರಿಗೆ.

2007ರ ಚುನಾವಣೆಯಲ್ಲಿಯೂ ಹೀಗೆಯೇ ನಡೆಯಿತು. ಅಬ್ದುಲ್ ಕಲಾಮ್ ಅವರನ್ನು ಎರಡನೆ ಅವಧಿಗೆ ಮುಂದುವರಿಸಲು ಬಿಜೆಪಿ ಪ್ರಯತ್ನ ನಡೆಸಿತ್ತು. ಎನ್‌ಡಿಎ ಮಿತ್ರಪಕ್ಷಗಳಲ್ಲದೆ ಸಮಾಜವಾದಿ ಪಕ್ಷ ಕೂಡಾ ಇದನ್ನು ಬೆಂಬಲಿಸಿತ್ತು. 

ಆ ಕಾಲದಲ್ಲಿ ಕಾಂಗ್ರೆಸ್ ತೇಲಿಬಿಟ್ಟಿದ್ದ ಮೂರು ಹೆಸರುಗಳೆಂದರೆ ಕರಣ್‌ಸಿಂಗ್, ಸುಶೀಲ್‌ಕುಮಾರ್ ಶಿಂಧೆ ಮತ್ತು ಪ್ರಣವ್ ಮುಖರ್ಜಿ ಅವರದ್ದು.  `ಮೆದು ಹಿಂದುತ್ವ`ದ ಧೋರಣೆಯ ಕರಣ್‌ಸಿಂಗ್ ಅವರನ್ನು ಬಿಜೆಪಿ, ಬಂಗಾಳದವರಾದ ಪ್ರಣಬ್ ಮುಖರ್ಜಿ ಅವರನ್ನು ಎಡಪಕ್ಷಗಳು, ದಲಿತರಾದ ಸುಶೀಲ್‌ಕುಮಾರ್ ಶಿಂಧೆ ಅವರನ್ನು ಮಾಯಾವತಿ ಬೆಂಬಲಿಸಬಹುದೆಂಬ ರಾಜಕೀಯ ಲೆಕ್ಕಾಚಾರ ಕಾಂಗ್ರೆಸ್ ಪಕ್ಷದ್ದಾಗಿತ್ತು. ಉತ್ತರಪ್ರದೇಶದ ನಂತರ ಮಹಾರಾಷ್ಟ್ರದಲ್ಲಿ ಬಿಎಸ್‌ಪಿಯನ್ನು ಕಟ್ಟುವ ಉದ್ದೇಶ ಹೊಂದಿದ್ದ ಮಾಯಾವತಿ ಪ್ರಾರಂಭದಲ್ಲಿ ಶಿಂಧೆ ಬಗ್ಗೆ ಒಲವು ತೋರಿದ್ದರು.
 
ಅಷ್ಟರಲ್ಲಿ ಉಪರಾಷ್ಟ್ರಪತಿ ಭೈರೋನ್‌ಸಿಂಗ್ ಶೆಖಾವತ್ ಅವರನ್ನು ಎನ್‌ಡಿಎ ಕಣಕ್ಕಿಳಿಸಿತ್ತು. ಅಲ್ಲಿಯೂ ಕೆಲಸ ಮಾಡಿದ್ದು ಜಾತಿ. ಠಾಕೂರ್‌ಗಳೆಲ್ಲ ಪಕ್ಷಭೇಧ ಇಲ್ಲದೆ ಒಟ್ಟಾಗತೊಡಗಿದ್ದರು. ಆಗಿನ್ನೂ ಅಮರ್‌ಸಿಂಗ್ ಪ್ರಭಾವಲಯದಲ್ಲಿದ್ದ ಮುಲಾಯಂಸಿಂಗ್ ಕೂಡಾ ಆ ಕಡೆ ವಾಲತೊಡಗಿದ್ದರು. 

ಆ ಹಂತದಲ್ಲಿ ತೂರಿಬಂದ ಹೆಸರು ಪ್ರತಿಭಾ ಪಾಟೀಲ್ ಅವರದ್ದು. ಇಪ್ಪತ್ತೇಳರ ಹರೆಯದಲ್ಲಿಯೇ ವಿಧಾನಸಭೆಗೆ ಆಯ್ಕೆಯಾಗಿದ್ದ ಪ್ರತಿಭಾ ಪಾಟೀಲ್ ಅವರನ್ನು  ಜನ ಆಗಲೇ ಮರೆತಿದ್ದರು. ರಾಜಸ್ತಾನದ ರಾಜ್ಯಪಾಲ ಹುದ್ದೆಯಿಂದ ನಿರ್ಗಮಿಸಿದ ನಂತರ ಅವರು ರಾಜಕೀಯ ನಿವೃತ್ತಿ ದಿನಗಳನ್ನು ಕಳೆಯುತ್ತಿದ್ದರು.
 
ಪ್ರತಿಭಾ ಅವರ ಗಂಡ ಶೆಖಾವತ್ ಪರಿವಾರಕ್ಕೆ ಸೇರಿರುವುದು ಎನ್‌ಡಿಎ ಅಭ್ಯರ್ಥಿ ಭೈರೋನ್‌ಸಿಂಗ್ ಶೆಖಾವತ್ ಅವರನ್ನು ಎದುರಿಸಲು ಹೆಚ್ಚುವರಿ ಅರ್ಹತೆಯಾಗಿ ಹೋಯಿತು. ಆದರೆ ಅವರ ಹಾದಿ ಸುಗಮವಾಗಿರಲಿಲ್ಲ. ಹಿಂದೆ ಪಿ.ಸಿ.ಅಲೆಗ್ಸಾಂಡರ್ ಅವರನ್ನು ಹಿಂದಕ್ಕೆ ಸರಿಸಲು ಕೆಲವು ಕಾಂಗ್ರೆಸ್ ನಾಯಕರು ಹಿಡಿದ ಅಡ್ಡದಾರಿಯನ್ನೇ ಈ ಬಾರಿ ವಿರೋಧಿ ನಾಯಕರು ಆರಿಸಿಕೊಂಡರು.

 ಈ ಹಿನ್ನೆಲೆಯಲ್ಲಿಯೇ ಪ್ರತಿಭಾ ಪಾಟೀಲ್ ಅವರ ಪೂರ್ವಾಶ್ರಮದ ವಿವರಗಳ ಹುಡುಕಾಟ ಪ್ರಾರಂಭವಾಗಿದ್ದು. ಮಹಿಳಾ ಸಬಲೀಕರಣದ ಉದ್ದೇಶದಿಂದಲೇ 1973ರಲ್ಲಿ ಪ್ರತಿಭಾ ಪಾಟೀಲ್ ಸ್ಥಾಪಿಸಿದ್ದ `ಪ್ರತಿಭಾ ಮಹಿಳಾ ಸಹಕಾರಿ ಬ್ಯಾಂಕ್` ಅನ್ನು ಹಣಕಾಸು ಅವ್ಯವಹಾರದ ಆರೋಪಕ್ಕಾಗಿ ರಿಸರ್ವ್ ಬ್ಯಾಂಕ್ ಮುಚ್ಚಿಸಿತ್ತು.
 
ಸಾಲಮನ್ನಾ ಮಾಡಿಸಿಕೊಂಡ ಫಲಾನುಭವಿಗಳಲ್ಲಿ ಹೆಚ್ಚಿನವರು ಪ್ರತಿಭಾ ಪಾಟೀಲ್ ಸಂಬಂಧಿಗಳು ಎನ್ನುವುದು ಅವರ ವಿರುದ್ದದ ಪ್ರಮುಖ ಆರೋಪವಾಗಿತ್ತು. ಅವರು ಸದಸ್ಯೆಯಾಗಿರುವ ಟ್ರಸ್ಟ್‌ನಿಂದ ತಮ್ಮ ಆಡಳಿತದ ಶಿಕ್ಷಣ ಸಂಸ್ಥೆಗಳಿಗೆ ಹಣ ನೀಡಿದ್ದು, ಸಂಸತ್ ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ತನ್ನ ಗಂಡನೇ ಪದಾಧಿಕಾರಿಯಾಗಿರುವ ಸಂಸ್ಥೆಗೆ ನೀಡಿದ್ದು...ಹೀಗೆ ಹಲವಾರು ಆರೋಪಗಳು ಪುಂಖಾನುಪುಂಖವಾಗಿ ಕೇಳಿಬರತೊಡಗಿದ್ದವು.

 ತನ್ನ ಅಭ್ಯರ್ಥಿಯ ಮೇಲೆ ಆರೋಪಗಳು ಕೇಳಿಬಂದ ಕೂಡಲೇ ಯುಪಿಎ ನಾಯಕರು ಎನ್‌ಡಿಎ ಅಭ್ಯರ್ಥಿ ಭೈರೋನ್‌ಸಿಂಗ್ ಶೆಖಾವತ್ ಅವರ ಜಾತಕ ಜಾಲಾಡಿಸತೊಡಗಿದ್ದರು. `ಶೆಖಾವತ್ ಅವರು ಪೊಲೀಸ್ ಇಲಾಖೆಯಲ್ಲಿದ್ದಾಗ ಉಪ್ಪು ಸಾಗಾಣಿಕೆದಾರರಿಂದ ಲಂಚ ಸ್ವೀಕರಿಸಿದ ಆರೋಪದ ಮೇಲೆ ಅಮಾನತ್‌ಗೊಂಡಿದ್ದರು.
 
ರಾಜಸ್ತಾನದ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಭೂಕಬಳಿಕೆಯ ಆರೋಪ ಹೊಂದಿದ್ದ ಅಳಿಯನನ್ನು ರಕ್ಷಿಸಿದ್ದರು...` ಎಂಬಿತ್ಯಾದಿ ಆರೋಪಗಳು ಅವರ ವಿರುದ್ಧವೂ ಇದ್ದವು. ಅಲ್ಲಿಗೆ ರಾಷ್ಟ್ರಪತಿ ಸ್ಥಾನದ ಇಬ್ಬರು ಅಭ್ಯರ್ಥಿಗಳು ಕಳಂಕಿತರು ಎಂದಾಗಿ ಹೋಗಿತ್ತು. ರಾಷ್ಟ್ರಪತಿ ಚುನಾವಣೆಯಲ್ಲಿ ಆರೋಪ-ಪ್ರತ್ಯಾರೋಪಗಳು ಹೊಸತೇನಲ್ಲ. 

ಆದರೆ ಹಿಂದೆ ಅದು ಅಭ್ಯರ್ಥಿಗಳ ಅರ್ಹತೆ, ರಾಜಕೀಯ ನಿಲುವು ಇತ್ಯಾದಿ ಬಗೆಗಿನ ಟೀಕೆ-ಟಿಪ್ಪಣಿಗಷ್ಟೇ ಸೀಮಿತವಾಗಿತ್ತು. ಅದು ಸಭ್ಯತೆಯ ಸೀಮಾರೇಖೆ ದಾಟಿ ವೈಯಕ್ತಿಕ ಚಾರಿತ್ರ್ಯಹರಣದ ಮಟ್ಟಕ್ಕೆ ಇಳಿದದ್ದು ಕಳೆದೆರಡು ರಾಷ್ಟ್ರಪತಿಗಳ ಚುನಾವಣೆಯ ಕಾಲದಲ್ಲಿ.

ಅದನ್ನು ಈ ಬಾರಿಯೂ ಮುಂದುವರಿಸಿಕೊಂಡು ಹೋಗುವ ಸೂಚನೆಯನ್ನು  ಸುಷ್ಮಾ ಸ್ವರಾಜ್  ತನ್ನ `ಒಡಕು ಬಾಯಿ` ಮೂಲಕ ಮಾಡಿದ್ದಾರೆ. ಸೋನಿಯಾಗಾಂಧಿ ಪ್ರಧಾನಿಯಾದರೆ ತಲೆಬೋಳಿಸಿಕೊಳ್ಳುತ್ತೇನೆ ಎಂದು ಎಂಟು ವರ್ಷಗಳ ಹಿಂದೆ ಅವರು ಪ್ರತಿಜ್ಞೆ ಮಾಡಿದ್ದರು. ಸೋನಿಯಾ ಪ್ರಧಾನಿಯಾಗಲು ಹೋಗದೆ ಸುಷ್ಮಾ ಅವರ ಕೂದಲು ಉಳಿಸಿಕೊಟ್ಟರು. 

ಈಗ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಗೆ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸುವ ಘನತೆಯ ವ್ಯಕ್ತಿತ್ವ ಇಲ್ಲ ಎಂಬ ಬೀಸು ಹೇಳಿಕೆಯನ್ನು ನೀಡಿ ತಮ್ಮ ಪಕ್ಷದವರನ್ನೇ ಮುಜುಗರಕ್ಕೆ ಸಿಲುಕಿಸಿದ್ದಾರೆ. ಸಂವಿಧಾನದ ಪ್ರಕಾರ ರಾಷ್ಟ್ರಪತಿ ಅವರದ್ದು ಅತ್ಯುನ್ನತ ಗೌರವ ಮತ್ತು ಘನತೆಯ ಸ್ಥಾನವಾಗಿದ್ದರೂ ನಮ್ಮ ರಾಜಕೀಯ ವ್ಯವಸ್ಥೆ ಅದನ್ನು `ರಬ್ಬರ್‌ಸ್ಟಾಂಪ್` ಮಟ್ಟಕ್ಕೆ ಇಳಿಸಿಬಿಟ್ಟಿದೆ. 

ಇಂತಹ ಸ್ಥಿತಿಯಲ್ಲಿ ಆ ಸ್ಥಾನಕ್ಕೆ ಆಯ್ಕೆಯಾಗುವವರ ವ್ಯಕ್ತಿತ್ವವಷ್ಟೇ ಘನತೆ ಮತ್ತು ಗೌರವವನ್ನು ತಂದುಕೊಡಬಲ್ಲದು. ಈಗಿನ ಕೆಸರೆರಚಾಟವನ್ನು ನೋಡಿದರೆ ಅದೂ ಸಾಧ್ಯ ಇಲ್ಲ ಎಂದು ಅನಿಸುತ್ತಿದೆ.

Tuesday, May 1, 2012

ಸಚಿನ್, ರಾಜ್ಯಸಭೆ ನಿಮ್ಮ ಮೈದಾನ ಅಲ್ಲ April 30, 2012

ಕ್ರಿಕೆಟ್ ಜಗತ್ತಿನ `ದೇವರು` ಸಚಿನ್ ತೆಂಡೂಲ್ಕರ್  ಪ್ರಜಾಪ್ರಭುತ್ವದ ಗರ್ಭಗುಡಿಯಾದ ಸಂಸತ್ ಪ್ರವೇಶಿಸಿದ್ದಾರೆ. `ದೇವರು` ಇದ್ದಲ್ಲಿ ಭಕ್ತಿ-ಆರಾಧನೆಗಳಿರುತ್ತವೆ, ಪ್ರಶ್ನೆ-ವಿಮರ್ಶೆಗಳು ಇರುವುದಿಲ್ಲ. 

ರಾಜ್ಯಸಭೆಗೆ ಸಚಿನ್ ನಾಮಕರಣಗೊಂಡದ್ದನ್ನು ಸ್ವಾಗತಿಸುತ್ತಿರುವವರ ಮನಸ್ಸಲ್ಲಿ ಇಂತಹದ್ದೊಂದು ಕುರುಡು ಭಕ್ತಿ ಇದೆ. ಸಚಿನ್ ವಿಶ್ವ ಕಂಡ ಅದ್ಭುತ ಕ್ರಿಕೆಟಿಗ.  ಇಂತಹ ಇನ್ನೊಬ್ಬ ಆಟಗಾರ ಈ ನೆಲದಲ್ಲಿ ಮತ್ತೆ ಹುಟ್ಟಲಾರ ಎಂದು ಜನ ನಂಬುವಷ್ಟು ಎತ್ತರಕ್ಕೆ ಬೆಳೆದವರು ಸಚಿನ್. ಅವರ ಸಾಧನೆಗೆ ಯಾವ ಪ್ರಶಸ್ತಿ-ಗೌರವವೂ ಕಡಿಮೆಯೇ. ಆದರೆ ರಾಜ್ಯಸಭೆಗೆ ನಾಮಕರಣ? ಮೊದಲನೆಯದಾಗಿ ರಾಜ್ಯಸಭೆಯ ಸದಸ್ಯತ್ವ ಪ್ರಶಸ್ತಿಯೂ ಅಲ್ಲ, ಗೌರವವೂ ಅಲ್ಲ.
 
ಹೌದೆಂದು ತಿಳಿದುಕೊಂಡವರು ಮತ್ತೊಮ್ಮೆ ಸಂವಿಧಾನವನ್ನು ಓದಬೇಕು. ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ರಾಜ್ಯಸಭೆಗೆ ಮನೆ ಹಿರಿಯನ ಪಾತ್ರ. ಪ್ರಜೆಗಳೇ ನೇರವಾಗಿ ಆರಿಸಿ ಕಳುಹಿಸುವ ಸದಸ್ಯರ ಮೂಲಕ ರೂಪುಗೊಂಡ ಲೋಕಸಭೆಗಿಂತ ರಾಜ್ಯಸಭೆಗೆ ಮೇಲಿನ ಸ್ಥಾನ.
 
ಲೋಕಸಭೆ ಕೆಳಮನೆಯಾದರೆ ರಾಜ್ಯಸಭೆ ಮೇಲ್ಮನೆ. ವಿಧಾನಸಭಾ ಸದಸ್ಯರೇ ಆರಿಸಿ ಕಳುಹಿಸುವ ರಾಜ್ಯಸಭಾ ಸದಸ್ಯರು ಸಂಸತ್‌ನಲ್ಲಿ ರಾಜ್ಯದ ಹಕ್ಕು ಪಾಲಕರಾಗಿ ಕಾರ್ಯನಿರ್ವಹಿಸಬೇಕೆನ್ನುವುದು ಸಂವಿಧಾನದ ಆಶಯ.
 
ಈ ಹಿನ್ನೆಲೆಯಲ್ಲಿಯೇ ಇದನ್ನು `ರಾಜ್ಯಗಳ ಪರಿಷತ್` ಎನ್ನುವುದು. ಎದುರಾಗುವ ಆಪತ್ತುಗಳಿಂದ ಒಕ್ಕೂಟ ವ್ಯವಸ್ಥೆಯನ್ನು ರಕ್ಷಿಸುವ ಉದ್ದೇಶ ಕೂಡಾ ರಾಜ್ಯಸಭೆ ರಚನೆಯ ಹಿನ್ನೆಲೆಯಲ್ಲಿ ಕೆಲಸ ಮಾಡಿದೆ. 

ರಾಜ್ಯಗಳು ಮತ್ತು ರಾಜ್ಯಸಭೆಯ ಸಂಬಂಧ ಅಷ್ಟೊಂದು ಆಪ್ತವಾದುದು. ಬುದ್ದಿಜೀವಿಗಳು ಮತ್ತು ವಿವಿಧ ಕ್ಷೇತ್ರಗಳ ಅನುಭವಿಗಳಿಗೆ ಸಂಸದೀಯ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಮೂಲಕ ರಾಷ್ಟ್ರನಿರ್ಮಾಣದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುವುದು ರಾಜ್ಯಸಭೆ ರಚನೆಯ ಇನ್ನೊಂದು ಉದ್ದೇಶ. 

ಪ್ರಧಾನಿ ಮನಮೋಹನ್‌ಸಿಂಗ್ ಅವರೂ ಸೇರಿದಂತೆ ಕೇಂದ್ರ ಸಂಪುಟದಲ್ಲಿ ಮಹತ್ವದ ಸಚಿವ ಖಾತೆಗಳನ್ನು ಹೊಂದಿದ್ದವರ ಪಟ್ಟಿಯನ್ನು ನೋಡಿದರೆ ಈ ಉದ್ದೇಶ ಇನ್ನಷ್ಟು ಸ್ಪಷ್ಟವಾಗುತ್ತದೆ. ರಾಜ್ಯಸಭೆಯ ಒಟ್ಟು ಬಲ 245. ಇದರಲ್ಲಿ 233 ಸ್ಥಾನಗಳನ್ನು ರಾಜ್ಯಗಳ ಪ್ರತಿನಿಧಿಗಳ ರೂಪದಲ್ಲಿ ವಿಧಾನಸಭಾ ಸದಸ್ಯರು ಚುನಾವಣೆ ಮೂಲಕ ಆಯ್ಕೆ ಮಾಡುತ್ತಾರೆ. 

ಉಳಿದ ಹನ್ನೆರಡು ಸ್ಥಾನಗಳಿಗೆ  ಸಾಹಿತ್ಯ, ವಿಜ್ಞಾನ,ಕಲೆ ಮತ್ತು ಸಮಾಜಸೇವೆಯ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸಿ ರಾಷ್ಟ್ರಪತಿಗಳು ನಾಮಕರಣ ಮಾಡುತ್ತಾರೆ, ಚುನಾವಣೆ ನಡೆಯುವುದಿಲ್ಲ. ಹೆಸರಿಗೆ ರಾಷ್ಟ್ರಪತಿಗಳ ನಾಮಕರಣ ಎಂದಿದ್ದರೂ ವಾಸ್ತವದಲ್ಲಿ ಆಡಳಿತಾರೂಢ ಪಕ್ಷ ಸೂಚಿಸಿದ ಹೆಸರುಗಳಿಗೆ ಮೊಹರು ಒತ್ತುವುದಷ್ಟೇ ಅವರ ಕೆಲಸ.

ಆದರೆ ಇತ್ತೀಚಿನ ದಿನಗಳಲ್ಲಿ ಸಂವಿಧಾನ ರಚನೆಕಾರರ ಆಶಯವನ್ನು ಭಂಗಗೊಳಿಸುವಂತಹ ವಿದ್ಯಮಾನಗಳು ರಾಜ್ಯಸಭೆಗೆ ನಡೆಯುತ್ತಿರುವ ಚುನಾವಣೆ ಮತ್ತು ನಾಮಕರಣಗಳಲ್ಲಿ ನಡೆಯುತ್ತಿವೆ.
 
ಚುನಾವಣೆಯಲ್ಲಿ `ದುಡ್ಡಿನ ದೊಡ್ಡಪ್ಪ`ಗಳಿಗೆ ರಾಜ್ಯಸಭಾ ಸ್ಥಾನಗಳನ್ನು `ಮಾರಾಟ` ಮಾಡಲಾಗುತ್ತಿದೆ ಎಂಬ ಆರೋಪ ಎಡಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲ ರಾಜಕೀಯ ಪಕ್ಷಗಳ ಮೇಲೆ ಇವೆ. ಈ ಪಕ್ಷಗಳ ಆಯ್ಕೆಯ ಮೇಲೆ ಕಣ್ಣಾಡಿಸಿದರೆ ಈ ಆರೋಪಕ್ಕೆ ಪುರಾವೆಗಳೂ ಸಿಗುತ್ತವೆ. 

ಇತ್ತೀಚೆಗಷ್ಟೇ ಜಾರ್ಖಂಡ್‌ನಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಅಂಶುಮಾನ್ ಮಿಶ್ರಾ ಎಂಬ ಉದ್ಯಮಿ ಬಿಜೆಪಿ ನಾಯಕರನ್ನು ಒಲಿಸಿಕೊಂಡು ಸ್ಪರ್ಧಿಸಲು ಬಯಸಿದ್ದ. ಎಲ್.ಕೆ.ಅಡ್ವಾಣಿ , ಯಶವಂತ್‌ಸಿನ್ಹಾ ಮೊದಲಾದವರ ವಿರೋಧದಿಂದ ಅದು ಸಾಧ್ಯ ಆಗಲಿಲ್ಲ. 

ಆದರೆ ಬೇರೊಬ್ಬ ಅಭ್ಯರ್ಥಿಯ ಸಂಬಂಧಿಕರಿಂದ ಚುನಾವಣಾ ಅಧಿಕಾರಿಗಳು ಎರಡು ಕಾಲು ಕೋಟಿ ರೂಪಾಯಿ ವಶಪಡಿಸಿಕೊಂಡ ನಂತರ `ಮತ ಖರೀದಿ`ಯ ಪ್ರಯತ್ನ ನಡೆಯುತ್ತಿರುವುದು ಖಾತರಿಯಾಗಿ ಆ ಚುನಾವಣೆಯನ್ನೇ ಆಯೋಗ ರದ್ದುಮಾಡಬೇಕಾಯಿತು.

25-30 ವರ್ಷಗಳ ಹಿಂದೆ ಉದ್ಯಮಿಗಳ ಜತೆ ನೇರವಾಗಿ ಗುರುತಿಸಿಕೊಳ್ಳಲು ರಾಜಕೀಯ ಪಕ್ಷಗಳು ಹಿಂಜರಿಯುತ್ತಿದ್ದವು. 1975ರಲ್ಲಿ ಜನಸಂಘ ವೀರೇನ್ ಶಹಾ ಎಂಬ ಉದ್ಯಮಿಯನ್ನು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಮಾಡಿದಾಗ ಯಾವ ರೀತಿಯ ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಯಿತು ಎನ್ನುವುದನ್ನು ಹಿರಿಯ ಬಿಜೆಪಿ ನಾಯಕರು ಈಗಲೂ ನೆನೆಸಿಕೊಳ್ಳುತ್ತಾರೆ. 

ನಂತರದ ದಿನಗಳಲ್ಲಿ ಮುಖ್ಯವಾಗಿ ಆರ್ಥಿಕ ಉದಾರೀಕರಣದ ಶಕೆಯ ನಂತರ ಅನೈತಿಕತೆ ಎಂದು ಆರೋಪಿಸುವಷ್ಟರ ಮಟ್ಟಿಗೆ ಉದ್ಯಮಿಗಳು ಮತ್ತು ರಾಜಕಾರಣಿಗಳ ಸಂಬಂಧ ಬೆಳೆಯುತ್ತಾ ಬಂತು. ಆಕಾಂಕ್ಷಿ ಉದ್ಯಮಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆಯೇ ಅವರ ಪ್ರವೇಶಕ್ಕೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ರೂಪಿಸುವ ಪಿತೂರಿ ಕೂಡಾ ಪ್ರಾರಂಭವಾಯಿತು.
 
ರಾಜ್ಯಸಭೆಗೆ ಸ್ಪರ್ಧಿಸುವವರು ಅವರನ್ನು ಆರಿಸಿ ಕಳುಹಿಸುವ ರಾಜ್ಯದ ಮತದಾರರಾಗಿರಬೇಕು ಮತ್ತು `ಸಾಮಾನ್ಯ ನಿವಾಸಿಗಳು` ಆಗಿರಬೇಕು ಎಂಬ ಷರತ್ತು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿತ್ತು. ಎನ್‌ಡಿಎ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ಮಾಡಿ `ದೇಶದ ಯಾವುದೇ ಭಾಗದಲ್ಲಿ ಮತದಾರರಾಗಿರುವರು` ರಾಜ್ಯಸಭೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿತು. 

ಈ ತಿದ್ದುಪಡಿಯನ್ನು ಪ್ರಶ್ನಿಸಿ ಹಿರಿಯ ಪತ್ರಕರ್ತರಾದ ಕುಲದೀಪ್ ನಯ್ಯರ್ ಮತ್ತು ಇಂದರ್‌ಜಿತ್ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಮಾಡುತ್ತಿರುವ ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡಿಲ್ಲ. ತಿದ್ದುಪಡಿ ರದ್ದಾದರೆ ಮನಮೋಹನ್‌ಸಿಂಗ್ ಸೇರಿದಂತೆ ಹಲವರು ರಾಜ್ಯಸಭಾ ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ.

ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿನ ಇಂತಹ ಅಕ್ರಮಗಳು ನಾಮಕರಣಕ್ಕೆ ಸಂಬಂಧಿಸಿದಂತೆ  ಕೇಳಿ ಬರದೆ ಇದ್ದರೂ, ಈ ಅವಕಾಶವನ್ನು ರಾಜಕೀಯವಾಗಿ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಎಲ್ಲ ಪಕ್ಷಗಳೂ ಎದುರಿಸುತ್ತಿವೆ. 

ಆಡಳಿತಾರೂಢ ಪಕ್ಷಗಳು ನಾಮಕರಣದ ನೆಪದಲ್ಲಿ ಒಂದೆಡೆ ತಮ್ಮ ಪಕ್ಷದ ಸದಸ್ಯರನ್ನೇ ರಾಜ್ಯಸಭೆಗೆ ನಾಮಕರಣ ಮಾಡುತ್ತಾ ಬಂದಿದ್ದರೆ, ಇನ್ನೊಂದೆಡೆ ಗಣ್ಯರನ್ನು ನಾಮಕರಣಕ್ಕೆ ಆಯ್ಕೆ ಮಾಡುವಾಗಲೂ ಆ ಸ್ಥಾನಕ್ಕೆ ಬೇಕಾದ ಅರ್ಹತೆಗಿಂತಲೂ ಹೆಚ್ಚಾಗಿ ಅದರಿಂದ ಆಗಲಿರುವ ರಾಜಕೀಯ ಲಾಭದ ಲೆಕ್ಕಾಚಾರ ಮಾಡುತ್ತಾ ಬಂದಿರುವುದನ್ನು ಕಾಣಬಹುದು. 

ಇಲ್ಲಿಯವರೆಗೆ ನಾಮಕರಣಗೊಂಡ ಕ್ರಿಕೆಟಿಗ ಸಚಿನ್, ಚಿತ್ರತಾರೆ ರೇಖಾ ಸೇರಿದಂತೆ ರಾಜ್ಯಸಭೆಗೆ ನಾಮಕರಣಗೊಂಡ 121 ಸದಸ್ಯರ ಪಟ್ಟಿ ಮೇಲೆ ಕಣ್ಣಾಡಿಸಿದರೆ ಇದು ಇನ್ನಷ್ಟು ನಿಚ್ಚಳವಾಗಿ ಕಾಣುತ್ತದೆ. 

ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಅವರನ್ನು ಎದುರು ಹಾಕಿಕೊಳ್ಳದೆ ಹೋಗಿದ್ದರೆ ಇಲ್ಲವೇ ಕಾಂಗ್ರೆಸ್ ಬಗ್ಗೆ ಟೀಕೆ ಮಾಡಿದ್ದರೆ, ಸಚಿನ್ ಅವರ ನಾಮಕರಣಕ್ಕೆ ಕಾಂಗ್ರೆಸ್ ಮುಂದಾಗುತ್ತಿತ್ತೇ ಎನ್ನುವುದು ಪ್ರಶ್ನೆ.

ಈಗಿನ ರಾಜ್ಯಸಭೆಯಲ್ಲಿ ನಾಮಕರಣಗೊಂಡ ಹತ್ತು ಸದಸ್ಯರಿದ್ದಾರೆ. ಇವರಲ್ಲಿ ಕಾಂಗ್ರೆಸ್ ಸದಸ್ಯರಾದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಮತ್ತು ಬಾಲಚಂದ್ರ ಮುಂಗೇಕರ್ ಅವರು `ಗಣ್ಯರ` ಹೆಸರಲ್ಲಿ ನುಸುಳಿದವರು. ಉಳಿದಂತೆ ಜಾವೇದ್ ಅಖ್ತರ್ (ಸಾಹಿತಿ) ಎಚ್.ಕೆ.ದುವಾ (ಪತ್ರಕರ್ತ), ಅಶೋಕ್ ಗಂಗೂಲಿ (ಉದ್ಯಮಿ), ಬಿ.ಜಯಶ್ರಿ (ರಂಗಭೂಮಿ ಕಲಾವಿದೆ), ಅನು ಅಗಾ (ಉದ್ಯಮಿ) ರೇಖಾ (ಚಿತ್ರನಟಿ) ಮತ್ತು ಸಚಿನ್ ತೆಂಡೂಲ್ಕರ್(ಕ್ರಿಕೆಟಿಗ) ಅವರು ಗಣ್ಯರ ಕೋಟಾದಲ್ಲಿ ನಾಮಕರಣಗೊಂಡವರು. 

ಈ ಆರೂ ಮಂದಿ ತಮ್ಮ  ಕ್ಷೇತ್ರದಲ್ಲಿ ಸಾಧನೆ ಮೂಲಕ ಅಗ್ರಗಣ್ಯರೆಂಬ ಗೌರವಕ್ಕೆ ಪಾತ್ರರಾದವರು. ಆದರೆ ರಾಜ್ಯಸಭೆಯ ಇತಿಹಾಸವನ್ನು ನೋಡಿದರೆ ಈ `ಅಗ್ರಗಣ್ಯ`ರೆನಿಸಿಕೊಂಡ ಸದಸ್ಯರ ಸಾಧನೆ ನಿರಾಶಾದಾಯಕ.
 
ನಿಷ್ಕ್ರಿಯರೆನಿಸಿಕೊಂಡ ನಾಮಕರಣ ಸದಸ್ಯರಲ್ಲಿ ಹಿಂದಿ ಚಿತ್ರರಂಗದಿಂದ ಬಂದವರಿಗೆ ಮೊದಲ ಸ್ಥಾನ. 1999ರಿಂದ 2005ರ ವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಖ್ಯಾತ ಹಿಂದಿ ಗಾಯಕಿ ಲತಾ ಮಂಗೇಶ್ಕರ್ ಅವರು ಪ್ರಮಾಣ ವಚನ ಸ್ವೀಕರಿಸಲು ಹೋಗಿದ್ದನ್ನು ಬಿಟ್ಟರೆ ಎಂದೂ ಕಲಾಪದಲ್ಲಿ ಭಾಗವಹಿಸಿಯೇ ಇಲ್ಲ. 

ದಿಲೀಪ್‌ಕುಮಾರ್, ದಾರಾಸಿಂಗ್,ಧರ್ಮೇಂದ್ರ, ಶ್ಯಾಮ್ ಬೆನೆಗಲ್ ಸೇರಿದಂತೆ ರಾಜ್ಯಸಭೆಗೆ ನಾಮಕರಣಗೊಂಡ ಚಿತ್ರನಟರ ಸಂಸದೀಯ ಸಾಧನೆ ಶೂನ್ಯ. ಇವರಿಗೆಲ್ಲ ಹೋಲಿಸಿದರೆ ರಾಜ್ಯಸಭೆಯಲ್ಲಿದ್ದು ಸದ್ದು ಮಾಡಿದವರು ನಟಿ ಶಬನಾ ಅಜ್ಮಿ ಮಾತ್ರ.  `ಚಿರಯುವತಿ` ರೇಖಾ ಯಾವ ಸಾಲಿಗೆ ಸೇರಲಿದ್ದಾರೆ ಎನ್ನುವುದನ್ನು ನೋಡಬೇಕಾಗಿದೆ.

ಕರ್ನಾಟಕದವರಾದ ರಂಗಭೂಮಿ ಕಲಾವಿದೆ ಬಿ.ಜಯಶ್ರಿ ಅವರು ರಾಜ್ಯಸಭೆ ಪ್ರವೇಶಿಸಿ ಎರಡು ವರ್ಷಗಳಾಗಿವೆ. ಇಲ್ಲಿಯವರೆಗೆ ಅವರು ಸದನದಲ್ಲಿ ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ. ವಿಶೇಷ ಪ್ರಸ್ತಾವ ಮಾಡಿಲ್ಲ. ಯಾವ ಮಸೂದೆಯ ಬಗ್ಗೆಯೂ ಮಾತನಾಡಿಲ್ಲ. 

ಆಶ್ಚರ್ಯವೆಂದರೆ ಟಿವಿ ಚಾನೆಲ್‌ಗಳಲ್ಲಿ ನೋಡುತ್ತಿರುವಾಗ ವಾಚಾಳಿಯಂತೆ ಕಾಣಿಸುವ ಜಾವೇದ್ ಅಖ್ತರ್  ಚರ್ಚೆಗಳಲ್ಲಿ ಒಂದಷ್ಟು ಹೊತ್ತು ಭಾಗವಹಿಸಿದ್ದು ಬಿಟ್ಟರೆ, ಪ್ರಶ್ನೆಗಳನ್ನು ಕೇಳಿದ ಇಲ್ಲವೆ ವಿಶೇಷ ಪ್ರಸ್ತಾವವನ್ನು ಮಾಡಿದ ದಾಖಲೆಗಳು ಇಲ್ಲ. ಉದ್ಯಮಿ ಅಶೋಕ್ ಗಂಗೂಲಿಯವರ ಸಾಧನೆಯೂ ಅಷ್ಟಕ್ಕಷ್ಟೆ. ಈ ವರೆಗೆ ರಾಜ್ಯಸಭೆಗೆ ನಾಮಕರಣಗೊಂಡ ಸದಸ್ಯರಲ್ಲಿ ಕ್ರಿಯಾಶೀಲರಾಗಿದ್ದವರೆಂದರೆ ಪತ್ರಕರ್ತರು ಮಾತ್ರ.
 
ನಾಮಕರಣಗೊಂಡ ಹಾಲಿ ಸದಸ್ಯರಲ್ಲಿ ಮಣಿ ಶಂಕರ್ ಅಯ್ಯರ್ ಅವರನ್ನು ಬಿಟ್ಟರೆ ಸಕ್ರಿಯವಾಗಿ ಕಲಾಪದಲ್ಲಿ ಭಾಗವಹಿಸುತ್ತಿರುವವರು ಹಿರಿಯ ಪತ್ರಕರ್ತ ಎಚ್.ಕೆ.ದುವಾ. ಆರ್.ಕೆ.ಕರಂಜಿಯಾ ಅವರಿಂದ ಹಿಡಿದು ಇತ್ತೀಚಿನ ಚಂದನ್ ಮಿತ್ರ ವರೆಗೆ ರಾಜ್ಯಸಭೆಗೆ ನಾಮಕರಣಗೊಂಡ ಪತ್ರಕರ್ತರೆಲ್ಲರೂ ಕಸಬುದಾರ ರಾಜಕಾರಣಿಗಳನ್ನು ಮೀರಿಸುವಂತೆ ಕಲಾಪದಲ್ಲಿ ಭಾಗವಹಿಸಿದ್ದಾರೆ.

ಆದರೆ ಸಚಿನ್ ತೆಂಡೂಲ್ಕರ್? ರಾಜ್ಯಸಭೆಯ ಕಲಾಪದಲ್ಲಿ ಭಾಗವಹಿಸುವಷ್ಟು ಸಮಯ ಅವರಲ್ಲಿದೆಯೇ ಎನ್ನುವುದು ಮೊದಲ ಪ್ರಶ್ನೆ. ಮಾರ್ಚ್‌ಗೆ ಕೊನೆಗೊಂಡ ಒಂದು ವರ್ಷದಲ್ಲಿ ಸಚಿನ್ 250 ದಿನ ಕ್ರಿಕೆಟ್ ಆಡಿದ್ದಾರೆ.
 
ಈಗಲೂ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸೂಚನೆಯನ್ನು ಅವರು ನೀಡುತ್ತಿಲ್ಲ. ಹೀಗಿದ್ದಾಗ ರಾಜ್ಯಸಭಾ ಸದಸ್ಯತ್ವವನ್ನು ಅಲಂಕಾರಿಕ ಹುದ್ದೆಯನ್ನಾಗಿ ಸ್ವೀಕರಿಸುವುದಕ್ಕೆ ಏನು ಅರ್ಥ ಇದೆ? ನಿವೃತ್ತಿಯಾಗಲು ಅವರು ನಿರ್ಧರಿಸಿದರೂ ಬಿಡುವಿನ ಸಮಯವನ್ನು ಉಪಯೋಗಿಸಿಕೊಳ್ಳುವುದಕ್ಕೆ ಅವರದ್ದೇ ಆದ ಕ್ಷೇತ್ರ ಇದೆ.
 
ಅವರ ಅನುಭವದ ಅಗತ್ಯ ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚಾಗಿ ಕ್ರೀಡಾ ಕ್ಷೇತ್ರಕ್ಕೆ ಇದೆ. ಕ್ರಿಕೆಟ್ ಎನ್ನುವುದು ಒಂದು ಸರಳ ಕ್ರೀಡೆಯಾಗಿ ಉಳಿದಿಲ್ಲ, ಅದು ಉದ್ಯಮದ ಸ್ವರೂಪ ಪಡೆದು ಆಟಗಾರರೆಲ್ಲ ಹಣ ಗಳಿಸುವ ಯಂತ್ರಗಳಾಗಿ ಹೋಗಿದ್ದಾರೆ. 

ಸಚಿನ್ ತೆಂಡೂಲ್ಕರ್ ಎಂಬ ಮಹಾನ್ ತಾರೆ ಉದಿಯಮಾನವಾಗಿರುವ ಕಾಲದಲ್ಲಿಯೇ ಕ್ರಿಕೆಟ್ ಕ್ಷೇತ್ರ ಇಂತಹ ನೈತಿಕ ಅಧೋಗತಿಗೆ ತಲುಪಿರುವುದನ್ನು ಹೇಗೆ ತಳ್ಳಿಹಾಕುವುದು? ಈ ಅವನತಿಯಲ್ಲಿ ಸಚಿನ್ ಪಾಲಿಲ್ಲವೇ? 

ಹಿರಿಯರಿಂದ ಬಳುವಳಿಯಾಗಿ ಪಡೆದ  ಸ್ವಚ್ಚ ಕ್ರಿಕೆಟ್ ಮೈದಾನವನ್ನೇ  ಮುಂದಿನ ಜನಾಂಗಕ್ಕೆ ಬಿಟ್ಟು ಹೋಗುತ್ತಿದ್ದೇನೆ ಎಂದು ಎದೆಮುಟ್ಟಿ ಹೇಳುವ ಧೈರ್ಯ ಸಚಿನ್ ಅವರಿಗಿದೆಯೇ? ಇಲ್ಲ ಎಂದಾದರೆ ಕ್ರಿಕೆಟ್ ಕ್ಷೇತ್ರ ಕಳೆದುಕೊಳ್ಳುತ್ತಿರುವ ಗೌರವವನ್ನು ಮರಳಿ ಗಳಿಸಿಕೊಡುವ ಹೊಣೆ ಈ ಮಹಾನ್ ತಾರೆಗೆ ಇಲ್ಲವೇ?

ದೇಶದಲ್ಲಿರುವ ಬಹುತೇಕ ಕ್ರೀಡಾ ಸಂಸ್ಥೆಗಳ ಉನ್ನತ ಪದಾಧಿಕಾರ ಸ್ಥಾನಗಳಲ್ಲಿ ರಾಜಕಾರಣಿಗಳು ವಿರಾಜಮಾನರಾಗಿದ್ದಾರೆ. ಕ್ರೀಡಾ ಕ್ಷೇತ್ರದ ಅವನತಿಗೆ ಇದು ಮುಖ್ಯ ಕಾರಣ. ಸಚಿನ್ ಕ್ರೀಡಾ ಕ್ಷೇತ್ರವನ್ನು ರಾಜಕಾರಣದ ಹಿಡಿತದಿಂದ ಮುಕ್ತಗೊಳಿಸಿದರೆ ಅದಕ್ಕಿಂತ ದೊಡ್ಡ ಕೊಡುಗೆ ಬೇರೆ ಇರಲಾರದು. ಸಮಾಜದಲ್ಲಿ ತಾನು ಹೊಂದಿರುವ ಗೌರವದ ಸ್ಥಾನ ಮತ್ತು ಗಳಿಸಿರುವ ಜನಪ್ರಿಯತೆಯ ಬಲದಿಂದ ಇದನ್ನು ಮಾಡಿ ತೋರಿಸಲು ಅವರಿಗೆ ಸಾಧ್ಯ ಇದೆ.
 
ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡು ಸೋನಿಯಾಗಾಂಧಿ ಅವರ ನಿವಾಸಕ್ಕೆ ತೆರಳಿ ಕೃತಜ್ಞತೆ ಸೂಚಿಸಿ ಬರುವುದರಿಂದ ಇದನ್ನು ಮಾಡಲಾಗದು. ರಾಜ್ಯಸಭಾ ಸದಸ್ಯರಾಗಿ ಅಪರೂಪಕ್ಕೆ ಕಲಾಪದಲ್ಲಿ ಭಾಗವಹಿಸಿ ಕುಳಿತ ಆಸನವನ್ನು ಬಿಸಿಮಾಡಿ ಬರುವುದರಲ್ಲಿ ಏನೂ ಲಾಭ ಇಲ್ಲ. 

ಸಚಿನ್ ಅವರೊಬ್ಬ ಪ್ರತಿಭಾಶಾಲಿ ಆಟಗಾರನಿರಬಹುದು, ಕ್ರಿಕೆಟ್ ಕ್ಷೇತ್ರದಲ್ಲಿ ಅವರು ಯಶಸ್ಸನ್ನೂ ಗಳಿಸಿರಬಹುದು. ಆದರೆ ರಾಜಕೀಯ ಎನ್ನುವುದು ಬೇರೆಯೇ ಚೆಂಡಿನ ಆಟ. ಗೊತ್ತಿಲ್ಲದ ಆಟವನ್ನು ಆಡಲು ಹೊರಡುವವನು ಕ್ರೀಡಾಪಟು ಅಲ್ಲ.